ಜರತ್ಕಾರು – (೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದ್ದುದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು ತಲೆಕೆಳಗಾಗಿ ಜೋಲಾಡುವುದಕ್ಕೆ ಕಾರಣವೇನು? ಎಂಬುದಾಗಿ ಪ್ರಶ್ನೆ ಮಾಡಿದ. ಆಗ ಆ ಪಿತೃಗಳು ‘ಅಯ್ಯಾ ನಮ್ಮ ಅವಸ್ಥೆಯನ್ನು ಏನೆಂದು ಹೇಳೋಣ. ನಮ್ಮ ವಂಶದಲ್ಲಿ ಜರತ್ಕಾರುವೆಂಬುವನು ಜನಿಸಿದ್ದಾನೆ. ಅವನು ಮದುವೆ ಮಾಡಿಕೊಳ್ಳದಿರುವ ಕಾರಣ ಸಂತಾನಹೀನನಾದ ಆತನ ಮೂಲಕ ನಮಗೆ ಈ ಅವಸ್ಥೆ ಪ್ರಾಪ್ತವಾಗಿದೆ’ ಎಂದರು. ಆಗ ಜರತ್ಕಾರು ‘ನಾನೇ ಆ ಜರತ್ಕಾರು. ನಿಮ್ಮನ್ನು ಈ ಅಧೋಗತಿಯಿಂದ ಪಾರು ಮಾಡುತ್ತೇನೆ. ಆದರೆ ನಾಣು ನನ್ನ ಹೆಸರಿನ ಹುಡುಗಿಯನ್ನೇ ಮದುವೆಯಾಗುವೆನು’ ಎನ್ನಲು ಪಿತೃ ದಏವತೆಗಳು ಅದಕ್ಕೆ ಸಮ್ಮತಿಸಿದರು. ಬಳಿಕ ಜರತ್ಕಾರು ಹುಡುಗಿಯನ್ನು ಹುಡುಕುತ್ತ ವಾಸುಕಿಯ ತಂಗಿ ಜರತ್ಕಾರುವೆಂಬ ಹೆಸರಿನವಳೆಂಬುದನ್ನು ತಿಳಿದು ಆತನಲ್ಲಿಗೆ ಹೋಗಿ, ಅವನ ತಂಗಿಯನ್ನು ತನಗೆ ಕೊಡುವುದೆಂದು ಕೇಳಿದ. ನಾಗರಾಜನಾದ ವಾಸುಕಿ ಸಮ್ಮತಿಸಿ ಮದುವೆ ಮಾಡಿಕೊಟ್ಟ. ಬಳಿಕ ಜರತ್ಕಾರು ಆಕೆಯನ್ನು ಕರೆದುಕೊಂಡು ತನ್ನ ಆಶ್ರಮವನ್ನು ಸೇರಿದ. (೨) ನಾಗರಾಜನಾದ ವಾಸುಕಿಯ ಸಹೋದರಿ, ಮೇಲೆ ಹೇಳಿದ ಜರತ್ಕಾರು ಮುನಿಯ ಹೆಂಡತಿ. ಆಸ್ತಿಕ ಮುನಿಯನ್ನು ಹೆತ್ತವಳು. ಒಮ್ಮೆ ಸಂಧ್ಯಾ ಸಮಯದಲ್ಲಿ ಜರತ್ಕಾರು ನಿದ್ರಿಸುತ್ತಿದ್ದ. ಸಂಧ್ಯಾ ಸಮಯ ಮೀರಿ ಹೋಗುವುದೆಂಬ ಭಯದಿಂದ ಈಕೆ ಹೆದರುತ್ತಲೇ ತನ್ನ ಪತಿಯನ್ನು ಎಚ್ಚರಗೊಳಿಸಿದಳು. ಜರತ್ಕಾರು ಮುನಿ ಎಚ್ಚೆತ್ತು ಕೋಪದಿಂದ ತನ್ನ ಪತ್ನಿ ತನ್ನನ್ನು ಸ್ವಲ್ಪವೂ ಲೆಕ್ಕಿಸದೆ ಇಂತಹ ಅಪಮಾನ ಮಾಡಿದಳೆಂಬ ಕೋಪದಿಂದ ತಪಸ್ಸಿಗಾಗಿ ಅರಣ್ಯಕ್ಕೆ ಹೋದನು. ಉಗ್ರ ತಪ್ಪಸ್ಸಿನಿಂದ ದೇಹವನ್ನು ಕೃಶ ಮಾಡಿದವನಾದುದರಿಂದ ಜರತ್ಕಾರುವೆಂದು ಹೆಸರು.

(ಪುರಾಣನಾಮ ಚೂಡಾಮಣಿ)

ತಿರುಪತಿ ತಿಮ್ಮಪ್ಪನ ದಯೆಯಿಂದ ಕೊನೆಗೂ ಗರ್ಭ ನಿಂತು, ಇವನು ಹುಟ್ಟಿ, ಈ ಹೆಸರು ಪಡೆದದ್ದೆಂದು ಬೋಳುತಲೆಯ ಮೇಲೆ ಕೆಂಪು ಸೀರೆಯ ಸೆರಗನ್ನು ಎಳೆದುಕೊಳ್ಳುತ್ತಾ ನೆರೆಹೊರೆಗೆ ತಾಯಿ ತನ್ನ ಹುಟ್ಟನ್ನು ಪವಿತ್ರಗೊಳಿಸುವಾಗ ತಿಮ್ಮಪ್ಪ ಮುಳ್ಳಾಗುತ್ತಿದ್ದ. ಅವನ ಹತ್ತನೇ ವಯಸ್ಸಿನಲ್ಲಿ ತಂದೆಯಿಲ್ಲದ ಮಗನಿಗೆ ವಿಜೃಂಭಣೆಯಿಂದ ತಿರುಪತಿಯಲ್ಲಿ ಉಪನಯನ ಮಾಡಿಸಿ, ಪಾಪನಾಶಿನಿಯಲ್ಲಿ ಮೂರು ಮುಳುಗು ಹಾಕಿಸಿ, ದೇವಸನ್ನಿಧಿಯಲ್ಲಿ ಒಂದು ಕ್ಷಣ ನಿಲ್ಲಿಸಿದಾಗ ಕಣ್ಣು ಕೋರೈಸುವ ಅಲಂಕೃತ ವಿಗ್ರಹ ತಿಮ್ಮಪ್ಪನಿಗೆ ಓಕರಿಕೆ ಬರಿಸಿತ್ತು. ತಿರುಪತಿಗೆ ಬರುವಾಗ ದಾರಿಯಲ್ಲಿ ಅವನಿಗೆ ಇನ್ನೊಂದು ಮೈ ಕಳಚಿಕೊಂಡಂತಹ ಅನುಭವವೂ ಆಗಿತ್ತು.

ಕಿಕ್ಕಿರಿದು ತುಂಬಿದ ರೈಲಿನಲ್ಲಿ ಸೀಟಿನ ಮಲಗಿ ಅರ್ಧ ನಿದ್ರೆಯಲ್ಲಿ ಅವನು ಬಳಲುತ್ತಿದ್ದ. ಹಲವರು ಹೀಗೆ ನಿದ್ದೆಯ ಹಲವು ಅವಸ್ಥೆಗಳಲ್ಲಿ ಅತ್ತಿತ್ತ ಹೊರಳಲಾರದ ಬಿದ್ದಿದ್ದರು. ಹೆಂಗಸರು, ಮಕ್ಕಳು, ಮುದುಕರು, ಬುಟ್ಟಿಗಳಲ್ಲಿ ಹಳಸಿ ನಾರುತ್ತಿದ್ದ ಅವರ ಬುತ್ತಿಯ ಎಂಜಲು, ಸೆಕೆಗೆ ಬೆವರುತ್ತಿದ್ದ ಅವರ ವಾಸನೆ. ಮಕ್ಕಳ ಉಚ್ಚೆಯು ಕಮಟು – ಈ ಅಸಹ್ಯದ ನಡುವೆ ಯಾವುದೋ ಕೈ ಆರ್ತನಾಗಿ ಅವನನ್ನು ತಡವುತ್ತಿದ್ದಂತೆ ಭಾಸವಾಯಿತು. ಅದು ಹಿತವೆನ್ನಿಸತೊಡಗಿತು. ಯಾರ ಕೈ ಅದು ತಿಳಿಯದಂತೆ ಪಕ್ಕದಲ್ಲಿ ಒಂದು ಮುದುಕಿಯೂ, ಇನ್ನೊಬ್ಬ ಪ್ರಾಯದ ಹೆಂಗಸೂ ಮಲಗಿದ್ದರು. ಮುಖ ಕಾಣಿಸದ ಈ ಯಾರ ಕೈಗೊ ಅವನು ಉದ್ರೇಕಿತನಾಗುತ್ತ ಹೋದಂತೆ ಆ ಕೈಯೂ ಚುರುಕಾಗುತ್ತ ಅವನು ಅವರಿಗೆ ತಿಳಿಯದ ಇನ್ನೊಂದು ಶರೀರವನ್ನು ತನ್ನೊಳಗೆ ಸೃಷ್ಟಿಸುತ್ತ ಹೋಯಿತು. ಅದರ ಉದ್ರೇಕ ತಾಳಲಾರದೆ ಅವನು ಎದ್ದು ನಿಂತ.

ಆಗಿನ್ನೂ ಸೂರ್ಯ ಹುಟ್ಟುತ್ತಿದ್ದ. ರೈಲಿನ ಕಿಟಕಿಯಿಂದ ಹಠಾತ್ತನೆ ಕಣ್ಣಿಗೆ ಎದುರಾದದ್ದು ಬಹುದೂರದಲ್ಲಿ ಒಂದು ಬೋಳಾದ ಎತ್ತರದ ಬೆಟ್ಟ. ಅದರ ನೆತ್ತಿಯ ಮೇಲೆ ಕೆಂಪು ಉಂಡೆಯಾದ ಸೂರ್ಯ. ಒಂದು ಕ್ಷಣ ತಾನಿರುವುದೆಲ್ಲಿ ಎಂಬ ಪ್ರಜ್ಞೆ ತಿಮ್ಮಪ್ಪನಿಗೆ ಉಳಿದಿರಲಿಲ್ಲ. ಕಣ್ಣು ಕತ್ತಲೆ ಕಟ್ಟಿದಂತಾಯಿತು.

ತನ್ನ ಕಾಲನ್ನು ಅದೇ ಕೈ ಸವರುತ್ತ ಕಚಗುಳಿಯಾಗುವಂತೆ ಮೃದುವಾಗಿ ಅಲ್ಲಿ ಇಲ್ಲಿ ಚೂಟುತ್ತಿತ್ತು. ತಿಮ್ಮಪ್ಪ ಕಾಲು ಕೊಸರಿಕೊಂಡ. ತಾಯಿಯನ್ನು ಹುಡುಕಿದ. ರೈಲಿನ ಒಂದು ಮೂಲೆಯಲ್ಲಿ ಬೋಳು ತಲೆಯ ಮೇಲೆ ಸೆರಗು ಹೊದ್ದು ತಾಯಿ ಜಪದ ಮಾಲೆ ಹಿಡಿದು ಜಪಿಸುತ್ತಿದ್ದಳು. ಇರುವಷ್ಟೆ ಮೂಲೆಯಲ್ಲಿ ತನ್ನ ಚಿಪ್ಪಿನೊಳಗೆ ಸಂಕ್ಷೇಪವಾಗಿ ಅಡಗಿದ ಆಮೆಯಂತಿದ್ದಳು. ತನ್ನಷ್ಟಕ್ಕೆ ತಾನು ಮಡಿಯಲ್ಲಿದ್ದು, ರೈಲಲ್ಲೂ ಶುಭ್ರಳೆಂದು ಕಂಡ ತಾಯಿ ಹತ್ತಿರ ಕರೆದಳು. ತನ್ನ ಜಾಗದಲ್ಲಿ ಕೂರಿಸಿಕೊಂಡು ತಿನ್ನಲು ಕುಟ್ಟವಲಕ್ಕಿ ಕೊಟ್ಟಳು. ಹಸಿವಾದರೂ ತಿನ್ನಬೇಕೆನ್ನಿಸಿರಲಿಲ್ಲ. ಗಲೀಜುಗೊಂಡಂತೆ ಅನ್ನಿಸಿತ್ತು.

ದೇವರು ಪ್ರಾಯಶಃ ಇಲ್ಲವಾದ್ದರಿಂದ ಯಾವುದಕ್ಕೂ ಅರ್ಥವಿಲ್ಲ ಎಂಬ ಭಾವನೆ ತಿಮ್ಮಪ್ಪನನ್ನು ಶೂಲೆಯಂತೆ ಬಾಧಿಸುತ್ತದೆ ಎಂದುಅ ವನ ಬರವಣಿಗೆಯ ಅಭಿಮಾನಿಗಳು ತಿಳಿದಿದ್ದಾರೆ. ಅವನ ನಿರ್ಭಾವದ ಶೀತಲ ರಚನೆಗಳು ಹೀಗೆ ಅವರಿಗೆ ಧ್ವನಿಸುತ್ತವೆ. ಆದರೆ ಅವು ಓದುಗನನ್ನು ಓರೆ ನೋಟದಿಂದಲೂ ನೋಡದೆ ಶೂನ್ಯವನ್ನು ದಿಟ್ಟಿಸುತ್ತವೆ.

ತಿಮ್ಮಪ್ಪನಿಗೆ ತಂದೆಯನ್ನು ನೋಡಿದ ನೆನಪಿಲ್ಲ. ಜರತಾರಿ ಶಲ್ಯ, ರುಮಾಲು ಧರಿಸಿ ಮಾಸುತ್ತ ಹೋದ ನಡುಮನೆಯ ಚಿತ್ರಪಟವಾಗಿ ತಂದೆಯನ್ನು ಅವನು ಕಾಣುತ್ತ ಬೆಳೆದದ್ದು. ತಾನೇ ಬೇಯಿಸಿಕೊಂಡ ಗಂಜಿಯನ್ನು ದಿನಕ್ಕೊಂದು ಸಾರಿ ಊಟ ಮಾಡಿ, ಏಕಾದಶಿ ದಿನ ಉಗುಳೂ ನುಂಗದಂತೆ ಹಸಿದಿದ್ದು, ಸದಾ ಮಡಿಯಲ್ಲಿ ತನ್ನನ್ನು ಪೊರೆದು ಬೆಳೆಸಿದ ತಾಯಿಯಿಂದ ಅವನು ದೂರವಾಗುತ್ತ ಹೋದಂತೆ ಅವನ ಶಾಬ್ದಿಕ ರಚನೆಗಳು ಸ್ವಯಂ ಪ್ರಭೇಯ ಕಠೋರ ಶಿಲ್ಪಗಳಾಗುತ್ತ ಹೋದದ್ದು.

ಬಾಲನಿದ್ದಾಗ ಎಲ್ಲರಂತೆ ತಾಯಿಯೂ ಒಂದು ಹೆಣ್ಣೆಂದು ಅವನಿಗೆ ಭಾಸವಾಗುತ್ತಿದ್ದುದು ಅವಳು ಮುಟ್ಟಾಗಿ ಹೊರಗೆ ಕೂತಾಗ, ಮುಟ್ಟು ನಿಂತ ಮೇಲೆ ಈ ಹತ್ತು ವರ್ಷಗಳೂ ತನ್ನ ಬೋಳು ತಲೆಯ ಕಠೋರ ವ್ರತದಲ್ಲಿ ದೇವರನ್ನು ಮಗನಿಗೆ ಆಕಾರಗೊಳಿಸಲು ಮೌನವಾಗಿ ಒಣಗುತ್ತ ಹೋದ ಅವಳ ಆರ್ತತೆಯನ್ನು ನಿರಾಕರಿಸಿ ತಿಮ್ಮಪ್ಪ ಬೆಳೆಯುತ್ತ ಹೋದ. ತಾಯಿಯ ಬಗ್ಗೆ ತನ್ನ ಬಾಲ್ಯದ ಅಕ್ಕರೆಯನ್ನು ನಂತರದ ಉದ್ವಿಗ್ನತೆಯನ್ನೂ ಕ್ರಮೇಣ ಕಳಕೊಂಡಿದ್ದ.

ಅವಳ ವೈಧವ್ಯದ ಮಡಿವಂತಿಕೆಯ ಕಾಠಿಣ್ಯದಿಂದಾಗಿ ತಿಮ್ಮಪ್ಪನಿಗೆ ಆಕರ್ಷಿತರಾದ ಯಾವ ವಿದ್ಯಾವಂತ ಹೆಣ್ಣೂ ಅವಳ ಮನೆಯಲ್ಲಿರಲು ಒಪ್ಪುವಿದಲ್ಲೆಂದು ತಾಯಿಗೆ ಗೊತ್ತು. ತಿಮ್ಮಪ್ಪನಿಗೂ ಮದುವೆ ಬೇಕಿರಲಿಲ್ಲ. ಆದರೆ ಈ ಘೋರ ತಪಸ್ವಿನಿ ಪಿತ್ರಾರ್ಜಿತ ಒಡವೆಗಳನ್ನು ಒಂದು ದೊಡ್ಡ ಕಬ್ಬಿಣದ ಟ್ರಂಕಿನಲ್ಲಿಟ್ಟು, ಬೀಗ ಹಾಕಿ, ಒಂದು ಮುದಿ ಸರ್ಪದಂತ ಕಾವಲು ಕೂತಿದ್ದಳು. ಅದರ ಪಕ್ಕ ಕೂತೇ ಅವಳು ಜಪ ಮಾಡುವುದು. ಗೋಡೆಯ ಮೇಲೆ ರಾಯರ ಪಠ. ಮೂಲೆಯಲ್ಲಿ ಅವಳು ಮಲಗುವ ಚಾಪೆ, ಅದರ ಮೇಲೋಂದು ಕೃಷ್ಣಾಜಿನ.

ಅವಳು ಕಾವಲು ಕೂತ ಆಭರಣಗಳು ಬರಲಿರುವ ಸೊಸೆಗಗಿ, ಮಗನ ಜಾತಕ ನೋಡಿದ ಜೋಯಿಸರು ಇನ್ನು ಕೆಲವೇ ವರ್ಷಗಳಲ್ಲಿ ಕಂಟಕ ಪರಿಹಾರವಾಗಿ ಒಳ್ಳೆಯ ಯೋಗ ಪ್ರಾಪ್ತವಾಗುವುದೆಂದು ಭವಿಷ್ಯ ನುಡಿದಿದ್ದರು. ಅವರ ಪ್ರಕಾರ ಅವನಿಗಿದ್ದ ಕಂಕಟವೆಂದರೆ ಸನ್ಯಾಸದ ಬಯಕೆ. ಪ್ರತಿನಿತ್ಯ ಮೂಗಿನ ತನಕ ಕುಡಿದು, ಯಾವ ಸರ್ಕಾರಿ ಉದ್ಯೋಗಕ್ಕೂ ಆಸೆಪಡದೆ, ಯಾರಿಗೂ ಹಲ್ಲುಗಿಂಜದೆ, ವಾರಂಗನೆಯರ ಸಹವಾಸದಲ್ಲಿ, ಅಪೇಯ ಪಾನ ಅಭಕ್ಷ್ಯ ಭೋಜನದಲ್ಲಿ ತೊಡಗಿರುವ ತನ್ನ ಮಗ ಅವಧೂತಪಥದಲ್ಲಿ ದಿಕ್ಕು ತಪ್ಪಿರುವ ಕರುಣಾಜನಕ ಮಗುವಾಗಿ ತಾಯಿಗೆ ಕಂಡಿದ್ದ. ಅವನ ಶಾಬ್ದಿಕ ರಚನೆಗಳೆಲ್ಲ ವಿರೋಧಭಕ್ತಿಯ ಸ್ತೋತ್ರಗಳೆಂದೇ ಉಡುಪಿಯ ಸಂಸ್ಕೃತ ಪಂಡಿತರ ಈ ಮಗಳು ತಿಳಿದಿದ್ದಳು.

ತಿಮ್ಮಪ್ಪನ ಕ್ರೂರ ಒಳನೋಟಗಳಿಂದ ಅವಮಾನಿತರಾಗದವರು ಇಲ್ಲವೆನ್ನಬಹುದು. ಸಜ್ಜನರೆಂದೂ, ಸದ್ಗೃಹಸ್ಥರೆಂದೂ, ಪ್ರಗತಿಶೀಲರೆಂದರೂ ನಾವೆಲ್ಲ ತಿಳಿಯುವ ಮಂದಿಯನ್ನು ಅವನು ನಿರ್ದಯವಾಗಿ ಅನಾವರಣಗೊಳಿಸಿ, ಅವರು ಇರುವ ಸ್ವಾನುರಕ್ತಿಯ ನರಕವನ್ನು ಬಯಲುಗೊಳಿಸುತ್ತಿದ್ದ. ಈ ಅನಾವರಣದ ಕ್ರಿಯೆಲ್ಲಿ ಅವನು ಮುಗೊಳ್ಳುತ್ತಿರಲಿಲ್ಲ. ಅವನ ರಚನೆಗಳು ಅಪಸ್ವರವಿಲ್ಲದ ಕಂಚಿನ ಕುಂಭಗಳಂತಿದ್ದವು. ಉಜ್ಜಿದಾಗ ಮಾತ್ರ ಅವು ಹೊಳೆದು ಧ್ವನಿಸುತ್ತಿದ್ದವು.

ತಿಮ್ಮಪ್ಪ ಅನ್ಯರಿಗಾಗಿ ಸೃಷ್ಟಿಸಿದ ನರಕ ಇದೋ? – ಈ ಪ್ರಶ್ನೆ ಅವನ ಅಭಿಮಾನಿಗಳನ್ನು ಕಾಡಿದೆ. ಅವನ ಬರವಣಿಗೆಯನ್ನು ರೋಗಗ್ರಸ್ತ ಎಂದು ಟೀಕಿಸುವವರೂ ಇದ್ದಾರೆ. ತಮ್ಮ ಸಮಾಧಾನಕ್ಕಾಗಿ ಅವರು ಹೇಳಿಕೊಳ್ಳುತ್ತಾರೆ: ಈ ತಿಮ್ಮಪ್ಪನ ಆದಾಯ ನೋಡಿ, ಏನೂ ಮಾಡದೆ ಅವನಿಗೆ ತನ್ನ ತಾಯಿಯ ಪಿತ್ರಾರ್ಜಿತ ಆಸ್ತಿಯಿಂದ ತಿಂಗಳಿಗೆ ಹತ್ತು ಸಾವಿರ ರೂಪಾಯಿಯಾದರೂ ಸಿಗುತ್ತದೆ. ಅವಳ ತಾತ ದಿವಾನರಾಗಿ ಗಂಟು ಮಾಡಿ ಇಟ್ಟ ಆಸ್ತಿ ಇದು. ಹೊಟ್ಟೆ ಪಾಡಿಗೆ ತಿಮ್ಮಪ್ಪ ದುಡಿಯಬೇಕಾಗಿ ಬಂದಿದ್ದರೆ ಅವನ ದುಃಖಕ್ಕೂ ಅವನ ನರಕಕ್ಕು ಅವನ ಕ್ರೂರ ಒಳನೋಟಕ್ಕೂ ಚಾರಿತ್ರಿಕ ರಿಯಾಲಿಟಿ ಇರುತ್ತಿತ್ತು.

ಅವನನ್ನು ಮೆಚ್ಚುವವರಿಗೆ ಇನ್ನೇನೋ ಧ್ವನಿಸುತ್ತದೆ. ಅವನ ಭಾಷಾ ವಿನ್ಯಾಸಗಳ ಕರಾಳ ಗಹ್ವರದಲ್ಲಿ ಕೆಲವೊಮ್ಮೆ ಹಠಾತ್ತನೆ ದಿವ್ಯ ಬೆಳಕಿನ ಸುದ್ದಿ ಮಿನುಗುತ್ತದೆ. ಎಮ್ಮೆ ಕರು ಬಾಲವೆತ್ತಿ ನಿರುದ್ದಿಶ್ಯವಾಗಿ ಮುಂಜಾನೆ ಕುಣಿಯುತ್ತದೆ. ವಿಕೃತ ಮೋರೆಗಳು ಬುದ್ಧನಂತೆ ಮುಗುಳ್ನಗುತ್ತವೆ. ಹೂವುಗಳು ಕನಸಿನಲ್ಲಿ ತೋರುವಂತೆ ಇನ್ನಷ್ಟು ಅಗಲವಾಗಿರುತ್ತವೆ.

ಅವನಿಗೆ ಮನೆಯಲ್ಲಿ ಅಡಿಗೆ ಮಾಇಡ ಬಡಿಸಲು ಒಂದು ಹುಡುಗಿಯಿದೆ. ಸಿಂಬೆಸುತ್ತಿ ಮೂಲೆಯಲ್ಲಿ ತನ್ನ ಪೆಟ್ಟಿಗೆಯ ಪಕ್ಕ ಜಪಿಸುತ್ತ ಕೂತಿರುವ ತಾಯಿ ತನ್ನ ಕೈಯಿಂದಲೇ ಬೇಯಿಸಿಕೊಂಡ ಗಂಜಿಯನ್ನು ತಿನ್ನುವುದು. ಅದಕ್ಕಾಗಿ ಅವಳಿಗೆ ಬೇರೆಯದೇ ಆದ ಸೌದೆಯ ಒಲೆಯಿದೆ. ಅವಳು ಬಳಸುವ ನೀರಿಗಾಗಿ ಹಿತ್ತಲಿನಲ್ಲಿ ಬಾವಿಯಿದೆ. ಆದರೆ ತಿಮ್ಮಪ್ಪಗಾಗಿ ರೆಫ್ರಿಜಿರೇಟರ್, ಗ್ಯಾಸ್ ಒಲೆ ಇತ್ಯಾದಿ ಸಲಕರಣೆಗಳು ಇವೆ. ತಮ್ಮ ಬಂಗಲೆಯಿದ್ದ ದೊಡ್ಡ ಕಾಂಪೌಂಡಿನ ಮೂಲೆಯಲ್ಲಿದ್ದ ಒಂದು ರೂಮನ್ನು ಅವನಿಗೆ ಅಡಿಗೆ ಮಾಡುವ ಈ ಹುಡುಗಿಗೂ ಅವಳ ಮುದಿ ತಾಯಿಗೂ ಕೊಡಲಾಗಿದೆ. ಇಬ್ಬರಿಗೂ ಊಟ, ಬಟ್ಟೆ, ವಸತಿಗಳನ್ನು ತಾಯಿ ಒದಗಿಸುತ್ತಾಳೆ.

ಕಮಲ ಎಂಬ ಈ ಹುಡುಗಿ ಎಸ್‌ಎಸ್‌ಎಲ್‌ಸಿ ಓದಿದ್ದಾಳೆ. ತಿಮ್ಮಪ್ಪ ಬರೆದದ್ದನ್ನೆಲ್ಲ ಇವಳೇ ಟೈಪ್ ಮಾಡುವುದು. ಅವನ ಪುಸ್ತಕಗಳನ್ನೆಲ್ಲ ನೀಟಾಗಿ ಧೂಳು ಒರೆಸಿ ಜೋಡಿಸುವುದು. ಅವನ ಬಟ್ಟೆಗಳನ್ನು ಸ್ವಚ್ಛವಾಗಿ ತೊಳೆದು ಇಸ್ತ್ರಿ ಮಾಡವುದು, ಕಮಲ ಅವನನ್ನು ಆರಾಧಿಸುತ್ತಾಳೆ. ಅವನು ಕುಡಿದು ವಾಂತಿ ಮಾಡಿದರೆ ಅದನ್ನವಳು ಹೇಸಿಗೆ ಪಡೆದೆ ಬಾಚುತ್ತಾಳೆ. ಇರುವ ಎರಡು ಸೀರೆಗಳನ್ನು ಹರಿದದ್ದು ಕಾಣಿಸದಂತೆ ಉಟ್ಟುಕೊಳ್ಳುತ್ತಾಳೆ. ಸದಾ ಶುಭ್ರವಾಗಿರುತ್ತಾಳೆ. ತೆಳುವಾಗಿ ತೆಂಗಿನ ಎಣ್ಣೆ ಸವರಿ, ತನ್ನ ಕಪ್ಪು ಕೂದಲನ್ನು ಸಡಿಲವಾಗಿ ಹೆಣೆದು ಬಾಚಿಕೊಂಡಿರುತ್ತಾಳೆ. ಯಾವಾಗಲೂ ಒಂದು ಸಣ್ಣ ಮಲ್ಲಿಗೆ ದಂಡೆಯನ್ನೊ, ಸಂಪಿಗೆಯನ್ನೊ ಮುಡಿದುಕೊಂಡು ತಮ್ಮ ದೊಡ್ಡ ಕಾಂಪೌಂಡಿನಲ್ಲಿ ಯಾವುಯಾವುದು ಹೂ ಬಿಡುತ್ತಿದೆ ಎಂಬುದನ್ನು ಸುವಾಸಿನಿಯಾಗಿ ಸೂಚಿಸುತ್ತಾಳೆ. ತುಂಬು ತುಟಿ, ತುಸು ದಪ್ಪ ಮೂಗು, ತುಂಬಿದ ಕೆನ್ನೆ ಮತ್ತು ಜಿಂಕೆಯ ಕಣ್ಣುಗಳ ಎಣ್ಣೆಗೆಂಪು ಬಣ್ಣದ ಈ ಹುಡುಗಿ ದೇಹದಲ್ಲಿ ಎಷ್ಟು ಚುರುಕೋ, ಬುದ್ಧಿಯಲ್ಲಿ ಅಷ್ಟು ಮಂದವೆಂದು ತಿಮ್ಮಪ್ಪ ಅಂದುಕೊಳ್ಳುತ್ತಾನೆ. ಅವನ ಒಳನೋಟದ ಕ್ರೂರ ಅನಾವರಣಕ್ಕೆ ಸಿಗುವ ವಸ್ತುವಲ್ಲ ಅದು. ಆದರೆ ತಾಯಿಯನ್ನು ದೂರವಿಟ್ಟಂತೆ ಇವಳ ಆರಾಧನೆಯನ್ನೂ ತಿರಸ್ಕರಿಸುವುದು ತನ್ನ ಸ್ಥಿರತೆಗೆ ಅವಶ್ಯಕವೆಂದು ಅವನು ತಿಳಿದಿದ್ದಾನೆ. ಈ ಸ್ಥಿರತೆಯಲ್ಲಿ ಮಾತ್ರ ಅವನು ತೋರಿಕೆಯ ಭಕ್ತಿ ತರುವ ನೆಮ್ಮದಿಯನ್ನೂ, ತೋರಿಕೆಯ ಪ್ರೇಮದ ಕಪಟವನ್ನೂ, ಈ ಕಪಟ ಕಟ್ಟಿಕೊಡುವ ಸಾಂಸಾರಿಕ ಭದ್ರತೆಯನ್ನೂ ತಿರಸ್ಕರಿಸಿ ಸ್ವಾನುರಕ್ತಿಯ ನರಕದಲ್ಲಿ ಇರುವ ಮನುಷ್ಯನ ನಿಜಸ್ಥಿತಿ ಕಂಡಾನು.

ಆದರೂ ಒಂದು ದಿನ ಕುತೂಹಲ ಕೆರಳಿತು. ಸೂಳೆಯರ ಸಹವಾಸದಲ್ಲಿ ಜಡಗೊಳಿಸಿಕೊಂಡಿದ್ದ ಕಾಮ ಹೀಗೆ ಕೆರಳಲು ಕಾರಣ, ತಾನು ರಾತ್ರಿಯ ಆರಾಧನೆ ಮುಗಿದ ಮೇಲೆ ಬರುವುದೆಂದು ಅವನ ಕಿವಿ ಮೇಲೆ ಬೀಳುವಂತೆ ಹೇಳಿ ತಾಯಿ ರಾಯರ ವೃಂದಾವನಕ್ಕೆ ಹೋದದ್ದು. ತಿಮ್ಮಪ್ಪ ಬರೆಯುತ್ತ ಕೂತವನು ಸಿಗರೇಟು ಹಚ್ಚಿದ. ಪುಸ್ತಕದ ಧೂಳು ಒರೆಸುತ್ತ ತನ್ನ ಕೋಣೆಯಲ್ಲಿ ನಿಂತ ಕಮಲಳನ್ನು ಗಮನಿಸಿದ. ಎದ್ದು ಹೋಗಿ ಅವಳ ಎದುರು ನಿಂತು ತನ್ನನ್ನು ಕೂಡುವಂತೆ ನಿರ್ಭಾವದಿಂದ ಕೇಳಿದ. ಅವಳು ತಲೆತಗ್ಗಿಸಿ ಸಮ್ಮತಿಸಿದಳು. ಬಟ್ಟೆಯನ್ನು ಬಿಚ್ಚಿಹೋದಾಗ ನಾಚಿದಳು. ತನ್ನ ನಾಚಿಕೆ ಅವನಿಗೆ ಅಡ್ಡಿಯಾದೀತೆಂದು ಕಷ್ಟಪಟ್ಟಳು. ಮಲಗಿದ್ದಾಳ ಸುಖಪಟ್ಟವಳಂತೆಯೂ ಕಂಡಳು. ಅನಂತರ ದುಡ್ಡು ಕೊಡಲು ಹೋದಾಗ ಭಯದಲ್ಲಿ ಬಿಳುಚಿ ಅಳತೊಡಗಿದಳು.

ಇದನ್ನು ತಿಮ್ಮಪ್ಪ ನಿರೀಕ್ಷಿಸಿರಲಿಲ್ಲ. ಅತ್ಯಂತ ಹೇಸಿಗೆಯಾಗಿ ಮೈನವಿರೇಳಿತು. ಭಯವಾಯಿತು. ನಿಷ್ಠುರವಾಗಿ ಅವನು ಬೆನ್ನು ಹತ್ತಿದ ಸತ್ಯದಲ್ಲಿ ಈಗ ತಾನು ಕಂಡದ್ದಕ್ಕೆ ಜಾಗವಿರಲಿಲ್ಲ. ಈ ಘಟನೆಯ ನಂತರ ಕಮಲಳೂ ತನ್ನ ವ್ರತಶೀಲ ತಾಯಿಯಂತ ದೇವರ ಸತ್ಯವನ್ನು ಸಾಕ್ಷತ್ಕಾರ ಮಾಡಿಕೊಡಲು ಕಾದಿರುವ ಚಾಕತ ಪಕ್ಷಿಯಂತೆ ತೋರತೊಡಗಿದಳು. ಸದಾ ಗರ್ಭಗೊಳ್ಳುತ್ತ, ಸದಾ ಹೆರುತ್ತ, ಸ್ವಪ್ರೇಮದಲ್ಲಿ ಗಿಜಿಗುಟ್ಟುವ ಜೀವಜಾಲದಲ್ಲಿ ತಾನು ಮೋಹಿತನಾಗುವ ಸಾಧ್ಯತೆ ಕಂಡು ತಿಮ್ಮಪ್ಪ ಗೊಂದಲಗೊಂಡ.

ದೇಹ ಹಸಿದಾಗ ತಾನು ಹೇಸುತ್ತಲೇ ತೃಪ್ತಿಪಡಬೇಕದ ಗಲ್ಲಿಗೆ ನಿತ್ಯ ಕುಡಿದು, ತಿಂದು ಹೋಗತೊಡಗಿದ. ಕಮಲ ತನ್ನನ್ನು ಆಕರ್ಷಿಸದಂತೆ ತನ್ನ ತೆವಲು ತೀಟೆಗಳನ್ನು ಕಳೆದುಕೊಂಡು ಸಪ್ಪೆಯಾಗಿ ಅವನು ಮನೆಗೆ ಬರುವುದು ಶುರುವಾಗಿ ಈಗ ಎರಡು ತಿಂಗಳುಗಳ ಮೇಲಾಗಿದೆ.

ಇವತ್ತು ಕೂಡ ಏನೂ ಆಗದ ಹಾಗೆ ಕತ್ತಲಿನಲ್ಲಿ ಯಾವುದೋ ಹೆಣ್ಣಿನ ಜೊತೆ ಮಲಗಿಯಾದ ಮೇಲೆ ಒಂದು ಗ್ಲಾಸು ಸಾರಾಯಿಯನ್ನು ಗಟಗಟನೆ ಕುಡಿದು ಸಿಗರೇಟು ಹಚ್ಚಿಕಾರಲ್ಲಿ ಕೂತು ಯೋಚಿಸಿದ. ತಾನು ಯಾಕೆ ಹೀಗಿರುವುದು? ತನ್ನನ್ನು ಬಿಟ್ಟು ತನ್ನ ಬರವಣಿಗೆ ನಿಲ್ಲುವುದು, ಆದ್ದರಿಂದ ತನಗಿಂತ ತನ್ನ ಕೃತಿ ದೊಡ್ಡದು ಎಂದು ತಿಳಿದಿರುವುದರಿಂದ ತಾನೆ? ಆದರೆ ಈ ಕೃತಿಗಳೂ ತಮ್ಮ ಪ್ರಭೆ ತೋರುವುದು ಆತ್ಮದ್ವೇಷಿಗಳಿಗೆ ಮಾತ್ರ. ಅವರೂ ಆತ್ಮರತರೇ. ತನ್ನನ್ನೇ ತಾನು ಛೇಡಿಸಿಕೊಂಡು ಉತ್ಪನ್ನವಾಗುವ ಈ ದ್ರವ್ಯದ ಬಗ್ಗೆಯೂ ಯಾವತ್ತಿಗಿಂತ ಇವತ್ತು ಹೆಚ್ಚು ಹೇಸಿಗೆಯಾಯಿತು. ತನ್ನ ಕರ್ತವ್ಯದಲ್ಲಿ ತತ್ಪರಳಾದ ಸೂಳೆ, ದೇವರಿಗಾಗಿ ಒಣಗುತ್ತಿರುವ ತನ್ನ ತಾಯಿಯಂತೆಯೇ ಹೆಚ್ಚು ಶುದ್ಧವಾದ ರೀತಿಯಲ್ಲಿ ಇರುವವಳು ಎನ್ನಿಸಿತು.

ಕಾರು ನಿಲ್ಲಿಸಿಕೊಂಡಲ್ಲಿ ಒಂದು ಕಸದ ಬುಟ್ಟಿಯಿತ್ತು. ಸೂಳೆಯರ ಒಡೆದ ಬಳೆಗಳು, ಮುಟ್ಟಿನ ಬಟ್ಟೆ, ಸೀಳಿದ ಪ್ಲಾಸ್ಟಿಕ್ ವಸ್ತುಗಳು ಮತ್ತು ಉಪಯೋಗಿಸಿದ ಕಾಂಡೋಮ್‌ಗಳನ್ನೆಲ್ಲ ಎಸೆಯುವ ಮುನಿಸಿಪಾಲಿಟಿ ತೊಟ್ಟಿ ಅದು. ಅದರಲ್ಲೂ ಉಪಯುಕ್ತವಾದ್ದು ಇರಬಹುದೆಂದು ಭರವಸೆಯಿಂದ ತಲೆಕೆದರಿದ ಭಿಕ್ಷುಕಿಯರು ಬೆಳಿಗ್ಗೆ ತೊಟ್ಟಿಯಲ್ಲಿ ಕೈ ಹಾಕಿ ಹುಡುಕುತ್ತಾರೆ. ತಿಮ್ಮಪ್ಪನಿಗೆ ವಾಂತಿ ಬಂದಂತಾಯಿತು. ಕಾಮುಕತೆ ಮತ್ತು ಭಕ್ತಿ ತನ್ನನ್ನು ಮೈ ಮರೆಯುವಂತೆ ಮಾಡಿ, ಜೀವನದ ವಿಲಾಸದಲ್ಲಿ ತನ್ಮಯಗೊಳಿಸಿತೆಂದು ಹೆದರಿ, ತಾನು ಹೀಗೆ ಒಡೆದು ನಿಂತದ್ದು. ಒಡೆದು ನಿಂತೇ ಬರದದ್ದು.

ಕಾರಿನ ಸೀಟಿನ ಮೇಲೆ ತನ್ನ ಈಚಿನ ರಚನೆಗಳನ್ನು ಒಳಗೊಂಡ ನೋಟ್ ಬುಕ್ ಇತ್ತು. ತನ್ನನ್ನು ತೀವ್ರವಾಗಿ ಬಳಲಿಸಿದ ರಚನೆಗಳು ಅವು. ಯಾವು ಎಗ್ಗಿಲ್ಲದೆ ತನ್ನ ಎಲ್ಲ ಭಾವನೆಗಳಿಗೂ ಪೂರ್ಣಾವಕಾಶ ಕೊಟ್ಟು, ಉತ್ಕಟತೆಯನ್ನು ಅನುಭವಿಸುತ್ತಲೇ ಹೇಸುತ್ತ ತನ್ನಿಂದ ಹುಟ್ಟಿಸಿಕೊಂಡವು. ಮನುಷ್ಯನ ಜರತ್ಕಾರು ಸ್ಥಿತಿಯನ್ನು ಶೋಧಿಸುವ ತನ್ನ ಈಚಿನ ರಚನೆಗಳ ನೋಟ್ ಬುಕ್ಕನ್ನು ತೊಟ್ಟಿಗೆ ಎಸೆದುಬಿಟ್ಟ. ಅವುಗಳಲ್ಲಿದ್ದ ಛಲದ ಶೈತ್ಯ ಸೋಗಿನದು ಆಗಿರದಿದ್ದರೆ, ಹೀಗೆ ತೊಟ್ಟಿಯಲ್ಲಿ ಕಸವಾಗಿ ಕಣ್ಮರೆಯಾಗುವುದೇ ಆ ರಚನೆಗಳ ನೈಜದೆಸೆಯಾಗಿ ಕಂಡಿತು. ಹುಟ್ಟಿಸುವ ಹಂಗಿಲ್ಲದೆ, ಸುಮ್ಮನಿರುವ ವಜ್ರದಂತೆ ಹೊಳೆಯುತ್ತ ತನ್ನ ಪಾಡಿಗೆ ತಾನು ಇದ್ದುಬಿಡಬೇಕೆಂಬ ಆಸೆಯಾಯಿತು.

ಹಗುರೆನ್ನಿಸಿ ಮನೆಗೆ ಡ್ರೈವ್ ಮಾಡಿದ.

ಮನೆಯ ದೊಡ್ಡ ಕಾಂಪೌಡಿನ ಒಳಗೆ ತಾಯಿ ಆರೈಕೆ ಮಾಡಿ ಬೆಳೆಸಿದ ಸಂಪಿಗೆ, ಸಂಜೆ ಮಲ್ಲಿಗೆ, ಪಾರಿಜಾತ, ದಾಸವಾಳ, ಬಿಲ್ವ, ತುಂಬೆ, ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ, ರತ್ನಗಂಧಿ, ನಂಜುಬಟ್ಟಲು ಇದ್ದವು. ಈ ಎಲ್ಲವೂ ಅವಳ ನಿತ್ಯ ಪೂಜೆ ಮಾಡುವ ಮನೆ ದೇವರಿಗಾಗಿ, ಮಿಕ್ಕದ್ದು ಕಮಳ ಹೆರಳಿಗೆ, ರಾಯರ ವೃಂದಾವನಕ್ಕೆ. ಉಳಿದು ಇಷ್ಟವಾಗಿ ಹಂಚಿದ್ದು ನೆರೆಹೊರೆಯವರ ದೇವರ ಪೂಜೆಗೆ. ನೂರು ವರ್ಷಗಳಿಂದ ಲಡ್ಡಾಗುತ್ತ ಹೋದ ಸುಣ್ಣದ ಗಾರೆಯ ದಿವಾನರ ಬಂಗಲೆಯ ಅಕ್ಕಪಕ್ಕದಲ್ಲೆಲ್ಲ ತಾಯಿ ಬಾಡಿಗೆಗೆಂದು ಅಡ್ಡಾದಿಡ್ಡಿಯಾಗಿ ಕಟ್ಟಿಸಿದ ಕಿಷ್ಕಿಂಧದಂತಹ ಗೂಡಿನ ಮನೆಗಳು. ಮನೆಗಳಲ್ಲಿ ಇರುವವರ ಸಂಸಾರ ತಾಪತ್ರಯಗಳು, ಪರದಾಟಗಳು, ಕಾಮುಕ ಚೇಷ್ಟೆಗಳು, ಸಣ್ಣತನಗಳು ಅಂಥವುಗಳಿಂದೆಲ್ಲ ದೂರವಿರುವ ಘೋರವಾದ ಮಡಿಯ ತಾಯಿಯ ಮುಖೇನ ಚಿಕ್ಕವನ್ನಿದ್ದಾತ ತನ್ನ ಕಿವಿಗೆ ಬಿದ್ದು, ತನ್ನ ಬರವಣಿಗೆಯ ದ್ರವ್ಯವಾದವು. ಹಾಗೆಯೇ ಇಲ್ಲಿ ಹೆಣಗುತ್ತ ಗೊಣಗುತ್ತ ಇರುವವರು ತೆರುವ ಬಾಡಿಗೆಯೇ ತನ್ನನ್ನು ಈತನಕ ಆರಾಮಿನಲ್ಲಿ ಸಾಕಿರುವ ಸಂಪತ್ತೂ ಆಗಿತ್ತು. ಈಗ ತಿಮ್ಮಪ್ಪನಿಗೆ ಇಲ್ಲಿ ಮರಗಳು ಮತ್ತು ಅವಕ್ಕೆ ಬರುವ ಹಕ್ಕಿಗಳು ಬಿಟ್ಟರೆ ಬೇರೆ ಯಾವ ಆಸಕ್ತಿಯೂ ಉಳಿದಿರಲಿಲ್ಲ. ಕಾಂಪೌಂಡಿನ ವಠಾರದ ಪರಿಚಿತ ಜೋಲು ಮೋರೆಗಳಂತೆ ತನ್ನ ಕೃತಿಗಳೂ ನಿಸ್ತೇಜನವಾಗತೊಡಗಿದ್ದವು.

ರಾತ್ರಿ ಹನ್ನೆರಡರ ಮೇಲಾದರೂ ತಾಯಿ ಮಲಗುತ್ತಿದ್ದ ಕೋಣೆಯಲ್ಲಿ ದೀಪದ ಉರಿಯುತ್ತಿರುವುದು ಕಂಡು ತಿಮ್ಮಪ್ಪ ಅನುಮಾನಿಸುತ್ತ ಬಾಗಿಲಿನ ಬೀಗ ತೆರೆದು ಒಳಗೆ ಹೋದ. ಅಡಿಗೆಯ ಹುಡುಗಿ ಕಮಲ ತಾಯಿಯ ಕೋಣೆಯಿಂದ ಹೊರಗೆ ಬಂದು ಕಣ್ಣು ನೀರು ತುಂಬಿ ನಿಂತಳು. ಅವಳು ಕಂಗಾಲಾಗಿದ್ದಂತೆ ಕಂಡಿತು. ತನ್ನ ಬಾಯಿಯಿಂದ ಹೆಂಡ ಮತ್ತು ಬೆಳ್ಳುಳ್ಳಿಯ ವಾಸನೆ ಬರುತ್ತಿರುಬಹುದೆಂದು ತಿಮ್ಮಪ ದೂರ ನಿಂತು ಒಂದು ಸಿಗರೇಟು ಹಚ್ಚಿ, ಏನು ಅಂದ.

”ಅಮ್ಮನ ಮಾತು ನಿಂತು ಹೋಗಿದೆ. ನಿಮಗೆ ಕಾದಿದ್ದಾರೆ” ಎಂದು ಕಮಲ ತನ್ನ ಕೈಯಲ್ಲಿದ್ದ ತಾಮ್ರದ ಗಿಂಡಿಯನ್ನು ಒಡ್ಡಿದಳು. ಸಾಯುವಾಗ ಕುಡಿಯಲೆಂದು ಕಾಶಿಯಿಂದ ತಂದ ಗಂಗೆ ಅದರಲ್ಲಿತ್ತು. ಇವತ್ತು ಬೆಳಿಗ್ಗೆಯೂ ತಾಯಿ ಅದನ್ನು ಪೂಜಿಸಿದ್ದಾಳೆ ಎಂಬುದು ಗಂಧದಲ್ಲಿ ಅಂಟಿದ ಅದರ ಮೇಲಿನ ತುಳಸೀದಳದಿಂದ ತಿಳಿಯುವಂತಿತ್ತು.

ತಿಮ್ಮಪ್ಪ ಸಿಗರೇಟನ್ನು ನೆಲಕ್ಕೆಸೆದು ಉಜ್ಜಿದ. ಅವಳು ಒಡ್ಡಿದ ಗಿಂಡಿಯನ್ನು ಮುಟ್ಟಲಿಲ್ಲ. ಸೀದ ಬಚ್ಚಲಿಗೆ ಹೋಗಿ ತಾಯಿ ಉಪಯೋಗಿಸುತ್ತಿದ್ದ ಉಮಿಕರಿಯಿಂದ ಹಲ್ಲು ಉಜ್ಜಿದ. ಅವನು ಬಾಲನಿದ್ದಾಗ ತಾಯಿಯೇ ಕರ್ಪೂರ ಬೆರೆಸಿದ ಉಮಿಕರಿಯಿಂದ ಅವನ ಹಲ್ಲನ್ನು ಉಜ್ಜುತ್ತಿದ್ದಳು. ಕಂಕಳು, ಕಿವಿಯ ಸಂದಿ, ತೊಡೆಯ ಸಂದಿ ಎಲ್ಲೂ ಬಿಡದಂತೆ ಹೆಸರಿನ ಹಿಟ್ಟನ್ನು ಬೆರೆಸಿದ ಸೀಗೆಯಿಂದ ಉಜ್ಜಿ ತೊಳೆದು ತನ್ನನ್ನು ಶುದ್ಧ ಮಾಡುತ್ತಿದ್ದಳು.

ಹೊಳೆಯುವ ತಾಮ್ರದ ಚಂಬಿನಿಂದ ಹಂಡೆಯಲ್ಲಿದ್ದ ತಣ್ಣೀರು ಸುರಿದುಕೊಂಡು ಚಳಿಯಲ್ಲಿ ನಡುಗುತ್ತ ಮೈಯನ್ನು ಒರೆಸಿಕೊಂಡ. ರೂಮಿಗೆ ಹೋಗಿ ತನ್ನ ಬಾಲ್ಯ ಕಾಲದ ಕೆಂಪು ರೇಷ್ಮೆಯ ಪಟ್ಟೆ ಮಡಿಯುಟ್ಟು, ಮಡಿಯಲ್ಲಿ ತಾಯಿಯ ಕೋಣೆಗೆ ಬಂದ. ಉಪನಯನವಾದ ಮೇಲೆ ಕೆಲವು ವರ್ಷಗಳ ಕಾಲ ಅಂಗಿ ತೆಗೆದು ಇದನ್ನು ಉಟ್ಟುಕೊಳ್ಳದ ಹೊರತು ಅವನಿಗೆ ತಾಯಿ ಊಟ ಬಡಿಸುತ್ತಿರಲಿಲ್ಲ. ಈಗ ಪಟ್ಟೆ ಮಡಿ ಹರಿದಿತ್ತು. ಮಾಸಿತ್ತು. ಕಮಲಳ ಕೈಯಿಂದ ಗಿಂಡಿ ತೆಗೆದುಕೊಂಡು ತಾಯಿಯ ಬಳಿ ಮಂಡಿಯೂರಿ ಕೂತ. ಸಾವಿನ ಸೂಚನೆ ತಿಳಿದ ಕೂಡಲೇ ತಾಯಿ ರಾಯರ ಪಠದ ಕೆಳಗೆ ಬರಿ ನೆಲದ ಮೇಲೆ ಮಲಗಿರಬೇಕು ಅಥವಾ ಕಮಲ ಮಲಗಿಸಿರಬೇಕು. ಅವಳು ಅಷ್ಟು ಕೃಶಳೂ ಹಗುರಳೂ ಆಗಿದ್ದಳು.

ಗರಗಸದಿಂದ ಮರದ ದಿಮ್ಮಿಯನ್ನು ಕೊಯ್ದಂತೆ ತಾಯಿ ಉಸಿರಾಡುತ್ತಿದ್ದಳು. ದೇವರನ್ನು ತನಗೆ ಸ್ಥಾಪಿಸುವಂತೆ ಯೌವನವನ್ನೆಲ್ಲ ಒಣಗಿಸಿಕೊಂಡು ವಿರೂಪಿಯಾಗಿ, ಇಳಿವಯಸ್ಸಿನಲ್ಲಿ ಉದುರಲೆಂದು ಕಾದಿದ್ದ ಅವಳಲ್ಲೂ ಸಾವಿಗೆ ನಾಶಮಾಡಲು ಅಷ್ಟೊಂದು ಗಟ್ಟಿಯಾದ ಪ್ರಾಣಶಕ್ತಿ ಇರಬಹುದೆಂದು ಅವನು ಊಹಿಸಿರಲಿಲ್ಲ. ತನ್ನನ್ನು ನೋಡಲೆಂದು ಆಯಾಸದಲ್ಲಿ ಜೀವಧಾರಣೆ ಮಾಡಿ ಕಾದಿರುವಂತ ಕಂಡಳು. ಎಷ್ಟೋ ವರ್ಷಗಳಿಂದ ಅಮ್ಮ ಎಂದು ಮಾತು ಶುರು ಮಾಡದವನು ‘ಅಮ್ಮ’ ಎಂದ. ಅವಳು ಕಣ್ಣು ಅರೆತೆರೆದು ಪ್ರಯಾಸದಲ್ಲಿ ಕೈಯೊಡ್ಡಿದಳು. ತಾನು ತಾಯಿಯ ಕೈ ಹಿಡಿದುದನ್ನು ಕಮಲ ನೋಡಿದಳೆಂದು ಮುಜುಗರವಾಯಿತು. ಗಿಂಡಿಯನ್ನು ಅವಳ ಬಾಯಿಗೆ ಒಯ್ದ. ಅಮ್ಮ ತನ್ನ ಇನ್ನೊಂದು ಕೈಯನ್ನು ಒಡ್ಡಿ ಕಮಳ ಕೈ ಹಿಡಿದಳು. ತಿಮ್ಮಪ ಕಮಳ ಕೈಹಿಡಿಯುವಂತೆ ಕಣ್ಣಿನಲ್ಲೇ ಬೇಡಿದಳು. ಈ ಪ್ರದರ್ಶನಕ್ಕೆ ಅಂಜುತ್ತ, ಎಡ ಕೈಯಲ್ಲಿ ಕಮಲಳ ಕೈ ಹಿಡಿದು, ಬಲಗೈಯಿಂದ ಗಿಂಡಿಯನ್ನು ತಾಯಿಯ ಬಾಯಿಗೆ ನೀರು ಸುರಿಯುವಂತೆ ಓರೆ ಮಾಡಿದ. ತಾಯಿಯ ಗಂಟಲು ಮೂರು ಬಾರಿ ಚಲಿಸಿ ಗಂಗೆಯನ್ನು ಕುಡಿಯಿತು. ತಾಯಿಯ ಪ್ರಾಣ ಹಾರಿದ ಮೇಲೆ ಕಮಲ ಅವಳ ಕಣ್ಣನ್ನು ಮುಚ್ಚಿದಳು. ಕಾಲನ್ನು ಮಡಿಸಿದಳು. ತೆಂಗಿನ ಹೋಳಿನಲ್ಲಿ ದೀಪವನ್ನು ಕಾಲಿನ ಬುಡದಲ್ಲೂ ತಲೆಯ ಮೇಲೂ ಹಚ್ಚಿಟ್ಟಳು. ಕಾಲು ಬೆರಳಿಗೆ ಎಣ್ಣೆ ಹಚ್ಚಿ ತಿಮ್ಮಪ್ಪನಿಗೂ ಹಚ್ಚುವಂತೆ ಕಣ್ಣಿನಲ್ಲೇ ಬೇಡಿದಳು. ಅಕ್ಕಿಕಾಳನ್ನು ಬಾಯಿಗೆ ಹಾಕಿ ತಿಮ್ಮಪ್ಪನಿಗೂ ಹಾಕುವಂತೆ ಬೇಡಿದಳು. ಈ ವಿಧ್ಯುಕ್ತ ಕ್ರಿಯೆಗಳಲ್ಲಿ ಕಮಲ ಮೌನವಾಗಿ ನುಂಗಿಕೊಳ್ಳುತ್ತಿದ್ದ ಉಮ್ಮಳದಿಂದ ತಾನೂ ಅತ್ತುಬಿಡಬಹುದೆಂದು ಮುಜುಗರವಾಗಿ ತಿಮ್ಮಪ್ಪ ರೂಮಿಗೆ ಹೋಗಿ ಸಿಗರೇಟು ಹಚ್ಚಿದ.

ಕಮಲ ಈಗ ಅಳಲು ಪ್ರಾರಂಭಿಸಿದಳು. ತನ್ನ ಮುದಿ ತಾಯಿಗೆ ಸುದ್ದಿ ಮುಟ್ಟುವಷ್ಟು ಗಟ್ಟಿಯಾಗಿ ಅತ್ತಳು. ಧಾವಿಸಿ ಬಂದ ಅವಳ ತಾಯಿ ನೆಲಕ್ಕೆ ಕೈ ಬಡಿಯುತ್ತ ನೆರೆಹೊರೆಗೆ ಕೇಳುವಷ್ಟು ಗಟ್ಟಿ ಅತ್ತಳು. ನೆರೆಹೊರೆ ಧಾವಿಸಿ ಬಂದು ಬೀದಿಯ ಜನ ಒಟ್ಟಾಗುವಂತೆ ಅತ್ತರು. ತಾಯಿಯನ್ನು ಕೊಂಡಾಡಿದರು. ಅವಳ ಧಾರ್ಮಿಕತೆ, ಅವಳ ನೈಷ್ಠಿಕ ಮಡಿ, ಅವಳ ಸಂಸ್ಕೃತ ಜ್ಞಾನ, ಅವಳ ಪರೋಪಕಾರಿ ಬುದ್ದಿ, ಅವಳ ಕುಟುಂಬ ಶ್ರದ್ಧೆ, ಅವಳ ಮರಗಿಡಗಳ ಪ್ರೀತಿ, ತಾನು ಒಬ್ಬಂಟಿಯಾಗಿ ಬೆಳೆಸಿದ ಮಗನ ಕೀರ್ತಿಯಿಂದ ಅವಳುಪಡುತ್ತಿದ್ದ ಹೆಮ್ಮೆ – ಹೀಗೆ ತನ್ನ ಕಿವಿಗೆ ಬೀಳುವಂತೆ ಎಲ್ಲರೂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ತಿಮ್ಮಪ್ಪ ತನ್ನೊಳಗೆ ಕಠಿಣವಾಗಿ ಮೌನವಗಲು ಪ್ರಯತ್ನಿಸುತ್ತ ಕೂತ.

ಈ ಮುಂದೆ ನಡೆದ ಘಟನೆಗಳ ಅರ್ಥ ತಿಮ್ಮಪ್ಪನ ಜರತ್ಕಾರು ಸ್ಥಿತಿಯ ದುಮ್ಮಾನಕ್ಕೆ ಸಿಕ್ಕ ಪರಿಹಾರವೆಂದು ತಿಳಿಯಲಾಗದು. ಮನುಷ್ಯನ ಜರತ್ಕಾರು ಸ್ಥಿತಿಯ ದುಮ್ಮಾನಕ್ಕೆ ಪರ‍್ಯಾಯವಾದ ಸ್ಥಿತಿಯೆಂದರೆ ಜೀವನವೇ ದುಃಖವೆಂದು ಅರಿತ ಬುದ್ಧನ ಕರುಣೆಯದು ಎಂದು ತಿಮ್ಮಪ್ಪ ತನ್ನ ಕೃತಿಯಲ್ಲಿ ಮೂಡಿಸಲು ಯತ್ನಿಸಿ ವಿಫಲನಾಗಿದ್ದಾನೆ. ತಿರುಪತಿಯಲ್ಲಿ ಪಟ್ಟ ಜಿಗುಪ್ಸೆಯಲ್ಲೋ, ತಾಯಿಯ ಉಗ್ರ ತಪಸ್ಸಿಗೆ ಎದುರಾಗಿಯೋ, ಸಭ್ಯ ಜೀವನದ ತೋರುಗಾಣಿಕೆಯನ್ನು ತಿರಸ್ಕರಿಸಲೆಂದು ಮನಃಪೂರ್ವಕ ಆಯ್ದುಕೊಂಡ ಹೊಲಸಿನ ಸಹವಾಸದಲ್ಲೋ ಇರುತ್ತ, ಈ ಪತಿಕ್ರಿಯೆಯ ಫಲವಾಗಿ ತನ್ನಿಂದ ಉದ್ಭವವಾಗುವ ಶಾಬ್ದಿಕ ವಿನ್ಯಾಸಗಳಲ್ಲಿ ಮಾತ್ರ ತನ್ನ ಅರಿವು ನಿಜವಾಗಲಾರದು ಎಂದು ಅವನಿಗೆ ತಿಳಿಯುತ್ತ ಹೋಗಿದೆ. ಆದ್ದರಿಂದ ಅವನು ಈ ಮುಂದಿನ ಘಟನೆಗಳಿಂದ ಗೊಂದಲಗೊಂಡು ಮೃದುವಾದ – ಎಂದಷ್ಟೇ ಹೇಳಬಹುದು ಸದ್ಯದಲ್ಲಿ.

ತಾಯಿಯನ್ನು ಸುಟ್ಟು ಎರಡು ದಿನಗಳಾದ ಮೇಲೆ ಕಮಲ ಒಂದು ಬೆಳಿಗ್ಗೆ ತನ್ನೆದುರು ಬಂದು ಏನೋ ಹೇಳಲು ಅಂಜುತ್ತಿರುವವಳಂತೆ ಕಂಡಳು. ನಿತ್ಯದಂತೆ ಅವಳು ಹೂವು ಮುಡಿಯದೇ ಇದ್ದುದರಿಂದ ಸೂತಕದಲ್ಲಿರುವ ಜ್ಞಾತಿಯಂತೆ ಕಂಡಳು. ಸಿಗರೇಟು ಸೇದುತ್ತಿದ್ದ ತಿಮ್ಮಪ್ಪ ತನ್ನೊಳಗೆ ರೂಪ ಪಡೆಯಲು ನಿರಾಕರಿಸುವ, ಪಡೆಯುವ ರೂಪಗಳಲ್ಲಿ ಉಚ್ಛಿಷ್ಟದಂತೆ ತೋರುವ ಶಬ್ದಗಳಿಗೆ ಹೇಸುತ್ತ ಕೂತಿದ್ದ. ತಲೆ ಎತ್ತಿ ‘ಏನು’ ಎಂದ.

‘ಸತ್ತ ಮೇಲೆ ಕೊಡು ಅಂತ ಅಮ್ಮ ನಿಮಗೊಂದು ಪತ್ರ ಬರೆದಿಟಿದ್ದಾರೆ’ ಎಂದು ಕಮಲ ಕಣ್ಣಿನ ತುಂಬ ನೀರು ತುಂಬಿಕೊಂಡಳು. ತಿಮ್ಮಪ್ಪ ಉತ್ತರಿಸದೇ ಅವಳೇ ಕಾಗದ ಕೊಡುವಳೆಂದು ಕಾದ. ಆದರೆ ಕಮಲ “ಬರೆದಿಟ್ಟು ತಿಂಗಳಾಯಿತು” ಎಂದಳು. ‘ತಗೊಂಡು ಬಾ’ ಎಂದರೆ ಅವಳು ಅಲ್ಲಾಡದೆ ಬೀಗದ ಕೈಕೊಟ್ಟಳು. ತಿಮ್ಮಪ್ಪ ತಾಯಿಯ ಕೋಣೆಗೆ ಹೋಗಿ ದೊಡ್ಡ ಕಬ್ಬಿಣದ ಟ್ರಂಕಿನ ಹಳೆಯ ಕಾಲದ ಪಟ್ಟಿಗಳಿಂದ ಭದ್ರವಾದ ಮುಚ್ಚಳವನ್ನು ತೆಗೆದ.

ಅದರ ತುಂಬ ತಾಯಿಯ ಮುತ್ತೈದೆತನದ ರೇಷ್ಮೆಯ ಹಳೆಯ ಕಾಲದ ಭಾರವಾದ ಸೀರೆಗಳು: ಮಧುರೆ ಮೀನಾಕ್ಷಿ, ಕೊಲ್ಲೂರಿನ ಮುಕಾಂಬಿಕೆಗೆ ಉಡಿಸುವಂಥವು. ಅವುಗಳಿಂದ ಒಣಗಿದ ಕೇದಗೆಯ ವಾಸನೆ ಬರುತ್ತಿತ್ತು. ಪ್ರತಿವರ್ಷ ತಮ್ಮ ಪೂರ್ವಿಕರ ಹಳ್ಳಿಯಿಂದ ಒಬ್ಬ ಕೇದಗೆಯನ್ನು ತಾಯಿಗೆ ಸರಬರಾಜು ಮಾಡುತ್ತಿದ್ದ. ಮುತ್ತಾತನ ಕಾಲದಲ್ಲಿ ಕೇರಳದಿಂದ ತಂದ ಹಿತ್ತಾಳೆಯ ಚೆಲ್ಲವೊಂದು ಟ್ರಂಕಿನ ಬದಿಯಲ್ಲಿ ಇತ್ತು. ಅದರಲ್ಲಿ ತನ್ನ ಬಾಲ್ಯದ ವ್ಯಾಧಿಗಳನ್ನು ನಿವಾರಿಸುತ್ತಿದ್ದ ಸವೆದ ಬಜೆಯ ಚೂರು, ಜಾಯಿಕಾಯಿ, ಗೋರೋಚನ, ಕಸ್ತೂರಿ, ವಿಜಯನಗರದ ಕಾಲದ್ದೆಂಬ ಖ್ಯಾತಿಯ ಮೂರು ಸುತ್ತು ತೆಯ್ದು ನೆಕ್ಕುವ ಕಪ್ಪಾದ ಸಾಲಿಗ್ರಾಮದಂತಹ ಉಂಡೆ ಇದ್ದವು. ಆಪತ್ಕಾಲದಲ್ಲಿ ಈ ಸರ್ವರೋಗ ನಿವಾರಕ ಉಂಡೆಯನ್ನು ತಾಯಿಯಿಂದ ಬೇಡಿ ನೆರೆಹೊರೆಯವರು ಅಲ್ಲದೆ, ಅವನ ಪೂರ್ವಜರ ಹಳ್ಳಿಯವರು ಹುಡುಕಿಕೊಂಡು ಬರುವುದನ್ನು ತಿಮ್ಮಪ್ಪ ನೋಡಿದ್ದಾಣೆ. ಈ ಔಷಧಿಗಳಲ್ಲದೆ ಚಿಲ್ಲದಲ್ಲಿ ಅವನ ಬಂಗಾರದ ಉಡುದಾರ, ಕಿವಿಯ ಒಂಟಿ ಇದ್ದವು. ಇನ್ನೊಂದು ಗಂಧದ ಪೆಟ್ಟಿಗೆಯಲ್ಲಿ ಸೊಸೆಗಾಗಿ ತಾಯಿ ಸರ್ಪಗಾವಲು ಕಾದ ಒಡೆವೆಗಳಿದ್ದವು. ಆ ಪೆಟ್ಟಿಗೆಯ ಮೇಲೆ ಮಡಿಸಿ ಅಂಚಿಗೆ ಅರಿಸಿನ ಕುಂಕುಮ ಹಚ್ಚಿ ಇಟ್ಟಿದ್ದ ಕಾಗದವನ್ನು ಎತ್ತಿಕೊಂಡು ತಿಮ್ಮಪ್ಪ ಓದಿದ್ದ;

“ಚಿರಂಜೀವಿಗೆ ಆಶೀರ್ವಾದಗಳು, ಈ ಪ್ರಜೋತ್ಪತ್ತಿ ಸಂವತ್ಸರದ ಕಾರ್ತೀಕ ಮಾಸದ ಏಕಾದಶಿ ದಿನದಂದು ಸ್ವಹಸ್ತದಿಂದ ಬರೆದಿರುವ ಈ ಒಕ್ಕಣೆಯನ್ನು, ಹರಿವಾಯು ಅನುಗ್ರಹದಿಂದ ನಾನು ಸತ್ತ ಮೇಲೆ ನೀನು ಪಾಲಿಸುವುದು. ನನ್ನ ಶ್ರದ್ಧಾದಿಗಳನ್ನು ನೀಡು ಮಾಡತಕ್ಕದ್ದು, ಇಲ್ಲವಾದರೆ ಮಗನಾದ ನಿನಗೆ ಸದ್ಗತಿಯಿಲ್ಲ. ಜನ್ಮವಿತ್ತ ತಾಯಿಗೆ ಮಾಡಬೇಕಾದ ವಿಧಿಗಳಲ್ಲಿ ನಿನಗೆ ನಂಬಿಕೆಯಿರುವುದು ಮುಖ್ಯವಲ್ಲ. ಪರಂತು ಹರಿವಾಯು ಪ್ರೇರಣೆಯಿಂದ ನಿನಗೆ ನಂಬಿಕೆ ಬಂದರೂ ಬರಬಹುದು. ಇಲ್ಲವಾದರೂ ಮಾಡುವುದಕ್ಕೆ ಅಡ್ಡಿಯಿಲ್ಲ, ಅಲ್ಲದೆ ನಿನ್ನ ಕಂಟಕ ಪರಿಹಾರವಾಗುವ ಕಾಲ ಬಂದಿದೆ. ಹರಿವಾಯು ಪ್ರೇರಣೆಯಿಂದ ಚಿರಂಜೀವಿ ಸೌಭಾಗ್ಯವತಿ ಕಮಲಳಿಗೆ ನಿನ್ನಿಂದ ಗರ್ಭದಾನ ನೆರವೇರಿದೆ. ನನ್ನ ಅಜ್ಜಯ್ಯನಿಂದ ನನಗೆ ಪ್ರಾಪ್ತವಾದ ಎಲ್ಲ ಚಿರ ಚಿರ ಆಸಿತಯೂ ಆ ಶಿಶುವಿಗೆ ಸೇರತಕ್ಕದ್ದು, ಹುಟ್ಟುವ ಶಿಶು ಪ್ರಾಪ್ತ ವಯಸ್ಸನ್ನು ರಾಯರ ಅನುಗ್ರಹದಿಂದ ತಲುಪುವ ತನಕ ಚಿರಂಜೀವಿ ಸೌಭಾಗ್ಯವತಿ ಕಮಲಳು ಈ ಆಸ್ತಿಯ ಎಲ್ಲ ಉಸ್ತುವಾರಿಯನ್ನೂ ವಹಿಸತಕ್ಕದ್ದು. ರಾಯರು ಶುಶ್ರೂಷೆಯನ್ನೂ ಅವಳು ನಿನಗೆ ಪ್ರಿಯವಾಗುವ ರೀತಿಯಲ್ಲೇ ಮಾಡತಕ್ಕದ್ದು. ರಾಯರು ಕನಸಿನಲ್ಲಿ ಕಾಣಿಸಿಕೊಂಡು ನನಗೆ ಮಾಡಿದ ಆಜ್ಞೆಯನ್ನು ನಾನು ಶಿರಸಾವಹಿಸಿ ಬರೆದಿಟ್ಟಿದ್ದೇನೆ. ನೀನು ಇದನ್ನು ನಡೆಸಿಕೊಡುವಿಯೆಂದು ತ್ರಿಕಾಲಜ್ಞಾನಿಗಳಾದ ರಾಯರು ನನಗೆ ಹೇಳಿದ್ದಾರೆ. ಶ್ರೀ ವೆಂಕಟೇಶಸ್ವಾಮಿಯು ಕರುಣೆಯಿಂದ ಗರ್ಭದಲ್ಲಿ ನಿಲ್ಲುವಂತೆ ಮಾಡಿದ ಕಾರಣವಾಗಿ ನನ್ನ ಶಿಶುವಾದ ನೀನೂ, ಚಿ. ಸೌ. ಕಮಲಳೂ, ಹುಟ್ಟಲಿರುವ ವಂಶೋದ್ಧಾರಕನೂ ಆಯುರಾರೋಗ್ಯ ಭಾಗ್ಯಾದಿಗಳನ್ನು ಪಡೆದು ಸುಖವಾಗಿ ಬಾಳಿರೆಂದು ಆಶೀರ್ವದಿಸುತ್ತೇನೆ. ಇತಿ ಶಂ. ರುಕ್ಮಿಣಿಯಮ್ಮ”

ತಿಮ್ಮಪ್ಪ ಕಾಗದವನ್ನು ಜೇಬಿನಲ್ಲಿಟ್ಟುಕೊಂಡು ಹೊರ ಬಂದು ಅಡಿಗೆ ಮನೆಯಲ್ಲಿದ್ದ ಕಮಲಳ ಎದುರು ನಿಂತು ಪ್ರಶ್ನಾರ್ಥಕವಾಗಿ ನೋಡಿದ. ಅವಳ ಮುಖ ನೋಡಿದ್ದೇ ಅವನಿಗೆ ಗೊತ್ತಾಯಿತು. ಕಮಲಳಿಗೆ ಈ ಕಾಗದಲ್ಲಿ ಏನಿದೆ ಎಂಬ ವಿಷಯ ತಿಳಿಯದು ಎಂದು. ಆದರೂ ಕೇಳಿದ:

“ಅಮ್ಮ ಏನು ಬರೆದಿದ್ದಾರೆ ನಿನಗೆ ಹೇಳಿದಾರ?”

ಕಮಲ ಇಲ್ಲವೆಂದು ತಲೆಯನ್ನು ಆಡಿಸಿ ಕಣ್ಣು ತುಂಬಿ ಬಂದು ತಲೆ ತಗ್ಗಿಸಿದಳು. ಸೆರಗಿನಿಂದ ಬಾಯಿ ಮುಚ್ಚಿಕೊಂಡಳು.

“ಎಷ್ಟು ತಿಂಗಳಾಯಿತು?”

ಕಮಲ ಕೈ ಎತ್ತಿ ಪಾತ್ರೆಯುಜ್ಜಿ ಒರಟಾದ ತನ್ನ ಮೂರು ಬೆರಳುಗಳನ್ನು ಸಂಕೋಚದಿಂದ ತೋರಿದಳು. ಪೂರ್ಣ ಸೆರಗು ಹೊದ್ದು ಉಂಗುಷ್ಟದಿಂದ ನೆಲಕೆರೆಯುತ್ತ ನಿಂತಳು. ತನಗೆ ತಿಳಿಯದಂತೆಯೇ ತಿಮ್ಮಪ್ಪನ ಧ್ವನಿ ಗಡುಸಾಗಿತ್ತು.

“ಅಮ್ಮನಿಗೆ ಹೇಗೆ ಗೊತ್ತಾಯುತು?”

ಕಮಲ ಬಾಯಿಬಿಟ್ಟು ಹೇಳುವ ಅಗತ್ಯವಿರಲಿಲ್ಲ. ಕಮಲ ಹೊರಗೆ ಕೂರದೆ, ತನ್ನ ತಾಯಿಯನ್ನು ಅಡಿಗೆಗೆ ಕಳಿಸದೇ ತಾನೇ ಪ್ರತಿನಿತ್ಯ ಇಡೀ ತಿಂಗಳು ಅಡುಗೆ ಮಾಡಲು ಬಂದಿದ್ದರಿಂದ ಹದ್ದುಗಣ್ಣಿನ ಮುದುಕಿಯೇ ಊಹಿಸಿರುತ್ತಾಳೆ. ತಪ್ಪಿತಸ್ಥಳಂತೆ ನಿಂತವಳು ತಾಳಿಕೊಳ್ಳಲಾರದೆ, ಇನ್ನೇನು ಅತ್ತೇಬಿಡುವಳೆಂದು ತಿಮ್ಮಪ್ಪನಿಗೆ ದಿಗಿಲಾಯಿತು. ರೂಮಿಗೆ ಹೋಗಿ ತಾನು ಬರೆಯುತ್ತಿದ್ದ ಟೇಬಲಿನ ಎದುರು ಕೂತು ಕಂಪಿಸಿದ. ತನಗೆ ಥಟ್ಟನೇ ಹೊಳೆದ ಯೋಚನೆಯಿಂದಾಗಿ ಅಸಹ್ಯವಾಯಿತು. ಅಮ್ಮ ಬರೆದಿಟ್ಟ ಕಾಗದವನ್ನು ಹರಿದುಹಾಕಿ ಕಮಳ ಗರ್ಭ ತೆಗೆಸಿ, ಅವಳಿಗೊಂದೆರಡು ಲಕ್ಷ ರೂಪಾಯಿಯನ್ನೂ ತಾಯಿಯ ಎಲ್ಲ ಒಡವೆಗಳನ್ನೂ ಕೊಟ್ಟು ತಾನು ಸ್ವತಂತ್ರವಾಗಿ ಬಿಡಬೇಕೆಂದು ಅವನಿಗೆ ಆಸೆಯಾಗಿತ್ತು. ತಕ್ಷಣ ಅನ್ನಿಸಿತು: ತಾನು ಅನಾವರಣಗೊಳಿಸುತ್ತ ಹೋದ ಮನುಷ್ಯನ ಸ್ವಾನುರಕ್ತ ಪ್ರೇಮರಹಿತ ಪಾಡಿನ ನಿಜವಾದ ಚಿತ್ರ ತಾನೇ ಆಗಿದ್ದ. ಈಗ ಪಡುತ್ತಿರುವ ಆತ್ಮದ್ವೇಷದಲ್ಲಿ ತಾಯಿ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸಿದರೂ, ಇಂಥ ಆಸೆಯನ್ನು ಜನ್ಮತಃ ಪಡೆದ ತಾನು ಬದಲಾಗಲಾರ. ಹಾಗೆ ಅನಿಸಿ ದಿಗಿಲಾದ್ದರಿಂದ, ಕಮಳ ಹತ್ತಿರ ಏನೂ ಹೇಳದೆ, ಕಾರನ್ನು ಹತ್ತಿಕೊಂಡು ಹೋಗಿ ತನಗೆ ಪರಿಚಯದ ಒಬ್ಬ ಲಾಯರ್‌ಗೆ ತಾಯಿಯ ಪತ್ರವನ್ನು ರಿಜಿಸ್ಟರ್ ಮಾಡಿಸಲು ಕೊಟ್ಟ. ಅದರ ಒಂದು ಜೆರಾಕ್ಸ್ ಕಾಪಿಯನ್ನು ಮನೆಗೆ ತಂದ. ತಾನು ಕೂಡಲೇ ಮನೆಗೆ ಬಂದ್ದು ನೋಡಿ ಖುಷಿಪಟ್ಟು ಕಮಲ ಕಾಫಿ ತಯಾರಿಯಲ್ಲಿದ್ದುದು ನೋಡಿ, “ಕಾಫಿ ಬೇಡ, ಒಂದು ಗ್ಲಾಸ್ ಬ್ರಾಂಡಿ” ಎಂದ. ಯಾವ ಗ್ಲಾಸಲ್ಲಿ ಯಾವ ಬ್ರಾಂಡಿಯನ್ನು ಸುರಿದುಕೊಡುವುದೆಂದು ಅವಳಿಗೆ ತೋರಿಸುತ್ತ ತಾನೇ ಸುರಿದು ಗಟಗಟನೆ ಕುಡಿದು, ‘ತಗೊ’ ಎಂದು ತಾಯಿಯ ಪತ್ರ ಕೊಟ್ಟ. ಸೆರಗೆಳೆದುಕೊಂಡು ತನ್ನ ದೊಡ್ಡ ಕಣ್ಣುಗಳಲ್ಲಿ ಏನನ್ನೂ ನಿರೀಕ್ಷಿಸದೆ ನಿಂತಿದ್ದ ಕಮಲಳ ಕೈಯಲ್ಲಿ ಪತ್ರ ಕೊಟ್ಟಾಗ ಅವಳ ಕೈ ಕಂಪಿಸುತ್ತಿತ್ತು. ಓದಲು ಅವಳು ಹೆದರಿದ್ದು ಕಂಡು, “ಅಮ್ಮನ ರೂಮಲ್ಲಿ ಕೂತು ಓದಿಕೊ” ಎಂದ.

ತಾಯಿಯ ಶ್ರಾದ್ಧ ಕರ್ಮಗಳನ್ನು ಇಡೀ ಕುಲ ವಹಿಸಿಕೊಂಡು ನಡೆಸಿತು. ತಾಯಿಯ ತಲೆಯನ್ನು ಪ್ರತಿ ತಿಂಗಳು ಬೋಳಿಸುತ್ತಿದ್ದ ಕುಲದ ಕ್ಷೌರಿಕ ಮುದುಕ ಅಂಗಳದಲ್ಲೆ ನೆಲೆಯೂರಿದ. ತನ್ನ ಸ್ಥಾನವನ್ನು ಶ್ರಾದ್ಧ ಕ್ರಿಯೆಯಲ್ಲಿ ಅವನು ಸ್ಥಾಪಿಸಿಕೊಂಡಂತೆ, ದಾನಕ್ಕೆ ಗೋವನನ್ನು ಒದಗಿಸುವ ಬ್ರಾಹ್ಮಣ, ದರ್ಭೆತಿಲ ಇತ್ಯಾದಿ ದ್ರವ್ಯಗಳನ್ನು ಸಿದ್ಧಪಡಿಸುವ ಬ್ರಾಹ್ಮಣ, ದುರ್ದಾನವನ್ನು ಹಿಡಿಯುವ ಎದೆಗಾರಿಕೆಯ ನಿಷ್ಠ ಬ್ರಾಹ್ಮಣರು – ಎಲ್ಲ ಹಾಜರಾದರು. ಜನಿವಾರವನ್ನು ಸವ್ಯ, ಅಪಸವ್ಯ ಮಾಡಿಕೊಳ್ಳುತ್ತ ತಾಯಿಯ ಸದ್ಗತಿಗೆ ಅಗತ್ಯವಾದ ಎಲ್ಲ ಕ್ರಿಯೆಗಳೂ ತನ್ನಿಂದ ಸಾಂಗವಾಗಿ ನಡೆದವು. ಎಲ್ಲ ಪಿತೃಗಳೂ ಕಾಗೆಯ ರೂಪದಲ್ಲಿ ಹಾಜರಾಗಿ ತಾನು ಹೊರಗಿಟ್ಟ ಪಿಂಡವನ್ನು ಕುಕ್ಕಿ ಕುಕ್ಕಿ ತಿಂದವು. ತಿನ್ನುತ್ತ ಇನ್ನಷ್ಟು ಕಾಗೆಗಳನ್ನು ಕರೆದವು.

ಕತ್ತಲಾಗುತ್ತಿದ್ದಂತೆ ರಾತ್ರಿಯ ಮೌನವನ್ನು ಸೀಳಿ ಬರುವ ಅಯ್ಯಪ್ಪ ಭಕ್ತಿಯ ಆಕ್ರಂದನ. ಬೆಳಗಿನ ಜಾವದ ತನಕ ಇದು ಮುಂದುವರಿದರೆ, ಬೆಳಿಗ್ಗೆ ಅದರ ಜೊತೆಯಲ್ಲೇ ಮಸೀದಿಯಿಂದ ಪ್ರಾರ್ಥನೆಗೆ ಕರೆ. ದೇವರುಗಳಿಂದ ಹೀಗೆ ಕಿವಿಕುಕ್ಕಿಸಿಕೊಂಡು ಕಾಂಪೌಂಡಿನಿಂದ ಹೊರಗೆ ಬರುತ್ತಿದ್ದಂತೆ ಬೀದಿಯಲ್ಲಿ ಕಣ್ಣು ಕುಕ್ಕಿಸಿಕೊಂಡು ಚಳಿಯಲ್ಲಿ ಕಕ್ಕಸ್ಸಿಗೆ ಕೂತ ಚಿಂದಿ ಬಟ್ಟೆಯ ಮಕ್ಕಳು, ಮತ್ತೆ ಎಲ್ಲ ಗೋಡೆಗಳ ಮೇಲೆ, ಕಂಬಗಳ ಮೇಲೆ, ಕಪ್ಪು ಟಾರು ರಸ್ತೆಯ ಮೇಲೆ ರಾಜಕೀಯ ಚೀತ್ಕಾರಗಳು, ಕಾಮವರ್ಧಿನೀ ಆಗ್ರಹಗಳು, ಇದು ತಿನ್ನು, ಇದೇ ಕುಡಿ, ಇದೇ ಹಚ್ಚು, ಇದೇ ಉಡು, ಇದು ಚೀಪು, ಇವರನ್ನು ಕೊಲ್ಲು, ಅವರನ್ನು ತುಳಿ, ಅದನ್ನು ಬೀಳಿಸು, ಇದನ್ನು ಧಿಕ್ಕರಿಸು, ಭವಿಷ್ಯಕ್ಕಾಗಿ ಕಟ್ಟು, ಸೇರಿಕೊ, ಸೇರಬೇಡ..

ದೇವರಿಂದ, ಮಕ್ಕಳಿಂದ, ಕ್ರುದ್ಧರಿಂದ, ಪುಳಕಿತರಿಂದ ಸಮೃದ್ಧವಾದ ಈ ಗಿಜಿಗಿಜಿ ಕೊಚ್ಚಿಯಲ್ಲಿ ಕಂತುತ್ತೇನೆಂದು ತಿಮ್ಮಪ್ಪ ಹೆದರಿದ. ತನ್ನ ಆಂತರ‍್ಯದ ಮಾತಿನ ಹೊಳಪನ್ನೂ ಶುಚಿಯನ್ನೂ ಕಳೆದುಕೊಂಡು ಬಿಟ್ಟೇನೆಂದು ಆತಂಕಪಟ್ಟ. ಈ ಕೊಳಕು ಬೀದಿಗಳ ಮೇಲೆ ರಾಯರ ಮಠಕ್ಕೆ ಬರಿಗಾಲಿನಲ್ಲಿ ತನ್ನ ಮಡಿ ಕಳೆಯದಂತೆ ನಡೆದಾಡುತ್ತಿದ್ದ ತಾಯಿಯ ಬಗ್ಗೆ ಆಶ್ಚರ್ಯಪಟ್ಟ.

ಹೀಗೆ ಸೃಷ್ಟಿಯ ಅರ್ಥಹೀನ ವಿಲಾಸದಿಂದ ಓಕರಿಕೆಪಡುತ್ತ ಎರಡು ತಿಂಗಳ ಕಾಲ ಡ್ರೈವ್ ಮಾಡಿಕೊಂಡು ಊರೂರು ಸುತ್ತಿ ನೆಮ್ಮದಿ ಕಾಣದೆ ತಿಮ್ಮಪ್ಪ ಮನೆಗೆ ಬಂದ.

ಹೊಸ ಬಣ್ಣ ತೊಟ್ಟು ಮನೆ ಶೋಭಿಸಿತ್ತು. ತಾಯಿಯ ಪುರಾತನಕಾಲದ ಸೀರೆಗಳೆಲ್ಲ ಬಿಸಿಲಿನಲ್ಲಿ ಗಾಳಿಯಾಡಲು ಹರಡಿದ್ದವು. ಕಮಲಳ ದಪ್ಪ ಮೂಗಿನ ಮೇಲೆ ತಾಯಿಯ ವಜ್ರದ ಮೂಗು ಬೊಟ್ಟಿತ್ತು. ಕಿವಿಯಲ್ಲಿ ವಜ್ರದ ವಾಲೆಗಳಿದ್ದವು. ಸಡಿಲಾದ ಅವಳ ಜಡೆಯಲ್ಲಿ ಮಲ್ಲಿಗೆ ದಂಡೆಯಿತ್ತು. ತಿಮ್ಮಪ್ಪನನ್ನು ಕಂಡದ್ದೇ ತನ್ನ ಪ್ರಾರ್ಥನೆ ಕೈಗೂಡಿತೆಂಬಂತೆ ಸಂಭ್ರಮಿತಳಾಗಿ ಕಮಲ ಸೆರಗು ಹೊದ್ದು ಕೆನ್ನೆಗೆ ಅರಿಶಿನ, ಹಣೆಗೆ ಕುಂಕುಮವಿಟ್ಟ ಸೌಭಾಗ್ಯವತಿಯಾಗಿ ನಡುಮನೆಯಲ್ಲಿ ನಿಂತಳು. ಅವತ್ತು ರಾತ್ರಿ ಅಂಜುತ್ತ ಅವನ ಹಾಸಿಗೆ ಪಕ್ಕ ಕೂತಳು. ಕುಡಿಯಲು ಬ್ರಾಂಡಿ ಸುರಿದುಕೊಟ್ಟಳು. ಅವನು ಮಲಗು ಎಂದಾಗ ಕಾಲುಗಳನ್ನು ಮಡಚಿ ಮುದುರಿ ಮಲಗಿದಳು.

ರಾತ್ರಿ ತಿಮ್ಮಪ್ಪನಿಗೊಂದು ಕನಸು ಬಿತ್ತು. ಒಂದು ಹೆಣ್ಣು ಬೆತ್ತಲೆ ಮಲಗಿದೆ. ಎರಡು ಕಾಲುಗಳನ್ನೂ ಎಳೆದುಕೊಂಡು ತನ್ನ ತೊಡೆಗಳನ್ನು ಅಗಲಿಸಿದೆ. ಅದರ ಯೋನಿ ಎರಡು ದಳಗಳ ಬೃಹತ್ ಪುಷ್ಪದಂತೆ ಅರಳಿಕೊಂಡಿದೆ. ಆದರೆ ಅದರ ಕೈಗಳು ಮುಖವನ್ನು ಕಾಣಗೊಡದಂತೆ ಮುಚ್ಚಿವೆ. ಅದರ ಕೂದಲಿನ ರಾಶಿ ತಲೆಯ ಮೇಲೆ ಚೆಲ್ಲಿ ಬೆಳೆದ ಪೊದೆಯಂತಿದೆ. ಕನಸಿನಲ್ಲಿ ಚಡಪಡಿಸುತ್ತ ಅಮ್ಮ, ಅಮ್ಮ ಎಂದ. ಮುಚ್ಚಿದ ಮುಖ ತೆರೆಯಲಿಲ್ಲ. ಭಯವಾಯಿತು. ಹೇಸಿಗೆಯಾಯಿತು. ವಾಂತಿ ಬಂದಂತಾಯಿತು. ಅವನು ನಿತ್ಯ ಮಲಗುತ್ತಿದ್ದ ಸೂಳೆಯ ಹೆಸರುಗಳನ್ನೂ ನೆನಪಿಸಿಕೊಂಡು ಕರೆಯತೊಡಗಿದ. ಲಕ್ಷ್ಮಿ, ಲಲಿತಾ, ರಾಗಿಣಿ, ಕೋಮಲಾ, ಮಾರ್ಗರೇಟ್, ಲೈಲಾ, ಕಾಮಿನಿ, ಲಸಿತಾ, ಸುಭಗಾ ಮುಖ ಮುಚ್ಚಿಯೇ ಇತ್ತು. ತೊಡೆಗಳು ಕಿಸಿದು ಯೋನೆ ತೆರೆದೇ ಇತ್ತು. ಕಮಲಾ ಎಂದ. ಮುದುರಿ ನಿದ್ದೆ ಮಾಡುತ್ತಿದ್ದ ಕಮಲ ಬೆಕ್ಕಿನಂತೆ ಬೆಚ್ಚಗೆ ತನ್ನ ಮುಖವನ್ನು ಅವನ ಕೆನ್ನೆಗೆ ಒತ್ತಿದಳು. ಕನಸು ಕೊನೆಯಾಗಿ ಅರ್ಧರ ಎಚ್ಚರಾದಾಗ, ತನ್ನ ಓಕರಿಕೆ ನೆನಪಾಯಿತು. ಕಮಲ ಬಯಕೆಯಲ್ಲಿ ಅವತ್ತು ಮಧ್ಯಾಹ್ನ ವಾಂತಿ ಮಾಡಿಕೊಂಡದ್ದೂ, ತನ್ನ ಸೆರಗಿನಲ್ಲಿ ಮುಚ್ಚಿ ಕಟ್ಟಿಕೊಂಡಿದ್ದ ಜೇಡಿ ಮಣ್ಣನ್ನು ತಿನ್ನುತ್ತಿದ್ದದ್ದೂ ನೆನಪಾಯಿತು. ಅವಳ ತುಸು ಉಬ್ಬಿದ ಹೊಟಟೆ ಅವನ ಹೊಟ್ಟೆಗೆ ಒತ್ತಿಕೊಂಡಿತ್ತು. ತನಗಿಂತ ಅನ್ಯವಾದೊಂದು ಜೀವ ಅಲ್ಲಿ ರೂಪುಗೊಳ್ಳುತ್ತಿತ್ತು. ಅರೆನಿದ್ದೆಯಲ್ಲಿ ಅದನ್ನು ನಿರೀಕ್ಷಿಸುತ್ತ, ಗಾಢನಿದ್ರೆಗೆ ಜೀವ ಹೊರಳುವ ಜಡತ್ವದಲ್ಲಿ ಕಮಲಳ ದೇಹದ ಶಾಖವನ್ನು ಅವನ ದೇಹ ಸ್ವೀಕರಿಸಿತು.

* * *