ಬಾಯಲ್ಲಿ ಅರಳು ಹೊಟ್ಟಿದಂತೆ ಮಾತಾಡಿದರೆ ಏನು ಬಂದ ಹಾಗೆ? ಒಂಟಿ ಕಾಲಿನ ಮೇಲೆ ಕಂಬಕ್ಕೊರಗಿ ನಿಂತಿದ್ದ ನಾರಾಯಣ ನಡುಗುತ್ತಿದ್ದ – ಗಣ ಬಂದವನಂತೆ, ತಗ್ಗಿಸಿದ ಸೊಡ್ಡು ನೋಡಿ ‘ಭೇಷ್’ ಎನ್ನಬೇಕೆನಿಸಿತು ಸಂಕಪ್ಪಯ್ಯನಿಗೆ. ಅಂತೂ ಪರವಾಯಿಲ್ಲ – ಮಗ ದಾರಿಗೆ ಬಂದ. ಹುಟ್ಟಿಸಿದವನಿಗೆ ಎದುರಾಡುವಷ್ಟು ಧೈರ್ಯ ಬಂದಿತಲ್ಲವೇ? ಏನು ಮೇಲಕ್ಕೆ ಚಾಚಿದ ಕ್ರಾಪು! ಅದೇನು ಪೇಟೆಯ ಲಫಂಗನಂತೆ ಕತ್ತಿಗೆ ಸುತ್ತಿದ ಮಪ್ಲರ್! ಪ್ಯಾಶನ್ ಎಂದರೆ ಇದಯ್ಯ! ಕಿಸೆಯಲ್ಲಿ ಬೀಡಿಕಟ್ಟು ಬೆಂಕಿಪಟ್ಟಣ ಬೇರೆ ಇರಬಹುದೋ ಏನೊ!

ಸಂಕಪ್ಪಯ್ಯ ಮೂದಲಿಸುತ್ತ ಅಡಿಕೆ ಕತ್ತರಿಸಿದರು.

ಗಂಡ, ಮಗ ಎದುರುಬದಿರಾಗಿ ನಿಂತಿದ್ದನ್ನು ಅಡಿಗೆ ಮನೆಯಿಂದ ಸೀತಮ್ಮ ಹಣಿಕಿ ನೋಡಿ ಒಳಗೆ ಮತ್ತೆ ಕಾಯಿ ತುರಿಯಲು ಹೋದರು. ಅಂಗಳದಲ್ಲಿ ಸೆಂಡಿಗೆ ಒಣಹಾಕಿ ಪಡಸಾಲೆಗೆ ಬಂದ ಲಕ್ಷ್ಮಿ ನಿಂತಳು. ಅಪ್ಪನ ಕಣ್ಣಿಗೆ ಎದುರಾಗಲಾರದೆ ಕಚೀಫಿನಿಂದ ಬೆವರೊರೆಸಿಕೊಳ್ಳುತ್ತ ನಿಂತ ಅಣ್ಣನ ಒಂಟಿಕಾಲಿನ ವಿಚಿತ್ರ ಭಂಗಿ ಕಂಡು ಅಂಜಿ, ಅಡಿಗೆಮನೆಗೆ ಹೋಗಿ ‘ಏನಮ್ಮ ವಿಷಯ’ ಎಂದಳು. ಆಲಿಸುತ್ತಿದ್ದ ಸೀತಮ್ಮ ‘ಶ್’ ಎನ್ನಲು ಸುಮ್ಮನಾದಳು.

ಲಂಗದ ನಿರಿ ಹಿಡಿದೆತ್ತಿ ಓಡಿಬಂದಳು. ಶಾಂತ. ಇದೇನು ಅಪ್ಪ ಅಣ್ಣ ಎದುರು ಬದಿರು ನಿಂತ ಗಮ್ಮತ್ತು ಅರ್ಥವಾಗದೆ ಸಂಕಪ್ಪಯ್ಯನ ಹೆಗಲಿನ ಮೇಲೆ ಗಲ್ಲ ಊರಿದಳು. ಕಿವಿಯ ಹತ್ತಿರ ತುಟಿ ತಂದು ‘ಸುಣ್ಣ ತರಬೇಕೆ ಅಪ್ಪ?’ ಎಂದು ಅಣ್ಣನನ್ನು ತುಂಟ ಕಣ್ಣುಗಳಿಂದ ನೋಡಿದಳು – ಜಂಬಕ್ಕೆ ಜೇಬಲ್ಲಿ ನೋಟುಬುಕ್ಕು, ಪೆನ್ನು! ವಾರಕ್ಕೊಂದು ದಿನ ಕೈಯಲ್ಲಿ ಬ್ಯಾಟರಿ ಹಿಡಿದು ತನ್ನನ್ನು ಜೊತೆಗೆ ಕರೆದುಕೊಳ್ಳದೆ ಪೇಟೆಗೆ ಸಿನಿಮಾ ನೋಡಿ ಬರಲು ಹೋಗುವುದು ಬೇರೆ! ಆದರೆ ಅಪ್ಪ ಕಣ್ಣು ಬಿಟ್ಟರೆ ಸಾಕು – ಹೆಗೆ ಅಳುಬುರುಕ ಮುಖ ಮಾಡುತ್ತಾನೆ! ನಗಬೇಕೆನಿಸಿತು, ಆದರೆ ಅಪ್ಪನಿಗೆ ಕಾಣದಂತೆ ಗುದ್ದಿಯಾನೆಂದು ಸುಮ್ಮನಾದಳು.

* * *

ಪಡಸಾಲೆಗೆ ಕೇಳುವಂತೆ ಅಡಿಗೆ ಮನೆಯಲ್ಲಿ ಸಾಗುತ್ತಿದ್ದ ಅಮ್ಮ ಅಣ್ಣನ ಮಾತಿಗೆ ಶಾಂತ ಸಂಕಪ್ಪಯ್ಯನ ಜುಟ್ಟು ಬಿಚ್ಚುತ್ತ ಅಂದಳು. ‘ಉತ್ತರನ ಪೌರುಷ ಒಲೆ ಮುಂದೆ. ’ ಮತ್ತೆ ನಕ್ಕವಳು ಅಪ್ಪನ ಮುಖ ನೋಡಿ ಪೆಚ್ಚಾದಳು.

[‘ಅಮ್ಮ! ನಾನು ಈಗಲೇ ಹೇಳಿಬಿಡ್ತೀನಿ ಕೇಳು, ಅಪ್ಪ ಮಾಡಿದ ೨೦,೦೦೦ ರೂ. ಸಾಲಕ್ಕೆ ಅವನೇ ಮುಂಡಮೋಚಿಕೊಳ್ಳಲಿ. ಈ ಕೊಂಪೇಲಿ ಕೊಳೆಯೋಕೆ ನಾನು ಹುಟ್ಟಿಲ್ಲ. ನಿನ್ನ ಅಣ್ಣ ಶಿವಮೊಗ್ಗದಲ್ಲಿ ಹೋಟೆಲು ನಡೆಸೋಣ ಬಾ ಅಂದಿದಾನೆ. ಇಗೊ ಉಟ್ಟ ವಸ್ತ್ರದಲ್ಲೆ ಹೊರಟೇಂತ ತಿಳಿಕೊ. ಕಡಿದುಹೋಯ್ತು ನನ್ನ ನಿಮ್ಮ ಸಂಬಂಧ’]

ತನ್ನ ಮೀಸೆ ಹುರಿಮಾಡುತ್ತಿದ್ದ ಶಾಂತಳ ಕೈ ತಳ್ಳಿ ಸಂಕಪ್ಪಯ್ಯ ಎದ್ದು ನಿಂತರು. ಮೊದಲೇ ಪೆಚ್ಚಾಗಿದ್ದ ಶಾಂತ ಏನು ಮಾಡಲು ತೋಚದೆ ಬೆರಳು ಕಡಿಯುತ್ತ ಅಪ್ಪನನ್ನು ನೋಡಿದಳು.

[‘ನನ್ನ ಮೇಲೆ ಯಾಕೆ ರೇಗ್ತಿಯೋ ನಾಣಿ? ನನ್ನ ಮಾತಿಗೆ ಅವರ ಹತ್ತಿರ ಏನಾದರೂ ಬೆಲೆ ಇದೆಯ? ನಿನಗೇ ಗೊತ್ತಿದೆ. ಆ ಹಾಳು ಕಿತ್ತಲೆ ತೋಟದ ಹುಚ್ಚಿಗೆ ಸಾವಿರಗಟ್ಟಲೆ ಸುರಿದಾಯ್ತು. ಊರಿಗೆ ಊರೇ ಬೇಡವೆಂದರೂ ಕೇಳಿದರ? ತಾನುಂಟೊ ಮೂರು ಲೋಕ ಉಂಟೊ ಎಂತ ತನ್ನ ಮೂಗಿನ ನೇರಕ್ಕೆ ನೋಡುವ ಒರಟು ಅವರದು. ಆರು ವರ್ಷವಾಯ್ತು. ಒಂದು ಬೆಳೇನೂ ಸರಿಯಾಗಿ ಕೈ ಹತ್ತಲಿಲ್ಲ. ’

‘ಆ ಹಾಳು ನೆಲದಲ್ಲಿ ಕಿತ್ತಳೆ ಬೆಳೆಯಲ್ಲಾಂತ ಶಾನುಭೋಗರು ಗಿಣಿಗೆ ಹೇಳುವಂತೆ ಅಪ್ಪನಿಗೆ ಬುದ್ಧಿ ಹೇಳಲಿಲ್ಲವೇನಮ್ಮ!’

‘ನಿತ್ಯ ಒಂದೇ ಕಥೆ ಈ ಹಾಳು ಕೊಂಪೇಲಿ. ನನಗೂ ಹೆಣಗಿಹೆಣತಿ ಸಾಕಾಯ್ತು ನಾಣಿ. ಇವತ್ತು ಈ ದನಾನ ಹುಲೀ ಹಿಡಿತು, ನಾಳೆ ನಾಯೀನ ಕುರ್ಕ ಹೊತ್ತುಕೊಂಡು ಹೋಯಿತು, ಒಂದೊ ಎರಡೊ? ಕೊಗ್ಗ ಹೇಳುತ್ತಿದ್ದ, ಕಾಡಾನೆಯೊಂದು ಬೇರೆ ಬಂದು ಸೇರಿಕೊಂಡಿದೆಯಂತೆ. ಅಷ್ಟು ಸಾಲದೆಂದರೆ ಕೊಳೆ ರೋಗ, ಆ ರೋಗ, ಈ ರೋಗ, ಮಲೇರಿಯಾಂತ ಮತ್ತೆ ಸಾವಿರ. ಕೈಗೆ ಮೂರು ಕಾಸು ಹತ್ತದ ಮೇಲೆ ಇಲ್ಲೆ ಯಾಕೆ ಸಾಯಬೇಕು ಹೇಳು’

‘ಅಲ್ಲವೇನಮ್ಮ? ನಾನು ಹೇಳೋದೂ ಅದೆ. ಶಾನುಭೋಗರಿಂದಾದರೂ ಇವರು ಯಾಕೆ ಬುದ್ಧೀ ಕಲೀಬಾರದು? ಅವರ ಮಗ ಕಿಟ್ಟಣ್ಣಣಿಗೆ ನನ್ನ ಜೊತೆ ಹೋಟೆಲಿಡಲು ಒಪ್ಪಿಗೆ ಕೊಟ್ಟಿದ್ದಾರೆ. ಅವನೆ ಪುಣ್ಯಾತ್ಮ…. ’

‘ಅಷ್ಟಲ್ಲದೆ ಇನ್ನೇನು ಹೇಳು. ಯಾವ ಪಾಪಮಾಡಿ ನಾನಿವರ ಕೈ ಹಿಡಿದೆನೊ – ನೀನೇಕೆ ನನ್ನ ಹೊಟ್ಟೆಯಲ್ಲಿ ಹುಟ್ಟಿದೆಯೋ ನಾ ಬೇರೆ ಕಾಣೆ – ನನ್ನ ಅಪ್ಪಕೊಟ್ಟ ನಾಲ್ಕೆಳೆ ಅವಲಕ್ಕೀ ಸರ, ಬುಗುಡಿ, ಬಂಗಾರದ ಪಟ್ಟಿ ಉಳಿದಿದೆಯೋ ಎಂದರೆ ಅದೂ ಆ ಕಿತ್ತಳೆ ತೋಟದ ಹುಚ್ಚಿಗೆ ಬ್ಯಾಂಕು ಸೇರಿತು. ಇದ್ದಿದ್ದರೆ ಅದನ್ನಾದರೂ ಏನಾದರೂ ಮಾಡಿಕೊಂಡು ಸುಖವಾಗಿರಪ್ಪ ಎಂದು ನಿನಗೆ ಕೊಡುತ್ತಿದ್ದೆ… ’

‘ಅಷ್ಟೆಲ್ಲ ಸುಲಭವಲ್ಲಮ್ಮ. ಇದು ಪಿತ್ರಾರ್ಜಿತ ಆಸ್ತಿ. ನನಗೂ ಹಕ್ಕಿದೆ. ಗೊತ್ತಾಯ್ತು?’ ಅಪ್ಪ ತಿಳಕೊಂಡು ಮಾತಾಡಲಿ’. ]

– ಅಣ್ಣ ಆಡುವ ಮಾತಿಗೆ ಕಪಾಳಕ್ಕೆರಡು ಏರಿಸದೆ ಅಪ್ಪ ಯಾಕೆ ಸುಮ್ಮನೆ ನಿಂತಿದ್ದಾನೆಂದು ಆಶ್ಚರ್ಯದಿಂದ ದೊಡ್ಡ ಕಣ್ಣುಗಳನ್ನಗಲಿಸಿ ಶಾಂತ ಸಂಕಪ್ಪಯ್ಯನನ್ನು ನೋಡುತ್ತ ನಿಂತುಬಿಟ್ಟಳು.

‘[ಈ ಭಾಗ್ಯವೊಂದು ಸಾಲದೂಂತ – ಮದುವೆಯಾಗಿ ಆರು ತಿಂಗಳಾಗಲಿಲ್ಲ – ಲಕ್ಷ್ಮಿ ಗಂಡ ಸತ್ತು ಮತ್ತೆ ಇಲ್ಲಿಗೆ ಹಾಳು ಹಣೆ ಹೊತ್ತು ಬಂದಳು. ನಾನೂ ಹೇಳಿದೆ – ಆ ದೇವರಯ್ಯನ ಮಗನ ಕೊರಳಿಗೆ ಕಟ್ಟಬೇಡಿ ಮಗಳನ್ನ ಅಂತ. ನನ್ನ ನಿನ್ನ ಮಾತಿಗೊಂದು ಈ ಮನೇಲಿ ಬೆಲೆ ಇದ್ದರೆ ಅಲ್ವ?… ಮಗಳ ಗಂಡ ಸತ್ತಾಂತ ಸುದ್ದಿ ಕೇಳಿದಾಗಲೂ ಅಬ್ಬ! ಅವರ ಕಣ್ಣಲ್ಲಿ ಒಂದು ಹನಿ ನೀರು ಬಿತ್ತ? ಜಪ್ಪಯ್ಯ ಅನ್ನದೆ ಸೀದ ಹಾಳು ಕಿತ್ತಲೆ ತೋಟಕ್ಕೆ ಹೋದರು. ನಾನು ಹೇಳುತ್ತೀನಿ ಕೇಳು. ಇವರು ಮಾಡಿದ ಪಾಪ ಏಳೇಳು ಜನ್ಮಕ್ಕೂ ತೀರದು. ಮನೆಯವರ ಸುಖಕ್ಕೆ ಆಗದ ಬೇಸಾಯ ಯಾಕೆ ಮಾಡಬೇಕೋ, ಹೀಗೇಕೆ ಮಕ್ಕಳನ್ನು ಹುಯ್ಯಬೇಕೋ ಪರಮಾತ್ಮನೇ ಬಲ್ಲ… ’

‘ನೀನ್ಯಾಕೆ ಕಣ್ಣೀರು ಹಾಕುತ್ತಿ ಅಮ್ಮ?’]

ರಂಜದ ಹೂವಿನ ಒಣಗಿದ ಸರವನ್ನು ಕೂದಲಿನ ಸಿಕ್ಕಿನಿಂದ ಬಿಡಿಸಿಕೊಳ್ಳುತ್ತಿದ್ದ ಶಾಂತ ಕುತೂಹಲದಿಂದ ಅಪ್ಪನ ಮುಖ ಗಂಟಿಕ್ಕಿದ್ದನ್ನು ನೋಡಿದಳು. ಸಂಕಪ್ಪಯ್ಯ ಸರ್ರ‍ನೆ ಮೈಮೇಲೆ ಏರಿಬರುವವರಂತೆ ಹೋಗಿ ಬಾಗಿಲ ಬಳಿ ಕೈಕಟ್ಟಿ ನಿಂತಿದ್ದ ಕೊರಗನಿಗೆ ‘ಕೆಲಸಕ್ಕೆ ಹೋಗಬಾರದೇನೋ?’ ಎಂದು ದನಿ ಎತ್ತಿ ಗದರಿಸಿ ಪಡಸಾಲೆಯಲ್ಲಿ ಶತಪಥ ತಿರುಗಿದರು. ಮತ್ತೆ ಏನೋ ಜ್ಞಾಪಿಸಿಕೊಳ್ಳುವವರಂತೆ ನಿಂತರು.

[ಲಕ್ಷ್ಮಿಗೂ ಮಿಕ್ಕ ಹೆಂಗಸರಂತೆ ಸುಖವಾಗಿರಬೇಕೆಂಬ ಆಸೆ ಇಲ್ಲವಾಂತ ಯೋಚಿಸಿದರೆ ಕರುಳು ಹಿಂಡಿಬರುತ್ತೆ ನಾಣಿ, ಅಪ್ಪನ ಮುಖ ನೋಡಿಕೊಂಡಿದ್ದರೆ ಸಾಲದಾಂತ ಇವರು ಯೋಚಿಸಬಹುದು – ನೀನೇ ಹೇಳಿ ನೋಡಪ್ಪ ನಾಣಿ, ಅಂತೂ ನೀ ಹೋದಲ್ಲಿ ನಾನಿದೇನೆ ಅಂತ ತಿಳಕೊ. ಇವರ ಕಾಲಬುಡದಲ್ಲಿ ಕಸಕ್ಕಿಂತ ಕಡೆಯಾಗಿ ಬಿದ್ದುಕೊಂಡು ಇನ್ನು ನಾನು ಗೇಯಲಾರೆ. ನನಗೂ ನಾಕು ದಿನವಾದರೂ ಈ ಕೊಂಪೆವಾಸ ಬಿಟ್ಟು ಮಗನ ಜೊತೆ ಸುಖವಾಗಿರಬೇಕೆಂಬ ಆಸೆ ಇದೆ. ’

‘ನಾನು ನೋಡಿಕೋತೀನಮ್ಮ. ಇವರ ಒಣ ಜಬರದಸ್ತು ಇನ್ನು ನನ್ನ ಮೇಲೆ ನಡೆಯದು. ನಾನು, ಕಿಟ್ಟಣ್ಣ ಶಿವಮೊಗ್ಗದಲ್ಲಿ ನಿನ್ನ ಅಣ್ಣನ ಜೊತೆ ಹೋಟೆಲ್ಲಿಟ್ಟೆ ಸೈ. ಆಕಾಶ ತಲೇ ಮೇಲೆ ಕಳಚಿಕೊಳ್ಳಲಿ ಬೇಕಾದರೆ, ಹೆದರ್ತೀನಂತ ತಿಳಕೊಂಡಿದೀಯ?’]

ನಾರಾಯಣನ ಮಾತು ಬಂದಾಯಿತು – ಸಂಕಪ್ಪಯ್ಯ ಬಂದು ನಿಂತ ಬಿರುಸಿಗೆ. ಹಿತ್ತಲಬಾಗಿಲಿಂದ ಒಂದೊಂದೇ ಹೆಜ್ಜೆ ಹಿಂದೆ ಜಾರತೊಡಗಿದ ಅಣ್ಣನ ಪೇಚಾಟ ನೋಡಿ ಶಾಂತ ನಕ್ಕಳು. ಸೀತಮ್ಮ ಗಂಡ ನಿಂತ ಗತ್ತು ನೋಡಿ ತಲೆಬಗ್ಗಿಸಿ ಕಯಿ ಮುಗಿದ ಬರಿ ಕರಟ ತುರಿಯತೊಡಗಿದರು. ಕರ್ಕಶ ಶಬ್ದಕ್ಕೆ ಮೈ ಕೈ ಪರಚಿದಂತಾಗಲು ಹೆಂಡತಿಯ ತಲೆಬುರುಡೆ ಜಪ್ಪಬೇಕೆನಿಸುವಷ್ಟು ರೋಷವನ್ನು ಕಡಗೋಲು ಕಂಬದ ಮೇಲೆ ಕೈಯೂರಿ ಸಂಕಪ್ಪಯ್ಯ ತಡೆದುಕೊಂಡರು.

‘ನಾರಾಯಣ! ನಿಲ್ಲು’ ಎಂದರು ಎತ್ತರದ ಸ್ವರದಲ್ಲಿ. ‘ಹೋಟೆಲು ಇಡಲು ದುಡ್ಡು ಕೊಡದಿದ್ದರೆ ಏನು ಮಾಡಬೇಕೂಂತಿದಿ?’ ಎಂದು ಕಡಗೋಲಿನಿಂದ ನೆಲವನ್ನೊಂದು ಸಾರಿ ಕುಟ್ಟಿದರು.

ದಾವಾ ಹಾಕಿ ನನ್ನ ಪಾಲು ಕೇಳ್ತೇನೆ ಎಂದು ಗಂಟಲು ದಾಟದ ಯೋಚನೆಯನ್ನು ನಾರಾಯಣ ನುಂಗಿಕೊಂಡು ತಲೆತಗ್ಗಿಸಿದ.

‘ಇವರು ಗಟ್ಟಿಯಾಗಿ ಮಾತಾಡಿದರೆ ಹಂಚೇ ಹಾರಿಹೋಗುತ್ತದೊ ಏನೋ!’ ಎಂದು ಯೋಚಿಸುತ್ತಿದ್ದ ಹೆಂಡತಿಯ ಕಡೆ ತಿರುಗಿ, ಮೆತ್ತಗಾಗಿದ್ದರೂ ಸಿಟ್ಟಿಳಿಯದ ಸ್ವರದಲ್ಲಿ ಕೇಳಿದರು –

“ಲಕ್ಷ್ಮಿ ಯಾಗೇ ನಿನ್ನ ಹತ್ತಿರ ಅಪ್ಪನ ಜೊತೆ ಇದ್ದರೆ ಯಾವ ಭಾಗ್ಯ ಬಂದ ಹಾಗಾಯ್ತು ಎಂದಳಾ? ಅಥವಾ ಅದು ನಿನ್ನ ತಲೆಹರಟೆಯ? … ಹೂ ಒದರು. ”

ಬರೀ ಕರಟ ತುರಿಯುತ್ತ ಹೆಂಚಿನ ವಿಷಯ ಯೋಚಿಸುತ್ತಿದ್ದ ಸೀತಮ್ಮನ ಉರಿಸೊಡ್ಡು ನೋಡಿ ಅವನಿಗೆ ಹೆಸಿಗೆಯಾಯಿತು. ಇವಳಿಷ್ಟು ಕುರೂಪಿ, ಆದರೂ ಕೈಹಿಡಿದ ಹೆಂಡತಿಯಲ್ಲವೆ, ಇಷ್ಟಾದರೂಂತ ಬೇರೆ ಯಾವ ಹೆಂಗಸನ್ನೂ ಮೋಹಿಸಿರಲಿಲ್ಲ. ಆದರೂ ಇವಳೇ ಈಗ ಮಗನನ್ನು ಕೂಡಿಕೊಂಡು ತಿರುಗಿ ನಿಂತಳಲ್ಲ ಎಂದು ಜಿಗುಪ್ಸೆಯಲ್ಲಿ ‘ತತ್’ ಎಂದಷ್ಟೆ ಅಂದು ಪಡಸಾಲೆಗೆ ಬಂದರು. ಪಾಣಿ ಪಂಚೆಯಿಂದ ಬೆವರಿದ ಕಂಕುಳನ್ನು ಒರೆಸಿಕೊಳ್ಳುತ್ತ ವಿಪರೀತ ಮೃದುವಾದ ಸ್ವರದಲ್ಲಿ ‘ಲಕ್ಷ್ಮಿ! ಎಲ್ಲೆ ಶಾಂತ’ ಎಂದು ಕೂಗಿದರು.

* * *

ದೇವರ ಮನೆ ಹಾಯುವಾಗ ಕೇಳಿಸುವಂತೆ ಅಂದರು. ಇಲ್ಲ ಸಾಧ್ಯವಿಲ್ಲ. ಲಾಗಹಾಕಲಿ ಬೇಕಾದರೆ. ವರ್ಷದಲ್ಲಿ ಬರುವ ಅನಂತವ್ರತ, ಗೌರಿ, ಗಣೇಶ ಎಲ್ಲ ಹಬ್ಬಗಳನ್ನು ಮನೆತನದ ಮುಖ್ಯಸ್ಥರಾಗಿ ನಡೆಸುವ ಅವರು ಈಗ ಈ ಚೋಟುದ್ದದ ಹುಡುಗ, ಆಸೆಬುರುಕ ಹೆಂಡತಿ ಮಾತು ಕಟ್ಟಿಕೊಂಡು ವಂಶಪಾರಂಪರ್ಯವಾಗಿ ಗುಡ್ಡಗಳ ಜೊತೆ ಸೆಣಸಿ ಬೆಳೆಸಿದ ತೋಟ ಗದ್ದೆ ಪರಭಾರೆ ಮಾಡುವುದೆ? ಅದೂ ಶಿವಮೊಗ್ಗದಲ್ಲಿ ವೈದಿಕ ಬ್ರಾಹ್ಮಣನಿಗೆ ಅಯೋಗ್ಯವಾದ ಅನ್ನವಿಕ್ರಯಕ್ಕಾಗಿ, ಆದದ್ದಾಗಲಿ ನೋಡಿಯೇ ಬಿಡುವ!

ಸೊಂಟಕ್ಕೆ ಕತ್ತಿಸಿಗಿಸಿ ಹೊರಗೆ ಹೋಗುವಾಗ ರಂಜದ ಹೂವಾರಿಸುತ್ತ ನಿಂತಿದ್ದ ಶಾಂತ ‘ಅಪ್ಪ ನಾನೂ ನಿನ್ನ ಜೊತೆ ಬರಲ?’ ಎನ್ನುವ ಆಸೆಯಿಂದ ಮುಖ ಮಾಡಿದ್ದು ನೋಡಿ ಅವರ ಜೀವಕ್ಕಷ್ಟು ನೆಮ್ಮದಿಯೆನಿಸಿತು. ನನ್ನವರು ಎನಿಸಿಕೊಂಡ ಒಬ್ಬರೂ ಇಲ್ಲದಿದ್ದರೂ ಕೂಡ ಕಾಲಹಾಕುತ್ತೇನೆ ನಾನಿಲ್ಲಿ ಎಂದುಕೊಂಡರು. ಅದು ಶಪಥ; ಪರೀಕ್ಷೆ ಮಾಡಿ ನೋಡಲಿ ಬೇಕಾದರೆ; ಇವನು ಬೀಡಿ ಸೇದಿ ಪೇಟೆ ತಿರುಗುವ ನರಪೇತಲ, ನಾನು ಮೂರು ಗಾಡಿ ಕಟ್ಟಿಗೆ ಕಡಿದು ಒಟ್ಟಬಲ್ಲ ತಾಕತ್ತುಳ್ಳ ಬಲಿಷ್ಠ, ಹೆಸರು ತರುವ ಮಗನೇನಯ್ಯ ಈ ಭ್ರಷ್ಟ? ಹಲ್ಲು ಹಿಡಿದು ಮಾತಾಡದಿದ್ದರೆ ಇನ್ನೊಮ್ಮೆ ಕತ್ತಿಗೆ ಕೈ ಹಾಕಿ ದಬ್ಬಿಯೇ ಸೈ. ಬಾಯಿ ಮುಚ್ಚಿಕೊಂಡು ಸಹಿಸುತ್ತೇನೆಂದು ತಿಳಿದನೋ ಇವ ಎಂದುಕೊಳ್ಳುತ್ತ ಬೀಸಾಗಿ ಮನೆಯ ಹಿಂದಿನ ಗುಡ್ಡ ಹತ್ತುತ್ತ ನಡೆದರು.

ಮತ್ತಿ ಸೊಪ್ಪು ಕೊಯ್ಯುತ್ತ ನಿಂತಿದ್ದ ಲಕ್ಷ್ಮಿಯನ್ನು ಕಂಡು ನಿಂತರು. ಅದೇನು ಕೇಳಬೇಕೆಂದೆನಿಸಿತು? ‘ನೀನು ಸಕೇಶಿಯಾಗಿ ಮನೆಗೆ ಸೇರುವಂತಾದ್ದು ನನ್ನ ತಪ್ಪೆ ಲಕ್ಷ್ಮಿ?’ ಎಂದೆ? ‘ಗಂಡ ಸತ್ತರೇನು ನಿನಗೆ ಯಾವುದಕ್ಕೂ ಕಡಿಮೆಯಾಯಿತು ಎನ್ನಿಸದತೆ ನೋಡಿಕೊಳ್ಳುವ ನನ್ನಂತಹ ತಂದೆಯಿಲ್ಲವೆ?’ ಎಂದೆ, ಮಾತು ಹುಡುಕುವವರಂತೆ ಸುಮ್ಮನೆ ಅವಳ ಹಾಳು ಹಣೆ ನೋಡಿದರು. ‘ಬಿಸಿಲಲ್ಲಿ ಒಬ್ಬನೇ ಎಲ್ಲಿ ಹೊರಟಿಯೊ ಅಪ್ಪ?’ ಎಂದು ಕೇಳಿದಳೆಂದು ಸಂತೋಷವಾಯಿತು. ನಿನ್ನೆ ಅವಳು ಶಾಂತ ಸೇರಿ ಒತ್ತಾಯ ಮಾಡಿ ಮೈಗೆ ಎಣ್ಣೆ ತಿಕ್ಕಿದ್ದರು. ಬಾನಿಯಲ್ಲಿ ಕೂರಿಸಿ ನೀರು ಹಾಕಿದ್ದರು. ಎರೆದುಕೊಂಡಾದ ಮೇಲೆ ಹಾಸಿಗೆ ಹಾಸಿ ಎರಡು ಕಂಬಳಿ ಹೊದಿಸಿ ‘ಚೆನ್ನಾಗಿ ಬೆವರಲಿ ಅಪ್ಪ’ ಎಂದು ಪಕ್ಕದಲ್ಲಿ ಕೂತ ಲಕ್ಷ್ಮಿಗೆ ಏನು ಹೇಳಬೇಕೆಂದೆನಿಸಿತ್ತು? ಹೆಂಡತಿ, ಮಗ, ನೆಂಟರು, ಇಷ್ಟರು ಯಾರಿಗೂ ಹೇಳಬೇಕೆಂದು ಎನ್ನಿಸದೆ ಇರುವುದನ್ನು ಹೇಗೆ ಹೇಳುವುದು? ‘ಲಕ್ಷ್ಮಿ, ಈ ಸಾರಿ ಅಡಿಕೆ ಧಾರಣೆ ಏರಿ ೫ – ೬ ಸಾವಿರವಾದರೂ ಸಿಕ್ಕರೆ, ಕಿತ್ತಳೆ ಫಸಲೂ ಕೈಗೆ ಹತ್ತಿದರೆ, ಸಾಲ ತೀರಿಸಿ ಮನೆ ಚೊಕ್ಕಮಾಡಿ…. ’ ಅನ್ಯ ಮನಸ್ಕಳಾಗಿದ್ದರೂ ಅಪ್ಪನಿಗೆ ಪ್ರಿಯವಾಗಲೆಂದು ಹೂಗುಡುತ್ತಿದ್ದ ಲಕ್ಷ್ಮಿ ಥಟ್ಟನೆ ನಡುವೆ ಹೇಳಬೇಕೆಂದುಕೊಂಡಿದ್ದು ಎನ್ನಿಸಿತು. ಮಾತನಾಡಹೋದರೆ ಪ್ರತಿಸಾರಿಯೂ ಹಾಗೆ; ಅನ್ನಿಸಿದ್ದೊಂದು ಆಡಿದ್ದೊಂದು. ಹೃದಯದಲ್ಲಿರುವುದು ಬಾಯಿಗೆ ಬರದಂತಹ ಬಿಗಿ ಒಳಗೆ. ‘ಊಟದ ಹೊತ್ತಿಗೆ ಬರ್ತೀನಿ’ ‘ಮತ್ತಿಸೊಪ್ಪು ನೆನೆಹಾಕಿ ನೀನು ಶಾಂತ ಎರಕ್ಕೊಳ್ಳಿ. ಅಬ್ಬಿ ನೀರು ಬೇಕದರೆ ಬಿಟ್ಟು ಬರ್ತೀನಿ’ ಎಂದು ಎಡಕ್ಕೆ ತಿರುಗಿದರು. ಲಕ್ಷ್ಮಿ ‘ಬೇಡ ಅಪ್ಪ’ ಎಂದಿದ್ದಕ್ಕೆ ‘ನೀರು ಹಾಕಿಕೊಳ್ಳದಂಥ ಧಾಡಿ ಏನು ಬಡಿದಿದೆ ನಿನಗೆ?’ ಎಂದು ಗದರಿಸಿ ಉತ್ತರಕ್ಕೆ ಕಾಯದೆ ನಡೆದುಬಿಟ್ಟರು.

* * *

ಎಂಟು ವರ್ಷಗಳ ಕೆಳಗೆ ಡಿ. ಸಿ. ಸಾಹೇಬರೆ ಸ್ವತಃ ಮಲೆನಾಡಿನ ಒಬ್ಬ ಅತ್ಯುತ್ತಮ ಬೇಸಾಯಗಾರನೆಂದು ಕೊಟ್ಟ ಬೆಳ್ಳಿಯ ಪದಕವನ್ನು ಪೆಟ್ಟಿಗೆಯಿಂದ ತೆಗೆದು ‘ಲಕ್ಷ್ಮಿ, ನೀನಿದನ್ನು ಜೋಪಾನವಾಗಿಟ್ಟುಕೊ’ ಎಂದು ಕೊಟ್ಟರೆ ಹೇಗೆ? ಸಂತೋಷಪಟ್ಟಾಳು ಹುಡುಗಿ. ಶಾಂತ ಈಗ ಜೊತೆಯಲ್ಲಿದ್ದಿದ್ದರೆ ಚೆನ್ನಾಗಿತ್ತು. ಗುಡುಗುಡು ಓಡುತ್ತೋಡುತ್ತ ಹಣ್ಣೊ ಪಣ್ಣೊ ಕಿತ್ತುಕೊಳ್ಳುತ್ತ ಹರಟುತ್ತಿದ್ದಳು. ಲಕ್ಷ್ಮಿಗಿರಲಿ, ಆ ಹಸುಳೆಗೂ ಕೂಡ ಅರ್ಥವಾಗುತ್ತೆ, ಇದೇನು ದುಡ್ಡಿನ ರಾವಿಗೆ ಮಾಡೋದೆ? ಹುಚ್ಚೆದ್ದು ಕುಣಿಯುವ ಇಂದ್ರಿಯಗಳನ್ನು ‘ತೆಪ್ಪಗಿರು ನನ್ನ ಕಂಕುಳಲ್ಲಿ’ ಎಂದು ಅದುಮಿಟ್ಟ ಹಾಗೆ ಇದೂ ಒಂದು ನಿಗ್ರಹ, ಆಗ್ರಹ. ಏನು ಸಂತೋಷವಿದೆ ಕಚ್ಚೆ ಹರುಕರಿಗೆ ಗೊತ್ತೆ? ಶಿಖಂಡಿ ನರಪೇತಲಗಳು ಹೋಟೆಲಿಟ್ಟಂತಲ್ಲ. ತಿಳಕೊಳ್ಳಲಿ ಸೊಂಟದಲ್ಲಿ ದಮ್ಮಿರದ ಈ ಬೇವಸಿಗಳು. ಅಡಿಕೆ ಮಾರಿ ಬಂದ ಹಣದಲ್ಲಿ ಉಳಿದದ್ದು ಕಿತ್ತಳೆ ತೋಟಕ್ಕೆ ಹಾಕಿದರೆ ಯಾಕೆ ಈ ನೆಲದಲ್ಲೂ ಕಿತ್ತಳೆಯಾಗದು ನೋಡಿಯೇ ಬಿಡುವ! ಅದೇನು ಕೊಡಗಿನವರಿಗೆ ಮಾತ್ರ ಕಟ್ಟಿಟ್ಟ ಗಂಟೆ? ೩ – ೪ ವರ್ಷವಷ್ಟೆ ಕಷ್ಟ. ಆಮೇಲೆ ಸಾಲ ತೀರಿಸಿ ಮಿಕ್ಕ ದುಡ್ಡಲ್ಲಿ ಮನೆಯ ಹಿಂದಿನ ಕೆರೆಗೆ ಕೃಷ್ಣಭಟ್ಟರು ಹಾಕಿಸಿದಂತೆ ಪಂಪು ಹಾಕಿಸಿದರೆ ಮನೆಯ ಎಡಕ್ಕೆ ಹಾಳು ಬಿದ್ದ ಜಾಗದಲ್ಲಿ ಏನೇನು ಸಾಧ್ಯವೋ ಎಲ್ಲ ಬೆಳೆಸಬಹುದು. ಕೆರೆ ಹತ್ತಿರ ನಿಂತು ಅದಕ್ಕೆ ಲಕ್ಷ್ಮಿ ಏನೆಂದಾಳೆಂದು ಕಲ್ಪಿಸಿಕೊಳ್ಳುತ್ತ [ಬೋಳು ಹಣೆ ನೆನೆದು ಎರಕೊಳ್ಳಲೆಂದು ನೀರು ಬಿಡುವವರು] ನಾನು ಗಟ್ಟಿಮುಟ್ಟಾಗಿರುವವರೆಗೆ ಗಂಡ ಸತ್ತರೇನು ಯಾರು ಸತ್ತರೇನು ಅವಳೇಕೆ ಕೊರಗಬೇಕೆಂದು ಕೊಂಡರು; ಮತ್ತೆ ಶಾಂತ ಆರಿಸಿ ತಂದ ರಂಜದ ಹೂ ಪೋಣಿಸುತ್ತ ಲಕ್ಷ್ಮಿ ಯಾರಿಗೂ ಕಾಣದಂತೆ ಕಣ್ಣೊರಸಿ ಕೊಂಡದ್ದು ನೆನಪಾಗಲು ನೀರು ಬಿಟ್ಟವರು ಕ್ಷಣ ಉಸಿರು ಬಿಗಿ ಹಿಡಿದು ನಿಂತರು. ನೈಸರ್ಗಿಕ ಬಯಕೆ ಇರಬಹುದು. ಆದರೆ ಅವಳೂ ಯಾಕೆ ಇಲ್ಲ, ಕೆಚ್ಚಿರುವವರೆಗೂ ಹೋರಾಟ ವ್ಯರ್ಥವಲ್ಲ. ಕಿತ್ತಳೆ ತೋಟದಲ್ಲಿ ಯಾಕೆ ಹಣ್ಣಾಗದೊ ನೋಡಿಯೇ ಬಿಡುವ. ಹೋಟೆಲಿಷ್ಟು ದುಡ್ಡು ಸಂಪಾದಿಸುತ್ತಾರಂತೆ, ಸುಲಭವಂತೆ, ನನ್ನನ್ನು ನಡುಗಿಸುವ ದಮ್ಮಿದೆಯೆ ಇವರಿಗೆ?

ಚೌಡಿಬನ ಹೊಕ್ಕವರು ತಲೆಗೆ ಸುತ್ತಿದ್ದ ಪಾಣಿಪಂಚೆಯನ್ನು ಬಿಚ್ಚುತ್ತ – ನಾನಿನ್ನು ಮುಂದೆ ಲಕ್ಷ್ಮಿ ಮಾಡಿದ ಅಡಿಗೆಯನ್ನು ಉಣ್ಣುವುದೆಂದುಕೊಂಡರು. ಹೆಂಡತಿ ಮಗ ಹಾಳಾಗಿ ಹೋಗಲಿ, ಬೇಕಾದರೆ. ಜೀವವಿನ್ನೂ ಗಟ್ಟಿಯಾಗಿದೆ. ಈ ಸಾರಿ ಅಡಿಕೆ ಧಾರಣೆ ಏರಿದರೆ ಎಲ್ಲ ಸರಿಹೋದಿತು. ಆದರೆ ಎಲ್ಲಿಯಾದರೂ ಸೋದರ ಮಾವನ ಮಾತು ಕೇಳಿಕೊಂಡು ಹಿತ್ತಾಳೆ ಕಿವಿಯ ನಾರಾಯಣ ಪಾಲು ಕೇಳಲು ಕೋರ್ಟಿಗೆ ಹೋದರೆ ವಂಶದಲ್ಲಿ ಯಾರೂ ಕೋರ್ಟು ಮೆಟ್ಟಿಲು ಹತ್ತದಿದ್ದಾಗ ಈ ಗುಂಯ್ಕ ನನ್ನ ಹೆಸರು ಬೀದಿಗೆಳೆದರೆ ಎಂದು ಯೋಚಿಸುತ್ತ (ನಡಿಗೆಯ ವೇಗ ಕಡಿಮೆಯಾಗಲು) ‘ಅಬ್ಬಾಡೆ ಹೊಟ್ಟೆಯಲ್ಲಿ ಹುಟ್ಟಿದ ಮಗ, ಕೈಹಿಡಿದ ಹೆಂಡತಿಯೇ ಎದೆ ಸೆಟೆಸಿ ನಿಲ್ಲುವಂತಾಗಿ ಬಿಟ್ಟರಲ್ಲ’ ಎಂದು (ಕಾಲಿಗೆ ಹತ್ತಿಕೊಳ್ಳುತ್ತಿದ್ದ ಜಿಗುಣೆಗಳನ್ನು ಕೊಡುವುತ್ತ) ನಿಟ್ಟುಸಿರಿಟ್ಟರು. ಆದದ್ದಾಗಲಿ ನನ್ನ ಹಟವನ್ನೂ ನೋಡಿಯೇ ಬಿಡುವುದು – ಬೇಕಾದರೆ ಲಕ್ಷ್ಮಿಯನ್ನೂ ಒಂದು ಮಾತು ಕೇಳಿ ನೋಡಿ ಬಿಡುವುದು – “ಇದು ಸರಿಯೇ ಲಕ್ಷ್ಮಿ – ” ಅವಳ ಬೆಂಬಲವಿರುವ ತನಕ ಇವರ ನಾಲಗೆ ಹೇಗೆ ಉದ್ದವಾದೀತು ನೋಡಿಯೇ ಬಿಡುವ. ಸಿಗಿದು ಹಾಕಿದರೂ ಪಾಪವಿಲ್ಲ ಇಂಥವರನ್ನು….

* * *

ಕಾನಿನ ನಡುವೆ ಇದ್ದ ಅಬ್ಬರಿಯ ಅಂಚಲ್ಲಿ ನಿಂತವರಿಗೆ ಪ್ರಪಾತದ ತಳವನ್ನು ಒಮ್ಮೆ ನೋಡಬೇಕೆನಿಸಿತು. ಚಿಕ್ಕವರಾಗಿದ್ದಾಗ ಅವರಪ್ಪ ಅಲ್ಲಿಗೆ ಅವರನ್ನು ಕರೆತಂದು – ‘ಭೂಮಿ ಒಮ್ಮೊಮ್ಮೆ ಪರ್ವತಗಳ ಭಾರ ತಡೆಯಲಾರದೆ ನಡುಗುವುದಂತೆ, ಆಘ ಕುಸಿದು ಅಬ್ಬರಿಗಳಾಗುವುವಂತೆ’ ಎಂದಿದ್ದರು. ಶಾಂತಳೂ ಜೊತೆಗಿದ್ದಿದ್ದರೆ ಚೆನ್ನಾಗಿತ್ತು. ‘ಭೂಮಿಗೂ ನಡುಕ ಬರುವುದೆ ಅಪ್ಪ’ ಎಂದು ತನ್ನಂತೆ ಅವಳು ಚಕಿತಳಾಗಿ ಕೆಳಕ್ಕೆ ಕಣ್ಣಗಲಿಸಿ ನೋಡುತ್ತಿದ್ದಳು. ಜೀವಕ್ಕಷ್ಟೋ ಹಾಯೆನಿಸುತ್ತಿತ್ತು.

ಅಬ್ಬರಿಯ ತಳದಲ್ಲಿ ಕಂತಿದ್ದ ಸಂಕಪ್ಪಯ್ಯನ ಕಣ್ಣುಗಳು ಚಿಕ್ಕದಾದುವು – ದೊಡ್ಡದಾಗಿ ಅರಳಿದವು ಮತ್ತೆ ನಿಧಾನವಾಗಿ ಮುಚ್ಚಿದುವು. ಕಂಡದ್ದನ್ನು ಮೈ ತುಂಬ ತುಂಬಿಕೊಂಡು ನಡುಗಿದರು. ಮತ್ತೆ ಕಣ್ಣುತೆರೆದು ನೇರವಾಗಿ ನಿರ್ಭಯವಾಗಿ ನೋಡಿದರು. ಕೆಂಡದಂತೆ ಉರಿಯುತ್ತ ಅಬ್ಬರಿಯ ತಳದಲ್ಲಿ ಮಲಗಿದ್ದ ಹುಲಿಯೂ ಅವರನ್ನು ನೋಡಿತು. ಹೌದು ಅವರ ಹಾಗೆ ಕಣ್ಣಗಲಿಸಿ ನಿರ್ಭಯವಾಗಿ – ಯಾವ ಎಗ್ಗಿಲ್ಲದೆ, ನಿಶ್ಚಯ – ಅದು ನಿಶ್ಚಯ. ಮೈಮೇಲೆ ಆವೇಶ ಬಂದವರಂತೆ ನಿಂತು ಬಿಟ್ಟರು. ಕಿರುಚಿಕೊಳ್ಳಬೇಕೆನಿಸಲಿಲ್ಲವೇಕೆ? ಹಿಂದಕ್ಕೆ ಕಾಲು ಹಾಕಬೇಕೆನಿಸಲಿಲ್ಲವೇಕೆ? ಆಶ್ಚರ್ಯ! ಅದು ಆಶ್ಚರ್ಯ. ಯಾರ ಹತ್ತಿರವೂ ಕೊನೆಗೆ ಲಕ್ಷ್ಮಿಯ ಹತ್ತಿರವೂ ಹೇಳಬೇಕೆಂದು ಎನ್ನಿಸದ್ದೊಂದು ಏನು ತನಗೀಗ ಅನ್ನಿಸುತ್ತಿದೆ? ಏನದು ಮೈತುಂಬ ಅಬ್ಬರಿಸಿ ಹರಿಯುತ್ತಿರುವುದು? – ‘ಇದ್ದರೆ ಹುಲಿಯ ಹಾಗಿರಬೇಕೆಂದಷ್ಟೆ ಯೋಚನೆ ಅವರಿಗೆ ಸ್ಪಷ್ಟವಾಯಿತು. ಹಾಗೆಯೇ ಗಟ್ಟಿಯಾಗಿ ಅಂದು – ಅದೇಕೆ ಹಾಗೆಂದೆನೆಂದು ಆಶ್ಚರ್ಯಪಟ್ಟು ನಡೆಯತೊಡಗಿದರು.

* * *

ಮೈ ಬೆವರಲು ಎಚ್ಚರವಾಯಿತು. ಅದು ಗದ್ದೆ – ಇದು ಹಲಸು – ಕಾಲಿಗೆ ನೆಟ್ಟದ್ದು ಮುಳ್ಳು – ಎದುರು ನಿಂತದ್ದು ಶಾನುಭೋಗ. ಆದರೆ ಅವನಿಗೆ ಅಬ್ಬರಿಯಲ್ಲಿ ಒಂದು ಹುಲಿ ಕಂಡೆ ಎಂದು ಹೆಳಲಿಲ್ಲ. “ಏನು ಸಂಕಪ್ಪಯ್ಯ ತೋಟದ ಕಡೆ ಹೊರಟಿರ?” – ಸಂಕಪ್ಪಯ್ಯ ತಲೆ ಹಾಕಿದರು ಮಾತ್ರ ಶಾನಭೋಗ ನಸ್ಯದ ಡಬ್ಬಿ ತೆಗೆದದ್ದನ್ನು ನೋಡಿ ಏನೋ ಹೆಚ್ಚಿದನು ಮಾತಾಡುವುದಿರ ಬಹುದೆಂದು ನಿಂತರು ಅನ್ಯಮನಸ್ಕರಾಗಿ –

“ಚಿಕ್ಕವರ ಆಸೆಗೆ ನಾವೇಕೆ ಅಡ್ಡಿಯಾಗಬೇಕು? ನೋಡಿ ಸಂಕಪ್ಪಯ್ಯ ಯಾಕೆ ಹೇಳಬಂದೇಂದರೆ ನಮ್ಮ ಕೈಯಲ್ಲಾದರೂ ಏನಿದೆ? ಉದಾಹರಣೆಗೆ ತೆಗೆದುಕೊಳ್ಳಿ – ಲಕ್ಷ್ಮೀಗೆ ಹೀಗಾದೀತೆಂದು ನೀವು ಕನಸುಮನಸ್ಸಿನಲ್ಲೂ ಎಣಿಸಿದ್ದಿರ?”

ಅರೆ ಶಾನುಭೋಗ! ಲಕ್ಷ್ಮೀಗೆ ಏನಾದರೆ ಇವನಿಗೇಕೆ ತಲೆಹರಟೆ? ಸಂಕಪ್ಪಯ್ಯ ಹುಬ್ಬು ಗಂಟಿಕ್ಕಿದರು.

“ವಿಧಿಯ ಬರಹ ತಪ್ಪಿಸಕಾಗಲ್ಲ – ಹೋರಾಡೋದು, ಇದು ಹೀಗೆ ಆಗಬೇಕೂಂತ ತಲೆ ಚಚ್ಚಿಕೊಳ್ಳೋದು ವ್ಯರ್ಥಾಂತ ನಾನು ಅದಕ್ಕೇ ಹೇಳೋದು. ಈಗ ಕಿತ್ತಳೆ ತೋಟದ ವಿಷಯಾನೆ ತಗೊಳ್ಳಿ ಬೇಕಾದರೆ, ಸಂಕಪ್ಪಯ್ಯ. ಯಾಕೆ ಹೇಳಬಂದೆ ಅಂದರೆ ನಿಮ್ಮ ಮೈದುನ, ನನ್ನ ಮಗ ಕಿಟ್ಟ, ನಿಮ್ಮ ಮಗ ಸೇರಿ ಹೋಟೆಲು ತೆಗೆಯಬೇಕೆಂದಿದ್ದಾರಂತೆ… ಯಾಕೆ ಹೇಳಬಂದೇಂದರೆ ಈ ವ್ಯವಸಾಯದಲ್ಲಿ ಏನೂ ನಫೆ ಇಲ್ಲ. ಗುಡ್ಡಕ್ಕೆ ಸುಮ್ಮನೆ ತಲೆ ಚಚ್ಚಿಕೊಳ್ಳುವುದರ ಬದಲು ಹೋಟೆಲ್ಲಿಟ್ಟರೇ ಫಾಯಿದೆ ಹೆಚ್ಚು. ಯಾಕೆ ಹೇಳಬಂದೇಂದರೆ… ”

“ನಿಮ್ಮ ಕೆಲಸವೇನು ಹೋಗಿ ನೋಡಿಕೊಳ್ಳಿ ಶ್ಯಾನುಭೋಗರೆ – ಯಾಕೆ ಸುಮ್ಮನೆ ಹರಟ್ತೀರಿ?”

“ಅರೆ ಬ್ರಾಹ್ಮಣನ ಒರಟೆ!” ಎಂದು ಶ್ಯಾನುಭೋಗನ ಮುಖ ಕೃತಕ ನಗೆಯಿಂದ ವಿಕಾರವಾಗಿ ಮತ್ತೆ ಸಂಕಪ್ಪಯ್ಯನ ಕಣ್ಣುಗಳನ್ನು ನೋಡಿ ಪೆಚ್ಚಾಯಿತು. ಅವನು ಚೇತರಿಸಿಕೊಳ್ಳುವುದರೊಳಗೆ (ಕಕ್ಕಡದಂತಿರುವ ಹುಲಿಯ ಕಣ್ಣುಗಳನ್ನು ಧ್ಯಾನಿಸುತ್ತ) ಸಂಕಪ್ಪಯ್ಯ ಅಷ್ಟು ದೂರ ಹೋಗಿಬಿಟ್ಟಾಗಿತ್ತು.

ಸಿಪಾಯಿಯಂತೆ ಕಾಲು ಹಾಕುತ್ತ ಹೋಗುವ ಸಂಕಪ್ಪಯ್ಯನಿಗೆ ಇದ್ದಕ್ಕಿದ್ದಂತೆ ಕೆಂಪು ದಾಸವಾಳದ ಹೂವನ್ನು ಹೊರೆಗಟ್ಟಲೆ ಹೊತ್ತುಕೊಂಡು ಹೋಗಿ ದುರ್ಗಿಯ ಆರಾಧನೆ ಮಾಡಬೇಕೆನಿಸಿತು. ಖುದ್ದು – ಅಂಗಳದಗಲ ಕೆಂಪು ರಂಗವಲ್ಲಿಯ ಮಂಡಳ ಬರೆಯಬೇಕು. ಮಂಡಳದ ನಡುವೆ ಮಹಾಮಾತೆಯನ್ನು ಪ್ರತಿಷ್ಠಾಪಿಸಬೇಕು. ಪೂರ್ವದಿಕ್ಕು ಕೆಂಪಡರಿದಾಗ ಶುದ್ಧವಾಗಿ ಮಂಗಳಸ್ನಾನ ಮಾಡಿರಬೇಕು, ಕೆಂಪು ಪಟ್ಟೆ ಮಡಿಯುಟ್ಟಿರಬೇಕು, ವಿಭೂತಿ ಧರಿಸಿರಬೇಕು, ರುದ್ರಾಕ್ಷಿ ಮಣಿಸರದಿಂದ ಭೂಷಿತವಾದ ಕೊರಳಿನಿಂದ ಮಂತ್ರಘೋಷ ಮಾಡುತ್ತ ದೇವಿಯನ್ನು ಅರ್ಚಿಸಬೇಕು. ಕಾಡು ನಡುಗುವಂತೆ, ಕೂತ ನೆಲ ನಡುಗುವಂತೆ, ಪಾಪಿಗಳ, ಹೇಡಿಗಳ ಚಾಂಡಾಲ ಹೃದಯಿಗಳ ಎದೆಗುಂಡಿಗೆ ತಲ್ಲಣಗೊಳ್ಳುವಂತೆ ವೇದಘೋಷ ಮೊಳಗಬೇಕು. ಮೊಳಗಬೇಕು ತುಂಬಿ, ತುಂಬಿ, ವ್ಯಾಘ್ರವಾಹನೆಯಾಗಿ ದೇವಿ ಮಹಾಮಾತೆ ಪ್ರತ್ಯಕ್ಷವಾಗುವ ತನಕ. ಅಪ್ಪಿಕೊಂಡು ಮೈಯೆಲ್ಲ ಮುದ್ದಾಡಿ ನರರಕ್ತ ಮಾಂಸ ಎಲುಬು ಮಜ್ಜೆಯ ಸಹಿತ ತನ್ನನ್ನು ತಿನ್ನುವ ತನಕ…

ಮಡಿಲಂಗವುಟ್ಟ ಶಾಂತ ನೀಲಾಂಜನದಲ್ಲಿ ದೀಪ ಹೊತ್ತಿಸಿ ಗಂಧ ತೇಯುತ್ತ ಹತ್ತಿರ ಕೂತಿರಬೇಕು. ಸಕೇಶಿಯಾದರೆ ಏನಂತೆ? ಪೀತಾಂಬರವುಟ್ಟು ಧ್ಯಾನಲೀಲಳಾಗಿ ಲಕ್ಷ್ಮಿಯೂ ಮಗ್ಗುಲಲ್ಲಿ ಕೂತಿರಬೇಕು.

ತದೇಕಮಗ್ನರಾಗಿ ಪೂಜಿಸುತ್ತ, ಕಬ್ಬಿಣದ ಗಾಣಕ್ಕೆ, ಸಿಕ್ಕ ಕಬ್ಬಿನಂತೆ ಮೈಯನ್ನು ಹಿಂಡಿ ಪೂಜಿಸುತ್ತ, ಹಾಗೆಯೇ ಲಕ್ಷ್ಮಿಯ ಹಣೆಯ ಮೇಲೆ ಕುಂಕುಮ ಕೆಂಪಾಗಿ, ಮಿರುಗುವ ಕೆಂಪಾಗಿ, ರಕ್ತದ ಬೊಟ್ಟಿನಂತೆ ಅಚ್ಚ ಕೆಂಪಾಗಿ ನಗುತ್ತದೆ – ನಕ್ಕೇ ನಗುತ್ತದೆ. ಕಿತ್ತಳೆ ತೋಟಕ್ಕೆ ತೋಟವೆ ಕೆಂಪು ಹಣ್ಣು ತುಂಬಿ ನಿಲ್ಲುತ್ತದೆ. ಮಂತ್ರಮುಗ್ಧವಾಗಿ ಕಾಡು ಬೆಟ್ಟ ಕಣಿವೆಗಳು ಕಾಲಿಗೆ ಬಂದು ಬೀಳುತ್ತವೆ – ಬಿದ್ದೇ ಬೀಲುತ್ತವೆ – ಶಿಖಂಡಿಗಳು, ನರಪೇತಲಗಳು ಹೋಳು ಹೋಳಾಗಿ ರಕ್ತ ಕಾರುತ್ತಾರೆ.

ಬಿಕನಾಸಿಯಂತೆ, ಪೂಜೆಯ ಮಧ್ಯದಲ್ಲಿ, ಹೆಂಡತಿಯೆಲ್ಲಾದರೂ ಅಡ್ಡ ಬಂದರೆ ಅವಳ ಕೊರಳಿನ ತಾಳಿ ಹರಿದು ಮಗನ ಜೊತೆ ದಬ್ಬಿಬಿಡುತ್ತೇನೆಂದುಕೊಂಡು ತೋಟಕ್ಕಿಳಿದವರಿಗೆ ಕಣ್ಣುಕತ್ತಲೆ ಕಟ್ಟಿಬಂತು.

ಕೂದಲು ಕತ್ತರಿಸಿದ ಮುಂಡೆಯಂತಿದ್ದ ತೋಟವನ್ನು ನೋಡಿದವರ ಸುತ್ತ ಸೊನ್ನೆಗಳು ಮಿಡತೆಗಳಂತೆ ಮುತ್ತಿದವು. ಅಷ್ಟೆತ್ತರ ಹಸಿರು ಹೊತ್ತು ಬಳಕುತ್ತಿದ್ದ ಅಡಿಕೆಮರಗಳು ಹೀಗೆ ರುಬ್ಬಾರುಬ್ಬಿ ಬೇರುಸಹಿತ ಕಿತ್ತು ಯಾಕೆ ಬಿದ್ದಿವೆ? ಬಾಳೆಯ ಮರಗಳು ಯಾಕೆ ಹೀಗೆ ಕಂಗಾಲಾಗಿವೆ? ಸಿಂಗಾರದ ಹೂಗಳು, ವೀಳ್ಯದ ಬಳ್ಳಿಗಳು, ಯಾಕೆ ಹೀಗೆ ತುಳಿತಕ್ಕೆ ಸಿಕ್ಕಿ ಅಜ್ಜಿಬಜ್ಜಿಯಾಗಿವೆ? ‘ಅಮ್ಮ, ಮುಕಾಂಬಿಕಾ’ ಎಂದರು ಗಟ್ಟಿಯಾಗಿ.

“ಏ ಕರಿಯಾ ಎಲ್ಲಿ ಸತ್ತಿಯೋs?” ಎಂದು ಕೂಗಿದರು. ಉತ್ತರವಿಲ್ಲ. “ಓಹೋ! ಆನೆ ಹೊಕ್ಕು ಕೆಲಸ ಕೆಟ್ಟಿತಲ್ಲ” ಎಂದು ಅಡಿಕೆ ಮರಗಳನ್ನು ಎಡವುತ್ತ ಓಡಿದರು…

ಗೊರಕೆ ಹೊಡೆಯುತ್ತ ಅಂಗಳದಲ್ಲಿ ಕರಿಯ ಕುಡಿತದ ಅಮಲಿನಲ್ಲಿ ಬಿದ್ದಿದ್ದ. ಅವನ ತಲೆದೆಶೆಯಲ್ಲಿ ಒಡೆದ ಕೋಳಿಮೊಟ್ಟಿಗಳು, ರೊಟ್ಟಿಯ ಚೂರುಗಳು ಬಿದ್ದಿದ್ದವ. ಅಂಗಳದಲ್ಲೆಲ್ಲೂ ನಿಶ್ಚಿಂತೆಯಿಂದ ಒಗೆದಿದ್ದ ಹಲಸಿನ ಸೇಡೆಗಳು. ಬೀಜಗಳು, ಎಚ್ಚರ ತಪ್ಪಿದ ಮೇಲೆ ಎಸೆದ ಕತ್ತಿ ಇನ್ನೊಂದು ಮೂಲೆಯಲ್ಲಿ. ಗೊರಕೆ ಹೊಡೆಯುವವನ ಬಾಯಲ್ಲಿ ಸಕ್ಕರೆ ನಿದ್ರೆಯ ಸುಖವನ್ನು ವಾಸನೆ ಸಹಿತ ಹೇಳುವ ಜೊಲ್ಲು….

ಹಲಸಿನ ಸೇಡೆಯ ವಾಸನೆಗೆ ‘ವಾಂಯ್’ ಗುಡುತ್ತ ವಯ್ಯಾರದಿಂದ ಬಂದಿತು ಎಮ್ಮೆ. ಅದರ ಮೈಗೆ ಹತ್ತಿದ ಕೆಸರು ಅವರ ಬಟ್ಟೆಗೆ ಉಜ್ಜಿದ ಮೇಲೆ ಸಂಕಪ್ಪಯ್ಯನಿಗೆ ಎಚ್ಚರ. ಕೈ ಕೂಡಲೆ ಸೊಂಟದಲ್ಲಿನ ಕತ್ತಿಯ ಕಡೆ ಹೋಗಲು ಮತ್ತೊಮ್ಮೆ ತಲೆ ಗಿರ್ರ್ ಎನ್ನಿಸುವಂತೆ ಕಣ್ಣುಕತ್ತಲೆ ಕಟ್ಟಿಬಂತು. ಕ್ಷಣ ಸುಧಾರಿಸಿಕೊಂಡು ಹೆಂಡದ ಹುಳಿ ವಾಸನೆಗೆ ವಾಂತಿ ಬಂದಂತಾಗಿ ಹಿಂದಕ್ಕೆ ಹೆಜ್ಜೆ ಹಾಕಿದರು…..

* * *

ಮಧ್ಯಾಹ್ನದ ಉರಿಬಿಸಿಲಿನಲ್ಲಿ ನೆತ್ತಿಗೇರಿದ ನಿಶ್ಚಿಂತೆ. ಕತ್ತರಿಸಿ ಒಗೆದ ಅವಯವಗಳಂತಿದ್ದ ಗುಡ್ಡಗಳಲ್ಲಿ. ಮಾವು ನೇರಳೆ ಹಲಸು ದೂರ ದೂರ ಬೆಳೆದಲ್ಲಿ, ಬಿದಿರು ಹಿಂಡಲುಗಳು ಒತ್ತಾಗಿ ಬೆಳೆದಲ್ಲಿ ; ಚಾಚಿದ ನೆರಳುಗಳಲ್ಲಿ, ಬೆಂಕಿಯಲ್ಲಿ ತುಂಬಿಕೊಂಡ ಆಕಾಶದಲ್ಲಿ ನಿಶ್ಚಿಂತೆ – ತೃಪ್ತಿ. ಆಗೀಗ ಕಾಗೆಗೆ ಬಾಯಾರಿಕೆ, ಮರಕುಟುಕನ ಹಕ್ಕಿ ಮರದ ತೊಗಟೆಯಲ್ಲಿ ನೀರು ಹುಡುಕುವುದು. ಹೆಚ್ಚೆಂದರೆ ಜೀರ್ದುಂಬಿಗಳದಷ್ಟೆ ಶಬ್ದ. ಕೆಸರು ಹೊಂಡಗಳಲ್ಲಿ ಮಲಗಿದ್ದ ಎಮ್ಮೆಗಳೂ ವಾಂಯ್‌ಗುಟ್ಟವು.

ಇದು ಅಲಕ್ಷವೆ? ಅಥವಾ… ಸಂಕಪ್ಪಯ್ಯ ದಿಗ್ಭ್ರಾಂತರಾಗಿ ಯೋಚಿಸಿದರು. ಎಚ್ಚರದ, ಜೀವ ಪೀಕಲಾಟಕ್ಕೆ ಒಳಗಾಗಬೇಕಾದ ಹೊತ್ತಲ್ಲ. ನಿದ್ದೆಯ ಮೈ ಮರೆಯುವ ಹೊತ್ತಿದು. ಆಸ್ತಿಗಳ ಅಂಕುಡೊಂಕುಗಳ ವೃಥಾ ಮಾಂಸಖಂಡಗಳ, ನರಮಂಡಲಗಳ ಮತ್ತೆಂಥದೇನೋ ವಿಚಿತ್ರವಾಗಿಸುವ ಹೃದಯ, ಪಿತ್ಥಕೋಶಗಳ ಜೊತೆ ಎಗರಾಡದಿದ್ದರೆ ಮಾತ್ರ ಸಫಲತೆ, ಮೈಪರಿವೆಯಿರದ ನಿಷ್ಕ್ರಿಯತೆಯಲ್ಲಿ ಸಂಭವಿಸುವ ಸಫಲತೆ.

ಆನೆ ನುಗ್ಗುತ್ತದೋ ನುಗ್ಗಲಿ – ಭೂಮಿ ಬಾಯಿಬಿಟ್ಟು ಅಣಕಿಸುತ್ತದೊ ಅಣಕಿಸಲಿ – ಎರಡು ಕೈಗಳಲ್ಲೂ ಹೆಂಡತಿ ಮಗನ ಕತ್ತು ಹಿಚುಕಿ ಹಾಕಿಬಿಡುತ್ತೇನೆ ಎಂದುಕೊಂಡರು.

ಆದರೆ ‘ಕೆಲಸ ಕೆಟ್ಟಿತು’ ಎಂದು ಒಂದು ಮಾತು ಮಾತ್ರ ಅವರ ಮನಸ್ಸಿಗೆ ಪುನಃ ಪುನಃ ಬಂದಿತು. ಲಕ್ಷ್ಮಿ ‘ಯಾಕಪ್ಪ ಹೀಗಾಗಿದ್ದಿ?’ ಎಂದು ಕೇಳಿದರೆ ‘ಆನೆ ನುಗ್ಗಿತು=ಕೆಲಸ ಕೆಟ್ಟಿತು’ ಎಂದೆನ್ನುವೆನೆಂದುಕೊಂಡರು. ನರಹುಳವೂ ಕಾಣದ ಕಾಡಲ್ಲಿ ನಿಂತು ಹಾಗೆಯೇ ಗಟ್ಟಿಯಾಗಿ ಅಂದರು – “ಆನೆ ನುಗ್ಗಿ ಕೆಲಸ ಕೆಟ್ಟಿತೆ ಲಕ್ಷ್ಮಿ…. ”

ದಾರಿಯಲ್ಲಿ ಒಂದಷ್ಟು ಗೇರು ಹಣ್ಣನ್ನು ನೆನಪು ಮಾಡಿ ಲಕ್ಷ್ಮಿಗೆ ಇಷ್ಟವೆಂದು ಕೊಯ್ದರು. ಬಿಳಿಮಾರಳೆ ಹಣ್ಣನ್ನು ನೆನಪು ಮಾಡಿ ಶಾಂತಗೆಂದು ಕೊಯ್ಯುತ್ತ – ಆ ಶಾನುಭೋಗನಾಗಲಿ, ಅವನ ಮಗ ಕಿಟ್ಟನಾಗಲಿ, ಕೊಳಕು ಮೂತಿಯ ಹೆಂಡತಿಯಾಗಲಿ, ನರಪೇತಲ ಮಗನಾಗಲಿ, ‘ತೋಟಕ್ಕೆ ಆನೆ ಹೊಕ್ಕ ಮೇಲಾದರೂ ಬುದ್ಧಿ ಬಂತ? ನೀವಿನ್ನು ಸಾಲ ತೀರಿಸುವುದಾದರೂ ಹೌದ? ಕಿತ್ತಳೆ ತೋಟದಲ್ಲಿ ಹಣ್ಣಾದರೂ ಆದೀತ?’ ಎಂದೇನಾದರೂ ಉಪದೇಶ – ಗಿಪದೇಶ ಮಾಡಬಂದರೆ ಹಲ್ಲು ಮುರಿದು ಬಿಡುತ್ತೇನೆಂದುಕೊಂಡರು. ವಿಪರೀತ ಬಿರುಸಾಗಿ ನಡೆದದ್ದಕ್ಕೆ ಕಾಲು ಸೋಲುತ್ತಿದೆ ಎಂದುಕೊಂಡರು. ಕಣ್ಣು ಮಂಜು ಮಂಜಾದರೂ ‘ಹಾಳು ಬಿಸಿಲಷ್ಟೆ’ ಎಂದು ಪಾಣಿಪಂಚೆ ತಲೆಗೆ ಸುತ್ತಿಕೊಂಡರು. ಸಾಲದ ಹಣಕ್ಕಾಗಿ ತಗಾದೆ ಮಾಡಿದರೆ ಕೃಷ್ಣಭಟ್ಟನ ಮುಖದ ಮೇಲೆ ಉಗಿದು ಕಳಿಸುತ್ತೇನೆಂದು ಸೊಂಟದಲ್ಲಿ ನೇತಾಡುತ್ತಿದ್ದ ಕತ್ತಿಯ ಹಿಡಿಯನ್ನು ಮುಷ್ಟಿಯಿಂದ ಬಿಗಿಯಾಗಿ ಹಿಡಿದು ನಡೆದರು.

ಒಣಗಿದ ಗಂಟಲನ್ನು ಎಂಜಲು ನುಂಗಿ ಒದ್ದೆ ಮಾಡಿಕೊಳ್ಳುತ್ತ – ಹೆಂಡತಿಯನ್ನು ಕರೆದು “ನೀ ಮುಟ್ಟಿದ ನೀರು ನಾ ಕುಡಿಯಲಿಕ್ಕಿಲ್ಲ ನಡಿ ಮನೆಬಿಟ್ಟು. ಲಕ್ಷ್ಮೀ ಶಾಂತ ಇದ್ದಾರೆ, ಅನ್ನ ಬೇಯಿಸಿ ಹಾಕುತ್ತಾರೆ. ” ಎನ್ನಬೇಕೆಂದು ಮತ್ತೆ ಶಪಥ ಮಾಡಿದವರಿಗೆ ದಾರಿ ತಪ್ಪಿದೆ ಎಂದು ಗೊತ್ತಾಯಿತು. ಯಾವುದೋ ಗುಡ್ಡದಂಚಿಗೆ ಬಂದು ಕಂಗಾಲಾಗಿ ನಿಂತು, ಹೀಗೆ ಹೋಗಬೇಕಾದ ದಾರಿ, ಇಷ್ಟು ದಿನ ನಡೆದಿದ್ದರೂ ಯಾಕೆ ಮರೆತುಬಿಟ್ಟೆ ಎಂದು ನಿರ್ಬಲವಾದ ಕಾಲು ಏರಲಾರದ ಎತ್ತರವನ್ನು ನೋಡಿದರು.

‘ದಾರಿತಪ್ಪಿದೆ’ ಎಂದು ಗಟ್ಟಿಯಾಗಿ ಹೇಳಬೇಕೆನಿಸಿತು. ‘ದಾರಿ ತಪ್ಪಿದೆ’ ಎಂದು ಒಣಗಿದ ಗಂಟಲಲ್ಲಿ ಪಿಸುಗುಟ್ಟಿ ಎಡಕ್ಕಿದ್ದ ಬಿದಿರು ಹಿಂಡಿಲಿನಾಚೆಗಿನ ಮೊಟ್ಟಿನ ಕಡೆ ಕಣ್ಣು ಹಾಯಿಸಿದರು. ಕೈಯನ್ನು ಬಿಸಿಲಿಗಡ್ಡವಾಗಿ ಹಣೆಗೆ ಹಿಡಿದು, ಹುಲ್ಲು ಆಳೆತ್ತರ ಬೆಳೆದಲ್ಲಿ ಏನದು ಎಂದು ಒಣಗಿದ ಗಂಟಲನ್ನು ಎಂಜಲಿನಿಂದ ಮತ್ತೆ ಒದ್ದೆ ಮಾಡಿಕೊಳ್ಳುತ್ತ ಎರಡು ಮೂರು ಹೆಜ್ಜೆ ಇಟ್ಟರು.

ಮೆಟ್ಟಲು ತಪ್ಪಿ ಮುಗ್ಗರಿಸಿದಂತಾಯಿತು. ಪಾಣಿ ಪಂಚೆಯಿಂದ ಮುಚ್ಚಿಕೊಂಡರು.

* * *

ಲಕ್ಷ್ಮಿ ಶಾನುಭೋಗನ ಮಗ ಕಿಟ್ಟನನ್ನು ತಬ್ಬಿಕೊಂಡು ಹಾಯಾಗಿ ನೆರಳಿನಲ್ಲಿ ಮಲಗಿದ್ದಳು.

* * *

“ದಾರಿ ತಪ್ಪಿದೆನೆ?”

ಹಣತೆಯ ಬತ್ತಿಯಲ್ಲಿ ನಿಧಾನ ಬೆಳೆದು ಲಂಬವಾಗಿ ಉರಿಯುವ ದೀಪದಂತೆ ಕೆಂಪು ಚೂಪು ಮಾತು ಮನಸ್ಸಿನ ಕತ್ತಲಲ್ಲಿ ಹೊತ್ತುಕೊಂಡಿತು. ಓರೆ ಕೋರೆ ಸಂದಿಗಳಲ್ಲಿ ಮಂದವಾಗಿ ಹೆಜ್ಜೆ ಹೆಜ್ಜೆಗೂ ಹರಡಿಕೊಂಡಿತು. ಮರದ ಮೇಲಿನಿಂದ ಮಂಗಗಳು ಹಲ್ಲು ಕಿರಿದು ಅಣಕಿಸಿದವು.

ದಾರಿ ತಪ್ಪಿದೆನೆ? – ಅಬ್ಬರಿಯ ಅಂಚಲ್ಲಿ ಮತ್ತೆ ಬಂದು ನಿಂತವರು ‘ಇಲ್ಲ’ ಎಂದು ಹಲ್ಲು ಕಡಿಯುತ್ತ ಪ್ರಪಾತದ ಎದೆ ಭಣಗುಟ್ಟುವ ಶೂನ್ಯವನ್ನು ನೋಡಿದರು. ಆದರೆ ಎಡಕ್ಕೆ ತಿರುಗಿ ಕೃಷ್ಣಭಟ್ಟರ ಮನೆಗೆ ಹೋಗುವುದೆ? ಅಥವಾ ಸೀದ ಮನೆಗೆ ಹೋಗುವುದೆ? – ಕೆಂಪು ಚೂಪು ಮಾತು ಹರಡಿಕೊಳ್ಳುತ್ತಲೇ ಇತ್ತು. ಹೆಜ್ಜೆ ಸಪ್ಪಳವಾಗಲು ಮರದ ಮೇಲಿಂದ ಹಲ್ಲುಕಿರಿದ ಮಂಗನ ಮುಸುಡು ನೆನಪಾಗಿ ಬೆಚ್ಚಿ ಹಿಂದಕ್ಕೆ ತಿರುಗಿ ನೋಡಿದರು. ಅಷ್ಟೆನ್ನಿಸಿಕೊಂಡಿದ್ದು ಸಾಲದೆನ್ನುವ ಹಾಗೆ ನಿಂತಿದ್ದ ಶಾನುಭೋಗ –

“ಕೇಳಿದಿರಾ ಸಂಕಪ್ಪಯ್ಯ?”

“ಆ?”

“ಈ ಅಬ್ಬರಿಯ ಕೆಳಗೆ ನಿಶ್ಚಿಂತತೆಯಿಂದ ಹುಲಿಯೊಂದು ಮಲಗಿತ್ತಂತೆ ಮಾರಾಯರೆ. ಅದಕ್ಕೇನು ಲೋಕದ ಎಗ್ಗಿತ್ತ? ಕೊಗ್ಗ ಹಿಂದಿನಿಂದ ಗೊತ್ತಾಗದಂತೆ ಹೋಗಿ ಗುಂಡುಹಾಕಿ ಕೊಂದನಂತೆ ಯಾಕೆ ಹೇಳಬಂದೇಂದರೆ… ” ಬಿರುಗಾಳಿಯ ನಂತರ ಎಲೆ ಎಲೆಯಲ್ಲೂ ನಿಶ್ಚಲವಾಗಿ ಮಂಕುಬಡಿದು ನಿಲ್ಲುವ ಮರದಂತೆ ಸಂಕಪ್ಪಯ್ಯ ನಿಂತರು.

ಶ್ಯಾನುಭೋಗನ ಜೊತೆ ಪಟ್ಟಂಗ ಹೊಡೆಯುವ ಇಷ್ಟವಾಗದೆ ಹೊರಟರು ಸೀದ ಕೃಷ್ಣಭಟ್ಟರ ಮನೆಯ ಕಡೆ.

* * *

ಒಂದು ದಿನ ಸಂಜೆ ಸುಮಾರು ೬ ತಿಂಗಳಾದ ಮೇಲೆ ಗದ್ದೆಯಂಚಲ್ಲಿ ಕಾಲೆಳೆದುಕೊಂಡು ಹೋಗುತ್ತಿದ್ದ ಸಂಕಪ್ಪಯ್ಯನನ್ನು ಕಂಡು ಪೇಟೆಯ ಅಹಮ್ಮದ್ ಬ್ಯಾರಿ ‘ಸಲಾಂ’ ಎಂದ. ಲೋಕಾಭಿರಾಮವಾಗಿ ಮಾತಾಡುತ್ತ, ಒಬ್ಬರೆ ಗದ್ದೆ ಬೇಸಾಯ ಮಾಡಿಕೊಂಡಿದ್ದೀರಂತೆ, ತೋಟ ಮನೆ ಎಲ್ಲ ಕೃಷ್ಣಭಟ್ಟರಿಗೆ ಮಾರಿ ಮನೆಯವರನ್ನೆಲ್ಲ ಶಿಮೊಗ್ಗಕ್ಕೆ ಕಳಿಸಿಬಿಟ್ಟರಂತೆ ಹೌದ ಎಂದ, ಬೀಡಿ ಎಳೆಯುತ್ತ. ಸಂಕಪ್ಪಯ್ಯ ಮಾತನಾಡದೆ ಹೌದೆಂದು ತಲೆ ಹಾಕಿದರು. ಕಿತ್ತಳೆ ತೋಟದಲ್ಲಿ ಈ ಸಾರಿ ಚೆನ್ನಾಗಿ ಫಸಲಾಗಬಹುದು. ಹೇಗೆ ಹೂವು ಬಿಟ್ಟಿದೆ ನೋಡಿದಿರಾ ಎಂದುದಕ್ಕೂ ತಲೆ ಹಾಕಿದರು. ಕೃಷ್ಣಭಟ್ಟರು ೮೫೦ ಎಂದರು. ನಾನು ೭೦೦ ಕ್ಕೆ ಅಂತೂ ಇಂತೂ ಇಳಿಸಿ ವಹಿಸಿಕೊಂಡೆ. ಲುಕ್ಸಾನಾಗಲಿಕ್ಕಿಲ್ಲ ತಾನೆ ಎಂದುದಕ್ಕೆ ‘ಆಗಲಿಕ್ಕಿಲ್ಲ’ ಎಂದರು. ‘ಪಾಪ ಒಬ್ಬರೇ ಇರುವುದು ಬೇಜಾರಲ್ಲವೆ ನಿಮಗೆ?’ ಎಂದು ಬ್ಯಾರಿ ಗಾಳಿಗೆ ಬೆನ್ನು ಮಾಡಿ ನಿಂತು ಜೋಕೆಯಿಂದ ಆರಿದ ತುಂಡು ಬೀಡಿ ಹೊತ್ತಿಸಿದ. ‘ಬೇಜಾರೇಕೆ?’ ಎಂದು ಸಂಕಪ್ಪಯ್ಯ ಗುಡಿಸಿಲಿಗೆ ಬಂದಾಗ ಕತ್ತಲಾಗಿತ್ತು.

ಊಟ ಬೇಡವಾಗಿತ್ತು. ಬೂದಿ ತುಂಬಿದ ತಣ್ಣಗಾದ ಒಲೆ ಹತ್ತಿಸಿ ಅನ್ನ ಬೇಯಿಸುವುದು ಇನ್ನು ಯಾಕೆ? ಗಾಳಿಗೆ ಹಣತೆ ಆರಿಹೋಗಲು ಅಂಗಳಕ್ಕೆ ಬಂಧರು. ಕದ್ದಿಂಗಿಳಿನ ಆಕಾಶದಲ್ಲಿ ಮೋಡ ತುಂಬಿ ಒಂದು ಹನಿ ಬೆಳಕಿರಲಿಲ್ಲ.

ರಾತ್ರಿ ೧೨ ಘಂಟೆಯವರೆಗೆ ಕೈ ಕಟ್ಟಿಕೊಂಡು ಅಂಗಳದಲ್ಲಿ ತಿರುಗುತ್ತಿದ್ದವರು ನಿಂತರು. ಸೊಂಟಕ್ಕೆ ಬಿಗಿದಿದ್ದ ಪಾಣಿಪಂಚೆಯನ್ನು ಬಿಚ್ಚಿ ತಲೆಗೆ ಸುತ್ತಿ, ಮತ್ತೆ ಹಲಸಿನ ಮರದ ಬುಡದಲ್ಲಿದ್ದ ಕಟ್ಟೆಯ ಮೇಲೆ ಒಂದು ಕಾಲಿಟ್ಟು ಅಂದುಕೊಂಡರು. ಎಲ್ಲರೂ ಹೊರಟು ನಿಂತಾಗ ಬಾವಿಕಟ್ಟೆಯ ಮೇಲೆ ಕೈಯೂರಿ ‘ನಾನು ನಿನ್ನ ಜೊತೆಯೇ ಇರುತ್ತೇನೆ ಅಪ್ಪ’ ಎನ್ನುವಂತೆ ಬೊಗಸೆ ಕಣ್ಣುಗಳಿಂದ ನೋಡುತ್ತಿದ್ದ ನಿಂತಿದ್ದ ಶಾಂತಳನ್ನು ಹಾಗೆ ಗದರಿಸಬಾರದಿತ್ತು. ಈಗ ಜೊತೆಗಿದ್ದಿದ್ದರೆ ಮೈಗೊರಗಿ ಕೂತು ತನ್ನ ನೆರೆತ ಮೀಸೆ ಹುರಿ ಮಾಡುತ್ತಿದ್ದಳು. ಕುತ್ತಿಗೆಯ ಹತ್ತಿರ ಉಸಿರಾಡುವವಳ ಕಪ್ಪು ನುಣುಪು ತಲೆಗೂದಲಿನ ಮೇಲೆ ಕೈಯಾಡಿಸಬಹುದಿತ್ತು.

ನಿಂತಿದ್ದ ಸಂಕಪ್ಪಯ್ಯನಿಗೆ ಕಾಲು ಬತ್ತಿದಂತಾಯಿತು. ದೀರ್ಘವಾಗಿ ನಿಟ್ಟುಸಿರೆಳೆದು ಕೊಳ್ಳುತ್ತ ‘ಅಯ್ಯಮ್ಮ’ ಎಂದು ಮರಕ್ಕೊರಗಿದರು. ಪಾಣಿಪಂಚೆಯ ಅಂಚಿನಿಂದ ಒದ್ದೆಯಾದ ಕಣ್ಣೊರಸಿಕೊಂಡರು. ಯಾರ ಮನೆಯದೋ ಏನೋ ಒಂದು ಮುದಿ ದನ ಬಂದು ಮುಖ ಮೂಸಲು ಅದರ ಕತ್ತನ್ನು ತುರಿಸಿದರು.

೧೭. ೧೧. ೧೯೫೬

* * *