ಬರೆಯಲೇಬೇಕು ಎಂದುಕೊಂಡ ರಾಘವ. ತೊಡಗಿದ ಮೇಲೆ ಮಾಡಿ ಮುಗಿಸಬಹುದು; ಆದರೆ ತೊಡಗುವುದಕ್ಕೆ ಮುಂಚೆ ಉದಾಸೀನ. ಉದಾಸೀನವಲ್ಲ – ಭಯ. ಎಷ್ಟೊಂದಕ್ಕೆ ಒಳಗಾಗಿ, ಒಳಗೊಂಡು,

ಒಡಲನೂಲಿನಿಂದ ನೇಯುವಂತೆ.

ಟೀ ತರಲೆ ಎಂದಳು ಒಳಗಿನಿಂದ ಛಾಯ. ಟೀ ಕುಡಿದು ಬರೆಯುವುದು.

ಅಮ್ಮ. ಮತ್ತು ರಾಗಜ್ಜ. ಮತ್ತು ನಾನು. ಮತ್ತು ಛಾಯ.

ಹೊಗೆಸೊಪ್ಪು ತಿಕ್ಕುತ್ತ ಕೂತ ರಾಗಜ್ಜ ಅರ್ಧ ರಾಜ್ಯ ಕೊಡ್ತೇನೆ, ಬೆನ್ನು ತುರಿಸೋ ಅಪ್ಪು ಎಂದರೆ ಒಳಗಿನಿಂದ ಅಮ್ಮನ ಗದರಿಕೆ – ಓದಿಕೊಳ್ಳಬಾರದ? ಮನೆಗೆ ಹಿರಿಯರೆಂದವರೇ ಹಾದಿ ಹಾಕಿಕೊಟ್ಟ ಮೇಲೆ….

ಸ್ಲೇಟನ್ನು ಒರೆಸಲು ನೀರೋಟೆ ಬೇರು, ಬಳಪ ಸಿಕ್ಕಿಸಲು ವಾಟೆ, ಚನ್ನೆ ಮಣೆಗೆ ಹಾಲವಾಣದ ಕಾಳು, ಪೆಟ್ಲಿಗೆ ಗಜ ಒದಗಿಸುತ್ತಿದ್ದವರು ರಾಗಜ್ಜ. ಅಗಸೆಮರ ಅಗಸ್ತ್ಯ ಋಷಿಗಳದ್ದು ಎಂದಿದ್ದರು. ಆರೇಳು ವರ್ಷವಿರಬೇಕು ತನಗೆ. ಮಗ್ಗಿ ಬರೆಯುತ್ತ ಕೂರುವುದೆಂದರೆ ಬೇಜಾರು. ಅಪ್ಪನ ಕಣ್ಣು ತಪ್ಪಿದರೆ ಸ್ಲೇಟನ್ನು ಬಿಸಾಕಿ ಅಂಗಳದಲ್ಲಿ ಚಿಮ್ಮುವ ಎಳೆಗರುವಿನ ಬಾಲ ಹಿಡಿದೆಳೆಯುವುದು; ಅದರ ಕೊರಳಿಗೆ ಕೈಯುಜ್ಜಿ ಉಪ್ಪುಪ್ಪು ಎಂದು ಉಪ್ಪು ತೆಗೆದುಕೊಳ್ಳುವುದು; ತಲೆಗೆ ಢಿಕ್ಕಿ ಢಿಕ್ಕಿ ಮಾಡಿ ಹಾಯಿಸಲು ಕಲಿಸುವುದು. ಇಲ್ಲವೇ ಒಬ್ಬನೇ ಚನ್ನೆಮಣೆಯಾಡುತ್ತ ಕೂರುತ್ತಿದ್ದೆ. ರಾಗಜ್ಜ ಬಿಸಿಲಿನಲ್ಲಿ ಕೂತು ಹದ್ದಿನ ಗರಿಯಿಂದ ನನಗೊಂದು ಲೇಖನಿ ಮಾಡುವುದನ್ನು ಮಗ್ನನಾಗಿ ನೋಡುವ ಬಾಲತನ ನೆನಪಾಗುತ್ತದೆ.

ಟೀ ತಂದು ಛಾಯ ಆರುವುದಕ್ಕೆ ಮುಂಚೆ ಕುಡೀರಿ ಎಂದು ಎದುರು ಕೂತಳು. ರಾಘವ ಪೆನ್ನನ್ನು ಮೇಜಿನ ಮೇಲಿಟ್ಟು ಕಣ್ಣೆತ್ತಿದ. ಬಿಳಿ ಮೈಮೇಲೆ ಕೆಂಪು ಹೂಗಳಿರುವ ಸೀರೆ, ಒಪ್ಪುವ ಕೆಂಪು ಚೌಕುಳಿಯ ಕುಪ್ಪುಸ, ತಲೆಗೊಂದು ಕೆಂಪು ಗುಲಾಬಿ – ಬೊಗಸೆ ಕಣ್ಣುಗಳಲ್ಲಿ ಬಯಕೆ. ಹೆರಳನ್ನೆತ್ತಿ ಎದೆಯ ಮೇಲೆ ಇಳಿಬಿಟ್ಟಳು. ಇವನು ಸದಾ ತನ್ನನ್ನು ರಮಿಸುತ್ತಿರಬೇಕು ಎನ್ನುವ ಪ್ರೀತಿಯ ನಿಷ್ಠುರ ಜುಲುಮೆ ಈಗ ಬೇಕೆನ್ನಿಸಲಿಲ್ಲ. ಮೂತಿಯನ್ನು ಅಲ್ಲಾಡಿಸಿ ಹಂಗಿಸಿದಳು. ರೇಗಿತು. ಇನ್ನೊಂದು ಸಾರಿ “ಆರೋದಕ್ಕೆ ಮುಂಚೆ ಕುಡೀರಿ. ಏನು ಯೋಚನೆ” ಎಂದಳು. “ಸುಮ್ಮನಿರು, ಬರೀ ಬೇಕೂಂತ ಕೂತಿದೀನಿ” ಎಂದ. “ರಜದ ದಿನವೂ ನೀವು.. ಹೋಗಲಿ ಬಿಡಿ” ಎಂದಳು.

ಎರೆದುಕೊಳ್ಳುವ ಹಬ್ಬದ ಹಿಂದಿನ ದಿನ. ರಾಗಜ್ಜ ಮುಂಡಾಸು ಸುತ್ತಿ ಕೈಯಲ್ಲಿ ಕತ್ತಿ ಹಿಡಿದು ಹೇಳಿದರು:

“ಬಾರೋ ಅಪ್ಪು ಕಾಡಿಗೆ ಹೋಗಿಬರುವ. ಪೆಟ್ಲಿಗೊಂದು ಗಜ ಬೇಕು ಎಂದೆಯಲ್ಲ ಮಾಡಿಕೊಡುವೆ. ಹಂಡೆಗೆ ಕಟ್ಟಲು ಒಂದಷ್ಟು ಹಿಂಡ್ಳಚ್ಚಿ ಬಳ್ಳಿಯನ್ನೂ ತಂದರಾಯಿತು. ”

ಸ್ಲೇಟನ್ನು ಬಿಸಾಕಿ ಅಮ್ಮನಿಗೆ ಹೇಳಿ ಬರುತ್ತೇನೆಂದು ಓಡಿದೆ. ಅಮ್ಮ ತುಳಸಿಕಟ್ಟಯ ಬುಡದಲ್ಲಿ ಕೂತು ಪಾತ್ರೆ ತೊಳೆಯುತ್ತಿದ್ದ ಅಬ್ಬಕ್ಕನ ಹತ್ತಿರ ಸುಖದುಃಖ ಹೇಳಿಕೊಳ್ಳುತ್ತಿದ್ದಳು. ರಾಗಜ್ಜನ ಜೊತೆ ಹೋಗಲೇ ಅಮ್ಮ ಎಂದು ಮೂರು ಸಾರಿ ಕೇಳಿದ ಮೇಲೆ ಗದರಿಸಿದಳು :

“ಹೋಗಂತೆ, ಅವರು ಬಂದವರು ಬೆನ್ನು ಬಿಸಿ ಮಾಡ್ತಾರೆ. ಕೂತು ಬರಕೋ ಬಾರದ?”

ಹೊರಗೆ ನಾನು ಹಾಕಿಕೊಂಡು ಬಂದ ಮುಖ ನೋಡಿ ರಾಗಜ್ಜ ಹೇಳಿದರು;

“ನನ್ನ ಮೊಮ್ಮಗನನ್ನು ಕರೆದುಕೊಂಡು ಹೋಗಲು ಸೊಸೆಯ ಅಪ್ಪಣೆ ಬೇರೆ ಕೇಳಬೇಕ ನಾನು? ನನ್ನ ಮಗನಿಗೆ ಬೇಕಾದರೆ ನಾನು ಹೇಳಿಕೋತೇನೆ, ನಾನಂದ ಹಾಗೆ ಮಾಡು ನೀನು, ತೆಪ್ಪನೆ ನನ್ನ ಜೊತೆ ಬಾ. ”

ರಾಗಜ್ಜನ ಜೊತೆ ಹೊರಟೆ. ಮೆಟ್ಟಲು ಇಳಿಯುತ್ತ ರಾಗಜ್ಜ, ‘ರಾಜನ ಹಾಗೆ ಬದುಕಿದ ನನಗೆ ಈ ಇಳಿವಯಸ್ಸಲ್ಲಿ ಹಣ್ಣೊಂದರ ಅಂಕೆಯಲ್ಲಿ ಇರಬೇಕಾಗಿ ಬಂದಿತೆ ಪರಮಾತ್ಮ, ಥತ್’ ಎಂದರು. ಉಣುಗೋಲು ದಾಟುತ್ತ ಹಿಂದಕ್ಕೆ ತಿರುಗಿದೆ. ಮುಂಚೆಕಡೆ ಬಾಗಿಲಲ್ಲಿ ಅಮ್ಮ ನಿಂತು ದುರುಗುಟ್ಟಿ ನೋಡುತ್ತಿದ್ದಳು. ಹಿಂದಕ್ಕೆ ಬಾ ಎನ್ನುವಂತೆ ಅವಳು ಮಾಡಿದ ಕೋಪದ ಸನ್ನೆಯನ್ನು ಗಮನಿಸಲಿಲ್ಲವೇನೊ ಎಂಬಂತೆ ಮುಖ ಮಾಡಿ ಮುಂದೆ ನಡೆದೆ.

* * *

“ಎಲ್ಲಾದರೂ ತಿರುಗಾಡಿ ಬರೋಣ ಬನ್ನಿ” ಎಂದು ರಾಘವನ ಕೈ ಹಿಡಿದು ಜಗ್ಗುತ್ತ ಛಾಯ ಹೇಳಿದಳು.

“ಬರೀಬೇಕೂಂತ ಕೂತಿದೀನಿ. ಎಲ್ಲ ಸಮಯದಲ್ಲೂ ಹುಡುಗಾಟ ಚೆನ್ನಾಗಿರೋದಿಲ್ಲ ಛಾಯ. ಪ್ಲೀಸ್” ಎಂದ ರಾಘವ.

“ಹಾಗಾದರೆ ನಾನೊಬ್ಬಳೆ ಎಲ್ಲಾದರೂ ಹೋಗಿ ಬರುತ್ತೇನಪ್ಪಾ”

ಅವಳ ಧ್ವನಿಯಲ್ಲಿನ ಇಂಗಿತ ತಿಳಿಯಿತು. ರಕ್ತವನ್ನು ಚುರುಕು ಮಾಡುವ ಅವಳ ಆಟದ ಮಾನಸಿಕ ತನಗೀಗ ಬೇಕೆನಿಸುತ್ತಿಲ್ಲ ಎನ್ನುವುದನ್ನು ಖಂಡಿತವಾಗಿ ಸೂಚಿಸುವಂತೆ ಹೇಳಬೇಕು:

“ಹೋಗು. ನಾನು ಬೇಡಾಂತ ಅಂದೆನೆ?”

ಪ್ರತಿ ನಿಮಿಷದಲ್ಲೂ ಜೀವನಕ್ಕೆ ತೊಡಗಿಸುವ ಅನುರಕ್ತಿಯಲ್ಲಿ, ರತಿಯಲ್ಲಿ ಭೂತದಿಂದ ಬಿಡುಗಡೆ ಎಂದು ತಿಳಿದಿದೇನೆ ಅಲ್ಲವೆ? ಆದರೆ ಈಗ –

* * *

ಬೇಡವೆನ್ನಿಸುತ್ತಿದೆ. ಸ್ವಲ್ಪ ಏಕಾಂಗಿಯಾಗಿದ್ದು ನನ್ನ ಪಾಲಿಗೆ ಬಂದ, ನನಗೆ ವಿಶೇಷವಾದ ಅನುಭವಗಳನ್ನು ಕಣ್ಣು ಬಿಟ್ಟು ನೋಡಬೇಕೆನ್ನಿಸುತ್ತದೆ. ಮುಗಿಯಿತು ಎಂದು ತಿಳಿದದ್ದು ಮರುಕಳಿಸುತ್ತದೆ. ಬದುಕಿದ, ಬದುಕದ ಪ್ರತಿ ಘಳಿಗೆಯೂ ಭೂತವಾಗುವುದರಿಂದಲೇ…..

ಈಗಿನ ನನ್ನ ಪಾಡಿಗೂ ಜೀವನ ಹಿಡಿದ ಜಾಡಿಗೂ ಅಂದು ನಾನು ಹುಡುಗನಾಗಿದ್ದಾಗ ಅನುಭವಿಸಿದ್ದಕ್ಕೂ ಏನು ಸಂಬಂಧ ಇರಬಹುದೆ ಇಲ್ಲವೆ ಬರೆದು ತಿಳಿಯಬೇಕು. ಕೂಡಿಸಿ, ಜೋಡಿಸಿ,

ಉದಾಹರಣೆಗೆ ನರಸಿಂಹಮಾವ ತಂಗಿಯ ಮನೆಗೆಂದು ಬಂದವನು ಕೇಳುತ್ತಿದ್ದ ಪ್ರಶ್ನೆಗಳು :

“ಅಮ್ಮ ಪಾಪಾನೊ? ಅಜ್ಜಿ ಪಾಪಾನೊ?”

ಮಾವನಿಗೆ ಯಾವುದು ಇಷ್ಟವೆಂದು ಭಾವಿಸಿ ಹೇಳುತ್ತಿದ್ದ ಉತ್ತರ.

“ಅಮ್ಮ ಪಾಪ. ಅಜ್ಜಿ ಕೆಟ್ಟ. ”

“ನೀನು ಅಮ್ಮನ ಮಗನೋ? ಅಪ್ಪನ ಮಗನೊ?”

“ಅಮ್ಮನ ಮಗ”.

ಪ್ರಶ್ನೆ ಕೇಳುವಾಗ ಅಮ್ಮನೂ ಎದುರು ಇರುತ್ತಿದ್ದಳು.

“ಅಮ್ಮ ಪಾಪಾನೊ? ರಾಗಜ್ಜ ಪಾಪಾನೊ?”

….“ಅಮ್ಮ ಪಾಪ. ರಾಗಜ್ಜ… ”

ರಾಗಜ್ಜನಿಗೆಲ್ಲಿ ಈ ಉತ್ತರ ಕೇಳಿಸಿತೊ ಎಂದು ಭಯ. ಆರೇಳು ವರ್ಷದ ಹುಡುಗ ಕಳ್ಳನಂತೆ ಅತ್ತಿತ್ತ ನೋಡಿ ಹೇಳುತ್ತಿದ್ದೆ. ದೊಡ್ಡವರ ಪ್ರಪಂಚದಲ್ಲಿ ನಡೆಯುವುದಕ್ಕೆಲ್ಲ ಬರಿಯ ಸಾಕ್ಷಿಯಲ್ಲದೆ ಪಾಲುದಾರ. ಮುಗ್ಧನನ್ನು ಪ್ರಪಂಚಕ್ಕೆ ನೂಕಿದ ಅನುಭವಗಳು.

ಎಷ್ಟೆಲ್ಲ? ಮಾರನೆ ದಿನ ಎರೆದುಕೊಳ್ಳುವ ಹಬ್ಬವಾದ್ದರಿಂದ ಹಂಡೆಯ ಕೊರಳಿಗೆ ಕಟ್ಟಿ ಸಿಂಗರಿಸಲು ಹಿಂಡ್ಳಚ್ಚಿಕಾಯಿಯ ಬಳ್ಳಿ ಬೇಕು. ಕೆಮ್ಮಣ್ಣು ಹಚ್ಚಿ ಹಿಟ್ಟಿನ ರಂಗೋಲೆ ಹಾಕಿದ ಹೊಸಿಲಿನ ಮೇಲೆ ಸಗಣಿಯ ಗುಪ್ಪೆಗಳನ್ನಿಟ್ಟು ದೂರ್ವೆ ನಡಬೇಕು. ಮೇಲೊಂದೊಂದು ಚೆಂಡುಹೂ. ಮತ್ತೆ ದನಗಳ ಕೊಂಬು ಕೊರಳಿಗೆ ಕಟ್ಟಲು ಚೆಂಡುಹೂ. ಜೊತೆಗೆ ಸುರಿದು ಸರ ಮಾಡಿದ ಇನ್ನೊಂದು ತರಹದ ಕೆಂಪು ಕಾಯಿ. ಅದರ ಹೆಸರೇನು ಮರೆತಿದೆ. ಉರು, ಉರುಟು… ಉರುಟುಣೆ… ಉರುಟಣೆ ಹೌದೆ? ಅಲ್ಲ – ಯಾವ ಕಾಯಿಯೊ? ಒಂದು ಬಟ್ಟಲನ್ನು ತಗೊಳ್ಳೋದು, ಅದರ ಬಾಯನ್ನು ಕೆಮ್ಮಣ್ಣಿನಲ್ಲಿ ಜೇಡಿಯಲ್ಲಿ ಅದ್ದಿ, ಮೈತೊಳೆಸಿ ಶುಭ್ರವಾದ ದನಗಳ ಮೈಮೇಲೆ ಉರುಟುರುಟು ಮುದ್ರಿಸಿ, ಹಂಡುಂಡ ಮಾಡಿ, ಚೆಂಡು ಹೂ ಸರದ ಜೊತೆ ಈ ಉರು, ಉರುಟು…. ಯಾವುದೋ ಕೆಂಪು ಕಾಯಿಯ ಸರವನ್ನು ಕಟ್ಟಿ, ಜಾಗಟೆ ಬಾರಿಸಿ, ಹೋ ಹೋ ಎಂದು ಕೊಟ್ಟಿಗೆಯಿಂದ ಅಟ್ಟಿ ಬೆರೆಸೋದು; ಇನ್ನೊಬ್ಬರ ಮನೆಯ ದನಗಳ ಕೊರಳಿಂದ ನಾವು ಹರಿದು ತರೋದು. ಗೌಜು, ಗಮ್ಮತ್ತು.

ಇಷ್ಟೇ ಅಲ್ಲ. ಮತ್ತೆಷ್ಟೆಲ್ಲ ಜ್ಞಾಪಕವಾಗುತ್ತದೆ. ನರಸಿಂಹಮಾವ ಸತ್ತದ್ದು. ಹಾಗೇ ಆಗ ತಾನೇ ನಸಕು ನಸಕ ಬೆಳಕಿನಲ್ಲಿ ನಾನು, ಅಪ್ಪ, ಅಮ್ಮ, ರಾಗಜ್ಜ ಎರೆದುಕೊಂಡು ಕೂತಿದೇವೆ; ಯಾರೋ ಬಂದು ಬಾಗಿಲು ಬಾಗಿಲು ಎಂದು ಬಾಗಿಲು ತಟ್ಟಿದಾಗ, ರಾಗಜ್ಜ ಎದ್ದು ಹೋಗಿ ಬಾಗಿಲು ತೆರೆದರು. ಈ ಸರಿಹೊತ್ತಿನಲ್ಲಿ ಬಂದು ಬಾಗಿಲು ತಟ್ಟುವವರು ಯಾರು ಎಂದು ಅಮ್ಮ ಅಪ್ಪ ಕಿವಿ ನೆಟ್ಟಗೆ ಮಾಡಿ ಗಾಬರಿಯಾಗಿ ಕೂತಾಗ ರಾಗಜ್ಜನ ಬಾಯಿಂದ ನಾರಾಯಣ ಎನ್ನುವ ಮಾತು ಕೇಳಿಸಿ ಅಮ್ಮ ಎದ್ದು ನಿಂತು “ಅಯ್ಯೋ ಏನಾಯಿತು” ಎನ್ನಲು.

ಜೀ ಜೀ ಎಂದು ಶಬ್ದ ಮಾಡುವ ಮೆಟ್ಟನ್ನು ತುಳಿದು ಕೈಯಲ್ಲಿ ಲಾಟೀನು ಹಿಡಿದು ಬಂದ ಇಬ್ಬರು ನರಸಿಂಹಮಾವ ಸನ್ನಿಯಾಗಿ ಸತ್ತ ವಿಷಯ ವರ್ಣಿಸಿದ್ದರು. ಹೆಂಡತಿಯ ಮನೆಗೆ ದೀಪಾವಳಿಗೆಂದು ಹೋದವನು ಸತ್ತ. ಮದುವೆಯಾಗಿ ವರ್ಷವಷ್ಟೆ. ಹೆಂಡತಿ ಮೈನೆರೆದಿರಲಿಲ್ಲ.

ಅವನಿಗೆ ಆ ಮದುವೆಯನ್ನು ಹಠ ಹಿಡಿದು ಮಾಡಿಸಿದವರು ರಾಗಜ್ಜ. ತಪ್ಪು ರಾಗಜ್ಜನ ಮೇಲೆ ಬಂತು. ಅಮ್ಮ ಮೂದಲಿಸಿದಳು: ನೀವು ಮಾಡಿಸಿದ ಮದುವೆ, ಊರೇ ಬೇಡವೆಂದರೂ ಕೇಳಲಿಲ್ಲ, ನಿಮ್ ಸಂಬಂಧದ ಹುಡುಗೀಂತ ಗ್ರಹ ಕೂಡಿ ಬರದಿದ್ದರೂ ಮದುವೆ ಮಾಡಿಸಿ ಇದ್ದ ಒಬ್ಬನೇ ಅಣ್ಣನನ್ನು ಕೊಂದಿರಿ – ಎಂತ. ರಾಗಜ್ ತುಟಿಪಿಟಿಕ್ಕೆನ್ನುತ್ತಿರಲಿಲ್ಲ. ಹೊಗೆಸೊಪ್ಪು ತಿಕ್ಕುತ್ತ ಮುಖವನ್ನು ಇನ್ನೊಂದು ಕಡೆ ತಿರುಗಿಸಿಬಿಡುತ್ತಿದ್ದರು. ಅಮ್ಮ ಒಳಗೆ ಹೋದ ಮೇಲೆ ನನ್ನನ್ನು ಬಾ ಇಲ್ಲಿ ಎಂದು ಹತ್ತಿರಕ್ಕೆ ಕರೆಯುತ್ತಿದ್ದರು. ಕೂಡಿಸಿಕೊಂಡು:

“ನೋಡಿದೆಯೇನಯ್ಯ? ನಿನ್ನ ಅಮ್ಮ ಹೇಳಿದ್ದು ಕೇಳಿಸಿಕೊಂಡಿಯ? ನಾನು ಮುಟ್ಟಿದ್ದೆಲ್ಲ ಮಣ್ಣು. ಯಾವುದೂ ಕೈ ಹತ್ತಲಿಕ್ಕಿಲ್ಲ. ಗ್ರಹಚಾರ. ”

ರಾಗಜ್ಜ ಹೇಳಿದ್ದೇನೆಂದು ಅಮ್ಮ ಗುಟ್ಟಾಗಿ ಕರೆದು ಕೇಳುವಳೆಂದು ಹೆದರಿ ನಾನು ಒಳಗೇ ಹೋಗುತ್ತಿರಲಿಲ್ಲ.

* * *

ಮನೆಯ ಸುತ್ತ ಅದೆಷ್ಟು ದೊಡ್ಡ ಕಾಡೆಂದರ ಸುತ್ತಮುತ್ತ ಧಾಂಡಿಗವಾಗಿ ಬೆಳೆದ ವೃಕ್ಷಗಳ ಬೇರುಗಳು ಅಂಗಳದಲ್ಲಿ ಯಾಕೆ, ಮನೆಯ ಒಳಗೂ ಉಬ್ಬಿದ ನರಗಳಂತೆ ಎದ್ದು ನಿಲ್ಲುತ್ತಿದ್ದವು. ರಾಗಜ್ಜ ನಿತ್ಯ ಕತ್ತಿ ಹಿಡಿದು ಸವರದಿದ್ದರೆ ಮುಗಿದೇ ಹೋಯಿತು. ಬೇಲಿಗೆ ರತ್ನಗಂದಿ, ಕಳ್ಳಿ. ಕಳ್ಳಿಯೆಲೆಯನ್ನು ಮುರಿದು ಅದರ ಹಾಲಿನಲ್ಲಿ ಕನ್ನಡಿಯ ಹಾಗೆ ಮಾಡಿ – ಬಿಸಿಲಿನಲ್ಲಿ ಅದು ಪಡೆಯುತ್ತಿದ್ದ ರಂಗುರಂಗಿನ ರೇಖೆಗಳನ್ನು ನೋಡುತ್ತ ಕಾಲ ಹೋಗುತ್ತಿತ್ತು. ಮನೆಗೆ ಹಬ್ಬಿಸಿ ಬಿಟ್ಟ ಕುಂಬಳ ಬಳ್ಳಿ. ಹತ್ತು ಹನ್ನೆರಡು ದಾಳಿಂಬೆ ಗಿಡಗಳು. ಅಮ್ಮ ದಾಳಿಂಬೆ ರಾಕ್ಷಸನ ಕತೆ ಹೇಳುತ್ತಿದ್ದಳು. ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ರಾಜನಿಗೆ ಒಬ್ಬಳು ಹೆಂಡತಿ. ತುಂಬಿದ ಗರ್ಭಿಣಿಗೆ ಬಯಕೆ, ದಾಳಿಂಬೆ ಹಣ್ಣು ಬೇಕೂಂತ. ಯಾವ ಊರಲ್ಲೂ ದಾಳಿಂಬೆ ಹಣ್ಣು ಬಿಡದ ಕಾಲವದು. ಆದರೂ ಗಂಡನಿಗೆ ಹೆಂಡತಿಯ ಮೇಲೆ ಎಷ್ಟು ಪ್ರೀತಿಯೆಂದರೆ ದೂರ ದೂರ ಹೋಗುತ್ತಾನೆ, ಒಬ್ಬನೆ. ಅಲ್ಲೊಬ್ಬ ರಾಕ್ಷಸನ ತೋಟದಲ್ಲಿ ಒಂದೇ ದಾಳಿಂಬೆ ಮರದಲ್ಲಿ ಒಂದೇ ಹಣ್ಣು… ಅಪ್ಪ ಮನೆಯಲ್ಲಿರುತ್ತಿರಲಿಲ್ಲ. ಕಛೇರಿ, ವಸೂಲಿ ಎಂದು ತಿರುಗಾಟ. ಇದ್ದಾಗಲೂ ಅಮ್ಮನ ಜೊತೆ ಅವರು ಸರಸವಾಗಿದ್ದುದು ನೆನಪಿಲ್ಲ. ಗಂಡನ ಜೊತೆ ನಿಂತು ಮಾತಾಡುವ ಹೆಂಗಸು ಗಂಡುಬೀರಿಯೆಂದು ಅಜ್ಜಿಯ ನಂಬಿಕೆ…. ಕತೆ ಹೇಳುತ್ತ ಅಮ್ಮನಿಗೆ ನಿದ್ದೆ; ಕೇಳುತ್ತ ನನಗೆ. ಎಡಕ್ಕೆ ತಿರುಗಿ ಹೋದರೆ ಅದೆಷ್ಟು ಎತ್ತರದ ರಂಜದ ಮರ. ಅದರ ಅಡಿಯಲ್ಲಿ ಬಟ್ಟಲನ್ನು ಹಿಡಿದು, ಅಮ್ಮನಿಗೆಂದು ನಕ್ಷತ್ರದಂತಹ ಬೆಳ್ಳನೆ ಹೂವನ್ನು ಆರಿಸುತ್ತಿದ್ದುದು ನಿನ್ನೆ ನಡೆದ ಹಾಗೆ ಕಣ್ಣಿಗೆ ಕಟ್ಟುತ್ತದೆ.

ಅಮ್ಮನ ಕಣ್ಣಿಗೆ ಕಣ್ಣಿಟ್ಟು ನೋಡದ ರಾಗಜ್ಜನ ಕಡೆಗೆ ನೋಡಿದಾಗ ಉಣುಗೋಲು ಹಾಕುತ್ತ ಅಂದರು :

“ನಾಳೆ ನನಗೆ ಅಭ್ಯಂಜನ ಬೇಡವಯ್ಯ. ಪ್ರಾಯಕ್ಕೆ ಬಂದವನೆ ಹಬ್ಬದ ದಿನ ಸತ್ತ ಮೇಲೆ ನಾನು ಯಾಕೆ ಎಣ್ಣೆ ಹಾಕಿಕೊಳ್ಳಲಿ? ನೀವೆಲ್ಲ ಗಡದ್ದಾಗಿ ಎರೆದುಕೊಳ್ಳಿ. ”

ರಾಗಜ್ಜನ ಜೊತೆ ಮಾತಾಡುವಗ ತಾನೊಬ್ಬ ದೊಡ್ಡವನಂತೆ ಎನ್ನಿಸುತ್ತದೆ. ಅಪ್ಪನ ಮರ್ಜಿ ಬೇರೆ. ಅವರು ಮನೇಲಿ ಇದ್ದರೆ ಚಳಿಜ್ವರ ಬಂದ ಹಾಗೆ. ಯಾಕೊ ಅಕ್ಷರ ತಿದ್ದಲಿಲ್ಲ? ಏನೇ ಇವತ್ತು ನಿನ್ನ ಮಗ ಬಾಯಿಪಾಠ ಹೇಳಿದನೇನೆ? ಪೆನ್ಸಿಲ್ ಕೆತ್ತಲು ನಾನು ಅವರ ಬ್ಲೇಡು ತೆಗೆದೆನೆಂದು ಕಿಡಿಕಿಡಿ. ರಾಗಜ್ಜನ ಜೊತೆ ಭಾಗವತರಾಟ ನೋಡಿಬರಲೆ ಅಪ್ಪ ಎಂದರೆ ನಿದ್ದೆಗೆಟ್ಟು ಆ ಹಾಳು ಕುಣಿತವನ್ನೇನು ನೋಡೋಡು ಎನ್ನುತ್ತಿದ್ದರು. ಗಂಭೀರವಾದ ಮುಖಮುದ್ರೆಯವರು, ನಿಷ್ಠುರವಾಗಿ ಖಂಡತುಂಡ ಮಾತಾಡುವವರು, ಗಟ್ಟಿಯಾಗಿ ನುಗವರು. ‘ಮನೆಗೆ ಕಾಲಿಟ್ಟರೆ ರಗಳೆ, ಎಲ್ಲಾದರೂ ನೀವು ಹಾಳುಬಡಿದುಕೊಳ್ಳಿ’ ಎಂದು ಅಮ್ಮ ಅಜ್ಜಿ ದೂರು ತಂದರೆ ಹೇಳಿ ತಮ್ಮಷ್ಟಕ್ಕೆ ತಾವು ಇದ್ದುಬಿಡುವರು. ಜಾತ್ರೆಗೆಂದು ಒಂದು ದಿನ ಅವರ ಜೊತೆ ಪೇಟಗೆ ಹೋದಾಗ ವಾರಿಗೆಯ ಸ್ನೇಹಿತರ ಜೊತೆ ಅವರು ವಿನೋದದಿಂದ ವರ್ತಿಸಿದ ಹಾಗೆ ಮನೆಯಲ್ಲಿ ಇದ್ದುದನ್ನು ನನಗೆ ನೋಡಿದ ನೆನಪಿಲ್ಲ. ಅವರು ಮನೆಯಲ್ಲಿರುವುದೇ ಅಪರೂಪ ಎಂದು ನನಗೆ ಖುಷಿ. ಆಸುಪಾಸಿನಲ್ಲೆಲ್ಲಾ ಅಪ್ಪ ಒಬ್ಬರೇ ಸ್ವತಃ ಕ್ಷೌರ ಮಾಡಿಕೊಳ್ಳುತ್ತಿದ್ದವರಾದ್ದರಿಂದ ಚಾವಡಿಯಲ್ಲಿ ಅವರು ಕ್ಷೌರ ಮಾಡಿಕೊಳ್ಳುತ್ತ ಕೂತರೆ ಮನೆಗೆ ಬಂದ ಜನ ಕುತೂಹಲದಿಂದ ನೋಡುತ್ತ ಕೂತಿರುತ್ತಿದ್ದರು. ನನಗೂ ಸೋಪು ನೊರೆಯಾಗುವುದನ್ನು, ಬ್ಲೇಡಿನಲ್ಲದನ್ನು ಹೆರೆಯುವುದನ್ನು ನೋಡಲು ಬಲು ಆಸೆ. ಜೀವನದ ತುಂಬ ಎಷ್ಟು ಅಸಂಗತವಾದ ಅಮುಖ್ಯವಾದ ವಿಷಯಗಳೂ ನೆನಪಿರುತ್ತವೆ; ಸುಖ ಮಾತ್ರವಲ್ಲ, ದುಃಖ ಮಾತ್ರವಲ್ಲ.

ತಾಯಿಯೆಂದರೆ ತಲೆಬೇನೆ. ಹಸಿವಾಗತ್ತೆ ಎಂದರೆ ‘ಹಸಿವಾಗತ್ತ ಹಸಿವಾಗತ್ತೆ ಅಶ್ವತ್ಥನಾರಾಯಣ’; ತುಡುವಾಗತ್ತೆ ಎಂದರೆ ‘ತುಡುವಾಗತ್ತೆ ತುಡುವಾಗತ್ತೆ ತುಳಸಿ ನಾರಾಯಣ’ ಎಂದು ಸತಾಯಿಸಿ ಮಜ್ಜಿಗೆ ಬೀರಿನ ಬಾಗಿಲು ತೆರೆದು ಕೋಡುಬಳೆ ರವೆವುಂಡೆಯನ್ನು – ಮಾಡಿಟ್ಟದ್ದು ಅಜ್ಜಿಗೆ ಗೊತ್ತಾಗದಿರಲೆಂದು ಗುಟ್ಟಾಗು ಕೊಟ್ಟು – ಕಳಿಸುತ್ತಿದ್ದಳು. ರಾಗಜ್ಜನಿಗೂ ತಿಂಡಿಯ ಚಪಲವೆಂದು ಹಂಚಿಕೊಂಡರೆ ಅಮ್ಮನಿಗೆ ಸಿಟ್ಟು. ಬುದ್ಧಿ ತಿಳಿದ ಮೇಲೂ ನಿದ್ದೆಯಲ್ಲಿ ಹಾಸಿಗೆ ಮೇಲೆ ಉಚ್ಚೆ ಹೊಯ್ದುಕೊಳ್ಳುತ್ತಿದ್ದೆ. ಪಕ್ಕ ಮಲಗಿದವಳು ಎದ್ದು, ಬೆಚ್ಚಗಿರುವಲ್ಲಿ ನನ್ನನ್ನು ಮಲಗಿಸಿ, ನಾನು ಒದ್ದೆ ಮಾಡಿದಲ್ಲಿ ತಾನು ಮಲಗುತ್ತಿದ್ದಳು. ಇಷ್ಟು ಕಠೋರವಾದ ಪ್ರೀತಿಯ ಹಂಗಿಲ್ಲದೆ ಬೆಳೆಯುವುದು ಸಾಧ್ಯವಿರಬೇಕಿತ್ತು ಎನ್ನಿಸುತ್ತದೆ. ಜೀವನ ಅಸಹ್ಯ. ನೀರು ತುಂಬಿ ನಿಂದಿಸುವಂತೆ ನೋಡುವ ತಾಯಿಯ ಕಣ್ಣುಗಳು ಬೆನ್ನಿನ ಹಿಂದೆ ಸದಾ ಇವೆ;

ಇರಲಿ.

ಯಾಕೆ ಇವರು ಅಪ್ಪ, ಇವಳು ಅಮ್ಮ, ಇವಳು ಅಜ್ಜಿ, ಇವರು ರಾಗಜ್ಜ ಗೊತ್ತಿರದಿದ್ದ ಕಾಲ ನೆನಪಿದೆ. ಅಮ್ಮನನ್ನು ರಾಗಜ್ಜ ಸಾತು ಎಂದು ಕರೆಯುವುದು ಕೇಳಿ ನಾನೂ ತಾತು ಎನ್ನುತ್ತಿದ್ದೆ. ಅಜ್ಜಿಯನ್ನು ಅಮ್ಮ ಅತ್ತೆ ಎಂದು ಕರೆಯುವಳು ಎಂದು ಅತ್ತೆ ಎನ್ನುತ್ತಿದ್ದೆ. ಅಜ್ಜಿಯನ್ನು ಅಪ್ಪ ಅಮ್ಮ ಎನ್ನುವರೆಂದು ನನ್ನಮ್ಮ ಯಾರೆಂದು ಅನುಮಾನಿಸುತ್ತಿದ್ದೆ. ಅಜ್ಜಿ ಮತ್ತು ಅಮ್ಮನನ್ನು – ನಿನ್ನಮ್ಮ, ನನ್ನಮ್ಮ ಎಂದೂ ಕರೆಯುತ್ತಿದ್ದೆ. ನಾನೆ? ಅವನು ನಾನೆ.

ಬೇವಿನ ಸೊಪ್ಪನ್ನು ಹಚ್ಚಿದರೂ ಮೊಲೆಯ ಚಪಲ ಬಿಡದವನು, ಅಮ್ಮ ಚೊಂಬು ತೆಗೆದುಕೊಂಡು ಹಿತ್ತಲಿಗೆ ಹೋದಾಗಲೂ ಜೊತೆಗೆ ಹೋಗಿ ಕೂರುತ್ತಿದ್ದವನು, ನಂತರ ರಾಗಜ್ಜನದು ಸರಿಯೊ ಅಮ್ಮನದು ಸರಿಯೊ ಎಂದು ಕಷ್ಟಕ್ಕೆ ಸಿಕ್ಕಿದವನು ಯಾರು ನಾನೆ?

ಈಗಿನ ನಾನೆ? ಬೆಳೆದು ದೊಡ್ಡದಾಗುವುದೆಂದರೆ ಏನು? ಇಲ್ಲ ಅವನೊಬ್ಬ – ತಾನು ಇನ್ನೊಬ್ಬ; ಅವನು ತನಗೀಗ ಪರಕೀಯ ಎಂದೆಲ್ಲ ಅನ್ನಿಸುತ್ತದೆ, ಕಾಲ ಆಕಳಿಸುತ್ತದೆ.

ಮನೆಯಲ್ಲಿ ಜಗಳವಾಡಿ ರಾಗಜ್ಜ ಯಾರ ಮನೆಗೊ ಯಾವ ಊರಿಗೊ ಹೋಗಿ ಬಚ್ಚಲಲ್ಲಿ ಬೆಂಕಿ ಹಾಯಿಸಿಕೊಳ್ಳುತ್ತ ಕೂತವರು ಕೂತ ಹಾಗೆ ಪ್ರಾಣ ಬಿಟ್ಟರು. ಆಮೇಲೆ ಅಪ್ಪ ತನ್ನ ತಂದೆಯನ್ನು ಅನಾಥನಾಗಿ ಮಾಡಿದನೆಂದು ಪಾಪಭಾವದಿಂದ ಮಂಕಾದರು. ನನ್ನ ಮುಖ ನೋಡದೆ ಅಮ್ಮ ದುಃಖದಲ್ಲಿ ಬಹು ಸಂಕಟಪಟ್ಟು ಸತ್ತಳು. ಈಗ ಅಪ್ಪ ‘ತಾಯಿ ತಂದೆಯ ಮಾತು ಕೇಳಿದವ ನೀನು, ನಿನ್ನ ಹಂಗು ಬೇಡ ನನಗೆ’ ಎಂದು ಹಠ ಹಿಡಿದು ದೂರದಲ್ಲಿ ಏಕಾಕಿಯಾಗಿದ್ದು ಮುದುಕರಾಗುತ್ತಿದ್ದಾರೆ.

* * *

ಪ್ರೀತಿಯೆಂದರೆ ಕರ್ಮಾಂತರಗಳಲ್ಲಿ ತೊಡಗಿದಂತೆ, ಸಂಸಾರವೆಂದರೆ ದುಃಖ= ಇದಕ್ಕೆ ಉತ್ತರವಿದೆಯೇ, ಇಲ್ಲವೆ, ಅನಿವಾರ್ಯವೆ, ಎಂದು ರಾಘವ ಹೆಂಡತಿಯ ಮುಖದ ಕಡೆ ನೋಡಲು ಪೇಪರ್ ಓದುತ್ತ ಕೂತಿದ್ದ ಛಾಯಾ ನಕ್ಕಳು. ಗಂಡ ಸೀರಿಯಸ್ಸಾಗಿ ಕಾಣಿಸುತ್ತಿದ್ದಾನೆಂದು ಅವಳಿಗೆ ಜೋಕು.

“ಅದೇನು ಪೆನ್ನು ಹಿಡಿದು ಪೇರಪಿನ ಎದುರು ಸುಮ್ಮನೆ ಮಂಕು ಬಡಿದಂತೆ ಕೂತಿದೀರಲ್ಲ – ನಿಮಗೇನಾಗಿದೆ?” ಎಂದಳು.

ತನಗೆ ಭಾಗಿಯಾಗಲು ಸಾಧ್ಯವಿಲ್ಲದ ಯಾವುದನ್ನೂ ಗಂಡ ಮಾಡಕೂಡದೆನ್ನುವ ಭಾವ ಇವಳ ಹಾಸ್ಯದಲ್ಲಡಗಿದೆ, ಇವಳಿಗೇನು ಅಧಿಕಾರ, ಹಗುರ ಮನಸ್ಸಿನ ಹೆಣ್ಣು ಎಂದು ರಾಘವನಿಗೆ ರೇಗಿತು. ಕಠಿಣವಾಗಿ,

“ಸುಮ್ಮನೇ ರಗಳೆ ಮಾಡಬೇಡ” ಎಂದ.

ಆಡಿಬಿಟ್ಟ ಮೇಲೆ ರಾಘವನಿಗೆ ಛಾಯಳ ಮುಖಭಾವ ನೋಡಿ ಆಡಬಾರದಿತ್ತು ಎನ್ನಿಸಿತು. ಅಪ್ಪನೂ ಹೀಗೆ ಅಮ್ಮನಿಗೆ ಗದರಿಸುತ್ತಿದ್ದರು; ದೂರು ತಂದರೆ ಇದೇನು ನಿನ್ನ ರಗಳೆ, ಮುದ್ದಿನಿಂದ ಮಾತಾಡಿಸಿದರೆ ಇದೇನು ನಿನ್ನ ಸೆಳೆ. ಸ್ವಲ್ಪ ಮರೆತರೆ ಸಾಕು ಅಪ್ಪನ ಸ್ವಭಾವ ಇಣುಕುವುದು.

“ಇಲ್ಲಿ ಬಾ ಛಾಯಾ” ಎಂದು ಮೃದುವಾಗಿ ಕರೆದ.

“ಹೋಗಿಯಪ್ಪ. ನಿಮಗೇನೊ ಯೋಚನೆ. ಮನೆಯಲ್ಲಿ ಇದ್ದರೂ ನೀವು ಇಲ್ಲದಂತೆ”.

ಹುಡುಗಾಟಿಕೆಯ ಮಾತಿನಲ್ಲೂ ಏನೇನೋ ಹೊಗೆಯಾಡುತ್ತದೆ.

“ತಿರುಗಾಡಿ ಬರುತ್ತೇನೆಂದಿ, ಯಾಕೆ ಹೋಗಲಿಲ್ಲ ಛಾಯ?”

ರಾಘವನ ಮಾತಿನಲ್ಲಿ ಒಲಿಸಿಕೊಳ್ಳುವ ಧ್ವನಿಯಿತ್ತು.

“ನೀವು ಬರದೆ ನಾನೊಬ್ಬಳೆ ಹೋಗಲ? ಅದಕ್ಕೇ ನಾವು ಮದುವೆಯಾದದ್ದು? ನಿಮ್ಮ ತಾಯಿ ತಂದೆಗೆ ಇಷ್ಟವಾದವಳನ್ನೆ ನೀವು ಯಾಕೆ ಆಗಲಿಲ್ಲ?”

ನೀವು ಯಾಕೆ ಆಗಲಿಲ್ಲ? ಯಾಕೆ? ಛಾಯ ಎದ್ದು ನಿಂತಳು – ಒಳಗೆ ಹೋದಳು. ಯಾಕೋ ಸಿಡಿ ಸಿಡಿ, ಯಾಕೆ? ಅಪ್ಪ, ಅಮ್ಮ, ರಾಗಜ್ಜ, ಅಜ್ಜಿ, ನಾನು. ಈ ವರ್ತುಳದಲ್ಲಿ ಛಾಯ – ಬರೆಯಬೇಕು,

ಯಾಕೆ ಬರೆಯುತ್ತಿಲ್ಲ – ಬರೆಯಲಾಗುತ್ತಿಲ್ಲ – ಬರೆಯಲೇಬೇಕು ಎಂದುಕೊಂಡ ರಾಘವ, ಬರೆಯುವುದೆಂದರೆ ಹುಡುಕುವುದು. ಒಂದನ್ನೊಂದಕ್ಕೆ ತಾಳಿಸಿ, ಮೇಳಿಸಿ, ತಡಕಾಡಿ ಹುಡುಕುವುದು. ಸೂರಿನಿಂದ ಕೆಳಗೆ ಇಳಿದ ಒಂದು ಬೆಳಕಿನ ಕೋಲಿನಲ್ಲಿ ಜೀವನದ ಸುಖ ದುಃಖವನ್ನೆಲ್ಲ, ಅನಂತತೆಯನ್ನೆಲ್ಲ ಕಾಣುವುದು,

ಕಾಣಿಸುವುದು.

* * *

ರಾಗಜ್ಜ ಅಬ್ಬಕ್ಕನ ಮನೆಯ ಎದುರು ನಿಂತು,

“ಏ ಅಬ್ಬಕ್ಕ, ಹಬ್ಬಕೊಂದಷ್ಟು ಚೆಂಡುಹೂ ಬೇಕು, ಕೊಯ್ದಿಡುತ್ತೀಯ” ಎಂದು ಕೂಗಿದಾಗ ಕೆಂಪು ಮುಂಡಾಸು ಸುತ್ತಿದ ತುಕ್ರ ಹಣಿಕಿ,

“ಅವಳು ನಿಮ್ಮ ಮನೆಗೇ ಪಾತ್ರೆ ತೊಳೆಯಲು ಹೋದಳಲ್ಲಯ್ಯ” ಎಂದ. ರಾಗಜ್ಜ ಮಂಜಯ್ಯನವರು ತಂದ ಹೊಸ ಎತ್ತುಗಳ ಬಗ್ಗೆ ವಿಚಾರಿಸಿದರು. ಬಿಳಿ ಬಟ್ಟೆ ಕಂಡರೆ ತುಡುಗಂತೆ, ಬಾಕಿಯೆಲ್ಲ ಸಮ. ಉಬ್ಬಾದರೂ ಓಡೋಡಿ ಹತ್ತುತ್ತದೆ.

“ನಾನೊಂದು ಜೊತೆ ಎತ್ತಿಟ್ಟಿದ್ದೆ, ಹೇಗಿತ್ತು ಎಂತೀಯ? ಎರಡೇ ಕೈಗಳಲ್ಲಿ ಗಾಡಿಯನ್ನು ಎತ್ತಿ ನಿಲ್ಲಿಸುತ್ತಿದ್ದ ಕಾಲ ಅದು”, ಎಂದರು ರಾಗಜ್ಜ ನನಗೆ.

ಅಬ್ಬಕ್ಕನ ಬಗ್ಗೆ ಬರೆಯಬೇಕು. ಅವಳೊಬ್ಬಳು ಅಬ್ಬಕ್ಕ. ಅವಳಿಗೊಂದು ಗಂಡ ತುಕ್ರ, ಅವಳಿ – ಜವಳಿ ಮಕ್ಕಳನ್ನೆತ್ತಿಕೊಂಡು ಅವಳು ಬರುವ ಚೆಂದ ನೋಡಿ ನಾನು ಅಬ್ಬಕ್ಕನ ಗುಬ್ಬಕ್ಕ ಕಚ್ಕೆಂಡೋಯ್ತು ಎಂದು ಕಟ್ಟಿ ಹೇಳಿದೆನೆಂದು ಅಮ್ಮ ಅಬ್ಬಕ್ಕ ಖುಷಿಯಾಗಿದ್ದರು. ಸುಖದುಃಖ ಹೇಳಿಕೊಳ್ಳಲು ಅಮ್ಮನಿಗೊಬ್ಬಳು ಅಬ್ಬಕ್ಕ. ಅವಳಿಗೆ ಅಮ್ಮ ಹೊರೆಸಿ ಕಳಿಸುತ್ತಾಳೆಂದು ನಿತ್ಯ ಅಜ್ಜಿಯ ದೂರು. ತುಕ್ರನಿಗೆ ಹೆಣ್ಣಿನ ಚಟ. ಪೇಟೆಗೆ ಸಾಯಂಕಾಲ ಗಾಡಿ ಹೊಡೆದುಕೊಂಡು ಹೋದರೆ ರಾತ್ರೆ ರಾಮಿಯ ಮನೆಯಲ್ಲಿ ಮೊಕ್ಕಾಂ. ಅಬ್ಬಕ್ಕ ತಾಳಿ ಹರಿದೆಸೆದಳು; ತುಕ್ರ ರಾಮಿಯನ್ನು ಬಿಟ್ಟ ಮೇಲೆ ಮತ್ತೆ ತಾಳಿ ಕಟ್ಟಿಕೊಂಡಳು. ಅವನ ತಲೆಗೆ ಮಣ್ಣು ಹೊರೆಸುತ್ತ ಅಬ್ಬಕ್ಕ ಮತ್ತೆ ನಕ್ಕು ಮಾತಾಡುವುದನ್ನು ನಾನು ಕಂಡಿದೇನೆ. ತುಕ್ರನ ಕಚ್ಚೆ ಒದರಿದರೆ ಮಕ್ಕಳು ಉದುರುತ್ತಾವೆಂದು ಅಬ್ಬಕ್ಕ ಕವಳ ಜಗಿಯುತ್ತ ನಗೆಯಾಡಿದ್ದನ್ನು ನಾನು ಕಂಡಿದೇನೆ. ನಮ್ಮ ಸೂಕ್ಷ್ಮಾತಿಸೂಕ್ಷ್ಮ ಮೌಲ್ಯಗಳಿಗೆ ಬೆಂಕೆಯಿಟ್ಟಿತು. ಅವಳ ಅಂಗಳದ ತುಂಬ ಚೆಂಡುಹೂ. ಹರಳೆಣ್ಣೆ ಮೆತ್ತಿದ ಅವಳ ತಲೆಯ ಮೇಲೆ ಚೆಂಡುಹೂ. ಅಳು ಬಂದರೆ ಗಟ್ಟಿಯಾಗಿ ಅಳುತ್ತಿದ್ದಳು; ಮರುಕ್ಷಣ ನಗುತ್ತಿದ್ದಳು. ತುಕ್ರ ಮನೆ ಬಿಟ್ಟು ಹೋದಾಗ ನಿನ್ನ ಹಂಗಿನಲ್ಲಿ ನಾನಿಲ್ಲ ಎಂದು ತೋರಿಸಿಕೊಳ್ಳಲು ಸೇರೆಗಾರ ಎಂಕಪ್ಪ ಶೆಟ್ಟಿಯ ಜೊತೆ ಸ್ನೇಹ ಮಾಡಿದಳು. ಗಂಡ ಮನೆಗೆ ಬಂದ ಮೇಲೆ ಸೇರೆಗಾರನನ್ನು ನಕ್ಕು ಮಾತಾಡಿಸಿ ದೂರವಿಟ್ಟಳು. ಕಾಡು, ಬೆಟ್ಟ, ಚೆಂಡುಹೂ, ದೀಪಾವಳಿಯ ಸುಖದುಃಖದ ಜೊತೆ ಅಬ್ಬಕ್ಕನ ಜ್ಞಾಪಕವೂ ಆಗುತ್ತದೆಂದು ಬರೆಯಬೇಕು. ಅಬ್ಬಕ್ಕನಂಥವಳೊಬ್ಬಳು ತಾಯಾಗಿದ್ದರೆ ನಾನು ಅತಿಪ್ರಜ್ಞೆಯ ಬೆನ್ನು ಹತ್ತಿ ಹೀಗೆ ಯೋಚಿಸುತ್ತ ಕೂತಿರುತ್ತಿರಲಿಲ್ಲ. ಗದ್ದೆಯ ಕೆಸರಿನಲ್ಲಿ ಏಡಿ ಹುಡುಕುತ್ತ ಕೂತಿರುತ್ತಿದ್ದೆ.

ಅಮ್ಮ ಸತ್ತ ಮೇಲೆ ಛಾಯನ ಜೊತೆ ಊರಿಗೆ ಹೋದವನು ತುಕ್ರನ ಕಾಲಿನಿಂದ ಮುಳ್ಳು ತೆಗೆಯುತ್ತ ಕೂತ ಅಬ್ಬಕ್ಕ ಮುದುಕಿಯಾಗಿದ್ದನ್ನು ನೋಡಿ ಬಂದೆ. ‘ಬಂದಿರಾ ಅಯ್ಯ’ ಎಂದು ಪ್ರೀತಿಯಿಂದ ಮಾತಾಡಿಸಿ, ‘ನಿಮ್ಮ ಹೆಂಡತಿ ಲಕ್ಷ್ಮಿಯಂತೆ ಇದ್ದಾರೆ’ ಎಂದಳು. ಇದ್ದ ಮಗನೊಬ್ಬ ಬೊಂಬಾಯಿಗೆ ಓಡಿ ಹೋಗಿ ಹೋಟೆಲಿಗೆ ಸೇರಿದ. ನಾಕು ವರ್ಷವಾದ ಮೇಲೆ ಬಂದು ಮಾತಾಡಿಸಿ ಹೋದ, ಅವನು ಎಲ್ಲಾದರೂ ಇರಲಿ, ಸುಖವಾಗಿರಲಿ, ಗಾಡಿ ಹೊಡೆಯುವುದು ಅವನಿಗೆ ಬೇಡವಾಯ್ತು. ಹೋಗಲಿ ಎಂದಳು. ನನ್ನ ಅಮ್ಮ ಸಾಯುವಾಗ ಪಟ್ಟ ಬೇನೆ, ನನ್ನನ್ನು ನೋಡಬೇಕೆಂದು ಬಯಸಿದ್ದು, ಆದರೆ ಅಪ್ಪ ಹಠ ಹಿಡಿದು ನನಗೆ ಬರೆಯದಿದ್ದದ್ದು – ಎಲ್ಲವನ್ನೂ ವರ್ಣಿಸಿ – ಅಮ್ಮ ನಿಮ್ಮ ಹತ್ತಿರ ಜಗಳವಾಡಿದರೆಂದು ಅವರ ಬಗ್ಗೆ ಕೆಟ್ಟದ್ದು ಬಗೆಯಬೇಡಿಯಯ್ಯ, ಬದುಕಿದ್ದರೆ ಲಕ್ಷ್ಮಿಯಂಥ ನಿಮ್ಮ ಹೆಂಡತಿಯನ್ನು ನೋಡಿ ಮರೆಯುತ್ತಿದ್ದರು ಎಂದಳು. ‘ಇನ್ನೂ ಬಸುರಿಯಾಗಲ್ಲವಾ ಅಮ್ಮ’ ಎಂದು ಛಾಯನನ್ನು ಕೇಳಿ ನಾಚಿಸಿದಳು.

* * *

ಎತ್ತರದಲ್ಲಿ ಮನೆ. ತಗ್ಗಿನಲ್ಲಿ ಇಳಿದು ಹೋದರೆ ಅಡಿಕೆ ತೋಟ. ತೋಟದ ಬದಿಗೆ ಅಬ್ಬಕ್ಕನ ಗುಡಿಸಲು. ತೋಟ ದಾಟಿದ ಮೇಲೆ ಗದ್ದೆ ಬೈಲು. ನಡುವೆ ಸಾರ ದಾಟಬೇಕು. ಅಡಿಕೆ ಸಾರ. ರಾಗಜ್ಜ ಮುಂದೆ, ತಾನು ಹಿಂದೆ. ದಾಟುವಾಗ ತೂಗುವುದು, ಜೋಕೆ ಜೋಕೆ ಎನ್ನುತ್ತ ರಾಗಜ್ಜ ದಾಟಿದರು. ಎರಡು ಕೈಗಳನ್ನೂ ಚಾಚಿ ದೇಹವನ್ನು ಸಮತೂಗಿಸಿ ದಾಟುವಾಗ ಪ್ರತಿ ಸಾರಿ ಭಯ, ದಾಟಿದ ಮೇಲೆ ದಾಟಿಬಟ್ಟೆನಲ್ಲ ಎಂದ ಸಂತೋಷ. ಗದ್ದೆಬೈಲಿನ ಕೆಸರಿನ ಹೊಂಡದಲ್ಲಿ ಅಬ್ಬಕ್ಕನ ಮಗ ತಿಮ್ಮ ತದೇಕಚಿತ್ತನಾಗಿ ಏಡಿ ಹಿಡಿಯುತ್ತಿದ್ದ. ಬ್ರಾಂಬ್ರು ಬರುತ್ತಿದ್ದಾರೆಂದು ದೂರದಿಂದ ಕಂಡು ಎದ್ದು ನಿಂತ. ತಾನು ಏನನ್ನೂ ಮಾಡುತ್ತಿರಲಿಲ್ಲ ಎನ್ನುವ ಮುಗ್ಧ ಮುಖ ಮಾಡಿ. ರಾಗಜ್ಜನನ್ನು ‘ಅವನು ಏನು ಮಾಡುತ್ತಿದ್ದ ಅಜ್ಜ’ ಎಂದದ್ದಕ್ಕೆ ‘ಅವಕ್ಕೆ ಬೇರೆ ಕೆಲಸವೆ? ಏಡಿ ಹಿಡಿಯುತ್ತಿದ್ದ’ ಎಂದರು.

“ರಾತ್ರೆ ಯಾಕೆ ಸಿಳ್ಳು ಹಾಕಬಾರದು ಅಜ್ಜಯ್ಯ?”

“ಹಾವು ಬರುತ್ತಾವೆ ಅಂತ”

“ಅಭಿಮನ್ಯುವಿನ ಕಥೆ ನಡೆದದ್ದ ಅಜ್ಜಯ್ಯ?”

“ಹಾ…. ”

“ನಾವು ತಾಯಿಯ ಹೊಟ್ಟೆಯಲ್ಲಿದ್ದಾಗ ಇನ್ನೊಬ್ಬರು ಆಡಿದ್ದೆಲ್ಲ ಕೇಳಿಸುತ್ತದ ಅಜ್ಜಯ್ಯ?”

“ಮುಳ್ಳು ನೋಡಿ ನಡಿ” ಎಂದರು ರಾಗಜ್ಜ.

“ಮೊನ್ನೆ ಯಾಕೆ ನೀವು ಹಜಾಮನಿಂದ ಕ್ಷೌರದ ಕತ್ತಿ ಇಸಕೊಂಡು ಆಮೇಲೆ ಕೊಡುತ್ತೇನೆಂದು ಒಬ್ಬರೇ ಗುಡ್ಡಕ್ಕೆ ಹೋದಿರಿ?”

“ಕಾಡು ಸವರಲಿಕ್ಕೆ…. ”

“ನಾನೂ ಬರುತ್ತೇನೆಂದರೆ ಹಾಗೆಲ್ಲ ಬರಬಾರದು ಎಂದಿರಿ”.

“ಸುಮ್ಮನೆ. ”

“ಮುಖದಕ್ಷೌರದ ಕತ್ತಿಯಲ್ಲಿ ಕಾಡು ಸವರುತ್ತಾರ ಅಜ್ಜಯ್ಯ?”

ರಾಗಜ್ಜ ನಕ್ಕರು. ಗುಡ್ಡ ಹತ್ತಿ, ಗುಡ್ಡ ಇಳಿದು, ಹತ್ತಿ, ಇಳಿದು, ಸುತ್ತಿ, ಹಾಗೆ ಹೋಗಿ, ಹೀಗೆ ಹೋಗಿ ದಿಕ್ಕು ತಪ್ಪದೆ ಕಾಡು ಸುತ್ತುವುದೊಂದು ಕುಶಲವಾದ ಕಲೆ. ರಾಗಜ್ಜ ಅದಕ್ಕೆ ಸರಿ. ಅಪ್ಪನಿಗೆ ಬರದು. ಸೌದೆ ಕಡಿದು ಒಟ್ಟಿದ್ದಲ್ಲಿಗೆ ಬಂದದ್ದಾಯಿತು. ಇಕೊ ಎಂದು ರಾಗಜ್ಜ ತೋರಿಸಿದರು. ಏನು ಅಂದದ್ದಕ್ಕೆ ಹುಲಿ ಹಾಕಿದ ಹಿಕ್ಕೆ ಎಂದರು. ಇಕೊ ಎಂದು ಹುಲಿಯ ಹೆಜ್ಜೆಯನ್ನು ತೋರಿಸಿದರು. ನಮ್ಮನ್ನು ಕಂಡರೆ ಅವಕ್ಕೂ ಭಯವಯ್ಯ ಎಂದರು.

ಹಿಂಡ್ಳಚ್ಚಿಕಾಯಿಯ ಬಳ್ಳಿಗಳನ್ನು ನಾನು ಹರಿಯುವಾಗ ರಾಗಜ್ಜ ನಾರು ಬಳ್ಳಿಯನ್ನು ಕೊಯ್ದು ತಂದು, ಕಟ್ಟಿಗೆಯನ್ನು ಕಟ್ಟಿ, ತಲೆ ಮೇಲೆ ಹೊತ್ತು, ನಡಿಯಿನ್ನು ಎಂದರು. ‘ಪೆಟ್ಲಿಗೆ ಗಜ ಅಜ್ಜಯ್ಯ’ ಎಂದೆ. ‘ಹೋ ಮರೆತೆ’ ಎಂದು ಕಟ್ಟಿಗೆಯನ್ನು ಕೆಳಗಿಳಿಸಿ, ಗಜ ಮಾಡುತ್ತ ಕೂತಾಗ, ನಾನು ದನದ ಕೊರಳಿಗೆ ಉರು… ಉರುಟು…. ಉರುಟಣೆ ಎಂದೇ ಇರಬೇಕು – ಕಾಯಿಯನ್ನು ಕೊಯ್ಯುವುದು ಬೇಡವೇ ಎಂದದ್ದಕ್ಕೆ ಹೌದಲ್ಲ ಎಂದರು. ಅದನ್ನು ಕೊಯ್ಯುವಾಗ ಪೆಟ್ಲಿಗೆಂದು ಒಂದಷ್ಟು ಅರಮರಳುಕಾಯನ್ನು ಕೊಯ್ದೆ. ಮನೆಗೆ ಹೋದ ಮೇಲೆ ಅಮ್ಮ ಬಯ್ಯದಿರಲೆಂದು, ಅವಳನ್ನು ಒಲಿಸಿಕೊಳ್ಳಲು ನಿಂಬೆಕಾಯಿ ಉಪ್ಪಿನಕಾಯಿ ಜೊತೆ ಬೆರೆಸಲು ಎಳೆಯದಾದ ಅರಮರಳು ಕಾಯಿಯ ಗೊಂಚಲನ್ನು ಕೊಯ್ದು ಚಡ್ಡಿ ಜೇಬಿಗೆ ತುಂಬಿಕೊಂಡೆ.

ದಾರಿಯಲ್ಲಿ ಅಜ್ಜ ಮರಕೆಸ ಕಂಡು:

“ನೋಡಲ್ಲಿ ಪತ್ರಡೆಗೆ ಲಾಯಕ್ಕಾಗಿದೆ” ಎಂದರು.

“ಕೊಯ್ಯಿರಿ ಅಜ್ಜಯ್ಯ” ಎಂದದ್ದಕ್ಕೆ,

“ನಾನು ಕೇಳಿದರೆ ನಿನ್ನಮ್ಮ ಎಲ್ಲಿ ಮಾಡ್ತಾಳೆ? ನೀನೇ ನೋಡ್ತೀಯಲ್ಲ – ಮನೇಲಿ ನಾನೊಬ್ಬ ಮನುಷ್ಯನ? ವಯಸ್ಸಾಗಬಾರದು ಮುದ್ದು. ಎಷ್ಟಾದರೂ ಅವಳು ನಿನ್ನ ಅಮ್ಮ – ನಾನು ನಿನ್ನ ಹತ್ತಿರ ಹೇಳಬಾರದು – ಸರಿ. ಹೋಗಲಿ ಬಿಡು. ಬಾ ಹೋಗಿ ಮುಂಚೆ ಮನೆ ಸೇರುವ. ಮೊದಲೇ ನಿನ್ನಮ್ಮನಿಗೆ ನೀನು ನನ್ನ ಜೊತೆ ಬಂದದ್ದು ಕಣ್ಣು ಕೆಂಪಾಗಿದೆ” ಎಂದರು.

ಅಬ್ಬಕ್ಕನ ಮನೆಯ ಎದುರು ನಿಂತು ‘ಅಬ್ಬಕ್ಕಾ’ ಎಂದು ಕೂಗುವಾಗ ಒಳಗೆ ಅವಳ ಮೈಮೇಲೆ ಗಣ ಬಂದಿತ್ತು. ಅವಳ ಬಗ್ಗೆ ಬರೆಯುವಾಗ ಇದನ್ನೂ ಹೇಳಬೇಕು. ಗಡಗಡ ನಡುಗುತ್ತ, ಒದ್ದೆ ಕೂದಲನ್ನು ಮುಖದ ಮೇಲೆಲ್ಲ ಹರಡಿ, ಹಣೆ ತುಂಬ ಕುಂಕುಮ ಬಳೆದು, ಕೈಯಲ್ಲಿ ಅಡಿಕೆಯ ಸಿಂಗಾರ ಹಿಡಿದು ಅವಳು ನಿಮಿತ್ಯ ಹೇಳುತ್ತಿದ್ದಳು – ಸುತ್ತ ಸೇರಿದ ಜನ ಕೇಳುವ ಪ್ರಶ್ನೆಗಳಿಗೆ. ನನಗೆ ಭಯವಾಗುತ್ತದೆಂದು ರಾಗಜ್ಜನಿಗೆ ಅನ್ನಿಸಿರಬೇಕು. ಬಾ ಕೈಯ ಹಿಡಿದುಕೊ ಎಂದು, ಸ್ವತಃ ಅಂಗಳದಲ್ಲಿ ಚೆಂಡುಹೂ ಕೊಯ್ದರು. ತೋಟ ದಾಟಿದ ಮೇಲೆ ಒಂದು ಮೊಟ್ಟಿನ ಹಿಂದೆ ಕಪಿಲೆಯೊಂದೇ ಮೇಯುತ್ತ ನಿಂತುದನ್ನು ಕಂಡು, “ದನ ಕಾಯೋವನೊಬ್ಬ ದಂಡಕ್ಕೆ” ಎಂದು ಅದನ್ನು ಅಟ್ಟಿಕೊಂಡು ಬಂದಾಗ ಸಂಜೆಯಾಗಿತ್ತು, ಹಾಲು ಕರೆದಾಗಿತ್ತು. ಅಮ್ಮ ಹಾಲಿನ ಪಾತ್ರೆಯನ್ನು ಸೀರೆ ಸೆರಗಿನಿಂದ ಮುಚ್ಚಿಕೊಂಡು ಅಂಗಳ ಹಾಯುತ್ತಿದ್ದವಳು ನನ್ನ ಕಡೆ ನೋಡಿ “ಒಳಗೆ ಬರುವಾಗ ಬೆನ್ನಿಗೆ ಹಾಳೆ ಕಟ್ಟಿಕೊಂಡು ಬಾ” ಎನ್ನಲು ನಾನು ರಾಗಜ್ಜನ ಮುಖ ನೋಡಿದೆ. “ಉಪ್ಪಿನ ಕಾಯಿಗೆ ಅರಮರಳುಕಾಯಿ ತಂದಿದೇನಮ್ಮ” ಎಂದೆ. ಒಳಗೆ ಅಪ್ಪ ಲಾಟೀನಿನ ಗಾಜನ್ನು ಒರೆಸುತ್ತ ಕೂತಿದ್ದರು.

* * *

ಅಪ್ಪ ಬಯ್ಯಲಿಲ್ಲ, ಅಮ್ಮ ಕಣ್ಣು ಸಂಜ್ಞೆ ಮಾಡಿ ಅಡಿಗೆಮನೆಯೊಳಗೆ ಕರೆದದ್ದನ್ನು ನೋಡಿ ಅಜ್ಜಿ ದೇವರ ಮನೆಯೊಳಕ್ಕೆ ನೆವ ಮಾಡಿಕೊಂಡು ಬಂದು ಕೂತಳು. ನಾನು ಉಗುರು ಕಚ್ಚುತ್ತ ನಿಂತೆ. ದೇವರ ಕೋಣೆಯಿಂದ ಅಜ್ಜಿ ಆಲಿಸುತ್ತಿದ್ದಾಳೆಂದು ನನಗೆ ಗೊತ್ತು. ಅಮ್ಮನಿಗೆ ಅವರ ಲೆಖ್ಖವಿಲ್ಲ.

“ರಾಗಜ್ಜ ನನ್ನ ಮೇಲೆ ಏನೆಂದರು ಹೇಳು?”

“ಏನಿಲ್ಲಪ್ಪ”

“ಇನ್ನೂ ಏಳು ವರ್ಷವಿಲ್ಲ ನಿನಗೆ, ಚೋಟುದ್ದದ ಹುಡುಗ, ಆಗಲೇ ಹೆತ್ತ ತಾಯಿಗೆ ದ್ರೋಹ ಬಗೆಯೋದನ್ನು ಕಲಿತೆಯಲ್ಲ. ”

“ಏನೂ ಅನ್ನಲಿಲ್ಲಮ್ಮ. ”

“ನನ್ನ ಕೊರಳು ಮುಟ್ಟಿ ಹೇಳುತ್ತೀಯ? ಸುಳ್ಳು ಹೇಳಿದರೆ ನಾನು ಸಾಯುತ್ತೇನೆ. ಕೊರಳಾಣೆಗೂ ಹೇಳು”.

ನಾನು ಎಂಜಲು ನುಂಗುತ್ತ ಕಣ್ಣಿನಲ್ಲಿ ನೀರು ತುಂಬಿ ನಿಂತೆ. ದೇವರ ಕೋಣೆಯಿಂದ ಆಲಿಸುತ್ತಿರುವ ಅಜ್ಜಿ ನಾನು ಹೇಳಿದ ಮಾತನ್ನು ರಾಗಜ್ಜನಿಗೆ ಹೋಗಿ ಹಚ್ಚಿಕೊಡುತ್ತಾಳೆ. ಆದರೆ ಕೊರಳಾಣೆ ಹೇಳಿ ಸುಳ್ಳು ಹೇಳಿದರೆ ನನ್ನಮ್ಮ ಸಾಯುತ್ತಾಳೆ. ಏನು ಮಾಡಲಿ?

“ಹೊಟ್ಟೆಯಲ್ಲಿ ಹುಟ್ಟಿದ ಮಗನೂ ನನ್ನ ಭಾಗಕ್ಕೆ ಇಲ್ಲವಾದ. ತೌರಿನ ಕಡೆಯಿಂದ ಅಣ್ಣನೊಬ್ಬ ನನ್ನವನೂಂತ ಇದ್ದ. ಅವನಿಗೂ ನಾನು ಬೆಡವೆಂದರೂ ಆ ಹುಡುಗಿಯನ್ನು ಕಟ್ಟಿ ಮದುವೆ ಮಾಡಿ ಹೋದ ದೀಪಾವಳಿಯ ದಿನ ಕೊಂದದ್ದಾಯಿತು. ನೆನಸಿಕೊಂಡರೆ ನನ್ನ ಹೊಟ್ಟೆಯಲ್ಲಿ ಬೆಂಕಿ ಹಾಕಿದಂತೆ ಆಗುತ್ತದೊ ಅಪ್ಪು”. ಸ್ವರವನ್ನು ಎತ್ತಿ ರಾಗಜ್ಜನ ಮಾತನ್ನು ಅನುಕರಿಸುತ್ತ ‘ನಾನು ನೋಡಿ ಒಪ್ಪಿಗೆ ಕೊಟ್ಟು ಬಂದಿದ್ದೇನೆ. ಈ ಮದುವೆ ಆಗಿಯೇ ತೀರಬೇಕು’ ನಿನ್ನ ತಂದೆಗೆ ಹೇಳಿದರೆ ಅವರು ಕೇಳುವವರೆ? ‘ನಿಮ್ಮ ರಗಳೆ ನನಗೆ ಹಚ್ಚಬೇಡಿ – ನನ್ನ ಪಾಡಿ ನನ್ನ ಬಿಡಿ’ ಎಂದರು. ನಾನು ಮರೆಯುವವಳಲ್ಲ ತಿಳಿದಿಯಾ? ನಿನ್ನ ಅಜ್ಜ ನಿನಗೆ ಒಳ್ಳೆಯವರಾಗಿರಬಹುದು. ಮದುವೆಯಾಗಿ ಬಂದ ನನ್ನನ್ನ ನಾಲ್ಕು ವರ್ಷ ತೌರಿಗೆ ಕಳಿಸಲಿಲ್ಲ. ತೌರಿಗೆ ಹೋಗುತ್ತೇನೆಂದರೆ ಮಗನಿಗೆ ಚಾಡಿ ಚುಚ್ಚಿ, ಅವರು ನಿನ್ನಜ್ಜಿ ಸೇರಿ ನನಗೆ ಹೊಡೆಸುತ್ತಿದ್ದರು. ನಾನು ಒಂದೆರಡನ್ನು ಇಲ್ಲಿ ಸಹಿಸಲಿಲ್ಲ. ನನ್ನವಳೂಂತ ಇದ್ದ ಒಬ್ಬ ಅಮ್ಮ ಸತ್ತ ಮೇಲೆ ನನ್ನನ್ನ ತೌರಿಗೆ ಕಳಿಸಿದರು. ಅವಳ ಬೂದಿ ಮಾತ್ರ ನನಗೆ ಸಿಕ್ಕಿತು. ಇವರು ಸತ್ತರೆ ಸದ್ಗತಿಯಿದೆಯೇ? ನಿನಗೆ ನಿನ್ನ ತಾಯನ್ನ ಪೀಡಿಸಿದವರ ಸಹವಾಸ ಇಷ್ಟವಾಗಿ ಕಾಣುತ್ತದೆ ಅಲ್ಲವೆ? ನಾನು ತೆಪ್ಪನೆ ಕೂತು ಸಹಿಸುವವಳಲ್ಲ ಗೊತ್ತಾಯಿತ?”

ಅಮ್ಮ ಅಳಲು ಪ್ರಾರಂಭಿಸಿದಳು. ಅಜ್ಜಿ ಇಣಿಕಿ ನೋಡಿದ್ದನ್ನು ಕಂಡು,

“ಕೇಳಿಸಿಕೊಳ್ಳಿ. ನಾನು ಹೇಳಿದ್ದೆಲ್ಲ ಕೇಳಿಸಿಕೊಳ್ಳಿ. ನಿಮಗೆ ನಾನು ಜಗ್ಗುವವಳಲ್ಲ” ಎಂದು ಇನ್ನಷ್ಟು ಗಟ್ಟಿಯಾಗಿ ಅತ್ತಳು. ನಾನು ಹಿಂದೆ ಹಿಂದೆ ಹೆಜ್ಜೆ ಹಾಕುವುದನ್ನು ಕಂಡು,

“ನಿಲ್ಲು ಸ್ವಲ್ಪ” ಎಂದಳು. ಕಣ್ಣೋರೆಸಿಕೊಂಡು ಮೆತ್ತಗೆ,

“ನಿನ್ನೆ ಅವರು ಅಜ್ಜಯ್ಯನಿಗೆ ದುಡ್ಡು ಕೊಡಲಿಲ್ಲವ ಹೇಳು” ಎಂದಳು. ಹಿಂದಿನ ದಿನ ರಾಗಜ್ಜ ಹೊಗೆಸೊಪ್ಪಿನ ಖರ್ಚಿಗೆಂದು ಅಪ್ಪನ ಹತ್ತಿರ ಕಾಸು ಕೇಳಿ ತೆಗೆದುಕೊಂಡದ್ದನ್ನು ನೋಡಿದ್ದೆ. ಆಮೇಲೆ ರಾಗಜ್ಜ ಏನನ್ನು ಗುಟ್ಟಾಗಿ ಕರೆದು “ನಾನು ದುಡ್ಡು ಇಸಕೊಂಡದ್ದನ್ನು ಅಮ್ಮನಿಗೆ ಹೇಳಬೇಡ ಆಯಿತ?” ಎಂದಿದ್ದರು. ಈಗ ನಾನು ಏನು ಹೇಳಲಿ?

“ಕೊರಳು ಮುಟ್ಟಿ ಹೇಳು. ಸುಳ್ಳು ಹೇಳಲು ಕಲಿಯಬೇಡ”

“ಇಸಕೊಂಡರು”

“ಅಲ್ಲ – ಇವರಿಗೆ ತನ್ನ ಅಪ್ಪನಿಗೆ ಕೊಡಬೇಕೆನ್ನಿಸಿದರೆ ನನ್ನೆದುರಿಗೇ ಯಾಕೆ ಕೊಡಬಾರದು? ಒಟ್ಟಿನಲ್ಲಿ ನಾನೊಬ್ಬಳು ಕೆಟ್ಟವಳು. ವರ್ಷಕ್ಕೊಂದು ಒಳ್ಳೆ ಸೀರೆಗೆ ಗತಿಯಿಲ್ಲದೆ ಗೆಯ್ಯಲೊಬ್ಬಳು ನಾನು ಬೇಕು. ”

ಚಾವಡಿಗೆ ಅಲ್ಲಿಂದ ಓಡಿ ಬಂದು ನೋಡಿದಾಗ ರಾಗಜ್ಜನ ಹತ್ತಿರ ಕೂತು ಅಜ್ಜಿ ಮಾತಾಡುತ್ತಿದ್ದಳು. ರಾಗಜ್ಜ ಮಾತಾಡದೆ ಕೇಳಿಸಿಕೊಳ್ಳುತ್ತಿದ್ದರು. ಅವರು ಮುಖವೆತ್ತಿ ನನ್ನ ಕಡೆ ನೋಡಿದ ಕ್ರಮ ನೋಡಿ ನನ್ನ ಎದೆ ಧಸಕ್ಕೆಂದಿತು. ಯಾರ ಹತ್ತಿರ ಹೋಗಲಿ? ಏನು ಮಾಡಲಿ? ಚಾವಡಿಯ ಇನ್ನೊಂದು ಮೂಲೆಯಲ್ಲಿ ಲಾಟೀನಿಟ್ಟುಕೊಂಡು ಅಪ್ಪ ಲೆಖ್ಖ ಬರೆಯುತ್ತ ಕೂತಿದ್ದರು.

* * *

ಬರೆಯುವುದನ್ನು ನಿಲ್ಲಿಸಿ, ಬರೆಯಲೆ ಬೇಡವೆ – ನಿಷ್ಪಕ್ಷಪಾತವಗಿ ನಾನು ನೋಡಬಲ್ಲೆನೆ ಎಂದು ಯೋಚಿಸುತ್ತ ಕೂತ ರಾಘವನಿಗೆ ಸಂಜೆ ಕಳೆದು ಕತ್ತಲಾಗಿದೆ ಎಂದು ಗೊತ್ತಾಯಿತು. ಕೂತಲೆ ಕೂತು ಒಂದು ತರಹದ ಮಂಕು. ಸುಸ್ತು. ಓಡಾಡಿ ಬಂದರೆ ವಾಸಿ ಎನ್ನಿಸಿದರೂ ಯಾಕೋ ಕೂತಲ್ಲಿಂದ ಏಳುವುದೇ ದೊಡ್ಡ ಶ್ರಮವೆನ್ನಿಸುವ ಭಾವನೆ. ಒಂದೊಂದು ಸಾರಿ ತನಗೆ ಏನನ್ನೂ ಮಾಡಲು ಸಾಧ್ಯವಿಲ್ಲ – ಕೂತಲ್ಲಿಂದ ಏಳುವುದೂ ಸಹ ಎನ್ನಿಸುತ್ತದೆ. ಬೆಳಗಿನ ಜಾವ ಬೇಗ ಏಳಬೇಕು, ಸ್ವಲ್ಪ ವ್ಯಾಯಾಮ ಮಾಡಬೇಕು, ಈ ಮಂಕು ಸಲ್ಲದು ಎಂದು ಎಷ್ಟೋ ಸಾರಿ ತೀರ್ಮಾನ ಮಾಡಿಕೊಂಡದ್ದುಂಟು. ಆದರೆ ಏನನ್ನೂ ಮಾಡಲಾರೆ. ಛಾಯಳ ಸ್ವಭಾವವೇ ಬೇರೆ. ಎಷ್ಟು ಚುರುಕಾಗಿ, ಆರೋಗ್ಯವಾಗಿ, ಕುಣಿಯುತ್ತ ನಗುತ್ತ ಪ್ರಾಯಕ್ಕೆ ಬಂದ ಚಿಗರೆಯಂತಿರುತ್ತಳೆ.

ಛಾಯ ರಾಘವನ ಕಾಲ ಬಳಿ ಕೂತು ಅವನ ತೊಡೆಯ ಮೇಲೆ ಗಲ್ಲ ಊರಿ ಮಗು ಮಾತನಾಡುವ ಹಾಗೆ,

“ನಿಮಗೆ ನನ್ನ ಮೇಲೆ ಸಿಟ್ಟ?” ಎಂದಳು.

ರಾಘವನ ಮುಖ ಸ್ವಲ್ಪ ಪ್ರಸನ್ನವಾಗಿದ್ದು ಕಂಡು ಅವಳಿಗೆ ಗೆಲುವಾಯಿತು. ಅವನ ಪಕ್ಕೆಗೆ ಕಚಕುಳಿಯಿಟ್ಟಳು. ಹಾ ಹಾ ಎಂದು ರಾಘವ ದಡಕ್ಕನೆ ಎದ್ದು ನಿಂತ. ‘ಕಚಕುಳಿ ಇಡಬೇಡ ಛಾಯ’ ಎಂದು ಮತ್ತೆ ಕೂತ. ಕುಚೇಷ್ಟೆಯ ದೊಡ್ಡ ಕಣ್ಣುಗಳನ್ನು ಎತ್ತಿ “ಅದೇನು ಇವತ್ತೆಲ್ಲ ಯೋಚನೆ” ಎಂದು ಮತ್ತೆ ಕೇಳಿದಳು. ಕಿಟಕಿಯಿಂದ ಹೊರಗೆ ಕಾರ್ತೀಕದ ಶುಭ್ರ ನಕ್ಷತ್ರಗಳ ಕತ್ತಲು. ಏನೋ ಹಗುರಾಗುತ್ತಿದೆ ಒಳಗೆ. ‘ಯಾವುದೂ ಅಷ್ಟು ಮುಖ್ಯವಲ್ಲ, ಬಿಡು’, ಎನ್ನಿಸುತ್ತದೆ ಒಂದೊಂದು ಸಾರಿ. ಆದರೆ ಎಲ್ಲೋ ಕೆಲವು ಸಾರಿ ಮಾತ್ರ. ಮತ್ತೆ ಯಥಾಪ್ರಕಾರ. ಛಾಯಳ ಕಿವಿಯ ಮೇಲೆ ಬಂದ ಕೂದಲನ್ನು ಮೃದುವಾಗಿ ತಳ್ಳುತ್ತ “ಏನಿಲ್ಲ” ಎಂದ.

“ನಂಗೊತ್ತು. ನಿಮಗೆ ನನ್ನ ಮೇಲೆ ಇಷ್ಟವಿಲ್ಲ. ಅದಕ್ಕೇ ಮಧ್ಯಾಹ್ನದಿಂದಲೂ ನೀವು ಒಂದು ಥರಾ… ”

ಅವಳ ಮಾತಿನಲ್ಲಿ ಲೇವಡಿಯಿತ್ತು. ಒಲಿಸಿಕೊಳ್ಳಲೆಂದು ಮಗುವಿನಂತೆ ಪೊಟ್ಟು ಪೊಟ್ಟಾಗಿ ಆಡುವ ಆಟಿಕೆಯೂ ಇತ್ತು. ಆದರೆ ಈ ಮುದ್ದು ರಾಘವನಿಗೆ ಈಗ ಬೇಡ. ಅವಳ ಮನಸ್ಸನ್ನು ನೋಯಿಸಲೂ ಇಷ್ಟವಾಗುವುದಿಲ್ಲ. ಹೆಂಡತಿಯನ್ನೆತ್ತಿ ತೊಡೆಯ ಮೇಲೆ ಕೂರಿಸಿಕೊಂಡ. ಅದರಲ್ಲಿದ್ದ ಯಾಂತ್ರಿಕತೆ ಛಾಯಾಗೆ ಗೊತ್ತಾಯಿತು. ತನಗೇ ವಿಶೇಷವಾದ ಇನ್ನು ಯಾವುದೋ ಲೋಕದಲ್ಲಿ ಅವನು ಇರುವುದು ಅವಳಿಗೆ ಸಹಿಸುವುದಿಲ್ಲವೆಂದು ರಾಘವನಿಗೂ ಗೊತ್ತು. ಯಾಕೆ ಒಬ್ಬರನ್ನೊಬ್ಬರು ತುಂಬ ಮುದ್ದಿನಿಂದ ಮಗವಿನಂತೆ ಕಾಣುತ್ತಿದ್ದಾರೆಂದು ನಟಿಸಬೇಕು? ಛಾಯ ಕೊರಳಿನ ಮೇಲೆ ಕೈ ಹಾಕಿ ಹೇಳಿದಳು,

“ನನಗೂ ಹೇಳಿ”.

“ನೋಡು ಛಾಯ, ರಾಗಜ್ಜ ಅಪ್ಪ ಅಮ್ಮನ ಹತ್ತಿರ ಜಗಳವಾಡಿ ಹೋಗಿ ಯಾರ ಮನೆಯದೋ ಬಚ್ಚಲಿನಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತ ಕೂತವರು ಕೂತ ಹಾಗೇ ಪ್ರಾಣ ಬಿಟ್ಟರು. ನನ್ನ ಮುಖ ನೋಡದೆ ಅಮ್ಮ ಸತ್ತಳು. ಈಗ ಅಪ್ಪ ನಿನ್ನ ಹಂಗು ನನಗೆ ಬೇಡವೆಂದು ಒಂಟಿಯಾಗಿದ್ದಾರೆ. ಅವರಿಗೆ ವಯಸ್ಸಾಗುತ್ತಿದೆ… ”

ಛಾಯಾಳ ಮುಖ ಮ್ಲಾನವಾಯಿತು. ಈ ಮಾತು ಬಂದದ್ದು ಇದು ಮೊದಲನೆಯ ಸಲವಲ್ಲ. ಗೊತ್ತಿರುವ ವಿಷಯವನ್ನು ಹೀಗೆ ಆಡಿ ಹೇಳಲು ಏನು ಕಾರಣ? ‘ನಿನಗಾಗಿ ನೋಡು ನಾನು ಅಪ್ಪ ಅಮ್ಮನನ್ನು ತೊರೆದ’ ಎಂದು ತಿಳಿಸಿ ತೀಡಿ ಹೇಳುವ ಸಣ್ಣತನವಲ್ಲವೆ?

“ನನ್ನನ್ನು ನೀವು ಮದುವೆಯಾದಿರಿ ಅಂತ ಇಷ್ಟು ಅವಾಂತರ ಅಲ್ಲವೆ ? ಮದುವೆಯಾಗುವ ಮೊದಲೆ ಯೋಚಿಸಬಾರದಿತ್ತೆ? ಈಗ ಹೀಗೆ ವ್ಯಥೆಪಟ್ಟು ನಿನ್ನದೇ ಏನೋ ತಪ್ಪು ಎನ್ನಿಸುವಂತೆ ನನಗೆ ಹೇಳುತ್ತಿದ್ದೀರಲ್ಲ” ಕಟುವಾಗಿ ಮಾತಾಡಿದವಳು ಎದ್ದು ಹೋಗಿ ಪಕ್ಕದ ಕುರ್ಚಿಯಲ್ಲಿ ಕೂತಳು. ರಾಘವ ಕೈಹಿಡಿದು ಎಳೆಯಲು ಹೋದಾಗ ‘ಬೇಡ ಬಿಡಿ’ ಎಂದಳು. ಇವಳಿಗಿಷ್ಟೂ ತಿಳಿಯುವುದಿಲ್ಲವೆ, ಸಹಾನುಭೂತಿ ಇಲ್ಲವೆ ಎಂದು ಕಸಿವಿಸಿಯಾಗಿ ರಾಘವ ಹೇಳಿದ :

“ಹಾಗಲ್ಲ ಛಾಯ. ನಾನು ನಿನ್ನ ಮದುವೆಯಾಗದಿದ್ದರೂ ಆಗಬೇಕಾದ್ದೆಲ್ಲ ಆಗುತ್ತಿತ್ತು. ಹುಟ್ಟಿದೂರಿಂದ, ತಾಯಿ ತಂದೆಯಿಂದ ಕಡಕೊಂಡು ಬೇರೆಯಾಗಬೇಕೆಂಬ ಹಂಬಲದಿಂದಲೆ, ಬೇಕೂಂತ ನಾನೇ…

ರಾಘವ ಮಾತನ್ನು ಮುಂದುವರಿಸಲಿಲ್ಲ. ನಿನ್ನ ಮೇಲೆ ಪ್ರೀತಿಯಿಂದ ಮಾತ್ರವಲ್ಲ ನಾನು ನಿನ್ನನ್ನು ಮದುವೆಯಾದದ್ದು; ಕರುಳುಬಳ್ಳಿಗಳನ್ನು ಸಂಪೂರ್ಣ ಕಡಿದು ಹಾಕಿ ನನ್ನ ಬಾಳಿನ ಗತಿಯನ್ನು ಹುಡುಕಬೇಕೆಂದು ನಿನ್ನ ಮದುವೆಯಾದೆ ಎಂದು ಹೇಳಿದರೆ ನಿನ್ನನ್ನು ಬರಿ ನೆವವಾಗಿ ಉಪಯೋಗಿಸಿಕೊಂಡೆ, ನಿನ್ನ ಮೇಲೆ ನನಗೆ ಪ್ರೀತಿಯಿಲ್ಲ ಎಂದ ಹಾಗಾಗುತ್ತದೆ. ದಹಾಗೆ ಹೇಳಿದರೆ ನಿಜ ಹೇಳಲು ಹೋಗಿ ಸುಳ್ಳು ಹೇಳಿದಂತೆ. ಆದರೆ ತಾಯಿ ತಂದೆಗೆ ಪರಕೀಯನಾಗಿ ಬಾಳೋದು ನನಗೆ ಬೇಕಿತ್ತು, ಆದ್ದರಿಂದ ಅವರು ಒಪ್ಪದ ನಿನ್ನನ್ನು ಮದುವೆಯಾದೆ ಎನ್ನುವುದೂ ನಿಜವೆ. ಇಂತಹ ಮಾತುಗಳನ್ನು ಆಡುತ್ತ ಕೂತರೆ ಅವಳ ಒಡನಾಟದಿಂದ, ಮೈಸಲಿಗೆಯಿಂದ, ತಾನು ಬಯಸಿ ಪಡೆದಿರುವ, ಪಡೆಯುತ್ತಿರುವ ಸುಖವನ್ನು ಅಲ್ಲವೆಂದ ಹಾಗಾಗುತ್ತದೆ. ಮಾತನಾಡದಿರುವುದೇ ಮೇಲೆ; ನನ್ನನ್ನು ಪ್ರೀತಿಸಿ ಮದುವೆಯಾದವಳನ್ನು ನನ್ನ ಭೂತಕ್ಕೆ, ನನಗೆ ವಿಶಿಷ್ಟವಾದ ಸಮಸ್ಯೆಗಳಿಗೆ ಭಾಗಿಯಾಗಿ ಮಾಡದಿರುವುದು ಮೇಲು. ತಾಯಿ ಮುದುಕಿಯಾಗುತ್ತಿದ್ದಾಳೆಂದು ತಿಳಿದಿದ್ದರೂ ನಾನು ಅವಳನ್ನು ನೋಡಲು ಹೋಗಲಿಲ್ಲ – ಅಹಂಕಾರ ಅಡ್ಡ ಬಂದಿತೆ? ಅವರಿಂದ ದೂರವಾಗಿರಬೇಕು ಎಂದು ಬಯಸಿ, ಅದರೆಲ್ಲದರ ಜವಾಬ್ದಾರಿ ನನ್ನದೆಂದು ತೀರ್ಮಾನಿಸಿ ನಾನು ಮದುವೆಯಾದೆ. ತಾಯಿ – ತಂದೆ, ಛಾಯಳನ್ನು ಒಪ್ಪಿಕೊಂಡಿದ್ದರೆ ನನಗೆ ಅಸಮಾಧಾನವಾಗುತ್ತಿತ್ತೊ ಏನೊ? ಎಲ್ಲದಕ್ಕೂ ವಿರೋಧಿಯಾಗಿರಬೇಕೆಂಬ ಹಂಬಲ ಒಳಗೆ ಇದೆ. ಯಾಕೆ? ಅದರ ಗೋಜು ಛಾಯಾಗೆ ಬೇಡ. ನನ್ನ ಆಡು ಏನೇ ಇರಲಿ ‘ಬಾ ನನಗೆ ಸುಖ ಕೊಟ್ಟು ಸುಖ ಪಡಿ’ ಎನ್ನುವ ಇಪ್ಪತ್ತು ವರ್ಷಗಳ ಯೌವನದ ಬಯಕೆಯನ್ನು ನಾನು ತೀರಿಸಬೇಕು. ಇವಳಿಗೆ ಹೇಳಲಾರೆ, ಹೇಳಬಾರದು. ಹೇಳಿದರೂ ಅವಳಿಗದು ತಿಳಿಯದೆನ್ನಿಸಿ ರಾಘವ ಎದ್ದು ನಿಂತು, ಕಿಟಕಿಯಿಂದ ಕಾರ್ತೀಕದ ಕತ್ತಲನ್ನು ನೋಡಿದ. ‘ಛಾಯ’ ಎಂದ. ‘ಎಷ್ಟು ಗಂಟೆ ಛಾಯ’ ಎಂದ. ಪಕ್ಕದಲ್ಲಿ ಬಂದು ನಿಂತು ‘ಆಕಾಶ ಎಷ್ಟು ಶುಭ್ರವಾಗಿದೆಯಲ್ಲವ’ ಎಂದಳು.

ಪರಕೀಯನಾಗಬೇಕೆಂಬ ಹಂಬಲದ ಮೂಲವೆಲ್ಲಿ? ಸ್ವಾರ್ಥದಲ್ಲಿಯೆ? ಅಹಂಕಾರದಲ್ಲಿಯೆ? ತನ್ನ ವ್ಯಕ್ತಿತ್ವದ ವೈಶಿಷ್ಟ್ಯವನ್ನು ಏಕಾಕಿತನದಲ್ಲಿ ಅನುಭವಿಸಬೇಕೆನ್ನುವ ಛಲದಲ್ಲಿಯೇ? ಖುಷಿಯಾದ ಬಾಳು ಬೇಡ; ಜೀವನ ಅಗ್ನಿದಿವ್ಯವಾಗಲಿ ಎಂದು ಬಯಸುವುದು ಮನಸ್ಸಿನ ರೋಗವೆ? ಅಥವಾ ನೋವಿನ ಬಾಲ್ಯದ ದಿನಗಳಿಂದ ಮುಕ್ತನಾಗಬೇಕೆಂದು ತಾಯಿತಂದೆಯನ್ನು ಧಿಕ್ಕರಿಸಿದೆನೆ? ಯಾಕೆ ನನ್ನ – ಛಾಯಳ ಸಂಬಂಧ ಇನ್ನೂ ಸಂಪೂರ್ಣ ಸರಳವಾಗಿಲ್ಲ? – ಕತ್ತಲಿನಲ್ಲಿ ಉತ್ತರವಿರಲಿಲ್ಲ. ಕಾರ್ತೀಕದ ರಾತ್ರೆ ಕಳೆದ ಕಾರ್ತೀಕದ ನೆನಪುಗಳನ್ನು ಹೊತ್ತಿಸುತ್ತಿದೆ.

* * *

ಆ ದೀಪಾವಳಿಯ ಬಗ್ಗೆ ಬರೆಯಬೇಕು. ಕಾರ್ತೀಕದ ದಿನಗಳು ಋತುಚಕ್ರದಲ್ಲಿ ಮರಳಿ, ಹತ್ತಿಸಿಟ್ಟ ಹಣತೆಗಳು ಮಂಕಾಗಿ ಉರಿಯುವುದು ನೋಡಿದಾಗ, ಸತ್ತದ್ದು, ಕೆಟ್ಟದ್ದು, ನೊಂದದ್ದು, ಬೇಕೆಂದೇ ನೋಯಿಸಿದ್ದು ನೆನಪಾಗುತ್ತದೆ. ತಾನೇ ಆ ಬಾಲಕ – ಆದರೂ ಈಗಿನ ನನಗೆ ಪರಕೀಯ. ಆದ್ದರಿಂದ ಈ ಕಣ್ಣಿನಿಂದ ಆ ಕಣ್ಣಿನಿಂದ ಒಟ್ಟಾಗಿ ಕಾಲವನ್ನು ನೋಡಬಹುದು.

ಸಗಣಿಯ ಪುಟ್ಟ ಪುಟ್ಟ ಉಂಡೆಯನ್ನು ಮಾಡಿ ಹೊಸಲಿನ ಮೇಲಿಟ್ಟು, ಮೇಲೆ ದೂರುವ ನೆಟ್ಟು, ಒಂದೊಂದು ಚೆಂಡುಹೂವಿಟ್ಟು ಅಲಂಕರಿಸುವುದು ಎರೆದುಕೊಳ್ಳುವ ಹಬ್ಬದ ಹಿಂದಿನ ದಿನವೆ? ಅಂಗಳದಲ್ಲಿ, ಗೊಬ್ಬರದ ಗುಂಡಿಯ ಬಳಿ, ಕೊಟ್ಟಿಗೆಯ ಹತ್ತಿರ, ಅಶ್ವತ್ಥವೃಕ್ಷದ ಕೆಳಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಪಾತಾಳದಿಂದ ಬಲೀಂದ್ರ ಲೋಕವನ್ನು ನೋಡಿ ಹೋಗು ಬರುವನೆಂದು ಪಂಜುಗಳನ್ನು ನೆಟ್ಟು ‘ದೀಪ್ ದೀಪ್ ಓಳ್ಗೆ – ಹಬ್ಬಕ್ಕೊಂದು ಹೋಳ್ಗೆ’ ಎಂದು ಕೂಗುವುದು, ಕೇರಿಗೆ ಕೇಳಿಸುವ ಹಾಗೆ ಪೈಪೋಟಿಯಲ್ಲಿ ಗಂಟಲೆತ್ತಿ ಕೂಗುವುದು ಯಾವ ರಾತ್ರೆ? ಮಧ್ಯ ರಾತ್ರೆಯಲ್ಲಿ ಒಂದು ಕನಸಿನಿಂದ ಇನ್ನೊಂದು ಕನಸಿಗೆ ಮಗ್ಗುಲಾಗುವ ಅರೆವು ಮರೆವಿನಲ್ಲಿ ಅಂಟಿಕೆ ಪಂಟಿಕೆಯ ತಂಡದವರು ಕಾರ್ತೀಕಕ್ಕೆಲ್ಲ ಕೊರಳು ಕೊಟ್ಟು ಹಾಡುವುದು ಯಾವ ದಿನ? ಮಂಕಾಗಿ ಉರಿಯುವ ಹಣತೆ ಮಿಣಕ್ ಮಿಣಕ್ ಎನ್ನುತ್ತದೆ. ನರಸಿಂಹ ಮಾವ ಸತ್ತ. ರಾಗಜ್ಜ ಸತ್ತರು. ಅಮ್ಮ ಸತ್ತಳು. ಒಂದಲ್ಲ ಒಂದು ದಿನ ಎಲ್ಲರೂ ಸಾಯಬೇಕೆನ್ನುವ ಮೃತ್ಯುಪ್ರಜ್ಞೆಯಲ್ಲಿ ಹಬ್ಬ ಹುಣ್ಣಿಮೆ ಸಡಗರವೆಲ್ಲ ಸಹ ಎಷ್ಟು ಸುಂದರ, – ನೋಯುವುದು ನೋಯಿಸುವುದು ಎಷ್ಟು ವ್ಯರ್ಥ ಎಂದು ಬಾಳು ಹದವಾಗಬೇಕು, ಮೃದುವಾಗಬೇಕು, ಅದರ ಬದಲು – ಎಷ್ಟೆಲ್ಲ ತಿಳಿದರೂ ಈಗ ನಾನೇ,

ಬೇಗ ಕೈಕಾಲು ತೊಳೆದುಕೊ ಹಂಡೆ ಖಾಲಿ ಮಾಡಿ ತೊಳೆದು ಶುದ್ಧ ಮಾಡಬೇಕೆಂದು ಅಮ್ಮ ಹೇಳಿದಳು. ಕೈಕಾಲು ತೊಳೆದು ಚಾವಡಿಯಲ್ಲಿ ಶಾಲು ಹೊದ್ದು ಮಾತಾಡದೆ ಕೂತ ರಾಗಜ್ಜನ ಎದುರು ಮಗ್ಗಿ ಬರೆಯುತ್ತ ಕೂತೆ. ಲಾಟೀನಿನ ಎದುರು ಕೂತು ಕನ್ನಡಕವನ್ನು ಮೂಗಿನ ತುದಿಗೆ ಸಿಕ್ಕಿಸಿಕೊಂಡು ಅಪ್ಪ ರೂಲುದೊಣ್ಣೆಯಿಂದ ಲೈನುಗಳನ್ನೆಳೆಯುತ್ತಿದ್ದರು. ಬಚ್ಚಲನ್ನು ಗುಡಿಸಿ ತೊಳೆಯುತ್ತಿರುವ ಶಬ್ದ ಹಿತ್ತಲಲ್ಲಿ. ಕಿವಿಯೆಲ್ಲ ಒಳಗೆ – ಒಳಗೆ ಹೋಗುವ ಅವಸರ. ನೆವಕ್ಕಷ್ಟು ಬರೆದು ಅಪ್ಪ ಮಗ್ನರಾಗಿ ಕೂತಿರುವುದು ನೋಡಿ ಒಳಕ್ಕೋಡಿದೆ.

ಪಳ ಪಳ ಹೊಳೆಯುತ್ತಿತ್ತು ಹಂಡೆ. ಒಲೆ ನೆಲವೆಲ್ಲ ಸಗಣಿ ಹಾಕಿ ಸಾರಿಸಿ ಹಸಿ ಹಸಿಯಾಗಿತ್ತು. ರಂಗೋಲೆ ಹಾಕುತ್ತ ಕೂತಿದ್ದಳು ಅಮ್ಮ. “ಎಲ್ಲ ನಾನೇ ಮಾಡಿ ಸಾಯಬೇಕು” ಎಂದು ಗೊಣಗಿದಳು. ಆಮೇಲೆ ಹಂಡೆಯ ಮೈಮೇಲೆ ಕೆಮ್ಮಣ್ಣಿನ ಮತ್ತು ಜೇಡಿಯ ಪಟ್ಟಿಗಳನ್ನೆಳೆದು, ಕೊರಳಿಗೆ ಹಿಂಡ್ಳಚ್ಚಿ ಬಳ್ಳಿಗಳನ್ನು ಕಟ್ಟಿ, ಮಡಿಯಲ್ಲಿ ನೀರು ತುಂಬಿಸುವುದನ್ನು ನೋಡುತ್ತ ಪರವಶನಾದೆ.

“ಮೈಲಿಗೆಯಲ್ಲಿ ಹಂಡೆ ನೀರು ಮುಟ್ಟೀಯ – ಊಟವಾದ ಮೇಲೆ ಹಿತ್ತಲಲ್ಲಿ ಹೋಗಿ ಕೈ ತೊಳೆದುಕೊ. ಬಚ್ಚಲಲ್ಲಿ ಉಚ್ಚೆ ಹೊಯ್ಯಬೇಡ” ಎಂದು ಅಮ್ಮ ಎಚ್ಚರ ಹೇಳಿದಳು.

* * *

ರಾಘವ ನೆಟ್ಟಿಗೆ ಮುರಿದು ಕೈ ಝಾಡಿಸಿದ. ಸಿಗರೇಟು ಹತ್ತಿಸಿ ಬರೆದದ್ದನ್ನು ಓದುತ್ತ ಅಲ್ಲಿ ಇಲ್ಲಿ ತಿದ್ದುತ್ತ ಕೂತ. ಬೇಜಾರು. ಅಡಿಗೆ ಮಾಡಿಬಿಟ್ಟು ಒಳಗೆ ರೇಡಿಯೋ ಕೇಳುತ್ತ ಕೂತಿದ್ದ ಛಾಯನನ್ನು ಕರೆದ. ಹೆಸರು ಹಿಡಿದು ಕೂಗುವಾಗ ಒಮ್ಮೊಮ್ಮೆ, ಎಷ್ಟೊಂದು ಮಾತುಗಳಲ್ಲಿ ಹೇಳಲಾರದ್ದನ್ನೆಲ್ಲ ತುಂಬಿ, ಬಲು ಸರಳವಾಗುವಂತೆ ಮಾಬಹುದು. ಛಾಯ ಹೊರಗೆ ಬಂದು ಮಾತನಾಡದೆ ನಿಂತ ಒಂದು ಕ್ಷಣದ ಮೌನದಲ್ಲಿ, ಮತ್ತೆ ‘ಏನು?’ ಎಂದ ರೀತಿಯಲ್ಲಿ, ರಾಘವನಿಗೆ ಸುಖವಾಗಿ ಎದ್ದು ನಿಂತ. ಮನಸ್ಸು ಹೆಚ್ಚು ಹೆಚ್ಚು ಅರಿವಿನ ಕಡೆಗೆ, ಬೆಳಕಿನ ಕಡೆಗೆ, ಅತಿಪ್ರಜ್ಞೆಯ ಕಡೆಗೆ ಹರಿದರೆ – ನಿದ್ದೆಯ ದಿಕ್ಕಿನಲ್ಲಿ, ಕಾಮ ತರುವ ಮರೆವಿನ ದಿಕ್ಕಿನಲ್ಲಿ ಕತ್ತಲೆಗೆ ರಕ್ತ ಹರಿಯುತ್ತದೆ ಎಂದು ಬರೆಯಬೇಕು. ಈ ಛಾಯಳಿಗೆ ಭೂತವೇ ಇಲ್ಲ. ರಾಘವನ ಹಿಂದೆ ನಿಂತ ಅವನ ಸೊಂಟವನ್ನು ಕೈಗಳಿಂದ ಬಳಿಸಿ, “ನೀವು ರೈಲಂತೆ, ಈಗ ಊಟದ ಮನೆ ಕಡೆಗೆ ಹೋಗತ್ತಂತೆ, ಜುಗ್, ಜುಗ್, ಜುಗ್” ಎಂದು ತಳ್ಳುತ್ತ ರಾಘವನನ್ನು ಒಳಗೆ ಕರೆದುಕೊಂಡು ಹೋದಳು. ರೇಡಿಯೋನ್ನ ಆರಿಸಿ – “ನಾನು ಪಾಪಣ್ಣಿಯಂತೆ, ನೀವೇ ಇವತ್ತು ತಟ್ಟೆಯಿಡೋದಂತೆ” ಎಂದಳು. ರಾಘವ ತಟ್ಟೆಗಳನ್ನು ತಂದಿಟ್ಟ. “ನೀವು ತುಂಬಾ ಒಳ್ಳೆಯವರಂತೆ, ಅನ್ನ ಸಾರು ತಂದಿಡುತ್ತೀರಂತೆ” ಎಂದಳು. ರಾಘವ ಅನ್ನ ಸಾರನ್ನು ತಂದಿಟ್ಟು ತಟ್ಟೆಯ ಎದುರು ಕೂತ. ರಾಘವ ತನ್ನ ಹಾಸ್ಯಕ್ಕೆ ನಗದಿದ್ದುದನ್ನು ಕಂಡು – “ಇಲ್ಲಪ್ಪ, ಇನ್ನು ಮುಂದೆ ಹುಡುಗಾಟಿಕೆ ಮಾಡಕೂಡದು. ಗಂಭೀರವಾಗಿರಬೇಕು” ಎಂದು ಮುಖವನ್ನು ಬುಕ್ಕಮಾಡಿ ರಾಘವನನ್ನು ನೋಡಿದಳು. ರಾಘವನಿಗೆ ನಗು ಬಂತು. “ಆಟ ಸಾಕು. ಊಟ ಮಾಡೋಣ ಛಾಯ” ಎಂದ.

* * *

ಅವತ್ತು ಊಟ ಮಾಡುವಾಗ ನಡೆದದ್ದು ಮರೆಯುವುದಿಲ್ಲ. ಅಪ್ಪನ ಫಲಾಹಾರ ಮುಗಿದಿತ್ತು. ನಾನು, ರಾಗಜ್ಜ, ಅಜ್ಜಿ ಊಟಕ್ಕೆ ಕೂತಿದ್ದೆವು. ನಾನು ರಾಗಜ್ಜ ಜೊತೆಗೆ; ಅಜ್ಜಿ ಎದುರು. ಅಮ್ಮ ನಮಗೆ ಹುಳಿ ಬಡಿಸಿ ಅಡಿಗೆ ಮನೆಯ ಬಾಗಿಲಿನ ಚೌಕಟ್ಟಿಗೆ ಒರಗಿ ಗಲ್ಲದ ಮೇಲೆ ಬೆರಳಿಟ್ಟು ಏನೋ ಯೋಚಿಸುತ್ತ ಬೇಸರದಲ್ಲಿ ನಿಂತಿದ್ದಳು. ಅವತ್ತು ಬಣ್ಣದ ಸೌತೆಕಾಯಿ ಹುಳಿ. ನನಗೆ ಬಣ್ಣದ ಸೌತೆ ಹುಳಿಯೆಂದರೆ ಇಷ್ಟ. ಅಜ್ಜಯ್ಯನ ಎಲೆಯಲ್ಲಿ ತುಂಬ ಹೋಳಿತ್ತು. ನಾನು ಅವರ ಎಲೆಯ ಕಡೆಗೆ ನೋಡಿದೆ. ‘ನಿನಗೆ ಹೋಳು ಇಷ್ಟವಲ್ಲವೇನೊ, ಇಕೊ ತಗೊ’ ಎಂದು ನನ್ನ ಎಲೆಗೆ ಅವರು ಅಷ್ಟು ಹೋಳು ಹಾಕಿದರು. ನಾನೊಂದು ಹೋಳೆತ್ತಿಕೊಂಡು ಅಮ್ಮನ ಕಡೆ ನೋಡಿದೆ. ಅವಳು ಕಣ್ಣು ಕೆಂಪು ಮಾಡಿ ನೋಡಿದಲು. ತಿನ್ನಕೂಡದೆಂದು ಅವಳು ಸೂಚಿಸಿದಳೆಂದು ನನಗೆ ಗೊತ್ತಾಗಿ ನಾನದನ್ನು ಎಲೆಯ ಪಕ್ಕಕ್ಕೆ ತಳ್ಳಿದೆ. ಇದನ್ನು ನೋಡುತ್ತ ಎದುರು ಕೂತಿದ್ದ ಅಜ್ಜಿ ಅಮ್ಮನ ಕಡೆ ತಿರುಗಿ,

“ಏನೇ? ಅಜ್ಜನ ಎಂಜಲನ್ನು ಮೊಮ್ಮಗ ತಿನ್ನಬಾರದೇನೆ? ಮಗುವಿಗೇಕೆ ದುರ್ಬುದ್ಧಿ ಕಲಿಸುತ್ತೀಯ? ನೀವೇ ನೋಡಿದಿರ?”

ಎಂದು ಅಜ್ಜನ ಕಡೆಗೆ ತಿರುಗಿ ಅನ್ನಲು ಅಜ್ಜಯ್ಯ ನನ್ನ ಕಡೆ ನೋಡಿ,

“ತಿನ್ನೊ ಮಗು. ನನ್ನ ಎಂಜಲನ್ನು ನೀನು ತಿನ್ನಬಹುದು”

ಎನ್ನಲು ನಾನು ಏನು ಮಾಡೋದು ತೋಚದೆ ಅಮ್ಮನ ಕಡೆ ತಿರುಗಲು,

“ಕಂಡವರ ಎಂಜಲನ್ನೆಲ್ಲ ತಿನ್ನಬಾರದೆಂದು ನಿನಗೆ ನಾನು ಸಾರಿ ಸಾರಿ ಹೇಳಲಿಲ್ಲೇನೊ” ಎಂದು ಗಟ್ಟಿಯಾಗಿ ಅಮ್ಮ ಅಂದಳು.

ಒಂದು ಕ್ಷಣ ಮೌನವಿತ್ತು.

ಆಗ ಅಜ್ಜಿ ಅಜ್ಜಯ್ಯನಿಗೆ – “ನೋಡಿದಿರಾ, ನಾನು ನೀವು ಕಂಡವರು ಆದೆವು ಅಲ್ಲವೇ, ಹೋಗೋಣ ಇಲ್ಲಿಂದ, ಭಿಕ್ಷೆಯಾದರೂ ಎತ್ತಿ ಬದುಕೋಣ, ನಮ್ಮ ಪಾಲಿಗೆ ಒಬ್ಬ ಮಗ ಹುಟ್ಟಲಿಲ್ಲೆಂದು ತಿಳಿಯೋಣ” ಎಂದು ಅಳುತ್ತ “ಅಲ್ಲ ಇವಳ ನಾಲಗೆ ಎಷ್ಟುದ್ದವಾಗಿದೇಂತ ನೀವೇ ಕಿವಿಯಾರ ಕೇಳಿಸಿಕೊಂಡಿರಿ ಅಲ್ಲವೇ. ಇವಳು ಮಾಡುವ ಅನಾಚಾರ ನಿಮಗಾಗಲೀ, ನಿಮ್ಮ ಮಗನಿಗಾಗಲೀ, ನಾನು ಹೇಳಿದರೆ ತಿಳಿಯೋದಿಲ್ಲ ಅಲ್ಲವೆ”

ಎನ್ನಲು, ಅಜ್ಜಯ ಅರ್ಧಕ್ಕೆ ಊಟ ನಿಲ್ಲಿಸಿ ಆಪೋಶನ ತೆಗೆದುಕೊಂಡರು.

“ಇಲ್ಲಿಯ ಅನ್ನದ ಋಣ ಇನ್ನು ಹರೀತು ಎಂದಿಟ್ಟುಕೊ” ಎಂದು ನಡುಗುತ್ತ ಎದ್ದುನಿಂತರು. ಚಾವಡಿಗೆ ಹೋಗಿ ಅಪ್ಪನ ಎದುರು ನಿಂತು ಗಟ್ಟಿಯಾಗಿ,

“ಏನಯ್ಯ ನಿನ್ನ ಹೆಂಡತಿಗೆ ಹೆದರಿಕೊಂಡು ಇನ್ನು ಮುಂದೆ ಇಲ್ಲಿ ಬದುಕಲಾರೆ. ಸಾಯುವಾಗ ನನ್ನ ಬಾಯಿಗೆ ನೀನಾಗಲೀ, ನಿನ್ನ ಹೆಂಡತಿಯಾಗಲೀ ನೀರು ಹಾಕುವುದು ಬೇಡ”

ಎಂದುದ್ದು ಕೇಳಿಸಿತು. ಅಪ್ಪ ಧಡ ಧಡ ಅಡಿಗೆ ಮನೆಗೆ ಬಂದು ಅಮ್ಮ ಅಜ್ಜಿಯ ಎದುರು ನಿಂತು “ನಿಮ್ಮ ದೆಸೆಯಿಂದ ನನಗೆ ಶಾಂತಿಯಿಲ್ಲ. ನಾನು ಸಾಯಬೇಕು” ಎಂದು ರೂಲುದೊಣ್ಣೆಯಿಂದ ತಲೆ ಚಚ್ಚಿಕೊಳ್ಳಲು ಅಮ್ಮ, ಅಜ್ಜಿ, ಅಜ್ಜ ಒಟ್ಟಾಗಿ ರೂಲುದೊಣ್ಣೆಯನ್ನು ಇಸಕೊಂಡರು. ಮತ್ತೆ ಅಪ್ಪನ ಅಮ್ಮನ ಕಡೆ ತಿರುಗಿ “ನಿನ್ನನ್ನು ಕೊಂದ ಮೇಲೆ ಉಳಿದವರಿಗೆಲ್ಲ ತೃಪ್ತಿಯಾದೀತು” ಎಂದು ಕೈಯೆತ್ತಿ ಬಡಿಯಲು ಹೋದಾಗ ಅಜ್ಜಯ್ಯ “ಅಯ್ಯೊ ಅವಳನ್ನೇಕೆ ಕೊಲ್ಲುತ್ತೀಯೋ, ನಾನೇ ಮನೆ ಬಿಟ್ಟು ಹೋಗುತ್ತೇನೆ” ಎನ್ನಲು ಅಜ್ಜಿ, “ನಾನೂ ನಿಮ್ಮ ಜೊತೆ ಬರುತ್ತೇನೆ, ನನ್ನನ್ನು ಬಿಟ್ಟು ಹೋಗಬೇಡಿ” ಎಂದು ಹೊರಡಲು ಅಮ್ಮ, “ಮದುವೆಯಾಗಿ ನಾಕು ವರ್ಷ ಇವರ ಕೈಯಲ್ಲಿ ನಾನು ಪಟ್ಟ ಕಷ್ಟ ಕೇಳುವವರು ಯಾರಿದ್ದಾರೆ? ಇದ್ದೊಬ್ಬ ಅಣ್ಣನೂ ಸತ್ತ. ಬಾಯಿ ತಪ್ಪಿ ನಾನೊಂದು ಮಾತಾಡಿದೆ ಎಂದರೆ ಇಷ್ಟೊಂದು ರಾದ್ಧಾಂತವಾಗಬೇಕೆ? ನಾನು ಪ್ರಾಣವಿಟ್ಟುಕೊಳ್ಳುವುದಿಲ್ಲ. ಬಾವಿಗೆ ಹಾರಿ ಸಾಯುತ್ತೇನೆ” ಎಂದು ಹಿತ್ತಲಿನ ಬಾಗಿಲನ್ನು ತೆರೆದು ಧಿಡಿ ಧಿಡಿ ನಡೆಯಲು, ನಾನು, “ಅಮ್ಮ ಅಮ್ಮಾ” ಎಂದು ಕೂಗಿಕೊಂಡೆ. ಅಪ್ಪ, ಅಜ್ಜಯ್ಯ ಅವಳ ಹಿಂದೆ ಓಡಿ ಹೋಗಿ ಎಳೆದುಕೊಂಡು ಬಂದರು. “ಇಷ್ಟೆಲ್ಲ ನಿನ್ನ ದೆಸೆಯಿಂದ” ಎಂದು ಅಜ್ಜಯ್ಯ ಅಜ್ಜಿಗೊಂದು ಹೊಡೆದರು. “ಹಾ ನನ್ನನ್ನು ಕೊಂದು ಬಿಡಿ” ಎಂದು ಅಜ್ಜಿ ಅತ್ತಳು.

ನನಗಿನ್ನೂ ನೆನಪಿದೆ. ಊಟದ ಮನೆಯಲ್ಲಿ ನಾನು ಅಮ್ಮ ಇಬ್ಬರೆ ಉಳಿದಿದ್ದೇವೆ. ಕಲಸಿದ ಅನ್ನ ಕಲಸಿದ ಹಾಗೇ ಬಿಟ್ಟ ಅಜ್ಜಯ್ಯ ಅಜ್ಜಿಯ ಎಂಜಲೆಲೆಗಳ ಸುತ್ತ ಗೊದ್ದ ಓಡಾಡುತ್ತಿದೆ. ನಾನು ಆರಿದ ಅನ್ನದ ಮೇಲೆ ಕೈಯಿಟ್ಟು ಸುಮ್ಮನೆ ಕೂತಿದ್ದೇನೆ. ಅಜ್ಜಯ್ಯ ಹಾಕಿದ ಬಣ್ಣದ ಸೌತೆ ಹೋಳು ಹಾಗೇ ಇದೆ. ಅಮ್ಮ ಎಣ್ಣಿ ಎಣ್ಣಿ ಅಳುತ್ತಾರೆ ಭಣಗುಟ್ಟುವ ಮೌನದಲ್ಲಿ.

* * *

ಕತ್ತಲಿನಲ್ಲಿ ಬಾಗಿಲನ್ನು ತೆರೆದು, ಬರಿದಾದ ಚಾವಡಿಯನ್ನು ದಾಟಿ, ಮತ್ತೊಂದು ಬಾಗಿಲನ್ನು ನೂಕಿ ನೋಡಿದಾಗ,

ನನ್ನ ಬಾಲ್ಯದ ದಿನಗಳನ್ನು ಎಣಿಸಿದ ಗಡಿಯಾರದ ಕೆಳಗೆ

ರಾಗಜ್ಜ ಹೊದೆಯುತ್ತಿದ್ದ ಶಾಲನ್ನು ಹೊದ್ದು ವಯಸ್ಸಾದ ಅಪ್ಪ ಒಬ್ಬರೇ ಲಾಟೀನಿನ ಎದುರು ಕೂತಿದ್ದರು. ಮನೆಯ ತುಂಬ ಭಣಗುಟ್ಟುವ ಮೌನ, ಕತ್ತಲು.

ನನ್ನ ಹಿಂದೆ ಛಾಯ ಪ್ರಯಾಣದಿಂದ ಬಳಲಿ ಮುಂದೇನಾಗುವುದೊ ಅಂಜುತ್ತ ನಿಂತಿದ್ದಳು.

ಅಪ್ಪನ ಕಾಲಿಗೆ ನಾನು ಬೀಳಲಿಲ್ಲ. ಬಿದ್ದು ಕ್ಷಮಿಸಿ ಎಂದು ಕೇಳಲೆ ಎನ್ನಿಸಿದರೂ, ಕೇಳಿದರೆ ಛಾಯಗೆ ಅವಮಾನ ಮಾಡಿದಂತೆ ಎನ್ನಿಸಿ, ಗಂಟಲು ಒಣಗಿ ಸುಮ್ಮನೆ ನಿಂತು “ಇವಳು ನನ್ನ ಹೆಂಡತಿ” ಎಂದೆ.

ಅಪ್ಪ ನನ್ನ ಕಡೆ ನೋಡಲಿಲ್ಲ. ಅಡಿಗೆಯವನನ್ನು ಕೂಗಿ “ಇಬ್ಬರಿಗೂ ಬಡಿಸು” ಎಂದರು.

ಅಮ್ಮ ಸತ್ತಳೆಂದು ಸುದ್ದಿ ಕೇಳಿ ಬಂದೆ ಎಂದದ್ದಕ್ಕೆ “ಯಾಕೆ ಬಂದಿ? ಸಾಯುವಾಗ ನೀನು ಹಾಕುವ ನೀರು ಬೇಡ. ನಾನು ನನ್ನ ಅಪ್ಪನನ್ನು ನೋಡಿಕೊಂಡಷ್ಟೆ ನೀನು ನನ್ನನ್ನು ನೋಡಿಕೊಳ್ಳೋದು. ಆಗಲಿ. ಮಾಡಿದ ಕರ್ಮ ತೀರಬೇಕು” ಎಂದರು.

* * *

ನಾನು ನಿತ್ಯದಂತೆ ಅಜ್ಜಯ್ಯನ ಪಕ್ಕದಲ್ಲಿ ಮಲಗಬೇಕೊ ಬೇಡವೊ ತಿಳಿಯದೆ ಅಳುತ್ತಿದ್ದ ಅಮ್ಮನ ಹತ್ತಿರ ಎಂಜಲು ಕೈಯಲ್ಲೆ ಹೋಗಿ ನಿಂತಾಗ ಅವಳು ‘ನಿನಗೆ ನಿನ್ನ ಅಜ್ಜಿ ಅಜ್ಜ ಹೆಚ್ಚೊ, ನಾನೊ ಹೆಚ್ಚೊ, ನಾನು ನೇಣು ಹಾಕಿಕೊಂಡು ಸತ್ತಮೇಲೆ ನಿನಗೆ ತಿಳಿಯುತ್ತದೆ’ ಎಂದಳು. ‘ಯಾರ ಜೊತೆ ಮಲಗಲಮ್ಮ’ ಎಂದದ್ದಕ್ಕೆ ಎಲ್ಲಾದರೂ ಮಲಗಿಕೊ, ನನ್ನನ್ನೇನು ಕೇಳೋದು ಎಂದು ಊಟದ ಮನೆಯ ನೆಲದ ಮೇಲೆ ಒರಗಿದಳು. ನಾನು ಸುಮ್ಮನೇ ನಿಂತೆ. ಕೈ ತೊಳೆದು ಬಂದೆ. ನನಗೆ ನಿದ್ದೆ ಬಂದ ಮೇಲೆ ಎಲ್ಲಾದರೂ ಅಮ್ಮ ಹೋಗಿ ನೇಣು ಹಾಕಿಕೊಂಡರೆ? ಅಮ್ಮನ ಪಕ್ಕದಲ್ಲಿ ನೆಲದ ಮೇಲೆ ಒರಗಿಕೊಂಡೆ. ಚಳಿಯಾಯಿತು. ಅಮ್ಮ ಅಮ್ಮ ಎಂದೆ. ಮಾತಾಡಲಿಲ್ಲ. ತುಂಬ ಚಳಿಯಾಯಿತು. ತಿರುಗಿ ‘ಅಮ್ಮ’ ಎಂದೆ. ಉತ್ತರ ಬರದಿದ್ದುದು ನೋಡಿ ಅಮ್ಮನಿಗೆ ನಿದ್ದೆ ಬಂತು, ನೇಣು ಹಾಕಿಕೊಳ್ಳುವುದಿಲ್ಲ ಎಂದು ಅಜ್ಜಯ್ಯನ ಮಗ್ಗುಲಲ್ಲಿ ಹೋಗಿ ಬೆಚ್ಚಗೆ ಮಲಗಿದೆ. ಪಕ್ಕದಲ್ಲಿ ಕೂತು ಗೊಣಗುತ್ತಿದ್ದ ಅಜ್ಜಿಗೆ – “ನೀವು ಹೆಂಗಸರಿಂದ ನಮಗೆ ಸುಖವಿಲ್ಲ. ನಾವೂ ಹೆಂಗಸರಂತಾಗಿಬಿಡುತ್ತೇವೆ. ಹೋಗಿ ಮಲಗು. ಇಲ್ಲದಿದ್ದರೆ ಜಪ್ಪಿಬಿಟ್ಟೇನು” ಎಂದು ಅಜ್ಜಯ್ಯ ಗದರಿಸಲು “ನನ್ನ ಪಾಲಿಗೆ ನೀವು ಇಲ್ಲವೆಂದ ಹಾಗಾಯಿತು. ” ಎಂದು ಅಜ್ಜಿ ಅಳುತ್ತ ಹೋಗಿ ತನ್ನ ಹಾಸಿಗೆಯಲ್ಲಿ ಮಲಗಿದ ಮೇಲೆ, ಅಜ್ಜಯ್ಯ ಆಕಳಿಸಿ, ಅಚ್ಯುತಾನಂತ ಗೋವಿಂದ ಎಂದು, ನನ್ನನ್ನು ಶಾಲಿನಿಂದ ಬೆಚ್ಚಗೆ ಮುಚ್ಚಿದರು.

ಬೆಳಗ್ಗೆ – ಇನ್ನೂ ನಕ್ಷತ್ರಗಳೆಲ್ಲ ಕಾಣುವಷ್ಟು ಬೆಳಗ್ಗೆ – ಕಾಡಿನಿಂದಲೊ ಎಲ್ಲೆಲ್ಲಿಂದಲೊ ಎನ್ನಿಸುವಂತೆ ಚಿ ಚಿ ಚಿ ಚಿಲಿ ಚಿಲಿ ಚಿಲಿ ಚಿಲಿ – ಕಿವಿಗೊಟಟು ಆಲಿಸಿದರೆ ಚೀ ಚೀ ಚೀ ಎಂಬ ಶಬ್ದ ತುಂಬಿರುವ ಮೌನದಲ್ಲಿ ಅಮ್ಮ ಬಂದು, ನನ್ನನ್ನು ತಟ್ಟಿ, ‘ಏಳು ಏಳು’ ಎಂದಳು. ನಾನು ಒಲ್ಲದೆ ಎದ್ದು ಕೂತೆ. ‘ಮಾವಯ್ಯ’ ಎಂದು ಅಜ್ಜಯ್ಯನನನ್ನು ಕರೆದಳು. ಅಜ್ಜಯ್ಯ ಮುಸುಕಿನಿಂದಲೇ ‘ನಾನಿವತ್ತು ತಲೆಗೆ ಎಣ್ಣೆ ಹಾಕಿ ಎರೆದುಕೊಳ್ಳೋದಿಲ್ಲ’ ಎಂದರು. ಅಮ್ಮ ‘ನಾನೂ ಎರೆದುಕೊಳ್ಳುವುದಿಲ್ಲ’ ಎಂದಳು. ‘ನರಸಿಂಹ ಸತ್ತಮೇಲೆ ತಲೆಗೆ ಎಣ್ಣೆ ಹಾಕಬಾರದೆಂದು ಶಪಥ ಮಾಡಿದ್ದೇನೆ. ಮನೆಯವರು ಎರೆದುಕೊಳ್ಳಿ’ ಎಂದರು ಅಜ್ಜಯ್ಯ. ಒಳಗೆ ಅಜ್ಜಿಯನ್ನು ಅಮ್ಮ ಏಳಿಸಿ ಎಣ್ಣೆ ಹಚ್ಚಿಕೊಳ್ಳಿ ಎಂದಳು. ಅದಕ್ಕವಳು ‘ಅವರು ಎಣ್ಣೆ ಹಾಕಿಕೊಳ್ಳದಿದ್ದರೆ ನನಗೂ ಬೇಡ, ಸಾಯುವ ಮುದುಕಿಗೇಕೆ ಇಲ್ಲದ ಸಂಭ್ರಮ’ ಎಂದಳು. ಕೋಣೆಯಲ್ಲಿ ಮಲಗಿದ್ದ ಅಪ್ಪ “ಥೂ ಇಷ್ಟು ಬೆಳಿಗ್ಗೆ ಎದ್ದು ಅದು ಯಾವ ಸಾವಿಗೆ ಎರಕೊಬೇಕು ಹೋಗು” ಎಂದು ಗದರಿಸಿದರು. ನಾನು ಕಣ್ಣು ಪಿಳಿಪಿಳಿ ಬಿಡುತ್ತ ಕತ್ತಲಿನ ಚೀ ಚೀ ಚೀ ಚಿಲಿ ಚಿಲಿ ಆಲಿಸಿದೆ. ಮುಸುಕಿನಿಂದ ಅಜ್ಜಯ್ಯ “ಮುದ್ದಾ ನೀನು ಹೋಗಿ ಎರಕೊ” ಎಂದರು. ಸುಮಾರು ಹೊತ್ತು ಅಮ್ಮ ಹೊಸಲಿನ ಮೇಲೆ ಸುಮ್ಮನೆ ಕೂತಳು. ಅಜ್ಜಯ್ಯ ಅಮ್ಮನಿಗೆ “ಹಂಡೆ ನೀರು ಕಾದಿದ್ದರೆ ಮಗುವಿಗೆ ಎರೆಯಬಾರದ? ಎಣ್ಣೆ ಹಚ್ಚು – ತಲೆಗೆ ಹಿಡಿಯಲಿ. ತಣ್ಣೀರು ಬೇಕಾದರೆ ಎದ್ದು ಸೇದಿ ಹಾಕುತ್ತೇನೆ” ಎಂದರು. ‘ಬೇಡ ತುಂಬಿಟ್ಟಿದ್ದು ಇದೆ’ ಎಂದಳು ಅಮ್ಮ. ಏಳು ಎಂದರು – ಎದ್ದೆ. ‘ಬಲಗಡೆ ಮಗ್ಗುಲಲ್ಲಿ ಎದ್ದೆ ತಾನೆ’ ಎಂದರು ಅಜ್ಜಯ್ಯ. ಹೂ ಎಂದೆ.

ದೇವರ ಎದುರು ಎರಡು ನೀಲಾಂಜನದಲ್ಲಿ ದೀಪ ಉರಿಯುತ್ತಿತ್ತು. ಅಲ್ಲೊಂದು ಮಣೆ ಹಾಕಿ ಅಮ್ಮ ನನ್ನನ್ನು ಕೂರಿಸಿದಳು. ಒಂದು ಬಟ್ಟಲಿನಲ್ಲಿ ಎಣ್ಣೆಯನ್ನು ಹಿಡಿದುಕೊಂಡು ಕುಂಕುಮದ ನೀರು ಮಾಡಿ ಅಕ್ಷತೆ ಹಾಕಿ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮುಗಿಸಿದಳು. ಎಣ್ಣೆಯ ಬಟ್ಟಲನ್ನು ನನ್ನ ಎದುರು ಇಟ್ಟು ಇದರಲ್ಲಿ ನಿನ್ನ ಮುಖ ನೋಡಿಕೊ. ಗ್ರಹಚಾರವೆಲ್ಲ ಕಳೆಯಲಿ ಎಂದಳು. ನಾನು ದೀಪದ ಎದುರು ಅದನ್ನಿಟ್ಟು ನೋಡಿ ‘ನೋಡಿದೆ ಅಮ್ಮ’ ಎಂದೆ. ಬಟ್ಟೆ ತೆಗಿ ಎಂದಳು. ನನಗಿಲ್ಲಿ ಬಟ್ಟೆ ತೆಗೆಯಲು ಚಳಿಯಮ್ಮ ಎಂದದ್ದಕ್ಕೆ ಹೋಗಲಿ ಬಚ್ಚಲು ಮನೆಯಲ್ಲೆ ತೆಗಿ ಎಂದಳು. ನಾನು ಬಚ್ಚಲಿಗೆ ಹೋಗಿ ಬಟ್ಟೆ ತೆಗೆದು ಬೆಂಕಿಯ ಎದುರು ಬೆನ್ನು ಕಾಯಿಸಿಕೊಳ್ಳುತ್ತ ಕೂತಿದ್ದ ಕಂಡು, ಬೆನ್ನು ಕಾಯಿಸಿಕೊಳ್ಳಬಾರದು, ವಾಮೆ, ಮನೆಯವರಿಗೆ ಕೆಡಕು ಎಂದಳು. ತಲೆಗೆ ಎಣ್ಣೆ ಹಚ್ಚಿ, ಕುಣಿಯುವ ನನ್ನ ಮೈಗೆಲ್ಲ ತಿಕ್ಕುತ್ತ, ತಾಯಿಯ ಕೈಯಲ್ಲಿ ಎಣ್ಣೆ ಹಾಕಿಸಿಕೊಳ್ಳಲು ಯಾಕೆ ನಾಚಿಕೆಯೊ, ಇನ್ನೂ ಚೋಟುದ್ದ ಇದ್ದಿ ಎಂದು ನಕ್ಕು, ಎಣ್ಣೆ ಸ್ವಲ್ಪ ಹಿಡಿಯಲಿ ಎಂದಳು. ಆ ಮೇಲೆ ಬಾನಿಯಲ್ಲಿ ಹವಣಮಾಡಿದ ನೀರಿನಲ್ಲಿ ಕೂರಿಸಿದಳು. ಬಿಸಿ ಬಿಸಿ ನೀರಿನ ಸ್ನಾನ ಆ ಹೊತ್ತಿನಲ್ಲಿ ಬಲು ಸುಖವಾಗಿ ಕಂಡು ಎಣ್ಣೆ ಸ್ನಾನ ಮಾಡಲು ಬೇರೆ ಯಾರೂ ಇಲ್ಲದ್ದರಿಂದ ಬೋಸಿ ಬೋಸಿ ನೀರು ಹೊಯ್ಯಿಸಿಕೊಳ್ಳುತ್ತ ಕೂತೆ. ತಣ್ಣಗಿನ ಮತ್ತಿಸೊಪ್ಪಿನ ನೋಳಿಯನ್ನು ಕುಣಿಯುತ್ತ ನಡಗುತ್ತ ಅಮ್ಮನನ್ನು ನಗಿಸುತ್ತ ಮೂರು ಸಾರಿ ಹಾಕಿಸಿಕೊಂಡು, ಹು ಹು ಹು ಚಳಿಯಮ್ಮ ಎನ್ನುತ್ತ ತಲೆ ತೊಳೆಸಿಕೊಂಡೆ. ಆಗ ನನಗೆ ಉದ್ದ ಕೂದಲಿತ್ತು. ಬೆನ್ನು ಮೈ ಕೈ ತಿಕ್ಕಿದ ಮೇಲೆ ಕಂಕುಳು ಸಂದಿ ತಿಕ್ಕಿಕೊ ಎಂದು ಸೀಗೆ ಕೊಟ್ಟಳು. ಅಭ್ಯಂಜನವಾದ ಮೇಲೆ ನನ್ನ ಮೈಯನ್ನು ಒಣಗಿದ ಬಟ್ಟೆಯಿಂದ ಚೆನ್ನಾಗಿ ಒರೆಸಿ, ತಲೆಗೊಂದು ಪಾಣಿಪಂಚೆಯನ್ನು ನೀರು ಹೀರಲು ಕಟ್ಟಿ, ದೃಷ್ಟಿಯಾಗದಿರಲೆಂದು ಹಂಡೆಗೆ ಹತ್ತಿದ ಕರಿಯನ್ನು ನನ್ನ ಹಣೆಗೆ ಹಚ್ಚಿ ದೇವರಿಗೆ ಹೋಗಿ ನಮಸ್ಕಾರ ಮಾಡು ಎಂದಳು. ಹೊಸ ಬಟ್ಟೆ ಹಾಕಿಕೊಳ್ಳಲೆ ಅಮ್ಮ ಎಂದದ್ದಕ್ಕೆ ಹಾ ಎಂದು ಮರದ ಪೆಟ್ಟಿಗೆಯ ಬಾಗಿಲು ತೆರೆದು ಹೊಸ ಶರ್ಟು ಚೆಡ್ಡಿಯನ್ನು ಕೊಟ್ಟಳು. ಗಂಧದುಂಡೆಯನ್ನು ಪೆಟ್ಟೆಗೆಯಲ್ಲಿಟ್ಟದ್ದರಿಂದ ಅದಕ್ಕೆ ಗಂಧದ ವಾಸನೆ ಬಂದಿತ್ತು. ಸಂಭ್ರಮದಿಂದ ಅರಿಸಿನ ಕುಂಕುಮ ಹಚ್ಚಿದ ಹೊಸ ಬಟ್ಟೆಯನ್ನು ತೊಟ್ಟು ಅಂಗಳಕ್ಕೆ ಬಂದು ನಿಂತೆ.

ಚುಮು ಚುಮೂ ನಸುಕು. ಮಂದ ಪ್ರಕಾಶದಲ್ಲಿ ಅಲ್ಲೊಂದು ಇಲ್ಲೊಂದು ಕರಗುವ ನಕ್ಷತ್ರ. ಇನ್ನೇನು ಹಗಲಾಗಬೇಕು. ಎನ್ನುವುದಕ್ಕಿಂದ ಮುಂಚಿನ ಕತ್ತಲು ಕತ್ತಲು ಬೆಳಕು. ಮರಗಿಡಗಳಿಗೆಲ್ಲ ಏನೋ ರೀತಿಯ ಅಂಕುಡೊಂಕು ವಕ್ರ ಆಕೃತಿಯ ಮಸಿಮಸಿಯಾದ ರೂಪು. ಅವುಗಳಲ್ಲಿ ಹಕ್ಕಿಗಳ ರೆಕ್ಕೆಗಳ ಪಟಪಟ. ಅಬ್ಬಕ್ಕನ ಕೋಳಿ ಕೂಗಿತು. ದೂರದಿಂದ ಇನ್ನೊಂದು ಕೋಳಿ ಕೂಗಿತು. ಇನ್ನೂ ದೂರದಿಂದ ಇನ್ನೊಂದು ಕೋಳಿ. ಸದ್ದು – ಮೌನ ಸದ್ದು. ಹೊಸ ಬಟ್ಟೆ ತೊಟ್ಟ ಗೆಲುವಿನಲ್ಲಿ ನಾನು ಸಂಭ್ರಮದಿಂದ ಬೆಳಗಾಗುವುದನ್ನು ನೋಡುತ್ತ ನಿಂತಿದ್ದೆ. ಹೋದ ದೀಪಾವಳಿ ನರಸಿಂಹಮಾಮ ಸತ್ತ ಎಂಬ ಸುದ್ದಿ ಕೇಳಿಸಿಕೊಂಡ ಜಾಗದಲ್ಲಿ ಮಂಕಾಗಿ ಕೂತಿದ್ದ ಅಮ್ಮನನ್ನು – “ಅಮ್ಮ ಕಾಪಿ ಕೊಡ್ತೀಯೇನೆ?” ಎಂದು ಕೇಳಿದೆ. ಹಾ ಎಂದಳು. “ತಲೆಗೆ ಸುತ್ತಿದ ಪಾಣಿಪಂಚೆ ಬಿಚ್ಚಲೇನೆ?” ಎಂದದ್ದಕ್ಕೆ “ಬೇಡ ಸ್ವಲ್ಪ ಹೊತ್ತು ಇರಲಿ, ನೀರು ಹೀರಲಿ” ಎಂದಳು. ಆಗ ಧಿಗ್ಗನೆ ಅದೆಷ್ಟು ಕಿರಣಗಳು ಬಲು ಚೆಲುವಾಗಿ ಆಕಾಶದ ಅಂಚಿನಿಂದ ದೂರದ ಬೆಟ್ಟದ ಗೆರೆಯ ಮೇಲೆ ಹಾರಿ ಕಾಣಿಸಿಕೊಂಡಾಕ್ಷಣ ನಾನೇನು ಕಂಡೆ,

ಎಂಬುದನ್ನು ಹೇಗೆ ನಂಬಿಕೆಯಾಗುವಂತೆ ಹೇಳಲಿ? ವಯಸ್ಸಾದ ನನಗೇ ಈಗ ಅದು ವಿಚಿತ್ರವಾಗಿ ಕಾಣಿಸುತ್ತದೆ. ನನಗೇ ನಾನು ಪರಕೀಯ. ಅವತ್ತು ನಾನು,

“ಅಮ್ಮ, ಅಜ್ಜಯ್ಯ ನೋಡಿ, ನೋಡಿ”. ಎಂದು ಕೂಗಿದಾಗ ಅಜ್ಜಯ್ಯ ಅಮ್ಮ ಗಾಬರಿಯಾಗಿ ಹೊರಗೋಡಿ ಬಂದು,

“ಎಲ್ಲೊ ಏನಾಯಿತೊ ಅಪ್ಪು” ಎನ್ನಲು,

“ಅಲ್ಲಿ ಆಕಾಶದಲ್ಲಿ ಏನೋ ಎರಡು ಹಾರುತ್ತಿದ್ದರು. ನೋಡಿದೆ” ಎಂದೆ.

“ಎಲ್ಲಿ? ಎಲ್ಲಿ?” ಎಂದರು ಅಜ್ಜಯ್ಯ.

“ಈಗ ಕಾಣಿಸುತ್ತಿಲ್ಲ. ಆಕಾಶದಲ್ಲಿ ಕರಗಿದರು” ಎಂದೆ ನಾನು.

ಅಜ್ಜಯ್ಯ ಅಮ್ಮ ನಕ್ಕರು. ಬಾ ಒಳಗೆ ಎಂದರು. ಏನೊ ಹಕ್ಕಿಯಿರಬೇಕು. ನೀನು ಕರೆದ ರೀತಿ ಕೇಳಿ ಗಾಬರಿಯಾಗಿಬಿಟ್ಟೆವು ಎಂದರು.

* * *

ಅಂಗಾತನೆ ಮಂಚದ ಮೇಲೆ ಮಲಗಿ, ಕೈಗಳನ್ನು ಚೆಲ್ಲಿ ಛಾಯ ಮುಗುಳ್ನಕ್ಕಳು. ಹಕ್ಕಿಯಿರಬೇಕು ಎಂದಳು. ರಾಘವ ಅವಳ ತಲೆದೆಸೆಗೆ ನಿಂತು ಹೆಂಡತಿಯನ್ನು ಹುಡುಕುವಂತೆ ನೋಡಿದ. ನಾನು ಸಾಲದೇನು, ಇನ್ನೇನು ಬೇಕು, ನನ್ನನ್ನು ರಮಿಸು ಎನ್ನುವ ಸವಾಲು ಇದು. ಕಾಣುವುದಕ್ಕೆ ಹೊರಗೆ ಕುಚೇಷ್ಟೆ, ಮಕ್ಕಳಾಟಿಕೆ, ಒಳಗೆ – ನನ್ನ ಜೊತೆಯಲ್ಲಿನ ಬಾಳ್ವೆ ಬಿಟ್ಟು ಉಳಿದದ್ದೆಲ್ಲ ಅಸಂಗತ, ನಿಷ್ಪ್ರಯೋಜಕ ಎಂಬ ಹೆಣ್ಣಿನ ತಿರಸ್ಕಾರದ ಭಾವ. ಕೈಗಳನ್ನು ಎತ್ತಿ ‘ಬನ್ನಿ’ ಎಂದು ಎಳೆದಳು. ದೈನ್ಯದಿಂದ ನೋಡಿ – ಆದರೆ ಗಟ್ಟಿಯಾಗಿ ಅವನ ಕೈ ಹಿಡಿದು, ಇದು ಹಿತ ನನಗೆ – ಅದಕ್ಕಾಗಿಯೇ ನನಗಿಂತ ಭಿನ್ನಳಾದ ಇವಳನ್ನು ಮದುವೆಯಾದೆ ಅಲ್ಲವೆ? ಪ್ರಜ್ಞೆಯ ಆಳದಿಂದ ಅರಿವಿಗೆ ಬಂದಂತೆ, ನಿಧಾನವಾಗಿ ಬಂದು ಮಂಚದ ಮೇಲೆ ಕೂತು ಅವಳ ನುಣುಪಾದ ಮೃದುವಾದ ಹೊಟ್ಟೆಯ ಮೇಲೆ ಕೈಯಿಟ್ಟ. ಮಾಂಸದ ಬೆಚ್ಚನೆಯ ಜಾಗಗಳು. ಮುಟ್ಟಿದ ಕೂಡಲೆ ಇವಳ ಕಣ್ಣುಗಳು ಹೇಗೆ ಮಾದಕವಾಗುತ್ತವೆ. ಆದರೆ ಈಗ ತೀವ್ರವಾದ ಕಾಮ ತರುವ ಸುಖವಾಗಲಿ, ಮರವೆಯಾಗಲಿ ಬೇಕೆನ್ನಿಸಲಿಲ್ಲ. ಈ ಪ್ರೀತಿಯಲ್ಲಿಯೂ ದುಃಖದ ಬೀಜವಿದೆಯಲ್ಲವೆ ಎಂದು ಕ್ಷಣ ಅನ್ನಿಸಿ ಛಾಯಳ ಅರ್ಧ ಮುಚ್ಚಿದ ದೊಡ್ಡ ಕಣ್ಣುಗಳನ್ನು ನೋಡಿದ. ಅಪ್ಪ ಅಮ್ಮನ ಇಷ್ಟದ ವಿರುದ್ಧ ಇವಳನ್ನು ಮದುವೆಯಾಗಲು ಕಾರಣ ನನ್ನ ಭೂತದಲ್ಲಿದೆ, ಪರಕೀಯನಾಗಿ ಉಳಿಯಬೇಕೆಂಬ ನನ್ನ ಛಲದಲ್ಲಿದೆ, ಆದರೆ ಇವಳಿಗೊಂದೂ ನಾನು ಹೇಳಿಕೊಳ್ಳಲಾರೆ, ಭೂತದಲ್ಲಿ ಇವಳನ್ನು ಪಾಲು ಮಾಡಲಾರೆ, ಇವಳಿಗೆ ಅದು ಬೇಡ, ಏಕಾಂಗಿಯಾಗಿ ನನಗೆ ವಿಶೇಷವಾದ ಜೀವನವನ್ನು ನಾನು ಎದುರಿಸಬೇಕು, ಬರೆಯಬೇಕು, ಹುಡುಗನಾಗಿದ್ದಾಗ ಬೆಳಗಿನ ಮುಹೂರ್ತದಲ್ಲಿ ನಿಂತಂತೆ ಒಂದು ಕ್ಷಣ ಮೀರಿ… ”

ಎದ್ದು ನಿಂತ. ತನ್ನ ಮೈಮೇಲೆ ಆಡುತ್ತಿದ್ದ ಕೈ ಸರಿಯಲು ಥಟ್ಟನೆ ಕಣ್ಣು ಬಿಟ್ಟು ಛಾಯ. “ಎಲ್ಲಿಗೆ” ಎಂದಳು ಅಸಮಾಧಾನದಿಂದ.

ಇರು ಬಂದೆ ಎಂದು ಹೊರಗೆ ಬಂದು ನಿಂತ. ಕಾರ್ತೀಕದ ಕಪ್ಪು ಆಕಾಶದಲ್ಲಿ ಇದು ವ್ಯಾಧ, ಇದು ಕೃತ್ತಿಕೆ. ವೃತ್ತಿಯಲ್ಲಿದ್ದೂ ನಿವೃತ್ತಿಯಲ್ಲಿವೆ. ಇಲ್ಲಿ ನೆಲದ ಮೇಲೆ ದಟ್ಟವಾಗಿ ರಾತ್ರೆರಾಣಿಯ ವಾಸನೆ. ಅಂಟಿಕೆ ಪಂಟಿಕೆಯವರ ಹಾಡು ನೆನಪಾಗುತ್ತದೆ. ಕೊಳ್ಳೀರಿ ದೀಪಾ, ಕೊಡಿ ದೀಪಾ… ಮತ್ತೆ ದೀಪ್ ದೀಪ್ ದೀಪ್ ಒಳ್ಗೆ; ಹಬ್ಬಕ್ಕೊಂದು ಹೋಳ್ಗೆ. ಹುಟ್ಟಿದೂರಿನಲ್ಲಿ ರಾಗಜ್ಜ ಮಲಗುತ್ತಿದ್ದಲ್ಲೆ ಅಪ್ಪ ಒಂಟಿಯಾಗಿ ಮಲಗಿದ್ದಾರೆ. ತನ್ನ ತಂದೆಯ ದುಃಖದ ಸಾವಿಗೆ ತಾನು ಕಾರಣನಾದೆ ಎನ್ನುವ ಪಾಪಭಾವ ಅವರಿಗೆ ಅಂಟಿಕೊಂಡಿದೆ. ಒಂದು ದಿನ ಅವರೂ ಸಾಯುತ್ತಾರೆ; ರಾಗಜ್ಜನ ಹಾಗೆ. ದಿಕ್ಕಿಲ್ಲದೆ. ನನ್ನ ಜೀವಕ್ಕೆ ಅಮ್ಮನ ಸಾವಿನ ಪಾಪದ ಜೊತೆ, ಅವರ ಅನಾಥ ಸಾವಿನ ಪಾಪವೂ ಅಂಟಿಕೊಳ್ಳಬೇಕೆಂದು ಅವರ ಇಷ್ಟ.

ಪಿತೃ ಜಿಗಣೆಗಳು, ಭೂತಗಳು.
ಅಂಡು ತೊಳೆಸಿ ಬೆಳೆಸಿದ ಅಪ್ಪ ಅಮ್ಮನ ಪ್ರೀತಿ,
ಒಳಗಿನಿಂದ ಛಾಯಳ ಒತ್ತಾಯದ ಕರೆ –
“ಹೊತ್ತಾಗುತ್ತಿದೆ. ಮಲಗಿಕೊಳ್ಳಿ. ಬನ್ನಿ”.

೧೫-೧೨-೧೯೬೧ ರಿಂದ ೧೮-೧೨-೧೯೬೧ ವರೆಗೆ

* * *