೧
ಫಿಲೆಡೆಲ್ಫಿಯಾದಲ್ಲಿ ಬಹಳ ವರ್ಷಗಳಿಂದ ಇಂಗ್ಲಿಷ್ ಪ್ರೊಫೆಸರ್ ಆಗಿರುವ ನನ್ನ ಬಾಲ್ಯ ಸ್ನೇಹಿತ ಶ್ರೀನಿವಾಸ ಅವನ ಹೆನ್ರಿಜೇಮ್ಸ್ ಕುರಿತ ಪುಸ್ತಕದಿಂದಾಗಿ ಈಚೆಗೆ ಯೂನಿವರ್ಸಿಟಿ ವಲಯದಲ್ಲಿ ಗಣ್ಯನಾಗಿದ್ದಾನೆ. ಅವನ ನಿಜವಾದ ಹೆಸರು ಶ್ರೀನಿವಾಸನಲ್ಲ. ಅವನಿಗೆ ಮುಜುಗರವಾಗದಿರಲಿ ಎಂದು ಅವನ ನೈಜ ಹೆಸರನ್ನು ಮರೆ ಮಾಡಿದ್ದೇನೆ. ಯಾಕೆಂದರೆ ಅವನ ಕಥೆಯೆಂದು ಬರದರೂ ನನ್ನ ಒಣಪ್ರತಿಷ್ಠೆ ಈ ಕಥೆಯಲ್ಲಿ ನುಣುಚಿಕೊಂಡೀತು ಎಂಬ ಅನುಮಾನದಿಂದ. ಅಲ್ಲದೆ ಇದು ಅವನ ಕಥೆಯೂ ಅಲ್ಲ. ಅವನ “ತಾತ್ವಿಕ ಅರಿವಿನ ಸ್ಫೋಟಕ್ಕೆ’ ಕಾರಣಳಾಗಿರುವ ಅವನ ಹಿರಿಯಕ್ಕನ ಕಥೆಯೂ ಇದಾದ್ದರಿಂದ ಅವನು ತನ್ನ ಪೊರಕೆ ಕಳಚಿಕೊಂಡು ತಾನೇ ಈ ಕಥೆಯನ್ನು ಹಿರಿಯಕ್ಕನ ಕಥೆಯೂ ಇದಾದ್ದರಿಂದ ಅವನು ತನ್ನ ಪೊರೆ ಕಳಚಿಕೊಂಡು ತಾನೇ ಈ ಕಥೆಯನ್ನು ಇನ್ನೊಂದು ಬಗೆಯಿಂದ ಬರೆದಾನು (“ಅರಿವಿನ ಸ್ಪೋಟ” ಎಂಬುದರ ಮೂಲ ಇಂಗ್ಲಿಷ್ ಶಬ್ದದ ಅವನದೇ).
ಈ ಶ್ರೀನಿವಾಸ ಅವನ ಮಿಡಲ್ಸ್ಕೂಲ್ ದಿನಗಳಲ್ಲಿ ಹಸಿ ಕಳ್ಳನಾಗಿದ್ದ. ಅವನು ಪಿಕ್ಪಾಕೆಟ್ ಮಾಡುವುದು ಶುರುವಾದದ್ದು ತಮಾಷೆಗೆಂದು. ನೀವು ಜೇಬಿನಲ್ಲಿ ಎಲ್ಲೇ ನಿಮ್ಮ ಕಾಸನ್ನು ಮುಚ್ಚಿಟ್ಟುಕೊಂಡಿರಿ, ಅವನು ಇವುಗಳನ್ನು ಪತ್ತೆಯಾಗದಂತೆ ಲಪಟಾಯಿಸಬಲ್ಲವನಾಗಿದ್ದ. ಸತಾಯಿಸಿ ಆಮೇಲೆ ಕೊಡುತ್ತಿದ್ದ ಎನ್ನಿ. ಕೊಡುವ ಮುಂಚೆ ನಿಮ್ಮ ಬಾಯಿಂದ ಬರಲಾರದ ಆತ್ಮಾವಹೇಳನದ ಮಾತುಗಳನ್ನೆಲ್ಲ ಆಡಿಸಿಬಿಡುತ್ತಿದ್ದ. ನಾನು ನಾಯಿ, ನಾನು ನಿನ್ನ ಎಂಜಲು ತಿನ್ನುತ್ತೇನೆ, ನಾನು ನಿನ್ನ ಅಂಡು ತೊಳೆಯುತ್ತೇನೆ, ದಮ್ಮಯ್ಯ, ದಕ್ಕಯ್ಯ, ನೀನು ಹೇಳಿದಂತೆ ಹೇಳಿಕೊಂಡಿರುತ್ತೇನೆ – ಇತ್ಯಾದಿಗಳನ್ನೆಲ್ಲ ಹೇಲಿಸಿ ನಿಮ್ಮ ಹತ್ತಿರವಿರುವ ರಬ್ಬರನ್ನೋ ಪೆನ್ಸಿಲನ್ನೋ ಕಾಣಿಕೆಯಾಗಿ ಪಡೆದು, ಇನ್ನೇನು ಅತ್ತು ಬಿಡುವುದರಲ್ಲಿರುವ ನಿಮಗೆ ತಾನು ಲಪಟಾಯಿಸಿದ್ದನ್ನು ಕೊಟ್ಟುಬಿಡುತ್ತಿದ್ದ, ಮಹಾಪುಂಡ.
ಈ ನಿಮ್ಮ ಅವಮಾನವನ್ನು ಯಾರ ಬಳಿಯೂ ನೀವು ಹೇಳಿಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ ಮುಂದೆಂದೂ ನಿಮ್ಮ ಜೇಬು ಕ್ಷೇಮವಾಗಿರುತ್ತಿರಲಿಲ್ಲ. ಮುಂಡೇಗಂಡ – ನಮ್ಮ ಹೆಡ್ಮಾಸ್ತರರ ಪೆನ್ನನ್ನೇ ಲಪಟಾಯಿಸಿಬಿಟ್ಟಿದ್ದ. ಅದೇ ಒಂದು ಕಥೆ. ಪೆಟ್ಟು ತಿಂದ ಯಾವ ಹುಡುಗನೂ ಅದು ಶ್ರೀನಿವಾಸನ ಕೈಚಳಕವೆಂದು ಬಾಯಿಬಿಟ್ಟರಲಿಲ್ಲ. ಹುಡುಗರು ಪಡುತ್ತಿದ್ದ ಹಿಂಸೆಯಿಂದ ಶ್ರೀನಿವಾಸನ ಮನಸ್ಸೇ ಕರಗಿಬಿಟ್ಟಿತು. ಹೀಗೆ ಅವನು ಕರಗುತ್ತಿದ್ದುದೂ ಇತ್ತು ಎನ್ನಿ.
ಜರಿಪೇಟ ತೊಟ್ಟಿದ್ದ ಬಹಳ ಜೋರಿನ ಮೇಸ್ಟ್ರಿಗೆ ಹೀಗೆ ಕೈ ಮುಗಿದು ನಿಂತು ವಿನಯಪೂರ್ವಕವಾಗಿ, ನಾವೆಲ್ಲಗೊಳ್ಳೆಂದು ಅವನ ಎದುರೇ ನಕ್ಕುಬಿಡುವಂತೆ, ಹೇಳಿದ್ದ.
”ಸಾರ್ ನೀವು ಉಚ್ಚೆ ಹೊಯ್ಯಕ್ಕೇಂತ ಯಾರಿಗೂ ಗೊತ್ತಾಗದ ಹಾಗೆ ಹೋಗಿ ಕೂತಿರ್ತೀರಲ್ಲ. ಸ್ಕೂಲಿನ ಹಿಂದೆ, ಕಾಕೇ ಹಣ್ಣಿನ ಗಿಡಗಳಿರೋ ಒಂದು ಮೊಟ್ಟು, ಅಲ್ಲೇ ಇದು ಬಿದ್ದಿತ್ತು. ನೀವು ನಿಮ್ಮ ಕೋಟಿನ ಒಳಗೆ ಕೈ ಹಾಕಿ ನಿಮ್ಮ ಜನಿವಾರವನ್ನು ಹೊರಕ್ಕೆ ತೆಗೆದು ಕಿವಿಗೆ ಸಿಕ್ಕಿಸಿಕೊಳ್ತಿರುವಾಗ ಇದು ಬಿದ್ದಿದ್ದು ನಿಮಗೆ ಗೊತ್ತಾಗಲಿಲ್ಲ ಅಂತ ಕಾಣುತ್ತೆ. ನಿಮಗೆ ಉಚ್ಚೆಗೆ ಅವಸರವಾಗಿರಬೇಕು. ಕೂತು ಉಚ್ಚೆ ಮಾಡಿದ್ದರೆ ನಿಮಗೆ ಕಾಣಿಸ್ತಿತ್ತೇನೋ, ಬಗ್ಗಿದರೆ ಜರಿಪೇಟ ಉಚ್ಚೆ ಮೇಲೆ ಬಿದ್ದು ಬಿಟ್ಟೀತೆಂದು ನಿಮಗೆ ಭಯ ಬೇರೆ. ಕಚ್ಚೆಯನ್ನು ಬಿಚ್ಚಿ ಉಚ್ಚಿ ಹೊಯ್ಯೋದು ಇನ್ನೊಂದು ತಾಪತ್ರಯ. ”
ಜನಿವಾರವನ್ನು ಮೇಲೆ ಕಿವಿತೆ ಸಿಕ್ಕಿಸಿಕೊಳ್ಳುವಾಗ ಹೆಡ್ಮಾಸ್ತರರು ತಮ್ಮ ಮೈ ಒಳಗೆ ಹುಡುಕುವಂತೆಯೇ ಶ್ರೀನಿವಾಸ ತನ್ನ ಒಳ ಅಂಗಿಯಿಂದ ಹುಡುಕುವಂತೆ ನಟಿಸಿ, ಬ್ಲಾಕ್ಬರ್ಡ್ ಪೆನ್ನನ್ನು ಹೊರತೆಗೆದು, ಹೆಮಾಸ್ತರರು ಹಿಂದಿನ ದಿನ ಪಾಠದಲ್ಲಿ ವಿವರಿಸುತ್ತ ಉಚ್ಚರಿಸಿದ ಕ್ರಮದಲ್ಲೇ “ತಾಪತ್ರಯ’ ಎನ್ನುವ ಶಬ್ದವನ್ನು ಗಂಭೀರವಾಗಿ ಉಚ್ಚರಿಸಿ, ಭಯಭಕ್ತಿಯಲ್ಲಿ ಪೆನ್ನನ್ನು ನೀಡಿದ ಕ್ರಮದಿಂದಾಗಿ ಅವನು ಎಲ್ಲ ಹುಡುಗರ ಮತ್ತು ಪರಮ ನಾಚಿಕೆಯ ಎಲ್ಲ ಹುಡುಗಿಯರ ಕಣ್ಮಣಿಯಾಗಿಬಿಟ್ಟಿದ್ದ. ಪೆನ್ನು ಸಿಕ್ಕ ಖುಷಿಯಲ್ಲೂ ಹೆಡ್ಮಾಸ್ತರರು ಸಿಟ್ಟಿನಲ್ಲಿ ಕೈ ಎತ್ತಿ ಬುಸುಗುಟ್ಟಿದ್ದರು. ಆದರೆ ಬೆಲೆ ಬಾಳುವ ಪೆನ್ನನ್ನು ಹಿಂದೆ ಕೊಟ್ಟವನನ್ನು ಹೊಡೆಯಲಾರದೆ, ತಮ್ಮ ಘನತೆಯನ್ನು ಮರೆಯಲಾರದೆ ಪೇಚಾಗಿದ್ದರು. ಅವರು ಈ ಕೈ ಎತ್ತಿದಾಗ ಶ್ರೀನಿವಾಸ ಜೀವವೇ ಹೋಗಿಬಿಟ್ಟವನಂತೆ ತನ್ನ ಎರಡೂ ಕೈಗಳನ್ನೂ ಎತ್ತಿ, ಕುಸಿದು ಕೂತುಬಿಡುವವನಂತೆ ನಟಿಸುತ್ತ, ನಮ್ಮ ಕಡೆ ನೋಡಿ, “ಸಾರ್ ಸಾರ್’ ಎಂದು ಅಳುವ ಹಾಗೆ ನರಳಿ, ಹೊಟ್ಟೆ ಹುಣ್ಣಾಗುವಂತೆ ನಮ್ಮನ್ನು ನಗಿಸಿದ್ದ.
೨
ಇಂಥ ಶ್ರೀನಿವಾಸ ಈಗ ಬಹಳ ತೂಕದ ಮನುಷ್ಯನಾಗಿಬಿಟ್ಟಿದ್ದಾನೆ – ಅವನನ್ನು ಬಾಲ್ಯದಲ್ಲಿ ಬಲ್ಲ ಎಲ್ಲರೂ ಆಶ್ಚರ್ಯಪಡುವಂತೆ. ಅವನ ತಂದೆ ಚಿಕ್ಕಂದಿನಲ್ಲೇ ಸತ್ತಿದ್ದರು. ಅವನನ್ನು ಮುದ್ದಿನಿಂದ ಬೆಳೆಸಿದವರು ಅವನ ಹಿರಿಯಕ್ಕ. ಈಗ ಹಿರಿಯಕ್ಕನದೇ ಇನ್ನೊಂದು ಕಥೆ.
ಆಕೆಗೆ ಮೈನೆರೆಯುವ ಮುಂಚೆಯೇ ಮದುವೆ. ಮದುವೆಯದವ ಹುಬ್ಬಳ್ಳಿಯಲ್ಲಿ ಎಮ್ಮೆ ವ್ಯಾಪಾರ ಮಾಡುತ್ತಿದ್ದ ಒಬ್ಬ ಲಫಂಗ. ಮದುವೆಗೆ ಮುಂಚೆಯೇ ಅವನೊಂದು ಸೂಳೆಯನ್ನು ಇಟ್ಟುಕೊಂಡಿದ್ದನೆಂಬುದು ತಿಳಿದಿರಲಿಲ್ಲ. ಶ್ರೀನಿವಾಸನ ತಂದೆ ಶ್ರೀಮಂತ ಜಮೀನುದಾರರು, ಹನ್ನೆರಡು ಮಕ್ಕಳ ತಂದೆ. ಕೊನೆಯವರು ಶ್ರೀನವಿಆಸ. ತಾಯಿ ಸತ್ತ ನಂತರ ಎಲ್ಲರಿಗೂ ಅಕ್ಕಯ್ಯನಾಗಿಬಿಟ್ಟವಳೇ ಮೊದಲನೆಯ ಮಗಳು. ಅವಳು ತಂದ ಬಂಗಾರ, ಬೆಳ್ಳಿಯ ಬಳುವಳಿ ಸಾಲದೆಂದು ಅವಳ ಗಂಡ ತಾಯಿಯಲ್ಲದ ಹುಡುಗಿಯನ್ನು ಪೀಡಿಸಿ, ಬೆನ್ನಿನ ಮೇಲೆ ಮೂರು ಬರೆ ಹಾಕಿ, ಅದನ್ನು ತಡೆಯಲು ಬಂದ ತನ್ನ ಸೂಳೆಯನ್ನು ಒದ್ದು ಕೈಹಿಡಿದ ಮುಗ್ಧೆಯನ್ನು ತವರಿಗೆ ಅಟ್ಟಿದ್ದ. ಹಣೆಯಲ್ಲಿ ಬರೆದಿದ್ದೆಂದು ಶ್ರೀನಿವಾಸನ ಅಪ್ಪ ಒಪ್ಪಿಕೊಂಡು, ಬೇಗ ಬೇಗ ತಲೆ ನೆಯುತ್ತ, ಕಣ್ಣಿನ ಸುತ್ತ ಕಪ್ಪಾಗುತ್ತ, ಬಎನ್ನು ಬಾಗುತ್ತ, ಕೆಮ್ಮುತ್ತ, ಪರಚಿಕೊಳ್ಳುತ್ತ ಮುದುಕರಾಗುತ್ತ ಹೋದರು.
ಇಂಥ ಗೋಳಿನ ಮನೆಯಿಂದ ಹೆಗಲಿಗೆ ಚೀಲ ಸಿಕ್ಕಿಸಿ ಬಸ್ಸು ಹತ್ತಲು ಮನೆಯ ಮುಂದಿನ ರಸ್ತೆಯ ಪಕ್ಕದಲ್ಲಿ ಅರಳಿಕಟ್ಟಯನ್ನು ಹತ್ತಿಕೂತಿದ್ದೇ ಶ್ರೀನಿವಾಸ ತನ್ನ ತಂಟೆಕೋರತನದ ಕುದುರೆಯನ್ನೇರಿ ಬಿಡುತ್ತಿದ್ದ. ಅವನ ಚೀಲದ ತುಂಬ ಇರುತ್ತಿದ್ದುದು ಹೆಚ್ಚಾಗಿ ಪುಸ್ತಕಗಳಲ್ಲ. ಒಣಗಿದೆಲೆಯಲ್ಲಿ ಕೋಡುಬಾಳೆಯನ್ನು ಸುತ್ತಿ ಬಾಳೆ ಹಗ್ಗದಿಂದ ಕಟ್ಟಿದ ಒಂದು ಪೊಟ್ಟಣ, ಚಾಟರಿಬಿಲ್ಲು, ಅಸಾಧಾರಣ ಕೈಚಳಕದಲ್ಲಿ ಅವನು ಆಡುತ್ತಿದ್ದ ಕವಡೆಗಳು, ತಾನು ಇಷ್ಟಪಡುವ ಗೆಳೆಯರಿಗೆ ಅವನ ಉಡುಗೊರೆಯಾಗಿ ಉಪಯೋಗಕ್ಕೆ ಬರುತ್ತಿದ್ದ ಚನ್ನೆಮಣೆ ಕಾಳು, ಒಬ್ಬರಿಂದ ಒಬ್ಬರಿಗೆ ಮೇಸ್ಟ್ರಿಗೆ ಕಾಣದಂತೆ ರವಾನೆಯಾಗುತ್ತಿದ್ದ ಹುಣಸೇಹಣ್ಣಿನ ತುಂಡುಗಳು, ಇತ್ಯಾದಿ. ಈ ಹುಣಸೆ ಹಣ್ಣಿನ ಲೊಟ್ಟೆಹುಳಿಗೆ ಎಲ್ಲ ಹುಡಗರ ಹಲ್ಲುಗಳೂ ಲಟಲಟ ಎಂದು ಕಡಿಯುವಂತಾಗಿ, ಜೊಲ್ಲಾಗಿ, ಜೊಲ್ಲನ್ನು ಒಳಗೆ ಸುರಿದುಕೊಳ್ಳುವ ಸದ್ದುಗಳಾಗಿ, ಇಡೀ ಕ್ಲಾಸೇ ಪಟುಟ ಪುಟ್ಟ ಮೃಗಗಳು ಮಾಡುವ ಶಬ್ದಗಳ ಒಂದು ವನದಂತಾಗಿ ಬಿಡುತ್ತಿತ್ತು.
ಶ್ರೀನಿವಾಸನ ಚೇಷ್ಟೆ ಅತಿಯಾಗಿ ಬಿಟ್ಟು ಅವನು ಬೀಡಿಸೇದುವುದು ಶುರುವಾಯಿತು. ಮರದ ಪೊಟರೆಗಳಲ್ಲಿ ಬೀಡಿಕಟ್ಟನ್ನು ಮುಚ್ಚಿಟ್ಟು, ಗೆಳೆಯ ಜೊತೆ ಮೊಟ್ಟುಗಳ ಹಿಂದೆ ಅವಚಿಕೂತು ಮೂಗಿನಿಂದ ಹೊಗೆಬಿಡುವುದೂ, ಹೊಗೆಯನ್ನು ಬಾಯಿಯಿಂದ ಉಂಗುರಗಳಾಗಿ ಹೊರಕಳಿಸುವುದೂ ದೊಡ್ಡ ಸಾಹಸವಾಯಿತು. ಒಂದು ದಿನ ಹೀಗೆ ಬೀಡಿಯನ್ನು ಸಏದಿ ಎಸೆದಿದ್ದು ಒಂದು ಹುಲ್ಲು ಗೊಣಬೆಗೆ ಹತ್ತಿದ ಬೆಂಕಿಯಾಗಿ, ಈ ಬೆಂಕಿ ಪಕ್ಕದ ಗುಡಿಸಲನ್ನೂ ಸುಡುವಂತಾಗಿ ಗುಡಿಸಿಲಿನ ಬಡವರು ದಿಕ್ಕು ಕಾನದೆ ನಿತ್ರಾಣರಾದಾಗ ಕಾರಣವನ್ನು ಊಹಿಸಿದ ಅಕ್ಕಯ್ಯ ಶ್ರೀನಿವಾಸನನ್ನು ಉಪ್ಪರಿಗೆ ಮೆಟ್ಟಿಲಿನ ಕತ್ತಲೆಯ ಸಂದಿಯಲ್ಲಿ ನಿಲ್ಲಿಸಿ ಕೇಳಿದ್ದರಂತೆ “ತಮ್ಮಯ್ಯ ಯಾಕೆ ಹೀಗೆ ಮಾಡಿದಿಯೋ?’
ಶ್ರೀನಿವಾಸ ಉತ್ತರ ಕೊಟ್ಟಿರಲಿಲ್ಲ. ಆದರೆ ಹಿಂದಿನ ರಆತ್ರೆ ಅವನು ನಿದ್ರೆಯಲ್ಲಿ ಕನವರಿಸಿ ಬೆಚ್ಚುತ್ತಿದ್ದುದನ್ನು ಗಮನಿಸಿದ್ದ ಅಕ್ಕಯ್ಯನಿಗೆ ಅನುಮಾನವಾಗಿತ್ತು. ಅಕ್ಕಯ್ಯ ಯಾರಿಗೂ ಏನೂ ಹೇಳಲಿಲ್ಲ. ಗುಡಿಸಿಲಿನ ಬಡವನನ್ನು ಕರೆದು ಬಂಗಾರದ ತನ್ನ ಎರಡು ಕೈಬಳೆಗಳನ್ನು ಕೊಟ್ಟಳು. “ಮನೆ ಕಟ್ಟಿಕೊ” ಎಂದಳು. ತನ್ನ ಧಾರಾಳತನಕ್ಕಾಗಿ ತಂದೆಯಿಂದಲೂ, ಪ್ರಾಯಕ್ಕೆ ಬಂದ ತಮ್ಮಂದಿರಿಂದಲೂ ಬೈಸಿಕೊಂಡಳು. ಆದರೆ ಅವಳು ಯಾಕೆ, ಏನು ಬಾಯಿಬಿಡಲೇ ಇಲ್ಲ.
ಈ ಬೀಡಿಯ ಪ್ರಕರಣವಾದ ನಂತರ ಶ್ರೀನಿವಾಸ ಸ್ವಾತಂತ್ರ್ಯ ಸಂಗ್ರಾಮದ ಬಾಲನಾಯಕನಾಗಿ ಬಿಟ್ಟು, ಗಂಧದ ಮರ ಕಡಿಯುವುದು, ಈಚಲುಮರ ಕಡಿಯುವುದು ಇತ್ಯಾದಿಗಳಲ್ಲಿ ನಿಸ್ಸೀಮನಾದ. ಅವನು ಹಾಡುವುದನ್ನು ಕೇಳೀದ್ದನ್ನು ನಾನಂತೂ ಮರೆತಿಲ್ಲ:
ಕಸ್ತೂರಿಬಾರಿಯವರೇ
ಕಮಲಾದೇವಿಯವರೇ
ನಾವು ಚಳುವಳಿ ಮಾಡುವವರೇ
೩
ರಜಾ ದಿನಗಳಲ್ಲಿ ಶ್ರೀನಿವಾಸನ ಜೊತೆ ಅವನ ಮನೆಯಲ್ಲಿ ಇದ್ದುಬರುತ್ತಿದ್ದ ನನಗೆ ಅವನ ಸ್ಪಪ್ನಸ್ಖಲನದ ಆತಂಕಗಳಿಂದ ಮೊದಲಾಗಿ ಅವನಿಗೆ ಸಂಬಂಧಿಸಿದ ಎಲ್ಲ ವಿಷಯಗಳೂ ಗೊತ್ತಿದ್ದವು. ಕಾಲೇಜಿನಲ್ಲೂ ನನ್ನ ಸಹಪಾಠಿಯಾಗಿದ್ದ ಶ್ರೀನಿವಾಸ ಮಾತ್ರ ಕಂಬಳಿ ಹುಳ ದಿವ್ಯವಾದ ಚಿಟ್ಟಿಯಾಗಿಬಿಡುವಂತೆ ಪರಿವರ್ತನೆ ಹೊಂದಿಬಿಟ್ಟು, ದೊಡ್ಡ ಸ್ಕಾಲರ್ ಆಗತೊಡಗಿದ್ದ. ನನ್ನನ್ನು ಒಬ್ಬ ಬರಹಗಾರನಾಗಿ ಮಾಡಿದವನೂ ಶ್ರೀನಿವಾಸನೇ, ಹಿಂದೂ ಸಂಸ್ಕೃತಿಯ ಗೊಡ್ಡು ನಂಬಿಕೆಗಳ ಬಗ್ಗೆ ಅವನ ನಿಷ್ಠುರವಾದ, ಕೋಪಗ್ರಸ್ತವಾದ ನಿಲುವಿನಿಂದಲೇ ನಾನು ಆ ದಿನಗಳಲ್ಲಿ ನನ್ನ ಸ್ಫೂರ್ತಿಯನ್ನು ಪಡೆಯುತ್ತಿದ್ದುದು.
ಅವನ ಎಲ್ಲ ದುಗುಡಗಳ ಕೇಂದ್ರದಲ್ಲೂ ಇದ್ದುದು ಮಾತ್ರ – ಅವನ ಅಕ್ಕಯ್ಯ. ಅಕ್ಕಯ್ಯನ ಬಗ್ಗೆ ಅವನಿಗಿದ್ದ ಅಕ್ಕರೆ. ಈ ಗಹನ ಗಂಭೀರ ದರ್ಪದ ಶ್ರೀನಿವಾಸ ಅವಳು ನೆಕ್ಕಿ ಬೆಳೆಸಿದ್ದ ಕರು ಎಂದು ಅವನು ಹೇಳಿಕೊಳ್ಳಲು ನಾಚಿದರೂ ನನಗೆ ಮೊದಲಿನಿಂದ ಗುಮಾನಿ, ಇರಲಿ.
ಅಕ್ಕಯ್ಯ ಬಾಲ್ಯದಲ್ಲಿ ಯಾರಿಗೋ ಮದುವೆ ಮಾಡಿ ಅವಳಿಗೊಂದು “ವೈಯಕ್ತಿಕ’ ಸಫಲತೆಯ ಮಾರ್ಗವನ್ನೇ ಇಲ್ಲದಂತೆ ಮಾಡಿದ್ದ ತನ್ನ ಹಿರಿಯ ಮತಶ್ರದ್ಧೆ ಅವನ ಕಡುಕೋಪದ ವಸ್ತು. ಇಂಥ ತನ್ನ ಹಿರಿಯರಿಗೂ ಭಾವುಕವಾಗಿ ಸಾಧ್ಯವಿದ್ದ ಔದಾರ್ಯ ಹೊರಬರದಂತೆ ಶಾಸ್ತ್ರಗಳಿಂದಾಗಿ ಅವರಲ್ಲಿ ಹುಟ್ಟಿಕೊಂಡ ಮತಿದಾಸ್ಯ ಅವನ ವಿಶ್ಲೇಷಷಣೆಯ ಡಯಲೆಕ್ಟಿಕ್ಸ್. ಈ ಪರಿಯಾದ ಈಗ ಎಲ್ಲರಿಗೂ ಗೊತ್ತಿರುವ ಆಲೋಚನಾ ಸರಣೀಯ ನಮಗೆ ಆಗ ಹುರುಪಿನ, ಬಿಡುಗಡೆಯ ವಿಚಾರವಾಗಿತ್ತು. ಈ ಆಲೋಚನಾಕ್ರಮದ ಕೇಂದ್ರದಲ್ಲಿ ತಲೆ ಬೋಳಿಸಿಕೊಂಡ ವಿಧವೆಯೋ, ವರದಕ್ಷಿಣೆ ಸಾಕಷ್ಟು ಸಿಗಲಿಲ್ಲವೆಂದು ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು ಸಾಯಿಸಿದ ಮುಗ್ಧ ವಧುವೋ ಇದ್ದೇ ಇರುತ್ತಿದ್ದಳು. ಅಥವಾ ನಾವು ಎಂಎ ತಲುಪಿದ ದಿನಗಳಲ್ಲಿ ಕೆನ್ನೆ ಬತ್ತಿದ ಗೇಣಿದಾರ ಅಥವಾ ಕಂಬಳಿ ಹೊದ್ದ ಹರಿಜನ ಅಥವಾ ಚೀನಾದ ಕ್ರಾಂತಿ.
೪
ಹಾಗೆ ನಾವು ರೋಷದಿಂದಲೂ ಕ್ರಾಂತಿಯ ಭರವಸೆಯಿಂದಲೂ ಕುದಿದು ಉಕ್ಕುತ್ತಿದ್ದ ಕಾಲೇಜಿನ ದಿನಗಳಲ್ಲಿ ಶ್ರೀನಿವಾಸ ಒಂದು ‘ಅಬ್ಸರ್ಡ್’ ಘಟನೆಯನ್ನು ಹೇಳಿ ನಾನು ಒಂದು ಕಥೆ ಬರೆಯುವಂತೆ ಮಾಡಿದ್ದ. ಆ ಕಥೆ ಹೇಗಿತ್ತು:
ಶಿವಮೊಗ್ಗದ ಪ್ರಸಿದ್ಧ ಗೋಪಿ ಹೋಟೇಲಿನ ಮುಂಭಾಗದಲ್ಲಿ ಬೀಡ ಸಿಗರೇಟುಗಳ ಅಂಗಡಿ ಇಟ್ಟುಕೊಂಡವನೊಬ್ಬ ಅಕ್ಕಯ್ಯನಿಗೆ ಬರೆ ಹಾಕಿ ಅಟ್ಟಿದ ಗಂಡನೆಂಬುದು ಶ್ರೀನಿವಾಸನ ಅಣ್ಣನಿಗೆ ಹೇಗೋ ಗೊತ್ತಾಗಿಬಿಟ್ಟಿತ್ತು. ಅವನು ಪೊಲೀಸರ ಸಹಾಯದಿಂದ ಅವನನ್ನು ಹಿಡಿಸಿ, ಠಾಣೆಗೆ ಕರೆಸಿದ್ದ. ಅಲ್ಲಿ ಅಕ್ಕಯ್ಯನ ಗಂಡ ತುಟಿ ಪಿಟಕ್ಕೆನ್ನದೆ ಅಕ್ಕಯ್ಯನನ್ನು ತನ್ನ ಹೆಂಡತಿಯೆಂದು ಒಪ್ಪಿಕೊಂಡು, ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಸಿಕೊಳ್ಳಲು ರೆಡಿಯಾಗಿ ಹೊರಟುಬಿಟ್ಟರು. ಈ ಪ್ರಾಯಶ್ಚಿತ್ತಕ್ಕೆ ಕಾರಣ ಅವರ ಪಾಪದ ಭಾವನೆಯಾಗಿರಲಿಲ್ಲ. ಪ್ರಸ್ತ ಮಾಡಿಕೊಳ್ಳದಂತೆ ಹೆಂಡತಿಯನ್ನು ಬಿಟ್ಟವ ತಾನಾದ್ದರಿಂದಲೂ, ಬ್ರಾಹ್ಮಣನಾಗಿ ತನಗೆ ಸಲ್ಲಬೇಕಾದ ದಾನ ದಕ್ಷಿಣೆಯನ್ನು ಸ್ವೀಕರಿಸಲು ಹಕ್ಕಿಲ್ಲದವನಾಗಿ ಬಿಟ್ಟಿದ್ದರಿಂದಲೂ, ಅವನಿಗೆ ಆ ಶಾಸ್ತ್ರಗಳ ಪ್ರಕಾರ ಆಗಬೇಕಾದ್ದೆಲ್ಲ ಸಾಂಗವಾಗಿ ಆಗಬೇಕಾಗಿತ್ತು. ಅಷ್ಟೆ. ಅಕ್ಕಯ್ಯ ಮುಟ್ಟು ನಿಂತವಳು, ಅವಳ ಈ ಬಿಕನಾಸಿ ಗಂಡ ಹಲ್ಲು ಕಳೆದುಕೊಂಡವ, ಬೀಡಿ ಸೇದುತ್ತ ಕೆಮ್ಮುವವ, ಪ್ರತೀ ಸಂಜೆ ಒಂದು ಬಾಟಲಿಯಾದರೂ ಸಾರಾಯಿ ಕುಡಿದು ಮುಖ ಊದಿಸಿಕೊಂಡವ. ಆದರೂ ಪರವಾಯಿರಲಿಲ್ಲ. ಶಾಸ್ತ್ರದ ಪ್ರಕಾರ ಆಗಿರಬೇಕಾದ ಪ್ರಸ್ತ ಆಗಬೇಕಾಗಿತ್ತು.
ಈ ಸುಡುಗಾಡು ಬ್ರಾಹ್ಮಣ ಕಾರು ಹತ್ತಿ ಮನೆಗೆ ಬರುವಾಗ ದಾರಿಯಲ್ಲಿ ಕೊಡಬೇಕಾದ ಬಂಗಾರ ಕೊಡಲಿಲ್ಲವೆಂದು ತನ್ನ ಗತಿಸಿದ “ಮಾವಯ್ಯ’ನನ್ನು ನಿಂದಿಸಿದ್ದ. ದೇವಸ್ಥಾನದಲ್ಲಿ ಎಣ್ಣೆಯಿಟ್ಟು ತಟ್ಟೆಯಲ್ಲಿ ಹೆಂಡತಿಯ ಮುಖ ನೋಡಿದ್ದ. ಮತ್ತೆ ಜರಿಪೇಟವನ್ನೂ ಬಾಸಿಂಗವನ್ನೂ ತೊಟ್ಟು, ಅಗ್ನಿಸಾಕ್ಷಿಯಾಗಿ ಅಕ್ಕಯ್ಯನ ಜೊತೆ ಪ್ರಸ್ತ ಮಾಡಿಸಿಕೊಂಡ ರಾತ್ರಿ ಹೆಂಡತಿಯ ಪಕ್ಕದಲ್ಲೂ ಮಲಗಿದ್ದ. ಆದರೆ ಅವಳು ಒದ್ದುಕೊಂಡು ಎದ್ದುಬಿಟ್ಟಿದ್ದಳು. ತನ್ನ ತಮ್ಮಂದಿರ ಎದುರು ಸೆರಗಿನಿಂದ ಬಾಯಿ ಮುಚ್ಚಿಕೊಂಡು ನಾಚುತ್ತ “ಅವರು ಎಲ್ಲೆಲ್ಲೂ ಮಟುಟಲು ಬಂದರು. ಹೇಸಿಗೆಯಾಗಿ ಬಿಟ್ಟಿತು’ ಎಂದಿದ್ದಳು.
ರಿಚುಯಲ್ಗಳಲ್ಲಿ ಬದುಕುವ ಬ್ರಾಹ್ಮಣರ ಬಗ್ಗೆ ಈ ಘಟನೆ ಕ್ರೂರವಾದ ಟೀಕೆಯಾಗುವಂತೆ ನನಗದನ್ನು ಹೇಳಿದ್ದ. ನಾನು ಬರೆದ ಕಥೆಯಲ್ಲಿ ನುಸುಳಿಬಿಟ್ಟಿದ್ದ ಹಾಸ್ಯ ಅವನಿಗೆ ಆ ದಿನಗಳಲ್ಲಿ ಇಷ್ಟವಾಗಿರಲಿಲ್ಲ.
೫
ಬಹಳ ವರ್ಷಗಳ ನಂತರ ಫಿಲಿಡೆಲ್ಫಿಯಾದಲ್ಲಿ ಅವನನ್ನು ನೋಡಿದಾಗ ನನಗೆ ಅವನಿಂದಾದ ಅನುಭವವನ್ನು ಮೇಲೆ ಹೇಳಿದ ಘಟನೆಗಳ ಹಿನ್ನೆಲೆಯಲ್ಲಿ ನೀವು ಓದಿಕೊಳ್ಳಬೇಕು. ತನ್ನ ಮಡಿವಂತ ಆವರಣದ ಬಗ್ಗೆ ಕಟುವಾದ ವಿಮರ್ಶಕ ಅವನಲ್ಲದೇ ಇದ್ದಿದ್ದರೆ, ಕುಟುಂಬದ ಆಸ್ತಿಯಲ್ಲಿ ಪಾಲುದಾರನಾಗಿ ಊರಿನಲ್ಲೇ ಕಾರಿಟ್ಟುಕೊಂಡು, ನಿತ್ಯ ಸ್ಕಾಚ್ ವ್ಹಿಸ್ಕಿಯನ್ನು ಕುಡಿದುಕೊಂಡು, ಊರಿನ ಶ್ರೀಮಂತರಾದ ಇತರ ಜಾತಿಯವರ ಜೊತೆ ಚಿಕನ್ ತಿಂದುಕೊಂಡೂ ಮಹರಾಯ ಇರಬಹುದಾಗಿತ್ತು. ಸಊಟಿನ ಒಳಗೆ ಜನಿವಾರವನ್ನು ಹಾಕಿಕೊಂಡಿರಬಹುದಾಗಿತ್ತು. ಯಾರೂ ಅದನ್ನು ಕ್ಯಾರೇ ಎಂದು ಪ್ರಶ್ನಿಸುತ್ತಿರಲಿಲ್ಲ. ನಾವೆಲ್ಲರೂ ಮಡಿವಂತಿಕೆ ಕಳಚಿಕೊಂಡು ಸಡಿಲವಾಗುತ್ತಿರುವುದು ಹೀಗೆ ತಾನೆ?
ಆದರೆ ಶ್ರೀನಿವಾಸ ಹಾಗೆ ಬದುಕುವುದು ‘ಬ್ಯಾಡ್ ಫೈತ್’ ಎನ್ನಿಸಿ, ತನ್ನ ಬಂಡಾಯ ‘ಅಥೆಂಟಿಕ್’ ಆಗಬೇಕೆಂದು ಮಾಂಸಹಾರಿಯಾದ. ಒಬ್ಬ ಪಂಜಾಬಿ ವೈದ್ಯಳನ್ನು ಪ್ರೇಮವಿವಾಹವಾದ. ಹೆಚ್ಚು ಓದದ ಅವನ ಅಣ್ಣಂದಿರ ಪ್ರತಿಭಟನೆಗೆ ಅವನು ಯಾವ ಬೆಲೆಯನ್ನೂ ಕೊಡಲಿಲ್ಲ. ಅವನ ಅಕ್ಕಯ್ಯ ಮಾತ್ರ ಅದನ್ನು ಸರಿಯೆನ್ನಲಿಲ್ಲ, ತಪ್ಪೆನ್ನಲಿಲ್ಲ. ತನ್ನಲ್ಲಿದ್ದ ಅಲ್ಪಸ್ವಲ್ಪ ಒಡವೆಗಳನ್ನು ಉಡುಗೊರೆಯೆಂದು ತಾನು ಕಾಣದ ಶ್ರೀನಿವಾಸನ ಹೆಂಡತಿಗೆ ಕಳುಹಿಸಿಕೊಟ್ಟಿದ್ದಳು. ತನ್ನ ತಾಯಿಯ ಕಾಳುಂಗುರವನ್ನೂ ಕಳುಹಿಸಲು ಅವಳು ಮರೆತಿರಲಿಲ್ಲ. ಆದರೆ ದಪ್ಪನೆಯ ಮೂರು ಸುತ್ತಿನ ಬೆಳ್ಳಿಯ ಈ ಉಂಗುರುಗಳನ್ನು ಶೂ ಹಾಕು ಡಾಕ್ಟರ್ ಧರಿಸುವುದು ಸಾಧ್ಯವೇ? ಅವಳನ್ನು ಕಾಣದೆಯೇ ಅಕ್ಕಯ್ಯ ಸತ್ತಿದ್ದಳು.
ಇವೆಲ್ಲ ನನ್ನ ಊಹೆ: ತನ್ನ ಆಧುನಿಕ ಹೆಂಡತಿಯನ್ನು ತನ್ನ ಪ್ರೀತಿಯ ಅಕ್ಕಯ್ಯನಿಗೂ ಶ್ರೀನಿವಾಸ ಭೇಟಿ ಮಾಡಿಸಿರಲಿಲ್ಲ. ಕಾರಣ, ದೆಹಲಿಯಲ್ಲಿ ಬೆಳೆದ ಹೆಂಡತಿಗೆ ತನ್ನ ಮನೆಯ ವಾತಾವರಣ ಒಗ್ಗದೇ ಹೋದೀತೆಂದು ಮತ್ತೆ ಇಂಥ ಬಂಡಾಯದ ಪ್ರಕರಣಗಳಲ್ಲಿ ಯಥಾಪ್ರಕಾರ ಆಗುವಂತೆ ತನ್ನ ಪಾಲುಕೇಳಲು ಶ್ರೀನಿವಾಸ ಬರಲಿಲ್ಲ ಎಂಬ ಸಮಾಧಾನದಲ್ಲಿ ಖದೀಮ ವ್ಯವಹಾರಜ್ಞರಾದ ಅವನ ಅಣ್ಣಂದಿರು ಶ್ರೀನಿವಾಸನ ಖ್ಯಾತಿಯನ್ನು ಎಲ್ಲರ ಎದುರು ಹಿಗ್ಗಿ ಹೊಗಳಲು ತೊಡಗಿದ್ದರು. ಹೀಗೆ ಎಲ್ಲ ಸರಿಹೋದಂತೆ ಕಾಣತೊಡಗಿತ್ತು.
ಪಂಜಾಬಿ ಹುಡಿಗಿಯನ್ನು ಮದುವೆಯಾದ ಮೇಲೆ ಶ್ರೀನಿವಾ ತನ್ನ ಭಾಷೆಯಿಂದ ದೂರವಾದ. ತನ್ನ ಮನೆಯಿಂದ ದೂರವಾದ, ತನ್ನ ಬಳಗದಿಂದಲೂ ತನ್ನ ಜನರಿಂದಲೂ ದೂರವಾದ, ಹೀಗೆ ದೂರವಾಗಿ ಬಿಟ್ಟ ಮೇಲೆ ದೆಹಲಿಯಾದರೇನು, ತೀರ್ಥಹಳ್ಳಿಯಾದರೇನು, ಫಿಲಿಡೆಲ್ಫಿಯಾ ಆದರೇನು? ಎಲ್ಲ ಒಂದೇ ಆಗಿಬಿಟ್ಟು ಫಿಲಿಡೆಲ್ಫಿಯಾಕ್ಕೆ ಹೋಗಿ ನೆಲೆಸಿದ; ಹೆಂಡತಿ ಬಹಳ ದೊಡ್ಡ ವೈದ್ಯೆಯಾಗಿ ಬಿಟ್ಟು, ತನ್ನ ದುಡಿಮೆಗೆ ಅಡ್ಡಿಯಾಗದಂತೆ ಒಂದೇ ಮಗಳ ತಾಯಿಯಾಗಿ, ನಾಲ್ಕು ಬೆಡ್ ರೂಮ್ ಒಂದು ಈಜುಕೊಳವಿರುವ ಭಾರಿ ಬಂಗಲೆಯನ್ನು ಇಟ್ಟಿಗೆಯಲ್ಲಿಯೇ ಕಟ್ಟಿಸಿಕೊಂಡು ಮೂವರೂ ನಿರಾತಂಕವಾಗಿ ವಾಸವಾಗಿರುವುದು ಸಾಧ್ಯವಾಯಿತು.
ಶ್ರೀನಿವಾಸನೂ ಪ್ರೊಫೆಸರ್ ಆಗಿ ಚೆನ್ನಾಗಿಯೇ ಸಂಪಾದಿಸುತ್ತಾನೆ. ಊರು ಬಿಟ್ಟು ಬರಬೇಕಾಗಿ ಬಂದ ಸಣ್ಣ ಕೊರಗಿನಲ್ಲಿ ಅವನು ಇನ್ನಷ್ಟು ಸೂಕ್ಷ್ಮ ಭಾವನೆಯವನಾಗಿ ಬೆಳೆದಿದ್ದಾನೆ. ಈ ಸೂಕ್ಷ್ಮಜ್ಞತೆ ಅವನ ಬರವಣಿಗೆಗೂ ಆಲೋಚನೆಗಳಿಗೂ ಒಂದಿಷ್ಟು ಹೊಸ ರುಚಿಯನ್ನೂ ಮೊನಚನ್ನೂ ತಂದಿದೆ. ಅವುಗಳಿಲ್ಲದಿದ್ದರೆ ಅಮೆರಿಕಾದಲ್ಲಿ ಅವನನ್ನು ಯಾರು ಕ್ಯಾರೆ ಅಂದಾರು, ಹೇಳಿ.
ಶ್ರೀನಿವಾಸನೂ ಹೃದಯಹೀನ ಎಂದು ನಾನು ಜರೆಯುತ್ತಿಲ್ಲ. ನನ್ನ ಮಾತಿನಲ್ಲಿ ನನ್ನ ಸ್ವಭಾವದಿಂದ ಇಣುಕುವ ಕೊಂಕನ್ನು ಓದುಗರು ಕ್ಷಮಿಸಬೇಕು. ಪಾಪ ಅವನ ಹೆಂಡತಿಗೆ ಮಾತ್ರ ಅಷ್ಟು ಬಿಡುವಿಲ್ಲ. ಇದ್ದಾಗ ಅವಳು ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಡುವ ಅವಳ ಸೋದರರನ್ನು ನೋಡಿ ಬರಬೇಕಾಗುತ್ತದೆ. ಹೆಚ್ಚು ಸಮಯವಿದ್ದಾಗ ದೆಹಲಿಗೇ ಅಂಟಿಕೊಂಡುಬಿಟ್ಟಿದ್ದ ಅವಳ ಮುದಿ ತಾಯಿ, ತಂದೆಯರ ಜೊತೆ ಇರಲೇಬೇಕಲ್ಲವೆ? ಅವರವರಿಗೆ ಅವರವರ ಕಷ್ಟಸುಖ ಇದ್ದೇ ಇರುತ್ತೆ ತಾನೆ?
ಒಮ್ಮೆ ಮಾತ್ರ ಶ್ರೀನಿವಾಸ ತನ್ನ ಹದಿನೈದು ವರ್ಷಗಳ ಮಗಳನ್ನು ತೀರ್ಥಹಳ್ಳಿ ಬಳಿಯ ಅಗಾಧವಾದ ಕತ್ತಲೆ ಕತ್ತಲೆಯ ಹೆಂಚಿನ ಹಳ್ಳಿ ಮನೆಗೆ ಕರೆದುಕೊಂಡು ಹೋಗಿ ಖಿನ್ನವಾಗಿ ಬಿಟ್ಟಿದ್ದ.
ಅಕ್ಕಯ್ಯನ್ನ ಪ್ರೀತಿಗೆ ಮತ್ತಿ ಸೊಪ್ಪಿನ ಲೋಳಿ ಮತ್ತು ಸಈಗೆ ಪುಡಿ ಮಿಶ್ರಣದಿಂದ ಎರೆಸಿಕೊಳ್ಳಬೇಕಾಗಿ ಬಂದು, ಆಮೇಲೆ ಪತ್ರಡೆ ತಿನ್ನಬೇಕಾಗಿ ಬಂದು, ಹೆಂಗಸರ ಜೊತೆ ನಡುಮೆನ ಬಿಟ್ಟುಬಾರದಂತೆ ಒಳಗೇ ಇರಬೇಕಗಿ ಬಂದು ಫಿಲಿಡೆಲ್ಫಿಯಾದ ಈ ಟೀನೇಜರ್ ಹುಡುಗಿ ಇಂಗ್ಲಿಷಿನಲ್ಲಿ ಡ್ಯಾಡಿಯ ಜೊತೆ ರಾದ್ಧಾಂತ ಮಾಡಿದ್ದಳು. ಅಕ್ಕಯ್ಯನೋ ಪಾಪ, ತನ್ನ ತಮ್ಮ ಮಗಳ ಅಸ್ಖಲಿತ ಇಂಗ್ಲಿಷಿನಿಂದ ರೋಮಾಂಚನಪಟಿದ್ದಳು. ಮತ್ತೆ ತನಗಾದ ಖುಷಿಯಲ್ಲಿ ಇದೇನು ಹಟದ ಹುಡುಗಿಯಪ್ಪ, ಎಲ್ಲ ಅವಳ ಅಪ್ಪನ ಹಾಗೆಯೇ ಎಂದುಕೊಂಡು ಅವಳ ತಲೆಯನ್ನು ತೆಂಗಿನ ಎಣ್ಣೆ ಹಾಕಿ ಬಾಚಲು ಹೋಗಿ, ಕೆಕ್ಕರಿಸಿದ ಕಣ್ಣುಗಳ ಸಿಟ್ಟಿನ ಮೂತಿವಳಿಂದ ‘ನೋಪ್ಲೀಸ್, ಎಕ್ಸ್ಯೂಮಿ ಎನ್ನಿಸಿಕೊಂಡಿದ್ದಳು. ಅಕ್ಕಯ್ಯ ಪಾಪ, ಬೆಳಗಾಗುತ್ತಲೇ ಎದ್ದು ಇಬ್ಬನಿಯಲ್ಲಿ ತೊಯ್ದಿದ್ದ ದುಂಡು ಮಲ್ಲಿಗೆಯನ್ನು ಬಾಳೆನಾರಿನಲ್ಲಿ ತಮ್ಮ ಮಗಳು ಹೆರಳು ಹಾಕಿದ ತಲೆಗೆಂದು ಕಟ್ಟಿಟ್ಟಿದ್ದಳು. ತಬ್ಬಿಬ್ಬಾಗಿಬಿಟ್ಟಿದ್ದ ಅಕ್ಕಯ್ಯ ಯಾರಿಗೂ ತುಟಿಪಿಟಿಕ್ಕೆನ್ನದೆ ದುಂಡು ಮಲ್ಲಿಗೆಯ ಸರವನ್ನು ಏನು ಮಾಡುವುದು ತೋಚದೆ ದೇವರಿಗೆ ಮುಡಿಸಿದ್ದಳು.
೬
ಒಂದು ವಆರದ ಮುಂಚೆ ಹೇಳಿದ್ದರಿಂದ ಶ್ರೀನಿವಾಸನೂ ಅವನ ಹೆಂಡತಿಯೂ ಒಂದಿಡೀ ದಿನ (ಹೆಂಡತಿ ಸಂಜೆಯ ತನಕ) ನನಗಾಗಿ ಬಿಡುವುದ ಮಾಡಿಕೊಂಡಿದ್ದರು. ಏರ್ಪೋರ್ಟಿಗೆ ಬಂದು ಕಾರಿನಲ್ಲಿ ತಮ್ಮ ಮನೆಗೆ ಕರೆದೊಯ್ದಿದ್ದರು. ಸಂಜೆಯಾದ ಮೇಲೆ ನನಗೇನುಬೇಕೆಂದು ಸಂಪ್ರದಾಯಕ್ಕಾಗಿ ಕೇಳಿ, ಮೊದಲಿನಿಂದ ನನ್ನ ರುಚಿಗಳನ್ನು ಅರಿತಿದ್ದ ಗೆಳೆಯ ಸ್ಕಾಚ್ ವಿಸ್ಕಿಯನ್ನು ಸುರಿದು, ಅದರಲ್ಲಿ ಐಸ್ಕ್ಯೂಬ್ ಹಾಕಿ ಕುಡಿಯಲು ಕೊಟ್ಟಿದ್ದ. “ಸಂಜೆ ಸಂಧ್ಯಾವಂದನೆಯಲ್ಲಿ, ಗೋಧೂಳಿ ಲಗ್ನದಲ್ಲಿ, ಪಕ್ಷಿ ಸಂಕುಲ ತಮ್ಮ ಗೂಡುಗಳನ್ನು ತಲುಪುತ್ತಿರಲಾಗಿ ಯಾವ ನಾಗರಿಕ ತಾನೇ ಇದಲ್ಲದೆ ಬೇರೆ ಏನು ಕುಡಿದಾನು?” ಎಂದು, ನಮ್ಮ ಹಿಂದಿನ ಸಲಿಗೆ ನೆನಪಿಸಲು ಯಕ್ಷಗಾನದ ಪಾತ್ರದಂತೆ ಮಾತಾಡಿ ಬಡ್ಡಿಮಗ – ತಾನೇನೂ ಬದಲಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾ ತನಗೂ ಸ್ಕಾಚ್ ಸುರಿದುಕೊಂಡು ನನ್ನೆದುರು ಸೋಫಾದಲ್ಲಿ ಕೂತ. ಬಟ್ಟಲನ್ನೆತ್ತಿ ಶಿವಶಿವಾ ಎಂದ.
ನಾನು ಅವನ ಮನೆಯನ್ನೆಲ್ಲಾ ನೋಡಿದೆ. ಎಲ್ಲ ಮನೆಗಳಂತೆ ಅದ್ದೂರಿಯ ಇನ್ನೊಂದು ಮನೆ. ಡೆಕೋರ್ ಮಾತ್ರ ಬೇರೆ. ತಮ್ಮ ಅನ್ಯತೆ ಸಾರಿಕೊಳ್ಳಲು ದಂಪತಿಗಳು ಇಟಾಲಿಯನ್ ಫರ್ನಿಚರನ್ನೂ ಮೆಕ್ಸಿಕನ್ ಬೊಂಬೆಗಳನ್ನೂ ಕೂರುವ ಹಜಾರದಲ್ಲಿಟ್ಟಿದ್ದರು. ಶ್ರೀನಿವಾಸನ ಲೈಬ್ರರಿ ಮಾತ್ರ ನಮ್ಮೂರಿನ ಚಿತ್ರಗಳನ್ನು ಖಾಲಿಯಿದ್ದ ಗೋಡೆಯ ಮೇಲೆಲ್ಲ ಪಡೆದಿತ್ತು – ಗಣೇಶ ಬೀಡಿ ಕ್ಯಾಲೆಂಡರ್ ಸಹಿತವಾಗಿ, ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು ಗೋಡೆಯ ಮೇಲೆ ಅವನು ಬರೆಸಿದ್ದ ದಸರಾ ಮೆರವಣಿಗೆಯ ಚಿತ್ರ. ಮೈಸೂರಿನ ಈ ಕಾಲದ ಮೆರವಣಿಗೆಯಲ್ಲಿ ಮಹಾರಾಜರು ಅಂಬಾರಿ ಮೇಲೆ ಕೂತಿರುವ ದೃಶ್ಯ ಕಾಣದಿದ್ದರೂ ಶ್ರೀನಿವಾಸನ ಲೈಬ್ರರಿಯ ಗೋಡೆಯ ಮೇಲೆ ಮಾತ್ರ ಅಂಬಾರಿ ರಾಜನಿಂದಲೇ ಅಲಂಕೃತವಾಗಿತ್ತು. ಇನ್ನೊಂದೆಡೆ ಒಂದು ಅಡಿಕೆ ತೋಟವಿತ್ತು. ಸಮೃದ್ಧವಾದ ತೋಟ, ಕೊಳೆರೋಗ ತಟ್ಟದ ತೋಟ.
ಇವೆಲ್ಲ ಅಷ್ಟು ಮುಖ್ಯ ವಿವರಗಳಲ್ಲ, ವಿಶೇಷವಾಗಿ ನನ್ನ ಗಮನ ಸೆಳೆದಿದ್ದೆಂದರೆ ಬ್ಲೇಕನ ಚಿತ್ರವೊಂದನ್ನು ಅನುಸರಿಸಿ ಶ್ರೀನಿವಾಸನೇ ಬಿಡಿಸಿದ್ದ ಒಂದು ಚಿತ್ರ. “ಪ್ರಾಯಶಃ ನಿನಗದು ಸೆಂಟಿಮೆಂಟಲ್ ಎನ್ನಿಸೀತು” ಎಂದು ಶ್ರೀನಿವಾಸ ನನ್ನ ಪಕ್ಕ ನಿಂತು ನೋಡಿದ. ಚಿತ್ರ ತೀರಾ ಸಾಧಾರಣವಾಗಿದೆ ಎಂದು ನನಗನ್ನಿಸಿದ್ದು ಗೆಳೆಯನಿಗೆ ಗೊತ್ತಾಗದೆ ಹೋಗಲಿಲ್ಲ. “ಚಿತ್ರವಾಗಿ ಚೆನ್ನಾಗಿರೋದು ನನಗೆ ಮುಖ್ಯವಲ್ಲ” ಎಂದು ಶ್ರೀನಿವಾಸ ಹೇಳಿದ. ನಾನು ಒಪ್ಪಿಕೊಂಡು ನೋಡಿದೆ – ಗೆಳೆಯನ ಪ್ರಯತ್ನವೆಂದು, ತನ್ನ ಕಣ್ಣಿಗೆಂದು ಮಾತ್ರ ಚಿತ್ರಿಸಿಕೊಂಡದ್ದೆಂದು, ಪ್ರಾಯಶಃ ನನ್ನ ಕಣ್ಣಿಗೆ ಮಾತ್ರ ಅವನು ತೋರಿಸುತ್ತಿದ್ದುದೆಂದು.
ದಪ್ಪವಾದ ಮೂಗಿನ ಸೊಳ್ಳೆಯ ಅವನ ಗುಜ್ಜಾರಿ ಅಕ್ಕಯ್ಯ ತನ್ನ ಕೂದಲನ್ನು ಕೆದರಿಕೊಂಡು ಆಕಾಶಕ್ಕೇರುತ್ತಿದ್ದಾಳೆ. ಚಪ್ಪಾಳೆ ತಟ್ಟುವಂತೆ ಕೈಗಳನ್ನು ಬೀಸುತ್ತಿದ್ದಾಲೆ. ಅವಳ ಕಣ್ಣುಗಳು ಆನಂದದಲ್ಲಿ ಆಕಾಶಕ್ಕೆತ್ತಿ ತನ್ಮಯವಾಗಿವೆ. ಅವಳ ತೂಕದ ದೇಹ ಎರಡು ರೆಕ್ಕೆಗಳಿಂದಾಗಿ ಹಗುರವಾದಂತೆ ಎನ್ನಿಸುತ್ತಿದೆ.
೭
“ಇದು ನನ್ನ ಭಾವನೆ ಮಾತ್ರವಲ್ಲ, ಸಾಯುವಾಗ ನನ್ನ ಅಕ್ಕಯ್ಯನೂ ಹೀಗೇ ತಾನು ಹಕ್ಕಿಯಂತಾಗಿ ಏರಿಬಿಡುವೆನೆಂದು ತಿಳಿದಿದ್ದಳು” ಎಂದು ಮಾತಾಡತೊಡಗಿದ. ಸಾರಾಂಶದಲ್ಲಿ ಅವನು ಹೇಳಿದ್ದನ್ನು ಹೆಚ್ಚು ಕಡಿಮೆ ಅವನ ಮಾತಿನಲ್ಲೇ ನಿರೂಪಿಸುವೆ.
ಈಗ ಅವನು ಒಟ್ಟು ಮಾತಿನಲ್ಲಿ ಕಂಡ ಮೂರು ಉದ್ದೇಶಗಳ ಬಗ್ಗೆ ಮೊದಲು ಹೇಳುವೆ. ಮೊದಲನೆಯದು ನಾನು ಬಲ್ಲವಳಾಗಿದ್ದ ಅಕ್ಕಯ್ಯನಲ್ಲಿ ನಾನಾಗಲೀ ಅವನಾಗಲೀ ಕಾಣದೇ ಇದ್ದ ಅಂಶವೊಂದನ್ನು ಹೇಳುವುದು. ಎರಡನೆಯದು ತನ್ಮೂಲಕ ತನ್ನಲ್ಲಾಗುತ್ತಿದ್ದ ಮನಸ್ಸಿನ ಪರಿವರ್ತನೆ ಬಗ್ಗೆ ಹೇಳುವುದು. ಮೂರನೆಯದು ಈ ಎರಡರ ಮೂಲಕ ತಾನು ಅಲ್ಪಸ್ವಲ್ಪವಾದರೂ ಕಾರಣನಾಗಿ ನನ್ನಲ್ಲಿ ಬೆಳೆಸಿದ್ದ ಸಾಹಿತ್ಯ ಪ್ರಜ್ಞೆಯ ತಾತ್ವಿಕತೆಯನ್ನು ಪ್ರಶ್ನಿಸುವುದು.
‘ಅಕ್ಕಯ್ಯನ ಬಗ್ಗೆ ನಾನು ವಿಚಾರ ಮಾಡಲು ತೊಡಗಿದ್ದು ಮ್ಯಾಂಚೆಸ್ಟರಿನಲ್ಲಿ’ ಎಂದು ಶ್ರೀನಿವಾಸ ಮಾತನಾಡಲು ಶುರು ಮಾಡಿದ. ಶ್ರೀನಿವಾಸ ಪಿ ಎಚ್ ಡಿ ಮಾಡಿ ಮುಗಿಸಿದ ಮೇಲೆ ಕೆಲವು ಕಾಲ ಸ್ಕಾಲರ್ ಷಿಪ್ ಹಣ ಸಾಲದೇ ಬಂದದ್ದರಿಂದ ಸೆಕೆಂಡರಿ ಸ್ಕೂಲ್ ಒಂದರಲ್ಲಿ ಸಪ್ಲೈ ಟೀಚರಾಗಿ ಕೆಲಸ ಮಾಡುತ್ತಿದ್ದ. ಆಗ ಅವನಿಗೊಬ್ಬ ಸ್ಲಮ್ಮಿನಲ್ಲಿ ವಾಸಿಸುತ್ತಿದ್ದ ಐರಿಷ್ ಹೆಂಗಸಿನ ಮಗನೊಬ್ಬ ವಿದ್ಯಾರ್ಥಿಯಾಗಿದ್ದ. ಗುಂಗುರು ಕೂದಲಿನ ಬಲು ಮುದ್ದಾದ ಹುಡುಗ ಅವನು. ಸ್ಪಷ್ಟವಾಗಿ ಅವನು ಮಾತನಾಡಲಾರೆ. ಸಾಮಾನ್ಯ ಲೆಕ್ಕವನ್ನೂ ಮಾಡಲಾರ. ಆದರೆ ಅಪೂರ್ವ ತೇಜಸ್ಸಿನ ಚಿತ್ರಗಳನ್ನು ಆತ ಬಿಡಿಸುತ್ತಿದ್ದ. ಏನಾದರೂ ಪ್ರಶ್ನೆ ಕೇಳಿದರೆ ತುಂಬ ತಡವಾಗಿ ಇನ್ನೇನೋ ಉತ್ತರಕೊಟ್ಟು ಅರ್ಥಹೀನವಾಗಿ, ಆದರೆ ದಿವ್ಯವಾಗಿ, ನಗುತ್ತಿದ್ದ. “ಐರ್ಲ್ಯಾಂಡ್ ಎಲ್ಲಿದೆ?” ಎಂದರೆ “ಮರದ ಮೇಲೊಂದು ಕಪ್ಪು ಹಕ್ಕಿ ಕೂತು ಕೆಂಪು ಹಣ್ಣನ್ನು ತಿನ್ನುತ್ತಿದೆ” ಎಂದು ಕೈಹಿಡಿದು ಕರೆದುಕೊಂಡು ಹೋಗಿ ಸ್ಕೂಲಿನ ಹೊರಗಿನ ಕಾಂಪೌಂಡ್ನಲ್ಲಿ ಬೆಳೆದೊಂದು ಮರವನ್ನು ತೋರಿಸುತ್ತಿದ್ದ. ಮಧ್ಯಾಹ್ನ ಅವನಿಗೆ ಕೊಟ್ಟ ಹಾಲನ್ನು ಅರ್ಧ ಹಿಡಿದು, ತಟ್ಟೆಯಲ್ಲಿ ಇನ್ನರ್ಧಧಲ್ಲಿ ಹೊರಗೆ ಹಕ್ಕಿಗಳಿಗೆಂದು ಸುರಿದು, ಹಕ್ಕಿ ಬಂದು ಕುಡಿಯುವುದನ್ನು ತಣ್ಣಗೆ ನೋಡುತ್ತ ಕೂತೇ ಇದ್ದುಬಿಡುತ್ತಿದ್ದ.
ಇವನೊಬ್ಬ ಅಸಾಮಾನ್ಯ ಕರುಣೆಯ ಸ್ನೇಹಜೀವಿಯೆಂದು ಶ್ರೀನಿವಾಸನಿಗೆ ಅವನ ಮೇಲೆ ಪ್ರೀತಿ. ಆದರೆ ಸ್ಕೂಲಿನ ಹೆಡ್ಮಾಸ್ಟರು ಮಾತ್ರ ಅವನನ್ನು ಬೇರೊಂದು ಸ್ಪೆಶಲ್ ಸ್ಕೂಲಿಗೆ ಕಳಿಸಬೇಕು. ನೀನು ಕ್ಲಾಸ್ಟೀಚರಾದ್ದರಿಂದ ನಿನ್ನ ಸರ್ಟಿಫಿಕೇಟ್ ಬೇಕು ಎಂದು ನಿತ್ಯ ಪೀಡಿಸುತ್ತಿದ್ದರು. ಆ ಹುಡುಗನ ತಾಯಿ ನಿತ್ಯ ಬೆಳಿಗ್ಗೆ ಸ್ಕೂಲಿಗೆ ಮಗನನ್ನು ಬಿಡಲು ಬಂದವಳು, ‘ಇವನ ಅಪ್ಪ ಕುಡುಕ, ನನ್ನನ್ನು ಬಿಟ್ಟು ಹೋಗಿದ್ದಾನೆ. ನೀವು ನನ್ನ ಮಗನನ್ನು ಪೆದ್ದನೆಂದು ಸಾರಿ ಇನ್ನೊಂದು ಸ್ಕೂಲಿಗೆ ಕಳಿಸಿಬಿಟ್ಟರೆ ಅವನು ಜೀವನದುದ್ದಕ್ಕೂ ಪೆದ್ದನೆಂಬ ಹಣೆಪಟ್ಟಿ ಹಚ್ಚಿಕೊಂಡು ನರಳಬೇಕಾಗುತ್ತದೆ. ದಯಮಾಡಿ ಅವನಿಗೆ ಅಂಥ ಸರ್ಟಿಫಿಕೇಟ್ ಕೊಡಬೇಡಿ’ ಎಂದು ತನ್ನನ್ನು ಗೋಗರೆಯುತ್ತಿದ್ದಳು. ಶ್ರೀನಿವಾಸನ ಪ್ರಕಾರವೂ ಹುಡುಗನಲ್ಲಿ ಅಸಾಧಾರಣವಾದ ಸೂಕ್ಷ್ಮಜ್ಞತೆಯಿತ್ತು. ಪ್ರೀತಿಯಿತ್ತು. ಅವನು ಕಲಿಯುವುದು ನಿಧಾನವಾದರೆ ಏನಂತೆ ಎಂದು ಹೆಡ್ಮಾಸ್ಟರರ ಒತ್ತಾಯವನ್ನು ಅಸಡ್ಡೆಯಿಂದ ಕಂಡಿದ್ದ.
ಒಂದು ವಾರ ತಾನು ರಜೆಯಲ್ಲಿದ್ದಾಗ ಇನ್ನೊಬ್ಬ ಕ್ಲಾಸ್ ಟೀಚರಿಂದ ಅಂಥ ಸರ್ಟಿಫಿಕೇಟನ್ನು ಪಡೆದುಕೊಂಡು ಹೆಡ್ಮಾಸ್ಟರು ಆ ಹುಡುಗನನ್ನು ಸ್ಕೂಲಿನಿಂದ ಅಟ್ಟಿಬಿಟ್ಟಿದ್ದರು. ಅವರು ನಿಜವಾಗಿ ನಂಬಿದಂತೆ ಈ ಕಾರ್ಯ ಆ ಹುಡುಗನ ಹಿತದೃಷ್ಟಿಯಿಂದಲೇ ತೆಗೆದುಕೊಂಡುದಾಗಿತ್ತು.
ಅವತ್ತು ಶ್ರೀನಿವಾಸನಿಗೆ ಹೊಳೆದಿತ್ತು: ಪಾಶ್ಚಿಮಾತ್ಯರ ಕ್ಯಾಪಿಟಲಿಸ್ಟ್ ಎಫಿಶಿಯನ್ಸಿ ದೃಷ್ಟಿಯಿಂದ ಕಂಡಾಗ ಈ ಹುಡುಗನಂತೆಯೇ ತನ್ನ ಪ್ರೀತಿಯ ಅಕ್ಕಯ್ಯ ಸಹಿತ ಒಬ್ಬ ಬುದ್ಧಿ ಬೆಳೆಯದ ಪೆದ್ದಳೇ ಇರಬೇಕು. ಸ್ಪೆಶಲ್ ಕ್ಯಾಟೆಗರಿಯ ಹೆಂಗಸು ಅವಳಾದ್ದರಿಂದ ಅಂಥವರಿಗಾಗಿ ನಡೆಸುವ ಒಂದು ಕರುಣಾಶ್ರಮದಲ್ಲಿ ಅವಳು ಬಾಳಬೇಕಾಗಿ ಬರುತ್ತಿತ್ತು. ಪೈಪೋಟಿಯ ಜಗತ್ತಿನಲ್ಲಿ ನಿಲ್ಲಲಾರದವರು ನಾರ್ಮಲ್ ಅಲ್ಲ. ಆದ್ದರಿಂದ ಅಕ್ಕಯ್ಯನಾಗಲಿ, ಅಥವಾ ರಾಮಖೃಷ್ಣ ಪರಮಹಂಸರಾಗಲಿ, ಬಟ್ಟೆ ಬಿಚ್ಚಿ ಓಡಾಡಿದ ಅಕ್ಕಮಹಾದೇವಿಗಾಗಲಿ ಈ ಜಗತ್ತಿನಲ್ಲಿ ಜಾಗವಿಲ್ಲ. ಯಾಕೆಂದರೆ ಅವರು ನಾರ್ಮಲ್ ಅಲ್ಲ.
ಅಕ್ಕಯ್ಯ ಒಮ್ಮೆ ಬಸ್ ಹತ್ತಬೇಕಾಗಿ ಬಂದಾಗ ಮಗುವಿನಂತೆ ಹೆದರಿ ಹುಲ್ಲು ಬಣಬೆಯ ಹಿಂದೆ ಮುಚ್ಚಿ ಕೂತಿದ್ದಳು. ಆಮೇಲೆ ಮನೆಯ ಎಉದುರು ಒಂದು ಲಾರಿ ಬಂದಿತ್ತು. ಆಗಿ ಶ್ರೀನಿವಾಸ ಪ್ರೈಮರಿ ಸ್ಕೂಲ್ ಓದುತ್ತಿದ್ದ ಚಿಕ್ಕ ಹುಡುಗ. ಆದರೆ ಪೇಟೆಯಲ್ಲಿ ಓಡಾಡಿದವನಾದ್ದರಿಂದ ‘ಅಕ್ಕಯ್ಯ ಇದು ಲಾರಿ’ ಎಂದು ವಿವರಿಸಿದ್ದ. ಆದರೆ ಅವನು ಎಷ್ಟೇ ಪ್ರಯತ್ನಪಟ್ಟರೂ ಅಕ್ಕಯ್ಯನ ಹತ್ತಿ ‘ಲಾರಿ’ ಎನ್ನಿಸಲು ಸಾಧ್ಯವಾಗಿರಲಿಲ್ಲ. ಪ್ರತಿಶಾರಿಯೂ ಅಕ್ಕಯ್ಯ ‘ರ್ಯಾಲಿ’ ಎಂದು, ಕೂಡಲೇ ತನ್ನ ತಪ್ಪನ್ನರಿತು ಗೊಳ್ಳೆಂದು ನಗುವುದು. ಕೊನೆಯ ತನಕವೂ ಶ್ರೀನಿವಾಸನಿಗೆ ಅಕ್ಕಯ್ಯನ ಜೊತೆ ಇದೊಂದು ಆಟವಾಗಿಬಿಟ್ಟಿತ್ತು.
೮
ಅಕ್ಕಯ್ಯನ ಕಥೆ ಹೇಳುವ ಮುಖೇನ ಶ್ರೀನಿವಾಸನ ತನ್ನ ಧೀಮಂತತನದ ಕವಚಗಳನ್ನು ಕಳಚಿ, ನಿರಾಯುಧನಾಗಿ ನನಗೆ ತರೆದುಕೊಂಡಿದ್ದ. ಕೊನೆಕೊನೆಯಲ್ಲಿ ಬ್ಲೇಕನ್ನು ಅನುಸರಿಸಿ ಅವನು ಬರೆದ ಅಕ್ಕಯ್ಯನ ಚಿತ್ರದಂತೆಯೇ ಆಕ್ವರ್ಡಾಗಿತ್ತು ಅವನ ನಿರೂಪಣೆ (ಈ ‘ಆಕ್ವಡ್’ ಅವನದೇ ಶಬ್ದ). ಕನ್ನಡವನ್ನು ಇಡೀ ವರ್ಷ ಮಾತಾಡದೇ ಇದ್ದವನು ಆತ್ಮೀಯವಾಗಿ ಹೇಳಿಕೊಳ್ಳುವಾಗ ಕನ್ನಡ ಬಳಸುತ್ತ, ತನ್ನ ವಿಚಾರದ ಸ್ಥಿರತೆಯಲ್ಲಿ ಇಂಗ್ಲಿಷ್ ಬಳಸುತ್ತ ಮಾತಾಡುತ್ತ ಹೋದ ಕ್ರಮವೇ ಅವನು ಹೇಳಬೇಕೆಂದಿದ್ದುದನ್ನು ನನಗೆ ಹೇಳಿತ್ತು (ಅಲ್ಲದೆ ಅಕ್ಕಯ್ಯನನ್ನು ಕೆಲವೊಮ್ಮೆ ಬಹುವಚನದಿಂದಲೂ ಕೆಲವೊಮ್ಮೆ ಏಕವಚನದಿಂದಲೂ ಅವನು ನಿರ್ವಚಿಸಿದ ಕ್ರಮ ಕೂಡ).
ಅವನ ಅಕ್ಕಯ್ಯ ಒಂದು ಜಂತು, ಒಂದು ಪಶು, ಒಂದು ತಾಯಿ, ಒಂದು ದೇವತೆ ಏಕಕಾಲದಲ್ಲೇ ಎಂಬಂತೆ ನಿರೂಪಿಸಿದ್ದ. ಅವನು ಕಾಲೇಜು ಓದುವಾಗ ಅವಳು ಅವನಿಗೆ ಹತ್ತಿರವಾಗಿ ಕಂಡದ್ದು ಮನೆಯ ಕೊಟ್ಟಿಗೆಯ ದನಗಳಲ್ಲಿ ಇನ್ನೊಂದು ದನವಾಗಿ, ದನಗಳ ಹತ್ತಿರ ಅವಳು ಹಾಲು ಕರೆಸುತ್ತ, ಕಲಗಚ್ಚನ್ನು ಕುಡಿಸುತ್ತ, ಹಿಂಡಿಯನ್ನು ತಿನ್ನಿಸುತ್ತ, ಸ್ನಾನ ಮಾಡಿಸುತ್ತ ಮಾತಾಡುತ್ತಿದ್ದಳು. ‘ಏ ಕೌಲಿ ನಿನ್ನೆ ಸಾಯಂಕಾಲ ಎಲ್ಲಿಗೆ ಹೊರಟುಬಿಟ್ಟಿತ್ತು ನಿನ್ನ ಸವಾರಿ? ಸೂರ್ಯ ಕಂತವುದರ ಒಳಗೆ ಬರಬಾರದೆ? ನಂದಿ ಕಾಯ್ತ ಇರತ್ತೆ ನಿನ್ನ ಕೆಚ್ಚಲಿಗೆ ಅಂತ ನೆನಪಾಗಬಾರದ?, ಹೀಗೆ ಮಾತಾಡುವಾಗ ಆಗೀಗ ಉತ್ತರಕ್ಕೆ ಅಕ್ಕಯ್ಯ ಕಾಯುವುದು.
ಕೌಲಿಯ ಕತ್ತು ತುರಿಸುತ್ತ ಮಾತಾಡುತ್ತ ನಿಂತ ಅಕ್ಕಯ್ಯನಿಗೆ ಅದು ತನ್ನ ಕತ್ತನ್ನು ಎತ್ತೆತ್ತಿ ಬುಸುಗುಡುತ್ತ ಕೆಲವೊಮ್ಮೆ ಕಣ್ಣು ಮುಚ್ಚುವುದು. ಅವಳು ತುರಿಸುವ ಬೆರಳುಗಳು ತನ್ನ ಇಳಿಬಿದ್ದ ಕತ್ತಿಗನ ಗಂಗೆ ತೊಗಲಿನ ಎಲ್ಲ ಸಂದಿಗಳನ್ನು ಇನ್ನಷ್ಟು ಇನ್ನಷ್ಟು ತಲುಪುವಂತೆ, ಹಿಂಗಾಲನ್ನು ತುಸು ಕುಸಿಯುವಂತೆ ಮಾಡಿ ಒಡ್ಡಿಕೊಳ್ಳುವುದು. ಈ ಅನುಸಂದಾನದಲ್ಲಿ ಕೆಲವು ಸಾರಿ ಕೌಲಿ ನಾಲಗೆ ಹೊರಚಾಚುವುದು. ಕಿವಿಗಳನ್ನು ಅಲ್ಲಾಡಿಸುವುದು. ಬಾವವನ್ನೆತ್ತಿ ಬಿಲ್ಲಿನಂತೆ ಚಾಮರ ಮಾಡಿಕೊಂಡು ಬಡಿದುಕೊಳ್ಳುವುದು. ಕೆಲವೊಮ್ಮೆ ಸುಖ ತಡೆಯಲಾರದೆ ಅಂಬಾ ಎಂದೂ ಬಿಡುವುದು. ಹೀಗೆ ಕೌಲಿ ಅಕ್ಕಯ್ಯನ ಪ್ರಶ್ನೆಗಳಿಗೆ ಉತ್ತರಕೊಡುವುದು. ತನಗೆ ಬೇಕಾದ ಉತ್ತರ ಸಿಕ್ಕಾಗ ಅಕ್ಕಯ್ಯ ಹೌದಾ ಎನ್ನುವುದು.
ಅಕ್ಕಯ್ಯನ ಪ್ರಕಾರ ಕೌಲಿ ಹಿಂದೆಂದೋ ಒಂದು ಜನ್ಮದಲ್ಲಿ ತನ್ನ ತಂಗಿಯಾಗಿದ್ದವಳು; ಮತ್ತೆ ಬೆಳೆದು ತಾನೊಂದು ಗೌಡರ ಮನೆಯಲ್ಲಿ ಹೆಗ್ಗಡತಿಯಾಗಿದ್ದಾಗ ತನ್ನ ಕೊಟ್ಟಿಗೆಯಲ್ಲಿ ಕರುವಾಗಿ ಹುಟ್ಟಿ ಬೆಳೆದು ಗಬ್ಬವಾಗಿ ಸತ್ತುಬಿಟ್ಟವಳು. ಇನ್ನೂ ಇನ್ನೂ ಹಿಂದೆ ಹೋದರೆ ಕೌಲಿ ಗೋಕುಲದಲ್ಲಿ ಗೋಪಿಯಾಗಿದ್ದವಳಾದರೆ, ತಾನೊಂದು ಕೃಷ್ಣನ ಕೊಳಲ ನಾದ ಕೇಳಿಸಿಕೊಳ್ಳುತ್ತ ತುಂಬಿದ ಕೆಚ್ಚಲಿನಿಂದ ಸುಖದಲ್ಲಿ ಹಾಲು ಜಿನುಗುತ್ತಿದ್ದ ದನವಾಗಿದ್ದವಳು. ಹೀಗೆ ನರಜನ್ಮ ಗೋಜನ್ಮಗಳಲ್ಲಿ ಕೌಲಿಗೂ ಅಕ್ಕಯ್ಯನಿಗೂ ಸತತವಾದ ಸಂಬಂಧಗಳು ಬೆಳೆದುಬಂದಿದ್ದವು. ಕೌಲಿಗೆ ಉಚ್ಚೆ ಹೊಯ್ಯುವಾಗಲೋ, ಮೆಲುಕು ಹಾಕುವಾಗಲೋ ಈ ಹಿಂದಿನ ಜನ್ಮಗಳ ನೆನಪಾಗುತ್ತದೆ ಎಂದು ಅಕ್ಕಯ್ಯನ ನಂಬಿಕೆ. ತನಗೂ ಕೌಲಿಗೂ ಇವೆಲ್ಲ ಮರೆಯುವುದೂ ಉಂಟು. ಅಕ್ಕಯ್ಯನಿಗೆ ತನ್ನ ತಮ್ಮಂದಿರ ಉಪದ್ವ್ಯಾಪಗಳನ್ನು ಹಚ್ಚಿಕೊಂಡು ಮರೆವು. ಕೌಲಿಗೆ ಈ ಜನ್ಮದ ತನ್ನ ಕರುಗಳಿಗೆ ಹಾಲುಣಿಸುವಾಗ ಮರೆವು.
ಕೌಲಿಗೆ ನಕ್ಷತ್ರ ರಾಶಿಗಳೂ ಇವೆ. ಅವಳದು ಹಸ್ತಾ ನಕ್ಷತ್ರ, ಕನ್ಯಾ ರಾಶಿ. ಹೋದ ಜನ್ಮದಲ್ಲೂ ಅವಳದ್ದು ಆ ನಕ್ಷತ್ರವೇ. ಆದರೆ ಎರಡನೆಯ ಪಾದ. ಹೋದ ಜನ್ಮದಲ್ಲೂ ಅವಳದ್ದು ಆ ನಕ್ಷತ್ರವೇ. ಆದರೆ ಎರಡನೆಯ ಪಾದ.
ಕೊಟ್ಟಿಗೆಯಲ್ಲಿ ಹದಿನೈದು ಬಾಲಗಳಿದ್ದವು. ಅವೆಲ್ಲಕೂ ಅಕ್ಕಯ್ಯ ಹೆಸರು ಕೊಟ್ಟಿದ್ದಳು. ಎಲ್ಲವೂ ಅವಳ ಪಾಲಿಗೆ ಯಾವುದೋ ಋಣಾನುಬಂಧದಿಂದ ತನ್ನ ಕೊಟ್ಟಿಗೆ ಸೇರಿದ ಜೀವಿಗಳು. ಅವುಗಳಲ್ಲಿ ಒಂದು ತುಡುಗು ದನ ಹಿಂದೊಂದು ಜನ್ಮದಲ್ಲಿ ಕಟುಕನಾಗಿತ್ತು. ಒಂದಾನೊಂದು ದಿನ ಒಂದು ಬಲಿತ ಹಂದಿಮರಿಯನ್ನು ಕತ್ತಿಯನ್ನೆತ್ತಿ ಇನ್ನೇನು ಕಡಿದು ಹಾಕಬೇಕು, ಆಗ ಹಂದಿಯ ಮುಸುಡಿಯನ್ನು ನೋಡಿ ಕರುಣೆಯುಕ್ಕಿ ಬಂದು ಆ ಕಟುಕ ಕತ್ತಿಯನ್ನೆಸೆದುಬಿಟ್ಟಿದ್ದ. ಹೀಗೆ ಅವನ ಜನ್ಮದ ಕರ್ಮ ಸವೆದುಬಿಟ್ಟಂತಾಗಿ, ಮುಂದಿನ ಜನ್ಮದಲ್ಲಿ ಮನಸ್ಸೇಚ್ಛ ಅಲೆಯುವ ತುಡುಗು ದನವಾಗಿ ಅವನು ಹುಟ್ಟಿ ಬಂದ. ಹೀಗೆ ಅದೆಷ್ಟೋ ಕಥೆಗಳನ್ನು ಅಕ್ಕಯ್ಯ ತನ್ನ ತಮ್ಮಂದಿರ ಮೊಮ್ಮಕ್ಕಳಿಗೆ ಹೇಳುತ್ತಾ ಅವಕ್ಕೆ ನಿದ್ದೆ ಬರಿಸುವಳು.
ಕೊಟ್ಟಿಗೆಯ ಎಲ್ಲ ದನಗಳೂ ಎತ್ತುಗಳೂ ಯಾವಾಗ ಹುಟ್ಟಿವೆಯೆಂದು ಅಕ್ಕಯ್ಯನಿಗೆ ಗೊತ್ತಿರುವುದರಿಂದ ಅವೆಲ್ಲದರ ಜಾತಕ ಅವಳು ಬಲ್ಲಳು. ಎಲ್ಲ ಸತ್ತ ದನಗಳೂ ಅವಳಿಗೆ ನೆನಪಿವೆ. ಯಾವುದರ ಕೋಡು ಹೇಗಿತ್ತು, ಬಣ್ಣ ಹೇಗಿತ್ತು, ಯಾವುದು ಎಷ್ಟು ಹಾಲು ಕೊಡುತ್ತಿತ್ತು. ಯಾವು ಯಾವುದು ಒದೆಯುತ್ತಿತ್ತು, ತನ್ನ ಕರುವಿಗೇ ಹಾಲು ಕೊಡದೇ ಇದ್ದುದು ಯಾವುದು – ಈ ಬಗ್ಗೆ ಗಂಟೆಗಟ್ಟಲೇ ಬಾಳೆಲೆ ಬಾಡಿಸುತ್ತಲೋ, ಅಡಿಕೆ ಸುಲಿಯುತ್ತಲೋ ಅವಳು ತನಗೇ ಎಂಬಂತೆ ಮಾತಾಡಿಕೊಳ್ಳುವುದು. ಇರುವ ದನಗಳು ಸತ್ತವುಗಳ ಸಂತಾನವೇ ಆದ್ದರಿಂದ ಇವೆಲ್ಲಕ್ಕೂ ಅಕ್ಕಯ್ಯನಿಗೆ ಹೇಗೋ ತಿಳಿದುಬಿಡುವ ಹಿಂದಿನ ನರಜನ್ಮ, ನಾಯಿಜನ್ಮ ಪಕ್ಷಜನ್ಮ ಇವೆಯಾದ್ದರಿಂದ ಅವುಗಳ ಗುಣಗಳನ್ನು ಗುರುತಿಸಿ ಅವಳು ಬಣ್ಣಿಸುವುದು.
ಈ ಬಣ್ಣನೆಯೆಲ್ಲ ಮನೆಯ ತಮ್ಮಂದಿರಿಗೂ ಅಲ್ಲ, ಅವರ ಜಂಬಗಾರ ಹೆಂಡತಿಯರಿಗೂ ಅಲ್ಲ, ಅರಿಯದ ಮಕ್ಕಳಿಗೂ ಅಲ್ಲ, ಒಬ್ಬ ಕೊಟ್ಟಿಗೆಯ ಕೆಲಸ ಮಾಡುವ ಪಿಳ್ಳ ಎಂಬುವವನಿಗೆ.
* * *
ಈ ಪಿಳ್ಳನೂ ಅಕ್ಕಯ್ಯನಷ್ಟೇ ಪೂರ್ವಿಕ. ಅವನಿಗೆ ಒಬ್ಬ ಟೀಚರ್ ಆದ ಮಗನಿದ್ದಾನೆ. ಆದರೆ ಅವನ ಜೊತೆ ಪೇಟೆಯಲ್ಲಿ ಬದುಕುವುದು ಅವನ ಮಗನಿಗೆ ಬೇಡ. ಪಿಳ್ಳನಿಗೂ ಬೇಡ. ಮಗನಿಗೆ ಅವನು ಇಟ್ಟ ಹೆಸರೇ ಬೇರೆ. ತನ್ನ ಮಗ ಅದೃಷ್ಟವಂತ; ಪ್ರತಿ ತಿಂಗಳೂ ತಪ್ಪದೆ ಹಣ ಕಳಿಸುತ್ತಾನೆ ಎಂದು ಪಿಳ್ಳನಿಗೆ ಸಂತೋಷ. ಆದರೆ, ಅಕ್ಕಯ್ಯನಿಗಾಗಿ ಅವನು ಮಾಡುವ ಕೊಟ್ಟಿಗೆ ಕೆಲಸದಿಂದ ನಿವೃತ್ತನಾಗಲಾರ.
ಮಾತ್ರ, ಮಗ ಹೇಳಿದಂತೆ ಅವನು ಕೇಳುತ್ತಾನೆ. ತಾವು ಹೊಲೆಯರು ಎಂದುಕೊಳ್ಳಬಾರದು ಎಂದರೆ ಸೈ ಎನ್ನುತ್ತಾನೆ. ‘ಎಸ್ಸಿ’ಗಳು ಎಂದು ಎನ್ನಬೇಕೆಂದರೆ ಸೈ ಎನ್ನುತ್ತಾನೆ.
ಅಕ್ಕಯ್ಯನ ವಿವರಣೆ ಪ್ರಕಾರ, ಪಿಳ್ಳನೊಬ್ಬ ಸಾಧು. ಹಿಂದೊಂದು ಜನ್ಮದಲ್ಲಿ ಅವನು ಅಕ್ಕಯ್ಯನ ಗಂಡನ ತಮ್ಮನಾಗಿದ್ದ. ಮೈದುನನೆಂದು ಅವನ ಮೇಲಿಬ ತನ್ನ ಪ್ರೀತಿ ಅತಿಯಾಯಿತೆಂದು ಅವಳ ಗಂಡನಿಗೆ ಕಂಡು ಇಬ್ಬರೂ ಬಹಳ ಗೋಳುಪಟ್ಟಿದ್ದರು. ಮೈದುನ ಮದುವೆಯಾಗುವ ಮುಂಚೆಯೇ ಮೈಲಿಯಾಗಿ, ಮುಖವೆಲ್ಲ ಊದಿ, ಯಾರೂ ಹತ್ತಿರ ಬಾರದಾಗ ತನ್ನ ಶುಶ್ರೂಷೆಯಲ್ಲೇ ನರಳಿ ಸತ್ತಿ ಹೋದದ್ದು. ಆಮೇಲೆ ಬ್ಯಾರಿಯಾಗಿ ಅವನು ಹುಟ್ಟಿದ್ದು, ತಾನು ಅವನ ಕುದುರೆಯಾಗಿ ಹುಟ್ಟಿ ಅವನ ಕೈಯಿಂದ ಹುರುಳಿ ಹುಲ್ಲು ತಿಂದದ್ದು. ಹೀಗೆ ಕರ್ಮವಶಾತ್ ಈ ಜನ್ಮದಲ್ಲಿ ಆ ಜೀವವು ಸಗಣಿ ಬಾಚುವ ಪಿಳ್ಳನಾಯಿತು. ಪರಮ ಸಾಧುವಾಯಿತು, ತಾನು ಅವನ ಒಡತಿಯಾಯಿತು.
ಪಿಳ್ಳನಿಗೆ ಮೋಹವೇ ಇಲ್ಲದ್ದರಿಂದ ಅವನಿಗೆ ಇನ್ನೊಂದು ಜನ್ಮವಿಲ್ಲ. ಅಕ್ಕಯ್ಯನೇ ಬಚ್ಚಲೊಲೆ ಮುಂದೆ ಕೂತು ಬೆಂಕಿ ಕಾಯಿಸಿಕೊಳ್ಳುತ್ತ ಪಿಳ್ಳನಿಗೆ ಇದನ್ನೆಲ್ಲ ಹೇಳುವಳು. ಎಲ್ಲ ಮಾತಿಗೆ ಸೈ ಎನ್ನುವಂತೆ ಪಿಳ್ಳ ಇದಕ್ಕೂ ಸೈ ಎನ್ನುವನು.
* * *
ನನ್ನ ಕಣ್ಣುಗಳು ಪಿಳ್ಳವೃತ್ತಾಂತದಿಂದ ತುಂಟಾಗಿ ಮಿನುಗಿದ್ದನ್ನು ಕಂಡ ಬಾಲ್ಯದ ಗೆಳೆಯ ತಾನೂ ನಗುತ್ತ ಗದರಿಸಿದ: “ಏನ ಗೃಧ್ರ ಸುಮ್ಮಣೇ ಕೇಳಿಸಿಕೋ”. ಹೀಗೆ ಹೇಳಿ ವೈನನ್ನು ನನ್ನ ಗ್ಲಾಸಿಗೆ ಸುರಿದ. ನಾವು ತಿನ್ನುತ್ತಿದ್ದುದು ಚೈನೀಸ್ ಚಿಕನ್ ಆದ್ದರಿಂದ ಅದು ವೈಟ್ ವೈನ್ ಆಗಿತ್ತು. “ವೈನ್ ಇಷ್ಟವಾಯಿತು?” ಎಂದ.
”ನಾನೂ ನೀನೂ ಇಲ್ಲಿ ಕೂತು ಹೀಗೆ ಇಟಾಲಿಯನ್ ವೈನ್ ಕುಡೀತ, ಚೈನೀಸ್ ಚಿಕನ್ ತಿನ್ನುತ್ತ ಅಕ್ಕಯ್ಯನ ಬಗ್ಗೆ ಮಾತಾಡೋದು; ನೀನು ನಿನ್ನ ಜೀವನಕ್ರಮಕ್ಕೆ ಬಿಡದಂತೆ ಅಂಟಿಕೊಂಡಿದ್ದೇ ಬ್ಲೇಕನ್ನು ಅನುಸರಿಸಿ ಆ ಚಿತ್ರ ಬರೆಯೋದು ಒಟ್ಟು ‘ಅಥೆಂಟಿಕ್’ ಅಲ್ಲ ಎನ್ನಿಸುತ್ತೆ. ಅದು ನಿನ್ನದೇ ಶಬ್ದ. ”
ವೈನಿನ ರುಚಿಯನ್ನು ಸವಿಯುತ್ತ ನಾನು ಹೀಗೆ ಎಂದಿದ್ದೆ. ಅಮೆರಿಕದಲ್ಲೂ ಆ ರೆಸ್ಟೋರೆಂಟ್ ಚೈನಾದ ವಾತಾವರಣವನ್ನು ಸೃಷ್ಟಿಸಿಕೊಂಡಿತು ಅದರ ಚಿತ್ರಗಳಲ್ಲಿ ಅದರ ಲಾಟೀನುಗಳಲ್ಲಿ ಅದರ ಅರ್ಥವಾಗದ ಚೀನೀ ಕ್ಯಾಲಿಗ್ರಫಿಯ ಪೋಸ್ಟರುಗಳಲ್ಲಿ.
”ನೀನು ಸೃಷ್ಟಿಸುತ್ತಿರುವ ಇಂಡಿಯಾ ಕೂಡ ಈ ರೆಸ್ಟೋರೆಂಟಿನ ಹಾಗೆ ಇದೆ. ನೀನು ಕದ್ದ ಬ್ಲಾಕ್ ಪೆನ್ನನ್ನ ಹೆಡ್ಮಾಸ್ತರರಿಗೆ ಹಿಂದಕ್ಕೆ ಕೊಡುವಾಗ ಅವರನ್ನು ಫಜೀತಿಗೆ ಈಡು ಮಾಡುವಂತೆ ಹೀಯಾಳಿಸಿದ್ದ ನಿನ್ನ ಗ್ರೇಟ್ ಸ್ಪಿರಿಟ್ಗೆ ಏನಾಗಿಬಿಟ್ಟಿತೊ? ಫಟಿಂಗಗ”. ಎಂದು ಭಗವತನಂತೆ ಮಾತಾಡಿ ನಕ್ಕೆ.
ಆದರೆ ನನ್ನ ಮಾತಿನಿಂದ ಶ್ರೀನಿವಾಸನ ಆಲೋಚನೆಗೆ ಭಂಗವಾಗಲಿಲ್ಲ. ಹೀಗೆ ನಾನು ಚುಡಾಯಿಸಿದೆನೆಂದು ಅವನು ಮತ್ತಷ್ಟು ಉತ್ತೇಜಿತನಾಗಿಯೇ ಬಿಟ್ಟ. ಅಕ್ಕಯ್ಯನ ಇನ್ನೊಂದು ಕಥೆ ಹೇಳಿದ:
ಅದು ಕೂಡ ಕೌಲಿ ಮತ್ತು ಅಕ್ಕಯ್ಯನ ಸಂಬಂಧದ ಕಥೆ. ಒಂದು ಸಂಜೆ ಕೌಲಿಯ ಕರು ನಂದಿನಿ ಕೊಟ್ಟಿಗೆ ಸೇರಲೇ ಇಲ್ಲ. ಅಕ್ಕಯ್ಯ ಕೊಟ್ಟಿಗೆ ಎದುರು ನಿಂತು ನಂದಿನಿಗೆಂದು ತಾನು ಮಾಡಿಕೊಂಡಿದ್ದ ದನಿಯಲ್ಲಿ ‘ಕಟುಬಾಯ್’ ಎಂದು ಕರೆಯುತ್ತ ಬಹಳ ಹೊತ್ತು ನಿಂತರು. ‘ನಿನ್ನ ಮಗಳನ್ನು ಕರಿ’ ಎಂದು ತಾಯಿ ಕೌಲಿಗೆ ಹೇಳಿದರು. ಕೌಲಿಯೂ ಅಂಬಾ, ಅಂಬಾ ಎಂದು ಆರ್ತವಾಗಿ ಕೂಗಿತು. ಆದರೆ ನಂದಿನಿಯ ಪತ್ತೆಯೇ ಇಲ್ಲ. “ನಿನ್ನ ಮಗಳಿಗೆ ಹೋರಿ ಬೇಕಾಯಿತೇನೊ, ನೋಡಿಕೊಂಡು ಬರುವೆ. ಯಾರದೋ ಗದ್ದೆಗೆ ನುಗ್ಗಿ ದೊಡ್ಡಿ ಸೇರಿದ್ದರೂ ಸೇರಿದ್ದಳೇ” ಎಂದು ಅಕ್ಕಯ್ಯ ಗೊಣಗಿ ಹೊರಟೇಬಿಟ್ಟರು. ಪಕ್ಕದ ದಟ್ಟ ಅರಣ್ಯ ಹೊಕ್ಕು ಕಣ್ಮರೆಯಾಗಿಬಿಟ್ಟರು. ಇಡೀ ರಾತ್ರಿ ಅವರು ಮನೆಗೆ ಬರಲಿಲ್ಲ. ಮಾರನೇ ಬೆಳಿಗ್ಗೆ ಹತ್ತು ಗಂಟೆಗೆ ಅವರು ಬಂದದ್ದು, ಬಂದಾಗ ಅಕ್ಕಯ್ಯ ಹೇಗೆ ಕಂಡರು ಗೊತ್ತ? ಎಂದು ಅವನ ಕಾಲೇಜಿನ ದಿನಗಳಲ್ಲಿ ಆಗಿದ್ದ ಘಟನೆ ನಿರೂಪಿಸಿದ.
ರಾತ್ರೆಯೆಲ್ಲ ಅವರು ಕಾಡಿನಲ್ಲಿ ಒಂದು ಮಾವಿನಮರದ ಕೆಳಗೆ ನಿದ್ದೆ ಮಾಡದಂತೆ ಕಣ್ಣುಬಿಟ್ಟೇ ಕಳೆದು. ಶಕುನಕ್ಕಾಗಿ ಕಾದರು. ಬಎಳಗಾದಾಗ ನಂದಿನಿ ಪ್ರತ್ಯಕ್ಷವಾಗಿ ತೂಕಡಿಸುತ್ತಿದ್ದ ಅಕ್ಕಯ್ಯನನ್ನು ಮೂಸುತ್ತಿದ್ದಳು. ಅಕ್ಕಯ್ಯ ಕಣ್ಣುಬಿಟ್ಟು ಯದ್ವಾತದ್ವಾ ನಂದಿನಿಯನ್ನು ಬೈದರು. ಬೈಯುತ್ತ ಮೇಲೆ ನೋಡಿದರೆ ಮಾವಿನಮರದ ತುಂಬ ಉಪ್ಪಿನಕಾಯಿಗೆ ಪ್ರಶಸ್ತವಾದ ಮಿಡಿಕಾಣಬೇಕೆ? ನಂದಿನಿಗೆ ಮರದ ಕೆಳಗೇ ಬಿದ್ದಿರು ಎಂದು ಗದರಿಸಿದರು. ಅದು ಬಿದ್ದುಕೊಂಡಿತು. ಅಕ್ಕಯ್ಯ ಚಿಕ್ಕ ಹುಡುಗಿಯಂತೆ ಮರ ಹತ್ತಿ ಜೋಪಾನವಾಗಿ ತೊಟ್ಟು ಸಹಿತ ಮಾವಿನಮಿಡಿಗಳ ಗೊಂಚಲುಗಳನ್ನು ಕೊಯ್ದರು. ಸೊನೆ ಚಿಮ್ಮುವ ಈ ಮಿಡಿ ಗೊಂಚಲುಗಳನ್ನು ತನ್ನ ಸೆರಗಿನಲ್ಲಿ ತುಂಬಿಕೊಂಡು ಎಡಗೈಯಲ್ಲಿ ಸೆರಗಿನ ತುದಿಯನ್ನು ಭದ್ರವಾಗಿ ಹಿಡಿದುಕೊಂಡು, ಬಲಗೈಯಲ್ಲಿ ಮರದ ಕಾಂಡವನ್ನು ತಬ್ಬುತ್ತ, ಕಾಲೆರಡನ್ನೂ ಒರಟಾದ ಕಾಂಡದ ಮೇಲೆ ಇಟ್ಟು, ತುಸು ತುಸುವೇ ಒಂದರ ಕೆಳಗೊಂದರಂತೆ ಇಳಿಸುತ್ತ, ಮಹರಾಯಿತಿ ಕೆಳಗಿಳಿದರು. ಆಮೇಲೆ ತುಂಬಿದ ಸೆರಗನ್ನು ಹಾಗೇ ಎತ್ತಿಹಿಡಿದುಕೊಂಡು, ಏದುಸಿರು ಬಿಡುತ್ತ, ಪಕ್ಕದಲ್ಲಿ ನಂದಿನಿಯನ್ನು ನಡೆಸಿಕೊಂಡು ಮನೆ ಸೇರಿದರು.
ಆಮೇಲೆ ಸ್ನಾನ ಮಾಡಿ ಶುರುವಾಗಿಬಿಟ್ಟಿತು ಈ ಮಿಡಿಗಳನ್ನು ತೊಟ್ಟು ಸಹಿತ ಒಂದೊಂದೇ ಬಿಡಿಸಿ ಉಪ್ಪಿನಕಾಯಿ ಹಾಕುವ ಕೆಲಸ.
ಅಕ್ಕಯ್ಯ ಬರುವಾಗ ಶ್ರೀನಿವಾಸ ಹೊರಗೆ ನಿಂತಿದ್ದ. ಕೆದರಿದ ತಲೆ ಮತ್ತು ನಗುರವ ಕಣ್ಣುಗಳ ಅಕ್ಕಯ್ಯ ಮಡಿಲಿನ ತುಂಬ ಮಿಡಿಗಳನ್ನು ತುಂಬಿಕೊಂಡು ಪಕ್ಕದಲ್ಲಿ ಕಪ್ಪು ಬಣ್ಣದ ನಂದಿನಿಯನ್ನು ನಡೆಸಿಕೊಂಡು ಬರುತ್ತಿದ್ದಾಗ ವನದುರ್ಗೆಯಂತ ಅವನಿಗೆ ಕಂಡಿದ್ದರು.
ಇನ್ನೊಂದು ರಾತ್ರೆ ಅವಳು ಯಮಧರ್ಮರಾಯನನ್ನು ಹೋರಾಡಿ ಸೋಲಿಸಿ ಜಗಜ್ಜನನಿಯಾಗಿಬಿಟ್ಟ ಕಥೆ ಹೇಳಿದ. ಇದು ಹೀಗಿದೆ:
ನಂದಿನಿಯ ನಂತರ ಹೊಟ್ಟೆಯಲ್ಲೇ ಸತ್ತ ಎರಡು ಕರುಗಳನ್ನು ಕಷ್ಟದಲ್ಲಿ ಹೆತ್ತು ಸಾಯುವಂತಿದ್ದ ಕೌಲಿ ಮತ್ತೂ ಗಬ್ಬವಾಗಿಬಿಟ್ಟಳು. ಅವಳಿಗೆ ಅಕ್ಕಯ್ಯ ತನಗೆ ಗೊತ್ತಿರುವ ಮದ್ದನ್ನೆಲ್ಲ ಮಾಡಿದರೂ ಕೌಲಿಗೆ ಸುಖ ಪ್ರಸವ ಆಗುವಂತೆ ಕಂಡಿರಲಿಲ್ಲ. ಅವಳು ಹೆರಬಹುದಾದ ರಾತ್ರೆ, ಅವಳು ಸತ್ತುಬಿಡಬಹುದೆಂದು ಅಕ್ಕಯ್ಯನಿಗೆ ಹೇಗೋ ಅನ್ನಿಸಿಬಿಟ್ಟಿರಬೇಕು.
ಎಲ್ಲರ ಊಟವಾದ ಮೇಲೆ ಅಕ್ಕಯ್ಯ ಕೊಟ್ಟಿಗೆಗೆ ಹೋದರು. ನೋವಿನಲ್ಲಿ ಹತಾಶಳಾಗಿ ಮಲಗಿದ್ದ ಕೌಲಿಗೆ ಸುಳಿದು ಹಾಕಿದರು. ಸೊಂಟದ ಮೇಲೆ ಕೈಯಿಟ್ಟು ಯಮಧರ್ಮರಾಯನಲ್ಲಿ ಬೇಡಿಕೊಂಡರು. “ಇವಳನ್ನು ಮುದಿಯಾಗಿ ಸಾಯಲು ಬಿಡು ಮಾರಾಯ, ನನ್ನನ್ನೂ ಇವಳನ್ನೂ ಒಟ್ಟಿಗೆ ಕರೆದುಕೊಂಡು ಹೋಗಿಬಿಡುತ. ಪ್ರತಿ ಜನ್ಮದಲ್ಲೂ ನೀನು ಹಾಗೆ ಮಾಡಿದ್ದಲ್ಲಾ, ಈಗಲೂ ಹಾಗೆ ಮಾಡು. ದಮ್ಮಯ್ಯ ಅಂತೀನಿ. ” ಹಲ್ಲಿಯ ಶಕುನವಾಯಿತು. ಯಮಧರ್ಮರಾಯ ಏನೋ ಅಡ್ಡಿ ಮಾತಾಡಿದಂತೆ ಅಕ್ಕಯ್ಯನಿಗೆ ಅನ್ನಿಸಿರಬೇಕು.
ಸೀದ ಕೊಟ್ಟಿಗೆಯ ಬಾಗಿಲಿಗೆ ಬಂದು ಹೊಸಲಿನ ಮೇಲೆ ಕಾಲು ಚಾಚಿ ಕೂತುಬಿಟ್ಟರು. ಕೈಯಲ್ಲೊಂದು ಹಿಡಿ ಸೂಡಿ ಹಿಡಿದು ಅನದನು ಅಲಗಿಸುತ್ತ ಹೇಳಿದರು:
“ನೀನೇನಾದರೂ ಅವಳನ್ನು ಕರೆದುಕೊಂಡು ಹೋಗಲು ಬಂದುಬಿಟ್ಟಿ ಎನ್ನು. ಆಗ ಇದು ಅಕ್ಕಯ್ಯ ಅಲ್ಲ ಎಂದು ತಿಳಿಕೊ. ಏನು ಕೈಯಲ್ಲಿದೆ ನೋಡು. ಕೌಲಿಯ ಸೆಗಣಿಯಲ್ಲಿ ಅದಿದ್ದ ಹಿಡಿಸೂಡಿ ಇದು. ಇದರಲ್ಲೆ ನಿನಗೆ ಪೂಜೆ ಮಾಡಿಬಿಡ್ತೀನಿ. ನಾನೊಬ್ಬ ಮಾರಿಯಾಗಿ ನಿನ್ನ ಬೆನ್ನಟ್ಟಿ ಕಾಡ್ತೀನಿ. ”
ಹಿಡಿಸೂಡಿಯನ್ನು ತನ್ನ ಕೈಯಲ್ಲಿ ಹಿಡಿದೇ, ನಿದ್ದೆ ಮಾಡದಂತೆ ಇಡೀ ರಾತ್ರೆ ಅಕ್ಕಯ್ಯ ಕೂತಿದ್ದರು. ಬೆಳಗಾಗುವ ಮುನ್ನ ಕೌಲಿ ಒಂದು ಬಡಕಲು ಹೋರಿ ಕರುವನ್ನು ಹೆತ್ತು ಅದನ್ನು ನೆಕ್ಕಲು ತೊಡಗಿದ್ದಳು. ಕರು ತಾಯಿಯ ಮುದಿ ಕೆಚ್ಚಲನ್ನು ಗುಮ್ಮಲೆಂದು ತನ್ನ ಸೊಟ್ಟ ಸೊಟ್ಟ ಕಾಲುಗಳಲ್ಲಿ ನಿಲ್ಲಲು ಪೇಚಾಡುತ್ತಿತ್ತು.
೯
ಶ್ರೀನಿವಾಸ ಮತ್ತು ನಾನು ಅವನ ಮನೆಗೆ ಹಿಂದಕ್ಕೆ ಬಂದಾಗ ನಡುರಾತ್ರಿಯಾಗಿತ್ತು. ಯಾರೂ ಬಾಗಿಲು ತೆರೆಯುವುದು ಅವಶ್ಯವಿರಲಿಲ್ಲ. ರಿಮೋಟ್ ಕಂಟ್ರೋಲಿನಿಂದ ಗ್ಯಾರೇಜು ಸದ್ದಿಲ್ಲದೆ ಬಾಗಿಲು ಎತ್ತಿಕೊಂಡು ನಮ್ಮನ್ನು ಒಳಗೆ ಬಿಟ್ಟುಕೊಂಡಿತು. ಶ್ರೀನಿವಾಸನ ಹತ್ತಿರವಿದ್ದ ಬೀಗದ ಕೈ ಮನೆಯ ಬಾಗಿಲನ್ನು ಸದ್ದಿಲ್ಲದಂತೆ ತೆರೆಯಿತು. ಲೈಬ್ರಿಯ ಬಾಗಿಲಂತೂ ತೆರದೇ ಇತ್ತು. ಹೆರಿಗೆ ಮಾಡಿಸಿಬಂದು ಸುಸ್ತಾದ ಹೆಂಡತಿಯೂ, ಡೇಟ್ ಮುಗಿಸಿ ಬಂದು ಕನಸು ಕಾಣುತ್ತಿರುವ ಮಗಳೂ ಸುಖನಿದ್ದೆಯಲ್ಲಿದ್ದಿರಬಹುದು.
ಒಳಗೆ ಕೂತ ಮೇಲೆ ಶ್ರೀನಿವಾಸ ಕೊನ್ಯಾಕನ್ನು ಎರಡು ಬಟ್ಟಲಲ್ಲಿ ಸುರಿದು ನನಗೊಂದನ್ನು ಕೊಟ್ಟು, ತನ್ನ ಡ್ರಿಂಕನ್ನು ಚಪ್ಪರಿಸುತ್ತ ಮೆದುವಾಗಿ ಹೇಳಿದ:
”ನೀನು ತಿಳಿದಿರೋದು ಸರಿ, ಏನೋ ನಿನ್ನ ಬುದ್ಧಿಯನ್ನು ತಿದ್ದಕ್ಕೇಂತ ಈ ಮಾತನ್ನೆಲ್ಲ ಶುರು ಮಾಡಿದೆ. ಪಾಶ್ಚಾತ್ಯ ದೃಷ್ಟಿಕೋನದಿಂದ ಇಂಡಿಯಾದ ಬದುಕನ್ನ ನೋಡಬೇಡ ಅಂತ ಹೇಳೋದು ನನ್ನ ಗುರಿಯಾಗಿತ್ತು. ಇದನ್ನೆಲ್ಲ ನಾನು ಯಾರಿಗೂ ಹೇಳಲಿಕ್ಕಾಗಲ್ಲ. ನನ್ನ ಹೆಂಡತಿ, ನನ್ನ ಮಗಳು ಇವೆಲ್ಲವನ್ನೂ ಬರೆದು ಬಿಡಬಹುದು. ಹೀಗೆ ಬರೆದದ್ದು ಮಾತ್ರ ಈಚೆಗೆ ನಮ್ಮ ಸರ್ಕಲಲ್ಲಿ ಚಾಲ್ತಿಯಲ್ಲಿರೋದು. ಅದೂ ಎಂಥ ಅಭಾಸ ನೋಡು. ನಿನ್ನ ಹತ್ತಿರ ಮಾತಾಡೋದು ನನಗೆ ಹಾಗಲ್ಲ. ನನಗೆ ಎಷ್ಟು ನಿಧಾನವಾಗಿ ಇವೆಲ್ಲ ಹೊಳೆದದ್ದು ಅಂತೀಯ.
ಮೊದಮೊದಲು ಅಕ್ಕಯ್ಯ ಮಾತಾಡ್ತಾಳೇಂತ ನಾನು ತಿಳಿದಿರಲಿಲ್ಲ. ಆಮೇಲೆ ಅವಳು ಅದೆಷ್ಟು ಮಾತಾಡ್ತಾಳೇಂತ ಇಲ್ಲಿ ಬಂದ ಮೇಲೆ ಆಶ್ಚರ್ಯ ಆಗಲಿಕ್ಕೆ ಶುರುವಾಯ್ತು. ಅವಳು ಸತ್ತದ್ದೂ ಅಷ್ಟೇ ವಿಚಿತ್ರ. ರಾತ್ರೆ ಊಟವಾದ ಮೇಲೆ ನಿತ್ಯ ಅವಳು ಹೊರಗಿನ ಸ್ನಾನದ ಬಚ್ಚಲೊಲೆ ಮುಂದೆ ಕೂತಿರುವುದು. ಒಂದು ದೊಡ್ಡ ಕುಂಟೆಯಲ್ಲಿ ನಮ್ಮ ಒಲೆ ಸದಾ ಉರೀತ ಇರತ್ತೆ. ತನ್ನ ಮಡಿಲಿನ ತುಂಬ ಹಲಸಿನ ಬೀಜ ತಂದು ಅಕ್ಕಯ್ಯ ಅದರ ಮುಂದೆ ಕೂರಿತೋದು. ಅವಳಿಗಿಂತ ಅಷ್ಟೊಂದು ದೂರದಲ್ಲಿ ಪಿಳ್ಳ ಕೂತಿರೋದು. ಅವನು ತನ್ನ ಬಾಟಲಲ್ಲಿ ಹೆಂಡ ತುಂಬಿಸಿಕೊಂಡು ಬಂದು ಒಂದು ಮೊಟ್ಟಿನ ಸಂದಿ ಅದನ್ನ ಮುಚ್ಚಿಟ್ಟಿರೋದು. ಅಕ್ಕಯ್ಯ ಮಾತಾಡ್ತನೇ ಹಲಸಿನ ಬೀಜವನ್ನು ಬಿಸಿಬೂದಿಯಲ್ಲಿ ಮುಚ್ಚಿ ಬೇಯಿಸೋದು, ಬೆಂದಿದ್ದನ್ನು ಎತ್ತಿ ಪಿಳ್ಳನಿಗೆ ಕೊಡೋದು, ಪಿಳ್ಳ ಅವನ್ನ ಬಾಯಲ್ಲಿ ಅಗೀತ ಮೆತ್ತಗೆ ಎದ್ದು ಹೋಗಿ ಮುಚ್ಚಿಟ್ಟ ಹೆಂಡವನ್ನು ಗಟ ಗಟ ಅಂತ ಒಂದೆರಡು ಗುಟುಕು ಕುಡಿದು, ಹೂಸುಬಿಟ್ಟು ಮತ್ತೆ ಬೆಂಕಿ ಎದುರು ಬಂದು ಕೂರೋದು. ಅವನು ಹೀಗೆ ಆಗ ಈಗ ಮೊಟ್ಟಿನ ಸಂದಿಗೆ ನಾಪತ್ತೆಯಾಗುವಾಗಲೂ ಅಕ್ಕಯ್ಯ ಅವನಿಗೆ ಏನೇನೋ ಹೇಳ್ತಾನೇ ಇರೋದು. ಅವನು ಹೂ ಹೂ ಹೂ ಅಂತಾನೇ ಇರೋದು.
ಅಕ್ಕಯ್ಯ ಯಾವತ್ತು ಈ ಪಿಳ್ಳನಿಗೆ ಮತ್ತೊಂದು ಜನ್ಮವಿಲ್ಲ ಎನ್ನುತ್ತಿದ್ದರಲ್ಲವೆ? ಆದರೆ ಪಿಳ್ಳನೇ ಅಕ್ಕಯ್ಯ ಸತ್ತ ನಂತರ ಮೂರು ತಿಂಗಳು ಬದುಕಿದ್ದು ಸತ್ತ. ಒಂದು ದಿನ ಬೆಂಕಿಯೆದುರು ಕೂತು ಮಾತಾಡುತ್ತಿದ್ದ ಅಕ್ಕಯ್ಯ ಸುಡು ಸುಡುವ ಬೂದಿ ಹತ್ತಿಕೊಂಡ ಹಲಸಿನ ಬೀಜವನ್ನು ಹೊರಗೆ ತೆಗೆದು, ಅದನ್ನೆತ್ತಿ ಪಿಳ್ಳನಿಗೆ ದೂರದಿಂದ ಒಡ್ಡಿದಾಗ ಬೆಂಕಿಯೆದುರು ಹಾಗೆ ಒರಗಿ ಕಣ್ಣು ಮುಚ್ಚಿದರು. ಪಿಳ್ಳ ಸ್ವಲ್ಪ ಕಾದು, ತಾನು ಮುಟ್ಟಬಾರದ್ದದ್ದರಿಂದ ಅಮ್ಮೋರೇ ಅಮ್ಮರೇ ಅಂತ ಕೂಗಿ ಉತ್ತರ ಬಾರದಿದ್ದಾಗ ಅಕ್ಕಯ್ಯನ ಮನೆಗೆ ಹೋಗಿ ಒಡೇರೇ ಒಡೇರೇ ಎಂದು ನನ್ನ ಸೋಂಭೇರಿ ಅಣ್ಣಂದಿರನ್ನು ಕರೆದು ಎಬ್ಬಿಸಿ, ಏನೂ ಹೇಳದೇ ಸುಮ್ಮನೆ ನಿಂತುಬಿಟ್ಟ….
ಅಕ್ಕಯ್ಯ ಸಾಯುವಾಗ ನಾನಿರಲಿಲ್ಲ. ನಾನು ಫ್ರಾನ್ಸಿಗೆ ಓರಿಯೆಂಟಲಿಸಂ ಕುರಿತಾದ ಒಂದು ಮುಖ್ಯ ಸೆಮಿನಾರಿಗೆಂದು ಹೊರಟು ನಿಂತಿದ್ದೆ. ಕ್ಯಾನ್ಸಲ್ಮಾಡಿ ಅಕ್ಕಯ್ಯನ ಶ್ರಾದ್ಧಕ್ಕೆಂದು ಊರಿಗೆ ಹೋದೆ. ”
ಕಥೆ ಮುಗಿಸಿ ಶ್ರೀನಿವಾಸ ಕ್ಷಣ ಸುಮ್ಮನಿದ್ದು ಹೇಳಿದ:
“ನಿನಗೆ ನನ್ನ ಬಗ್ಗೆ ಎದ್ದಿರುವ ಅನುಮಾನ ನಿಜ. ಈ ಅಕ್ಕಯ್ಯನ ಪ್ರಪಂಚದಿಂದ ದೂರವಾಗಲಿಕ್ಕೆ ಅಂತಲೇ ಅಥವಾ ದೂರವಾಗಿ ಬಿಟ್ಟೆ ಎಂತಲೇ. If you want to be kind to me, ನಾನು ನನ್ನ ಸಕ್ಸೆಸ್ಫುಲ್ ಕ್ಯಾರಿಯರ್ನ ಎಲ್ಲ ತಾತ್ತ್ವಿಕ ಪರಿಕಲ್ಪನೆಯನ್ನೂ ಮಾಡಿಕೊಂಡಿದ್ದೂ ಅಂದರೆ ಮೊದಲು ಮಾರ್ಕ್ಸಿಸ್ಟ್ ಪ್ರಗತಿ ಶೀಲನಾದದ್ದು, ಆಮೇಲೆ ಲಿಬರಲ್ ಆದದ್ದು, ಆಮೇಲೆ ಆಧುನಿಕನಾದದ್ದು, ಈಗ ಪೋಸ್ಟ್ ಮಾಡರ್ನಿಸ್ಟ್ ಆಗಿರೋದು – ಈಗ ಹಿಂದಕ್ಕೂ ಹೋಗಲಾರೆ; ಆದರೆ ಅವಳ ಪ್ರಪಂಚ ಸುಳ್ಳೂಂತ ಸಾಧಿಸೋ ನಿಯೋಕಲೋನಿಯಲಿಸ್ಟ್ ಬದ್ಮಾಶ್ ಕೂಡ ಆಗಲಾರೆ. ”
೧೦
ಚಳಿಗಾಲವಾದ್ದರಿಂದ ಹತ್ತಿ ಉರಿಯುವ ಕುಂಟೆಯಂತೆ ಭಾಸವಾಗುವ ಲೈಬ್ರರಿಯ ಎಲೆಕ್ಟ್ರಿಕ್ ಅಗ್ಗಿಷ್ಟಿಕೆ ಎದುರು ಶ್ರೀನಿವಾಸ ನಿಂತಿದ್ದ. ಅವನು ಕಾಲರ್ ಗುಂಡಿಯನ್ನು ಬಿಚ್ಚಿ ಟೈಯನ್ನು ಕಳಚಿದ್ದ. ಅವನು ತೊಟ್ಟ ಟ್ವೀಡ್ ಕೋಟ್ ಮತ್ತು ಜೀನ್ಸ್ ಅವನಿಗೊಂದು ಯೌವನದ ಕಾಂತಿಯನ್ನು ತಂದಿತ್ತು. ನನ್ನಂತೆ ಅವನಿಗೆ ಆಕ್ವರ್ಡಾದ ಪಾಂಚ್ ಕೂಡ ಇರಲಿಲ್ಲ. ಕಟ್ಟುಮಸ್ತಾದ ನಿಲುವು ಅವನದು. ಅವನ ಕೂದಲು ಉದ್ದವಾಗಿ ಕತ್ತಿನ ಮೇಲೆ ಇಳಿಬಿದ್ದಿತ್ತು. ಬಿಳಿಕಪ್ಪುಗಳನ್ನು ಹಿತವಾಗಿ ಬೆರೆಸಿಕೊಂಡು ಎತ್ತರದ ಹಣೆಯ ಮೇಲಿನ ಈ ಕೂದಲು, ಅವನು ತೊಟ್ಟ ಹಗುರಾದ ಫ್ರೆಮಿನ ಕನ್ನಡಕ, ಅವನು ಹಾಕಿಕೊಂಡ ಮೃದುವಾದ ಶೂಗಳು ಅವನ ವಿಷಾದಕ್ಕೊಂದು ಶೋಭೆಯನ್ನು ತರುವಂತಿದ್ದವು.
ಅವನ ತಾತ್ತ್ವಿಕ ವಿಷಾದಕ್ಕೂ, ಈ ವಿಷಾದದ ತಳದಲ್ಲಿರುವ ಮನಸ್ಸಿನ ಕ್ಲೇಶೆಗೂ ಮತ್ತು ಅವನ ಲೌಕಿಕ ಯಶಸ್ಸಿಗೂ ಉತ್ತರವಾಗಿ ನನ್ನಲ್ಲೊಂದು ಎಸ್ಸೆಯೇ ತಯಾರಾಗತೊಡಗಿತ್ತು. ಆದರೆ ಗಎಳೆಯನ ಚೋರ ದಿನಗಳಲ್ಲಿ ನಮ್ಮಿಬ್ಬರ ತುಂಟಾಟದ ಹರ್ಷ ನೆನಪಾಗಿ, ಅವನ ಕತ್ತಿನ ಮೇಲೆ ಇಳಿಬಿದ್ದ ಉದ್ದನೆಯ ಕೂದಲಿನಿಂದಾಗಿ, ಅವನೊಬ್ಬ ವಿಸಿಟೆಂಗ್ ಫೋಕ್ಲೋರ್ ಭಾಗವತನಂತೆ ಕಂಡಂತಾಗಿ ಥಟ್ಟನೇ ಹಿಗ್ಗಿದೆ.
ಅವನ ಲೈಬ್ರರಿಯಲ್ಲಿ ನಮ್ಮೂರಿನ ನಾಲ್ಕು ಹಾಳೆ ಟೋಪಿಗಳು ಕಂಡವು. ಅವುಗಳಲ್ಲಿ ಒಂದನ್ನು ತಂದು ನನ್ನ ತಲೆಯ ಮೇಲೆ ಇಟ್ಟುಕೊಂಡೆ. ಶ್ರೀನಿವಾಸನ ಕಣ್ಣುಗಳ ತುಂಟಾಗಿ ನಗುವುದು ಕಂಡು ಅವನ ತಲೆಯ ಮೇಲೆ ಇನ್ನೊಂದನ್ನು ಇಟ್ಟೆ. ಅವನು ತೊಟ್ಟಿದ್ದ ವೇಷದಲ್ಲಿ ಈ ಟೋಪಿ ಅವನನ್ನು ನನಗೊಂದು ಮೆಟಫರ್ ಮಾಡಿತು.
ಲೈಬ್ರರಿಯಲ್ಲಿ ಒಂದು ಘಟವೂ ಕಂಡಿತು. ಅದನ್ನು ಎತ್ತಿಕೊಂಡು ಅಗ್ಗಷ್ಟಿಕೆ ಎದುರು ಚೀಲದಂತೆ ಬಿದ್ದಿದ್ದ, ಕೂತವರ ಪೃಷ್ಠಕ್ಕೂ ಬೆನ್ನಿಗೂ ಬೇಕಾದಂತೆ ಒಗ್ಗಿಕೊಳ್ಳುವ ಮೃದುವಾದ ಬೀನ್ ಬ್ಯಾಗಿನ ಮೇಲೆ ಕೂತು, ಘಟ ಬಾರಿಸುತ್ತ, ಬಾಯಿಗೆ ಬಂದದ್ದನ್ನು ಬಂದಂತೆ ಹಾಡತೊಡಗಿದೆ. ಲಯಕ್ಕೆ ಶ್ರೀನಿವಾಸನೂ ಒಲೆದಾಡಲು ತೊಡಗಿದ. ಈ ಕಥೆಯನ್ನು ಓದುವ ನೀವು ನಿಮಗೆ ಬೇಕಾದ ಸಾಲುಗಳನ್ನು ಸೇರಿಸಿಕೊಂಡು ಓಲಾಡಬಹುದು. ಆದರೆ ನಮಗೆ ಭಾರೀ ಲಾಭದಾಯಕವಾಗಿಬಿಟ್ಟಿರುವ, ನಮ್ಮ ದುಃಖಕ್ಕೂ ನಮ್ಮ ಏಳ್ಗೇಗೂ ಕಾರಣವಾಗಿರುವ ಕೆಲವು ಇಂಗ್ಲಿಷ್ ಶಬ್ದಗಳನ್ನು ಮುರಿದು ಮೊಟಕು ಮಾಡಬೇಕಾಗುವುದು: ಉದಾಹರಣೆಗೆ ನಮ್ಮ ಅಂತಾರಾಷ್ಟ್ರೀಯ ಏಳಿಗೆಗೆ ಕಾರಣವಾದ sensitivity ಯನ್ನು ಹೀಗೆ:
ಸೆನ್ಸಿಟಿ ಸೆನ್ಸಿಟಿ
ಸೆನ್ಸಿಟಿ ವಿಟಿ ವಿಟಿ
ಮಿಂಡ್ರಿಗೆ ಹುಟ್ಟಿದ
ಸೆನ್ಸಿಟಿ ವಿಟಿ ವಿಟಿ
ಇದನ್ನು ಪಲ್ಲವಿ ಮಾಡಿಕೊಂಡು, ಮನಸ್ಸಿಗೆ ಬಂದಂತೆ ಸಾಲುಗಳನ್ನು ಸೇರಿಸುತ್ತ ಹೋದೆ. ನೆನಪಾಗುವ ಸಾಲುಗಳು ಇವು:
ಶೀನನ ಸೆನ್ಸಿಟಿ, ಸೇದನ ಸೆನ್ಸಿಟಿ
ಮಿಂಡ್ರಿಗೆ ಹುಟ್ಟಿದ ಸೆನ್ಸಿಟಿ ಸೆನ್ಸಿಟಿ
(ಅಥವಾ ಶೀನನ ಕೇಸಿನಲ್ಲಾದರೆ)
ಫೋರ್ಡಿಗೆ ಹುಟ್ಟಿದ ಸೆನ್ಸಿಟಿ, ಸೆನ್ಸಿಟಿ
ಸೆನ್ಸಿಟಿ ವಿಟಿ ವಿಟಿ
ಬಿಳಿ ಶೆಟ್ಟರು ಬೆಳಸಿದ/ಹಾರ್ವರ್ಡ್ ಸೆನ್ಸಿಟಿ
ಕರಿಭಟ್ಟರು ಬೆಳೆಸಿದ/ವೇದಿಕ್ ಸೆನ್ಸಿಟಿ
ಶೀನನ ಸೆನ್ಸಿಟಿ, ಸೇದನ ಸೆನ್ಸಿಟಿ
ಮಿಂಡ್ರಿಗೆ ಹುಟ್ಟಿದ ಸೆನ್ಸಿಟಿ ವಿಟಿ ವಿಟಿ
(ಇದನ್ನು ರಾಗವಾಗಿ ಹೇಳಬೇಕು)
‘ಇಲ್ಲರಲಾರೆ ಅಯ್ಯೋ, ಅಲ್ಲೂ ಇರಲಾರೆ’ ಎನ್ನುವ ಸೆನ್ಸಿಟಿ.
ಶೀನನ ಸೆನ್ಸಿಟಿ, ಸೇದನ ಸೆನ್ಸಿಟಿ
ಫೋರ್ಡಿಗೆ ಹುಟ್ಟಿದ ಸೆನ್ಸಿಟಿ ವಿಟಿ, ವಿಟಿ
ಭಾರತ ಕೀರ್ತಿಯ ಭಾರೀ ಸೆನ್ಸಿಟಿ
ಅರಬರ ಕೀರ್ತಿಯ ಭರ್ಜರಿ ಸೆನ್ಸಿಟಿ
ಮಿಂಡ್ರಿಗೆ ಹುಟ್ಟಿದ ವೆರಿ ವೆರಿ ಸೆನ್ಸಿಟಿ
ಭಂಡರ ದುಡ್ಡಿಗೆ ಒಡ್ಡಿದ ಸೆನ್ಸಿಟಿ
ಬಿಳಿಯರ ಅಂಗಡಿಗೆ ಮೆತ್ತನೆ ಸೆನ್ಸಿಟಿ
ಶೀನನ ಸೆನ್ಸಿಟಿ ಸೇದನ ಸೆನ್ಸಿಟಿ
ಸೆನ್ಸಿಟಿ ಸೆನ್ಸಿಟಿ ಸೆನ್ಸಿಟಿ ವಿಟಿ ವಿಟಿ
ಮಿಂಡ್ರಿಗೆ ಹುಟ್ಟಿದ ಸೆನ್ಸಿಟಿ ವಿಟಿ ವಿಟಿ
ಬ್ರಾಹ್ಮಿನ್ಸ್ ಹಳಿಯಲು/ಎಕ್ಸ್ಪೋರ್ಟ್ ಫೋಕ್ಲೋರ್
ಬ್ರಾಹ್ಮಿನ್ಸ್ ಹಳಿಯಲು/ಎಕ್ಸ್ಪೋರ್ಟ್ ‘ವಾಕ್’ಲೋರ್
ಯಜ್ಞದ ರಿಚುಯಲ್
ತಂತ್ರದ ರಿಚುಯಲ್
ಬೊಜ್ಜದ ರಿಚುಯಲ್
ಮದುವೆಯ ರಿಚುಯಲ್
(ಇನ್ನು ಮುಂದೆ ಹರಿಕಥೆಯ ದಾಟಿಯಲ್ಲಿ)
ಮಿಂಡರೇ ಅಧ್ವರ್ಯುವಾಗಿ, ಮಿಂಡರೇ ಬ್ರಹ್ಮ ಕೂತು, ಮಿಂಡರೇ ಎಡಿಟ್ ಮಾಡಿ, ಮುಂದೆ ಮಿಂಡರೇ ಸ್ಕಾಲರ್ಶಿಪ್ ಕೊಟ್ಟು, ಪುಣ್ಯಭೂಮಿ ಭಾರತದ ಭಿಕ್ಷುಗಳನ್ನು ಬರಮಾಡಿಕೊಂಡು ತಮ್ಮ ತಪೋಬೂಮಿಯಾದ ಚಿಕಾಗೊ, ಹಾರ್ವರ್ಡ್, ಪ್ರಿನ್ಸ್ಟನ್ಗಳಲ್ಲಿ ಕಲಿಸಿ ಪಿಎಚ್ಡಿ ಕೊಟ್ಟು ಹಿಂದಕ್ಕೆ ಕಳುಹಿಸಿ, ಮತ್ತೆ ತಮ್ತೆ ಬರಮಾಡಿಕೊಳ್ಳುತ್ತ ಇರಲಾಗಿ;
ನಮ್ಮ ಶ್ರೀನಿವಾಸ ಜೋಯಿಸರಿಗೆ ತಮ್ಮ ಪೂರ್ವಜನ್ಮದ ಕೊಟ್ಟಿಗೆಯ ವಾಸನೆ ಥಟ್ಟನೇ ನೆನಪಾಗಿ, ತನ್ಮೂಲಕ ಮನೋಕ್ಲೇಷೆ ಉಂಟಾಗಿ,
(ಮುಂದಿನದು ಕುಣಿತದ ಹಾಡಿನಂತಿರಬೇಕು)
ವೇದನೆ ಬೋಧನೆ ಸೆಮಿನಾರ್ ಸಾಧನೆ
ಗಾಂಧಿಯ ಪ್ರೊಜೆಕ್ಟ್ ಮಿಂಡರ್ ಬಡಜಟ್
ಈ ಮಿಂಡರ ಹಳಿಯಲು ಫೋರ್ಡಿನ ಬುಡ್ನಟ್
ಹುಟ್ಟಿತು ಹುಟ್ಟಿತು ಅಹಹಾ ಹುಟಿತು
ಶೀನನ ಪುಸ್ತಕ, ಸೇದನ ಪುಸ್ತಕ
ಮಿಂಡ್ರಿಗೆ ಹುಟ್ಟಿದ ಕನ್ನಡ ಪುಸ್ತಕ
(ಇದು ರಾಗವಾಗಿ)
‘ಇಲ್ಲಿರಲಾರೆ, ಅಯ್ಯೋ ಅಲ್ಲೂ ಇರಲಾರೆ’
ಎನ್ನುವ ಪುಸ್ತಕ, ಯಾಪರಿ ಪುಸ್ತಕ?
ಸೋಹಂ ಪುಸ್ತಕ, ಕೋಹಂಪುಸ್ತಕ
ಹರಿಹರಿ ಪುಸ್ತಕ, ಹರಹರ ಪುಸ್ತಕ
ಮಿಂಡ್ರಿಗೆ ಹುಟ್ಟಿಯು ಅಪ್ಪಂಥ ಪುಸ್ತಕ
ಸೆನ್ಸಿಟಿ ಸೆನ್ಸಿಟಿ ಸೆನ್ಸಿಟಿವಿಟಿ ವಿಟಿ
ಹಲ್ಕಟ್ ಲೋಫರ್ಸ್ ಬೋಫರ್ಸ್ ಗನ್ನಿನ
ನೊಬೆಲ್ ದತ್ತಿಯ ಅಹಹಾ ಪುಸ್ತಕ
ಒಹೂಹೋ ಪುಸ್ತಕ
ಮಿಂಡ್ರಿಗೆ ಹುಟ್ಟಿಯು ಅಪ್ಪಂಥ ಪುಸ್ತಕ
ಯಾವುದೋ ಒಂದು ಉನ್ಮತ್ತ ಘಟ್ಟದಲ್ಲಿ ಘಟ ಬಾರಿಸುವುದನ್ನು ನಿಲ್ಲಿಸಿ ಎದ್ದುನಿಂತು ಪ್ರವಾದಿಯಂತೆ ಹೀಗೆ ಘೋಷಿಸುವುದು:
If there is Ford, only then can you afford to say:
ಎರಡೂ ಕೈಗಳನ್ನೂ ಎತ್ತಿ, ಎರಡೆರಡು ಬೆರಳುಗಳನ್ನು ಕೊಟೇಶನ್ ಮಾರ್ಕ್ ಮಾಡಿ ಮತ್ತೆ ಹಾಡತೊಡಗುವುದು; ಶ್ರೀನಿವಾಸನೂ ದನಿಗೂಡಿಸುವುದು:
ಇಲ್ಲಿರಲಾರೆ, ಅಯ್ಯೋ
ಅಲ್ಲಿಗೂ ಹೋಗಲಾರೆ
ಒಬ್ಬರನ್ನೊಬ್ಬರು ಅಪ್ಪಿಕೊಂಡು ನಕ್ಕೆವು. ನಗುತ್ತಿದ್ದಾಗ ನನಗೆ ಅವನು ಬರೆದ ಅಕ್ಕಯ್ಯನ ಚಿತ್ರ ಇಷ್ಟವಾಗಿ ಬಿಟ್ಟಿತ್ತು. ಇಬ್ಬರೂ ಹಾಳೆ ಟೊಪ್ಪಿಯನ್ನೂ ಕೋಟು ಪ್ಯಾಂಟುಗಳನ್ನೂ ಧರಿಸಿ, ನಮ್ಮ ನಡು ವಯಸ್ಸಿನ ಘನತೆಯಲ್ಲಿ ಫೆಕರರಂತೆ ಕುಣಿಯುತ್ತಿದ್ದಾಗ ಇಂಗ್ಲಿಷ್ ಶಬ್ದಗಳಲ್ಲಿ ಮಾತ್ರ ಗೆಳೆಯನಿಗೆ ಮುಂದಿನ ಈ ಮಾತುಗಳನ್ನು ಹೇಳುವುದು ಸಾಧ್ಯವಾಯಿತೆಂದು, ಪ್ರಿಯ ಓದುಗರೇ, ನೀವು ಗಮನಿಸಬೇಕು:
”ಅಕ್ಕಯ್ಯನ ಬಗ್ಗೆ ನಿನ್ನ ಪೈಂಟಿಂಗ್, ನಿನ್ನ ಮಾತುಗಳು ಆಕ್ವರ್ಡ್ ಆಂಡ್ ಅಬ್ಸರ್ಡ್’ ಆದ್ದರಿಂದಲೇ ಅಥೆಂಟಿಕ್ ಅಂತ ಅನ್ನಿಸುತ್ತೆ ಕಣೋ. ”
ಹೀಗೆ ಹೇಳಿ ಅಭ್ಯಾಸಬಲದಿಂದ ನನ್ನ ಹಿಪ್ ಪ್ಯಾಕೇಟಿಗೆ ಕೈ ಹಾಕಿ ನೋಡಿದರೆ ಪರ್ಸ್ ಮಾಯವಾಗಿ ಬಿಟ್ಟಿತ್ತು.
ಬೆಳಗಿನಜಾವದ ತನಕ ಅಗ್ಗಿಷ್ಟಿಕೆ ಎದುರು ನಾವು ನಗುತ್ತ ಕಾಲಕಳೆಯುವುದಾಯಿತು.
* * *
Leave A Comment