ಭಾಗ: ಒಂದು

ಭಾವಿಕೆರೆ ಕುಪ್ಪಣ್ಣಭಟ್ಟರಿಗೂ ಸೀಬಿನಕೆರೆ ಅಪ್ಪಣ್ಣಭಟ್ಟರಿಗೂ ಹಾವು ಮುಂಗಸಿ. ಈ ವೈರ ಆಜನ್ಮ: ಇದರ ಮೂಲ ಅಗಮ್ಯ. ಅರ್ಧ ಮೈಲಿ ದೂರದಲ್ಲಿರುವ ಎರಡು ಗುಡ್ಡಗಳ ಬೆನ್ನಿಗೆ ಇವರ ಮನೆ. ನಡುವೆ ಒಂದು ಕಣಿವೆಯಲ್ಲಿ ಬೇಲಿಯ ಆಚೆ ಕುಪ್ಪಣ್ಣಭಟ್ಟರ ತೋಟವಾದರೆ ಈಚೆ ಅಪ್ಪಣ್ಣಭಟ್ಟರ ತೋಟ. ಇಬ್ಬರೂ ಶ್ರೀಮಠದ ನರಸಿಂಹದೇವರ ಒಕ್ಕಲು. ಇಬ್ಬರೂ ಕೈಯಲ್ಲಿ ಬರಿಯ ತೀರ್ಥದ ಬಟ್ಟಲು ಹಿಡಿದು ಘಟ್ಟದ ಕೆಳಗಿನಿಂದ ದುಗ್ಗಾಣಿಯಿಲ್ಲದೆ ಅಡಿಕೆ ತೋಟ ಮಾಡಲು ಬಂದವರು. ಆರು ಮೈಚಾಚೆಯಿರುವ ಗೋಪಾಲ ಕಮ್ತಿಯ ಅಂಡಿಯಲ್ಲಿ ಇಬ್ಬರದೂ ಲೆಖ್ಖವುಂಟು.

ಕುಪ್ಪಣ್ಣ ಭಟ್ಟರು ವಯಸ್ಸಿನಲ್ಲಿ ಹಿರಿಯರು. ಅವರು ಕಳೆದ ಐವತ್ತು ಸಂವತ್ಸರ ಒಣಗಿದ ಹುಳಿ ಮಾವಿನ ಹಣ್ಣಿನಂತಹ ಅವರ ಮುಖದಲ್ಲಿ ಎದ್ದು ಕಾಣುತ್ತದೆ. ಒಂದು ಕಾಲದಲ್ಲಿ – ಅಂದರೆ ಹೆಚ್ಚೇನಲ್ಲ. ಬರಿಯ ಎರಡು ವರ್ಷದ ಕೆಳಗೆ – ಪೆಟ್ಟೊಂದಕ್ಕೆ ತುಂಡೆರಡು ಎನ್ನುವಂತಹ ಮಾತನ್ನಾಡಲು ಮಾತ್ರ ಬಾಯಿ ತೆರೆಯುತ್ತಿದ್ದ ಮನುಷ್ಯ. ಕಪ್ಪಗೆ ಕುಳ್ಳಗೆ ಕೃಶವಾದ ಅವರ ಶರೀರ ಈಚೆಗೆ ಮಾತ್ರ ದಿನಗಳೆದಂತೆ ಸೊರಗುತ್ತಿದೆ. ಉಳಿದ ಮರ್ಜಿಯಲ್ಲೇನೂ ಬದಲಿಲ್ಲ. ಅದೇ ಹೊಳೆಯುವ ಬೋಳು ತಲೆ. ಒಂದು ಕಾಲದಲ್ಲಿ ಸದಾ ಸಿಡುಕಿನ, ಈಗ ಮಂಕಾಗಿ ಉರಿಯುವ ಸಣ್ಣ ಕಣ್ಣುಗಳು. ಗುಜ್ಜ ಮೂಗು. ದಿಂಡು ಮಾವಿನ ಮೂತಿಯ ಗದ್ದ. ಉಟ್ಟ ಪಂಚೆ ಹೊದ್ದ ಧೋತ್ರಗಳ ಮೇಲೆ ಅವರ ಸಾಲದಂತೆಯೇ ವರ್ಷಾಂತರದಿಂದ ಉಳಿದು ಬಂದ ಬಾಳೆ ಕೆರೆ, ಅಡಿಕೆ ಕರೆ. ಬಾಯಿಯ ಒಂದು ಪಾರ್ಶ್ವದಲ್ಲಿ ಸದಾ ಒಂದು ಹೊಗೆಸೊಪ್ಪಿನ ಉಂಡೆಯಿದ್ದೇ ಇರಬೇಕು. ಒಂದು ಕಾಲದಲ್ಲಿ ಏನಾದರೂ ಸಿಟ್ಟಿನ ಮಾತನ್ನಾಡುವ ಪ್ರಮೇಯ ಒದಗಿದಲ್ಲಿ ಎದುರು ಪಕ್ಷದವನ ಮಾತನ್ನೆಲ್ಲ ಬಿಗಿದ ತುಟಿಯಲ್ಲಿ ಆಲಿಸಿ, ಅಂಗಳದೊಂದು ಮೂಲೆಗೆ ಧಿಡಧಿಡನೆ ನಡೆದು, ಹೊಗೆಸೊಪ್ಪನ್ನು ಉಗಿದು, ಎದುರಾಳಿ ಎದುರುತ್ತರ ಕೊಡಬಾರದು – ಹಾಗೆ, ಫಟೀರೆನ್ನುವ ಒಂದು ಮಾತನ್ನಾಡಿ, ಮತ್ತೆ ಹೊಗೆಸೊಪ್ಪಿನ ಚೂರೊಂದನ್ನು ಸುಣ್ಣದಲ್ಲಿ ತಿಕ್ಕಿ ಬಾಯಲ್ಲಿಟ್ಟು ಮೌನವಾಗಿಬಿಡುತ್ತಿದ್ದ ಮನುಷ್ಯ ಅವರು. ಈಗ ಮಾತ್ರ ಕಾಲು ಕೆರೆದುಕೊಂಡು ಜನ ಜಗಳಕ್ಕೆ ಬಂದರೂ ನನಗೂ ನಿನಗೂ ವೈವಾಟಿಲ್ಲವೆಂಬಂತೆ ತಿರಸ್ಕಾರದಿಂದ ಬೀಗ ಮುದ್ರೆಯ ಮುಖವೆನ್ನೆತ್ತಿ ನಿಶ್ಚಲರಾಗಿಬಿಡುತ್ತಾರೆ.

ಸೀಬಿನಕೆರೆ ಅಪ್ಪಣ್ಣಭಟ್ಟರು ಲೋಕಪ್ರಿಯರು. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಯವಾದ ನಾಜೂಕಾದ ರಾಗದ ಮಾತು ಅವರದು. ಎರಡು ಮೈಲಾಚೆ ಇರುವ ಬುಕ್ಲಾಪುರದ ಅಗ್ರಹಾರದ ಬ್ರಾಹ್ಮಣರೆಲ್ಲ – ಬಡವ ಬಲ್ಲಿದವನೆನ್ನದೆ – ಅವರಿಗೆ ಬೇಕಾದವರು. ಮೊದಲೇ ಕುಪ್ಪಣ್ಣಭಟ್ಟರು ಜಗಳಗಂಟಿಯಾದ್ದರಿಂದ ಒಂದಲ್ಲ ಒಂದು ಕಾರಣದಿಂದ ಬುಕ್ಲಾಪುರದವರನ್ನೆಲ್ಲ ಮೈಮೇಲೆ ಹಾಕಿಕೊಂಡಿದ್ದರು. ಆದ್ದರಿಂದ ಎಲ್ಲರಿಗೂ ಅಪ್ಪಣ್ಣಭಟ್ಟರೆಂದರೆ ಆಗಬೇಕು. ಅಲ್ಲದೆ ಅಪ್ಪಣ್ಣಭಟ್ಟರು ಕುಪ್ಪಣ್ಣಭಟ್ಟರಂತೆಯೇ ದುಗ್ಗಾಣಿಯಿಲ್ಲದೆ ಬಂದವರಾದರೂ ತೋಟ, ಮನೆ, ಗದ್ದೆಯನ್ನು ಲಾಯಕ್ಕಾಗಿ ಇಟ್ಟುಕೊಂಡಿದ್ದರು. ಅಪ್ಪಣ್ಣಭಟ್ಟರ ಸೂರಿನ ಕೆಳಗೆ ಸೇವಂತಿಗೆ; ಅಂಗಳದಲ್ಲಿ ಚಪ್ಪರ. ಬಂದವರಿಗೆ ಬಣ್ಣದ ಚಾಪೆ ಹಾಸಿ ಕಾಫಿ ಕೊಟ್ಟು ಉಪಚರಿಸದೆ ಕಳುಹಿಸುವುದಿಲ್ಲ. ಆದರೆ, ಶೂದ್ರರ ಅಂಗಳ ಬೇಕು – ಕುಪ್ಪಣ್ಣಭಟ್ಟರ ಅಂಗಳ ಮಾತ್ರ ಬೇಡ. ಅಲ್ಲೆ ಸಗಣಿ, ಅಲ್ಲೆ ಮಕ್ಕಳ ಪಾಯಖಾನೆ, ಮೊಣಕಾಲೆತ್ತರ ಹುಲ್ಲು, ಇಲ್ಲವೆ ಕೆಸರು, ಕಾಲು ಬೆರಳಿನ ಸಂದಿ ಕಡಿಯುವ ಜಿಗಣೆ, ಗೊಬ್ಬರದ ಗುಂಡಿಯ ನೊಣ. ಅಪ್ಪಣಭಟ್ಟರು ಅನ್ನುತ್ತಾರೆ, ‘ನಮ್ಮ ಕೊರಗನ ಗುಡಿಸಿಲು ಅವರದಕ್ಕಿಂತ ವಾಸಿ, ಹೋಗಿ ನೋಡಿ ಬೇಕಾದರೆ. ’

ಗೋಪಾಲ ಕಮ್ತಿಯ ಅಂಗಡಿಯಲ್ಲಿ ಕುಪ್ಪಣ್ಣಭಟ್ಟರ ಸಾಲ ವರ್ಷಾಂತರದ ಬಡ್ಡಿ ಚಕ್ರಬಡ್ಡಿಗಳ ಶೇಕಡಾ ಲೆಖ್ಖಗಳಲ್ಲಿ ಖಾತೆಯಿಂದ ಖಾತೆಗೆ ಸಾವಿರಕ್ಕೂ ಮಿಕ್ಕು ಬೆಳೆದಿದೆ. ಒಂದು ವರ್ಷದಿಂದಂತೂ ಕಮ್ತಿಯ ಕಡೆಯಿಂದ ವಸೂಲಿ ಸಾಬ ವಾರಕ್ಕೊಮ್ಮೆ ಬಂದು, ಕುಪ್ಪಣ್ಣಭಟ್ಟರ ಜಗುಲಿಯ ಮೇಲೆ ಕೂತು ಕಾಡುವ ವಿಷಯ ಎಲ್ಲರಿಗೂ ತಿಳಿದಿದೆ. ಅಪ್ಪಣ್ಣಭಟ್ಟರು ಮಾತ್ರ ವರ್ಷದ ಕೊನೆಯಲ್ಲಿ ಕಮ್ತಿಯ ಲೆಖ್ಖದಲ್ಲಿ ಕಾಸು ಉಳಿಯದಂತೆ ಚುಕ್ತ ಮಾಡಿಬರುತ್ತಾರೆ. ಹಾಗೆ ಮಠದ ಗೇಣಿಯನ್ನು ಒಂದಡಕೆ ಉಳಿಸಿಕೊಳ್ಳದಂತೆ ಅಪ್ಪಣ್ಣಭಟ್ಟರು ಕೊಟ್ಟದ್ದಲ್ಲದೆ, ವಸೂಲಿಗೆ ಬಂದ ಶಾನುಭೋಗರಿಗೆ ಒಂದು ಕೊಳಗ, ಏಜೆಂಟರಿಗೆಎರಡು ಕೊಳಗದಂತೆ ಮರ್ಯಾದೆ ಅಡಿಕೆ ಕೊಟ್ಟು, ಪಾಯಸದ ಅಡಿಗೆ ಮಾಡಿಊಟ ಹಾಕಿಸಿ ಕಳಿಸುತ್ತಾರೆ. ಕುಪ್ಪಣ್ಣಭಟ್ಟರ ಗೇಣಿ ಮಾತ್ರ ವರ್ಷಾಂತರ ಹತ್ತು ಹನ್ನೆರಡು ಮಣಗಳಂತೆ ಉಳಿದು,ಉಳಿದು – ಈಗ ಐದು ಸಾವಿರ ರೂಪಾಯಿಯ ಮೇಲೆ ಸಾಲವಾಗಿದೆ. ಮಠದವರು “ಒಂದೊ ತೋಟ ಬಿಡಿ, ಇಲ್ಲ ಸಾಲ ತೀರಿಸಿ” ಎಂದು ಪೀಡಿಸಹತ್ತಿದ್ದಾರೆ. ಅಲ್ಲದೆ ತೋಟಕ್ಕೆ ಸರಿಯಾಗಿ ಬೇಸಾಯವಾಗದೆ, ಸಸಿ ನಡದೆ, ಮರಗಳೆಲ್ಲ ಕೃಶವಾಗಿವೆಯೆಂದು ಏಜೆಂಟರಿಗೆ ಸಿಟ್ಟು, ಅಪ್ಪಣ್ಣಭಟ್ಟರಿಗಾದರೂ ಗೇಣಿಗೆ ಕೊಟ್ಟರೆ ತೋಟವನ್ನಾದರೂ ಊರ್ಜಿತಕ್ಕೆ ತರುತ್ತಾನೆಂದು ಏಜೆಂಟರು ಬಾಯಿಬಿಟ್ಟು ಹೇಳುತ್ತಾರೆ. ‘ಏನೋ ನಿಮ್ಮ ಕೃಪೆ’ಯೆಂದು ಕಷ್ಟವಾನಿಯಾದ ಅಪ್ಪಣ್ಣಭಟ್ಟರು ಶ್ರೀ ಗುರುಗಳು ಕಾಶಿಗೆ ಹೋಗುವ ಮುಂಚೆ ಅವರನ್ನು ಕರೆಸಿ ಭಿಕ್ಷೆ ಮಾಡಿದರು; ಬೆಳ್ಳಿಯ ತಟ್ಟೆಯಲ್ಲಿ ಐವತ್ತು ಬೆಳ್ಳಿಯ ರೂಪಾಯಿಯಿಟ್ಟು ಸ್ವಾಮಿಗಳ ಪಾದಕ್ಕೆ ಬಿದ್ದರು.

ಜನರೆನ್ನುವ ಮಾತಿಗೂ ಕುಪ್ಪಣ್ಣಭಟ್ಟರ ನಡತೆಗೂ ಸರಿಸಮವೆನ್ನಬೇಕೆಂದು ಸ್ವತಃ ಮೇದುನನೇ ಅಂದಮೇಲೆ, ಅಪ್ಪಣ್ಣಭಟ್ಟರು ರಾಗವಾಗಿ ಬುಕ್ಲಾಪುರದವರ ಎದುರಿಗೆಲ್ಲ ಅಂದದ್ದು ಹೆಚ್ಚಲ್ಲ: “ನಾನಂತೂ ಆಗುವುದಿಲ್ಲ ಮಹರಾಯರಿಗೆ ಹೋಗಲಿ, ನೀವೇನು ಮಾಡಿದ್ದೀರಿ ಅವರಿಗೆ? ಹಿರಿಯ ಮಾಣಿಗೆ ಮನೆಯಲ್ಲೆ ಉಪನಯನ ಮಾಡಿ ನಿಮ್ಮನ್ನೆಲ್ಲ ಊಟಕ್ಕೆ ಕರೆದಿದ್ದರೆ ಗಂಟು ಕರಗಿಬಿಡುತ್ತಿತ್ತೆ? ಬಸ್ಸು ಹಿಡಿದು ಬರ‍್ರೆಂದು ಆಗುಂಬೆಗೆ ಹೋಗಿ ದೇವಸ್ಥಾನದಲ್ಲಿ ಒಂದಕ್ಕೆರಡು ಖರ್ಚು ಮಾಡುವಷ್ಟೇನು ಬಂದಿತ್ತು ಬ್ರಾಹ್ಮಣನಿಗೆ? ಹಾಸಿಗೆಯಿದ್ದಷ್ಟು ಕಾಲು ಚಾಚಬೇಕೆಂದು ಅದಕ್ಕೇ ಹಿರಿಯರು ಅನ್ನುವುದು. ಆದರೆ ಅವರ ಹಾಸಿಗೆ ಎಷ್ಟುದ್ದ ಗೊತ್ತೊ? – ಹೋಯ್! ನನ್ನ ಮಾತನ್ನು ನೀವು ಬೇಕಾದರೆ ನಂಬಿ, ಅಥವಾ ಬಿಡಿ. ಆ ಮನೆಯಲ್ಲವರಿಗೆ ಗಂಟು ಸಿಕ್ಕಿದೆಯಯ್ಯ. ನನಗಿದು ಖಾತ್ರ, ಇಲ್ಲದೆ ಈ ಆಟಾಟೋಪವೆಲ್ಲ ಎಲ್ಲಿಂದ ನಡೆಯಬೇಕು” ಎಂದು ಕೊನೆಯ ಮಾತುಗಳನ್ನು ಕಣ್ಣು ಮಿಟುಕಿಸಿ ಮೆತ್ತಗೆ ಹೇಳುತ್ತಾರೆ.

ಭಾಗ: ಎರಡು

ಯಾಕೆ ಹೀಗೆ ತೆಪ್ಪಗಾಗಿ ಮಂಕು ಬಡಿದು ಕೂತಿರುತ್ತಾರೆಂದು ನಡುಮನೆಯ ಮೂಲೆಯಲ್ಲಿ ಉಬ್ಬಸವಿಡುತ್ತ ಕೂತ ಕುಪ್ಪಣ್ಣಭಟ್ಟರ ಹೆಂಡತಿ ಗೌರಮ್ಮನಿಗೆ ಆಶ್ಚರ್ಯ. ಸಂಜೆ ಜೋಯಿಸ ಹಕ್ಕಿ ಚಿರೋ ಎಂದು ಕೂಗುತ್ತಿದ್ದರೂ, ಕೊಟ್ಟಿಗೆಗೆ ಆಕಳು ಬಂದು ಹಾಲು ಕರೆದಾದಮೇಲೂ, ಮಗಳು ಭಾಗೀರತಿ ದೇವರಿಗೆ ದೀಪ ಹತ್ತಿಸಿದ ನಂತರವೂ ಸಂಧ್ಯಾವಂದನೆಗೆ ಏಳಿ ಏಳಿ ಎಂದು ಮೂರು ಬಾರಿ ಕರೆಯಬೇಕು. ಹಿಂದೆ ಗಾಜು ಒಡೆದುಬಿಡುತ್ತಾವೆಂದು ಮಕ್ಕಳ ಹತ್ತಿರ ಲಾಟೀನು ಹಚ್ಚಲು ಕೊಡುತ್ತಿರಲಿಲ್ಲ, ಈಗ ಹಿರಿಯ ಮಾಣಿಯೆ ಲಾಟೀನಿನ ಗಾಜು ಒರೆಸಿ, ದೀಪ ಹತ್ತಿಸಿ, ಜಗುಲಿಗೆ ಒಯ್ದು, ಅಪ್ಪಯ್ಯ ಏಳಿ ಎನ್ನಬೇಕು.

ಗೌರಮ್ಮನಿಗಿನ್ನೂ ನೆನಪಿಗೆ. ಎರಡು ವರ್ಷಗಳ ಕೆಳಗೆ ನಾಲೂರಿನಿಂದ ಅವಳ ತಮ್ಮ ಸುಬ್ರಹ್ಮಣ್ಯ ಬಂದ. ಈಚೆಗೆ ತವರಿನಿಂದ ಬರುವುದೇ ಕಡಿಮೆ, ಇರಲಿ, ಒಡಹುಟ್ಟಿದೊಬ್ಬ ತಮ್ಮನಾದರೂ ಲಕ್ಷಣವಾಗಿ ತೋಟ ಗದ್ದೆ ಮಾಡಿಕೊಂಡು ವೈನಾಗಿ ಜೀವನ ಮಾಡುತ್ತಿದ್ದಾನಲ್ಲ – ಅದೇ ಸಂತೋಷ. ಇವರೊಬ್ಬರೇ ಯಾಕೆ ಹೀಗೆಂದು ತಿಳಿಯುವುದಿಲ್ಲ. ಇವರ ಹಾಗೇ ತಾಲಿ ಹಿಡಿದು ಘಟ್ಟದ ಕೆಳಗಿನಿಂದ ಬಂದ ಅಪ್ಪಣ್ಣಭಟ್ಟ ಗುರುಗಳನ್ನು ಮನೆಗೆ ಕರೆದು ಐವತ್ತು ರೂಪಾಯಿಯ ಭಿಕ್ಷೆ ಮಾಡಿಸುವಷ್ಟು ದೊಡ್ಡವನಾದ. ಊಟವೆಲ್ಲ ಆದ ಮೇಲೆ ಗುರುಗಳು ಗಿಂಡಿ ಮಾಣಿಯ ಹತ್ತಿರ ಹೇಳಿ ಕಳಿಸಿದರು – ಇವರನ್ನು ಕರೆದುಕೊಂಡು ಬಾ ಅಂತ. ಇವರಾದರೂ ಎಷ್ಟೊಂದು ತಗ್ಗಿ ನಡೆದಾರು? ಮುವ್ವತ್ತು ವರ್ಷದಿಂದ ಕಾಲಿಡದ ಅಪ್ಪಣ್ಣಭಟ್ಟನ ಮನೆಯಲ್ಲಿ ವನ ಮುಖದ ಎದುರೇ ಗುರುಗಳ ಹತ್ತಿರ ಛೀಮಾರಿ ಹಾಕಿಸಿಕೊಳ್ಳುವುದು ಸಾಧ್ಯವೆ? ಅಡಿಗೆ ಮನೆಯಲ್ಲಿ ಮುಚ್ಚಿ ಕೂತರು. ಹಾಗೆಲ್ಲ ಮುಚ್ಚಿ ಕೂತ ಜನ್ಮವೇ ಅಲ್ಲ ಇವರದ್ದು. ಮುಚ್ಚಿ ಕೂತು ಭಾಗೀರತಿಗೆ ಅಂದರು: ‘ನಾನು ಮನೇಲಿಲ್ಲವೆಂದು ಹೇಳಿ ಬಿಡು’. ಆದರೆ ಗುರುಗಳಿಗೆ ಅಪ್ಪಣ್ಣಭಟ್ಟ ಹಚ್ಚಿಕೊಡದಿರುತ್ತಾನೆಯೆ? ಒಬ್ಬೊಬ್ಬರ ಗ್ರಹಚಾರ: ಇಲ್ಲದಿದ್ದರೆ ಇವರಿಗೆ ತಿಂಗಳಲ್ಲಿ ಇಪ್ಪತ್ತು ದಿನ ಉಬ್ಬಸ ಹಿಡಿದ ತನ್ನಂತಹವಳೇ ಗಂಟು ಬೀಳಬೇಕೆ? ಬೇಲಿಯಾಚೆ ಅಪ್ಪಣ್ಣಭಟ್ಟನ ತೋಟದಲ್ಲಿ ಅಷ್ಟೊಂದು ಅಡಿಕೆ! ಈಚೆಯೋ ಇವರ ತೋಟದಲ್ಲಿ ಕೊಳೆರೋಗ ಹಿಡಿದು ಎಲ್ಲ ನೆಲದ ಪಾಲು. ಎಲ್ಲ ಕೆಲಸದ ಆಳೂ ಅವನ ಮನೆಗೆ! ಇವರ ಹತ್ತಿರವೂ ಒಬ್ಬನೂ ಉಳಿಯುವುದಿಲ್ಲ. ಇನ್ನು ನಿಷ್ಠುರದ ಮಾತೊ? ಊರಲ್ಲೆಲ್ಲ ನಿಷ್ಠುರ ಇವರಿಗೆ. ಆಯಿತ? ಎರಡು ಕಾಲಿನ ಮೇಲೆ ಓಡಾಡುವ ನರಪ್ರಾನಿ ಬಿಡದೆಜಗಳವಾಡಿದ್ದಾರೆ ಇವರು. ಒಂದು ಮೋಸ ಗೊತ್ತಿಲ್ಲ; ಒಂದು ದಗ ಗೊತ್ತಿಲ್ಲ; ಒಂದು ಸುಳ್ಳಾಡಿ ಗೊತ್ತಿಲ್ಲ. ಸಿಟ್ಟೆಂದರೆ ಸಿಟ್ಟು. ಒಬ್ಬೊಬ್ಬರ ನಕ್ಷತ್ರಾನೆ ಹಾಗೆ. ನನ್ನ ಹಾಗೆ ಕೆಲವರು ಗೋಳಿಡುತ್ತ ಸಾಯಬೇಕೆಂದು ನಿಯಮ. ಒಟ್ಟು ಹಣೆಬರಹ.

ಏನು ನೆನಸಿಕೊಂಡೆ? – ಎಂದು ಗೌರಮ್ಮ ಉಬ್ಬಸದಿಂದ ಸುಧಾರಿಸಿಕೊಳ್ಳುತ್ತ ಚಿಂತಿಸುವರು. ಅದೇ ಸುಬ್ರಹ್ಮಣ್ಯ ಬಂದ. ಭಾವಯ್ಯ ಕಷ್ಟದಲ್ಲಿದ್ದಾರೆಂದು ಉಡಾಫೆಯ ಮಾತನ್ನಾಡಲಿಲ್ಲ, ಗೌರವದಿಂದಲೇ ಹೇಳಿದ:

“ಭಾವಯ್ಯ, ಈ ಪ್ರಾಂತ್ಯದಲ್ಲಿ ಯಾರಿಗೂ ನಿಮ್ಮನ್ನು ಕಂಡರೆ ಆಗದು, ಅಪ್ಪಣ್ಣಭಟ್ಟರಂತೂ ನೀವು ಎಂದರೆ ಕತ್ತಿ ಮಸೆಯುತ್ತಾರೆ. ಮಠದವರಂತೂ ತೋಟ ಬಿಡಿರೆಂದು ನಿಮಗೆ ಬೆನ್ನು ಹತ್ತಿದ್ದಾರಂತೆ. ಭಾಗೀರತಿಗೆ ವಯಸ್ಸಾಗಿದೆ; ಗಂಡು ಹುಡುಕಬೇಕು. ನೀವು ತೀರ್ಥಹಳ್ಳಿಯಲ್ಲೊಂದು ವರ ನೋಡಿ ಬಂದರೆ ಅಪ್ಪಣ್ಣಭಟ್ಟ ಚಾಡಿ ಛಿದ್ರ ಹಚ್ಚಿ ತಪ್ಪಿಸಿದನಂತೆ. ಮೈನೆರೆದು ಬಾಳೆ ಮರದಂತೆ ನಿಂತ ಹುಡುಗಿಯನ್ನ ಎಷ್ಟು ದಿನವೆಂದು ಮನೆಯಲ್ಲಿಟ್ಟುಕೊಳ್ಳುವುದು? ಹಿರಿಯರಾದ ನಿಮಗೆ ಅನ್ನುವ ತ್ರಾಣವಿಲ್ಲ: ಆದರೂ ಹೇಳುವೆ. ನಿಮ್ಮ ಗ್ರಹಗತಿಗೆ ಈ ತೋಟ ಸೇರುವುದಿಲ್ಲ. ಎಲ್ಲ ಬಿಟ್ಟು ಹಾಯಾಗಿ ಬಂದುಬಿಡಿ. ಹಲಸಿನೂರಲ್ಲಿ ನನ್ನದೊಂದು ಐನೂರು ಮರ ತೋಟ ಉಂಟಲ್ಲ; ನಿಮ್ಮ ಕೈಯಲ್ಲಾದಷ್ಟು ಮಾಡಿ. ಉಳಿದದ್ದು ನಾನು ನೋಡುವೆ. ” ಎಂದು ಎಷ್ಟು ಮೃದುವಾಗಿ ಸುಬ್ರಹ್ಮಣ್ಯ ಹೇಳಿದ್ದ! ಎರಡು ವರ್ಷದ ಕೆಳಗೆ. ಇವರೋ ಪರಶುರಾಮನಂತೆ ಕುಣಿದುಬಿಟ್ಟರು.

“ನಾನು ಸತ್ತ ಮೇಲೆ ನನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವಿಯಂತೆ. ಈಗ ನಿನ್ನ ಕೆಲಸ ನೀನು ಮಾಡಿಕೋ” ಎಂದು ಖಂಡತುಂಡು ಆಡಿಬಿಟ್ಟು ತನ್ನ ತಮ್ಮನಿಗೆ ನೋವಾಗುವಂತೆ ಮಾಡಿಬಿಟ್ಟರು.

ಈಗ ಆ ಸಿಟ್ಟೇ ಇಲ್ಲ. ಆ ವಸೂಲಿ ಸಾಬ, ಆ ಮಠದ ಒರಟು ಉಗ್ರಾಣಿ ವಾರಕ್ಕೊಮ್ಮೆ ಬಂದು ಪೀಡಿಸತೊಡಗಿದ ಮೇಲೆ ಅರ್ಧಕ್ಕರ್ಧವಾಗಿಬಿಟ್ಟಿದ್ದಾರೆ. ಎಂದೆಂದೂ ಕೇಳದವರು ಒಂದು ದಿನ ಬಂದು ಹೆಂಡತಿಯ ಎದುರು ನಿಂತು ಹೇಳಿದರು: “ನಿನ್ನ ಮಗ ಕೊಡುವಿಯಾ? ಆರು ತಿಂಗಳಲ್ಲಿ ಹಿಂದಕ್ಕೆ ತಂದು ಕೊಡುವೆ ಮಹಾರಾಯಿತಿ” – ಎಂದರು. ಆ ಕೊರಳಿನಲ್ಲಿ ಆ ದೈನ್ಯದ ಸ್ವರ ಪ್ರಥಮ ಬಾರಿಗೆ ಕೇಳಿ ಗೌರಮ್ಮನಿಗೆ ಎದೆಯಲ್ಲಿ ಚೂರಿ ಇರಿದಂತಾಯಿತು. ಒಟ್ಟು ನನ್ನ ತಾಳಿ ಗಟ್ಟಿಯಾಗಿದ್ದರೆ ಸಾಕೆಂದು, ಪೆಟ್ಟಿಗೆಯಿಂದ ಮಗಳು ಭಾಗೀರತಿಗೆಂದು ಇಟ್ಟುಕೊಂಡಿದ್ದ ತೌರವರು ಹಾಕಿದ ಬುಗುಡಿ, ಬಂಗಾರದ ಪಟ್ಟಿ, ಚೈನು, ನಾಲ್ಕೆಳೆ ಸರ, ತಿರುಪಿನ ಹೂವು, ಸಮಸ್ತ ಆಭರಣವನ್ನೂ ಕಣ್ಣಿನಲ್ಲಿ ನೀರು ತುಂಬಿದ್ದನ್ನು ತೋರಗೊಡದೆ ಎತ್ತಿಕೊಟ್ಟರು. ಆಮೇಲಿಂದ ಅವರ ಪ್ರಾರ್ಥನೆಯಿಷ್ಟೆ: “ನನ್ನ ತಾಳಿ ಗಟ್ಟಿಯಾಗಿಡಪ್ಪ. ಭಾಗೀರತಿಗೊಂದು ಗಂಡನ ಮನೆ ಕಾಣಿಸಪ್ಪ. ” ಆದರೆ ಮೈಮೇಲೆ ನಗವಿಲ್ಲದೆ ಬೆತ್ತಲೆ ಹುಡುಗಿಯನ್ನ ಯಾರಾದರೂ ಲಗ್ನವಾಗುವರೆ? ಇವರೇನು ಮಾಡಿಬಿಟ್ಟರೊ ಭಂಗಾರವನ್ನ ಎಂದು ಆ ಕಾರಣಕ್ಕಾಗಿ ಗೌರಮ್ಮನಿಗೆ ಕರಕರೆಯಾಗುತ್ತದೆ. ಈ ಉಬ್ಬಸದ ನಿತ್ಯ ರೋಗದ ಶರೀರಕ್ಕೆ ಮತ್ತೇನದರಲ್ಲೂ ಆಸೆಯಿಲ್ಲ. “ನಾನೇನು ಬಂಗಾರ ಹೇರಿಕೊಳ್ಳಬೇಕೊ? ಅವರ ಮರ್ಯಾದೆ ಉಳಿಯಲಿ ಸದ್ಯ” ಎಂದು ಪದೇ ಪದೇ ಅಂದುಕೊಳ್ಳುವಳು. ಸುಬ್ರಮಣ್ಯ ತವರಿನಿಂದ ಎಂದು ಬರುತ್ತಾನೊ ಎಂದು ದಾರಿಕಾಯುವಳು. ಅವನ ಹತ್ತಿರವಾದರೂ ಎಲ್ಲ ಸುದ್ದಿ ಹೇಳಿಕೊಂಡು ಬಂಗಾರದ ವಿಷಯವನ್ನು ತಿಳಿಸಿ ಎದೆ ಹಗುರಮಾಡಿಕೊಳ್ಳಬಹುದಿತ್ತು.

ಭಾಗೀರತಿ ಅಡಿಗೆ ಮನೆಯಲ್ಲಿ ಹಸಿ ಸೌದೆಗೆ ಅಗ್ನಿ ಆವೇಶಿತವಾಗುವಂತೆ ಮಾಡಲು ಊದುಗೊಳವೆಯಲ್ಲಿ ಊದಿ ಊದಿ ಕೆಮ್ಮಿದಳು. ನೀರು ಹರಿದು ಹರಿದು ಒಣಗಿದ ಕಣ್ಣುಗಳನ್ನು ಸೆರಗಿನಿಂದ ಒರೆಸಿಕೊಂಡಳು. ಕೆದರಿದ ತಲೆಗೂದಲನ್ನು ನೇವರಿಸಿಕೊಂಡಿದ್ದಳು, ಬತ್ತಿದ ಕೆನ್ನೆಗಳ ಪೆಚ್ಚು ಮೋರೆಯನ್ನೆತ್ತಿ ನಡುಮನೆಗೆ ಬಂದು,“ಅಮ್ಮ ಹುಳಿ ಮಾಡಲು ತೊಗರಿ ಬೇಳೆಯಿಲ್ಲ” ವೆಂದಳು. “ಸೌತೇ ಬೀಜದ ಸಾರು ಮಾಡು” ಎಂದರು ಗೌರಮ್ಮ.

ಹಲಸಿನೂರಿಗೆ ಹೋಗಲು ಯಾಖೆ ಇವರು ಒಪ್ಪಬಾರದೊ? ಇಲ್ಲಿದ್ದು ಪಥ ಸಾಗುವಂತಿಲ್ಲ. ಅಪ್ಪಣ್ಣಭಟ್ಟನಂತೂ ಯಮದೂತನಂತೆ ಬೆನ್ನು ಹತ್ತಿದ್ದಾನೆ. ಈ ತೋಟದ ಮೇಲೆ ಅವನ ಕಣ್ಣು. ಗದ್ದೆಗೆ ನೀರು ಬರದಂತೆ ಕಟ್ಟೆ ಕಟ್ಟುತ್ತಾನೆ, ತನ್ನ ಗದ್ದೆಗೆ ದನ ನುಗ್ಗದಂತೆ ಬೇಲಿ ಭದ್ರ ಕಟ್ಟಿಕೊಳ್ಳಬಾರದ?ಒಂದು ವೇಳೆ ನುಗ್ಗಿತು, ಬರಿ ಬೆರಸಬಾರದ? ನಾಲ್ಕು ಪೆಟ್ಟು ಕೊಟ್ಟು ಅಟ್ಟಬಾರದ? ಜಿದ್ದಿನ ಮೇಲೆ ಅಪ್ಪಣ್ಣಭಟ್ಟ ನಾಲ್ಕು ಮೈಲಿಯಾಚೆಯ ದೊಡ್ಡಿಗೆ ಆಳಿನ ಹತ್ತಿರ ದನವನ್ನು ಇವರೇ ಖುದ್ದಾಗಿಹುಡುಕಿಕೊಂಡು ಹೋಗಿ ರೂಪಾಯಿ ತೆತ್ತು ಬಿಡಿಸಿಕೊಂಡು ಬರಬೇಕಾಯಿತು.

ಜ್ವರಗಡ್ಡೆಯಿಂದ ಹೊಟ್ಟೆ ಡೊಳ್ಳಾದ ಐದು ವರ್ಷದ ಗಣಪ ಅಮ್ಮಾ ಎಂದು ಅತ್ತುಕೊಂಡು ಬಂದ. “ಈ ಮಗುವಿಗಷ್ಟು ಅಕ್ಕಿ ತೊಳೆದ ಕಲಗಚ್ಚಿನ ಪಾನಕ ಕೊಡೇ” ಎಂದು ಕೂಗಿದರು ಗೌರಮ್ಮ.

ಇದ್ದಿಯೊ ಸತ್ತಿಯೊ ಎಂದು ಕೇಳುವವರು ಆಸುಪಾಸಿನಲ್ಲಿಲ್ಲ. ಇಕೊ ಮುಡಿದುಕೊ ಎಂದು ಭಾಗೀರತಿಗೆ ಒಂದು ರಂಜದ ಸರ ಕರೆದು ಕೊಟ್ಟವರಿಲ್ಲ.

ಇದ್ದಕ್ಕಿದ್ದಂತೆ ಬಂಗಾರದ ನೆನಪಾಗಿ ಕಣ್ಣು ನೀರು ಹರಿಯತೊಡಗಿತು. ಕೆಮ್ಮು ಬಂದು ಉಬ್ಬಸ ಹತ್ತಿತು. ಪ್ರಾಣವನ್ನೆ ಆಹ್ವಾನಿಸಿ ವಿಸರ್ಜಿಸುವಂತೆ ಗೌರಮ್ಮ ಉಬ್ಬಸವಿಡುತ್ತ ನಡುಮನೆಯ ಕತ್ತಲೆಯ ಮೂಲೆಯಲ್ಲಿ ಕೂತರು.

ಭಾಗ: ಮೂರು

ಹೆಂಡತಿ ಒಂದು ರಾಗವೆತ್ತಿದರೆ ಸಾಕು ನಿನ್ನ ನಗ ಬೇಡವೆಂದು ಬಿಡುವೆನೆಂದು ಕುಪ್ಪಣ್ಣಭಟ್ಟರು ಮನಸ್ಸು ಗಟ್ಟಿಮಾಡಿಕೊಂಡೆ ಕೇಳಿದ್ದರು. ಆದರೆ ಅವಳು ಮರುಮಾತಾಡದೆ ಪೆಟ್ಟಿಗೆಯ ಬಾಗಿಲು ತೆರೆದು ರೇಷ್ಮೆಯ ವಸ್ತ್ರದಲ್ಲಿ ಕಟ್ಟಿಟ್ಟಿದ್ದ ಚಿನ್ನವನ್ನೆಲ್ಲ ಎತ್ತಿಕೊಟ್ಟಿದ್ದರಿಂದ ಭಟ್ಟರು ಇನ್ನಷ್ಟು ಬಾಗಿಬಿಟ್ಟರು. ಇದೇ ಋಣಮುಕ್ತನಾಗಲು ನನ್ನ ಕೊನೆಯ ಯತ್ನ ಎಂದು ಬ್ಯಾಂಕಿಗದನ್ನು ಗುಟ್ಟಾಗಿ ಒಯ್ದು, ಅಡವಿಟ್ಟು, ಎರಡು ಸಾವಿರದ ಐನೂರು ರೂಪಾಯಿ ತಂದರು. ಆರು ತಿಂಗಳೊಳಗೆ ಇದನ್ನ ಬಿಡಿಸಿ ಹೆಂಡತಿಗೆ ಒಪ್ಪಿಸಿ ಬಿಡುವೆನೆಂದು ಶಪಥ ಹಾಕಿಕೊಂಡರು.

ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಿನ್ನೂರು ಮರದಂತೆ ತೋಟ ಮಾಡಿಕೊಂಡಿದ್ದ ಸಣ್ಣ ಪುಟ್ಟ ಬೇಸಾಯಗಾರರಿಗೆ ಮಣ ಒಂದರ ಇಪ್ಪತ್ತೈದರಂತೆ ಮುಂಗಡ ಕೊಟ್ಟರು. ಉಳಿದ ಇಪ್ಪತ್ತೈದನ್ನು ಅಡಿಕೆ ಮಾರಿದ ಮೇಲೆ ಕೊಡುತ್ತೇನೆಂದು ವಚನಕೊಟ್ಟರು.

ಅಪ್ಪಣ್ಣಭಟ್ಟರಾದರೂ ಮಣ ಒಂದಕ್ಕೆ ನಲವತ್ತೇಳು, ತಪ್ಪಿದರೆ ನಲವತ್ತೆಂಟರ ಮೇಲೆ ಬೆಲೆ ಕೊಟ್ಟಿದ್ದಿಲ್ಲ. ಅಲ್ಲದೆ ಅವರು ಮಣ ಒಂದಕ್ಕೆ ತಲಾ ಹದಿನೈದು ರೂಪಾಯಿಗಿಂತ ಹೆಚ್ಚಿಗೆ ಮುಂಗಡ ಕೊಟ್ಟವರಲ್ಲ. ಆದ್ದರಿಂದ ಕುಪ್ಪಣ್ಣಭಟ್ಟರು ಇಪ್ಪತ್ತೈದು ರೂಪಾಯಿಯಂತೆ ಕೈ ಮೇಲೆ ಹಣವಿಟ್ಟು ಕೇಳಿದ್ದರಿಂದ ಚಿಲ್ಲರೆ ಬೇಸಾಯಗಾರರೆಲ್ಲ ಒಪ್ಪಿದರು. ಕುಪ್ಪಣ್ಣಭಟ್ರು ಇದೊಂದು ಕೈ ನೋಡಿಬಿಡೋಣವೆಂದು ಒಟ್ಟು ಒಂದುನೂರು ಮಣ ಅಡಿಕೆ ಸಂಪಾದಿಸಿ, ಲಾರಿಯಲ್ಲಿ ಶಿವಮೊಗ್ಗೆಗೆ ಸಾಗಿಸಿ, ಮಂಡಿಯಲ್ಲಿ ತುಂಬಿದರು. “ಒಳ್ಳೆ ದರವೇರಿದ ಮೇಲೆ ನಾನೇ ಖುದ್ದಾಗಿ ಬರುವೆ. ಆಮೇಲೆ ಮಾರಾಟ ಮಾಡಿದರಾಯಿತು. ಯಾವುದಕ್ಕೂ ಆಗೀಗ ಒಂದು ಕಾಗದ ಹಾಕಿ” ಎಂದು ಮಂಡಿಯವರಿಗೆ ಹೇಳಿ ಹಿಂದಕ್ಕೆ ಬಂದರು.

ತನ್ನ ಗಿರಾಕಿಗಳು ಕೈ ತಪ್ಪಿದ್ದರಿಂದ ಅಪ್ಪಣ್ಣಭಟ್ಟ ಸಿಟ್ಟಿನಲ್ಲಿ ಕುಣಿದುಬಿಟ್ಟ. ಎಲ್ಲೊ ಇವರಿಗೆ ಗಂಟು ಸಿಕ್ಕಿರಲೇ ಬೇಕು, ಆದ್ದರಿಂದ ಈ ಆಟಾಟೋಪವೆಂದು ಊರೆಲ್ಲ ಸಾರಿ ಬಂದ.

ಇತ್ತಲಾಗಿ ಕುಪ್ಪಣ್ಣಭಟ್ಟರು ನಿತ್ಯ ಚೀಲದಿಂದ ಕವಡೆ ತೆಗೆದು ಸಾಲಾಗಿ ಜೋಡಿಸಿ ನಿಮಿತ್ಯ ನೋಡಿದರು. ಮತ್ತೆ ಪಂಚಾಗದ ಅಂಚಿನಲ್ಲೆಲ್ಲ ಲೆಖ್ಖ ಮಾಡಿದರು. ಮಠಕ್ಕೆ ಕೊಡಬೇಕಾದ ಬಾಬ್ತು ಐದು ಸಾವಿರ; ಕಮ್ತಿಗೆ ಒಂದು ಸಾವಿರ; ಹೆಂಡತಿಯ ಉಬ್ಬಸದ ಮದ್ದಿಗೆಂದಾದ ಸಾಲು ಮೂರು ನೂರು; ಈಗ ಬ್ಯಾಂಕಿನಲ್ಲಿ ಅಡವಿಟ್ಟು ಪಡೆದ ಸಾಲದ ಮೇಲೆ ಬಡ್ಡಿ; ಭಾಗೀರತಿಯ ಮದುವೆಯ ಖರ್ಚು. ಎಲ್ಲಕ್ಕಿಂತ ಮೊದಲು ಬಂಗಾರವನ್ನು ಬ್ಯಾಂಕಿನಿಂದ ತಂದುಬಿಡಬೇಕು. ಮುಂದಿನ ವರ್ಷ ಬೇಕಾದರೆ ಮತ್ತೆ ಅಡವಿಟ್ಟು ಹಣ ಪಡೆದರಾಯಿತು.

ಮತ್ತೆ ಲೆಖ್ಖಮಾಡುವರು. ಅಡಿಕೆಯ ದರವೇರಿ ಮಣಕ್ಕೊಂದರ ಅವರತ್ತು ರೂಪಾಯಿಯಾದರೂ ಸಿಕ್ಕರೆ ಮಣ ಒಂದರ ಹತ್ತು ರೂ. ಲಾಭ. ಒಟ್ಟು ಒಂದು ಸಾವಿರ ಎರಡುನೂರು ರೂಪಾಯನ್ನು ಕಮ್ತಿಗೆ ಕೊಡುವುದು: ಒಂದೈವತ್ತನ್ನು ಡಾಕ್ಟರಿಗೆ ಕೊಡುವುದು; ಮಠಕ್ಕೊಂದು ಇನ್ನೂರ ಐವತ್ತು. ಉಳಿದ ಐನೂರು ಬ್ಯಾಂಕಿನಲ್ಲಿಟ್ಟು, ಎರಡು ಸಾವಿರದ ಐನೂರು ಚಿಲ್ಲರೆಯನ್ನು ಕೊಟ್ಟು ಬಂಗಾರವನ್ನು ಹಿಂದಕ್ಕೆ ತಂದು, ಮತ್ತೆ ಮುಂದಿನ ಸಾರಿ ಬಂಗಾರವನ್ನು ತಿರುಗಿ ಅಡವಿಟ್ಟು, ಒಟ್ಟು ಮೂರು ಸಾವಿರದ ಅಸಲಿನಲ್ಲಿ ವ್ಯಾಪಾರ ಮಾಡುವುದು. ಹೀಗೆ ಹತ್ತು ವರ್ಷ ನಡೆದರೆ ಸಾಕು. ಸಾಲವನ್ನೆಲ್ಲ ತೀರಿಸಿ ಬಿಡಬಹುದು. ಚೀಲದಿಂದ ಇನ್ನೊಮ್ಮೆ ಕವಡೆಯನ್ನು ತೆಗೆದು ಸಾಲಾಗಿ ಇಟ್ಟು ನಿಮಿತ್ಯ ನೋಡುವರು.

ಗೊಬ್ಬರದ ಗುಂಡಿಯಿಂದೆದ್ದು ಬಂದ ನೊಣ ಮೂಗಿನ ಮೇಲೆ ಏರಿಕೂತು ಉರಿಯಿತು. ಅಟ್ಟಿದರೂ ಕಣ್ಣಿಗೆ ಕಟ್ಟುವ ನುಸಿ. ಉಶ್. ಎಂದರು. ಕಿವಿಯಲ್ಲಿ ಕರ್ಣಪಿಶಾಚಿಯಂತೆ ಕಾಡುವ ಸೊಳ್ಳೆ. ಅಂಗಳದ ಕೆಸರು ಸದ್ಯ ಬಿಸಿಲಿಗೆ ಒಣಗಿದೆ. ಅಂಗಳದ ಮೂಲೆಯಲ್ಲೊಂದು ಹಲಸಿನ ಸೇಡೆ ಒಣಗುತ್ತಿತ್ತು. ಗಾಳಿ ಬೀಸಿದರೆ ಕೊಟ್ಟಿಗೆಯ ನಾತ. ಜ್ವರಗೆಡ್ಡೆಯಿಂದ ಹೊಟ್ಟೆ ಡೊಳ್ಳಾದ ಐದು ವರ್ಷದ ಮಗ ಅಂಗಳದೊಂದು ಮೂಲೆಯಲ್ಲಿ ಬೆತ್ತಲೆ ಮೈಯಲ್ಲಿ ಕುಕ್ಕುರು ಕೂತಿದ್ದ. ಅಂಗಳದಲ್ಲಿದ್ದೊಂದು ಬೂದುನಾಯಿ, ಬೂದಿ ಗುಡ್ಡೆಯ ಮೇಲೊರಗಿದ್ದೊಂದು ಕರಿನಾಯಿ ಕುಳಿತ ಹುಡುಗನಲ್ಲೆ ತದೇಕ ಮಗ್ನರಾಗಿದ್ದವು.

ಬರಿಗಾಲಿನ ಮೇಲೆ ಕೂತು ರಕ್ತ ಹೀರುತ್ತಿದ್ದ ಸೊಳ್ಳೆಯನ್ನು ಉಜ್ಜಿ ಕೊಳ್ಳುತ್ತ ಭಟ್ಟರು ಎದ್ದು ನಿಂತರು. ಹಾಳು ನುಸಿಕಾಟವೆಂದು ಕಳ್ಳಿಯ ಕಡ್ಡಿಯೊಂದನ್ನು ಮುರಿದು ತಂದು ಸೂರಿಗೆ ಕಟ್ಟಿದರು. ಭಾಗೀರತಿ ಊದುಗೊಳವೆ ಹಿಡಿದು ಅಂಗಳಕ್ಕೆ ಬಂದು ‘ಆಯಿತೇನೊ ಗಣಪ’ ಎಂದಳು. ಮತ್ತೆ ಅವನಿಗೆ ತೊಳೆಯಲು ಚೆಂಬು ನೀರನ್ನು ಬಚ್ಚಲಿನಿಂದ ತಂದಳು. ಗಣಪ ಖಾಲಿ ಮಾಡಿದ ಜಾಗಕ್ಕೆ ಬೂದುನಾಯಿ, ಕರಿನಾಯಿ, ನುಗ್ಗಿದುವು. ಅವುಗಳ ಬೊಗಳಾಟದಲ್ಲಿ ಮನಸ್ಸಿನ ಗುಣಾಕಾರಕ್ಕೆ ಭಗ್ನವಾದಂತಾಗಿ ಭಟ್ಟರು ಹಚ ಹಚ ಎಂದರು.

ನಡುಮನೆಯ ಮೂಲೆಯಿಂದ ಗೌರಮ್ಮನ ಉಬ್ಬಸ ಗರಗಸದ ಶಬ್ದದಂತೆ ಭಟ್ಟರ ಪ್ರಾಣವನ್ನು ಕಲಿಸಿಬಿಟ್ಟಿತು. “ಭಾಗೀರತಿ ಮದ್ದು ಕೊಡೆ” ಎಂದು ಕೂಗಿ ಶತಪಥ ಜಗುಲಿಯಲ್ಲಿ ತಿರುಗಿದರು.

ಹೆಂಚು ಹೊದೆಸಬೇಕು. ತೇವದ ಗೋಡೆಯ ಮೇಲೆಲ್ಲ ಮಳೆಗಾಲದಲ್ಲಿ ಕಪ್ಪಗೆ ಹರಿಯುವ ಕಂಬಳಿ ಹುಳ. ಸೋರಿ ಸೋರಿ ನೆಲದ ಮೇಲೆ ನೂರು ತೂತು. ಮಕ್ಕಳನ್ನು ಮಲಗಿಸಲು ಚಿಮಣಿ ಹಿಡಿದು ಸೋರದಿರುವ ಜಾಗವನ್ನು ರಾತ್ರೆಯೆಲ್ಲ ಹುಡುಕಬೇಕು. ತೇವವಿಲ್ಲದ ಜಾಗವೆಂದು ಸದ್ಯ ಕಣ್ಣು ಮುಚ್ಚುವಷ್ಟರಲ್ಲೆ ಪಟಕ್ ಪಟಕ್ ಎಂದು ಕಣ್ಣಿನ ಮೇಲೆ ಸೂರಿನಿಂದ ಹನಿ ಉದುರುವುದು. ಆಯಿತೊ? ಒರಳೆ ಬೇರೆ. ಹಾಸಿದ ಚಾಪೆಯ ಕೆಳಗೆ ಒರಳೆ. ಅಕ್ಕಿ ತುಂಬಿದ ಪಣತದಲ್ಲಿ ಒರಳೆ. ದೇವರ ಪೆಟ್ಟಿಗೆಯ ತಳಕ್ಕೇ ಒರಳೆ. ಅಂಡಿಗೆ ಒರಳೆ ಹಿಡಿಯುವುದು ಮಾತ್ರ ಇನ್ನೊಂದು ಬಾಕಿ.

ಕಳ್ಳಿಯ ಅಷ್ಟಾವಕ್ರ ಕಡ್ಡಿಗಳ ಮೇಲೆ ನುಸಿ ಕೂತು ಹಸಿರಾದ ದಿಂಡು ಕಪ್ಪಾಯಿತು. ಕುಪ್ಪಣ್ಣಭಟ್ಟರಿಗೆ ಕಾಡುರಗಳೆಯಾಗಿ ಅಂಗಳದಲ್ಲಿ ನಿರ್ವಿಣ್ಣ ನಿಂತರು. ಬೆನ್ನಿಗೆ ಗುಡ್ಡ. ಎದುರು ಗದ್ದೆ. ಎಡ ಬಲಕ್ಕೆ ಗಾಡಿ ದಾರಿ – ಕಾಡಿನ ಮಧ್ಯೆ. ಯಾರೋ ದೂರದಲ್ಲಿ ಸುಳಿದಂತಾಯಿತು. ಯಾರದು ಎಂದರು. ನಾನಯ್ಯ ಎಂದು ಕಟ್ಟಿಗೆ ತಲೆಯ ಮೇಲೆ ಹೊತ್ತ ಮಂಜ ಬೇಗ ಬೇಗ ಕಾಲುಹಾಕಿದ. ಸ್ವಲ್ಪ ನಿಲ್ಲೋ ಎಂದರು. ನಮ್ಮ ಮನೆಗೆ ಯಾವತ್ತು ಸೌದೆ ಒಟ್ಟುವುದು ಮಾರಾಯ ಎಂದರು. ಸೀಬಿನಕೆರೆ ಅಯ್ಯನವರದ್ದಾದ ನಂತರ ಎಂದು ಅವ ಎಗ್ಗಿಲ್ಲದೆ ನಡೆದುಬಿಟ್ಟ. ಏನು ಮಾಡುವುದಕ್ಕೂ ತೋಚೆ ಕುಪ್ಪಣ್ಣಭಟ್ಟರು ಕತ್ತಿ ಹಿಡಿದು ಬಾಳೆಲೆ ಕೊಯ್ದು ಬರುವುದೆಂದು ತೋಟಕ್ಕೆ ನಡೆದರು. ಅವರು ಹೊರಕ್ಕೆ ಬರುವಷ್ಟರಲ್ಲಿ ನಾಲ್ಕು ಮೈಲಿ ದೂರದ ಸ್ಕೂಲಿನಿಂದ ಮೂರು ಮಾಣಿಗಳು ಹಸಿದು ಹಿಂದಕ್ಕೆ ಬಂದಿದ್ದವು. ಭಾಗೀರತಿ ದನಗಳಿಗೆ ಕಾದು ನಿಂತಿದ್ದಳು. ಗರಗಸವಿಟ್ಟು ಕೊಯ್ದಂತೆ ಉಬ್ಬಸವಿಡುತ್ತಿದ್ದ ಗೌರಮ್ಮನ ಸಂಕಟ ಭಾಗೀರತಿ ಕೊಟ್ಟ ಔಷಧಿಯಿಂದ ಏನೂ ಶಮನವಾಗಿರಲಿಲ್ಲ, ಗಣಪ ಒಂದು ಬಟ್ಟಲಲ್ಲಿ ಹಸಿ ಅವಲಕ್ಕಿ ಬೆಲ್ಲದುಂಡೆಯನ್ನಿಟ್ಟುಕೊಂಡು ಮುಕ್ಕುತ್ತ ಕೂತಿದ್ದ.

ಅಡಿಕೆಯ ದರ ಐವತ್ತೊಂದಕ್ಕೇರಿತು, ಐವತ್ತೆರಡಕ್ಕೆ ಏರಿತು – ಮತ್ತೆ ತಿಂಗಳಲ್ಲಿ ಐವತ್ತೈದಾಯಿತು. ಕುಪ್ಪಣ್ಣಭಟ್ಟರು ಅರವತ್ತಾಗಲಿ ಎಂದು ಮಾರಲಿಲ್ಲ.

ನಿಮ್ಮ ದುಡ್ಡು ನೀರುಪಾಲಾಯ್ತೆಂದು ತಿಳಿಯಿರಿ ಎಂದು ಕುಪ್ಪಣ್ಣಭಟ್ಟರಿಗೆ ಅಡಿಕೆ ಮಾದರಿದವರಿಗೆಲ್ಲ ಅಪ್ಪಣ್ಣಭಟ್ಟ ಚುಚ್ಚಿದ. ಕುಪ್ಪಣ್ಣಭಟ್ಟರಿಗೆ ತಗಾದೆ ಹೆಚ್ಚಾಯಿತು. ದಿನಕ್ಕೆ ಎಂಟು ಹತ್ತು ಜನರಂತೆ ಸದಾ ತನ್ನ ಜಗುಲಿಯ ಮೇಲೆ ಕೂತಿರುವವರಿಗೆ ನೆವ ಹೇಳಿ ಹೇಳಿ ಸುಸ್ತಾದರು. ಇನ್ನೊಂದು ತಿಂಗಳು ತಡೆಯಿರಿ ಎಂದು ಆಳುದ್ದ ಶರೀರವನ್ನು ಗೇಣುದ್ದ ಮಾಡಿ ಬೇಡಿದರು. ನಡೆಯಲಿಲ್ಲ. ಕೊನೆಗೊಂದು ದಿನ ಶಿವಮೊಗ್ಗೆಗೆ ಓಡಿ ದಾಸ್ತಾನು ಮಾಡಿದ ಅಡಿಕೆಯ ಮೇಲೆ ಮಂಡಿಯಿಂದ ಶೇಕಡಾ ಹದಿನೈದು ರೂ. ಬಡ್ಡಿಯ ಮೇಲೆ ಎರಡು ಸಾವಿರದ ಐನೂರು ರೂಪಾಯಿ ಸಾಲವನ್ನು ತಂದರು, ಮಣಕ್ಕೊಂದರ ಇನ್ನೊಂದು ಹತ್ತತ್ತು ರೂಪಾಯಿಯಂತೆ ಕೊಟ್ಟು; “ತಿಂಗಳು ತಡೆಯಿರಿ, ಉಳಿದ ಹದಿನೈದು ಕೊಡುವೆ”ನೆಂದು ಗಿರಾಕಿಗಳನ್ನು ಪ್ರಾರ್ಥಿಸಿದರು.

ಕುಪ್ಪಣ್ಣಭಟ್ಟರ ಹತ್ತಿರ ಹಣ ಓಡಾಡುತ್ತಿರುವುದನ್ನು ತಿಳಿದ ಅಪ್ಪಣ್ಣಭಟ್ಟ ಗೋಪಾಲ ಕಮ್ತಿಗೆ ಹಚ್ಚಿಕೊಟ್ಟ; ಮಠದ ಏಜೆಂಟರ ಕಿವಿಯಲ್ಲಿ ಮಹಾರಾಯರೆ ಅವರ ಹತ್ತಿರ ದುಡ್ಡುಂಟು ಎಂದು ಚುಚ್ಚಿದ. ನಿಮ್ಮ ಲೆಖ್ಖ ಚುಕ್ತಾಗಬೇಕೊ? ಇದೆ ಸರಿಯಾದ ಸಮಯ ಎಂದ.

ಕಮ್ತಿ ಕಡೆಯಿಂದ ವಸೂಲಿ ಸಾಬ ಒಂದು ಮಧ್ಯಾಹ್ನ ಬಂದು ಜಗುಲಿಯ ಮೇಲೆ ಕೂತ. ಕುಪ್ಪಣ್ಣಭಟ್ಟರು ಬೇಡಿದರು; ಕಾಡಿದರು. ದಪ್ಪ ಮೀಸೆಯ ಸಾಬ ಕವಳ ಹಾಕಿ ಕೂತೇಬಿಟ್ಟ. ಐದು ನೂರು ರೂಪಾಯಿ ಸಂದಾಯವಾಗದ ಹೊರ್ತು ನಾನೇಳುವುದಿಲ್ಲ ಇಲ್ಲಿಂದ ಎಂದು ಚಂಡಿ ಹಿಡಿದ. ಕೂಗಲು ಪ್ರಾರಂಭಿಸಿದ.

ಅಳುವ ಮನುಷ್ಯನಾಗಿದ್ದರೆ ಭಟ್ಟರು ಅತ್ತುಬಿಡುತ್ತಿದ್ದರು. ಸಾಬ ಕೂಗಾಡಿದಂತೆ ಒಳಗೆ ಗೌರಮ್ಮನ ಉಬ್ಬಸ ಹೆಚ್ಚಾಯಿತು. ದುಸ್ವಪ್ನದಲ್ಲಿ ಕೈಯೆತ್ತಲಾರದವನಂತೆ ಭಟ್ಟರು ಕೂತುಬಿಟ್ಟರು. ದೂರದಲ್ಲೊಂದು ಮನುಷ್ಯ ಪ್ರಾಣಿ ಸುಳಿದಾಡಿದಂತಾದರೆ ಸಾಕು, ಸಾಬನ ಗಂಟಲು ದೊಡ್ಡದಾಗುತ್ತಿತ್ತು.

ಪೆಟ್ಟಿಗೆಯ ಬಾಗಿಲು ತೆಗೆದು ನಾಲ್ಕು ನೂರು ರೂಪಾಯಿಯನ್ನು ಸಾಬನಿಗೆ ಕೊಟ್ಟರು. ಅವನು ಗೊಣಗುತ್ತಲೆ ಸೈಕಲ್ ಹತ್ತಿ ಹೋದ. ಅಪ್ಪಣ್ಣಭಟ್ಟರು ದಾರಿಯಲ್ಲಿ ಕಾದು ಸಾಬನನ್ನು ಕರೆದು ಕಾಫಿಕೊಟ್ಟರು.

ಸಾಬ ಹೋಗುತ್ತಿದ್ದಂತ ಡಾಕ್ಟರರ ಕಡೆಯಿಂದ ಕೌಂಪೌಂಡರ್ ಬಂದ. ಅವನಿಗೆ ಇನ್ನೊಂದು ನೂರು ಕೊಟ್ಟದ್ದಾಯಿತು. ಕೈಯಲ್ಲಿ ಇನ್ನೂ ಒಂದು ಸಾವಿರ ಉಳಿಯಿತು. ಲಾಭದ ಹಣದಲ್ಲಿ ಸಾಲವನ್ನು ತೀರಿಸಿದಂತಾಯಿತು; ಪರವಾಯಿಲ್ಲವೆಂದು ಕುಪ್ಪಣ್ಣಭಟ್ಟರು ಸಮಾಧಾನಗೊಂಡರು. ಮಾರನೇ ಬೆಳಿಗ್ಗೆ ಮಠದ ಏಜೆಂಟರೇ ಹಾಜರು.

ಭಟ್ಟರು ಮಣೆ ಹಾಕಿದರು. ಉಪಚರಿಸಿದರು. ಕಾಫಿ ಮಾಡಿಸಲೇ ಎಂದರೆ ಏಜೆಂಟರು ಬೇಡವೆಂದರು; “ನೋಡಿ ನನ್ನ ಕಾಲು ಬಾತುಕೊಂಡಿದೆ. ಆದರೂ ನಾನೇ ಖುದ್ದು ಬಂದೆ. ಮಠದ ಕಡೆ ನೀವೇನೂ ಮುಖ ತೋರಿಸುವವರಲ್ಲ. ಗುರುಗಳು ಅಪ್ಪಣ್ಣಭಟ್ಟರ ಮನೆಗೆ ದಯಮಾಡಿಸಿದಾಗ ಹೇಳಿಕಳುಹಿಸಿದರೂ ನೀವು ಬರಲಿಲ್ಲ. ನರಸಿಂಹ ದೇವರಿಗೆ ದ್ರೋಹ ಮಾಡಿದವರಿಗೆ ಉಳಿಗಾಲವಿಲ್ಲ ಭಟ್ಟರೇ. ಎಲ್ಲಿ ಮಠದ ಬಾಕಿ ಕೊಟ್ಟುಬಿಡಿ” ಎಂದು ಗಾಳಿ ಬೀಸಿಕೊಳ್ಳುತ್ತ ಏಜೆಂಟರು ಕೂತೇಬಿಟ್ಟರು. ಗೋಪಾಲ ಕಮ್ತಿಗೆ ನಾಲ್ಕು ನೂರು ಕೊಟ್ಟ ವಿಷಯ ತಿಳಿದಿದ್ದರಿಂದ ಏಜೆಂಟರು ಭಟ್ಟರ ಪ್ರಾರ್ಥನೆ ಬೆಳೆದಷ್ಟೂ ರೇಗಿದರು.

“ನಾಳೆಯೇ ಜಪ್ತಿಗೆ ವಾರೆಂಟು ತರುವೆ” ಎಂದು ಎದ್ದು ನಿಂತರು.

ಕುಪ್ಪಣ್ಣಭಟ್ಟರು ಎಂಟುನೂರು ತೆತ್ತು ನಿಟ್ಟುಸಿರಿಟ್ಟರು. ಏಜೆಂಟರು “ಮುಂದಿನ ಗಡಿ ವಸೂಲಿಗೆ ಬಂದಾಗ ಉಳಿದದ್ದೆಲ್ಲ ಸಂದಾಯವಾಗಬೇಕು; ಇಲ್ಲವೇ ತೋಟ ಬಿಡಬೇಕು” ಎಂದು ಎಚ್ಚರಿಸಿ, ಅಪ್ಪಣ್ಣಭಟ್ಟರ ಮನೆಗೆ ಊಟಕ್ಕೆ ಹೋದರು.

ಮಾರನೆ ದಿನ ಅಡಿಕೆ ಮಾರಿದವರು ಒಟ್ಟಾಗಿ ಮುತ್ತಿದರು:

“ಇನ್ನು ಐದೈದಾದರೂ ಕೊಡಿ, ಭಟ್ಟರೇ. ಮನೆಯಲ್ಲಿ ಕಷ್ಟ. ಮಳೆಗಾಲದ ಸಾಮಾನು ಕೊಳ್ಳಬೇಕು. ” ಭಟ್ಟರ ಕೈಯಲ್ಲಿ ದುಡ್ಡಾಡುವುದು ಲೋಕಕ್ಕೆಲ್ಲ ತಿಳಿದು ಬಿಟ್ಟಿತ್ತು.

ಅಡಿಕೆ ಬೆಲೆ ಐವತ್ತೈದರಿಂದ ಮೇಲೇರಲಿಲ್ಲ; ಐವತ್ತಕ್ಕಿಳಿದುಬಿಟ್ಟಿತು. ಕಂಗಾಲಾದ ಭಟ್ಟರು ಶೀವಮೊಗ್ಗೆಗೆ ಬಸ್ಸು ಹಿಡಿದು ಹೋದರು. ಅಡಿಕೆಯನ್ನು ಮಾರಿದರು. ಮಂಡಿಯ ಸಾಲ, ಬಡ್ಡಿ ತೀರಿಸಿದರು. ಅಡಿಕೆಯನ್ನು ತನಗೆ ಮಾರಿದವರಿಗೆ ಕಾಸು ಉಳಿಸಿಕೊಳ್ಳದಂತೆ ಉಳಿದ ಹಣ ಕೊಟ್ಟರು. ಬ್ಯಾಂಕಿನಲ್ಲಿ ಅಡವಿಟ್ಟುಪಡೆದ ಹಣ ಬಡ್ಡಿಯನ್ನು ತೀರಿಸಿದರು. ನಗ ಮಾತ್ರ ಬ್ಯಾಂಕಿನಲ್ಲೆ ಉಳಿಯಿತು.

ಮಳೆ ಹಿಡಿಯುವ ಮುಂಚೆ ಮೈದುನ ಗಾಡಿ ಕಟ್ಟಿಸಿಕೊಂಡು ಬಂದು, ಗಿಣಿಗೆ ಹೇಳುವಂತೆ ಭಾವಯ್ಯನಿಗೆ ಹೇಳಿದ: “ಬಂದುಬಿಡಿ, ಭಾಗೀರತಿಗೆ ನಾನು ವರ ಹುಡುಕುವೆ. ಅಕ್ಕ ನಿತ್ರಾಣವಾಗಿದ್ದಾಳೆ. ಗಣಪ ಕಡ್ಡಿಯಾಗಿದ್ದಾನೆ. ” ಮತ್ತೆ ಅಕ್ಕನಿಗೆ ಹೇಳಿದ, “ನನ್ನ ಇವಳು ಗರ್ಭಿಣಿ. ನೀನು, ಭಾಗೀರತಿ ಮನೆಗೆ ಬಂದೊಂದು ಆರು ತಿಂಗಳಿದ್ದರೆ ಉಪಕಾರವಾಗುತ್ತದೆ, ಬಾಣಂತನ ಮಾಡುವವರು ಇಲ್ಲ. ಭಾಗೀರತಿಯಿಂದ ತುಂಬ ಸಹಾಯಕವಾಗುತ್ತದೆ. ಅವಳಿಗೂ ವರ ಹುಡುಕುವೆ ನಾನು. ನಿನ್ನ ಯಜಮಾನರ ಮಾತುಕೇಳಬೇಡ. ಬಂಗಾರ ಯಾಕೆ ಅವರ ಕೈಯಲ್ಲಿ ಕೊಟ್ಟೆ? ನನ್ನ ಮಾತು ಕೇಳಿಹಲಸೂರಿಗೆ ಬಂದುಬಿಡಬಾರದ? ಒರಟು ಜನ್ಮ ಅವರದ್ದು. ತಾನು, ತನ್ನ ಹಠ, ಹೆಂಡತಿ ಮಕ್ಕಳು ಎಂದು ಯಾರ ಲೆಖ್ಖವೂ ಇಲ್ಲ. ಉಳಿದವರಂತೆ ಉದ್ದಾರವಾಗದ ಹಾಗೆ ಏನಾಗಿದೆ ಹೇಳು ಇವರಿಗೆ. ನನಗಂತೂ ಹೊಳೆಯುವುದಿಲ್ಲ. ”

“ಇವರಿಗಿತ್ತೀಚೆಗೆ ಯಾಕೊ ಸರಿಯಿಲ್ಲ ಕಣೊ, ನಾನು ಬಿಟ್ಟು ಹೇಗೆ ಬರಲೊ?” ಎಂದರು ಗೌರಮ್ಮ.

“ಒಂದಾರು ತಿಂಗಳ ಮಟ್ಟಿಗಾದರೂ ಬಾ ಅಕ್ಕ. ಇವಳಿಗೆ ಬಾಣಂತನ ಮಾಡುವರಿಲ್ಲ, ಭಾಗೀರತಿಗೂ ವರ ನೋಡವೆ” ಎಂದ ಸುಬ್ರಹ್ಮಣ್ಯ ದುಂಬಾಲು ಬಿದ್ದ.

ಕುಪ್ಪಣ್ಣಭಟ್ಟರು ಹೂ ಎನ್ನಲಿಲ್ಲ, ಉಹೂ ಎನ್ನಲಿಲ್ಲ. ಅವಳ ಇಷ್ಟ ಎಂದು ಬಿಟ್ಟರು. ನೀವೂ ಅಷ್ಟು ದಿನ ಬನ್ನಿ ಎಂದರೆ ತೋಟ ನೋಡಿಕೊಳ್ಳುವವರು ಯಾರು ಎಂದು ಬಿಟ್ಟರು. ಗೌರಮ್ಮನಿಗೆ ತವರಿಗೆ ಹೋಗುವ ಆಸೆ; ಬಂಗಾರ ಕೈ ತಪ್ಪಿದ ದುಃಖ; ಭಾಗೀರತಿಯ ಮದುವೆಯ ಆತಂಕ; ಗಂಡನ ಬಗ್ಗೆ ಕಳವಳ – ಆದರೂ ಕೊನೆಯಲ್ಲಿ ತಮ್ಮನ ಜೊತೆ ಗಾಡಿಯಲ್ಲಿ ಹೊರಟುಬಿಟ್ಟರು.

ಕುಪ್ಪಣ್ಣಭಟ್ಟರು ಒಬ್ಬರೇ ಮನೆಯಲ್ಲಿದ್ದು ಗಂಜಿ ಬೇಯಿಸಿಕೊಂಡು ದುಡಿದು ಮಳೆಗಾಲವೆಲ್ಲ ಕಳೆದರು. ಉಬ್ಬಸದ ಹೆಂಡತಿ ಮೂಲೆಯಲ್ಲಿಲ್ಲದೆ ಮನೆಯಲ್ಲಿಷ್ಟು ಶಾಂತಿ, ಭಣಗುಟ್ಟುವ ಮೌನ, ಮಳೆ ಜಡಿಯುತ್ತ ಇದ್ದಂತೆ ರಾತ್ರೆ ಕಣ್ಣು ಬಿಟ್ಟು ಮಲಗಿದ ಭಟ್ಟರ ಮನಸ್ಸಿನಲ್ಲಿ ಒಂದು ನಿಶ್ಚಯ ಗಟ್ಟಿಯಾಯಿತು. ಆ ಬಂಗಾರವನ್ನು ಬ್ಯಾಂಕಿನಿಂದ ಬಿಡಿಸಿ ಹೆಂಡತಿಗೆ ಕೊಟ್ಟುಬಿಡಬೇಕು; ಯಾರ ಋಣವೂ ಬೇಡ.

ನೂರು ಮಣ ಅಡಿಕೆಯಾಗಬೇಕಾದಲ್ಲಿ ಬರೆ ಐವತ್ತು ಮಣ ಕೈಗೆ ಹತ್ತಿತು. ಕುಪ್ಪಣ್ಣಭಟ್ಟರು ಕಾಶಿಯಲ್ಲಿದ್ದ ಶ್ರೀ ಗುರುಗಳ ಪಾದಾರವಿಂದದಲ್ಲಿ ಬೇಡಿಕಾಗದ ಬರೆದರು: ‘ಈ ಬಾರಿಯೊಂದು ಅನುಗ್ರಹ ತೋರಿಸಿ, ಮುಂದಿನ ಸಾರಿ ಎಲ್ಲ ಗೇಣಿಯನ್ನು ಕೊಟ್ಟುಬಿಡುವೆ. ಬಡವನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿ!’

ಆದರೆ ಉತ್ತರವೇ ಇಲ್ಲ. ಹದಿನೈದು ದಿನ ಕಾದರು. ಇನ್ನು ಕಾದರೆ ಕಮ್ತಿಯ ವಸೂಲಿ ಸಾಬ, ಮಠದ ಏಜೆಂಟರು ಬಂದು ಮುತ್ತುತ್ತಾರೆ. ಐವತ್ತು ಮಣದಲ್ಲಿ ಒಂದಡಿಕೆ ನನಗುಳಿಯದಂತೆ ಎತ್ತಿಕೊಂಡು ಹೋಗುತ್ತಾರೆ. ಬಂಗಾರ ಬ್ಯಾಂಕಿನಲ್ಲಿ ಉಳಿದು ಬಿಡುತ್ತದೆ.

ಅಡಿಕೆಯನ್ನು ಸಾಗಿಸಿಬಿಡುವುದೆಂದು ನಿಶ್ಚಯ ಮಾಡಿದರು. ಗೇಣಿ ವಸೂಲಿಗೆ ಏಜೆಂಟರು ಬರುವ ಮುಂಚೆ ಅಡಿಕೆಯನ್ನು ಮಂಡಿಗೆ ಸಾಗಿಸಿಬಿಡಬೇಕು, ಆದದ್ದಾಗಲಿ. ಮುಂದಿನ ವರ್ಷದಿಂದ ಸಾಲ ತೀರಿಸುತ್ತಾ ಬರುತ್ತೇನೆಂದು ಬೇಕಾದರೆ ಜನಿವಾರ ಮುಟ್ಟಿ ಆಣೆ ಹಾಕಿಕೊಳ್ಳುವೆ. ಈ ವರ್ಷ ಬಂಗಾರವನ್ನು ಬಿಡಿಸಿಕೊಳ್ಳದಿದ್ದರೆ ಅದರ ಮೇಲೆ ಮತ್ತೆ ಬಡ್ಡಿ ಬೆಳೆಯುತ್ತದೆ; ಕೈಗತವಾದರೆ ಈ ಜನ್ಮಕ್ಕೇ ತಪ್ಪಿಬಿಡುತ್ತದೆ.

ಹೀಗೆ ನಿರ್ಧಾರ ಮಾಡಿ ಶಿವಮೊಗ್ಗೆಯ ಕಡೆಗೆ ಹೋಗುವ ಲಾರಿಯಿದೆಯೋ ವಿಚಾರಿಸಲು ಪೇಟೆಗೆ ಹೋದರು. ಗೋಪಾಲ ಕಮ್ತಿಯ ಶಡ್ಡಗನ ಲಾರಿಯೊಂದು ಮಾತ್ರ ಇದೆಯೆಂದು ತಿಳಿಯಿತು. ಆದದ್ದು ಆಗಲಿ ಎಂದು ಮಾತಾಡಿದರು. ಅವನು ಬುಧವಾರ ಲಾರಿ ಹೋಗುವುದು ಎಂದ. ಎಷ್ಟು ಮಣ ತುಂಬುವುದಕ್ಕಿದೆ ಎಂದ.

ಕುಪ್ಪಣ್ಣಭಟ್ಟರು ಮೆಟ್ಟಲಿಳಿಯುತ್ತಿದ್ದಂತೆಯೇ ಸೀದ ಹೋಗಿ ಗೋಪಾಲ ಕಮ್ತಿಗೆ ತಿಳಿಸಿದ. ಧಸಕ್ಕೆಂದಿತು, ಹಿಂದಿನ ಬಾಕಿ ಆರುನೂರು, ಬಡ್ಡಿಯೊಂದೈವತ್ತು, ಒಟ್ಟು ಆರುನೂರ ಐವತ್ತು ತರದೆ ಬರಬೇಡ ಎಂದಿದ್ದಾರೆ ಕಮ್ತಿಗಳು ಎಂದು ಕೂತಲ್ಲಿಂದ ಅವ ಅಲುಗಲಿಲ್ಲ.

ಕುಪ್ಪಣ್ಣಭಟ್ಟರು ಸ್ವಲ್ಪ ತಡೆಯಪ್ಪ. ಹಿಂದೆ ನಾಲ್ಕು ನೂರು ಕೊಟ್ಟು ತೀರಿಸಲಿಲ್ಲವೆ ಎಂದರು. ಸಾಬ ಕೇಳಲಿಲ್ಲ. ಗಟ್ಟಿಯಾಗಿ ಕೂಗಿ ಮಾತಾಡಿದ. ಸೊಪ್ಪು ಒತ್ತು ತರುತ್ತಿದ್ದ ಅಪ್ಪಣ್ಣಭಟ್ಟರ ಆಳು ಇದನ್ನು ಕೇಳಿಸಿಕೊಂಡು ಒಡೆಯರಿಗೆ ತಿಳಿಸಿದ. ಅಪ್ಪಣ್ಣಭಟ್ಟರು ಕೂಡಲೆ ಗಾಡಿ ಕಟ್ಟಿಸಿಕೊಂಡು ಮಠಕ್ಕೆ ಹೋದರು.

ಮಧ್ಯಾಹ್ನವಾದ ಮೇಲೆ ಸಾಬ ಸೈಕಲ್ ಹತ್ತಿ ಪೇಟೆಗೆ ಹೋಗಿ ಕಮ್ತಿಯ ಹತ್ತಿರ ಮಾತಾಡಿ ತಕ್ಕಡಿ ಚೀಲ ತಂದ: ‘ಆರುನೂರ ಐವತ್ತು ರೂಪಾಯಿ ಸಾಲಕ್ಕೆ ಸಲ್ಲುವಷ್ಟು ಅಡಿಕೆಯನ್ನು ತೂಕ ಮಾಡಿಕೊಡಿ’ ಎಂದ. ‘ಮಣಕ್ಕೆ ಒಂದರ ನಲವತ್ತೈದು ರೂಪಾಯಿಯಂತೆ ಹದಿನೈದು ಮಣ ನೀವು ನನಗೆ ಕೊಟ್ಟರೆ, ನಾನೇ ನಿಮಗೆ ಇಪ್ಪತ್ತೈದು ರೂಪಾಯಿ ಕೊಡಬೇಕಾಗುತ್ತದೆ. ಇಗೊ ಹಣ,’ ಎಂದು ಜೇಬಿನಿಂದ ದುಡ್ಡು ತೆಗೆದು ತೋರಿಸಿದ.

ಶಿವಮೊಗ್ಗೆಯಲ್ಲಿ ಅಡಿಕೆ ದರ ಕಮ್ಮಿಯೆಂದರೆ ಮಣಕ್ಕೆ ಐವತ್ತು ರೂಪಾಯಿ; ಅಲ್ಲದೆ ಕಮ್ತಿಯ ಮಾರುವ ತೂಕ ಬೇರೆ, ಕೊಳ್ಳುವ ತೂಕ ಬೇರೆ. ಆಗದು ಎಂದರು ಭಟ್ಟರು ಒರಟಾಗಿ.

ಸಾಬ ಧೈರ್ಯ ಮಾಡಿ ತಕ್ಕಡಿ ಹಿಡಿದು ಒಳಗೆ ಕಾಲಿಟ್ಟ. ಭಟ್ಟರಿಗೆ ಸಿಟ್ಟು ರುಮ್ಮೆಂದು ತೆಲೆಗೆ ಏರಿಬಿಟ್ಟಿತು. ಥಟ್ಟನೆ ಚಿಮ್ಮಿ ಚೀಲದಲ್ಲಿ ಅಡಿಕೆ ಕೂಡಿಬಿಟ್ಟಿದ್ದ ರೂಮಿನ ಹೊಸಲಿನ ಮೇಲೆ ಕೂತರು. “ಈ ಅಡಿಕೆಯನ್ನು ನೀನು ಮುಟ್ಟುವ ಮುಂಚೆ ನನ್ನ ಹೆಣ ಬೀಳಬೇಕು” ಎಂದರು.

ವಸೂಲಿ ಸಾಬನಿಗೆ ತಬ್ಬಿಬ್ಬಾಯಿತು. ಎರಡು ಹೆಜ್ಜೆ ಹಿಂದಕ್ಕೆ ಸರಿದು ತಕ್ಕಡಿಯನ್ನು ಕೆಳಗಿಟ್ಟು ಕೂತ. ವಸ್ತ್ರದ ಮುಂಡಾಸು ಬಿಚ್ಚಿ ಮುಖವೊರಸಿಕೊಂಡ. “ದೊಡ್ಡವರೇ ಹೀಗೆ ಭಂಡತನಕ್ಕಿಳಿದರೆ” ಎಂದು ಗೊಣಗಿದ.

ವಸೂಲಿ ಸಾಬ ಮುಂದೇನು ಮಾಡುವುದೆಂದು ಅರಿಯದೆ ಭಟ್ಟರನ್ನು ದುರುಗುಟ್ಟಿ ನೋಡುತ್ತಾ ಕೂತೇಬಿಟ್ಟ. ಭಟ್ಟರೂ ಪರವಶರಾದವರಂತೆ ಹೊಸಲಿನ ಮೇಲೆ ಬಾಗಿಲಿಗೆ ಅಡ್ಡ ಕೈಮಾಡಿ ಕೂತರು. ಅವರ ಕೃಶ ಶರೀರ ಭಾವದೊತ್ತಡಕ್ಕೆ ನಡುಗತೊಡಗಿತು. ತುಟಿ ಅದುರಿತು.

ಹೀಗೆ ಹತ್ತು ಹನ್ನೆರಡು ನಿಮಿಷ ಕಳೆಯುವುದರಲ್ಲೆ ಎತ್ತಿನ ಕೊರಳಿನ ಗಂಟೆಯ ಶಬ್ದ ಕೇಳಿಸಿತು; ಶಬ್ದದ ಮೇಲೆ ಮಠದ ಗಾಡಿಯೆಂದು ಭಟ್ಟರಿಗೆ ಹೊಳೆಯಿತು. ಕ್ಷಣ ಮೈ ಬತ್ತಿದಂತಾಗಿ ಕಣ್ಣು ಮುಚ್ಚಿದರು. ಮತ್ತೆ ಮನಸ್ಸನ್ನು ಕಲ್ಲು ಮಾಡಿ ಕೂತರು. ಏಜೆಂಟರು, ಶಾನುಭೋಗರು, ಮಠದ ಉಗ್ರಾಣಿ, ತಕ್ಕಡಿ ಹಿಡಿದ ಇನ್ನೊಬ್ಬ ಆಳು ನೇರ ಒಳಬಂದರು. ಜರಿ ಶಲ್ಯದಿಂದ ಗಾಳಿ ಬೀಸಿ ಕೊಳ್ಳುತ್ತ ಏಜೆಂಟರು:

“ಏನು ನಡೆದಿದೆ ಇಲ್ಲಿ?” ಎಂದು ಗದರಿಸಿ ಕೇಳಿದರು.

ವಸೂಲಿ ಸಾಬ ಕಮ್ತಿಯವರಿಗೆ ಸಲ್ಲಬೇಕಾದ ಸಾಲದ ವಿಷಯ ತಿಳಿಸಿದ. ಅದಕ್ಕೆ ಏಜೆಂಟರು:

“ಇವರು ನಮ್ಮ ಒಕ್ಕಲು, ಶ್ರೀ ನರಸಿಂಹದೇವರ ಗೇಣಿ ಮತ್ತು ಹಳೆಯ ಬಾಕಿ ಚುಕ್ತವಾಗಬೇಕು. ಏನಿದ್ದರೂ ಕಮ್ತಿಯದು ಆಮೇಲೆ, ಹಾಗೆಂದು ನಿನ್ನ ಒಡೇರಿಗೆ ಹೇಳು”ಎಂದರು.

ವಸೂಲಿ ಸಾಬ ಅಷ್ಟಿಷ್ಟಕ್ಕೆ ಬಿಡಲಿಲ್ಲ. ‘ಕಮ್ತಿಯವರ ಸಾಲ ತೀರಿಸುತ್ತೇನೆ ಎಲ್ಲಕ್ಕಿಂತ ಮೊದಲಾಗಿ’ ಎಂದು ಭಟ್ಟರು ವಚನಕೊಟ್ಟಿದ್ದಾರೆಂದು ಒಂದು ಸುಳ್ಳು ಹೊಡೆದು ಗುಟ್ಟಾಗಿ ಅಡಿಕೆ ಸಾಗಿಸಬೇಕೆಂದಿದ್ದರು ಎಂದು ಹೇಳಿದ.

“ಇಷ್ಟಕ್ಕಿಳಿದು ಬಿಟ್ಟಿರಾ ಭಟ್ಟರೆ? ನರಸಿಂಹ ದೇವರ ಆಸ್ತಿಯನ್ನು ನುಂಗಿ ದಕ್ಕಿಸಿಕೊಳ್ಳುತ್ತೇನೆಂದು ತಿಳಿದಿರಾ?” ಎಂದರು ಏಜೆಂಟರು, ತಿರಸ್ಕಾರದಿಂದ ಭಟ್ಟರ ಕಡೆ ನೋಡಿ. ಭಟ್ಟರು ದೈನ್ಯದಿಂದ ತಾನು ಗುರುಗಳಿಗೆ ಬರೆದ ವಿಷಯ ಹೇಳಿದರು. ಜನಿವಾರವನ್ನು ಕೈಯಲ್ಲಿ ಹಿಡಿದು “ಈ ಬಾರಿಯೊಮ್ಮೆ ಮನ್ನಿಸಿದರೆ ಮುಂದಿನ ಸಲದಿಂದ ಚುಕ್ತ ಮಾಡುತ್ತ ಬರುತ್ತೇನೆ” ಎಂದರು.

“ಚುಕ್ತಾ ಮಾಡುತ್ತಾರಂತೆ ಚುಕ್ತ! ಯಾವ ಬಾಯಲ್ಲಿ ಅಂತೀರಿ ಹೇಳಿ? ಅಡಿಕೆ ವ್ಯಾಪಾರ ಹೇಳಿ ಕಳಿಸಿದರೆ ಬಂದು ನೋಡಲಿಕ್ಕಾಗದ ಧಿಮಾಕು ನಿಮಗೆ ಬಂತಲ್ಲ? ಮಠದ ಅನ್ನವನ್ನೆ ತಿಂದುಕೊಂಡಿದ್ದು, ದೇವರ ಅನ್ನ ತಿನ್ನುತ್ತಿದ್ದೀನಿ. ತೋಟವನ್ನಷ್ಟು ಊರ್ಜಿತವಾಗಿಟ್ಟುಕೊಂಡಿರಬೇಕೆಂಬ ಲೆಖ್ಖವಿಲ್ಲ ನಿಮಗೆ. ಥತ್, ನಾಚಿಗೆಗೆಟ್ಟ ಬ್ರಾಹ್ಮಣ. ಈ ಮನೆಯನ್ನಿಟ್ಟುಕೊಂಡಿರುವ ಪಾಡು ನೋಡಿ, ನೀವೇನು ಶೂದ್ರರೊ, ಕುಲೀನ ಬ್ರಾಹ್ಮಣರೊ? ಇಗೊ ಗುರುಗಳ ಆಜ್ಞೆಯೇ ಆಗಿದೆ” ಎಂದು ಏಜೆಂಟರು ಜೇಬಿನಿಂದ ಕಾಗದ ತೆಗೆದು ಓದಿದರು. ಗುರುಗಳು ಅದರಲ್ಲಿ ಕುಪ್ಪಣ್ಣ ಭಟ್ಟರನ್ನು ಎಬ್ಬಿಸಿ ಅಪ್ಪಣ್ಣಭಟ್ಟರಿಗೆ ತೋಟ ಗೇಣಿಗೆ ಕೊಡಬೇಕೆಂದು ವಿಧಿಸಿ ಬರೆದಿದ್ದರು.

ಶಾನುಭೋಗರು ಕನ್ನಡಕ ಹಾಕಿ ಕುಪ್ಪಣ್ಣಭಟ್ಟರ ಸಾಲ, ಬಡ್ಡಿಗಳ ಮೊತ್ತ ಮಾಡಿ “ಮೂರು ಸಾವಿರ” ಎಂದರು. ಏಜೆಂಟರು ಮಠದ ಉಗ್ರಾಣಿಕೆ “ಕೋಣೆಯಲ್ಲಿರುವ ಅಡಿಕೆಯನ್ನು ಅಳಿ” ಎಂದರು.

ಎಮ್ಮೆ ವ್ಯಾಪಾರ ಮಾಡುತ್ತಿದ್ದು ದುಡ್ಡೆಲ್ಲ ನಷ್ಟವಾದ ಮೇಲೆ ಹೋದ ವರ್ಷ ಮಠ ಸೇರಿದ್ದ ಉಗ್ರಾಣಿ ಏಜೆಂಟರನ್ನು ಮೆಚ್ಚಿಸಲೆಂದು ಸಡಗರದಿಂದ ಎದ್ದುನಿಂತ. ಆಳೆತ್ತರದ ಕಪ್ಪು ಭೀಮಾಕೃತಿ ಅವನದ್ದು. ಹೊಸಲಿನ ಮೇಲೆ ಕೂತಿದ್ದ ಕುಪ್ಪಣ್ಣಭಟ್ಟರ ಎದುರು ನಿಂತು:

“ಜಾಗ, ಜಾಗ” ಎಂದು ಒರಟಾಗಿ ಅಂದ.

“ಹ್ವಾಯ್”, ಕಮ್ತಿಯವರಿಗೆ ಅದರಲ್ಲಿ ಹದಿನೈದು ಮಣ ಸಲ್ಲಬೇಕು“ ಎಂದ ವಸೂಲಿ ಸಾಬ. ”

“ನೀನಿಲ್ಲಿಂದ ಜಾಗ ಬಿಡುತ್ತೀಯೊ? ಅಥವಾ ಮರ್ಯಾದೆಯಾಗಬೇಕೊ?” ಏಜೆಂಟರು ಗದರಿಸಿ ವಸೂಲಿ ಸಾಬನನ್ನು ತಿಂದುಬಿಡುವಂತೆ ನೋಡಿದರು. ವಸೂಲಿ ಸಾಬ ನಡೆದದ್ದೆಲ್ಲವನ್ನೂ ಕಮ್ತಿಗೆ ತಿಳಿಸಿಬಿಡಬೇಕೆಂದು ಅವಸರದಿಂದ ಸೈಕಲ್ ಹತ್ತಿ ಹೊರಟ. “ನೀನೇ ಏಕೆ ಮೊದಲಾಗಿ ಅಡಿಕೆ ಅಳೆದು ತರಲಿಲ್ಲವೆಂದು” ಕಮ್ತಿ ಛೀಮಾರಿ ಹಾಕುವನೆಂದು ಸಾಬನಿಗೆ ನಡುಕ ಹತ್ತಿಬಿಟ್ಟಿತ್ತು. ಏನು ಸುಳ್ಳು ಹೇಳಿ ಪಾರಾಗುವುದು ಎಂದು ಚಿಂತಿಸುತ್ತ ಸೈಕಲ್ ತುಳಿದ.

ಹೊಸಲಿನ ಮೇಲೆ ಕೈಯಡ್ಡ ಮಾಡಿ ಕೂತಿದ್ದ ಹಿಡಿ ಶರೀರದ ಭಟ್ಟರಿಗೆ ಇನ್ನೊಮ್ಮೆ ಉಗ್ರಾಣಿ:

“ಹ್ವಾಯ್, ಜಾಗ – ಜಾಗ್” ಎಂದ.

“ನೀವು ಇಲ್ಲಿರುವ ಕಾಳಡಿಕೆ ಮುಟ್ಟುವ ಮುಂಚೆ ನನ್ನ ಹೆಣ ಬೀಳಬೇಕು” ಕುಪ್ಪಣ್ಣಭಟ್ಟರು ಗಡಸಾಗಿ ಗಟ್ಟಿಯಾಗಿ ಹೇಳಿದರು.

ಒಂದುಕ್ಷಣ ಏಜೆಂಟರಿಗೆ, ಶಾನುಭೋಗರಿಗೆ, ಮಠದ ಉಗ್ರಾಣಿಗೆ ತಬ್ಬಿಬ್ಬಾಯಿತು. ಏಜೆಂಟರು ಕಕ್ಕಾಬಿಕ್ಕಿಯಾಗಿ ಕೇಳಿದರು:

“ಏನೆಂದಿರಿ?”

“ಮೊದಲು ನನ್ನ ಹೆಣ ಬೀಳಬೇಕು – ಎಂದೆ” ಅವರ ಇಡಿಯ ಪ್ರಾಣ ಬೆಂಕಿಯ ನಾಲಗೆಯಂತೆ ನಿಶ್ಚಿಯದಿಂದ ಉರಿಯುತ್ತಿತ್ತು.

“ಬ್ರಾಹ್ಮಣನಾಗಿ ಹುಟ್ಟಿ ಯಾಕೆ ಹೀಗೆ ಭಂಡಗೆಟ್ಟುಬಿಟ್ಟಿರಿ ಭಟ್ಟರೆ?” ಎಂದು ಏಜೆಂಟರು ಕೂಗಿದರು. ಶಾನುಭೋಗರು ಪುಸಲಾಯಿಸಿದರು. ಏನೂ ನಡೆಯಲಿಲ್ಲ.

“ಆಗಲಿ ನಿಮ್ಮ ಸೊಕ್ಕು ಇಳಿಸುವೆ” ಎಂದು ಏಜೆಂಟರು ಎದ್ದುನಿಂತು ಹೊರಟರು – ಪರಿವಾರ ಸಮೇತ. ಅಪ್ಪಣ್ಣಭಟ್ಟರ ಮನೆಗೆ ಹೋಗಿ “ಗಾಡಿಯಲ್ಲೆಲ್ಲಾದರೂ ಭಟ್ಟರು ಅಡಿಕೆ ಸಾಗಿಸದಂತೆ ಒಂದು ಕಣ್ಣಿಟ್ಟಿರಿ ನಾಳೆಯೇ ಬಂದು ತಕ್ಕ ಶಾಸ್ತಿ ಮಾಡುವ” ಎಂದು ಎಜೆಂಟರು ದೃಢ ನಿರ್ಧಾರದಲ್ಲಿ ಗಾಡಿಯನ್ನು ಹತ್ತಿ ಹೊರಟುಬಿಟ್ಟರು; ಒಂದು ಲೋಟ ಕಾಫಿಗೂ ಅಪ್ಪಣ್ಣಭಟ್ಟರ ಮನೆಯಲ್ಲಿ ನಿಲ್ಲಲಿಲ್ಲ.

ಹೊಸಲಿನ ಮೇಲೆ ಕೂತ ಕುಪ್ಪಣ್ಣಭಟ್ಟರ ಕಾಲು ಮರಗಟ್ಟಿತ್ತು. ಎದ್ದುನಿಂತು ಸುಧಾರಿಸಿಕೊಂಡು ಬಾಗಿಲಿಗೆ ಅಗಳಿ ಹಾಕಿ, ಸ್ನಾನ ಮಾಡಿ ಗಂಜಿಯನ್ನು ಬೇಯಿಸಿಕೊಂಡು ತಿಂದರು. ಸಾಯಂಕಾಲ ಕೊಟ್ಟಿಗೆಗೆ ಬಂದ ಹಸುಗಳನ್ನು ಕಟ್ಟಿ, ಕಲಗಚ್ಚುಕೊಟ್ಟು, ಹಾಲು ಕರೆದರು. ಲಾಟೀನು ಹಚ್ಚಿ ನಡುಮನೆಯಲ್ಲಿ ಕೂತರು. ಮತ್ತೆ ಅಡಿಗೆ ಮಾಡಲು ಇಷ್ಟವಿಲ್ಲದೆ ಒಂದಿಷ್ಟು ಕಾಯಿಸಿದ ಹಾಲು ಕುಡಿದು ಅಲ್ಲೆ ಒರಗಿದರು. ನಿದ್ದೆ ಹತ್ತಲೇ ಇಲ್ಲ. ಎಷ್ಟು ಹೊತ್ತಿರಬಹುದೆಂದು ಅಂಗಳಕ್ಕೆ ಬಂದು ಆಕಾಶ ನೋಡಿದರು. ವೃಕ್ಷಗಳ ಗಂಭೀರ ಮೌನದಲ್ಲಿ ನಸುಕಿನ ಮುನ್ನದ ಬೆಳ್ಳಿ ಆಕಾಶದಲ್ಲಿ ಹೊಳೆಯುತ್ತಿತ್ತು. ಒಳಗೆ ಬಂದು ಅಗಳಿ ಹಾಕಿ ಕಣಣು ಮುಚ್ಚಿದರು. ಹಾಗೇ ರೆಪ್ಪೆ ಬಾಡಿ ನಿದ್ದೆ ಹತ್ತಿದಂತಾಯ್ತು.

ದನ ಕಾಯುವ ಹುಡುಗ ಬಂದು ಕೂಗಿದಾಗಲೇ ಎಚ್ಚರ. ಮುಖ ತೊಳೆದು, ಬಾವಿಯಿಂದ ಸೇದಿದ ನೀರನ್ನು ಮೈಮೇಲೆ ದಡದಡನೆ ಸುರಿದುಕೊಂಡು ಒಲೆ ಹತ್ತಿಸಿ ಎಸರಿಟ್ಟರು.

ಹೊರಗೆ ಬಾಗಿಲು ಕುಟ್ಟಿದಂತಾಯ್ತು.

“ನಾನು ಅಮೀನ, ಭಟ್ಟರೇ ಬಾಗಿಲು ತೆರೆಯಿರಿ. ”

ಭಟ್ಟರು ಮಾತಾಡಲಿಲ್ಲ. ಅಡಿಕೆ ತುಂಬಿದ್ದ ಕೋಣೆಯ ಹೊಸಿಲಿನ ಮೇಲೆ ಹೋಗಿ ಕೂತುಬಿಟ್ಟರು. ಮತ್ತೆ ಸೈಕಲ್ಲಿನ ಬೆಲ್ಲು ಬಾರಿಸಿದ ಶಬ್ದ. ಕಮ್ತಿಯ ಸ್ವರ:

“ಭಟ್ಟರೇ ಬಾಗಿಲು ತೆರೆಯಿರಿ, ಮಣಕ್ಕೆ ನಲವತ್ತೇಳರಂತೆ ಕೊಡುವೆ. ನನ್ನ ಲೆಖ್ಖಚುಕ್ತ ಮಾಡಿಬಿಡಿ. ”

ಭಟ್ಟರು ಹಂದಲಿಲ್ಲ. ಮತ್ತೆ ವಸೂಲಿ ಸಾಬ ಕೂಗಿದ:

“ಬಾಗಿಲು ತೆರೆಯುತ್ತೀರೊ, ಇಲ್ಲವೊ?”

ಅಮೀನ ತಿರುಗಿ ಬಂದ. ಕಮ್ತಿಗೂ ಅವನಿಗೆ ವಾಗ್ವಾದ ಹತ್ತಿತ್ತು. ಏಜೆಂಟರನ್ನೇ ಕರೆದು ತರುವೆನೆಂದು ಅಮೀನ ಹೋದ. ಕಮ್ತಿ ಮತ್ತೆ ಕರೆದ:

“ಭಟ್ಟರೇ ಬಾಗಿಲು ತೆರೆಯಿತಿ, ಮಣಕ್ಕೆ ಐವತ್ತರಂತೆ ಕೊಡುವೆ. ನನ್ನ ಲೆಖ್ಖ ಚುಕ್ತ ಮಾಡಿಬಿಡಿ. ”

ಉತ್ತರ ವಿಲ್ಲದ್ದರಿಂದ ಬಾಯಾರೆ ಬೈಯತೊಡಗಿದ:

“ನೀವಿಂಥ ಭಂಡರೆಂದು ತಿಳಿದಿದ್ದರೆ ಅಂಗಡಿಯ ಮೆಟ್ಟಿಲಿನ ಮೇಲೆ ನಿಮ್ಮನ್ನು ಹತ್ತಲು ಬಿಡುತ್ತಿರಲಿಲ್ಲ – ತಿಳಿಯಿತ?”

ಕಮ್ತಿ ಕೊನೆಗೆ ವಸೂಲಿ ಸಾಬನಿಗೆ ಗಟ್ಟಿಯಾಗಿ ಹೇಳಿದ:

“ಬುಡನ್, ಕೂಡಲೆ ನೀನು ಸೈಕಲ್ ಹತ್ತಿ ಇವರ ಮೈದುನರ ಊರಿಗೆ ಹೋಗು. ಪೈ ಬಿಡದಂತೆ ಸಾಲ ತೀರಿಸುವ ತನಕ ಅವರ ಮನೆಯ ಕಟ್ಟೆ ಬಿಟ್ಟು ಏಳಬೇಡ. ಇವರಿಗೆ ಮರ್ಯಾದೆಯಿಲ್ಲದಿದ್ದರೆ ಅವರಿಗೂ ಇಲ್ಲವ ನೋಡುವ. ”

ಅಷ್ಟರಲ್ಲಿ ಏಜೆಂಟರು ಬಂದರು. ಕಮ್ತಿಗೂ ಅವರಿಗೂ ಜಟಾಪಟಿಯಾಯಿತು. ಪಿಂಡಕ್ಕೆ ಮುತ್ತಿದ ಕಾಗೆಗಳ ಹಾಗೆ ಕೂಗಾಡಿದರು. ಏಜೆಂಟರು ಕೊನೆಗೆ:

“ಹೊಡಿಯೋ ಡಂಗುರ ಬುಕ್ಲಾಪುರದಲ್ಲಿ” ಎಂದು ಡಂಗುರದವನಿಗೆ ಹರಾಜು ಸಾರಲು ಹೇಳಿದರು. ಡಂಗುರದವನು ಅಲ್ಲಿಂದಲೇ ಪ್ರಾರಂಭಿಸಿದ. ಡಂಗುರ ಬಡಿದು ಕೂಗಿದ;

“ಕುಪ್ಪಣ್ಣಭಟ್ಟರ ಚರಾಸ್ತಿಯೆಲ್ಲ ಹರಾಜಿಗಿದೆ. ಬೇಕಾದವರು ಬಂದು ಹಿಡಿಯಬಹುದು. ”

ಡಂಗುರದ ಶಬ್ದದಲ್ಲಿ ಕಮ್ತಿಯ ಕೂಗಾಟ ಮುಳುಗಿತು. ತಮ್ಮಟೆಯ ಶಬ್ದ ಕಾಡಿನಲ್ಲಿ ದೂರ ದೂರವಾಗುತ್ತಿದ್ದಂತೆ –

“ನಾನು ಕೋರ್ಟಿಗೆ ಹೋಗುವೆ” ಎಂದ ಕಮ್ತಿ.

“ದಯಮಾಡಿಸು” ಎಂದರು ಏಜೆಂಟರು.

ತಮ್ಮಟೆಯ ಶಬ್ದ ಇನ್ನಷ್ಟು ದೂರವಾಯಿತು. ಮೌನ ಕವಿಯಿತು, ಹೊರಗೆ ಬಿಸಿಲು ಏರಿತು.

“ಅಮೀನರೇ ಮುಂದಿನ ಕೆಲಸ ನಿಮ್ಮದು. ಉಗ್ರಾಣಿಗಳೇ ಇವರಿಗೆ ಸಹಾಯ ಮಾಡಿ. ಭಟ್ಟರಿನ್ನೇನಾದರೂ ತಂಟೆ ಮಾಡಿದರೆ ನಾನು ಅಪ್ಪಣ್ಣಭಟ್ಟನಲ್ಲಿರುವೆ, ಬಂದು ಕರೆಯಿರಿ” ಎಂದು ಏಜೆಂಟರು ಹೊರಟು ಹೋದರು.

“ಭಟ್ಟರೇ ಬಾಗಿಲು ತೆರೆಯುತ್ತಿರೊ? ಅಗುಳಿ ಮುರಿದು ಬರಬೇಕೊ” ಉಗ್ರಾಣಿ ಕೂಗಿದ.

ಉತ್ತರವಿಲ್ಲದ್ದು ನೋಡಿ ಪಿಕಾಶಿಯೆತ್ತಿ ಬಾಗಿಲಿಗೆ ಎಕ್ಕಿದ; ಅಗಳಿ ಲಟಲಟ ಎಂದಿತು.

“ಈಗಲಾದರೂ ಬಾಗಿಲು ತೆರಿಯಿತಿ” ಎಂದು ಉಗ್ರಾಣಿ ಮತ್ತೆ ಕೂಗಿದ. ಉತ್ತರವಿಲ್ಲದ್ದು ನೋಡಿ ಇನ್ನೊಂದೇಟು ಹಾಕಿದ. ಅಗುಳಿ ಮುರಿದು ಬಾಗಿಲು ಧಡಾರನೆ ತೆಗೆದುಕೊಂಡಿತು. ಉಗ್ರಾಣಿ ಯಮದೂತನಂತೆ ಎದುರು ಬಂದು ನಿಂತ. ಜಪ್ಪೆನ್ನದ ಕೂತಿದ್ದ ಭಟ್ಟರಿಗೆ ಏಳುವಂತೆ ಸನ್ನೆ ಮಾಡಿದ.

ಭಟ್ಟರು ಕಣ್ಣು ಮುಚ್ಚಿ ಕೂತೇಬಿಟ್ಟರು. ಮುದುರಿ ಕೂತ ಅವರ ಹಿಡಿ ಶರೀರವನ್ನು ಉಗ್ರಾಣಿ ನಿರಾಯಸ ಎತ್ತಿ ಅಂಗಳದ ಬಿಸಿಲಿನಲ್ಲಿಟ್ಟು ಬಂದ. ಅಡಿಕೆ ಚೀಲಗಳನ್ನೆಲ್ಲ ಬೆನ್ನು ಕೊಟ್ಟು ಎತ್ತಿ ತಂದು ಅಂಗಳದ ಇನ್ನೊಂದು ಮೂಲೆಯಲ್ಲಿಟ್ಟ.

ಉಗ್ರಾಣಿಗೆ ಹುರುಪೇರಿಬಿಟ್ಟಿತ್ತು. ಅಮೀನನ ಕಡೆ ತಿರುಗಿ:

“ಪಾತ್ರೆ ಪರಟೆಯ ಸಹಿತ ಹರಾಜೊ?” ಎಂದು ಕೇಳಿದ.

ಅಮೀನ ಜೇಬಿನಿಂದ ಚೀಟಿ ತೆಗೆದು ಓದಿ;

“ಹಾ, ಚರಾಸ್ತಿ, ಸ್ಥಿರಾಸ್ತಿ ಸಹಿತ ಎಲ್ಲ ಹರಾಜು ಆಗಬೇಕೆಂದು ಅಪ್ಪಣೆ ಚೀಟಿಯಿದೆ” ಎಂದ.

ಉಗ್ರಾಣಿ ಮನೆಯೊಳಕ್ಕೆ ನುಗ್ಗಿದ. ಹಾಲಿನ ಪಾತ್ರೆಯನ್ನು ಎತ್ತಿ ತಂದು ಅಂಗಳದ ಮೂಲೆಯಲ್ಲಿ ಹಾಲು ಚೆಲ್ಲಿದ. ನಂತರ ಒಂದೊಂದಾಗಿ ಹಂಡೆ, ಬಾಣಲೆ, ಅನ್ನದ ತಪ್ಪಲೆ, ಹರಿವಾಣ, ಬೆಳ್ಳಿಯ ಚೊಂಬು, ಬಟ್ಟಲು, ತೀರ್ಥದ ಬಟ್ಟಲು (ಭಟ್ಟರು ಘಟ್ಟದ ಕೆಳಗಿನಿಂದ ಬರುವಾಗ ತಂದದ್ದು), ಜಾಗಟೆ, ಶಂಖ, ಹಬ್ಬಹರಿದಿನದ ಕಡಾಯಿಗಳು, ತೊಟ್ಟಿಲು, ಸವುಟು, ಹಾಸಿಗೆ, ಹರಕು ಚಾಪೆ, ಕಂಬಳಿ, ಚಾವಡಿಯಲ್ಲಿದ್ದ ಒಂದು ಮರದ ಬೆಂಚು, ಹನ್ನೆರಡು ಕೂರುವ ಮಣೆ, ಶ್ರೀ ಕೃಷ್ಣನ ಬೆಳ್ಳಿಯ ಒಂದು ಪಟ, ಪಟ್ಟೆಮಡಿ – ಹೀಗೆ, ಸಾಲಿಗ್ರಾಮವಿದ್ದ ದೇವರ ಪೆಟ್ಟಿಗೆಯೊಂದನ್ನು ಬಿಟ್ಟು, ಕಸಪರಿಕೆ ಸಮೇತ ಭಟ್ಟರ ಎಲ್ಲ ಚರಾಸ್ತಿಗಳನ್ನು ತಂದು ಅಂಗಳದಲ್ಲಿ ಹರಡಿದ. ಭಟ್ಟರು ಕಣ್ಣೆತ್ತದೆ ತನ್ನ ಚರಾಸ್ತಿಗಳ ನಡುವೆ ತಲೆಯ ಮೇಲೆ ಕೈಹೊತ್ತು ಬಿಸಿಲಿನಲ್ಲಿ ಕುಕ್ಕರು ಕೂತರು.

“ದನಗಳೂ ಸೇರುತ್ತವಲ್ಲ ಚರಾಸ್ತಿಯಲ್ಲಿ” ಎಂದ ಉಗ್ರಾಣಿ.

“ಓಹೊ” ಎಂದ ಅಮೀನ.

ಹರಾಜನ್ನು ಸಾರಿ ತಮ್ಮಟೆಯನ್ನು ಬಾರಿಸುತ್ತ ಹಿಂದಕ್ಕೆ ಬಂದ ಆಳಿಗೆ “ಗುಟ್ಟದ ಮೇಲೆ ಇವರ ದನಗಳಿವೆ ಹೊಡೆದುಕೊಂಡು ಬಾ” ಎಂದ ಉಗ್ರಾಣಿ. ಸಣ್ಣ ಪುಟ್ಟ ಲೋಟ, ತಟ್ಟೆಗಳನ್ನು ತುಂಬಲೆಂದು ಉಗ್ರಾಣಿ ಒಳಗೆ ಹೋಗಿ ಖಾಲಿ ಗೋಣಿಚೀಲವೊಂದನ್ನು ತಂದು ಅಂಗಳದಲ್ಲಿ ಕೂಡವಿದ. ನಾಲ್ಕಾರು ಹಸಿ ಮೈಯ ಇಲಿಮರಿಗಳು ಅದರಿಂದ ಪತಪತನೆ ಉದುರಿದವು. ಬಿಸಿಲಿನಲ್ಲಿ ವಿಲವಿಲ ಒದ್ದಾಡಿದವು. ಅಮೀನ ‘ಇಸ್ಸಿ’ ಎಂದ. ಉಗ್ರಾಣಿ ನಕ್ಕು “ಥತ್” ಎಂದ. ಅಂಜುತ್ತಂಜುತ್ತ ಒಂದು ಕಾಗೆ ಕುಪ್ಪಳಿಸಿ ಕುಪ್ಪಳಿಸಿ ಹತ್ತಿರ ಬಂದು ಎಗರಿ ಕುಕ್ಕಿ ಕಣ್ಣುಬಿಡದ ನುಣ್ಣನೆಯ ಮೈಯ ಮರಿಯನ್ನೆತ್ತಿ ಹಾರಿತು.

ದೂರದಲ್ಲಿ ಅಲ್ಲೊಂದು ಇಲ್ಲೊಂದು ಮರದ ಸಂದಿಯಿಂದ ಕೆಲಸದ ನೆವದಿಂದ ಬಂದವರೆಂಬಂತೆ ಕೈಯಲ್ಲಿ ಕತ್ತಿಯನ್ನೊ ಹಗ್ಗವನ್ನೊ ಹಿಡಿದು ನಿಂತು ನೋಡುತ್ತಿದ್ದ ಬುಕ್ಲಾಪುರದವರು ಅಂಗಳಕ್ಕೆ ಬರುವ ಧೈರ್ಯ ಮಾಡಲಿಲ್ಲ. ಭಟ್ಟರ ಚರಾಸ್ತಿಯನ್ನು ಹರಾಜಿನಲ್ಲಿ ಹಿಡಿಯಲಿಲ್ಲ. ಪರರ ವಸ್ತುವಿಗೆ ಆಸೆ ಮಾಡಿ ತಾವ್ಯಾಕೆ ಪಾಪ ಕಟ್ಟಿಕೊಳ್ಳಬೇಕೆಂದು, “ಛೆ ಪಾಪ, ಪಾಪ” ಎಂದು ಮರುಗಿ ಒಬ್ಬೊಬ್ಬರಾಗಿ ಹಿಂದಕ್ಕೆ ನಡೆದರು. ಅಲ್ಲೊಬ್ಬ ಇಲ್ಲೊಬ್ಬನಂತೆ ಪರಮ ಕುತೂಹಲಿಗಳು ಮಾತ್ರ ನಿಂತರು.

ಏಜೆಂಟರು ಬಂದು ಅಡಿಕೆ ಚೀಲಗಳನ್ನು ತೂಗಿಸಿ ಗಾಡಿಗೆ ತುಂಬಿಸಿದರು. ಅಮೀನ ಒಂದು ಚೀಟಿಯಲ್ಲೆಲ್ಲ ಬರೆದುಕೊಂಡ. ಕಸಪರಕೆ, ಚಿಲ್ಲರೆ ಪಾತ್ರೆ, ದೇವರ ಬೆಳ್ಳಿಪಟ, ಶಂಖ, ಜಾಗಟೆ ಬಿಟ್ಟು ಉಳಿದೆಲ್ಲ ಬೆಲೆಯುಳ್ಳ ಪಾತ್ರೆಗಳನ್ನು ಗಾಡಿಗೆ ತುಂಬಿಸಿದರು.

ಭಟ್ಟರ ಮುಖ ನೋಡದ ಏಜೆಂಟರು ಗಟ್ಟಿಯಾಗಿ ಅಂದರು:

“ನರಸಿಂಹದೇವರ ಆಸ್ತಿಗೆ ಮುಟ್ಟುಗೋಲು ಹಾಕಿ ಊರ್ಜಿತರಾದವರು ಇಲ್ಲ ಭಟ್ಟರೇ – ತಿಳಿಯಿತ? ಇನ್ನು ಮುಂದೆ ಈ ತೋಟವಾಗಲಿ, ಈ ಮನೆಯಾಗಲಿ ನಿಮ್ಮ ಭೋಗ್ಯದಲ್ಲಿಲ್ಲ. ಇನ್ನು ಮುಂದೆ ಅಪ್ಪಣ್ಣಭಟ್ಟರು ದೇವರ ಒಕ್ಕಲು” ಎಂದು ಹೇಳಿ ಗಾಡಿಯಲ್ಲಿ ಕೂತರು; ಕೊನೆಯ ಗುಂಡು ಹಾರಿಸಿದರು:

“ನಿಮಗೇನು ಕಮ್ಮಿ ಹೇಳಿ? ದುಡ್ಡಿನ ಗಂಟನ್ನು ಮೊದಲೇ ನಿಮ್ಮ ಹೆಂಡತಿಯ ಜೊತೆ ತವರಿಗೆ ಸಾಗಿಸಿಬಿಟ್ಟಿದ್ದೀರಲ್ಲ” –

ಭಾಗ: ನಾಲ್ಕು

ಬುಕ್ಲಾಪುರದಲ್ಲಿ ಒಂದು ಬಾಲ ವಿಧವೆಯಾದ ಸೀತಕ್ಕ ಎಂಬ ಅಜ್ಜಿ ಇತ್ತು. ಯಾವ ದಿಕ್ಕು ದಿವಾಣಿಯೂ ಇಲ್ಲದೆ, ಸತ್ತ ಮೇಲೆ ಪಿಂಡ ಹಾಕಲೊಂದು ಸಂಬಂಧಿಯಿಲ್ಲದೆ, ಒಬ್ಬಂಟಿಯಾಗಿ ಮುರುಕು ಗುಡಿಸಲೊಂದರಲ್ಲಿ ಅದರ ವಾಸ. ದಿನಕ್ಕೆರಡು ಹಿಡಿ ಅಕ್ಕಿಯನ್ನು ಅವರಿವರಿಂದ ಪಡೆದು ದಿನಕ್ಕೊಂದು ಹೊತ್ತು ಅದರ ಗಂಜಿಯೂಟ. ಆದರೂ ಅಜ್ಜಿಯ ನಾಲಗೆಗೆ ಅಗ್ರಹಾರದ ಜನ ತತ್ತರ ನಡುಗುವರು. ಹತ್ತಿರ ಸುಳಿವ ಶೂದ್ರರೆಂದರೆ, ಮಡಿಯುಟ್ಟ ಮೇಲೆ ಬಂದು ಮುಟ್ಟುವ ಹುಡುಗರೆಂದರೆ, ತಾನೆಲ್ಲಾದರೂ ಎದುರಾದರೆ ಹಿಂದಕ್ಕೆ ತಿರುಗಿ ಮೂರು ಹೆಜ್ಜೆ ನಡೆಯುವ ಶಕುನಭೀತರೆಂದರೆ ಸೀತಕ್ಕನ ಶಾಪದ ಸುರಿಮಳೆ ಪ್ರಾರಂಭವಾಗುವುದು. ಚೊಂಬು ಹಿಡಿದು ಮನೆಮನೆಯ ಎದುರು ನಿಂತು ದಿನಕ್ಕೊಮ್ಮೆ ಕೂಗಾಡದಿದ್ದರೆ ಅಜ್ಜಿಯ ಜೀವಕ್ಕೆ ನೆಮ್ಮದಿಯಿಲ್ಲ. ಸೀತಕ್ಕನ ನಾಲಗೆಗೆ ಹೆದರಿ, ಕೇಳುವ ಮುನ್ನವೆ ಅಗ್ರಹಾರದ ಜನ ಪಾವಕ್ಕಿ ಎತ್ತಿ ಕೊಟ್ಟುಬಿಡುವರು. ಮಧ್ಯಾಹ್ನ ಊಟವಾದ ಮೇಲೆ ಹೊಳೆಯ ಕಲ್ಲಿನ ಮೇಲೆ ಕೂತು ಅದರ ಹೊತ್ತು ಹೋಗುವುದು; ಅಥವಾ ದೇವಸ್ಥಾನದ ಕಟ್ಟೆಯ ಮೇಲೆ ಕೂತು ಹೂಬತ್ತಿ ಹೊಸೆಯುವುದು. ಕಾಲು ಕೆರೆದಾದರೂ – ಅಂತೂ ಒಟ್ಟಿನಲ್ಲಿ ಜನ ತನ್ನನ್ನು ಸಸಾರವಾಗಿ ಕಾಣುವಂತೆ ಮಾಡಿ, ಪಿತೃಗಳನ್ನೆಲ್ಲ ಸಾಕ್ಷಿಗೆ ಕರೆದು, ಕೆಟ್ಟು ಹೋದ ಕಾಲದ ಬಗ್ಗೆ ಗೊಣಗಾಡದೆ ಸೀತಕ್ಕನಿಗೆ ನಿದ್ದೆ ಬರದು, ಅದರ ವಯಸ್ಸೆಷ್ಟೊ ಯಾರಿಗು ತಿಳಿಯದು. ಕಂಡಂತೆ ಆಚಂದ್ರಾರ್ಕದಿಂದ ಇರುವ ಅಜ್ಜಿ. ಅದು ಬಹು ವಚನದಿಂದ ಮಾತಾಡಿಸುವ ನರಜೀವ ಆಸುಪಾಸಿನಲ್ಲಿಲ್ಲ.

ಸೀತಕ್ಕನಿಗೆ ಡಂಗುರ ಕೇಳಿಸಿ ಕಿವಿ ನೆಟ್ಟಗಾಯಿತು, ಬೇಗ ಮುರು ಮುಳುಗು ಹಾಕಿ ಗುಡಿಸಲಿಗೆ ಹೋಗಿ ಗಂಜಿ ಬೇಯಿಸಿಕೊಂಡು ತಿಂದು ಚೊಂಬು ಹಿಡಿದು ಹೊರಟಿತು. ಏನು ಸುದ್ದಿಯೆಂದು ಮನೆ ಮನೆ ಅಲೆಯಿತು. ಗಂಡಸು ಪಿಳ್ಳೆ ಅಗ್ರಹಾರದಲ್ಲಿರಲಿಲ್ಲ. ಹೆಂಗಸರು ಮಾತಾಡರು. ಕೊನೆಗೊಬ್ಬ ಶೂದ್ರ ಹೇಳಿದ, ಹೀಗೆ ಅಂತ. ಸೀತಕ್ಕನ ಸವಾರಿ ಸೀದ ಕುಪ್ಪಣ್ಣಭಟ್ಟರ ಅಂಗಳಕ್ಕೆ ನಡೆಯಿತು.

ಬಂದು ನೋಡಿದರೆ ಅಂಗಳದಲ್ಲಿ ಒಂದಿಷ್ಟೂ ಕಲಾಯಿ ಇಲ್ಲದ ಅಂಕುಡೊಂಕು ಪಾತ್ರೆ; ಪೊರಕೆ; ಬಿಸಿಲಿಗೆ ಬೋಳು ನೆತ್ತಿಯೆತ್ತಿ ಕುಕ್ಕುರು ಕೂತು ಕುಪ್ಪಣ್ಣ ಭಟ್ಟ.

ಸೀತಕ್ಕನ ಕಿರುಚಾಟ ಮಧ್ಯಾಹ್ನದ ಹಪಹಪ ಮೌನವನ್ನು ಕಳವಳಿಸಿಬಿಟ್ಟಿತು:

“ಯಾವ ರೆಂಡೇಮಗ ನಿನ್ನ ಮನೆ ಹಾಳು ಮಾಡಿದನೊ? ಅವನ ಮನೆ ಮಂಟಾನವಾಗ. ಅವನ ದನ ಹುಲಿ ಹಿಡಿಯ. ನಿನಗೇನು ಧಾಡಿ ಬಡಿದಿದೆ ಹೀಗೆ ಕೂರಲು? ಏಳು, ಎದ್ದೇಳು, ನಿನಗೂ ಸರಿಯಾಯಿತು. ಬಡವನ ಸಿಟ್ಟು ದವಡೆಗೆ ಮೂಲ ಅಂತ ಸುಮ್ಮನೆ ಅಂತಾರೆ ಅಂತ ತಿಳಿದಿಯ? ನಿನ್ನ ಗರ್ವವೇನು? ನಿನ್ನ ಸೊಕ್ಕೇನು? ಅದಕ್ಕೊಂದು ಇತಿಮಿತಿಯಿತ್ತ? ಈ ಅಜ್ಜಿಯನ್ನು ಕರೆದು ಇದ್ದಿಯ ಸತ್ತಿಯ ಎಂದು ನೀನು ವಿಚಾರಿಸಿದ್ದಿದಿಯ?”

ಕುಪ್ಪಣ್ಣಭಟ್ಟ ತೆಪ್ಪಗೆ ಕೂತೇಬಿಟ್ಟಿದ್ದು ನೋಡಿ ಸೀತಕ್ಕನಿಗೆ ಕಸಿವಿಸಿಯಾಯಿತು. ಮತ್ತೆ ಕೂಗಲು ಪ್ರಾರಂಭಿಸಿದಳು:

“ನಿನ್ನ ಮನೆ ಹಾಳು ಮಾಡಿದವನ ಮನೆ ಉರಿದುಹೋಗ, ಯಾರೋ ಅಲ್ಲಿ ದೆವ್ವದಂತೆ ನಿಂತದ್ದು?”

ಮರದ ಬಡುದಲ್ಲೊಬ್ಬ ನಿಂತದ್ದು ಸೀತಕ್ಕನಿಗೆ ಹೊಳೆದು, ಅಂಗಳ ದಾಟಿ “ಯಾವ ಪುಣ್ಯಾತ್ಮನೋ ನೀನು – ಬಾ ಇಲ್ಲಿ” ಎಂದು ಬುಕ್ಲಾಪುರದ ನರಸಿಂಹಭಟ್ಟನ್ನೆನ್ನುವ ಯುವಕನನ್ನು ಕರೆದಳು. ಅವನು ಅಂಜುತ್ತಂಜುತ್ತ ಬಂದ.

“ಅಲ್ಲ? ಬಿಸಿಲಲ್ಲಿ ಬ್ರಾಹ್ಮಣ ಬಿದ್ದಿರೋದು ನೋಡುತ್ತ ನಿಂತಿದಿಯಲ್ಲ? ನಿನ್ನ ಕಣ್ಣು ಹೊಟ್ಟಿಹೋಗ” – ಎಂದು ಅವನನ್ನೆಳೆದು ತಂದಳು. ಕುಪ್ಪಣ್ಣಭಟ್ಟರನ್ನು ಇಬ್ಬರೂ ಸೇರಿ ಕೈಹಿಡಿದೆತ್ತಿ ಜಗುಲಿಯ ನೆರಳಿನ ಮೇಲೆ ಕೂರಿಸಿದರು. ನರಸಿಂಹಭಟ್ಟ ಮೆಲ್ಲಗೆ ಕಾಲು ಕಿತ್ತ.

ಅಪ್ಪಣ್ಣಭಟ್ಟ, ಏಜೆಂಟ್, ಕುಪ್ಪಣ್ಣಭಟ್ಟ, ಬುಕ್ಲಾಪುರದ ಭಟ್ಟರು, ಎಲ್ಲರನ್ನೂ ಒಟ್ಟಾಗಿ ಶಪಿಸುತ್ತ ಸೀತಕ್ಕ ಅಂಗಳದಲ್ಲಿ ಬಿದ್ದಿದ್ದ ಚಿಲ್ಲರೆ ಪಾತ್ರೆಗಳನ್ನೆಲ್ಲ ಜಗುಲಿಯ ಮೇಲೆ ಕೂಡಿಸಿತು. ಹಾಕಿದ್ದ ಬೀಗ ನೋಡಿ, ಬೀಗ ಹಾಕಿದವನ ಕೈಯನ್ನು ಸರ್ಪ ಕಡಿಯಲಿ ಎಂದು ಶಪಿಸಿ, ಚೊಂಬು ಹಿಡಿದು ಅಪ್ಪಣ್ಣಭಟ್ಟನ ಮನೆಗೆ ಹೋಗಿ, ಅಲ್ಲಿ ನಿಂತು ಇನ್ನೊಂದಷ್ಟು ಕೂಗಿ ತನ್ನ ಗುಡಿಸಿಲಿಗೆ ಅಜ್ಜಿ ಬಂದಿತು. ಎರಡು ಹಿಡಿ ಅವಲಕ್ಕಿಗೆ ಹಸಿಮೆಣಸಿನಕಾಯಿ ನುರಿದು, ಉಪ್ಪುಹಾಕಿ, ಬೇಡಿ ತಂದಿದ್ದ ಮೊಸರನ್ನೆಲ್ಲ ಸುರಿದು ಮತ್ತೆ ಕುಪ್ಪಣ್ಣಭಟ್ಟನ ಮನೆಗೆ ಸೀತಕ್ಕ ನಡೆದು ಬಂದಿತು. “ಇದೊ ತಿನ್ನು, ಹೊಟ್ಟೆ ಕಾಯಿಸಿಕೊಂಡು ಬೆಪ್ಪರಾಷ್ಟ್ರನಂತೆ ಕೂತಿರಬೇಡ” ಎಂದು ಬಾಳೆಯ ಎಲೆಯ ಮೇಲೆ ಮೊಸರವಲಕ್ಕಿ ಹಾಕಿ, ತಿರುಗಿ ತನ್ನ ಗುಡಿಸಿಲಿಗೆ ಬಂದು ಸ್ನಾನ ಮಾಡಿ ನೆಲದ ಮೇಲೆ ಮಲಗಿತು.

ಭಾಗ: ಐದು

ಕತ್ತಲಾದ ಮೇಲೆ ಅಪ್ಪಣ್ಣಭಟ್ಟರು ಕೊಟ್ಟಿಗೆ ಕೆಲಸದ ಆಳನ್ನು ಕರೆದು, “ಭಟ್ಟರು ಅಲ್ಲೆ ಇದ್ದಾರೊ? ಹೆಂಡತಿಯ ತವರಿಗೆ ಗಾಡಿ ಬಿಟ್ಟರೊ ನೋಡಿ ಬಾ. ಮೆತ್ತಗೆ ಸದ್ದಾಗದಂತೆ ಹೋಗು” ಎಂದು ಕಳುಹಿಸಿದರು. ಆಳು ಕತ್ತಲಿನಲ್ಲಿ ಮೆತ್ತಗೆ ಬಂದು ಚಂದ್ರನ ಬೆಳಕಿನಲ್ಲಿ ಜಗುಲಿಯ ಮೇಲೆ ನಿಶ್ಚಲ ಕೂತ ರೂಪ ನೋಡಿ ಹೆದರಿ ಓಡಿ ಸುದ್ದಿ ತಿಳಿಸಿದ. ಅಪ್ಪಣ್ಣಭಟ್ಟರು ಹೆಂಡತಿಯ ಎದುರು ನಿಂತು, “ನೋಡಿದಿಯಾ ಧಿಮಾಕು? ಏಜೆಂಟರ ಎದುರೇ ಏನು ಧಿಮಾಕು ಮಾಡಿದ ಗೊತ್ತೆ? ಇದೊಂದು ಹೊಸ ತಂತ್ರವಷ್ಟೆ. ನಸುಕಲ್ಲೆದ್ದು ಹೆಂಡತಿಯ ತವರಿಗವನು ಹೋಗದಿದ್ದರೆ ನನ್ನ ಹೆಸರು ಅಪ್ಪಣ್ಣಭಟ್ಟನಲ್ಲ” ಎಂದರು.

ಬೆಳಗಾಯಿತು. ಕಟ್ಟಿಗೆಯನ್ನು ತಂದು ಹಾಕಿದ ಆಳು, “ಭಟ್ಟರು ಜಗಲಿಯ ಮೇಲೆ ಕೂತುಬಿಟ್ಟಿದ್ದಾರೆ” ಎಂದು ಹೇಳಿದ. ಅಪ್ಪಣ್ಣಭಟ್ಟರು “ಏನು ವಿಷಯ ನೋಡುವ” ಎಂದು ಏಜೆಂಟರು ಕೊಟ್ಟ ಬೀಗದ ಕೈಯನ್ನು ಸೊಂಟಕ್ಕೆ ಸಿಕ್ಕಿಸಿ ಖುದ್ದು ಹೊರಟರು. ಕುಪ್ಪಣ್ಣಭಟ್ಟರ ಅಂಗಳ ಹತ್ತಿರವಾಗುತ್ತಿದ್ದಂತೆ ಎದೆ ಹೊಡೆದುಕೊಳ್ಳತೊಡಗಿತು. ಮರವೊಂದರ ಹಿಂದೆ ನಿಂತು. ಕತ್ತಿಯಿಂದೇನೊ ಸವರುವಂತೆ ನಟಿಸುತ್ತ ನೋಡಿದರು.

ಜಗುಲಿಯ ಮೇಲೆ ನಿಶ್ಚಲವಾಗಿ ಹರಕು ಮುರುಕು ಪಾತ್ರೆಯ ಜೊತೆ ಕುಪ್ಪಣ್ಣಭಟ್ಟರ ಕಪ್ಪು ಶರೀರ ಗೋಡೆಗೊರಗಿ ಕೂತಿದೆ. ತಲೆಯ ಮೇಲೊಂದು ಅಂಗವಸ್ತ್ರವಿದ. ಎದೆ ಜಗ್ಗೆಂದಿತು. ಇನ್ನೂ ಹತ್ತಿರ ಬಂದರು. ಕುಪ್ಪಣ್ಣಭಟ್ಟರು ಏನಾದರೂ ಜಗಳವಾಡಬಂದರೆ ಅಂದದಕ್ಕೆ ಪ್ರತಿ ಅಂದುಬಿಡುವುದು; ನಿಮ್ಮ ಗಂಟನ್ನೆಲ್ಲ ತವರಿಗೆ ಸಾಗಿಸಿ ಬಿಟ್ಟಿರಾ ಎಂದು ಕೇಳೇಬಿಡುವುದು ಎಂದು ಧೈರ್ಯ ಹೇಳಿಕೊಂಡರು. ಅಂಗಳಕ್ಕಿಳಿದರು: ಬೂದುನಾಯಿ ಕುಪ್ಪಣ್ಣಭಟ್ಟರನ್ನೇ ತದೇಕಮಗ್ನವಾಗಿ ನೋಡುತ್ತ ಕೂತಿದೆ. ಒಂದು ಬಾಳೆಯೆಲೆಯ ಮೇಲೆ ಮೊಸರವಲಕ್ಕಿ ಒಣಗಿ ಹಾಗೇ ಬಿದ್ದಿದೆ. ಸದ್ದಿಲ್ಲ. ತಿಳಿಯುವುದರೊಳಗೆ, ‘ಭಟ್ಟರೇ’ ಎಂದು ಕರೆದುಬಿಟ್ಟರು. ಮಾತಿಲ್ಲ. ಕಣ್ಣುಮುಚ್ಚಿ ಕೂತ ಶರೀರವನ್ನು ನಡಗುವ ಕೈಗಳಿಂದ ತಿವಿದರು.

ಕುಪ್ಪಣ್ಣಭಟ್ಟರ ಮಂದಿ ಮುಖದ ರಕ್ತವೆಲ್ಲ ಬತ್ತಿ ಬೆಂಡಾಗಿತ್ತು; ಮೈಯ್ಯನ್ನಿನ್ನೊಮ್ಮೆ ಆಲುಗಿಸಿದ ಮೇಲೆ ಕಣ್ಣು ತೆರೆಯಿತು. ಅಪ್ಪಣ್ಣಭಟ್ಟರಿಗೆ ಜೀವ ಬಂದಂತಾಯಿತು.

“ಅಲ್ಲ – ನೀವು ಹಾಗೆ ಏಜೆಂಟರ ಎದುರು ಒರಟು ಮಾಡಬಾರದಿತ್ತು” ಎಂದರು.

ಕುಪ್ಪಣ್ಣಭಟ್ಟರು ತೆರೆದ ಕಣ್ಣುಗಳನ್ನು ಹಾಗೇ ತೆರಿದಿದ್ದು ಸುಮ್ಮನೇ ಕೂತರು. ಅಪ್ಪಣ್ಣಭಟ್ಟರಿಗೆ ಧೈರ್ಯ ಬಂದಿತು:

“ನಿಮಗೇನು ಕಮ್ಮಿಯಾಗಿದೆ ಭಟ್ಟರೇ. ಅಂತೂ ಕೊನೆಯ ತನಕ ನಮ್ಮ ಮೇಲೆ ದ್ವೇಷ ಸಾಧಿಸಿದಿರಿ. ಹಾಗಂತ ನಿಮ್ಮ ಮೇಲೆ ನನಗೆ ವಿಷವಿಲ್ಲ. ಎಷ್ಟೆಂದರೂ ನೀವು ನನಗೆ ಹಿರಿಯರು, ಚಿಕ್ಕವನೆಂದು ನೀವು ನನಗೆ ಹರಸಬೇಕೇ ವಿನಹ ಕೆಟ್ಟದ್ದು ಬಗೆಯಬಾರದು, ನನಗದು ಒಳ್ಳೆಯದಲ್ಲ. ಹೊರಟುಹೋಗುವಾಗ ನಿಮ್ಮ ಜೊತೆ ನಿಷ್ಠುರ ಬೇಡವೆಂದು ಮಾತಾಡಿಸುವ ಅಂತ ಬಂದೆ. ಬೇಕಾದರೆ ಗಾಡಿ ಕಟ್ಟಿಸುವೆ – ನಿಮ್ಮ ಮೈದುನರ ಮನೆಗೆ. ಎದ್ದು ಬಂದ ಊಟ ಮಾಡಿ ಹೋಗಿ, ಮುವ್ವತ್ತು ವರ್ಷದ ವೈರ ಮರೆತುಬಿಡುವ. ”

ಅಪ್ಪಣ್ಣಭಟ್ಟರ ಬಾಯಿಂದ ಅವರಿಗೆ ತಿಳಿಯದಂತೆಯೇ ಒಂದು ಮಾತಿನ ಬಾಲದಲ್ಲಿನ್ನೊಂದು ಮಾತು ಬಂತು. ಅಲ್ಲದೆ ಕುಪ್ಪಣ್ಣಭಟ್ಟರ ಮೌನದಿಂದಾಗಿ ಒಂದಕ್ಕಿಂತ ಇನ್ನೊಂದು ಮಾತಿನ ಸ್ವರ ಏರುತ್ತೇರುತ್ತ ಹೋಯಿತು. ಆದರೆ ಆಡಿದ್ದೆಲ್ಲ ತನ್ನ ಕಿವಿಗಳನ್ನೆ ಗವ್ವೆಂದು ಮುತ್ತಿದಂತಾಗಿ ಕೊನೆಗೆ ಅಪ್ಪಣ್ಣಭಟ್ಟರು ಕುಪ್ಪಣ್ಣಭಟ್ಟರ ಮೂಕ ಮುಖಮುದ್ರೆಯನ್ನು ಅವಾಕ್ಕಾಗಿ ನೋಡುತ್ತ ನಿಂತರು. ಚಲಿಸುತ್ತಿದ್ದ ಬಾಯಿ ಮುಚ್ಚಿತು. ಮೌನದ ಕ್ಷಣತುಂಬ ನೋವಾಗಿ ಬಾಯಿ ಮತ್ತೆ ಚಲಿಸಿತು. ಅಪ್ಪಣಭಟ್ಟರು ಅಂಗಳ ಸುತ್ತುತ್ತ ಅಂದರು:

“ನಾನು ನಿಮ್ಮ ಮನೆ ಹಾಳು ಮಾಡಬೇಕೆಂದು ಮಾಡಲಿಲ್ಲ ಮಾರಾಯರೆ. ಮುವ್ವತ್ತು ವರ್ಷ ನಿಮ್ಮ ಹತ್ತಿರ ಹಚಹುಚ ಎನ್ನಿಸಿಕೊಂಡು ಕಾಲ ಹಾಕಿದೆ. ಆಯಿತ? ನಿಮ್ಮ ತಂಟೆಗೆ ನಾನು ಬರಲಿಲ್ಲ. ಏನೋ ನರಸಿಂಹದೇವರ ಪಾಲಿನ ಅಡಿಕೆ ಆ ಬಡ್ಡಿಮಗ ಕಮ್ತಿಯ ಪಾಲಾಗುತ್ತದಲ್ಲ ಎಂದು ಏಜೆಂಟರಿಗೊಂದು ಮಾತು ನಾನು ತಿಳಿಸಿದ್ದುಂಟು. ಹಾಗೆಲ್ಲ ಸುಳ್ಳು ಹೇಳಿದರೆ ನನ್ನ ನಾಲಗೆ ಸೀಳಿ ಹೋಗಲಿ. ಬೇಕಾದರೆ ಬುಕ್ಲಾಪುರದ ಹತ್ತು ಸಮಸ್ತರನ್ನು ಕರೆಸಿ ಪಂಚಾಯಿತಿ ಮಾಡಿಸಿ. ನನ್ನ ತಪ್ಪೆಂದು ತೀರ್ಮಾನವಾದರೆ ನಿಮ್ಮ ಕಾಲು ಹಿಡಿದುಬಿಡುತ್ತೇನೆ. ಹೋದ ವರ್ಷ ನನ್ನ ಅಡಿಕೆ ಗಿರಾಕಿಗಳನ್ನೆಲ್ಲ ನೀವು ತಪ್ಪಿಸಿದಿರಿ. ಅಡಿಕೆ ವ್ಯಾಪಾರಕ್ಕೆ ದುಡ್ಡಿರುವಾಗ ಗೇಣಿ ಬಾಕಿ ಮಾಡಿಕೊಂಡರೆ ಎಂಥವರಿಗಾದರೂ ಸಿಟ್ಟು ಬರುತ್ತ ಇಲ್ಲವ ನೀವೇ ಹೇಳಿ? ಎಲ್ಲದಕ್ಕೂ ಒಂದು ನ್ಯಾಯ, ಒಂದು ಕಟ್ಟುಬೇಡವ? ನಾನೂ ಮಕ್ಕಳೊಂದಿಗ ಭಟ್ಟರೆ; ನಿಮ್ಮ ಮಗಳಿಗೆ ಹೇಗೊ ಹಾಗೇ ನನ್ನ ಮಗಳಿಗೂ ಮದುವೆಯಾಗಬೇಕು. ನನಗೂ ಕಷ್ಟ. ಒಂದು ವರ್ಷದಿಂದ ನನ್ನ ಹೊಟ್ಟೆಯಲ್ಲಿ ಅದೆಂಥ ರೋಗವೊ! ಸದಾ ನೋವು. ಹೋದ ತಿಂಗಳು ಒಂದು ಪಕ್ಕಾಸೇರು ಹಾಲು ಕರೆಯುತ್ತಿದ್ದ ಎಮ್ಮೆ ಲಕ್ ಎಂದು ಸತ್ತುಬಿಟ್ಟಿತು. ಎಲ್ಲ ಗ್ರಹಚಾರ ಭಟ್ಟರೇ, ಏಳಿ, ಎದ್ದೇಳಿ. ಮನೆಗೆ ಬಂದು ಊಟಮಾಡಿ. ಗಾಡಿ ಕಟ್ಟಿಸುವೆ – ನಿಮ್ಮ ಮೈದುನರ ಮನೆಗೆ. ತಂಪಾದ ಮೇಲೆ ಹೊರಡುವಿರಂತೆ. ”

ಬೂದುನಾಯಿ ಕುಪ್ಪಣ್ಣಭಟ್ಟರ ಕಡೆ, ಮತ್ತೆ ಒಣಗಿದ ಮೊಸರವಲಕ್ಕಿ ಕಡೆ, ಮತ್ತೆ ಅಪ್ಪಣ್ಣಭಟ್ಟರ ಕಡೆ ನೋಡಿತು. ಕುಪ್ಪಣ್ಣಭಟ್ಟರ ಗಂಟಲು ಒಣಗಿಬಿಟ್ಟಿತು. ಪಿಂಡ ಹಾಕುವಾಗ ಪಿತೃಗಳನ್ನು ಹೆಸರು ಹಿಡಿದು ಕರೆಯುವೋಪಾದಿಯಲ್ಲಿ, ಮಂತ್ರವನ್ನು ಉಚ್ಚರಿಸುವಂತೆಯೇ ‘ಭಟ್ಟರೇ ಭಟ್ಟರೇ’ ಎಂದರು. ಬೂದುನಾಯಿ ಎದ್ದು ನಿಂತು ಮೈಯನ್ನು ನೀಡಿ ಆಕಳಿಸಿ ಕಣ್ಣು ಮುಚ್ಚಿ ಕೂತಿತು. ನುಸಿಗಳು ಕಣ್ಣಿಗೆ ಕಿಕ್ಕರಿಸಿದುವು. ಬಿಸಿಲು ಉರಿಯಿತು. ತಲೆಯ ಮೇಲೆ ಪಾಣಿ ಪಂಚೆ ಹೊದ್ದು, ಕುಕ್ಕರು ಕಾಲಿನಲ್ಲಿ ತಲೆ ಮೇಲೆ ಕೈಹೊತ್ತು ಕೂತ ಪ್ರಾಣವನ್ನು ಅಪ್ಪಣ್ಣಭಟ್ಟರ ಕಣ್ಣು ಪ್ರಥಮ ಬಾರಿಗೆನ್ನುವಂತೆ ನೋಡಿ, ಹೊಟ್ಟೆ ತೊಳೆಸಿದಂತೆ ಆಯಿತು. ಮೊಸರಿನಲ್ಲಿ ಬಿರಿದು ಒಣಗಿದ ಅವಲಕ್ಕಿ; ಅದರ ಮೇಲೆ ನೊಣ; ಕುಪ್ಪಣ್ಣಭಟ್ಟರ ಮೂಗಿನ ಮೇಲೆ ನೊಣ; ಮುಚ್ಚುವ ಬಿಡುವ ಕಣ್ಣು.

“ಮಹಾರಾಯರೇ, ನಿಮ್ಮ ಗಂಟು ನನಗೆ ಬೇಡ. ಮಹಾರಾಯರೇ, ಈ ಮನೆಯಲ್ಲಿ ನೀವೇ ಇದ್ದುಬಿಡಿ. ನೀವು ಕಣ್ಣುಮುಚ್ಚುವ ತನಕ ನಿಮ್ಮ ಕೃಷಿಗೆ ನಾನೇ ಈ ತೋಟವನ್ನು ಬಿಟ್ಟುಕೊಟ್ಟಿರುತ್ತೇನೆ. ನರಸಿಂಹದೇವರ ಗೇಣಿಯನ್ನು ನೀವು ಬಾಕಿ ಮಾಡಿಕೊಳ್ಳದಂತೆ ನನಗೆ ವರ್ಷ ವರ್ಷ ಗೇಣಿ ಕೊಡುತ್ತ ಬಂದರೆ ಸಾಕು. ನಾನು ಕಟುಕನಲ್ಲ ಭಟ್ಟರೇ. ನಿಮ್ಮ ಹಾಗೆ ನಾನೂ ಘಟ್ಟದ ಕೆಳಗಿನಿಂದ ಬರಿಯ ತಾಲಿ ಹಿಡಿದು ಬಂದವ. ಸಂಭಾವನೆಗೆ ಹೋಗಿದ್ದಾಗ ದಾರಿಯ ಬಿಸಿಲಿನಲ್ಲಿ ನನ್ನ ಅಪ್ಪಯ್ಯ ಬಿದ್ದು ಸತ್ತಂತೆ ನನಗೊಂದು ಸಾವು ಬರದಿದ್ದರೆ ಸಾಕು. ಸಾಯುವಾಗ ಒಂದು ಗುಟುಕು ನೀರಿಲ್ಲದೆ, ದಾರಿಯ ಬಿಸಿಲಿನಲ್ಲಿ ಕಾಗೆಗಳು ನನ್ನ ಅಪ್ಪಯ್ಯನನ್ನು ಕುಟುಕಿದಂಥ ಪಾಡು ನನಗೆ ಬರದಿದ್ದರೆ ಸಾಕು. ಇಕೊಳ್ಳಿಬೀಗದ ಕೈ ಮಾರಾಯರೆ, ಇಕೊಳ್ಳಿ” ಎಂದು ಅಪ್ಪಣ್ಣಭಟ್ಟರು ಮೂಗಿನಿಂದ ಸಿಂಬಳತೆಗೆದು ಅತ್ತರು.

ಪ್ರಾಣದ ವಿಸರ್ಜನೆ ಧ್ಯಾನಿಸುತ್ತಿರುವಂತೆ ಕುಕ್ಕುರು ಕೂತ ಕುಪ್ಪಣ್ಣಭಟ್ಟರು ಇದಕ್ಕೂ ಮಾತಾಡಲಿಲ್ಲ. ಮೌನಿಯ ವಸ್ತ್ರಾವೃತ ಆಕೃತಿ ಕಣ್ಣಿನಲ್ಲಿ ಊರಿದಂತಾಗಿ ಅಪ್ಪಣ್ಣಭಟ್ಟರ ಸಲೀಸುಬಾಯಿ ಸ್ತಬ್ಧವಾಯಿತು. ಕಣ್ಣು ಒಣಗಿತು. ತಲೆಯಮೇಲೆ ತಾವೂ ಒಂದು ವಸ್ತ್ರ ಹೊದ್ದು ಜಗುಲಿಯ ಮೇಲೆ ಕುಕ್ಕರು ಹಾಲಿನಲ್ಲಿ ಕೂತರು.

ಬರ್ಮಿಂಗಂ
೧೯೬೬

* * *