ಮುಸ್ಸಂಜೆಯಲ್ಲಿ ಹುಲಿ ಕೂಗಇದ್ದು ನಿಜವೆ, ಅಥವ ಹೊತ್ತು ಹೋಗದ ನನ್ನ ಮನಸ್ಸಿನ ಭ್ರಮೆಯೆ ಎಂದು ನೀರು ಸೇದುತ್ತಿದ್ದ ಶಾರದ ಆಲಿಸಿದಳು. ಇದ್ದರೂ ಇರಬಹುದು. ಗಾಯವಾದ ಹುಲಿಯಂತೆ. ಕೊರಗ ಹೇಳಿದ್ದ. ಅಂದಗಾರಿನ ಕಾನಿನಲ್ಲಿ ಗುಂಡಿನೇಟು ಬಿದ್ದಿತಂತೆ. ಓಡಿ ಬಂದು ನಮ್ಮ ಕಾನು ಸೇರಿದೆಯಂತೆ. ನಾಕು ದಿನದಿಂದ ಒಂದೇ ಕತೆ.

ಕೊಡವನ್ನು ಎಳೆದು ಕಟ್ಟೆಯ ಮೇಲಿಟ್ಟಳು.

ಮಾವಯ್ಯನಿಗೆ ಹೇಳಿದೆ, ಅಕ್ಕ ಹಾರಿಕೊಂಡ ಬಾವಿಯ ನೀರು ಬೇಡ. ಆಗಲಿ ಮಗಳೇ ಬೇರೆ ಬಾವಿ ತೋಡಿಸೋಣ ಎಂದರು. ಹಗಲು ಬಗ್ಗಿದಾಗ ಮುಖ ಕಾಣಿಸುತ್ತೆ. ನನ್ನ ಮುಖದ ಹಾಗೆಯೇ ಅಕ್ಕನ ಮುಖ, ಹೆದರಿಕೆಯಾಗುತ್ತೆ. ತೊಟ್ಟಿಲಿಗೆ ಒರಳೆ ಹಿಡಿದಿತ್ತು. ಮಾವಯ್ಯನಿಗೆ ಹೇಳಲಿಲ್ಲ – ಮನೆತನದ ತೊಟ್ಟಿಲು ಕಣೇ ಎಂದು ಪರಚಿಕೊಳ್ಳುತ್ತಿದ್ದರು. ಸಂದಿ ಸಂದಿಯಲ್ಲೆಲ್ಲ ಜೆರಳೆಯ ಮೊಟ್ಟೆ. ನಾಳೆ ಬಿಸಿನೀರು ಸುರಿಯಬೇಕು.

ಕೊಡದಿಂದ ಸ್ವಲ್ಪ ನೀರನ್ನು ಚೆಲ್ಲಿ ಟೊಂಕದ ಮೇಲಿಟ್ಟುಕೊಂಡಳು.

ಇವತ್ತು ಚತುದರ್ಶಿಯಲ್ಲವೆ? ಬಿದಿಗೆಗೆ ಮುಟ್ಟಿನ ದಿವಸ. ಗೌರಮ್ಮನಿಗೆ ಅಡಿಗೆಗೆ ಬರಲು ಹೇಳಬೇಕು. ಒಂದಿಷ್ಟು ಅವಲಕ್ಕಿ ಭತ್ತ ಕುಟ್ಟಿಸಬೇಕು. ಹಾಳು ಮರವು ನನಗೆ. ನಿನ್ನೆ ಕೆಟ್ಟ ಕನಸು. ನಾನೇ ಸತ್ತಂತೆ. ಮಾವಯ್ಯ ಹೇಳಿದರು. ಸತ್ತಂತೆ ಕನಸು ಬೀಳೋದು ಒಳ್ಳೆಯದು ಮಗಳ, ಆಯುಷ್ಯ ಹೆಚ್ಚತ್ತೆ, ನೀರಿಗೆ ಬಿದ್ದು ಸತ್ತಂತೆ ಕನಸಾದರೆ ಬಹಳ ಒಳ್ಳೆಯ ಫಲ. ಆದರೆ ಇದೆಲ್ಲ ಮೂಢನಂಬಿಕೆ ಎನ್ನುತ್ತಾನೆ ರಂಗ. ಭಯವಾಗಿ ಎದ್ದು ಕೂತೆ.

ಕೊಡವನ್ನು ಒಲೆಯ ಹತ್ತಿರವಿಟ್ಟು, ಹೊಗೆ ಮುತ್ತಿದ್ದ ಬೆಂಕಿಯನ್ನು ಊದಿದಳು.

ಇಷ್ಟು ದಿನ ಕಲಿತರೂ ನಾನಿಟ್ಟ ಕಟ್ಟಿಗೆ ಉರಿಯುವುದೇ ಇಲ್ಲ. ರಂಗ ಒಲೆಯೊಳಗ ಕಟ್ಟಿಗೆ ಜೋಡಿಸೋದರಲ್ಲಿ ಬಲು ಜಾಣ. ಮಾವಯ್ಯನಿಗೆ ಆಗುವ ಫಲಾಹಾರದಲ್ಲೆ ನನಗೂ ಅಷ್ಟಾದರೆ ಸಾಕು. ಅನ್ನ ಬೇರೆ ಯಾರು ಬೇಯಿಸುತ್ತಾರೆ. ಬೇಜಾರು. ಯಾರೋ ನನ್ನನ್ನ ನೆನೆಯುತ್ತಿದ್ದಾರೆ, ಆಕಳಿಕೆ, ನೆನದರೆ ರಂಗ ನೆನೆಯಬೇಕಷ್ಟೆ.

ಆಕಳಿಸಿದಳು. ಕಡಗೋಲು ಕಂಬಕ್ಕೊರಗಿಸಿಟ್ಟಿದ್ದ ಕನ್ನಡ ಶಾಕುಂತಲವನ್ನು ಎತ್ತಿಕೊಂಡಳು. ಹರಿದು ಹಪ್ಪಾದ ಪುಸ್ತಕ ಮಾವಯ್ಯನ ಅಪ್ಪನ ಕಾಲದ್ದು.

ಹಾಳು, ಓದಲೂ ಬೇಜಾರು. ಯಾವುದಾದರೂ ಹೊಸ ಪುಸ್ತಕ ಕಳಿಸಲು ಅವನಿಗೆ ಬರೆಯಬೇಕು. ಹಾಳು ಆಕಳಿಕೆ. ಬೇಜಾರು. ನಾಲ್ಕನೆಯ ಅಂಕದಲ್ಲಿ ನಾಲ್ಕು ಶ್ಲೋಕಗಳು ಓದು ಮಗಳೇ ಕೇಳಬೇಕು ಎಂದರು ಮಾವಯ್ಯ. ಮುಂಚೆ ಅವರ ಅಪ್ಪಯ್ಯ ಓದಿ ಹೇಳುತ್ತಿದ್ದರು. ಈಗ ನಾನು. ಕಾಲ ಕಳೆಯಬೇಕಲ್ಲ.

ಒಲೆಯ ಮೇಲೆ ಕಷಾಯಕ್ಕೆ ನೀರಿಟ್ಟಳು.

ಜೀರಿಗೆ ಕಷಾಯ ಮಾವಯ್ಯನ ಹೊಟ್ಟೆಗೆ ಒಳ್ಳೇದು. ರಂಗ ಬರೇ ಕಾಫಿ ಕುಡಿದು ಕುಡಿದು ಕಡ್ಡಿಯಾಗಿದ್ದಾನೆ. ಪಾತ್ರೆಗಳಿಗೆಲ್ಲ ಕಲಾಯ ಮಾಡಿಸಬೇಕು. ಬುಡನ್ನಿಗೆ ಬರಲು ಹೇಳಿಕಳಿಸಬೇಕು. ಹಾಲು ಮರವು ನನಗೆ.

ಮೆಟ್ಟಿಲಿನ ಮೇಲೆ ಮೆಟ್ಟಿನ ಶಬ್ದವಾಯಿತು.

* * *

ಪಡಸಾಲೆಯಲ್ಲಿ ಬಂದು ನಿಂತ ಶಾರದೆ ಬಾಯಿ ಕಟ್ಟಿದವಳಂತೆ ರಂಗನಾಥನ ಕಡೆ ನೋಡಿದಳು. ಮೈತುಂಬ ಬಿಳಿಸೀರೆಯ ಸೆರಗನ್ನು ಹೊದ್ದು, ಬಿಚ್ಚಿಹೋದ ಹೆರಳನ್ನು ತಲೆಯ ಮೇಲೊಂದು ಗಂಟಾಗಿ ಬಿಗಿಯುವ ಪ್ರಯತ್ನದಲ್ಲಿ ಭಾವಶೂನ್ಯಳಂತೆ ಕಾಣಲು ಪ್ರಯತ್ನಿಸಿದರೂ ನಾಲ್ಕು ವರ್ಷಗಳ ಕೆಳಗೆ ನಡೆದದ್ದೆಲ್ಲ ನೆನಪಾಯಿತು. ಇವತ್ತು ಮಧ್ಯಾಹ್ನ ಕಾಗೆ ಕೂಗಿತು, ನೆಂಟರು ಯಾರೋ ಬರುತ್ತಾರೆಂದುಕೊಂಡೆ ಎಂದು ಹಾಸ್ಯವಾಗಿ ಹೇಳಬೇಕೆಂದುಕೊಂಡ ಮಾತು ಬರಲಿಲ್ಲ. ತಂದೆ ತಾಯಿಯಿಲ್ಲದ ಪರದೇಶಿಯನ್ನು ಕುರುಡು ಮಾವಯ್ಯ ತಂದು ಹೆತ್ತು ಹೊತ್ತವರಿಗಿಂತ ಹೆಚ್ಚಾಗಿ… ಇಲ್ಲ – ಈ ಯಾವ ಮಾತನ್ನೂ ರಂಗ ನಂಬುವುದಿಲ್ಲ. ಬೋಗಾರು ದುಃಖದ ಮಾತಾಡಬೇಡ ಎನ್ನುತ್ತಾನೆ. ಮುದಿತನದಲ್ಲಿ ಅವರನ್ನು ತೊರೆಯಲಾರೆ ಎಂದರೆ ‘ತೊರೆಯಲಾರೆ’, ಆಹಾ ಎಂಥ ಶಬ್ದ ‘ತೊರೆಯಲಾರೆ’, ಚೆನ್ನಾಗಿದೆ ಎಂದು ಕ್ರೂರವಾಗಿ ನಗುತ್ತಾನೆ. ಎಲ್ಲ ಒಂದು ಥರಾ ನಡೆದುಹೋಗುತ್ತಿತ್ತು. ಹೊಂದಿಕೊಂಡಿದ್ದೆ, ಮತ್ತೆ ಯಾಕೆ ಬಂದ? ಬರುವುದಿಲ್ಲ ಎಂದು ಹೇಳಿಹೋಗಿದ್ದ.

ಸ್ವಲ್ಪ ಬದಲಾಯಿಸಿದ್ದಾನೆ ಈಗ. ನಡುವೆ ಬೈತಲೆ ತೆಗೆಯುತ್ತಿದ್ದವನು ಓರೆಯಾಗಿ ತೆಗೆದಿದ್ದಾನೆ. ಕೂದಲನ್ನು ಸಣ್ಣಗೆ ಕತ್ತರಿಸಿದ್ದಾನೆ. ಮೀಸೆ ಬಿಡಬೇಡವೆಂದು ಹೇಳಿದ್ದರೂ ಮೀಸೆ ಬಿಟ್ಟಿದ್ದಾನೆ. ಗುರು ಗುರು ನೋಡುತ್ತಾನೆ ನನ್ನ ಕಡೆಗೇ.

ರಂಗ ಶಾರದೆಯನ್ನು ನಿಷ್ಠುರವಾಗಿ ನೋಡಿದ. ನಿನ್ನ ಮನಸ್ಸಿನಲ್ಲಿ ನಡೆಯುವುದೆಲ್ಲ ನನಗೆ ಗೊತ್ತು, ಎಲ್ಲ ಹಳಸಿದ ಮಾತುಗಳು, ನಿಜವಲ್ಲ ಎನ್ನುವ ತಿರಸ್ಕರದ ಭಾವವಿತ್ತು ಅವನು ತುಟಿಗಳನ್ನು ಮುಚ್ಚಿದ್ದ ಕ್ರಮದಲ್ಲಿ. ಏನು ಕಾದಿದೆಯೋ ತನಗೆ ಎಂದು ಶಾರದೆ ನಿರ್ಬಲಳಾಗಿ ಗೋಡೆಗೊರಗಿ ಕೂತು ತನ್ನ ಮಾವಯ್ಯನ ಕಡೆ ನೋಡಿದಳು.

ಕುರುಡು ಕಣ್ಣಿನ ಕತ್ತಲೆಯನ್ನು ರೆಪ್ಪೆಯಿಂದ ಮುಚ್ಚಿ ತೆರೆಯುತ್ತ ಕೂತಿದ್ದ ಶಂಕರಯ್ಯ ರಂಗನಾಥನ ಉತ್ತರಕ್ಕೆ ಕಾಯದೆ ನಡುಗುವ ಸ್ವರದಲ್ಲಿ ಮಾತನಾಡುತ್ತಲೇ ಇದ್ದರು. ಎಳೆದೆಳೆದು ಆಡುವ ಕ್ರಮದಲ್ಲಿ ಮಲೆನಾಡಿನವರಿಗೆ ಸಹಜವಾದ ಒಂದು ರಾಗ, ಮೃದು.

“ಅಮ್ಮ ಹೇಗಿದಾಳಪ್ಪ? ಗೇಣಿ ವಸೂಲಿಗೆ ಬಂದೆಯ? ಕೊಳೆ ರೋಗದಿಂದ ಈ ಸಾರಿ ಅಡಿಕೆ ಫಸಲು ಬಹಳ ಕಡಿಮೆ. ಧಾರಣೆ ಬೇರೆ ಇಳಿದಿದೆ. ಇವತ್ತು ಇಲ್ಲೇ ನಿಲ್ಲುತ್ತೀಯ? ನಮ್ಮನೇಲಿ ನೀನು ಊಟ ಮಾಡುವ ಹಾಗಿಲ್ಲಪ್ಪ. ಮಾಡಿದರೆ ಇಬ್ಬರೂ ತಪ್ಪುಕಾಣಿಕೆ ಕಟ್ಟಬೇಕಾಗುತ್ತೆ. ಮುತ್ತಜ್ಜನ ಕಾಲದ ಆಣೇಂತ ಕಡೆಗಾಣಬಾರದು ರಂಗ. ಹೇಳಿದ ಮಾತು ಕೇಳು. ನನ್ನ ಮನೇಲಿ ಊಟ ಮಾಡಬೇಡಾಂತ ನಾನು ಯಾವ ಬಾಯಲ್ಲಿ ಹೇಳಲಿ? ಅದು ಗೃಹಸ್ಥ ಧರ್ಮವಲ್ಲ – ನಿಜ. ಅಲ್ಲದೆ ನೀನು, ನಿನ್ನ ಅಮ್ಮ, ನಮಗೆ ಬೇಕಾದವರು – ಅದೂ ನಿಜ. ಆದರೆ ಹಿರಿಯರ ಕಟ್ಟು ಒಂದು ಉಂಟಲ್ಲ ಹೇಳು. ನಮ್ಮ ಬಾಳೊಂದು ಸ್ವತಂತ್ರವ?”

ಕಂಬಕ್ಕೊರಗಿ ಕೂತಿದ್ದ ಶಂಕರಯ್ಯನಿಂದ ಮೂಲೆಯಲ್ಲಿ ಮೈಮುದುರಿ ಕೂತ ಶಾರದೆಯ ಕಡೆ ರಂಗ ನೋಡಿದ. ಶಂಕರಯ್ಯನಿಗೆ ಏನು ಉತ್ತರ ಕೊಟ್ಟರೂ ಕೃತ್ರಿಮವಾಗುತ್ತೆ. ಬರಿ ಹೂಗುಡುತ್ತ ಏನು ಮಾಡುವುದು ತೋಚದೆ ಎದ್ದು ನಿಂತು.

ಮಲೆನಾಡಿನ ದಟ್ಟಡವಿಯ ನಡುವಿರುವ ಈ ಪುರಾತನ ಮನೆಯಲ್ಲಿ ಸಾವಿನ ಮಂಕು ಕವಿದಿದೆ. ಆಸುಪಾಸಿನಲ್ಲಿ ಒಂದೆರಡು ಶೂದ್ರರ ಮನೆ ಆಯಿತು. ಬಿಕೋ ಎನ್ನುತ್ತದೆ. ಗೋಡೆ ಕೊರೆದ ಗೂಡಿನಲ್ಲಿ ಅದೇ ಬೂದುಗಟ್ಟಿದ ಮುರಿದ ಸೊಂಡಲಿನ ಗಣಪತಿ, ಹೊಳೆಯಿಂದ ನಾನು ಹಿಡಿದು ಶಾರದೆಗೆ ತಂದುಕೊಟ್ಟಿದ್ದು. ಎಷ್ಟು ದಿನದಿಂದಲೊ ಗಂಟೆ ತೋರಿಸುತ್ತ ಗೋಡೆಗೆ ನೇಣುಬಿದ್ದ ಗಡಿಯಾರ. ಮೂಲೆಯಲ್ಲಿ ಕುಂಕುಮ ಹಚ್ಚಿದ ತಿಜೋರಿ. ತಡವಿ, ತಡವಿ, ಕೋಲು ಹಿಡಿದು ನಡೆಯುವ ಶಂಕರಯ್ಯ. ಮನೆಗೆಲಸವೆಲ್ಲ ಮುಗಿದ ಮೇಲೆ, ದಾಸರ ಕೀರ್ತನೆಯಂತಹ ಪದ್ಯಗಳನ್ನು ಬರೆಯುತ್ತ ಕೂರುವ ಅತಿಭಾವುಕ ಶಾರದೆ. ಫ್ರಿಜಿಡ್ ಎನ್ನಲು ಕನ್ನಡದಲ್ಲಿ ಏನು ಶಬ್ದವೋ ಗೊತ್ತಿಲ್ಲ. ಗೊತ್ತಿದ್ದರೆ ಶಾರದೆಗೆ ವಿವರಿಸಿ ಹೇಳಬಹುದಿತ್ತು. ತೊಟ್ಟಿಲು ತೂಗಲಿಲ್ಲ; ಸೀಮಂತದ ಉಲ್ಲಾಸದಿಂದ ಬಸುರಿ ಹೆಂಗಸು ಓಡಿಯಾಡಿಲ್ಲ; ಮಕ್ಕಳು ಅಳಲಿಲ್ಲ, ತೊಡೆಯ ಮೇಲೆ ಉಚ್ಚೆ ಹೊಯ್ದಿತೆಂದು ತಾಯಿ ನಗಲಿಲ್ಲ; ಹಾಡಿಲ್ಲ, ಹಸೆಯಿಲ್ಲ.

ಮಿಯಾವ್ ಎಂದು ಅಟ್ಟದಿಂದ ಬೆಕ್ಕು ಕೆಳಗೆ ಹಾರಿತು. ಕಪ್ಪು ಬೆಕ್ಕು. ಹಾಲು ಕರೆದು ತರಲು ಕೊಟ್ಟಿಗೆಗೆಂದು ಶಾರದ ಎದ್ದು ನಿಂತಳು.

“ಲಾಟೀನು ನಾನು ಹಿಡೀತೀನಿ ಕೊಡು” ಎಂದು ರಂಗ ಅವಳ ಜೊತೆ ಹೊರಟ.

* * *

ಶಂಕರಯ್ಯ ಬಿಕ್ಕಳಿಕೆ ತಡೆಯಲಾರದೆ ಎದ್ದು ನಿಂತರು.

ಮೂಲೆಯಲ್ಲಿ ಶಾರದೆ ಎಂದಿನಂತೆ ಯಾಕೆ ನೀರಿಟ್ಟಿಲ್ಲ? ಕರೆದರೂ ಉತ್ತರವಿಲ್ಲ. ಕತ್ತಲಾದ ಕಣ್ಣಿಲ್ಲದ ಕುರುಡನನ್ನು ಮನೆಯಲ್ಲೆ ಬಿಟ್ಟು ಕೊಟ್ಟಿಗೆಯಲ್ಲಿ ರಂಗನ ಜೊತೆಗೆ ಪಟ್ಟಂಗ ಹೊಡೆಯುವ ಮನಸ್ಸು ಬಂದಿತಲ್ಲ ಹುಡುಗಿಗೆ. ನನ್ನನ್ನ ಮೂಲೆಗೆ ಬಿಸಾಕಿ ಹೋದರೂ ಹೋದಳೆ. ರಂಗನ ಮೋಡಿ ಯಾವ ತರದ್ದು ಹೇಳಲಿಕ್ಕಾಗಲ್ಲ. ನಿಮಿತ್ಯ, ಪೂಜೆ, ಪುನಸ್ಕಾರ ಕಲಿತ ಮಾಣಿಯೊಂದನ್ನು ಹುಡುಕಿ ಮದುವೆ ಮಾಡಿಸುತ್ತೇನೆಂದು ಅಂಗಾಚಿದರೂ ಶಾರದೆ ಒಪ್ಪುವ ಹುಡುಗಿಯೆ? ಬೇಡ ಮಾವಯ್ಯ ಎಂದಳು. ಹಾಗಾದರೆ ನಿನ್ನನ್ನ ಸಾಕಿ ಸಲುಹಿ ಅಶ್ವತ್ಥನ ಮರಕ್ಕೆ ಮದುವೆ ಮಾಡಲು ಎಂದು ಕೇಳಿದರೆ ಎದುರುತ್ತರ ಕೊಡಲಿಲ್ಲ. ರಂಗನೇನೂ ಇಲ್ಲಿ ಬಂದು ಕೂರುವ ಮಾಣಿಯಲ್ಲ. ಇಂಗ್ಲಿಷ್ ಕಲಿತವ – ಪೇಟೆ ರುಚಿ ಹತ್ತಿದವ. ಇದ್ದ ತೋಟವನ್ನೂ ಗುತ್ತಿಗೆಗೆ ಕೊಟ್ಟು ತಾಯಿಯ ಜೊತೆ ಮೈಸೂರು ಸೇರಿದ. ಊರು ಬಿಟ್ಟು ನಾಲ್ಕು ವರ್ಷ ಮುಗಿದು ಐದು ಹತ್ತಿತಲ್ಲವೆ? ಹೌದು – ವಿಳಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತು. ವಿಳಂಬಿಯಲ್ಲಿ ಬಿಟ್ಟದ್ದು, ಈಗ ಶುಭಕೃತು ಹಿಡಿದಿದೆ. ದಿನ ಎಣಿಸುವುದೇ ಆಯಿತು ನನ್ನ ಗ್ರಹಚಾರ. ನೀನು ಮುದುಕನಾದ ಮೇಲೆ ಪಿರಿಪಿರಿ ಮಾಡುತ್ತಿರಬಾರದೊ ಶಂಕರ, ಮನಸ್ಸು ಬಿಗಿ ಹಿಡಿಯುವುದು ಕಲಿತುಕೊ ಎಂದು ಅಪ್ಪಯ್ಯ ತಕಲಿ ತಿರುಗಿಸಿ ಜನಿವಾರ ತೆಗೆಯುತ್ತ ಹೇಳುತ್ತಿದ್ದರು. ನಾನು ಇಲ್ಲೆ ಕೂತಿರುತ್ತಿದ್ದೆ, ಕುರುಡ. ಅವರು ಎದುರು ಕೂತಿರುತ್ತಿದ್ದರು. ಕೈ ಸಾಗದಿದ್ದ ಮೇಲೆ ನಾಲಗೆಗೆ ತುರಿಕೆ. ಅರಳು ಮರಳಾದವನ ಮಾತು ಈಗ ಯಾರು ಕೇಳುತ್ತಾರೆ. ಪೂರ್ವದ ನಿಯತ್ತಿನಿಂದ ನೋಡಿದರೆ ರಂಗ ನನ್ನ ಮನೆ ನೀರೂ ಮುಟ್ಟಬಾರದು. ತಲೆ ತಲಾಂತರದಿಂದ ರೂಢಿಯಾಗಿ ಬಂದ ಕಟ್ಟು ಮುರಿಯಬೇಡ, ಶ್ರೇಯಸ್ಸಲ್ಲ ಎಂದು ಹೇಳಿದರೆ, ಕೇಳುವರೆ ಈ ಹೊಸ ಕಾಲದ ಹುಡುಗರು? ಅಪ್ಪಯ್ಯ ಹೇಳುತ್ತಿದ್ದರು, ಲೋಕಕ್ಕೆ ಋತವೆಂಬುದೊಂದುಂಟು ಶಂಕರ – ಈ ಋತ ದೇವರನ್ನೂ ಆಳುತ್ತದೆ’ ಎಂದು. ಮನುಷ್ಯ ಪ್ರಯತ್ನದಿಂದ ಯಾವುದೂ ಬದಲಾಗಲ್ಲ. ದೇವರ ಇಚ್ಛೆ ನಮ್ಮ ಇಷ್ಟವಾಗಬೇಕು. ಭೀಷ್ಮನಿಗೆ ಇಚ್ಛಾಮರಣದ ವರವಿತ್ತಂತೆ. ತನ್ನ ಕೆಲಸ ಮುಗಿಯಿತೆಂದು ಕಂಡಮೇಲೆ ಕಣ್ಣು ಮುಚ್ಚಿದ. ಏಕಾದಶಿ ಅವತ್ತು, ಜ್ವರದಿಂದ ಮಲಗಿದ್ದ ಅಪ್ಪ, ದೇವರ ಇಷ್ಟ ನಡೆಯಲೊ ಶಂಕರ ಎಂದು ತಣ್ಣೀರು ಸ್ನಾನ ಮಾಡಿ ಬಂದು ಕಣ್ಣು ಮುಚ್ಚಿದರು. ನನ್ನ ಇಚ್ಛೆಯಂತೆಯೇ ಆಗಬೇಕೆಂದು ಈ ಮುದಿ ಕೊರಡಿಗೇಕೆ ಕೊಬ್ಬು? ಆದರೂ ಉಪ್ಪು ಹುಳಿ ತಿಂದ ಜೀವ ಹಂಬಲಿಸುತ್ತದೆ. ಪ್ರೀತಿ ತಪ್ಪಲ್ಲವಲ್ಲ, ಮೋಹ ತಪ್ಪು. ಆದರೆ ಯಾವಾಗ ಪ್ರೀತಿ ಮೋಹವಾಗುತ್ತದೆ ತಿಳಿಯುವುದು ಕಷ್ಟವೊ ಶಂಕರ ಎನ್ನುತ್ತಿದ್ದರು ಅಪ್ಪಯ್ಯ. ಈ ಹುಡುಗಿಯ ಅಕ್ಕನೊಂದು ಬಸುರಾಗಿ ಸತ್ತಿತು. ದೇವರು ಏನೇನು ನೋಡಿ ಸಾಯೆಂದು ಹಣೆಯಲ್ಲಿ ಬರೆದನೊ, ಎಲ್ಲ ನನ್ನ ಕೈಯಲ್ಲಿದೆಯೆಂಬುದೊಂದು ಭ್ರಮೆ. ಕೊರಗನಿಗೆ ನೂರು ಅಡಿಕೆ ಸಸಿ ತಂದು ನಡೊ ಎಂದು ಹೇಳಿದೆ, ಮತ್ತೆ ಇತ್ತ ಸುಳಿದಲ್ಲ ಅವ. ಏನೇನು ಅನಿಷ್ಟವೊ – ರಾತ್ರೆ ಹೆಬ್ಬುಲಿಯೊಂದು ಮನೆಯ ಇದಿರೇ ನಿಂತು ಅಬ್ಬರಿಸಿತು. ಮಧ್ಯಾಹ್ನ ಶಾರದೆ ಹುಳಿಗೆ ಉಪ್ಪೇ ಹಾಕಲಿಲ್ಲ. ನನಗಂತೂ ಅರವುಮರವು. ಆದರೆ ಅವಳಿಗೆ? ನನ್ನ ಪಿರಿಪಿರಿ ಅವಳಿಗೆ ಬೇಜಾರಾಗಿರಬೇಕು. ಮೈಮೇಲೆ ಸ್ವಾಧೀನ ತಪ್ಪಿದ ಬಳಿಕ ಬದುಕಬಾರದು. ಹಾಸಿಗೆಯಲ್ಲೆ ಹೇಲು ಉಚ್ಚೆಯಾಗುವ ತನಕ ನಾನು ಬದುಕದಿದ್ದರೆ ಅದೇ ನನ್ನ ಪುಣ್ಯ… ದೇವರೇ… ಗೋಡೆ ತಡವುತ್ತ ಅಡಿಗೆ ಮನೆ ಕಡೆ ತಾಯಿ ಕಾಣದ ಮಗುವಿನಂತೆ ಇನ್ನು ಅಂಬೆಗಾಲಿಡಬೇಕು. ಗೋಡೆಯ ಬಿರುಕು ಸವರಿದರೆ ಮತ್ತೆ ಕಂಬ. ಮರು ದಾಟಿದರೆ ಹೊಸಲು, ಅಮ್ಮ ಹಾಕಿದ ಹಿಟ್ಟಿನ ರಂಗೋಲೆ ಇನ್ನೂ ಕೈಗೆ ತಾಕುತ್ತದೆ. ಎಡಕ್ಕೆ ತಿರುಗಿದರೆ ದೇವರ ಮನೆ. ರಂಗ ಬಂದ ಸಂಭ್ರಮದಲ್ಲಿ ದೇವರಿಗೆ ಮೂರು ಸಂಜೆಯ ಹೊತ್ತು ದೀಪ ಹತ್ತಿಸಲು ಶಾರದೆ ಮರೆತರೂ ಆಶ್ಚರ್ಯವಿಲ್ಲ. ದೇವರ ಪೀಠದ ಮನೆ ಗಂಗೆಯಿರುವ ಗಿಂಡಿ. ಅಪ್ಪ ಅದರ ತೀರ್ಥ ಕುಡಿದು ಕಣ್ಣು ಮುಚ್ಚಿದರು. ನನ್ನ ಬಾಯಿಗೆ ಬಿಡಲು ಈ ಹುಡುಗಿಯೊಂದು ಇರುತ್ತದೆಂದು ನಾನು ತಿಳಿದೆ. ಗೋಡೆ ತಡವುತ್ತ ನೇರ ನೇರ ಹೋದರೆ ಕಡಗೋಲು ಕಂಬ. ನಸುಕು ನಸುಕಿನಲ್ಲೆದ್ದು ಅಮ್ಮ ಅಜ್ಜಿ ಮುತ್ತಜ್ಜಿ ಆ ಕಡಗೋಲು ಕಂಬದೆದುರು ಕೂತು ಮೊಸರು ಕಡೆದಿದ್ದಾರೆ. ಕಡೆಯುವಾಗ ಅವರು ಹಾಡುತ್ತಿದ್ದ ಉದಯರಾಗದ ಹಾಡು ಇನ್ನೂ ನೆನಪಿದೆ. ಏಳು ನಾರಾಯಣನೆ, ಏಳು ಮೆಲುಗಡೆ ಬೀರುವಿನಲ್ಲಿ ಲೋಟ. ಬಾಲ್ಯದಿಂದ ಎಲ್ಲ ಇದ್ದಂತೆ ಇದೆ. ಶಾರದೆ ಕೈಬಿಟ್ಟರೂ ಮೈಗೆ ಹತ್ತಿದ ಮನೆಯ ಸ್ವರೂಪ ಕಣ್ಣಿಲ್ಲದವನಿಗೆ ಮೋಸ ಮಾಡದು. ಶಾರದೇ ಶಾರದೇ ಡಬರೀಲಿ ನೀರೇ ಇಲ್ಲಲ್ಲೆ ಶಾರದೆ.

“ಅಯ್ಯ… ಅಯ್ಯ”

“ಯಾರು ಲಚ್ಚಿಯಾ ಬಂದದ್ದು.. ”

“ರಂಗಯ್ಯ ಬಂದಾರೇಂತ ಕೇಳ್ದೆ… ಮೀಯಕ್ಕೆ ಉರಿಹಾಕಿದೋಳು ಹಾಗೆ ಬಂದೆ… ”

* * *

ಶಂಕರಯ್ಯ ಹೊರಗೆ ತಡವಿಕೊಂಡು ಬಂದು ಹೊಗೆಸಪ್ಪಿನ ಚೀಲಕ್ಕೆ ಕೈ ಹಾಕಿದರು. ‘ನಿನ್ನೆ ರಾತ್ರಿ ನಿದ್ದೆ ಬರಲಿಲ್ಲ ಎಂದಿರಿ. ತಲೆಗೆ ಎಣ್ಣೆಯೊತ್ತಲೆ ಅಯ್ಯ’ ಎಂದು ಲಚ್ಚಿ ಕೇಳಿದ್ದಕ್ಕೆ ‘ಫಲಾಹಾರವಿನ್ನೂ ಆಗಿಲ್ಲ. ಈ ಮುದಿ ಕೊಠಡಿಗೆ ಆ ಶುಶ್ರೂಷೆಯೊಂದು ಬೇರೆ. ನಿನಗೆ ಬೇರೆ ಕೆಲಸವಿಲ್ಲ’ ಎಂದು ಹೊಟ್ಟೆಯ ಮೇಲೆ ಕೈಯಾಡಿಸಿದರು. ಹಾಳು ವಾಯು ಮೈ ಬೇರೆ. ನಿಟ್ಟುಸಿರಿಟ್ಟರು.

“ಅಂದ ಹಾಗೆ ಕೂಸೇ, ಸಣ್ಣಮ್ಮನ್ನ ರಂಗಯ್ಯನಿಗೆ ಕೊಟ್ಟು ಮದ್ವೆ ಮಾಡ್ಬೇಕಾಗ್ತದೊ ಏನೊ. ಬ್ರಹ್ಮಲಿಪಿ ಹಾಗಿದ್ದರೆ ನಾನು ಬಗೆದಂತೆ ಆಗೋದು ಸಾಧ್ಯವೆ?”

“ನಾನು ಎಂದೊ ನಿಮಗೆ ಹೇಳಲಿಲ್ಲವೆ ಅಯ್ಯ? ಸಣ್ಣಮ್ಮನ್ನ ರಂಗಯ್ಯನಿಗೇ ಕೊಟ್ಟು ಮದ್ವೆ ಮಾಡಿ, ನೀವೂ ಹೋಗಿ ಅವ್ರ ಜೊತೆ ಇರಿ. ನೀವೊಂದು ರಂಗಯ್ಯನಿಗೆ ಭಾರವ? ತೋಟ ಗದ್ದೇಂತ ಯೋಚಿಸಬೇಡಿ. ಅದನ್ನ ನನಗೆ ಗೊತ್ತಿಗೆಗೆ ಕೊಡಿ. ನಿಮ್ಮ ಅನ್ನ ತಿಂದು ಕಾದುಕೊಂಡು ಬಿದ್ದಿರುತ್ತೇನೆ. ನಾನೂ ಒಂದು ತರಹದಲ್ಲಿ ನಿಮ್ಮ ಮಗಳಲ್ಲವೆ?”

ಲಚ್ಚಿ ಮಾತು ಹೆಚ್ಚಾಯಿತೊ ಏನೊ ಎಂದು ಸೀರೆಯ ಸೆರಗಿನಿಂದ ಬಾಯಿ ಮುಚ್ಚಿಕೊಂಡಳು.

“ಹಾಗಲ್ಲ ಕೂಸೆ. ಪೂರ್ವದಿಂದ ಬಂದ ಮನೆಯಿದು. ಇಲ್ಲಿಯೇ ನಿಂತು ತೋಟ ಗದ್ದೆ ನೋಡಿಕೊಂಡಿರುವ ಮಾಣಿಯೊಂದನ್ನ ಸಣ್ಣಮ್ಮ… ”

“ನಿಮಗೊಂದು ಮಾತು ಹೇಳಲೆ ಅಯ್ಯ?” ಲಚ್ಚಿ ನಡುವೆ ಬಾಯಿ ಹಾಕಿದಳು. “ದೊಡ್ಡಮ್ಮನ ಗತಿ ಹಾಗಾಯ್ತು. ಆ ಮಾತು ಯಾಕೆ ಬೇಡ. ದೊಡ್ಡಯ್ಯ ಸಣ್ಣಮ್ಮನಿಗೆ ಯಾಕಿನ್ನೂ ಮದುವೆ ಮಾಡಿಲ್ಲಾಂತ ಒಕ್ಕಲು ಮಕ್ಕಳೂ ನಿಮ್ಮ ಮನೆ ವಿಷಯ ಮಾತಾಡಿಕೊಳ್ಳೋ ಹಾಗೆ ಆಗಬಾರದು ನೋಡಿ. ಸಣ್ಣಮ್ಮನ ಇಷ್ಟಕ್ಕೆ ಅಡ್ಡ ಬರಬೇಡಿ. ಮದ್ವೆ ಮಾಡ್ಸಿ ನೀವೂ ರಂಗಯ್ಯನ…. ”

“ಅದೆಲ್ಲಾಗುತ್ತೆ ಕೂಸೇ, ನಿನಗೊಂದು ಭ್ರಮೆ. ಹುಟ್ಟುಗುರುಡ ನನಗೆ ಈ ಮನೆ ಮೈಗೆ ಹತ್ತಿದೆ. ಇದನ್ನು ಬಿಟ್ಟರೆ ನಾನು ಸತ್ತಂತೆ. ಪರದೇಶಿಯಾಗಿ ಅತಂತ್ರನಾಗೆಂದು ಹೇಳುತಿಯಾ? ಅಲ್ಲದೆ ನಿನಗೆ ಗೊತ್ತಿರಲಿಕ್ಕೆ ಸಾಕು. ರಂಗಯ್ಯನ ಮುತ್ತಜ್ಜನೂ ನನ್ನ ಅಜ್ಜನೂ ಯಾವುದೊ ಸಣ್ಣ ಜಗಳಕ್ಕೆ ಬಾಯಿತಪ್ಪಿ ಆಣೆ ಹಾಕಿಕೊಂಡರಂತೆ. ನಿಮ್ಮ ಅಕ್ಕನ ಮಗಳಲ್ಲವೇ ಸಣ್ಣಮ್ಮ. ಈ ಆಣೆ ಭಾಷೆ ಅವಳಿಗೇಕೆ ಅಡ್ಡಿಯಾಗಬೇಕು ಎನ್ನುತ್ತೀಯಾ ನೀನು ಎನ್ನು. ಸೈ – ಹಾಗಾಗುವುದಾದರೆ ಆಗಲಿ. ಆದರೆ ನಾನು ಧಾರೆಯೆರೆದು ಕೊಡಲಾರೆ. ಹಿರಿಯರ ಇಚ್ಛೆಗೆ ಅಡ್ಡಿಯಾದರೆ ಪತೃಗಳು ನರಕಕ್ಕೆ ಹೋದಾರು ನೋಡು. ”

ಹಲ್ಲಿ ಲೋಚಗಟ್ಟಲು ಶಂಕರಯ್ಯ ಸತ್ಯ ಸತ್ಯ ಎಂದರು.

“ಅದೇನು ನೀವು ಆಡೋದಯ್ಯ? ನೀವೇ ಸಾಕಿ ಸಲಹಿದ್ದು ಸಣ್ಣಮ್ಮನ್ನ. ತಂದೆ ಬಿಟ್ಟು ಎಲ್ಲೊ ಓಡಿಹೋದಾಗ ಒಡಹುಟ್ಟಿದವಳ ಮಗಳೆಂದು ತಂದು ನೋಡಿಕೊಂಡಿರಿ. ಈಗ ನಿಮಗೆ ಕರುಳು ಬಳ್ಳಿ ಹೆಚ್ಚೊ? ಅಥವಾ ಈ ತೋಟ ಗದ್ದೆ ಮುತ್ತಜ್ಜನ ಕಾಲದ ಆಣೆ ಭಾಷೆ ಹೆಚ್ಚೊ? ನೀವು ಬ್ರಾಂಬ್ರಿಗೆ ಇಲ್ಲದ ಬಡಿವಾರವಪ್ಪ. ಶೂದ್ರರ ಮಕ್ಕಳೇ ವಾಸಿ. ಏನು ತಪ್ಪಾದರೂ ಸರಿಯೆ – ಪಂಜುರ್ಲಿಗೆ ತಪ್ಪು ಕಟ್ಟಿ ಬಿಡ್ತಾರೆ. ”

ಯಾವುದು ಹೆಚ್ಚು? ಶಂಕರಯ್ಯ ಯಜ್ಞೋಪವೀತಕ್ಕೆ ಹಾಕಿದ ಉಂಗುರವನ್ನು ಹಿಡಿದು ಯೋಚಿಸಿದರು. ಕೈಗಳಿಂದ ತಡವಿ, ಕಿವಿಯಿಂದ ಸೂಕ್ಷ್ಮವಾಗಿ ಆಲಿಸಿ ಜಗತ್ತಿನ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಶಂಕರಯ್ಯನಿಗೆ ಈ ಪ್ರಶ್ನೆಯನ್ನು ಎದುರಿಸಲಾರೆ ಎನ್ನಿಸಿತು. ಈಗ ಎಲ್ಲ ನಿರ್ಬಲವಾಗುತ್ತಿದೆ. ಸುತ್ತುಮುತ್ತಿನ ಜೀವನ ಕೈತಪ್ಪಿ ಹೋಗುತ್ತಿದೆ. ಕಠೋರವಾದ ವೈರಾಗ್ಯ, ಕುದಿಯುವ ಬಯಕೆ ಎರಡೂ ಯೌವನಕ್ಕೆ ಸಾಧ್ಯ; ಮುದಿಯವನಿಗೆ ಬೇಜಾರು, ಚಪಲ ಮಾತ್ರ ಸಾಧ್ಯ. ಸುತ್ತಮುತ್ತಿನ ಜೀವನ ಕೈತಪ್ಪಿ ಹೋಗುತ್ತಿದೆ. ಒಂದು ಹೆಜ್ಜೆ ಸಪ್ಪಳವಾದರೆ ಸಾಕು, ಅದು ಯಾರು ಎಂದು ತಿಳಿಯಬೇಕೆಂದು ಹಂಬಲ; ಯಾರೊ ಏನೊ ಮಾತಾಡುತ್ತಿದ್ದಾರೆ ನನಗೆ ಕೇಳಿಸುತ್ತಿಲ್ಲವೆಂದು ಸಂಕಟ. ಹಗಲೊ ರಾತ್ರೆಯೊ ತಿಳಿಯದು. ಅಪ್ಪಯ್ಯ ಹೇಳುತ್ತಿದ್ದರು ‘ಕೈಕಾಲು ಬಲ ಕಳೆದ ಮೇಲೆ ದೇವರ ಪಾದ ಸೇರಬೇಕೊ ಶಂಕರ, ಮಕ್ಕಳಿಗೆ ನಾವು ಭಾರವಾಗಬಾರದು’ ನಿಜ – ಯಾವುದೂ ಸಮಂಜಸವೆನಿಸುತ್ತಿಲ್ಲ. ನೂರು ಅಡಿಕೆ ಸಸಿ ತಂದು ನಡೊ ಎಂದರೆ ಕೊರಗನೂ ನನ್ನ ಮಾತು ಕೇಳಲಿಲ್ಲ. ಇನ್ನು ಕಂಡವರ ಕಾಲು ಬಳಿ ಕಸವಾಗಲೆ? ವಂಶಪಾರಂಪರ್ಯವಾಗಿ ಮನೆತನಕ್ಕೆ ಅನ್ನವಿತ್ತ ತೋಟವಿದೆ, ಮನೆಯಿದೆ. ಮುತ್ತಜ್ಜನ ಅಪ್ಪ ಗುಡ್ಡ ಕಡಿದು ಬೆಳೆಸಿದ ತೋಟವಂತೆ. ಅದನ್ನು ಕಾದು ಬಿದ್ದಿರುವುದೇ ಮೇಲೆಂದು ಹಣೆಯಲ್ಲಿ ಬರೆದಿರಬಹುದು. ಸುಖಾ ಸುಮ್ಮನೆ ಹಲುಬಿದರೂ ಕೈಲಾಗದವ ಮೈಪರಚಿಕೊಂಡಂತೆ. ಯಾರು ಯಾರಿಗೆ ಏನೇನು ಸುಖವೋ ಹಾಗೆ ಮಾಡಲಿ. ಈಗ ಎಲ್ಲ ನಿರ್ಬಲ.

* * *

ದನದ ಕೆಚ್ಚಲಿಗೆ ನೀರು ಚಿಮ್ಮಿ ಶಾರದ ಎಂದಳು.

“ಗೌರಿಯ ಎದುರು ಬಿಳಿಬಟ್ಟೆ ತೊಟ್ಟು ನಿಲ್ಲಬೇಡಿ. ದನ ಶುದ್ಧ ತುಡುಗು. ”

ರಂಗ ಶಾರದೆಯ ಪಕ್ಕಕ್ಕೆ ಸರಿದ.

“ನಿನ್ನ ಅಕ್ಕ ಸತ್ತ ವಿಷಯ ತಿಳೀತು. ಅದು ಯಾಕೆ ಬಾವಿಗೆ ಹಾರಿ ಸತ್ತಳೂಂತ?”

ಶಾರದ ಅಂಜುತ್ತ ಹೇಳಿದಳು.

“ಅವಳಿಗೆ ಮೂರು ತಿಂಗಳಾಗಿತ್ತು”

“ಅಂದರೆ… ”

“ಬಸುರಿಯಾಗಿದ್ದಳು. ”

ರಂಗನಿಗೆ ಫಕ್ಕನೆ ಮಾತು ತಿಳಿಯದಷ್ಟು ಸಿಟ್ಟು ಬಂತು. ಇವಳ ಅಕ್ಕನ ಆತ್ಮಹತ್ಯೆಯ ಪ್ರೇತವೊಂದು ನಮ್ಮಿಬ್ಬರ ನಡುವೆ ಬಂದಿದೆ. ಗಂಡಸನ್ನು ಕೂಡುವ ಸುಖವೇ ಕೇಡು ಎಂದು ಶಾರದೆಯೀಗ ಅಂದುಕೊಂಡಿದ್ದಾಳೆ. ಮೊದಲೇ ಜೀವನ ವಿಮುಖಿ. ವಿರಾಗಿಣಿ.

“ಕೊಂದದ್ದು ನೀನು ನಿನ್ನ ಮಾವ ಶಾರದೆ. ಮೈನೆರೆಯುವ ಮುಂಚೆ ಗಂಡ ತೀರಿದ ಹುಡುಗಿ ಬಸುರಾಗಬಾರದ? ಬಸುರು ಮಾಡಿದವನನ್ನೇ ಕಿವಿಹಿಡಿದು ತಂದು ಅವಳ ಕೊರಗಳಿಗೆ ಕಟ್ಟಿಎಲ್ಲಿಗಾದರೂ ಓಡಿಹೋಗಿ ಬದುಕಿಕೊಳ್ಳಿ ಎನ್ನಬಾರದಿತ್ತ? ಅದರ ಬದಲು ನಿನ್ನ ಮಾವ ಏನು ಶಪಿಸಿದರೊ, ನೀವೆಲ್ಲ ಸೇರಿ ಅವಳಿಗೆ ಏನು ಅವಮಾನ ಮಾಡಿದಿರೊ… ”

ಹೆಂಗಸಿನ ಕಷ್ಟ ರಂಗ ತಿಳಿಯಲಾರ. ಜ್ವರಗೆಡ್ಡೆಯಿಂದ ಮಾತು ಹಾರಿಸಿ ಕೆಲವು ದಿನ ಅಕ್ಕ ತಿರುಗಾಡಿದಳು. ಒಂದು ದಿನ ರಾತ್ರೆ ನನ್ನನ್ನು ಅಪ್ಪಿಕೊಂಡು ಅತ್ತಳು. ನಿಜ ಹೇಳಿದಳು, ನನಗೆ ಹೇಸಿಗೆಯಾಯಿತು. ಗಾಬರಿಯಾಯಿತು. ನೀನೂ ನನ್ನನ್ನು ಕಂಡು ಹೇಸುತ್ತೀಯ ಎಂದಳು. ನಾನು ಮಾತಾಡಲಿಲ್ಲ. ಬೆಳಗಾಗುವಾಗ ಸತ್ತಿದ್ದಳು. ಹೊಟ್ಟೆಯಲ್ಲಿ ಮಗುವಿತ್ತೆಂದು ನನಗೆ ಗೊತ್ತು. ಮಾವಯ್ಯನಿಗೆ ಗೊತ್ತು.

“ಅಲ್ಲೆ ಶಾರದ, ಹೇಳು ನನಗೆ. ಕೊನೆಪಕ್ಷ ಯಾರಿಗಾದರೂ ಹೇಳಿ ಬಸುರು ತಗೆಸಬಾರದಿತ್ತ? ಸಾಯುವುದಕ್ಕಿಂತ ಅದು ವಾಸಿ. ನನ್ನ ತಂದೆಯ ತಂಗಿಯೊಬ್ಬಳು ಹಾಗೆ ಮಾಡಿಸಿಕೊಂಡಿದ್ದಳಂತೆ. ಹೊರಗೆಲ್ಲ ನಮ್ಮ ಬಾಳು ಚೆಂದ, ಅಷ್ಟೆ. ಸತ್ಯಕ್ಕೇಕೆ ನೀವು ಮುಖಿ ತಿರುಗಿಸುತ್ತೀರಿ?”

ಶಾರದೆಗೂ ರೇಗಿತು.

“ನಿಮಗೆ ಹೀಗೆ ಮಾತಾಡೋದು ಬಹಳ ಸುಲಭ ಅಲ್ಲವ? ಈ ಹಳ್ಳೀಲಿ ನಾಕು ಜನರ ಜೊತೆ ಕಾಲಹಾಕಬೇಕಾದವರು ನಾವು. ನಿಮಗೇನು ಹೇಳಿ? ಕೊನೆಗೆ ವಕ್ಕಲು ಮಕ್ಕಳ ಬಾಯಲ್ಲಿ ನಮ್ಮ ಮನೆತನದ ವಿಷಯ… ”

“ಅಯ್ಯೋ ಮನೆತನ, ಮನೆತನ, ಬೆಂಕಿಯಿಡಬೇಕು ನಿಮ್ಮ ಮನೆತನಕ್ಕೆ… ”

ಬಾಯಿತೆಗೆದರೆ ಸಾಕು – ಅವರು ಏನೆಂತಾರೆ ಇವರು ಏನೆಂತಾರೆ ಎನ್ನುವ ಮಾತೆ. ಮೈತುಂಬ ಸೆರಗು ಹೊದ್ದ ಪೆಚ್ಚು ಮುಖದ ಬಿಚ್ಚೋಲೆ ಗೌರಮ್ಮನ ಬೋಗಾರು ದುಃಖ. ಚಿಕ್ಕವಯಸ್ಸಿನಿಂದ ಕೇಳಿ ಕೇಳಿ, ಆಡಿ ಆಡಿ ಅಭ್ಯಾಸ ಬಿದ್ದುಹೋದ ಮಾತುಗಳು. ನಿಜ ಜೀವನದ ಅನುಭವವೇ ಬೇರೆ. ಬಾಳಿಗೂ ನಂಬಿಕೆಗೂ ಸಂಬಂಧ ಕಡಿದುಹೋಗಿ, ಬಾಳು ಶುಷ್ಕವಾಗಿದೆ. ನಂಬಿಕೆ ಮೂಢವಾಗಿದೆ. ಹೂಬತ್ತಿ ಹೊಸೆಯುತ್ತ ಮಂಕಾಗಿ ಕೂತಿರುತ್ತಿದ್ದ ಪಾರ್ವತಿ ಯಾವನಿಗೂ ಬಸುರಾಗುವಷ್ಟು ಧೈರ್ಯಮಾಡಿದಳಲ್ಲ – ಅವಳೇ ವಾಸಿ. ನಾನು ಕನಸುಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಬದುಕಿನ ಶುಭ್ರಗಾಳಿ ಶಂಕರಯ್ಯನ ಪ್ರೇತಗೃಹಕ್ಕೆ ಒಂದು ಸಾರಿ ಬೀಸಿತು. ಆದರೆ ಮತ್ತೆ ಅವಳು ಸತ್ತು ಸರ್ವನಾಶ ಮಾಡಿದಳು. ಕತ್ತಲೆಗಷ್ಟು ಕತ್ತಲೆ ಸೇರಿಸಿ ಸತ್ತಳು. ನನಗೆ ಶಾರದೆ ದಕ್ಕದಂತೆ ಮಾಡಿದಳು, ಮತ್ತೇನು ಮಾಡಿಯಾಳು ಪಾಪ. ನಾನಿದ್ದಿದ್ದರೆ ಗುಟ್ಟಾಗಿ ಕರೆದುಕೊಂಡು ಹೋಗಿ ಬಸುರು ತೆಗೆಸುತ್ತಿದ್ದೆ. ಅವಳ ಜೀವ ಉಳಿಸುತ್ತಿದ್ದೆ. ಆದರೆ ಇಲ್ಲಿ ಕಂಡ ಕಂಡವರೆಲ್ಲ ನೀನು ಸಕೇಶಿ, ನಿನ್ನ ಸ್ನಾನ ಮಾಡಿದ ತಲೆನೀರು ನೆಲಕ್ಕೆ ಬೀಳಬಾರದು, ಮೈಲಿಗೆ ಎನ್ನುತ್ತಿದ್ದರು. ಬದುಕಿದ್ದೆಲ್ಲ ಗಂಡಸತ್ತ ಮುಂಡೆಯರ ಜೊತೆ; ಅಥವಾ ಗಂಡಂದಿರಿಗೆ ಬಡಿಸಿಯಾದ ಮೇಲೆ ‘ಉಸ್ಸಪ್ಪ’ ಎಂದು ಎರಡನೆಯ ಪಂಕ್ತಿಗೆ ಕೂರುವ ಹೆಂಗಸರ ಜೊತೆ. ಹೆಣ್ಣಿನ ಹಣೆಬರಹವೆ ಇಷ್ಟೊ ಏನೊ!

ಆದರೆ ನನ್ನ ಶಾರದಾ ಹಾಗಲ್ಲ. ಹೆಂಗಸರ ಜೊತೆ ಕೂತು ಹೆಚ್ಚು ಹರಟುವವಳಲ್ಲ. ಒಂಟಿಯಾಗಿ ಇರುತ್ತಾಳೆ. ದೊಡ್ಡ ಗುಂಪಿನಲ್ಲಿದ್ದರೂ ಕಣ್ಣಿಗೆ ಹೊಡೆಯುವಂತೆ ಇವಳ ನಿಸ್ಸಂಗದ ತೇಜಸ್ಸು. ಏಕಾಂಗಿನಿ ಇವಳು. ಕಣ್ಣೆತ್ತಿ ನೋಡಿದರೆ ಸಾಕು, ಮಾತಾಡಿದಂತೆ. ತುಳಸಿ ಕಟ್ಟೆಯ ಎದುರು ಇವಳು ರಂಗೋಲೆ ಇಡುತ್ತ ಕೂತಿರೋದು ನೋಡಬೇಕು.

ತಲೆಯ ಮೇಲೆ ಬಿಳಿಸೆರಗು ಹೊದ್ದು ಮೈಮುಡಿಕಟ್ಟಿ ಹಾಲು ಕರೆಸುತ್ತಿರುವ ಶಾರದ, ಅಮೃತಶಿಲೆಯ ಸುಂದರವಾದ ಗೋರಿ, ಬೆಳ್ದಿಂಗಳಿನಲ್ಲಿ ದೂರ ನಿಂತು ನೋಡಬೇಕು, ಎರಡು ಕಣ್ಣು ಸಾಲದು. ಯಾಕುಂದೇಂದು ತುಷಾರ ಹಾರಧವಳಾ ಯಾಶುಭ್ರವಸ್ತ್ರಾನ್ವಿತಾ, ಬಿಳಿಯ ಕುಂದಪುಷ್ಪ, ಬಿಳಿಚಂದ್ರ, ಬೆಳ್ಳಗಿನ ನೊರೆಹಾರ, ಮೈಮೇಲೆ ಬಿಳಿಯದೊಂದು ದುಕೂಲ, ರಾಗದ ಹಾಗೆ ಬರಿ ಮಾನಸೆ, ಪ್ರಸನ್ನೆ. ಇವಳ ರೂಪ ಶರದೃತುವಿನಂತೆ ಶುಭ್ರ, ಸೌಮ್ಯ, ಚೈತ್ರದುತ್ಸಾಹವಿಲ್ಲ, ರಂಗು ರಂಗಿನ ಬಿಂಕವಿಲ್ಲ. ಕಾರ್ತೀಕದ ಹಣತೆಯ ದೀಪದಂತೆ ಕಣ್ಣುಗಳು. ನೀಳವಾಗಿ, ಪ್ರಸನ್ನವಾಗಿ ಕಣ್ಣೆದುರು ನಿಶ್ಚಲ ಉರಿಯುತ್ತಿರುತ್ತಾಳೆ. ನಾಲ್ಕು ಕಾಲಿನ ಮೇಲಿನ ಅಂಬೆಗಾಲಿನ ಪಶು ಪ್ರಣಯಕ್ಕೆ ಮೈಲಿಗೆಯಾಗುತ್ತಾಳೆ. ಮುಟ್ಟಿದರೆ ಬಾಡುವ ಪಾರಿಜಾತ ಇವಳು. ಲಚ್ಚಿಯ ಮನೆಯಿಂದ ಬಂದವನು ಅಕ್ಕಿ ಆರಿಸುತ್ತ ಕೂತ ಇವಳನ್ನು ನೋಡಿ ಬೆಚ್ಚಿಬಿದ್ದೆ. ಹೇಳಿಕೊಳ್ಳಲು ಬಾಯಿ ಬರಲಿಲ್ಲ. ನೀರಿನ ಮೇಲೆ ಉರಿಯುವ ಕರ್ಪೂರದಂತೆ ನನ್ನ ಬಾಳಿನಲ್ಲಿ ಇವಳು, ಯಾಕೆ ಬಂದಳೊ? ನನ್ನ ಕೊನೆಯ ಗತಿ, ನನ್ನ ವಿಧಿ ಇವಳೇ ಯಾಕೆ ಆಗಬೇಕಿತ್ತೊ? ಇವಳನ್ನು ಬಿಟ್ಟು ಬದುಕಲಾರೆ ಎನ್ನುವ ಪ್ರಾಣದ ತ್ರಾಣ ಹೀರುವ ಹಂಬಲ ನನ್ನನ್ನು ಯಾಕೆ ಕಾಡುವುದೊ? ಗಡಸು ಕಂಠದ ಒರಟು ಕೂದಲಿನ ಕಿರಿಕಿರಿ ಕೋಪದ ಗಂಡು ನಾನು. ಪಶು ನಾನು. ಇವಳು ಬರಿ ಮಾನಸೆ… ಶಾರದೆ… ಸೌಮ್ಯೆ… ವೃಂದಾವನದ ಎದುರು ಮೈಮೇಲೆ ಐನೀರಿನ ಒದ್ದೆ ಕೂದಲನ್ನು ಚೆಲ್ಲಿ ಕಣ್ಣು ಮುಚ್ಚಿ ಬಾಗಿದ್ದಳು. ಮುಂದೆ ಪುಟ್ಟ ಪುಟ್ಟ ನೀಲಾಂಜನ. ಚುಮುಚುಮೂ ನಸುಕು ಆಗ. ಹೈಸ್ಕೂಲಿನಲ್ಲಿ ಓದುತ್ತಿದ್ದ ನಾನು ಓದಿದ ಒಂದು ಕಥೆಯನ್ನು ಹೇಳಿದೆ. “ಒಂದಾನೊಂದು ಊರಲ್ಲಿ ಒಬ್ಬ ರಾಜಕುಮಾರಿ, ತ್ರಿಪುರ ಸುಂದರಿ. ಏನೋ ಶಾಪ ಅವಳಿಗೆ. ಹುಟ್ಟಿದ ಕೂಡಲೆ ನಿದ್ರೆ ಹೋಗಿಬಿಟ್ಟಳು. ದೀರ್ಘವಾದ ನಿದ್ರೆ. ಕನ್ನಿಕೆಯಾಗಿಯೇ ಉಳಿದಳು. ದಿನದ ಮೇಲೆ ದಿನ ತುಂಬಿತು. ಕೊನೇಗೊಂದು ದಿನ ಮುಟ್ಟಿ ಎಬ್ಬಿಸೋಕೆ, ತಟ್ಟಿ ಎಬ್ಬಿಸೋಕೆ, ಬರ್ತಾನೆ ಒಬ್ಬ ಕುದುರೆ ಹತ್ತಿ… ” ಓದಿದ ಕಥೆ ಎಲ್ಲದರ ನಾಯಕ ನಾನು ನಾಯಿಕೆ ಶಾರದೆ ಎಂದು ಭ್ರಮಿಸುತ್ತಿದ್ದ ಕಾಲವದು. ಅದಕ್ಕೆ ಶಾರದೆ ‘ಅಂದರೆ’ ಎಂದಳು. ‘ಒಗಟಿನಂತೆ ಕಾಣುತ್ತೆ’ ಎಂದಳು. ನಾನು ನಕ್ಕೆ. ಕಣ್ಣಿನ ಮೇಲೆ ಬಂದ ಕೂದಲನ್ನು ತಳ್ಳುತ್ತ, ಕೈಯಲ್ಲಿ ತುಳಸಿಗೆ ಮುಡಿಸಿದ ಸಂಪಿಗೆಯ ಹೂವೊಂದನ್ನು ಹಿಡಿದು ಎದ್ದು ನಿಂತಳು. ಆಗ ಸೂರ್ಯ ಅವಳ ಮಯಯ ಮೇಲೆಲ್ಲ ಬಂಗಾರದ ಒಡವೆಗಳನ್ನು ಚಿಮ್ಮಿದ. ನನಗೆ ಮಾತು ಬರಲಿಲ್ಲ.

“ಹೋಗಲಿ ಬಿಡು ಶಾರದ. ನೀನು ಚೆನ್ನಾಗಿದೀಯ ಹೇಳು. ನಾನಂತೂ ನಾಕು ವರ್ಷದ ಹಿಂದೆ ಹೇಗಿದ್ದೆನೊ ಹಾಗೆ ಇದ್ದೀನಿ.”

ಶಾರದೆ ಗೌರಿಯ ಬೆಚ್ಚನೆ ಹೊಟ್ಟೆಗೆ ಹಣೆಯೊಡ್ಡಿ ಬೆವರಿದಳು. ರಂಗ ಇನ್ನೂ ಮದುವೆಯಾಗಿಲ್ಲೆಂದು ನನಗೆ ಸಂತೋಷವಲ್ಲವೆ? ಗೌರಿಯ ಕೆಚ್ಚಲನ್ನು ಸೆಳೆಯುತ್ತಿದ್ದ ಬೆರಳು ಕಂಪಿಸಿತು. ರಂಗನುಟ್ಟ ಪಂಚೆ ಬೆನ್ನು ಸವರಲು ಉಂಗುಷ್ಠದಿಂದ ನೆತ್ತಿಯವರೆಗೆ ಬೆಚ್ಚಗಾಯಿತು. ಬೂದಿ ಮುಚ್ಚಿದ ಕೆಂಡದಂತೆ ಮುದುರಿ ಕೂತವಳನ್ನು ರಂಗ ನಿಷ್ಠುರ ದೃಷ್ಟಿಯಿಂದ ನೋಡಿದ. ಶಾರದೆಯ ಸೆರಗು ಜಾರಿತು. ನಸುಗೆಂಪು ಕತ್ತಿನ ಮೇಲೆ ಹೆಬ್ಬೆಟ್ಟು ಗುರುತಿನಗಲದ ಮುಚ್ಚೆ. ಚಿರಪರಿಚಿತವಾದ ನೀಳವಾದ ಹೆಣ್ಣಿನ ದೇಹ. ಶಾರದೆಯೂ ಎಲ್ಲ ಹೆಣ್ಣುಗಳ ಹಾಗೆ ಇನ್ನೊಂದು ಹೆಣ್ಣು ಜೀವ. ಹೊಟ್ಟೆಯಲ್ಲಿ ಕರುಳಿದೆ, ಗರ್ಭಕೋಶವಿದೆ, ಪಿತ್ಥ – ಕೋಶವಿದೆ, ಅಂಡಾಶಯಗಳಿವೆ. ಬರಿ ಮಾನಸೆಯೆಂಬುದೊಂದು ಮನಸ್ಸಿನ ಭ್ರಾಂತಿ. ಚಿಕ್ಕ ವಯಸ್ಸಿನಿಂದಲೂ ಜೊತೆಯಲ್ಲಿ ಬೆಳೆದವರಲ್ಲವೆ? ಹುಡುಗಾಟಿಕೆಯಲ್ಲಿ ಬೆತ್ತಲೆ ನೋಡಿದ್ದುಂಟು; ಗುದ್ದಾಡಿದ್ದು ಉಂಟು. ಚಿರಪರಿಚತನಾದ ನನ್ನಲ್ಲಿ ಇವಳಿಗೆ ಬಯಕೆಯಿಲ್ಲವೊ ಏನೊ. ಒಡಹುಟ್ಟಿದ ತಂಗಿಯಂತೆಯೂ ಅಲ್ಲ; ಕೊನೆಗೆ ಕಾಮಿಸಿದ ಹೆಣ್ಣಿನಂತೆಯೂ ಅಲ್ಲ. ಇವಳ ಜೊತೆ ನನ್ನ ಸಂಬಂಧವೇನು? ಬೇರೆ ಯಾವ ಹುಡುಗಿಯೂ ಇವಳು ಬೇಕು ಎನ್ನಿಸುವ ಹಾಗೆ ಯಾಕೆ ಅನ್ನಿಸುವುದಿಲ್ಲ? ಮೈನೆರೆದ ದಿನದಿಂದಲೂ ನನ್ನನ್ನು ಹೀಗೆ ಪೀಡಿಸುತ್ತಿದ್ದಾಳೆ. ಒಟ್ಟಿಗೆ ಕುತೂಹಲ ಭಾರತ ಓದೋಣ, ಅಳೋಣ, ನಿಟ್ಟುಸಿರಿಡೋಣ, ಹಾರುವ ಬೆಳ್ಳಕ್ಕಿಗಳನ್ನೆಣಿಸೋಣ, ರಂಜದ ಹೂವಾರಿಸೋಣ, ಆದರೆ ಮತ್ತೇನೂ ಬೇಡ. ಯಾಕೆ ಬೇಡ?

ದನಕಾಯುವ ಹುಡುಗನೊಬ್ಬ ಜೊತೆಗಾತಿಯೊಬ್ಬಳೊಡನೆ ತುಂಗೆಯ ಮರಳಿನ ಮೇಲೆ ತಬ್ಬಿ ಮಲಗಿದ್ದನ್ನು ನೋಡಿದ ರಂಗ ಹೂವಾರಿಸುತ್ತಿದ್ದ ಶಾರದೆಯನ್ನು ಹಿಡಿದೆಳೆದಿದ್ದ; ಕೆಣಕಿದ್ದ. ಅತ್ತು ಬಿಟ್ಟಳು ಶಾರದೆ. ತಾನೊಬ್ಬ ಮಹಾಪಾತಕಿ, ಹೆಣ್ಣಿನ ದೇಹ ಬಯಸುವ ಕಾಮುಕಿ, ಎನ್ನುವ ಭಾವನೆ ಬರುವಂತೆ ಮಾಡಿದ್ದಳು. ಅವತ್ತಿನಿಂದ ಪ್ರಾರಂಭವಾಯಿತು ಅಸಹಜ ಆದರ್ಶಜೀವನ. ರಾತ್ರೆಯೆಲ್ಲ ಕಾಮುಕವಾಗಿ ಶಾರದೆಯ ಬಗ್ಗೆ ಚಿಂತಿಸಿ ಹಗಲು ಜೋಲುಮೋರೆ ಹಾಕಿಕೊಳ್ಳುವುದು, ತಪ್ಪಾಯಿತೆ ಎಂದು ಸಂಕಟ ಪಡುವುದು. ಸ್ವರತಿ ಎಷ್ಟು ಹೀನವಾದದ್ದು ಎನ್ನುವುದನ್ನು ಒಂದು ಪುಸ್ತಕದಲ್ಲಿ ಓದಿ, ವಿಪರೀತ ಅವಮಾನವಾಗಿ, ತನ್ನ ಕಣ್ಣಿನ ಸುತ್ತ ಕಪ್ಪಾಗುತ್ತಿದೆಯೆಂದು ಚಡಪಡಿಸಿದ. ಪುಸ್ತಕ ಹೇಳುವ ಪ್ರಕಾರ, ತುಳಸಿ ತಿಂದ, ಗೋಮೂತ್ರ ಕುಡಿದು ತಲೆಯ ಮೇಲೆ ನಿಂತ, ಟ್ರಂಕಿನ ಮೇಲೆ ಇನ್ನೊಂದು ಟ್ರಂಕಿಟ್ಟು ಕಾಲನ್ನು ಅದರ ಮೇಲಿಟ್ಟು ಜೈ ಹನುಮಾನ್ ಎಂದು ಧ್ಯಾನಿಸುತ್ತ ಮಲಗಿ ರಾತ್ರೆ ಕಳೆದ. ಆದರೂ ವೀರ್ಯ ಊರ್ಧ್ವಾಭಿಮುಖವಾಗಲಿಲ್ಲ. ಮುಖದ ತೇಜಸ್ಸು ಏರಲಿಲ್ಲ. ಎಲ್ಲ ಎಷ್ಟು ಸುಳ್ಳು – ಕೆಲವು ಸಾರಿ ತೋರುಗಾಣಿಕೆ ಬೇರೆ. ಶಾರದೆ ತಲೆಗೂದಲು ಸವರತ್ತ ಹೇಳುತ್ತಿದ್ದಳು – “ಇಬ್ಬರೂ ಮದುವೆಯಾಗದೆ ಹೀಗೆಯೇ ಇದ್ದು ಬಿಡಬಹುದು ಅಲ್ಲವಾ?” ಅಕ್ಕಮಹಾದೇವಿ, ಪ್ರಭುದೇವ; ಶಾರದಾಮಣಿ ಪರಮಹಂಸ – ಎಲ್ಲ ಆದರ್ಶಗಳನ್ನೂ ಶಾರದೆಯ ಬಾಯಿಂದ ಕೇಳಿದ. “ನನ್ನನ್ನು ಸಾಕಿದ ಕುರುಡು ಮಾವಯ್ಯನ ಶುಶ್ರೂಷೆಯಲ್ಲಿ ನಾನು ಕಾಲ ಹಾಕುತ್ತೇನೆ. ನೀನೊಬ್ಬ ದೊಡ್ಡ ಸಂತನಾಗಿ ಬಾ” ಎಂದ ಶಾರದೆಯ ಮಾತನ್ನು ಒಪ್ಪಿಕೊಂಡ. ಆದರೆ ಶಾರದೆಯ ಸುಂದರವಾದ ಏರು ತಗ್ಗಿನ ಮೈಕಟ್ಟು ತುಂಬಿಕೊಂಡಂತೆಲ್ಲ ಆದರ್ಶಗಳು ಕರಗಿದವು. ಪ್ರತಿಯೊಬ್ಬ ಧೈರ್ಯವಾದಿ ಭಾರತೀಯ ಯುವಕನಿಗೂ ಸಾಮಾನ್ಯವಾಗಿ ಅನುಭವಗಳಿವು, ನನ್ನದು ವಿಚಿತ್ರವಲ್ಲ, ನಮ್ಮ ಅಸಹಜ ಸಾಮಾಜಿಕ ಪದ್ಧತಿಯೇ ಇವಕ್ಕೆಲ್ಲ ಕಾರಣ. ಜೀವನ ವಿಮುಖ ಆಧ್ಯಾತ್ಮಕ್ಕಷ್ಟು ಬೆಂಕಿಯಿಕ್ಕಿತು ಎಂದು ಒಂದು ದಿನ ನಿರ್ಧರಿಸಿ – ನಾಲ್ಕು ವರ್ಷಗಳ ಕೆಳಗೆ ಹೋಗುವವ ಶಾರದೆಗೆ ಹೇಳಿದ.

“ಈ ಆದರ್ಶಗಳೆಲ್ಲ ಅಸಹಜ ಮಾತ್ರವಲ್ಲ ಶಾರದ. ಇವು ನಮ್ಮನ್ನು ಇನ್ನಷ್ಟು ಕ್ರೂರ ಮಾಡುತ್ತವೆ. ನಿನ್ನ ತಂದೆ ನಿಮ್ಮನ್ನು ತೊರೆದು ಓಡಿ ಹೋಗದಿದ್ದರೆ, ಕುರುಡು ಶಂಕರಯ್ಯ ನಿನ್ನನ್ನು ಬೆಳೆಸದಿದ್ದರೆ, ಅವರ ಮನೆಗೂ ನಮಗೂ ಆಣೆ ಭಾಷೆಯಾಗಿರದಿದ್ದರೆ ನೀನು ಹೀಗೆ ಮಾತಾಡುತ್ತಿರಲಿಲ್ಲ. ನಮ್ಮ ಕೈಯಿಂದ ಏನಾದರೂ ಸಾಧ್ಯವಾಗದಿದ್ದಾಗ ನಾವು ಹೀಗೊಂದು ವೇದಾಂತ ಮಾಡಿಕೊಳ್ಳುತ್ತೇವೆ ಶಾರದ. ಪರವಂಚನೆಗಿಂತ ಆತ್ಮವಂಚನೆ ಹೇಸಿಗೆ. ಪರಿಸ್ಥಿತಿ ನಮ್ಮ ಕೈಮೀರಿದೆ ಎಂದು ಒಪ್ಪಿಕೊಳ್ಳಲು ನಿನಗೆ ಅಹಂಕಾರ ಬಿಡುವುದಿಲ್ಲ. ಅದಕ್ಕಾಗಿ ಈ ಅನುಕೂಲ ವೇದಾಂತವಲ್ಲವೆ? ಇನ್ನು ಮುಂದೆ ನನ್ನನ್ನು ನೀನು ಸುಳ್ಳು ಹೇಳಿ ಮೋಸ ಮಾಡಲಾರೆ. ಹಳೆಯದೆಲ್ಲ ತೊರೆದು ನನ್ನ ಜೊತೆ ಬಾ. ಮಾವಯ್ಯ, ಈ ಮನೆತನ ನಿನ್ನ ಭೂತ; ನಾನು ನಿನ್ನ ಭವಿಷ್ಯ. ಒಪ್ಪಿಕೊ ಅಥವಾ ಇಲ್ಲೆ ಹಳೆಯದಕ್ಕೆ ಗಂಟು ಬಿದ್ದು ಕೊಳಿ…. ”

ಮೈಸೂರಿಗೆ ಹೋದವನು ಮತ್ತೊಂದು ಕಾಗದ ಬರೆದ.

ಮುದಿ ಜೀವದ ಶುಶ್ರೂಷೆಗೆಂದು ನಿನ್ನ ಯೌವನವಿರುವುದಲ್ಲ. ನಿನಗಾಗಿ ನೀನು ಬದುಕಬೇಕು; ನನಗಾಗಿಯೂ ಬದುಕಬೇಕು. ಇಲ್ಲದಿದ್ದರೆ ಕೊನೆಯಲ್ಲಿ ನಿನಗೇ ಜೀವನ ಸಪ್ಪೆಯಾಗಿ ಶುಷ್ಕವಾಗಿ ಕಾಣುತ್ತೆ. ಮೈಯ ಬಯಕೆಯನ್ನು ಧಿಕ್ಕರಿಸಿ ಮೀರಿ ಬದುಕಿದರೆ ಮುದುಕಿಯಾದ ಮೇಲೆ ನೀನು ಶುದ್ಧ ಪಿರಿ ಪಿರಿಯಾಗುತ್ತಿ. ಚಿಕ್ಕ ಹುಡುಗಿಯರ ಜೀವ ಹಿಂಡುವ ಪಿಶಾಚಿಯಾಗುತ್ತಿ. ಇದು ನೈಸರ್ಗಿಕವಲ್ಲ. ದಳ ಚಾಚುವಷ್ಟು ಮಾತ್ರ ಹೂ ಅರಳಬೇಕು. ಮದುವೆಯಾಗುವುದಿಲ್ಲೆಂದು ಹಠ ಹಿಡಿದ ಹೆಣ್ಣುಗಳು ಏನಾಗುತ್ತವೆಂದು ನಾನಿಲ್ಲಿ ನಿತ್ಯ ನೋಡುತ್ತೇನೆ. ಅವರಲ್ಲಿ ಕೆಲವರು ಯೌವನಕ್ಕೆ ಕಾಲಿಟ್ಟ ಹೆಣ್ಣು ಹುಡುಗಿಯರ ಜೊತೆ ವಿಪರೀತ ಸ್ನೇಹ ಮಾಡಿಕೊಂಡು ತಿರುಗುತ್ತಾರೆ. ಹೊಲಸು ರೀತಿಯ ಚಿನ್ನಾಟ ಅವರದು. ಅಸಹಜ ಕಾಮ, ಇವರೇ ವಾಸಿ. ಉಳಿದವರ ಮಾನವದ್ವೇಷಿಗಳಾಗುತ್ತಾರೆ. ಪೋಲಿ ಗಂಡಸರನ್ನ ದ್ವೇಷಿಸುವುದೇ ಜೀವನದ ಪರಮಧ್ಯೇಯವೆಂದುಕೊಳ್ಳುತ್ತಾರೆ. ನೀನು ಹಾಗಾಗಿಬಿಡಬಾರದು ಶಾರದ. ಒಣಗಿ ಹೋಗಬೇಡ. ”

ರಂಗನ ಮಾತುಗಳೆಲ್ಲ ಶಾರದೆಗೆ ಮನಸ್ಸಿನ ವಿಕಾರವಾಗಿ ಕಂಡಿದ್ದುವು. ಇವನು ಏನೇನೊ ಹೊಸ ಪುಸ್ತಕಗಳನ್ನು ಪೇಟೆಯಿಂದ ಓದಿಕೊಂಡು ಬಂದು ನನ್ನನ್ನು ಹಿಂಸಿಸುತ್ತಾನೆ. ಮೈಸೂರಿಗೆ ಓದಲು ಹೋಗದಿದ್ದರೆ ಹಳ್ಳಿಯೇ ಸಾಕೆಂದಿರುತ್ತಿದ್ದ. ನೆಮ್ಮದಿಯಿಂದ ಪರಂಪರೆಯಿಂದ ಬಂದದ್ದನ್ನು ನೋಡಿಕೊಂಡಿರುತ್ತಿದ್ದ. ಪೇಟೆಗೆ ಹೋಗಿ ತಲಯಲ್ಲಿ ಏನೇನೋ ತುಂಬಿಕೊಂಡ. ಕೊಪ್ಪಲಿನಲ್ಲಿಯೇ ಇರಲು ಒಪ್ಪಿದ್ದರೆ ಮದುವೆಯಾಗಬಹುದಿತ್ತು. ಮಾನವ ಶುಶ್ರೂಷೆ ಮಾಡಿಕೊಂಡು ಇರಬಹುದಿತ್ತು. ಇಲ್ಲ – ರಂಗನಿಗೆ ಎಲ್ಲ ತನ್ನ ಮೂಗಿನ ನೇರಕ್ಕೇ ಆಗಬೇಕು. ಪ್ರೀತಿಸುವಾಗಲೂ ‘ಆಹಾ ನಾನೆಷ್ಟು ಪ್ರೀತಿಸುತ್ತೇನೆ ನೋಡಿದೆಯಾ’ ಎನ್ನುವ ಅಹಂಕಾರ. ಈಗ ಮತ್ತೇಕೆ ಬಂದನೋ. ಇಷ್ಟೇಕೆ ಕಠೋರವಾಗಿ ಮಾತಾಡುವನೊ. ಮುದುರಿ ದನ ಕರೆಯುತ್ತಿದ್ದ ಶಾರದ ತನಗಿನ್ನೇನು ಕಾದಿದೆಯೊ ಎಂದು ಹೆದರಿದಳು.

“ನಿನ್ನ ಮೊಳಕೈಯಲ್ಲೇನು ಗಾಯ ಶಾರದ? ಬಿದ್ದಿಯಾ?”

ಬೆಂಕಿಯುಗುರಿನಂತೆ ಮುಟ್ಟಿದ ಪ್ರಶ್ನೆಗೆ ಕೈಹಂದಿ ಕರೆಯುತ್ತಿದ್ದ ಹಾಲಿನ ಧಾರೆಯೊಂದು ನೆಲದ ಪಾಲಾಯಿತು. ಜಾರಿದ್ದ ಸೆರಗನ್ನು ಮತ್ತೆ ಹೊದ್ದುಕೊಂಡಳು. ರಂಗನ ಒಂದು ಮಾತಿಗೆ ಮನಸ್ಸಿನ ಅಸಹನೀಯ ಬಿಗು ಹೇಗೆ ಮಾಯವಾಯಿತು! ಇಲ್ಲ ಇವನಿಲ್ಲದೆ ನಾನು ಬದುಕಲಾರೆ. ಮಾವಯ್ಯ, ಏನು ಮಾಡಲಿ ಹೇಳಿ. ದೇವರೇ ಹೇಳು. ಲಾಟೀನಿನ ಮೊಗ್ಗಿನಂತಹ ಬೆಳಕನ್ನು ಶಾರದೆಯ ಮುಖಕ್ಕೆತ್ತಿ “ನಿನ್ನ ಕತ್ತಿಗೆ ಒಪ್ಪುತ್ತದೆಂದು ಕರಿಮಣಿ ಸರ ತಂದಿದ್ದೇನ ಶಾರದ” ಎಂದ. ಒಂದೊಂದು ಸಾರಿ ಎಷ್ಟು ಮೃದುವಾಗಿ ಸೌಮ್ಯವಾಗಿ ಮಾತಾಡುತ್ತಾನಲ್ಲವೆ? ಕೆಚ್ಚಲಿನ ಭಾರ ಹಗುರಾಗಲು ತೃಪ್ತಿಯ ಉಸಿರೆಳೆದ ಗೌರಿಯ ಮೈ ಸವರಿ ಹಾಲು ತುಂಬಿದ ಪಾತ್ರೆಯನ್ನು ಶಾರದೆ ಸೆರಗಿನಿಂದ ಮುಚ್ಚಿ ನಿಂತಳು.

“ಕೌಲಿ ಗಬ್ಬದ ಹಸು. ಕೊಟ್ಟಿಗೆಗೆ ಬಂದೇ ಇಲ್ಲ” ಎಂದು ‘ಕಟ್ಟುಬಾಯ್ ಕಟ್ಟುಬಾಯ್’ ಎನ್ನುತ್ತ ಕೊಟ್ಟಿಗೆಯ ಹೊರಗೆ ಹೋಗಿ ಕೂಗಿದಳು. “ಹಳ್ಳಿಯಲ್ಲೀಗ ಹುಲಿಯ ಕಾಟ ಏನು ಅನಿಷ್ಟವೊ” ಎಂದದ್ದಕ್ಕೆ ರಂಗ “ಊಟವಾದ ಮೇಲೆ ನೋಡಿಕೊಂಡು ಬರೋಣ. ನಾನೂ ಜೊತೆಗೆ ಬರುತ್ತೇನೆ” ಎಂದ. ಶಾರದೆ ಹೂ ಎಂದಳು.

* * *

ಪಡಸಾಲೆಯಲ್ಲಿ ಲಚ್ಚಿ ಕೂತಿರುವುದು ನೋಡಿ ರಂಗ ‘ಏನೇ ಲಚ್ಚಿ’ ಎಂದ. ‘ಯಾವಾಗ ಬಂದಿರಿ ರಂಗಯ್ಯ?’ ಎಂದು ಅವಳು ತುಂಬ ಹತ್ತಿರ ಬಂದು ನಿಂತಳು. ‘ನಿಮ್ಮನ್ನೇ ನೋಡಲು ಬಂದೆ. ಎಷ್ಟು ವರ್ಷವಾಗಿ ಬಿಟ್ಟಿತಲ್ಲಯ್ಯ’ ಎಂದಳು. ‘ನಿನ್ನ ಅಮ್ಮ ಸತ್ತಳಂತೆ – ಪಾಪ. ನೀನು ಚೆನ್ನಾಗಿದೀಯ. ಮದುವೆಯಾಯಿತಂತೆ ನಿನಗೆ – ನಿನ್ನ ಗಂಡ ಹೇಗಿದಾನೆ? ಈಗೇನು ಮಕ್ಕಳೆ?” ಎಂದು ವಿಚಾರಿಸಿದ. ‘ನನ್ನ ಗುಡಿಸಲಿಗೂ ಬಂದು ಹೋಗಬಾರದ? ಬೆಳಿಗ್ಗೆ ಅವರು ತೋಟದ ಕೆಲಸಕ್ಕೆ ಹೋಗುತ್ತಾರೆ. ಒಬ್ಬಳೇ ಇರುತ್ತೇನೆ’ ಎಂದು ನಾಚಿದಳು. ಕತ್ತು ಓರೆಮಾಡಿ ಮಾಟವಾದ ಬಾಯಿಯನ್ನ ಸ್ವಲ್ಪ ತೆರೆದು ನಿಂತಳು. ರಂಗ ಶಂಕರಯ್ಯನಿಗೆ ಕೇಳದಂತೆ ಪಿಸುಮಾತಿನಲ್ಲಿ ಹೇಳಿದ. “ಬೇಡ ಲಚ್ಚಿ. ಇನ್ನು ನನಗೆ ಬೇಡ ಲಚ್ಚಿ. ಸಣ್ಣಮ್ಮ ಮದುವೆಯಾಗಲು ಒಪ್ಪುತ್ತಾಳೋ ಕೇಳಲು ಬಂದೆ. ನೀನು ತುಂಬ ಒಳ್ಳೆಯವಳು ಲಚ್ಚಿ”. ಲಚ್ಚಿ ಓರೆಯಾಗಿ ನೋಡುತ್ತ ನಕ್ಕಳು. “ನಾನೇನು ಮಹಾ, ಬಿಡಿಯಯ್ಯ – ನೀವು ಒಳ್ಳೇ ಹೇಳ್ತೀರಿ. ನಿಮ್ಮ ಮದುವೆ ಕಣ್ತುಂಬ ನೋಡೋದೆ ನನ್ನ ಆಸೆ ಅಲ್ಲವ? ಹೋಗಲಿ ಈ ತೋಟವೊಂದನ್ನ ನನ್ನ ಅಮ್ಮನ ನೆನಪಿಗಾದರೂ ದೊಡ್ಡಯ್ಯ ನಮ್ಮ ಹೆಸರಿಗೆ ಮಾಡಿಸಿಕೊಡಲು ಹೇಳಿ. ನಿಮ್ಮ ಹೊಟ್ಟೆ ತಣ್ಣಗಿರಲಿ” ‘ನೋಡೋಣ’ ಎಂದ ರಂಗ.

ಒಳ್ಳೆಯ ಹುಡುಗಿ ಲಚ್ಚಿ. ತುಂಬ ಒಳ್ಳೆಯ ಹುಡುಗಿ ಲಚ್ಚಿ. ಎಣ್ಣೆಗೆಂಪು ಬಣ್ಣದ, ಮಾಟವಾದ ಮೂಗಿನ, ತೋರವಾದ ನಿತಂಬದ, ಮೈಯೆಲ್ಲ ಮೃದು ಮೃದು ಹೆಣ್ಣು ಲಚ್ಚಿ. ತೋಟದಲ್ಲಿ ಬಾಳೆಗೊನೆ ಹಿಡಿದು ನಡೆದು ಬರುವಾಗ ಅಹಹಾ ಎನ್ನಿಸುತ್ತಾಳೆ. ಚಿಮ್ಮುತ್ತಾಳೆ, ಜಿಗಿಯುತ್ತಾಳೆ, ಬಾಯಿಬಿಟ್ಟು ನಗುತ್ತಾಳೆ. ರಸರಸವಾದ ನಡೆನುಡಿ. ತಡವಿದರೆ ಕೈತುಂಬ ಮೈತುಂಬ ವೈಯ್ಯಾರ. ಖುಷಿ ಮೋಜು ತಪ್ಪಲ್ಲವೆಂದು ಜೀವಕ್ಕೆ ಹಾಯೆನ್ನಿಸುತ್ತಾಳೆ. ಹೆಣ್ಣಿನ ಸಂಗ ಮಾಡುವಾಗ ಏನೂ ಮಾಡುವದೂ ಹೇಸಿಗೆಯಲ್ಲ ಎಂದು ಮನಸ್ಸಿಗೆ ಎನ್ನಿಸುವ ಚೆಲುವು ಇವಳದು. ಎತ್ತೆತ್ತಿ ಕೊಡುತ್ತಾಳೆ, ನಿನ್ನದು ಎನ್ನಿಸುತ್ತಾಳೆ. ತಂಪೆನಿಸುತ್ತಾಳೆ. ಮುಗಿದ ಮೇಲೆ ಮೈಲಿಗೆಯಾಯಿತೆಂದು ವಾಕರಿಕೆ ಬರುವುದಿಲ್ಲ. ಪೂರ್ತ ಹೆಣ್ಣು ಇವಳು. ಅಪ್ಪಟ ಹೆಣ್ಣು ಇವಳು. ನೂರಕ್ಕೆ ನೂರು. ಶಾರದೆಯ ಹಾಗಲ್ಲ. ಶಾರದೆ ಬಟ್ಟೆ ಬಿಚ್ಚಿದರೂ ಬೆತ್ತಲೆಯಾಗುವುದಿಲ್ಲ. ಬಲಿಗೆ ಹೋಗುವ ಪ್ರಾಣಿಯಂತೆ ಕಾಣುತ್ತಾಳೆ. ಲಚ್ಚಿ ಬಟ್ಟೆ ತೊಟ್ಟರೂ ಬೆತ್ತಲೆ. ಒಬ್ಬಳನ್ನು ಹಗಲಿಗೆಂದು, ಆತ್ಮದ ಸಹವಾಸಕ್ಕೆಂದು ದೇವರು ಸೃಷ್ಟಿಸಿದ; ಇನ್ನೊಬ್ಬಳನ್ನು ಕತ್ತಲಿನ ಸುಖಕ್ಕೆಂದು ಸೃಷ್ಟಿಸಿದ. ಅದಿದ್ದರೆ ಇದಿಲ್ಲ; ಇದಿದ್ದರೆ ಅದಿಲ್ಲ. ಬಟ್ಟೆ ಕಳೆದ ಮೇಲೆ ಆ ಹೆಣ್ಣು, ಈ ಹೆಣ್ಣು, ಎಲ್ಲ ಹೆಣ್ಣು ಒಂದೆ ಎಂದುಕೊಂಡಿದ್ದೆ. ನಾನೂ ಸಂಪೂರ್ಣ ಎಂದೂ ಬೆತ್ತಲೆಯಾದ್ದಿಲ್ಲ. ಆಗಬೇಕು, ಒಂದು ದಿನ ಆಗಿಬಿಡಬೇಕು. ಎಲ್ಲ ತೆಗೆದು ಒಗೆದು, ತೆಗೆದೆ, ಒಗೆದೆ… ಬೆತ್ತಲೆಯಾಗಲಿಲ್ಲ. ಶಾರದೆಗೆ “ಲಚ್ಚಿ ಕೊಡುವ ಸುಖ ನೀನಿ ಕೊಡು” ಎಂದು ಪೀಡಿಸುವುದು ಮೂರ್ಖತನವಿರಬಹುದು. ನಾಲ್ಕು ಜನರನ್ನು ಸುಖಪಡಿಸಬೇಕೆನ್ನುವ ಆಸೆಯಿರುವ ಹುಡುಗಿ ಲಚ್ಚಿ. ಸ್ನಾನ ಮಾಡುವಾಗ ಒಂದು ದಿನ ಕಂಡುಬಿಡ್ತ ಮಾರಾಯರೆ ಎಂದು ನಾಚಿದಳು. ನಾಳೆ ಬಂದು ಎಣ್ಣೆ ನೀರು ಹಾಕಲಾ, ಕಣ್ಣು ಉರಿಯುತ್ತದೆಂದಿರಿ ಎರೆದುಕೊಳ್ಳಿಯಯ್ಯ ಎಂದಳು. ಕಾಲೊತ್ತಿದಳು. ನೀವು ಜಗಿದ ತಾಂಬೂಲ ಬಾಯಿಯಲ್ಲಿಡಿ ಎಂದಳು. ಬಾಯಿಯನ್ನು ಸ್ವಲ್ಪ ತೆರೆದು ಕೇಳಿದಳು. ನನ್ನನ್ನ ಪೂರ್ತ ಎಂಜಲು ಮಾಡಿ ಎಂದಳು. ನಿಮ್ಮ ಎಂಜಲು ನಾನು ಎಂದಳು. ದೇವರ ಹೆಣ್ಣು ಇವಳು. ಊರ್ವಶಿಯಂತೆ ನೀತಿ ಅನೀತಿಗೆ ಅತೀತಳು – ನಿರ್ದೋಷಿ. ಇವಳ ಸಂಗ ಮಾಡಿದ ಮೇಲೆ ಕಾದ ನೆಲದ ಮೇಲೆ ಶ್ರಾವಣದ ಮಳೆ ಬಿದ್ದಾಗ ಬರುವ ಮಣ್ಣಿನ ವಾಸನೆಯಂತೆ. ಇದೂ ಒಂದು ರೀತಿಯ ಪ್ರಸನ್ನತೆಯೆ. ಪ್ರಸನ್ನತೆ ಜೀವನದ ಪರಮ ಗುರಿ. ಬಿಗಿದುಕೊಂಡಿರುವುದು ದುಷ್ಟ. ಆದರೆ ಶಾರದೆಯಂತಹ ಹೆಣ್ಣಿನಿಂದಲೇ ಆ ಪ್ರಸನ್ನತೆ ಸಿಗಬೇಕೆಂದು ಯಾಕೆ ಜೀವ ಒದ್ದಾಡುವುದೊ. ಒಂದೆ ಶಯ್ಯೆಯಲ್ಲೆ ಆತ್ಮಕ್ಕೂ ಆಗಬೇಕು, ದೇಹಕ್ಕೂ ಆಗಬೇಕೆಂದು ಹಂಬಲಿಸುತ್ತಿದ್ದೇನೆ. ಎರಡನ್ನು ಬೆಸೆಯಬೇಕೆಂದು ಭ್ರಮಿಸುತ್ತಿದ್ದೇನೆ. ಋಷಿಗಳೂ ಪ್ರಾಣಿಗಳ ದೇಹತೊಟ್ಟು ರಮಿಸುತ್ತಿದ್ದರಂತೆ. ಮನುಷ್ಯ ಶರೀರದಲ್ಲಿ ದೇಹಕ್ಕೆ ಪೂರ್ಣ ಸುಖವಿಲ್ಲ; ಆತ್ಮಕ್ಕೆ ತೃಪ್ತಿಯಿಲ್ಲ. ಯಾಕೋ ಮುಜುಗರ, ಯಾಕೋ ಬೇಡ.

ರಂಗ ಪಡಸಾಲೆಯಿಂದ ಇಳಿದು ಅಂಗಳಕ್ಕೆ ಹೋದ. ಹಿತವಾದ ಬೆಳ್ದಿಂಗಳು ಕಾಡು ಬೆಟ್ಟಗಳು ಮೃದುವಾಗಿ ಕೊರೆದು ಆಕಾರಗೊಳಿಸಿತ್ತು. ಸಿಗರೇಟು ಹಚ್ಚಿದ.

ನನಗೆ ಇಲ್ಲಿ ಇರಲು ಯಾಕೆ ಇಷ್ಟವಿಲ್ಲ? ಹುಳದಂತೆ ಯಾಕೆ ಓದ್ದಾಡುತ್ತೇನೆ?

ಮತ್ತೆ ಸಿಗ್ತೀನಿಯಯ್ಯ ಎಂದು ಲಚ್ಚಿ ಹೊರಟುಹೋದಳು.

* * *

ಮೈಸೂರಿನಿಂದ ಕೊಪ್ಪಲಿಗೆ ಬರುವಾಗ ಬಸ್ಸಿನಲ್ಲಿ ದಾರಿಯುದ್ದಕ್ಕೂ ರಂಗ ಶಾರದೆಗೆ ಏನು ಹೇಳಬೇಕೆಂದು ಯೋಚಿಸುತ್ತ ಬಂದಿದ್ದ. ಜೀವನ ಅತ್ತಲೂ ಇಲ್ಲ ಇತ್ತಲೂ ಇಲ್ಲ ಎನ್ನುವಲ್ಲಿಗೆ ಬಂದು ನಿಂತಿತ್ತು. ನಾಲ್ಕು ವರ್ಷಗಳ ಕೆಳಗೆ ಕೊಪ್ಪಲು ಬಿಡುವಾಗ ಶಾರದೆಗೆ ಸಿಟ್ಟಿನಲ್ಲಿ ಹೇಳಿದ್ದೆ, “ನಾನು ಇನ್ನು ನಿನ್ನ ಮುಖ ನೋಡಲ್ಲ. ” ಆದರೆ ಶಾರದೆಯಿಂದ ಅವನಿಗೆ ಬಿಡುಗಡೆಯಿರಲಿಲ್ಲ. ತನ್ನ ನಿರ್ಧಾರ, ಆಸೆ, ಆಕಾಂಕ್ಷೆಗಳಿಗೆ ಮೀರಿದ ಅಂತಃಪ್ರೇರಣೆಯೊಂದು ಬದುಕನ್ನು ನಡೆಸುತ್ತಿದೆ. ಬದಲಾಗಲಾರದ ನಮ್ಮ ಮೂಲ ಸ್ವಭಾವವೇ ನಮ್ಮ ಮೂಲ ಅದೃಷ್ಟ. ಆಗಬೇಕಾದ್ದು ಆಗಲೇ ಬೇಕು, ಆಗಲಿ ಎಂದು ಕಾದ. ಆಗ ಹೊರಟುಹೋದವನು ಶಾರದೆಯಿಲ್ಲದಿದ್ದರೇನಂತೆ ದೊಡ್ಡದೊಂದು ಆದರ್ಶ ಸಾಧಿಸುತ್ತೇನೆಂದು ಮನಸ್ಸು ಮಾಡಿ ವೀಣೆ ಕಲಿತು ನೋಡಿದ. ಚಿತ್ರ ಬರೆದು ನೋಡಿದ, ಕವಿತೆ ಬರೆದು ನೋಡಿದ, ಯಾವುದರಲ್ಲೂ ತಾನು ಹೂ ಪರವಾಗಿಲ್ಲ ಎನ್ನುವುದಕ್ಕಿಂತ ಹೆಚ್ಚು ಸಾಧಿಸಲಿಲ್ಲ. ನಿಷ್ಠೆಯ ಜೀವನವೇ ಪರಮ ಗುರಿಯೆಂದು ಪ್ರಮಾಣಿಕತೆ, ಸತ್ಯಸಂಧತೆಯಲ್ಲಿ ದಿನ ಕಳೆದ. ತಾನೊಬ್ಬ ಪರಮ ಪೂಜ್ಯನೆನ್ನುವ ಬಿಗಿದ ಕತ್ತಿನ ಅಹಂಕಾರ, ವಿನಯಿಯ ಗರ್ವ ಬೆಳೆಯಿತು. ಜುಬ್ಬ, ಕಚ್ಚೆಪಂಚೆ ತೊಟ್ಟು ಅಂತರ್ಮುಖಿಯಾಗಿ ಕಂಡದ್ದು ಒಳಗಿನ ಟೊಳ್ಳು. ಜೀವನಕ್ಕೆ ಹಸಿಯಾಗಿ, ಮೃದುವಾಗಿ, ಅನುಭವಗಳ ಆಘಾತಕ್ಕೆ ಮೆತ್ತಗಿನ ಮೈಯಾಗಿ ಉಳಿಯುವುದರ ಬದಲು ಗಡಸಾದ, ಪೆಡಸಾದ. ಈ ಎಲ್ಲ ಆದರ್ಶದ ಹಂಬಲ, ಎಲ್ಲರಿಗಿಂತ ತಾನು ಶ್ರೇಷ್ಠನಾಗಬೇಕು ಎನ್ನುವ ಅಹಂಕಾರಜನ್ಯ ಸ್ವಪ್ರತಿಷ್ಠೆಯಲ್ಲವೆ ಎಂದು ಅನುಮಾನವಾಯಿತು. ಶ್ರೀಮಂತ ಹೊಲಸು ಸಮಾಜ ಪ್ರತಿಷ್ಠೆಯ ಇನ್ನೊಂದು ಮುಖ ಈ ಆಧ್ಯಾತ್ಮದ ಸ್ವಪ್ರತಿಷ್ಠೆ. ಕೋಪ, ಕಾಮ, ರಾಗದ್ವೇಷಯುಕ್ತನಾಗಿರುವುದೇ ಮೇಲೆನ್ನಿಸಿತು. ಎಲ್ಲ ಆದರ್ಶಗಳನ್ನು ‘ಥತ್‌’ ಎಂದು ಹಳೆ ಬಟ್ಟೆ ಎಸೆಯುವಂತೆ ಮೂಲೆಗೆ ಒಗೆದ. ಈ ಪುಸ್ತಕಗಳ, ಜೀವಹೇಡಿ ಶಾರದೆಯ ಮಾತನ್ನೆಲ್ಲ ತಲೆಗೆ ಹಚ್ಚಿಕೊಂಡದ್ದೆ ತಪ್ಪು, ಪೌರುಷಹೀನನಾಗುತ್ತಿದ್ದೇನೆ, ಬದುಕಬೇಕು ಎಂದು ನಿರ್ಧರಿಸಿದ. ‘ಬದುಕಬೇಕು’ ಎಂದರೆ? ಅದೂ ಇನ್ನೊಂದು ಶಬ್ದ, ಹೊಸದೊಂದು ಆದರ್ಶ. ರಂಗ ವಾದಿಸುತ್ತಿದ್ದ:

“ಆದರ್ಶಗಳೆಲ್ಲ ಅಹಂಕಾರಜನ್ಯ – ಸ್ವಪ್ರತಿಷ್ಠೆ. ಬದುಕು ದೊಡ್ಡದು. ಎಲ್ಲವನ್ನೂ ಬರುವುದೆಲ್ಲ ಬರಲಿ ಎಂದು ಅನುಭವಿಸಬೇಕು. ನಮ್ಮ ಮಿತಿಯೇನು ಎಂದು ಮೊದಲು ಅರಿಯುವುದು ಅವಶ್ಯ. ಮಿತಿಯನ್ನು ಅರಿತಾಗಲೇ ಈ ಜೀವದ ಸಾಧ್ಯತೆಯೇನು ಗೊತ್ತಾಗುವುದು. ದೇಹದ ಆಸೆಗಳಿಗಿಂತ ಆತ್ಮ ದೊಡ್ಡದಲ್ಲ. ಈ ದೇಹದಲ್ಲಿಯೇ ಎಲ್ಲವುದರ ಪ್ರಾರಂಭ, ಕೊನೆ. ಭೂವ್ಯೋಮಗಳ ಎಲ್ಲ ಹಂಬಲವೂ ಇಲ್ಲೆ ಸಫಲವಾಗಬೇಕು. ಇಂದ್ರಿಯಗಳ ಅನುಭವಕ್ಕೆ ಒಗ್ಗದುದೆಲ್ಲ ಬರಿ ಮನಸ್ಸಿನ ವ್ಯಭಿಚಾರ. ಜೀವನವೆಂದರೆ – ಪ್ರಕೃತಿ ಹೆಣ್ಣಿನ ತೊಡೆಗಳ ನಡುವೆ ಮಾಡಿದ ಗಾಯ, ಗಂಡಸಿನ ಟೊಂಕದಲ್ಲಿ ಉರಿಯುವ ಪಂಜು. ಒಪ್ಪಿಕೊಳ್ಳಬಾರದು ಯಾಕೆ? ಅವಮಾನ ಯಾಕೆ? ಮಾಯೆಯಂತೆ – ನಿರ್ವಾಣವಂತೆ, ಅಯ್ಯ, ಜೀವನದಿಂದ ಮುಕ್ತನಾಗುವುದಕ್ಕಿಂತ ಔದಾರ್ಯದಿಂದ ಈ ಜೀವನದ ಸುಖದುಃಖವನ್ನು ಒಪ್ಪಿಕೊಳ್ಳುವುದೆ ಮೇಲಲ್ಲವೆ? ಆಡಮ್ ಅಂಜೂರದ ಎಲೆಯ ಮರೆಯಲ್ಲಿ ತನ್ನ ಅವಮಾನವನ್ನು ಮುಚ್ಚಿಕೊಳ್ಳಲು ಯತ್ನಿಸಿದನಂತೆ; ಸಿದ್ಧಾರ್ಥ ಬೋಧಿವೃಕ್ಷದ ನೆರಳಿನಲ್ಲಿ ಅವಮಾನ ಹೋಯಿತೆಂದು ಭ್ರಮಿಸಿದನಂತೆ. ಎಲ್ಲ ಭ್ರಾಂತು. ತಿಂಗಳಿಗೆ ಒಮ್ಮೆ ಪುಷ್ಪವತಿಯಾಗುವ ಹೆಣ್ಣಿನಂತೆ ಶುಕ್ಲಪಕ್ಷ, ಕೃಷ್ಣಪಕ್ಷಗಳ ಈ ಪ್ರಕೃತಿ. ಸೃಷ್ಟಿಯೇ ಪರಮೋದ್ದೇಶ. ”

ಹೊಟೇಲಿನಲ್ಲಿ ಕೂತು ಮಾಡುತ್ತಿದ್ದ ತತ್ವಜಿಜ್ಞಾಸೆ. ಆಡುತ್ತಿದ್ದ ಮಾತುಗಳೆಲ್ಲ ನಿರುನುಭವಿ ಹಾಸ್ಟೆಲ್ ಹುಡುಗರ ಜೊತೆ. ರಂಗನ ಮಾತು ಅರ್ಧಕ್ಕೆ ತಡೆದು ಗೋಪಾಲ ಹೇಳಿದ;

“Words, Words, Words. ಅಲ್ಲವಯ್ಯ, ಎಲ್ಲರೂ ವಿಧಿಯಿಲ್ಲದೆ ಅನಿವಾರ್ಯವಾಗಿ ಮಾಡುವ ಈ ಜೀವಿಸುವ ಕೆಲಸವನ್ನ ನೀನೊಂದು ಹೊಸ ಆದರ್ಶ ಎನ್ನುವಂತೆ ಹೇಳುತ್ತಿಯಲ್ಲೊ? ಈಗ ಯಾವ ಪುಸ್ತಕ ಓದುತ್ತಿದ್ದಿ ಹೇಳು. ಲಾರೆನ್ಸ್ ಓದಲು ಪ್ರಾರಂಭಿಸಿದಿಯಾ? ಅಥವಾ ಫ್ರಾಯ್ಡೊ? – ಅದರ ಬದಲು ಹೆರಿಗೆ ಆಸ್ಪತ್ರೆಗೆ ಒಂದು ಸಾರಿ ಹೋಗಿ ಬಂದರೆ ನಿನಗೆ ಗೊತ್ತಾಗುತ್ತೆ – ಭಾರತೀಯರೆಲ್ಲರೂ ನಿನ್ನ ಆದರ್ಶವನ್ನು ಪ್ರತಿ ರಾತ್ರಿಯೂ ಬಿಡುವಿಲ್ಲದೆ ಆಚರಿಸುತ್ತಾರೆಂದು. ನೀನಿನ್ನೂ ಮದುವೆಯಾಗಿಲ್ಲ ಅಲ್ಲವೆ? ಔಷಧಿ ಸೀಸೆಗಳನ್ನು ಹಿಡಿದು ಕ್ಯೂ ನಿಂತ ಬಸುರಿ ಹೆಂಗಸರನ್ನ ನೋಡಿದರೆ ನಿನ್ನ ಪಿತ್ಥವಷ್ಟು ಇಳಿದೀತು ಏನಯ್ಯ… ”

ರಸ್ತೆಯಲ್ಲೊಬ್ಬ ಬಣ್ಣ ಬಣ್ಣದ ಬುಷ್‌ಕೋಟ್ ತೊಟ್ಟ ಹುಡುಗ ಹುಡುಗಿಯೊಬ್ಬಳಿಗೆ ಗಾಬರಿಯಾಗುವಂತೆ ಹತ್ತಿರ ಸೈಕಲ್ ಬಿಟ್ಟು, ಬ್ರೇಕ್ ಹಾಕಿ ‘ಸಾರಿ’ ಎಂದು ಮುಂದೆ ಹೋದ. ಅವನಷ್ಟು ದೂರ ಹೋದ ಮೇಲೆ ಹುಡುಗಿಗೆ ಏನೋ ಖುಷಿಯಾಗಿ ತನ್ನಷ್ಟಕ್ಕೆ ನಕ್ಕಳು – ಗೋಪಿ ಆ ಕಡೆ ತೋರಿಸಿ ಹೇಳಿದ –

“ನೋಡಿದೆಯಾ, ನಿನ್ನ ಆದರ್ಶ ಅಲ್ಲಿದೆ. ರೋಡ್ ಬದಿಯ ರೋಮಿಯೋಗಳಿಗೆ ಸ್ವಾಧ್ಯಾಯ ಪ್ರಾಪ್ತವಾದದ್ದು ಪುಸ್ತಕದ ಮುಖಾಂತರವೆ ನಿನಗೆ ಬರಬೇಕೇನೊನ?”

ಗೋಪಿ ಸುಖಜೀವಿ, ಸಿನಿಕ್ ಹೌದು, ಅದರ ಅವನ ಮಾತಿನಲ್ಲಿ ಸತ್ಯವಿತ್ತು. ತಪ್ಪು ರೀತಿಯ ಅಸಡ್ಡೆಯೂ ಇತ್ತು. ರಂಗ ವಾದ ಮಾಡಲಿಲ್ಲ. ತಾನು ಆಡಿದ ಮಾತಿನಲ್ಲಿ ಅಸಹಜತೆಯಿತ್ತು ನಿಜ. ಪ್ರೀತಿಸಬೇಕು, ಜೀವಿಸಬೇಕು, ಆದರ್ಶವಾಗಿ ಬಾಳಬೇಕು, ಅವರ ಹಾಗೆ ಆಗಬೇಕು, ಇವನ ಹಾಗೆ ಮಾಡಬೇಕು – ಎಲ್ಲವೂ ಆದರ್ಶಗಳೆ. ತಾನು ಪಕ್ಕ ನಿರನುಭವಿ. ನಿನ್ನದೆಲ್ಲ ಪುಸ್ತಕ – ತೀರ್ಥ ಎಂದು ಗೋಪಿ ನಗೆಯಾಡಿದ್ದು ಉತ್ಪ್ರೇಕ್ಷೆಯಾದರೂ ತನ್ನ ಜೀವನದಲ್ಲೊಂದು ಅಸಹಜತೆಯಿತ್ತು. ಅನಿವಾರ್ಯವಾಗಿ ಬದುಕಿನಲ್ಲಿ ಬರುವ ಪರ್ವಕಾಲಗಳನ್ನು ಕಾಣದ ತನ್ನ ಬಾಳು ಬರೆ ಮನೋಮಯ ಲೋಕದಲ್ಲಿ ಓಡಾಡುತ್ತಿತ್ತು. ಅನುಭವವಿಲ್ಲದೆ ಬರೆ ತಲೆ ಬೆಳೆದ ಹುಡುಗ ನಾನು. ಮಲ ಮೂತ್ರ ವಿಸರ್ಜನೆಯಂತೆ, ಹಸಿವಿನಂತೆ, ಹಾಸಿಗೆಯಲ್ಲಿ ಒಂಟಿಯಾಗಿ ಮಲಗಿದಾಗ ಜೊತೆಯಲ್ಲಿ ಒಬ್ಬಳಿಲ್ಲದೆ ತಾನು ಅಪೂರ್ಣ ಎಂದು ಹೊರಳಾಡಿಸುವ ಯೌವನದ ಭಾರದಂತೆ ಒತ್ತಾಯ ಪಡಿಸುವ, ಅವಸರಗೊಳಿಸುವ ವ್ಯಾಪಾರಗಳು ಮಾತ್ರ ನಿಜ. ಈ ಸಂಸಾರ ಸಾಕಾಗದ ದೊಡ್ಡವರಿಗೆ ಪ್ರತಿಭೆಯೆಂದರೆ ಮಲಮೂತ್ರ ವಿಸರ್ಜನೆಯಷ್ಟೆ, ಧಾತುಸ್ಖಲನದಷ್ಟೆ ಅನಿವಾರ್ಯವಿರಬಹುದು. ನವಿಲನ್ನು ನೋಡಿ ಕೆಂಭೂತವೇಕೆ ಪುಕ್ಕ ಸುಟ್ಟುಕೊಳ್ಳಬೇಕು? ಗೋಪಿಯೆಂದಂತೆ ನಾನು ‘ಡಾನ್ ಕ್ವಿಕ್ಸೋಟ್’. ಆದರೆ ನಾನು ಗೋಪಿಗಿಂತ ಉತ್ತಮ; ಸಿನಿಕನಲ್ಲ.

ಆದರ್ಶಗಳನ್ನು ಮೂಲೆಗೆಸೆದು ರಂಗ, ಆಧುನಿಕ ನಿರನುಭವಿ ಯುವಕರಂತೆ ಬೀರ್ ಕುಡಿದು ನೋಡಿದ, ಕೊನೆಗೊಂದು ದಿನ ಧೈರ್ಯ ಮಾಡಿ ಸೂಳೆಯ ಮನೆಗೂ ಹೋದ. ತನಗೆ ಸುಖ ಕೊಡಬೇಕೆಂದು ಆಸೆಯಿದ್ದ ಲಚ್ಚಿ ಎಷ್ಟೋ ವಾಸಿ. ಆದರೂ ಮನಸ್ಸು ಕೊನೆಗೆ ಮಂಕಾಗುವುದು, ಪೆಚ್ಚಾಗುವುದು. ಹೆಣ್ಣನ್ನು ಕೂಡಿದಾಗ ಆಗುವ ಅನುಭವ ಇಷ್ಟು ಕ್ಷಣಿಕವೆ? ಸಾಮಾನ್ಯವೆ? ಇಷ್ಟು ಅಲ್ಪ ಸುಖ ಕೊಟ್ಟು ದಗಾ ಹಾಕಲು ಈ ಎಲ್ಲ ಸಂಸಾರದ, ಭವ ಬಂಧನದ ರಂಗುರಂಗಿನ ಬಲೆಯನ್ನು ನಿಸರ್ಗ ನೆಯ್ದಿದೆಯೆ? ಗೋಪಿಯಾಡಿದ ಮಾತು ಯಾವಾಗಲೂ ನೆನಪಿಗೆ ಬರುತ್ತಿತ್ತು. ಔಷಧಿಯ ಬಾಟ್ಲಿ ಹಿಡಿದು ಕ್ಯೂ ನಿಂತ ಬಸುರಿಯರು. ತಪ್ಪು ಮಾಡಿದವರಂತೆ ಅವರನ್ನು ಹಿಂಬಾಲಿಸುವ ಜೋಲುಮುಖದ ಗಂಡಂದಿರು. ಶೋಪೆನೋರ್ ಹೇಳುವುದು ನಿಜ. ಬೇಡ – ಬೇಡ. ಶಾರದೆಯಿಂದಲೂ ಕೊನೆಗೆ ಸಿಗುವುದು ಬರಿ ಇಷ್ಟೆ. ಮೋಸ ಹೋದವನಂತೆ ರಂಗ ಜೀವನದ ರುಚಿ ಕಳೆದುಕೊಂಡ. ಶಾರದೆ ಹೇಳೋದೇ ಸರಿ ಇರಬಹುದು. ಇಷ್ಟು ಅಲ್ಪ ಸುಖಕ್ಕಾಗಿ ಸಾಕಿದ ಕುರುಡನನ್ನು ಯಾಕರೆ ತೊರೆಯಬೇಕು? ಎಲ್ಲ ಬಿಟ್ಟು ಅವಳು ನನ್ನ ಜೊತೆ ಬಂದ ಮೇಲೆ, ಬಿಟ್ಟು ಬಂದುದೆಲ್ಲ ಕ್ಷುಲ್ಲಕ ಎನ್ನಿಸುವಂತಹ ಪ್ರೀತಿಯ ಕಟ್ಟು ತನ್ನ ಅವಳ ನಡುವೆ ಬೆಳೆಯುತ್ತದೊ ಇಲ್ಲವೊ. ಎಲ್ಲ ಯಾಂತ್ರಿಕವಾಗಿಬಿಡುತ್ತದೆ. ನಾಲ್ಕೈದು ನಿಮಿಷಗಳ ಅವಸರದಲ್ಲಿ ಮುಗಿದು ಹೋಗಿ, ಮತ್ತೆ ಬಟ್ಟೆ ತೊಡುವಾಗ, ದೀಪ ಹಾಕುಆಗ ಅವಮಾನವಾಗುವಂತಹ ಕಾಮಕ್ಕಾಗಿ ಶಾರದೆಯನ್ನು ಅವಳ ಮಾವನಿಂದ ಯಾಕೆ ಕಸಿದುಕೊಳ್ಳಬೇಕು? ನಾನು ನಿಜವಾಗಿ ಬೆತ್ತಲೆಯಾಗಲಾರೆ, ಶಾರದೆಯೂ ಆಗಲಾರಳು. ಲಚ್ಚಿಯಂಥವರಿಗೆ ಅದು ನೈಸರ್ಗಿಕ, ನಮಗೆ ಇದೇ ನೈಸರ್ಗಿಕ.

ಎಲ್ಲವುದೂ ಸಾಮಾನ್ಯ, ವೃತ್ತದ ಸುತ್ತ ವ್ಯರ್ಥ ಸಂಚಾರ, ರುಚಿಯಿಲ್ಲ, ಗೆಲುವಿಲ್ಲ. ನಾನೊಂದು ದರೆಯ ಅಂಚಿನ ಮೇಲೆ ಲಕ್ವಾ ಹೊಡೆದವನಂತೆ ಮೈಮೇಲೆ ಸ್ವಾಧೀನವಿಲ್ಲದೆ ಕೂತಂತೆ, ಕೆಳಗೊಂದು ಕೆಂಪು ಹೂ ಮುಡಿದ ಹುಡುಗಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆಕಡೆಗೆ ಸಂಚರಿಸಿದಂತೆ – ಕನಸು. ನನಗೆ ಆಯತಪ್ಪಿ ಬಿದ್ದು ಬಿಡುವ ದಿಗಿಲು. ಇನ್ನೊಂದು ಕನಸು ಕೊಟ್ಟ ಉಂಗುರ ಹುಡುಗಿ ಕಳೆದಂತೆ, ನನಗೆಲ್ಲ ಮರೆತುಹೋದಂತೆ. ಏನೋ ದಿಗಿಲು ಒಂಟಿಯಾಗಿರುವಾಗ. ರಾತ್ರೆ ಫಕ್ಕನೆ ಎಚ್ಚರ, ಕಳವಳ. ಕಾಲುಗಳಲ್ಲಿ ನಿತ್ರಾಣ. ಅಮ್ಮ ಮಾತಾಡಿಸಿದರೆ ಸುಮ್ಮನೆ ಕಿಡಿ ಕೋಪ. ಕೂತರೆ ಕೂತೇ ಬಿಡುವ ಜಡತೆ, ಮಂಕು. ಏನೋ ಭಯ, ಏನೋ ಭಯ.

….ಆದರೂ ನಾನು ಇಲ್ಲಿ ಮತ್ತೆ ಯಾಕೆ ಬಂದೆ? ಯಾವ ಕರ್ಮದ ಚಕ್ರಕ್ಕೆ ಸಿಕ್ಕಿಬಿದ್ದಿದ್ದೇನೆ… ಅರ್ಥವಾಗುವುದೇ ಇಲ್ಲ… ಮೂಗಿಗೊತ್ತಿ ಬರುವ ಮಲೆನಾಡಿನ ಪ್ರಾಣಿ ಸಸ್ಯಗಳ ವಾಸನೆ; ಬಾಣಂತಿಯಂತೆ ಹಸಿಯಾದ ಮಣ್ಣಿನ, ಕಳಲೆಯ, ದನ ಕರುಗಳ ಮೈಯಿನ. ಸೂರಿನ ಗೂಡುಗಳಲ್ಲಿ ಗುಟುರು ಹಾಕುವ ಪಾರಿವಾಳಗಳ, ಕಣಜದಲ್ಲಿ ತುಂಬಿದ ಭತ್ತದ, ವಾಸನೆ… ಐನೀರಿನ ಒದ್ದೆ ಕೂದಲು ಬೆನ್ನಿನ ಮೇಲೆ, ಬಿಸಿಲು. ಕಣ್ಣಿನ ಮೇಲೆ ಬಂದ ಕೂದಲನ್ನು ತಳ್ಳುವ ಕೈಯಲ್ಲಿ ಪ್ರಸಾದ ಹಿಡಿದು ಎದ್ದಳು. ಆಗ ಸೂರ್ಯ ಅವಳ ಮೈಯ ಮೇಲೆಲ್ಲ ಬಂಗಾರದ ಒಡವೆಗಳನ್ನು ಚಿಮ್ಮಿದ…. ಮುತ್ತುಗದ ಮರದ ತುಂಬ ಕೆಂಪು ಕೆಂಪು ಹೂವೆ. ಎಷ್ಟು ಹೆತ್ತರೂ ನಿತ್ಯ ಕನ್ನಿಕೆ. ಕಲಗಚ್ಚು ಕುಡಿಯುತ್ತಿದ್ದ ದನ ಆಗ ಕತ್ತೆತ್ತಿ ಏನನ್ನೂ ನೋಡದ ದೃಷ್ಟಿಯಲ್ಲಿ ನನ್ನನ್ನು ನೋಡಿತು…. ಪುಟ್ಟ ಪುಟ್ಟ ಹೆಜ್ಜೆ, ಪುಟಾಣಿ ಗಾಳಿಪಟ…. ಈ ಚೆಲುವಿಗೆಲ್ಲ ನಾನು ಕುರುಡಾಗುತ್ತಿದ್ದೇನೆ, ಮರಗಟ್ಟಿಹೋಗುತ್ತಿದ್ದೇನೆ. ಮುವತ್ತರ ಹತ್ತಿರ ಹತ್ತಿರಕ್ಕೆ ಬಂದು ಮುದುಕನಾಗುತ್ತಿದ್ದೇನೆ.

ಭ್ರಮಿತನಾಗಿ ಬೆಳದಿಂಗಳಿನಲ್ಲಿ ನಿಂತು ‘ದೇವರೇ’ ಎಂದ. ಯಾರೂ ಸ್ವತಂತ್ರರಲ್ಲ. ಮೃಗ ಪಕ್ಷಿಗಳಿಗಿಲ್ಲದ ಸ್ವಾತಂತ್ರ್ಯ ಮನುಷ್ಯನಿಗೆಲ್ಲಿ? ಬರಿ ಭ್ರಮೆ.

ಜಪದ ಸರ ಎಣಿಸುತ್ತ ಪಡಸಾಲೆಯಲ್ಲಿ ಕೂತ ಶಂಕರಯ್ಯನ ಕಡೆ ನೋಡಿದ.

* * *

“ಏ ಶಾರದ ರಂಗ ಇಲ್ಲಿ ಊಟ ಮಾಡುವುದಾದರೆ ತಿರುಪತಿಗೆ ತಪ್ಪು ಕಾಣಿಕೆ ಸಲ್ಲಿಸಲು ಹೇಳೆ. ಕೊಟ್ಟಿಗೆಗೆ ಕೌಲಿ ಬಂದಿಲ್ಲವೆಂದು ಹೇಳಿದಿ, ತುಂಬು ಬಸುರಿ ಅಲ್ಲ ತುಂಬು ಗಬ್ಬದ ದನ. ಲಚ್ಚಿಯ ಗಂಡನಿಗೆ ನೋಡಿ ಬರುವಂತೆ ಹೇಳೆ. ನಿನ್ನೆ ರಾತ್ರೆ ನಿನ್ನ ಅಕ್ಕ ಬಸುರಿ ಹೆಂಗಸು ಅಯ್ಯಯ್ಯೊ ಎಂದು ವಿಕಾರವಾಗಿ ಕಿರುಚಿಕೊಂಡಂತೆ ಭ್ರಮೆಯಾಗಿ ಎದ್ದೆ. ಮನೆಯ ಎದುರೇ ಹುಲಿಯೊಂದು ನಿಂತು ಅಬ್ಬರಿಸಿ ಹೋಯಿತು. ಮಂತ್ರಿಸಿದ ಹಲಗೆ ಕೊಡುತ್ತೇನೆ, ಕೊಟ್ಟಿಗೆಯಲ್ಲಿಟ್ಟು ಬಾ. ಒಟ್ಟು ನನ್ನ ಪ್ರಾರಬ್ದ. ಪರಚಿಕೊಳ್ಳೋದೆ ನನ್ನ ಪಾಡಾಗಿದೆ. ಏ ರಂಗಾ… ರಂಗಾ.. ”

ರಂಗ ಪಡಸಾಲೆಗೆ ಬಂದು ಶಂಕರಯ್ಯನ ಎದುರು ನಿಂತು ‘ಏನು’ ಎಂದ.

“ಏನು ನಿಶ್ಚಯ ಮಾಡಿದಿರಿ ಹೇಳು. ”

ನಿಂತಿದ್ದ ರಂಗ ಕೂತುಕೊಂಡ. ಏನು ಹೇಳಬೇಕು ಕ್ಷಣ ತಿಳಿಯದಾಯಿತು.

“ನಿಶ್ಚಯ ಮಾಡೋದು ಹಿರಿಯರಾದ ನಿಮ್ಮ ಕೈಯಲ್ಲಿದೆ”.

“ಎಲ್ಲ ಹಿಂದೆ ಆಡಿದ ಮಾತೆ. ಈ ಸಂಬಂಧ ನನ್ನ ನಿನ್ನ ಹಿರಿಯರ ಮನಸ್ಸಿಗೆ ಬರುವಂಥದಲ್ಲ ನೋಡು. ”

“ಆದರೆ ಅವರು ಯಾರೂ ಬದುಕಿಲ್ಲವಲ್ಲ”

“ಓದಿದ ನಿನಗೆ ಹಾಗೆನಿಸಬಹುದು ರಂಗ. ಮದುವೆಯಾಗುವುದು ಬರಿ ಗಂಡು ಹೆಣ್ಣಿನ ಸುಖಕ್ಕಲ್ಲ ನೋಡು. ಪಿತೃಋಣವೂ ಅದರಿಂದ ಸಲ್ಲಬೇಕು. ನಿಮ್ಮಿಂದಾಗುವ ಸಂತಾನ ಪಿತೃಗಳಿಗೆ ಪಿಂಡ ಹಾಕಲು ಅರ್ಹವಾದುದಾಗಿರಬೇಕು. ನಮ್ಮ ನಮ್ಮ ಸುಖಕ್ಕೆಂದು ಮಾಡಿಕೊಳ್ಳುವ ಸಂಬಂಧ ನಮ್ಮ ಕರ್ಮಕ್ಕಾಯಿತು. ಅಪ್ಪಯ್ಯ ಒಂದು ಮಾತು ಹೇಳುತ್ತಿದ್ದರು. ಶಂಕರ ಈ ಮನುಷ್ಯ ಜೀವವೊಂದು ಅಸ್ವತಂತ್ರವಪ್ಪ, ಸ್ವತಂತ್ರನಾಗಲು ಆತ್ಮಶ್ರಾದ್ಧ ಮಾಡಿಕೊಂಡು ಅವಧೂತನಾಗಬೇಕು. ಅದು ನನ್ನ ನಿನ್ನಂಥವರಿಗಲ್ಲ ನೋಡು. ”

“ನಿಮ್ಮ ಮಾತು ನನಗೆ ಅರ್ಥವಾಗುವುದಿಲ್ಲ ಶಂಕರಯ್ಯ. ನನ್ನ ಮಾತು ಕೇಳಿ. ನೀವು ಕಣ್ಣಿಲ್ಲದ ಕುರುಡರು, ವಯಸ್ಸಾದವರು, ಶಾರದೆಯನ್ನು ಸಾಕು ಸಲುಹಿದ್ದೀರಿ. ಅವಳು ನಿಮ್ಮನ್ನು ಬಿಟ್ಟಿರಲಾರೆ ಎನ್ನುತ್ತಾಳೆ. ಆಗಲಿ, ನೀವೂ ನಮ್ಮ ಜೊತೆ ಬಂದು ಇರಿ. ”

ರಂಗ ಬೆವರುತ್ತಿದ್ದ ಹಣೆಯನ್ನು ಒರೆಸಿಕೊಂಡು ‘ದೇವರೇ ನನಗೆ ಮಾತಾಡುವ ಧೈರ್ಯ ಕೊಡು’ ಎಂದು ಪ್ರಾರ್ಥಿಸಿದ. ಹೀಗೆ ತನ್ನನ್ನು ಒದ್ದಾಡಿಸುವ ಶಂಕರಯ್ಯನ ಮುಖ ಮುದಿಯಾಗಿ ವಿಕಾರವಾಗಿ ಕಂಡಿತು.

“ಅದು ಹೇಗೆ ಸಾಧ್ಯವೋ ರಂಗ. ಇದು ನನ್ನನ್ನ ಬೆಳೆಸಿದ, ನನ್ನ ಮೈಗೆ ಅಂಟಿಕೊಂಡ ಮನೆ. ಎದುರಿರುವ ಅಡಿಕೆ ತೋಟ ಈಶ್ವರ ದೇವಸ್ಥಾನದ ಪೂಜಾ ವಿನಿಯೋಗಕ್ಕೆಂದು ಹಿರಿಯರು ಬಿಟ್ಟಿದ್ದು. ಹೀಗಿರುವಾಗ ಹಿರಿಯರ ಇಚ್ಛೆ ನಡೆಸಿಕೊಂಡು ಹೋಗುವುದರ ಬದಲು ನನ್ನ ಪ್ರಾಣವೇ ಆದ ಈ ಜಾಗ ತೊರೆದು, ಅನ್ನ ನೀರು ಮುಟ್ಟಬಾರದೆಂದು ಹಿರಿಯರು ವಿಧಿಸಿದ ನಿನ್ನ ಮನೆಯಲ್ಲಿ ಬಂದು ನನ್ನ ಕಾಲ ಎಣಿಸಲ? ಇದು ದೇವರಿಗೆ ಒಪ್ಪತಕ್ಕ ವಿಷಯವೆ ನೀನೇ ಹೇಳು. ”

ರಂಗನಿಗೆ ಮಾತು ಅಸಹನೆಯಾಯಿತು, ಹೇಸಿಗೆಯಾಯಿತು. ಇದು ಬೋಗಾರು ದುಃಖ, ತನ್ನ ಪಾಡೇ ತನಗಾದವನ ಅಸಹ್ಯ ಕರಕರೆ. ಸಾಯುವಾಗ ಹುಲಿ ಹಿಂಡು ಬಿಟ್ಟು ಒಂಟಿಯಾಗಿ ಪ್ರಾಣ ಬಿಡುವುದಂತೆ. ಆದರೆ ಶಂಕರಯ್ಯನಂತಹ ಮನುಷ್ಯ?

“ದೇವರು ಒಪ್ಪೋದು ಏನು ಯಾರಿಗೆ ಗೊತ್ತು ಶಂಕರಯ್ಯ? ಶಾರದೆಯ ಅಕ್ಕ ಸಕೇಶಿಯಾಗಿ ಬಸುರಾದಳು. ಪ್ರಾಣ ಕಳೆದುಕೊಂಡಳು. ಇನ್ನು ಶಾರದೆ ಮದುವೆಯಾಗದೆ ನಿಮ್ಮ ಶುಶ್ರೂಷೆಯಲ್ಲೆ ಸಾಯಬೇಕು. ಅದು ದೇವರ ಇಚ್ಛೆಯ?”

ರಂಗ ಕಟುಕನಂತೆ ಮಾತನಾಡಿದನೆನ್ನಿಸಿ ಶಂಕರಯ್ಯನಿಗೆ ವ್ಯಥೆಯಾಯಿತು. ಅವನು ಹೇಳಿದ್ದು ತಪ್ಪೆ? ಅಮ್ಮ ಸಾಯುವಾಗ ಹೇಳಿದ್ದಳು: “ನೀನು ಕುರುಡನಾಗಿ ಹುಟ್ಟಿ ಮದುವೆಯಾಗಲ್ಲೆಂದು ಹಠ ಹಿಡಿದಿ. ಪಾರ್ವತಿ ಸಕೇಶಿಯಾಗಿ ಮನೆ ಸೇರಿದಳು. ಅವರ ಅಪ್ಪ ಊರು ಬಿಟ್ಟು ಓಡಿ ಹೋದ. ನಿನ್ನ ಹತ್ತಿರ ಸೇರಿದ್ದಾಳೆ ಶಾರದೆ. ಅದು ಒಂದೇ ಕುಡಿ ಉಳಿದಿರೋದು. ಅವಳಿಗಾದರೂ ಸರಿಯಾದ ಕಡೆ ಮದುವೆ ಮಾಡು. ವಂಶ ನಿಸ್ಸಂತಾನವಾಗದಂತೆ ನೋಡಿಕೊ. ” ಅಮ್ಮನ ಕಠಿಣ ಆಜ್ಞೆ ನಡೆಸಲಿಲ್ಲ. ಶಾರದೆಗೆ ಇಪ್ಪತ್ತೈದು ತುಂಬಿತು. ಅಮ್ಮನಿಗೆ ಹತ್ತನೆ ವಯಸ್ಸಿಗೇ ಮದುವೆಯಾಗಿತ್ತಂತೆ. ತಪ್ಪಾಗಿದೆ, ಎಲ್ಲಿಯೋ ತಪ್ಪಾಗಿದೆ. ನವರಾತ್ರೆ ದಿನ ಗೊಂಬೆಯಿಡೇ ಶಾರದ ಎಂದರೆ ಯಾರು ನೋಡಬೇಕೂಂತ ಇಡಲಿ ಎಂದು ವೈರಾಗ್ಯದ ಮಾತಾಡಿದಳು. ಎರೆದುಕೊಂಡಿಯೇನೆ, ಲಚ್ಚಿ ಬಂದು ನೀರು ಹಾಕುತ್ತಾಳೆ ಕಣೆ ಎಂದರೆ ಅಯ್ಯೊ ಬೇಡ ಎಂದುಬಿಡುವಳು. ಎಲ್ಲೋ ಏನೋ ತಪ್ಪಾಗಿದೆ. ನನ್ನಿಂದ ತಪ್ಪಾಗಿದೆ. ಈಗ ರಂಗ ದೊಡ್ಡ ಪ್ರಶ್ನೆಯಂತೆ ಎದುರು ನಿಂತಿದ್ದಾನೆ. ಹುಟ್ಟುಗುರುಡನಾಗಿ ನಾನು ಹುಟ್ಟದಿದ್ದರೆ… ಅದು ನನ್ನ ತಪ್ಪೆ ದೇವರೆ? ತ್ರಾಣವಿದ್ದವರು ಮಾತ್ರ ಬದುಕಲಿ ಎನ್ನುವ ಪ್ರಕೃತಿಯ ನಿಷ್ಠುರ ವಿಧಿಯಲ್ಲಿ ನಾನು ಬದುಕಿ ಉಳಿದದ್ದೆ ತಪ್ಪು. ರಂಗ ದೊಡ್ಡ ಪ್ರಶ್ನೆ, ಅವನು ನನ್ನ ವಿಧಿ. ಬೇರೆಯವರಿಗೆ ಹೊರೆಯಾಗಿ ಬದುಕಲು ನಿನಗೆ ಏನು ಹಕ್ಕು ಎಂದು ಯೌವನದ ಕುರುಡಿನಲ್ಲಿ ಕೇಳುತ್ತಿದ್ದಾನೆ. ನಾನೂ ಕುರುಡ, ಅವನೂ ಕುರುಡ, ಪ್ರಕೃತಿಯೂ ಕುರುಡು. ಪ್ರಕೃತಿಗೆ ನಾನು, ರಂಗ, ಮೃಗ, ಪಕ್ಷಿ, ಕಲ್ಲು, ಮರಳು ಎಲ್ಲ ಒಂದೆ. ಪ್ರಕೃತಿಗೆ ಕೊಡದ ಧರ್ಮಬುದ್ಧಿ, ವಿವೆಕ, ನಮಗೆ ಕೊಟ್ಟ ದೇವರು. ತಪ್ಪು ಸರಿ ಕಾಣದ ಜಗತ್ತಿನಲ್ಲಿ, ತಪ್ಪು ಸರಿ ಯೋಚಿಸುತ್ತ ‘ಆಹಾ ಸುಖವೇ’ ಎಂದು ಕತ್ತಿಯಲುಗಿನ ಮೇಲೆ ನಡೆಯೋ ಎಂದ ಮನುಷ್ಯ ಪ್ರಾಣಿಗೆ. ದೇಹವೊಂದು ಗಟ್ಟಿಯಾಗಿದ್ದಾಗ ದೇವರು ಯಾಕೆ ನನಗೆ ಈ ಪ್ರಶ್ನೆ ಹಾಕಲಿಲ್ಲ? ಒಟ್ಟು ಅದೃಷ್ಟ. ನಮಗೊಂದು ಧರ್ಮಸೂಕ್ಷ್ಮವಿಲ್ಲದಿದ್ದರೆ ಪ್ರಕೃತಿಯೆಲ್ಲ ಬರೀ ನಿಷ್ಕರುಣವಾಗಿಬಿಡುತ್ತಿತ್‌ಉತ. ಅಪ್ಪಯ್ಯ ಇದ್ದಿದ್ದರೆ ಏನು ಮಾಡಲಿ ಅಪ್ಪಯ್ಯ ಎಂದು ಕೇಳುತ್ತಿದ್ದೆ. ಪ್ರೀತಿಯ ವಷಯ ಒಂದು ಸಾರಿ ಅವರು ಹೇಳಿದರು. ತಾನೇ ಹೆತ್ತ ಮರಿಗಳ ಮೇಲಿನ ಮಮತೆಯಲ್ಲಿ ನಾಯಿ, ನೆಕ್ಕಿ ನೆಕ್ಕಿ, ಮರಿಗಳ ಮೃದುಚರ್ಮ ಸುಲಿಯುವಷ್ಟು ಪ್ರೀತಿಯಲ್ಲಿ ನೆಕ್ಕಿ, ಒರಟು ನಾಲಗೆಗೆ ತಾನೆ ಹೆತ್ತವುಗಳ ರಕ್ತದ ರುಚಿ ತಾಗಲು ಹೆತ್ತವನ್ನೆ ತಿಂದುಬಿಡುತ್ತದೆ. ಇವತ್ತು ಐದು ಮರಿಯಿದ್ದರೆ ನಾಳೆ ನಾಲ್ಕಾಗಿಬಿಡುತ್ತೆ. ತಾಯಿ. ಕಣ್ಣು ಕಾಣದ ಪುಟ್ಟ ಪುಟ್ಟ ಮರಿಗಳು ಪಾಪ. ತಾಯಿಗೂ ಕಣ್ಣಿಲ್ಲ ಪಾಪ. ಹೊಟ್ಟೆಯಿಂದ ಹುಟ್ಟಿದ್ದು ಹೊಟ್ಟೆಗೇ ಸೇರಿ ಜೀರ್ಣವಾಗುತ್ತದೆ. ‘ತಾನೇ ಹೆತ್ತವು’ ಎಂಬ ಮಾತನ್ನು ಅಪ್ಪಯ್ಯ ಒತ್ತಿ ಹೇಳುತ್ತಿದ್ದರು. ಪ್ರೀತಿಯೆಂದರೆ ಅದು ಶಂಕರ ಎನ್ನುತ್ತಿದ್ದರು. ಪ್ರೀತಿಯೂ ತಪ್ಪು, ನಾನು ಶಾರದೆಯನ್ನು ಪ್ರೀತಿಸುವುದೂ ತಪ್ಪು. ಆದರೆ ಪ್ರೀತಿಯೂ ಇಲ್ಲದೆ ನಾನು ಹೇಗೆ ಬದುಕಲಿ? ಪ್ರಕೃತಿಯಲ್ಲಿ ನಮಗೆ ಇನ್ನೇನು ಆಸರೆ? ‘ಕಾಲಃ ಕ್ರೀಡತಿ ಗಚ್ಛತ್ಯಾಯಃ ತದಪಿ ನ ಮುಂಚತ್ಯಾಶಾವಾಯುಃ’ ಅಪ್ಪಯ್ಯ ಹೇಳಿ ನಗುತ್ತಿದ್ದರು. ‘ನಗಬೇಕೊ ಶಂಕರ’ ಎನ್ನುತ್ತಿದ್ದರು.

“ನೀನು ಹೇಳೋದು ತಪ್ಪಲ್ಲ ರಂಗ. ಆದರೆ ಶಾರದ ಇಲ್ಲಿಯೇ ನಿಲ್ಲುವ ಮಾಣಿಯೊಂದನ್ನು ಮದುವೆಯಾಗಿ ವಂಶವನ್ನು ನಡೆಸಿಕೊಂಡು ಹೋಗಬೇಕೆಂದು ನನ್ನ ಆಸೆ. ಅದು ಹೋಗಲಿ. ನೀನಾದರೂ ನಿನ್ನ ತೋಟವನ್ನು… ”

ರಂಗ ಶಂಕರಯ್ಯನ ಮಾತನ್ನು ಅರ್ಧಕ್ಕೆ ತಡೆದ.

“ಅದು ನನ್ನಿಂದ ಸರ್ವಥಾ ಆಗದು. ಈ ಹಳ್ಳಿಯೊಂದು ನನಗೆ ಶಾಪದಂತೆ ಕಾಣುತ್ತದೆ. ನಾನು ಬದುಕಬೇಕು. ಇಲ್ಲಿರಲಾರೆ. ಶಾರದೆಯೂ ಇಲ್ಲಿರಕೂಡದು. ಅಂತಹ ಮದುವೆ ನನಗೆ ಬೇಡ. ನಿಮಗೆ ಈ ಹಳ್ಳಿ, ಈ ಚಿರಪರಿಚಿತ ಮನೆ ಹೇಗೆ ನಿಮ್ಮ ಪ್ರಾಣವೊ, ನನಗೆ ಹಾಗೆಯೇ ಈ ಕೊಪ್ಪಲು ನನ್ನ ಶ್ಮಶಾನ… ”

“ಹೀಗೆ ನೀನು ಒರಟು ಮಾಡಿದರೆ ನಾನೇನು ಮಾಡಲೊ ರಂಗ. ಶಾರದೆ ನನ್ನ ಅಕ್ಕನ ಮಗಳಾದ್ದರಿಂದ ಪೂರ್ವಿಕರ ಕಟ್ಟು ಅವಳನ್ನು ಬಂಧಿಸದು, ದೇವರಿಗೆ ತಪ್ಪು ಕಾಣಿಕೆ ಕಟ್ಟಿ ನಿನಗವಳನ್ನು ಬೇಕಾದರೆ ಮದುವೆ ಮಾಡೋಣವೆಂದು ನಾನು ಮನಸ್ಸು ಮಾಡಿದರೂ ನೀನು ಮಾತ್ರ ತಾನು ಹತ್ತಿದ ಕುದುರೆಗೆ ಮೂರೇ ಕಾಲು ಎಂದು ವಾದ ಮಾಡುತ್ತಿ. ನಿನಗೆ ಯೌವನದ ಕುರುಡು. ನಿನ್ನದೇನು ತಪ್ಪು ಪಾಪ. ನನಗಿರುವ ಒಂದೇ ಒಂದು ಜೀವದ ಆಸರೆ ತಪ್ಪಿಸಿ ನನ್ನನ್ನು ಕೊಲ್ಲಬೇಕೆಂದುಕೊಂಡಿಯಲ್ಲ. ಇದು ನಿನ್ನ ಆತ್ಮ ಒಪ್ಪುವ ಕೆಲಸವ?”

ರಂಗ ನಿರುತ್ತರನಾಗಿ ತಲೆತಗ್ಗಿಸಿದ. ಎದ್ದು ಶಾರದೆಯನ್ನು ನೋಡೋಣವೆಂದು ಅಡಿಗೆಮನೆಗೆ ಹೋದ. ಅವಳು ಎಲೆ ಹಾಕಿ ದಂಗುಬಡಿದವಳಂತೆ ಕಡೆಗೋಲು ಕಂಬಕ್ಕೊರಗಿ ನಿಂತಿದ್ದಳು. ಕೈಯಲ್ಲಿ ಶಾಕುಂತಲವನ್ನು ಹಿಡಿದಿದ್ದಳು. ರಂಗನಿಗೆ ಮನಸ್ಸಿನಲ್ಲೊಂದು ಥಟ್ಟನೆ ಹೊಳೆಯಿತು. ಲಚ್ಚಿ ಎಷ್ಟಾದರೂ ಶಂಕರಯ್ಯನಿಟ್ಟುಕೊಂಡಿದ್ದ ಮಾಲೇರರ ಪುಟ್ಟಿಯ ಮಗಳಲ್ಲವೆ? ಊರಿಗೇ ಗೊತ್ತಿರುವ ವಿಷಯ. ಶಾರದೆ ಸಾಕುಮಗಳು. ಆದರೆ ಲಚ್ಚಿ ಸ್ವಂತ ಮಗಳಲ್ಲವೆ? ತನ್ನ ಪಿತೃಗಳ ಇಚ್ಛೆ ಮೀರಬಾರದೆಂದು ಭೂತಕ್ಕೆ ಗಂಟು ಬಿದ್ದ ಶಂಕರಯ್ಯ, ತನ್ನ ಸಂತಾನವೇ ಆದ ಲಚ್ಚಿಗೂ ತಾನು ಜವಾಬ್ದಾರನೆಂದು ಯಾಕೆ ಯೋಚಿಸಬಾರದು? ಕೇಳಿಬಿಡಬೇಕು ಮುದುಕನನ್ನ. ಮನಸ್ಸು ಗಟ್ಟಿಮಾಡಿ ಶಾರದೆಯ ಜೊತೆ ಮಾತನಾಡದೆ ಅಡಿಗೆ ಮನೆಯಿಂದ ಹೊರಟ. ಶಾರದೆ ‘ನಿಲ್ಲಿ’ ಎಂದಳು. ರಂಗನ ಮುಖ ವಿವರ್ಣವಾದುದನ್ನು ನೋಡಿ,

“ಮಾವಯ್ಯನ ಮನಸ್ಸು ನೋಯಿಸುವಂತಹ ಮಾತು ನೀವು ಆಡಕೂಡದು” ಎಂದು ಬೇಡಿದಳು. ರಂಗ ಗಂಟಲಿಗೆ ಬಂದ ಮಾತನ್ನು ನುಂಗಿದ. ಶಂಕರಯ್ಯನ ಅಂತರಾತ್ಮಕ್ಕೆ ಆ ಪ್ರಶ್ನೆ ಹೊಳೆಯದಿದ್ದರೆ, ತಾನು ಯಾಕೆ ಅದನ್ನ ಎತ್ತಬೇಕು? ನನ್ನ ಪ್ರಶ್ನೆ ಬಗೆಹರಿಸಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ.

ಶಾರದೆ ಮಾವನಿಗೆ ಫಲಾಹಾರಕ್ಕೆ ಇಟ್ಟು ಬಂದು ರಂಗನಿಗೆ ಅನ್ನ ಬಡಿಸಿದಳು.

* * **

“ಕೌಲಿಯನ್ನ ಹುಡುಕಿಕೊಂಡು ಬರಲು ಲಚ್ಚಿಯ ಗಂಡನಿಗೆ ಹೇಳಿದೆಯೇನೆ ಶಾರದ. ತುಂಬುಗಬ್ಬದ ದನ ಕಣೇ. ಗುಡ್ಡದ ಮೇಲೆ ಎಲ್ಲಿ ಕರು – ಗಿರು ಹಾಕಿಕೊಂಡಿತೊ. ಈ ಕಾಡಿನಲ್ಲಿ ಹುಲಿಯೊಂದು ಬಂದು ಸೇರಿದೆಯಂತೆ. ಹಾಳು ಉಪದ್ರ, ಗಾಯಗೊಂಡ ಹುಲಿಯಿರಬಹುದು ಎಂದ ಕೊರಗ. ನಿನ್ನೆ ರಾತ್ರೆ ಮನೆಯ ಬಾಗಿಲಿಗೇ ಬಂದು ಕೂತಿಗು. ಗಣಪತಿಗೆ ಹಣ್ಣುಕಾಯಿ ಹೇಳಿಕೊಂಡೆ. ಏನೊ ಅನಿಷ್ಟ ತಗುಲಿದೆ ಮನೆಗೆ. ಕೊರಗನಿಗೆ ನೂರು ಅಡಿಕೆ ಸಸಿ ತಂದು ನಡೊ ಎಂದು ಹೇಳಿದ್ದೆ. ಅವನು ಪತ್ತೆಯೇ ಇಲ್ಲ. ಕುರುಡು ಮುದುಕನ ಮಾತು ಯಾರು ಕೇಳುತ್ತಾರೆ ಹೇಳು. ತಿಪ್ಪಾಭಟ್ಟ ಬಂದು ನಿತ್ಯ ಈಶ್ವರನಿಗೆ ಪೂಜೆ ಮಾಡಿ ಹೋಗುತ್ತಾನೊ ಇಲ್ಲವೊ. ನಾನು ಕಣ್ಣುಮುಚ್ಚುವವರೆಗೊಂದು ದೇವರ ತಲೆಗೆ ನೀರು ಹೂವು ಬಿದ್ದೀತು. ಆಮೇಲೆ ಕೇಳೋರು ಯಾರು? ಪಿತೃಗಳನ್ನು ನರಕಕ್ಕೆ ತಳ್ಳುವ ಪಾಪಿ ಮಗನಾಗಿ ನಾನು ಹುಟ್ಟಿದೆ”.

ರಂಗನಿಗೆ ಅನ್ನ ಸೇರಲಿಲ್ಲ. ಪ್ರತಿಯೊಂದು ಮಾತೂ ತನ್ನನ್ನೇ ಚುಚ್ಚುತ್ತದೆ. ಶಾರದ ಕಂಗಾಲಾದವಳಂತೆ, ದಿಕ್ಕು ಕಾಣದವಳಂತೆ ಚಪಡಿಸುತ್ತಾಳೆ. ಈ ಮುದುಕನ ಪ್ರೀತಿ ಇವಳನ್ನು ನಾಶಮಾಡುತ್ತದೆ. ನನ್ನ ಪ್ರೀತಿಗೇಕೆ ಇವಳು ಕಿವಿಗೊಡಬಾರದು. ಹೇಸಿಗೆಯಾಗುವುದಿಲ್ಲವೆ ಇವಳಿಗೆ? ಮನಸ್ಸಿನಲ್ಲಿ ಹಿಂಸೆಯಾದರೂ ಬಾಯಿ ಮುಚ್ಚಿಕೊಂಡಿದ್ದಾಳೆ.

ಕೈ ತೊಳೆದು ಹೊರಗೆ ಬಂದ ರಂಗ ಪಡಸಾಲೆಯಲ್ಲಿ ಜಪದ ಸರ ಹಿಡಿದು ಕೂತಿದ್ದ ಶಂಕರಯ್ಯನನ್ನು ನೋಡಿ ಬೆಚ್ಚಿದ. ಉಸಿರು ಹೋದವನಂತೆ ನಿಂತ.

ಕೈಯಲ್ಲಿ ಜಪದ ಸರ, ಮೈಮೇಲೆ ಹೊದ್ದ ಕಂಬಳಿ, ಸುಕ್ಕುಗಟ್ಟಿದ ಮುಖ, ಹರಳೆಣ್ಣೆಯ ದೀಪದಲ್ಲಿ ಉದ್ದವಾಗಿ ಪಡಸಾಲೆಯ ಈ ತುದಿಗೆ ಅವರ ನೆರಳು; ಅಸ್ಪಷ್ಟವಾಗಿ, ಹಣತೆಯ ದೀಪ ಹಂದಿದಾಗ ಬಳುಕಿ ಬಾಗಿ; ಅವರ ಅಪ್ಪ, ಅಜ್ಜ, ಮುತ್ತಜ್ಜನ ಕಾಲದಿಂದ ಶಾಪದಂತೆ ಈಗ ನನ್ನ ಬಾಳಿನೊಳಗೆ, ಮುಂದೆ ನನ್ನ ಭವಿಷ್ಯದಲ್ಲಿ ಈ ಭೂತ; ಈ ನೆರಳು ಭೂತ; ಶಾರದೆಗೂ ನನಗೂ ನಡುವೆ ಬೀಳುವ ನೆರಳುಗಳು; ಬೆನ್ನು ಬಿಡದ ನೆರಳುಗಳು; ಹುಡುಗನಾಗಿದ್ದಾಗೊಮ್ಮೆ ಕತ್ತಲಿನಲ್ಲಿ ಇಲ್ಲಿ ಒಳಗೆ ಓಡಿ ಬಂದು ಶಂಕರಯ್ಯನ ನೆರಳು ನೋಡಿ ಬೆಚ್ಚಿದೆ. ಮನುಷ್ಯರಿಲ್ಲದೆ ಬರಿ ನೆರಳುಗಳೆ ಲೋಕದಲ್ಲೆಲ್ಲ ಓಡಾಡಿಕೊಂಡಿರುವಂತೆ ಕನಸು ಬಿತ್ತು. ನ್ನ ನೆರಳೂ ನನಗೆ ಭಯ. ಈಗಲೂ ಭಯ, ಹುಟ್ಟುವಾಗ ಜೊತೆಗೆ ಹುಟ್ಟುತ್ತದೆ. ಸಾಯುವಾಗ ಹೋಗತ್ತದೆ. ಇಲ್ಲ ಸತ್ತಮೇಲೂ ಸಾಯುವುದಿಲ್ಲ. ಸಾಯುವುದೇ ಇಲ್ಲ. ಶಾರದೆಯ ಅಕ್ಕನ ನೆರಳಿದೆ ಇಲ್ಲಿ. ಆಣೆಭಾಷೆ ಹಾಕಿದ ಮುತ್ತಜ್ಜರ ನೆರಳು ಇಲ್ಲಿ. ನಾನು ನಿನ್ನ ನೆರಳು ನೋಡುತ್ತೇನೆ, ನೀನು ನನ್ನ ನೆರಳು ನೋಡುತ್ತಿ. ಆಗೊಮ್ಮೆ ಈಗೊಮ್ಮೆ ನೆರಳುಹತ್ತಿರವಾಗುತ್ತೆ, ದೂರವಾಗುತ್ತೆ. ನಾನು ನಿನ್ನ ಕಂಡಿಲ್ಲ, ನೀನು ನನ್ನ ಕಂಡಿಲ್, ಕಂಡದ್ದೆಲ್ಲ ನೆರಳು. ನೂರಾರು ವರ್ಷಗಳಿಂದ ತಲೆಯ ಮೇಲೆ ಶಾಪದಂತೆ ಈ ಮಾಡು, ಮೇಲೆ ಜಡಿಮಳೆ ಸೋರುವ ಮುಗಿಲು, ಎರಡನ್ನು ಹೊತ್ತು ನಿಂತ ದಪ್ಪ ದಪ್ಪ ಕಂಬಗಳ, ತೊಲೆಗಳು; ಮನೆಯ ತುಂಬ ದೀಪ ಕೊರೆದುಬಿಡುವ ಅವುಗಳ ನೆರಳುಗಳು, ಬೂಸಲು ಹಿಡಿದು ಸೊಂಡಿಲು ಮುರಿದ ಗಣಪತಿ, ಮೂಲೆಯ ತಿಜೋರಿ, ನಿಧಾನ ಕಾಲವೆಣಿಸುವ ಗಡಿಯಾರ, ಸಾಯದೆ ಉಳಿದ ಕುರುಡ, ಅವನ ಉದ್ದ ನೆರಳು, ಮನೆಯನ್ನೆಲ್ಲ ಆವರಿಸಿದ್ದ ಮೌನದಲ್ಲಿ ಮೀಯಾವ್ ಎಂದು ಪಡಸಾಲೆ ದಾಟುವ ಕಳ್ಳಹೆಜ್ಜೆಯ ಬೆಕ್ಕು, ಹಳೆ ಮಜ್ಜಿಗೆ ವಾಸನೆಯ ಅಡಿಗೆಮನೆ; ಎಲ್ಲವುದೂ ದುಷ್ಟ ಶಕ್ತಿಗಳಂತೆ, ಸಾವಿನ ಸಂಕೇತಗಳಂತೆ, ನನ್ನ ನಿರ್ದಾರವನ್ನು ಅಲುಗಿಸುವ ಜನ್ಮ ಜನ್ಮದ ಶಾಪದಂತೆ. ಇಲ್ಲಿ ಯಾವುದೂ ಮರೆಯುವುದಿಲ್ಲ. ಋತುಚಕ್ರದ ಮೆಲ್ಲಗಿನ ಉಸಿರಾಟದಲ್ಲಿ ಈ ಮನೆಯೊಂದು ತೂಕಡಿಸುವ ನೆನಪಿನಂತೆ, ಜಡವಾಗಿ ಬಿದ್ದ ಅಜಗರದಂತೆ, ಪಾಚಿಗಟ್ಟಿದೆ, ಮಂಕಾಗಿದೆ, ಮಾಸಿದೆ. ಸುಂದರವಾದದ್ದೆಲ್ಲ ನಿರ್ನಾಮವಾಗುವುದು; ಬೀಸಿ ಹೋದ ಪರಿಮಳದಂತೆ, ಮಿಂಚಿ ಮಾಯವಾಗುವ ಸಂಜೆಯ ಬಣ್ಣಗಳಂತೆ. ಆದರೆ ಇದು ಕಣ್ಣಿಲ್ಲದ ರಾಕ್ಷಸ. ಕಲ್ಲಾದ ಅಹಲ್ಯೆ. ಸಾಯಬೇಕು. ನಾಶವಾಗಬೇಕು, ತನ್ನ ಉಪಯುಕ್ತತೆ ಕಳೆದ ಬಳಿಕ ನಿರ್ನಾಮವಾಗಬೇಕು. ಅದು ಒಳಿತು. ಅದು ಸುಂದರ. ಹೀಗೆ ಉಳಿದೇ ಬಿಡುವುದು ಜೀವಕ್ಕಂಟಿಕೊಂಡು ನಾಶವಾಗದೆ ಉಳಿಯುವುದು ದುಷ್ಟ, ಅನಿಷ್ಟ. ಸುತ್ತೆಲ್ಲ ಕಾಡು ಬೆಳೆಯಿತು, ನಿದ್ರಿಸಿದಳು ಸುಂದರಿ, ಶಾಪಗ್ರಸ್ತ ಕನ್ನಿಕೆ ನನ್ನ ಶಾರದೆ. ನನ್ನ ಪ್ರಾಣ ಶಾರದೆ, ಇದರಿಂದ ನಿನ್ನನ್ನು ನಾನು ರಕ್ಷಿಸುತ್ತೇನೆ. ಕೈಗೆ ಕೈ ತಾ. ಪ್ರತಿದಿನ ಸಾಯೋಣ, ಹುಟ್ಟೋಣ, ಸತ್ತು ಹುಟ್ಟುತ್ತಿರೋಣ.

ಶಂಕರಯ್ಯ ಕಂಬಳಿಯನ್ನು ಮೈತುಂಬ ಹೊದ್ದುಕೊಂಡು ಕುರುಡುಗಣ್ಣಿನ ರೆಪ್ಪೆಗಳಿಂದ ಕತ್ತಲೆಯನ್ನು ವ್ಯರ್ಥ ಮುಚ್ಚಿ ತೆರೆದು, ತೆರೆದು ಮುಚ್ಚಿ, ಪಿಳಿಪಿಳಿ ಬಡಿಯುತ್ತಿದ್ದಂತೆ, ಗಡಿಯಾರ ಟಿಕ್ ಟಿಕ್ ಎಂದು ಕಾಲವನ್ನು ಸುತ್ತಿ ಬಿಚ್ಚಿ, ಬಚ್ಚಿ ಸುತ್ತಿ – ‘ಗೋರ್’ss – ಎಂದು ಏಳು ಗಂಟೆ ಹೊಡೆಯಿತು. ಗಂಟೆಗೊಂದೊಂದು ತಲೆ ಹಾಕಿ ಏಳಾಯಿತು ಎಂದರು. ‘ಹಾ’ ಎಂದು ಮೂಗು ಗಂಟಲಿನಿಂದ ವಿಚಿತ್ರ ಶಬ್ದ ಮಾಡಿದರು. ರೆಪ್ಪೆಗಳನ್ನು ಒಂದು ಕ್ಷಣ ಗಟ್ಟಿಯಾಗಿ ಅವುಕಿ ಕಣ್ಣಿನ ಸುತ್ತ ಮುದಿತನದ ಗೆರೆಗಳನ್ನು ಕೊರೆದರು. ‘ಅಮ್ಮ, ರಾಮ, ಕೃಷ್ಣ’ ಎಂದು ಆಕಳಿಸಿದರು. ಕುರುಡು ಗಣ್ಣಿನ ರೆಪ್ಪೆಗಳಿಂದ ಕತ್ತಲೆಯನ್ನು ಮತ್ತೆ ವ್ಯರ್ಥ ಬಡಿಯತೊಡಗಿದರು. ಹಾಗೆಯೇ ಗಡಿಯಾರ ಟಿಕ್ ಟಿಕ್ ಎಂದು ಸುತ್ತಿ ಬಿಚ್ಚಿ – ಬಿಚ್ಚಿ, ಸುತ್ತಿ – ತಲೆತಲಾಂತರಗಳ ನಿಷ್ಪಲತೆಯನ್ನು ಎಣಿಸತೊಡಗಿತು. ರಂಗ ಅಸಹಜತೆಯಿಂದ ಸೊಂಡಿಲು ಮುರಿದ ಗಣಪತಿ ಕಡೆ ನೋಡಿದ. ಭಾರವಾದ ನಡಿಗೆಯಿಂದ ಪಡಸಾಲೆಗೆ ಬಂದ ಶಾರದೆಯ ಕಡೆ ‘ಅಯ್ಯೊ ನನ್ನ ಹುಡುಗಿ’ ಎಂದು ಮೃದುವಾಗಿ ನೋಡಿ ನಿಟ್ಟುಸಿರಿಟ್ಟ. ಶಂಕರಯ್ಯ ಮತ್ತೆ ತನ್ನಷ್ಟಕ್ಕೆ ಅಂದುಕೊಳ್ಳತೊಡಗಿದರು:

“ನಾನು ಹೇಳಿದರೆ ಈಗಿನ ಕಾಲದವರು ಎಲ್ಲಿ ಕೇಳುತ್ತಾರೆ? ಪ್ರಾಯಕ್ಕೆ ಬಂದವರಿಗೆ ಮುದುಕರ ಎಗ್ಗೇಕೆ? ಆಗಲಿ ಇದೇ ಪ್ರಕೃತಿ ನಿಯಮ. ಯಾರು ಯಯಾತಿಯಲ್ಲವೆ? ಕೇಳಿದ ಮಗನನ್ನ – ಅಯ್ಯ ನನ್ನ ಮಗನೆ, ನಿನಗೆ ನಾನು ಜೀವ ಕೊಟ್ಟಿದ್ದೇನೆ, ನಿನ್ನ ಯೌವನವನ್ನು ಒಂದಿಷ್ಟು ದಿನ ನನಗೆ ಕೊಟ್ಟಿರು ಅಂತ. ಕೊಟ್ಟನೆ ಮಗ? ನಮ್ಮ ನಮ್ಮ ಜೀವ ನಾವು ನಾವು ಬಾಳಬೇಕು, ಕೊಡುವುದಿಲ್ಲ ಎಂದ. ಯಾಕೆ ಕೊಡಬೇಕು? ಅವನದೂ ತಪ್ಪಲ್ಲ. ಅಪ್ಪಯ್ಯ ಶಾಕುಂತಲ ಓದಿ ಹೇಳುತ್ತಿದ್ದರು: ‘ನೋಡು ಶಂಕರ, ಸಾಕಿದ ಮಗಳನ್ನು ಹೇಗೆ ಕಣ್ವ ಕಳಿಸಿ ಕೊಡುತ್ತಿದ್ದಾನೆ. ನಿರ್ಲಿಪ್ತನಿಗೂ ಪ್ರೀತಿ ತಪ್ಪಲಿಲ್ಲ. ಆದರೂ ಹೋಗಿ ಬಾ ಮಗಳೇ ಎಂದು ಕಣ್ಣು ನೀರು ತುಂಬಿ ಹೇಳಿದ. ಇದು ದೊಡ್ಡದಪ್ಪ’. ನಾವು ಎಲ್ಲರೂ ಕೊನೆಗೆ ಒಬ್ಬಂಟಿಗರೇ. ತಾಯಿಯ ಹೊಟ್ಟೆಯಿಂದ ಅಳುತ್ತ ಒಂಟಿಯಾಗಿ ಬಂದೆವು. ಸಾಯುವಾಗ ಒಂಟಿಯಾಗಿ ಹೋಗಬೇಕು. ಭೂಲೋಕದ ಅರಸು ಧರ್ಮರಾಯನಿಗೆ ಕೊನೆಗೆ ನಾಯಿಯೊಂದು ಮಾತ್ರ ಜೊತೆಯಲ್ಲಿ ಇತ್ತಂತೆ. ಅದನ್ನೊಂದು ಮಾತ್ರ ಬಿಡುವುದಿಲ್ಲ ಎಂದನಂತೆ ಪುಣ್ಯಾತ್ಮ. ಸುಖಕ್ಕಿಂತ ಶ್ರೇಯಸ್ಸು ದೊಡ್ಡದು. ನಮ್ಮ ಧರ್ಮ ನಾವು ಬಿಡಬಾರದು. ಸುಖಬೇಕೆಂದು ಅಲ್ಲವೆ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು? ಕೊನೆಗೆ ಎಲ ಬಿಟ್ಟು ಒಂಟಿಯಾಗಬೇಕು. ಆಸೆ ತೀರದಿದ್ದರೆ ಪ್ರೇತವೂ ಒಂಟಿಯಾಗಿ ಅಲೆಯುತ್ತದಂತೆ. ಯಾರು? ಶಾರದೆಯೇನಮ್ಮ? ಇಲ್ಲಿ ಬಾ ಮಗಳೇ, ನಮ್ಮ ಮನೆಯೆದುರಿಗೇ ನಿನ್ನ ಎಹುಲಿ ಬಂದು ಕೂಗಿದ್ದು ರಾತ್ರೆ ನಿನಗೆ ಕೇಳಿಸಿತೆ? ಗಣಪತಿಗೆ ಮೈಲಿಗೆಯಾಗಿರಬೇಕು ಭಟ್ಟರಿಗೆ ಹೇಳಿ ಶುದ್ಧ ಮಾಡಿಸಬೇಕಮ್ಮ. ದೇವರಿಗೆ ಮುಡಿಪು ಕಟ್ಟಿದನ?…….. ಒಂದೇ ವಿಷಯ ನಾನು ಸಾವಿರ ಸಾರಿ ಹೇಳಿ ನಿಮಗೆ ತಲೆ ಚಿಟ್ಟು ಹಿಡಿಸುತ್ತೀನಿಯಲ್ಲವೆ? ನಾನೊಬ್ಬ ಪಿರ್ಕಿ ಮುದುಕ. ಮುದುಕರೆಲ್ಲರೂ ಪಿರ್ಕಿಗಳೆ. ನನ್ನ ಮಾತು ನೀವು ಕಟ್ಟಿಕೊಳ್ಳುವುದು ಬೇಡ. ನನ್ನನ್ನ ಬಿಸಾಕಿ ಹೋಗಿ. ತಿಪ್ಪಾಭಟ್ಟನಿಗೆ ಒಂದು ಹೊತ್ತು ಬಂದು ಅನ್ನ ಬೇಯಿಸಿ ಹಾಕಯ್ಯ ಎನ್ನುತ್ತೇನೆ. ಉಳಿದ ಸಮಯ ಲಚ್ಚಿ ಬಂದು ನೋಡಿ ಹೋಗುತ್ತಾಳೆ. ”

ಶಾರದೆ ಬಿಕ್ಕಿ ಅಳುವುದು ನೋಡಿ ರಂಗನಿಗೆ ತಡೆಯದಾಯಿತು. ಹೊರಗೆ ಹೋಗಿ ಶಾರದಾ ಎಂದು ಕೂಗಿದ. ‘ಬಾರೇ ಶಾರದಾ, ನಾನೊಂದು ಮಾತು ಹೇಳುತ್ತೇನೆ. ಕೇಳು ಬಾರೇ ಶಾರದಾ’ ಎಂದ. ಇನ್ನೊಂದು ಬಲೆಯಿದು, ಬೇಕೆಂದು ಬೀಸುವುದಲ್ಲ; ಈ ಧರ್ಮಸೂಕ್ಷ್ಮದ ಮಾತು, ತ್ಯಾಗದ ಮಾತು ತನಗೆ ಗೊತ್ತಿಲ್ಲದಂತೆ ಮಾಡುವ ಮೋಸ. ಮುದುಕ ಆಡುವ ಮಾತೆಲ್ಲ ನಿಜವಾಗಿ ಅನ್ನಿಸಿದ್ದಾದರೆ ಸಾಯಬೇಕು. ಆದರೆ ಸಾಯುವುದಿಲ್ಲ, ಸಾಯುವಷ್ಟು ಧೈರ್ಯ, ಔದಾರ್ಯ ಇಲ್ಲ. ನನ್ನನ್ನ ನೋಡಿಕೊಂಡು ಬಿದ್ದಿರು ಎಂದು ಒತ್ತಾಯಮಾಡಿದ್ದರೆ ಮುದುಕನ ವಿರುದ್ಧ ಶಾರದೆ ತಿರುಗಿ ನಿಲ್ಲಬಹುದಿತ್ತು. ವಿರೋಧಿಸುವ ಧೈರ್ಯ ಬರುತ್ತಿತ್ತು. ಆದರೆ ಹೀಗೆ ಮಾತಾಡಿ ಅವಳ ಪ್ರಾಣ ಹಿಂಡುವುದು ಹೆಚ್ಚು ದುಷ್ಟ, ಅನಿಷ್ಟ; ಬೇಕೆಂದು ಮಾಡುವುದಲ್ಲ, ಆದರೂ ಅನಿಷ್ಟ, ದುಷ್ಟ. ‘ಆಹಾ ಎಷ್ಟು ಉದಾರವಾಗಿ ಮಾತನಾಡಿಬಿಟ್ಟೆ’ ಎಂದು ಮುದುಕ ತನ್ನ ಗಣಕ್ಕೇ ತಾನು ಹಿಗ್ಗುತ್ತಿದ್ದಾನೆ. ಮಾತಾಡಿಬಿಟ್ಟಿದ್ದರಿಂದ ತನ್ನ ಅಂತರಾತ್ಮ ಶುದ್ಧವಾದಂತೆ ಎಂದು ತೃಪ್ತಿಯಲ್ಲಿ ತಲೆದೂಗುತ್ತಾನೆ, ಶಂಕರಯ್ಯನ ಈ ಉದಾತ್ತತೆ ಮನಸ್ಸಿನದು, ಮಾತಿನದು, ಹೇಗೆ ಇದನ್ನ ಶಾರದೆಗೆ ತಿಳಿಸಲಿ, ತನ್ನ ಧಾರ್ಮಿಕ ಔದಾರ್ಯದಲ್ಲಿ ನನ್ನ ಪ್ರೀತಿ ಅಲ್ಪ ಎಂದು ಅವಳಿಗೆ ಅನ್ನಿಸುವಂತೆ ಮಾಡಿ ಪೀಡಿಸಿ ಸುಖ ಪಡುತ್ತಾನೆ. ಇದನ್ನ ಶಾರದೆಗೆ ಹೇಗೆ ಮನದಟ್ಟು ಮಾಡಲಿ? ಜೀವದ ಮೇಲೆ ಆಸೆಯಿದೆ ಮುದುಕನಿಗೆ. ಸಂಪ್ರದಾಯ, ರೂಢಿಬಲದ ಮೇಲೆ ಆಡುವ ಮಾತು ಪ್ರಾಣಕ್ಕನ್ನಿಸಿದ್ದಲ್ಲ’ ಶಾರದೆಗೆ ಇದು ಅರ್ಥವಾಗುವುದೆ?’ ಶಾರದೇ ಶಾರದೇ ಸ್ವಲ್ಪ ಇಲ್ಲಿ ಬಾರೇ’ ಎಂದು ಮತ್ತೆ ಕೂಗಿದ. ಅಯ್ಯೋ ಸೋಲುತ್ತಿದ್ದೇನೆ ಎನ್ನಿಸಿತು. ‘ಮದುವೆಯಾಗು ಹೋಗು’ ಎಂದು ಶಂಕರಯ್ಯ ಹೇಳಿದರೂ ಶಾರದೆ ಬರುವುದಿಲ್ಲ. ತಾನು ದೊಡ್ಡವನಾಗಿ ಸಾವು ಬರದ ಮುದುಕ ತನ್ನನ್ನ ಸಣ್ಣ ಮಾಡುತ್ತಿದ್ದಾನೆ. ಈ ಕುರುಡನ ಧಾರ್ಮಿಕತೆಯ ಎದುರು ನನ್ನ ಟೊಂಕದಲ್ಲಿ ಉರಿಯುವ ಆಸೆ ಹೇಸಿಗೆಯಾಗಿ ಶಾರದೆಯ ಕಣ್ಣಿಗೆ ಕಾಣಿಸುತ್ತದೆ. ನಾಲ್ಕು ನಿಮಿಷದ ನಂತರ ಸೊರಗಿ ಹೋಗುವ ಆಸೆ ನನ್ನದು, ಮುದುಕನದ್ದು ಸನಾತನವಾದ ಧರ್ಮ ಎನ್ನಿಸುತ್ತದೆ ಶಾರದೆಗೆ. ಒಂದು ವೇಳೆ ಮದುವೆಯಾದರೂ ಸಂಪೂರ್ಣ ಶಾರದೆ ನನಗೆ ದಕ್ಕುವುದಿಲ್ಲ. ಸತ್ತ ಮೇಲೂ ಕಾಡುವ ಪ್ರೀತಿಯ ಪ್ರೇತ ಶಂಕರಯ್ಯ. ನನಗೆ ಈ ಭೂತದಿಂದ ಬಿಡುಗಡೆಯೇ ಇಲ್ಲವೇ ದೇವರೇ ಎಂದು ‘ಶಾರದಾ ಬಾರೇ’ ಎಂದು ಅಳುತ್ತಿದ್ದವಳನ್ನು ಮತ್ತೆ ಕರೆದ. “ಕರೆಯುತ್ತಿದ್ದಾನೆ ಹೋಗು ಮಗಳೇ – ಹೋಗಿ ಬಾ ಮಗಳೇ” ಎಂದರು ಶಂಕರಯ್ಯ. ಬಿಕ್ಕಳಿಸಿ ಬಂದ ಮಾತಿನ ದನಿ ಕೇಳಿ ರಂಗ ಬೆಚ್ಚಿದ. “ಕರೆಯುತ್ತಿದ್ದಾನೆ ಹೋಗು ಮಗಳೇ, ಹೋಗಿ ಬಾ ಮಗಳೇ” – ಕ್ಷೀಣವಾದ ಸ್ವರದಲ್ಲಿ ಬಂದ ಶಂಕರಯ್ಯನ ಮಾತಿನ ಹಿಂದೆ ಏನು ಅರ್ಥವಿತ್ತೊ. ಈ ಮುದುಕ ನಿಜವಾಗಿಯೂ, ಮನಃಪೂರ್ವಕವಾಗಿಯೂ… ಯಾ ಭಾವವಿತ್ತು ಅವರ ಮಾತಿನಲ್ಲಿ? ನಾನು ಇವರ ಬಗ್ಗೆ ಊಹಿಸಿದ್ದೆಲ್ಲಾ ನಿಜವೆ? – ಓಡಬೇಕು ಎನ್ನಿಸಿತು. ಎಲ್ಲ ನನ್ನ ಕೈಮೀರಿತು ಎನ್ನಿಸಿತು. ನಾನು ಸರಿಯೆ, ಶಂಕರಯ್ಯ ಸರಿಯೆ, ನನಗೆ ನಿಜವಾಗಿಯೂ ಶಾರದೆ ಶಂಕರಯ್ಯನಿಗೆ ಬೇಕೆನ್ನಿಸುವಷ್ಟು ಬೇಕೆ? ಥತ್ ನನ್ನ ಎಂದು ಕೊಂಡ. ಏನೇನೋ ಯೋಚಿಸುತ್ತೇನೆ. ಅಲ್ಲಿ ಶಂಕರಯ್ಯ ತೃಪ್ತರಾಗಿ ಕೂತಿದ್ದಾರೆ. ವ್ಹಾರೆ ವಾ ಮುದುಕ. ಹೋಗಿ ಬಾ ಮಗಳೇ ಎಂದು ಕಣ್ವನಾಗಿಬಿಟ್ಟ. ‘ಶಾರದಾ ಹೊತ್ತಾಗುತ್ತಿದೆ’ ಎಂದು ಕರೆದ. ಹರಿಯುತ್ತಿದ್ದ ಇರುವೆಯೊಂದನ್ನು ಕಾಲಿನಿಂದ ಉಜ್ಜಿ ಕೊಂದ, ಸಾಯಲಿ ಎಂದ.

* * *

ಕೊರಗ ಬಂದು ಶಂಕರಯ್ಯನ ಕಾಲಿಗೆ ಬಿದ್ದ. ಸ್ವಲ್ಪ ಕುಡಿದಿದ್ದಾನೆಂದು ಶಂಕರಯ್ಯನಿಗೆ ಗೊತ್ತಾಗಿ ಹಾಳು ಮುಂಡೇಮಗ ಎಂದು ಬೈದರು. ‘ಒಡೇರೇ ನೀವೇ ಕಾಪಾಡಬೇಕು, ನನ್ನ ಮಗಳು ನಂಜಿ ಸಿದ್ಧನ ಜೊತೆ ಓಡಿಹೋದಳು. ಐವತ್ತು ರೂಪಾಯಿ ತೆರನಾದರೂ ಕೊಡು ಎಂದೆ. ಸಿದ್ಧ ಕೋವಿ ತೋರಿಸಿ ಹೋಗು ಸೂಳೇಮಗನೇ ಎಂದ, ಬೈರ ಐವತ್ತು ರೂಪಾಯಿ ತೆರಕೊಟ್ಟು ಮದುವೆಯಾಗುತ್ತೇನೆ ಎಂದಿದ್ದ. ನಂಜಿ ನಾನು ಸಿದ್ಧನನ್ನೆ ಆಗುವುದು ಎಂದು ಅವನನ್ನ ಕಟ್ಟಿಕೊಂಡು ಓಡಿಬಿಟ್ಟಳು’ ಎಂದು ಕೊರಗ ಕಣ್ಣೀರು ಸುರಿಸಿದ. ’ನಾನೇನು ಮಾಡಲೋ ಅದಕ್ಕೆ, ತೆರದ ಆಸೆ ಬಿಟ್ಟುಬಿಡು ಅಷ್ಟೆ’. ಎಂದರು ಶಂಕರಯ್ಯ. ‘ಇದ್ದ ಒಬ್ಬಳೇ ಮಗಳು ಹೀಗೆ ಕೈಕೊಟ್ಟಳಲ್ಲಯ್ಯ. ಹೆತ್ತ ಹೊಟ್ಟೆಗೆ ಹೇಗಾಗಬೇಕು ಹೇಳಿ. ಆ ಸಿದ್ಧ ನರಸಪ್ಪನ ಕಡೆ ಆಳು. ಆ ಒಡೇರಿಗೆ ಹೇಳಿಸಿ ತೆರ ಕೊಡಿಸಿಯಯ್ಯ’ ಎಂದ. ‘ಆಗಲಿ. ನೀನು ಅಡಿಕೆ ಸಸಿ ತಂದು ನೆಡದೆ ಹೀಗೆ ಕುಡಿದು ತಿರುಗುತ್ತೀಯಲ್ಲ’ ಎಂದು ಶಂಕರಯ್ಯ ಗದರಿಸಿದರು. ಕೊರಗೆ ಹೊರಗೆ ಬಂದು ರಂಗನಿಗೆ ಕೈಮುಗಿದ. ‘ರಾತ್ರೆಯಾದ ಮೇಲೆ ಹೊರಗೆ ಹೋಗಬೇಡಿಯಯ್ಯ ಹುಲಿಯಿದೆ’ ಎಂದ. ಸ್ವಲ್ಪ ದೂರ ಹೋದಮೇಲೆ ಕುಡಿತದ ಅಮಲಿನಲ್ಲಿ ಹಾಡತೊಡಗಿದ. ಮೋಜಿನಿಂದ ಹಾಡುತ್ತಿದ್ದಾನೆ ಎನ್ನಿಸಿತು ರಂಗನಿಗೆ.

* * *

‘ಗಬ್ಬದ ದನ ಕೌಲಿ, ಎಲ್ಲಿ ಹುಲಿಯ ಬಾಯಿಯ ಪಾಲುಗುವುದೋ’ ಎಂದು ಶಾರದ ಎಂದದ್ದಕ್ಕೆ ರಂಗ ‘ನಾನೂ ಜೊತೆ ಬರುತ್ತೇನೆ. ನೋಡಿ ಬರೋಣ’ ಎಂದು ಹೊರಟ. ‘ಕೌಲಿ ಯಾಕೆ ಬರಲಿಲ್ಲವೋ, ಗುಡ್ಡದ ಮೇಲೆ ಎಲ್ಲಾದರೂ ಕರು – ಗಿರು ಹಾಕಿತೊ ಏನು ಕತೆಯೊ’ ಎಂದಳು ಶಾರದ. “ಹವದಲ್ಲವಾ? ಇಲ್ಲದಿದ್ದರೆ ಗಬ್ಬದ ದನಗಳು ಹೀಎ ತಪ್ಪಿಸಿಕೊಳ್ಳಲ್ಲ. ಸಂಜೆಯಾದ ಕೂಡಲೆ ಕೊಟ್ಟಿಗೆಗೆ ಬಂದುಬಿಡ್ತಾವೆ. ಅಂದ ಹಾಗೆ ಕೊರಗ ಹೇಳಿದ್ದು ಕೇಳಿದೆಯ?” ಎಂದ ರಂಗ. ಅದಕ್ಕೆ, ‘ಇದು ಎರಡನೆಯ ಸಾರಿ ನಂಜಿ ಹೀಗೆ ಓಡಿಹೋಗುತ್ತಿರೋದು. ಕೊನೆಗೆ ತಂದೆ ಮಗಳು ಒಂದಾಗಿಬಿಡ್ತಾರೆ. ನಿತ್ಯದ ಗೋಳು ಇದು ಕೊರಗನ ಮನೆಯಲ್ಲಿ’ ಎಂದು ಶಾರದ ಹೇಳಿದಳು. ರಂಗನಿಗೆ ಯೋಚನೆಯಾಯಿತು. ಗುಡ್ಡದ ಮೇಲೆ ಕರು ಹಾಕಿದರೆ ಫಜೀತಿಯೆ. ಹುಲಿಯ ಉಪದ್ರವವಂತೆ. ನಿಜವೋ ಸುಳ್ಳೊ. ಹೊತ್ತು ಹೋಗದ ಈ ಹಳ್ಳಿಯ ಜನ ಯಾವತ್ತುಹುಲಿಯ ವಿಷಯ ಯೋಚಿಸುತ್ತಾರೆ. ನಾನೂ ‘ಝೂ’ನಲ್ಲಿ ಮಾತ್ರ ಕಂಡಿದ್ದು. ದನಗಳಿಗೆ ವಾಸನೆಯಿಂದಲೇ ಹುಲಿಯಿರೋದು ಗೊತ್ತಾಗುತ್ತಂತೆ. ಕೊರಗ ಹುಲಿ ಹೊಡೆಯುವುದರಲ್ಲಿ ನಿಸ್ಸೀಮ. ‘ನಿಲ್ಲೊ ಹಾಗೂ ಇಲ್ಲ, ಬರೊ ಹಾಗೂ ಇಲ್ಲ ಕರು ಹಾಕಿದ್ದರೆ ಅಲ್ಲವಾ ಶಾರದಾ’ ಎಂದ. ಈ ದನಗಳು ಹಾಲು ಮಾಯಿಸಿಕೊಂಡಾದ ಮೇಲೆ ಹೋರಿ ಬೇಕೆನ್ನಿಸಿದಾಗ ಕೊಟ್ಟಿಗೆಯಲ್ಲಿ ಹೇಗೆ ಕೂಗಿ ಕೊಳ್ಳುತ್ತವೆ! ಹಗ್ಗವನ್ನು ಜಗ್ಗಿ ಜಗ್ಗಿ ಕರೆಯುತ್ತವೆ. ಹಂಬಲದ, ನೋವಿನ, ಒತ್ತಾಯದ ಒಂದು ಥರಾ ಕೂಗು ಅದು. ‘ಓ ಹೋರೀನ್ನ ಕರೆಯುತ್ತೆ’ ಎನ್ನುತ್ತೇವೆ ನಾವು. ಕಪ್ಪೆಗಳು, ಹಕ್ಕಿಗಳು, ಎಮ್ಮೆಗಳು – ಮನುಷ್ಯನ ವಿನಾ ಎಲ್ಲವೂ – ಕೂಗಿನಿಂದಲೆ ಅನ್ನಿಸುವಂತೆ ಮಾಡುತ್ತವೆ. ಮೈಯಿಂದ ಒಂದು ತರಹೆಯ ವಾಸನೆ ಬರುವುದೂ ಉಂಟಂತೆ. ಶ್ರೇಷ್ಠವಾದ ಮಾನವ ಜಾತಿಗೆ ವಿಶೇಷ ರೀತಿಯ ಅಭಿವ್ಯಕ್ತಿ ಬೇಕು. ನನಗೆ ಶಾರದೆ ಬೇಕೆನ್ನಿಸಿದರೆ ಭಾಷಣ ಹೊಡೆಯುತ್ತೇನೆ. ಕಪ್ಪೆಗಳಂತೆ ಅನ್ನಿಸಿದ್ದನ್ನು ಒಂದು ಗೊಟರಿನಲ್ಲಿ ಹೇಳಲು ಬರುವುದಿಲ್ಲ. ಪಿಟೀಲಿನಲ್ಲಿ ಮುಖ ಸೊಟ್ಟಗೆ ಮಾಡಿ ಬಾರಿಸುತ್ತೇವೆ ನಮ್ಮ ಪ್ರೇಮವನ್ನ, ‘ಆಹಾ’ ಎಂದು ಕಣ್ಣು ಮೇಲೆ ಮಾಡುತ್ತೇವೆ. ಕಪ್ಪೆಯಾದರೋ ಗೊಟರು ಹಾಕುತ್ತದೆ. ಶಂಕರಯ್ಯ ಧರ್ಮ ಸೂಕ್ಷ್ಮದ ಮಾತಾಡಿದರೆ, ನಾನು ಮರ್ಮಸೂಕ್ಷ್ಮದ ಮಾತಾಡುತ್ತೇನೆ. ‘ಅಯ್ಯೋ ಒತ್ತಾಯದಿಂದ, ಆಸೆಯಿಂದ ಹೇಳಲು ಬರಲ್ಲ. ಅನಾವಶ್ಯಕವಾದ ಗಂಟುಗಳು, ಗಂಭೀರ ಸಮಸ್ಯೆಗಳು. ಮಾನವ ಜಾತಿ ಅತಿ ಶ್ರೇಷ್ಠವಾದದ್ದು. ನಾನು ಗಂಡು ಕಪ್ಪೆ, ಶಾರದೆ ಹೆಣ್ಣು ಕಪ್ಪೆಯಾಗಿದ್ದರೆ ಹೇಗಿರುತ್ತಿತ್ತು! ಮಲೆನಾಡಿನ ಒಂದು ಕೆಸರು ಹೊಂಡದಿಂದ ನಾನು ‘ಟ್ರೊಂಯ್, ಟ್ರೊಂಯ್’ ಎಂದು ಕರೆಯುತ್ತಿದ್ದೆ. ಆಗವಳು ಕುಪ್ಪಳಿಸಿ, ಕುಪ್ಪಳಿಸಿ, ಬರುತ್ತಿದ್ದಳು. ಈಗ ನಾನು ಶಾರದೆಯನ್ನು ಒಲಿಸಿಕೊಳ್ಳುವ ಕ್ರಮವನ್ನು ಕಪ್ಪೆ ನೋಡಿದ್ದರೆ ಅಯ್ಯೊ ಬೆಪ್ಪ ಎನ್ನುತ್ತಿತ್ತು.

“ಕೌಲಿ ಕಾವೇರಿಯ ಮಗಳಲ್ಲವೆ ಶಾರದ” ಎಂದ.

ಶಾರದೆ ತಲೆ ಹಾಕಿದಳು.

ಕೋಳೆ – ಹೂ – ಕೆರೆಯಿಂದ ತಂಪಾಗಿ ಗಾಳಿ ಬೀಸುತ್ತಿತ್ತು. “ಕಾವೇರಿ ಇನ್ನೂ ಬದುಕಿದೆಯಾ” ಎಂದ.

“ಇಲ್ಲ ಹೋದ ವರ್ಷ ಸತ್ತಿತು. ಕೊಟ್ಟಿಗೆಯಿಂದ ಹೋದದ್ದು ಹಿಂದಕ್ಕೆ ಬರಲೇ ಇಲ್ಲ. ಕೊರಗ ಅದರ ಕೊಂಬುಗಳನ್ನ ಕಾಡಲ್ಲಿ ನೋಡಿದೆ ಎಂದ. ಮುದಿ ದನವನ್ನು ಹುಲಿ ಹಿಡೀತೊ ಏನೊ ಪಾಪ” ಎಂದಳು.

ಕೌಲಿ ಚಿಕ್ಕ ಕರುವಾಗಿದ್ದಾಗ ಹತ್ತಿರ ಹೋದರೆ ಕಾವೇರಿ ಹಾಯಲು ಬರುತ್ತಿತ್ತು. ಅಷ್ಟು ಆಸೆ ಕರು ಎಂದರೆ. ಆದರೆ ಕೌಲಿಗೆ ನಾಲ್ಕೈದು ತಿಂಗಳಾದ ಮೇಲೆ ಇದು ತನ್ನ ಕರು ಎನ್ನುವದನ್ನೂ ಮರೆತುಬಿಟ್ಟಿತು. ನಮಗಿಂತ ಈ ಪಶುಗಳೇ ವಾಸಿ. ಆಕಾಶವಲ್ಲ; ನೆಲವೇ ನಿಜವಾದ ಆದರ್ಶ. ಕರುವಿಗೆ ಅವಶ್ಯವಿದ್ದಾಗ ಮಾತ್ರ ತಾಯಿಯ ಪ್ರೀತಿ; ಕಾಲು ಬಲಿತ ಮೇಲೆ ‘ಹೋಗು ನಿನ್ನ ಪಾಡಿಗೆ ನೀನು’ ಎಂದು ಮರೆತುಬಿಡುತ್ತದೆ. ‘ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಹೊತ್ತು ಹೆತ್ತೆ’ ಎಂದು ಹಂಗಿಸುವುದಿಲ್ಲ; ಸ್ವಾತಂತ್ರ್ಯ ಕೊಟ್ಟಿದ್ದೇನೆ, ನನ್ನ ಉದಾತ್ತತೆ ನೋಡಿದಿಯಾ’ ಎಂದು ಪೀಡಿಸುವುದಿಲ್ಲ. ತೆರ, ತರಳೆ, ಧರ್ಮಸಂಕಟ ಏನೂ ಇಲ್ಲ. ಥತ್ ಮನುಷ್ಯ ಪ್ರಾಣಿಯೇ.

ಶಾರದೆ, ಮಾತಾಡುತ್ತಿಲ್ಲ. ಮಾತಾಡು ಮಾತಾಡು ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಶಂಕರಯ್ಯನನ್ನು ಕಾವೇರಿಗೆ ಹೋಲಿಸಿ, ಯಾರು ಉತ್ತಮ ಹೇಳಿ ಮೊದಲನೆಯ ಪ್ರಶ್ನೆ. ಶಂಕರಯ್ಯನನ್ನು ಕೊರಗನಿಗೆ ಹೋಲಿಸಿ, ಯಾರು ಉತ್ತಮ ಹೇಳಿ ಎರಡನೆಯ ಪ್ರಶ್ನೆ. ನನ್ನನ್ನು ಕಪ್ಪೆಗೆ ಹೋಲಿಸಿ, ಯಾರು ಉತ್ತಮ ಹೇಳಿ ಮೂರನೆಯ ಪ್ರಶ್ನೆ. ಕಾಗುಣಿತ ತಪ್ಪದಂತೆ ಬರೆಯಿರಿ. ಅಥವಾ ಯಾರನ್ನು ಬೇಕಾದರೂ ಯಾರ ಜೊತೆಗಾದರೂ ಹೋಲಿಸಿ.

ಇಬ್ಬರೂ ಮಾತಿಲ್ಲದೆ ಗದ್ದೆ ದಾಟಿದರು. ಕೋಳೆ – ಹೂ – ಕೆರೆಯ ಪಕ್ಕದ ದಿನ್ನೆಯ ಮೇಲೆ ಲಚ್ಚಿ, ಗುಡಿಸಿಲಿನ ಎದುರು ಹಂಡೆಗೆ ಬೆಂಕಿ ಹಾಕಿದ್ದಳು. ಅವಳ ಗಂಡ ಬರೆ ಕೌಪೀನವುಟ್ಟು ಒಲೆಗೆ ಇದಿರಾಗಿ ಕೂತು ಕೈ ಕಾಯಿಸಿಕೊಳ್ಳುತ್ತಿದ್ದ. ಲಚ್ಚಿ ಗಂಡನ ಬೆನ್ನಿಗೆ ಎಣ್ಣೆ ತಿಕ್ಕುತ್ತಿದ್ದಳು. ಬೆಂಕಿಯಲ್ಲಿ ಕಪ್ಪಗೆ ಹೊಳೆಯುವ ಗಂಡಸು ಏನೋ ಪದವನ್ನು ಗೊಗ್ಗರು ಕಂಠದಲ್ಲಿ ಹಾಡತೊಡಗಿದ. ರಂಗ ಒಂದು ಕ್ಷಣ ನಿಂತು ನೋಡಿದ. ಪದವನ್ನು ಆಲಿಸಿದ. ‘ಆಹಾ’ ಎನ್ನಿಸಿತು ಅವನಿಗೆ. ನಿರ್ಲಿಪ್ತರು, ಯೋಗಿಗಳು. ಒಬ್ಬಳು ಸ್ವಂತ ಮಗಳು, ಇನ್ನೊಬ್ಬಳು ಸಾಕುಮಗಳು. ಭೂಮಿಗೆ ಪಶು ಮನುಷ್ಯ ಇದ್ದ ಹಾಗೆ. ಒಬ್ಬಳಿಗೆ ಆತ್ಮ ಕುರುಡು, ಇನ್ನೊಬ್ಬಳಿಗೆ ದೇಹ ಕುರುಡು. ಶಾರದೆಯ ಹೆಗಲಿನ ಮೇಲೆ ಅಂಜುತ್ತ ಕೈಯಿಟ್ಟ. ಅವಳು ಬೇಡವೆನ್ನಲಿಲ್ಲ, ಬೂದು ಮಾವಿನ ಮರದ ಅಡಿ ಬಂದು ನಿಂತರು. “ಶಾರದೆ ನಿನಗೆ ಈಗಲೂ ಮುಟ್ಟಾಗುವಾಗ ಹೊಟ್ಟೆ ನೋಯುತ್ತದೇನೆ” ಎಂದು ರಂಗ ಕೇಳಿದನೆಂದು ಶಾರದೆಗೆ, ನಾಚಿಕೆಯಾಯಿತು. “ನೀನು ನಗುವುದೇ ಇಲ್ಲವೇನೆ ಶಾರದ” ಎಂದರೆ ಶಾರದ ತಗ್ಗಿಸಿದ ತಲೆ ಎತ್ತಲೇ ಇಲ್ಲ. “ಇದು ಏನೇ ಹುಡುಗಿ, ಯಾವಾಗಲೂ ಅಳುಬುರುಕು ಮುಖ ಮಾಡಿಕೊಂಡಿರಬೇಡ. ಇಕೋ ನನ್ನನ್ನು ನೋಡು” ಎಂದ. ಶಾರದ ಮುಖವೆತ್ತಿದಳು. ರಂಗ ಸ್ವಲ್ಪ ಅಣಕಿಸುವ ಧ್ವನಿಯಲ್ಲಿ “ಯಾ ಕುಂದೇಂದು ತುಷಾರಹಾರಧವಳಾ, ಯಾ ಶುಭ್ರ ವಸ್ತ್ರಾನ್ವಿತಾ” ಎಂದ. “ಸಾಕು ಮುಂದೆ ಹೇಳಬೇಡಿ” ಎಂದು ಹಿಂದನದ್ದೆಲ್ಲ ನೆನಪಾಗಿ ಶಾರದ ನಕ್ಕಳು. “ಹಾ – ಅದು ಸರಿ, ಹಾಗೆ ಬಾ” ಎಂದ ರಂಗ.

ಎಷ್ಟು ಮೃದುವಾಗಿ ಮಾತನಾಡಿದ. ನಿನ್ನೆ ನಡೆದಷ್ಟು ಹತ್ತಿರದ ನೆನಪುಗಳು. ಈ ಮರದ ಹಣ್ಣನ್ನು ಆರಿಸುವಾಗ ಅಂಗಾಲಿನಲ್ಲಿ ನೆಗ್ಗಿನ ಮುಳ್ಳು ನೆಟ್ಟಿತು. ಬಗ್ಗಿ ಕೂತು ರಂಗ ತೆಗೆದ. ಇವನ ತಲೆಯ ಮೇಲೆ ಕೈಯೂರಿ ನಿಂತಿದ್ದೆ. ಎಷ್ಟು ಮೃದುವಾಗಿ ಕಾಲನ್ನು ಹಿಡಿದು ಸವರುತ್ತ, ಪುಟ್ಟ ಪುಟ್ಟ ಮುಳ್ಳುಗಳಿಗೆ ಉಗುರಿನಿಂದ ಹುಡುಕುತ್ತ ಕಾಲಿನ ಹತ್ತಿರ ಉಸಿರಾಡಿದ. ಬೆಚ್ಚಗಿತ್ತು ಕೈ. ಮತ್ತೆ ನಿದ್ರಿಸಿದ ರಾಜಕುಮಾರಿಯ ಕತೆ ಹೇಳಿದ. ನೀನೇ ಅವಳು ಎಂದ. ಕಂತುವ ಹೊತ್ತಿನಲ್ಲಿ ಒಂದು ದಿನ ಇವನು ಓದುತ್ತ ಕೂತಿರುವುದು ನೋಡಿದೆ. ಹೊಳೆಯ ಮರಳಿನಲ್ಲಿ ಕಾಲು ಚಾಚಿ ಕೂತವನು ಎಷ್ಟು ಒಂಟಿಯಾಗಿ ಕಂಡ. ಎದೆಗವಚಿಕೊಂಡು ಸಮಾಧಾನಪಡಿಸಬೇಕು ಎನ್ನಿಸಿತು. ಹೈಸ್ಕೂಲಿನಲ್ಲಿ ಓದುತ್ತಿದ್ದವನು ಒಂದು ದಿನ ಬಂದು ‘ನೀನು ಪೇಟೆಯ ಹುಡುಗಿಯರಂತೆ ಸೀರೆಯ ಒಳಗೆ ಯಾಕೆ ಲಂಗ ತೊಟ್ಟುಕೊಳ್ಳುವುದಿಲ್ಲ’ ಎಂದು ಕೇಳೀದ. ನನಗೆ ನಾಚಿಕೆಯಾಯಿತು. ಸ್ವಲ್ಪ ಓರೆಯಾಗಿ ಬೈತಲೆ ತೆಗಿ ಎಂದ. ಅಷ್ಟು ದೊಡ್ಡದಾಗಿ ಕುಂಕುಮವಿಡಬೇಡ ಎಂದ. ನನಗೆ ಭಯವಾಗುತ್ತಿತ್ತು. ಆಸೆಯಾಗುತ್ತಿತ್ತು. ಈಗ ಮತ್ತೆ ಅದೇ ಬೂದುಮಾವಿನ ಬುಡದಡಿ.

“ನಾವಿಬ್ಬರೂ ಈಗ ಮದುವೆಯಾಗಿಯೇ ತೀರಬೇಕು ಶಾರದ. ಹಾಗೇ ಉಳಿಯಲು ನಾನಾಗಲೀ, ನೀನಾಗಲೀ ಸ್ವತಂತ್ರರಲ್ಲ. ”

ಮದುವೆ. ಎಣ್ಣೆಯಲ್ಲಿ ಬರೆದು ಕುಂಕುಮ ತೊಡೆಸಿದ ಆರತಿ; ಮುತ್ತು ಜೋಡಿಸಿದ ಆರತಿ. ಪುಟ್ಟ ಪುಟ್ಟ ನೀಲಾಂಜನ. ಪೆಟ್ಟಿಗೆಯಿಂದ ತೆಗೆದ ಪಟ್ಟೆಸೀರೆಗಳ ಸಂಭ್ರಮ. ಮುತ್ತೈದೆಯರ ಗದ್ದಲ, ಅವಸರ, ಮನೆ ತುಂಬ ಅರಳು. ಯಾವ ಹೆಣ್ಣಿಗೆ ಈ ಸಂಭ್ರಮ ಬೇಡ? ಆದರೆ ನನಗೆ ಅದೃಷ್ಟವಿಲ್ಲ – ಶಾರದ ಅಂಜುತ್ತ ಹೇಳಿದಳು.

“ಮಾವಯ್ಯ… ನನ್ನ….. ”

“ಮತ್ತೆಲ್ಲ ಆ ಮಾತು ಬೇಡ ಸಾರದ. ನೂರು ಸಾರಿ ಮಾತನಾಡಿಯಾಗಿದೆ. ಅವರೂ ನಮ್ಮ ಜೊತೆ ಬಂದಿರಬಾರದು ಯಾಕೆ ಶಾರದ?”

“ನೀವೇ ಯಾಕೆ ಇಲ್ಲಿ ಬಂದಿದ್ದು ನನ್ನನ್ನು ಮದುವೆಯಾಗಬಾರದು?”

“ಅಯ್ಯೋ ಆ ಮಾತೊಂದು ಎತ್ತಬೇಡ ಶಾರದ. ಎಷ್ಟು ಸಾರಿ ನಾನು ಬಡಕೊಂಡಿಲ್ಲ. ಈ ಅಜ್ಜ ಮುತ್ತಜ್ಜರ ಭೂತ ನಮ್ಮನ್ನೂ ಕಾಡಬೇಕೆ. ನಾನೂ ಹೇಳುತೀನಿ ಕೇಳು. ನೀನಿರೋದು ಬಾಳಿ ಬದುಕುವೆ ಮನೆಯಲ್ಲ, ಪ್ರೇತಭೂಮಿ. ನಿನ್ನ ಮಾವನೂ ಒಂದು ಭೂತ. ನಿನ್ನ ಅಕ್ಕನೂ, ಭ್ರೂಣಹತ್ಯ ಮಾಡಿ ಸತ್ತಳು. ಮನೆಯಲ್ಲಿ ಮಕ್ಕಳಿಲ್ಲ, ಮರಿಯಿಲ್ಲ. ನಿಸ್ಸಂತಾನದ ಶಾಪ ಆ ಮನೆಗೆ ಬಿದ್ದಿರಬೇಕು. ಯಾವಾಗಲೂ ಬಿಕೊ ಎನ್ನುತ್ತಿರುತ್ತದೆ ನಾನು ಇಲ್ಲಿರುವವನೆ?”

“ಎಂಥ ಸ್ವಾರ್ಥಿ ನೀವು. ಯಾವಾಗಲೂ ನಿಮ್ಮ ಮುಗಿನ ನೇರಕ್ಕೇ ನೋಡುತ್ತೀರಿ. ಇನ್ನೊಬ್ಬರ ಸುಖ ಕಷ್ಟ ನಿಮಗೆ ಬೇಡ”.

ರಂಗ ಮರಕ್ಕೊರಗಿ ನಿಂತು ಕೋಪದಿಂದ ಮಾತಾಡಿದ. ಶಾರದೆಯ ಕಡೆ ನೋಡಿದ.

“ಸ್ವಾರ್ಥ ತ್ಯಾಗದ ಮಾತಾಡಬೇಡ. ಊರಿಗಿಲ್ಲದ ವೈರಾಗ್ಯ ನಿನಗೆ. ನಿನ್ನ ಜೀವಕ್ಕಂಟಿಕೊಂಡಿರುವ ನಿನ್ನ ಮಾವ ಸ್ವಾರ್ಥಿಯಲ್ಲವೆ? ತಾನು ಪಡೆಯಬೇಕಾದ ಸುಖವನ್ನವರು ಜೀವನದಿಂದ ಪಡೆಯಲಿಲ್ಲವೆ? ಲಚ್ಚಿಯ ತಾಯಿ ಮಾಲೇರ ಪುಟ್ಟಿಯನ್ನವರು ಇಟ್ಟುಕೊಂಡಿರಲಿಲ್ಲವೆ?”

“ಇಕೊ ಕೇಳಿ. ನನ್ನ ಮಾವನ ನಿಂದೆ ಮಾಡುವ ಅಧಿಕಾರ ನಿಮಗಿಲ್ಲ. ಅವರ ಅಮ್ಮನೇ ಒಂದು ಮಾತು ಆ ಬಗ್ಗೆ ಎತ್ತಿರಲಿಲ್ಲ. ನಮಗೇಕೆ ಆ ಮಾತು?”

“ತಪ್ಪೆಂದು ಹೇಳಲಿಲ್ಲ ಶಾರದ. ಅವರು ಮಾಡಿದ್ದು ತುಂಬ ಸರಿ. ಅದರಲ್ಲೇನು ತಪ್ಪು? ಅವರ ಪ್ರೀತಿಯ ನಿಜವಾದ ಫಲಕ್ಕೆ ಅವರು ಅಂಟಿಕೊಂಡಿಲ್ಲ. ಪಾಪ ನಿನ್ನ ಜೀವಕ್ಕೆ ಗಂಟುಬಿದ್ದಿದ್ದಾರೆ. ಅದೇ ನನಗೆ ಸಿಟ್ಟು. ಲಚ್ಚಿ ಅವರ ಮಗಳಲ್ಲವೆ? ತೋಟವನ್ನು ಅವಳ ಹೆಸರಿಗೆ ಮಾಡಿ ಅವರು ಇಲ್ಲೇ ಇರಲಿ. ಬ್ರಾಹ್ಮಣಿಕೆ ಅದಕ್ಕೆ ಅಡ್ಡಿಯಾಗಬೇಕೆ? ಪುಟ್ಟಿಯನ್ನ ಕೂಡುವಾಗ ಪುರಾತನ ಸಂಪ್ರದಾಯ ಮರೆಯಲಿಲ್ಲವ?”

“ನಿಮಗೆ ಆ ಮಾತು ಬೇಡ ಎಂದೆ”.

“ಅಂದೆ ಸರಿ. ಆದರೆ ನೀನು ಮಾವನ ಹೇಲು, ಉಚ್ಚಿ ಬಳಿಯಲಿಕ್ಕೆ ಹುಟ್ಟಿದವಳಲ್ಲ ಎಂದು ಎಚ್ಚರಿಸಲು ಬಂದಿದ್ದೇನೆ…… ”

ಶಾರದೆ ‘ಅಯ್ಯೊ ಮಾತಾಡಬೇಡಿ’ ಎಂದು ಅಳತೊಡಗಿದಳು. ಇವಳ ಜೊತೆ ಮಾತಾಡಲು ಹೋದಾಗಲೆಲ್ಲ ನಾನೇಕೆ ಹೀಗೆ ಒರಟಾಗುತ್ತೇನೆ? ಯಾವಾಗಲೂ ಹೀಗೆಯೇ. ಈ ಶಾರದೆಯೊಂದು ಮಾನಸಿಕ ವಿಶೇಷ. ತನಗೇನು ಬೇಕು, ಏನು ಬೇಡ ತಿಳಿಯದ ಪೆಚ್ಚು ಹುಡುಗಿ. ಅನ್ನಿಸುವುದೇ ಬೇರೆ, ಆಡುವುದೇ ಬೇರೆ. ನಾನೂ ಅಷ್ಟೆ.

“ಇಕೊ ಕೇಳು ಶಾರದ…… ಒಂದು ವಿಷಯ”

ಶಾರದೆ ಸುಮ್ಮನೆ ನಿಂತಳು. ರಂಗ ಅವಳ ತಲೆಗೂದಲನ್ನು ನೇವರಿಸಿ ಮುದ್ದಿನಿಂದ ಅವಳ ಮುಖವನ್ನು ಎತ್ತಿದ.

“ನನಗೆ ನನ್ನ ಅಪ್ಪನ ಮೇಲೆ ಗೌರವವಿರಲಿಲ್ಲ. ಕಾಸುಕಾಸಿಗೆ ಗಂಟುಹಾಕುವುದರಲ್ಲೆ ಸತ್ತರು ಅವರು. ಹೆತ್ತ ತಾಯಿಯೂ ಸಾಲದಾಯಿತು ನನಗೆ. ಶುದ್ಧ ಯಾವಾಗಲೂ ಪಿರಿ ಪಿರಿ ಅವಳು. ನನ್ನ ಅಮ್ಮನಿಗಿಂತ ತುಂಬ ಬೇರೆಯಾದ ಹೆಣ್ಣನ್ನು ಮದುವೆಯಾಗಬೇಕೆಂದುಕೊಂಡೆ ಬಹಳ ಹಿಂದೆಯೆ. ”

ಶಾರದ ಮಾತನಾಡಲೇ ಇಲ್ಲ. ರಂಗನಿಗೆ ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ಹೇಳಲಾರೆ ಎನ್ನಿಸಿತು. ಮಾತಾಡಲು ಹೋದರೆ ಪ್ರತಿ ಸಾರಿಯೂ ಹೀಗೇ ಆಗುತ್ತದೆ. ಒಳಗೆ ಕಳಕಳಿಯಾಗಿ ಶಾರದೆಯ ಕೈಗಳನ್ನೆತ್ತಿ ಮುಖಕ್ಕೊತ್ತಿಕೊಂಡ.

“ಅದಕ್ಕೆ ನಾನು ನಿನ್ನನ್ನು ಎಂದೋ ಹಿಂದೆಯೇ ಆರಿಸಿಕೊಂಡೆ. ಚೂರು ಚೂರಾಗಿ ಹೋಗಿದೆ ನನ್ನ ಬದುಕು. ಎಲ್ಲ ಚೂರುಗಳನ್ನೂ ಸೇರಿಸಿ ನೀನು ನನ್ನನ್ನು ಮನುಷ್ಯನನ್ನಾಗಿ ಮಾಡಬೇಕು”.

ಆಡಿದ ಮೇಲೆ ಶಾರದೆಯ ನಿರ್ಲಿಪ್ತ ಮುಖಭಾವ ನೋಡಿ ತನ್ನ ಬಗ್ಗೆಯೇ ಹೇಸಿಗೆಯಾಯಿತು. ಯಾಕೆ ಹೇಳಿಕೊಂಡೆನೊ ಇವಳೆದುರು ಎಲ್ಲವನ್ನು – ಏನೂ ಅನ್ನಿಸದವಳಂತೆ ನಿಂತಿದ್ದಾಳೆ. ಪೆಚ್ಚನಾದೆ ನಾನು.

“ನಾನು ನಿಮ್ಮನ್ನ ಎಂದೊ ಮನಸ್ಸಿನಲ್ಲೆ ವರಿಸಿಯಾಗಿದೆ. ಎಲ್ಲರಂತೆ ಒಟ್ಟಿಗಿದ್ದು ಕ್ಷಣಿಕವಾದ ಸಂಸಾರ….. ”

ರಂಗನಿಗೆ ನಗು ಬಂತು. ತೀರ ಅಸಹಜವಾಗಿ ಮಾತಾಡುತ್ತಾಳೆ. ಒಂದೆ ಹಾಸಿಗೆಯಲ್ಲಿ ಆತ್ಮಕ್ಕೂ ಆಗಬೇಕು, ದೇಹಕ್ಕೂ ಆಗಬೇಕು ಎಂದು ಬಂದೆನಲ್ಲವೆ? ಇವಳ ಆತ್ಮ ಎಷ್ಟು ಅಸಹಜವಾಗಿದೆ – ರಂಗ ಒರಟಾಗಿ ಹೇಳಿದ.

“ಪುರಂದರದಾಸನ ಮಾತುಗಳನ್ನ ಸುಮ್ಮನೆ ಒದರಬೇಡ ಶಾರದ”.

ರಂಗನಿಗೆ ನನ್ನ ಬಗ್ಗೆ ಅರ್ಥವಾಗುವುದೇ ಇಲ್ಲ. ನನಗೆ ಆ ಸುಖ ಬೇಡ. ಅಪ್ಪಯ್ಯನಿಗೂ ಹಾಗೆ ಎನ್ನಿಸಿರಬೇಕು. ಅಮ್ಮನ ಕಾಟ ತಡೆಯಲಾರದೆ ತೀರ್ಥಯಾತ್ರೆ ಹೋಗುತ್ತೇನೆಂದು ಮನೆ ಬಿಟ್ಟವರು ಮತ್ತೆ ಹಿಂದಕ್ಕೆ ಬರಲಿಲ್ಲ. ಆಸ್ತಿ ಪಾಸ್ತಿ ಎಲ್ಲ ತೊರೆದು ಹೋದರು. ಅಕ್ಕನೂ ಅಮ್ಮನಂತೆ, ಮನೆಗೆ ಬಂದು ಹೋಗುತ್ತಿದ್ದ ಮೇಷ್ಟ್ರರ ಜೊತೆ ಸಲಿಗೆ ಬೆಳಿಸಿದಳು. ನನಗೆ ಅವಳ ವಯ್ಯಾರ ಬಿಂಕ ಅಸಹ್ಯವಾಗುತ್ತಿತ್ತು. ಅವಳು ಬಸುರಿಯಾದಾಗ ಆ ಮೇಷ್ಟ್ರು ಹೇಳದೇ ಕೇಳದೇ ಊರು ಬಿಟ್ಟು ಓಡಿದ. ಅಕ್ಕ ಕಳಲೆ ತಿಂದಳು. ಕ್ವಿನಿನ್ ತಿಂದಳು. ಅಕ್ಕತಂಗಿಯರ ಹಣ್ಣನ್ನು ತರಿಸಿ ತಿಂದಳು. ಹಾಳು ಜ್ವರಗೆಡ್ಡೆಯೆಂದು ಮುಖ ಉದ್ದಮಾಡುತ್ತಿದ್ದಳು. ಈ ಕಾಮ ಶ್ರೇಷ್ಠವಂತೆ ರಂಗನಿಗೆ. ಬಾವಿಯಲ್ಲಿ ನೀರು ಕುಡಿದ ಹೆಣ ಈಗಲೂ ಕಣ್ಣಿಗೆ ಕಟ್ಟುತ್ತದೆ. ಆ ಸುಖ ನನಗೆ ಬೇಡ. ಅದು ಇಲ್ಲದೆ ಬಿದ್ದುಬಿಡಬಲ್ಲೆ. ಆದರೆ ಪಾಪ ರಂಗ. ಅವನ ತಲೆಗೂದಲನ್ನು ನೇವರಿಸಿದಳು. ಪಾಪ ರಂಗ.

“ಕೇಳು ಶಾರದ. ನನ್ನ ಮನಸ್ಸಿನಲ್ಲಿರುವುದನ್ನೆಲ್ಲ ಹೇಳಿಬಿಡ್ತೀನಿ. ನೀನು ಶಂಕರಯ್ಯನನ್ನು ಹಚ್ಚಿಕೊಂಡಿರೋದು ನನಗೆ ಸಹಿಸಲ್ಲ. ಅವರು ಸಾಯಬೇಕೆಂದು ನನಗೆ ಆಸೆ. ಅಲ್ಲ ಅದು ಜೀವನದ ನಿಷ್ಠುರ ನಿಯಮ. ಅಪ್ಪ ಸತ್ತಾಗಲೂ ನನಗೆ ಅಷ್ಟು ದುಃಖವಾಗಲಿಲ್ಲ. ತೋರಿಕೆಗೆ ಅತ್ತೆ. ಆದರೆ ಒಳಗೊಳಗೆ ಮನಸ್ಸು ಹಗುರಾಗಿ ಇತ್ತು. ”

“ಅಯ್ಯೋ ಎಂತಹ ಮಾತಾಡುತ್ತೀರಿ!”

“ನೋಡು ಶಾರದ. ನಾನು ಯೋಚಿಸುವ ರೀತಿ ಅನಿಷ್ಠವಲ್ಲ. ಜೀವನಕ್ಕೆ ಹಸಿಯಾಗಿ ಉಳಿದಿದ್ದರಿಂದ ಏನೇನೋ ಮಾಡಿದೆ. ತಪ್ಪಿರಬಹುದು. ಉದಾಹರಣೆಗೆ ನನ್ನ ಲಚ್ಚಿಯ ವಿಷಯ….. ”

“ಆ ವಿಷಯ ನನಗೆ ಗೊತ್ತು. ಆ ಮಾತು ಬೇಡ. ”

“ಏನೋ ಹೇಳಲಿಕ್ಕೆ ಹೋದೆ. ಹೋಗಲಿ. ನಿನ್ನ ಮಾವಯ್ಯ ನಿನ್ನನ್ನ ಪ್ರೀತಿಸಿ ನಿನಗೆ ಹಿಂಸೆಯಾಗುವಂತೆ ಮಾಡುತ್ತಿದ್ದಾರೆ. ಆ ಪ್ರೀತಿ ಅನಿಷ್ಟವಾದದ್ದು. ಅದನ್ನು ಅವರು ಬಿಡಬೇಕು’ ಅಂದರೆ ಗೊಣಗದೆ ಸಾಯಬೇಕು. ಇದು ನನ್ನ ದೃಷ್ಟಿಯಲ್ಲ; ಜೀವನದ ದೃಷ್ಟಿ. ”

“ಅಯ್ಯೋ ಬಿಡಿ. ಯಾವಾಗಲೂ ಬೋಧಿಸುತ್ತಿರಬೇಡಿ”

ಶಾರದೆ ರಂಗನ ಮಾತು ಕೇಳಿಸಿಕೊಳ್ಳುತ್ತಿರಲಿಲ್ಲ. ಅವಳಿಗೆ ಭಯವಾಯಿತು. ಯಾಕೆ ಹೀಗೆ ಪೀಡಿಸುತ್ತಾನೆ ರಂಗ? ತುಂಬ ಯಾಕೋ ಹೆದರಿಕೆ. ಕೂತ ಹಾಗೆಯೇ ಮಾವಯ್ಯ ಸತ್ತುಬಿಟ್ಟರೆ…… ಇವನು ಏನು ಬೇಕೆಂದು ಬಂದ. ಪ್ರೀತಿಯಂತೆ, ಅಷ್ಟು ಪ್ರೀತಿಯಿದ್ದರೆ ಇಲ್ಲಿಯೇ ಬಂದಿದ್ದು ನನ್ನನ್ನು ಮದುವೆಯಾಗುತ್ತಿದ್ದ. ನಾನು ಸುಖವಾಗಿ ಇರಬೇಕೆಂದು ಆಸೆಯಿಲ್ಲ ಇವನಿಗೆ. ಅಕ್ಕನಿಗೆ ಬಸುರುಮಾಡಿದ ಅವನಿಗೂ ಇವನಿಗೂ ಏನು ವ್ಯತ್ಯಾಸ? ಎಲ್ಲರೂ ಕೊಳಕರೆ. ರಂಗ ಮತ್ತೆ ಅವಳ ಹೆಗಲ ಮೇಲೆ ಕೈಯಿಡ ಹೋದರೆ ಕೊಸರಿಕೊಂಡಳು. ಇಲ್ಲ ನಾನೇ ಸಾಯಬೇಕು. ಯಾರಿಗೂ ನಾನು ಬೇಡ. ಸುಮ್ಮನೆ ನನ್ನ ಪೇಚಿಗೆ ಸಿಕ್ಕಿಸುತ್ತಾರೆ. ರಂಗನೊಬ್ಬ ಬಂದು ಹೀಗೆಲ್ಲ ಪೀಡಿಸಿ ಮಾವನ ಜೊತೆಗೂ ತೃಪ್ತಿಯಿಂದ ಇರದಂತೆ ಮಾಡಿದ. ರಂಗ ನನ್ನನ್ನ ಪ್ರೀತಿಸಲ್ಲ. ಎಲ್ಲ ಸುಳ್ಳು. ಲಚ್ಚಿಯೂ ಸಾಕು ಇವನಿಗೆ. ಕರುಣೆಯಿಲ್ಲದ ಕ್ರೂರಿ.

“ಹೇಳು ಶಾರದ, ಮಾತಾಡದೆ ಸುಮ್ಮನೆ ನಿಂತಿರಬೇಡ. ”

“ನನಗೆ ದಿಕ್ಕೇ ಕಾಣುವುದಿಲ್ಲ… ”

“ಹೋಗಲಿ ಬಿಡು. ನೀನೊಂದು ಹೆಣ್ಣು ಎಂದು ತಿಳಿದದ್ದೆ ತಪ್ಪು. ಲಚ್ಚಿ ನಿನಗಿಂತ ಉತ್ತಮ. ನೀನು ಎಂದೂ ನನ್ನ ಪ್ರೀತಿಸಿಯೇ ಇಲ್ಲ. ತುಂಬ ಕೃತ್ರಿಮದ ಸ್ವಭಾವ ನಿನ್ನದು. ಮಾವನ ಹಾಗೆಯೆ ನಿನ್ನ ಒಂದೊಂದು ಹೇಡಿತನದ ಕೆಲಸಕ್ಕೂ ಒಂದೊಂದು ದೊಡ್ಡ ವೇದಾಂತ ತಗುಲಿಸುತ್ತಿ. ”

ರಂಗನ ಗಂಟಲು ಒಣಗಿ ಬಂತು.

“ನನ್ನ ಮೇಲೆ ನಂಬಿಕೆಯಿಲ್ಲದಿದ್ದರೆ ಮತ್ತೆ ಯಾಕೆ ಬಂದಿರಿ?”

“ನಿನ್ನನ್ನ ಆ ಹೇಸು ಮುದುಕನ ಕೈಯಿಂದ…. ”

“ತಿರುಗಿ ಹಾಗೆ ಮಾತಾಡಬೇಡಿ. ನಿಮ್ಮ ಪ್ರೀತಿಗಿಂತ ಅವರ ಪ್ರೀತಿಯೇ ದೊಡ್ಡದು……. ”

“ಆಗಲಿ ಹೇಲು ಉಚ್ಚೆ ಬಳಿದುಕೊಂಡಿರು….. ”

ಸ್ವಲ್ಪ ತಡೆದು ಮತ್ತೆ ಹೇಳಿದ ಕಠೋರವಾಗಿ,

“ಹೀಗೆ ಬದುಕಿದ್ದು ನನ್ನ ಪೀಡಿಸಬೇಡ. ಕೆರೆಗೆ ಬಿದ್ದು ಸಾಯಿ……. ”

ಶಾರದೆ ಧಡಕ್ಕನೆ ಹೋಗಿಬಿಟ್ಟಳು. ರಂಗ ದಿಗ್ಭ್ರಾಂತನಾಗಿ ಬೂದು ಮಾವಿನ ಮರಕ್ಕೊರಗಿ ಕೂತ.

* * *

ಇಲ್ಲಿ ಬೆಳದಿಂಗಳಲ್ಲಿ ಬಿಕೊ ಎನ್ನುವ ಮೌನದಲ್ಲಿ ಮನುಷ್ಯನೊಂದು ಯಾವ ಕಃಪದಾರ್ಥ? ರಾಕ್ಷಸನಾಗಿ ಕಾಣುತ್ತದೆ ಭೂಮ್ಯಾಕಾಶಗಳ ವಿಸ್ತಾರದ ನಿರ್ಲಕ್ಷ್ಯ. ನಾನು ಈ ಲೋಕಕ್ಕೆ ಸೇರಿದವನಲ್ಲ, ಮನುಷ್ಯ ಈ ನಿರ್ಲಿಪ್ತ ಸುಖಕ್ಕೆ ವಿನಾಯಿತಿ. ಯಾರು ನಾನು? ರಂಗನಾಥ. ಎಂದರೆ? ಅರ್ಥವಿಲ್ಲ. ಯಾವುದಕ್ಕೂ ಅರ್ಥವಿಲ್ಲ. ಒಟ್ಟಿನಲ್ಲಿ ನಡೆಯುತ್ತದೆ. ಈ ಹಡಬೆಯಲೆಯುವ ಹೋರಿಗೆ ಯಾವ ಎಗ್ಗೂ ಇಲ್ಲ. ಮವಿನ ಮರದ ತೊಗಟೆಗೆ ಮೈಯುಜ್ಜಿ ಕೊಳ್ಳುತ್ತದೆ. ತುರಿಸಿಕೊಂಡರೆ ತುಂಬ. ಸುಖ ಹೆಣ್ಣಿನ ಜೊತೆ ಮಲಗಬೇಕೆನ್ನಿಸುವುದೂ ಒಂದು ತರಹದ ತುರಿಕೆಯೆ. ಅದಕ್ಕಾಗಿ ಎಷ್ಟೆಲ್ಲ ವಿಜೃಂಭಣೆ ಮಾಡಿದೆ. ಯಾರ ಹಂಗಿರದ ಹಕ್ಕಿಗಳು ರೆಕ್ಕೆ ಬಡಿಯುವ ಸಪ್ಪಳ ಆಗೊಮ್ಮೆ ಈಗೊಮ್ಮೆ. ಇಲ್ಲಿ ನಾನೊಬ್ಬ ಮಾತ್ರ ಅಸುಖಿ, ಯಾರು ಹೇಳಿದರು ಅಸುಖಿಯಾಗೆಂದು? ಈ ಬೆಳದಿಂಗಳೇನು ನನ್ನನ್ನು ಲೆಕ್ಕಿಸುವುದೆ? ಯೋಚನೆ ಎಲ್ಲಿ ಹರಿದರೂ ನೆನಪಿನ ಹುತ್ತಗಳು. ಒಬ್ಬಂಟಿ ನಾನು. ಹುಟ್ಟಿದ ದಿನದಿಂದ ಈವರೆಗೂ, ಅಮ್ಮ ಆಗಲಿಲ್ಲ. ಅಪ್ಪ ಆಗಲಿಲ್ಲ. ಶಾರದೆಯಾಗಲಿಲ್ಲ. ಬಿಡುಗಡೆಯೂ ಇಲ್ಲ; ಪ್ರೀತಿಯ ಬಂಧನವೂ ಇಲ್ಲ. ನಾನು ಹೀಗೆ ಗೋಗರೆದರೆ ಯಾರು ಕೇಳುವುದೂ ಇಲ್ಲ. ಒದ್ದೆ ಕಟ್ಟಿಗೆಯಲ್ಲಿ ನರಳುವ ಕಿಚ್ಚಿನಂತೆ ಒದ್ದಾಟ. ಎಲ್ಲವೂ ಒಂದಕ್ಕೊಂದು ಸಂಬಂಧವಿಲ್ಲದ, ಬಿಡಿಬಿಡಿಯಾದ, ನಿತ್ಯ ಜೀವನದ ಅರ್ಥಹೀನ ಬದುಕಿನ, ಒಟ್ಟಿಗೆ ರಾಶಿಯಾಗಿದ್ದರೂ ಒಂದಕ್ಕೊಂದು ಕೂಡದ ಮರಳಿನ ಕಣಗಳಂತಹ ದಿನಗಳು. ಶಂಕರಯ್ಯನ ಹಾಗೆ ನನಗೂ ನನ್ನ ಮೇಲೆ ತುಂಬ ಪ್ರೀತಿ. ಯಾವುದಕ್ಕೂ ಏನೂ ಅರ್ಥವಿಲ್ಲ. ನಾನು ಯಾರಿಗೆ ಸೇರಿದವನು, ನನಗೆ ಆಗುವವರು ಯಾರು, ಪ್ರತಿಭಾಶಾಲಿಯೇ ಬುದ್ಧಿವಂತನೇ, ನಾನು ಏನೂ ಅಲ್ಲ. ಶಾರದೆಯ ಬಳಿ ಹೋಗಿ ಅಂಗಲಾಚಿದೆ. ಆದರೆ ಅವಳು ಯಾರೊ, ನಾನು ಯಾರೊ, ಮಾತಾಡಿದರೆ ಎಲ್ಲ ಬಗೆಹರಿಯುತ್ತದೆಂದು ತಿಳಿದೆ, ಪುಸ್ತಕತೀರ್ಥ, ಹುಚ್ಚ, ಈ ಲೋಕದ ಜೊತೆಗೂ ನಮಗೂ ಪರಸ್ಪರ ಅರ್ಥಮಾಡಿಕೊಳ್ಳಲು ಯಾವುದಾದರೂ ಸಾಧನವಿದೆಯೆ? ಮನಸ್ಸಿನಲ್ಲಿರುವುದನ್ನು ಮಾತಾಡಹೋದರೆ, ಅನ್ನಿಸಿದ್ದೊಂದು ಆಡಿದ್ದೊಂದು. ಮಾತು ಸಾಲದು, ದೇಹ ದೇಹ ಬಯಕೆಯಲ್ಲಿ ಕೂಡಿದರೆ ಮಾತಿಗೆ ಮೀರಿದ್ದು ದಕ್ಕುತ್ತದೆ ಎಂದು ಭ್ರಮಿಸಿದೆ. ಶಾರದೆಯನ್ನು ಎದೆಗವಚಿಕೊಂಡು ಒಂಟಿತನದ ನಿಸ್ಸಹಾಯಕತೆಯನ್ನು ನೀಗಿಕೊಳ್ಳುತ್ತೇನೆಂದು ತಿಳಿದೆ. ಒಂದೆ ಶಯ್ಯೆಯಲ್ಲಿ ಆತ್ಮಕ್ಕೂ ಆಗಬೇಕು, ದೇಹಕ್ಕೂ ಎಂದು ಹುಡುಕಿದೆ. ಶುದ್ಧ ಪೆಚ್ಚ ನಾನು. ಲಚ್ಚಿಯಿಂದ ಪಡೆದದ್ದೇನು? ಆ ಸೂಳೆ ಕೊಟ್ಟದ್ದೇನೆ? ಬೆಪ್ಪು ನಾನು. ಒಬ್ಬಳು ಸೀರೆಯಿಂದ ಒರೆಸಿಕೊಂಡಳು, ನಗುತ್ತ ನನ್ನ ಕೆನ್ನೆ ಚಿವುಟಿದಳು. ಇನ್ನೊಬ್ಬಳು ತೊಳೆದುಕೊಳ್ಳಿ ಬೇಕಾದರೆ ಎಂದು ಚೊಂಬು ನೀರು ತಂದಿಟ್ಟಳು. ಲೀಲೆಯಲ್ಲವೆ ಅವಳ ಹೆಸರು? ಎಲ್ಲ ಅಸಹ್ಯ. ಶಾರದೆಯಿಂದ ಸಿಗುವುದೂ ಕೊನೆಗೆ ಅಷ್ಟೆ. ಆದರೆ ಪ್ರಕರತಿಯ ಮೋಸವನ್ನು ಮರೆಸಲು ಮದುವೆಯಾದರೆ ಪುಟ್ಟ ಪಾಪಚ್ಚಿಯೊಂದು ಹುಟ್ಟುತ್ತದೆ. ‘ಹಚಿಕಳ್ಳ, ಹಚಿಕಳ್ಳ, ಎಷ್ಟು ಮುದ್ದಾಗಿದೆಯೇ ನಮ್ಮ ಮಗು’ ‘ಅಪ್ಪನನ್ನ ಗುರುತು ಹಿಡಿಯುತ್ತದಲ್ಲರೀ’…… ಹಿಗ್ಗಿ ಗಂಡುತನದ ಠೀವಿ ಮೆರೆಯಬಹುದು. ಅಷ್ಟೆ – ಇನ್ನೇನು ಮಣ್ಣು? ನನಗೆ ಏನೂ ಬೇಡ. ಅಮ್ಮನಿಗೊಂದು ಮೊಮ್ಮಗನನ್ನು ತರುವ ಸಾಧನ ನಾನಾಗಲಾರೆ. ಎಲ್ಲ ಹೇಸಿಗೆ, ಕೊಳಕು. ಜೀವನವೇ ಅಸಹ್ಯ. ಮುಟ್ಟು ನಿಂತು ಋಷಿಪಂಚಮಿ ಮಾಡಿಕೊಂಡ ಅಮ್ಮನಿಗೆ ತನ್ನ ಜೀವನದಲ್ಲಿ ತೀರದೆ ಉಳಿದ ಕಾಮವನ್ನು ನನ್ನ ಮುಖಾಂತರ ತೀರಿಸಿಕೊಳ್ಳುವ ಚಪಲ. ಆರದೆಗೆ ಬಹುಶಃ ಮುಟ್ಟುದೋಷದಿಂದ ಉಂಟಾದ ಮಾನಸಿಕ ಕಾಹಿಲೆ. ಲಾರೆನ್ಸಿನ ಬದಲು ಲೋಧ್ರ ಅವಳಿಗೆ, ಧಾತುಪುಷ್ಟಿ ರಸಾಯನ ನನಗೆ. ಹೈಸ್ಕೂಲು ಓದುತ್ತಿದ್ದಾಗ ಮನೆಗೆ ಬರುತ್ತಿದ್ದ ದಾರಿಯಲ್ಲಿ ಎಷ್ಟು ಹಗಲುಗನಸುಗಳನ್ನು ನೇಯುತ್ತಿದ್ದೆ – – ಶಾರದೆ ಹೊಳೆಯಲ್ಲಿ ಕೊಚ್ಚಿಹೋಗುತ್ತಿದ್ದಂತೆ. ನಾನು ದೊಡಡ ವೀರನಂತೆ ಈಜಿ ಅವಳನ್ನು ಹೆಗಲ ಮೇಲೆ ಎತ್ತಿತಂದಂತೆ. ಸಿನಿಮಾ ನಾಯಕನ ಹಾಗೆ. ಓದಿ ಓದಿ ಮರುಳಾದ ಕೂಚುಭಟ್ಟ, ಮುಟ್ಟುದೋಷದ ಶಕುಂತಲೆ ತಪೋಭ್ರಷ್ಠ ಕುರುಡು ಕಣ್ವಯ್ಯ, ತಾನೊಬ್ಬ ಗಂಡಸು ಎನ್ನುವುದನ್ನು ಮರೆತ ದುಷ್ಯಂತ. ಲೋದ್ರ, ಧಾತುಪುಷ್ಟಿರಸಾಯನದಲ್ಲಿ ನಾಟಕದ ಸುಖಾಂತ. ಹಗಲು ಗನಸಿನಲ್ಲಿ ನೀರಿನಿಂದ ಎತ್ತಿ ತಂದವಳನ್ನು ತಬ್ಬಿ “ನನ್ನ ರಾಣಿ” ಎನ್ನುತ್ತಿದ್ದೆ ನಾನು. ಮುಂದೇನು ಮಾಡುವುದು ಗೊತ್ತಾಗದೆ ಮತ್ತೆ ನೀರಿನಲ್ಲಿ ಬೀಳಿಸುತ್ತಿದ್ದೆ. ತಿರುಗಿ ಎತ್ತಿ ತರುತ್ತಿದ್ದೆ, ಶಂಕರಯ್ಯ ಹೋಗಿ ಬಾ ಮಗಳೇ ಎಂದು ಕಣ್ವನಾಗಿಬಿಟ್ಟ. ವ್ಹಾರೆವಾ ಮುದುಕ, ಹಲಸಿನ ಹಣ್ಣಿನ ಮುಳುಕ. ಗರ್ಭಿಣಿಯನ್ನು ಕೆರೆಯಲ್ಲಿ ನೀರು ಬರಲೆಂದು ಬಲಿಕೊಟ್ಟರಂತೆ, ಬಂದ ಮಾದೇವರಾಯ, ಹತ್ತಿದ ಬೆತ್ತಲ ಕುದುರಿ ಭಾಗೀರಥಿಯಂತೆ ಶಾರದೆಯೂ ಬಲಿಯಾಗಿ ವಂಶೋದ್ಧಾರ ಮಾಡುವಳು. ವ್ಹಾರೆವಾ ಮುದುಕ, ಹಲಸಿನ ಹಣ್ಣಿನ ಮುಳುಕ, ದೈಹಿಕವಾಗಿದ್ದ ಪ್ರೀತಿ ಕೊನೆಗೆ ಅಲೌಕಿಕವಾಗಿ ಬೆಳೆಯಿತು ಶಾಕುಂತಲದಲ್ಲಿ; ನಮ್ಮ ಜೀವನದಲ್ಲಿ ಅಲೌಕಿಕವಾಗಿದ್ದುದು ದೈಹಿಕವಾಗಿ ಸಹಜವಾಗಬೇಕು ಎಂದೆ. ದಪ್ಪ ದಪ್ಪ ಶಬ್ದಗಳು. ಮಾರೀಚ ಆಶ್ರಮದಲ್ಲಿ ಶಕುಂತಲೆಯನ್ನು ದುಷ್ಯಂತ ಮತ್ತೆ ಭೆಟ್ಟಿಯಾದಾಗ;

(ಒಂದು) ಅವಳ ಮುಖದ ತುಂಬ ಸಿಡುಬಿನ ಕಲೆಗಳಾಗಿದ್ದರೆ,

(ಎರಡು) ಕೂದಲು ಬೆಳ್ಳಗಾಗಿದ್ದರೆ,

ನಾಟಕ ಟ್ರಾಜೆಡಿಯಾಗುತ್ತಿತ್ತು ಎಂದೆ. ಭೇಷ್ ಎಂದ ಗೋಪಿ. ಚುರುಕು ಬುದ್ಧಿಯಯ್ಯ ರಂಗನಿಗೆ. ಕೌಲಿಯೇ ಜಿಂಕೆ, ಗೋಪಿಯೇ ವಿದೂಷಕ. ಪೂರ್ವಿಕರ ಆಣೆಭಾಷೆ ದೂರ್ವಾಸ. ಚುರುಕುಬುದ್ಧಿಯಯ್ಯ ರಂಗನಿಗೆ, ಕಮಂಗನಿಗೆ. ಸುತ್ತೆಲ್ಲ ಕಾಡು ಬೆಳೆಯಿತು. ತ್ರಿಪುರಸುಂದರಿ ನಿದ್ದೆ ಹೋದಳು. ನಾನು ರಾಜಕುಮರ? ಕಥೆಗೆ ಮರುಳಾದ ಬೆಪ್ಪು ತಕಡಿ, ಶಂಕರಯ್ಯನ ಧರ್ಮಸೂಕ್ಷ್ಮವೆಲ್ಲ ಹುಟ್ಟು ಗುರುಡಿನ ವಿಕಾರ. ಇಲ್ಲದಿದ್ದರೆ ಕವಳ ಪಟ್ಟ ಕತ್ತರಿಸಿ ತೇಗುತ್ತಿದ್ದರು. ಹಾ ಸುಖವೇ ಎಂದು ಹೊಟ್ಟೆಯ ಮೇಲೆ ಕೈಯಾಡಿಸುತ್ತಿದ್ದರು. ಯಾಕೆ ಈಗಲೂ ಅಯ್ಯೊ ಅನಿಷ್ಠದ ಬಾಳೇ ಎಂದು ಗೊಣಗುತ್ತ ಸುಖವಾಗಿ ತೇಗುತ್ತಾರೆ. ಹಲಸಿನ ಹಣ್ಣಿನ ಮುಳಕ ಎಂದರೆ ಅವರಿಗೆ ಪ್ರಾಣ. ಅದರ ವಾಸನೆ ಮೂಗಿಗೆ ಹೊಡೆದರೆ ಸಾಕು ಎಲ್ಲ ಮರೆತುಹೋಗುತ್ತೆ. ಎಲ್ಲವುದಕ್ಕೂ ಈ ದೇಹ ಮೂಲ. ಎಲ್ಲ ಕೊಳಕು – ಅಸಹ್ಯ. ಮುತ್ತು ಕೊಡುವುದೊಂದು ಚೆಂದ, ನಿಗರಿರುವ ಮೊಲೆಯ ತೊಟ್ಟನ್ನು ಮಿಡಿಯುವುದೊಂದು ಚೆಂದ, ಎಲ್ಲ ಮುಗಿದ ಮೇಲೆ ಆ ಎಸೆದ ಬಟ್ಟೆಗಳನ್ನು ತೊಟ್ಟುಕೊಳ್ಳುವುದು? ಅದೂ ಒಂದು ಚೆಂದ ಅಲ್ಲವೆ? ಇದಕ್ಕಾಗಿ ಪಾಂಡು ಪ್ರಾಣಬಿಟ್ಟನಂತೆ. ಕೆಂಪು ಬಣ್ಣದ ಮೀಸೆ ಹುಟ್ಟದ ಹುಡುಗರು ಇರಲಿಲ್ಲವೇ, ಅಯ್ಯೋ ಪಾಂಡು, ಎಂದರು ಹಾಸ್ಟೇಲಲ್ಲಿ ಹುಡುಗರು. ಊಟವಿಲ್ಲದಿದ್ದರೆ ಫಳಾರ. ರಂಗನಿಗೆ ಊಟವೇ ಆಗಬೇಕಂತೆ ಮುಠ್ಠಾಳ ಎಂದರು ಹುಡುಗರು. ಇಸ್ಪೀಟಾಡುತ್ತ, ಸಿಗರೇಟು ಸೇದುತ್ತ, ಜೋಕುಗಳೆಲ್ಲ ಇಂಗ್ಲೀಷ್ ಭಾಷೆಯಲ್ಲಿ. ಅಮ್ಮನ ಭಾಷೆಯಲ್ಲಿ ಶಬ್ದಗಳು ಅಶ್ಲೀಲವಾಗಿ ಕಾಣುತ್ತವೆ. ನಕ್ಕರು, ಸಿನಿಕರು. ಸಿನಿಕರು ಎಂದರೆ ನಮಗೆ ಇಷ್ಟವಿಲ್ಲದ ಭಯ ಹುಟ್ಟಿಸುವ ಸತ್ಯವನ್ನು ಹೇಳುವವರು. ಎಣ್ಣಿ ಎಣ್ಣಿ ನಕ್ಕರು. ನಾನೂ ನಕ್ಕೆ. ಗಮ್ಮತ್ತೋ ಗಮ್ಮತ್ತು. ಯಾವುದೂ ಟ್ರಾಜೆಡಿಯಲ್ಲ. ನಾನು ಮಾಡಿದ್ದೆಲ್ಲವನ್ನೂ ದೊಡ್ಡದೊಂದು ಜೋಕು ಮಾಡಿಬಿಡಬಹುದು ಮುಂದೇನು ಮಾಡುವುದು ಗೊತ್ತಾಗದೆ ಹೊಳೆಗೆ ಬೀಳಿಸುತ್ತಿದ್ದೆ, ಮತ್ತೆ ಎತ್ತಿ ತರುತ್ತಿದ್ದೆ – – ನನ್ನ ರಾಜ, ನನ್ನ ರಾಣಿ, ತಿರುಗಿ ತಿರುಗಿ ಅದೇ – ಚಡ್ಡಿ ಬಿಚ್ಚುವುದು ಭವ್ಯ ಕೆಲಸವೆಂದು ಉಪನ್ಯಾಸ ಕೊಡಲು ಪ್ರಾರಂಭಿಸಿದೆ. ‘ನಗಿರೋ ಮಕ್ಕಳ ನಕ್ಕುಬಿಡಿ’. ಟ್ರಾಜಿಡಿಯಲ್ಲ – ದೊಡ್ಡ ಜೋಕು. ಹಲಸಿನ ಹಣ್ಣಿನ ಮುಳಕ. ಘಮಘಮಾ ಘಮಾಡಿಸ್ತಾದ ಮುಳಕ, ಏ ಮುದುಕ ನೀನೊಬ್ಬ ದೊಡ್ಡ ಪುಳಕ. ದೊಡ್ಡದೊಂದು ತೇಗು. ಉಚ್ಚಿಕೊಂಡ ಶಂಕರಯ್ಯ. ಕಕ್ಕಸಕ್ಕೆ ದಿನಕ್ಕಿಪತ್ತು ಸಾರಿ ಕರೆದುಕೊಂಡು ಹೋಗಲು ಶಾರದೆಯಿಲ್ಲದಿದ್ದರೆ ಹೇಗೆ? ಸ್ವಾರ್ಥತ್ಯಾಗ ದೊಡ್ಡದಪ್ಪ ದೊಡ್ಡದು. ಮದುವೆಯಾಗಲು ಪುರಸತ್ತೆಲ್ಲಿ ಹುಡುಗಿಗೆ? ಹಲಸಿನ ಹಣ್ಣಿನ ಮುಳಕವೇ ನನ್ನ ಪರಮ ವೈರಿ. ಮೈಸೂರಲ್ಲಿ ಅದು ಸಿಕ್ಕಲ್ಲ – ಶಂಕರಯ್ಯ ಬರಲ್ಲ. ಸಾಯಲಿ – ನಾನೂ ಸಾಯಲಿ – ಶಾರದೆಯೂ ಸಾಯಲಿ – ಆದರೆ ಎಲ್ಲ ನಾಶವಾದ ಮೇಲೂ ಈ ಬೆಳದಿಂಗಳೊಂದು ಹೀಗೆಯೇ ಹಲ್ಲುಕಿರಿಯುತ್ತಿರುತ್ತದೆ. ಆಕಾಶದಲ್ಲಿರುವ ಅಯ್ಯನಿಗೆ ಗಂಟೆಗಂಟೆಗಳ ಧಾತುಸ್ಖಲನ ದೊರೆಯುತ್ತದೆಂದು ಕಾಣುತ್ತೆ. ನಾಲ್ಕು ನಿಮಿಷಕ್ಕೆ ಮುಗಿಯುವುದಿಲ್ಲ ಅವನಿಗೆ. ಯಾವಾಗಲೂ ನಿಗರಿಯೇ ಇರುತ್ತೆ ಅವನ ಸೃಷ್ಟಿಯ ಪಾತಕೆ. ಹುಳ, ಹುಪ್ಪಟ, ಹೋರಿ, ಹಾವು, ಗೊಜಮೊಟ್ಟೆ ಸಿಕ್ಕ ಕಡೆಯೆಲ್ಲ ಬೀಜ ಬಿತ್ತುತ್ತಾನೆ. ಅತಿ ಕಾಮಿ. ಅದಕ್ಕೇ ನಮಗೂ ಅಷ್ಟು ಕ್ಷಣದ ಆಸೆ ತೋರಿಸಿ ಮಜಾ ನೋಡುತ್ತಾನೆ ಅವ – ಪುರಾತನದವ – ಸನಾತನದವ – ಲಕ್ಷ್ಮೀವಲ್ಲಭ. ನಾನು ಸತ್ತರೇನು ಬೆಳದಿಂಗಳು ಹಲ್ಲು ಕಿರಿಯುತ್ತಲೇ ಇರುತ್ತದೆ. ದೇವರ ಧಾತು, ಎಷ್ಟು ಬೆಳ್ಳಗೆ….

ರಂಗ ಜಿಗ್ಗು, ಕಟ್ಟಿಗೆ, ದರಕು ರಾಶಿ ಹಾಕಿ ಬೆಂಕಿ ಹೊತ್ತಿಸಿದ. ಕುಕ್ಕುರು ಮಂಡಿಯಲ್ಲಿ ಕೂತ. ದೊಡ್ಡದೊಂದು ಜೋಕು ಯೋಚಿಸು. ಆತ್ಮಶ್ರಾದ್ಧವನ್ನು ಮಾಡಿಕೊಳ್ಳುತ್ತಾರಂತೆ ಅಲ್ಲವೆ. ಅಗ್ನಿದಿವ್ಯ ಇನ್ನು ನನಗೆ. ಅಕ್ಕನಂತೆ ಶಾರದೆ ಕೆರೆಗೆ ಹಾರಲಿ, ಅವಳಿಗೆ ಜಲದಿವ್ಯ. ಕೆರೆಯಲ್ಲಿ ನೀರು ಬರಲೆಂದು ಹೆಂಗಸನ್ನು ಬಲಿಕೊಡುತ್ತಾರಂತೆ. ಗರ್ಭಿಣಿ ಹೆಂಗಸು. ಹೊಳೆಗೆ ಬೀಳಿಸುತ್ತಿದ್ದೆ, ಮತ್ತೆ ಎತ್ತಿ ತರುತ್ತಿದ್ದೆ – ಸಿನೆಮಾ ನಾಯಕನ ಹಾಗೆ. ಶಾರದೆಗೆ ಜಲದಿವ್ಯ. ನನಗೆ ಅಗ್ನಿದಿವ್ಯ. ದೊಡ್ಡದು ಒಂದು ಜೋಕು ಯೋಚಿಸು. ಈ ಕಟ್ಟಿಗೆಯ ಚೂರು ನಾನು; ಇದು ಶಾರದೆ; ಇದು ಶಂಕರಯ್ಯ; ಎಲ್ಲ ಸುಟ್ಟುಹೋಗಲಿ. ಕೆಟ್ಟು ಹೋಗಲಿ, ಬೆಂಕಿಗೆ ಮೂರು ಸಲ ಅಪ್ರದಕ್ಷಿಣೆ ಬರಬೇಕು. ಜೊತೆಗೆ ಒಂದು ದೆಯ್ಯದ ಹಾಡು. ಎಂಕುದೀಕನ, ನಿಕ್ಕುದೀಕನ ಎಂಕುದೀಕನ ನಿಕ್ಕುದೀಕನ, ಒಂದು ಸುತ್ತು, ಮತ್ತೆ ಒಂದು ಸುತ್ತು, ಮತ್ತೆ ಒಂದು ಸುತ್ತು, ಎಂಕುದೀಕನ, ನಿಕ್ಕುದೀಕನ, ಎಂದುದೀಕನ, ನಿಕ್ಕು Shall I at least set my lands in order? ಎಲ್ಲ ಬರಿ ಮಾತು. ನಾವು ಆಡುವ ಮಾತುಗಳನ್ನೆಲ್ಲ ನೀಟಾಗಿ ಅಚ್ಚುಹಾಕಿಸಿ ಬೆಂಕಿಗೆ ಹಾಕಿದರೆ ನಾನು ಸತ್ತಂತೆ, ಶಾರದೆ ಸತ್ತಂತೆ, ಶಂ…. ಶಂಕರಯ್ಯ, ಸಾಯುವುದೇ ಇಲ್ಲ. ಬೆಂಕಿ ಇಡಬೇಕು, ಎಲ್ಲ ಬೆಂಕಿ ಇಡಬೇಕು. ಉಚ್ಚಿಕೊಂಡ ಶಂಕರಯ್ಯ, ಬಾಚಿದಳು ಶಾರದೆ, ರಂಗ ಲಬೊ ಲಬೊ ಒದ್ದುಕೊಂಡ. ಕೌಲಿಯ ಗಬ್ಬದ ಹೊಟ್ಟೆಯಲ್ಲಿ ಹುಲಿಯುಗುರು ಕಂತಲಿ, ಸರ್ವನಾಶವಾಗಲಿ, ಎಕ್ಕುದೀಕನ, ನಿಕ್ಕುದೀಕನ ಎಂಕು…… ಥತ್ ಮರೆಯುವುದೇ ಇಲ್ಲ….. ಸುತ್ತೆಲ್ಲ ಬಂದನೊಬ್ಬ ಬೆಪ್ಪುತಕಡಿ. ನಿದ್ರಿಸಿದ ರಾಜಕುಮಾರಿ. ಹತ್ತಿದ ಬೆತ್ತಲೆ, ಎಂಕುದೀ, ನಿಕ್ಕುನೀ, ಎಂಕುದೀ ನಿಕ್ಕುದೀ.

* * *

ದೂರದಿಂದ ಹುಲಿಯಬ್ಬರ ಕೇಳಿಸಲು ದೇವರೇ ಎಂದು ಎದ್ದ. ನನ್ನ ಶಾರದೆ ಎಲ್ಲಿ ದೇವರೇ ಎಂದು ಸುತ್ತಮುತ್ತಲೂ ನೋಡಿದ. ಅಯ್ಯೋ ಕೆರೆಗೆ ಹಾರಿದಳು ಎಂದು ಎನ್ನಿಸಿ ಓಡಿದ.

* * *

‘ಇದು ಶಾರದೆ’ ಎಂದು ಎಸೆದ ಬಡತಿಗೆಯಷ್ಟು ಉದ್ದವಾದ ಮಾವಿನ ಕೊಂಬೆ ಉರಿಯುತ್ತಿತ್ತು. ಬೆಂಕಿಯ ಎದಿರು ಹೊತ್ತುಕೊಂಡು ಬಂದ ಶಾರದೆಯನ್ನು ಮಲಗಿಸಿದವನು, ‘ಅನಿಷ್ಠದ ಯೋಚನೆ’ ಎಂದು ಆ ಕಟ್ಟಿಗೆಯ ಚೂರನ್ನು ಬೆಂಕಿಯಿಂದ ಎಳೆದು ದೂರ ಎಸೆದ. ಕಾಲು ಜಾರಿ ಬಿದ್ದಳೆ, ಬೇಕೆಂದು ಬಿದ್ದಳೆ, ನನ್ನ ದುಷ್ಟ ಯೋಚನೆ ಇವಳನ್ನು ಕೆಳಗೆ ದಬ್ಬಿತೆ. ಏನೂ ತಿಳಿಯದೆ ರಂಗ ಏದುತ್ತ, ಒದ್ದೆಯಾದ ಅವಳ ಬಟ್ಟೆಗಳನ್ನು ಬಿಚ್ಚಿದ. ಈಜಿ ಅವಳನ್ನು ಮೇಲಕ್ಕೆ ತರಲು ಕೆರೆಗೆ ಹಾರಿದಾಗ ನೀರಿನಲ್ಲಿ ಒದ್ದಾಡುತ್ತಿದ್ದಳು. ಆದ್ದರಿಂದ ಪ್ರಾಣ ಹೋಗಲಿಕ್ಕಿಲ್ಲವೆಂದು ಮನಸ್ಸು ಧೈರ್ಯ ಹೇಳಿತು. “ಅಯ್ಯೊ ನನ್ನ ಶಾರದೆ….. ಅದು ಯಾಕೆ ಕೆರೆಗೆ ಬಿದ್ದಿ ಶಾರದ….. ನಾನಿರಲಿಲ್ಲವೆ ನಿನಗೆ ಶಾರದ….. ಬೇಕೆಂದು ಬಿದ್ದಿಯ…… ಜಾರಿ ಬಿದ್ದಿಯ…. ” ಅಸ್ಪಷ್ಟವಾಗಿ ಮಾತಾಡತೊಡಗಿದ. ಯಾರನ್ನು ಕರೆಯಲಿ ಈ ನಿರ್ಜನ ರಾತ್ರಿಯಲ್ಲಿ ಎಂದು ಭಯವಾಯಿತು. ದೂರದಲ್ಲಿ ಹುಲಿಯಬ್ಬರೆ ಬೇರೆ. ಕೆರೆಗೆ ಹಾರುವಷ್ಟು ಕಂಗಾಲಾದ ಶಾರದೆಯ ಎದುರು ತನ್ನ ಒದ್ದಾಟವೆಲ್ಲ ಸಾಮಾನ್ಯ – ಅಲ್ಪ ಎನ್ನಿಸಿತು, ಬೆತ್ತಲೆಯಾದ ಥಂಡಿ ಹಿಡಿದ ದೇಹವನ್ನು ತಾನು ಹೊದ್ದಿದ್ದ ಟವಲಿನಿಂದ ಒರೆಸಿದ. ಬೆಂಕಿಯನ್ನಷ್ಟು ದೊಡ್ಡದು ಮಾಡಿ ಬೆಚ್ಚಗಿನ ಕೈಗಳಿಂದ ಉಜ್ಜತೊಡಗಿದ. ಒಂದು ಹಿಡಿ ಜೀವ, ಒಂದು ತುತ್ತು ಜೀವ, ನನ್ನದು ಎನ್ನಿಸಿತು. ‘ಶಾರದ, ಶಾರದ ಕಣ್ಣು ಬಿಡು ಶಾರದ, ಹುಲಿ ಅಬ್ಬರಿಸುತ್ತಿದೆ ಶಾರದ. ತಬ್ಬಿಕೊಂಡು ಬೆಚ್ಚನೆ ಮನೆಯಲ್ಲಿ ಮಲಗಿ ಬೆಳಗಿನ ಬಸ್ಸಿಗೆ ಈ ಊರು ಬಿಡೋಣ ಶಾರದ’ ಎಂದ. ತನ್ನ ಒದ್ದೆ ಬಟ್ಟೆಗಳನ್ನು ಎಸೆದು ಶಾರದೆಯನ್ನು ಅವಚಿಕೊಂಡು ಅವಳ ಬೆನ್ನಿನ ಮೇಲೆ ಕೈಯಾಡಿಸುತ್ತ – ಶಾರದಾ, ಶಾರದಾ ಶಾರದಾ ಎಂದ. ಸುಮ್ಮನೇ ಅವಳ ಹೆಸರು ಹೇಳುತ್ತ ಅವಳ ಮೈಯುಜ್ಜಿದರೆ ಬದುಕಿ ತನ್ನವಳಾಗುವಳೆಂದು ಅವನ ಮನಸ್ಸು ಹಂಬಲಿಸಿತು. ಗಣಪತಿ, ನನ್ನ ಶಾರದೆ ಬದುಕಲಿ, ನನ್ನ ಆಯುಷ್ಯದಲ್ಲಿ ಅರ್ಧ ಕೊಡುತ್ತೇನೆ, ಶಾರದ ಬದುಕಲಿ. ಶಾರದಾ ಮೆಲ್ಲನೆ ಉಸಿರಾಡತೊಡಗಿದಳು. ರಂಗನಿಗೆ ಹಾಯೆನ್ನಿಸಿತು. ಇವಳೊಂದು ಬದುಕಿಬಿಟ್ಟರೆ ದೇವರೇ ಸಾಕು. ತುಂಬ ತುಂಬ ಪ್ರೀತಿ, ಸುಖ ಎನ್ನಿಸಿತು ಒಳಗೆ. ಒಂದಿಷ್ಟು ಮೃದು, ಒಂದಿಷ್ಟು ಪ್ರೀತಿ, ‘ಇಕೊ ನಾನು ಗಂಡಸು ನಿನ್ನ ಕಷ್ಟವೆಲ್ಲ ನನಗೆ ಕೊಡು’ ಎನ್ನುವ ತಿಳುವಳಿಕೆ,, ಸ್ವಲ್ಪ ವಿವೇಕ ಇಲ್ಲದೆ ಎಷ್ಟೆಲ್ಲ ರಂಪಮಾಡಿಬಿಟ್ಟೆ ಎಂದು ಹೇಸಿಗೆಯಾಯಿತ. ಅಗ್ನಿದಿವ್ಯ, ಜಲದಿವ್ಯ, ಕೇಳುತ್ತ ಕೇಳುತ್ತ ಏನನ್ನ ಕೇಳಿದೆ ದೇವರೇ ಶಾರದೆ ಬದುಕಲಿ ಎಂದು ಪ್ರಾರ್ಥಿಸಿದ. ಬಲಗಡೆಗಿದ್ದ ನವಿಲುಗುಡ್ಡದ ತಪ್ಪಲಿನಿಂದ ಮತ್ತೆ ಹುಲಿಯಬ್ಬರ ಕೇಳಿಸಲು, ಕ್ಷೇಮವಾಗಿ ಮನೆ ತಲುಪುವುದು ಅತ್ಯಂತ ಅವಶ್ಯವಾದ, ಕೂಡಲೆ ಮಾಡಬೇಕಾದ ಕೆಲಸ ಎನ್ನಿಸಿತು. ಸಾವಿನ ಹತ್ತಿರ ಹತ್ತಿರದವರೆಗೂ ಹೋಗಿ ಪ್ರೀತಿಸುವುದನ್ನ ಕಲಿಯಬೇಕಾಯಿತೆ, ಅಯ್ಯೊ ಮನುಷ್ಯ ಜೀವವೇ, ಹುಳದ ಹಾಗೆ ಒದ್ದಾಡುತ್ತದಲ್ಲ ಇದು, ಅಯ್ಯೊ. ಪಾಪವೇ – ಶಾರದೆಯ ಒದ್ದೆ ಕೂದಲನ್ನು ಹಿಂಡಿ ಅವಳ ಕಡೆ ಪ್ರಾಣ ಕೊಡುವಷ್ಟು ಮೃದುವಾಗಿ ನೋಡಿದ. ಇಲ್ಲ ಇವಳು ಜಾರಿ ಬೀಳಲಿಲ್ಲ. ಬೇಕೆಂದು ಕೆರೆಗೆ ಬಿದ್ದಳು. ಹುಚ್ಚು ಹುಡುಗಿ. ಸತ್ತುಬಿಡಬೇಕೆಂದು ಕ್ಷಣ ಎನ್ನಿಸಿ ಹಾರಿಬಿಟ್ಟಳು. ನನಗೆ ಯಾರು ಇಲ್ಲ ಎಂದು ನಿಸ್ಸಹಾಯಳಾದಳು, ಅಬಲೆ, ಹುಚ್ಚು ಹುಡುಗಿ, ಮುದ್ದಿನ ಹುಡುಗಿ, ನನ್ನವಳು – ಅಳಬೇಕೆನಿಸಿತು – ನನ್ನ ಕೂಸೇ, ನನ್ನ ಮುದ್ದೇ, ನನ್ನ ಪ್ರಾಣವೇ, – ಸಾವಿರ ಮಾತು ಗಂಟಲಲ್ಲಿ. ಪ್ರೀತಿಯ ಎದುರು ಎಲ್ಲ ಎಷ್ಟು ಕ್ಷುಲ್ಲಕ, ಸಾಮಾನ್ಯ ಹುಲ್ಲು ಕಡ್ಡಿಯಾಗಿಬಿಟ್ಟಿತು. ನನ್ನ ಕೂಸೇ… ಕಾಡುಬೆಕ್ಕಿನಿಂದ ತಪ್ಪಿಸಿಕೊಂಡ ಟಿಂ ಹಕ್ಕಿಯೊಂದು ಗಿಡ ಬಿಟ್ಟು ಹಾರಿ, ಮದ ತಲೆಗೇರಿ ಸುತ್ತಿ ಚಿಮ್ಮಿ ಚೀರಿತು. ಪಕ್ವವಾದ ಜೀರಕನ ರಸ ಒಸರುವ ಹಣ್ಣು ತನ್ನ ಭಾರಕ್ಕೆ ತೊಟ್ಟು ಸಡಲಿ ನೆಲದ ಹಸಿವಿನ ಕಪ್ಪು ಮಣ್ಣಿನ ಸಾರಕ್ಕೆ ಬಿತ್ತು. ತಾನು ಹಾಕಿದ ಕರುವಿನ ಮೈ ನೆಕ್ಕುತ್ತ ಮೊಟ್ಟುಗಳ ಸಂದಿ ನಿಂತಿದ್ದ ಕೌಲಿ ಹುಲಿಯ ಕೂಗಿಗೆ ಹೆದರಿ, ಬೆಂಕಿಯನ್ನು ನೋಡಿ ಯಾರೋ ಮನುಷ್ಯರಿರಬಹುದೆಂದು ಆಸೆಯಿಂದ ‘ಅಂಬಾ, ಅಮಬಾ’ ಎಂದಿತು. ತನ್ನ ಕರುವನ್ನು ಬಿಟ್ಟು ಹೋಗಲಾರದೆ ಗಟ್ಟಿಯಾಗಿ ಕರೆಯತೊಡಗಿತು.

ಕಾಲಿನ ಮೇಲೆ ನಿಲ್ಲಲು ಯತ್ನಿಸುತ್ತ ಮೊಲೆಯುಣ್ಣುವ ಕರು. ಕೆಳಗೆ ಚೆಲ್ಲಿದ ರಕ್ತ, ಕಸ, ಬಾಣಂತಿ ಮನೆಯ ಬೆಚ್ಚನೆ ವಾಸನೆ, ನಿಗರಿದ ಕವಿ – ಬೆಳದಿಂಗಳಲ್ಲಿ. ದೂರದಿಂದ ಹುಲಿಯಬ್ಬರ. ಕಾಡಿಗೆ ಉರುಳು ಹಾಕುವಂತಹ ಗರ್ಜನೆ.

ಇಲ್ಲಿಗೆ ನುಗ್ಗಿ ಬಂದರೆ ಬೆಂಕಿಯನ್ನು ಕಂಡು ಹೆದರಬಹುದು. ಹುಲಿಗಳಿಗೆ ಬೆಂಕಿಯೆಂದರೆ ಹೆದರಿಕೆ! ರಂಗನಿಗೆ ಗಟ್ಟಿಯಾಗಿ ಮಾತಾಡಬೇಕೆನ್ನಿಸಿತು.

“ಶಾರದ ಶಾರದ, ಇಕೊ ಹುಲಿ ಅಬ್ಬರಿಸುತ್ತಲೆ ಇದೆ ಶಾರದ. ಕಣ್ಣು ಬಿಡೆ ಶಾರದ” – ಕಿವಿಯನ್ನು ಮೃದುವಾಗಿ ತುಟಿಗಳಿಂದ ಉಜ್ಜುತ್ತ ಹೇಳಿದ. “ಕೇಳಿದಿಯಾ ಶಾರದ, ಕೌಲಿ ಆ ಮೊಟ್ಟಿನಿಂದ ಕರೆಯುತ್ತಿದೆ. ಸಾಯವುದು ಬೇಡ ಶಾರದ ಕಣ್ಣು ಬಿಡು. ”

ಕಾಡೆಲ್ಲ ಒಂದು ಕ್ಷಣ ಸ್ತಬ್ಧವಾಗಲು ಹುಲಿಯ ಕೂಗಿಗೆ ಕಂಗಾಲಾಗಿದ್ದ ಕೌಲಿ ತಾನು ಹಾಕಿದ ಕಸವನ್ನು ತಿನ್ನಲು ಮರೆತು ಮತ್ತೆ ‘ಅಂಬಾ’ ಎಂದು ಕೂಗಿತು. ಮೊಲೆಯುಣ್ಣುತ್ತಿದ್ದ ಕರುವಿನ ಕಡೆ ಅತಿ ಕಷ್ಟದಿಂದ ಕತ್ತುಬಗ್ಗಿಸಿ ಕರುವಿನ ಕಾಲಿನ ಸಂದಿ ನೆಕ್ಕತೊಡಗಿತು. ಶಾರದೆಯನ್ನು ಎತ್ತಿ ರಂಗ ತೊಡೆಯ ಮೇಲಿಟ್ಟುಕೊಂಡ. ‘ಅಯ್ಯೊ’ ಎಂದು ಅವಳ ಎದೆಯನ್ನು ತನ್ನ ಎದೆಗೆ ಒತ್ತಿಕೊಂಡ. ಹೊಟ್ಟೆಯೊತ್ತಿ ನೋಡಿದ. ಹೆಚ್ಚು ನೀರು ಕುಡಿದಿರಲಿಲ್ಲ. ದಣಿವು, ಸಂಕಟ, ಪಾಪ. ಬೆಚ್ಚಗೆ ಹೊದ್ದು ಇವಳನ್ನಪ್ಪಿ ಮಲಗಬೇಕು. ನಿದ್ದೆ ಮಾಡಬೇಕು.

* * *

ಶಾರದೆಯ ಮೈ ರಂಗನೆ ಮೈಯೊತ್ತಿನಿಂದ, ಪಕ್ಕದಲ್ಲಿ ಉರಿಯುತ್ತಿದ್ದ ಬೆಂಕಿಯಿಂದ ಬೆಚ್ಚಗಾಯಿತು. ಮೆಲ್ಲನೆ ಕಣ್ಣು ತೆರೆದು, ರಂಗನನ್ನು ಗಟ್ಟಿಯಾಗಿ ಏನನ್ನೊ ನೆನಸಿಕೊಳ್ಳುವಂತೆ ಹಿಡಿದು ನೋಡಿದಳು. ಆಳವಾಗಿ ನಿಟ್ಟುಸಿರಿಟ್ಟು.

“ನೀವು ಇಲ್ಲೇ ಇದ್ದು ನನ್ನ ಯಾಕೆ…..??” ರಂಗನನ್ನು ಬಲವಾಗಿ ತಬ್ಬಿಕೊಂಡಳು. ಕಾಡಿನಲ್ಲೆಲ್ಲೊ ಸರಸರ ಶಬ್ದವಾಗಲು ರಂಗ ಬೆಚ್ಚಿದ.

“ನಿನ್ನ ದಮ್ಮಯ್ಯ. ಯಾಕೆ ಶಾರದ? ಆ ಪ್ರಶ್ನೆ ಈಗ ಬೇಡ ಶಾರದ. ನಿನ್ನ ದಮ್ಮಯ್ಯ. ”

ಬಾಯಿಯ ಮೇಲೆ ಮುತ್ತಿಟ್ಟು ರಂಗ ಎದ್ದು ನಿಂತ.

ಕೌಲಿಗೆ ‘ಕಟ್ಟುಬಾಯ್ ಕಟ್ಟುಬಾಯ್’ ಎಂದು ಕೂಗಿದ.

* * *

ಬಚ್ಚಲಿಗೆ ಹೋಗುವಾಗ ರುದ್ರಾಕ್ಷಿ ಸರವೆಲ್ಲಿ ಎಂದು ಹುಡುಕುತ್ತ, ಏನೋ ಭಯವಾಗಿ, ಸಂಕಟವಾಗಿ ಶಂಕರಯ್ಯ ಕೈಯಾಡಿಸಿ ತಿಜೋರಿಯ ಬಳಿಯಿದ್ದ ಸರವನ್ನು ಎತ್ತಿಕೊಂಡರು.

ಮನೆಯನ್ನು ಆವರಿಸಿದ್ದ ಮೌನದಲ್ಲಿ ಥಟ್ಟನೆ ದೂರದಲ್ಲಿ ಹುಲಿಯ ಅಬ್ಬರ! ಮತ್ತೆ ಒಳಕ್ಕೆ ನುಗ್ಗಿ ಬರುವ ನಿಶ್ಶಬ್ದ.

ಆ ನಿಶ್ಶಬ್ದದಲ್ಲಿ ಗಡಿಯಾರದ ಟಿಕ್ – ಟಿಕ್, ಟಿಕ್ – ಟಿಕ್.

ಕುರುಡುಗಣ್ಣಿನ ರೆಪ್ಪೆಗಳಿಂದ ಕತ್ತಲನ್ನು ವ್ಯರ್ಥ ಬಡಿಯತೊಡಗಿದರು.

ಕೊಟ್ಟಿಗೆಯ ಹತ್ತಿರ ನಿಂತು ಕೌಲಿ ‘ಅಂಬಾ’ ಎಂದಿತು….. ಅಪ್ಪ ಅಮ್ಮ ಎಂದರು….

ಉಣಗೋಲು ದಾಟಿ ಹತ್ತಿರ ಹತ್ತಿರವಾಗುತ್ತಿದ್ದ ಹೆಜ್ಜೆ ಸಪ್ಪಳ ಕೇಳಿಸಲು ‘ನಾರಾಯಣ, ನಾರಾಯಣ’ ಎಂದರು.

೨೪-೯-೬೦

* * *