ಸಣ್ಣ ಕತೆಯು ತೀವ್ರ ರೀತಿಯ ಸೂಕ್ಷ್ಮ ವೇದಿತ್ವವನ್ನು ಪಡೆದುಕೊಂಡ ಮತ್ತು ಅದಕ್ಕೆ ಬಲಿಯಾದ ಈ ಯುಗದ ಒಂದು ಫಲ. ಈ ಸೂಕ್ಷ್ಮವೇದನೆ ಒಂದು ದಿಕ್ಕಿನಲ್ಲಿ ನಮ್ಮ ಅತ್ಯುತ್ತಮ ಕವಿಗಳು ಸ್ವಪ್ರಜ್ಞೆಯಾಗಿ, ಅಲ್ಲದೆ ಇನ್ನೊಂದು ದಿಕ್ಕಿನಲ್ಲಿ ಅಸಂಖ್ಯಾತ ಜನರ ದ್ವಂದ್ವ – ವ್ಯಕ್ತಿತ್ವ, ಚಿತ್ತೋನ್ಮಾದದಂತಹ ಮನೋವಿಕಾರಗಳಾಗಿ ಕಾಣಿಸಿಕೊಂಡಿವೆ. ಒಂದೇ ಮೂಲದಿಂದ ಉದ್ಭವವಾದ ಈ ವೈಪರೀತ್ಯಗಳು ಬೇರೆ ಬೇರೆಯಾಗಿಯೇ ಉಳಿಯಬೇಕೆಂದಿಲ್ಲ; ಒಂದು ಇನ್ನೊಂದಾಗಿ ಪರಿಣಮಿಸಬಹುದು. ಒಂದರ ವೇಷದಲ್ಲಿ ಇನ್ನೊಂದು ಪ್ರಚ್ಛನ್ನವಾಗಿ ಇರಬಹುದು. ಸೂಕ್ಷ್ಮ ವೇದನೆಯಿಂದ ಒದಗಿದ ಈ ಸ್ವಪ್ರಜ್ಞೆ ಮತ್ತು ಮನಸ್ಸಿನ ಅಸ್ವಸ್ಥತೆಗಳ ವಿಚಿತ್ರ ಮಿಶ್ರಣ ಸಾಹಿತಿಗೊಂದು ವಿಶೇಷ ಸಮಸ್ಯೆಯಾಗಿದೆ. ಸಾಹಿತ್ಯಕ್ಕೊಂದು ಹರಿತವಾದ ದೃಷ್ಟಿಯನ್ನು ತಂದಿದೆ. ಪರಿಣಾಮವಾಗಿ ಮೊಂಡುಬಿದ್ದ ಸಾಹಿತ್ಯ – ಪ್ರಕಾರಗಳ ಮತ್ತು ಭಾವನೆಗಳ ರೂಢಿಜಾಡ್ಯನಾಶವಾಗಿದೆ.

ಅನುಭವಸೂಕ್ಷ್ಮತೆ, ವಿಸ್ಮಯ, ಚೂಪಾದ ಬರವಣಿಗೆ – ಇವು ಸಣ್ಣ ಕತೆಯ ವೈಶಿಷ್ಟ್ಯಗಳು. ಆದರೆ ಈ ಸೂಕ್ಷ್ಮ ಗುಣಗಳನ್ನು ಪಡೆಯುವ ಏಕಮಾತ್ರ ಉದ್ದೇಶದಲ್ಲಿ ಸಣ್ಣಕತೆ, ಭಾವಸಂಕೀರ್ಣತೆಗಳನ್ನು ಅಲಕ್ಷಿಸಿದ, ಸರಳ ದೃಷ್ಟಿಯ, ಕೃತಕವಾದ ನಾಜೂಕಿನ ಬರವಣಿಗೆಯಾಗಿಬಿಡುವುದು ಸಾಧ್ಯ. ಅಲ್ಪ ಉದ್ದೇಶ ಆದ್ದರಿಂದ ಅಲ್ಪವಾದ ಸಿದ್ಧಿಸಾಮಾನ್ಯವಾಗಿ ಸಣ್ಣಕತೆಯ ಮುಖ್ಯ ಪರಿಮಿತಿಗಳು. ಅಚ್ಚುಕಟ್ಟಿನ ಕೃತಕವಾದ ನವೀನತೆಯನ್ನು ತಯಾರಿಸುವ ಕುಶಲ ಕಲೆಗಾರಿಕೆಯಲ್ಲಿ ಕತೆಗಾರ ತನ್ನ ಅನುಭವದ ಗಾಢತೆಗೆ ಆಕಾರವನ್ನು ಕೊಡುವ ಮುಖ್ಯ ಪ್ರಯತ್ನವನ್ನು ಮರೆಯಬಹುದು; ನಾಜೂಕು, ನಯದ ಗುಣಗಳನ್ನಷ್ಟೆ ಯಥೇಚ್ಛವಾಗಿಸಿಕೊಂಡು, ಅವುಗಳ ನೆವವನ್ನೊಡ್ಡಿ, ವಿಮರ್ಶೆಯ ತೀಕ್ಷ್ಣ ಪರಿಶೀಲನೆಯಿಂದ ಜಾರಿಕೊಳ್ಳಬಹುದು. ಹೀಗೆ ಜೀವನದ ಅಂಚಿನಲ್ಲೇ ಸುಳಿದಾಡುವ ಸಣ್ಣ ಕತೆಯ ಸ್ವಭಾವದ ಬಗ್ಗೆ ಸಾಕಷ್ಟು ಚಿಂತನೆಯಾಗಿಲ್ಲ. ಸಣ್ಣ ಕತೆಯು ಕಾದಂಬರಿ ಹಾಗೂ ಕವಿತೆಯ ಜೊತೆ ನಿಲ್ಲಬೇಕಾದರೆ ಅವುಗಳು ಎದುರಿಸುವ ಎಲ್ಲ ಸವಾಲನ್ನೂ ಎದುರಿಸಿ, ಬಾಳಿನ ಮೂಲ ದ್ರವ್ಯಗಳನ್ನೇ ವಸ್ತುಗಳನ್ನಾಗಿ ಮಾಡಿಕೊಳ್ಳಬಲ್ಲ ತಾಕತ್ತನ್ನು ಪಡೆಯಬೇಕು; ಪರಸ್ಪರ ವಿರುದ್ಧ ಮೌಲ್ಯಗಳಾದ ಸಮಗ್ರತೆ ಮತ್ತು ಸಾವಯವ ಸತ್ವಪೂರ್ಣತೆಗಳ ಹೊಂದಾಣಿಕೆಯನ್ನು ತಂದುಕೊಳ್ಳಬೇಕು.

ಈ ದೃಷ್ಟಿಯಿಂದ ನೋಡಿದರೆ ಸಣ್ಣಕತೆಯ ಪ್ರಕಾರವನ್ನು ಜೀವದ ದಟ್ಟವಾದ ಅನುಭವಗಳ ಅಭಿವ್ಯಕ್ತಿಗೆ ಒಗ್ಗಿಸಿಕೊಳ್ಳುವುದರಲ್ಲಿ ಮತ್ತು ಕಥನಕ್ರಮದ ನಿಷ್ಠುರತೆಯಲ್ಲಿ ಶ್ರೀ ಅನಂತಮೂರ್ತಿಯವರ ಕತೆಗಳ ಪ್ರಾಮುಖ್ಯವಿದೆ. ಇವರ ಉತ್ತಮ ಬರವಣಿಗೆಯಲ್ಲಿ ಜೀವನಾನುಭವ ಸಂಪೂರ್ಣ ಆಘಾತವನ್ನು ಧೈರ್ಯವಾಗಿ ಎದುರಿಸುವ ಗುಣ ಕಾಣುತ್ತದೆ. ಸಣ್ಣಕತೆಗಳ ವಿಮರ್ಶೆಯಲ್ಲಿ ಚರ್ವಿತಚರ್ವಣವಾದ ಸಂಕ್ಷಿಪ್ತತೆ ಅಥವಾ ಏಕತೆಯ ನೆವದಲ್ಲಿ ಯಾವ ರೀತಿಯ ಕಣ್ಣು ಮುಚ್ಚಾಲೆಯನ್ನೂ ಈ ಕತೆಗಾರರು ಆಡುವುದಿಲ್ಲ. ಅಂದರೆ ಇವರ ಯಶಸ್ಸು ಎಲ್ಲ ಕತೆಗಳಲ್ಲೂ ಒಂದೇ ದರ್ಜೆಯದೆಂದಲ್ಲ. ತುಳಿದ ಜಾಡನ್ನೇ ತುಳಿಯದ ಪ್ರಯೋಗಶೀಲ ಲೇಖಕರಲ್ಲಿ ಇದು ಸಹಜವೆ. ಆದರೆ ಇವರು ಅನುಭವದ ಜೊತೆ ಮತ್ತು ಭಾಷೆಯ ಜೊತೆ ನಡೆಸುವ ಸೆಣಸಾಟ ಯಾವಾಗಲೂ ಕುತೂಹಲ ಕೆರಳಿಸುತ್ತದೆ; ಇವರ ಸೋಲು ಪ್ರಗತಿಯ ದಿಕ್ಕಿನಲ್ಲಿಟ್ಟ ಹೆಜ್ಜೆಯೆನಿಸುತ್ತದೆ.

ಈ ಸಂಕಲನದ ಕತೆಗಳಲ್ಲಿ ಅನುಭವದ ಮೊನಚು ಮತ್ತು ಸಮಗ್ರತೆಗಳು ವಿವಿಧ ಮಟ್ಟಗಳಲ್ಲಿ ಬೆಸೆದುಕೊಳ್ಳುತ್ತವೆ. ಕಥನ ರೀತಿಯಲ್ಲಿ ಸಾಂಕೇತಿಕತೆ ಮತ್ತು ವಾಸ್ತವಿಕತೆಯನ್ನು ಒಮ್ಮೆಗೇ ತರುವ ಪ್ರಯತ್ನ ಕಾಣುತ್ತದೆ. ಉದಾಹರಣೆಗೆ, ‘ಪ್ರಕೃತಿ’ಯಲ್ಲಿ ಸಂಕಪ್ಪಯ್ಯ ಹುಲಿಯನ್ನು ಎದುರಾಗುವ ಸಂದರ್ಭ:

“ಅಬ್ಬರಿಯ ತಳದಲ್ಲಿ ಕಂತಿದ್ದ ಸಂಕಪ್ಪಯ್ಯನ ಕಣ್ಣುಗಳು ಚಿಕ್ಕದಾದುವು. ದೊಡ್ಡದಾಗಿ ಅರಳಿದವು, ಮತ್ತೆ ನಿಧಾನವಾಗಿ ಮುಚ್ಚಿದವು. ಕಂಡದ್ದನ್ನು ಮೈತುಂಬ ತುಂಬಿಕೊಂಡು ನಡುಗಿದರು. ಮತ್ತೆ ಕಣ್ಣು ತೆರೆದು ನೇರವಾಗಿ, ನಿರ್ಭಯವಾಗಿ ನೋಡಿದರು. ಕೆಂಡದಂತೆ ಉರಿಯುತ್ತ ಅಬ್ಬರಿಯ ತಳದಲ್ಲಿ ಮಲಗಿದ್ದ ಹುಲಿಯೂ, ಅವರನ್ನು ನೋಡಿತು. ಹೌದು. ಅವರ ಹಾಗೇ ಕಣ್ಣಗಲಿಸಿ – ನಿರ್ಭಯವಾಗಿ – ಯಾವ ಎಗ್ಗಿಲ್ಲದೆ. ನಿಶ್ಚಯ – ಅದು ನಿಶ್ಚಯ….

– ಇದು ಒಂದು ಅಪೂರ್ವ ಭೇಟಿಯ ವಾಸ್ತವಿಕ ವರದಿಯೇನೋ ನಿಜ. ಆದರೆ ಈ ವಾಸ್ತವಿಕತೆಯಲ್ಲೇ ಸಂಕೇತಾರ್ಥಗಳು ಇಣುಕುತ್ತವೆ. ಓದುತ್ತಿರುವ ಹಾಗೆ ಹುಲಿ ಬರಿಯ ಹುಲಿಯಾಗಿ ಉಳಿಯದೆ ಸಂಕಪ್ಪಯ್ಯನ ಪ್ರಚಂಡ ಇಚ್ಛಾಶಕ್ತಿಯ ಅವತಾರವಾಗಿಬಿಡುತ್ತದೆ. ಈ ಭೇಟಿಯು ತರುವ ಸ್ತಬ್ಧಭಾವ ಗಮನಾರ್ಹವಾಗಿದೆ.

ಹಾಗೆಯೇ ‘ಘಟಶ್ರಾದ್ಧ’ದಲ್ಲಿ ಇಷ್ಟೇ ಶಕ್ತಿಪೂರ್ಣವಾದ ಆದರೆ ಇನ್ನೂ ನಿರ್ದಿಷ್ಟವಾದ ಸಾಂಕೇತಿಕತೆಯಿದೆ. ನಾಣಿ ಮತ್ತು ಶಾಸ್ತ್ರೀಯ ಸಂಬಂಧದ ಘಟನೆಗಳು ಯಮುನಕ್ಕ ಮತ್ತು ಮೇಷ್ಟ್ರರ ಸಂಬಂಧದ ಮುಖ್ಯ ವೃತ್ತಕ್ಕೆ ಸಾಂಕೇತಿಕ ಕಥನವಾಗುತ್ತದೆ. ಯಮುನಕ್ಕ ಪತಿತಳಾದ. ಕ್ರಮೇಣ ದುಷ್ಟಶಕ್ತಿಗಳಿಗೆ ಸಂಪೂರ್ಣ ಶರಣಾಗತಳಾಗುವ ಜೀವನದ ಭೀಕರ ರುದ್ರನಾಟಕವನ್ನು, ನಾಣಿಯ ಮುಗ್ಧತೆಯನ್ನು ಶಾಸ್ತ್ರಿ ನಾಶಮಾಡಲು ಪ್ರಯತ್ನಿಸುವ ಕಥೆಯಲ್ಲಿಯೂ ಸೂಚ್ಯವಾಗಿ ಕಾಣಬಹುದು. ಶಾಸ್ತ್ರಿ ತನಗಿಂತ ಕಿರಿಯನಾದ ನಾಣಿಯನ್ನು ಪ್ರಲೋಭಿಸುತ್ತಾನೆ, ಕಿಚಾಯಿಸುತ್ತಾನೆ. ದೇವರ ಪ್ರತಿಮೆಯನ್ನು ಅವನಿಂದ ಮುಟ್ಟಿಸಿ ಅವನನ್ನು ವಶಪಡಿಸಿ ಕೊಳ್ಳುತ್ತಾನೆ. ನಾಣಿ ಮತ್ತು ಶಾಸ್ತ್ರಿಯ ಸಂಬಂಧದ ಈ ವಿಕೃತಿ ಕೊನೆಯಲ್ಲಿ ವಿಕೃತವಾಗುವ ಯಮುನಕ್ಕ, ಮೇಷ್ಟ್ರರ ಸಂಬಂಧದ ಮೇಲೆ ವಿಶೇಷ ಬೆಳಕನ್ನು ಚೆಲ್ಲುತ್ತದೆ. ಈ ಸಂಬಂಧದ ಕೇಂದ್ರ ಸಂಗತಿ ಬಲಾತ್ಕಾರದ ಗರ್ಭಪಾತ, ಮೂಢನಂಬಿಕೆಯ ಚಿತ್ರಣ ಬಾಲಸಹಜವಾದ ನಾಣಿಯ ನಡವಳಿಕೆಯಲ್ಲಿ ಮಾತ್ರ ನೇರವಾಗಿ ಕಥಿತವಾದರೆ ಯಮುನಕ್ಕನ ಜೀವನದಲ್ಲಿ ಅದು ಸಾಂಕೇತಿಕವಾಗುತ್ತದೆ; ಅವಳು ಸಮಾಜದ ಮೂಢನಂಬಿಕೆಗೆ ಬಲಿಯಾಗುತ್ತಾಳೆ. ಕೊನೆಯಲ್ಲಿ ವೃದ್ಧರಾದ ಉಡುಪರು ಸಣ್ಣ ಹುಡುಗಿಯೊಬ್ಬಳನ್ನು ಮದುವೆಯಾಗುವುದು ವಿಕೃತವೂ ಅನ್ಯಾಯವೂ ಆದರೂ ಈ ಕಲ್ಯಾಣ ಸಮಾಜದ ಮೂಢನಂಬಿಕೆಯನ್ನು ತೃಪ್ತಿಪಡಿಲು ಅವಶ್ಯವಾದದ್ದು, ಆದ್ದರಿಂದ ಗ್ರಾಹ್ಯವಾದದ್ದು ಎಂಬುದು ಧ್ವನಿತವಾಗುತ್ತದೆ. ಹೀಗೆ ಮೂಢನಂಬಿಕೆ ಮೂರು ಮಟ್ಟಗಳಲ್ಲಿ ಪ್ರಮುಖ ಪಾತ್ರ ವಹಿಸುವುದರ ಸಾಂಕೇತಿಕ ನಿರೂಪಣೆ ಕಥೆಯಲ್ಲಿ ಬಂದಿದೆ.

ಶ್ರೀ ಅನಂತಮೂರ್ತಿಯವರು ತಮ್ಮ ಸಣ್ಣಕತೆಗಳಲ್ಲಿ ಜೀವನಾನುಭವದ ಒಳಹೊರಗುಗಳನ್ನು ಮನೋವಿಶ್ಲೇಷಣೆ ಮತ್ತು ಸೂಕ್ಷ್ಮಾವಲೋಕನದ ಮಟ್ಟಗಳಲ್ಲಿಯೂ ಪ್ರತ್ಯಕ್ಷವಾಗಿಸಿಕೊಳ್ಳಲು ಹೆಣಗುತ್ತಾರೆ. ಹೀಗೆ ಒಳ – ಹೊರ ಕ್ರಿಯೆಗಳನ್ನು ಒಟ್ಟಿಗೆ ಬೆಸೆಯುವ ಪ್ರಯತ್ನಕ್ಕೆ ‘ಪ್ರಶ್ನೆ’ ಮತ್ತು ‘ಕಾರ್ತೀಕ’ ಉತ್ತಮ ಉದಾಹರಣೆಗಳು. ಈ ವಿಧಾನ ‘ಪ್ರಶ್ನೆ’ಯಲ್ಲಿ ಕೆಲವು ಕಡೆ ಅತಿರೇಕಕ್ಕೆ ಹೋಗಿದೆ; ಆದರೆ ‘ಕಾರ್ತೀಕ’ದಲ್ಲಿ ಅನುಭವಕ್ಕೆ ತಕ್ಕದಾದ ಶ್ರುತಿಸ್ವನಗಳ ಹದ್ದಿನಲ್ಲಿದೆ. ಈ ವಿದಾನಕ್ಕೆ ಸಹಜವಾದ ಅತಿ ಕುಶಲತೆಯ ಜೊತೆಗೇ, ಶ್ರಮಸಾಧಿತ ಆತ್ಮನಿರೀಕ್ಷಣೆಯಿರುವಲ್ಲಿ ತನ್ನನ್ನು ಕಂಡು ತಾನೇ ನಗುವ ಹಾಸ್ಯ – ಅಪಹಾಸ್ಯ ಕೂಡ ಬರುತ್ತದೆ. ‘ಪ್ರಶ್ನೆ’ಯಲ್ಲಿ ರಂಗನಾಥನ ಆತ್ಮನಿರೀಕ್ಷಣೆ ‘ಲಾರೆನ್ಸಿ’ನ ಸ್ಪಷ್ಟ ಪ್ರತಿಧ್ವನಿಗಳು ಕೇಳಿಸುವಷ್ಟರ ಮಟ್ಟಿಗೆ ಬರಿ ಬುದ್ಧಿಜನ್ಯ ಬರವಣಿಗೆಯಾಗಿಬಿಡುತ್ತದೆ :

“ಶಾರದೆ ಬಟ್ಟೆ ಬಿಚ್ಚಿದರೂ ಬೆತ್ತಲೆಯಾಗುವುದಿಲ್ಲ. ಬಲಿಗೆ ಹೋಗುವ ಪ್ರಾಣಿಯಂತೆ ಕಾಣುತ್ತಾಳೆ. ಲಚ್ಚಿ ಬಟ್ಟೆ ತೊಟ್ಟರೂ ಬೆತ್ತಲೆ. ಒಬ್ಬಳನ್ನು ಹಗಲಿಗೆಂದು, ಆತ್ಮದ ಸಹವಾಸಕ್ಕೆಂದು ದೇವರು ಸೃಷ್ಟಿಸಿದ; ಇನ್ನೊಬ್ಬಳನ್ನು ಕತ್ತಲಿನ ಸುಖಕ್ಕೆಂದು ಸೃಷ್ಟಿಸಿದ… ”

ಆದರೆ ಇದನ್ನು ತಿದ್ದು ಒಟ್ಟು ದೃಷ್ಟಿಯನ್ನು ಕಾಯುವ ಯಥಾದರ್ಶನಕ್ಕೆ ಅಗತ್ಯವಾದ ವ್ಯಂಗ್ಯ ಚಿಂತನೆ ಕತೆಯಲ್ಲಿದೆ. ಗೋಪಾಲನದು ಮುಖ್ಯವಾಗಿ ರಂಗನಾಥನನ್ನು ಕಂಡಿಸುವ ಕೆಲಸ :

“Words, words, words….. ಈಗ ಯಾವ ಪುಸ್ತಕ ಓದುತ್ತಿದ್ದೀ ಹೇಳು, ಲಾರೆನ್ಸ್ ಓದಲು ಪ್ರಾರಂಭಿಸಿದಿಯಾ?…. ಅದರ ಬದಲು ಹೆರಿಗೆ ಆಸ್ಪತ್ರೆಗೆ ಒಂದು ಸಾರಿ ಹೋಗಿ ಬಂದರೆ ಗೊತ್ತಾಗುತ್ತೆ… ಔಷಧಿ ಸೀಸೆಗಳನ್ನು ಹಿಡಿದು ಕ್ಯೂ ನಿಂತ ಬಸುರಿ ಹೆಂಗಸರನ್ನು ನೋಡಿದರೆ ನಿನ್ನ ಪಿತ್ಥವಷ್ಟು ಇಳಿದೀತು… ”

ಆದರೆ ಅತಿಬುದ್ಧಿಜನ್ಯತೆಯ ಭಾವನೆಗಳನ್ನು ತಿದ್ದುವ ಪ್ರಯತ್ನವನ್ನು ಬರಿ ಹೇಳಿಕೆಗಳ ಮೂಲಕ ಮಾಡುವುದರಿಂದ ಈ ವಾದ – ವಿವಾದದ ಮಾರ್ಗ ಸಂಪೂರ್ಣ ಯಶಸ್ವಿಯಾಗುವುದಿಲ್ಲ. ಅಲ್ಲದೆ ಗೋಪಾಲನ ಪಾತ್ರ ಖಂಡಿಸುವ, ತಿದ್ದುವ ಕಾರ್ಯವನ್ನು ಮಾಡುವಷ್ಟಕ್ಕೆ ಮಾತ್ರ ಪರಿಮಿತವಾಗಿ ಮಾತ್ರ ಬರುತ್ತಾನೆ. ಆದರೆ ಕತೆಗಾರರು ಹೇಗೆ ಅನುಭವವನ್ನು ಹತೋಟಿಯಲ್ಲಿಟ್ಟು, ತೂಗಿ ನೋಡಿ, ಪರ – ವಿರೋಧಗಳಿಂದ ವಿವೇಚಿಸಿ, ಅದರ ಸತ್ಯವನ್ನು ಒರೆಗೆ ಹಚ್ಚಿ ಪರಾಮರ್ಶಿಸುವ ಸತತ ಹೋರಾಟದಲ್ಲಿ ತೊಡಗಿರುತ್ತಾರೆಂಬುದಕ್ಕೆ ಮೇಲಿನ ಉದಾಹರಣೆ ದ್ಯೋತಕವಾಗಿದೆ. ಚುರುಕುಗೊಳಿಸುವ, ಶುದ್ಧಗೊಳಿಸುವ ರೀತಿಯ ಪ್ರಾಮಾಣಿಕತೆ ಈ ಲೇಖಕರದ್ದು. ‘ಪ್ರಸ್ತ’ದಲ್ಲಿ ಅತಿ ಸಲೀಸಾದ ಬೆಳವಣಿಗೆಯನ್ನು ಸನ್ನಿವೇಶದ ನಿರ್ದಯ ಅಣಕ ಗಟ್ಟಿ ನೆಲಕ್ಕೆಳೆದು ತರುತ್ತದೆ. ಸೀತಕ್ಕ ಮತ್ತು ಶೀನಪ್ಪಯ್ಯ ರಾಜಿಯಾಗಿದ್ದಾರೆ. ಅವನ ಕಾಲನ್ನು ಇವಳು ಒತ್ತುತ್ತಿದ್ದಾಳೆ. ರಂಗ ಸಜ್ಜಿತವಾಗಿದೆ – ಈ ಸನ್ನಿವೇಶ ವಿಳಂಬವಾದರೂ ಮೃದುವಾದ ಪ್ರಣಯದಲ್ಲಿ ಅಂತ್ಯವಾಗಬಹುದು. ಅಥವಾ ಸಮಾಜ ಪದ್ಧತಿಯ ಖಂಡನೆಗೆ ಅವಕಾಶ ಮಾಡಿಕೊಡುವಂತಹ ಸಾಧನವಾಗಬಹುದು. ಆದರೆ ನಡೆಯುವ ಸಂಗತಿ ಮಾತ್ರ ಅಷ್ಟುಸರಳವಾಗಿರದೆ ಹೆಚ್ಚು ಸಂಕೀರ್ಣವೂ ಪ್ರಾಮಾಣಿಕವೂ ಆಗಿದೆ. ಕತೆಗಾರರು ನಡೆದದ್ದನ್ನಷ್ಟೆ ಹೇಳುತ್ತಾರೆ.

“ತಾನು ಇಟ್ಟುಕೊಂಡ ಸೂಳೆಗಿಂತ ಈ ಸೀತಕ್ಕ ತುಂಬ ಚಿಕ್ಕವಳಲ್ಲದೆ, ಇನ್ನೂ ಮುಟ್ಟಾಗುತ್ತಿರಬಹುದು ಇವಳು ಎಂದುಕೊಂಡು ಶೀನಪ್ಪಯ್ಯ ಮೆತ್ತಗೆ ಸೀತಕ್ಕನ ಕೈಹಿಡಿದು ಎಳೆಯಹೋದರೂ… ಸೀತಕ್ಕ ಒದ್ದುಕೊಳ್ಳುತ್ತ ಅಲ್ಲಿಂದ ನಡುಮನೆಗೆ ಓಡಿದಳು. ”

ರೂಢಿಜಾಡ್ಯವಾಗಿಬಿಟ್ಟಿರುವ ಪತಿವಂಚಿತ ಪತ್ನಿಯ ಭಾವಾತಿರೇಕವನ್ನಿಲ್ಲಿ ಲೇಖಕರು ತೊಡೆದುಹಾಕಿದ್ದಾರೆ. ಸೀತಕ್ಕ ಒದ್ದುಕೊಳ್ಳುತ್ತ ನಡುಮನೆಗೆ ಓಡಿದಳೆಂಬ ಮಾತಿನಲ್ಲಿ ಕೆಚ್ಚಲು ಬತ್ತಿದ ಹಸುವಿನ ಪ್ರತಿಕ್ರಿಯಿಯಿದೆ. ನಮ್ಮ ಸಹಾನುಭೂತಿ ತೀರ್ಪುಗಳು ಪರಾಮರ್ಶೆಗೆ ಒಳಗಾಗಬೇಕಾಗುತ್ತವೆ.

ಪುರಾಣ ಮತ್ತು ವಿಧ್ಯುಕ್ತ ಕ್ರಿಯೆಗಳು (ಸಂಸ್ಕಾರಶಾಸ್ತ್ರ ಅಥವಾ ಆಚಾರ ವಿಧಿಗಳು) ಶ್ರೀ ಅನಂತಮೂರ್ತಿಯವರು ಉಪಯೋಗಿಸಿಕೊಳ್ಳುವ ಇನ್ನೆರಡು ಕ್ಷೇತ್ರಗಳು. ತಮ್ಮ ಕತೆಗಳನ್ನು ಮಲೆನಾಡಿನ ಜೀವನದ ಪರಿಸರದಲ್ಲಿ ಮೂರ್ತಗೊಳಿಸುವುದರ ಜೊತೆಗೆ ಕಾಲಾತೀತವಾದ ಪರಂಪರೆಯ ಹಿನ್ನೆಲೆಯಲ್ಲಿ ನೋಡುವ ಪ್ರಯತ್ನದಲ್ಲಿ ಇವುಗಳ ಉಪಯೋಗ ಕಂಡುಬರುತ್ತದೆ. ‘ಪ್ರಶ್ನೆ’ಯಲ್ಲಿ ಶಾಕುಂತಲ, ಯಯಾತಿ ಉಪಾಖ್ಯಾನಗಳನ್ನು, ನಿದ್ರಿಸಿದ ರಾಜಕುಮಾರಿಯ ಜಾನಪದ ಕಥೆಯನ್ನು ಉಪಯೋಗಿಸಿಕೊಂಡಂತೆಯೇ’ ವಾಮಾಚಾರಗಳನ್ನು ಬಳಸಿ ಕೊಂಡಿದ್ದಾರೆ. ಈ ಕಥೆಯಲ್ಲಿ ಲೇಖಕರು ತಮ್ಮ ಎಲ್ಲ ಶಕ್ತಿಯನ್ನು ದುಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆಂದರೆ ಇಲ್ಲಿ ಅಪ್ರಸ್ತುತವಾಗಲಾರದು. ‘ಪ್ರಶ್ನೆ’ ಸುಯೋಜಿತವಾದ ಒಳ್ಳೆ ಕಥೆಯಾದರೂ ಲೇಖಕ ಇಲ್ಲಿ ತನ್ನ ಶಕ್ತಿಪ್ರದರ್ಶನ ಮಾಡಿ ಕೊಂಡಿದ್ದಾನೆ ಎನ್ನಿಸುತ್ತದೆ. ಕಥೆಯ ಯಶಸ್ಸಿರುವುದು ಅದರ ಜಟಿಲವಾದ ಬೌದ್ಧಿಕ ವ್ಯಾಪಾರದಲ್ಲಿ. ಜೀವನದ ಮತ್ತು ಚಿಂತನೆಯ ಹೊಸ ರಂಗಗಳನ್ನು ಅನ್ವೇಷಿಸುವ ಯತ್ನದಲ್ಲಿ. ವೃದ್ಧಾಪ್ಯ ಮತ್ತು ಯೌವನಗಳ ನಡುವಿನ ಸಂಬಂಧಗಳ ಮೂಲಕ ಭೂತ ವರ್ತಮಾನಗಳ ಸಂಬಂಧವನ್ನು ವ್ಯಕ್ತಗೊಳಿಸುವುದರಲ್ಲಿ ಈ ಸಂಕಲನದ ಕಥೆಗಳಲ್ಲೆಲ್ಲ ನಗರ ಪ್ರಜ್ಞೆಯಿರುವ ಪ್ರಮುಖ ವ್ಯಕ್ತಿಯೆಂದರೆ ರಂಗನಾಥ ಎಂಬುದು ಗಮನಾರ್ಹ ಸಂಗತಿ. ಆದರೆ ಈ ಗುಣಗಳ ಚಿತ್ರಣ ಸ್ವಲ್ಪ ‘ಅತಿ’ಗೆ ಹೋಗುವುದೇ ಕಥೆಯ ಸೋಲಿಗೆ ಕಾರಣ. ಸಹಜವಾದ ಸಂಕೀರ್ಣತೆ ಯಾವುದು ಮತ್ತು ಅನ್ಯಪ್ರಾಪ್ತವೂ ಕೃತಕವೂ ಆದದ್ದು ಯಾವುದು ಎನ್ನುವುದರ ಬಗ್ಗೆ ಕೆಲವು ಕಡೆ ಗೊಂದಲ ಹುಟ್ಟುತ್ತದೆ.

ಪುರಾಣಕ್ಕಿಂತ ವಿಧ್ಯುಕ್ತ ಕ್ರಿಯೆಗಳ ಉಪಯೋಗ ಶ್ರೀ ಅನಂತಮೂರ್ತಿಯವರ ಕಥೆಗಳಲ್ಲಿ ಹೆಚ್ಚು ಸತ್ವಪೂರ್ಣವಾಗಿದೆ. ಪುರಾಣದ ಉಪಯೋಗ ‘ಪ್ರಶ್ನೆ’ಯಲ್ಲಿ ಅಪೂರ್ಣವಾಗಿದೆ: ಪ್ರಜ್ಞಾವಾಹಿನಿಗಷ್ಟೇ ಪರಿಮಿತವಾಗಿದೆ. ಆದರೆ ವಿಧ್ಯುಕ್ತ ಕ್ರಿಯೆಗಳು ಕಥೆಗಳ ಹೆಸರೇ ಸೂಚಿಸುವಂತೆ ‘ಪ್ರಸ್ತ’ ಮತ್ತು ‘ಘಟಶ್ರಾದ್ಧ’ದ ರೂಪು ರೇಷೆಯಾಗಿವೆ. ಬಿಡಿಯಾದ ಘಟನೆಯನ್ನು ವಿಧ್ಯುಕ್ತವಾದ ಶಾಶ್ವತ ಘಟನೆಯ ಜೊತೆ ಸಮತೂಗಿಸಿ ಅಂಕೆಯಲ್ಲಿಡುವ ಸಾಧನ ಇದು. ವಿಧ್ಯುಕ್ತಕ್ರಿಯೆ ವಿಡಂಬನೆಗೊಂದು ಹದವನ್ನು ತರಲು ಬರುವುದೂ ಉಂಟು. ಬುದ್ಧ ಅರಮನೆಯನ್ನು ತ್ಯಜಿಸಿ ಮಧ್ಯರಾತ್ರೆ ಹೊರಟ ಕ್ರಮದ ಹಿನ್ನೆಲೆಯಲ್ಲಿ ‘ಖೋಜರಾಜ’ದ ಈ ಸಂಗತಿ ಬರುತ್ತದೆ. ರಾಜಣ್ಣ ತನ್ನ ದ್ವಂದ್ವವನ್ನು ಕಳೆದುಕೊಳ್ಳಲೆಂದು, ಕಾಮ – ಪ್ರೇಮದ ಸಹಜ ಜೀವನವನ್ನು ನಡೆಸಲೆಂದು, ಸೂಟು – ಕೇಸಿಗೆ ಯಾವುದನ್ನೂ ಮರೆಯದೆ ತುಂಬಿ ಮಧ್ಯರಾತ್ರೆ ಹೊರಡುತ್ತಾನೆ.

“ಹತ್ತು ವರ್ಷ ನಿಂತಿದ್ದು ನಡೆಯತೊಡಗುವ ವಾಚನ್ನು ನೋಡಿದ. ಅರ್ಧಘಂಟೆ ನಡೆದರೆ ರೈಲ್ವೆಸ್ಟೇಷನ್ನು. ಹನ್ನೊಂದುವರೆಗೆ ಎದ್ದುನಿಂತ. ಬೂಟ್ಸ್ ಲೇಸು ಬಿಗಿದು, ಕನ್ನಡಿ ನೋಡಿ, ಕ್ರಾಪನ್ನು ತಿದ್ದು – ಪ್ಲಾಸ್ಟರ್ ಆಫ್ ಪ್ಯಾರೀಸು ಬುದ್ಧನ ಕಡೆಗೊಮ್ಮೆ ಹೊರಳಿ – ಓದಿದ ಕವನವೊಂದನ್ನು ನೆನೆದು ಹೊಸಲು ದಾಟಿ, ಬಾಗಿಲಿಗೆ ಬೀಗ ಬಲವಾಗಿ ಹಾಕಿ (ಬೀಗ ಬಿದ್ದಿತೋ ಇಲ್ಲವೊ ಎಂದು ಇನ್ನೊಮ್ಮೆ ಪರೀಕ್ಷಿಸಿ) ಹೊರಟ….! ಹೊರಟ ಹೊರಟೇ ಹೊರಟ ಹೊರಟನೆತ್ತೋ!….”

ಹೀಗೆಯೇ ‘ಖೋಜರಾಜ’ದಲ್ಲಿ ವಾಚನ್ನು ರಿಪೇರಿ ಮಾಡುವ ವರ್ಣನೆ – ಸಂಗತವಾಗಿ ರಾಜಣ್ಣ ತನ್ನೊಳಗೆ ಬಿಚ್ಚುವ ಜೋಡಿಸುವ ರಿಪೇರಿ – ವಿಡಂಬನಾತ್ಮಕ ವಿಧ್ಯುಕ್ತಕ್ರಿಯೆಯಾಗುತ್ತದೆ. ಎಲ್ಲವುದಕ್ಕಿಂತ ಹೆಚ್ಚಾಗಿ ‘ಕಾರ್ತೀಕ’ ವಿಧ್ಯುಕ್ತಕ್ರಿಯೆಗಳ ಅತ್ಯಂತ ಸಪಲ ಉಪಯೋಗವನ್ನು ಮಾಡಿಕೊಳ್ಳುತ್ತದೆ; ದೀಪಾವಳಿಯ ಶಾಸ್ತ್ರ ಪರಂಪರೆಯಲ್ಲಿ ಅಡಗಿದ ಕಲ್ಯಾಣಶಕ್ತಿಯ ಸೂಚನೆಯನ್ನು ಕಥೆಯ ಲೋಕಕ್ಕೆ ತರುತ್ತದೆ. ಎಳೆಯವನಾದ ರಾಘವನ ಭಾವನೆಗಳು ಘರ್ಷಣೆಗೆ ಸಿಕ್ಕಿವೆ; ತಾಯಿ ಮತ್ತು ರಾಗಜ್ಜನ ನಡುವೆ ಅವನ ನಿಷ್ಠೆ ತುಯ್ಯುತ್ತದೆ. ರಾತ್ರಿ ಊಟದ ಹೊತ್ತಿಗೆ ಪರಿಸ್ಥಿತಿ ವಿಕೋಪಕ್ಕಿಟ್ಟುಕೊಳ್ಳುತ್ತದೆ. ಲೇಖಕರು ಮಧ್ಯಮ ವರ್ಗದ ಕುಟುಂಬಗಳಲ್ಲಿ ಸಾಮಾನ್ಯವಾದ ಭಾವೋದ್ರೇಕದ ರಂಪವನ್ನು ಸೂಕ್ಷ್ಮವಾಗಿ ಚಿತ್ರಿಸುತ್ತಾರೆ. ರಾಗಜ್ಜನ ಎಂಜಲಾದ ಬಣ್ಣದ ಸೌತೆ ಹೋಳನ್ನು ರಾಘವ ತಿನ್ನಲು ಹೋದಾಗ ತಾಯಿ ಬೇಡವೆಂದು ಕಣ್ಣುಸನ್ನೆ ಮಾಡುವುದು, ಅಜ್ಜಿ ಅದಕ್ಕೆ ರೇಗುವುದು, ಅಜ್ಜ ಅಪೋಶನ ತೆಗೆದುಕೊಂಡು ಊಟ ಬಿಟ್ಟೇಳುವುದು, ತಂದೆ ಬಂದು ರೂಲುದೊಣ್ಣೆಯಲ್ಲಿ ತಲೆ ಚಚ್ಚಿಕೊಳ್ಳುವುದು, ತಾಯಿ ಬಾವಿಗೆ ಹಾರುತ್ತೇನೆಂದು ಓಡುವುದು – ದೀರ್ಘ ವಾಕ್ಯಗಳಲ್ಲಿ ವೇಗವಾಗಿ ಚಿತ್ರಿತವಾಗಿದೆ. ಬಣ್ಣದ ಸೌತೆ – ಹೋಳಿನ ನೆವದಿಂದ ಶೂರುವಾಗಿ ಕುಟುಂಬ ಒಡೆದು ವಿಕ್ಷುಬ್ಧವಾಗುತ್ತದೆ. ಸದಾ ಗೊಣಗುವ ಈ ವರ್ಗದ ಜನರ ಸಪ್ಪೆ ಜೀವನದಲ್ಲಿ ಇಂತಹ ರಾದ್ಧಾಂತಗಳು ಮಾತ್ರ ಆವೇಶಕ್ಕೆ ಎಡೆಮಾಡಿಕೊಡುತ್ತವೆ. ಕೊನೆಗೆ ರಾಘವ ಮತ್ತು ಅವನ ತಾಯಿ ಇಬ್ಬರೇ ಉಳಿಯುತ್ತಾರೆ. ಆರಿದ ಅನ್ನದ ಮೇಲೆ ಕೈಯಿಟ್ಟು ದಿಗ್ಭ್ರಾಂತನಾಗಿ ರಾಘವ ಕೂತಿರಲು ಅವನ ತಾಯಿ ಭಣಗುಟ್ಟುವ ಮೌನದಲ್ಲಿ ಎಣ್ಣಿ ಎಣ್ಣಿ ಅಳುತ್ತಾಳೆ. ಅದರ ಮಾರನೆಯ ಪ್ರಾತಃಕಾಲ ದೀಪಾವಳಿ. ಮನೆಮಂದಿಗೆಲ್ಲ ಎಣ್ಣೆ ಶಾಸ್ತ್ರ ಅಭ್ಯಂಜನವಾಗಬೇಕು – ಶುಭಸೂಚಕ ವಿಧ್ಯುಕ್ತ ಶಾಸ್ತ್ರಗಳು ಇವು. ರಾಘವನ ತಾಯಿ ನಸುಕಿನಲ್ಲೆದ್ದು ಎಲ್ಲರನ್ನು ಎಬ್ಬಿಸುತ್ತಾಳೆ. ಹಿಂದಿನ ರಾತ್ರೆಯ ಕಹಿ ಅವಳ ನಡತೆಯಲ್ಲಿ ಕಾಣಿಸುವುದಿಲ್ಲ; ಪರಸ್ಪರ ಕೋಪತಾಪಗಳು ಮರೆಯಲಾಗಿವೆ. ಅಥವಾ ಮುಂದೆ ಹಾಕಲಾಗಿವೆ. ಇವತ್ತು ಜಗಳಾಡುವುದು ಅಶುಭ. ಕಥೆ ಇಲ್ಲಿಂದ ಇನ್ನೊಂದು ದಿಕ್ಕಿಗೆ ಹರಿದು ಈ ಶುಭದ ಅಂಶವನ್ನು ಬೆಳೆಸಿಕೊಂಡು ಹೋಗುತ್ತದೆ. ಕೊನೆಗೆ ಬಾಲಕರ ಉತ್ಕಟ ಆನಂದದ ಅನುಭವದಲ್ಲಿ ಶಿಖರ ಮುಟ್ಟುತ್ತದೆ.

‘ಪ್ರಸ್ತ’ ಮತ್ತು ‘ಘಟಶ್ರಾದ್ಧ’ದ ಘಟನೆಗಳಿಗೊಂದು ಆಕಾರ ಬರುವುದು ವಿಧ್ಯುಕ್ತ ಕ್ರಿಯೆಯಿಂದ. ‘ಪ್ರಸ್ತ’ದಲ್ಲಿ ನಿಷೇಕ – ಶಾಸ್ತ್ರದ ಸುತ್ತ ಗಂಡು ಹೆಣ್ಣಿನ ವಿವಿಧ ರೀತಿಯ ಸಂಬಂಧಗಳನ್ನು ಹೆಣೆಯುವುದು ಬರಿ ಚಮತ್ಕಾರವಾಗಿಬಿಡುತ್ತದೆ. ಆದರೆ ‘ಘಟಶ್ರಾದ್ಧ’ದಲ್ಲಿ ಶ್ರಾದ್ಧಕರ್ಮ ಇನ್ನಷ್ಟು ಸಾವಯವವಾಗಿ ಬಂದಿದೆ. ಒಂದಲ್ಲ ಒಂದು ರೀತಿಯಲ್ಲಿ ಶ್ರಾದ್ಧದ ವಿಷಯ ಬರುತ್ತದೆ; ಯಮುನಕ್ಕನ ಆತ್ಮಹತ್ಯೆಯ ಪ್ರಯತ್ನದಲ್ಲಿ, ಅದು ನಿರರ್ಥಕವಾಗಲು ಭ್ರೂಣಹತ್ಯೆಯಲ್ಲಿ, ಮತ್ತು ಅಂತಿಮವಾಗಿ ಸಮಾಝದ ಒಂದು ಘಟಕವಾದ ಅವಳನ್ನು ಹೊರಹಾಕುವ ಘಟಶ್ರಾದ್ಧದಲ್ಲಿ, ಕಥೆಯ ಬೆಳವಣಿಗೆ ವೇಗವಾಗಿ ನಿರಾಯಾಸವಾಗಿ ಸಾಧಿತವಾಗಿದೆ. ನೇರವಾದ ಕಥನವನ್ನು ಪ್ರಯತ್ನಿಸಿ ಲೇಖಕ ಯಶಸ್ವಿಯಾಗಿದ್ದಾರೆ. ಒಂದು ರೀತಿಯ ದೃಷ್ಟಿಯಿಂದ ಚರ್ವಿತ ಚರ್ವಣವಾದ ಗರ್ಭಿಣಿ ವಿಧವೆಯ ಕಥಾವಸ್ತು ಒಂದು ಮಗುವಿನ ಪ್ರಜ್ಞೆಯ ಮೂಲಕ ಇಲ್ಲಿ ದಾಖಲಾಗುವುದರಿಂದ ಕಥೆ ಬರಿಯ ಸಾಮಾಜಿಕ ವಿಡಂಬನೆಗೊಂದು ಸಾಧನವಾಗದೆ ತನ್ನ ಸತ್ವವನ್ನು ಉಳಿಸಿಕೊಂಡಿದೆ. ಅಲ್ಲದೆ ನಾಣಿ ಯಮುನಕ್ಕರ ಸಂಬಂಧದ ಚಿತ್ರಣದಲ್ಲಿ ವಿಶೇಷ ಸಂಕೀರ್ಣತೆಯಿದೆ. ಒಳಸಂಚು ಎಂದರೆ ಬಾಲಕನ ನಿಷ್ಕಪಟ ಪ್ರವೃತ್ತಿಗೆ ಆಗದು. ಒಳಸಂಚುಗಳಿಗೆ ಕಾರಣಳಾಗುತ್ತಾಳೆಂದು ಯಮುನಕ್ಕನ ಬಗ್ಗೆ ಅವನಿಗೆಕೆಲವು ಸಾರಿ ದ್ವೇಷವೂ ಹುಟ್ಟುತ್ತದೆ. ಬ್ರಹ್ಮರಾಕ್ಷಸ ರಾತ್ರಿ ಮನೆ ಸುತ್ತುತ್ತದೆಂದು ದಿಗಿಲು ಬೇರೆ. ಜೊತೆಗೆ ತನ್ನ ಮನೆಗೆ ಹೋಗಬೇಕೆಂಬ ಆಸೆ. ಯಮುನಕ್ಕನ ನಿಸ್ಸಹಾಯಕ ದುಃಖಸ್ಥಿತಿ ಆತನನ್ನು ವಶಪಡಿಸಿಕೊಳ್ಳಲು ಕಾರಣ ಬಾಲಕನ ಅಶಕ್ತಿ ಸಹಾಯಕ ಬುದ್ಧಿಯಲ್ಲ; ಬಾಲ್ಯ ಸಹಜವಾದ ಜೀವನದ ಖುಷಿಯಿರುವ ನಾಣಿಗೆ ನಡೆಯುವ ಘಟನೆಗಳು ಕೊಳಕಾಗಿಯೂ ಅಸಹ್ಯ ರಗಳೆಗಳಾಗಿಯೂ ಕಾಣುವುದರಿಂದ. ನಾಣಿ ಅವನ ಜಾಗೃತ ಮನಸ್ಸಿನ ಭಾವನೆಗಳಿಗೆ ಅತೀತವಾದ ಕಾರಣಗಳಿಂದಾಗಿ ಆಕೆಯ ಜೊತೆ ಭಾಗಿಯಾಗಿ ನಿಲ್ಲುತ್ತಾನೆ.

ಕಥೆಗಳು ಅಚ್ಚಾದ ಅನುಕ್ರಮದ ದೃಷ್ಟಿಯಿಂದಲೂ ‘ಘಟಶ್ರಾದ್ಧ’ ಅರ್ಥಪೂರ್ಣ ವಾಗಿದೆ. ಇದು ಕಡೆಯ ಕಥೆ. ಕಥೆಗಳನ್ನು ಬರೆದ ಕಾಲವನ್ನು ಗಮನಿಸಿದರೆ ಮತ್ತು ‘ಖೋಜರಾಜ’ ‘ಘಟಶ್ರಾದ್ಧ’ಗಳನ್ನು ಹೋಲಿಸಿ ನೋಡಿದರೆ ಬೆಳವಣಿಗೆ ಸ್ಪಷ್ಟವಾಗುತ್ತದೆ. ಈ ಲೇಖಕನ ಬೆಳವಣಿಗೆ ಛಿದ್ರವಾದದ್ದಲ್ಲ, ಸಮಗ್ರವಾದದ್ದು. ಸಾಹಿತ್ಯ ಸೃಷ್ಟಿಯೆಂದರೆ ಶ್ರೀಮಂತವಾದ ಅನುಭವಕ್ಕೊಂದು ಆಕಾರವನ್ನು ತರುವ ಪ್ರಯತ್ನವಾದರೆ, ಸಾಹಿತಿ ತನ್ನ ಅನುಭವದ ನಿಧಿಗೆ ಮತ್ತೆ ಮತ್ತೆ ಕೈಚಾಚುವುದು ಸಹಜ. ಬೆಳೆಯುತ್ತಿರುವ ಲೇಖಕ ತನ್ನ ಅನುಭವದ ವಿವಿಧ ಪದರುಗಳನ್ನು ಬೆಳವಣಿಗೆಯ ವಿವಿಧ ಘಟ್ಟಗಳಲ್ಲಿ ಅರಿತುಕೊಳ್ಳಬಲ್ಲ, ‘ಘಟಶ್ರಾದ್ಧ’ದಲ್ಲಿ ಬರುವ ಹಾವಿನ ಸಂಗತಿ ಲೇಖಕರ ಪುನರಾವರ್ತನೆಗೊಳ್ಳುವ ಕಾಳಜಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಯಮುನಕ್ಕೆ ಅತ್ಯಂತ ಸಂದಿಗ್ಧದಲ್ಲಿರುವಾಗ ಹಾವು ಹರಿದು ಬರುತ್ತದೆ. ಅವಳನ್ನು ಭ್ರಷ್ಟಳನ್ನಾಗಿ ಮಾಡಿದ ಪ್ರಣಯಿಯ ಜೊತೆಗಿನ ಅವಳ ಭೇಟಿಯನ್ನು ಅದು ಕೊನೆಗೊಳಿಸುವುದುರ ಜೊತೆ ನಾಣಿಯ ನಿಷ್ಠೆ ಯಾವ ಕಡೆಗೆ ಎಂಬುದನ್ನು ತೀರ್ಮಾನಿಸುತ್ತದೆ. ‘ಖೋಜರಾಜ’ದಲ್ಲೂ ಹಾವು ರಾಜಣ್ಣನ ಕಾಮೋದ್ಧೀಪ್ತ ಘಳಿಗೆಯಲ್ಲಿ ಬಂದು ಕಾಡುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಆದರೆ ಮೊದಲಿನ ಕಥೆಯಾದ ‘ಖೋಜರಾಜ’ದಲ್ಲಿ ಇದು ಹಗಲುಗನಸಿನ ಒಂದು ಅಂಶ. ಕಡೆಯ ಕಥೆಯಲ್ಲಿ ನಿರ್ಣಾಯಕವಾಗಿ ಬರುವ ಕಥೆಯ ಅಖಂಡಾಂಶ. ಈ ರೀತಿ ಪ್ರತೀಕದ ಬಳಕೆಯಲ್ಲಾಗುವ ಬದಲಾವಣೆ ಶ್ರೀ ಅನಂತಮೂರ್ತಿಯವರ ಸಂವೇದನಾಶಕ್ತಿಯ ಬೆಳವಣಿಗೆಗೆ ದ್ಯೋತಕವಾಗಿದೆ. ಮೊದಲಿನದು ಚುರುಕಾದ ಬೌದ್ಧಿಕ ಕ್ರಿಯೆಯ ಮೂಲಕ ಜೀವನದ ಜೊತೆಗೆ ಪಡೆದ ಸಂಬಂಧವಾದರೆ, ಈಗಿನದು ಇನ್ನಷ್ಟು ಹೆಚ್ಚು ಘನವಾದ ರೀತಿಯಲ್ಲಿ ಅನುಭವದ ಸಮಗ್ರತೆಯನ್ನು ಗ್ರಹಿಸಲೆಂದು ಹೆಣಗುವ ಸಾಹಸ.

ಮೇಲುಮೇಲಿನ ಹುರುಳಿಲ್ಲದ ಜಾಣತನದ ಪ್ರಯತ್ನ ಇವರಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ – ‘ಖೋಜರಾಜ’ದಂತಹ ಕಥೆಯೂ ಕೂಡ ಪ್ರಬುದ್ಧತೆಯ ದಿಕ್ಕಿನಲ್ಲಿದೆ. ಎರಡನೆಯ ಕಥೆಯಾದ ‘ಪ್ರಕೃತಿ’ಯಲ್ಲಿಯೇ ಕಥೆಯ ಕೇಂದ್ರ ಪ್ರಜ್ಞೆಯಾದ ಸಂಕಪ್ಪಯ್ಯನ ಮುಖಾಂತರ ಜೀವನದ ದ್ವಂದ್ವ ಪ್ರವೃತ್ತಿಗಳನ್ನು ನಿರೂಪಿಸುವ ಪ್ರಬುದ್ಧತೆಯನ್ನು ಕಾಣುತ್ತೇವೆ. ಪ್ರಕೃತಿಯ ವಿರುದ್ಧ ಸಂಪ್ಪಯ್ಯ ಹೋರಾಡುತ್ತಾನೆ; ಲಕ್ಷ್ಮಿ ಮತ್ತು ಕಿತ್ತಳೆ ತೋಟದ ಜೊತೆ ಅವನಿಗಿರುವ ಸಂಬಂಧದಲ್ಲಿ ಈ ಹೋರಾಟ ಚಿತ್ರಿತವಾಗುತ್ತದೆ. ಲಕ್ಷ್ಮಿ ಬಾಲವಿಧವೆ – ಒತ್ತಾಯಕ್ಕೆ ಸಿಕ್ಕಿ ಬರಡಾದವಳು. ಕಿತ್ತಳೆ ನೆಟ್ಟ ತೋಟವಾದರೋ ಬರಡು – ಭೂಮಿ – ಕೃತಕವಾಗಿ ಒತ್ತಾಯಕ್ಕೆ ಸಫಲವಾಗಬೇಕಾದ್ದು. ನಿಸರ್ಗದ ನಿಯಮಕ್ಕೆ ವಿರೋಧವಾಗಿ ಸಂಕಪ್ಪಯ್ಯನು ತನ್ನ ಇಚ್ಛಾಶಕ್ತಿಯನ್ನೆಲ್ಲ ತಪ್ಪುದಿಕ್ಕಿಗೆ ಹರಿಸುತ್ತಾಣೆ. ಕೊನೆಯಲ್ಲಿ ಅವನ ಸೋಲು ಮತ್ತು ನಿಸರ್ಗದ ಜಯ ಜೀವನೋನ್ಮುಖ ಶಕ್ತಿಯ ಗೆಲುವಿಗೆ ಸಂಕೇತವಾಗಿದೆ. ಒಟ್ಟು ಶಿಲ್ಪದ ದೃಷ್ಟಿಯಿಂದ ‘ಪ್ರಕೃತಿ’ ಕ್ಲಾಸಿಕ್ ಪಂಗಡಕ್ಕೆ ಸೇರುತ್ತದೆ. ದ್ವಂದ್ವ ಪ್ರವೃತ್ತಿಗಳನ್ನು ಹೆಣೆದು, ಸಮತೂಗಿಸಿ, ಹೊಂದಿಸಿದ ರೀತಿ ಅದ್ಭುತವಾಗಿದೆ.

ಶ್ರೀ ಅನಂತಮೂರ್ತಿಯವರ ಮೊದಲನೆಯ ಕಥಾಸಂಕಲನ ‘ಎಂದೆಂದೂಮುಗಿಯದ ಕಥೆ’ ಅವರ ಕಥನತಂತ್ರದ ಸಾಮರ್ಥ್ಯ ಪ್ರಯೋಗಶೀಲತೆಗಳನ್ನು (ಉದಾಹರಣೆ: ‘ಹುಲಿಯ ಹೆಂಗರುಳು’) ಮತ್ತು ನವಿರಾದ ಮಾರ್ಮಿಕವಾದ ಭಾವಗೀತೆಯ ಗುಣವನ್ನು (ಉದಾಹರಣೆ: ‘ತಾಯಿ’), ಸಾಕಷ್ಟು ತೋರಿಸಿತ್ತು. ಅಷ್ಟೆ ಅಲ್ಲ: ‘ಹುಲಿಯ ಹೆಂಗರುಳು’ ಇವರ ಸಂಕೀರ್ಣ ಪ್ರತಿಕ್ರಿಯೆಯ ಸಾಮಾರ್ಥ್ಯದಲ್ಲಿ ಹೆಚ್ಚು ಭರವಸೆಯನ್ನು ಕೆರಳಿಸುವಂತಿತ್ತು. ಉದಾಹರಣೆಗೆ, ತಾನು ಕೊಂದ ತನ್ನ ಹೆಂಡತಿಯ ಉಪಪತಿಯಾದ ಸೀನಸೆಟ್ಟಿಯನ್ನು ಮಳೆಯಲ್ಲಿ ದೋಣಿ ಬಿಟ್ಟುಕೊಂಡು ಹೋದ ಸಿದ್ಧ ಉಳಿಸುವಾಗಿನ ಅವನ ಮನಸ್ಸಿನ ಹೋರಾಟವನ್ನು ನೋಡಿ:

“ತೇಂಕಿ ತೇಂಕಿ ಸಿದ್ಧ ಒದರಿದ:

‘ಆಹ್! ಸೀ…. ನ ಸೆಟ್ಟೀ!’

ಬಂಡೆಯ ಮೇಲಿನ ಜೀವ – ಜಂತು –

(ಇಶ್ಯಿ!ಬದುಕೇ!!) – ಕುರಿಯಂತೆ – (ಥೂ!) – ಮಿಲುಕಾಡಿತು – (‘ಅಮ್ಮಾ! ನೋಡಲಾರೆನಮ್ಮ!!’)

‘ಆ… ಆ… ಬೆಬೆಬೇ!!…. (ಬ್ಯಾ… ಬ್ಯಾ)… ’

ಬಡಜೀವಿಯ ಅಂಗ ಅಂಗವೂ ಪ್ರಾಣಭಿಕ್ಷೆ ಯಾಚಿಸಿತು.

(‘ಅಯ್ಯೋ! ಅಮ್ಮಾ! ಅಮ್ಮಾ!…. ಕುರಿ ಕಡಿಯಬೇ’… ‘ಬ್ಯಾ… ಬ್ಯಾ…’ … ‘ಅಯ್ಯೊ!’…. )”

“ಪ್ರಶ್ನೆ” ಸಂಕಲನದ ಕಥೆಗಳು ಆ ಭರವಸೆಯನ್ನು ಊಹಿಸಿದ್ದಕ್ಕಿಂತ ಹೆಚ್ಚಾಗಿ ಸಫಲಗೊಳಿಸಿರುವುದನ್ನು ಈ ಕಥೆಗಾರರ ಗಾಢವಾಗುತ್ತಿರುವ ಪ್ರಾಮಾಣಿಕತೆಯಲ್ಲಿ ಕಾಣಬಹುದು ಸಣ್ಣಕಥೆ ಇಲ್ಲಿ ಪ್ರಬುದ್ಧ ಅವಸ್ಥೆಯನ್ನು ಪಡೆದಿದೆ.

ರಾಜೀವ ತಾರಾನಾಥ
೨೪ ಸೆಪ್ಟಂಬರ್, ೧೯೬೨

* * *