ಈ ಇಪ್ಪತ್ತನೆಯ ಶತಮಾನ ಜಗತ್ತಿನ ಇತಿಹಾಸದಲ್ಲೇ ಒಂದು ಸಂಕ್ರಾಂತಿ ಕಾಲ ಎಂದು ತೋರುತ್ತದೆ. ಅತಿ ಪುರಾತನ ಕಾಲದಲ್ಲೇ ನಮ್ಮ ದೇಶ ಧರ್ಮದ ತಳಹದಿಯ ಮೇಲೆ ಸಮಾಜವನ್ನು ಕಟ್ಟಿ ವ್ಯಕ್ತಿ ಮತ್ತು ಸಮಾಜಗಳ ವಿಭಿನ್ನ ಧರ್ಮಗಳಲ್ಲಿ ಒಂದು ಸಮನ್ವಯವನ್ನೂ ಸಾಮರಸ್ಯವನ್ನೂ ಸ್ಥಾಪಿಸಿತ್ತು. ಅದೇ ರೀತಿ ಪಶ್ಚಿಮ ದೇಶಗಳಲ್ಲೂ ಕ್ರೈಸ್ತಧರ್ಮ ಸಮಾಜದ ಸಮತೂಕವನ್ನೂ ಕಾಪಾಡಲು ಬಹಳ ಕಾಲ ಸಮರ್ಥವಾಯಿತು. ಆದರೆ ಚಕ್ರನೇಮಿವೃತ್ತಿಯ ಈ ಜಗತ್ತು ಇದ್ದ ಹಾಗೆ ಇರತಕ್ಕದ್ದಲ್ಲ – ಸದಾ ಭ್ರಮಣ ಶೀಲ. ಅತ್ಯುತ್ತಮವಾದ ವ್ಯವಸ್ಥೆಯೂ ಕೂಡಾ ಸಡಿಲಿ ಅವನತಿ ಪರವಾಗಿ ಮಾನವಕುಲ ಪಡಬಾರದ ಪಾಡುಪಟ್ಟು ಮತ್ತೆ ತನ್ನ ಅಗ್ನಿದಿವ್ಯದಿಂದ ಹೊರಬಿದ್ದು ಪುನಃ ತನ್ನ ಸಮತೂಕಕ್ಕೆ ಬೇಕಾದ ಧರ್ಮವನ್ನು ರೂಢೀಸಿಕೊಳ್ಳಬೇಕಾಗುತ್ತದೆ. ಇದೂ ಮತ್ತೆ ಮತ್ತೆ ನಡೆಯುವ ಕೆಲಸ. ಆದ ಕಾರಣ ಮಾನವ ಕುಲದ ಸಮಸ್ಯೆಗಳೆಲ್ಲವೂ ಎಲ್ಲ ಕಾಲದಲ್ಲೂ ಬಹುಶಃ ತತ್ವತಃ ಒಂದೇ. ಜೀವನದಲ್ಲಿ ಕಾಣುವ ದ್ವಂದ್ವ ಅಥವಾ ಬಹುತ್ವ – ಇವೇ ಎಲ್ಲ ಕಾಲದ ಸಮಸ್ಯೆಗಳ ತಾಯಿಬೇರು: ಜನ್ಮ, ಮೃತ್ಯು; ಸುಖ, ದುಃಖ, ದೇಹ, ಆತ್ಮ, ಇಹ, ಪರ; ವ್ಯಕ್ತಿ, ಸಮಾಜ, ಸಮಗ್ರ ಮಾನವಕುಲ; ಮಾನವ ಲೋಕ, ವಿಶ್ವ. ಈ ದ್ವಂದ್ವಗಳೆಲ್ಲವನ್ನೂ ಒಂದೇ ಸ್ತಾಯಿಯಲ್ಲಿ, ಒಂದೇ ಮುಹೂರ್ತದಲ್ಲಿ ಏಕಕಾಲಕ್ಕೇ ಕಾಣುವ ದ್ವಂದ್ವಾತೀತ ಶಕ್ತಿ ಮನುಷ್ಯನಲ್ಲಿ ಇಲ್ಲದಿರುವುದೇ ನಮ್ಮ ಎಲ್ಲ ತೊಂದರೆಗಳಿಗೂ ಕಾರಣ ಎಂದು ತೋರುತ್ತದೆ. ಈ ದ್ವಂದ್ವಗಳನ್ನು ಒಂದೊಂದಾಗಿ ಗೆಲ್ಲುತ್ತ ಬರುವುದೇ ಪ್ರಗತಿ ಎನ್ನಬಹುದು. ಈಗ ಅನೇಕ ಶತಮಾನಗಳಿಂದ ಭಾರತದ ಸತ್ವ ಸುಪ್ತವಾಗಿದ್ದ ಕಾಲದಲ್ಲಿ ಪಾಶ್ಚಾತ್ಯಲೋಕ ಎಚ್ಚೆತ್ತು ವ್ಯಕ್ತಿಧರ್ಮವನ್ನೇ ಎತ್ತಿ ಹಿಡಿದು, ಅದೃಶ್ಯ ಶಕ್ತಿಗಳನ್ನು ಬೀಳ್ಗಳೆದು, ಸಮಾಜ ಧರ್ಮವನ್ನು ರೂಢಿಸಿಕೊಳ್ಳದೆ, ಇಂದ್ರಿಯ ಗಮ್ಯವಾದ ಪದಾರ್ಥ ಲೋಕವೊಂದನ್ನೇ ನೆಚ್ಚಿ ವಿಜ್ಞಾನದ ಮಂತ್ರಕಂಬಲದ ಮೇಲೆ ಕುಳಿತು ಮೈದಾಸನ ಸ್ವರ್ಣ ಹಸ್ತದಿಂದ ಮುಟ್ಟಿದ್ದನ್ನೆಲ್ಲ ಚಿನ್ನಮಾಡುವೆನೆಂದು ಹೊರಟಿತು. ಅದರ ಸಾಧನೆ ಬೆರಗುಗೊಳಿಸುವಂಥದಾದರೂ ಅದರ ಸಿದ್ಧಿಯಲ್ಲಿ ಮನುಷ್ಯನ ಅಂತರಂಗಲೋಕದ, ಧರ್ಮಲೋಕದ, ಅದೃಶ್ಯಲೋಕದ ಅರಿವಿನ ಅಭಾವ ವಿಜ್ಞಾನ ಧರ್ಮಮಾರಕವಾಗಲು ಕಾರಣವಾಯಿತು. ವಿಜ್ಞಾನವೆಂಬ ಈ ಸರ್ವಾರ್ಥ ಸಿದ್ಧಿಕವಚ ಭಸ್ಮಾಸುರನ ಹಸ್ತವಾಗಿ ಪರಿಣಮಿಸಿತು. ಮನುಷ್ಯನ ಬೆಳವಣಿಗೆ ಎಂದರೆ ಅವನ ದೇಹದ ಅಥವಾ ಮಾಂಸಖಂಡಗಳ ಬೆಳವಣಿಗೆಯಲ್ಲ. ಅವನ ಮನಸ್ಸಿನ ಅಥವಾ ಆತ್ಮದ ಬೆಳವಣಿಗೆ ಎಂಬ ಮರೆತ ಮಾತನ್ನು ಈಗ ನಾವು ಮತ್ತೆ ಕಲಿಯಬೇಕಾಗಿದೆ. ಈ ನಡುವೆ ಕೇವಲ ಅರ್ಥ ಕಾಮಗಳ ಆಶೆಯಲ್ಲಿ ಲೋಕದ ಧಾರಣ ಸೂತ್ರವನ್ನು ಮರೆತ ಜಗತ್ತೂ ಈಗ ಅವಕ್ಕೂ ಎರವಾಗಬೇಕಾದ ಸಂದಿಗ್ಧ ಪರಿಸ್ಥಿತಿ ಪ್ರಾಪ್ತವಾಗಿದೆ. ಈ ಸಮಸ್ಯೆನ್ನು ಒಂದು ವಿಶೇಷವಾದ ರೀತಿಯಲ್ಲಿ ಎದುರಿಸಿ ಬಿಡಿಸುವ ಭಾಗ್ಯ ಅಥವಾ ದೌರ್ಭಾಗ್ಯ ಈ ಶತಮಾನದ್ದು ಎನ್ನಬಹುದು.

ಮಾನವ ಸಮಸ್ಯೆಗಳು ಎಲ್ಲ ಕಾಲದಲ್ಲೂ ತಾತ್ವಿಕವಾಗಿ ಒಂದೇ ನಿಜ. ಆದರೆ ಅಕ್ಷರಶಃ ಅಲ್ಲ. ಯಾವ ರೀತಿ ಒಂದು ಸಲ ಹುಟ್ಟಿ ಬಂದ ಜೀವಿ ಅದೇ ರೂಪದಲ್ಲಿ ಮತ್ತೆ ಹುಟ್ಟಿ ಬರುವುದಿಲ್ಲವೋ, ಒಂದು ಸಲ ಅಭಿವ್ಯಕ್ತಗೊಂಡ ವ್ಯಕ್ತಿತ್ವ ಮತ್ತೆ ಯಥಾವತ್ತಾಗಿ ಪುನರ್ಜನ್ಮ ಪಡೆಯುವುದಿಲ್ಲವೋ ಅದೇ ರೀತಿ ಒಂದು ಸಮಸ್ಯೆಯೂ ಕೂಡಾ ಕಾಲಕಾಲಕ್ಕೆ ಭಿನ್ನ ಭಿನ್ನವಾದ ರೀತಿಯಲ್ಲೇ ನಮ್ಮನ್ನು ಎದುರಿಸುವುದಲ್ಲದೇ ಯಥಾಪ್ರತಿ ಅಲ್ಲ. ಆದಕಾರಣವೇ ಭೂತಕಾಲದ ಯಾವ ವ್ಯವಸ್ಥೆಯೂ ಈಗ ಇಂದು ಯಥಾವತ್ತಾಗಿ ಮತ್ತೆ ಮರುಕೊಳಿಸಲು ಸಾಧ್ಯವಿಲ್ಲ. ಒಂದು ಹಳ್ಳಿಯನ್ನು ವ್ಯವಸ್ಥಿತಗೊಳಿಸಲು ಬೇಕಾಗುವ ಸಮರಸತತ್ವ – ಹಾಗೆಯೇ ಒಂದು ದೇಶವನ್ನು ಬದುಕಿಸಬೇಕಾದ ಸಮರಸಸೂತ್ರ ಒಂದೇ. ಆದರೆ ಅದು ಅಭಿವ್ಯಕ್ತವಾಗುವ ರೀತಿ ಮಾತ್ರ ಬೇರೆ,. ಬೇರೆ. ಹಳ್ಳಿಯ ಧರ್ಮಸೂತ್ರ ದೇಶವನ್ನು ಬದುಕಿಸಬೇಕಾಗುತ್ತದೆ. ಆದಕಾರಣ ದೇಶದ ಅಭ್ಯುದಯಕ್ಕೆ ಬೇಕಾಗುವ ರಾಷ್ಟ್ರಭಾವನೆ, ಪ್ರಪಂಚದ ಸಮಗ್ರ ಅಭ್ಯುದಯಕ್ಕೆ ಸಾಕಾಗುವುದಿಲ್ಲ. ಇಡೀ ವಿಶ್ವವನ್ನೇ ಕುರಿತು ಚಿಂತಿಸುವ ಯೋಗಿಪ್ರಜ್ಞೆಗೆ ಈ ಪ್ರಪಂಚ ಭಾವನೆಯೂ ಸಾಕಾಗದೆ ಹೋಗಬಹುದು. ಈಗ ಮಾನವಕುಲ ಪ್ರಪಂಚ ಭಾವನೆಯನ್ನು ಸ್ವಾಧೀನಪಡಿಸಿಕೊಳ್ಳದೆ ಬದುಕಲಾರದ ಸ್ಥಿತಿಗೆ ಬಂದು ಮುಟ್ಟಿದೆ. ಇಂದಿನ ಈ ಪ್ರಪಂಚದಲ್ಲಿ ಯಾರೂ ತನ್ನ ದೇಶ ಬೇರೆ ಕುಲ ಬೇರೆ ಎಂದು ರಾಷ್ಟ್ರಸ್ವಾರ್ಥವನ್ನು ಮರೆಯುವುದು ಸಾಧ್ಯವಿಲ್ಲ. ದೇಶ ದೇಶಗಳು ಈ ಪರಸ್ಪರಾವಲಂಬಿಗಳಾಗಿ ಪ್ರಪಂಚದೊಳಗಣ ಘಟಕಗಳಾಗಿ ಮಾರ್ಪಡುತ್ತಿವೆ – ಒಂದು ಕಾಲದ ಸಣ್ಣಪುಟ್ಟ ರಾಜ್ಯಗಳೂ ಪಾಳೆಯಪಟ್ಟುಗಳೂ ಈಗ ರಾಷ್ಟ್ರದ ಅವಯವಗಳಾಗಿರುವ ಹಾಗೆ. ರಾಷ್ಟ್ರಭಾವನೆಯ ಪರಿಧಿಯೊಳಗೆ ಸುತ್ತುತ್ತಿರುವ ಮನಸ್ಸು ಪ್ರಪಂಚ ಭಾವನೆಗೆ ಹಿಗ್ಗಬೇಕಾದ ಕಾಲ ಈಗ ಬಂದಿದೆ. ಒಂದು ಮನೆಯನ್ನು ಸಲೀಸಾಗಿ ನಡೆಸಿಕೊಂಡು ಹೋಗುತ್ತಿರುವವನು ಹಠಾತ್ತನೆ ಹತ್ತು ಸಂಸಾರಗಳ ಭಾರವನ್ನು ಹೊರಬೇಕಾಗಿ ಬಂದಾಗ ಅವನು ಎಂಥೆಂಥ ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಗಬಹುದೋ ಅಂಥವೇ ಸಮಸ್ಯೆಗಳನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಇಂದಿನ ಪ್ರಬುದ್ಧ ಮಾನವ ಎದುರಿಸಬೇಕಾಗಿದೆ. ಎದುರಿಸಿ ಅವಕ್ಕೆ ತಕ್ಕ ಉತ್ತರಗಳನ್ನು ಕಂಡುಹಿಡಿಯುವ ತನಕ ಅವನ ಕೆಲಸ ದುರ್ಭರವೂ ಅವನ ಮನಸ್ಸು ಶತಖಂಡವೂ ಆಗುವುದು ಅನಿವಾರ್ಯ. ಒಂದು ಕಾಲದಲ್ಲಿ ‘ವಿಶ್ವವೆಲ್ಲ ಒಂದು’ ಎಂಬ ಆದರ್ಶದ ತತ್ವಸಾಗರ ನಮ್ಮ ದೇಶದಲ್ಲಿ ಭರತಖಂಡಕ್ಕಷ್ಟೇ ಪರಿಮಿತವಾಗುವ ಧರ್ಮನಿಷ್ಠ ಸಮಾಜ ವ್ಯವಸ್ಥೆಯ ಸರೋವರವಾಗಿ ನನಸಾದದ್ದೂ ಪ್ರಪಂಚ ಧರ್ಮದ ಸಮುದ್ರವಾಗಿ ಸಮಸ್ತ ಮಾನವ ಜಗತ್ತನ್ನೇ ಆವರಿಸಿ ಪ್ರತ್ಯಕ್ಷವಾಗುವ ಕಾಲ ಬರುತ್ತಿದೆ.

ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದಷ್ಟು ಕಾಲವೂ ನಮ್ಮ ದೇಶಕ್ಕಷ್ಟೇ ವಸ್ತುತಃ ಪರಿಮಿತವಾಗಿದ್ದ ನಮ್ಮ ಚೇತನ ಇಂದು ಪ್ರಪಂಚವ್ಯಾಪಿಯಾಗಿ ಭಾರತ ಭಾಗ್ಯವಿಧಾತನು ಪ್ರಪಂಚದ ಭಾಗ್ಯರಥದ ಒಂದು ಚಕ್ರವಾಗಬೇಕಾಗಿದೆ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕ್ರಮಕ್ರಮವಾಗಿ ನಮ್ಮ ದೇಶದ ಪ್ರಬುದ್ಧ ಮನಸ್ಸನ್ನು ರೂಪಿಸುತ್ತಿರುವ ತತ್ವ ಇದೇ ಎಂದು ನನಗೆ ತೋರುತ್ತದೆ. ಈ ತತ್ವವೇ ಈಗ ನಮ್ಮ ದೇಶದಲ್ಲಿ ನೂತನ ಭಾವಪ್ರವಾಹವನ್ನು ಕೆರಳಿಸಿ ಹೊಸ ಚಟುವಟಿಕೆಗಳೆಲ್ಲಕ್ಕೂ ಮೂಲ ಸೆಲೆ ಆಗಬೇಕಾಗಿದೆ, ಆಗುತ್ತಿದೆ. ಬಹುಶಃ ಈ ಒಂದು ಆದರ್ಶ ಸಾಧನೆಗಾಗಿಯೇ ವಿಜ್ಞಾನ ಬಲದಿಂದ ನಿರ್ಮಿತವಾದ ನೂತನ ವಾಹನ ಸೌಕರ್ಯಗಳೂ ರೇಡಿಯೋ ಮುಂತಾದ ಶೀಘ್ರ ಸಂಪರ್ಕ ಸಾಧನಗಳೂ ಮಾನವ ಕುಲದ ಶ್ರೇಯಸ್ಸಿನ ಆಸ್ತಿವಾರಗಳಾಗಿ ನಮಗೆ ದೊರೆತಿವೆ ಎನ್ನಬೇಕಾಗುತ್ತದೆ. ಹೊರಗೆ ವ್ಯಕ್ತವಾಗಬೇಕಾದ, ರೂಪುತಳೆಯಬೇಕಾದ ಈ ನೂತನ ಲೋಕಧರ್ಮ ಮೊದಲು ವ್ಯಕ್ತವಾಗುವುದು ಮನೋರೂಪದಲ್ಲಿ – ಭಾವನೆಯಾಗಿ, ವಿಚಾರದ ದೀಪ್ತಿಯಾಗಿ, ಅಂತಃಸ್ಫೂರ್ತಿಯ ಮಿಂಚಾಗಿ.

ಆದ ಕಾರಣವೇ ಇಂದು ದೇಶಗಳ ವಿಚಾರವಂತರ, ಕಲೆಗಾರರ, ಸಾಹಿತಿಗಳ ಮನೋಭೂಮಿಕೆಯ ವಿಚಾರಪ್ರವಾಹ ಒಂದೇ ಲಯದಲ್ಲಿ ಹರಿಯುತ್ತಿರುವುದು ಕಂಡುಬರುತ್ತದೆ. ಪೂರ್ವ ಪಶ್ಚಿಮಗಳ ವಿಚಾರ ತರಂಗಿಣಿಗಳು ಪರಸ್ಪರ ಮಿಲನಗೊಂಡು ಒಂದನ್ನೊಂದು ಪೋಷಿಸುತ್ತ ಧರ್ಮ ವಿಜ್ಞಾನಗಳ ಹೊಸ ರಸಪಾಕ ಈಗ ಸಿದ್ಧವಾಗುತ್ತಿದೆ. ವಿಜ್ಞಾನ ನಿಷ್ಠವಾದ ವ್ಯವಸ್ಥೆ ಶಿಥಿಲವಾಗಿ ಹೊಸ ಹುಟ್ಟಿಗಾಗಿ ಹೊಸ ಧರ್ಮಕ್ಕಾಗಿ ಪಾಶ್ಚಾತ್ಯ ರಾಷ್ಟ್ರಗಳು ಕಾಯುತ್ತಿದ್ದರೆ ಇಲ್ಲಿ ನಾವು ವಿಜ್ಞಾನಬಲ ಸಹಿತವಾದ ಧರ್ಮಕ್ಕಾಗಿ ಪಾಶ್ಚಾತ್ಯ ರಾಷ್ಟ್ರಗಳು ಕಾಯುತ್ತಿದ್ದರೆ ಇಲ್ಲಿ ನಾವು ವಿಜ್ಞಾನಬಲ ಸಹಿತವಾದ ಧರ್ಮದ ಪುನರವತಾರಕ್ಕಾಗಿ ಹಾತೊರೆಯುತ್ತಿದ್ದೇವೆ. ಇಂಥ ಕಾಲದಲ್ಲಿ ಬದುಕುವ ಪ್ರತಿಯೊಬ್ಬ ಪ್ರಪಂಚ ಪ್ರಜೆಯ ಮನಸ್ಸು ವಿಶಾಲವಾಗಿ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಎದುರಿಸುತ್ತ ನೂತನ ಜ್ಞಾನದ ಸಹಸ್ರಮುಖಗಳನ್ನೂ ಮನನ ಮಾಡುತ್ತ ಇರಬೇಕಾಗಿರುವುದರಿಂದ ಪ್ರಬುದ್ಧವಾದ ಆಧುನಿಕ ಪ್ರಜ್ಞೆ ಬಹು ವಿಶಾಲವೂ ಅಭೂತಪೂರ್ವವಾದ ಆಳವುಳ್ಳದ್ದೂ ಆಗುತ್ತಿದೆ. ಇಂದು ಮಾನವನ ಮನಸ್ಸು ತನ್ನ ಮುಂದೆ ನಿಂತಿರುವ ಮಹಾ ಕಂದರಕ್ಕೆ ಲಂಘಿಸಬೇಕು; ಇಲ್ಲವೆ ಅದರೊಳಕ್ಕೆ ಬಿದ್ದು ಹಾಳಾಗಬೇಕು. ಲಂಘನ ನಿಸ್ಸೀಮನಾದ ಸಾಹಿತಿ ಕೂಡಾ ಈ ಕಂದರವನ್ನು ಬಹು ಪ್ರಯಾಸದಿಂದಲೇ ಜಿಗಿಯಬಲ್ಲ. ಇಂದಲ್ಲ ನಾಳೆ ಉಳಿದವರಿಗೆ ಗೂಢವಾಗಿ, ಅಗಮ್ಯವಾಗಿ ತೋರಬಹುದು. ಆದರೆ ಸಾಹಿತಿ ನಿರುಪಾಯ. ಈ ಆಧುನಿಕ ಪ್ರಜ್ಞೆ ಆಂಗ್ಲ ಸಾಹಿತ್ಯಗಳಲ್ಲೂ ಕ್ರಮಕ್ರಮವಾಗಿ ಆವಿರ್ಭವಿಸುತ್ತಿದೆ. ಇಂದು ಪ್ರಭಾವ ಯಾವ ದಿಕ್ಕಿನಿಂದ ಬರುತ್ತಿದೆ ಎನ್ನುವುದು ಕಷ್ಟ. ಪಾಶ್ಚಾತ್ಯ ಕವಿ ದಾರ್ಶನಿಕರು ಉಪನಿಷತ್ತು ಗೀತೆ ಇವುಗಳ ಪ್ರಭಾವಕ್ಕೆ ಸಿಕ್ಕುತ್ತಾರೆ; ಭಾರತದವರು ಅಲ್ಲಿಯ ವಿಚಾರ ಭಾವಗಳ ಪ್ರಬಾವಕ್ಕೆ ಸಿಕ್ಕುತ್ತಾರೆ. ಇದು ಈ ಯುಗದ ಸಹಜಧರ್ಮ. ಈಗಿನ ನಮ್ಮ ಪರಂಪರೆ ಕೇವಲ ಭಾರತ ಪರಂಪರೆಯಲ್ಲ, ಲೋಕಪರಂಪರೆ. ಈಗಿನ ನಮ್ಮ ‘ಸ್ವಧರ್ಮ’ ಭಾರತೀಯತೆಯನ್ನು ಕಾಪಾಡಿಕೊಳ್ಳುವುದಲ್ಲ, ಅದನ್ನು ಪ್ರಪಂಚ ಭಾವನೆಯಾಗಿ ಹಿಗ್ಗಿಸುವುದು. ಈ ಪ್ರತ್ಯಯ ಇಂದಿನ ನಮ್ಮ ಎಲ್ಲ ಸಾಹಿತ್ಯದಲ್ಲೂ ಹೆಚ್ಚು ಕಡಿಮೆ ಕಾಣಿಸತೊಡಗಿದೆ.

ಶತ ಶತಮಾನಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಚದರಿ ಬಿದ್ದಿದ್ದ ಈ ಮಾನವ ಜನಾಂಗಗಳು ಈಗ ಇಪ್ಪತ್ತನೆಯ ಶತಮಾನದಲ್ಲಿ ಹತ್ತಿರ ಹತ್ತಿರ ಬಂದು ಪ್ರಪಂಚ ಸಂಸ್ಥೆಯೊಂದನ್ನು ಎಲ್ಲರ ಹಿತಕ್ಕಾಗಿ ಕಟ್ಟಿಕೊಳ್ಳುವಷ್ಟರ ಮಟ್ಟಿಗಾದರೂ ಲೋಕಹಿತ ಮತ್ತು ಜನಾಂಗಹಿತ ಒಂದೇ ಎಂದು ತಿಳಿದದ್ದು ಒಂದು ಪವಾಡವೇ ಸರಿ. ಒಂದು ಕಾಲದಲ್ಲಿ ಋಷಿಮುನಿಗಳು ಸಾಧುಸಂತರು ಕವಿ ಕಲೆಗಾರರು ಕಂಡ ಈ ‘ಮಾನವ ಕುಲ ಒಂದೇ’ ಎಂಬ ಕನಸು ಈಗ ಆಕಾರ ತಳೆಯುತ್ತಿದೆ. ವಿವಿಧ ಜನಾಂಗಗಳ ಈ ಸಂಪರ್ಕ, ಸಾಹಚರ್ಯ ಸಂಘಟನೆಗಳಿಂದ ಈಗ ಅಭೂತಪೂರ್ವವಾದ ಭಾವ ಭಾವಾಂತರಗಳ ನೂರು ನದಿಗಳು ಒಂದರೊಡನೊಂದು ಬೆರೆತು ಭೋರ್ಗರೆಯುತ್ತ ಸಮುದ್ರ ಸಮೀಪದಲ್ಲಿ ಭೋರ್ಗರೆಯುತ್ತಿವೆ. ಇದರಿಂದ ಆಧುನಿಕ ಮಾನವನ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಅವನ ಭಾವವಿನ್ಯಾಸ ನೂರು ತೊರೆಗಳ ನೀರಿನಿಂದ ಜಟಿಲವಾಗಿ, ಹಲವು ಬಣ್ಣಗಳಿಂದ ಚೇತೋಹಾರಿಯಾಗಿ, ಸಾವಿರಾರು ವಜ್ರ ವೈಢೂರ್ಯಗಳಿಂದ ಉದ್ದೀಪ್ತವಾಗಿದೆ. ಈ ಬಹುಮುಖ ಭಾವಪ್ರಪಂಚದಲ್ಲಿ ಏಕತೆಯ ಸೂತ್ರವನ್ನು ಕಾಣುವುದು ಈಗ ಹಿಂದೆ ಎಂದೂ ಇಲ್ಲದಷ್ಟು ಶ್ರಮ ಸಾಧ್ಯವಾಗಿದೆ. ಆದರೆ ಆ ರೀತಿಯ ಏಕಸೂತ್ರವನ್ನೂ ಧಾರಣ ಮಂತ್ರವನ್ನೂ ಕಾಣದೆ ಬೇರೆ ದಾರಿ ಇಲ್ಲ. ಈ ಎಲ್ಲ ಅರಿವಿನ ಕೂಟ ಪ್ರಶ್ನೆಯಾಗಿ ಈಗ ಆಧುನಿಕ ಪ್ರಜ್ಞೆ ಮೈದೋರಿದೆ.

ಈ ಆಧುನಿಕ ಮನಸ್ಸಿನ ಮೂಲಗುಣ ಅದರ ಆತ್ಮಪ್ರಜ್ಞೆ. ಕವಿ, ಸಾಹಿತಿ, ಕತೆಗಾರ – ಈ ಎಲ್ಲರಲ್ಲೂ ಈಗ ತಮ್ಮ ಮನಸ್ಸಿನ ಪದರು ಪದರುಗಳನ್ನು ಬೆದಕಿ ಕೆದಕಿ ನೋಡಿ ಅಲ್ಲಿ ಮೂಡಿರುವ ಈ ಭಾವ ಪ್ರಪಂಚವನ್ನು ಅರಗಿಸಿಕೊಳ್ಳುವ ಯತ್ನ ಆಧುನಿಕತೆಯ ಮುಖ್ಯ ಲಕ್ಷಣವಾಗಿದೆ. ಆದ ಕಾರಣವೇ ಆಧುನಿಕ ಸಾಹಿತ್ಯ ಮುಖ್ಯವಾಗಿ ಅಂತರ್ಮುಖಿ. ಎಲ್ಲ ಕಾಲದ ಸಾಹಿತ್ಯದಲ್ಲೂ ಈ ಅಂತರ್ಮುಖತೆ ಉಂಟು. ಅದಿಲ್ಲದೆ ಕಾವ್ಯವೂ ಇಲ್ಲ, ಸಾಹಿತ್ಯವೂ ಇಲ್ಲ. ಆದರೆ ಈಗ ಈ ಅಂತರ್ಮುಕತೆಗೆ ಕಾರಣ ಜಗತ್ತಿನ ಸರಿಯಾದ ಜ್ಞಾನ ದೊರೆಯುವುದು ಹೊರಗಡೆಯಲ್ಲ. ಒಳಗಡೆ ಎಂಬ ಈ ನೂತನ ಪ್ರತ್ಯಯ. ಆದ ಕಾರಣ ಇಂದು ಮನಸ್ಸನ್ನು ಅದರ ಬೇರೆ ಬೇರೆ ಕಾರ್ಯಗಳಿಗನುಸಾರವಾಗಿ ಬುದ್ಧಿ, ಭಾವ ಎಂದು ವಿಂಗಡಿಸಿ ನೋಡುವುದಕ್ಕಿಂತ ಅಂತರಂಗವನ್ನು ಸಮಗ್ರವಾಗಿ ಕಾಣುವ ಯತ್ನ ಸಾಹಿತ್ಯದಲ್ಲಿ ತೋರುತ್ತದೆ. ಈಗ ಬುದ್ಧಿ, ಭಾವದ ಪೋಷಕವಾಗಿ ಸಾಹಿತ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ಭಾಷೆಯ ಪರಂಪರೆಯನ್ನೂ ಮಾನವ ಲೋಕದ ಸಮಗ್ರ ಪರಂಪರೆಯನ್ನೂ ಹೊಂದಿಸಿಕೊಳ್ಳುವ ಈ ಕೆಲಸದಲ್ಲಿ ಬುದ್ದಿಯ ಪಾತ್ರ ತುಂಬ ಗುರುತ್ವವುಳ್ಳದ್ದು. ಕ್ಷಣಕ್ಷಣಕ್ಕೂ ಬುದ್ದಿ ಭಾವವಾಗಿ ಮಾರ್ಪಡುತ್ತ ಅನುಭವದ ಸಮಗ್ರ ಚಿತ್ರಣ ಸಾಧ್ಯವಾಗುತ್ತಿದೆ. ಸಾಮಾನ್ಯವಾಗಿ ಸಾಹಿತ್ಯ ಸಮನ್ವಯಶೀಲ. ತೋರಿಕೆಗೆ ಪ್ರತ್ಯೇಕ ಪ್ರತ್ಯೇಕವಾಗಿಯೋ ಪರಸ್ಪರ ವಿರುದ್ಧವಾಗಿಯೋ ತೋರುವ ವಿದ್ಯಮಾನಗಳನ್ನು ಪ್ರತಿಭೆಯ ಮೂಸೆಯಲ್ಲಿ ಎರಕ ಹೊಯ್ಯುವ ಕೆಲಸ ಎಲ್ಲ ಕಾಲದ ಸಾಹಿತ್ಯದಲ್ಲೂ ಕಂಡು ಬಂದರೂ ಈಗ ಸಾಪೇಕ್ಷವಾದದ ಈ ಯುಗದಲ್ಲಿ ಯಾವುದೇ ಒಂದು ಭಾವವನ್ನು ಅತಿ ಸರಳಗೊಳಿಸಿ ಅದರ ಇತರ ಮುಖಗಳಿಂದ ಪ್ರತ್ಯೇಕಿಸಿ ನೋಡುವುದು ಪ್ರತಿಭಾವಂತನಿಗೆ ಅಸಾಧ್ಯ. ಆದ ಕಾರಣವೇ ಪರಸ್ಪರ ವಿರುದ್ಧವಾದದ್ದರ ಹಠಾತ್ ಸಮಾಗಮ ಸಮನ್ವಯಗಳನ್ನು, ದ್ವಂದ್ವಗಳ ಏಕತ್ರ ಮಿಲನವನ್ನು ನಾವು ಇಂದಿನ ಸಾಹಿತ್ಯದಲ್ಲಿ ಕಾಣುತ್ತೇವೆ. ಇದೂ ಅಲ್ಲದೆ ಇಂದಿನ ಸಾಹಿತಿ ಆತ್ಮವಿಮರ್ಶೆಯಲ್ಲಿ ಪರಿಣತ. ತನ್ನ ಕಲೆಗಾರಿಕೆಯನ್ನೂ ಸಾಹಿತ್ಯ ರಚನೆಯ ಮೂಲ ಸೂತ್ರವನ್ನೂ ಕುರಿತು ಚಿಂತಿಸುವುದರ ಜೊತೆಗೆ ಕ್ಷಣಕ್ಷಣಕ್ಕೂ ತನ್ನ ಕೃತಿಗಳ ತೂಕವನ್ನು ತಾನೇ ಮಾಡಿಕೊಳ್ಳುತ್ತ ಅಪೂರ್ವ ಸಂಯಮವನ್ನು ತೋರುತ್ತಾನೆ. ಆದ ಕಾರಣ ಯಥೇಚ್ಛವಾಗಿ ಬರೆದೆಸೆಯುತ್ತ ದೈವಕೃಪೆಯಿಂದಲೋ ತನ್ನ ಪ್ರತಿಭೆಯ ಅನಿವಾರ್ಯ ಶಕ್ತಿಯಿಂದಲೋ ಆಗಾಗ ಉತ್ತಮದ ಮಟ್ಟವನ್ನು ಮುಟ್ಟುತ್ತ ಉತ್ತಮವಾದುದರ ಜೊತೆಗೆ ತೀರ ಬೀಳಾದುದನ್ನೂ ಬರೆದು ಅದು ಬೀಳು ಅಂತಲೂ ತಿಳಿಯಲಾರದ ಆತ್ಮವಿಮರ್ಶಾಶೂನ್ಯ ಮಾರ್ಗ ಆಧುನಿಕನದು ಅಲ್ಲ. ಈಗಿನ ಸಾಹಿತ್ಯದಲ್ಲಿ ಬಿಗಿ, ಸಂಗ್ರಹಶೀಲತೆ, ಧ್ವನಿ – ಇವು ಬೆಳೆದು ಸುಂದರ ಶಿಲ್ಪದ ಪರಿಪೂರ್ಣತೆಯ ಕಡೆಗೆ ಸಾಹಿತ್ಯ ವಾಲುತ್ತಿದೆ.

ಈ ಬಗೆಯ ಆಧುನಿಕ ಪ್ರಜ್ಞೆ ಕನ್ನಡ ಕಾವ್ಯದಲ್ಲಿ ಮೊತ್ತಮೊದಲು ಕಂಡುಬಂದದ್ದು ಸಹಜ. ಏಕೆಂದರೆ ಕಾವ್ಯ, ಸಾಹಿತ್ಯದ ಅತಿ ಸೂಕ್ಷ್ಮವೇದಿಯಾದ ಅಂಗ. ಆವರಣದ ಅಲ್ಪಸ್ವಲ್ಪ ವ್ಯತ್ಯಾಸವೂ ಈ ಸೂಕ್ಷ್ಮಗ್ರಾಹಿಯಲ್ಲಿ ಬಹು ಬೇಗ ಗುರುತುಗೊಳ್ಳುತ್ತದೆ. ಆದರೆ ಈ ನವ್ಯ ಪ್ರಜ್ಞೆ ಕಾವ್ಯದಲ್ಲಿ ಅಭಿವ್ಯಕ್ತವಾದದ್ದು ಈಗ ಸಾಹಿತ್ಯದ ಇತರ ಪ್ರಕಾರಗಳಲ್ಲೂ ಅಭಿವ್ಯಕ್ತ ವಾಗುತ್ತಿರುವುದು ಸಹಜವೇ ಆದರೂ ಬಹಳ ಗಮನಾರ್ಹವಾದ ವಿಷಯ. ಕಾವ್ಯದಲ್ಲಿ ಆದ ಮೇಲೆ ಈ ಪ್ರಜ್ಞೆ ಸಣ್ಣ ಕಥೆಗಳಲ್ಲಿ ಈಗ ಕಂಡುಬರುತ್ತಿದೆ. ಗದ್ಯ ಸಾಹಿತ್ಯದಲ್ಲಿ ಸಣ್ಣ ಕಥೆ ಕಾವ್ಯಕ್ಕೆ ಬಹಳ ಹತ್ತಿರವಾದದ್ದು. ಅಲ್ಲಿಯೂ ಈ ನವ್ಯತೆ ಕಂಡುಬರುತ್ತಿರುವುದು ಕಾಲಧರ್ಮ, ಸಹಜ ಧರ್ಮ, ಅನಿವಾರ್ಯ, ಕನ್ನಡ ಸಣ್ಣ ಕಥೆಗಳಲ್ಲಿ ಶ್ರೀ ರಾಮಚಂದ್ರ ಶರ್ಮರ, ಶ್ರೀಮತಿ ರಾಜಲಕ್ಷ್ಮಿ ಎನ್. ರಾವ್ ಅವರ ಕಥೆಗಳಲ್ಲಿ, ಶ್ರೀ ಸದಾಶಿವರ ಒಂದೆರಡು ಕಥೆಗಳಲ್ಲಿ ಈ ನವ್ಯತೆ ಆಗಲೇ ಕಂಡುಬರುತ್ತಿದೆ. ಶ್ರೀ ಅನಂತಮೂರ್ತಿಯವರ ಈ ‘ನವ್ಯ ಕಥೆಗಳು’ ಕನ್ನಡ ಸಾಹಿತ್ಯಕ್ಕೆ ಬರುತ್ತಿರುವ ಹೊಸ ನೀರು; ಅತ್ಯಂತ ಗಮನಾರ್ಹವಾದ ಕಲಾಕೃತಿಗಳು; ಸಣ್ಣ ಕಥೆಯ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುವಂಥವು.

ಗೆಳೆಯ ಅನಂತಮೂರ್ತಿಯವರ ಈ ಸಣ್ಣ ಕಥೆಗಳ ಸಂಕಲನಕ್ಕೆ ಮುನ್ನುಡಿಯೆಂದು ನಾಲ್ಕು ಮಾತು ಬರೆಯುವುದು ಸಂತೋಷದ ಕೆಲಸ. ಇಲ್ಲಿ ಇರುವ ಕಥೆಗಳು ಬಹಳ ಮೇಲು ಮಟ್ಟದವು. ಕಥೆಗಾರನ ಪ್ರತಿಭೆ ದೊಡ್ಡದು ಎಂಬ ಮಾತನ್ನು ರುಜುವಾತು ಪಡಿಸುವಂಥವು; ಕನ್ನಡದ ಎಷ್ಟೋ ಸಣ್ಣ ಕಥೆಗಳ ಬಗ್ಗೆ ಹೇಳಲಾರದ ಒಂದು ಮಾತನ್ನು ಈ ಕಥೆಗಳ ಬಗ್ಗೆ ಈ ಕಥೆಗಳ ಬಗ್ಗೆ ಹೇಳಬಹುದು: ಇವು ನಿಜವಾದ ಸಾಹಿತ್ಯಕೃತಿಗಳು – ಎಂದು. ಇಲ್ಲಿನ ಕಥೆಗಳ ತಂತ್ರ ಹೊಚ್ಚ ಹೊಸದು; ಕನ್ನಡಕ್ಕೆ ನವ್ಯ ಎನ್ನುವಂಥದು. ಕಥಾವಸ್ತುವನ್ನು ಇವರು ಅರಗಿಸಿಕೊಳ್ಳುವ ರೀತಿಯೂ ಹಾಗೇ ಹೊಸತು. ಪ್ರತಿಯೊಂದು ಕಥೆಯಲ್ಲೂ ಮುಖ್ಯವಾಗಿ ‘ಹುಲಿಯ ಹೆಂಗರುಳು’ ಮತ್ತು ‘ತಾಯಿ’ ಎಂಬ ಕಥೆಗಳಲ್ಲಿ ಭಾವಾಂತರಗಳನ್ನು ಪರಿಣಾಮಕಾರಿಯಾಗಿ ಸಮನ್ವಯ ಗೊಳಿಸಿ ಕಥೆಯ ಮುಖ್ಯ ಭಾವಕ್ಕೆ ಪೋಷಕವಾಗಿಸುವ ಪವಾಡವನ್ನು ನಾವು ಕಾಣಬಹುದು. ಹೇಳುವ ಭಾಷೆ ಕೋಮಲ, ಅತ್ಯಂತ ಸೂಕ್ಷ್ಮವೇದಿ; ಯಾವಾಗಲೂ ಭಾವಕ್ಕೆ ಅನುಗುಣವಾಗಿ ಮಾರ್ಮಿಕವಾಗಿ ಹೃದ್ಯವಾಗಿ ಗಂಭೀರವಾಗಿ ಸೂಚ್ಯವಾಗಿ ಹರಿಯುವ ಶೈಲಿ. ಕವಿ ಮತ್ತು ಉತ್ತಮ ಕಥೆಗಾರ ಇವರ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂಬ ಮಾತನ್ನು ಇಲ್ಲಿ ಈ ಕಥೆಗಳು ಸಾಧಿಸಿ ತೋರಿಸುತ್ತವೆ. ಏಕೆಂದರೆ ಭಾಷೆಯ ಮಾಧ್ಯಮದಲ್ಲಿ ವ್ಯಕ್ತವಾಗುವ ಕಲೆಯ ಚೇತನ ಮೂಲತಃ ಒಂದೇ. ಆದಕಾರಣ ಗದ್ಯ ಲೇಖಕನೂ ಕೂಡಾ ತನ್ನದೇ ಆದ ಗದ್ಯ ಸಹಜವಾದ ರೀತಿಯಲ್ಲಿ ಕವಿ ಒಟ್ಟಿನಲ್ಲಿ ಏನು ಸಾಧಿಸುತ್ತಾನೋ ಅದನ್ನೇ ಸಾಧಿಸಿ ಅದೇ ರೀತಿಯ ಪರಿಣಾಮವನ್ನು ಮನಸ್ಸಿನ ಮೇಲೆ ಮಾಡದೇ ಅವನು ಕೃತ್ಯಕೃತ್ಯನಾಗಲಾರ. ಈ ಕಥೆಗಳಲ್ಲಿ ಅಲ್ಲಲ್ಲಿ ಇನ್ನೂ ಕಾವ್ಯಮಯ ಶೈಲಿ ಇದ್ದು ಅದರಿಂದ ಆಗಾಗ ಸಣ್ಣ ಕಥೆಯ ತನ್ನತನಕ್ಕೆ ಬಾಧಕ ಬರುವುದಾದರೂ ಒಟ್ಟಿನಲ್ಲಿ ಕಥೆಗಳ ಶೈಲಿ ಗದ್ಯ ಶೈಲಿಯೇ ಕಾವ್ಯ ಪರಿಣಾಮವನ್ನು ಮಾಡುತ್ತಿರುವುದು ಈ ಕಥೆಗಳ ಹೆಚ್ಚುಗಾರಿಕೆ ಎನ್ನಬೇಕು. ಈ ಕಾವ್ಯಮಯತೆ ‘ಪಂಜರದ ಗಿಳಿ’ ಎಂಬ ಕಥೆಯಲ್ಲಿ ಮಾರಕವಾಗಿ ಇರುವುದನ್ನು ನಾವು ಕಾಣಬಹುದು. ಆದರೆ ಈ ಕಥೆಗಾರರು ಆಗಲೇ ತಮಗೆ ವಿಶಿಷ್ಟವಾದ ಶೈಲಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ ಎನ್ನಬಹುದು. ಆ ಶೈಲಿಗೆ ಇನ್ನಷ್ಟು ಬಿಗಿ ಬರಬೇಕು; ಅಲ್ಲಲ್ಲಿ ಬರುವ ಪುನರುಕ್ತಿಗಳು ಕಡಿಮೆಯಾಗಬೇಕು – ನಿಜ. ಆದರೆ ಈ ಕೊರತೆಗಳು ಸಾಹಿತಿಯ ಮನಸ್ಸು ಪಕ್ವವಾಗುತ್ತ ಬಂದ ಹಾಗೆ ತುಂಬಿಕೊಳ್ಳತಕ್ಕಂಥವು. ಆಗಲೇ ಇಲ್ಲಿ ಸಾಮಾನ್ಯವಾಗಿ ತರುಣ ಸಾಹಿತಿಗಳಲ್ಲಿ ಕಂಡು ಬರದಿರುವ ಅಪೂರ್ವ ಸಂಯಮ ಕಂಡುಬರುತ್ತಿದೆ. ಇಂಥ ಸಂಯಮವುಳ್ಳ ಲೇಖಕ ಬೇಗ ಬೆಳೆದು ತನ್ನ ಸಹಜವಾದ ಎತ್ತರವನ್ನು ಮುಟ್ಟುತ್ತಾನೆ ಎಂದು ನಿರ್ಧಾರವಾಗಿ ಹೇಳಬಹುದು.

ಇಲ್ಲಿ ಇರುವ ಸಣ್ಣ ಕತೆಗಳಲ್ಲಿ ತಂತ್ರ ದೃಷ್ಟಿಯಿಂದ ‘ತಾಯಿ’ ಮತ್ತು ‘ಹುಲಿಯ ಹೆಂಗರುಳು’ – ಇವು ಅತ್ಯುತ್ತಮವಾದ ಕಥೆಗಳು ಎನ್ನಬಹುದು. ಅವು ಈ ಸಂಕಲನದಲ್ಲಿ ಮಾತ್ರವಲ್ಲ ನಮ್ಮ ಕಥಾಲೋಕದಲ್ಲೇ ಎರಡು ಉಜ್ವಲ ರತ್ನಗಳು. ಈ ಎರಡು ಸಣ್ಣ ಕಥೆಗಳನ್ನು ಬರೆದ ಸಾಹಿತಿ ಕೃತಕೃತ್ಯ. ಆತನನ್ನು ತರುಣ ಸಾಹಿತಿ ಎಂದು ಬೆನ್ನುಚಪ್ಪರಿಸುವುದು ಅನಗತ್ಯ ಮಾತ್ರವಲ್ಲ, ಧಾರ್ಷ್ಟ್ಯವೂ ಆದೀತು. ಏಕೆಂದರೆ ಒಂದು ಕಲಾಕೃತಿ ಪರಿಪೂರ್ಣ ರೂಪ ತಳೆದ ಬಳಿಕ ಅದರ ಕರ್ತನನ್ನು ನಾವು ಮರೆಯಬೇಕು. ಈ ದೃಷ್ಟಿಯಿಂದ ಪ್ರಸಿದ್ದ ಸಾಹಿತಿಗೂ ತರುಣ ಸಾಹಿತಿಗೂ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರದೂ ಒಂದೇ ಪಂಕ್ತಿ.

‘ತಾಯಿ’ ಎಂಬ ಕಥೆಯಲ್ಲಿ ಕ್ರೂರಿಯಾದ ಇನ್ನೊಬ್ಬ ತಾಯಿಯ ಕಥೆಯನ್ನು ತನ್ನ ಮಗ ಶೀನನಿಗೆ ಹೇಳುತ್ತ ತನ್ನ ಕ್ರೂರ ವಾಕ್ಯಕ್ಕೆ ರೇಗಿ ಮನೆ ಬಿಟ್ಟು ಹೋದ ದೊಡ್ಡ ಮಗನನ್ನು ನೆನೆಯುತ್ತ ಪರ್ಯಾಯವಾಗಿ ತನ್ನ ಕ್ರೂರತ್ವದ ಭೂತಾಕಾರವನ್ನು ಕಂಡು ನಡುಗುವ ತಾಯಿ ಅಬ್ಬಕ್ಕನ ಚಿತ್ರ ಮನ ಕರಗುವಂತೆ ಚಿತ್ರಿತವಾಗಿದೆ. ಇಲ್ಲಿ ಕಥೆಗಾರ ತಾನು ಕಥೆಯ ಹೊರಕ್ಕೆ ನಿಂತು ಪಾತ್ರಗಳ ಮೂಲಕವೇ ಭಾವ ಜಟಿಲತೆಯನ್ನು ವ್ಯಕ್ತಪಡಿಸುವುದು ಅತ್ಯುತ್ತಮ ಕಲೆಗಾರಿಕೆಯ ಲಕ್ಷಣ. ವಸ್ತುನಿಷ್ಠತೆ ಮತ್ತು ಮನಸ್ಸಿನ ಸೂಕ್ಷ್ಮ ಚಿತ್ರಣ ಇವುಗಳ ಸಮನ್ವಯ ಆಧುನಿಕ ಸಾಹಿತ್ಯದ ಅಮೂಲ್ಯ ಗುಣ. ಬಹಳ ಚಿಕ್ಕದಾದ ಈ ಕಥೆಯಲ್ಲಿ ಲೇಖಕರು ಬಹು ಸಂಗ್ರಹವಾಗಿ, ಸೂಚ್ಯವಾಗಿ ಮಾತೃ ಹೃದಯದ ಸಮಗ್ರ ಚಿತ್ರವನ್ನೂ ಬಿತ್ತರಿಸಿ ಕೃತಾರ್ಥರಾಗಿದ್ದಾರೆ. ಹೇಳುವ ರೀತಿಯೂ ಚೇತೋಹಾರಿಯಾಗಿ ಓದುಗನಲ್ಲಿ ತಾದಾತ್ಮ್ಯವನ್ನು ಸಾಧಿಸುತ್ತದೆ. ಈ ಕಥೆಯ ಸೂತ್ರಪ್ರಾಯವಾದ ಕೊನೆಯ ಮಾತುಗಳು:

ನೀರವ, ಗಂಭೀರ ಕತ್ತಲಿನಲ್ಲಿದುಃಖತಪ್ತ ಎದೆಯಿಂದಲೂ ಹಾಲು ಹರಿಯುತ್ತದೆ, ಸಿಹಿಯಾದ ಹಾಲು!
ಆದರೆ ತಾಯಿಯ ಕಣ್ಣಿನಿಂದ ನೀರೂ ಸುರಿಯುತ್ತದೆ, ಉಪ್ಪಾದ ನೀರು! ಅನಂತವಾಗಿ! –

ಅತ್ಯಂತ ಮಾರ್ಮಿಕವಾಗಿ ಕಥೆಯ ಸಾರವಾಗಿ ಬಂದು ಮನಸ್ಸನ್ನು ಕುಲುಕುವುದಲ್ಲದೆ ಮಾತೃ ಹೃದಯದ ಈ ಕಾತರ ದೇಶಕಾಲ ಪರಿಮಿತವಾದದ್ದಲ್ಲ, ಸಾರ್ವಕಾಲಿಕ, ಸಾರ್ವದೇಶಿಕ ಎಂಬ ಭಾವವನ್ನೂ ಕೆರಳಿಸುತ್ತದೆ. ಈ ಸಣ್ಣ ಕಥೆಗಳಲ್ಲಿ ಎಷ್ಟು ಎಳೆಗಳಿವೆ ಎಂಬುದನ್ನು ಗಮನಿಸಿದರೆ ಈ ಲೇಖಕರ ಪ್ರತಿಭೆ ಅರ್ಥವಾಗುತ್ತದೆ. ಕ್ರೂರಿಯಾಗಿ ತನ್ನ ಮಗುವನ್ನು ಕತ್ತಲಲ್ಲಿ ಮನೆ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡು ಅದು ಹುಲಿಗೆ ತುತ್ತಾಗಲು ಬಿಟ್ಟ ಅಜ್ಷಳೂ ಕೋಪಪ್ರವಶಳೂ ಆದ ಆ ಇನ್ನೊಬ್ಬ ತಾಯಿಯ ಕಥೆ; ಆ ಕಥೆಯನ್ನು ಎಳೆ ಎಳೆಯಾಗಿ ಅಳುವಿನೊಡನೆ ಈ ತಾಯಿ ಅಬ್ಬಕ್ಕ ತನ್ನ ಮಗ ಶೀನುವಿಗೆ ಹೇಳುತ್ತಾ ಅವನನ್ನು ನಿದ್ದೆ ಮಾಡಿಸುತ್ತಿರುವುದು; ತನ್ನ ಹಿರಿಯ ಮಗನ ಅತೃಪ್ತಿಗೆ ಕಾರಣವಾಗುವಂತೆ ಅಬ್ಬಕ್ಕ ತನ್ನ ಗಂಡ ಸತ್ತ ಮೇಲೆ ಮಾಡಿಕೊಂಡ ಕೂಡಿಕೆ, ಅದರ ಹಿನ್ನೆಲೆಯ ಮಧುರಭಾವ, ಅವಳ ನೂತನ ದಾಂಪತ್ಯದ ಸುಖ ಚಿತ್ರ; ಆ ಹಿರಿಯ ಮಗ ಅವಳನ್ನು ಬಿಟ್ಟು ಹೋದ ರೀತಿ, ಅವನ ಸ್ವಭಾವದ ಸೂಚ್ಯ ಕಥನ; ಅವಳ ಕೂಡಿಕೆಯ ಗಂಡನ ಸ್ವಭಾವ ಚಿತ್ರಣ; ತಾಯಿ ಮಕ್ಕಳ ಮಧುರ – ಕಟು ಬಾಂಧವ್ಯ – ಈ ಎಲ್ಲ ಎಳೆಗಳೂ ಇಲ್ಲಿ ಒಂದಾಗಿ ಏಕ ಪ್ರವಾಹವಾಗಿ ಹರಿಯುವ ರೀತಿ ಉತ್ತಮ ಪ್ರತಿಭೆಗೆ ನಿದರ್ಶನ. ನವ್ಯತೆಯ ಉತ್ತಮ ಗುಣವಾದ ಭಾವ ಸಂಕೀರ್ಣತೆ ಮತ್ತು ಪರಿಣಾಮದ ಏಕಾಗ್ರತೆ – ಇದು ಈ ಕಥೆಯ ಮುಖ್ಯ ಲಕ್ಷಣ.

ಇಷ್ಟೇ ಪರಿಣಾಮಕಾರಿಯಾದರೂ ಇನ್ನಷ್ಟು ಶ್ರೀಮಂತವಾಗಿರುವುದು ‘ಹುಲಿಯ ಹೆಂಗರುಳು’ ಎಂಬ ಕಥೆ. ಇಲ್ಲಿನ ತಂತ್ರದಲ್ಲಿ ಇನ್ನಷ್ಟು ವೈವಿಧ್ಯವಿದೆ. ಕಥೆಗಾರನ ಸಾಹಿತ್ಯ ಶೈಲಿಯೊಡನೆ ಕಥೆಯೊಳಗೇ ಒಂದು ಕಥೆ ಹೇಳುವ ನಾಲ್ಕಾರು ಪಾತ್ರಗಳ ಸಂಭಾಷಣಾ ಶೈಲಿ ಬಹು ಸುಂದರವಾಗಿ ಸಮ್ಮಿಳಿತವಾಗಿದೆ. ತಮ್ಮ ಅನುಭವವನ್ನು ಬಿತ್ತರಿಸಿ ಹೇಳುತ್ತಿರುವವರು ತಮ್ಮ ತಮ್ಮ ಮಾತಿನಿಂದಲೇ ತಮ್ಮ ತಮ್ಮ ಸ್ವಭಾವವನ್ನು ಚಿತ್ರಿಸುತ್ತಾರೆ. ಇಲ್ಲಿ ಜನದ ಗುಂಪೊಂದರ ಮನಶ್ಚಿತ್ತ ಬಹು ಸಮರ್ಪಕವಾಗಿ ಮೂಡಿದೆ. ಪ್ರವಾಹದಿಂದ ತುಂಬುತ್ತ ಅಪಾಯಕಾರಿಯಾಗುತ್ತಿರುವ ತುಂಗಾ ನದಿಯ ಮಧ್ಯೆ ಬಂಡೆಯೊಂದರ ಮೇಲೆ ಕುಳಿತು ಪ್ರಾಣಭೀತಿಯಿಂದ ಅರಚುತ್ತಿರುವವನನ್ನು ಬದುಕಿಸಲು ಜನದ ಗುಂಪು ಸೇರಿ ತೋರಿಸುವ ಕಾತರ, ಮತ್ತು ಪ್ರಾಣಭಯವನ್ನು ಮೀರಿ ನಿಲ್ಲಲಾರದ ಹೇಡಿ ಮನಸ್ಸಿನ ನೂರು ಮುಖದ ದೌರ್ಬಲ್ಯ – ಇಲ್ಲಿ ಮಾರ್ಮಿಕವಾಗಿ ಚಿತ್ರಣಗೊಂಡಿದೆ. ಮಳೆಯ ಆವರಣ ಚಿತ್ರವಂತೂ ಕಥೆಯ ಒಂದು ಅಂಶವಾಗಿ ಸೇರಿ ಬಹು ಪರಿಣಾಮಕಾರಿಯಾಗಿದೆ. ಕೊನೆಗೂ ಆ ಬಡಪಾಯಿಯನ್ನು ರಕ್ಷಿಸಲು ಪ್ರೀತಿ ವಂಚಿತನಾಗಿ ತನ್ನ ಜಾರೆ ಹೆಂಡತಿಯನ್ನು ಕೊಂದು ಬಂದಿರುವ ಸಿದ್ದ ಸಿದ್ಧನಾಗುತ್ತಾನೆ.

ಆ ‘ಹೆಂಗರುಳಿನ ಹುಲಿ’ ಸಿದ್ಧನ ಮನಸ್ಸಿನ ಕೋಲಾಹಲದ ಚಿತ್ರ; ಸೇಡಿನ ಆಶೆ, ಮರುಕ, ಪಶ್ಚಾತ್ತಪ – ಇವುಗಳ ನಡುವೆ ಅವನ ಮನಸ್ಸಿನಲ್ಲಿ ನಡೆಯುವ ಭೀಕರ ಯುದ್ಧ ಸೂಚ್ಯಕಥನ – ಇವು ಅತಿ ನೂತನವಾದ ರೀತಿಯಲ್ಲಿ, ಒಂದಷ್ಟೂ ಅತ್ಯುಕ್ತಿಯಿಲ್ಲದೆ, ಭಾವಾತೀರೇಕದ ನೆರಳೂ ಇಲ್ಲದೆ, ಕಿಂಚಿತ್ತೂ ಅಪ್ರಮಾಣಿಕ ಲೇಖನವಿಲ್ಲದೆ ಇಲ್ಲಿ ನಿರ್ದುಷ್ಟವಾಗಿ ನಡೆದಿದೆ. ಕೇವಲ ‘ಕಥೆ’ ಎಂಬ ದೃಷ್ಟಿಯಿಂದಲೂ ಇಲ್ಲಿ ವಿಸ್ಮಯ ಮತ್ತು ಸಂದಿಗ್ದ ಸೂತ್ರಗಳ ಕುಶಲ ಪ್ರಯೋಗವಿದೆ. ತನ್ನ ಹೆಂಡತಿಯ ಉಪಪತಿಯಾದ ಶೀನಶೆಟ್ಟಿಯನ್ನು ತೀರಿಸಿಬಿಡಬೇಕೆಂಬ ಪ್ರತೀಕಾರ ಬುದ್ಧಿಯೊಡನೆ ಹೇಗೋ ಹಾಗೆಯೇ ತುಂಬಿ ಮೊರೆಯುತ್ತ ಪ್ರವಾಹದಲ್ಲಿ ಹುಟ್ಟು ಹಿಡಿದು ಸೆಣಸುತ್ತಿರುವ ಸಿದ್ಧನಿಗೆ ಕೊನೆಯ ಮುಹೂರ್ತದಲ್ಲಿ, ದೋಣಿ ಬಂಡೆಯನ್ನು ಸಮೀಪಿಸುತ್ತಿರುವಾಗ, ತನ್ನ ಶತ್ರು ಶೀನಶೆಟ್ಟಿಯೇ ಅಲ್ಲಿ ಬಂಡೆಯ ಮೇಲಿನ ಬಡಪಾಯಿ ಎಂಬುದು ತಿಳಿದಾಗ ಉಂಟಾಗುವ ವಿಸ್ಮಯದ ವಿದ್ಯುದಾಘಾತ ಸಿದ್ದನ ಮೇಲೆ ಹೇಗೋ ಹಾಗೆಯೇ ಓದುವವರ ಮೇಲೂ ಅದ್ಭುತ ಪರಿಣಾಮವನ್ನು ಮಾಡುತ್ತದೆ. ಸಿದ್ದ ಕೊನೆಗೂ ತನ್ನ ಮನಸ್ಸಿನ ದ್ವಂದ್ವವನ್ನು ಕಳೆದುಕೊಂಡು ತನ್ನ ಶತ್ರುವನ್ನೂ ಬದುಕಿಸಲು ಸಿದ್ಧನಾಗುವಾಗ ಅದರ ಸಂಕೇತವಾಗಿ ಅವನ ಕೈಲಿದ್ದ ಕತ್ತಿಯೂ ಪ್ರವಾಹಕ್ಕೆ ಬಿದ್ದು ಬಿಡುತ್ತದೆ. ಈ ಕಥೆಯ ಉದ್ದಕ್ಕೂ ಸಂಕೇತಗಳು ಪರಿಣಾಮಕರವಾಗಿ ಬರುತ್ತವೆ. ಒಂದೆರಡು ಸಾಲುಗಳಲ್ಲೇ ಅರ್ಥ ವಿಪುಲತೆಯನ್ನು ತುಂಬುವ ಶಕ್ತಿ ಈ ಕಥೆಯ ಉದ್ದಕ್ಕೂ ಕಾಣುತ್ತದೆ. ಸಿದ್ಧ ದೋಣಿಯನ್ನು ಪ್ರಯಾಸ ಪಟ್ಟು ಮುಂದಕ್ಕೆ ತಳ್ಳುತ್ತಿರುವಾಗಲೇ ಅವನ ಭೂತಜೀವನವೆಲ್ಲ ಅವನ ಮನಸ್ಸಿನಲ್ಲಿ ಹಾಯ್ದು ಸಿದ್ಧನ ಜೀವನದ ಸಮಗ್ರ ಚಿತ್ರವೂ ಹತ್ತಾರು ಮಾತುಗಳಲ್ಲಿ ಮೂಡಿಬರುತ್ತದೆ. ಶೀನಶೆಟ್ಟಿಯನ್ನು ನಾವು ಇಲ್ಲಿ ಕಾಣುವುದು ಕ್ಷಣಕಾಲ ಮಾತ್ರವಾದರೂ ಒಂದೆರಡು ನುಡಿಗಳಲ್ಲೇ ಕಥೆಗಾರರು ಅವನ ಸ್ವಭಾವ ಚಿತ್ರವನ್ನು ರಚಿಸಿಬಿಡುತ್ತಾರೆ. ಇಲ್ಲಿ ಕಥೆಯ ಕೊನೆಗೆ ಬರುವ “’And the spirit of God moved upon the face of waters” ಎಂಬ ಇಂಗ್ಲಿಷ್ ವಾಕ್ಯ ಅತ್ಯಂತ ಪರಿಣಾಮಕರವಾಗಿದ್ದರೂ ಅನಂತರ ಬರುವ ಇನ್ನೊಂದು ವಾಕ್ಯ ಅಷ್ಟು ಸಾರ್ಥಕ ಎನ್ನಿಸುವುದಿಲ್ಲ.

[1] ಅಂತೂ ಕಥಾ ದೃಷ್ಟಿಯಿಂದ, ಸ್ವಭಾವ ಚಿತ್ರಣದ ದೃಷ್ಟಿಯಿಂದ, ವಾತಾವರಣ ರಚನೆಯ ದೃಷ್ಟಿಯಿಂದ ವ್ಯಕ್ತಿ ಮತ್ತು ಸಮಾಜದ ಏಕಕಾಲ ಚಿತ್ರಣದಿಂದ ಈ ಕಥೆ ಅತ್ಯುತ್ತಮವಾದದ್ದು. ವರ್ತಮಾನಕಾಲದ ಅಸ್ಥಿರ ಬಿಂದುವಿನಲ್ಲಿ ಭೂತ ಭವಿಷ್ಯಗಳನ್ನು ಸೆರೆ ಹಿಡಿದುಕೊಡುವ ಆಧೂನಿಕ ಪ್ರಜ್ಞೆಗೆ ಇದೊಂದು ಉತ್ತಮ ಉದಾಹರಣೆಯೂ ಹೌದು.

ಈ ಸಂಕಲನಕ್ಕೆ ಹೆಸರುಕೊಟ್ಟಿರುವ ‘ಎಂದೆಂದೂ ಮುಗಿಯದ ಕಥೆ’ ಯಲ್ಲಿ ಉತ್ತಮವಾದ ಭಾವವಿದೆ, ಹೃದಯಂಗಮವಾದ ಬರವಣಿಗೆಯೂ ಇದೆ. ಆದರೆ ಅದರ ವಸ್ತುವಿನಲ್ಲಿ ಸಣ್ಣ ಕಥೆಗೆ ಬೇಕಾದಷ್ಟು ಗುರುತ್ವ ಇಲ್ಲ ಎನಿಸುತ್ತದೆ. ಹಾಗೆನ್ನಿಸುವುದಕ್ಕೆ ಬಹುಶಃ ಕಥೆಯಲ್ಲಿ ಭಾವಸಾಂದ್ರತೆಯ ಸಂಕೀರ್ಣತೆಯ ಅಭಾವವೇ ಕಾರಣವಿರಬಹುದು. ‘ಪಂಜರದ ಗಿಣಿ’ಯಲ್ಲಿ ಕಾವ್ಯಮಯತೆ ಅತಿಯಾಗಿ ಕಥೆ ಅಸ್ಪಷ್ಟವಾಗಿ ಯಾವೊಂದು ಭಾವವನ್ನೂ ಖಚಿತವಾಗಿ ಮೂಡಿಸಲು ಅಸಮರ್ಥವಾಗುತ್ತದೆ. ಬಹುಶಃ ಈ ಎರಡು ಕಥೆಗಳೂ ಬೇರೊಂದು ಸಂಕಲನದಲ್ಲಿ ಬಂದಿದ್ದರೆ ಉತ್ತಮವೆನ್ನಿಸುತ್ತಿದ್ದವೋ ಏನೋ. ಆದರೆ ಇಲ್ಲಿ ‘ಹುಲಿಯ ಹೆಂಗರುಳು’ ಮತ್ತು ‘ತಾಯಿ’ಯಂಥ ಕಥೆಗಳ ಜತೆಗೆ ಬಂದಿರುವುದರಿಂದ ಅವು ಪೇಲವವಾಗಿ ಕಾಣುತ್ತವೆ.

ಇನ್ನುಳಿದ ಕಥೆಗಳು ಎರಡು – ‘ಒಂದು ಹಿನ್ನುಡಿ’ ಮತ್ತು ‘ಕವಿಯ ಪೂರ್ಣಿಮೆ’. ‘ಒಂದು ಹಿನ್ನುಡಿ’ಯಲ್ಲಿ ಕಾವ್ಯಮಯತೆ ಹೆಚ್ಚಾಗಿರುವುದರ ಜೊತೆಗೆ ಒಂದು ಸಣ್ಣ ಊಹೆಯನ್ನು ಅತಿಯಾಗಿ ಬೆಳೆಸಿರುವ ಹಾಗೆ ಅನ್ನಿಸುತ್ತದೆ. ಉತ್ತಮವಾದ ಭಾಗಗಳು ಇಲ್ಲಿ ಹಲವು ಇದ್ದರೂ ಸಮಗ್ರ ಪರಿಣಾಮದಲ್ಲಿ ಕಥೆ ಸೋಲುತ್ತದೆ. ಇದೇ ರೀತಿ ‘ಕವಿಯ ಪೂರ್ಣಿಮೆ’ಯೂ ಒಟ್ಟಿನಲ್ಲಿ ಪರಿಪೂರ್ಣ ಕಲಾಕೃತಿ ಆಗದೆ ಇದ್ದರೂ ಅದು ಈ ಲೇಖಕರ ‘ಭವ್ಯಪರಾಜಯ’ ಎನ್ನಬೇಕು. ಒಂದು ದೃಷ್ಟಿಯಲ್ಲಿ ಈ ಕಥೆ ಮನಸ್ಸಿಗೆ ಕೊಡುವಷ್ಟು ಹಿತವನ್ನು ಈ ಸಂಗ್ರಹದ ಇನ್ನಾವ ಕಥೆಯೂ ಕೊಡುವುದಿಲ್ಲ ಎನ್ನಬೇಕು. ಇಲ್ಲಿನ ನಯವಾದ, ನವುರಾದ ಬರವಣಿಗೆ, ಕಾವ್ಯಾಭಾಸದ ಚಂಚು ಪ್ರವೇಶವೂ ಇಲ್ಲದ ಮಧುರವಾದ, ಲಕ್ಷಣ ಬದ್ಧವಾದ, ಲಯಶುದ್ಧವಾದ ಗದ್ಯ – ಅದೇ ಒಂದು ಸಂತೋಷ! ರಸಸಂತರ್ಪಣ. ಹಾಗೆಯೇ ಇಲ್ಲಿಯ ವಸ್ತುವೂ ದೊಡ್ಡದು. ಕೀಟ್ಸ್ ಕವಿಯ ಜೀವನದ ಕೆಲವು ವಿದ್ಯಮಾನಗಳಿಂದ ಅಂಶತಃ ಸ್ಫೂರ್ತವಾದ ಈ ಕಥೆ ಭಾವವೈಶಾಲ್ಯದಲ್ಲೂ ಆಳದಲ್ಲೂ ಅತ್ಯುತ್ಕೃಷ್ಟವಾದುದು. ಹೇಳುವ ರೀತಿ ಅತ್ಯಂತ ಹೃದಯಸ್ಪರ್ಶಿಯಾದುದು. ಆದರೂ ಕಥೆಯ ಪರಿಧಿ ಲೇಖಕನ ತೆಕ್ಕೆಗೆ ಸಿಕ್ಕದೆ ನುಣುಚಿಕೊಂಡ ಹಾಗೆ ತೋರುತ್ತದೆ. ಕವಿ ಆನಂದನ ಮೃತ್ಯುವಿನ ಕಾಲದಲ್ಲೇ ಹುಟ್ಟಿದ ಅವನ ಅಣ್ಣನ ಮಗುವಿನಲ್ಲಿ ಅವನ ಅಮರತೆಯ ಆಕಾಂಕ್ಷೆ ಸಫಲವಾಯಿತು ಎಂಬ ಮಾತು ಒಂದು ಊಹೆಯನ್ನು ತತ್ವದ ಮಟ್ಟಕ್ಕೆ ಏರಿಸುವ ವಿಫಲ ಪ್ರಯತ್ನವಾಗಿ ಈ ಕಥೆಯಲ್ಲಿ ತೋರುತ್ತದೆ.

ಶ್ರೀ ಅನಂತಮೂರ್ತಿಯವರ ಪ್ರತಿಭೆ ಪ್ರಥಮ ವರ್ಗದ್ದು ಎಂದು ಈ ಸಂಕಲನ ಸಿದ್ಧಪಡಿಸುತ್ತದೆ. ಸೂಕ್ಷ್ಮಬುದ್ಧಿ, ವಿಶಾಲವೂ ಪರಿಶುದ್ಧವೂ ಆದ ಅಭಿರುಚಿ, ಸಾಹಿತ್ಯ ವಿಚಾರಗಳಲ್ಲಿ ತೂಕವುಳ್ಳ ಮಾತನ್ನಾಡಬಲ್ಲಂಥ ಧೀರ ವಿಮರ್ಶ ಶಕ್ತಿ, ಕಲ್ಪನೆ, ಬಹು ಶತ್ರೃತ್ವ – ಇವು ಯಥೇಚ್ಛವಾಗಿರುವ ಈ ಲೇಕಕರಲ್ಲಿ ನನಗೆ ವೈಯಕ್ತಿಕವಾಗಿ ಹೇಳಬೇಕಾದರೆ ಸ್ನೇಹ ಮಾತ್ರವಲ್ಲ ಗೌರವವೂ ಉಂಟು. ಎಲ್ಲಕ್ಕಿಂತ ಹೆಚ್ಚಾಗಿ ಇವರಲ್ಲಿ ಕಂಡು ಬರುವ ಆತ್ಮ ವಿಮರ್ಶ ಶಕ್ತಿ ದಂಗು ಬಡಿಸುವಂಥದು. ಅನಂತಮೂರ್ತಿಯವರ ಜೊತೆ ನಾನು ಕಾವ್ಯ ಸಾಃಇತ್ಯ ವಿಚಾರವಿನಿಮಯದಲ್ಲಿ ಅತ್ಯಂತ ಸಂತೋಷದಾಯಕವಾದ ಅನೇಕ ಗಂಟೆಗಳನ್ನು ಕಳೆದಿದ್ದೇನೆ. ಸಾಹಿತ್ಯ ವಿಷಯದಲ್ಲಿ ಇವರ ಅಭಿಪ್ರಾಯಗಳಿಗೆ ನಾನು ಬಹಳ ಬೆಲೆ ಕೊಡುತ್ತೇನೆ. ಇಂಥ ಲೇಖಕರ ವಿಷಯದಲ್ಲಿ ಒಂದು ಮಾತನ್ನು ಮಾತ್ರ ಧೈರ್ಯವಾಗಿ ಹೇಳಬಹುದು; ಇನ್ನೂ ಇನ್ನೂ ಉತ್ತಮವಾಗಿ ಇನ್ನಷ್ಟು ಶ್ರೀಮಂತ ಸಾಹಿತ್ಯವನ್ನು ಇವರು ಸೃಷ್ಟಿಸಬಹುದು; ಒಂದು ಪಕ್ಷ ಹಾಗಾಗದೇ ಹೋದರೂ ಈ ಲೇಖಕ ಸಾಹಿತ್ಯವಲ್ಲದ್ದನ್ನು ಎಂದೂ ಬರೆಯಲಾರ; ಯಾವ ಕೀರ್ತಿ ಪ್ರತಿಷ್ಠೆಯ ಆಕಾಂಕ್ಷೆಯಿಂದಲೂ ಅಪ್ರಾಮಾಣಿಕ ಕೃತಿರಚನೆಗೆ ಕೈ ಹಾಕಲಾರ. ಇಂಥ ಪ್ರಾಮಾಣಿಕ ಸಾಹಿತಿಗಳ ಸಂಖ್ಯೆ ಬಹಳ ಕಡಿಮೆ. ಅಂಥ ಕೆಲವೇ ಮಂದಿ ಕಲೆಗಾರರ ಪಂಕ್ತಿಯಲ್ಲಿ ಅನಂತಮೂರ್ತಿ ಆಗಲೇ ಸ್ಥಾನಗಳಿಸಿದ್ದಾರೆ. ಅಲ್ಲಿಂದ ಅವರಿಗೆ ಚ್ಯುತಿಯಿಲ್ಲ.

ಗೋಪಾಲಕೃಷ್ಣ ಅಡಿಗ[1] ಎರಡನೆಯ ಮುದ್ರಣದಲ್ಲಿ ಆ ವಾಕ್ಯಗಳನ್ನು ಬಿಡಲಾಗಿದೆ.