ಶಾಮಭಟ್ಟರೆ ಮುಂದಾಗಿ ಗಣಪಯ್ಯನ ಹೋಟೆಲಿನ ಅಟ್ಟದ ಮೇಲೆ ಹೋಗಿ, ಪುಂಡರೀಕನಿಗೆ ಮೆತ್ತೆ ಬರುವಂತೆ ಸಂಜ್ಞೆ ಮಾಡಿ, ಬಾಗಿಲು ತಟ್ಟಿದರು. ‘ಯಾರು’ ಎಂದು ರೂಮಿನೊಳಗಿಂದ ಒಂದು ಅಸಮಾಧಾನದ ಧ್ವನಿ ಕೇಳಿಸಿತು. ‘ನಾನು’ ಎಂದು. ಶಾಮಭಟ್ಟರು ಕಾದರು. ಪುಂಡರೀಕ ಆದಷ್ಟು ನಿಶ್ಶಬ್ದವಾಗಿ ಬಿದಿರಿನ ಏಣಿ ಮೆಟ್ಟಲನ್ನು ಹತ್ತಿ ಶಾಮಭಟ್ಟರ ಹಿಂದೆ ನಿಂತು ಆಲಿಸಿದ. ಕೆಳಗೆ ಗಣಪಯ್ಯನ ಹೋಟೆಲಿನಲ್ಲಿ, ಕಾಫಿ ಬೋಗುಣಿಯಲ್ಲಿ ಕುದಿಯುತ್ತ ಕುಣಿಯುವ ಬಿಲ್ಲೆಯ ಕಟಕಟ ಶಬ್ದ – ನಿಂತು, ಶುರುವಾಗಿ, ನಿಂತು – ಈಗ ದೋಸೆಕಾವಲಿಯನ್ನು ತೊಳೆಯುತ್ತಿದ್ದಾರೆ. ಕತ್ತಲು, ತ್ಯಾನಂದೂರಿನಿಂದ ಕುಡುಮಲ್ಲಿಗೆಗೆ ದೊಂದಿ ಹಿಡಿದು ಕಾಡಿನಲ್ಲಿ ನಡೆದು ಬಂದ ಆಯಾಸ, ಕೂತರೆ ಸಾಕು ಎನ್ನಿಸುತ್ತದೆ. ಅಂತೂ ಬಾಗಿಲು ತೆರೆದು – ನಿಂತ ಮನುಷ್ಯ ಅವನೇ ತಾನೆ? – ಶಾಮಭಟ್ಟರು ಲಾಟೀನಿನ ಬೆಳಕಿನಲ್ಲಿ ದಿಟ್ಟಿಸಿ ನೋಡಿದರು.

ಅವನು ಪುಂಡರೀಕ ಶಾಮಭಟ್ಟರನ್ನು ಒಳಗೆ ಬನ್ನಿ ಕೂತುಕೊಳ್ಳಿ ಎನ್ನಲಿಲ್ಲ. ಆದರೂ ಶಾಮಭಟ್ಟರೆ ಒಳಗೆ ಹೋಗಿ ನಿಂತು ಆತನನ್ನು ಹತ್ತಿರದಿಂದ ಪರೀಕ್ಷಿಸಿದರು. ಶುಭ್ರವಾದ ಪಂಚೆ. ಬೋಳು ತಲೆಯ ಮೇಲೆ ಶಾಸ್ತ್ರಕ್ಕೆ ನಾಲ್ಕು ಕೂದಲಿನ ಬಿಳಿ ಜುಟ್ಟು. ಎಣ್ಣೆಗೆಂಪು ಬಣ್ಣದ ಕೋಲುಮುಖ; ಆಳವಾದ ಗೆರೆಗಳ ಗಂಟುಮುಖ, ನೀಳವಾದ ಉದ್ದನೆಯ ದೇಹ. ಸ್ವಲ್ಪ ಬಾಗಿದ ಬೆನ್ನನ್ನು ನೋಡಿದರೆ ವಯಸ್ಸು ಐವತ್ತರ ಮೇಲೆ ಅರವತ್ತರ ಒಳಗೆ, ಒಟ್ಟಿನಲ್ಲಿ ಮುಖ ನೋಡಿ ವಯಸ್ಸು ಹೇಳುವುದು ಕಷ್ಟ ಎನ್ನಿಸುವಂತಿತ್ತು. ಇವರು ಬಂದು ಬಾಗಿಲು ತಟ್ಟಿದಾಗ ಆತ ಹಾಸಿಗೆ ಬಿಡಿಸುತ್ತಿದ್ದಿರಬೇಕು – ಚಾಪೆಯ ಮೇಲೆ ಅರ್ಧಬಿಚ್ಚಿದ ಹಾಸಿಗೆಯಿತ್ತು.

ಒಂದು ಕ್ಷಣದ ಮೌನದಲ್ಲಿ ಅನುಮಾನಿಸಿ, ಮನಸ್ಸಿಗೆ ಬಂದ ಮಾತುಗಳನ್ನು ತೂಗಿ ಪರೀಕ್ಷಿಸಿ, ಮಾತಿಗೆ ಪ್ರಾರಂಭಿಸಿದವರು ಶಾಮಭಟ್ಟರು :

“ನೀವು ನನ್ನ ಮರೆತಿರಲಿಕ್ಕೆ ಸಾಕು. ಆದರೆ ನಾನು ನಿಮ್ಮನ್ನು ಮರೆತಿಲ್ಲ ನೋಡಿ. ಈ ಪುಂಡರೀಕನ ಗುರುತಾದರೂ ನಿಮಗೆ ಹೇಗೆ ಸಿಕ್ಕಬೇಕು. ಅವನು ಆಗಿನ್ನೂ ಹುಟ್ಟಿಯೇ ಇರಲಿಲ್ಲ. ಅಂದಹಾಗೆ ಸುಮಾರು ಮುವ್ವತ್ತು ವರ್ಷದ ಮೇಲೆಯೇ ಆಯಿತಲ್ಲವೆ?”

ಅವನು ತಲೆ ತಗ್ಗಿಸಿ ಸಿಟ್ಟಿನಿಂದ ಮುಖ ತಿರುಗಿಸಿದ್ದು ನೋಡಿ ಶಾಮಭಟ್ಟರ ಮನಸ್ಸು ದೃಢವಾಯಿತು.

“ಸಿಟ್ಟಾಗಬೇಡಿ. ಸತ್ಯ ಹೇಳಿ. ನೀವು ಶೀನಪ್ಪಯ್ ಅಲ್ಲವೆ?”

ಅವನು ತನಗೆ ಭಯವಾಗುತ್ತಿದೆ ಎನ್ನುವುದನ್ನು ತೋರಿಸಲು ಇಚ್ಛಿಸದೆ ಕ್ರೂರವಾದ ಧ್ವನಿಯಲ್ಲಿ ಹೇಳಿದ :

“ಅದೆಲ್ಲ ನಿಮಗೆ ಯಾಕೆ? ತಲೆ ಪ್ರತಿಷ್ಠೆ ಮಾಡಬೇಡಿ. ನೀವು ಹೊರಡಿ, ನಾನು ಮಲಗಿಕೊ ಬೇಕು. ”

ನಿಂತು ಆಯಾಸವಾದ್ದರಿಂದ ಗೋವಿಂದ ಎನ್ನುತ್ತ ಸಾವಧಾನವಾಗಿ ಶಾಮಭಟ್ಟರು ನೆಲದ ಮೇಲೆ ಕೂತರು. ನಿಂತೇ ಇದ್ದ ಪುಂಡರೀಕನಿಗೆ ಕೂರುವಂತೆ ಸನ್ನೆ ಮಾಡಿ.

“ನೀವು ಕೂತುಕೊಳ್ಳಿ. ಯಾಕೆ ನಿಂತೇ ಇದ್ದೀರಿ. ಸಮಾಧಾನದಿಂದ ಮಾತಾಡುವ ಎಷ್ಟು ವರ್ಷವಾಯಿತು. ನಿಮ್ಮ ಕಂಡು”.

ಎಂದು ಕಿಟಕಿಯ ಮೂಲಕ ಹೊರಗಿನ ಕತ್ತಲನ್ನು ನೋಡುತ್ತ, ಸಿಟ್ಟಿನಲ್ಲಿ ನಿಂತಿದ್ದ ಅವನಿಗೆ ಹೇಳಿದರು. ಕುಡುಮಲ್ಲಿಗೆ ಪೇಟೆಗೆ ಜಾತ್ರೆಗೆಂದು ಬಂದ ಸೀತಾಲಕ್ಷ್ಮಿ ಟೂರಿಂಗ್ ಟಾಕೀಸ್ ಇನ್ನೂ ಇದ್ದದ್ದರಿಂದ ಸಿನಮಾ ನೋಡಿ ಮುಗಿಸಿ ಬಂದ ಗಿರಾಕಿಗಳಿಗೆ ಕಾಫಿ ಕೊಡುತ್ತ ಗಣಪಯ್ಯ ಕೆಳಗೆ ಹರಟುತ್ತಿದ್ದ. ತ್ಯಾನಂದೂರನಿಂದ ಕುಡುಮಲ್ಲಿಗೆಗೆ ಕತ್ತಲಿನಲ್ಲಿ ದೊಂದಿ ಹಿಡಿದು ಕಾಡಿನಲ್ಲಿ ಪುಂಡರೀಕನ ಜೊತೆ ಬರುವಾಗ ಮನಸ್ಸಿನಲ್ಲಿ ತುರಿವಿ ಹಾಕಿದ್ದ ಮಾತುಗಳನ್ನೆಲ್ಲ ಶಾಮಭಟ್ಟರು ಮತ್ತೆ ನೆನಸಿಕೊಂಡರು. ಅವನು ಏನೆನ್ನುತ್ತಾನೊ ಎಂದು ಅವಸರದಿಂದ ಕುತೂಹಲದಿಂದ ನೋಡುತ್ತ ಕೂತಿದ್ದ ಪುಂಡರೀಕನಿಗೆ, ಕೆಳಗೆ ಹೋಟೆಲಿನಲ್ಲಿ ಕಾಫಿ ಬೋಗುಣಿಯಲ್ಲಿ ಕುಣಿಯುವ ಬಿಲ್ಲೆಯ ಶಬ್ದ ನಡು ನಡುವೆ ಕೇಳಿಸಲು, ನಾನೂ ಯಾಕೆ ತ್ಯಾನಂದೂರ ಹಳ್ಳಿಯಲ್ಲಿ ಒಂದು ಹೋಟೆಲನ್ನು ತೆರೆಯಬಾರದು, ನೇತ್ರಾವತಿ ಸದಾ ಹೇಳುವ ಹಾಗೆ. ಆ ಮೇಲೆ ಶಾಮಕಕ್ಕನನ್ನು ಒಮ್ಮೆ ಕೇಳುವುದು ಒಳ್ಳೆಯದು, ಎಂದೊಂದು ಯೋಚನೆ ಸುಳಿದು ಹೋಯಿತು. ನಿಂತೇ ಇದ್ದ ಅವನಿಗೆ ಶಾಮಭಟ್ಟರು ಮತ್ತೆ ಹೇಳಿದರು:

“ಕೂರಿ ಮಾರಾಯರೆ, ನಾನೇನೂ ನಿಮ್ಮ ಜೊತೆ ಜಗಳಕ್ಕೆ ಬಂದಿಲ್ಲ. ನೀವು ಬೀಡಿ ಸೇದುವುದೊ, ಹೊಗೆಸೊಪ್ಪು ಹಾಕುವುದೊ – ಹೊಗೆಸೊಪ್ಪಾದರೆ ಎಲ್ಲಿ ನನ್ನದಷ್ಟು ಹಾಕಿ ನೋಡುವು”

ಎಂದು ನಗುತ್ತ ಎಲೆಯಡಿಕೆ ಚೀಲವನ್ನು ಒಡ್ಡಿದರು. ಅವನು ಹಾಸಿಗೆಯನ್ನು ಬಿಚ್ಚಿ ಅದರ ಮೇಲೆ ಕೂತ.

ಶಾಮಭಟ್ಟರು ಹೊಗೆಸೊಪ್ಪು ತಿಕ್ಕುತ್ತ ಸಾವಧಾನವಾಗಿ ಹರಟುವ ಶೈಲಿಯಲ್ಲಿ ಹೇಳಿದರು :

“ನಾನು ಇವತ್ತು ಕಾಫಿ ಕುಡಿಯಲು ಇಲ್ಲಿ ಬಂದಾಗ ನಿಮ್ಮನ್ನ ನೋಡಿದೆ – ನೀವು ಹೊಗೆಸೊಪ್ಪು ಹಾಕಿ ಕೊಳ್ಳುವವರಲ್ಲವೆಂದು ಕಾಣುತ್ತೆ. ಒಂದು ಬೀಡಿ ಹಚ್ಚಿ – ನೋಡಿದ ಕೂಡಲೆ ನೀವು ಶೀನಪಯ್ಯನವರೆ ಎಂದು ಖಚಿತವಾಯಿತು. ತ್ಯಾನಂದೂರಿಗೆ ತಿರುಗಿ ಹೋಗುವಾಗ – ನಾನು ಇಲ್ಲಿಗೆ ಗಣಪಯ್ಯನಿಗೆ ಬಾಳೆಕಟ್ಟು ಮಾರಲೆಂದು ಬಂದದ್ದು, ನಿತ್ಯ ಒಂದು ಸಾರಿ ಬಂದು ಹೋಗು ಅಭ್ಯಾಸ, ಹಳ್ಳಿ ಬೇಸರವಲ್ಲವೆ, ಏನೆನ್ನುತ್ತೀರಿ – ದಾರಿಯಲ್ಲೆಲ್ಲ ಮನಸ್ಸಿನಲ್ಲೆ ಲೆಖ್ಖಾಚಾರ ಹಾಕಿದೆ. ಏನು ಮಾಡಲಿ ಅಂತ. ತ್ಯಾನಂದೂರು ತಲ್ಪುವಾಗಲೇ ಸಾಯಂಕಾಲವಾಗಿತ್ತು. ಸಂಧ್ಯಾವಂದನೆಯ ಶಾಸ್ತ್ರ ಮುಗಿಸಿ ಮತ್ತೆ ಹೊರಟು ಬಂದೆ. ಪುಂಡರೀಕನ ಜೊತೆ – ಯಾಕೊಂದು ಸಂಶಯ, ಹೌದೊ ಅಲ್ಲವೆ ತಿಳಿದೇ ಬಿಡುವ ಎಂದು. ನೀವು ಶೀನಪ್ಪಯ್ಯ ಹೌದೇ ಆಗಿದ್ದರೆ – ನನಗದರಲ್ಲಿ ಸಂಶಯವಿಲ್ಲ – ನಿಮ್ಮನ್ನ ನಾನು ನೋಡಿದ್ದು ಮುವ್ವತ್ತಾರು ವರ್ಷದ ಕೆಳಗೆ. ನಿಮ್ಮ ಮದುವೆಯಲ್ಲಿ. ಆಗ ನಿಮಗೆ ವಯಸ್ಸು ಇಪ್ಪತ್ತನಾಲ್ಕೊ ಇಪ್ಪತ್ತೈದೊ. ನನ್ನ ವಾರಿಗೆಯವರಲ್ಲವೆ ನೀವು? ತಲೆಯ ತುಂಬ ಕೂದಲು ಬೆಳಸಿ ಜುಟ್ಟುಕಟ್ಟುತ್ತಿದ್ದಿರಿ, ನನ್ನ ಜ್ಞಾಪಕಕ್ಕೆ ಏನೂಂತೀರ ನೀವು? ಭೇಷ್ ಎನ್ನುತ್ತೀರೊ ಇಲ್ಲವೊ ನೋಡಿಯೋ ಬಿಡುವ ಎಂದು ಪುಂಡರೀಕನನ್ನು ಕರೆದುಕೊಂಡು ನಿಮ್ಮನ್ನು ನೋಡಲು ಬಂದೆ. ಅಲ್ಲ – ನೀವು ಶೀನಪ್ಪಯ್ಯ ಹೌದೇ ಆದರೆ ನಿಮ್ಮ ಮದುವೆಗೆ ಮಂಟಪ ಕಟ್ಟಿದ ಶಾಮಭಟ್ಟನನ್ನು ನೀವು ಮರೆಯೋದು ಸಾಧ್ಯವ?”

ಶಾಮಕಕ್ಕನ ಮಾತಿನ ಠೀವಿಯನ್ನು ಅತ್ಯಂತ ಆಸಕ್ತಿಯಿಂದ ಆಲಿಸಿ ಪುಂಡರೀಕ ಇದಕ್ಕೆ ಉತ್ತರವೇನು ಬರಬಹುದೆಂದು ಅವನ ಕಡೆ ನೋಡಿದ. ಅವನು ಒಂದು ಬೀಡಿ ಹೊತ್ತಿಸಿದ; ಮಾತಾಡಲಿಲ್ಲ. ಶಾಮಭಟ್ಟರನ್ನು ಅವನು ಕಣ್ಣಿಗೆ ಕಣ್ಣಿಟ್ಟು ನೋಡಲೂ ಇಲ್ಲ. ಕೆಳಗೆ ಹೋಟೆಲಿನಲ್ಲಿ ದೋಸೆಯನ್ನು ಅರೆಯುವ ಶಬ್ದ. ಗಣಪಯ್ಯನ ಮಗುವಿರಬೇಕು, ಅತ್ತಿತು. ಪುಂಡರೀಕ ನೆನೆದುಕೊಂಡ – ಗಣಪಯ್ಯ ಹೇಳಿದ್ದಾನೆ, ಮುಂದಿನ ಶನಿವಾರ ಅವನ ಅಪ್ಪನ ಶ್ರಾದ್ಧವಂತೆ, ದರ್ಭೆ ದೊನ್ನೆ ಬೇಕಂತೆ, ಊಟಕ್ಕೂ ಬರಬೇಕಂತೆ, ಯಾರಿಗೆ ಬೇಕು ಈ ಬ್ರಾಹ್ಮಣಾರ್ಥ ಅಡಿಕೆ ಸುಲಿತದ ಜೀವನ. ಅವನಂತೆ ತಾನೂ ಒಂದು ಹೋಟೆಲು ತೆರೆದರೆ, ಗಣಪಯ್ಯನ ಹೆಂಡತಿ ನೇತ್ರಾವತಿಯ ಹತ್ತಿರದ ಸಂಬಂಧದವಳಲ್ಲವೆ, ಅವಳಿಗೆ ಎರಡೆಳೆ ಚೈನನ್ನು ಗಣಪಯ್ಯ ಮಾಡಿಸಿಹಾಕಿದ್ದಾನೆ. ನೇತ್ರಾವತಿ ಹೇಳಿದಳು ‘ನೋಡಿದಿರಾ’. ಅವನು ಬೀಡಿಯನ್ನು ನೆಲಕ್ಕೆ ನುರಿಯ ಆರಿಸಿದ. ಬೆನ್ನು ತಿರುಗಿಸಿ ಕೂತ. ಹಾಸಿಗೆಯನ್ನು ಸಂಪೂರ್ಣ ಬಿಚ್ಚಿ, ಹೊದಿಕೆಯನ್ನು ಕೊಡವಿದ. ಮತ್ತೆ ಲಾಟೀನನ್ನು ಸಣ್ಣದು ಮಾಡಿ.

“ಅಧಿಕ ಪ್ರಸಂಗ ಮಾಡಬೇಡಿ. ಆನು ಮಲಗಿಕೊ ಬೇಕು. ಯಾವ ಶಾಮಭಟ್ಟನೊ, ಯಾವ ಪುಂಡರೀಕನೊ. ನನಗದರ ಪಂಚಾಯ್ತಿ ಬೇಡ”.

ಎಂದು ಹಾಸಿಗೆಯ ಮೇಲೆ ಮಲಗಿಕೊಂಡು ಹೊದಿಕೆಯನ್ನು ಹೊದ್ದು ಮಗ್ಗುಲಾದ, ಶಾಮಭಟ್ಟರು ನಕ್ಕು ಹೇಳಿದರು.

“ಅಲ್ಲ. ಮೊದಲಿನ ಸಿಟ್ಟು ಈಗಲೂ ನೀವು ಬಿಟ್ಟಿಲ್ಲವಲ್ಲ. ಅವತ್ತು ನಾನು ನಿಮ್ಮ ಮಾವ ಪ್ರವೀರಾಚಾರ್ಯರ ಜೊತೆ ಪಂಚಾಯ್ತಿಗೆ ಬಂದಾಗಲೂ ಹಾಗೆ: ನಿಮ್ಮ ಹುಡುಗಿ ನನಗೆ ಬೇಡ, ಕರೆದುಕೊಂಡು ಹೋಗಿ ಎಂದು ಹಿಡಿದ ಪಟ್ಟು ಬಿಡಲೇ ಇಲ್ಲ. ಆ ಮಾತು ನಡೆದು ಮೂವ್ವತ್ತಾರು ವರ್ಷವಾಯ್ತು. ತಲೆ ಕೂದಲು ನೆರೆತು ಹಲ್ಲುಗಳೆಲ್ಲ ಅಲಗುವಷ್ಟು ಕಾಲವಾಯ್ತು. ವಯಸ್ಸಾದ ಮೇಲೆ ಮನುಷ್ಯ ಅಷ್ಟು ತಣ್ಣಗಾಗುತ್ತಾನೆಂದು ನಾನು ತಿಳಿದಿದ್ದೆ. ಹುಟ್ಟಿನಿಂದ ಬಂದ ಸ್ವಭಾವ ಘಟ್ಟ ಹತ್ತಿರದರೆ ಹೋಗುತ್ತೊ ಎನ್ನುತ್ತಾರೆ. ನನ್ನ ಪ್ರಶ್ನೆಗೆ ಉತ್ತರ ಬರೆದ ನಾನು ಹೋಗುವವನೇ ಅಲ್ಲ. ಈ ಶಾಮಭಟ್ಟ ಹಿಡಿದ ಕೆಲಸ ಬಿಡತಕ್ಕವನೇ ಅಲ್ಲ. ಗೊತ್ತಾಯಿತೊ. ”

ಎಂದು ತಮ್ಮ ದಪ್ಪವಾದ ಶರೀರವನ್ನು ಗೋಡೆಗೊರಗಿಸಿ ಕಾಲುಗಳನ್ನು ಚಾಚಿ ಪುಂಡರೀಕನ ಕಡೆ ತಿರುಗಿ,

“ಶೀನಪ್ಪಯ್ಯನವರ ಸಿಟ್ಟು ಇಳಿಯುವ ತನಕ ನಾವಿಲ್ಲಿ ಕೂರುವ. ಅವರೇನು ನಮ್ಮನ್ನು ಹೊಡೆಯುತ್ತಾರ, ಬಡಿಯುತ್ತಾರ? ಅಥವಾ ಒಂದು ವೇಳೆ ಹೊಡೆದರು ಅನ್ನು ಹಿರಿಯರ ಆಶೀರ್ವಾದ ಅಂತ ಸುಮ್ಮನಿದ್ದು ಬಿಡುವುದು. ಹೆಣ್ಣು ಕೊಟ್ಟವರು ಯಾವತ್ತೂ ತಗ್ಗಿ ನಡೆಯಬೇಕಂತೆ. ಏನನ್ನುತ್ತೀಯ?”

ಎಂದು ಚೇಷ್ಟೆಯಿಂದ ಕಣ್ಣು ಮಿಟುಕಿಸಿದರು. ಶಾಮಭಟ್ಟರು ಚುರುಕಾಗಿ ತಿರುಗಿ ಕಣ್ಣು ಮಿಟುಕಿಸಿದ ಕ್ರಮದಲ್ಲಿ ಹುಡುಗಾಟಿಕೆಯಿತ್ತು. ಎರಡು ತುಳಸಿದಳ ಮುಡಿದ ಬಿಳಿ ಜುಟ್ಟಿನ, ಕೆಂಪು ಒಂಟಿಯ, ಎಲೆಯಡಿಕೆ ಜಗಿದ ಕೆಂಪು ತುಟಿಯ, ಅವರ ಹಾವಭಾವಗಳ ರಸಿಕತೆಯನ್ನು ನೋಡಿದರೆ ಇವರಿಗೆ ವಯಸ್ಸಾದದ್ದು ಸುಳ್ಳು ಎನ್ನಿಸುವಂತಿತ್ತು. ಪುಂಡರೀಕ ಸುಮಾರು ಇಪ್ಪತ್ತೈದು ವರ್ಷ ವಯಸ್ಸಿನ ಯುವಕನಾದರೂ ತನಗಿಂತ ಚುರುಕಾದ, ಚುರುಕು ನಡೆಯುವ ಶಾಮಕಕ್ಕನನ್ನು ಕೊಂಡಾಡುವ ಕಣ್ಣುಗಳಿಂದ ನೋಡಿದ.

ಮಲಗಿದ ಮನುಷ್ಯ ಎದ್ದು ಕೂತ ಲಾಟೀನಿನ ಬೆಳಕನ್ನು ದೊಡ್ಡದು ಮಾಡಿ ಹೇಳಿದ :

“ಅಧಿಕ ಪ್ರಸಂಗ ಬೇಡವೆಂದು ಹೇಳಿದೆ – ಕೇಳಬಾರದೆ? ಶುದ್ಧ ಮರ್ಯಾದೆಗೆಟ್ಟ ಜನವೆಂದು ಇದಕ್ಕೇ ಹೇಳೋದು. ನೀವು ಈ ಕೂಡಲೇ ಹೋಗಿ, ಇಲ್ಲವೆ ಹೋಟೆಲಿನ ಯುಜಮಾನನಿಗೆ ಹೇಳಿ ನಿಮ್ಮನ್ನು ಹೊರಗೆ ಹಾಕಿಸುತ್ತೇನೆ”.

“ಅದು ಅಷ್ಟು ಸುಲಭವಲ್ಲ ಶೀನಪ್ಪಯ್ಯ. ಹಿಂದೆ ನಿಮ್ಮ ಮಾವ ನಿಮ್ಮ ಗಂಟಲಿಗೆ ಹೆದರಿದರೆಂದು ನಾನು ಹೆದರುವವನಲ್ಲ ತಿಳಿಯಿತ? ತಪ್ಪಿತಸ್ಥರು ನೀವು – ನಾವಲ್ಲ. ಇಟ್ಟುಕೊಂಡವಳ ಮಾತು ಕೇಳಿ ಕಟ್ಟಿಕೊಂಡ ಹೆಂಡತೀನ ಬರೆ ಹಾಕಿ ಗೋಳುಹೊಯ್ದಿರಿ. ಮಾವನ ಮನೆಗೆ ಅವಳನ್ನ ತಳ್ಳಿ ಹೆಂಡತಿಗೆ ಜೀವನಾಂಶ ಕೊಡಬೇಕಾಗುತ್ತಲ್ಲ ಎಂದು ಪರಾರಿಯಾದಿರಿ. ನನಗೂ ಅಷ್ಟು ಕಾನೂನು ಗೊತ್ತು. ದಾವಾ ಹಾಕಬಹುದು ನಿಮ್ಮ ಮೇಲೆ. ”

“ಹೋಗಯ್ಯ – ಹಾಕು ದಾವಾನ. ರೀ ಗಣಪಯ್ಯ”

ಕೆಳಗಿನಿಂದ ಗಣಪಯ್ಯ ‘ಊಟಕ್ಕೆ ಕೂತಿದ್ದೇನೆ. ಬರುತ್ತೇನೆ, ತಡೆಯಿರಿ’ ಎಂದು ಹೇಳಿದ. ಸಾಮಭಟ್ಟರು ತಮ್ಮ ಧ್ವನಿಯನ್ನು ತಗ್ಗಿಸಿ ಮೆತ್ತಗೆ ಹೇಳಿದರು :

“ಗಣಪಯ್ಯ ನನ್ನ ಗೆಳೆಯ. ಈ ಪುಂಡರೀಕನಿಗೆ ಹೆಣ್ಣಿನ ಕಡೆಯಿಂದ ಸಂಬಂಧ. ತಿಳಿಯಿತೆ? ಅವನು ಕೇಳೋದು ಊರಿನವನಾದ ನನ್ನ ಮಾತು, ನಿಮ್ಮ ಮಾತಲ್ಲ, ಜನಕ್ಕೆ ಗೊತ್ತಾದರೆ ನಿಮಗೆ ಛೀಮಾರಿಯಾಗುತ್ತದೆ. ನನಗೆ ಬೇಕಾದದ್ದು ಇಷ್ಟು; ನೀವು ನಮ್ಮ ಸೀತಕ್ಕನ ಗಂಡ ಶೀನಪ್ಪಯ್ಯ ಹೌದೆಂದು ಒಪ್ಪಿಕೊಳ್ಳುತ್ತೀರೊ – ಇಲ್ಲವೊ?”

“ಇಲ್ಲ”,

“ಇಲ್ಲವಾದರೆ ನೀವು ಹೀಗೆ ರೇಗುತ್ತಿರಲಿಲ್ಲ. ಈ ಮೂಗಿನ ತುದಿಯ ಕೋಪ ಶೀನಪ್ಪಯ್ಯನವರೊಬ್ಬರಿಗೆ ಮಾತ್ರ ಸಾಧ್ಯ. ”

ಎರಡು ನಿಮಿಷಗಳ ತನಕ ಇಬ್ಬರೂ ಮಾತಾಡಲಿಲ್ಲ. ಆತ ಎದ್ದು ಹೊರಗೆ ಹೋಗಿ ಏಣಿಯ ಹತ್ತಿರ ನಿಂತು ಅನುಮಾನಿಸಿದ. ಒಳಗೆ ಬಂದು ನಿಂತು,

“ಅವಳ ಅಪ್ಪನಿಗೇ ನಾನು ಅವತ್ತು ತಿಳಿಸಿದೆ – ನಿಮ್ಮ ಎದುರಿಗೆ. ಇವಳು ನನ್ನ ಹೆಂಡತಿಯಲ್ಲ, ನಾನು ಅವಳ ಗಂಡನಲ್ಲ, ಮಾತು ಕೇಳದ ಹುಡುಗಿ ನನಗೆ ಬೇಡ, ಕರೆದುಕೊಂಡುಹೋಗಿ ಅಂತ. ಈಗ ನಿಮ್ಮ ಸಂಧಾನ ಮತ್ತೆ ಬೇಡ. ನಾನು ಅವತ್ತು ಆಡಿದ ಮಾತು ಕೊನೆಯ ಮಾತು. ಗೊತ್ತಾಯಿತ?”

ಶಾಮಭಟ್ಟರು ಧಡಕ್ಕನೆ ಎದ್ದುನಿಂತರು. ಅವರ ಧ್ವನಿಯಲ್ಲಿ ಹರ್ಷವಿತ್ತು.

“ನಾನು ಹೇಳಿದ್ದು ಸುಳ್ಳ? ನಿಮ್ಮನ್ನು ನೋಡಿದ ಕೂಡಲೆ ಅಂದುಕೊಂಡೆ. ಇದು ಸೀತಕ್ಕನ ಗಂಡನ ಶೀನಪ್ಪಯ್ಯ ಇರಲೇಬೇಕು ಅಂತ” ಎಂದು ನಗುತ್ತ, ತಮ್ಮ ಜೊತೆಗೇ ಎದ್ದು ನಿಂತಿದ್ದ ಪುಂಡರೀಕನ ಕಡೆ ತಿರುಗಿ,

“ಪುಂಡರೀಕ. ಇವರೇ ನಿನ್ನ ಭಾವಯ್ಯ. ನಮಸ್ಕಾರ ಮಾಡು”

ಎಂದರು. ಪುಂಡರೀಕ ಸಾಷ್ಟಾಂಗ ನಮಸ್ಕಾರ ಮಾಡಿದ. ಶೀನಪ್ಪಯ್ಯ ಪುಂಡರೀಕನ ತಲೆಯನ್ನು ಕೈಯಿಂದ ಮುಟ್ಟಿ,

“ಇನ್ನು ಆಯಿತಲ್ಲ – ನೀವು ಹೋಗಿ” ಎಂದರು.

“ನಾವು ಹೋಗಬಂದವರಲ್ಲ ಶೀನಪ್ಪಯ್ಯ. ಮನೆಗೆ ಅಳಿಯನನ್ನ ಕರೆದುಕೊಂಡು ಹೋಗಿ ಔತಣ ಮಾಡಿಸಬೇಕೆಂಬ ಶರ್ತಿನ ಮೇಲೆ ಬಂದಿದ್ದೇವೆ”.

ಶಾಮಭಟ್ಟರು ತುಲಸೀಮಣಿ ಸರವನ್ನು ಕತ್ತಿನ ಸುತ್ತ ತಿರುಗಿಸುತ್ತ ಹೇಳಿದರು.

“ನಾನು ಬರೋದಿಲ್ಲ ಎಂದರೆ ಒಂದೆ ಮಾತು”.

“ನಿಮಗೆ ಯಾಕೆ ಸಿಟ್ಟು ಹೇಳಿ? ಯಾರ ಮೇಲೆ ಸಿಟ್ಟು ಹೇಳಿ? ನಾವೇನೂ ಸೀತಕ್ಕನಿಗೆ ಜೀವನಾಂಶ ಕೊಡಿ ಎಂದು ಕೇಳಲು ಬಂದಿಲ್ಲವಲ್ಲ”.

“ಅವನೊಬ್ಬನಿದ್ದನಲ್ಲ – ಅವಳ ಚಿಕ್ಕಪ್ಪನೊ, ಯಾರು ಅವ… ”

“ಶೇಷಗಿರಿಭಟ್ಟರು ತಾನೆ? ಅವರು ಸತ್ತು ಹತ್ತು ವರ್ಷವಾಯಿತು”.

“ಹುಡುಗೀನ ಮನೆಗೆ ಕರೆದುಕೊಂಡು ಬಂದು ಏನೋ ಬುದ್ಧಿ ಕಲೀಲಿ ಎಂದು ಎರಡು ಏಟು ಹೊಡೆದರೆ – ಯಾವ ಗಂಡ ಹೊಡೆಯಲಿಕ್ಕಿಲ್ಲ – ಹೇಳಿ… ”

“ಮತ್ತೆ ಯಾಕೆ ಅದೇ ಸಮಾಚಾರ ಸ್ವಾಮಿ?”

“ನಮ್ಮ ಮಾವನವರ ಮೇಲೇನೂ ನನಗೆ ಸಿಟ್ಟಿಲ್ಲ. ಆದರೆ ಅವರದ್ದು ಸ್ವಲ್ಪ ಹಿತ್ತಾಳೆ ಕಿವಿ. ಮಾತ್ರ ಹುಡುಗಿಯ ತಾಯಿ….. ”

“ಅದನ್ನೆಲ್ಲ ಈಗ ಯಾಕೆ ಕೆದಕಬೇಕು ಶೀನಪ್ಪಯ್ಯ. ನಿಮ್ಮ ಮಾವ ಪ್ರವೀರಾಚಾರ್ಯರು ಸತ್ತು ಹದಿನೈದು ವರ್ಷವಾಯಿತು. ನಿಮ್ಮ ಅತ್ತೆಗೆ ಈಗ ಸುಮಾರು ಅರವತ್ತು ವರ್ಷ. ಇವತ್ತು ನಾಳೆಯೆಂದು ದಿನವೆಣಿಸುತ್ತಿದ್ದಾರೆ. ಅಲ್ಲದೆ ಪಾಪ ಆ ಹೆಂಗಸು ಜೀವನದಲ್ಲಿ ಪಟ್ಟ ಕಷ್ಟ ಒಂದೆರಡಲ್ಲ. ಒಂಬತ್ತು ಮಕ್ಕಳ ತಾಯಿ ಅವರು. ಈಗ ಉಳಿದವರೆಂದರೆ ನಿಮ್ಮ ಹೆಂಡತಿ ಸೀತಕ್ಕ ಮತ್ತು ನೀವು ಮದುವೆಯಾದ ನಂತರ ಹುಟ್ಟಿದ ಈ ಪುಂಡರೀಕ. ಅದೊಂದು ದೊಡ್ಡ ಪುರಾಣ; ಹೇಳುತ್ತ ಕೂತರೆ ಬೆಳಗಾಗುತ್ತದೆ. ಒಟ್ಟಿನಲ್ಲಿ ನೀವು ಆ ಮುದುಕಿಯ ಹೊಟ್ಟೆಯುರಿಸೋದು ಸರಿಯಾಗಿ ಕಾಣಿಸಲ್ಲ”.

ಎಂದು ಶಾಮಭಟ್ಟರು ಪುಂಡರೀಕನನ್ನು ಚುಚ್ಚಿ, ಮಾತಾಡುವಂತೆ ಪ್ರೇರೇಪಿಸಿದರು. ಇಷ್ಟು ಹೊತ್ತು ಸುಮ್ಮನೆ ಕೂತಿದ್ದ ಪುಂಡರೀಕ ಅಂಜುತ್ತ ಅಂಜುತ್ತ ಹೇಳಿದ:

“ಭಾವಯ್ಯ ನೀವು ಬರಲೇಬೇಕು. ದೇವಸ್ಥಾನಕ್ಕೆ ಅಮ್ಮ ಅಕ್ಕ ಬಂದಿರುತ್ತಾರೆ. ನಾನು ಹೊರಡುವಾಗ ಅಮ್ಮ ಹೇಳಿದಳು; ಹನ್ನೆರಡು ವರ್ಷವಾದ ಮೇಲೆ ಒಬ್ಬರು ಇನ್ನೊಬ್ಬರ ಮುಖ ನೋಡಬಾರದಂತೆ. ದೇವರೆದುರಿಗೇ ನೋಡಬೇಕಂತೆ”.

ಶೀನಪ್ಪಯ್ಯ ಮತ್ತೊಂದು ಬೀಡಿ ಹತ್ತಿಸಿ ಹಾಸಿಗೆ ಮೇಲೆ ಕೂತು ಯೋಚಿಸಲು ಪ್ರಾರಂಭಿಸಿದರು. “ಅಲ್ಲ ನನಗೇನೂ ಬರಬಾರದೂಂತ ಇಲ್ಲ…. ಆದರೆ… ” ಎಂದು ಒಂದು ವಾಕ್ಯವನ್ನು ಪ್ರಾರಂಭಿಸಿ ಅರ್ಧಕ್ಕೆ ಸುಮ್ಮನಾದರು. ಶಾಮಭಟ್ಟರು ಹೊರಗೆ ಹೋಗಿ ಜಗಿದ ಕವಳವನ್ನು ಉಗಿದು ಪ್ರಸನ್ನ ಭಾವದಿಂದ ರೂಮಿನೊಳಗೆ ಬಂದು,

“ಅದೆಲ್ಲ ಇರಲಿ ಶೀನಪ್ಪಯ್ಯ. ನಾವು ಯೋಗಕ್ಷೇಮ ವಿಚಾರಿಸಲೇ ಇಲ್ಲ. ನೀವು ಈ ಕಡೆ ಬಂದಿದ್ದರ ಕಾರಣ? ಮತ್ತೆ ನೀವು ಇರೋದು ಎಲ್ಲಿ?”

“ಹುಬ್ಬಳ್ಳಿ”

“ನೀವು ಶೀರ್ನಾಳನ್ನು ಬಿಟ್ಟ ಮೇಲೆ ಹುಬ್ಬಳ್ಳಿಗೇ ಸೀದಾ ಹೋದಿರೊ? ನಾವು ನಿಮ್ಮನ್ನ ಊರೆಲ್ಲ ಅಲೆದು ಹುಡುಕಿದೆವು ಆಗ. ಆದರೆ ಹುಬ್ಬಳ್ಳಿಯ್ಲಿ, ಕುಡುಮಲ್ಲಿಗೆ ಎಲ್ಲಿ – ಸುಮ್ಮನಾಗಿ ಬಿಟ್ಟೆವು. ಏನು ಉದ್ಯೋಗ – ಹೋಟೆಲೊ?”

ಪುಂಡರೀಕನ ಕಿವಿ ಚುರುಕಾಯಿತು. ಭಾವಯ್ಯನೂ ಹೋಟೆಲಿಟ್ಟವರಾಗಿದ್ದಾರೆ…. ಆದರೆ ಅಮ್ಮ ಒಪ್ಪುತ್ತಾಳೋ – ಏನು ಸಾವೊ.

“ಇಲ್ಲವಪ್ಪ – ಎಮ್ಮೆ ವ್ಯಾಪಾರ. ಆ ಉದ್ದಿಶ್ಯದಿಂದಲೇ ಇತ್ತಲಾಗಿ ಬಂದೆ”.

“ಹೌದ ಮಾರಾಯರೆ – ಒಳ್ಳೆ ದೇವರ ಹಾಗೆ ಬಂದಿರಿ ನೀವು. ತ್ಯಾನಂದೂರಿಗೆ ಬನ್ನಿ. ಕೊನೆ ಪಕ್ಷ ನಿಮಗೆ ಹತ್ತು ಎಮ್ಮೆ ಖರ್ಚು ಮಾಡಿಸುತ್ತೇನೆ. ಸಾಹುಕಾರರೇ ಹೇಳುತ್ತಿದ್ದರು. ಹುಬ್ಬಳ್ಳಿಗೆ ಹೋಗಬೇಕು, ಎಮ್ಮೆ ತರಬೇಕು ಅಂತ. ನೀವೇ ಬಂದಿರಲ್ಲ. ”

“ನನ್ನದು ಹುಬ್ಬಳ್ಳಿ ಧಾರವಾಡದ ಕಡೆ ಎಮ್ಮೆ. ಚೆನ್ನಾಗಿ ಹಿಂಡಿ ಹತ್ತಿಕಾಳು ಹಾಕಿದರೆ ಕಣ್ಣು ಮುಚ್ಚಿ ಹತ್ತು ಸೇರು ಹಾಲು ದಿನಕ್ಕೆ ಕರೆಯಬಹುದು….. ”

“ಲಾಯಕ್ಕಾಯಿತು ಹಾಗಾದರೆ. ಬಂದು ಹೋಗೋದರಿಂದ ನಿಮಗೇನೂ ಲುಕ್ಸಾನಿಲ್ಲ. ಇವತ್ತು ಇಲ್ಲೇ ಮಲಗಿದ್ದು ನಾಳೆ ಬೆಳಗ್ಗೆ ಊರಿಗೆ ಹೋಗುವ. ನಾನು ಹೋಗಿ ಬೇಕಾದರೆ ಸಾಹುಕಾರರನ್ನು ಕೇಳಿ ಗಾಡಿ ಕಳಿಸುತ್ತೇನೆ ನಿಮಗೆ. ಹೌದ – ನಾನು ನಿಮ್ಮನ್ನ ಪತ್ತೆ ಹಚ್ಚಿದ್ದರಿಂದ ನಿಮಗೂ ಒಳ್ಳೆ ಗಿರಾಕಿ ಸಿಕ್ಕ ಹಾಗಾಯಿತಲ್ಲ. ಧರ್ಮ ಕರ್ಮ ಸಂಯೋಗ ಎನ್ನಬೇಕು ಇದಕ್ಕೆ…. ”

ಪುಂಡರೀಕ ಕೆಳಗೆ ಹೋಗಿ ಗಣಪಯ್ಯನಿಂದ ಎರಡು ಚಾಪೆ ಕೇಳಿ ತಂದ. ಅವತ್ತು ರಾತ್ರೆ ಅಲ್ಲೇ ಮಲಗಿದ್ದು ಬೆಳಗ್ಗೆ ಹೊತ್ತಿಗೆ ಮುಂದೆ ಎದ್ದು ಶಾಮಭಟ್ಟರು,

“ನಾನು ಗಾಡಿ ಕಟ್ಟಿಸಿಕೊಂಡು ಬರುತ್ತೇನೆ. ಅಥವಾ ಗಾಡಿಯೊಂದನ್ನೇ ಕಳಿಸುತ್ತೇನೆ. ನೀನು ಇಲ್ಲೇ ಇರು. ಭಾವಯ್ಯನಿಗೆ ಒಂದು ಜೊತೆ ಧೋತ್ರ, ಸೀತಕ್ಕನಿಗೊಂದು ಹೊಸ ಸೀರೆ ನನ್ನ ಲೆಖ್ಖದಲ್ಲಿ ಕೊಂಡುಕೊಂಡು ಬಾ”

ಎಂದು ಪುಂಡರೀಕನಿಗೆ ಹೇಳಿದರು. ಹೊರಡುವಾಗ ಪುಂಡರೀಕನನ್ನು ಗುಟ್ಟಾಗಿ ಕರೆದು ಆಸಾಮಿ ಎಲ್ಲಾದರೂ ನಾಪತ್ತೆಯಾದೀತು, ಜೋಕೆ ಎಂದು ಎಚ್ಚರ ಹೇಳಿದರು.

* * *

ಸೀತಕ್ಕ ದನಗಳಿಗೆ ಕಲಗಚ್ಚು ಮುರ ಕೊಟ್ಟು ಹಾಲು ಕರೆಸಿ ಮೇಯಲು ಕೊಟ್ಟಿಗೆಯಿಂದ ತಳ್ಳುತ್ತ ಆ ದನಗಳನ್ನುದ್ದೇಶಿಸಿ ಪ್ರೀತಿಯಿಂದಿ ಸಿಟ್ಟಿನಿಂದ ಬೇಜಾರಿನಿಂದ ಮಾತಾಡುತ್ತಿದ್ದಾಗ ದೂರದಿಂದ ಶಾಮಭಟ್ಟರೊಬ್ಬರೆ ಬರುವುದು ಕಂಡು ಅಡಿಗೆ ಮನೆಯಲ್ಲಿದ್ದ ತಾಯಿಗೆ ಕರೆದು ಹೇಳಿದರು. ವೆಂಕಮ್ಮ ಆ ಬಗ್ಗೆಯೇ ಚಿಂತಿಸುತ್ತಿದ್ದವರು ಕಷ್ಟಪಟ್ಟು ಉಸಿರಾಡುತ್ತ ಏದುತ್ತ ಎದ್ದು ನಿಂತು. ‘ನನಗೆ ಯಾಕೆ ಹೀಗೆ ಇತ್ತೀಚೆಗೆ ಕೈಕಾಲು ಹಿಡಿಯುತ್ತಿದೆ ದೇವರೇ’ ಎಂದು, ನಿಧಾನವಾಗಿ ಹೆಜ್ಜೆಯಿಡುತ್ತಿದ್ದಾಗ, ಪುಂಡರೀಕನ ಹೆಂಡತಿ ನೇತ್ರಾವತಿ ಕೆರೆಗೆಂದು ಬಟ್ಟೆಯನ್ನೊಟ್ಟುಮಾಡಿ ಹೊರಟವಳು ಬುಟ್ಟಿಯನ್ನಲ್ಲೆ ಬಿಟ್ಟು ಗುಡಕ್ಕನೆ ಮುಂಚೆ ಕಡೆ ಓಡಿ, ಉಣುಗೋಲು ದಾಟುತ್ತಿದ್ದ ಶಾಮಭಟ್ಟರಿಗೆ –

“ಏನಾಯಿತು ಹೋದ ಕೆಲಸ – ಗಂಡೋ, ಹೆಣ್ಣೊ” ಎಂದು ಆತುರದಿಂದ ಕೇಳಿದಳು.

“ನಾನು ಹೋದ ಮೇಲೆ ಗಂಡೆ”

ಎಂದು ಶಾಮಭಟ್ಟರು ಸೀದ ಒಳಗೆ ಬಂದು,

“ಎಲ್ಲಿ ವೆಂಕಮ್ಮ ನನಗೊಂದು ಲೋಟ ಬಿಸಿಬಿಸಿ ಕಾಫಿ ಕೊಡಿ. ಮೊದಲು ಕಾಫಿ ಆಮೇಲೆ ಮಾತು” ಎಂದರು.

“ಕಾಫಿಗೆ ಇಟ್ಟಿದ್ದೇನೆ. ಕೊನೆಗೂ ಮಹಾರಾಯ ಸಿಕ್ಕಿದನ?” ಎಂದರು ವೆಂಕಮ್ಮ.

ಶಾಮಭಟ್ಟರು ‘ಏ ಸೀತಕ್ಕ ಬಾ ಇಲ್ಲಿ’ ಎಂದು ಕೂಗಿದರು. ಅವರು ಬರದಿದ್ದುದು ಕಂಡು, ‘ಹುಡುಗಿಗೆ ನಾಚಿಕೆಯೆಂದು ಕಾಣುತ್ತೆ, ಶೀನಪ್ಪಯ್ಯ ವಿಚಾರಿಸಿಕೊಂಡರು. ನನ್ನ ಹುಡುಗಿ ಈಗ ಹೇಗಿದಾಳೆ ಅಂತ’ ಎಂದು ಗೇಲಿಮಾಡಿದರು.

ವೆಂಕಮ್ಮ ಕುದಿಯುವ ನೀರಿಗೆ ಕಾಫಿಪುಡಿ ಹಾಕಿ ಮುಚ್ಚಿಟ್ಟು,

“ಏನು ಬಂದಿದ್ದನಂತೆ?” ಎಂದು ಕೇಳಿದರು.

“ಎಮ್ಮೆ ವ್ಯಾಪಾರ”.

“ಎಮ್ಮೆ ವ್ಯಾಪಾರಕ್ಕೆಂದು ಬಂದಿದ್ದನ? ಅವನು ಇಟ್ಟುಕೊಂಡಿದ್ದ ಅವಳು ಮಾಡುತ್ತಿದ್ದುದು ಹಾಲಿನ ವ್ಯಾಪಾರ. ಈಗ ಅವಳು ಸತ್ತಿದ್ದಾಳಂತ, ಇದ್ದಾಳಂತ? ಯಾರಿಗೆ ಗೊತ್ತಿತ್ತು ಈ ಮಾರಾಯ ಸೂಳೆ ಇಟ್ಟುಕೊಂಡಿದ್ದಾನೆ ಅಂತ. ಆಗ ಸೀತಕ್ಕ ಮೈನೆರೆದು ಕೂಡ ಇರಲಿಲ್ಲ. ಗಂಡನ ಮನೆಗೇಂತ ಕಳಿಸಿದರೆ ಗಂಡನ ಸೂಳೆಗೂ ಅಡಿಗೆ ಮಾಡಿ ಹಾಕಬೇಕು, ಸೇವೆ ಮಾಡಬೇಕು. ಕೊನೆಗೆ ಅವರಿಬ್ಬರಿಗೆ ಹಾಸಿಗೆ ಹಾಸಿ ಕೊಟ್ಟು ತಾನು ಹೊರಗೆ ಮಲಗಬೇಕು. ಯಾವ ಜಾತಿಯ ಬಿಕನಾಸಿಯೋ ಅವಳು. ನನ್ನ ಮನೆ ಹಾಳುಮಾಡಿದಳು. ”

ಕಾಲನ್ನು ಚಾಚಿ ಕಾಲುಗಂಟನ್ನು ಒತ್ತಿಕೊಳ್ಳುತ್ತ ‘ಮೈ ಕೈ ಗಂಟುಗಳಲ್ಲೆಲ್ಲ ನೋವು ಶಾಮಭಟ್ಟರೆ, ಇನ್ನು ನಾನು ಬದುಕಬಾರದು’ ಎಂದು ಉಸ್ ಎಂದರು ವೆಂಕಮ್ಮ.

“ಹೋಗಲಿ ಬಿಡಿ ವೆಂಕಮ್ಮ – ಹಳೆಯ ಮಾತು ಬೇಡ. ಈಗ ನೀವು ಏನೆನ್ನುತ್ತೀರಿ ಹೇಳಿ ನನ್ನ ಜ್ಞಾಪಕಶಕ್ತಿಗೆ ಭೇಷ್ ಎನ್ನುತ್ತೀರೋ ಇಲ್ಲವೊ?”

ವೆಂಕಮ್ಮ ಕಾಫಿಯನ್ನು ಸೋಸಿ, ಹಾಲು ಹಾಕಿ ಶಾಮಭಟ್ಟರಿಗೆ ಕೊಟ್ಟರು. ಶಾಮಭಟ್ಟರು ಕುಕ್ಕುರು ಕಾಲಿನಲ್ಲೆ ಕೂತಿರೋದು ಕಂಡು ನೇತ್ರಾವತಿಗೆ, ‘ಏನು ಹೆಣ್ಣೆ ನಿನ್ನ ಕಕ್ಕನಿಗೆ ಒಂದು ಮಣೆ ತಂದು ಕೊಡಬೇಕೂಂತ ಹೊಳೆಯಲ್ಲವ ನಿಂಗೆ? ಎಲ್ಲ ನಾನೇ ಹೇಳಬೇಕ?’ ಎಂದರು. ಶಾಮಭಟ್ಟರೆ ‘ಪರವಾಯಿಲ್ಲ’ ಎಂದು ಒಂದು ಮಣೆ ಎಳೆದು ಕೂತು ಕಾಫಿಯನ್ನು ಕುಡಿದರು. ದಣಿದು ಬಂದ ಅವರಿಗೆ ಕಾಫಿ ಅತ್ಯಂತ ರುಚಿಯಾಯಿತು.

“ಎಷ್ಟು ಒಳ್ಳೆ ಕಾಫಿ ವೆಂಕಮ್ಮ. ಕುಡುಮಲ್ಲಿಗೆ ಗಣಪಯ್ಯ ಸ್ಪೆಷಲ್ ಕಾಫಿಯೂ ಹೀಗಿರಲಿಲ್ಲ”

ಎಂದು ಹೊಗಳಿ ಎದ್ದು ನಿಂತು,

“ನಾನು ಸಾಹುಕಾರರ ಹತ್ತಿರ ಹೋಗಿ ಗಾಡಿ ಕೇಳುತ್ತೇನೆ. ಸಿಕ್ಕರೆ ಅದನ್ನ ಪೇಟೆಗೆ ಕಳಿಸಿ, ಏನೇನು ಕೆಲಸವಾಗಬೇಕೊ – ದೇವಸ್ಥಾನದಲ್ಲಿ ನೋಡಿಕೊಳ್ಳುತ್ತೇನೆ. ಹಾಗೇ ಇನ್ನೆರಡು ದಿವಸ ಮನೆಯಿಂದ ಯಾರೂ ಅಡಿಕೆ ಸುಲಿತಕ್ಕೆ ಬರಕ್ಕಾಗಲ್ಲವಂತ ಸಾಹುಕಾರನಿಗೆ ತಿಳಿಸುತ್ತೇನೆ. ಇನ್ನೇನು ಹೇಳಿ?”

ಎಂದರು. ವೆಂಕಮ್ಮ ಇನ್ನೇನಿಲ್ಲವೆಂದು ತಲೆಯಾಡಿಸಿ, “ಒಟ್ಟಿನಲ್ಲಿ ನೀವೊಬ್ಬರು ಈ ಮನೆಯಲ್ಲಿ ಇರೋದರಿಂದ…. ” ಎನ್ನುವುದರೊಳಗೆ ಶಾಮಭಟ್ಟರು ಅಲ್ಲಿಂದ ಕಾಲು ಕಿತ್ತರು.

ವೆಂಕಮ್ಮ ಮಡಿಯುಟ್ಟು ಜಪಕ್ಕೆ ಕೂತರು. ನಡುವೆ ಜ್ಞಾಪಕ ಮಾಡಿಕೊಂಡು ಕೊಟ್ಟಿಗೆಯ ಸೊಪ್ಪು ಸಗಣಿ ಬಾಚುತ್ತಿದ್ದ ಸೀತಕ್ಕನಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಲು ಹೇಳಿದರು. ನೇತ್ರಾವತಿಯನ್ನು ಕರೆದು ‘ನೆನೆಹಾಕಿದ ಮತ್ತಿಯಿದೆಯೇನೆ, ಇದ್ದರೆ ಸ್ವಲ್ಪ ಅವಳ ತಲೆತಿಕ್ಕು’ ಎಂದರು. ಈ ನೇತ್ರಾವತಿ ತಾನಾಗಿ ಯೋಚಿಸಿ ಒಂದು ಕೆಲಸ ಮಾಡುವವಳೆ? ಶಾಲೆಯ ಮೆಟ್ಟಿಲು ಹತ್ತಿ ನಾಲ್ಕಕ್ಷರ ಕಲಿತಿದ್ದೇನೆಂದು ದರ್ಪ ತೋರಿಸುತ್ತಾಳೆ. ಇವಳ ದೆಸೆಯಿಂದ ಪುಂಡರೀಕನ ತಲೆಯೂ ಕೆಟ್ಟಿದೆ. ಹೆಂಡತಿಗೆ ಇಷ್ಟವಾಗಲೆಂದು ಕ್ರಾಪು ಮಾಡಿಸಿ, ತಾಯಿಗೆ ಸಿಟ್ಟು ಬರದಿರಲೆಂದು ಹಿಂದಕ್ಕೆ ಒಂದು ಜುಟ್ಟು ಬಿಟ್ಟಿದ್ದಾನೆ. ತಿಂಗಳು ತಿಂಗಳಿಗೆ ಆ ಜುಟ್ಟು ಸಣ್ಣಗಾಗುವುದ್ನು ನೋಡಿ ವೆಂಕಮ್ಮ ಏನು ಬಂತಪ್ಪ ಕಾಲ ಎಂದು ನಿಟ್ಟುಸಿರು ಬಿಡುತ್ತಾರೆ. ಏನೇನು ಅವತಾರವೊ – ಶುದ್ದ ಹೆಣ್ಣಿಗ ಅವನು – ಹೆಂಗಸರ ಹಾಗೆ ಬೈತಲೆ ತೆಗೆಯುತ್ತಾನೆ. ನೇತ್ರಾವತಿಯ ಬಡಿವಾರವೊ – ನೋಡಿದರ ಹೇಸಿಗೆಯಾಗುತ್ತದೆ – ಒಳ್ಳೆ ಮುತ್ತೈದೆಯ ಹಾಗೆ ನಡುವೆ ಬೈತಲೆ ತೆಗೆಯುವುದು ಬಿಟ್ಟು, ವಾರ ಬೈತಲೆ ತೆಗೆಯುತ್ತಾಳೆ. ಕಣ್ಣಿಟ್ಟು ನೋಡಿದರೂ ಕಾಣಿಸಬಾರದು ಹಾಗೆ ಸಣ್ಣನೆಯ ಕುಂಕುಮವಿಡುತ್ತಾಳೆ. ಮಡಿ ಮೈಲಿಗೆಯಂತೂ ಸ್ವಲ್ಪವೂ ಇಲ್ಲ. ವೆಂಕಮ್ಮ ತುಳಸಿಯನ್ನು ಕಣ್ಣಿಗೊತ್ತಿಕೊಂಡಳು.

ಸೀತಕ್ಕನಿಗೆ ಎರೆದು ಬಂದು ನೇತ್ರಾವತಿ ಅಡಿಗೆ ಮನೆಗೆ ಬಂದು ಅತ್ತೆಯ ಎದುರು ನಿಲ್ಲಲು,

ತಂದು ಹೆಚ್ಚು. ಮಾವಿನಕಾಯಿಯ ಕಾಯಿರಸ ಮಾಡಿದರಾಯಿತು. ಸುವರ್ಣಗೆಡ್ಡೆಯಿದೆ – ಅದರ ಪಲ್ಯ. ಒಂದಷ್ಟು ಹಪ್ಪಳ ಸಂಡಿಗೆ ಕರಿಯೋದು, ಅಕ್ಕಿ ಕಡಲೇಬೇಳೆ ಪಾಯಸ ಮಾಡೋದು. ಇವತ್ತು ನೀನಷ್ಟು ಕಾಲು ನೀಡಿ ರಾಣಿಯ ಹಾಗೆ ಕೂರಬೇಡ. ಇವತ್ತಾದರೂ ನನ್ನ ಮಗಳಿಗೆ ಕೆಲಸ ಹಚ್ಚಬೇಡ”.

ಎಂದು ಪರಚಿಕೊಳ್ಳುತ್ತ ಗೋಪಿಯನ್ನು ಕೈಮೇಲೆ ಕಲಸಿ ಹಣೆಗೆ ನಾಮವನ್ನು ಎಳೆದು ಮುದ್ರೆಯೊತ್ತಿಕೊಂಡರು. ಮುಂದಿನ ತ್ರಯೋದಶಿ ಅವರ ಶ್ರಾದ್ಧ ಅಲ್ಲವೆ? ತನ್ನ ಅಪ್ಪಯ್ಯ ಯಾವತ್ತು ಬರುವುದೆಂಬುದೆ ಪುಂಡರೀಕನಿಗೆ ತಿಳಿಯದು. ಯಾವ ಕಾಲದ ಮಕ್ಕಳೊ! ಹೊರಗೆ ಹಲಸಿನ ಕಾಯಿ ಕೊಯ್ದು ಬರಲು ನೇತ್ರಾವತಿ ಹೋಗುವಾಗ ತನ್ನಷ್ಟಕ್ಕೆ ಗೊಣಗಿದ್ದು ಬಿಸಿಲಿನಲ್ಲಿ ತಲೆಯೊಣಗಿಸಿಕೊಳ್ಳುತ್ತ ಕೂತ ಸೀತಕ್ಕನಿಗೆ ಕೇಳಿಸಿತು. ಅವಳು ಒಳಗೆ ಬಂದಳು. ಬರುವಾಗ ಬುಟ್ಟಿಯಲ್ಲಿ ನೇತ್ರಾವತಿಯ ಸೀರೆ, ಪುಂಡರೀಕನ ಪಂಚೆ, ಅಂಗಿಒಂದು ಗೆರೆ ಸೋಪು ಕಾಣಿಸಿತು. ಅಮ್ಮನ ಹತ್ತಿರ ಹೇಳಬೇಕೆಂದುಕೊಂಡಳು. ಪುಂಡರೀಕನ ಬಟ್ಟೆಗೆ ಮಾತ್ರ ಸೋಪು ಹಾಕು, ನಿನ್ನ ಸೀರೆಗೆ ಅಂಟವಾಳದ ಕಾಯಿ ಸಾಕು ಎಂದರೆ ತನ್ನ ಬಟ್ಟೆಗೂ ಸೋಪು ಹಾಕಿಕೊಳ್ಳುತ್ತಾಳೆ. ನಮ್ಮ ಬಟ್ಟೆಗಳಿಗೆ ಅಂಟವಾಳಕಾಯಿಯೂ ಗತಿಯೂ ಇರುವುದಿಲ್ಲ ಕೆಲವು ಸಾರಿ. ಗೆಯ್ಯಲು ಮಾತ್ರ ನಾನು ಅಮ್ಮ ಬೇಕು ಈ ಮನೆಯಲ್ಲಿ. ಎಂದು ಪರಚಿಕೊಳ್ಳುತ್ತ ತಾಯಿಯ ಎದುರು ನಿಂತು,

“ಏನಾಯಿತು ಅಮ್ಮ – ನೇತ್ರಾವತಿ ಗೊಣಗಿಕೊಂಡು ಹೋದಳು”

ಎಂದದ್ದಕ್ಕೆ ವೆಂಕಮ್ಮ –

“ಇನ್ನೇನು ಆಗಿರಬೇಕು ಹೇಳು. ಕೆಲಸ ಹೇಳಿದರೆ ಅವಳ ಮುಖ ಇಷ್ಟುದಪ್ಪವಾಗುತ್ತದೆ’ ಎಂದರು. ಸೀತಕ್ಕ ಸೋಪಿನ ವಿಷಯ ಹೇಳಿದಳು. ಅದಕ್ಕೆ ವೆಂಕಮ್ಮ ಶಾಮಭಟ್ಟರು ಬರಲಿ, ಅವರಿಗೆ ಅದನ್ನು ತೋರಿಸಿ ವಿಚಾರಣೆ ಮಾಡಿಸುತ್ತೇನೆ, ಹಾಸಕ್ಕೆ ಹೊದೆಯಕ್ಕೆ ಗತಿಯಿಲ್ಲದೆ ಇರುವಾಗ ಇವಳು ಮನೆ ತೊಳೆಯಲೆಂದೇ ಬಂದು ಸೇರಿಕೊಂಡ ಹಾಗಿದೆ. ಹೀಗೆ ಸಂಸಾರ ಮಾಡಿದರ ಉದ್ಧಾರವಾದ ಹಾಗಾಯ್ತು ಎಂದರು. ನೇತ್ರಾವತಿ ಹಲಸಿನ ಕಾಯನ್ನು ಕೊಯ್ದು ತಂದು ಮೂಲೆಯಲ್ಲಿದ್ದ ಮೆಟ್ಟುಗತ್ತಿಯ ಮೇಲೆ ಅದನ್ನು ಇಟ್ಟಳು. ಕೈಗೆ ಮೇಣ ಹತ್ತೀತೆಂದು ತೆಂಗಿನ ಎಣ್ಣೆಯ ಗಿಂಡಿಯನ್ನು ನಾಗಂದಿಗೆಯಿಂದ ತೆಗೆಯಲು ಹೋದಾಗ ಗಿಂಡಿ ಜಾರಿ ಕೆಳಗೆ ಬಿತ್ತು.

ಕಣ್ಣು ಮುಚ್ಚಿ ಕೂತಿದ್ದ ವೆಂಕಮ್ಮ ‘ಏನು ಮಾಡಿದಿಯೇ ಮಹಾರಾಯತಿ’ ಎನ್ನುತ್ತ ಕಣ್ಣು ಬಿಟ್ಟು ಗಟ್ಟಿಯಾದ ಸ್ವರದಲ್ಲಿ ಕಿರುಚಿದರು :

“ಈ ಮನೆ ತೊಳೆಯದ ಹೊರ್ತು ನಿನಗೆ ಸಮಾಧಾನವಿಲ್ಲ ಅಲ್ಲವ? ನನ್ನ ಮೇಲೆ ಸಿಟ್ಟಿದ್ದರೆ ಎಣ್ಣೆ ಚೆಲ್ಲಬೇಕೆ? ನೀನು ವಿಪರೀತ ಸೊಕ್ಕಿಬಿಟ್ಟಿದ್ದಿ ನೇತ್ರಾವತಿ. ಪುಂಡರೀಕ ಬಂದ ಮೇಲೆ ನಾನು ಅವನನ್ನ ಕೇಳಬೇಕೆಂದಿದ್ದೇನೆ. ನಾನು ಎಷ್ಟು ಸಾರಿ ನಿನಗೆ ಹೇಳಿಲ್ಲ; ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ನಿನ್ನ ಸೀರೆಗೆಲ್ಲ ಸೋಪು ಬೇಡ, ಅಂಟವಾಳದ ಕಾಯಿ ಸಾಕು ಅಂತ. ನಿನ್ನ ಚಾಳಿಗಳು ನನಗೆ ಗೊತ್ತಾಗಲ್ಲ ಅಂತ ತಿಳಿದಿದೀಯ? ನಿನ್ನ ಕೋಣೆ ನಾಗಂದಿಗೆ ಮೂಲೇಲಿ ಯಾಕೆ ಕೋಡುಬಳೆ ಮುಚ್ಚಿಟ್ಟಿದ್ದಿಯೆ? ನೀನು ನನ್ನ ಎದುರಿಗೆ ತಿಂದರೆ ಬೇಡವೆಂತೀನ? ಇವತ್ತು ಯಾಕೋ ಸೀತಕ್ಕ ಅಲ್ಲಿ ಕೈಹಾಕಿ ನೋಡ್ತಾಳೆ ಒಂದು ಪೊಟ್ಟಣದ ತುಂಬ ಕೋಡುಬಳೆ. ನನ್ನನ್ನ ಕೆಟ್ಟವಳು ಮಾಡಬೇಕೂಂತ ತಾನೆ ನೀನು ಹೀಗೆ ಮಾಡೋದು?”

ನೇತ್ರಾವತಿಗೆ ಸಿಟ್ಟು ಅವಮಾನ ಒಟ್ಟಿಗೇ ಆಗಿ ಮಾತು ತಿಳಿಯದೆ ಮೆಟ್ಟುಗತ್ತಿಯ ಮೇಲೆ ಕೂತು ಕಣ್ಣುತುಂಬ ನೀರು ತುಂಬಿಕೊಂಡಳು. ಸೀತಕ್ಕ ಎಣ್ಣೆಯನ್ನು ಬಳಿದು ಗಿಂಡಿಗೆ ತುಂಬಿಸಿದಳು. ನೇತ್ರಾವತಿಯಿಂದ ಉತ್ತರ ಬರದಿದ್ದುದು ಕಂಡು, ಅವಳು ಎದುರಾಡದಿದ್ದುದಕ್ಕೆ ಆಶ್ಚರ್ಯಪಟ್ಟು ಮತ್ತೆ ಮುಂದುವರಿಸಿದರು:

“ನಾನು ಪಟ್ಟ ಕಷ್ಟ ದೇವರಿಗೆ ಗೊತ್ತು. ನನ್ನ ಅತ್ತೆಯೆಂದರೆ ನಾನು ಗಡಗಡ ನಡುಗುತ್ತಿದ್ದೆ. ನಿನ್ನ ಹಾಗೆ ವಾರೆಬೈತಲೆ ತೆಗೆದು ಗಂಡನ ಜೊತೆ ಸೂಳೆಯ ಹಾಗೆ ಸರಸಮಾಡುವ ಕಾಲವಲ್ಲ ಅದು. ನನ್ನ ಪಾಡಿಗೆ ನಾನು ದುಡಿದುಕೊಂಡಿದ್ದರೂ ಕೂತರೆ ತಪ್ಪು, ನಿಂತರೆ ತಪ್ಪು. ಅವರೋ ವರ್ಷವಿಡೀ ಊರು ಅಲೆಯುವುದು. ಅವರಿಗೊಬ್ಬಳು ರಂಭೆ ಬೇರೆ. ಏಳು ಮಕ್ಕಳನ್ನು ನನ್ನದಲ್ಲಾಂತ ಹೊಂಡಕ್ಕೆ ಹಾಕಿದೆ. ಉಳಿದಿಬ್ಬರು ಮಕ್ಕಳಲ್ಲಿ ಸೀತಕ್ಕನ ಪಾಡು ಹೀಗಾಯ್ತು. ನನ್ನ ಮೇಲೆ ನಿಮಗೆ ಇಷ್ಟು ಕರುಣೆ ಬೇಡವೆ? ಮೊನ್ನೆ ರಾತ್ರೆ ನೀನು ಪುಂಡರೀಕನಿಗೆ ಮಲಗಿಕೊಂಡು ಏನು ಚುಚ್ಚುತ್ತಿದ್ದಿ. ನಾನು ಕೇಳಿಸಿಕೊಂಡೆ – ಗೊತ್ತಾಯಿತ? ನನಗೆ ನಿದ್ದೆ ಬಂತೆಂದು ತಿಳಿದಿದ್ದಿಯ? ವಯ್ಯಾರ ಮಾಡಿ ಗಂಡನನ್ನು ಒಲಿಸಿಕೊಳ್ಳುವ ನಿನ್ನ ನಾಜೂಕು ನನಗೆ ತಿಳಿಯಲ್ಲಾಂತ ತಿಳಿದಿದ್ದೀಯ?”

ವೆಂಕಮ್ಮನ ಧ್ವನಿ ಇನ್ನಷ್ಟು ಜೋರಾಗುವ ಹೊತ್ತಿಗೆ ಶಾಮಭಟ್ಟರ ಹೆಜ್ಜೆ ಸಪ್ಪಳ ಕೇಳಿಸಲು ಅವರ ಮಾತು ನಿಂತಿತು. ಒಂದು ಕ್ಷಣ ಸುಮ್ಮನಿದ್ದು ಶಾಮಭಟ್ಟರು ಒಳಗೆ ಬಂದು ನಿಂತುದನ್ನು ಕಂಡು,

“ಸೀತಕ್ಕ ಪಟ್ಟ ಕಷ್ಟದಲ್ಲಿ ಒಂದು ಪಾಲು ನೀನು ಪಡುತ್ತಿಲ್ಲ ನೇತ್ರಾವತಿ. ಅವಳು ಅವನ ಸೇವೇನೂ ಮಾಡಬೇಕು, ಅವನ ಸೂಳೆಯ ಸೇವೇನೂ ಮಾಡಬೇಕು. ಇನ್ನೂ ಮೈನೆರೆಯದ ಹುಡುಗಿ – ಸುಖವೆಂದರೆ ಏನೆಂದು ಅವಳು ಕಂಡದ್ದುಂಟೆ? ಈಗ ಮುದುಕಿಯಾದ ಮೇಲೆ ಯಾವ ಸಂಭ್ರಮಕ್ಕೆಂದು ಅವಳ ಗಂಡ ಇಲ್ಲಿಗೆ ಬರಬೇಕು? ನಾನೊಂದು ಸಾರಿ ಹೋಗಿ ನೋಡುತ್ತೇನೆ – ಏನು ನೋಡೋದು? ಸೀತಕ್ಕನ ಬೆನ್ನಿನ ಮೇಲೆ ಕಬ್ಬಿಣದ ಸಟ್ಟಿಗ ಕಾಯಿಸಿ ಬರೆ ಇಟ್ಟಿದ್ದಾನೆ. ಇವತ್ತಿಗೂ ಅದರ ಕಲೆ ಅವಳ ಬೆನ್ನಿನ ಮೇಲೆ ಇದೆ. ಬೇಕಾದರೆ ಶಾಮಭಟ್ಟರನ್ನು ಕೇಳು – ಅವರಿಗೆಲ್ಲ ಗೊತ್ತು. ಈ ಪುಣ್ಯಾತ್ಮರೊಬ್ಬರು ನಮ್ಮ ಮನೆಯನ್ನು ಯಾವ ಋಣಾನುಬಂಧದಿಂದಲೊ ಬಂದು ಸೇರದಿದ್ದರೆ ನಮ್ಮದು ನಾಯಿಪಾಡಾಗುತ್ತಿತ್ತು. ಸಾಯುತ್ತಾಳಲ್ಲ ಮಗಳು ಎಂದು ಕರೆದುಕೊಂಡು ಬಂದೆ. ಕಳಿಸಿ ಕೊಡುವಾಗ ಅವನ ಸೂಳೆ ನನ್ನ ಮಗಳ ಕಿವಿಯ ಬುಗುಡಿ, ಎರಡೆಳೆ ಕಾಸಿನ ಸರ, ಗೆಜ್ಜೆ ಪಟ್ಟಿ ಬಚ್ಚಿಟ್ಟುಕೊಂಡಳು. ಆ ರಂಡೆ ಅದನ್ನೆ ಮಾರಿ ಎಮ್ಮೆ ಕೊಂಡಿರಬೇಕು. ”

ಶಾಮಭಟ್ಟರು ನೇತ್ರಾವತಿ ಅಳುತ್ತ ಕೂತಿದ್ದುದನ್ನು ಕಂಡು ಏನೋ ನಡೆದಿರಬೇಕೆಂದು ಊಹಿಸಿದರು. ವೆಂಕಮ್ಮನ ಮಾತು ನಿಲ್ಲಿಸಲೆಂದು ಸರಸವಾಗಿ,

“ಏನು ನಡೆದಿದೆ ವೆಂಕಮ್ಮ – ಅಳಿಯದೇವರ ಸಂತರ್ಪಣೆಗೆ? ನಮಗೊಂದು ಪಾಯಸದ ಊಟಕ್ಕೆ ಮೋಸವಿಲ್ಲ ತಾನೆ?”

ಎಂದು ಕೇಳಿದರು. ತಾವು ಸಾಹುಕಾರರ ಹತ್ತಿರ ಹೋದ ವಿಷಯ, ಮನೆಯವರು ಅಡಿಕೆ ಸುಲಿತಕ್ಕೆ ಯಾಕೆ ಬರಲಿಲ್ಲ ಎಂದು ಅವರು ರೇಗಿದ್ದು, ಅದಕ್ಕೆ ತಾನು ಕೊಟ್ಟ ಸಮಜಾಯಿಷಿ, ಅಂಗಲಾಚಿ ಅಳಿಯ ದೇವರನ್ನು ತರಲು ಕಮಾನು ಗಾಡಿಯನ್ನು ಅವರಿಂದ ಗಿಟ್ಟಿಸಿದ್ದು ಎಲ್ಲವನ್ನೂ ಅಭಿನಯಪೂರ್ವಕವಾಗಿ ವಿವರಿಸಿದರು. ತನ್ನ ಮಾತನ್ನು ಮಗ್ನಳಾಗಿ ಕೇಳುತ್ತ ನೇತ್ರಾವತಿ ಕೂತುದನ್ನು ಕಂಡು ಅವಳ ಅಳು ನಿಂತಿತಲ್ಲ ಎಂದು ಹರ್ಷವಾಗಿ, ಅವಳ ಕಡೆ ನೋಡಿ, ಅವಳ ಹಾಗೆ ಅಳುಬುರುಕು ಮುಖ ಮಾಡಿ, ಸೊಟ್ಟು ಬಾಯಿಯಿಂದ ಈ ಈ ಈ ಎಂದು ಅವಳನ್ನು ನಗಿಸಿದರು.

* * *

ದೇವರ ಕೋಣೆಯ ಗೋಡೆಯೊಂದಕ್ಕೆ ಅಂಟಿಸಿದ ಮಾಸಿದ ಕನ್ನಡಿಯೊಂದರ ಎದುರು ನಿಂತು ಸೀತಕ್ಕ ತನ್ನ ಮೋಟು ಜಡೆಯನ್ನು ತೆಂಗಿನ ನಾರಿನಲ್ಲಿ ಬಿಗಿದು ಕಟ್ಟಿಕೊಂಡಳು. ಕುಸುಮ ಜಾಜಿ ಮತ್ತು ಕೇದಗೆಯ ಎಸಳನ್ನು ಮುಡಿದಳು. ಹಣೆಗೆ ದೊಡ್ಡದಾಗಿ ಒಂದು ಕುಂಕುಮವಿಟ್ಟು ಕೆನ್ನೆಗೆ ಅರಿಸಿನ ಹಚ್ಚಿಕೊಂಡಳು. ಮದುವೆಯಲ್ಲಿ ಅವಳ ತಂದೆ ಕೊಂಡುಕೊಟ್ಟಿದ್ದ ಮುವ್ವತ್ತಾರು ವರ್ಷ ವಯಸ್ಸಾದ ನುಸಿ ಹೊಡೆದ ಧರ್ಮಾವರದ ಸೀರೆಯನ್ನು ಉಟ್ಟುಕೊಂಡಳು. ಆ ಸೀರೆ ಪೆಟ್ಟಿಗೆಯಿಂದ ಹೊರಬರುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ; ಗೌರೀಪೂಜೆ, ಅರಿಸಿನ ಕುಂಕುಮ, ಅಥವಾ ಯಾವುದಾದರೂ ಹಳ್ಳಿಯಲ್ಲಿ ನಡೆಯುವ ಮದುವೆ ದಿನಗಳಲ್ಲಿ ಹಿರಿ ಮುತ್ತೈದೆಯಾಗಿ ಹೋಗುವಾಗ. ಒಳಗಚ್ಚೆ ಹಾಕಿ, ಕಾಲಿನಿಂದ ಬಹಳ ಮೇಲಕ್ಕೆ ಬರುವ ಹಾಗೆ, ಬಾಳೆಕಾಯಿ ಗಂಟಿನಲ್ಲಿ ಬಿಗಿದು, ಮೇಲಕ್ಕೊಂದು ಪಟ್ಟಿಯನ್ನು ಹಾಕುತ್ತಾಳೆ. ವೆಂಕಮ್ಮ ಹೊಸ ಕೆಂಪು ಸೀರೆಯುಟ್ಟರು. ನೇತ್ರಾವತಿ ನಿತ್ಯದ ಮಾಸಲು ಸೀರೆಯುಡಲು ವೆಂಕಮ್ಮ “ನನ್ನನ್ನ ಕೆಟ್ಟವಳು ಮಾಡಬೇಕೆಂದಲ್ಲವೆ ನೀನು ಹೀಗೆ ಮಾಡೋದು? ಬೇರೆ ಒಳ್ಳೆಯ ಸೀರೆಯುಡಬಾರದ?’ ಎಂದ ಮೇಲೆ ಮೈಮೇಲೆ ಹೂವಿನ ಚಿತ್ರಗಳಿದ್ದ ಒಂದು ವಾಯಿಲ್ ಸೀರೆಯನ್ನು ಉಟ್ಟಳು. ಮೂವರೂ ದೇವಸ್ಥಾನಕ್ಕೆ ಬಂದು ನಿಂತಾಗ ಗಂಟೆ ಸುಮಾರು ಹತ್ತುವರೆಯಾಗಿತ್ತು.

ಗಂಡ ಬರುತ್ತಾರೆಂಬ ಸುದ್ದಿ ಕೇಳಿ ಸೀತಕ್ಕನ ಮನಃಸ್ಥಿತಿ ಹೇಗಾಗಿರಬಹುದೆಂದು ಚಿಂತಿಸಿದವರು ಶಾಮಭಟ್ಟರೊಬ್ಬರು ಮಾತ್ರ. ಅವರಿಗೆ ಆಶ್ಚರ್ಯ – ಅವಳ ಮುಖಭಾವ ಯಾವತ್ತೂ ನಿರ್ವಿಕಾರವಾಗಿರುತ್ತದೆ. ದಪ್ಪ ತುಟಿಗಳ ಬಾಯನ್ನು ಸ್ವಲ್ಪ ತೆರೆದು ಯಾವಾಗಲೂ ಗಾಬರಿಯಲ್ಲಿ ಅಥವಾ ಮಂಕಿನಲ್ಲಿ ನಿಂತಿರುವಂತೆ ಕಾಣುತ್ತಾಳೆ. ಅವಳಿಗಿದ್ದ ಅತ್ಯಂತ ಪ್ರೀತಿಯ ಸಂಬಂವೆಂದರೆ ದನಗಳ ಜೊತೆ ಮತ್ತು ತಾಯಿಯ ಜೊತೆ. ಒಬ್ಬಳೇ ದನಗಳ ಎದುರಿಗೆ ನಿಂತು ತಾಸುಗಟ್ಟಲೆ ಮಾತಾಡುತ್ತಾಳೆ ಬೇಕಾದರೆ – ಅವುಗಳ ಮೈ ತುರಿಸುತ್ತ, ಸಂದಿಯಲ್ಲಿ ಕಚ್ಚಿಕೊಂದ ಚಿಗಟಗಳನ್ನು ಕಿತ್ತು ಎಸೆಯುತ್ತ. ಇವತ್ತು ಸೀತಕ್ಕ ತಾಯಿಯ ಹತ್ತಿರ ಕೂಡ ತನ್ನ ವಿಷಯದ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಹೇಳಿದ ಹಾಗೆ ಮಾಡಬೇಕೆಂದು ಮಾತ್ರ ಅವಳಿಗೆ ಗೊತ್ತು. ಈ ನಿರ್ವಿಕಾರಕ್ಕೆ ಏನೆನ್ನಬೇಕು.

ಶಾಮಭಟ್ಟರು ನಿಂತಲ್ಲಿ ನಿಲ್ಲಲಾರದೆ ಸುತ್ತುತ್ತಿದ್ದರು – ದೇವಸ್ಥಾನದ ಒಳಕ್ಕೆ, ಹೊರಕ್ಕೆ, ಕೆರೆಯ ದಂಡೆಯ ವರೆಗೆ, ಮತ್ತೆ ಹಿಂದಕ್ಕೆ. ಪುಂಡರೀಕ ಬಟ್ಟೆಯ ವ್ಯಾಪಾರಕ್ಕೆಂದು ಅಂಗಡಿಗೆ ಹೋಗಿದ್ದಾಗ ಅಸಾಮಿ ಎಲ್ಲಿಯಾದರೂ ಕಾಲು ಕಿತ್ತಿದ್ದರೆ? ಎಲ್ಲಿ ಜೀವನಾಂಶಕ್ಕೆ ಪೀಡಿಸುತ್ತಾರೊ ಎಂದು ಅವನಿಗೆ ಭಯವಿತ್ತೆಂಬುದು ಖಚಿತ. ಅವನು ಓಡಿಹೋದರೆ ಮಾಡಿದ್ದೆಲ್ಲ ದಂಡ. ಪುಂಡರೀಕನಾದರೊ ಸ್ವಲ್ಪ ಪೆದ್ದು ಈ ವಿಷಯಗಳಲ್ಲಿ……

ಪೂಜೆ – ಭಟ್ಟರು ಮಂಗಳಾರತಿಗೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಕಾದರು…..

ಸೀತಕ್ಕನ ಗಂಡನನ್ನು ನೋಡುವ ಕುತೂಹಲದಿಂದ ದೇವಸ್ಥಾನದ ಹೊರಕ್ಕೆ ಬಹಳ ಜನ ಕಾದಿದ್ದರು. ಸಾಹುಕಾರರು ಮತ್ತು ಅವರ ಸಂಸಾರದ ಆದಿಯಾಗಿ, ಜೋಯಿಸರು, ಗೋಪಾಲಕೃಷ್ಣ ತಂತ್ರಿಗಳು, ಸ್ವಲ್ಪ ದೂರದಲ್ಲಿ ಸಾಹುಕಾರರ ತೋಟದ ಕೆಲಸಕ್ಕೆ ಬಂದ ಕನ್ನಡಾ ಜಿಲ್ಲೆ ಆಳುಗಳು, ಗಾಡಿ ಹೊಡೆಯುವ ಈರೋಜಿ, ಹಳೆಪೈಕದ ಲಕ್ಕು, ಬಚ್ಚ ಇತ್ಯಾದಿ. ಸುಮಾರು ಅರ್ಧ ಗಂಟೆ ಕಾದ ಮೇಲೆ ಕೆರೆಯ ಈಚೆಗಿನ ಇಳಿಜಾರಿಯನ್ನು ಓಡಿಬರುವ ಗಾಡಿಯ ಗೆಜ್ಜೆಗಳ ಸದ್ದು ಕೇಳಿತು. ‘ನಮ್ಮ ಗಾಡಿಯೇ, ಹಾಗೆ ಓಡಿ ಬರುವುದು ನಮ್ಮ ಎತ್ತೆ’ ಎಂದರು ಸಾಹುಕಾರರು. ಶಾಮಭಟ್ಟರು ಒಳಗೆ ಹೋಗಿ ವೆಂಕಮ್ಮ ಸೀತಕ್ಕರಿಗೆ ‘ನೀವು ದೇವರ ಕಡೆಯೇ ನೋಡುತ್ತಿರಿ, ಅದಕ್ಕಿಂತ ಮುಂಚೆ ಅವರಿಗೆ ಮುಖ ಕೊಟ್ಟು ನೋಡಬೇಡಿ’ ಎಂದರು.

ಸೀತಕ್ಕನ ಗಂಟಲು ಒಣಗಿತು. ಮೈ ಕೈಯಿಂದ ಬೆವರು ಕಿತ್ತು ಕಣ್ಣು ಮಂಜಾಯಿತು. ಹಣೆಯ ಕುಂಕುಮ ನೀರಾಗಿ ಹಣೆಯಿಂದ ಇಳಿಯಿತು. ವೆಂಕಮ್ಮ ಕಣ್ಣು ಮುಚ್ಚಿ ಕೈ ಮುಗಿದು ನಿಂತರು. ನೇತ್ರಾವತಿ ಊರು ತುಂಬ ಕಣ್ಣಾಡಿಸುತ್ತ ಆತುರ ತಡೆಯಲಾರದೆ ನಿಂತಳು. ಸೀತಕ್ಕನ ಗಂಡ ಬರುವುದೇ ಇಲ್ಲವೇನೊ, ತನ್ನ ಗಂಡನೊಬ್ಬನೇ ಬರುತ್ತಾರೇನೊ – ಹಾಗಾದರೆ ಹೀಗೆ ಕಾದು ನಿಂತವರೆಲ್ಲರ ಮೇಲೆ ಏನು ಪರಿಣಾಮವಾದೀತೆಂದು ಯೋಚಿಸುತ್ತ ಆಲೋಚನೆಯನ್ನು ತಡೆದುಕೊಳ್ಳಲಾರದೆ ಉಸಿರು ಕಟ್ಟಿದವಳಂತೆ ಕಾದಳು.

ಗಾಡಿ ಬಂದು ನಿಂತಿತು. ಸಾಹುಕಾರರು ತಮ್ಮ ಭರ್ಜರಿ ಎತ್ತುಗಳ ಕಡೆ ಮೆಚ್ಚಿಕೆಯಿಂದ ನೋಡುತ್ತಿದ್ದಂತೆ ಗಾಡಿಯಿಂದ ಶೀನಪ್ಪಯ್ಯ ಬಿಳಿಯ ಧೋತ್ರ, ಮುಂಡು – ತೋಳಿನ ಅಂಗಿ, ಮೇಲೊಂದು ಸಿಲ್ಕಿನ ವಸ್ತ್ರ ತೊಟ್ಟು ಕೆಳಗಿಳಿದರು. ಹೊಸ ಧೋತ್ರ, ಸೀರೆಯ ಗಂಟನ್ನು ಹಿಡಿದುಕೊಂಡು ಪುಂಡರೀಕ ಅವರನ್ನು ಹಿಂಬಾಲಿಸಿದ. ಅತ್ತಿತ್ತ ನೋಡದೆ ಶೀನಪ್ಪಯ್ಯ ದೇವಸ್ಥಾನದೊಳಕ್ಕೆ ಹೋದಕೂಡಲೇ ಜಾಗಟೆ ಶಂಖಗಳ ಧ್ವನಿ ಮೇಳದ ಜೊತೆ ಪೂಜೆಯಾಗಿ ಭಟ್ಟರು ತಟ್ಟೆಯಾಗಿ ಮಂಗಳಾರತಿಯನ್ನು ತಂದರು. ಆರತಿಗೆ ಎದುರುಬದುರಾಗಿ ವೆಂಕಮ್ಮ ಸೀತಮ್ಮ ಮತ್ತು ಶೀನಪ್ಪಯ್ಯ ನಿಂತು, ಆರತಿಯನ್ನು ಕಣ್ಣಿಗೊತ್ತಿಕೊಂಡು ಅದರ ಮಂದವಾದ ಬೆಳಕಿನಲ್ಲಿ ಒಬ್ಬರನ್ನೊಬ್ಬರು ನೋಡಿದರು. ಯಾರೂ ಒಂದು ಮಾತನ್ನೂ ಆಡಲಿಲ್ಲ. ಶಾಮಭಟ್ಟರು ಒಂದು ದೊಡ್ಡ ಬಟ್ಟಲಿನಲ್ಲಿ ಎಳ್ಳೆಣ್ಣೆಯನ್ನು ತಂದಿಟ್ಟ್ಟು ಇದರಲ್ಲಿ ಒಬ್ಬೊಬ್ಬರಾಗಿ ನಿಮ್ಮ ಮುಖಗಳನ್ನು ನೋಡಿಕೊಳ್ಳಿ ಎಂದರು. ನೋಡಿಯಾದ ನಂತರ ಅದನ್ನು ದೇವರ ದೀಪಕ್ಕೆ ವಿನಿಯೋಗಿಸಲೆಂದು ಕೊಟ್ಟರು. ಸಾರ್ವತ್ರಿಕವಾಗಿ ಹರಡಿದ್ದ ಮೌನ ಎಲ್ಲರಿಗೂ ಅಸಹನೀಯವಾಯಿತು. ಶಾಮಭಟ್ಟರು ಇಷ್ಟು ಹೊತ್ತು ಸುಮ್ಮನಿದ್ದವರು ಎಲ್ಲರ ಮೇಲೂ ಮಂಕು ಕವಿದದ್ದು ಕಂಡು, ಶೀನಪ್ಪಯ್ಯನ ಕಡೆ ತಿರುಗಿ,

“ನಿಮ್ಮ ಹುಡುಗೀನ ನೋಡಿದಿರಾ ಶೀನಪ್ಪಯ್ಯ? ನಾನೇನೂ ನಿಮಗೆ ಮೋಸ ಮಾಡಿಲ್ಲವೆಂತ ಖಾತ್ರಿಯಾಯಿತು ತಾನೆ?”

ಎನ್ನಲು ನೇತ್ರಾವತಿ ಸೆರಗಿನಿಂದ ಬಾಯಿ ಮುಚ್ಚಿಕೊಂಡು ಒಳಗೊಳಗೆ ನಕ್ಕು ವಾರೆಗಣ್ಣಿನಿಂದ ಪುಂಡರೀಕನನ್ನು ಹುಡುಕಿದಳು.

* * *

ಮನೆಗೆ ಬಂದ ಮೇಲೆ ಎಲ್ಲರಿಗೂ ಒಗ್ಗರಣೆ – ಅವಲಕ್ಕಿ, ಕಾಫಿಯ ಸಂತರ್ಪಣೆಯಾಯಿತು. ಬೇಡಬೇಡವೆನ್ನುತ್ತ, ಉಪಚಾರ ಮಾಡಿಸಿಕೊಳ್ಳುತ್ತ ಹೊಟ್ಟೆತುಂಬ ಶೀನಪ್ಪಯ್ಯ ತಿಂದರು. ಶಾಮಭಟ್ಟರು ಶೀನಪ್ಪಯ್ಯನಿಗೆ ‘ಇವತ್ತು ಸ್ವಲ್ಪ ಊಟಕ್ಕೆ ತಡವಾಗಬಹುದು. ವಿಶ್ರಮಿಸಿಕೊಳ್ಳಿ. ನಾನು ಸ್ವಲ್ಪ ಕೆಲಸವಿದೆ ಹೋಗಿಬರುತ್ತೇನೆ’ಂದು ಹೊರಟರು.

ಈ ಶೀನಪ್ಪಯ್ಯ ಎಂತಹ ಮನುಷ್ಯನೆಂದು ಅವರಿಗೆ ಸಮಸ್ಯೆ…. ಒಂದು ನಗುವೆ, ಮುಖದಲ್ಲಿ ಗೆಲುವೆ? ನಾಚಿಕೆ ಮಾನ ಮರ್ಯಾದೆಯಂತೂ ತೃಣಮಾತ್ರವಿಲ್ಲ. ಸಾಹುಕಾರರು ‘ಏನು ನೀವೇ ವೆಂಕಮ್ಮನ ಅಳಿಯಂದಿರ, ಬಂದದ್ದು ಸಂತೋಷ’ ಎಂದರೆ ಹೂ ಎನ್ನಲಿಲ್ಲ, ಉಹೂ ಎನ್ನಲಿಲ್ಲ. ಮಾತು ತಿರುಗಿಸಿ ‘ಎಮ್ಮೆಯ ವ್ಯಾಪಾರಕ್ಕೆಂದು ಹುಬ್ಬಳ್ಳಿಯಿಂದ ಬಂದೆ, ನಿಮ್ಮ ಕೊಟ್ಟಿಗೆಗೆ ನಾಲ್ಕೆಮ್ಮೆ ಹೊಡೆಸಲಾ’ ಎಂದು ನಯ ಜಾನೂಕಿಲ್ಲದೆ ನಿಂತ ಸ್ಥಳದಲ್ಲಿಯೇ ಕೇಳಿಬಿಟ್ಟ. ಮನೆಗೆ ಬಂದ ಮೇಲೆ ಸೀತಕ್ಕನ ಹತ್ತಿರವಿರಲಿ, ವೆಂಕಮ್ಮನ ಹತ್ತಿರವೂ ಒಂದು ಮಾತನ್ನು ಆಡಲಿಲ್ಲ. ಗಾಡಿಯಲ್ಲಿ ಬರುವಾಗ ಸೀತಕ್ಕನ ಚಿಕ್ಕಪ್ಪ ಶೇಷಗಿರಿಭಟ್ಟರನ್ನು ವಾಚಾಮಗೋಚರ ಬೈದನಂತೆ. ಅವರು ಸತ್ತು ಎಷ್ಟು ಕಾಲವಾದರೂ ಇವನ ನಂಜು ಆರಿಲ್ಲವಲ್ಲ? ಏನೊ ಗಾದೆ ಹೇಳುತ್ತಾರಲ್ಲ ಹಾಗೆ. ಎಂತಹ ಹುಳಿ ಮಾವಿನಕಾಯಿ ಕೂಡ ಉಪ್ಪಿನ ಜೊತೆ ಬೆರೆಸಿ ಕಲ್ಲು ಹೇರಿಟ್ಟರೆ ತನ್ನ ಹುಳಿಯನ್ನು ಕಳೆದುಕೊಳ್ಳುತ್ತದೆ; ಮನುಷ್ಯ ತನ್ನ ಜಾಯಮಾನವನ್ನು ಮಾತ್ರ ಬಿಡುವುದಿಲ್ಲ. ಅವನೇನು ಮಾಡಿಯಾನು ಪಾಪ – ಅವನನ್ನು ನಾವು ಬೈಯಬಾರದು – ಅದು ಅವನ ಸ್ವಭಾವ ತಾನು ಸೂಳೆ ಇಟ್ಟುಕೊಂಡಿದ್ದು, ಸೀತಕ್ಕನ ಬೆನ್ನಿಗೆ ಬರೆಯೆಳೆದಿದ್ದು, ಜೀವನಾಂಶ ಕೇಳಿಯಾರೆಂದು ಸೂಳೆಯ ಜೊತೆ ಹುಬ್ಬಳ್ಳಿಗೆ ಪರಾರಿಯಾಗಿದ್ದು – ಈ ಎಲ್ಲ ವಿಷಯದ ಬಗ್ಗೆ ಗಪ್ ಚಿಪ್, ಮಾತೇ ಇಲ್ಲ. ಪಂಚೆಯನ್ನು ಮೇಲಕ್ಕೆ ಕಟ್ಟಿ, ಬೀಡಿ ಸೇದುತ್ತ ನಮ್ಮ ಹತ್ತಿರ ಹೀಗೆ ಪಂಟು ಹೊಡೆಯುವ ಈ ವ್ಯಕ್ತಿ, ಅವನ ಸೂಳೆಯ ಎದಿರು ಬಾಲ ಮುದುರಿಸಿದ ನಾಯಿಯ ಹಾಗೆ ಇರಬಹುದು. ಈ ಶೀನಪ್ಪಯ್ಯ ಎಂತಹ ಜನ.

ಎಂದು ಯೋಚಿಸುತ್ತ ಜೋಯಿಸರ ಮನೆಯೆದುರಿನ ಬಾವಿಕಟ್ಟೆ ದಾಟುವಾಗ ‘ಶಾಮಕಕ್ಕ’ ಎಂದು ಕೂಗಿದ್ದು ಕೇಳಿಸಲು ಹಿಂದಕ್ಕೆ ತಿರುಗಿ ನೋಡಿದರೆ ಕೊಳೆ ಬಟ್ಟೆಯನ್ನೆತ್ತಿಕೊಂಡು ಅವಸರವಾಗಿ ಕಾಲು ಹಾಕಿ ನಡೆದು ಬರುತ್ತಿದ್ದ ನೇತ್ರಾವತಿ. ಯಾಕೋ ಈಚೆಗೆ ಬಿಳುಚಿಕೊಂಡಿದೆ ಹುಡುಗಿ. ‘ಏನು ಮಗಳೇ’ ಎಂದರು.

ಅವಳು ತನ್ನ ಅಂಗೈಯನ್ನು ತೋರಿಸಿದಳು. ಗಾಯವಾಗಿತ್ತು. ‘ಏನಾಗಿದ್ದು’ ಎಂದು ಶಾಮಭಟ್ಟರು ಕೇಳಿದ್ದಕ್ಕೆ –

“ನಿನ್ನೆ ಅಡಿಕೆ ಸುಲಿಯುವಾಗ ಕೈ ಕೊಯ್ದುಕೊಂಡೆ. ನನಗೆ ಸುಲಿಯಲು ಬರಲ್ಲ ಶಾಮಕಕ್ಕ. ಆದರೆ ಅತ್ತೆಗೆ ಹೇಳಿದರೆ ಕಾಲು ಚಾಚಿ ಕೂತು ತಿನ್ನಲು ನೀನೇನು ರಾಣಿಯಾ ಎನ್ನುತ್ತಾರೆ”.

“ಅವರಿಗೆ ವಯಸ್ಸಾಗಿದೆ. ಪರಚಿಕೊಳ್ಳುವುದು ಸ್ವಭಾವ – ಸುಮ್ಮನಿದ್ದು ಬಿಡು”.

“ಶಾಮಕಕ್ಕ, ನಾನು ಊರಿಗೆ ಹೋಗಬೇಕು. ಅಪ್ಪಯ್ಯನಿಗೆ ಬಂದು ಕರೆದುಕೊಂಡು ಹೋಗಲು ಕಾಗದ ಹಾಕಿ, ನಾನೂ ಅವರು ಹೋಗಿಬರುತ್ತೇವೆ”.

“ಪುಂಡರೀಕನಿಗೆ ಈಗೆಲ್ಲಿ ನಿನ್ನ ಜೊತೆ ಬರಲು ಬಿಡುವಾಗುತ್ತದೆ ನೇತ್ರಾವತಿ. ಅಡಿಕೆ – ಸುಲಿತ ಮುಗಿದ ಮೇಲೆ ಸಂಭಾವನೆಗೆಂದು ಅವನು ಊರು ತಿರುಗಬೇಕಲ್ಲ. ”

“ಎಂಥ ಹಾಳು ಸಂಭಾವನೆಯೊ? ಒಳ್ಳೆ ಭಿಕ್ಷೆ ಬೇಡವು ಕೆಲಸ”.

“ಬ್ರಾಹ್ಮಣನಿಗೆ ಉಪನಯನದ ಹೊತ್ತಿಗೆ ‘ಭವತಿ ಭಿಕ್ಷಾಂ ದೇಹಿ’ ಎಂದು ಉಪದೇಶವಾಗಿರುತ್ತದಲ್ಲ ನೇತ್ರಾವತಿ”.

ಎಂದು ಶಾಮಭಟ್ಟರು ನಕ್ಕರು. ತಾನೂ ಹೀಗೇ ಸಂಭಾವನೆ ಮಾಡಿ ಬದುಕುತ್ತಿರುವವ. ಈ ಹೊಸಕಾಲದ ಹುಡುಗಿಗದು ಸೇರುವುದಿಲ್ಲ – ತನ್ನ ಕಾಲದಲ್ಲಿ ಹೆಣ್ಣು ಹೀಗೆ ಯೋಚಿಸುತ್ತಲೇ ಇರಲಿಲ್ಲ, ಅಲ್ಲವೆ, ಎಂದುಕೊಂಡರು.

ನೇತ್ರಾವತಿ ತನ್ನ ಅತ್ತೆ ಮತ್ತು ಅತ್ತಿಗೆ ಹೇಗೆ ತನ್ನನ್ನು ಪೀಡಿಸುತ್ತಿದ್ದಾರೆಂದು ದೂರು ಹೇಳಿ,

“ಇಲ್ಲ ಶಾಮಕಕ್ಕ – ನಾನು ಅಪ್ಪಯ್ಯನ ನೋಡಿ ಬರಲೇಬೇಕು” ಎಂದಳು.

“ಓಹೊ ಅಪ್ಪಯ್ಯನ ಹತ್ತಿರ ಹೋಗಲೇ ಬೇಕೊ? ಹಾಗಾದರೆ ಬೇಗ ಬಸುರಿಯಾಗು ಆರೇಳು ತಿಂಗಳು ಹೋಗಿದ್ದು ಬರಬಹುದು”.

ಎಂದು ನಗೆಯಾಡಿ ಶಾಮಭಟ್ಟರು ಕೆರೆದಂಡೆಯ ಮೇಲೆ ನಿಂತರು. ನೇತ್ರಾವತಿ ಕಲ್ಲಿನ ಮೇಲೆ ಸೀರೆಯನ್ನು ಒದ್ದೆ ಮಾಡಿಟ್ಟು ಅಂಟವಾಳದ ಕಾಯಿಗಳನ್ನು ಅದಕ್ಕೆ ಉಜ್ಜುತ್ತ ಬಗ್ಗಿದಾಗ ಆ ಎಳೆಯ ಜೀವವನ್ನು ನೋಡಿ ಶಾಮಭಟ್ಟರಿಗೆ ಅಯ್ಯೊ ಎನ್ನಿಸಿತು. ಈ ಮಗೂನ ತಂದು ಪುಂಡರೀಕನಿಗೆ ಮದುವೆ ಮಾಡಿಸಿದವರು ತಾವು. ಶಾಲೆಯ ಮೆಟ್ಟಿಲು ಹತ್ತಿದ ಹುಡುಗಿಯಲ್ಲವೆ? ಇಂಗ್ಲಿಷಿನಲ್ಲಿ ತಿಂಗಳುಗಳ, ವಾರಗಳ, ಅಂಕೆಗಳ ಹೆಸರುಗಳನ್ನು ಹೇಳಬಲ್ಲಳು. ಎಷ್ಟಂದರೂ ಕನ್ನಡಾ ಜಿಲ್ಲೆಯ ಹುಡುಗಿಯರು ಬಲು ಸೂಟಿ. ಸಿನಿಮಾ ನಾಟಕ ನೋಡಿ ಕುಣಿಯೋದನ್ನ ಬೇರೆ ಕಲಿತಿದ್ದಾಳಂತೆ. ಪುಂಡರೀಕನಿಗಿಂತ ಇವಳೇ ಚುರುಕಿ. ಗಂಡನನ್ನ ಇವಳು ಎರಡು ಬಿಲ್ಲೆ ಮಾರಿ ಮಂಡಕ್ಕಿ ಕೊಂಡುಕೊಳ್ಳುತ್ತಾಳೆಂದು ವೆಂಕಮ್ಮ ಗೊಣಗುತ್ತಾರೆ. ನಿತ್ಯ ಶಾಮಭಟ್ಟರ ಹತ್ತಿರ ವೆಂಕಮ್ಮನ ದೂರು ಒಂದಲ್ಲ ಒಂದು ಇದ್ದೇ ಇರುತ್ತದೆ. ವಾರೆ – ಬೈತಲೆ ತೆಗೀತಾಳೆ; ಮಡಿಮೈಲಿಗೆಯಿಲ್ಲ; ಕುಂಕುಮ ಸಣ್ಣಕ್ಕಿಟ್ಟುಕೋತಾಳೆ; ಗಂಡನ ತಲೇ ಕೆಡಿಸಿ ಜುಟ್ಟಿನ ಜೊತೆ ಕ್ರಾಪು ಬಿಡಿಸಿದಾಳೆ. ಹೀಗೇ ಪಿರಿ ಪಿರಿ ಎನ್ನುತ್ತಲೇ ಇರುತ್ತಾರೆ. ನೇತ್ರಾವತಿಗೆ ಬಸುರು ನಿಲ್ಲದೆ ಮೈಯಿಳಿದು ಹೋದ ಮೇಲಂತೂ ಅವರ ಕರಕರೆ ಹೆಚ್ಚಾಗಿದೆ. ಸಾಬರ ಹಾಗೆ ಲಂಗ ಹಾಕುತ್ತಾಳೆ ಸೀರೇ ಒಳಗೆ; ಒಳಗಚ್ಚೆ ಹಾಕಲ್ಲ; ಗಂಡನ ಕಿವಿಗೆ ನಿತ್ಯ ಊದುತ್ತಾಳೆ – ಸಾವಿರ.

ವೆಂಕಮ್ಮನ ಮನೆಯಲ್ಲಿ ಹೊರಗೊಂದು ಜಗುಲಿ. ಜಗುಲಿ ದಾಟಿದರೆ ನಡುಮನೆ – ನಡುಮನೆಗೆ ಸೇರಿದ ಹಾಗೆ ಪುಂಡರೀಕನ ಮದುವೆಯಾದ ಮೇಲೆ ಶಾಮಭಟ್ಟರೆ ತಟ್ಟಿ ಕಟ್ಟಿ ಮಾಡಿದ ಒಂದು ರೂಮು. ಒಳಗೆ ಅಡಿಗೆ ಮನೆ ಮತ್ತು ದೇವರಕೋಣೆ. ರೂಮಿನಲ್ಲಿ ಪುಂಡರೀಕ ನೇತ್ರಾವತಿ ಮಲಗೋದು; ನಡುಮನೆಯಲ್ಲಿ ಶಾಮಭಟ್ಟರು; ಒಳಗೆ ದೇವರ ಮನೆಯಲ್ಲಿ ವೆಂಕಮ್ಮ ಮತ್ತು ಸೀತಕ್ಕ. ರಾತ್ರೆ ಎಲ್ಲ ಮಲಗಿಕೊಂಡ ಮೇಲೆ ಪುಂಡರೀಕ ನೇತ್ರಾವತಿಯರ ಪಿಸ ಪಿಸ ಪಿಸ ಮುದ್ದು ಮಾತುಗಳು ಶುರುವಾಯಿತೆಂದರೆ ಸಾಕು, ವೆಂಕಮ್ಮ ಸೀತಕ್ಕರ ಕಿವಿ ನೆಟ್ಟಗಾಗುತ್ತದೆ. ನಡುಮನೆಯ ಹೊಸಲಿನ ಮೇಲೆ ಇಬ್ಬರಲ್ಲೊಬ್ಬರು ಬಂದು ಕೂತು ಬಾಗಿಲಿಗೆ ಕಿವಿ ಕೊಟ್ಟು ಆಲಿಸುತ್ತಾರೆ. ಶಾಮಭಟ್ಟರಿಗೆ ಅಸಹ್ಯವಾಗುತ್ತದೆ ಒಂದು ದಿನ ನಡೆದದ್ದು ಯೋಚಿಸಿದರೆ. ಪುಂಡರೀಕ ನೇತ್ರಾವತಿಯನ್ನು ಮುದ್ದಿಗೆ ‘ಏ ನೇತ್ರಾ’ ಎಂದು ಹೆಸರು ಹಿಡಿದು ಕರೆದನಂತೆ ಮಲಗಿದ್ದಾಗ. ಮರುದಿನ ದೊಡ್ಡ ರಾದ್ಧಾಂತ ಶಾಮಭಟ್ಟರ ಎದಿರು. ವೆಂಕಮ್ಮ ಕಣ್ಣುಗಳನ್ನು ಕಿಡಿಕಿಡಿ ಮಾಡಿ ಹೇಳಿದರು:

“ಎಂತಹ ಗಂಡಸು ಈ ಪುಂಡರೀಕ? ಹೆಂಡತಿಯ ಹೆಸರು ಹಿಡಿದು ಕೂಗುತ್ತಾನಲ್ಲ – ಒಳ್ಳೆ ಇಟ್ಟುಕೊಂಡ ಸೂಳೆಯನ್ನು ಕರೆಯುವ ಹಾಗೆ. ನಾಚಿಕೆ ಬೇಡವೇ? ಹೆಣ್ಣಿಗನಾಗಿಬಿಟ್ಟ”. ಎಂದು ಕಾಲವನ್ನು ಶಪಿಸಿದರು. ಶಾಮಭಟ್ಟರಿಗೆ ಅನ್ನಿಸಿತು – ಪ್ರೀತಿ ಎಂಬುದು ಸೂಳೆಗೆ ಮಾತ್ರ ಸಲ್ಲಬೇಕಾದ್ದೊ, ಹೆಂಡತಿಗೆ ಸಲ್ಲಬಾರದೊ ಎಂದು. ಆದರೆ ಸಾಯುವ ಮುದುಕಿಗೇಕೆ ನೋವು ಮಾಡಬೇಕೆಂದು ಸುಮ್ಮನಾದರು. ಒಂದು ದಿನ ಅವರಿಗೆ ಸುಮ್ಮನಿರಲಾಗಲಿಲ್ಲ. ವೆಂಕಮ್ಮ ಹೊಸಲಿನ ಮೇಲೆ ಕೂತು ಆಲಿಸೋದು ಈ ಪೆದ್ದು ಮಕ್ಕಳಿಗೆ ತಿಳಿಯುವುದಿಲ್ಲವಲ್ಲ ಎಂದು ನಿದ್ದೆ ಮಾಡುವಂತೆ ನಟಿಸುತ್ತ ಮಲಗಿದ್ದ ಶಾಮಭಟ್ಟರು ಒಂದು ದಿನ, “ಏನು ವೆಂಕಮ್ಮ ಹೊಸಲಿನ ಮೇಲೆ ಕೂತುಬಿಟ್ಟಿರಲ್ಲ? ಸೆಖೆಯ?” ಎಂದು ಗಟ್ಟಿಯಾಗಿ ಹೇಳಿದರು – ಪುಂಡರೀಕ ನೇತ್ರಾವತಿಗೆ ಕೇಳಿಸುವ ಹಾಗೆ. ಆದರೆ ನೇತ್ರಾವತಿ ಹೆದರುವ ಹುಡುಗಿಯೆ? ಅತ್ತೆಯಾಡಿದ ಮಾತಿಗೆ ಪ್ರತಿಮಾತು ಆಡಿಬಿಡುತ್ತಾಳೆ – ನೀನು ಎಂದರೆ ನಿನ್ನಜ್ಜ ಎನ್ನುತ್ತಾಳೆ.

ಕೆರೆಯ ದಂಡೆಯಿಂದ ಕಾಲು ಫರ್ಲಾಂಗು ದೂರವಿದ್ದ ತಾವು ತರಕಾರಿ ಬೆಳೆಯುವ ಜಾಗಕ್ಕೆ ಶಾಮಭಟ್ಟರು ಬಂದು ನಿಂತರು. ಒಂದಷ್ಟು ಒಳ್ಳೆ ನೆಲವನ್ನು ಸಾಹುಕಾರರಿಂದ ಗುತ್ತಿಗೆ ಪಡೆದು ಅದಕ್ಕೆ ಸ್ವತಃ ಬೇಲಿ ಕಟ್ಟಿ ಸುವರ್ಣಗೆಡ್ಡೆ, ಬಣ್ಣದ ಸೌತೆ, ಮೆಣಸಿನ ಕಾಯಿ ಹಾಕಿದ್ದರು. ಅವರ ಕಸುಬುಗಳಲ್ಲಿ ಇದೂ ಒಂದು. ದೇವಸ್ಥಾನದಲ್ಲಿ ಪೂಜೆ, ಅಲ್ಲಲ್ಲಿ ಬ್ರಾಹ್ಮಣಾರ್ಥ, ಸಾಹುಕಾರರ ಮನೆಯಲ್ಲಿ ವೆಂಕಮ್ಮನವರ ಮನೆಯವರ ಜೊತೆ ಹೋಗಿ ಅಡಿಕೆ ಸುಲಿತ, ಅಡಿಕೆ ಆರಿಸೋದು, ಒಣಗಿದ ಬಾಳೆಲೆ ಕಟ್ಟಿದ ದೊನ್ನೆ ಕುಡುಮಲ್ಲಿಗೆಯಲ್ಲಿ ಮಾರೋದು, ಬಾಳೆಕಾಯಿ ಕೊಂಡು ಮಾರಾಟ, ಪುಂಡರೀಕನ ಜೊತೆ ಸಮಯವಿದ್ದರೆ ಬಗಲಿಗೆ ಜೋಳಿಗೆ ಹಾಕಿಕೊಂಡು ಹೋಗಿ ಸಂಭಾವನೆ ಮಾಡೋದು – ಉದರ ನಿಮಿತ್ತಂ ಬಹುಕೃತ ವೇಷಂ. ನಿಮಿತ್ಯವನ್ನೂ ಹೇಳುತ್ತಾರೆ. ತನ್ನ ಉದರಂಭರಣದ ಜೊತೆ, ಯಾವ ಋಣಾನುಬಂಧದಿಂದಲೋ ಸೇರಿಕೊಂಡ ವೆಂಕಮ್ಮನ ಮನೆಯವರಿಗೆ ಸಹಾಯವೂ ಆಗಬೇಕಲ್ಲ.

ಶಾಮಭಟ್ಟರು ಹಾರೆಯಿಂದ ಮಣ್ಣನ್ನು ಅಗೆದರು. ಕಪ್ಪಾದ ಮೃದುವಾದ ಮಣ್ಣು. ಈ ಮಣ್ಣಿನ ಕತ್ತಲಿನಲ್ಲಿ ಅವಿತುಕೊಂಡಿದ್ದು ಮೊಳಕೆಯಿಡುತ್ತದೆ ಬೀಜ. ಶಾಮಭಟ್ಟರಿಗೆ ಮೃದುವಾದ ಮಣ್ಣೆಂದರೆ, ಬಲಿತ ಬೀಜವೆಂದರೆ, ಹಸಿರು ಒಂಕಿಯ ಹಾಗೆ ಮಣ್ಣಿನಿಂದ ಮೇಲೇಳುವ ಮೊಳಕೆಯೆಂದರೆ, ತಿರುಳನ್ನು ಚಿಗುರಾದ ಎಲೆಗಳ ಅವಸ್ಥೆಗೆ ಮುಟ್ಟಿಸಿ ಉದುರಿ ಹೋಗುವ ಸಿಪ್ಪೆಯೆಂದರೆ ಮೈಮರೆಸುವಂತಹ ಸುಖ. ತಾಯಿ ತಂದೆಯನ್ನು ಕಳೆದುಕೊಂಡು ತಬ್ಬಲಿಯಾಗಿ ಹೆಗಲಿಗೊಂದು ಜೋಳಿಗೆ ತೂಗುಹಾಕಿ ಹುಡುಗನಾಗಿದ್ದಾಗ ಅವರು ಕನ್ನಡಾ ಜಿಲ್ಲೆಯಿಂದ ಹೊರಟರು. ಭಾಗವತರಾಟದ ಮೇಳವೊಂದಕ್ಕೆ ಸೇರಿ ಕೊಡಂಗಿ ವೇಷ ಕಟ್ಟಿ ಒಂದಷ್ಟು ದಿನ ಕುಣಿದರು. ಅಂಗಚೇಷ್ಟೆಗಳನ್ನು ಮಾಡಿ, ಹಡೆ ಮಾತಾಡುವುದರಲ್ಲಿ ಪ್ರಸಿದ್ಧರಾಗಿ ಮೇಳದ ಜೊತೆ ಘಟ್ಟ ಹತ್ತಿ ಮಲೆನಾಡನ್ನು ಸುತ್ತುತ್ತಿದ್ದಾಗ ಪುಂಡರೀಕನ ತಂದೆ ಪ್ರವೀರಾಚಾರ್ಯನ ಭೆಟ್ಟಿಯಾಯಿತು. ಹೆಗಲಿಗೊಂದು ಜೋಳಿಗೆ ತೂಗುಹಾಕಿ ಅಡಿಕೆ ಸಂಭಾವನೆ ಮಾಡುತ್ತ – ಚಂಡೆಯ ಸದ್ದಿಗೆ ಕಿವಿ ನೆಟ್ಟಗಾಗಲು ಕಾಡೆನ್ನದೆ ಕಣಿವೆಯನ್ನದೆ ಕೈಯಲ್ಲಿ ದೊಂದಿ ಹಿಡಿದು ಭಾಗವತರಾಟವನ್ನು ನೋಡಲು ಸುತ್ತುತ್ತಿದ್ದ ಪ್ರವೀರಾಚಾರ್ಯರಿಗೆ ಶಾಮಭಟ್ಟರ ಯೌವನದ ರಸಿದ ಜೀವ ಇಷ್ಟವಾಯಿತು. ಗುರುತಾದೊಡನೆಯೆ ‘ನನ್ನ ಜೊತೆ ಬಂದು ಇದ್ದು ಬಿಡಯ್ಯ’ ಎಂದರು. ಶಾಮಭಟ್ಟರು ಬಂದು ಇದ್ದುಬಿಟ್ಟರು.

ಒಂದು ದಿನ ಪ್ರವೀರಾಚಾರ್ಯರು ‘ಏನಯ್ಯ ನನ್ನ ಮಗಳು ಸೀತಕ್ಕನನ್ನು ಮದುವೆಯಾಗುತ್ತೀಯ’ ಎಂದು ಕೇಳಿದರು. ಶಾಮಭಟ್ಟರಿಗೆ ಒಂದು ಕ್ಷಣ ಗೊಂದಲಕ್ಕಿಟ್ಟು ಕೊಂಡಿತು. ಪ್ರೀತಿಯ ಋಣ, ದಾಕ್ಷಿಣ್ಯ ಮರೆತು ಮನಸ್ಸನ್ನು ಗಟ್ಟಿಮಾಡಿ ಬೇಡವೆಂದರು. ಯಾಕೋ ಸಂಸಾರ ಇಷ್ಟವಾಗಲಿಲ್ಲ – ಅಗತ್ಯವಿಲ್ಲದ ಬಂಧನ ಎನ್ನಿಸಿತು. ಈ ಮಾತು ನಡೆದದ್ದು ವೆಂಕಮ್ಮನಿಗೆ ಇವತ್ತಿಗೂ ಗೊತ್ತಿಲ್ಲ. ಶಾಮಭಟ್ಟನನ್ನು ಹೆಂಡತಿ ಅಸಡ್ಡೆಯಿಂದ ಕಂಡಾಳೆಂದು ಪ್ರವೀರಾಚಾರ್ಯರು ಹೇಳಲಿಲ್ಲ. ದೇವರ ದಯದಿಂದ ಇಬ್ಬರ ನಡುವಿನ ಸ್ನೇಹಕ್ಕೂ ಇದು ಅಡ್ಡಿ ತರಲಿಲ್ಲ. ಹೀಗಿರುವುದು ಪ್ರಾಯಶಃ ಗಂಡಸಿಗೆ ಮಾತ್ರ ಸಾಧ್ಯ. ವಯಸ್ಸಿನಲ್ಲಿ ಎಷ್ಟು ಅಂತರವಿದ್ದರೂ ಅದು ವಿಚಿತ್ರವಾದ ಸ್ನೇಹ. ಒಟ್ಟಿಗೇ ಸಂಭಾವನೆಗೆ ಅಲೆದಾಡುವುದು, ತಾಳಮದ್ದಳೆಯ ಕಛೇರಿಗಳನ್ನು ನಡೆಸುವಾಗ ಪದಕ್ಕೆ ಅರ್ಥ ಹೇಳುವುದು. ಪ್ರವೀರಾಚಾರ್ಯರು ದುರ್ಯೋಧನನ ಪಕ್ಷ ವಹಿಸಿ ಮಾತಾಡಿದರೆ ಶಾಮಭಟ್ಟರು ಕೃಷ್ಣನ ಪಕ್ಷ ವಹಿಸುವುದು, ವಾಗ್ವಾದವನ್ನು ಬಿರುಸಿನಿಂದ ನಡೆಸಿ ಆಮೇಲೆ ಅದನ್ನು ನೆನೆದು ನಗುವುದು. ಒಟ್ಟಿಗೇ ಸೂಳೆಮನೆಗೆ ಹೋಗುವುದೂ ಕೂಡ. ಒಂದು ರೀತಿಯಿಂದ ಪ್ರವೀರಾಚಾರ್ಯರಿಗೆ ಶಾಮಭಟ್ಟ ಅಳಿಯನೇ ಆಗಬೇಕು. ಬಸುರೂರಿನ ಗಂಗೆ ಪ್ರವೀರಾಚಾರ್ಯರಿಗೆ ಒಲಿದಿದ್ದರೆ ಅವಳ ಮಗಳು ಪುಟ್ಟಿ ಶಾಮಭಟ್ಟರು ಪ್ರಸಂಗ ಮಾಡುವ ಠೀವಿ, ಅವರ ಹಡೆಮಾತಿನ ಚಮತ್ಕಾರಕ್ಕೆ ಸೋತಿದ್ದಳು.

ಕೊನೆಗೊಂದು ದಿನ ಪ್ರವೀರಾಚಾರ್ಯರು ಜೀವನದಲ್ಲಿ ಸೋತು ಸತ್ತರು. ಸಾಯುವಾಗ ಶಾಮಭಟ್ಟರ ತೊಡೆಯ ಮೇಲೆ ತಲೆಯಿತ್ತು. ವಿಷಯಶೀತ ಜ್ವರದಲ್ಲಿದ್ದಾಗ ವೆಂಕಮ್ಮ ಹತ್ತಿರ ಸುಳಿದರೆ ಸಾಕು ರೇಗುತ್ತಿದ್ದರು, ಸೀತಕ್ಕ ಪುಂಡರೀಕರೆಂದರೆ ಮಾತ್ರ ಮಮತೆ. ಅವರ ಮಾತು ನಿಂತ ಮೇಲೆ – ಆಗ ಸಂಜೆಯಾಗಿತ್ತು – ದೂರದೂರಿನಿಂದ ಚಂಡೆಯ ಧ್ವನಿ ಕೇಳಿಸುತ್ತಿರಲು ಕಣ್ಣನ್ನು ಪಿಳಿಪಿಳಿ ಬಿಡುತ್ತ ಹಾಗೇ ಸತ್ತರು. ಅವರು ಸಾಯುವಾಗ ಮನೆಯಲ್ಲೊಂದು ಬಿಡಿ ಕಾಸಿರಲಿಲ್ಲ. ಸಂಪಾದನೆಯಾದದ್ದೆಲ್ಲ ಸೂಳೆಗೆಂದು, ಆಟಕ್ಕೆಂದು, ತಿರುಗಾಟಕ್ಕೆಂದು, ಖರ್ಚಾಗುತ್ತಿತ್ತು. ಕನ್ನಡಾ ಜಿಲ್ಲೆಯಲ್ಲಿ ಪಿತ್ರಾರ್ಜಿತವಾಗಿ ಬಂದ ಮೂರೆಕೆರೆ ಗದ್ದೆಯನ್ನು ಸಹ ಗಂಗೆಯ ಹೆಸರಿಗೆ ಮಾಡಿದ್ದರು. ಮುಂದಿನ ತ್ರಯೋದಶಿ ಅವರ ಶ್ರಾದ್ಧ ಅಲ್ಲವೆ? ಯಾಕೋ ಎಲ್ಲರೂ ಅವರನ್ನು ಮರೆಯುವ ಹಾಗೆ ಕಾಣಿಸುತ್ತಿದೆ. ಯಾಕೆ…..

ಯಾಕೆ ಹೀಗೆ? ಪುಂಡರೀಕನನ್ನು ಬಿಟ್ಟು ಎಲ್ಲರೂ ಸೂಳೆಯಿಟ್ಟುಕೊಂಡವರೆ – ಶೀನಪ್ಪಯ್ಯ, ತಾನು, ಪ್ರವೀರಾಚಾರ್ಯರು. ಅಗ್ನಿ ಸಾಕ್ಷಿಯಾಗಿ ಕಟ್ಟಿಕೊಂಡ ಹೆಂಡತಿಯಲ್ಲಿ ಯಾವ ಸುಖವೂ ಕಾಣದೆ, ಇಟ್ಟುಕೊಂಡ ಸೂಳೆಯೆಂದರೆ ಮಾತ್ರ…..

ಪಾತಿಯನ್ನು ಸರಿಮಾಡಿ, ಬೇಲಿ ಸಡಿಲವಾದಲ್ಲೆಲ್ಲ ಬಳ್ಳಿಯಿಂದ ಬಿಗಿದು ಏನು ಬಿಸಿಲಪ್ಪ ಎಂದು ಶಾಮಭಟ್ಟರು ಮನೆಯ ಕಡೆ ನಡೆದರು.

* * *

ಪಾಯಸದ ಊಟ ಮಾಡಿ ವೀಳ್ಯದೆಲೆ ಮೆಲ್ಲುತ್ತ ಕೂತಾಗ ಮಾತು ಲೋಕಾಭಿರಾಮವಾಗಿ ಸಾಗಿತು. ಜೋಯಿಸರನ್ನೂ ಅವತ್ತು ಊಟಕ್ಕೆ ಕರೆದದ್ದರಿಂದ ಮಾತಿಗೊಂದು ಜನ ಸಿಕ್ಕ ಹಾಗಾಯಿತು. ತಮ್ಮ ತಲೆಮಾರುಗಳ ಸಂಬಂಧವನ್ನೆಲ್ಲ ಜಾಳಿಸಿ ನೋಡಿ ನಿಮಗೆ ಅವರು ಗೊತ್ತೊ ಇವರು ಗೊತ್ತೊ ವಿಚಾರಿಸಿದಾಗ, ನೇತ್ರಾವತಿಯ ತಂದೆಯ ಅಕ್ಕನ ಮಾವನೂ, ಶೀನಪ್ಪಯ್ಯನ ದೊಡ್ಡಪ್ಪನ ಅಳಿಯನೂ ಸಂಬಂಧಿಕರೆಂದು ಪತ್ತೆಯಾಯಿತು. ಶಾಮಭಟ್ಟರೊಬ್ಬರಿಗೇ ಹಾಗೆ ನೋಡಿದರೆ ಕರುಳುಬಳ್ಳಿ ಎಂಬುದೇ ಇಲ್ಲದಿದ್ದದ್ದು. ಅವರ ತಂದೆ, ತನ್ನ ತಂದೆಗೆ ಒಬ್ಬನೇ ಮಗ, ಇವರು ಇವರ ತಂದೆಗೆ ಒಬ್ಬನೇ ಮಗ. ಇವರ ತಾಯಿಯೂ ಪರದೇಶಿ. ತನಗೀಗ ಮಕ್ಕಳು ಮರಿಯೆ – ‘ಆಯಿತಾ ನನ್ನ ವಿಷಯವೊಂದು ಲೆಖ್ಖಕ್ಕಿಲ್ಲ ಜಮಕ್ಕಿಲ್ಲ’ ಎಂದು ಶಾಮಭಟ್ಟರು ನಗೆಯಾಡಿದರೆ, ‘ನೀವು ಲೋಕಸಂಸಾರಿಗಳು ಭಟ್ಟರೇ’ ಎಂದು ಜೋಯಿಸರು ಅವರನ್ನು ಹೊಗಳಿದರು.

ಮಾತಿಗೆ ಮಾತು ಬೆಳೆದು ಕೊನೆಗೆ ಮೆತ್ತೆ ಶೀನಪ್ಪಯ್ಯ ಶುರುಮಾಡಿದರು:

“ಏನು ಜೋಯಿಸರೆ, ನಾನು ಇಲ್ಲಿಗೆ ಬರುತ್ತೇನೆಂದು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಏನೋ ಧರ್ಮ – ಕರ್ಮ – ಸಂಯೋಗ ಕೂಡಿ ಶಾಮಭಟ್ಟರ ಒತ್ತಾಯಕ್ಕೆ ಸಿಕ್ಕಿಬಂದೆ. ಏನೋ ಶಾಸ್ತ್ರದಲ್ಲಿ ಹೇಳುತ್ತದೆ ಎನ್ನುತ್ತಾರೆ – ನಿಜವೇ ಜೋಯಿಸರೆ, ನಿಮಗೆ ಆ ವಿಷಯ ಚೆನ್ನಾಗಿ ಗೊತ್ತಿರಬೇಕು – ಮದುವೆ ಮಾಡಿಕೊಂಡು ಗೃಹಸ್ಥನಾದ ಮೇಲೆ ಪ್ರಸ್ತದ ಶಾಸ್ತ್ರವಾಗದಿದ್ದರೆ ಸದ್ಗತಿಯಿಲ್ಲವೆನ್ನುತ್ತಾರೆ. ಅಲ್ಲದೆ ಈಗ ನನಗೆ ದಾನವನ್ನು ಹಿಡಿಯುವ ಅಧಿಕಾರ ಸಹ ಇಲ್ಲವಂತೆ ಪ್ರಸ್ತವಾಗದ್ದರಿಂದ. ”

ಅಲ್ಲೊಂದು ಇಲ್ಲೊಂದು ಹಲ್ಲು ಬಿದ್ದ ಬಾಯಲ್ಲಿ ಕೃತ್ರಿಮವಾಗಿ ನಗುತ್ತ ಶೀನಪ್ಪಯ್ಯ ಆಡಿದ ಮಾತು ಕೇಳಿ ಶಾಮಭಟ್ಟರಿಗೆ ಅಸಹ್ಯವಾಯಿತು. ಜೋಯಿಸರು ತಮ್ಮ ಅಭಿಪ್ರಾಯವನ್ನು ಕೊಟ್ಟರು – ಶೀನಪ್ಪಯ್ಯ ಹೇಳಿದ್ದು ನಿಜವೆಂದು. ತನಗೊಂದು ಕೆಲಸವಾಗಬೇಕೆಂದು ಬಲು ಮೆತ್ತಗೆ ಮಾತಾಡುತ್ತಿದ್ದಾನೆ. ಹಿಂದೆ ಹುಡುಗಿಯ ಜೊತೆ ಪ್ರಸ್ತಮಾಡಿಕೊಳ್ಳಿ ಎಂದು ಪ್ರವೀರಾಚಾರ್ಯರು ಅಂಗಲಾಚಿಕೊಂಡಾಗ ಇನ್ನಷ್ಟು ಬಂಗಾರ ಹಾಕದ ಹೊರತು ನಾನೊಲ್ಲೆ ಎಂದು ಉಡಾಪಿ ಮಾತಾಡಿದ್ದ. ಹೊಟ್ಟೆಗೆ ಕವಳ ಬಿದ್ದು, ಜೀವನಾಂಶ ಕೊಡುವ ಪ್ರಮೇಯ ಬರಲಿಕ್ಕಿಲ್ಲೆಂದು ಗಟ್ಟಿಯಾದ ಮೇಲೆ ಎಷ್ಟು ಮೃದುವಾಗಿ ಮಾತಾಡುತ್ತಾನೆ. ಅವನ ಈ ಗುಣ ಇಷ್ಟರವರೆಗೆ ಪ್ರದರ್ಶಿತವಾಗುತ್ತಿದ್ದುದು ಪ್ರಾಯಶಃ ಸೂಳೆಯ ಹತ್ತಿರ ಮತ್ತು ಎಮ್ಮೆಯ ಗಿರಾಕಿಗಳ ಹತ್ತಿರ. ಈ ಲೋಕದ ಸುಖಕ್ಕೆ ಎಲ್ಲರೂ ಪ್ರಸ್ತ ಮಾಡಿಕೊಂಡೆರೆ ಇವನು ಈಗ ಪರಲೋಕದ ದೃಷ್ಟಿಯಿಂದ ಮಾಡಿಕೊಳ್ಳುತ್ತಿದ್ದಾನೆ. ಈ ಲೋಕಕ್ಕೆ ಸೂಳೆಯಾಗಬೇಕು, ಪರಲೋಕಕ್ಕೆ ಮಾತ್ರ ಹೆಂಡತಿಬೇಕು, ಚೆನ್ನಾಗಿದೆ.

ಶಾಮಭಟ್ಟರಿಗೆ ಮಾತಾಡಲು ಇಚ್ಛೆಯಾಗದೆ ನೆವ ಹೇಳಿ ಎದ್ದು ದೇವಸ್ಥಾನದ ತಂಪಾದ ಪ್ರಾಕಾರಕ್ಕೆ ಬಂದು ಕಲ್ಲಿನ ಕಂಬಕ್ಕೊರಗಿ ಕಾಲು ಚಾಚಿ ಕೂತು ಕಣ್ಣು ಮುಚಿದರು. ಮೈ ಕೈಯಲ್ಲೆಲ್ಲ ತುಂಬಾ ಆಯಾಸ. ಈ ಶೀನಪ್ಪಯ್ಯ ಮಾತ್ರ ಹಾಗೊ?……..

ಪ್ರವೀರಾಚಾರ್ಯರೂ ಅಷ್ಟೇ ಅಲ್ಲವೆ? ಎಷ್ಟು ಒಳ್ಳೆಯ ಮನುಷ್ಯ, ಎಷ್ಟು ಸಭ್ಯ, ಸ್ನೇಹಪರ – ಶೀನಪ್ಪಯ್ಯನಿಗೂ ಅವರಿಗೂ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ – ಆದರೆ ಕೈಹಿಡಿದ ಹೆಂಡತಿಯೆಂದರೆ ತನ್ನ ವಸ್ತುವಿದು ಎಂದು ಸಸಾರ. ಗಂಗೆಯ ಮನೆಗೆ ಹೋದಾಗ ಮಾತ್ರ ಏನು ಮೋಜು. ವಳ ಕೈಯಡಿಗೆ ಊಟ ಮಾಡೋದು ಬ್ರಾಹ್ಮಣನಾದ್ದರಿಂದ ನಿಷೇಧವೆಂದು ತಾವೇ ಖುದ್ದು ಅಡಿಗೆ ಮಾಡುತ್ತಿದ್ದರು. ಎಲೆಯಡಿಕೆಯನ್ನು ಅವಳು ಮಡಿಸಿಕೊಡುತ್ತಿದ್ದಾಗ ದಿಂಬಿಗೊರಗಿ ಎಷ್ಟು ಸರಸವಾಗಿ ಮಾತಾಡುತ್ತಿದ್ದರು. ಗಂಗೆಯ ಹತ್ತಿರ ತಾನೊಬ್ಬ ಮಾತ್ರ ಹೀಗಿರುವುದೆಂದು ಅವರು ಭ್ರಮಿಸಿರಲಿಲ್ಲ. ಅವರಿಗೆ ಗೊತ್ತಿತ್ತು, ಗಂಗೆಯ ಬಾಳು ಸಾಗಲು ತನ್ನ ಪ್ರೀತಿಯೊಂದು ಮಾತ್ರ ಸಾಲದೆಂದು. ಆದರೂ ಅದೆಷ್ಟು ಅವಳ ಬಗ್ಗೆ ಔದಾರ್ಯ, ಕೃತಜ್ಞತೆ, ಹೆಂಡತಿಯೆಂದರೆ ಹಕ್ಕು, ಸೂಳೆಯಾದರೋ ಹಂಗು.

ವೆಂಕಮ್ಮನ ಬಗ್ಗೆ ಯೋಚಿಸಿದರೆ ಅಯ್ಯೊ ಪಾಪ ಎನ್ನಿಸುತ್ತದೆ. ಅವರು ಪ್ರವೀರಾಚಾರ್ಯರಿಗೆ ಎರಡನೆ ಹೆಂಡತಿ. ಮೊದಲನೆಯವಳು ಬಸುರಿಯಾಗಿದ್ದಾಗ ಸತ್ತಳಂತೆ. ವೆಂಕಮ್ಮನಿಗೆ ಯಾವತ್ತೂ ಭಯ. ಹಿರೇ ಹೆಂಡತಿಯ ಜಕಣಿ ತನ್ನನ್ನ ಕಾಡುತ್ತದೆಂದು. ಹೊಳೆಯಲ್ಲಿ ಸ್ನಾನಮಾಡಿ ಬರುವಾಗ ಒಂದು ದಿನ ಅದು ಅವರನ್ನು ದಾರಿ ಕಟ್ಟಿ ಹೆದರಿಸಿತಂತೆ. ಒಂದು ಹೊಸ ಸೀರೆಯುಡುವಾಗಲೂ ವೆಂಕಮ್ಮ ಜಕಣಿ ಕಾಟಕ್ಕೆ ಹೆದರಿ ಅದನ್ನು ಇನ್ನೊಂದು ಮುತ್ತೈದೆಗೆ ಉಡಿಸಿ ಮತ್ತೆ ತಾವು ಉಡುತ್ತಿದ್ದರು. ವೆಂಕಮ್ಮನ ಸ್ವಭಾವವೋ ಯಾವತ್ತೂ ತರಳೆ ತಾಪತ್ರಯದ್ದು. ಗಂಡನ ಮುಖ ಕಂಡರೆ ಸಾಕು, ಇಲ್ಲದ ಬೇನೆಗಳನ್ನು ಸೃಷ್ಟಿಸಿ ಹೇಳುತ್ತಿದ್ದಳು. ಇಲ್ಲದ ರಗಳೆಗಳನ್ನು ಗಂಡನ ತಲೆಗೆ ಹಚ್ಚುತ್ತಿದ್ದಳು. ತಡೆಯಲಾರದೆ, ಹೆಂಡತಿಯ ಬಗ್ಗೆ ಸ್ವಲ್ಪವೂ ಸಹಾನುಭೂತಿ ತೋರಲಾರದೆ ಪ್ರವೀರಾಚಾರ್ಯರು ಕಾಲು ಕೀಳುತ್ತಿದ್ದರು ಮನೆಯಿಂದ – ಊರಲೆಯಲು, ಗಂಗೆಯ ಮನೆಯಲ್ಲಿ ಇದ್ದು ಬರಲು….

ಪಾಪದ ಹೆಂಗಸೇ ಎಂದು ವೆಂಕಮ್ಮನ ಬಗ್ಗೆ ಮರುಗುತ್ತಿದ್ದುದು ಶಾಮಭಟ್ಟರೊಬ್ಬರೆ. ಎಷ್ಟು ಮಕ್ಕಳನ್ನು ಹೊತ್ತು ಮಣ್ಣಿಗೆ ಹಾಕಿದಳು. ಸಾವಿತ್ರಿ ಭಾಗೀರಥಿ, ಹಯವದನ, ರಾಮಚಂದ್ರ – ಉಳಿದ ಮಕ್ಕಳ ಹೆಸರೂ ಮರೆತು ಹೋಗುತ್ತಿದೆ. ನಿತ್ಯ ಸತ್ತರೆ ಕಣ್ಣಿರು ಬತ್ತಿಹೋಗುತ್ತದೆ; ಮನಸ್ಸು ಕಲ್ಲಾಗುತ್ತದೆ. ಸೂಕ್ಷ್ಮವಾದ ಭಾವನೆಗಳೆಲ್ಲ ಜಡ್ಡುಗಟ್ಟುತ್ತವೆ. ಹಯವದನನಿರಬೇಕು – ಜ್ವರ ಬಂದಿತ್ತು ಮಗುವಿಗೆ – ಬೆಳಗ್ಗೆ ಎದ್ದು ನೋಡುವಾಗ ತಾಯಿಯ ತೋಳಿನಲ್ಲಿ ಸತ್ತಿದ್ದ. ಆಗ ಪ್ರವೀರಾಚಾರ್ಯರು ಮನೆಯಲ್ಲಿರಲಿಲ್ಲ. ಹಿರೇ ಹೆಂಡತಿ ಜಕಣಿಯಾಗಿ ಕಾಡಿ ತನ್ನ ಮಕ್ಕಳನ್ನೆಲ್ಲ ಆಹುತಿ ತೆಗೆದುಕೊಂಡಳೆಂದು ವೆಂಕಮ್ಮ ಶಪಿಸುತ್ತಿದ್ದರು. ಸೀತಕ್ಕನ ಬಾಳೂ ಹಾಗಾದ ಮೇಲೆ ಕೊನೆಗೆ ಪುಂಡರೀಕ ಹುಟ್ಟಿದ. ಹುಟ್ಟಿದ ಮಗುವನ್ನು ವೆಂಕಮ್ಮ ತೋಡಿದ ಗುಂಡಿಯಲ್ಲಿಟ್ಟು – ಈ ಮಗು ಸತ್ತಿತು ಎಂದು ತಿಳಿದುಕೊಂಡಿದೇನೆ, ಇದರ ಮೇಲೆ ಆಸೆ ಬಿಟ್ಟಿದ್ದೇನೆ. ಹೀಗಾದರೂ ಇದು ಬದುಕಿಕೊಳ್ಳಲಿ ಎಂದು – ಮುಟ್ಟಸಮಾಡಿ ಕತ್ತಿಗೆ ಹತ್ತು ಬಗೆಯ ತಾಯಿತ ಕಟ್ಟಿ, ಕಂಡ ದೇವರಿಗೆ ಹರಕೆ ಹೊತ್ತು ಆಸೆಯಿಂದ ಪುಂಡರೀಕನನ್ನು ಬೆಳೆಸಿ…..

ಶಾಮಭಟ್ಟರು ಸದ್ದಾಗಲು ಕಣ್ಣು ಬಿಟ್ಟು ನೋಡಿದರು. ಎದುರಿಗೆ ಹೂಬತ್ತಿ ಪೆಟ್ಟಿಗೆಯ ಸಹಿತ ವೆಂಕಮ್ಮ ಕೂತಿದ್ದರು. ಮಗಳ ಪ್ರಸ್ತದ ಬಗ್ಗೆ ಶಾಮಭಟ್ಟರ ಹತ್ತಿರ ಮಾತಾಡಬೇಕೆಂದು ಅವರು ಬಂದಿರಬಹುದೆಂದು ಭಟ್ಟರಿಗೆ ಹೊಳೆಯಿತು. ಆದರೆ ಆ ಬಗ್ಗೆ ಮಾತಾಡಲು ಅವರಿಗೆ ಇಷ್ಟವಿರಲಿಲ್ಲ. ವೆಂಕಮ್ಮನ ಮನಸ್ಸು ಪ್ರಸನ್ನವಾಗಿರಬಹುದು. ನೇತ್ರಾವತಿಯ ಬಗ್ಗೆ ಕೇಳಿ ನೋಡುವುದೆಂದು ಅವರು ಮೆತ್ತಗೆ ಹೇಳಿದರು :

“ಏನು ವೆಂಕಮ್ಮ, ನಿಮ್ಮ ಹತ್ತಿರ ಒಂದು ವಿಷಯ ಹೇಳಬೇಕು. ನೇತ್ರಾವತಿ ತವರಿಗೆ ಹೋಗಿ ಬಂದು ಸಮಯವಾಯಿತಲ್ಲವೆ?”

“ಅಲ್ಲ ಅವಳಿಗೆ ಇಲ್ಲಿ ಏನು ಕಡಿಮೆಯಾಗಿದೇಂತ? ನಾನೇನು ಹೊಡೆಯುತ್ತೇನ ಬಡಿಯುತ್ತೇನ? ಮತ್ತೆ ಮತ್ತೆ ತವರಿಗೆ ಹೋಗಬೇಕೆಂದು ಅವಳು ಕೂತರೆ ಜನ ಏನೆಂದುಕೋಬೇಕು? ಅತ್ತೆ ಕೆಟ್ಟವಳೂಂತ ಹೆಸರು ಕೇಳಬೇಕೆಂದಲ್ಲವೆ? ಅವಳ ತಂದೆಗೂ ಬುದ್ಧಿ ಬೇಡವ? ಕೊಟ್ಟ ಹೆಣ್ಣು ಕುಲದ ಹೊರಗೇಂತ ಗಾದೆಯೇ ಇದೆ”.

“ಹಾಗಲ್ಲ ವೆಂಕಮ್ಮ ಈಗ ನೀವೇ ನೋಡಿ. ನೀವೆಷ್ಟು ನಿಮ್ಮ ಅತ್ತೆಯ ಹತ್ತಿರ ಪಾಡು ಪಟ್ಟಿರಿ. ತವರಿಗೆ ಹೋಗಬೇಕೆಂದರೆ ಏನು ಗಲಾಟೆ?”

“ಅಲ್ಲವ? ನಿಮಗೇ ಗೊತ್ತಿರುವ ವಿಷಯವಲ್ಲವ ಭಟ್ಟರೆ? ನಮ್ಮ ಕಾಲದಲ್ಲೆಲ್ಲ ಸೊಸೆಯಂದಿರು ಹೇಳಿದ ಮಾತು ಕೇಳಿಕೊಂಡಿರುತ್ತಿದ್ದರು; ಅಂಕೆಯಲ್ಲಿರುತ್ತಿದ್ದರು”.

“ನಾನು ಹೇಳ ಹೊರಟದ್ದೇ ಬೇರೆ ವೆಂಕಮ್ಮ. ಈಗ ನಿಮ್ಮ ಸೀತಕ್ಕನೇ ಪಟ್ಟ ಪಾಡು ನೋಡಿ. ಮಗಳನ್ನು ಮನೆಗೆ ಕಳುಹಿಸಿರಿ ಎಂದರೆ ಎಷ್ಟು ರಾದ್ಧಾಂತ ಮಾಡಿದರು. ಆಗ ನಿಮ್ಮ ಹೆತ್ತ ಕರುಳು ಎಷ್ಟು ನೊಂದಿತು. ಹಾಗೆಯೇ ನಿಮ್ಮ ಸೊಸೆಯ ತಾಯಿಯೂ… ”

“ಅವರಿಗೆಲ್ಲ ಅದು ಗೊತ್ತಾಗುತ್ತದ ಭಟ್ಟರೆ? ನಾನು ಪಟ್ಟದ್ದು ದೇವರಿಗೆ ಗೊತ್ತು. ನನ್ನದೂ ಹೆತ್ತ ಕರುಳಲ್ಲವೆ? ನೇತ್ರಾವತಿಯ ಸುಖ ನೋಡಿಕೊಳ್ಳೋದು ನನಗೆ ತಿಳಿಯುವುದಿಲ್ಲವ? ಒಟ್ಟಿನಲ್ಲಿ ನನ್ನನ್ನ ಕೆಟ್ಟವಳು ಮಾಡಬೇಕೂಂತ….”

ಶಾಮಭಟ್ಟರಿಗೆ ಹೇಗೆ ಮಾತಾಡಬೇಕೆಂದು ತಿಳಿಯದೇ ಹೋಯಿತು:

“ನನ್ನ ಮಾತನ್ನು ಸ್ವಲ್ಪ ಕೇಳಿಸಿಕೊಳ್ಳಿ ವೆಂಕಮ್ಮ. ಸಂಸಾರದಲ್ಲಿ ಏನೇನು ನಡೆಯಿತೂಂತ ನಿಮಗೇ ಗೊತ್ತು. ಶೀನಪ್ಪಯ್ಯ ಸೂಳೆಯ ಮಾತು ಕೇಳಿ ಸೀತಕ್ಕನ ಪೀಡಿಸಿದ. ನಿಮ್ಮ ಯಜಮಾನರೂ ಏನು ಮಾಡಿದರೂಂತ ನಾನು ಹೇಳಬೇಕಿಲ್ಲ. ನೀವೇನೇನು ಅನುಭವಿಸಿದಿರಿ ಅಂತ ಲೋಕಕ್ಕೆ ಗೊತ್ತು. ನೀವು ನೋಡಿದ ಹಾಗೆ ಗಂಡ ಹೆಂಡತೀನ ಪ್ರೀತಿಯಿಂದ ನಡೆಸಿಕೊಂಡುದೇ ಕಡಿಮೆ. ಪ್ರತಿ ಗಂಡನೂ ತಾಯಿಯ ಮಾತು ಕೇಳಿಯೋ, ಅಥವಾ ಸೂಳೆಯ ಮಾತು ಕೇಳಿಯೋ… ”

“ಈಗಿನ ಕಾಲದ ಹುಡುಗರಿಗೆ ಈ ವಿಷಯವೇನು ಗೊತ್ತು ಭಟ್ಟರೆ? ನಮ್ಮ ಕಾಲದಲ್ಲಿ ಹೆಂಡರು ಗಂಡಾಂತ ಅಂದರೆ ಗಡಗಡ ನಡಗ್ತ ದೂರ ನಿಲ್ಲುತ್ತಿದ್ದರು. ನಾನು ಹುಡುಗಿ ಯಾಗಿದ್ದಾಗ ಅವರ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತಾಡಿದ ನೆನಪಿಲ್ಲ ನನಗೆ. ಈಗಿನ ಕಾಲವೇ ಬೇರೆಯಾಗಿದೆ. ನೇತ್ರಾವತಿಗೆ ಗಂಡನೆಂದರೆ ಏನು ಸಲಿಗೆ – ಯಾರು ಇರಲಿ ಬಿಡಲಿ ಗಂಡನ ಹತ್ತಿರ ಮಾತಾಡುತ್ತಾಳೆ. ಅವನೋ ಹೆಂಡತಿಯ ಜೊತೆ ಒಳ್ಳೆ ಸೂಳೆಯರ ಜೊತೆ ಆಡುವ ಹಾಗೆ ಆಡುತ್ತಾನೆ. ನೀವೇ ಸ್ವಲ್ಪ ಬುದ್ಧಿ ಹೇಳಬೇಕು ಭಟ್ಟರೆ. ”

ಶಾಮಭಟ್ಟರಿಗೆ ಅಳಬೇಕೊ ನನಗೇಕೊ ತಿಳಿಯಲಿಲ್ಲ. ಈ ಹೆಂಗಸಿಗೆ ಅರ್ಥವಾಗೋದೇ ಇಲ್ಲವೆ, ವಿವೇಕವೆಂಬುದೇ ಇಲ್ಲವೆ, ಇಷ್ಟೆಲ್ಲ ಜೀವನದಲ್ಲಿ ಅನುಭವಿಸಿ ವ್ಯರ್ಥವಾಯಿತೆ?

“ಅಲ್ಲ ವೆಂಕಮ್ಮ, ನೀವು ಎಷ್ಟು ಮಕ್ಕಳನ್ನ ಹೆತ್ತಿದ್ದೀರಿ, ಮಣ್ಣಿಗೆ ಹಾಕಿದ್ದೀರಿ, ಈ ಹಳ್ಳಿಯಲ್ಲಿ ಎಷ್ಟು ಹೆರಿಗೆ ಮಾಡಿಸಿದ್ದೀರಿ. ಇಷ್ಟೆಲ್ಲ ಅನುಭವಿಸಿದ ನೀವು ಈಗ ನಿಮ್ಮ ಸ್ವಂತ ಮಗ ಸೊಸೆಯ ಪ್ರಶ್ನೆ ಬಂದಾಗ ಹೇಗೆ ನಡೆದುಕೊಳ್ಳಬೇಕು ಹೇಳಿ”.

ವೆಂಕಮ್ಮ ಕ್ಷಣ ತಬ್ಬಿಬ್ಬಾಗಿ ಹೇಳಿದರು :

“ಒಟ್ಟಿನಲ್ಲಿ ನಾನು ಕೆಟ್ಟವಳಾಗಿ ಕಾಣುತ್ತಿದ್ದೇನೆ ಭಟ್ಟರೆ. ನಾನು ಪಟ್ಟಿದ್ದು ಅನುಭವಿಸಿದ್ದು ಯಾರಿಗೂ ಲೆಖ್ಖವಿಲ್ಲ. ಹೊಟ್ಟೆಯಲ್ಲಿ ಹುಟ್ಟಿದ ಮಗನೇ ಈಗ ನನ್ನನ್ನ ಧಿಕ್ಕರಿಸಿ ನಡೀತಿದಾನೆ; ಹೆಂಡತಿ ಹೇಳಿದ ಹಾಗೆ ಕುಣೀತಾನೆ. ಅವನ ಕ್ರಾಪೇನು, ಹೆಂಡತಿಯ ಜೊತೆ ಸಿನಿಮಾಕ್ಕೆ ಹೋಗೋದೇನು? ಪೂಜೆ – ಸಂಭಾವನೆಯಿಂದ ಜೀವನ ಸಾಗಬೇಕಾದ ನಮಗೆ ಹಿಡಿಸಿದ ರೀತಿಯೇ ಅದು? ಈ ಹುಡುಗಿಗೆ ಅಷ್ಟೂ ತಿಳಿಯಕೂಡದೆ? ನಾನೊಂದು ಬುದ್ಧಿವಾದ ಹೇಳಿದರೆ ಅದು ದೊಡ್ಡ ರಾದ್ಧಾಂತವಾಗಬೇಕೆ? ಒಟ್ಟಿನಲ್ಲಿ ನಾನು ಇಷ್ಟು ದಿನ ಬದುಕಿ ಉಳಿದದ್ದು ತಪ್ಪು. ”

ಎಂದು ಗೋಳೋ ಎಂದು ವೆಂಕಮ್ಮ ಅಳಲು ಪ್ರಾರಂಭಿಸಿದರು. ಶಾಮಭಟ್ಟರು ತನ್ನ ಕೈಯಿಂದ ಆಗುವ ವಿಷಯವಲ್ಲವಿದು ಎಂದು ದೇವಸ್ಥಾನದಿಂದ ಎದ್ದುಹೋದರು.

* * *

ಶೀನಪ್ಪಯ್ಯ ಶನಿವಾರವೇ ಹೊರಡಬೇಕಾದ್ದರಿಂದ ಜೋಯಿಸರು ಪಂಚಾಂಗ ನೋಡಿದ ಮಾರನೇ ದಿನವೇ ಪ್ರಶಸ್ತವಾದದ್ದೆಂದು ನಿರ್ಧರಿಸಿದರು. ಶಾಮಭಟ್ಟರು ಒಲ್ಲದ ಮನಸ್ಸಿನಿಂದ ಪುಂಡರೀಕನ ಜೊತೆ ಹೋಗಿ ಗಣಹೋಮಕ್ಕೆ ಬೇಕಾದ ಪತ್ರೆ, ಕಬ್ಬು, ಬೇಳೆಗಳು, ತೋರಣಕ್ಕೆ ಮಾವಿನೆಲೆ, ಬಾಳೆಕಂಬ ಹೊಸ ವಸ್ತ್ರಗಳನ್ನೆಲ್ಲ ತಂದರು.

ಹಸೆಮಣೆಯ ಮೇಲೆ ಶೀನಪ್ಪಯ್ಯ ಮತ್ತು ಹೊಸ ಸೀರೆಯುಟ್ಟು ತಲೆತಗ್ಗಿಸಿ ಕೂತ ಸೀತಕ್ಕನನ್ನು ವೆಂಕಮ್ಮ ದೂರದಲ್ಲಿ ಕೂತು ಕಣ್ತುಂಬ ನೋಡಿದರು. ಸೀತಕ್ಕನ ದುರದೃಷ್ಟವೆಲ್ಲ ಈ ಪ್ರಸ್ತದ ಶಾಸ್ತ್ರದಿಂದಾಗಿ ಮುಗಿಯಿತು. ಮಗಳನ್ನು ಹಸೆಮಣೆಯ ಮೇಲೆ ಅಳಿಯನ ಜೊತೆ ನೋಡುವ ಭಾಗ್ಯ ಸಿಕ್ಕಿತಲ್ಲ ಎಂದು ಅವರ ಕಣ್ತುಂಬ ನೀರು ತುಂಬಿತು. ಇನ್ನು ಪುಂಡರೀಕನಿಗೊಂದು ಗಂಡುಮಗುವಾದರೆ, ಮೊಮ್ಮಗನನ್ನು ಕಣ್ಣಾರೆ ಕಂಡು ಕುಲವೃದ್ಧಿಯಾಯಿತಲ್ಲ ಎಂದು ಸಂತೋಷಪಟ್ಟು ಕಣ್ಣುಮುಚ್ಚಬಹುದು. ಸಾಹುಕಾರರ ಹೆಂಡತಿಯಿಂದಾಗಿ ಹಳ್ಳಿಯ ಎಂಟು ಹತ್ತು ಮುತ್ತೈದೆಯರು ಆರತಕ್ಷತೆಗೆ ಬಂದಿದ್ದರು. ಬಂದಿದ್ದವರೆಲ್ಲ ಮುದಿ ಮುತ್ತೈದೆ ಸೀತಕ್ಕನಿಗೆ ಪ್ರಸ್ತದ ಶುಭ ಸಂದರ್ಭದಲ್ಲಿ ರವಕೆಯ ಬಟ್ಟೆಯನ್ನು ತೊಡಿಸಿ ಹಾಡು ಹೇಳಿ ಆರತಿಯೆತ್ತಿದರು.

ಮುಟ್ಟು ನಿಂತು ಮುದಿಯಾದ ಸೀತಕ್ಕ ಅಷ್ಟಗಲ ಕುಂಕುಮವಿಟ್ಟು ತಲೆತಗ್ಗಸಿ ಮುದುಕ ಗಂಡನ ಜೊತೆ ಪ್ರಸ್ತದ ಶಾಸ್ತ್ರಕ್ಕೆ ಕೂತಿದ್ದನ್ನು ಕಂಡು ನೇತ್ರಾವತಿಗೆ ಹೊಟ್ಟೆ ಹಿಡಿಸಲಾರದಷ್ಟು ನಗು ಬಂತು. ಬಚ್ಚಲಿಗೆ ಹೋಗಿ, ಕೊಟ್ಟಿಗೆಯಲ್ಲಿ ನಿಂತು, ಮತ್ತೆ ಮತ್ತೆ ನೆವ ಮಾಡಿಕೊಂಡು ತೊಂಡೆ ಚಪ್ಪರದ ಮರೆಗೆ ನಿಂತು ತನ್ನಷ್ಟಕ್ಕೆ ತಾನು ನಗುತ್ತ, ಕೂತು ನಗುತ್ತ, ನಿಂತು ನಗುತ್ತ, ಯಾರಿಗೂ ಹೇಳಿಕೊಳ್ಳಲಾರದ ಸಂಕಟದಲ್ಲಿ ಒದ್ದಾಡುತ್ತಿದ್ದ ನೇತ್ರಾವತಿಯನ್ನ ಕಂಡು ಶಾಮಭಟ್ಟರು. “ಇದೇನು ಮಗಳೇ ನಿನ್ನ ಚೇಷ್ಟೆ?” ಎನ್ನಲು “ಅಯ್ಯೋ ಶಾಮಕಕ್ಕ ದಮ್ಮಯ್ಯ, ತಡೆಯಲಾರೆ” ಎಂದು ಮತ್ತಷ್ಟು ನಗಲು ‘ಅತ್ತೆಗೆ ಗೊತ್ತಾರೆ ಬೆನ್ನಿಗೆ ಬರೆ ಬಿದ್ದೀತು’ ಎಂದು ಹೇಳಿದರು. ಶಾಮಭಟ್ಟರು ಎಂದಿನ ಸಹಜ ಹಾಸ್ಯಭಾವದಲ್ಲಿರಲಿಲ್ಲ.

ಮಧ್ಯಾಹ್ನ ಬ್ರಾಹ್ಮಣ ಸುವಾಸಿನಿಯರಿಗೆ ಗಡದ್ದಾಗಿ ಊಟವಾಯಿತು. ಶೀನಪ್ಪಯ್ಯ ನಾಲ್ಕು ಗಿರಾಕಿಗಳನ್ನು ಗಿಟ್ಟಿಸಿದರು. ಮತ್ತೆ ಯಾವತ್ತು ಈ ಕಡೆ ಎಂದು ಕೇಳಿದ ಪ್ರಶ್ನೆಗಳಿಗೆ ಬರುತ್ತಿರುತ್ತೇನೆ ಎಂದರು. ಇವರು ಹೆಂಡತಿಯನ್ನು ಕರೆದುಕೊಂಡು ಹೋಗುವುದಿಲ್ಲವೆಂದು ಎಲ್ಲರಿಗೂ ಗೊತ್ತಿದ್ದರಿಂದ ಯಾರೂ ಆ ಬಗ್ಗೆ ಅವರನ್ನು ಕೇಳಲಿಲ್ಲ.

ಸಾಯಂಕಾಲವಾದ ಮೇಲೆ ಪುಂಡರೀಕ ನೇತ್ರಾವತಿಗಾಗಿ ಹುಡುಕಿ ನಡುಮನೆಯಲ್ಲಿದ್ದ ಅವಳಿಗೆ ಕಣ್ಣು ಸನ್ನೆ ಮಾಡಿ, ಚೆಂಬನ್ನು ತೆಗೆದುಕೊಂಡು ಮನೆಯ ಹಿಂದಿದ್ದ ಗುಡ್ಡದ ಮೇಲೆ ಹೋದ. ಅವನು ಹೋದ ಸ್ವಲ್ಪ ಹೊತ್ತಿನ ಮೇಲೆ ನೇತ್ರಾವತಿಯೂ ತಾನೊಂದು ಚೆಂಬನ್ನು ತೆಗೆದುಕೊಂಡು ಗುಡ್ಡಕ್ಕೆ ಹೋದಳು. ವೆಂಕಮ್ಮ ಸೀತಕ್ಕನನ್ನು ಕರೆದು ಕಿವಿಯಲ್ಲಿ ಹೀಗಾಯಿತೆಂದು ಹೇಳಿದರು.

* * *

ರಾತ್ರೆಯಾಯಿತು, ಹಾಸಿಗೆ ಹಾಸುವ ಸಮಯವಾಯಿತು. ವೆಂಕಮ್ಮನಿಗೆ ಚಿಂತೆ – ಇವತ್ತು ಸೀತಕ್ಕ ಯಾರ ಜೊತೆ ಮಲಗಬೇಕು? ತನ್ನ ಜೊತೆಯೋ, ಗಂಡನ ಜೊತೆಯೊ? ಶಾಸ್ತ್ರದಲ್ಲಿ ಏನು ಹೇಳುತ್ತದೊ ಗೊತ್ತಿಲ್ಲ. ಇಷ್ಟು ವಯಸ್ಸಾದ ಮೇಲೆ ಅವನ ಜೊತೆ ಮಲಗುವುದೆಂದರೇನು – ಹೆಂಗಸಿಗೆ ಋಷಿಪಂಚಮಿ ಮಾಡಿಸಿಕೊಳ್ಳುವ ವಯಸ್ಸು ಸೀತಕ್ಕನಿಗೆ ಹತ್ತಿರವಾಗಿಲ್ಲವೆ – ಇಷ್ಟರ ಮೇಲೆ ಇದು ಶಾಸ್ತ್ರಕ್ಕಾಗಿ ಮಾಡಿದ ಪ್ರಸ್ತ. ಮಂಕಾಗಿ ನಡುಮನೆಯಲ್ಲಿ ನಿಂತಿದ್ದ ಸೀತಕ್ಕ ಗಾಬರಿಪಟ್ಟು ‘ಅಮ್ಮ ನಾನು ನಿನ್ನ ಜೊತೆಯೇ ಮಲಗುವುದು’ ಎಂದಳು.

ಶಾಮಭಟ್ಟರು ನನಗೆ ಯಾಕೆ ಅದರ ಗೋಜೆಂದು ಹೊರಗಿನ ಚಾವಡಿಯಲ್ಲಿ ಹಾಸಿಕೊಂಡರು. ನಡುಮನೆಯಲ್ಲಿ ಶೀನಪ್ಪಯ್ಯನಿಗೊಂದು ಥಡಿ ಹಾಕಿದರು. ಯಥಾಪ್ರಕಾರ ರೂಮಿನಲ್ಲಿ ಪುಂಡರೀಕ ಮತ್ತು ನೇತ್ರಾವತಿ; ದೇವರ ಕೋಣೆಯಲ್ಲಿ ಸೀತಕ್ಕ ಮತ್ತು ವೆಂಕಮ್ಮ.

ದೀಪವನ್ನು ಸಣ್ಣದು ಮಾಡಿ ಮಲಗಿಯಾದ ಮೇಲೆ ಎರಡು ಮೂರು ಬೀಡಿ ಸೇದಿ ನೆಲಕ್ಕದನ್ನು ನುರಿದು ಶೀನಪ್ಪಯ್ಯ ‘ಪುಂಡರೀಕ ಪುಂಡರೀಕ’ ಎಂದು ಕೂಗಿದರು. ಮುಸುಮುಸು ನಗುತ್ತಿದ್ದ ನೇತ್ರಾವತಿ ‘ನಿಮ್ಮ ಭಾವಯ್ಯ ಕರೆಯುತ್ತಿದ್ದಾರೆ. ಎದ್ದು ಹೋಗಿ’ ಎಂದಳು. ಪುಂಡರೀಕ ಎದ್ದು ಬಂದು ಲಾಟೀನಿನ ದೀಪವನ್ನು ದೊಡ್ಡದು ಮಾಡಿ ‘ಏನು ಭಾವಯ್ಯ?’ ಅಂದ. ಮಲಗಿದ್ದಲ್ಲಿದಂಲೆ ಶೀನಪ್ಪಯ್ಯ:

“ಏನಿಲ್ಲ ಸ್ವಲ್ಪ ಅವಳನ್ನು ಕಳಿಸು. ಮಾತಾಡಬೇಕಿತ್ತು”. ಎಂದರು.

* * *

ಚಾವಡಿಯಲ್ಲಿ ಮಲಗಿದ್ದ ಶಾಮಭಟ್ಟರು, ಇವತ್ತೇಕೆ ನನಗೆ ತಲೆ ಕೆಟ್ಟ ಹಾಗಿದೆ. ನಿದ್ದೆಯೇ ಬರುತ್ತಿಲ್ಲವಲ್ಲ ಎಂದು ಎದ್ದುಕೂತರು. ಬಸರೂರಿಗೆ ಹೋಗಿ ಪುಟ್ಟಿಯ ಹತ್ತಿರ ಒಂದು ವಾರವಿದ್ದು ಬರಬೇಕೆಂದು ಅವರು ಕೂಡಿಸಿ ಇಟ್ಟುಕೊಂಡಿದ್ದ ಹಣವೆಲ್ಲ ಈ ಶೀನಪ್ಪಯ್ಯನ ಪ್ರಸ್ತದ ಶಾಸ್ತ್ರಕ್ಕೆ ಖರ್ಚಾಯಿತು. ಅದರ ಬಗ್ಗೆ ಇಷ್ಟು ಕಸಿವಿಸಿಯಾಗಬಾರದು; ಆದರೆ ಆಗಿದೆ.

ಪುಟ್ಟಿಯ ಹತ್ತಿರ ಹೋಗದಿದ್ದರೆ ಏನಾದರೂ ಮುಂಡಾಮೋಚಿ ಹೋಗುತ್ತದೆಯೆ? ತನಗೂ ಈಗ ವಯಸ್ಸಾಗುತ್ತಿದೆ. ಇನ್ನು ತೀರಾ ಪರಾಧೀನನಾಗಿ ಸಾಯದಂತೆ ನೋಡಿಕೋಬೇಕು. ಕಷ್ಟವಾದರೆ ನೇತ್ರಾವತಿ ನೋಡಿಕೊಳ್ಳುತ್ತಾಳೆ. ವೆಂಕಮ್ಮನೂ ಬಿಟ್ಟುಕೊಡುವುದಿಲ್ಲ. ಆದರೆ ತನ್ನಿಂದ ತೊಂದರೆಯಾಗಬಾರದು. ಸತ್ತ ಮೇಲೆ ಅಪರಕರ್ಮದ ವಿಧಿಗಳಿಗೆ, ವರ್ಷಾಂತಿಕ ಬೊಜ್ಜಗಳಿಗೆ, ಮೊದಲೇ ಒಂದಷ್ಟು ಹಣ ಕೂಡಿಟ್ಟು ಸಾಯಬೇಕು.

ಸಾಯುವ ಸಮಯದಲ್ಲಿ, ಮತ್ತೆ ಸತ್ತ ಮೇಲೆ ಎಲ್ಲ ವಿಧಿಗಳನ್ನೂ ಮಾಡಲು ಸ್ವಂತ ಮಗನೊಬ್ಬನಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಅಂತಹ ಯೋಚನೆ ಈವರೆಗೆ ಬರದಿದ್ದದ್ದು, ಆ ಬಗ್ಗೆ ತನಗೆ ವಿಷಾದವೇ ಆಗದಿದ್ದದ್ದು ಉಳಿದವರಿಗೆಲ್ಲರಿಗೂ ಆಶ್ಚರ್ಯ. ವೆಂಕಮ್ಮನೇ ಎಷ್ಟು ಸಾರಿ ಉಪದೇಶ ಮಾಡಲಿಲ್ಲ? ತನಗೆ ಹೆಣ್ಣಿನ ಮೇಲೆ ಹುಚ್ಚಿರಲಿಲ್ಲವೇ? ನೆನಸಿಕೊಂಡರೆ ಶಾಮಭಟ್ಟರಿಗೆ ನಗು ಬರುತ್ತದೆ. ಹೆಣ್ಣಿನ ವಾಸನೆಗೆ ಮನಸ್ಸು ರಂಗಾಗುತ್ತಿದ್ದ ಕಾಲವೊಂದಿತ್ತು. ಬಲು ಪೋಲಿ ನೀವೆಂದು ಪುಟ್ಟಿ ಗೇಲಿಮಾಡುತ್ತಿದ್ದರು. ಪುಟ್ಟಿಯಲ್ಲದೆ ಕೈಹಿಡಿದ ಹೆಂಡತಿಯಾಗಿದ್ದರೆ ತನ್ನ ಸ್ವಭಾವಕ್ಕೆ ರಂಪ ಮಾಡುತ್ತಿದ್ದಳು. ಒಂದು ದಿನ ಪುಟ್ಟಿಯೂ ತನ್ನನ್ನು ತೀರಾ ಹಚ್ಚಿಕೊಂಡು ಕೇಳಿದಳು: “ಭಟ್ಟರೇ ನಿಮ್ಮ ಜೊತೆ ನಾನು ಇದ್ದು ಬಿಡುತ್ತೇನೆ – ಎರಡು ಹೊತ್ತು ಗಂಜಿ ಕಾಣಿಸಿ ಬಿಡಿ ಸಾಕು” ಅಂತ. “ನೀನು ಈಗ ಇರುವ ಹಾಗೇ ಇದ್ದು ಬಿಡು ಹೆಣ್ಣೆ. ಅದೇ ಚೆಂದ” ಎಂದುಬಿಟ್ಟರು ಶಾಮಭಟ್ಟರು. ಯಾಕೆ? ಕಟ್ಟಿಕೊಂಡ ಒಂದು ಹೆಣ್ಣು ಬೇಕೆಂದು ಮದುವೆಯನ್ನೂ ಆಗಲಿಲ್ಲ – ಯಾಕೆ? ಪ್ರವೀರಾಚಾರ್ಯರ ಪಾಡು, ಶೀನಪ್ಪಯ್ಯನ ಮರ್ಜಿ, ತನ್ನ ಜೀವನದ ರೀತಿ ಮೂರನ್ನೂ ತೂಗಿ ನೋಡುತ್ತ ಆಕಾಶವನ್ನು ಸುಮ್ಮನೇ ದಿಟ್ಟಿಸುತ್ತ ಭಟ್ಟರು ಮಲಗಿದರು. ಮತ್ತೆ ಈ ಪುಂಡರೀಕ ಮತ್ತು ನೇತ್ರಾವತಿ… ?

* * *

ಸೀತಕ್ಕ ಬಂದು ನಿಲ್ಲಲು, “ಅಲ್ಲ ಸ್ವಲ್ಪ ಕಾಲು ಜಗಿಯುತ್ತಿದೆ, ಒತ್ತುತ್ತೀಯಾ ಎಂದು ಕರೆಸಿದೆ” ಎಂದರು ಶೀನಪ್ಪಯ್ಯ.

ಸೀತಕ್ಕನಿಗೆ ಗಂಟಲು ಒಣಗಿ ಬಂತು. ಏನೇನೋ ಅಸ್ಪಷ್ಟವಾದ ಭಾವನೆಗಳು ಬಂದು ದಿಗಿಲಾಯಿತು. ಆದರೆ ಅವರ ಕಾಲುಬುಡದಲ್ಲಿ ಕೂತು ಹೇಳಿದಂತೆ ಮಾಡಿದಳು.

* * *

ಸೀತಕ್ಕನನ್ನು ಕಳಿಸಿದ ಮೇಲೆ ವೆಂಕಮ್ಮ ತಮ್ಮ ಕಿವುಡನ್ನು ಶಪಿಸಿಕೊಳ್ಳುತ್ತ ಮಲಗಿದರು; ಪುಂಡರೀಕನ ರೂಮಿನಿಂದ ಪಿಸ ಪಿಸ ಪಿಸ ಎನ್ನುವ ಶಬ್ದ ಮಾತ್ರ ಕೇಳಿಸುತ್ತಿತ್ತು.

* * *

ಶಾಮಭಟ್ಟರು ನಿದ್ದೆಯನ್ನು ಬರೆಸಿಕೊಳ್ಳಲೆಂದು ಒಂದು ಉಪಾಯ ಹೂಡಿದರು. ತಾನು ಮತ್ತು ಪ್ರವೀರಾಚಾರ್ಯರು ಒಂದು ಪ್ರಸಂಗದಲ್ಲಿ ವಾಗ್ವಾದ ಮಾಡಿದ ಹಾಗೆ. ವಿಷಯ : ಸೂಳೆಯರು ಮತ್ತು ಹೆಂಡಂದಿರು, ಸುಖ ದುಖ ಸಾವು ನೋವು ವಿವೇಕ ಶೀನಪ್ಪಯ್ಯ ವೆಂಕಮ್ಮ, ನೇತ್ರಾವತಿ ಮತ್ತು ಪುಂಡರೀಕ, ಪರಕರ್ಮಕ್ಕೆಂದು ಹಣ ಕೂಡಿಡುವುದು, ಅಲ್ಲ ಪುಟ್ಟಿಯೆಷ್ಟು ಒಳ್ಳೆಯ ಹೆಣ್ಣೆನ್ನುತ್ತೀರಿ, ಅಂತೂ ಕೊನೆಗೂ ನಿಮ್ಮ ಅಳಿಯ ತನ್ನ ಪ್ರಸ್ತದ ಶಾಸ್ತ್ರಕ್ಕೆಂದು ನಾನು ಪುಟ್ಟಿಗಾಗಿ, ನೇತ್ರಾವತಿಗೆ ಒಂದು ಹೊಸ ಸೀರೆಯನ್ನಾದರೂ ಕೊಡಿಸಬಹುದಾಗಿದ್ದ ಹಣದಲ್ಲಿ ಈ ಮುದಿಯ….

* * *

ಪುಂಡರೀಕ ಮೆತ್ತಗೆ ಸೊಂಟಕ್ಕೆ ಸಿಗಿಸಿದ್ದ ಒಂದು ರೂಪಾಯಿಯ ಚಿಲ್ಲರೆಯನ್ನು ಬಿಚ್ಚಿ ಸದ್ದಾಗದಂತೆ ನೇತ್ರಾವತಿಗೆ ಕೊಟ್ಟ. ಪೇಟೆಯಲ್ಲಿ ಖರ್ಚು ಕಳೆದು ಉಳಿದದ್ದು. ದೇವಸ್ಥಾನದಲ್ಲಿ ಸಿಕ್ಕ ದಕ್ಷಿಣೆ ಎಂದು ಕಿವಿಯಲ್ಲಿ ಹೇಳಿದ. ನೇತ್ರಾವತಿ ಮೆತ್ತಗೆ ಪೆಟ್ಟಿಗೆಯ ಬಾಗಿಲನ್ನು ತೆರೆದು ಆ ದುಡ್ಡನ್ನು ಕರಡಿಗೆಯಲ್ಲಿಟ್ಟಳು. ‘ಒಟ್ಟೆಷ್ಟಾಗಿದೆ’ ಎಂದು ಕೇಳಿದ. ‘ಅರವತ್ತು ರೂಪಾಯಿ ಚಿಲ್ಲರೆ’ ಎಂದಳು. ‘ಅಮ್ಮನಿಗೆಲ್ಲಾದರೂ ಗೊತ್ತಾದರೆ’ ಎಂದ. ‘ಬೀಗ ಹಾಕಿ ಬೀಗದ ಕೈಯನ್ನು ಯಾವಾಗಲೂ ನನ್ನ ಜೊತೆಗೇ ಇಟ್ಟುಕೊಳ್ಳುತ್ತೇನೆ’ ಎಂದಳು.

* * *

ಏನು ಮಾತಾಡುತ್ತಿದ್ದಾಳೊ, ನನ್ನ ಮೇಲೆ ದೂರು ಹೇಳುತ್ತಿರಬೇಕು. ಇನ್ನೇನು ಎಂದು ವೆಂಕಮ್ಮ ದುಃಖಿತರಾದರು. ಗಂಡನಿಂದ ಹಾಗೆ, ಮಗನಿಂದ ಹೀಗೆ ಒಟ್ಟು ನನ್ನ ಬಾಳು ಹೀಗಾಯಿತಲ್ಲ – ಇನ್ನು ಬದುಕಬಾರದು ಸಾಯಬೇಕು ಎಂದುಕೊಂಡರು. ಕೊನೆಗೆ ಸೀತಕ್ಕನಿಗೆ ಪ್ರಸ್ತವನ್ನಾದರೂ ಮಾಡಿದಂತಾಯಿಲ್ಲ ಎಂದು ನಿಟ್ಟುಸಿರಿಟ್ಟರು. ಈ ಹಾಳು ಹುಡುಗಿಗೆ ಒಂದು ಮಗುವಾದರೂ ಆಗಿದ್ದರೆ, ಸಾಕಪ್ಪ ಈ ಬಾಳು ಎಂದು ಸಾಯಬಹುದಿತ್ತು. ಈ ಪುಣ್ಯ ನನಗೆಲ್ಲಿ, ಎಂದು ಯಾಚಿಸುತ್ತ ಸೀತಕ್ಕ ಇನ್ನೂ ಯಾಕೆ ಬರಲಿಲ್ಲ ಎಂದರು ಕಾದರು.

* * *

ಕಾಲೊತ್ತುತ್ತಿದ್ದ ಸೀತಕ್ಕನಿಗೆ, ‘ಸ್ವಲ್ಪ ಮೇಲಕ್ಕೆ ಒತ್ತು, ಇನ್ನೂ ಸ್ವಲ್ಪ ಮೇಲಕ್ಕೆ – ಹಾ’ ಎನ್ನುತ್ತ ಶೀನಪ್ಪಯ್ಯ ಸುಖಪಟ್ಟರು.

* * *

ಪ್ರವೀರಾಚಾರ್ಯರ ವಾದ ಮುಗಿದಿತ್ತು. ಈಗ ಶಾಮಭಟ್ಟರ ವಾದ:

ಈ ದ್ವಂದ್ವ ನನಗೆ ಬೇಡವೆನ್ನಿಸಿತು. ನಿಮಗೂ ಯಾಕೆ ಬೇಕಿತ್ತು ಒಂದು ಹೆಂಡತಿ – ಇದು ನನ್ನ ವಸ್ತು ಎನ್ನಿಸಿದ ಕೂಡಲೆ ಸಸಾರವಾಗುತ್ತದೆ. ಅದಕ್ಕೇ ಪುಟ್ಟಿಗೂ ಬೇಡವೆಂದೆ. ಮದುವೆಯೂ ಬೇಡವೆಂದೆ. ಯವುದನ್ನೂ ತೀರ ಹಚ್ಚಿಕೊಳ್ಳಬಾರದು – ಹಚ್ಚಿಕೊಂಡರೆ ಇದು ಹೀಗೇ ಇರಬೇಕೆಂದು ಹಠ ಹುಟ್ಟುತ್ತದೆ. ಮನಸ್ಸು ದುಃಖಕ್ಕೊಳಗಾಗುತ್ತದೆ, ಆದ್ದರಿಂದ ‘ಹೀಗುಂಟೊ? ಇರಲಿ ಬಿಡು,ಹಾಗುಂಟೋ? ಇರಲಿ ಬಿಡು’, ಎಂದು ಇದ್ದುಬಿಡೋದು ಮೇಲು – ಒಟ್ಟಿನಲ್ಲಿ ಹೇಳೋದಾದರೆ ಹೆಚ್ಚು ಹಚ್ಚಿಕೊಳ್ಳಬಾರದು – ಔದಾರ್ಯವೆಂಬುದೊಂದು ಗುಣವಿದ್ದರೆ – ಎಲ್ಲಿರುತ್ತದೆ. ಈಗ ನೋಡಿ ವೆಂಕಮ್ಮ ಎಷ್ಟು ಕಷ್ಟಪಟ್ಟೂ – ಪುಂಡರೀಕ ನೇತ್ರಾವತಿಯ ಬಗ್ಗೆ – ಮಗ ಒಂದು ಸೂಳೆಯಿಟ್ಟುಕೊಂಡು ಹೆಂಡತಿಯನ್ನು ಹೊಡೆಯುತ್ತಿದ್ದರೆ ಹೀಗೆ ರೇಗುತ್ತಿರಲಿಲ್ಲ – ಏನೆನ್ನುತ್ತೀರಿ.

* * *

“ಥೂ ನಿಮ್ಮ ಗಡ್ಡ ಚುಚ್ಚುತ್ತಿದೆ. ಯಾಕೆ ಮೈಲಿಗೆ ಮುಟ್ಟಿಸಿಕೊಂಡಿಲ್ಲ” ಎಂದು ಪುಂಡರೀಕನ ಮುಖವನ್ನು ತಳ್ಳಿ ನೇತ್ರಾವತಿ ಹೇಳಿದಳು.

“ಸೋಮವಾರ ಮಾಡಿಸಿಕೊಳ್ಳುತ್ತೇನೆಯೇ” ಎಂದು ಪುಂಡರೀಕ ನೇತ್ರಾವತಿಯನ್ನು ಎಳೆದು ತಬ್ಬಿಕೊಂಡ.

“ಮೈಲಿಗೆ ಮುಟ್ಟಿಸಿಕೊಳ್ಳುವಾಗ ನಿಮ್ಮ ಆ ಹಾಳು ಜುಟ್ಟನ್ನ ಕತ್ತರಿಸಿ ಹಾಕಿ. ಸಂಪೂರ್ಣ ಕ್ರಾಪು ಬಿಡಿ. ”

“ಅಮ್ಮನಿಗೆಂದು ಒಂದು ಚೂರು ಇರಲಿ ನೇತ್ರಾ. ಇವತ್ತೊ ನಾಳೆಯೊ ಅವಳು ಸಾಯುತ್ತಾಳೆ. ಅವಳನ್ನು ಯಾಕೆ ನೋಯಿಸಬೇಕು?”

“ನನ್ನನ್ನು ಮಾತ್ರ ಅವರು ಉರಿಸಬಹುದಲ್ಲ?”

“ಸಂಪೂರ್ಣ ಕ್ರಾಪು ಮಾಡಿಸಿದರೆ ಹೊಟ್ಟೆಪಾಡು ಹೊರೆಯೋದು ಹೇಗೆ ನೇತ್ರಾ? ಜುಟ್ಟು ಬಿಟ್ಟಿದ್ದರೆ ಮಾತ್ರ ಬ್ರಾಹ್ಮಣಾರ್ಥ ಪೌರೋಹಿತ್ಯ ಸಿಗೋದು, ಸಂಭಾವನೆಗೆ ಹೋದರೆ ಅಡಿಕೆ ಸಿಗೋದು”.

“ಈ ಹಾಳು ಬ್ರಾಹ್ಮಣಾರ್ಥ, ಸಂಭಾವನೆ ಬಿಟ್ಟು ಹೋಟೆಲಿಡಿ. ಗಣಪಯ್ಯನನ್ನ ನೋಡಿ ಬೇಕಾದರೆ”

“ಆದರೆ ಅಮ್ಮ ಏನು ಹೇಳ್ತಾಳೊ? ಶಾಮಕಕ್ಕನನ್ನ ಕೇಳಿ ನೋಡಬೇಕು ನೇತ್ರಾ”

ಎನ್ನುತ್ತ ಪುಂಡರೀಕ ಹೆಂಡತಿಯ ಚುರುಕಾದ ದೇಹದ ಮೇಲೆ ಕೈಯಾಡಿಸಿದ.

* * *

ಮತ್ತೆ ಪುಟ್ಟಿ, ಇತ್ಯಾದಿ ಹೆಂಗಸರೆಲ್ಲ ಶಾಮಭಟ್ಟರಿಗೆ ನೆನಪಾದರು. ನಿಜವಾಗಿ ನಾನೊಬ್ಬ ಪೋಲಿ, ಈ ವಯಸ್ಸಿನಲ್ಲಿ ಸಾಯುವುದರ ಬಗ್ಗೆ ಯೋಚಿಸಬೇಕು – ಆದರೆ ನನಗಿನ್ನೂ ಹೆಣ್ಣಿನ ಚಟ ಬಿಡಲಿಲ್ಲವಲ್ಲ – ಈಗ ವಟ ವಟ ಎನ್ನುತ್ತ ಮಾತಾಡುವ. ಯಾವತ್ತೂ ಯಾರನ್ನಾದರೂ ದೂರುತ್ತಿರುವ ಶೀನಪ್ಯನನ್ನೇ ತೆಗೆದುಕೊಳ್ಳುವ, ಒಟ್ಟಿನಲ್ಲಿ ಇದು ನನ್ನ ವಸ್ತು ಎನ್ನುವ ಭಾವನೆ ಬರಬಾರದು. ದ್ವಂದ್ವ ಇರಬಾರದು, ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳಬಾರದು, ಔದಾರ್ಯ ಬಹಳ ದೊಡ್ಡ ಗುಣ.

ಶಾಮಭಟ್ಟರಿಗೆ ಥಟ್ಟನೆ ಸಂಪೂರ್ಣ ಎಚ್ಚರವಾಯಿತು. ಯಾಕೊ ನೇತ್ರಾವತಿ ಪುಂಡರೀಕರ ಬಗ್ಗೆ – ಬೆಳೆಯುತ್ತಿರುವ ಚಿಗುರುತ್ತಿರುವ ಜೀವಗಳಲ್ಲವೆ ಎಂದು – ತುಂಬ ತುಂಬ ಪ್ರೀತಿ ಬಂದಿತು.

* * *

ತಾನು ಇಟ್ಟುಕೊಂಡಿದ್ದ ಸೂಳೆಗಿಂತ ಈ ಸೀತಕ್ಕ ತುಂಬ ಚಿಕ್ಕವಳಲ್ಲವೆ, ಇನ್ನೂ ಮುಟ್ಟಾಗುತ್ತಿರಬಹುದು ಇವಳು ಎಂದುಕೊಂಡು ಶೀನಪ್ಪಯ್ಯ ಮೆತ್ತಗೆ ಸೀತಕ್ಕನ ಕೈಹಿಡಿದು ಎಳೆಯಹೋದರು. ಕಾಲೊತ್ತುತ್ತಿದ್ದ ಸೀತಕ್ಕ ದಡಕ್ಕನೆ ಎದ್ದುನಿಂತಳು. ಶೀನಪ್ಪಯ್ಯ ಎದ್ದು ಕೂತು ಅವಳ ಕಾಲಿಗೆ ಕೈಹಾಕಿದರು. ಸೀತಕ್ಕನಿಗೆ ಪ್ರಾಣ ಹೋಗುವಷ್ಟು ಗಾಬರಿಯಾಗಿ ಒದ್ದುಕೊಳ್ಳುತ್ತ ಅಲ್ಲಿಂದ ನಡುಮನೆಗೆ ಓಡಿದಳು.

ಶಾಮಭಟ್ಟರಿಗೆ ಮತ್ತೆ ಕಣ್ಣು ಎಳೆಯಿತು. ನಾನು ಹೀಗೆಲ್ಲ ಯೋಚಿಸುತ್ತೇನೆಂದು ಯಾರಿಗೂ ಗೊತ್ತಿಲ್ಲ – ಶಾಮಭಟ್ಟನೆ, ಪಾಪ ಒಳ್ಳೆಯವ, ಆದರೆ ಹಡೆ ನೋಡಿ ಖರ್ಚು ಕಳೆದು ಉಳಿದ ಹಣವನ್ನು ಸೂಳೆಯ ಮೇಲೆ ಸುರಿಯುತ್ತಾನೆ – ಸ್ವಲ್ಪ ಕಚ್ಚೆ ಹರುಕ – ಆದರೆ ಯಾರಿಗೂ ಅವನಿಂದ ತೊಂದರೆಯಿಲ್ಲ ಎಂದು ಜನ ಯೋಚಿಸುತ್ತಾರಲ್ಲವೆ? – ಯೋಚಿಸಲಿ ಬಿಡು, ಎಂದು ಪ್ರಸಂಗ ಒಂದರ ಹಾಡನ್ನು ನೆನೆದುಕೊಂಡರು; ನಿದ್ದೆ ಮಾಡಿದರು.

* * *

ನೇತ್ರಾವತಿ ಸುಖದಿಂದ ನರಳಿದಳು

* * *

ವೆಂಕಮ್ಮ ಸೀತಕ್ಕ ಆಲಿಸಿದರು.

೨೩-೩-೬೨

* * *