“ಸ್ವಧರ್ಮೇ – ನಿಧನಂ ಶ್ರೇಯಃ ಪರಧರ್ಮೋ ಭಯಾನಹಃ”

– ಗೀತೆ

ರಾತ್ರಿಯ ಕತ್ತಲಿನಲ್ಲಿ ಯಾರ ಕಣ್ಣಿಗೂ ಬೀಳದೆ ಎಲ್ಲೆಲ್ಲಿಂದಲೂ ಹೊಲಸು ಕೊಚ್ಚೆ ಗುಂಡಿಗಳಿಂದ ಗೊಟರು ಹಾಕುವ ಗೊಂಟರು ಕಪ್ಪೆಗಳ ಶ್ವಾಸಕೋಶ ಎಂಥದಿರಬೇಕೆಂದು ಯೋಚಿಸುತ್ತ ನಿದ್ದೆ ಬಾರದೆ ರಾಜಣ್ಣ ಎದ್ದು ಕೂತ. ಎಷ್ಟು ದಿನ, ಎಷ್ಟು ದಿನವೆಂತ ಹೀಗೆ ಯಾಂತ್ರಿಕವಾಗಿ ತೋಡಿ ಸಂತೋಷಪಡುವುದಕ್ಕೂ ಅಸಾಧ್ಯವಾದ, ಜೀವ ಹಿಚುಕುವ ಬೇಸರವನ್ನು ತಾಳಿಕೊಂಡಿರುವುದು – ಎನ್ನುವ ಯೋಚನೆಯನ್ನು ಹೇಗೆ ಕವನದ ಸಾಲುಗಳಾಗಿ ಬರೆಯಬಹುದೆಂದು ತಲೆಕೆರೆದುಕೊಂಡ. ಹಾರ್ಲಿಕ್ಸ್, ಗ್ಲೂಕೋಸ್, ಮಲ್ಟಿವಿಟಮಿನ್ ಮಾತ್ರೆ, ಜೀವನವೆಷ್ಟು ದುಃಖಮಯ ಎನ್ನುವ ವೇದಾಂತ, ಸಂಜೆ ಇಸ್ಪೀಟು, ಬೀರು ಇಷ್ಟಿದ್ದರೆ ಸಾಕು – ಸತ್ತೂನೂರು ಶರದೃತುಗಳನ್ನು ನೋಡಿ ಮನೆಯಿಂದ ಲೈಬ್ರರಿಗೆ ಲೈಬ್ರರಿಯಿಂದ ಮನೆಗೆ ರ‍್ಯಾಲಿ ಸೈಕಲ್ಲಿನ ಮೇಲೆ ತಿರುಗುತ್ತಿರಬಹುದಲ್ಲವೆ? ಎಂದು ಯೋಚಿಸಿ… ನಕ್ಕ. ಹೀಗೆಯೇ ರಾತ್ರಿ ಹನ್ನೆರಡು ಘಮಟೆಗೆ ‘ಕೋಟು ತೊಟ್ಟು ಚಪ್ಪಲಿ ಮೆಟ್ಟಿ’ ಹೊರಟರೆ ಎನ್ನಿಸಿ – ಹದಿನೈದು ರೂಪಾಯಿಗೆ ಕೊಂಡಿದ್ದ ಬುದ್ಧನ ಪ್ಲಾಸ್ಟರ್ ಆಫ್ ಫ್ಯಾರಿಸ್ ಪ್ರತಿಮೆ ನೋಡಿ – ಟೌನಿನಲ್ಲಿ ಈ ಹೊತ್ತಲ್ಲದ ಹೊತ್ತಿನಲ್ಲಿ ಯಾವ ಹೋಟೆಲಾಗಲೀ ಚಿತ್ರ ಮಂದಿರವಾಗಲೀ ತೆರದಿರುತ್ತವೆಯೋ ಎಂದು ಸುಮ್ಮನಾದ. ಲೈಬ್ರರಿಯಲ್ಲಿ – ಬೆಳಿಗ್ಗೆ, ಮಟಮಟ ಮಧ್ಯಾಹ್ನ, ಸಂಜೆ ಎನ್ನದೆ – ಮೂರು ಹೊತ್ತು ಅಕ್ಷರಗಳಿಗೆ ಕಣ್ಣು ಹತ್ತಿಸಿ ಕೂತವರ ಜೊತೆ ದಿನಂಪ್ರತಿ ತಾನೂ ಕೂತಿರುವುದರ ಚಿತ್ರ ಬರೆದರೆ ಅದಕ್ಕೆ “I had not thought Death had undone so many” ಎಂಬ ಶೀರ್ಷಿಕೆ ಕೊಟ್ಟರೆ ಹೇಗೆ, ಎಂದು ಸಿಗರೇಟು ಹಚ್ಚಿದ. ಕಿಟಕಿಯ ಕೊರೆಯುವ ಕಬ್ಬಿಣದ ಸರಳುಗಳನ್ನು ಹಿಡಕೊಂಡು ಸೀನಿದ. ಕತ್ತಲಿನ ಭಯಂಕರ ಮೌನದ ಶ್ವಾಸಕೋಶದಿಂದ ಗೊಂಟರು ಕಪ್ಪೆಗಳ ಈ ಆರ್ತತೆ (“Voices of desire from the depths of darkness”) ಬರುತ್ತಿದೆ ಎನ್ನುವುದು ತಾನು ಬರೆಯಲಿರುವ ಕವನಕ್ಕೆ ಒಂದು ಒಳ್ಳೆಯ ಪ್ರತೀಕವಾದೀತೆಂದು ದೀಪ ಹೊತ್ತಿಸಿ ಕನ್ನಡಿಯಲ್ಲಿ ಮುಖ ನೋಡಿಕೊಂಡ. ಬೇಸರ, ಸಂಕಟ, ನೋವು, ಮೃತ್ಯು, (ಸಾವೂ ಕೂಡ) ಎಲ್ಲವೂ ಕವಿಯ ಕುಲಮೆಯಲ್ಲಿ ಚೆಲುವಾಗುತ್ತವಲ್ಲವೇ? ಅಭಿವ್ಯಕ್ತಿಯೆಂದರೆ ಮತ್ತೇನು? – ಎಂದು ಥೀಸಿಸ್‌ನಲ್ಲಿ ಬರೆಯಬೇಕೆಂದುಕೊಂಡು ಕಾಲುಗಂಟಿನ ಮೇಲೆ ಎದ್ದಿದ್ದ ಎಕ್ಸಿಮಾವನ್ನು ತುರಿಸಿಕೊಂಡ – ಯಾರದೋ ಎಂಜಲು ಅದು ಎನ್ನಿಸಿದರೂ ಯಾರಿಗೂ ಗೊತ್ತಾಗಲಿಕ್ಕಿಲ್ಲವೆಂದು ಸಮಾಧಾಣ ಪಟ್ಟು ಮತ್ತೆ ಹಾಸಿಗೆಯ ಮೇಲೆ ಕುಳಿತ. ಬೆನ್ನು ತುರಿಸಿಕೊಂಡ. ಮತ್ತೆ ಕತ್ತಿನ ಬಳಿ ತುರಿಕೆಯಾಯಿತು. ‘Candle in the thighs’ ಎಂಬ (ಯಾರ ಕವನದ?) ಒಂದು ಕವನದ ಸಾಲಿನ ನೆನಪಾಗಿ ಹೊಕ್ಕಳನ್ನು ಕೆರೆದುಕೊಳ್ಳುತ್ತ – ಹೊಕ್ಕಳ ಬಳ್ಳೀ ಗರ್ಭದಿಂದ ಹರಿಯುವುದೇ ದುರಂತ ಎನ್ನಿಸಲು ನಿತ್ಯವೂ ಹಿಂದೂ ಪತ್ರಿಕೆಯ ಅಡ್ವರ್ಟೈಸ್‌ಮೆಂಟಿನಲ್ಲಿ ಹೇಳುವಂತೆ ತುರಿಕೆಗೆ ಲೈಫ್‌ಬಾಯ್ ಸೋಪನ್ನು ನಾಳೆ ನೆನಪುಮಾಡಿ ತರಬೇಕೆಂದುಕೊಂಡ. ಅವನು ವಿಮರ್ಶಿಸಲೆಂದು ಓದುತ್ತಿದ್ದ ಕಾದಂಬರಿಯಲ್ಲಿ ಬರೆದಂತೆ ಈ ಊರಲ್ಲೂ ಸೂಳೆಯರು ಇದ್ದಾರೆಯೆ? – ಎಲ್ಲಿ? – ಥೂ! ಆದರೆ ಆ ಕಾದಂಬರಿ ಕಲಾತ್ಮಕವಾಗಿಲ್ಲ – ಎಂದು ಗೊಣಗಿ,

ಲಘುವಾಗಿ ಏನನ್ನಾದರೂ ಕಲ್ಪಿಸತೊಡಗಿದರೆ ನಿದ್ದೆ ಬರಬಹುದೆಂದು ಪಾರ್ಕಿಗೆ ಅರುಂಧತಿಯ ಜೊತೆ ಹೋದ. ಅರುಂಧತಿಯ ಮೋರೆ ಲೈಬ್ರರಿಯಲ್ಲಿ ಮೊನ್ನೆ ಎದುರು ಕುಳಿತಿದ್ದವಳ ಬಟ್ಟಲು ಮುಖದಷ್ಟು ಚೆನ್ನಾಗಿಲ್ಲದಿದ್ದರೇನೆಂತೆ – ಅವಳ ಎದೆ ಮೃದುವಾಗಿ ಉಬ್ಬಿ ಬೆಳೆದಿದೆ ಎಂದು ಸಮಾಧಾನಪಟ್ಟ. ಹಸಿರು ಹುಲ್ಲಿನ ಮೇಳೆ ಹಿತವಾದ ಬೆಳದಿಂಗಳು ಚೆಲ್ಲಿದಾಗ ಅವಳ ಕೋಮಲವಾದ ಮೈ ತಬ್ಬಿ ಮೃದು ಕೈಯನ್ನು ಮೃದುವಾಗಿ ಹಿಸುಕಿದರೆ – ಹುಟ್ಟಿದ ಮಕ್ಕಳಿಗೆ ಹಾರ್ಲಿಕ್ಸ್‌ತರಲು ಸಂಬಳ ಸಾಲದು ಎನ್ನಿಸಿತು – ಹಾಗಾದರೆ ಅರುಂಧತಿ ಕಳುಹಿಸಿದ ಕೀಟ್ಸ್‌ಕವನಗಳ ಉಡುಗೊರೆಗೆ ಬದಲಾಗಿ ಸಂತಾನ ನಿಯಂತ್ರಣದ ಬಗ್ಗೆ ಒಂದು ವೈಜ್ಞಾನಿಕ ಗ್ರಂಥವನ್ನು ಕಳುಹಿಸಿದರೆ ಹೇಗೆ? – ಸುಖಕ್ಕೆ ಸುಖ – ಜೊತೆಗೆ ದೇಶಸೇವೆ, (ದೇಶಸೇವೆಯೇ ಈಶಸೇವೆ!), ಅರುಂಧತಿ ಈಗಲೇ ಪೆಚ್ಚು ಮೋರೆ – ಮಕ್ಕಳಾದ ಮೇಲೆ ಅಲಮೇಲಮ್ಮನಂತಾದರೆ – ಸಂತಾನ ನಿಯಂತ್ರಣದಲ್ಲಿ ತಪ್ಪೇನು ಎಂದು ಪಾರ್ಕಿನಲ್ಲಿ ಮತ್ತೆ ಅವಳನ್ನು ತಬ್ಬಿ ಬೆನ್ನು ಸವರಿದ. ಯಾವ ಪಾರ್ಕು ಉತ್ತಮ? ಎಲ್ಲದಕ್ಕೂ ಹಾಳು ಜನ ಬರುತ್ತಾರಲ್ಲಾ – ಸಂಜೆಯೇರಿದ ಮೇಲೆ ಅಶೋಕವನ ನಿರ್ಜನವಾಗಿರುತ್ತದಲ್ಲವೆ? ಆದರೆ ಅರುಂಧತಿಯ ಅಪ್ಪ ಅವಳಿಗೆ ವಾಕಿಂಗ್ ಹೋಗಲು ಬಿಟ್ಟಾರೆ? ಆ ಉದ್ದ ಮೂಗಿನ ಗೃಧ್ರ ಗೊತ್ತಾಗಿ ಮದುವೆಮಾಡಿಕೋ ಎಂದು ಜಿಗಣೆ ಹಿಡಿದರೆ ಏನು ಸಾಯುವುದು? – ಥೂ ಆ ಹುಟ್ಟುವ ಚಿಳ್ಳೆ ಪಿಳ್ಳೆ – ಎಂದುಕೊಂಡು ಮತ್ತೆ ಅರುಂಧತಿಯನ್ನು ಕಾಲುಗಳಿಂದ ಬಿಗಿದು ಅವಳ ಕತ್ತಿನ ಮೇಲೆ ಬಾಯಿಟ್ಟು ಕಣ್ಣುಗಳನ್ನು ಮೃದುವಾಗಿ ಚುಂಬಿಸಿ ಯಾರಾದರೂ ನೋಡಿ ಬಿಟ್ಟಾರೋ ಎಂದು ಆ ಕಡೆ ಈ ಕಡೆ ನೋಡಿ,

ಯಾರೂ ಇಲ್ಲ – ಮಕ್ಕಳಾಗುವುದೂ ಇಲ್ಲ – ಕಣ್ಣು, ಕತ್ತು, ಮೃದು ಎದೆ, ತೊಡೆ, ಸೊಂಟ, ಹೊಕ್ಕಳು, ಜಘನ ಮುತ್ತಿಟ್ಟು – ಸವರಿ, ವೆಲ್ವೆಟ್ ಮೃದು ಬಟ್ಟೆ ಸರಿಸಿ, ಬೆತ್ತಲಾಗಿ, ಕತ್ತಲಾಗಿ, ನುಗ್ಗಿ, ಕೆನ್ನೆಗೆ ಕಾವನ್ನು ಒತ್ತಿ, ಪುಡಿಪುಡಿಮಾಡಿ ಅಪ್ಪಿ ಅವಚಿ, ಸತ್ತು, ಹೊರಳಿ, ಹಾರಿ ಹಾಗೇ – ಹಸಿರು ಹುಲ್ಲಿನ ಮೇಲೆ ಎಂಥ ಸರ್ಪ!… ಅವನ ಕೈಗೆ ಸುತ್ತಿಯೇ – ಅಲ್ಲ ಅವಳ ಕಾಲಿಗೆ ಕಚ್ಚದೆ ಸುತ್ತಿ – ಸೊಂಟದ ಮೇಲೆ ನಿಧಾನ ತಣ್ಣಗೆ ಹರಿದು – ಅಲ್ಲ ಕೈಗೆ ಸುತ್ತಿ ಹೆಡೆಯೆತ್ತಿದಾಗ ತುಟಿ ಕಚ್ಚಿ ತಡವರಿಸದೆ ಹಲ್ಲಿನ ಬಾಯನ್ನು ಬಿಗಿಮುಷ್ಟಿಯಲ್ಲಿ ಹಿಡಿದೆಳೆದು, ನೆಲಕ್ಕೆ ಪಠಾರನೆ ಬಡಿದು, – ಹಾಸಿಗೆಯಲ್ಲಿ ಹೊರಳುತ್ತ – ನುಚ್ಚು ನೂರುಮಾಡಿ, ದೂರ ಬಿಸಾಕಿ, ಅರುಂಧತಿಯ ಎದುರು ಗಂಡುತನದ ಪೌರುಷ ತೋರಿಸುತ್ತಾ ನಿಂತಾಗ – ಅಯ್ಯೋ ಮತ್ತೆ ಅದೇ ಸರ್ಪ… ಇಲ್ಲ… ಬರಲಿಲ್ಲ ಯಾರೂ ಇಲ್ಲ – ಬೆಲ್ಟ್ ಬಿಚ್ಚಿ, ಸರ್ಜ್‌‌ಸೂಟ್ ಒಗೆದು, ಏನೂ ಆಗದಂತೆ ಯಾರಿಗೂ ಗೊತ್ತಾಗದಂತೆ, ಪಾರ್ಕಿನಲ್ಲಿ ಬೇಡ ಆಕಾಶದಲ್ಲಿ ತೇಲಿ ತೇಲಿ – ಥೂ ಮತ್ತೆ ಮೋಡದಲ್ಲೂ ಮಿಂಚು ಹಾವು ಸುಳಿ ಸುಳಿ… ಪಳ್ ಪಳ್ ಎಂದು ಮಿಂಚಿ – ಗುಡುಗಿ –

‘ನೂರುಸಾರಿ ಕೊಂದಿದ್ದೇನೆ – ಚೂರು ಚೂರು ಮಾಡಿ ಒಗೆದಿದ್ದೇನೆ – ಆದರೂ ತಿರುಗಿ ಜೀವ ಬರುತ್ತದೆ – ಕಡಿಯದಂತೆ ಕಾಡುತ್ತದೆ – ಹಗಲುಗನಸಿನಲ್ಲೂ ಹೀಗೆ ನಾಗರಕಾಟಕ್ಕೆ ಮನೋವಿಜ್ಞಾಣದಲ್ಲಿ ಏನೆನ್ನಬಹುದೆಂದು’ ಅಂಗಾತನೆ ಮಲಗಿ ರಾಜಣ್ಣ ಚಿಂತಾಕ್ರಾಂತನಾದ. ‘Are my lungs really weak?’ (ಕಣ್ಣು ಪಿಳಿ ಪಿಳಿ ಮಾಡಿ ಎದೆ ಮುಟ್ಟಿ ಹೃದಯದ ಹೊಡೆತ ಎಣಿಸಿ) ‘Have I blood – pressure too’ ಎಂದು ಅರುಂಧತಿಯ ಕಣ್ಣಿನ ಕರುಣರ ಸದ ತಂಪು ಬಿಂದುಗಳಿಂದ ತನ್ನ ಕೆನ್ನೆ ತೋಯಿಸಿಕೊಂಡ.

ಹಾವು ಸಾಯಬಾರದು – ಕೋಲು ಮುರಿಯಬಾರದು ಎಂದರೆ ಹೇಗೆ ಸಾಧ್ಯವಾದೀತು ಎಂದುಕೊಂಡು ಅರುಂಧತಿಯನ್ನು ಮತ್ತೆ ಹಾವು ಎಣೆಕಟ್ಟಿಕೊಳ್ಳುವಂತೆ ಮೈಗೆ ಮೈ ಬಿಗಿದು ಹಾಸಿಗೆಯಲ್ಲಿ ಹೊರಳಿದ. ನಿದ್ದೆ ಬರದಿರಲು ಕಾರಣ ಇನ್ ಸೋಮ್ನಿಯಾವೆ? – ಟಾಲ್‌ಸ್ಟಾಯಿಗೂ ಕೆಲವು ಕಾಲ ಹೀಗಾಗಿತ್ತಂತೆ ನಿಜವೆ? ಅವನ ಹಾಗೆ ಲೆಕ್ಕವಿರದಷ್ಟು ಪ್ರತಿಕೆಗಳಲ್ಲಿ ಅವನ ಫೋಟೋ ಅಚ್ಚಾಗಿ ಬಂದು ಎಲ್ಲರೂ ಬೆರಳುಮಾಡಿ ತನ್ನ ಕಡೆ – ಅರುಂಧತಿಯನ್ನು ಬಿಗಿದು ಬಿದ್ದುಕೊಂಡಾಗ ಯುಗದ ಮೇಲೆ ಯುಗ ಹೊರಳಿದರೂ ಪಾರ್ಕಿನಲ್ಲಿ ಕತ್ತಲಾದ್ದರಿಂದ ಯಾರಿಗೂ ಕಾಣದೆ – ಮೈ ನೂರು ಸಾವಿರ ಲಕ್ಷ ಕೋಟಿ ಕೋಟಿ ಹೊಸದಾಗಿ ಮರಳಿ ಹೊರಳಿ, ಎಲ್ಲ ಬೆರಳುಗಳೂ ಮೆಚ್ಚಿಕೆಯಲ್ಲಿ – ಲಕ್ಷಾಂತರ ಬೆರಳುಗಳು ಪೂರ್ವ ಪಶ್ಚಿಮ ದಕ್ಷಿಣ ಉತ್ತರ ಭೂಲೋಕ ಭುವರ್ಲೋಕ ಪಂಜರ ಹೆಣೆದು – ತಾನು ಮಹಾಕವಿ ರಾಜಣ್ಣ ಎಲ್ಲೋ ಮಧ್ಯೆ – ಪಾರ್ಕಿನಲ್ಲಿ ಭಿಕ್ಷೆಗೆ ಬಂದ ಕುರುಡು ಮುದುಕನ ಸುಕ್ಕುಗಟ್ಟಿದ ಮುಖಕ್ಕೆ ಮೂರು ಕಾಸುಬಿಕ್ಷೆ ಎಸೆದು (‘ಹೋಗಾಚೆ’) – ಕಾಮ, ಪೂರ್ಣ ವಿರಾಮ ಏನಿರದ ವಾಕ್ಯದಂತೆ ಉದ್ದ ಉದ್ದ ಜೀವನದುದ್ದ ಹಾಳೆ ಹಾಳೆ ಹರಿದೂ ಕೊನೆಯಾಗದೆ – ಮೃದುವಾದ ತೊಡೆಯನ್ನು ಕಬ್ಬಿಣದಂತಹ ತೊಡೆಗಳಿಂದ ಅವಚಿ ಅವಚಿ – ಹಾಸಿಗೆಯ ಪಕ್ಕದಲ್ಲಿ ಹಾವು ಹರಿದರೆ ಕತ್ತರಿಸಿ, ತುಂಡರಿಸಿ, ಸೀಳಿ ಸೀಳಿ ಸಿಗಿದು, ಕೊಚ್ಚಿ, ಕಡೆದು, ಆ ಗೃಧ್ರ ಅಪ್ಪನ ಕಣ್ಣಿಗೆ ಮಣ್ಣೆರಚಿ… ಮುಖ ಅಡಿಯಾಗಿ ಮಲಗಿದರೆ ನಿದ್ದೆ ಬಂದೀತೆಂದು ರಗ್ಗನ್ನು ಎಳೆದುಕೊಂಡು ಕೌಂಚಿ ಮಲಗಿದ. ನಿದ್ದೆಯಿರದ ಗೊಂಟರು ಕಪ್ಪೆಗಳು ಗೊಟರು ಹಾಕುತ್ತಲೇ ಇದ್ದುವು…

* * *

ಬೆಳಿಗ್ಗೆ ಎಂಟು ಗಂಟೆಗೆ ಸಕ್ಕರೆ ಕಂಪನಿ ಶಿಳ್ಳೆ ಹೊಡೆಯಲು ಎದ್ದುಕೂತು ಮೈ ಮುರಿದುಕೊಂಡ. ಬ್ರಷ್‌ಗೆ ಪೇಸ್ಟ್ ಅಂಟಿಸುತ್ತಿದ್ದಂತೆ ಪ್ರಾತಃಕಾಲಕ್ಕಿಂತ ಮುಂಚೆ ಎಚ್ಚರವೂ ಅಲ್ಲ ನಿದ್ದೆಯೂ ಅಲ್ಲದಹೊತ್ತಲ್ಲದ ಹೊತ್ತಿನಲ್ಲಿ ಯಾವ ಮಸುಕು ಮಸುಕು ಏನು ಅಸ್ಪಷ್ಟವಾಗಿ ಆಡಿತು ಎಂದು ಹುಡುಕತೊಡಗಿದೆ. “ಅಲ್ಲ ನನ್ನ ಹೆಸರು ರಾಜಣ್ಣ” ಎಂದಿದ್ದಕ್ಕೆ ನಕ್ಕಂತೆ ನೆನಪು – ಹಾಗೆಯೇ ಮಾಯವಾಗುತ್ತ ಮಸುಕು ಮಸಕು ಮುಖ (ಯಾರಿರಬಹುದು) ಏನೆಂದಿತು? “ಹದಿನೈದರ ತನಕ ರಾಜಣ್ಣ. ಆಮೇಲೆ ಹೈಸ್ಕೂಲು ಸೇರಿದ ಮೇಲೆ ಖೋಜಣ್ಣ” ಇದರ ಅರ್ಥವೇನಿರಬಹುದು ರಿಚರ್ಡ್ ಗ್ರಿನೋನ ಕಥೆಯನ್ನು ಓದಿದ್ದಕ್ಕೆ ಹಾಗಾಗಿರಬಹುದೆ? ಇವತ್ತೆ ಕ್ಷೌರಮಾಡಿಸಿಕೊಳ್ಳಲೊ – ಸಾಹಿತಿಗಳು ಕೂದಲು ಬಿಡುವುದು ಇತ್ತೀಚಿನ ಫ್ಯಾಷನ್ನು – ಹೀಗೆಯೇ ಇರಲಿ – ಎಂದು ಸ್ನಾನದ ಮನೆಗೆ ಹೋದ.

ಎರಡು ರೂಪಾಯಿ ಕೊಟ್ಟು ತಂದು ಓದಿದ “ಸೈಕಾಲಜಿ ಫಾರ್ ದಿ ಕಾಮನ್ ಮ್ಯಾನ್” ನಲ್ಲಿ ಬರದಿದ್ದಂತೆ ತಾನು ಹಾಗಾದರೆ ‘ಸ್ಟ್ಲಿಟ್ ಪರ್ಸನಾಲಿಟಿ; ಇರಬಹುದೆ? ಎಂದು ಮೈಗೆ ಸೋಪು ಹಚ್ಚಿಕೊಳ್ಳುತ್ತ ಮಧ್ಯಾಃನ ಲೈಫ್‌ಬಾಯ್ ಸೋಪು ಕೊಳ್ಳಬೇಕೆಂದು ಮತ್ತೆ ನೆನಪುಮಾಡಿಕೊಂಡ. ಹಾವಿನಂತೆಯೇ ಕಾಡಲು ಆ ಮಾತುಗಳು – “ಹದಿನೈದರ ತನಕ ರಾಜಣ್ಣ” – ಹೌದು ಪಾಠಗಳ ಮೇಲೆ ಅಷ್ಟು ಇಂತರೆಸ್ಟ್ ಇರಲಿಲ್ಲ – “ಹೈಸ್ಕೂಲು ಸೇರಿದ ಮೇಲೆ” – ಇದ್ದಕ್ಕಿದ್ದಂತೆ ಎಷ್ಟು ಬುದ್ಧಿವಂತನಾದೆ? ಅವತ್ತು ಅಪ್ಪ ಮೈಮುರಿಯ ಹೊಡೆದ ಮೇಲೆ ಬುದ್ದಿ ಬಂದ ಹೆಡ್‌ಮಾಸ್ಟರರೂ ಆದರ್ಶವಾದಿ ತರುಣ ಎಂದು ಸರಸ್ವತೀ ಪೂಜೆಯ ದಿನ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಎದಿರು ಹೊಗಳಿದಾಗ ಎಷ್ಟು ಮೈ ಉಬ್ಬಿತ್ತು? ಆಮೇಲೆ ಉಪನಯನವಾದ ಮೇಲೆ ಎರಡನೇ ಜನ್ಮ ಪಡೆದು ಬ್ರಹ್ಮಚರ್ಯದ ಅವಶ್ಯಕತೆಯನ್ನು ಹೆಣ್ಣು ಮುಖದ ನಾಣಿಗೆ ಮನದಟ್ಟು ಮಾಡಿ ಅವನ ಸಂಗ ತೊರೆಯಲು ಪ್ರಯತ್ನಿಸಿದ್ದೂ ಆಗಲೆ – ಆದರೂ ಹುಡುಗರೆಲ್ಲ ಎಷ್ಟು ಗೇಲಿಮಾಡುತ್ತಿದ್ದರು? ತನಗೊಂದು ಅಡ್ಡ ಹೆಸರು – ಕಲ್ಲುಗುಡ್ಡ – ಕಲ್ಲುಗುಡ್ಡ – ನಾಣಿಯ ಜೊತೆ ಗುಟ್ಟಾಗಿ ಕೂಡುತ್ತಿದ್ದ ಜಾಗ, ಯಾರು ಪತ್ತೆ ಮಾಡಿದ್ದೊ! ಒಂದೂ ಆಟವಾಡುತ್ತಿರಲಿಲ್ಲ. ಪೋಲಿ ಮಾತುಗಳನ್ನು ಕಿವಿಗೂ ಹಾಕಿಕೊಳ್ಳುತ್ತಿರಲಿಲ್ಲ. ಒಬ್ಬಂಟಿಗನಾಗಿ ಸ್ವಾಮಿ ರಾಮಕೃಷ್ಣ, ವಿವೇಕಾನಂದ, ಶಿವಾನಂದರನ್ನು ಓದಿ ಊಧ್ವಾಭಿಮುಖ ಚೇತನಿಯಾಗಿ ಬೆಳೆಯಲು ವಿಶ್ವಪ್ರಯತ್ನ ಪಡುತ್ತಿದ್ದಾಗಲೂ ಆ ನಾಣಿಯಿಂದ ಅಂಟಿದ ಪಾಪ ಎಷ್ಟು ಕಾಡುತ್ತಿತ್ತು? ಅವನ ಬ್ರಹ್ಮಚರ್ಯ, ಆದರ್ಶ ಜೀವನ ಮನಸಾರೆ ಹೊಗಳುತ್ತಿದ್ದ ಹೆಡ್ ಮಾಸ್ಟರಿಗೆ ಎರಡನೇ ಹೆಂಡತಿಯಿಂದ ಐವತ್ತನೆಯ ವಯಸ್ಸಿನಲ್ಲೂ ಯಾಕೆ ಮಗುವಾಯಿತು? – ಹುಡುಗರು ಗುಸುಗುಸು ಮಾತನಾಡಿ ಹಾಸ್ಯ ಮಾಡುತ್ತಿದ್ದರೂ ಅವನು ಮಾತ್ರ ಗುರುದೇವೋಭವ ಎಂದು ಸುಮ್ಮನಾಗಿದ್ದ. ಹೆಡ್ ಮಾಸ್ಟರರ ಆದರ್ಶಮಯತೆಗಿಂತ ಹೆಚ್ಚು ಆಕರ್ಷಕಳಾಗಿದ್ದ ಅವರ ಮಗಳಾದ ಅರುಂಧತಿಗೆ ಆಗ ವಯಸ್ಸು ಹದಿಮೂರು, ಕಚ – ದೇವಯಾನಿ ಕಥೆ ಓದುತ್ತಿದ್ದ ಅವನಿಗೆ ತಾನು – ಅವಳು ಹಾಗೆ ಎನ್ನಿಸಿ ‘ಪದ್ಯ ಬರೆಯಲೇ’ ಎನ್ನಿಸುವದಷ್ಟು ದುಃಖವಾಗಿತ್ತು. ಆದರೆ ‘ಭಟ್ಟಿ ವಿಕ್ರಮಾದಿತ್ಯ ವಿಜಯ ಕದ್ದು ಓದುತ್ತಿದ್ದ ಅರುಂಧತಿಗೆ ಮನೆಗೆ ಬರುತ್ತಿದ್ದ ರಾಜಣ್ಣನ ಬಗ್ಗೆ ಏನು ಏನೋ ಅನ್ನಿಸುತ್ತಿತ್ತು. ಪುಸ್ತಕಗಳ ನಡುವೆ ಅದಲು ಬದಲಾದ ಪತ್ರಗಳಲ್ಲಿ ಸೂಚಿತವಾದಂತೆ ಹೆಡ್ಮಾಸ್ಟರಿಲ್ಲದ ಒಂದು ದಿನ ಇಬ್ಬರೂ ಗುಟ್ಟಾಗಿ ಸಂಧೀಸಿದಾಗ ಗುರುಪುತ್ರಿ ಸಹೋದರಿ ಇದ್ದಂತೆ ಎಂದು ಬೋಧಿಸಿದ. ‘ನಿರ್ವ್ಯಾಜ ಪ್ರೇಮದಿಂದ ನಿನಗೆ ಮುತ್ತಿಡುತ್ತೇನೆ” ಎಂದು ಅವಳನ್ನು ತುಟಿಯ ಮೇಲೆ ಚುಂಬಿಸಿ ಸ್ವಂತ ಸಹೋದರಿಯಿಂದ ಎಂದೂ ಬಯಸದಿದ್ದ ಸುಖ ಪಡೆದ – ಆಗಾಗ ಸಮಯ ಸಿಕ್ಕಾಗ ಪಡೆಯುತ್ತಿದ್ದ. ಜೊತೆಗೆ ತಾನು ಕಾಮದ ಕೆಸರಿನಿಂದ ಅರುಂಧತಿಯನ್ನು ಮೇಲಕ್ಕೆತ್ತಿದ ಕಥೆಯನ್ನು, ಅದರಲ್ಲಿ ತಾನು ತೋರಿಸಿದ ಸಂಯಮವನ್ನು ಗೆಳೆಯರ ಇದಿರು ನೀರು ತುಂಬಿದ ಕಣ್ಣಿನಿಂದ ಹೇಳುತ್ತಿದ್ದಾಗ – ಆ ಸಂಜೆ – ಕ್ರಿಕೆಟ್ ಛಾಂಪಿಯನ್‌ಕಿಟ್ಟಿ – ಹೋ ಹೋ ಎಂದು ಬಿದ್ದು ಬಿದ್ದು ನಕ್ಕು… ಏನೆಂದಿದ್ದ? ಟರ್ಕಿಟವಲಿನಿಂದ ಮೈ ಒರೆಸಿಕೊಳ್ಳುತ್ತ ದೋಬಿ ಇನ್ನೂ ಯಾಕೆ ಬಟ್ಟೆ ತರಲಿಲ್ಲವೆಂದು ಯೋಚಿಸುತ್ತಿದ್ದ ರಾಜಣ್ಣನಿಗೆ ಕನಸಿನಲ್ಲಿ ನಕ್ಕಿದ್ದ ಮಸುಕು ಮಸುಕು ಮುಖ ಸ್ಪಷ್ಟವಾಯಿತು.

ಮೂರು ಮಕ್ಕಳ ತಂದೆಯಾಗಿ ಎಲ್ಲೋ ಕ್ಲಾರ್ಕ್‌ಆಗಿರುವ ಕಿಟ್ಟುವೆಲ್ಲಿ? ಅವನೆಲ್ಲಿ? ಅವನು ವಿಶ್ವವಿದ್ಯಾಲಯದ ಪದವೀಧರನಾಗಿ, ಬಂಗಾರದ ಪದಕವನ್ನು ಪಡೆದು ಉದ್ದಾಮ ಸಾಹಿತಿಯಾಗುವ ಭವಿಷ್ಯವನ್ನು ಎದುರಿಗಿಟ್ಟುಕೊಂಡು ಈಗ ಇಲ್ಲಿ ಕನ್ನಡಿಯ ಎದಿರು ಕ್ರಾಫನ್ನು ಓರಣವಾಗಿ ಬಾಚಿಕೊಳ್ಳುತ್ತಿದ್ದಾನೆ. ಕಿಟ್ಟುವೆಲ್ಲಿ? ಅವನೆಲ್ಲಿ? – ಎಲ್ಲಿ ಎಂದು ಹುಡುಕಿ ಕೋಟಿನ ಜೇಬಿನಿಂದ ವಾಚು ತೆಗೆದ.

ನೋಡಿದಾಗ ಅದು ಹನ್ನೆರಡಕ್ಕೇ ನಿಂತಿತ್ತು. ಕೂಡಲೇ ಹಳೆಯ ಟ್ರಂಕಿನೊಳಗೆ ಹತ್ತುವರ್ಷದಿಂದ ಮುಟ್ಟದ ಒಂದು ಹಳೆಯ ದುಂಡನೆಯ ವೆಸ್ಟ್‌ಎಂಡ್ ಕೀಪ್‌ಸೇಕ್ ವಾಚಿದೆ ಎಂದು ನೆನಪಾಯಿತು. ಹಳೆಯ ವಸ್ತುಗಳನ್ನು ನೋಡಬೇಕೆನಿಸುವಾಗ ಅನ್ನಿಸುವ ಸಂತೋಷದಿಂದ ಅದನ್ನು ಹುಡುಕಿ ತೆಗೆದ. ಅದೂ ಹನ್ನೆರಡಕ್ಕೇ ಯಾಕೆ ನಿಂತಿದೆ ಎಂದು ಆಶ್ಚರ್ಯವಾಯಿತು. “ಕೀ ಕೊಟ್ಟುದಿದಕ್ಕೆಷ್ಟು ಜನ್ಮದಾಚೆ” ಎಂದು ಕವನ ಒಂದರ ಸಾಲನ್ನು ಚಪ್ಪರಿಸುತ್ತ ಕೀ ಕೊಟ್ಟರೂ ಹಳೆಯ ವಾಚು ನಡೆಯಲಿಲ್ಲ.

ಮೇಜಿನ ಮೇಲಿದ್ದ ಡಾಕ್ಟರೇಟ್ ಥೀಸಿಸ್ಸನ್ನು ತೆಗೆದು ಬೀರುವೊಳಗಿಟ್ಟ. ಗಾಜಿನ ಹರಳೊಂದನ್ನು ಮೇಜಿನ ಮೇಲಿಟ್ಟು ಟ್ರಂಕಿನಿಂದ ಐಗ್ಲಾಸ್ ತೆಗೆದು ಕಣ್ಣಿಗೆ ಸಿಕ್ಕಿಸಿ ವಾಚನ್ನು ವಿಚಿತ್ರ ಸಂತೋಷದಿಂದ ಬಿಚ್ಚತೊಡಗಿದ. ಎಂಟು ಹತ್ತು ವರ್ಷಗಳಿಂದ ಮುಟ್ಟದಿದ್ದ ಹತರಿಗಳನ್ನು ಹಿಡಿಯುವುದೇ ಎಷ್ಟೋ ಖುಷಿಯಾಗಿ ವಾಚಿನ ಅವಯವಗಳ ವಿಚಿತ್ರ ಸಂಗದಲ್ಲಿ ಏಕಾಗ್ರಚಿತ್ತನಾದ. ಆಗ ಅವನ ಚಿತ್ರದ ಇನ್ನೊಂದು ಅಂಚು ಅರುಂಧತಿಗೂ ಅವನಿಗೂ ನಡುವೆ ನಡೆದಿದ್ದ ಪ್ರಣಯ ಪ್ರಸಂಗದ ಹಾಳೆಗಳನ್ನು ಓದತೊಡಗಿತು.

ಓದತೊಡಗಿತು – ಯಾಕೆಂದರೆ ನಡೆದದ್ದೆಲ್ಲ ಕಾಗದಗಳ ಮುಖಾಂತರವೆ. ಇಂಟರ್ ಮೀಡಿಯೆಟ್ ಕಾಲೇಜಿನ ಐನೂರಕ್ಕೂ ಮೇಲೆ ಸೇರುತ್ತಿದ್ದ ಚರ್ಚಾ ಗೋಷ್ಠಿಗಳಲ್ಲಿ ಕೈಚಪ್ಪಾಳೆ ಸೇವೆ ಪಡೆಯುತ್ತಿದ್ದ ಗುಂಗುರುಕೂದಲಿನ ಟೊಮ್ಯಾಟೋ ಕೆಂಪಿನ ಕೆನ್ನೆಗಳ ಮುದ್ದು ಮುಖದ ರಾಜಣ್ಣನನ್ನು ಅರುಂಧತಿ ಕಣ್ಣಿನ ನೋಟದಲ್ಲಿ ಕುಡಿಯುತ್ತಿದ್ದಳು. ಅಜಾತಶತ್ರು – ಸದಾ ನಗುಮುಖ – ಆದರ್ಶ ಜೀವಿ – ಯಾರಿಗೂ ನೋವು ಮಾಡಲಾರದ ಕೋಮಲತೆ – ಸರ್ವಗುಣ ಸಂಪನ್ನ – ಪೋಲಿಗಳ ಕಾಟಕ್ಕೆ ಬೇಸರಗೊಂಡಿದ್ದ ವಿದ್ಯಾರ್ಥಿನಿಯರ ಕಣ್ಣುಗೊಂಬೆ – ಬಿರುದಾಂಕಿತನಾಗಿದ್ದ ರಾಜಣ್ಣ ಕವನ ಸಂಗ್ರಹಗಳ ನಡುವೆ ‘ಅಯ್ಯೋ ಹಾಳು ಸಮಾಜ ನಮ್ಮಿಬ್ಬರ ಕಾಮಕಲುಷಿತವಲ್ಲದ ಪ್ರೇಂವನ್ನು ಅರ್ಥಮಾಡಿಕೊಳ್ಳಲಾರದಲ್ಲ!’ ಎಂದು ಅವನ ಮುದ್ದಾದ ತಿಳಿಗನ್ನಡದಲ್ಲಿ ಬರೆದಿಟ್ಟ ಕಾಗದಕ್ಕೆ ಪ್ರತಿಯಾಗಿ ಅವಳು – ‘ಹೌದಲ್ಲಾ’ ಎಂದು ಕಣ್ಣೀರಿಡುತ್ತಿದ್ದಳು. ‘ಕಮ್ಯೂನಿಸ್ಟ್’ ನಾಗಲೇ ಎಂಬ ಅವನ ನವ್ಯರೀತಿಯಿಂದ ಅಭಿವ್ಯಕ್ತವಾಗುತ್ತಿದ್ದ ದುಗುಡಕ್ಕೆ “ನೀವು ಏನಾದರೂ ನಿಮ್ಮ ಹಿಂದೆ ನಾನಿರುತ್ತೇನೆ” ಎಂದುಅ ವಳು ಹೆಣ್ಣು ಅಬಲೆಯಲ್ಲ ಎನ್ನುವ ಆಶ್ವಾಸನೆಯಿತ್ತಳು. ಇತ್ಯಾದಿ ಇತ್ಯಾದಿಗಳ ನಡುವೆ ಧೈರ್ಯ ಮಾಡಿ ಅನುಮಾನ ಪಡುತ್ತ ತಮ್ಮ ಗುರುದೆಸೆ ಕಳೆದುಕೊಂಡು ಹೆಡ್ಮಾಸ್ಟರರ ಮನೆಗೆ ಹೋದ. ಅವ್ಯಾಜಪ್ರೇಮದ ಸಂಕೇತವಾಗಿ ಶೆಲ್ಲಿಯ ಕವನಗಳನ್ನು ಓದತೊಡಗಿದ. ಆಗ ಬೊಗಸೆ ಕಣ್ಣುಗಳಿಂದ ಅವನನ್ನು ಕುಡಿಯುತ್ತಿದ್ದ ಅರುಂಧತಿಯನ್ನು ಸುಮ್ಮನೆ ನೋಡಲಾರದೆ ಕವನಸಂಗ್ರಹ ಕೈಜಾರಲು ಹಠಾತ್ತನೆ ಎದ್ದು ತಬ್ಬಿಕೊಂಡು ಅವಳು ನೋವಿನಿಂದ ‘ಹಾಯ್’ ಎನ್ನುವಷ್ಟು ಅವಳ ಕೆಂಪು ತುಟಿಗಳನ್ನು ಯಾಕೆ ಕಚ್ಚಿದೆನೋ ಏನೋ! ಆಗ ಅವಳು ಭಯಚಕಿತ ಹರಿಣಿಯಂತೆ ಬಿಡಿಸಿಕೊಂಡು ಸೀರೆಯ ಸೆರಗನ್ನು ಸರಿಮಾಡಿಕೊಂಡು, ಕೆದರಿದ ಕೂದಲನ್ನು ಹಿಂದಕ್ಕೆ ತಳ್ಳಿ, ಕುಂಕುಮ ಅಳಿಸಿತೇ ಎಂದು ಎಚ್ಚರಿಕೆಯಿಂದ ಬೆರಳಿಟ್ಟು ನೋಡಿ ‘ಅಯ್ಯೋ ಅಣ್ಣ ನೋಡಿದರೆ ಏನು ಗತಿ’ ಎಂದಳು. ಆಗ ನಿರುಪದ್ರವಿ, ಅಜಾತಶತ್ರು, ಆದರ್ಶಜೀವಿ ಇತ್ಯಾದಿ ರಾಜಣ್ಣ ‘ಈ ಕಾಮದಿಂದ ಜೀವವಿಡೀ ಪಾರಾಗಲಾರದ ಈ ಪಾಪಿಯನ್ನು ಕ್ಷಮಿಸು’ ಎಂದು ಗದ್ಗದ ಕಂಠದಿಂದ ಬೇಡಿಕೊಂಡು ಅರುಂಧತಿಗೆ ಅವಮಾನ (ಜೊತೆಗೆ ಅಸಮಾಧಾನವೊ) ಆಗುವಂತೆ ಮಾಡಿದ. ಇತ್ಯಾದಿ ಇತ್ಯಾದಿಗಿಂತ ಹೆಚ್ಚೇನೂ ನಡೆಯದೆ ಕಾಲ ಸುಗಮವಾಗಿ ಕಳೆಯಿತಲ್ಲವೆ?…

ಎಂದು ಯೋಚಿಸುತ್ತ ವಾಚಿನ ಒಂದೊಂದೇ ಮೂಳೆಯನ್ನು ಜೋಡಿಸುತ್ತಿದ್ದ ರಾಜಣ್ಣನಿಗೆ ತಮ್ಮ ಪ್ರಣಯ ಆಮೇಲೆ ಅನ್ನಮಯ ಕೋಶದಿಂದ ಆನಂದಮಯ ಕೋಶಕ್ಕೆ ಕಂಬಳಿ – ಹುಳ ಬಣ್ಣ ಬಣ್ಣದ ಚಿಟ್ಟೆಯಾಗುವಂತೆ ಬದಲಿಸಿತು ಎಂದು ಸಮಾಧಾನವಾಯಿತು. ಇವನು ಡಿಕನ್ಸ್, ವರ್ಡ್ಸ್‌‌ವರ್ತ್ ಇತ್ಯಾದಿ ಬರಹಗಾರರನ್ನು ಓದಿ ಅವಳಿಗೂ ಓದಿಸಿದ. ಗಂಡು ಹೆಣ್ಣುಗಳ ಮಿಲನದಿಂದ ಸಂತಾನ ಉಂಟಾಗುವುದು ಎಂಬ ಎಲ್ಲರಿಗೂ ಗೊತ್ತಿರುವ ಸತ್ಯವನ್ನು ಅರಿತುಕೊಂಡು ಅರುಂಧತಿಯ ಜೊತೆ ಬರೆ ಕಲ್ಪನಾವಿಹಾರಿಯಾದ. ಅಲೆಯುವ ಕಣ್ಣುಗಳು ಒಮ್ಮೊಮ್ಮೆ ಅರುಂಧತಿಗಿಂತಲೂ ಚೆಲುವೆಯರು ಇದ್ದಾರೆ ಎಂದು ಗುರುಸಿದರೂ ಅರುಂಧತಿಯಿಂದ ಪಡೆಯಲು ಸಾಧ್ಯವಾದಂತಹ ನಿರ್ವ್ಯಾಜ ಪ್ರೇಮ ಅವರಿಂದ ದೊರೆಯಲಾರದು ಎಂದು ಸುಮ್ಮನಾದ. ಎರಡು ವರ್ಷದ ಕೆಳಗೆ ಅವಳಿಂದ ದೂರವಾಗುವ ದುಃಖಮಯ ಸನ್ನಿವೇಶ ಒದಗಿದಾಗ “ನಮ್ಮ ಪ್ರೇಮ ಪವಿತ್ರವಾದುದು. ಮದುವೆಯಾಗಿ ಅದನ್ನು ಸಾಂಸಾರಿಕ ಕೊಚ್ಚೆಗೆ ಎಳೆಯುವುದು ಬೇಡ” ಎಂದು ಬರೆದಿದ್ದ. ಆದರೂ ಕೆಲವೊಮ್ಮೆ ಅವಳು ಬೇರೆ ಯಾವ ಬಕರನನ್ನಾದರೂ ಮದುವೆಯಾಗುವಂತಹ ಕೆಳಮಟ್ಟಕ್ಕಿಳಿದರೆ ಏನು ಗತಿ ಎನ್ನುವ ಭಯ ಅವನಿಗೆ ಯಾಕೆ ಬರುತ್ತಿತ್ತೊ ಏನೊ! ಆದರೆ ಸಂಶಯಕ್ಕೆ ಅಸ್ಪದಕೊಡದಂತೆ ಅಹಲ್ಯೆ, ದ್ರೌಪದಿ, ಸೀತೆ, ತಾರೆ, ಮಂಡೋದರಿಯನ್ನು ಮೀರಿಸಿದ್ದಳು. ಆಮೇಲೆ ಅವರಿಬ್ಬರ ನಡುವೆ ಮನಸ್ಸು ಆತ್ಮ ಅಂತರಾತ್ಮರಿಗೆ ಸಂಬಂಧ ಪಟ್ಟಂತೆ – ಪ್ರಕಟವಾದರೆ ಕೀಟ್ಸ್‌ನ ಪ್ರಣಯಪತ್ರಗಳನ್ನೂ ಮೀರಿಸುವಂತಹ ಅನೇಕ ಕಾಗದಗಳು ಆಗಿಹೋದವು,ಇವೆಲ್ಲ ವಿಷಯಗಳನ್ನೂ, ತಾನು ಬರೆದು ಕಾಪಿ ಎತ್ತಿಕೊಂಡಿದ್ದ ಕಾಗದಗಳನ್ನೂ ಸಹ, ಅನೇಕ ಬಾರಿ ಆತ್ಮೀಯ ಗೆಳೆಯರ ಎದುರಿಗೆ ಭಾವನಾವೇಶದಿಂದ ಬಿಚ್ಚಿತೋರಿಸಿ ಸಂತೋಷಪಡುತ್ತಿದ್ದ. ಎಲ್ಲರ ಅಭಿವ್ಯಕ್ತಿಯನ್ನು ಕೊಟ್ಟಿದ್ದ. ವಾರಪತ್ರಿಕೆಯೊಂದು ವಿಮರ್ಶೆಯಲ್ಲಿ ಆ ಕವನಗಳ ಹಿಂದಿರುವ ಪ್ರೇಮ ಸ್ವರ್ಗೀಯವೆಂದು ಮೆಚ್ಚಿ ಎಲ್ಲರ ಮನೆಯಲ್ಲೂ ಇರಬೇಕಾದ ಪುಸ್ತಕವಿದು ಎಂದಿತ್ತು.

ವಾಚು ರಿಪೇರಿ ಮುಗಿಯುತ್ತಿದ್ದಂತೆ ಮನಸ್ಸು ಮತ್ತೆ ಹಿಂದೆ ಹಿಂದೆ ಹೈಸ್ಕೂಲಿಗೂ ಹಿಂದೆ ಹೋಗಿ ತಂದೆಯ ಕುಪಿತ ಮುಖವನ್ನು ನೋಡಿತು. “ಏನು ಮಾಡ್ತಿದಿಯೋ ಮುಂಡೇದೆ. ಕ್ಲಾಸಿಗೆ ಚಕ್ಕರ್ ಹಾಕಿ ಸೈಕಲ್ ರಿಪೇರಿ ಮಾಡ್ತ ಕೂತಿದೀಯಾ – ನಿನ್ನ ಮೂಳೆ ಪುಡಿಪುಡಿ ಮಾಡ್ದೆ ಇರ‍್ತೀನೀಂತ ತಿಳ್ದಿದಿಯಾ” ಎಂದು ಬೆನ್ನಿನ ಮೇಲೆ ಕತ್ತಿನ ಮೇಲೆ ಕಾಲಿನ ಮೇಲೆ ಸೊಂಟಕ್ಕೆ ‘ಅಯ್ಯೊ’ ಎನ್ನುವಷ್ಟು ಏಟು ಬಿದ್ದಿತು. ಆಮೇಲೆ ನಾನು ಈ ರಿಪೇರಿ ಕೆಲಸಕ್ಕೆ ಕೈಹಾಕಲಿಲ್ಲ ಅಲ್ಲವೇ ಎಂದು ಯೋಚಿಸಿ ತಲೆ ಕರೆದುಕೊಳ್ಳುತ್ತ ವಾಚನ್ನು ಕೈಗೆತ್ತಿಕೊಂಡ. ಆದರೂ ಹತ್ತು ವರ್ಷದ ಕೆಳಗಿದ್ದ ರಿಪೇರಿಯಲ್ಲಿನ ಆಸಕ್ತಿ ಇನ್ನೂ ತನ್ನಿಂದ ಹೋಗಿಲ್ಲವಲ್ಲ ಎಂದು ಸಮಾಧನ ಪಟ್ಟು ವಾಚಿಗೆ ಕೀ ಕೊಟ್ಟ.

ಕಿವಿಯ ಹತ್ತಿರ ಹಿಡಿದು ಕುಲುಕಿದ. ಹತ್ತು ವರ್ಷ ನಿಂತಿದ್ದ ವಾಚು ಮತ್ತೆ ನಡೆಯತೊಡಗಿತು.

ಇದ್ದಕ್ಕಿದ್ದಂತೆ ಒಂದುದುಷ್ಟ ಯೋಚನೆ ಲಗ್ಗೆ ಹತ್ತಿ ನಿಧಾನ ಮನಸ್ಸಿನ ಒಳಗೆ ಕಳ್ಳ ಹೆಜ್ಜೆ ಹಾಕಿತು. “ಕೀಟ್ಸ್‌ಕವಿಯ ‘ಓಡು’ಗಳನ್ನು ಓದುವುದಕ್ಕಿಂತಲೂ ವಾಚು ರಿಪೇರಿ ಮಾಡುವುದೇ ಹೆಚ್ಚು ಸಂತೋಷ ತರುತ್ತದಲ್ಲ,ಯಾಕೆ?” ಕಳ್ಳ ಹೆಜ್ಜೆಹಾಕುತ್ತ ಬಂದುದು ಮಂಗನಂತೆ ಪೀಠವನ್ನೂ ಏರಿ ಕೂತೇಬಿಟ್ಟಿತು. ಹೋಗೆಂದರೂ ಹೋಗಲಿಲ್ಲ. ಕಲಿತುಕೊಂಡಿದ್ದ ಮನೋವಿಶ್ಲೇಷಣೆಯ ಸಹಾಯದಿಂದ ಏನಿರಬಹುದೆಂದು ವಿಮರ್ಶಿಸಿದ. “ವಾಚು ರಿಪೇರಿಯಲ್ಲಿ ಖುಷಿಯಾಗುವವನು ರಾಜಣ್ಣನೆ? – ಆದರೆ ಅರುಂಧತಿಯ ಪವಿತ್ರ ಪ್ರೇಮದಲ್ಲಿ, ಎಂ. ಎ. ಪದವಿ ತಂದ ಸಾಹಿತ್ಯದಲ್ಲಿ, ಆಸಕ್ತಿ ಇರುವವನು, ಅಜಾತಶತ್ರು, ನಿರುಪದ್ರವಿಇತ್ಯಾದಿ ಬಿರುದಾಂಕಿತನಾದ ಖೋಜಣ್ಣನಿರಬಹುದೆ?” ಆದರೆ – ಈ ಮನೋವಿಶ್ಲೇಷಣೆಯ ಮಾರ್ಗವನ್ನಾದರೂ ಒಪ್ಪುವುದು ಹೇಗೆ? ಅದು ಸಂಕೀರ್ಣವೂ ಜಟಿಲವೂ ಆದ ಮನುಷ್ಯ ಚೇತನವನ್ನು ಅತಿ ಸುಲಭ ಮಾಡಿ ನೋಡುತ್ತದಲ್ಲವೆ? – ಎಂದು ಮತ್ತೊಂದು ವಾದ ಮುಂದೆ ಬಂದಿತು.

ವಾಚನ್ನು ಕೈಗೆ ಕಟ್ಟಿಕೊಂಡ. ‘ಟಿಕ್ ಟಿಕ್’ ಎಂದು ಅದು ಚೆನ್ನಾಗಿ ಸೆಕೆಂಡು ನಿಮಿಷ ಗಂಟೆ ಎಲ್ಲ ಮುಳ್ಳುಗಳಲ್ಲೂ ಸರಿಯಾಗಿ ಕೆಲಸಮಾಡುತ್ತಿತ್ತು. ಆಟೋ ಮ್ಯಾಟಿಕ್ ವಾಚುಗಳ ಯಂತ್ರ ಹೇಗಿರಬಹುದು ಎಂಬ ಯೋಚನೆ ಬಂದಿತು. ಲೈಬ್ರರಿಗೆ ಹೋಗಲು ಮನಸ್ಸಾಗಲಿಲ್ಲ. ಸೈಕಲ್ಲಿಗೆ ಓವರ್ ಆಯಿಲ್ ಮಾಡದೆ ಬಹಳ ದಿನವಾಯಿತು ಎಂದು ನೆನಪಾಯಿತು. ಸ್ಪ್ಯಾನರನ್ನು ತೆಗೆದು ಸೈಕಲ್ಲಿನ ಪಾರ್ಟುಗಳನ್ನು ಬಿಚ್ಚುತ್ತ ಅದರಲ್ಲೆ ಏಕಾಗ್ರಚಿತ್ತನಾಗಿ ಕೂತುಬಿಟ್ಟ.

* * *

ಮಾರನೆ ದಿನ ಬೆಳಿಗ್ಗೆ ಸಕ್ಕರೆ ಕಂಪೆನಿ ಸೀಟಿಹಾಕುವುದಕ್ಕಿಂತಲೂ ಮುಂಚೆ ಎದ್ದು ಒಳಗಿನಿಂದ ನಿಧಾನವಾಗಿ ತನ್ನಲ್ಲಿ ಏನೋ ಪರಿವರ್ತನೆಯಾಗುತ್ತಿದೆಯಲ್ಲವೇ ಎಂದು ಯೋಚಿಸುತ್ತ ಕಾಲುಗಂಟಿನ ಮೇಲಿನ ಎಕ್ಸಿಮಾವನ್ನು ತುರಿಸಿಕೊಂಡ. ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಇನ್ಸ್‌ಪೆಕ್ಟರನ್ನು ಕಂಡಾಗ ನಮಸ್ಕಾರ ಎಂದು ಎಂದಿನಂತೆ ಹಲ್ಲು ಕಿರಿಯುವ ಮನಸ್ಸೇ ಆಗಲಿಲ್ಲ. ಆ ಅಲ್ಪನನ್ನು ಮೆಚ್ಚಿಸಿ ನನಗೇನಾಗಬೇಕಾಗಿದೆ ಎಂದು ಹಲ್ಲುಜ್ಜಿಕೊಳ್ಳುತ್ತ ಹಿತ್ತಿಲ ಬಾಗಲಲ್ಲಿ ನಿಂತಿದ್ದವನಿಗೆ ಅವರ ಹೆಂಡತಿ ಸ್ನಾನದ ಮನೆಗೆ ಹೋದುದು ಕಾಣಿಸಿತು. ನಿಂತಲ್ಲಿಂದಲೇ ಸ್ನಾನದ ಮನೆಯ ಒಳಭಾಗ ಕಾಣುವಂತಿದ್ದರೆ ಎಂದು ಆಕೆ ಬೆತ್ತಲೆಯಾಗುವ ಚಿತ್ರ ಕಲ್ಪಿಸಿಕೊಂಡು ಜೊಲ್ಲು ಸುರಿಸಿದ. ಇನ್ಸ್‌ಪೆಕ್ಟರರು ಡ್ಯೂಟಿಗೆ ಹೋದಾಗ ಆಕೆ ಮನೆಯಲ್ಲಿ ಒಬ್ಬಳೇ ಇರುತ್ತಾಳೆ ಎನ್ನಿಸಿ ಸಂತಾನ ನಿಯಂತ್ರಣದ ಅವಶ್ಯಕತೆಯೂ ಇಲ್ಲ ಎಂದು ಸಮಾಧಾನಗೊಂಡ. ಅರುಂಧತಿಗಿಂತ ಎಲ್ಲ ಹೆಂಗಸರೂ ಯಾಕೆ ಚೆನ್ನಾಗಿ ಕಾಣಿಸುತ್ತಾರೆಂದು ಯೋಚಿಸುತ್ತ ನಿತ್ಯದಂತೆ ನುಣ್ಣಗೆ ಮುಖಕ್ಷೌರ ಮಾಡಿಕೊಂಡು. ಮೂತಿಯನ್ನು ಮಂಗನಂತೆ ಚೂಪುಮಾಡಿ ಕನ್ನಡಿಯಲ್ಲಿ ಸ್ವರೂಪ ನೋಡಿಕೊಳ್ಳತೊಡಗಿದ – ಇಷ್ಟು ದಿನಗಳ ತನಕವೂ ನನಗೆ ನಾನೇ ಮೋಸ ಮಾಡಿಕೊಂಡೆನಲ್ಲಾ ಎಂದು ಅತೀವವಾಗಿ ಸಂಕಟವಾಗಿ, ಕಾಫಿ ಕುಡಿದು, ಬಂದು ಬಿದ್ದಿದ್ದ ವಾರಪತ್ರಿಕೆಯಲ್ಲಿ ‘ಇಂದಿನ ನಾಗರಿಕತೆಗೆ ಬುದ್ಧನ ಸಂದೇಸ’ ಎಂಬ ತಾನು ಬರೆದ ಲೇಖನವನ್ನು ನೋಡಿದ. ಲೇಖಕರನ್ನು ಪರಿಚಯ ಮಾಡಿಕೊಡುತ್ತ ಸಂಪಾದಕರು, “ಕನ್ನಡಿಗರಿಗೆ ಚಿರಪರಿಚಿತರಾದ ರಾಜಣ್ಣನವರು ಚಿಕ್ಕ ವಯಸ್ಸಿನಲ್ಲಿಯೇ ಇಂಗ್ಲಿಷ್ ಕನ್ನಡ ಸಂಸ್ಕೃತಗಳಲ್ಲಿ ಆಳವಾದ ಪಾಂಡಿತ್ಯವನ್ನು ಸಂಪಾದಿಸಿದ್ದಾರೆ… ಸದ್ಯಕ್ಕೆ ಡಾಕ್ಟರೇ     ಟ್‌ಗೆ ಸುಪ್ರಸಿದ್ಧ ಕನ್ನಡ ಸಾಹಿತಿ ಡಾಕ್ಟರ್ ದ್ವಾರಕಾನಾಥರಂತಹ ಮೇಧಾವಿಗಳ ಕೆಳಗೆ ಓದುತ್ತಿದ್ದಾರೆ… ಸ್ನೇಹಶೀಲರೂ ಸಜ್ಜನರೂ ಆದ ರಾಜಣ್ಣನವರಿಗೆ ಉಜ್ವಲ ಭವಿಷ್ಯವಿದೆ ಎಂದರೆ ತಪ್ಪಾಗಲಾರದು. ಸಿರಿಗನ್ನಡಂಗೆಲ್ಗೆ… ’ ಇತ್ಯಾದಿ ಬರೆದಿದ್ದರು – ಲೇಖನವನ್ನು ಅರುಂಧತಿ ಓದಿ ಮೆಚ್ಚಿಕೊಳ್ಳಬಹುದಲ್ಲವೆ ಎನ್ನಿಸಿ ರಾಜಣ್ಣನಿಗೆ ಖುಷಿಯಾಯಿತು.

ಆದರೆ ಕೂಡಲೇ ಮತ್ತೊಂದು ಹಾಳು ಯೋಚನೆ ಹುಗಿದ ಹೆಣದ ಮೇಲಿನ ಕೆಮ್ಮಣ್ಣನ್ನು ನಾಯಿ ಕೆದರುವಂತೆ ಮನಸ್ಸನ್ನು ತೋಡಿತು. “ಇದು ನಿಜವಾಗಿ ನನ್ನ ಲೇಖನವೆ? ಅವರಿವರ ಎಂಜಲನ್ನು ಖೋಜಣ್ಣ ಜನಪ್ರಿಯವಾಗಲೆಂದು ಹೆರಕಿ ಬರೆದಿದ್ದಲ್ಲವೆ” ಎಂದು ಜಿಗುಪ್ಸೆಯಾಗಿ ಪತ್ರಿಕೆಯನ್ನು ತನ್ನ ಲೇಖನಗಳನ್ನು ಅಚ್ಚಾಗಿದ್ದ ಇತರ ಪತ್ರಿಕೆಗಳ ಜೊತೆ ಜೋಪಾನವಾಗಿಟ್ಟ. ಟೈ ಗಂಟನ್ನು ನೀಟಾಗಿ ಹಾಕಿಕೊಂಡು ಆಕಾಶಬಣ್ಣದ ಸೂಟ್ ತೊಟ್ಟು ಸೈಕಲ್ ಹತ್ತಿ ಹೊರಟ.

ಆದರೆ ದಾರಿಯಲ್ಲಿ ಎಂದಿನಂತೆ “ರಸಾನುಭವ – ಕಾವ್ಯ ಸತ್ಯ – ಅನ್ನಮಯ ಪ್ರಾಣಮಯ ವಿಜ್ಞಾನಮಯ ವಿವಿಧ ಕೋಶಾವಸ್ಥೆ – ಸತ್ಯ, ಸೌಂದರ್ಯ ಜನಪ್ರಿಯತೆ ಇಬ್ಸನ್ನಿನ ನಾಟಕಗಳಲ್ಲಿ ಪಾಪ – ಕಲ್ಪನೆ, ಮಹಾಯುದ್ಧವಾದರೆ ಮಾನವನ ಗತಿಯೇನು?” ಇತ್ಯಾದಿ ಯೋಚನೆಗಳ ಬದಲು “ಅರುಂಧತಿಯ ಎದೆ ಚೆನ್ನಾಗಿದೆ – ಫ್ರಿವೀಲ್, ಆಕ್ಸೆಲ್, ಡಸ್ಟ್‌ಕ್ಯಾಪ್, ಬಾಲ್ಸ್, ಒಂದು ಪೋಲಿ ಜೋಕು, ಸೈಕಲ್ಲಿನ ಸ್ಪೋಕ್ಸ್ ಸಂಖ್ಯೆ ಕಡಿಮೆ ಮಾಡುವುದು ಸಾಧ್ಯವೆ; ಬ್ಯಾಲನ್ಸ್‌ವೀಲ್ – ಹೇರ್‌ಸ್ಪ್ರಿಂಗ್ ಇನ್ನೂ ನೂಜೂಕಾಗಲಾರದೆ?” ಎಂಬ ಯೋಚನೆಗಳು ಯಾಕೆ ಬರುತ್ತಿದ್ದಾವೆಂದು ರಾಜಣ್ಣನಿಗೆ ಅರ್ಥವಾಗಲಿಲ್ಲ.

* * *

ಎಣ್ಣೆಗಪ್ಪು ಮೂತಿಯ ಹಸುವಿನಂತಹ ಮನಸ್ಸಿನ (ಪಾಪ ಅವನೂ ಖೋಜ!) ‘ಬೆಣ್ಣೆ’ ಎಂಬ ಅಡ್ಡ ಹೆಸರಿನ ಶಾಮಣ್ಣನ ನಮ್ರತೆಯನ್ನು ಸ್ವೀಕರಿಸುತ್ತ ಡ್ರಾಯಿಂಗ್ ರೂಮಿನಲ್ಲಿ ಕರಿಯ ಸೂಟು ತೊಟ್ಟು ಡಾಕ್ಟರ್‌ದ್ವಾರಕನಾಥ, M. A. , D. Litt. (London) ಕಣ್ಣಿಗೆ ಕಟ್ಟುವಂತೆ ಕೂತಿದ್ದರು.

“ಸಾರ್ ಮೊನ್ನೆ ನಿಮ್ಮ ರೇಡಿಯೋ ಟಾಕ್ ತುಂಬ ತುಂಬ ಚೆನ್ನಾಗಿತ್ತು” ಎಂದು ಶಾಮಣ್ಣ ತನ್ನ ಪ್ರಾಮಾಣಿಕವಾದ ಮೆಚ್ಚಿಗೆಯನ್ನು ಗುರುವಿಗೆ ಒಪ್ಪಿಸುತ್ತಿದ್ದಂತೆ ರಾಜಣ್ಣ ಒಳಗೆ ಹೋಗಿ, ಸ್ಥಾನಮಾನಗಳಿಂದ ಭೂಷಿತರಾದವರ ಎದುರಿಗೆಲ್ಲ ಅಪ್ರಯತ್ನದಿಂದ ಅಥವಾ ತನ್ನ ಅಧೀನದಲ್ಲಿ ಇಲ್ಲದಿದ್ದ ದುಂಡು ಮುಖದ ಕೆಲವೊಂದು ಮಾಂಸಖಂಡಗಳ ವಿಚಿತ್ರವರ್ತನೆಯಿಂದ ಏರ್ಪಡುತ್ತಿದ್ದ ನಗುವಿನೊಡನೆ ‘ನಮಸ್ಕಾರ’ ಎಂದ.

ಡಾಕ್ಟರರು ನಗುಮುಖದಿಂದ ಸ್ವಾಗತಿಸಿ, ಕಣ್ಣುಗಳ ರೆಪ್ಪೆಯನ್ನು ಪಟಪಟನೆ ಹುಚ್ಚುಗೂಬೆಯಂತೆ ಬಡಿದು –

“ಏನು ಬದಲಾಯಿಸಿಬಿಟ್ಟಿದ್ದೀರಲ್ಲ – ಆರೋಗ್ಯವಿಲ್ಲವೆ? ನೆನ್ನೆ ಯಾಕೆ ಬರಲಿಲ್ಲ” ಎಂದರು.

“ಏನು ಇಲ್ಲ ಸಾರ್, ನೆನ್ನೆ ಸೈಕಲ್ ಒವರ್‌ಆಯಿಲ್ ಮಾಡಿದೆ. ವಾಚಿನ ಹೇರ್‌ಸ್ಪ್ರಿಂಗ್ ಕೆಟ್ಟೋಗಿತ್ತು. ರಿಪೇರಿ ಮಾಡ್ತಾ ಕೂತೆ. ಹಾಗೇ ಹೊತ್ತಾಯ್ತು. ಕ್ಷಮಿಸಿ” ಎಂದು ಇನ್ನೂ ಏನೋ ಗಂಟಲಲ್ಲೇ ಉಳಿದು ರಾಜಣ್ಣ ಸುಮ್ಮನಾದ. Oh! That is extremely interesting! ನೋಡ್ರಿ ನಂಗೂ ಎಷ್ಟೋ ಸಾರಿ ಅನ್ಸಿದೆ : Educated people ನಲ್ಲಿ degnity of labour ಹೊರ‍್ಟು ಹೋಗಿದೇಂತ, ಅದಕ್ಕೇ ಪಾಪ ಆ ಮುದ್ಕ ನೂಲು ತೆಗೇರಿ ಅಂತ ಅಷ್ಟು ಬಡ್ಕೋತಿದ್ದಿದ್ದು. Body ಮತ್ತು Intellect ಎರಡರಲ್ಲೂ harmonious development ಇರ್ಬೇಕ್ರಿ. ಇಲ್ದಿದ್ರೆ….. ” ಎಂದು ಡಾಕ್ಟರರು ಸೂಚಿಸಿದ ಮೆಚ್ಚಿಗೆಗೆ ಅಷ್ಟು ಹೊತ್ತೂ ಸುಮ್ಮನಿದ್ದ ಶಾಮಣ್ಣ ಕನ್ನಡಕ ತೆಗೆದು ಕರ್ಚೀಫಿನಿಂದ ಒರಸುತ್ತ ಗಂಟಲು ಕೆರೆದುಕೊಂಡ –

“ಅದನ್ನೇ ಅಲ್ವೆ ಸಾರ್ ಲಾರೆನ್ಸ್ ಹೇಳೋದು. ನಂಗೂ ಹಾಗೇ ಅನ್ಸಿದೆ – ” (ನಾಚಿಕೊಳ್ಳುತ್ತ) “ಅಲ್ಲದೆ ನಂಗೆ ಜಾತಕ ನೋಡಕ್ಕೂ ಬರುತ್ತೆ ಸಾರ್. In my opinion that is a Science Sir” ಎಂದ.

“Oh really! That is wonderfull, I say. Do you know that I can cook very well?” ಎಂದು ದ್ವಾರಕನಾಥರು ಕಣ್ಣುಗಳ ಸುತ್ತಲಿನ ಪುಟ್ಟ ಪುಟ್ಟ ಮಾಂಸಖಂಡಗಳನ್ನು ಸಿಂಡರಿಸಿ ಮಾತಿಗೊಮ್ಮೆತೋರುಬೆರಳೆತ್ತಿ ಬಲಗೈಗೆ ಕಟ್ಟಿಕೊಂಡಿದ್ದ ವಾಚಿನ ಚಿನ್ನದ ಚೈನನ್ನು ಬಿಚ್ಚುವುದು ಹಾಕುವುದು ಶುರುಮಾಡಿದರು.

ರಾಜಣ್ಣನಿಗೆ ಫಕ್ಕನೆ ಅವರ ವಾಚಿನ ಕಡೆ ಕಣ್ಣು ಹೋಯಿತು. “ಎಲ್ಲಿ ನಿಮ್ಮ ವಾಚ್ ನೋಡೋಣ ಕೊಡಿ ಸಾರ್‌” ಎಂದ. ಡಾಕ್ಟರಿಗೆ ಕೂಡಲೆ ಏನು ಮಾಡಬೇಕೋ ತೋಚದೆ ಕಂಗಾಲಾಗಿ ವಾಚನ್ನು ಬಿಚ್ಚಿಕೊಟ್ಟರು. ರಾಜಣ್ಣ ಅದರ ಮುಚ್ಚಳ ತೆಗೆದು ಏಕಾಗ್ರತೆಯಿಂದ ಅದನ್ನು ದೃಷ್ಟಿಸಿದ. ಸ್ವಲ್ಪ ತಡೆದ ಮೇಲೆ – ಉತ್ಸಾಹದಿಂದ,

“ಸಾರ್‌ಇದರ ಮೆಕ್ಯಾನಿಸಂ ನಂಗೆ ತುಂಬ ಹೊಸದು. ಅಟೋಮ್ಯಾಟಿಕ್ ವೈಂಡಿಗ್ ಹೇಗಾಗುತ್ತದೆ ಈಗ ಗೊತ್ತಾಯ್ತು. ವಂಡರ್ ಫುಲ್ – ವಂಡರ್ ಫುಲ್” ಎಂದು ಮತ್ತೆ ಏಕಾಗ್ರಚಿತ್ತನಾಗಿ ನೋಡತೊಡಗಿದ.

ಡಾಕ್ಟರರು ಪೈಪ್‌ಹಚ್ಚಿ ಚಿಂತಾಕ್ರಾಂತರಾದರು. ಮತ್ತೆ ಇಲಿಯನ್ನು ಕಂಡತಕ್ಷಣ ಅರೆಮುಚ್ಚಿ ಕಾಯುತ್ತಿದ್ದು ಕಣ್ಣು ತೆರೆದು ಮೇಲೆ ಹಾರುವ ಬೆಕ್ಕಿನಂತೆ – ಥಟ್ಟನೆ –

“ಯಾಕೋ ಈಚಿಗೆ ನನಗೆ memory fail ಆಗ್ತಿದೇರಿ – ವಾಚನ್ನು modern poet ಒಬ್ಬ ಫೈನ್ ಇಮೇಜಾಗಿ ಉಪಯೋಗಿಸಿಕೊಂಡಿದಾನೆ – ಯಾರವನು? ನೆನಪಿದೆಯೋ?” ಎಂದರು.

ಶಾಮಣ್ಣ ಆ ಪ್ರಶ್ನೆಗೆ ಏನು ಉತ್ತರ ಕೊಟ್ಟನೋ ರಾಜಣ್ಣನಿಗೆ ಕೇಳಿಸಲೇ ಇಲ್ಲ. ವಾಚಿನಿಂದ ಮುಖವೆತ್ತಿ ಗಂಭೀರವಾಗಿದ್ದ ಡಾಕ್ಟರನ್ನು ನೋಡಿ –

“ಸಾರ್ ತಾವು ಯುರೋಪಿಗೆ ಹೋದಾಗ ಸ್ವಿಡ್ಸರ್ಲೆಂಡಿನ ವಾಚುಗಳನ್ನು ಹೇಗೆ ತಯಾರಿಸುತ್ತಾರೆ ನೋಡಿದ್ದೀರಾ ಸಾರ್? ಸ್ವಿಡ್ಸರ್ಲೆಂಡಿನ ಕೋಳಿಮೊಟ್ಟೆ. That is how we were taught in the middle school – ಹಿ ಹಿ” ಎಂದು ಹಲ್ಲು ಕಿರಿದ.

ಡಾಕ್ಟರ್ ದ್ವಾರಕನಾಥರು ಆಶ್ಚರ್ಯದಿಂದ ರಾಜಣ್ಣನ ಕಡೆ ನೋಡಿದರು. ಯಾವಾಗಲೂ ಗಂಭೀರ ವಿಷಯಗಳನ್ನೇ ಚರ್ಚಿಸುತ್ತಿದ್ದ ಅವನ ಮುಖದಲ್ಲಿ ಏನೋ ಬದಲಾವಣೆಯಾಗಿದೆ ಎನ್ನಿಸಿತು. ರಾಜಣ್ಣನೂ ಹಾಗೆಯೇ ತನ್ನ ಬಗ್ಗೆ ಅನಾವಶ್ಯವಾಗಿ ಅಸೂಯೆ ಪಡುತ್ತಿದ್ದ ಶಾಮಣ್ಣನನ್ನೂ ಎಂದೂ ನೋಡದ ದೃಷ್ಟಿಯಲ್ಲಿ ನೋಡಿದ.

ಪಾಪ ಎನ್ನಿಸಿತು. ವಾಚುಗಳನ್ನು ಮಾರುವ ಒಂದು ಅಂಗಡಿಯನ್ನು ಇಟ್ಟಿದ್ದರೆ ಅವರು ತುಂಬಾ ಸುಖಿಗಳಾಗುತ್ತಿರಲಿಲ್ಲವೇ ಎಂದು ಕರುಳು ಮರುಗಿತು. Thinkers Club, ಕಾಲೇಜು, ಲೈಬ್ರರಿ, ಪೇಪರಿಯಲ್ಲಿ ಹೆಸರು, ‘ಓ ಡಾಕ್ಟರ್ ನಮಸ್ಕಾರ’, aesthetic sense ಎಲ್ಲ ಮಸಲತ್ತು ಮಾಡಿ ಅವರನ್ನು ಕೊಂದುಬಿಟ್ಟುವಲ್ಲ ಎಂದು ಮರುಕ ಹುಟ್ಟಿತು. “ಸಾರ್ ನೀವೊಂದು ವಾಚು ಮಾರುವ ಅಂಗಡಿ ಇಡಿ. ಶಾಮಣ್ಣ ಕ್ಯಾನ್ವಾಸ್ ಮಾಡ್ತಾನೆ. ನಾನು ಪಕ್ಕದಲ್ಲಿ ರಿಪೇರಿ ಅಂಗಡಿ ಇಡುತ್ತೇನೆ. ಜನರ ಮೆಚ್ಚಿಗೆಗೇನಂತ ಹಾಕಿಕೊಂಡಿರುವ ಈ ವೇಷ ಬಿಸಾಕೋಣ” ಎಂದುಬಿಡಲೇ ಎನ್ನಿಸಿದರೂ ಧೈರ್ಯ ಸಾಕಾಗದೆ ಅಪ್ರಯತ್ನದಿಂದ ಮುಖದ ಮೇಲೆ ತಯಾರಾಗುತ್ತಿದ್ದ ಮಂದಹಾಸ ಮತ್ತೆ ತನ್ನಲ್ಲಿ ಉಂಟಾಗುತ್ತಿದೆ ಎಂದು ಅರಿವಾಯಿತು. ಮಂದಹಾಸದ ಜೊತೆಗೆ ಎತ್ತಿದ ಕತ್ತಿನಲ್ಲಿ ಗಾಂಭೀರ್ಯ, ಕಟ್ಟಿಕೊಂಡ ಕೈಗಳಲ್ಲಿ ದೈನ್ಯ, ತೀಕ್ಷ್ಣವಾದ ಕಣ್ಣುಗಳಲ್ಲಿ ಡಾ‌ಕ್ಟರರ ಜ್ಞಾನವನ್ನು ಹೀರಬೇಕೆಂದೆನಿಸುವ ಕಾತುರ ಹಿಂತಿರುಗಿತು. ಡಾಕ್ಟರರಿಗೂ ಚಿರಪರಿಚಿತ ಮುಖವನ್ನು ಮತ್ತೆ ಕಾಣುವಂತಾಯಿತಲ್ಲ ಎಂದು ಗೆಲುವಾಗಿ ಒಳಗಿನಿಂದ ಕಾಫಿ ತರಿಸಿ ಕುಡಿದು ಮೂವರೂ ಮತ್ತೆ ತತ್ವಜಿಜ್ಞಾಸೆಯಲ್ಲಿ ತೊಡಗಿ ಕಾಂಪೌಂಡಿನ ಒಳಗಿದ್ದ ಹೂದೋಟದಲ್ಲಿ ತಿರುಗತೊಡಗಿದರು.

ರಾಜಣ್ಣನೂ ಚಿಂತಾಕ್ರಾಂತನಾದ – ಆದರೆ ಎಂದಿನಂತಲ್ಲ. ಡಾಲಿಯಾ ಹೂಗಳು ತುಂಬಾ ಚೆನ್ನಾಗಿವೆಯಲ್ಲವೆ ಎಂದು ಡಾಕ್ಟರರು ಕೇಳಿದ್ದಕ್ಕೆ ಮುಖದ ಮಂದಹಾಸ ಹೌದೆನ್ನುತ್ತಿತ್ತು. ರಸಾನಂದ, ವಿವಿಧ ಕೋಶಾವಸ್ಥೆ, ಸೂಯೇಜ್ ಕಾಲುವೆಯ ಸಂಗತಿ ಎಲ್ಲದರ ಬಗ್ಗೆಯೂ ನಾಲಿಗೆ ಕಲಿತದ್ದನ್ನೆಲ್ಲಾ ಮಗ್ಗಿ ಹೇಳುವ ಪ್ರೈಮರಿ ಹುಡುಗನಂತೆ ಒಪ್ಪಿಸುತ್ತಿತ್ತು. ಆದರೆ ಡಾಕ್ಟರರು ”ನಗೆ ಸುಂದರಿಯಾದ ಒಬ್ಬ ಹುಡುಗಿಯನ್ನು ನೋಡಿದರೆ Paint ಮಾಡಬೇಕು ಎನ್ನಿಸುತ್ತದೆ” ಅಂದಾಗ ರಾಜಣ್ಣನಿಗೆ ಯಾವುದೋ ಮಾತು ಗಂಟಲಲ್ಲೆ ಉಳಿದು ‘ಹೌದು’ ಎಂದುಬಿಟ್ಟ. ಕಲ್ಲುಬೆಂಚಿನ ಮೇಲೆ ಹೊಂಗೆ ಮರದ ತಂಪಾದ ನೆರಳಿನಲ್ಲಿ ಕೂತು ಎಂದಿನಂತೆ ಮಾತನಾಡುತ್ತಿದ್ದಾಗ ಕೈ ಆಲ್ಸೆಶನ್ ನಾಯಿಯ ಮೈಯನ್ನು ತಡವುತ್ತಿದ್ದಂತೆ – ರಾಜಣ್ಣ ಡಾಕ್ಟರರ ಮಾತಿಗೆ ಹೂಗುಟ್ಟಲು ಬೆಣ್ಣೆ ಶಾಮಣ್ಣನನ್ನು ಬಿಟ್ಟು ಯೋಚಿಸತೊಡಗಿದ.

ಅದೊಂದು ರೀತಿಯ ಕಾಳಗ. ಮನೋವಿಜ್ಞಾನಿಗಳಿಗೆ ಅರ್ಥವಾಗವಂತಹುದು. ತಮಿಳು ಸಿನಿಮಾದಲ್ಲಿ ನಟ ಕನ್ನಡಿಯ ಎದಿರು ನಿಂತಾಗ ಬಿಂಬ ಪ್ರತಿಬಿಂಬಗಳ ನಡುವೆ ನಡೆಯುತ್ತದಲ್ಲ ಅಂಥದು –

“ಎಲವೋ ಖೋಜಣ್ಣ – ನಿನ್ನ ಸಾಹಿತ್ಯ ವಿಮರ್ಶೆ, ಮುಖದ ಮೇಲಿನ ಮಂದ ಹಾಸ – ಸಾವಿರಾರು ಮೈಲಿ ಆಚಿನ ವಿಷಯಗಳಲ್ಲಿ ನಿನ್ನ ಆಸಕ್ತಿ ಎಲ್ಲವೂ ನಿಜವೇನೊ? ಬೇರೆಯವರ ಕಣ್ಣಿನಲ್ಲಿ ಆಕರ್ಷಕವಾಗಿ ಕಾಣಲೆಂದು ನನ್ನನ್ನು ಬಲಿಗೊಟ್ಟೆಯಲ್ಲ! ಸಾಮಾಜಿಕ ಗೌರವಕ್ಕಾಗಿ ನನ್ನನ್ನು ಇಷ್ಟು ದಿನ ಹುಗಿದುಬಿಟ್ಟೆಯಲ್ಲ! ಅರುಂಧತಿಗೆ ಮುತ್ತು ಕೊಡಲು ಪ್ರಯತ್ನಿಸಿದರೂ ನೀನು ಅಡ್ಡ ಬಂದಿಯಲ್ಲ! ವಾಚು ರಿಪೇರಿ ಮಾಡಲೂ ಬಿಡಲಿಲ್ಲವಲ್ಲ! – ಯಾವ ಸಂತೋಷಕ್ಕೆಂದು ಹೀಗೆ ಮಾಡಿದೆ!” –

“ರಾಜಣ್ಣ,…. ನೀನು ಸಣ್ಣವನು. ನಿನಗೆ ತಿಳುವಳಿಕೆಯಿಲ್ಲ. ಪ್ರಾಣಿತನದ ಮಣ್ಣಿನ ಮೇಲೆ ಬಿಟ್ಟ ಹೂವೇ ಸಂಸ್ಕೃತಿ, ಅದನ್ನು ನಾನು ಗಳಿಸಿಕೊಂಡಿದ್ದೇನೆ. ”

“ಹೂವಲ್ಲ ಪಾಪಿ!”

“ಮುಚ್ಚು ಬಾಯ್! ನಿನ್ನ ಮಾತು ಕೇಳಿದ್ದರೆ ನಾನು ವಾಚು ರಿಪೇರಿ ಮಾಡಿಕೊಂಡಿರಬೇಕಿತ್ತು. ಅಪ್ಪ ಹೊಡೆದರೂ ನಿನಗೆ ಬುದ್ಧಿ ಇನ್ನೂ ಬಂದಿಲ್ಲವಲ್ಲ. ಎಷ್ಟು ದಿನ ಓದಿದರೂ ನೀನು ಬದಲಾಗಲಿಲ್ಲವಲ್ಲ, ನಿನಗೆ ನಾಚಿಕೆಯಾಗುವುದಿಲ್ಲವೆ? ಇಷ್ಟು ಜನ ಹೆಂಗಸರ ಪವಿತ್ರ ಪ್ರೇಮ, ದ್ವಾರಕನಾಥರಂತಹ ಜ್ಞಾನಿಗಳ ಸಹವಾಸದಲ್ಲೂ ನೀನು ಪಳಗಲಿಲ್ಲವೆ? ಥೂ ನಿನ್ನ ಮುಖಕ್ಕಿಷ್ಟು ಬೆಂಕಿಯಿಕ್ಕಿತು. ”

“ಅಯ್ಯೋ ಹುಚ್ಚೆ? ಹೆಂಗಸರು ನೀನು ನಿರುಪದ್ರವಿಯಾಗಿದ್ದರಿಂದ – ಅರ್ಥಾತ್ ಅವರ ಪವಿತ್ರಾತ್ಮವನ್ನು ಮಾತ್ರ ಬಯಸುವನಾದ್ದರಿಂದ – ಏನೋ ಖುಷಿಗೆ ನಿನ್ನ ಜೊತೆ ಇರುತ್ತಾರೆ. ಒಳಗೊಳಗೇ ನಿನ್ನ ಬಗ್ಗೆ ಎಷ್ಟು ಜಿಗುಪ್ಸೆ ಪಡುತ್ತಾರೆ ಗೊತ್ತೇನು? ಇನ್ನು ಪಾಪ ದ್ವಾರಕನಾಥರು! ವ್ಯಾಪಾರಿಗಳಾಗಿದ್ದರೆ ಇನ್ನೂ ಎಷ್ಟು ಹರ್ಷಚಿತ್ತರಾಗಿರುತ್ತಿದ್ದರೋ… ಇಲ್ಲಿ ನೋಡು – ನನ್ನ ಮಾತು ಕೇಳು… ”

– ಇತ್ಯಾದಿ ಇತ್ಯಾದಿ ಅವನ ಮನಸ್ಸಿನಲ್ಲಿ ನಡೆಯುತ್ತಿದ್ದಂತೆ ಸೌಂದರ್ಯ ಸತ್ಯದ ಜಿಜ್ಞಾಸೆ ಅಂತಿಮ ಘಟ್ಟಕ್ಕೆ ಬಂದಿತ್ತು. ಎಲ್ಲರಿಗೂ ಹಸಿವಾಗುತ್ತಿತ್ತು. ರಾಜಣ್ಣ ನಮಸ್ಕಾರ ಹೇಳಿ ಹೊರಟ.

* * *

ಮನೆಗೆ ಹಿಂತಿರುಗುವಾಗ ಲೈಫ್‌ಬಾಯ್ ಸೋಪು ಕೊಳ್ಳಲು ಮರೆಯದೆ ಹತ್ತು ವರ್ಷದ ಹಿಂದಿನಿಂದ ಹಾಳಾಗಿ ಬಿದ್ದಿದ್ದ ವಾಚನ್ನು ರಿಪೇರಿ ಮಾಡುವ ಗೊಡವೆಗೇ ಹೋಗದಿದ್ದರೆ ಚೆನ್ನಾಗಿತ್ತು ಎನ್ನಿಸಿತು. ಆದರೂ ಮಾಡಿನ ಹೆಂಚು ಕಿತ್ತು ಒಳಗೆ ಧುಮುಕುವ ಮಂಗಗಳಂತೆ ಯೋಚನೆಗಳು ದಂಡುಕಟ್ಟಿ ಮನಸ್ಸಿನೊಳಗೆ ಇಳಿಯ ತೊಡಗಿದುವು.

ಅರುಂಧತಿಯ ಜೊತೆ ಕುಳಿತು ಕೀಟ್ಸ್ ಕವನ ಓದುವುದಕ್ಕಿಂತ ಅವಳನ್ನು ತಬ್ಬಿ ಮಲಗಿಕೊಳ್ಳುವುದೇ ಹೆಚ್ಚು ಸುಖವಲ್ಲವೆ? ನನ್ನ ಸ್ವಭಾವಕ್ಕೆ ಸೌಂದರ್ಯ ಅಧ್ಯಯನಕ್ಕಿಂತ ವಾಚು ರಿಪೇರಿಯೇ ಹೆಚ್ಚು ಒಳ್ಳೆಯದಲ್ಲವೆ? ಸೂಯೆಜ್ ನಾಲೆ ಏನಾದರೆ ನನಗೇನು? – ಪೊಲೀಸರ ಕೈಗೆ ಸಿಕ್ಕದಂತೆ ದ್ವಾರಕಾನಾಥರನ್ನು ಕೊಲ್ಲುವುದು ಸಾಧ್ಯವೆ? – ವಾಸುದೇವಾ ಚಾರ್ಯರ ಶಾಸ್ತ್ರೀಯ ಸಂಗೀತ ಆ ವಾರಾ ಸಂಗೀತಕ್ಕಿಂತ ಉತ್ತಮವೆಂದು ಮೊನ್ನೆ ಸಾಧಿಸಿದೆನಲ್ಲ ಅದು ನಿಜವಾಗಿ ನನಗನಿಸಿದ್ದೆ? – ರೋರಿಕ್ಕಿನ ಚಿತ್ರಗಳನ್ನು ನೋಡಿ ಹೋದ ಭಾನುವಾರ ಯಾಕೆ ತಲೆದೂಗಿದೆ?….

ಮನೆಗೆ ಹಿಂತಿರುಗಿದವನೆ ಎಂದಿನಂತೆ ಅವನು ಬರೆಯುವ ಮೇಜಿನ ಎದಿರು ಕುಳಿತ. ಪೆನ್ನು ಹಿಡಿದುಕೊಂಡ. ಅಪ್ರಯತ್ನವಾಗಿ ಸಾಲುಗಳು ಹೀಗೆ ಹರಿದುವು –

“ಪ್ರಿಯ ಅರುಂಧತಿ, ನಿನ್ನಿಂದಲೇ ಈಗ ನಾನು ಬದುಕಬೇಕು… ಇನ್ನು ಮೇಲೆ ಹಿಂದಿನಂತೆ ಬೇಡ… ಎಲ್ಲ ಮೋಸ… ಅರ್ಪಿಸಿಕೊಳ್ಳಬೇಕು…. Superficial ಆಗಿ ಬದುಕದೆ ನಿನ್ನ ಜೊತೆಗಾದರೂ “Vital relationship” ಇಟ್ಟುಕೊಳ್ಳಬೇಕೆಂಬ ಬಯಕೆ… ರಾಜಣ್ಣನಿಗೆ ನಿನ್ನ ಮೇಲಿದ್ದ ಬಯಕೆಯನ್ನು ಕಂಡು ಹೆದರಿ ಖೋಜಣ್ಣ ಕಸಿದುಕೊಂಡ. ಅವನನ್ನು ನಾನು ದ್ವೇಷಿಸುತ್ತೇನೆ. ಎಲ್ಲರಂತೆ ನೀನು ಅವನನ್ನು ಪ್ರೀತಿಸಿ ಬೆಳೆಸಬೇಡ. ನಿನ್ನ ಜೊತೆಗೆ ಮಲಗಬೇಕೆಂದು ನನಗೆ ವಿಪರೀತ ಆಸೆ… ವಾಚು ರಿಪೇರಿ ಮಾಡುವ ಅಂಗಡಿ ಇಡಲೆ… ” – ‘ಸಾಯುತ್ತೇನೋ ಏನೊ? – ನನ್ನ ಶ್ವಾಸಕೋಶಗಳನ್ನು ಕ್ರಿಮಿಗಳು ಉಣ್ಣುತ್ತಿದ್ದಾವೆಂದು ಭಯ’ ಎಂದು ಅವಳ ಮನಸ್ಸು ಕರಗುವಂತೆ ಬರೆದು ಕೊನೆಯ ಮಾತುಗಳಾಗಿ ಎಲಿಯಟ್ಟನ “The awful daring of a moments Surrender, by this and this only we have existed” ಎಂದು ಬರೆಯಲೇ ಎನ್ನಿಸಿತು. ಥೂ! ಮತ್ತೆ ಖೋಜಣ್ಣ ರಾಜಣ್ಣನ ಅಭಿಪ್ರಾಯ ಆಕರ್ಷವಾಗುವಂತೆ ಮಾಡಲು ಯತ್ನಿಸುತ್ತಿದ್ದಾನಲ್ಲಾ ಎಂದು ನಾಚಿಕೆಯಾಯಿತು –

ಬರೆದ ಕಾಗದವನ್ನು ಹರಿದ. ಹಸಿವಾಯಿತು – ಊಟ ಮಾಡಿದ. ಸುಸ್ತಾಗಿತ್ತು – ಹಾಸಿಗೆಯ ಮೇಲೆ ಒರಗಿದ. ಮೈಕೈಯನ್ನೆಲ್ಲ ತುರಿಸಿಕೊಂಡ. ಮತ್ತೆ ಎದ್ದ. ಇನ್ನೊಂದು ಕಾಗದ ಬರೆದ – ಹರಿದ – ಸಂಜೆಯಾಯಿತು. ಕಾಫಿ ಕುಡಿದ. ಶ್ರೀ… ಯವರು ಸಿಕ್ಕರು “ಸ್ವಾಮಿ ನಿಮ್ಮ ಇತ್ತೀಚಿನ ಕವನದಲ್ಲಿ ಒಳ್ಳೆಯ ಕಲ್ಪನೆಯಿದೆ. ಆದರೆ ಕವನದಲ್ಲಿ ಬಿಗಿ ಸಾಲದು. ನಿಮಗೆ ನಿಜವಾಗಿ ಉತ್ತಮ ಭವಿಷ್ಯವಿದೆ” ಎಂದು ತಾನು ಯಾಕೆ ಹಾಗೆಂದುಬಿಟ್ಟೆನೆಂದು ತಲೆ ಕೆರೆದುಕೊಂಡ. ನಗಬೇಕೆನಿಸಿ ನಕ್ಕ. ಮನೆಗೆ ಹೋಗಿ ಊಟ ಮಾಡಿದ. ಹಾಗೆ ಮೇಲೆ ಒರಗಿದ ನಿದ್ದೆ ಬರಲಿಲ್ಲ. ಆಕಳಿಸುತ್ತ ಎದ್ದು ಕೂತ.

ಅರುಂಧತಿ ಇರುವ ಊರಿಗೆ ಹೋಗುವ ರೈಲುಬಂಡಿ ರಾತ್ರಿ ಹನ್ನೆರಡಕ್ಕೆ ಹೊರಡುವುದು ಎಂದು ನೆನಪಾಯಿತು. ರೋಡಿನಲ್ಲಿ ಬ್ಯೂಕ್ ಕಾರು ಗಂಭೀರವಾಗಿ ಚಲಿಸಿತು. ಷಾಪಸಂದ್ ಗಾಡಿ ಕಟಕಟ ಎಂದು ಹೋಯಿತು. ನನಕ್ಷತ್ರಗಳು ನಿಶ್ಚಲವಾಗಿ ಉರಿದರೂ ಅಧೋಲೋಕದ ಕೊಚ್ಚೆ ಕತ್ತಲಿನಿಂದ ಗೊಂಟರು – ಕಪ್ಪೆಗಳ ರಗಳೆ ಕರ್ಣಪಿಶಾಚಿಯಾಗಿ ಕಾಡುತ್ತಿತ್ತು. ರಾಜಣ್ಣ ಸಿಗರೇಟು ಹಚ್ಚಿ ಕೆಮ್ಮಿದ. ಎದೆ ಸವರಿಕೊಂಡು ಚಿಂತಿಸಿದ. ಪುಫ್ಪುಸ ಶ್ವಾಸಕೋಶಗಳಲ್ಲಿ ಸಿಗರೇಟಿನ ಹೊಗೆ ಏನು ಮಾಡುತ್ತದೆಂದು ರೀಡರ್ಸ್ ಡೈಜೆಸ್ಟ್‌ನಲ್ಲಿ ಬರೆದದ್ದು ನಿಜವೆ? Are my Lungs also weak? – ಕೀಟ್ಸ್ ಪಾಪ ಅಷ್ಟು ಕೊರಗಿ ಸತ್ತ – ನಾನೂ ಹಾಗೆಯೇ ಎಲ್ಲಿಯಾದರೂ?……

ಹುಚ್ಚಾಸ್ಪತ್ರೆಗೆ ಸೇರಿ,

ಓ ನನ್ನ ಬಿಡಿ ಬಿಡಿ ಡಾಕ್ಟರ್ – ಯಾಕ್ರೀ ನನ್ನ ಹಿಂಗೆ ಹಿಂಸಿಸ್ತಿದೀರಿ? ನಾನು ಖಂಡಿತ ಸ್ಕಾಲರ್ ಅಲ್ಲ ಸಾರ್ – ಪಾಪದವ ಸಾರ್ – ವಾಚ್ ರಿಪೇರಿ ಮಾಡೋವ್ನು ಸಾರ್ – ನಗಿಬೇಕೂಂತ ಅನ್ನಿಸ್ತದೆ, ಕಿರುಚಬೇಕೂಂತ ಅನ್ನಿಸ್ತದೆ, ನಿಮ್ಮ ದಗಾನ್ನೆಲ್ಲ ಕಂಡು ಗಹಗಹ ನಗಬೇಕೂಂತ ಅನ್ನಿಸ್ತದೆ – ಏನು ಮಾಡ್ತಿದೀರಿ? ನನ್ನನ್ನು ನನ್ನ ಪಾಡಿಗಷ್ಟು ಬಿಟ್ಬಿಡಿ – ಅಲ್ಲ ಡಾಕ್ಟರ್ ನಾನು ವಾಚ್ ರಿಪೇರಿ ಮಾಡಿದರೆ ನಿಮ್ದೇನು ಕಿತ್ಕೋತದೆ ಅಂತ – ರೇಗಬೇಡಿ – ಸುಮ್ನೆ ಅಂದೆ. ಹೊರಟ್‌ಹೋಗಿ, ಹೂ, ಹೇಳಿದ್ದು ಕೇಳಿಸ್‌ಲಿಲ್ವೆ? – ಹೊರಟ್ ಹೋಗಿ ಅಂದೆ. “ಅಯ್ಯೋ ಪಾಪ. ಹೇಗೆ ಪಾಪ ನರಳ್ತಿದಾನೆ ನೋಡಿ. ಸರಿಯಾಗಿ ಇದ್ದ, ಹೇಗೆ ತಲೇ ಕೆಡ್ತೊ! ಕನ್ನಡ ಸಾಹಿತ್ಯದ ತುಂಬ ಒಳ್ಳೆ ವಿದ್ಯಾರ್ಥಿ ಕಂಡ್ರೀ. ಗುಣವಾಗಬಹುದು ಅಲ್ವೆ? ಅಂತೂ ಕಷ್ಟ. ಇವನಿಗೇನು ಸ್ಕಿಪೋಫ್ರೇನಿಯಾನೆ? ಪಾಪ, ಪಾಪ. “Doctor, is it true my lungs are weak? ಸತ್ತೋಗಿ ಬಿಡ್ತೀನಿ. ಕೀಟ್ಸ್‌ನ ಹಾಗೆ ಪಾಪ ಸತ್ತು ಹೋಗಿ ಬಿಡ್ತೀನಿ. X – ray ತೆಗೆಸಲೆ? ಅಯ್ಯೋ ಕ್ರಿಮಿಗಳೇ – ಒಳಗೊಳಗೇ ಶ್ವಾಸಕೋಶಗಳ ಒಳಗೇ – ಯಾವ ಪೂರ್ವಜನ್ಮದ ಪಾಪ ಡಾಕ್ಟರ್ – ಈಗೇನು ಮಾಡ್ಲಿ ಹೇಳಿ”, “ಏನೋ ರಾಜ? ಖೊ, ಖೊ, ಖೋ… ಜ. ರ, ರ, ರಾ, ಜ” “ಕಿ, ಕಿ, ಕಿ, ಟ್ಟಿ. ಖೊ, ಖೊ, ಖೋ…. ಜ. ”

ರಾಜ – ತಲೆಯಾಡಿಸಿದ. ಸಿಗರೇಟು ಬೂದಿ ಕೆಡವಿ ಮತ್ತೊಮ್ಮೆ ತಲೆಯಾಡಿಸಿದ. ಇಲ್ಲ – ಸಾಧ್ಯವಿಲ್ಲ. ಇಷ್ಟೆಲ್ಲ ಆದಮೇಲೆ ವಾಚು ರಿಪೇರಿ ಕೆಲಸ ಶುರು ಮಾಡಿದರೆ ಹುಚ್ಚಾಸ್ಪತ್ರೆಯೇ ಗತಿ – ಹಾಗಾದರೆ ಮುಕ್ತಿ? ಗ್ರೀಕರು ಹೇಳಿದಂತೆ ಇದಕ್ಕೂ ಒಂದು ಸುವರ್ಣಮಧ್ಯಮದ ದಾರಿಯಿಲ್ಲವೆ? ಇದೆಯೆ?

Yes! ಲಾರೆನ್ಸ್ ಹೇಳುವ ಹಾಗೆ ಒಂದು Vital relationship ಬೆಳೆಸಬೇಕು. (ಥೂ! ಮತ್ತೆ ಖೋಜಣ್ಣ Quote ಮಾಡತೊಡಗಿದ) ಹೌದು ಬೆಳೆಸಿಕೊಳ್ಳಬೇಕು. ಒಂದು ವ್ಯಕ್ತಿಯ ಜೊತೆಯಾದರೂ ದೇಶಾವರಿ ವೇಷ ಹಾಕದೆ ನಿಜಸ್ವರೂಪದಲ್ಲಿ ವ್ಯವಹರಿಸುವುದು. ಸಧ್ಯಕ್ಕೆ ಸ್ವಲ್ಪಕಾಲವಾದರೂ ಹೊರಗಿನ ಮಟ್ಟಿಗೆ ಈಗಿದ್ದ ಹಾಗೇ ಇರುವುದು. ಪರಿಸ್ಥಿತಿ ಇನ್ನೂ ವಿಪರೀತಕ್ಕಿಟ್ಟುಕೊಂಡಿಲ್ಲ. ಈಗಲೇ ನರಗಳು ಸಡಲಿ ಮನೋದೌರ್ಬಲ್ಯದಿಂದ ಹುಚ್ಚು ಹಿಡಿದೀತೆನ್ನುವ ಭಯ ಅಷ್ಟು ನಿಜವಲ್ಲ. ಆದರೂ ಏನಾದರೂ ಮಾಡಲೇಬೇಕು. ಏನು? Psycho – analyse ಮಾಡಿಸಿಕೊಂಡರೆ ಹೇಗೆ? ಅಥವಾ –

ಮತ್ತೊಂದು ಸಿಗರೇಟು ಹಚ್ಚಿ ಎಕ್ಸಿಮಾ ತುರಿಸಿಕೊಳ್ಳುತ್ತಿದ್ದಂತೆ ಏನೋ ಅಸ್ಪಷ್ಟವಾಗಿ ಎನ್ನಿಸಿ ಕೈ ಚಿಟಿಕೆ ಹೊಡೆದು ‘ಅದೇ ಸರಿ’ ಎಂದುಕೊಂಡ.

* * *

“ನನ್ನ ಮೇಲೆ ನೂರು ಕಾರುಗಳು ಹರಿದುವು. ರೈಲಿನ ಚಕ್ರಗಳು ನನ್ನ ಬೆನ್ನೆಲುಬನ್ನು ನುಚ್ಚುನೂರು ಮಾಡಿದವು. Encyclopoedia Britannica ಓದಿಸಿ ನನ್ನನ್ನು ಕೊಂದರು. ಇದು ಸಂಸ್ಕಾರವೆಂದರು. ಬಲಿಯಾದವನನ್ನು ಹೂಳಿದರು. ಬಲಿತು ಬಂದವನಿಗೆ ಜಯಮಾಲೆ ಹಾಕಿ ಹೊಗಳಿ ಹಾಡಿದರು. ತ್ಯಾಗಕ್ಕೆ ‘ಬೇಷ್’ ಎಂದು ಎಂ. ಎ. ಪದವಿ ಕೊಟ್ಟರು – ಇನ್ನು ಡಾಕ್ಟರೇಟ್.. ” ಎಂದುಕೊಳ್ಳುತ್ತ ಸೂಟ್‌ಕೇಸಿಗೆ ಒಂದು ಟವಲ್, ಸೋಪ್‌ಬಾಕ್ಸ್, ಬ್ರಷ್‌, ಪೇಸ್ಟ್, ಬೂದುಬಣ್ಣದ ಸೂಟು, ಎರಡು ಬಿಳಿಶರ್ಟ್‌, ಮಜೆಂಟಾ ಟೈ, ಪಿರಮಿಡ್ ಕರ್ಚೀಫ್, ಹೇರ್‌ಆಯಲ್, ಶೇವಿಂಗ್‌ಸೆಟ್‌ಯಾವುದನ್ನೂ ಮರೆಯದೆ ತುಂಬಿದ. ಡಾಕ್ಟರೇಟ್ ಥೀಸಿಸ್ಸು ಬೀರುವಿನೊಳಗಡೆ ಜೋಪಾನವಾಗಿದೆಯೇ ನೋಡಿಕೊಂಡ. ಹತ್ತು ವರ್ಷ ನಿಂತಿದ್ದು ನಡೆಯತೊಡಗಿದ ವಾಚನ್ನು ನೋಡಿದ. ಅರ್ಧಘಂಟೆ ನಡೆದರೆ ರೈಲ್ವೆಸ್ಟೇಷನ್ನು – ಹನ್ನೊಂದುವರೆಗೆ ಎದ್ದು ನಿಂತ. ಬೂಟ್ಸ್‌ಲೇಸು ಬಿಗಿದು,ಕನ್ನಡಿ ನೋಡಿ, ಕ್ರಾಪನ್ನು ತಿದ್ದುಪ್ಲಾಸ್ಟರ್ ಆಫ್ ಪ್ಯಾರೀಸು ಬುದ್ಧನ ಕಡೆಗೊಮ್ಮೆ ಹೊರಳಿ – ಓದಿದ್ದ ಕವನವೊಂದನ್ನು ನೆನೆದು ಹೊಸಲು ದಾಟಿ, ಬಾಗಿಲಿಗೆ ಬೀಗ ಬಲವಾಗಿಹಾಕಿ (ಬೀಗ ಬಿದ್ದಿತೋ ಇಲ್ಲವೊ ಎಂದು ಇನ್ನೊಮ್ಮೆ ಪರೀಕ್ಷಿಸಿ) ಹೊರಟ… ! “ಹೊರಟ ಹೊರಟೇ ಹೊರಟ ಹೊರಟನೆತ್ತೋ!…. ”

ಬೆಳಗಿನ ಝಾವ – ಸ್ಟೇಷನ್ ತಲುಪಿ ಟ್ಯಾಕ್ಸಿಹತ್ತಿ ಹನ್ನೆರಡನೇ ಕ್ರಾಸಿನಲ್ಲಿದ್ದ ೩೬೪ನೆ ನಂಬರ್ ಮನೆಯ ಇದಿರು ಇಳಿದ. ತಟ್ಟನೆ ಒಳಗೆ ಹೋಗಲು ಹೆದರಿಕೆಯಾಯಿತು. ಯಾಕೆ ಬಂದೆಯೆಂದು ಹೆಡ್‌ಮಾಸ್ಟರರು (ಆ ಗೃಧ್ರ) ಕೇಳಿದರೆ ಏನು ಹೇಳಬೇಕೆಂದು ದಾರಿಯುದ್ಧಕ್ಕೂ ಯೋಚಿಸದಿದ್ದ ತನ್ನ ಹೆಡ್ಡತನವನ್ನು ಶಪಿಸಿಕೊಂಡ. ಒಡ್ಡ ಧೈರ್ಯಮಾಡಿ ಒಳಗೆ ಹೋದ.

ನಾಯಿ ಬೊಗಳಿತು. ಬಾಗಿಲು ತೆರೆಯಿತು. ನೊಸಲಿಗೆ ವಿಭೂತಿ ಧರಿಸಿ ಶಾಲು ಹೊದ್ದು ಮೂಗಿನಲ್ಲಿ ಯಾರು ಎನ್ನುತ್ತ ಕೈಯಿಂದ ನಸ್ಯ ಕೊಡವಿ ಹೆಡ್ಮಾಸ್ಟರರು ಬಾಗಿಲು ತೆರೆದರು. “Oh come in” ಎಂದು ದೇಶಾವರಿ ನಕ್ಕು ರಾಜಣ್ಣನಿಗೆ ಕೂರಲು ಕುರ್ಚಿ ತೋರಿಸಿದರು. ರಾಜಣ್ಣನೂ ಅಗಲವಾಗಿ ನಗುತ್ತ “ಮನೇಲೆಲ್ಲ ಆರೋಗ್ಯವೇ?” ಎಂದು ಸುತ್ತಲೂ ಕಣ್ಣು ಹೊರಳಿಸಿದ. ಅವನು ಹೆದರಿದ್ದ ಹೆಡ್ಮಾಸ್ಟರರ ಪ್ರಶ್ನೆಗೆ ಸಮಯಸ್ಫೂರ್ತಿಯಿಂದ “ಇಲ್ಲಿಯೇ ವಾರಪತ್ರಿಕೆಯ ಸಂಪಾದಕರ ಹತ್ತಿರ ಕೆಲಸವಿತ್ತು ಬಂದೆ” ಎಂದು ನಿಭಾಯಿಸಿಕೊಂಡ. “ಊಟಕ್ಕೆ ಇಲ್ಲೇ ಇರಿ” ಎನ್ನುವ ಉಪಚಾರಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಬೇಡ ಎಂದ.

ಕಾಫಿ ಕುಡಿಯುತ್ತ ಮತ್ತೊಮ್ಮೆ ಸುತ್ತಲೂ ನೋಡಿದ. ಹೆಡ್ಮಾಸ್ಟರರು ಒಳಗೆ ಹೋದರು. ಅಂತೂ ಕೊನೆಗೆ ಅರುಂಧತಿ ಹೊರಬಂದಳು. ರಾಜಣ್ಣನ ಎದೆ ಜಗ್ಗೆಂದಿತು. ಅವಳ ಸೀರೆಯ ಸೆರಗಿನ ಮಾಸಿದ ಜರಿಯಿಂದ ಕಣ್ಣು ಕೀಳಲಾರದೆ ಕ್ಷಣ ತಬ್ಬಿಬ್ಬಾದ…

ಅಂತೂ ಧೈರ್ಯಮಾಡಿ “ಈ ಕ್ರಾಸಿನ ಕೊನೆಯಲ್ಲಿ ನಿನಗಾಗಿ ಹತ್ತೂವರೆ ಗಂಟೆಗೆ ಕಾಯುತ್ತಿರುತ್ತೇನೆ – ಸಿಗುತ್ತೀಯಾ?” ಎಂದ. ಅವನ ಮೃದು ಕಂಠದಿಂದ ಎಂದೂ ಕೇಳದಿದ್ದ ಗೊಂಟರು ಕಪ್ಪೆಗಳ ಗೊಟರಿನಂತಹ ಗಡಸು ಗೊಗ್ಗರು ಧ್ವನಿ ಕೇಳಿ ಇದ್ದಕ್ಕಿದ್ದಂತೆ ಅರುಂಧತಿಗೆ ಭಯವಾಯಿತು. ಬೆಚ್ಚಿದ ಅವಳು ಉತ್ತರ ಕೊಡುವುದರೊಳಗೆ ಹೆಡ್ಮಾಸ್ಟರರು ಒಳಗಿನಿಂದ ಹೊರಬಂದರು;

“ನಮಸ್ಕಾರ” ಎಂದು ಅಗಲವಾಗಿ ನಕ್ಕು ಎದ್ದುನಿಂತ.

“ಮತ್ತೆಂದು ಈಕಡೆ? ದೇವರು ನಡೆಸಿದರೆ ಎರಡು ತಿಂಗಳ ನಂತರ ನೀವು ಈ ಕಡೆ ಒಂದು ದಿನದ ಮಟ್ಟಿಗಾದರೂ ಬರಲೆಬೇಕಾಗಬಹುದು” ಎಂದು ನಸ್ಯವೇರಿಸಿ ಹೆಡ್ಮಾಸ್ಟರು ಅರುಂಧತಿಯ ಕಡೆ ನೋಡಿ ನಕ್ಕನು. ಅರುಂಧತಿ ಬಿಳಚಿ ಬೆವರಿ ಒಳಗೆ ಹೋದಳು. ರಾಜಣ್ಣನಿಗೂ ಏನೋ ಅನ್ನಿಸಿ, ಮೈಬೆವರಿ, ಕೂಡಲೇ ಅಲ್ಲಿಂದ ಹೊರಟು, ಬೀದಿಯ ತುದಿಗೆ ಬಂದು ಅರುಂಧತಿ ಕಾಲೇಜಿಗೆ ಬರುವುದನ್ನು ಕಾಯುತ್ತ ನಿಂತ.

ಜೀವದಲ್ಲಿ ಜೀವ ಹಿಡಿದು ವಾಚಿನ ಕಡೆ ಮತ್ತೆ ಮತ್ತೆ ನೋಡಿದ. ಅಂತೂ ಹತ್ತೂವರೆಯಾಯಿತು. ದೂರದಿಂದ ಅರುಂಧತಿ ಬರುವುದು ಕಾಣಿಸಿತು. ಆದರೆ ಗೆಳತಿಯರನ್ನು ಕೂಡಿಕೊಂಡು ತಾನು ಕಾಯುತ್ತಿರುವುದು ಕಂಡೂ ಕಾಣದವಳಂತೆ ಬರುತ್ತಿದ್ದಾಳೆ. ಅವಳು ಮುಖವನ್ನು ಅತ್ತ ಇತ್ತ ತಿರುಗಿಸಿ ಕಪ್ಪು ಸೀರೆಯ ನಿರಿ ಚಿಮ್ಮಿಸಿ ನಗುತ್ತಾ ನಡೆಯುವುದು ಅವನ ಕರುಳಿಗೆ ಸೂಜಿಯಂತೆ ಚುಚ್ಚಿತು. ಎದೆ ಹಾರಿಕೊಳ್ಳುತ್ತಿದ್ದರೂ ಅವಳ ಬಳಿ ಹೋದ. ‘ನಮಸ್ಕಾರ’ ಎಂದು ಅಗಲವಾಗಿ ನಕ್ಕ. ಅರುಂಧತಿ ಬೆಚ್ಚಿ – (ಅಲ್ಲ ಹಾಗೆ ನಟಿಸಿ) ‘ಓ ನೀವಾ!’ ಎಂದು ಗೆಳತಿಯರಿಗೆ ‘a minute please’ ಎಂದು ಕೇಳಿ ರಾಜಣ್ಣನ ಬಳಿ ಬಂದಳು. ಉದ್ದುದ್ದ ಕಾಗದ ಬರೆಯುವುದು ಸಾಧ್ಯವಿದ್ದರೂ ಎಕೋ ಎದಿರುಬದಿರಾಗಿ ನಿಂತಾಗ ಇಬ್ಬರಿಗೂ ಬಾಯಿ ಕಟ್ಟಿಬಿಟ್ಟಿತು.

“ಏನು ಅರುಂಧತಿ ನಿನ್ನಿಂದ ಇತ್ತೀಚೆಗೆ ಕಾಗದವೇ ಇಲ್ಲ… ” ಸರ್ವಾಂಗ ಬೆವರುತ್ತ ಕೇಳಿದ.

“ನಿಮ್ಮ ಹುಟ್ಟುಹಬ್ಬಕ್ಕೆಂದು ಕಳಿಸಿದ ಕೀಟ್ಸ್ ಸಿಕ್ಕಿತೆ?… ” ಅರುಂಧತಿ ಗೆಳತಿಯರ ಕಡೆಗೊಮ್ಮೆ ತಿರುಗಿ ನಿಲ್ಲಿ ಎನ್ನುವಂತೆ ಸನ್ನೆ ಮಾಡಿ ಹೇಳಿದಳು. ರಾಜಣ್ಣನಿಗೆ ಬೆಂಕಿಯ ಮೇಲೆ ನಿಂತಂತೆನಿಸಿ –

“Oh thank you!…” ಎಂದ. ಇದ್ದಕ್ಕಿದ್ದಂತೆ ಅವನ ಮುಖದಲ್ಲಿ ಎಂದಿನಂತೆ ಮಂದಹಾಸ ಮೂಡಿದ್ದನ್ನು ನೋಡಿ ಅರುಂಧತಿಗೆ ಹಗುರವೆನಿಸಿತು. ರಾಜಣ್ಣನೂ ತನ್ನ ಪ್ರಯತ್ನವಿಲ್ಲದೇ ಮುಖದ ಮಾಂಸಖಂಡಗಳಲ್ಲಿ ಆಗುತ್ತಿದ್ದ ಮಾರ್ಪಾಡುಗಳನ್ನು ಶಪಿಸಿಕೊಂಡ –

“ನಿನ್ನನ್ನು ಒಂದು ವಿಷಯ ಕೇಳಲು ಬಂದೆ” ಎಂದ.

ಅರುಂಧತಿ ಮತ್ತೆ ಬೆಚ್ಚಿದಳು. ಹುಡುಗಿಯರು ಕಾಯುತ್ತ ನಿಂತಿರುವುದು ರಾಜಣ್ಣನಿಗೆ ಅಸಹನಿಯವಾಯಿತು. ‘ನಿನ್ನ ಗೆಳತಿಯರು ಹೋಗಲಿ ಬಿಡು, ನೀನು ನನ್ನ ಜೊತೆ ಬಾ’ ಎನ್ನಲೇ ಎಂದು ಎನ್ನಿಸಿದರೂ ಮಾತು ಗಂಟಲಲ್ಲೇ ಉಳಿಯಿತು. ಅರುಂಧತಿ ಬೆವರುತ್ತ ಯಾರಾದರೂ ನೋಡಿದರೆ ಏನು ಗತಿ ಎಂದು ಪಾಪಕಾರ್ಯ ಒಂದನ್ನು ಮಾಡುತ್ತಿರುವವಳಂತೆ ಅತ್ತ ಇತ್ತ ನೋಡಿದಳು. ಬಿಗಿಯಾಗಿ ಕಟ್ಟಿದ್ದ ಬಿಳಿಯ ಕುಪ್ಪಸ ಅವನನ್ನು ನಿಂದಿಸುವಂತೆ ಭಯದ ಉಸಿರಾಟಕ್ಕೆ ಏರಿಳಿಯುತ್ತಿತ್ತು. ಮರ್ಯಾದಸ್ಥಳಂತೆ ಅವಳು ಸೆರಗ್ನು ಮೈ ಮುಚ್ಚುವಂತೆ ಎಳೆದು ಮತ್ತೆ ನೆಲ ನೋಡಿದಳು. ರಾಜಣ್ಣನ ಎದೆ ಕುಸಿಯಿತು. “ಎರಡು ಗಂಟೆಗೆ ನಿನಗೆ ಬಿಡುವಾದರೆ ಕಾಲೇಜು ಲೈಬ್ರರಿಯ ಹತ್ತಿರ ಸಿಗಲೆ?…. ” ಎಂದು ಅಂತೂ ಕೊನೆಗೆ ಉಗುಳು ನುಂಗುತ್ತ ಎಂದ.

ಯಾವುದರಿಂದಲೋ ಪಾರಾದವಳಂತೆ ಅರುಂಧತಿ ‘ಹೂ’ ಎಂದು ತಿರುಗಿ ನೋಡದೆ ಹೊರಟುಬಿಟ್ಟಳು.

ರಾಜಣ್ಣನಿಗೆ ಸುಸ್ತಾಗಿಬಿಟ್ಟಿತು. ಏನು ಏನೋ ಶಂಕೆಗಳು – ಮತ್ತೆ ಯಾಕೆ ಹಾಗೆ ಕಾಗದ ಬರೆಯುತ್ತಾಳೆ? ಇವಳೂ ‘ರಾಜಣ್ಣ’ನನ್ನು ಒಪ್ಪಿಕೊಳ್ಳಲಾರಳೆ? ಇಲ್ಲ – ‘ರಾಜಣ್ಣ’ ಎಂದೂ ಕಾಗದ ಬರದೇ ಇಲ್ಲ – ನಾನೇ ಅಲ್ಲವೆ ಇದಕ್ಕೆಲ್ಲ ಕಾರಣ? ಡಾಕ್ಟರಲ್ಲಿ, ಶಾಮಣ್ಣನಲ್ಲಿ ಕೊನೆಗೆ ಅರುಂಧತಿಯಲ್ಲೂ – ಎಲ್ಲೆಲ್ಲೂ! – ರಾಜಣ್ಣನಿಗೆ ಎಲ್ಲೂ ಆಶ್ರಯವಿಲ್ಲವೆ? – ಬದುಕಿನಲ್ಲಿ ಎಂದೂ ಅನುಭವಿಸಿರಲಿಲ್ಲ ಎನ್ನಿಸುವಂತಹ ಯಾತನೆ ತನಗಾಗ ಆಗುತ್ತಿದೆ ಎಂದು ಮೈಯೆಲ್ಲ ನರಗಳಾಗಿ ಸಂಕಟಪಟ್ಟು, (ಚಹಾ ಕುಡಿಯುತ್ತ) ಎರಡು ಗಂಟೆಯವರೆಗೂ ಕಾದ. ಮನಸ್ಸನ್ನು ಒಂದು ನಿರ್ಧಾರಕ್ಕೆ ತಂದು ಬಿಗಿದುಕೊಂಡು ಲೈಬ್ರರಿಯ ಎದಿರು ನಿಂತ.

ಎರಡಾಯಿತು, ಎರಡೂಕಾಲಾಯಿತು, ಎರಡೂ ಇಪ್ಪತ್ತೈದು ಆಯಿತು. ಅರುಂಧತಿ ಮತ್ತೆ ಗೆಳತಿಯರ ಜೊತೆ ಕ್ಲಾಸಿನ ಕಡೆ ಹೋಗುತ್ತಿದ್ದಳು. ನಿರ್ಬಲವಾದ ಕಾಲುಗಳನ್ನು ಎಳೆದುಕೊಂಡು ಹೋಗಿ ಅವಳೆದುರು ನಿಂತ. ಬೆಚ್ಚಿ ಪೆಚ್ಚಾದರೂ ಏನೂ ನಡೆಯಲಿಲ್ಲವೆಂಬಂತೆ ನಕ್ಕು ಅರುಂಧತಿ ಹತ್ತಿರ ಬಂದಳು. ‘ಓ ಮರತೇ ಬಿಟ್ಟಿದ್ದೆ – Very Sorry – ಈ ಕ್ಲಾಸಿಗೆ ಬಹಳ ದಿನದಿಂದ ಚಕ್ಕರ್ ಹೊಡೆದೂ ಹೊಡೆದೂ ಬೇಜಾರಾಗಿದೆ. ನೀವು ಈಗ್ಲೇ ಹೊರಡಬೇಕಾ?” ಎಂದು ಕತ್ತು ಕೊಂಕಿಸಿದಳು. ಅವನನ್ನು ದಿಟ್ಟಿಸಿ ನೋಡದಿದ್ದರೂ ಎತ್ತಿದ ಕಣ್ಣು, ನಗುತ್ತಿದ್ದ ಪುಟ್ಟ ಬಾಯಿ, ಕೊಂಕಿದ ಕತ್ತು, ಸೀರೆ ಸೆರಗನ್ನು ಬಲಭುಜದ ಮೇಲೆ ಎಳೆದುಕೊಳ್ಳುವ ಜಾಗರೂಕತೆ – ಎಲ್ಲದರ ಹಿಂದೆ ಯಾವುದೋ ಭಯ ಅವಳಲ್ಲಿ ಅರಳುತ್ತಿದೆ ಎಂದು ರಾಜಣ್ಣನಿಗೆ ಅನ್ನಿಸಿತು.

ಹೋಟೆಲಲ್ಲಿ ಕೂತು ಗಳಿಸಿದ್ದ ಶಕ್ತಿಯನ್ನೆಲ್ಲಾ ಗಂಟಲಿಗೆ ತಂದು ರಾಜಣ್ಣ “ಹಾಗಾದ್ರೆ ಸಂಜೆ ಅಶೋಕವನದಲ್ಲಿ ಒಬ್ಬಳೇ ಸಿಗ್ತೀಯಾ?” ಎಂದುಬಿಟ್ಟ. ಕಿವಿ ಗೊಯ್ ಎಂದು ಊರೆಲ್ಲ ಸುತ್ತತೊಡಗಿತು.

ತುಟಿ ನಡುಗಿದರೂ, ತೊಡೆ ಗಡುಗುಟ್ಟಿದರೂ, ಮೈ ಬೆವರಿದರೂ (ಕೆಳಗೆ ಬೀಳದೆ) ಅರುಂಧತಿ ತಗ್ಗಿಸಿ ಮುಖವನ್ನು ಎತ್ತಲೇ ಇಲ್ಲ. ಕಷ್ಟಪಟ್ಟು ಕಣ್ಣೀರನ್ನು ತಡೆದುಕೊಂಡಳು ನಿಸ್ಸಹಾಯಕಳಾಗಿ, ಅಬಲೆಯಾಗಿ, ಗಡಸು ಕಂಠದ ಹೊಸಬನೆದುರು ಏನು ಹೇಳಲೂ ತೋಚದೆ ತತ್ತರಿಸಿದಳು. ಐದಾರು ವರ್ಷಗಳ ಮೇಲೂ ರಾಜಣ್ಣ ಬದಲಾಯಿಸಲಿಲ್ಲವೆ? ಎಂದು ಹಿಂದಿನ ಘಟನೆಯೊಂದನ್ನು ನೆನೆದು ಕಣ್ಣುಕತ್ತಲೆ ಕಟ್ಟಿ ಬರಲು ಮರಕ್ಕೆ ಒರಗಿ ನಿಧಾನವಾಗಿ ಕಣ್ಣು ತೆರೆದು ರಾಜಣ್ಣನನ್ನು ಆರ್ತಳಾಗಿ ನೋಡಿದಳು. ಏನೋ ಹೇಳಲು ಹೊರಟು ಹೇಳಲಾರದೆ ಒಣಗಿದ ಗಂಟಲನ್ನು ಎಂಜಲು ನುಂಗಿ ಒದ್ದೆ ಮಾಡಿಕೊಂಡಳು.

ರಾಜಣ್ಣನ ಧೈರ್ಯ ದ್ವಿಗುಣವಾಯಿತು. ಅರುಂಧತಿಯನ್ನು ಸೀಳುವಂತೆ ನೋಡಿದ. ಪ್ಯಾಕಿನಿಂದ ಸಿಗರೇಟು ತೆಗೆದು ಬೆಂಕಿಪೊಟ್ಟಣದ ಮೇಲೆ ಕುಟ್ಟಿ ಇನ್ನೂ ಗಡಸಾಗಿ –

“If you don’t want to meet me, why don’t you say to frankly?” ಎಂದ.

ಅರುಂಧತಿ ಕೆಳತುಟಿಯನ್ನು ಬೆರಳಲ್ಲಿ ಕ್ಲಿಪ್ಪಿನಂತೆ ಹಿಡಿದು ಮಡಚಿ, ಕತ್ತು ತುರಿಸಿಕೊಂಡು ಧೈರ್ಯ ತಂದುಕೊಳ್ಳತೊಡಗಿದಳು. (ಯಾವಾಗಲೂ ಅವಳು ಹಾಗೆ ಮಾಡಿದಾಗ ರಾಜಣ್ಣನಿಗೆ ಅಸಹ್ಯವಾಗಿ ಬೇರೆ ಯಾರಾದರೂ ಹುಡುಗಿಯ ಹತ್ತಿರ ಓಡಿ ಹೋಗಬೇಕೆನಿಸುತ್ತಿತ್ತು). ಸಿಗರೇಟು ಹೊತ್ತಿಸಿ “ಹೂ… ಹೇಳು” ಎಂದು, ಅವನಿಂದ ತಪ್ಪಿಸಿಕೊಂಡು ಎತ್ತಲೋ ನೋಡುತ್ತಿದ್ದ ಅವಳ ಕಣ್ಣುಗಳನ್ನು ಹುಡುಕಿದ. ಹುಬ್ಬುಗಂಟಿನ ಕೆಳಗೆ ಅರೆಮುಚ್ಚಿದ ರೆಪ್ಪೆಗಳ ಹಿಂದೆ ತೀಕ್ಷ್ಣವಾದ ಅವನ ಕಣ್ಣುಗಳನ್ನು ನೋಡಲಾರದೆ ಮುಖ ತಗ್ಗಿಸಿಯೇ ಕಣ್ಣುಗಳನ್ನು ಅರ್ಧ ಮುಚ್ಚಿ ಉಗುರು ಕಚ್ಚುತ್ತ, ಅರುಂಧತಿ ಅಂತೂ ಪ್ರಯತ್ನಿಸಿ –

“ನಾನು ಹೇಗೆ ಅಲ್ಲಿ ನಿಮ್ಮನ್ನ ಒಬ್ಬಳೇ ನೋಡಲಿ? – ಜನ ಏನೆಂದುಕೊಳ್ಳುತ್ತಾರೆ? Oh! you don’t know how awkward, how difficult it is for a woman” ಎಂದಳು.

“Allright – Good bye then!” ಎಂದು ನಕ್ಕು (ನಕ್ಕನೆ?) ರಾಜಣ್ಣ ಹೊರಟುಬಿಟ್ಟ. ಅರುಂಧತಿಯೂ ಮುಖ ತಿರುಗಿಸಿ ಹೋಗಿಯೇಬಿಟ್ಟಳು.

ಅವಳು ಕರೆದಾಳೋ ಏನೋ ಎಂದು ಆಸೆಯಾದರೂ ಅವನು ಹಿಂದಿರುಗಿ ನೋಡಲಿಲ್ಲ.

ಕ್ಲಾಸೊಳಗೆ ಹೋಗಿ ಕೂತ ಮೇಲೆ ಅರುಂಧತಿಗೆ ಹೃದಯವೆಷ್ಟೋ ಹಗುರವೆನಿಸಿರಬಹುದಲ್ಲವೆ ಎಂದು ರಾಜಣ್ಣನ ಹುಬ್ಬು ಗಂಟಿಕ್ಕಿತು.

* * *

ರಾತ್ರೆ ಬಹಳ ಹೊತ್ತು ಹಾಳು ಗೊಂಟರು ಕಪ್ಪೆಗಳ ಗೊಟರಿನಿಂದ ರಾಜಣ್ಣನಿಗೆ ನಿದ್ದೆ ಬರದ ಹಾಸಿಗೆಯಲ್ಲಿ ಹೊರಳಿ. ಗಡಿಯಾರ ನೋಡಿದ. ಹನ್ನೆರಡು ತೋರಿಸುತ್ತಿತ್ತು. ಬರೇ ಹನ್ನೆರಡೇ ಎಂದು ಕಿವಿಗೆ ಹಿಡಿದ. ವಾಚು ನಿಂತಿತ್ತು!

ಸಿಗರೇಟು ಹೊತ್ತಿಸಿದ. ಈಗೇನು ಮಾಡಲಿ ಎಂದು ಎಕ್ಸಿಮಾ ತುರಿಸಿಕೊಂಡ. ‘ವಿಷ ಕುಡಿಯಲೆ?’ ಎನ್ನುವ ಯೋಚನೆಯೂ ಬಾರದೆ ಇರಲಿಲ್ಲ. ಆದರೆ ಅದು ತನ್ನ ಕೈಯಿಂದ ಸಾಧ್ಯವಿಲ್ಲ ಎಂದೂ ಅನ್ನಿಸದೆ ಇರಲಿಲ್ಲ….

ತಾನೊಬ್ಬ ಭಗ್ನ ಪ್ರಣಯಿ ‘ಯಾರಂತೆ?’ ಎಂದು ಓದಿದ್ದ ಕಥೆಗಳನ್ನು ನೆನಪು ಮಾಡಿಕೊಂಡ. ಲಾರೆನ್ಸಿನ ‘Modern Lover’ ಕಥೆಯಂತೆ ಇದನ್ನು ಕುರಿತು ಒಂದು ಕಥೆ ಬರೆಯಬಹುದಲ್ಲವೇ ಎಂದು ಅನ್ನಿಸಿತು. ಹಾಗೆಯೇ ಯೋಚಿಸುತ್ತ ರಗ್ಗನ್ನು ಎಳೆದುಕೊಂಡು ಕೌಂಚಿ ಮಲಗಿದ.

೧೮-೮-೧೯೫೬

* * *