ಇನ್ನು ಹೀಚು ಹುಡುಗಿ ಹೆಲೆನ್. ಕನ್ನಡಿ ಎದುರು ಸೇಳೆಮಾಡುತ್ತ ಕುಣೀತಿದ್ದಾಳೆ. ಬೀದಿ ಪೋಕರಿಗಳನ್ನು ಕಂಡು ಕಲಿತುಕೊಂಡ ಹೆಜ್ಜೆಗಾರಿಕೆಯಲ್ಲಿ ಮೈಯ ಬಳಕುಗಳನ್ನು ಕಾಣುತ್ತ ಸುಖಿಸುತ್ತಿರುವ ತನ್ನನ್ನು ಯಾರೂ ನೋಡುತ್ತಿಲ್ಲವೆಂದು ಅವಳು ನಿರ್ಲಜ್ಜೆ. ಮುಕ್ಕಾಲು ಪೋರಿಯಾದರೆ, ಈಗಾಗಲೇ ಕಾಲಂಶ ಹೆಣ್ಣು ಅವಳು. ವಯ್ಯಾರದ ಈ ಲೌಡಿಯ ಏಕಾಗ್ರತೆಗೆ ಭಂಗ ತರಬೇಡ. ಮುಂದೆ ಒಂದು ನಾಗರಿಕತೆಯ ಶಿಖರಗಳನ್ನೇ ಸುಟ್ಟು ಹಾಕಲು ಕಾರಣಳಾದವಳು ತಾಲೀಮು ಮಾಡುತ್ತಿದ್ದಾಳೆ ಎನ್ನುತ್ತಾನೆ ಏಟ್ಸ್.

ನನ್ನನ್ನು ಹಾದು ಹೋದ ಕಾಮರೂಪಿಯೊಬ್ಬ ನನ್ನಿಂದ ಈಗ ಕಥಿಸಿಕೊಳ್ಳಲಿದ್ದಾನೆ.

ಅಸಾಮಿ ದಿಢೀರನೆ ಪ್ರವೇಶಿಸಿ ಸುತ್ತಲೂ ಕಣ್ಣು ಹಾಯಿಸಿದ. ಅಲೆಯುವ ಕಣ್ಣುಗಳು ಬರಿದಾದ ಒಂದು ಸೋಫಾದಿಂದ ಇನ್ನೊಂದಕ್ಕೆ ಜಿಗಿದವು. ಎದುರಿನ ನಿಲುಗನ್ನಡಿಯಲ್ಲಿ ತನ್ನ ಮೀಸೆಯನ್ನೂ, ನೀಟಾಗಿ ಎತ್ತಿ ಬಾಚಿದ ಕ್ರಾಪನ್ನೂ, ತನ್ನನ್ನು ನೋಡತೊಡಗಿದ ನನ್ನನ್ನೂ ಗಮನಿಸಲೆಂದು ಕೆಲವು ಕ್ಷಣಗಳ ಕಾಲ ಅಲೆಯುವುದನ್ನು ನಿಲ್ಲಿಸಿದ ಕಣ್ಣುಗಳು ಹುಬ್ಬಿನ ಭಾರದ ಕೆಳಗೆ ಚಂದವಾಗಿ ತೋರಲೆಂದು ಅರಳಲು ವೃಥಾ ಶ್ರಮಿಸಿದವು. ಮತ್ತೆ ಎಡಕ್ಕೆ ತಿರುಗಿ, ಹಠಾತ್ ಎಂಬಂತೆ ಕಾಣಿಸಿಕೊಂಡ, ಬಚ್ಚು ಬಾಯಲ್ಲಿ ನಗುವ ಗಾಂಧಿ ಪೋಟೋದ ಕೆಳಗೆ, ಚೌಕಾಕಾರದ ಗಾಜಿನ ಟೇಬಲ್ಲಿನ ಮೇಲೆ ಇರಿಸಿದ್ದ ಬಿಳಿ ಬಣ್ಣದ ಪೋನಿನ ಮೇಲೆ, ತಮ್ಮ ದೃಷ್ಟಿಯನ್ನು ಆ ಕಣ್ಣುಗಳು ಊರಿದವು. ಎಲ್ಲಿಂದಲೋ ಒಳ ನುಗ್ಗಿ, ದಿಕ್ಕು ದೆಸೆಯಿಲ್ಲದ ಭ್ರಾಂತಿಯಲ್ಲಿ ಎತ್ತೆತ್ತಲೋ ಹಾರಿ, ಢಿಕ್ಕಿ ಹೊಡೆದೂ ಹೊಡೆದೂ ಯಾವುದೋ ಜಾಗದಲ್ಲಿ ಗಪ್ಪುಚಿಪ್ಪಾಗಿ ಬಿಡುವ ಜೀರ್‌ದುಂಬಿಯಂತೆ ಪೋನಿನ ಎದುರು ಗಾಂಧಿಗೆದುರಾಗಿ ನಿಂತ ಅಸಾಮಿ ತನ್ನ ಭ್ರೀಪ್ ಕೇಸನ್ನು ಒಂದು ಕೆಂಪು ಸೋಪಾದ ಮೇಲೆ ಕೆಡವಿ ನನ್ನ ಕಡೆ ನೋಡಿದ್ದು. ಹೀಗೆ ಪರಸ್ಪರ ಕಥಿಸಿಕೊಳ್ಳುವುದು ಆರಂಭವಾದ್ದು.

ಹೈದರಾಬಾದಿನ ವಿಮಾನ ನಿಲ್ದಾಣದ ಲೌಂಜಿನಲ್ಲಿ ಒಬ್ಬನೇ ನಾನು ವಿಮಾನಕ್ಕೆ ಕಾಯುತ್ತ ಕುಳಿತಿದ್ದಾಗ ಈ ಪುಡಾರಿಯ ದರ್ಶನವಾದ್ದು ನನಗೆ. ಟೈಟಾದ ಬಿಳಿಯ ಬುಷ್‌ಶರ್ಟು, ಬಿಳಿಯ ಪ್ಯಾಂಟು – ಎರಡೂ ಖಾದಿಯವು. ವಿಐಪಿ ಲೌಂಜಿಗೆ ಸಲ್ಲಬಲ್ಲ ಸದ್ಗೃಹಸ್ಥನ ತೋರವಾದ ಲಕ್ಷಣಗಳು ಮುಖದಲ್ಲಿ ಕಾಣದಿದ್ದರೂ, ತೊಟ್ಟ ಖಾದಿಯಿಂದಾಗಿ ಭಂಡ ಧೈರ್ಯದವನಿರಬೇಕು. ನನ್ನ ಮಗನ ವಯಸ್ಸಿನವ ಇದ್ದಾನು ಎಂದುಕೊಂಡೆ. ಆದರೆ ಬತ್ತಿದ ಕೆನ್ನೆಯ, ಅಲೆಯುವ ಆಸೆಬುರುಕ ಕಣ್ಣಿನ ಇಂಥವನ ವಯಸ್ಸು ನಿಖರವಾಗಿ ಊಹಿಸುವಂತಿರಲಿಲ್ಲ.

ನಾನು ಓದುತ್ತಿದ್ದ ಸರ್ವಗ್ರಾಹಿ ಸಂವೇದನೆಯ ಕುಂಡೇರನ ಇನ್‌ಫ್ಲುಯೆನ್ಸ್ ಇರಬೇಕು; ಅವನ ನಿರರ್ಗಳ ಹರಕು ಮುರುಕು ಇಂಗ್ಲೀಷಿನಲ್ಲಿ ಅವನು ಕೇಳಿದ್ದನ್ನು ನಿರಾಕರಿಸುವಂತಿರಲಿಲ್ಲ. ಒಂದು ಲಡಕಾಸಿ ಕ್ಯಾಮರಾವನ್ನು ನನಗೊಡ್ಡಿ, ಅವನ್ನು ಹೇಗೆ ಎಲ್ಲಿ ಹಿಡಿದು, ಯಾವ ಸ್ಥಿರತೆಯಲ್ಲಿ ನೋಡುತ್ತ ತಾನು ಹೇಗೆ ಕಾಣುವಂತೆ ಯಾವಾಗ ಗುಂಡಿಯೊತ್ತಬೇಕೆಂದು ವಿವರಿಸಿದ. ಕೊಂಚ ಉಬ್ಬಿಕೊಂಡ ಹಲ್ಲುಗಳನ್ನು ಪೋಟೊಕ್ಕೆ ಪೂರ್ವಭಾವಿಯಾಗಿಯೇ ಮುಚ್ಚಲು ಯತ್ನಿಸುತ್ತ ತನ್ನ ನಿರೀಕ್ಷೆಗಳನ್ನು ಅವಸರ ಅವಸರವಾಗಿ ಅವನು ಬಿಚ್ಚುವುದರಲ್ಲಿ, ನನ್ನ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸುವ ಅವನ ಸ್ವಪ್ರತಿಷ್ಠೆಯಲ್ಲಿ ನಾನು ಮೊದಲು ಕಂಡಿದ್ದು ಹಾಸ್ಯಾಸ್ಪದ ಭಂಡತನ. ತನ್ನ ಇಂಗ್ಲಿಷಿನಲ್ಲಿ ಅವನ ಈ ಬಗೆಯ ಮಾತುಗಳನ್ನು ಉದುರಿಸುತ್ತ ಅಪರಿಚಿತವಾನ ನನ್ನ ವಿಧೇಯತೆಯನ್ನು ಡೌಟೇ ಇಲ್ಲದಂತೆ ನಿರೀಕ್ಷಿಸಿದ.

“ಅಲ್ಲಿ ಮಿಸ್ಟರ್, ಅಲ್ಲಿ – ಗಾಂಧಿ ಫೋಟೋದ ಕೆಳಗೆ, ಅಲ್ಲಿ ಸೋಫಾದಲ್ಲಿ ನಾನು ಕೂತಿರ‍್ತೇನೆ. ಪೋನನ್ನ ಎತ್ತಿಕೊಂಡು ನಗ್ತ ಮಾತಾಡ್ತ ಮೂಡು ಬರಿಸಿಕೋತೇನೆ. ಆಗ ಗಾಂಧಿ ಪೋಟೋ, ಕೆಂಪು ಸೋಫಾಸೆಟ್ಟು, ಒಂಚೂರು ಈ ಹಸಿರು ಕಾರ್ಪೆಟ್ಟು, ಪಕ್ಕದ ಗ್ಲಾಸ್ ಟೇಬಲ್ಲು, ದಾನಿಯಲ್ಲಿರುವ ರೋಸು, ಮತ್ತೆ ನನ್ನ ಸ್ಮೈಲು – ಎಲ್ಲಾ ಫೋಕಾಸ್ಸಾಗುವಂತೆ ನೀವು ಸ್ನ್ಯಾಪ್ ಮಾಡಬೇಕು”

ಒಕ್ಕಣ್ಣನಾಗಿ ನಾನು ವಿನಯದಿಂದ ಸ್ನ್ಯಾಪ್ ಮಾಡಿದೆ. ಇದರಿಂದ ಉತ್ತೇಜಿತನಾದ ಅವನು ಹಲವು ರೂಪಗಳನ್ನು ಧರಿಸಿ, ನನ್ನಿಂದ ಅವನ ಹಲವು ಭಂಗಿಗಳನ್ನು ತನ್ನ ರೂಪಾಂತರಗಳಿಗೆ ಹೊಂದುವಂತೆ ಮೂರ್ತಿಸಿಕೊಂಡ. ಒಮ್ಮೆ ‘ಚೆಪ್ಪಂಡಿ’, ‘ಚೆಪ್ಪಂಡಿ’ ಎಂದು ಗಹಗಹಿಸಿ ನಕ್ಕ – (ಎಲ್ಲವನ್ನೂ ಫೋನು ಕಿವಿಗಿಟ್ಟುಕೊಂಡೆ). ಈಗ ಅವನು ತನ್ನ ಭಾವನ ಮನೆಯಲ್ಲಿ ಕೂತಿದಾನೆ. ಈ ಭಾವ ಅವನ ಜಾತಿಯ ಮಿನಿಸ್ಟರನ ಪರ್ಸನಲ್ ಅಸಿಸ್ಟಂಟ್. ಈ ಆಪ್ತ ಎಷ್ಟು ಪರಮಾಪ್ತ ಅಂದರೆ ಮಿನಿಸ್ಟರ್ ಅವನ ಮನೇಲೇ ಸ್ನಾನ ಮಾಡ್ತಿದಾರೆ.

ನನ್ನನ್ನು ನಮ್ರಗೊಳಿಸಲೆಂದೂ, ಅಥವಾ ತನ್ನ ಮುಖದಲ್ಲಿ ಯಶೋಲಕ್ಷ್ಮಿ ಕಂಗೊಳಿಸುವುದಕ್ಕೆ ಅಗತ್ಯವಾದ ಮೂಡು ಬರಿಸಿಕೊಳ್ಳಲೆಂದೋ, ಈ ಬಗೆಯ ವಿವರಗಳನ್ನು ಇಂಗ್ಲಿಷಿನಲ್ಲಿ, ತೆಲುಗಿನಲ್ಲಿ, ಹಿಂದಿಯಲ್ಲಿ ಕೊಡುತ್ತ ಆಯಾ ಮೂಡುಗಳ ಪರಾಕಾಷ್ಠ ಅಪೂರ್ವವನ್ನು ನನ್ನಿಂದು ದಾಖಲಿಸಿಕೊಂಡ.

ರೀಲಿನ ಕೊನೆಯ ಪಿಕ್ಚರ್‌ನಲ್ಲಿ ಇವನು ಪೋನು ಕೇಳಿಸಿಕೊಳ್ಳುತ್ತ ಏನೋ ನೋಟ್ ಮಾಡಿಕೊಳ್ಳುತ್ತಿದ್ದಾನೆ _(ಈ ಬಾರಿ ಬ್ರೀಫ್‌ಕೇಸಿಂದ ಪೊಟ್ಟಣ ತೆರೆದು ಹಣೆಗೆ ಕುಂಕುಮವಿಟ್ಟು ಕೊಂಡಿದ್ದ) ಆಗ ಸ್ವತಃ ಮಿನಿಸ್ಟರೇ ಬರುತ್ತಾರೆ. ಇವನು ತುಸು ಏಳುವಂತೆ ಅಂಡನ್ನೆತ್ತಿ ಕೂತುಕೊಳ್ಳಿರೆಂದು ಮಿನಿಸ್ಟರಿಗೆ ಕೈಯೊಡ್ಡಿ ಸನ್ನೆ ಮಾಡುತ್ತಿದ್ದಾನೆ…….

ಹೀಗೆ ತಾನು ಎದುರು ನೋಡುವ ಭವಿಷ್ಯವನ್ನು ನನ್ನ ವಿಧೇಯ ಕಲೆಗಾರಿಕೆಯ ಕುತೂಹಲದಲ್ಲಿ ಮೂರ್ತವಾಗಿಸಿಕೊಂಡು ಬ್ರೀಫ್‌ಕೇಸ್ ಹಿಡಿದು ಎದ್ದ. ಕ್ಯಾಮರಾದಿಂದ ರೀಲನ್ನು ಸುತ್ತಿ ತೆಗೆದು ಅದರ ಕೇಸಿನಲ್ಲಿ ಜೋಪಾನ ಮಾಡಿದ.

ಆದರೆ ಶನಿ ಬಿಡಲಿಲ್ಲ. ಕುಂಡೇರಾನ್ನ ಓದುವ ನೆವದಲ್ಲಿ ಯಥಾಸ್ಥಿತಿಗೆ ಮರಳಲೆಂದು ಕೂತ ನನ್ನ ಪಕ್ಕವೇ ಕೂತು, ಬ್ರೀಫ್‌ಕೇಸಿಂದ ತನ್ನ ಸರಕುಗಳನ್ನು ಬಿಚ್ಚಿದ. ಎದುರಿನ ನಿಲುಗನ್ನಡಿ, ನನ್ನ ದಾಕ್ಷಿಣ್ಯ ಪ್ರಕೃತಿ – ಇವು, ತನ್ನನ್ನು ಉಬ್ಬಿಸಿಕೊಳ್ಳಲು ಅವನಿಗೆ ಫಲವತ್ತಾಗಿ ಕಂಡಿರಬೇಕು. ನನ್ನ ಕಣ್ಣಲ್ಲಿ ತಾಲೀಮು ನಡೆಸಿ, ಅವನು ಚಿಗುರಲು ಎಣಿಸುತ್ತ ಇದ್ದುದರ ಪೂರ್ವಾಪರ ತಿಳಿಯದ ನಾನು ಕಥನ ಕುತೂಹಲಿಯಾದೆ. ನಾನು ಯಾರೆಂದು ಮೊದಲು ಕೇಳಿಕೊಂಡು, ತಾನು ಊದತೊಡಗಿದ. ತನ್ನ ಬಗ್ಗೆ ನಾನೇನು ಎಂದುಕೊಂಡೇನೋ ಗೊತ್ತಿಲ್ಲ. ಆದರೆ ನನ್ನಂಥ ಹಲವರನ್ನು ಅವನು ಮಂತ್ರಿಗಳ ಛೇಂಬರಲ್ಲಿ ನೋಡಿದ್ದಾನೆ. ನಾನು ತೆಗೆದ ಪಿಕ್ಚರ್‌ಗಳೆಲ್ಲ ಪ್ರತಿನಿತ್ಯ ರಾರಾಜಿಸುವ ಸ್ಥಿತಿಯವೇ. ‘ನೋಡಿ’ ಎಂದು ಆಲ್ಬಮ್ ಬಿಚ್ಚಿದ.

ಒಂದು ಚಿತ್ರದಲ್ಲಿ ಫರ್ನಾಂಡೀಸರಿಗೆ ಅವನು ಹಾರ ಹಾಕುತ್ತಿದ್ದಾನೆ. ತನ್ನ ದೇಶಸೇವೆಯ ಮೊದಲ ಘಟ್ಟದಲ್ಲಿ ಯಾರಿಗೂ ನಯಾ ಪೈಸಾ ಲಾಭವಾಗದ ಪಕ್ಷದಲ್ಲಿದ್ದು ತಾನು ಮಣ್ಣು ತಿನ್ನುತ್ತಿದ್ದಾಗಿನ ಚಿತ್ರ ಅದು. ಇನ್ನೊಂದರಲ್ಲಿ ಇವನು ಎನ್‌ಟಿಆರ್ ಚೈತನ್ಯರಥದ ಮುಂದಾಳು. ಕೈಯೆತ್ತಿ ಜೈಕಾರ ಮಾಡುತ್ತಿದ್ದಾನೆ. ತನ್ನ ಜಾತಿಯ ಲೀಡರ್ ತೆಲುಗುದೇಶಂ ಪಕ್ಷ ಸೇರಿ ಮಂತ್ರಿಯಾದರೆಂದು ನಿರ್ವಾಹವಿಲ್ಲದೆ ಇವನೂ ಅವರ ಜೊತೆಗಿರಬೇಕಾಗಿ ಬಂದ ಕಾಲದ ಚಿತ್ರ ಅದು. ಇನ್ನೊಂದರಲ್ಲಿ ಮೀಸೆಯನ್ನೂ ತಲೆಯನ್ನೂ ಬೋಳಿಸಿಕೊಂಡು ನಾರು ನಾರಾಗಿ ತಿರುಚಿಕೊಂಡ ಬೇರಿನಂತೆ ಕಾಣುತ್ತಾನೆ. ಪ್ರೆಸಿಡೆಂಟರು ತಿರುಪತಿಗೆ ತಮ್ಮ ಲೀಡರ್ ಜೊತೆ ಹೋಗಿ ತಲೆ ಬೋಳಿಸಿಕೊಂಡಿದ್ದರ ಚಿತ್ರ ಅದು.

ಉಳಿದವು ಜೆರಾಕ್ಸ್‌ಗಳು, ಯಾರು ಯಾರೋ ಮಂತ್ರಿಗಳು ಯಾರು ಯಾರಿಗೋ ‘ಸಾಧ್ಯವಾದರೆ ಕೆಲಸ ಕೊಡಿಸಿ’ ಎಂದು ಬರೆದ ಶಿಫಾರಸ್ಸಿನ ಪತ್ರಗಳು. ಪರೋಪಕಾರಿಯಾದ ತನ್ನ ಮುಖೇನವೇ ಇವೆಲ್ಲ ಹಾಯುವುದೆಂದೂ, ಆಂಧ್ರದ ಮಂತ್ರಿಗಳಲ್ಲದೆ ಕೇಂದ್ರದ ಮಂತ್ರಿಗಳ ಕಾಗದಗಳನ್ನೂ ತೋರಿಸಿದ. ಈಗ ಅವನಿರುವುದು ಕಾಂಗ್ರೆಸಿನಲ್ಲಿ; ಯೂತ್ ಕಾಂಗ್ರೆಸಿಗೆ ಅವನೇ ಸೆಕ್ರೆಟರಿ; ಬ್ಯಾಕ್‌ವರ್ಡ್‌ಸೆಲ್‌ಗೆ ಅವನೇ ಅಧ್ಯಕ್ಷ; ತನ್ನ ಜಾತಿಯ ಮಂತ್ರಿಗಳಿಗೆ ತಾನೇ ಬ್ರೈನು; ಅವರ ಸ್ವೀಚುಗಳೆಲ್ಲ ತನ್ನ ಸ್ಕ್ರಿಪ್ಟ್‌ಗಳು; ಭಾವನೆಂದರೆ ಮಂತ್ರಿಗಳಿಗೆ ಎಷ್ಟು ಪರಮಾಪ್ತನೆಂದರೆ ಇಂಗ್ಲೀಷ್ ಗೊತ್ತಿರದ ಭಾವನಿಗೆ ತಾನೆಷ್ಟು ಅಗತ್ಯ ಎಂದರೆ… ಇತ್ಯಾದಿ ಇತ್ಯಾದಿಗಳೆಲ್ಲ ನನಗೆ ಕೆಲವೇ ಕ್ಷಣಗಳಲ್ಲಿ ತಿಳಿದುಹೋದವು.

ಕಥನೋತ್ಸಾಹಿ ಲೇಖಕರಿಗೆ ಗಂಟುಬೀಳುವ ಕಾಮಿಕ್ ಕುಳಗಳಂತೆ ಮೊದಲು ನನಗೆ ಕಂಡ ಈತನ ಹೆಸರು, ಅವನೇ ಕೈಯೊಡ್ಡಿ ಗುರುತು ಮಾಡಿಕೊಳ್ಳುವಾಗ ಹೇಳುವಂತೆ – “ಮಿಷ್ಟರ್ ಶಂಕರ ಬಾಬು. ಯೂತ್ ಕಾಂಗ್ರೆಸ್ ಲೀಡರ್. ನನ್ನ ಆಲ್ ಇಂಡಿಯಾ ಬ್ಯಾಕ್‌ವರ್ಡ್ ಸೆಲ್‌ಗೆ ಇನ್‌ವೈಟೀ ಆಗಿ ನಮ್ಮ ಮಂತ್ರಿ ನಾಮಿನೇಟ್ ಮಾಡಿದ್ದಾರೆ. ”

“ನಿಮ್ಮ ಡ್ರೆಸ್ ನೋಡಿದ್ದೇ ನನಗೆ ಹೋಪಾಯಿತು. ನಿಮ್ಮ ಥರ ಗೆಟಾನ್ ಆದವರೆಲ್ಲ ಸೂಟು ಟೈ ಇಲ್ಲದೆ ಹೆಂಡತೀನ್ನೂ ನೋಡಲ್ಲ” ಎಂದು ನಗುತ್ತ ಎದ್ದು ನಿಂತ. ಇನ್ನು ಮುಂದೆ ಪೈಜಾಮ ಕುರ್ತ ಹಾಕಿಕೊಳ್ಳಬಾರದೆಂದುಕೊಂಡೆ. ಲೌಂಜಿನಲ್ಲಿ ಓಡಾಡುತ್ತ ನನ್ನನ್ನು ಕಥಿಸತೊಡಿಗಿದ. ನಾನು ಗೆಟಾನ್ ಆದವನಿರಬೇಕು. ನೋಡಿದ್ದೇ ಯಾರು ಏನು ಅವನಿಗೆ ಗೊತ್ತಾಗಿ ಬಿಡತ್ತೆ. ಇಲ್ಲದೇ ಈ ಕಾಲದಲ್ಲಿ ರಾಜಕೀಯ ಮಾಡೋದು ಇಂಪಾಸಿಬಲ್. ಗೆಟಾನ್ ಆಗಲು ಪ್ರತಿಭೆ ಮಾತ್ರ ಸಾಕೆ? ಮೇಲಿನವರ ಕೃಪೆಯೂ ಬೇಕು. ದೆಹಲಿ ವಿಮಾನಕ್ಕೆ ಅದೆಷ್ಟು ಆರಾಮಾಗಿ ಕಾದಿರುವ ನಾನು ತುಂಬ ಪ್ರೆಂಡ್ಲಿ ಮನುಷ್ಯನಾಗಿ ಕಂಡಿದ್ದೆ. ನಮ್ಮ ಪ್ರಧಾನಿಗಳಿಗೆ ನನ್ನಂಥವರನ್ನ ಹೇಗೆ ಬಳಸಿಕೊಬೇಕು ಗೊತ್ತಿರತ್ತೆ. ತಾನು ಮಾತ್ರ ಸದ್ಯ ಬೆನ್ನಿನ ಹಿಂದೆ ಹೇಗೆ (ತಿರುಗಿನಿಂತು ತೋರಿಸಿದ) ಕೈ ಕಟ್ಟಿಕೊಂಡು ಕಾಯುತ್ತಿದ್ದೇನೆ.

ಮಿಷ್ಟರ್ ಶಂಕರ ಬಾಬುಗೆ ತನ್ನ ಗಮನ ಜಾರುತ್ತಿರುವುದು ಹೊಳೆದಿರಬೇಕು. ಕೈ ಬರಹದಂತೆ ಕಾಣುವ, ಆದರೆ ಪ್ರಿಂಟಾದ, ರಾಜೀವ ಗಾಂಧಿ ಕಳುಹಿಸಿದ ಗ್ರೀಟಿಂಗ್ ತೋರಿಸಿದ. ನಿರೀಕ್ಷಿಸಿದ ಪರಿಣಾಮವಾಗದ್ದನ್ನು ಕನ್ನಡಿಯಿಂದ ಗುರುತಿಸಿದ. ಆಮೇಲೊಂದು ದೊಡ್ಡ ಚಿತ್ರ ತೋರಿಸಿದ. ಮದುವೆಯ ಚಿತ್ರ. ಅದನ್ನು ನಾನು ನೋಡಿದಾಗ ಅವನು ಬಯಸಿದ್ದೇ ಬೇರೆ; ನಾನು ಕಂಡದ್ದೇ ಬೇರೆ.

ಚಿತ್ರದಲ್ಲಿ ವಧು ಸುಂದರಳಾದ, ಎದೆ ಮೇಲೆ ಇಳಿಬಿಟ್ಟ ದಪ್ಪನಾದ ಜಡೆಯ ಕಪ್ಪು ಹುಡುಗಿ. ಅವಳ ಎಲ್ಲ ಅಂಗಾಂಗಳಲ್ಲೂ ಬಂಗಾರ ಮಿನುಗುತ್ತಿದ್ದರೂ ಅವಳೊಬ್ಬ ಮೋಹಕ ಶಾಪಗ್ರಸ್ತ ದೇವಕನ್ನಿಕೆಯಾಗಿ ನನಗೆ ಕಂಡುಬಿಟ್ಟಳು. ಅವಳ ಎದುರು ಒಬ್ಬ ಗಂಡೋದರ. ಹಲವು ಮಡಿಕೆಗಳ ಕೊಬ್ಬಿದ ಕತ್ತಿನವ, ಬಣ್ಣ ಹಾಕಿದ ಕೂದಲಿನ ಅರೆ ಬೋಳುತಲೆಯ, ಹೊಟ್ಟೆಯನ್ನವಚಿಕೊಂಡ ಮಿರುಗುವ ಸಿಲ್ಕ್ ಜುಬ್ಬದ ಈ ವಿಐಪಿ ಮದಿಸಿದ ರಸಿಕನಂತೆ ಕಂಡ. ಕೈ ಮುಗಿದು ನಿಂತ ಠೀವಿಯಿಂದಲೇ ಅವನು ಕ್ಯಾಮಾರಾ ಕ್ಲಿಕ್ ಆಗಲು ಕಾದಂತೆ ಇತ್ತು. ವಧು ತುಸು ತಲೆ ತಗ್ಗಿಸಿದ್ದಳು. ಏನನ್ನೂ ಅವಳು ಲಕ್ಷಿಸುತ್ತಿರುವಂತೆ ಕಾಣಲಿಲ್ಲ. ದುರುಳ ದೃಷ್ಟಿಗೆ ಸಿಕ್ಕಿಬಿದ್ದು ಶಿಲಾಮೂರ್ತಿಯಾದವಳಂತೆ ಅವಳನ್ನು ಪುರಾಣ ಮಾಡುತ್ತ ನನ್ನ ಮನಸ್ಸು ಚಿಗುರಿತು.

ಧಡಿಯನನ್ನು ನನಗೆ ಗುರುತಿಸುವ ಆತುರದಲ್ಲಿ ಶಂಕರಬಾಬು ಇದ್ದರೆ, ನಾನು ಶಾಪಗ್ರಸ್ತ ಕನ್ನೆಯಂತೆ ಕಂಡವಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದೆ. ನಿಮ್ಮ ತಂಗಿಯ ಹೆಸರೇನು? ಏನು ಓದಿದ್ದು? ಪಕ್ಕದಲ್ಲಿ ಹಾಗೆ ಸುಖದಲ್ಲಿ ನಗುತ್ತ ನಿಂತ ಅದೃಷ್ಟವಂತೆ ಆಪ್ತ ಕಾರ್ಯದರ್ಶಿ ನಿಮ್ಮ ಭಾವನೆಂದು ಹೇಳಬೇಕಿಲ್ಲ. ಎಸ್. ಅವರೇ ನಿಮ್ಮ ಮಂತ್ರಿಗಳೆಂದೂ ನೀವು ಹೇಳದೇ ಊಹಿಸಿದೆ. ನಿಮ್ಮ ತಂಗಿಗೆ ಈಗ ಮಕ್ಕಳೆ? ಅವರ ಆಸಕ್ತಿಗಳೇನು?

ಆದರೆ ಅವನು ಎದ್ದು ನಿಂತು, ಬೆನ್ನಿನ ಹಿಂದೆ ಕೈ ಕಟ್ಟಿ ಆಪ್ರವಾದ ವಿವರಗಳಲ್ಲಿ ಮಂತ್ರಿಯನ್ನು ಕಥಿಸುತ್ತಿದ್ದ. ಪೂಜೆ ಮಾಡದೆ ಕಾಫಿ ಕುಡಿಯಲ್ಲ ಅವರು. ಬೆಸ್ಟ್ ಆಫ್ ಟೈಲರ‍್ಸ್‌ನಿಂದೇ ಅವರು ಜುಬ್ಬ ಹೊಲೆಸಿಕೊಳ್ಳೋದು. ಸೆಕೆಂಡ್ ಲೈನ್ ಆಫ್ ಲೀಡರ್‌ಶಿಪ್ ತಮ್ಮ ಜಾತೀಲಿ ಇರಬೇಕೂಂತ ತನ್ನನ್ನ ಬೆಳಸ್ತ ಇದಾರೆ. ಅವರೇ ಖರ್ಚು ಮಾಡಿ ಮದುವೆ ಮಾಡಿಸಿದ್ದು. ಐದು ಕ್ಯಾಬಿನೆಟ್ಟಲ್ಲೂ ಇದಾರೆ. ನಕ್ಸಲೈಟರೂ ಅವರನ್ನ ಕಂಡರೆ ಹೆದರ್ತಾರೆ. ಎಲ್ಲ ಬ್ಯಾಕ್‌ವರ್ಡ್ಸ್‌ಗಳಿಗೂ ಅವರೆಂದರೆ ಪ್ರೀತಿ. ‘ಸರೋಜ, ಕಾಫಿ ಮಾಡಿಕೊಡು’ ಅಂತ ಸೀದ ಅಡಿಗೆ ಮನೆಗೇ ಬರ್ತಾ ಇದ್ದರು….

ಭೂತಕಾಲದಲ್ಲಿದ್ದ ಕೊನೆಯ ಮಾತಿನಿಂದ ನನ್ನ ಕುತೂಹಲ ಇನ್ನಷ್ಟು ಕೆರಳಿತ್ತು. ತಂಗಿಯ ವಿಷಯ ಮತ್ತೆ ಮತ್ತೆ ಎತ್ತಲು ಹವಣಿಸುತ್ತ ಅವನ ಕಥನದ ಪ್ರವಾಹವನ್ನು ನಾನು ಎದುರಿಸುತ್ತಿದ್ದಾಗ, ಅವನು ನಕ್ಸಲೈಟ್ ಮೆನೇಸಿನ ಬಗ್ಗೆ ನಾನೊಂದು ಸಭೆಯೆನ್ನುವಂತೆ ಮಾತಾಡುತ್ತಿದ್ದ. ಮಂತ್ರಿಗಳಿಗೆ ಇವನೊಂದು ಭಾಷಣ ಬರೆದುಕೊಟ್ಟಿದ್ದ. ಲಾ ಅಂಡ್ ಆರ್ಡರ್ ಪ್ರಾಬ್ಲಮ್ಮೂಂತ ಅಂದುಕೊಂಡು ನಕ್ಸಲೈಟ್ ಮೆನೇಸನ್ನ ಟ್ಯಾಕಲ್ ಮಾಡೋಕೆ ಆಗಲ್ಲ. ಹಿಂದುಳಿದ ಜಾತಿಗಳಿಗೆ ಈಗಿಂದೀಗಲೇ ಜಸ್ಟೀಸ್ ಬೇಕಾಗಿದೆ, ಇತ್ಯಾದಿ. ಯಾಕೆ ತನ್ನ ತಾಯಿಯೇ – ಎಷ್ಟು ರಿಲಿಜಸ್ ಅವಳು – ಈಗ ನಕ್ಸಲೈಟರನ್ನು ಹೊಗಳಲಿಕ್ಕೆ ಶುರು ಮಾಡಿದಾಳೆ? ತನ್ನ ತಂಗೀನೂ ಅವರ ಜೊತೆ ಸೇರೋಕೆ ಯಾಕೆ ತಯಾರಾಗಿದಾಳೆ?

ಆಗೀಗ ಕನ್ನಡಿ ನೋಡುತ್ತ ಅಲೆಯುವ ಅವನ ಪುಟ್ಟ ಪುಟ್ಟ ಕಣ್ಣುಗಳಲ್ಲಿ ನನ್ನ ಕಣ್ಣುಗಳನ್ನು ನೆಟ್ಟು ಕಠೋರವಾಗಿ “ಯಾವ ತಂಗಿ?” ಎಂದೆ.

ಹಠಾತ್ತಾಗಿ ಎಂಬಂತೆ ಅವನು ಕೂತು, ಬ್ರೀಫ್‌ಕೇಸಿಂದ ಇನ್ನೊಂದು ಚಿತ್ರ ತೆರೆದು ತೋರಿಸಿದ. “ಅವಳಿಗೆ ಗೊತ್ತಿಲ್ಲದ ಹಾಗೆ ನಾನೇ ತೆಗೆದಿದ್ದು ಅದು” ಎಂದು ಬದಲಾದ ನನ್ನ ಗಮನವನ್ನು ಪ್ರೋತ್ಸಾಹಿಸುವಂತೆ ಮುಗುಳ್ನಕ್ಕ.

ಒಣಗಲೆಂದು ಎದೆಯ ಮೇಲೆ ಚೆಲ್ಲಿದ ಭಾರವಾದ ಮಿನುಗುವ ಕೂದಲು, ನಿರಾಭರಣೆ – ಕಿವಿಯಲ್ಲಿ ಓಲೆ ಸಹ ಇರಲಾರದು. ಸಾದಾ ಕೈಮಗ್ಗದ ಸೀರೆಯುಟ್ಟು ಬಚ್ಚಲು ಮನೆಯಿಂದ ಹೊರ ಬರುತ್ತಿರುವಂತೆ ಕಂಡಳು. ನೋಡುವುದಕ್ಕೆ ಮೂಗಿನ ತುದಿಯಲ್ಲಿ ಕೋಪ ಉರಿಯುವ ಪಾಂಚಾಲಿಯೇ – ಅಕ್ಕನಂತೆ ಶಾಪಗ್ರಸ್ತ ಸೌಮ್ಯದೇವತೆಯಲ್ಲ. ಕ್ಯಾಮರಾದ ಫ್ಲಾಶಿಗೆ ಚಕಿತವಾಗಿ ತೆರೆದುಕೊಂಡ, ಕಟುವಾದ ನೋಟದ ಕಣ್ಣುಗಳು ಅಣ್ಣನನ್ನು ಸುಡುವಂತೆ ಇದ್ದುವು. ಕಪ್ಪುಮುಖ, ಕಪ್ಪುಕೂದಲು, ಹೊಳೆಯುವ ಕಣ್ಣುಗಳಿಂದಾಗಿ ಇವಳು ಕಾರ್ಮುಗಿಲು ಎನ್ನಿಸಿತು.

“ಇವಳೇ ಗೀತ. ಕೊನೆಯ ತಂಗಿ. ಮನೇಲಿ ನಿತ್ಯ ಅಂಗಳ ಗುಡಿಸಿ, ಸಾರಿಸಿ ತುಂಬ ಚೆನ್ನಾಗಿ ರಂಗೋಲೆ ಹಾಕೋಳು. ಈಗ ಅವಳೇ ನೆಲ್ಲೂರಲ್ಲಿ ನಮ್ಮ ಕುಲದವರನ್ನ ಸಂಘಟನೆ ಮಾಡಿ ಸಾರಾಯಿ ಅಂಗಡಿಗಳನ್ನು ಮುಚ್ಚಿಸಿ ಕ್ರಾಂತಿ ಮಾಡ್ತಿರೋಳು” ಶಂಕರ ಬಾಬು ವ್ಯಂಗ್ಯವಾಗಿ ನಕ್ಕು ನನ್ನನ್ನು ಒಂದು ದೀರ್ಘ ವಿಶ್ಲೇಷಣೆಗೆ ಎಳೆಯಲು ಪ್ರಯತ್ನಿಸಿದ.

ಅವು ಯಾರ ವಿಚಾರಗಳಾದರೂ ಆಗಬಹುದಿತ್ತು. ಮನುಷ್ಯ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆ, ಚರಿತ್ರೆಯ ಕಳಂಕದ ಬಗ್ಗೆ ಮಾತ್ರ ಶಂಕರ ಬಾಬುಗೆ ವ್ಯಥೆ ಇರಲಿಲ್ಲ. ತನ್ನಂಥವರು ಚರಿತ್ರೆಯ ಗಾಲಿಗೆ ಕೈ ಹಚ್ಚಿದವರೆಂಬ ಉಮೇಧು ಅವನ ಮಾತಿನಲ್ಲಿತ್ತು. ಡೆಮೊಕ್ರಸಿ ನಿಮಗೆ ಬ್ಯಾಡವ? ಚುನಾವಣೆಯಿಲ್ಲದೆ ಡೆಮೊಕ್ರಸಿ ಇರತ್ತ? ಚುನಾವಣೆಗೆ ಹಣ ಬ್ಯಾಡವ? ಅದು ಎಲ್ಲಿಂದ ಸಿಗೋದು? ಕಪ್ಪು ಹಣದಿಂದ ಅಲ್ಲವ? ಹಾಗೇ ಡೆವಲಪ್‌ಮೆಂಟ್ ಪ್ರಾಜೆಕ್ಟ್‌ಗಳಿಗೆ ರೆವಿನ್ಯೂ ಬ್ಯಾಡವ? ಅದು ಎಲ್ಲಿಂದ ಸಿಗೋದು? ಮೋಸ್ಟ್ ಆಫ್ ಇಟ್ – ಸಾರಾಯಿ ಮಾರಾಟದಿಂದ ಅಲ್ಲವ? ಈ ನಕ್ಸಲೈಟರಿಗಾದರೂ ಕ್ರಾಂತಿ ಮಾಡೋಕೆ ಗನ್ನುಗಳು ಎಲ್ಲಿಂದ ಸಿಗೋದು? ಡ್ರಗ್ ಹಣದಿಂದ, ಪಾಕಿಸ್ತಾನದಿಂದ, ಚೀನಾದಿಂದ ಅಲ್ಲವ? ಜರ್ಮನ್ ವಿದ್ರೋಹದಿಂದ ಲೆನಿನ್ ಕ್ರಾಂತಿ ಮಾಡಿದ್ದಲ್ಲವ? ಗಾಂಧಿಗೆ ಹಣ ಕೊಡ್ತ ಇದ್ದದ್ದು ಬಿರ‍್ಲಾ ಅಲ್ಲವ? ಅವನಿಗೆ ಎಲ್ಲಿಂದ ಹಣ ಸಿಗ್ತು? ಆಕಾಶದಿಂದ ಉದುರ್ತ? ನನ್ನಂಥವರು ಇಂಗ್ಲೆಂಡು ಅಮೇರಿಕಾಧಿಂದ ಓದಿ ಬಂದು ಸಜ್ಜನರೂಂತ ಮೆರೀತಿವಲ್ಲ – ಆದೇಶಗಳ ಐಶ್ಚರ್ಯ ಬಡ ದೇಶಗಳ ರಕ್ತ ಹೀರಿ ಬಂದದ್ದವಲ್ಲವ? ಹಾಗೆ ಸಾಯಿ ಬಾಬಾ ಕಟ್ಟಿಸುವ ಆಸ್ಪತ್ರೆ, ತಿರುಪತಿ ತಿಮ್ಮಪ್ಪನ ಭಂಡಾರ…

ನಾನು ವಾದಕ್ಕಿಳಿಯದೆ ಸುಮ್ಮನಿದ್ದುದನ್ನು ಕಂಡು ಶಂಕರಬಾಬು ತನ್ನಷ್ಟಕ್ಕೆ ನಗತೊಡಗಿದ. “ಏನ್ ಸಾರ್, ನಿಮ್ಮಂಥೋರ ಹತ್ತಿರ ಸ್ವಲ್ಪ ಇಂಗ್ಲೀಷ್ ಪ್ರಾಕ್ಟೀಸ್ ಮಾಡೋಣಾಂದರೆ ಏನು ನೀವು ಹೀಗೆ ಸೈಲೆಂಟಾಗಿ ಬಿಟ್ಟಿರಿ? ನಾನು ನಿಮ್ಮಂಗೆ ಫಾರಿನ್‌ಗೆ ಹೋದವನಲ್ಲ. ‘ಸಂಡೆ’, ‘ಇಂಡಿಯಾ ಟುಡೆ’, ‘ಫೈನಾನ್ಸಿಯಲ್ ಎಕ್ಸ್‌ಪ್ರೆಸ್’ – ಕೈಗೆ ಸಿಕ್ಕಿದ್ದನ್ನೆಲ್ಲ ಓದಿ ಇಂಗ್ಲೀಷ್ ಕಲಿತೋನು. ನಮ್ಮ ಆಫೀಸಿಗೆ ಇ. ಪಿ. ಡಬ್ಲ್ಯೂನೂ ಬರತ್ತೆ. ನಿಮಗೆ ನಾನು ಇಂಪ್ರೆಸ್ ಮಾಡ್ದೆ ಇದ್ದರೂ ನಮ್ಮ ಮಂತ್ರಿಗಳಿಗೆ ನಾನೇ ಬ್ರೈನು. ಈ ವಿಚಾರವನ್ನೇ ನಾನು ಅವರಿಗೆ ಬರೆದುಕೊಟ್ಟು ಅವರ ಹತ್ತಿರ ಮಾತಾಡಿಸಿದ್ರೆ ನಿಮ್ಮಂಥ ಪೊಲಿಟಿಕಲ್ ಸೈಂಟಿಸ್ಟರು ಅದನ್ನ ಸೀರಿಯಸ್ಸಾಗಿ ವಿಶ್ಲೇಷಣೆ ಮಾಡಲಿಕ್ಕೆ ಶುರು ಮಾಡ್ತೀರಿ. ಇ. ಪಿ. ಡಬ್ಲ್ಯೂನಲ್ಲಿ ನಾಳೆ ನೀವೇ ಬರೆದಿರ‍್ತೀರಿ. ”

ಅವನು ಹೀಗೆ ವಿದ್ಯಾತುರಿಯಾಗಿ ರೂಪಾಂತರ ಹೊಂದಿದರೂ ನಾನು ಜಗ್ಗಲಿಲ್ಲ.

“ನಿಮ್ಮ ದೊಡ್ಡ ತಂಗಿ ವಿಷಯ ಕೇಳ್ದೆ. ಆದರೆ ನೀವೇನೂ ಹೇಳಲೇ ಇಲ್ಲ” ಎಂದು ಬೇಕೆಂದೇ ಆಕಳಿಸುವಂತೆ ನಟಿಸಿದೆ.

“ಏನು ಹೇಳೋದು ಸಾರ್. ನನ್ನ ಗ್ರಹಚಾರ. ಮದುವೆಯಾಗಿ ಒಂದು ತಿಂಗಳಲ್ಲೇ ಸತ್ತುಬಿಟ್ಟಳು. ” ನೆಲ ನೋಡುತ್ತ ನಿಟ್ಟುಸಿರಿಟ್ಟು ಶಂಕರ ಬಾಬು ಮೆಲು ದನಿಯಲ್ಲಿ ಮುಂದುವರಿದ “ಸೂಯಿಸೈಡ್ ಮಾಡಿಕೊಂಡು ಬಿಟ್ಟಳು. ನನ್ನ ಎಲ್ಲ ಫಜೀತಿಗೂ ಅವಳೇ ಕಾರಣ. ”

ಕಾಮರೂಪಿ ಒಂದು ಕ್ಷಣವಾದರೂ ತನ್ನ ನಿಜ ಸ್ವರೂಪದಲ್ಲಿ ನನ್ನ ಜೊತೆ ಮಾತಾಡುತ್ತಿರಬಹುದೆಂದು ತಿಳಿದಿದ್ದು ನನ್ನ ಭ್ರಮೆಯಾಗಿತ್ತು. ನನ್ನಿಂದ ಅವನಿಗೆ ಏನಾಗಬೇಕಿತ್ತೋ? ಒಂದು ಕ್ಷಣದಲ್ಲೇ ಅವನ ಕಣ್ಣುಗಳು ಕನ್ನಡಿಯಿಂದ ಸೋಫಾಕ್ಕೆ ಸೋಫಾದಿಂದ ಕನ್ನಡಿಗೆ ಅಲೆಯಲು ಶುರುಮಾಡಿದ್ದವು. ಅವನ ವ್ಯಾಖ್ಯಾನ ನೀಟಾಗಿತ್ತು. ಸರೋಜ ಮನೋರೋಗಿಯೇ ಇರಬೇಕು. ತಮ್ಮದು ಅವಿದ್ಯಾವಂತ ಮನೆತನ. ತಾಯಿಗೆ ಗೊತ್ತಾಗದೇ ಹೋಯಿತು. ತನ್ನದು ಸಮಾಜ ಸೇವೆಯಲ್ಲಿ ನಿತ್ಯ ಓಡಾಟ. ಅವಳಿಗೇನೂ ಕಮ್ಮಿಯಾಗಿರಲಿಲ್ಲ. ಅಡಿಗೆ ಮನೆಗೆ ಬಂದು ಕಾಫಿ ಕೇಳುವ ಮಂತ್ರಿಗಳು. ಅತ್ತೆ ಮಾವನ ಕಾಟವಿಲ್ಲ. ಕೇಳಿದಷ್ಟು ಸೀರೆ, ಮೈ ತುಂಬ ಒಡವೆ…

ನನ್ನ ಧ್ವನಿ ನಡುಗುತ್ತಿತ್ತು. ಕ್ರೂರವಾಗಿ ಹೇಳಿದೆ:

“ಅವಳು ಯಾಕೆ ಸತ್ತಳು ನಿಮಗೆ ಗೊತ್ತಿದೆ. ನನ್ನ ಹತ್ತಿರ ಮುಂದೆ ಮಾತು ಬೇಕೂಂತ ಇದ್ದರೆ ಸತ್ಯ ಹೇಳಿ”

ಶಂಕರ ಬಾಬುವಿನ ಹಾವಭಾವಗಳು ಬದಲಾದವು. ಅಪರಿಚಿತನಲ್ಲಿ ಇರಬೇಕಾದ ಅವನ ಕಿಂಚಿತ್ ನಮ್ರತೆಯೂ ಮಾಯವಾಯಿತು. ಸಲಿಗೆಯ ಧಾಷ್ಟ್ಯದಿಂದ ಸಭೆ ಎನ್ನುವಂತೆ ನನಗೆ ಎದುರಾಗಿ ನಿಂತ. ಓರೆಗಣ್ಣಿನಿಂದ ಕನ್ನಡಿ ನೋಡುತ್ತ ಯಾರಿಗಾದರೂ ಎನ್ನುವಂತೆ ನನಗೆ ಹೇಳತೊಡಗಿದ.

ಅವನ ಹೀಚು ತಂಗಿ ಗೀತಳಂತೆಯೇ ನಾನು ಮಾತನಾಡುವುದು ಕಂಡು ಅವನಿಗೆ ಆಶ್ಚರ್ಯವಾಗಿತ್ತು. ನೀತಿಗೆಡದೇ ಗೆಟಾನ್ ಆದವರು ಇದ್ದಾರ? “ಉದಾಹರಣೆಗೆ ನೀವೇ ಎನ್ನಿ” ಎಂದು ಅವನ ಅಧ್ವಾನದ ಇಂಗ್ಲೀಷಿನಲ್ಲಿ ಶುರುಮಾಡಿದ. ತನಗಿದೊಂದು ಇಂಗ್ಲೀಷ್ ಮಾತಾಡುವ ಪ್ರಾಕ್ಟೀಸು ಕೂಡ ಎಂದು ತಿಳಿದು, ಅವನ ಕಟು ಸತ್ಯಗಳನ್ನು ತಾಳಿಕೊಳ್ಳಬೇಕೆಂಬ ಹವಣಿಕೆಯೂ ಇದ್ದಂತೆ ಇತ್ತು ಅವನ ಮಾತಿನ ಗತ್ತಿನಲ್ಲಿ.

ಮೇಜಿನ ಹಿಂದೆ ಮಂತ್ರಿ ಕೂತಿದಾರೆ. ಅವನು ಒಂದು ಮೂಲೆಯಲ್ಲಿ ಕೂತು ಎಲ್ಲವನ್ನೂ ನೋಡುತ್ತಿದ್ದಾನೆ. “ಉದಾಹರಣೆಗೆ ನೀವು, ನೀವಲ್ಲದಿದ್ದರೆ ನಿಮ್ಮ ಕ್ಲಾಸಿನ ಇನ್ನೊಬ್ಬರು. ಅಲ್ಲಿ ಬರ‍್ತೀರಿ. ನಿಂತುಕೊಂಡು ಬಾಗಿ ಹೀಗೆ ನಮಸ್ಕಾರ ಮಾಡ್ತೀರಿ” (ಶಂಕರ ಬಾಬು ಹಲ್ಲು ಕಿರಿಯುತ್ತ ಕೈ ಮುಗಿದು ನನ್ನೆದುರು ನಿಂತ) ಮಂತ್ರಿಗಳು ಆಗ ಸಾವಕಾಶವಾಗಿ ತಲೆಯೆತ್ತುತ್ತಾರೆ. ಕೂರುವಂತೆ ಕಣ್ಣು ಸನ್ನೆ ಮಾಡುತ್ತಾರೆ. ನಾನಾಗ ಅಂಜುತ್ತಂಜುತ್ತ ಕೂರುತ್ತೇನೆ (ಶಂಕರಬಾಬು ಎದುರಿನ ಸೋಫಾದ ಮೇಲೆ ತಪ್ಪು ಮಾಡುತ್ತಿರುವವನ ಅಳುಕಿನಲ್ಲಿ ಕೂತ. ) ಈಗ ನನ್ನ ಸಮಸ್ಯೆ. ತೆಲುಗಿನಲ್ಲಿ ಮಾತಾಡುವುದೋ ಅಥವಾ ಇಂಗ್ಲೀಷಿನಲ್ಲೋ? ತೆಲುಗಿನಲ್ಲಿ ಮಾತಾಡಿದರೆ ಮಂತ್ರಿಗಳಿಗೆ ಇಂಗ್ಲೀಷ್ ಗೊತ್ತಾಗಲ್ಲ ಎಂದು ಸೂಚಿಸಿದಂತಾಗುತ್ತದೆ. ಆದ್ದರಿಂದ ಇಂಗ್ಲೀಷಲ್ಲೇ ನಾನು ಮಾತಾಡ್ತೀನಿ.

“ಸಾರ್ ನಮ್ಮ ನಕ್ಸಲೈಟ್ ಮೆನೇಸಿನ ವಿಶ್ಲೇಷಣೆ ತುಂಬಾಂದ್ರೆ ತುಂಬ ಚೆನ್ನಾಗಿತ್ತು. ಪೊಲಿಟಿಕಲ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ ನಮ್ಮಂಥವರಿಗೆ ನಿಮ್ಮ ಇನ್‌ಸೈಟ್ಸ್ ಇಲ್ಲ” )ಈಗ ಶಂಕರಬಾಬು ಧ್ವನಿ ಬದಲು ಮಾಡಿ, ‘ಆ ಸ್ವೀಚನ್ನು ಈ ಪೂರ್‌ಮ್ಯಾನ್ ಬರೆದಿದ್ದು’ ಎಂದು ತನಗೆ ಬೆರಳು ಮಾಡಿಕೊಂಡ). ಮಂತ್ರಿಗಳು ನಾಚಿಕೆಯಿಲ್ಲದೆ ಬೀಗುತ್ತಾರೆ. ಕನ್ನಡಕವನ್ನು ಒರೆಸಿ ಧರಿಸುತ್ತಾರೆ. ತೆಲುಗಿನಲ್ಲಿ ಕೇಳುತ್ತಾರೆ. ಆಪ್ತತೆ ಇರಲಿ ಅಂತ. “ನಾನೇನು ಮಾಡಬಹುದು ನಿಮಗೆ?” ಆಗ ನಾನು ಕೇಳಿಕೊತೇನೆ. ಸುತ್ತಿ ಬಳಸಿ, ಹಾಂಹೂಂ ಎಂದು ಕ್ಯಾಕರಿಸಿ ಕೆಮ್ಮಿ (ಶಂಕರಬಾಬು ನನ್ನ ಧ್ವನಿಯನ್ನೇ ಅನುಸರಿಸತೊಡಗಿದ್ದ) “ಲಾಸ್ಟ್ ಟೈಮೇ ನಾನು ಪಬ್ಲಿಕ್ ಸರ್ವಿಸ್ ಕಮಿಷನ್ನಿಗೆ ಛೇರ್ಮನ್ನೇ ಆಗಬೇಕಿತ್ತು ಸಾರ್. ಒಬ್ಬನೇ ಒಬ್ಬ ಬ್ಯಾಕ್‌ವರ್ಡ್ ಒಂದೇ ಒಂದು ಯೂನಿವರ್ಸಿಟಿಗೂ ವೀಸಿಯಾಗಲಿಲ್ಲ. ನೀವು ಬ್ಯಾಕ್‌ವರ್ಡ್ ಜನರ ಕೈಬಿಡಬಾರದು ಸಾರ್. ನೀವೇ ನಮ್ಮ ಹೋಪ್. ನನಗೆ ಈ ಸಲ ಪಿಎಸ್‌ಸೀಲಿ ಛಾನ್ಸ್ ಕೊಡಬೇಕು ಸಾರ್. ”

ಮಂತ್ರಿಗಳು ನಸುನಗುತ್ತಾರೆ. ಶಂಕರಬಾಬು ಮಂತ್ರಿಗಳನ್ನು ಅನುಕರಿಸುವಂತೆ ಗಡಸಾಗಿ “ನಿಮ್ಮ ಡೀಟೈಲ್ಸ್‌ನೆಲ್ಲ ನಮ್ಮ ಪಿ. ಎ. ಗೆ ಕೊಡಿ” ಎಂದ. ಹೋಗಬಹುದೆಂದು ಸೂಚಿಸಲು ಕೈ ಮುಗಿದ.

“ಆಗ ನಿಮ್ಮಂಥ ತುಂಬ ನೀತಿಪರರು ಕೂಡ ನನ್ನ ಭಾವನ ಛೇಂಬರ್‌ಗೆ ಹೋಗ್ತೀರಿ. ಅಲ್ಲಿ ನಮ್ಮ ಭಾವನವರು ಕೂತಿರ್ತಾರೆ. ಹೀಗೆ”

ನನಗಾಗಿ ಕಾದಿರಿಸಿದ್ದ ಇನ್ನೊಂದು ಆಶ್ಚರ್ಯವನ್ನು ಬ್ರೀಫ್‌ಕೇಸ್‌ನಿಂದ ತೆಗೆದು ತೋರಿಸಿದ. ಭಾವ ಕೂಡ ಕೆಂಪು ಸೋಫಾದ ಮೇಲೆ ಕಿವಿಗೆ ಬಿಳಿಯ ಪೋನೇ ಇಟ್ಟು ಕೂತಿದ್ದಾನೆ. ಪಕ್ಕದಲ್ಲಿ ಮಾತ್ರ ಹೂವಿನ ಹಾರವಿದೆ. ಅವನ ಹಣೆಯ ಮೇಲೂ ಕುಂಕುಮವಿದೆ. ಅವನ ಹಿಂದೆಯಿರುವುದು ಮಾತ್ರ ಚರಕದಲ್ಲಿ ನೂಲು ತೆಗೆಯುತ್ತಿರುವ ಗಾಂಧಿ ಚಿತ್ರ. ಭಾವನೂ ಚೆಪ್ಪಂಡಿ, ಚೆಪ್ಪಂಡಿ ಎನ್ನುತ್ತಿರಬಹುದು. ಶಂಕರಬಾಬು ಭಾವನನ್ನು ಆಕ್ಷನ್‌ನಲ್ಲೇ ಹಿಡಿದಿರಬೇಕು.

ಭಾವನಿಗೆ ಇಂಗ್ಲೀಷ್ ಬರಲ್ಲ. ಗಡುಸಾಗಿ ತೆಲುಗಿನಲ್ಲಿ ನನಗೆ ‘ಕೂರಿ’ ಎನ್ನುತ್ತಾನೆ. ವಿವರಗಳನ್ನೆಲ್ಲ ಇಸಿದುಕೊಂಡು ಮನೆಗೆ ಬಂದು ನೋಡಿ ಎನ್ನುತ್ತಾನೆ. ಶಂಕರಬಾಬು ಕಣ್ಣುಗಳು ಪ್ರಶ್ನಾರ್ಥಕವಾಗಿ ಎತ್ತಿದವು. ಯಾಕೆ ನಿಮಗೆ ಗೊತ್ತಲ್ಲ? ಗೊತ್ತೆ ಇಲ್ಲವ? ಅಷ್ಟು ಪೆದ್ದರಾದರೆ ನೀವು ಅದು ಹೇಗೆ ಗೆಟಾನ್ ಆದಿರಿ? ಈ ಕಾಲದಲ್ಲಿ ಹಣ ಬಿಚ್ಚದೆ ಏನಾದರೂ ಸಿಗುತ್ತ ಮಿಷ್ಟರ್? ಬ್ಯಾಂಕ್ ಸ್ಕ್ಯಾಮ್‌ನಲ್ಲಿ ಯಾರದ್ದು ಮೇಲುಗೈ? ನಿಮ್ಮಂಥ ಸೌತ್ ಇಂಡಿಯನ್ ಬ್ರಾಹ್ಮಿನ್‌ದೇ ಅಲ್ಲವ? ಗೆಟಾನ್, ಗೆಟ್ ಆನರ್, ಗೆಟ್ ಆನೆಸ್ಟ್ – ಇವೇ ಈ ಕಾಲದ ಮೂರು ಡಿಗ್ರಿಗಳು. ನಾನು ಮೊದಲ ಸ್ಥಿತಿಯಲ್ಲಿ ತೊಳಲ್ತ ಇದೀನಿ. ನೀವು ಮೂರನೇ ಸ್ಥಿತಿ ತಲುಪಿದೀರಿ. ನಮ್ಮ ಭಾವನೂ ತಲ್ಪುತ್ತಾನೆ. ನನ್ನ ಹಳೀಲಿ ಅನಾಥಾಲಯ ಕಟ್ಟಬೇಕೂಂತ ಇದಾನೆ ರಾಸ್ಕಲ್…

ಹೀಗೆ ಮಾತಾಡುತ್ತ ಚೈತನ್ಯದ ಬುಗ್ಗೆಯಾಗಿ, ಹಗುರಾಗಿ, ಲೌಂಜಿನಲ್ಲಿ ಅದು ಇದು ನೋಡುತ್ತ ಕೃಶ ಶರೀರದ ಅಸಾಮಿ ಚಲಿಸತೊಡಗಿದ. ನಾನು ತೂಕವಾಗಿ ಕೂತಿದ್ದೆ – ಅವನನ್ನೇ ನೋಡುತ್ತ, ಮಾನವ ಮರ‍್ಯಾದೆ ಬಿಟ್ಟವನು ದೇವರಿಗೆ ಸಮ ಎಂಬೊಂದು ಗಾದೆ ಇದೆ.

ಆ ದರಿದ್ರ ಶನಿ, ಅವನತ್ತು ತಾನೇ ಪೇಪರಿನಲ್ಲಿ ವರದಿಯಾಗಿದ್ದ ಬಾಲಕಿ ಅಮೀನಾಳ ವಿಷಯ ಯಾಕೆ ಎತ್ತಿ ನನ್ನನ್ನೂ ವಿದ್ರೋಹಕ್ಕೆಳೆದು ದುರ್ಬಲಗೊಳಿಸಲು ಪ್ರಯತ್ನಿಸಿದ ಎಂಬುದು ನನಗೆ ಅರ್ಥವಾದ್ದು ಅವನು ತೊಲಗಿದ ಮೇಲೆ; ತೊಲಗುವುದಕ್ಕೆ ಮುಂಚೆ ಕರುಣ ರಸ ಉಕ್ಕಿಸುವ ತನ್ನ ಇನ್ನೊಂದು ರೂಪದಲ್ಲಿ ನನ್ನ ಮೇಲೆ ಹಾಯ್ದ ಮೇಲೆ.

“ಬಲಾತ್ಕಾರಕ್ಕೆ ಅಮೀನಾ ಗಲ್ಫಿನ ಶ್ರೀಮಂತ ಮುದುಕನನ್ನು ಮದುವೆಯಾದ್ದು ನಿಜ. ಆದರೆ ಹಾಗೆ ಅವಳು ಕೋರ್ಟಿನ ಎದುರು ಹೇಳಿದ್ದರೆ ಅವಳ ಅಪ್ಪ ಜೈಲಿಗೆ ಹೋಗಬೇಕಿತ್ತು. ಬಡಪಾಯಿ ರಿಕ್ಷಾ ಡ್ರೈವರ್ ಅವನು. ಅವನಿಗೆ ಮನೆತುಂಬ ಹೆಣ್ಣುಮಕ್ಕಳು. ಅವರಿಗೇನು ಗತಿ ಅಪ್ಪ ಜೈಲಿಗೆ ಹೋದ ಮೇಲೆ? ಸೂಳೆಗಾರಿಕೆಗೆ ಇಳಿಯಬೇಕು – ಅಷ್ಟೆ. ಬಲಾಢ್ಯರಾದ ನೀತಿವಂತ ಮೇಲ್ಜಾತಿಯವರಿಗೆ ಇಂಥ ಸಂಕಟ ಅರ್ಥವಾಗಲ್ಲ. ಆದರೆ ಆ ಮುಗ್ಧ ಹುಡುಗೀಗೆ ಅರ್ಥವಾಯಿತು. ‘ನಾನೇ ಇಷ್ಟಪಟ್ಟು ಮುದುಕನನ್ನು ಮದುವೆಯಾದೆ’ ಎಂದುಬಿಟ್ಟಿತು – ಪಾಪ. ಸ್ಯಾಕ್ರಿಪೈಸ್ ಎಂದರೆ ಅದು. ಏರ್‌ಪೋರ‍್ಟ್ ಲೌಂಜಲ್ಲಿ ಹಾಯಾಗಿ ಕುಳಿತುಕೊಂಡು ನಾನೂ ನೀವೂ ನೀತಿ ವಿಷಯ ಮಾತಾಡೋದು ಸುಲಭ ಬ್ರದರ್. ಆದರೆ ಅಮೀನಾ ಥರ ತನ್ನ ಜೀವನಾವೇ ಒಂದು ಬಡ ಸಂಸಾರಕ್ಕಾಗಿ ತ್ಯಾಗ ಮಾಡೋದು… ”

ಶಂಕರಬಾಬು ಗಂಭೀರ ಮುಖ ಮಾಡಿಕೊಳ್ಳುತ್ತ, ಕನ್ನಡಿಯಲ್ಲಿ ಓರೆಗಣ್ಣಾಗುತ್ತ, ಇದನ್ನು ಗದ್ಗದ ದನಿಯಲ್ಲಿ ಹೇಳಿದ್ದು. ಆಮೇಲೆ ನನ್ನ ಕಡೆ ಕಣ್ಣುನೆಟ್ಟು ನೋಡುತ್ತ ಅವನ ಮುಖ ಬದಲಾಯಿತು. ಸಲಿಗೆಯಲ್ಲಿ ಅವನ ಹಲ್ಲುಗಳೆಲ್ಲ ದಪ್ಪ ಮೀಸೆಯ ತಳದಲ್ಲಿ ತೆರೆದುಕೊಂಡವು. ಕಣ್ಣಿನಲ್ಲಿ ಚಂಚಲವಾದ ರಸಿಕತೆ ಮಿಂಚಿತು. ಪಕ್ಕದಲ್ಲಿ ಕೂತು ಕಿವಿಯ ಹತ್ತಿರ ಬಂದ. ಅವನು ತಲೆಗೆ ಹಚ್ಚಿಕೊಂಡಿದ್ದ ಯಾವುದೋ ದರಿದ್ರ ವಾಸನೆಯ ಎಣ್ಣೆಯ ನಾತ ಮೂಗಿಗೆ ಬಡಿಯಿತು. ಒಂದು ಕೈಯನ್ನು ನನ್ನ ಭುಜದ ಮೇಲಿಟ್ಟ. ಇನ್ನೂ ಹತ್ತಿರ ಸರಿದು ಮೇಲುದನಿಯಲ್ಲಿ ಅಂದ.

“ಕೆಲವು ಹುಡುಗೀರಿಗೆ ಮುದುಕರು ಅಂದರೆ ಡಿಸೈರೊ ಇರತ್ತೆ – ಏನಂತೀರಿ? ಮತ್ತೆ ತುಸು ತಡೆದು, ನನ್ನ್ನೇ ನೋಡುತ್ತ ‘ಮಿಷ್ಟರ್’ ಎಂದು ಅಕ್ಷರಗಳನ್ನು ಚಪ್ಪರಿಸುತ್ತ ಕಣ್ಣು ಹೊಡೆದ. ಸಿಗರೇಟು ಹಚ್ಚಿ ನನಗೆ ಕೊಡಲು ಬಂದ. ಹೊಗೆ ಬಿಡುತ್ತ ತಿಳ್ಳೆ ಹೊಡೆದ.

ನನ್ನ ಮಗನ ವಯಸ್ಸಿನವನಿರಬಹುದಾದ ಈ ಕೊಳಕ ಒಬ್ಬ ಪ್ರಾಚೀನ ದುಷ್ಟ ಮುದುಕನಂತೆ ನನಗೆ ಭಾಸವಾದ.

ನಾನು ಅವನನ್ನು ಯಾಕೆ ಒದ್ದು ಹೊರಹಾಕದೆ ಸಹಿಸಿಕೊಂಡೆ ಎಂದು ನಾಚಿಕೆಯಾಗುತ್ತದೆ. ನನ್ನಲ್ಲಿ ಉತ್ಪನ್ನವಾಗಿ ಬಿಡುವ ಕಥನ ಕುತೂಹಲಕ್ಕೆ ಇರುವ ನನ್ನನ್ನೇಒದ್ದು ನಿಲ್ಲುವ ಸಾಮರ್ಥ್ಯ ಕಂಡು ದಿಗಿಲಾಗುತ್ತದೆ. ಏನನ್ನಾದರೂ ಕಾಣಬಲ್ಲ, ಕಾಣಿಸಬಲ್ಲ, ಊಹಿಸಿದ್ದನ್ನೆಲ್ಲ ಮೂಡಿಸಬಲ್ಲ, ಸಹಿಸಬಲ್ಲ ಕಲಾವಂತಿಕೆ ಸಂಸಾರಿಕ ಅಪಾಯಕಾರಿಯದ್ದು, ಹೀಗೆ ಕೊಳಕನ ಕಣ್ಣಿನಲ್ಲಿ ದಿಗಿಲು ಪಡುತ್ತಿರುವಾಗ ನೆನಪಾದ್ದು; ಮುದುಕನಾದ ಏಟ್ಸ್ ತನ್ನ ಅದಮ್ಯ ಕಾಮುಕತೆ ಬಗ್ಗೆ ಬರೆದ ಪದ್ಯಗಳು. ಆಕಾಶರಾಯನಷ್ಟು ಮುದುಕನಾದ ಕೇಡಿಗ ಹುಡುಗಿಗೆ ಹೇಳುತ್ತಾನೆ: ಮಡವೆಯ ಮುಖದ ಯುವಕರು ಸುಖಪಟ್ಟಾರು ಅಷ್ಟೆ. ಅವರು ಸುಖ ಕೊಡಲಾರದ ಕಾಮಾತುರಿಗಳು, ನನ್ನ ಜೊತೆ ಮಲಗಿ, ಸುಖಿಸಿ ನೋಡು ಎಂದು. ಅಂಥ ಮಾಥನ್ನು ಬರೆಯಬೇಕಾಗಿ ಬಂದ ಜೊಲ್ಲು ಸುರುಕ ಕವಿ ನನಗೆ ಅಸಹ್ಯವೆನಿಸುವಂತೆ ಶಂಕರಬಾಬು ನನ್ನನ್ನು ಸಲಿಗೆಯಲ್ಲಿ ದುರುಗುಟ್ಟಿ ನೋಡುತ್ತ ಸಿಗರೇಟ್ ಎಳೆಯುತ್ತಿದ್ದ.

೧೦

ನನ್ನ ಪುಣ್ಯಕ್ಕೆ ಈ ಕಥೆ ಇಷ್ಟಕ್ಕೆ ಮುಗಿಯುತ್ತಿಲ್ಲ, ಲೌಂಜಿನ ಒಳಗೆ ನುಗ್ಗುವ ಮುಂಚೆ ಶಂಕರಬಾಬು ದಿಗ್ಭ್ರಮೆಗೆ ಒಳಗಾಗಿದ್ದ – ಪ್ರಾಯಶಃ ಅಥವಾ ನನಗೆ ಯಾಕೆ ಹಾಗೆ ತೋರಿದ ಎಂಬುದು ನನಗೆ ಅರ್ಥವಾಗಿಲ್ಲ. ಅವನು ಹೇಳಿಕೊಂಡ ಕಥೆಯ ಸಾರಾಂಶ ಹೀಗಿದೆ.

ಅವನ ತಂದೆಯ ಜಾತಿಯ ಕಸುಬು ಮನೆ ಕಟ್ಟುವುದು. ತಾಯಿಯ ಜೊತೆ ಅವನ ದುಡಿಮೆ. ತಂದೆಯ ದುಡಿಮೆ ಅವನ ಕುಡಿತಕ್ಕಾದರೆ ಯಾಯಿಯದು ಸಂಸಾರದ ಹೊಟ್ಟೆ ಹೊರೆಯುವುದಕ್ಕೆ. ಅವಳ ದುಡಿಮೆಯಲ್ಲೇ ಅವನೂ, ಅವನ ತಂಗಿಯರೂ ಓದಿ ಬೆಳೆದಿದ್ದು. ತಂದೆ ಲಿವರ್ ಡ್ಯಾಮೇಜಾಗಿ ಸತ್ತ (ಇಷ್ಟು ಕಥೆಯನ್ನು ನನ್ನಲ್ಲಿ ಕರುಣರಸ ಉತ್ಪಾದಿಸಲೆಂದು ಶಂಕರಬಾಬು ಮೆಲುದನಿಯಲ್ಲಿ ಹೇಳಿದ್ದು. ಮಂದಿನದು ಅವನ ವಿಕ್ರಮ ಸ್ಥಾಪಿಸಲು ಬೆನ್ನ ಹಿಂದೆ ಕೈಕಟ್ಟಿ ನಿಂತು) ಶಂಕರಬಾಬು ದೇಶ ಸೇವೆಯ ಸ್ಫೂರ್ತಿಯನ್ನು ತನ್ನ ಜಾತಿಯ ಮಂತ್ರಿಯಿಂದ ಪಡೆದು, ಅವನಿಗೆ ತನ್ನ ಬುದ್ಧಿ ಶಕ್ತಿಯಿಂದಾಗಿ ಬ್ರೈನ್ನಾಗಿ, ಮನೆಗೆ ಅಗತ್ಯವಾದ್ದೆಲ್ಲ ಸರಬರಾಜಾಗತೊಡಗಿ, ಎಲ್ಲರೂ ಉದ್ದಾರವಾಗುತ್ತ ಹೋದಂತೆ, ಮಂತ್ರಿಯೇ ಆಸಕ್ತಿವಹಿಸಿ ಸರೋಜಳನ್ನು ಅವನ ಆಪ್ತ ಕಾರ್ಯದರ್ಶಿಗೆ ಮದುವೆಮಾಡಿಸಿದ್ದು, ಅವನ ಜಾತಿಯಲ್ಲಿ ಓದಿದವರು ಕಡಿಮೆಯಾದ್ದರಿಂದ ಭಾವನಿಗೆ ಸರೋಜಗಿಂತ ಒಳ್ಳೆಯ ವಧು ಸಿಕ್ಕುತ್ತಿರಲಿಲ್ಲ. ಸರೋಜಗೆ ಆ ಬಾಸ್ಟರ‍್ಡ್‌ನಷ್ಟು ಸ್ಥಿತಿವಂತ ಸಿಕ್ಕುತ್ತಿರಲಿಲ್ಲ (ಬಾಸ್ಟರ್ಡ್ ಎಂಬುದು ಅವನ ಮಾತೇ).

ಈಗ ಶಂಕರಬಾಬು ಪೇಚಿಗೆ ಸಿಕ್ಕಿದ್ದಾನೆ. ಆ ಬಾಸ್ಟರ್ಡ್‌ನದು ಒಂದೇ ಹಠ. ಚಿಕ್ಕ ತಂಗಿ ಗೀತಾನ್ನ ತನಗೆ ಎರಡನೇ ಸಂಬಂಧಿ ಮಾಡಿಸಿಕೊಡು ಅಂತ. ಮಂತ್ರಿಗಳದೂ ಅದೇ ಒತ್ತಾಯವಂತೆ. ತನ್ನನ್ನು ಸೆಕೆಂಡ್ ಲೈನ್ ಆಫ್ ಲೀಡರ್‌ಶಿಪ್‌ಗೆ ತಯಾರು ಮಾಡಬೇಕೆಂದು ಅವರ ಇಷ್ಟವಲ್ಲವೆ?

ಮನೇಲಿ ಈ ವಿಷಯಾನ್ನ ಶಂಕರಬಾಬು ಎತ್ತುವಂತಿಲ್ಲ. ತಾಯಿ ಹೇಗೆ ಮಂತ್ರಿನ್ನೂ, ಭಾವನನ್ನೂ ಬೈತಾಳೆ ಎಂದರೆ, ನನ್ನ ಜಾತಿ ಜನಕ್ಕೆ ಮಾತ್ರ ಅಂಥ ಬೈಗಳ ಸಾಧ್ಯ. ಅವಳಿಗೋ ಕಾಹಿಲೆ – ಹಾರ್ಟ್‌ವೀಕು. ಹೈಬ್ಲಡ್‌ಪ್ರೆಶರ್, ಡಯಾಬಿಟಿಸ್. ದುಡ್ಡೇನು ಆಕಾಶದಿಂದ ಸುರಿಯತ್ತ? ಭಾವನೇ ಕೊಡಬೇಕು. ‘ಆ ಸೂಳೆಮಗನ ಪಾಪದ ಹಣಬೇಡ. ನಾನು ಅಕ್ಕಪಕ್ಕದ ಮನೇಲಿ ಮುಸುರೆ ತಿಕ್ಕಿ ಸಂಪಾದಿಸ್ತೀನಿ’ ಅಂತಾಳೆ ತಾಯಿ. ‘ನಾನು ನೆಲ್ಲೂರಲ್ಲಿ ನಮ್ಮ ಕುಲದವರ ಜೊತೆ ಬದುಕಿ ಕ್ರಾಂತಿ ಮಾಡ್ತೀನಿ’ ಅಂತಾಳೆ ಗೀತ. ಹೆದರುಪುಕ್ಕಿ. ರಾತ್ರೆಯಾದರೆ ಅವಳು ತಾಯಿ ಜೊತೇನೇ ಮಲಗಬೇಕು. ಕಾಲೇಜಲ್ಲಿ ಅವಳಿಗೆ ಕೆಟ್ಟ ಸಹವಾಸ ಅಷ್ಟೆ.

ಭಾವನಿಗೆ ಕಾದೂ ಕಾದೂ ಸಾಕಾಗಿತ್ತು. ಮನೆಗೆ ಬರಬೇಡ ಎಂದು ಬಿಟ್ಟಿದ್ದ. ಆ ಕರಪ್ಟ್ ನನ್ನ ಮಗ ಮಂತ್ರೀನೂ ಮಾತಾಡಿಸೋದು ನಿಲ್ಲಿಸಿದ್ದ. ನಿನ್ನೆ ಬೆಳಿಗ್ಗೆ ಶಂಕರಬಾಬು ಮಾನಮರ‍್ಯಾದೆ ಬಿಟ್ಟು ಭಾವನ ಪಾಷ್ ಬಂಗಲೆಗೆ ಹೋದ. ಭಾವ ದೇವರಪೂಜೆ ಮಾಡ್ತಾ ಇದ್ದ. ಬಾಸ್ಟರ‍್ಡ್ ಪೂಜೆ ಮಾಡದೆ ಕಾಪೀ ಕುಡಿಯಲ್ಲ. ಶಂಕರಬಾಬು ಮೆತ್ತಗೆ ಸೀದ ಅಡುಗೆಮನೆಗೆ ಹೋಗಿ ಅವನಿಗೆ ಇಷ್ಟವಾದ ಫಿಲ್ಟರ್ ಕಾಪೀ ಮಾಡಿಕೊಂಡು ಕಾದ. ಕಾಫೀ ಮಾಡೋದರಲ್ಲಿ ಸರೋಜ ನಿಷ್ಣಾತ – ಎಲ್ಲದರಲ್ಲೂ ಅವಳು ಬ್ರಾಮಿನ್ಸ್ ಥರ. ಬಾಸ್ಟರ‍್ಡ್ ಭಾವ ಗಂಧ ಕುಂಕುಮ ಇಟ್ಟುಕೊಂಡು ತನ್ನ ಪ್ರತಿದಿನದ ಕಲೆಕ್ಷನ್‌ಗೆ ಅಗತ್ಯವಾದ ಗರಿಗರಿ ಶರ್ಟು ಪ್ಯಾಂಟು ತೊಟ್ಟುಕೊಂಡು ಬಂದ. ಸ್ಟೇನ್‌ಲೆಸ್ ಲೋಟದಲ್ಲಿ ಘಮಘಮ ಫಿಲ್ಟರ್‌ಕಾಫಿನ ಸೋಫಾದ ಎದುರಾಗಿಟ್ಟಿದ್ದೇ ತಣ್ಣಗಾದ. ‘ಗೀತನ್ನ ಒಪ್ಪಿಸಿದಿಯಾ?’ ಎಂದ. ಮಂತ್ರಿ ತನ್ನನ್ನ ಡಿಸ್‌ಮಿಸ್ ಮಾಡ್ತಾರೆ. ಅವರದ್ದು ಒಂದೇ ಹಠ (ನನ್ನನ್ನು ಗೆಲ್ಲಲೆಂದು ಹೀಗೆ ತನ್ನ ನ್ನೂ ಭಾವನ್ನನೂ ಹಾವಭಾವಯುಕ್ತವಾಗಿ ಗೇಲಿ ಮಾಡುತ್ತಿದ್ದಾನೆಂದು ನನಗೆ ಅನುಮಾನವಾಗದೆ ಇರಲಿಲ್ಲ) ‘ಗೀತ ಒಪ್ಪಿಯೇ ಒಪ್ತಾಳೆ. ಅವಳಿಗೆ ನಮ್ಮ ಮಂತ್ರಿಗಳ ಕ್ರಾಂತಿಕಾತಿ ಸುಧಾರಣೆಗಳಲ್ಲಿ ನಂಬಿಕೆಯಿದೆ’ ಎಂದು ಶಂಕರಬಾಬು ಯದ್ವಾತದ್ವಾ ಸುಳ್ಳುಗಳನ್ನು ಹೇಳಿ, ತಾಯಿ ಶುಶ್ರೂಷೆಗೆಂದು ಆ ಡಿಪ್ರೇವ್ಡ್ ಜುಗ್ಗನಿಂದ ಒಂದು ಸಾವಿರ ರೂಪಾಯಿಯ ಕಟ್ಟನ್ನು ಪಡೆದ. ಅವು ಪಿನ್ ಮಾಡಿದ ಗರಿಗರಿ ನೋಟುಗಳು’ (ಬ್ಲಾಕ್‌ಮನಿ ತುಂಬ ಶುಭ್ರವಾಗಿರತ್ತೆ ಬ್ರದರ್ ಎಂದು ಶಂಕರಬಾಬು ಹಾಸ್ಯದ ಚಟಾಕಿ ಹಾರಿಸಿ ಮುಂದುವರೆದ)

ಇಡೀ ದಿನ ಹೈದರಾಬಾದಿನ ಸ್ಲಮ್ಮುಗಳನ್ನು ಸುತ್ತಾಡಿ ಮಾಡಬೇಕಾದ್ದನ್ನ ಮಾಡಿದ. ಅವನ ಮಾತು ಕೇಳೋ ಒಂದು ಬ್ರಿಗೇಡ್ ಇದೆ. ನಕ್ಸಲೈಟರು ಏನು ಡೆರರ್ ಕ್ರಿಯೇಟ್ ಮಾಡಿಯಾರು ಇವರೆದುರು? ಗೀತಾನ್ನೂ ಅವಳ ಪ್ರೆಂಡ್ಸನ್ನೂ ಸ್ವಲ್ಪ ಹೆದರಿಸಿ ಎಂದ. ಅವರಿಗೆಲ್ಲ ಪ್ಲಾನ್ ಹಾಕಿ ಕೊಟ್ಟ ಮೇಲೆ ಸಾಯಂಕಾಲ ಮನೆಗೆ ಹೋದ.

ಅಡಿಗೆ ಮನೇಲಿ ತಾಯಿ ಕೆಮ್ಮುತ್ತ ಹಾಲು ಕಾಯಿಸ್ತ ಇದ್ದಳು. ಸ್ಟೌವ್ ಮೇಲೆ ಹಾಲಿತ್ತು. ಗೀತ ಅದೇನೋ ಓದುತ್ತ ನೋಟ್ ಮಾಡಿಕೋತ ಇದ್ದಳು. ಯಾವಾಗಿನಂತೆ ತಲೆಕೆದರಿಕೊಂಡು, ಹರಿದ ಸೀರೆ ಉಟ್ಟುಕೊಂಡು, ‘ಅಮ್ಮ’ ಎಂದ. ಮೆತ್ತಗೆ ಹೇಳಿದ: ‘ತಗೋ ಒಂದು ಸಾವಿರ, ಇದು ನಿನ್ನ ಟ್ರೀಟ್‌ಮೆಂಟಿಗೆ. ಭಾವ ಕೊಟ್ಟ. ಗೀತನ್ನ ಒಪ್ಪಿಸು ಎಂದು. ಹೀಗೆ ಹೇಳಿ ಕ್ವಯಟ್ ಆಗಿಯೇ ಶಂಕರಬಾಬು ನಿಂತದ್ದು.

ಆದರೆ ಎದ್ದು ನಿಂತಳಪ್ಪ ಕೆದರಿಸ ತಲೆಯಲ್ಲಿ ಗೀತ – ಒಳ್ಳೆ ಚಂಡಿ ಹಾಗೆ. ಅಣ್ಣನ ಕೈಯಲ್ಲಿದ್ದ ಸಾವಿರ ರೂಪಾಯಿ ಕಟ್ಟನ್ನು ಗಕ್ಕಂತ ಇಸಕೊಂಡಳು. ಬಿರುಗಾಳಿ ಹಾಗೆ ಸ್ಟೌವ್ ಹತ್ತಿರ ನುಗ್ಗಿದಳು. ಬರಿಗೈಯಲ್ಲೇ ಕುದಿತಿದ್ದ ಹಾಲಿನ ಪಾತ್ರೇನ ನೆಲಕ್ಕೆ ಕುಕ್ಕಿದಳು. ನೋಟಿನ ಕಂತೆನ್ನ ಉರಿಯುವ ಸ್ಟೌವ್ ಮೇಲೆ ಇಟ್ಟಳು.

ಹೀಗೆ ನಡೆದದ್ದನ್ನು ಹೇಳುವಾಗ ಶಂಕರಬಾಬು ನಿಜವಾಗಿಯೂ ದಿಗ್ಭಾಂತನಾದವನಂತೆ ಕಂಡ. ಒಂದು ಇಡೀ ದಿನ ಕೂಲಿ ಮಾಡಿದರೆ ಅಮ್ಮನಿಗೆ ಹತ್ತು ರೂಪಾಯಿಗೂ ಸಿಗ್ತಾ ಇರಲಿಲ್ಲ. ಕಾಸಿಗೆ ಕಾಸು ಗಂಟುಹಾಕಿ, ಅಪ್ಪನಿಗೆ ಒದ್ದು ಉಗಿದು ಅಷ್ಟಿಷ್ಟು ಹಣ ಕಿತ್ತುಕೊಂಸು ಹೆಣಗಿದವಳು ಅಮ್ಮ. ಆದರೆ ಈ ಅಮ್ಮನೇ ನೋಟಿನ ಕಂತೆಯನ್ನೇ ಬೆಂಕಿ ನೆಕ್ಕುತ್ತ ಇರೋದನ್ನ ಸುಮ್ಮನೆ ನೋಡ್ತ ನಿಂತಿದ್ದಳು. ಗೀತ ಅಟ್ಟಹಾಸದಲ್ಲಿ ನೋಟಿನ ಜೊತೆ ಅಣ್ಣನನ್ನೂ ಸುಟ್ಟುಹಾಕೋ ಥರ ನೋಡ್ತ ಇದ್ದಳು. ನೆಲದ ಮೇಲೆ ಎರಡು ಕೈಗಳನ್ನೂ ಊರಿ ಅಮ್ಮ ಸದ್ದಿಲ್ಲದೆ ಬಿಕ್ಕುತ್ತಿದ್ದಳು. ತಲೆಕೆಟ್ಟ ಮುದುಕಿ ಈ ಅಮ್ಮ.

ಮೊದಲು ಅವಾಕ್ಕಾಗಿ ಬಿಟ್ಟಿದ್ದ ಶಂಕರಬಾಬುಗೆ ಮುಂದೆ ಸಹಿಸಕ್ಕೆ ಆಗಲಿಲ್ಲ. ಸ್ಟೌವನ್ನ ಕಾಲಲ್ಲಿ ಒದ್ದ. ಉರೀತಿರೋ ನೋಟಿನ ಕಂತೇನ್ನ ಬರಿಗೈಯಲ್ಲೇ ಅವುಚಿದ. ನೆಲ ಒರೆಸೋ ಬಟ್ಟೇಲಿ ಕರಟುತ ಇದ್ದ ಗರಿಗರಿ ನೋಟುಗಳನ್ನು ಒರೆಸಿ ಜೇಬಿಗೆ ಹಾಕಿಕೊಂಡ.

ತಡೆಯಲಿಕ್ಕಾಗಲಿಲ್ಲ. ಅಲ್ಲೇ ಒಂದು ತರಕಾರಿ ಹೆಚ್ಚುವ ಕತ್ತಿ ಇತ್ತು. ಅದನ್ನ ಎತ್ತಿಕೊಂಡು ಗೀತಳ ಕೂದಲು ಜಗ್ಗಿ ಕತ್ತರಿಸಕ್ಕೆ ಹೋದ. ಅದೇನು ಬಲಬಂದಿತ್ತೋ ಗೀತಾಗೆ! ಅಣ್ಣನನ್ನು ಒದ್ದಳು. ಕತ್ತೀನ ಕಿತ್ತುಕೊಂಡು ಕೊಚ್ಚಲಿಕ್ಕೆ ಬಂದಳು. ಅಮ್ಮ ‘ಹೋ’ ಎಂದು ಕೂಗ್ತ ಅವಳನ್ನ ತಳ್ಳಿ ಕತ್ತಿ ಕಿತ್ತುಕೊಂಡಳು. ತನ್ನ ತಲೆಗದನ್ನು ಬಡಿದುಕೊಂಡಳು. ಈ ರಾದ್ದಾಂತ ಪಕ್ಕದ ಮನೆ ಬ್ರಾಮಿನ್ಸ್‌ಗೆ ಕೇಳಿಸಿರಬೇಕು.

ಗೀತ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಪೊರಕೆ ತಗೊಂಡು ತನ್ನ ಹೊಡೀತ ಮನೆ ಹೊರತೆ ದಬ್ಬಿ ಬಾಗಿಲು ಹಾಕಿಕೊಂಡಳು (ಶಂಕರಬಾಬು ಏನೋ ಥಟ್ಟನೆ ಯೋಚಿಸುತ್ತ ಕರಕಲಾಗಿದ್ದ ನೋಟಿನ ಕಂತೆಯನ್ನು ಹೊರಕ್ಕೆ ತೆಗೆದು ‘ಬ್ಯಾಂಕಲ್ಲಿ ಇದನ್ನು ಬದಲಿಸ್ತಾರೆ ಅಲ್ಲವೆ? ಎಂದು ಕಥೆ ಮುಂದುವರೆಸಿದ)

ಶಂಕರಬಾಬು ಪಕ್ಷದ ಕಛೇರಿಗೆ ಹೋಗಿ ರಾತ್ರೆಯೆಲ್ಲ ‘ದಿ ವೀಕ್’ ಮತ್ತು ‘ಸಂಡೇ’ ಗಳ ಬ್ಯಾಕ್ ನಂಬರುಗಳನ್ನೆಲ್ಲ ಓದುತ್ತ ಕಳೆದ. ಬೆಳಗಾದ ಮೇಲೆ ಎಲ್ಲ ಶಾಂತವಾಗಿರಬಹುದು ಅಂತ ಮನೆಗೆ ಹೋದ.

ಬಾಗಿಲು ತೆರೆದಿತ್ತು. ತಾಯಿ ಸತ್ತವಳಂತೆ ಮುಸುಕೆಳೆದು ಮಲಗಿದ್ದಳು. ಗೀತ ಕಾಣಿಸಲಿಲ್ಲ. “ಎಲ್ಲಿ ಗೀತ?” ಎಂದ. ಅಮ್ಮನ ಉತ್ತರವಲಿಲ್ಲ. ಮುಸುಕೆಳೆದ. ಅಲುಗಿಸಿದ. ಅಮ್ಮ ಕಣ್ಣುಬಿಟ್ಟಳು. “ಎಲ್ಲಿ ಗೀತ?” ಎಂದು ಗದರಿಸಿದ. ಆಗಲೂ ಉತ್ತರವಿಲ್ಲ. ಅಮ್ಮ ಆಳ್ತಾನೂ ಇರಲಿಲ್ಲ. ತನ್ನ ಪಾಡಿಗೆ ಕಣ್ಣುಗಳನ್ನು ಮುಚ್ಚಿಬಿಡುತ್ತಿದ್ದಳು. “ಸಾಯ್ತ ಇರೋ ನಿನ್ನ ಬಿಟ್ಟು ಆ ಲೋಫರ್ ಎಲ್ಲಿ ಹಾದರ ಮಾಡಕ್ಕೆ ಹೋದಳು?” ಎಂದು ಕಿರುಚುತ್ತ ಗೋಡೆಗೆ ತಲೆ ಜಪ್ಪಿಕೊಂಡು ನೋಡಿದ. ತಾಯಿ ತುಟಿ ಪಿಟಕ್ಕೆನ್ನಲಿಲ್ಲ. ಕೂದಲು ಕೆದರಿಕೊಂಡ ಮುನಿಯಾಗಿಬಿಟ್ಟಿದ್ದಳು.

ಶಂಕರಬಾಬುವಿಗೆ ಅರಿವಾಯ್ತು. ತನ್ನ ಒಂದು ಚಾಪ್ಟರ್ ಮುಗೀತು ಅಂತ. ಇನ್ನು ಮುಂದೆ ಆ ಲೋಫರ್ ಮಂತ್ರಿ ಮಾತಾಡಿಸಲ್ಲ. ಮತ್ತೆ ಆ ಬಾಸ್ಟರ್ಡ್ ಭಾವ ಹತ್ತಿರ ಸೇರಿಸಲ್ಲ.

ಉಳಿದದ್ದು ಅವನಿಗೆ ಒಂದೇ ಉಪಾಯ. ಅವನ ಜಾತೀಲಿ ಇನ್ನೊಬ್ಬ ಇದ್ದ – ಈ ಮಂತ್ರಿಗಳಿಗೆ ರೈವಲ್ – ಪೊಟಾನ್ಷಿಯಲ್ ರೈವಲ್. ಅವನು ಗ್ರನೈಟ್ ಮರ್‌ಚೆಂಟ್. ತೆಲುಗುದೇಶಂಗೆ ಸಿಂಪಥೈಸರ್ ಆಗಿದ್ದ. ಭಾರಿ ಹಣದ ಕುಳ. ಅವನಿಗೆ ತನ್ನಂಥ ಯುವಕರ ಬೆಂಬಲ ಬೇಕು. “ಅವನನ್ನ ಇಂಪ್ರೆಸ್ ಮಾಡಕ್ಕೆಂತಲೇ, ಏನೂ ಹೊಳೀದೇ ಇದ್ದಾಗ, ನಿಮ್ಮಿಂದ ಈ ಪಿಕ್ಚರ್‌ಗಳ್ನೆಲ್ಲ ತೆಗೆಸಿಕೊಂಡಿದ್ದು ಬ್ರದರ್. ”

ಶಂಕರಬಾಬುವಿಗೆ ಭವಿಷ್ಯ ಕಥಿಸುವುದರಲ್ಲಿ ನನಗೆ ಉತ್ಸಾಹ ಉಳಿದಿರಲಿಲ್ಲ. ಅವನು ತೋರಿದ ಸರ್ವಸ್ವ ಒಂದಕ್ಕೊಂದು ಹೆಣೆದುಕೊಳ್ಳತೊಡಗಿದವು. ಒಂದೇ ಮುಖದ ನನಗೆ ಅವನು ಹಲವು ಮುಖಗಳಲ್ಲಿ ಎದುರಾಗಿದ್ದ.

೧೧

ಮುಂದೆ ಅವನು ಬಾವಿ ತೋಡಿಸಿಯಾನು. ಸೀರೆ ಹಂಚಿಯಾನು. ನಿವೇಶನ ಹಂಚಿಯಾನು. ಸಾಲುಮರ ನೆಡಿಸಿಯಾನು. ಚರಿತ್ರೆಯಲ್ಲಿ ತನ್ನದೂ ಪುಟ್ಟ ಪೃಷ್ಠ ಊರಿಯಾನು.

ತನ್ನ ಕ್ಷೇತ್ರ ಬಲಪಡಿಸಿಕೊಳ್ಳಲು ಸ್ಲಮ್ಮಿನ ಬಡಪಾಯಿಗಳನ್ನು ರೊಚ್ಚಿಗೆಬ್ಬಿಸಿಯಾನು.

ಈ ಮಕ್ಕಳೊಂದಿಗರೇ ಪರಜಾತಿಯವರ ಒಂದು ಗುಡಿಸಲಿಗೆ ಬೆಂಕಿಯಿಟ್ಟಾರು. ಈ ಹುಲ್ಲು ಗುಡಿಸಿಲಲ್ಲಿ ಮಲಗಿ ನಿದ್ರಿಸುವ ಯಾವುದೋ ಮಗು ಬೆಂಕಿಯಲ್ಲಿ ಬೆಂದೀತು.

ಒಂದಿಷ್ಟು ದಿನಗಳಾದ ಮೇಲೆ ತಂಪಾದ ಒಂದು ಪ್ರಾತಃಕಾಲ ಮಪ್ಲರ್ ಸುತ್ತಿಕೊಂಡು ವಾಕಿಂಗ್ ಹೋಗುವ ಸದ್ಗೃಹಸ್ಥರೊಬ್ಬರು ಹೇಳಿಯಾರು; ‘ಛೇ, ಪಾಪ. ನಿಜ. ಆದರೆ ಇಂಥದ್ದು ಆಗದೆ ಆ ಮುಂಡೆ ಮಕ್ಕಳಿಗೆ ಬುದ್ಧಿ ಇರ್ತ ಇರ್ಲಿಲ್ಲ. ಈಗ ಹೇಗೆ ತಣ್ಣಗಾಗಿದಾರೆ ನೋಡಿ. ಚರಿತ್ರೇಲಿ ಇವೆಲ್ಲ ಅನಿವಾರ್ಯ’

ನೆನಪಿನ ಹಿತವಾದ ಮಂಜಿನ ಹಿನ್ನೋಟಕ್ಕೆ ತೋರುವ ಚರಿತ್ರೇಲಿ ಹಿಟ್ಲರ್‌ಗೆ ತನ್ನ ನಾಯಿ ಎಂದರೆ ತುಂಬ ಪ್ರೀತಿ. ಹೆಂಡತಿ ಸತ್ತಾಗ ಸ್ಟಾಲಿನ್ ದುಃಖದಲ್ಲಿ ಒಂಟಿಗನಾಗಿರುತ್ತಿದ್ದ. ಅವನ ಮಧ್ಯರಾತ್ರಿಯ ಭಾರಿ ಔತಣಕೂಟಗಳಲ್ಲಿ ಪೆಪ್ಲರ್ ರುಚಿಯ ವೋಡ್ಕಾನ್ನ ‘ಥಂಬ್ಸ್ ಆಫ್’ ಎಂದು ಗಟಗಟನೆ ಕುಡಿದು, ಮೀಸೆ ಒರೆಸಿಕೊಳ್ಳುತ್ತಿದ್ದ. ಚೆನ್ನಾಗಿ ಕುಡಿಸಿ, ತಿನ್ನಿಸಿ ಉಪ್ಪಿನಕಾಯಿ ಜಾಡಿಯಂತೆ ತೋರವಾಗಿದ್ದ ಕ್ರುಶ್ಟೇವ್‌ನನ್ನ ಕರಡಿ ಕುಣಿಸ್ತ ಇದ್ದ. ಒಂದೊಂದು ಸಾರಿ ತನ್ನ ಕೆಂಪು ಸೈನಿಕ ಸಾಹಸ ನೆನೆದು ಆಳ್ತ ಇದ್ದ. ಎಂಥ ದುಷ್ಟ ದೊರೆ ಚಿಕವೀರ ರಾಜೇಂದ್ರನೂ ಒಬ್ಬ ಮುದುಕೀನ್ನ ಕೇಳಿ. “ಅಜ್ಜಿ, ನಿನ್ನೆ ಯಾವ ಕಿವೀಲಿ ನಾನು ಮಗುವಾಗಿದ್ದಾಗ ಉಚ್ಚೆ ಹೊಯ್ದುದ್ದು?”

೧೨

ಅಥವಾ ಉತ್ಕಟವಾದ ಪ್ರಾರ್ಥನೆಯ ನಿರೀಕ್ಷೆಗೆ ಎಟಕುವ ಸೋಜಿಗವೂ ಮುನ್ನೋಟದ ಚರಿತ್ರೆಯಲ್ಲಿ ಇರುವುದೇ ಆದಲ್ಲಿ ಹುಲ್ಲೆಂದುಕೊಂಡದ್ದು ದರ್ಭೆಯಾದೀತು. ಶಂಕರಬಾಬುವೂ ಒಂದು ಸಾಯಂಕಾಲ ತನ್ನ ಇಳಿವಯಸ್ಸಿನಲ್ಲಿ ಒಂಟಿಯಾಗಿ ಕೂತು, ಮೂಗು ತೊಡುತ್ತ ಅದರ ಉಗಮಕಂಡಾಗ : ಆಗ ನೋಟಿನ ಕಟ್ಟನ್ನು ಗೀತ ಉರಯುವ ಸ್ಟೌಪ್ ಮೇಲೆ ಇಟ್ಟಿದ್ದು, ತಾಯಿ ಸುಮ್ಮನೇ ನೊಡುತ್ತಿದ್ದರೆಂದು ತಾನು ಕ್ಷಣ ತಬ್ಬಿಬ್ಬಾದ್ದು, ಕೋಪದ ಉರಯಲ್ಲಿ ಗರಿಗರಿ ನೋಟುಸುಡುವಾಗ ಹರಿತಗಂಡ ಪ್ರೀತಯೂ ಶುದ್ದವಾದ್ದು, ಇವೆನ್ನೆಲ್ಲ ಸರೋಜ ಸತ್ತು ಎಬ್ಬಿಸಿದ್ದು…….

ಆದರೆ ಶಂಕರಬಾಬು ಸದ್ಯದಲ್ಲಿ ಚೇತರಿಸಿಕೊಂಡು ಮಸದ ಭರ್ಜಿಯಾದಂತೆ ಕಂಡ ನನ್ನನ್ನು ನೋಡುತ್ತ ಸಲಿಗೆಯಲ್ಲಿ ನಗುತ್ತಿದ್ದ. ಕನ್ನಡಿ ನೋಡಿ ಮುಂಗೂದಲನ್ನು ಇನ್ನಷ್ಟು ಎತ್ತಿ ಬಾಚಿಕೊಂಡ. ಹುರುಪಿನ ಬುಗ್ಗೆಯಾಗಿ ಆಂಧ್ರದ ಪಕ್ಷಗಳ ಬಲಾಬಲ, ತನ್ನ ಜನರ ಐಲು ವಿಶ್ಲೇಷಿಸತೊಡಗಿದ.

“ನನಗೆ ಒಬ್ಬ ವಿದ್ಯಾರಣ್ಯ ಸಿಕ್ಕರೆ ನಾನೊಂದು ರಾಜ್ಯಾನೇ ಕಟ್ತೀನಿ ಸಾರ್. ಹಾಗ ನಾನು ಸೋಲೋ ಕುಳ ಅಲ್ಲ” ಎಂದು ಬ್ರೀಫ್‌ಕೇಸ್ ಹಿಡಿದು ಎದ್ದುನಿಂತ. ನನಗೆ ‘ಗುಡ್‌ಲಕ್’ ಹೇಳಿ ಹೊರಟುಹೋದ.

* * *