ಕಾಲ: 1919, ದೇಶ :ಆಫ್ರಿಕಾ ಖಂಡದ ಸಮುದ್ರ ತೀರದಾಚೆಯ ಪ್ರಿನ್ಸಿಪಲ್ ದ್ವೀಪ.

ಸಮಯ :ಪೂರ್ಣ ಸೂರ್ಯಗ್ರಹಣ. ವ್ಯಕ್ತಿ:ಸರ್ ಆರ್ಥರ್ ಸ್ಟಾನ್ಲಿ ಎಡಿಂಗ್‌ಟನ್;ಅವರು ವಿಜ್ಞಾನಿ, ಆಲ್ಬರ್ಟ್ ಐನ್‌ಸ್ಟೈನ್‌ರ ಸಹೋದ್ಯೋಗಿ, ಭೌತ ವಿಜ್ಞಾನಿ.

ಉದ್ದೇಶ :ಐನ್‌ಸ್ಟೈನರ ವಿಶೇಷ ಸಾಪೇಕ್ಷ ಸಿದ್ಧಾಂತ (1905)ದ ಪ್ರಕಾರ ಬಾಹ್ಯಾಕಾಶದ ವಿಶಾಲ ವಿಸ್ತಾರದಲ್ಲಿ ಬೆಳಕು (ಅದರ ಕಿರಣ)ನಕ್ಷತ್ರಗಳನ್ನು ಬಳಸಿಕೊಂಡು ಹೋಗುವಾಗ ಸರಳ ರೇಖೆಯಲ್ಲಿ ಸಾಗದೆ ಬಾಗುತ್ತದೆ. ಈ ಬಾಗುವಿಕೆಯು ಆ ತಾರೆಯ ದ್ರವ್ಯರಾಶಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಸೂರ್ಯಗ್ರಹಣ ಸಂಭವಿಸುವಾಗ ಸಂಪೂರ್ಣ ಕತ್ತಲೆ ಇದ್ದು, ಸಮೀಪದ ನಕ್ಷತ್ರಗಳು ಕಣ್ಣಿಗೆ ಕಾಣಿಸುವುದರಿಂದ ಒಂದು ತಾರೆಯ ಕಿರಣವು ಸೂರ್ಯನ ಸಮೀಪಕ್ಕೆ ಬಂದಾಗ ಬಾಗುವುದೋ, ಬಾಗಿದರೆ ಯಾವ ಪ್ರಮಾಣದಲ್ಲಿ ಅಥವಾ ಸರಳ ರೇಖೆಯಲ್ಲೇ ಚಲಿಸುವುದೋ (ತಾರೆಯ ಸ್ಥಳ ನಿರ್ದೇಶನವನ್ನು ಮೊದಲೇ ಗೊತ್ತುಮಾಡಿರುವುದರಿಂದ)ಎಂಬುದನ್ನು ಪ್ರಾಯೋಗಿಕವಾಗಿ ಪತ್ತೆ ಮಾಡುವುದು. ಈ ಸಿದ್ಧಾಂತ ಪುರಾವೆಗೆ ಬಾಹ್ಯಾಕಾಶವೇ ಸೂಕ್ತವಾದ ಪ್ರಯೋಗಶಾಲೆ. ಸೂರ್ಯನೇ ನಮಗೆ ಸಮೀಪದ ನಕ್ಷತ್ರ.

ಹಿನ್ನೆಲೆ:ಆಕಾಶ (ಅವಕಾಶ) ಮತ್ತು ಕಾಲಗಳನ್ನು ಪ್ರಯೋಗಶಾಲೆಯಲ್ಲಿ ಕಲ್ಪಿಸಿಕೊಳ್ಳಿ.  ಇವರೆಡೂ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಅವೆರಡೂ ಸೇರಿ ಅಂಚುಗಳಲ್ಲಿ ಎಳೆದು ಹಿಡಿದ ವಿಶಾಲ ರಬ್ಬರ್ ಹಾಳೆಗಳಂತೆ ಎಂದು ಊಹಿಸಿಕೊಳ್ಳಿ. ಗ್ರಹಗಳು ಮತ್ತು ನಕ್ಷತ್ರಗಳು ಆ ಹಾಳೆಯ ಮೇಲೆ ಹರಡಿವೆ. ಅವು ತಾವು ಕುಳಿತ ಹಾಳೆಯ ಸ್ಥಾನದ ಸುತ್ತಲೂ ತಮ್ಮ ತೂಕಕ್ಕೆ ತಕ್ಕಂತೆ ತಮ್ಮ ಸುತ್ತಲೂ ಇಳಿಜಾರಾದ ಹಳ್ಳ (ಹೊಂಡ)ವನ್ನು ಉಂಟುಮಾಡುತ್ತವೆ. ಈ ಆಕಾರದ ವಿಕಾರವನ್ನು ಹೀಗೆ ಉಂಟು ಮಾಡುವುದರ ಕಾರಣ ಆ ತಾರೆ ಅಥವಾ ಗ್ರಹದ ಗುರುತ್ವಾಕರ್ಷಣೆ.  ಇನ್ನೊಂದು ವಸ್ತು ಅವುಗಳ ಹಳ್ಳದ ಬಳಿಗೆ ಬಂದಾಗ ಅದು ಅವುಗಳೆಡೆಗೆ ಜಾರಿಬಿಡುತ್ತದೆ ಅಥವಾ ಜಾರುತ್ತಾ ಅವುಗಳನ್ನು ದಾಟುತ್ತದೆ. ಈ ರಬ್ಬರ್ ಹಾಳೆಯ ಈ ವಕ್ರತೆಗಳು ಕಾಲವನ್ನು ತಮ್ಮೆಡೆಗೆ ಬಾಗಿಸುತ್ತವೆ. ಅಂದರೆ ಇದರ ಪರಿಣಾಮ ಬೆಳಕಿನ ವೇಗವು ಕಡಿಮೆಯಾಗತೊಡಗಬೇಕು. ಆಗ ಬೆಳಕು ಸರಳ ರೇಖೆಯಲ್ಲಿ ಚಲಿಸಲಾರದು. ಬಾಗುತ್ತಾ ಚಲಿಸಬೇಕು. ಆದರೆ ಸ್ವಲ್ಪವಾದರೂ ಗಮನಿಸುವಷ್ಟು ಬೆಳಕಿನ ರೇಖೆ ಬಾಗಲು ಅತಿ ಹೆಚ್ಚು ಗುರುತ್ವಾಕರ್ಷಣ ಶಕ್ತಿಯುಳ್ಳ ಅಂದರೆ ಅಪಾರ ವಸ್ತುರಾಶಿಯುಳ್ಳ ಆಕಾಶಕಾಯವೇ ಬೇಕು.  ಅದರ ಬಳಿ ಹಾದುಹೋಗುವ ತಾರೆಯ ಕಿರಣವು ಬಾಗುವುದೇ ನೋಡಬೇಕು. ಸದ್ಯದಲ್ಲಿ ಅಂತಹ ದೊಡ್ಡ ತಾರೆಯಾದ ಸೂರ್ಯ ನಕ್ಷತ್ರವು ಬಳಿಯಲ್ಲೇ ಇದೆಯಲ್ಲ (ಸೌರವ್ಯೆಹದ ಇತರ ಗ್ರಹಗಳ ಸುತ್ತಲೂ ಇದು ಸಾಧ್ಯವಾಗಬೇಕಾದರೂ ಅವುಗಳ ದ್ರವ್ಯರಾಶಿಯು ಬೆಳಕಿನ ಕಿರಣವನ್ನು ಬಾಗಿಸಲು ನಗಣ್ಯವೆನ್ನುವಷ್ಟು ಕಡಿಮೆ. ಅದಕ್ಕೇ ಸೂರ್ಯನ ಮತ್ತು ಸೂರ್ಯ ಗ್ರಹಣದ ಕಾಲದ ಆಯ್ಕೆ).

ಹೊರಾಂಗಣ: ಪ್ರಿನ್ಸಿಪಲ್ ದ್ವೀಪದಲ್ಲಿ ಎಡಿಂಗ್‌ಟನ್ ಮತ್ತಿತರ ಖಗೋಲ ವಿಜ್ಞಾನಿಗಳು ಡೇರೆ ಹಾಕಿಕೊಂಡು, ಮಧ್ಯೆ ಮಧ್ಯೆ ಮಳೆಗಾಳಿ, ಆಕಾಶದಲ್ಲಿ ಚಲಿಸುವ ಮೋಡಗಳ ಓಡಾಟ, ಆಗಲೇ ಆರಂಭವಾದ ಗ್ರಹಣ ಸ್ಪಷ್ಟವಾಗಿ ತೋರದಂತೆ ಮಾಡುತ್ತಿದ್ದಿತು. ಕೊನೆಗೆ ಮೋಡದಲ್ಲೊಂದು ದೊಡ್ಡ ರಂಧ್ರವಾಗಿ ಸೂರ್ಯ ಕಾಣಿಸಿದ. ಅಲ್ಲ ಅಲ್ಲ. ಪೂರ್ಣ ಸೂರ್ಯಗ್ರಹಣವಾದುದರಿಂದ ಸೂರ್ಯ ಕಾಣಿಸಲಿಲ್ಲ. ಚಂದ್ರಮ ಸೂರ್ಯನನ್ನು ಪೂರ್ತಿಯಾಗಿ ಮರೆಮಾಡಿದ್ದ. ಹಗಲೇ ಕತ್ತಲಾಗಿಬಿಟ್ಟಿತು. ಸಹೋದ್ಯೋಗಿಗಳು ಎಡಿಂಗ್‌ಟನ್‌ರನ್ನು ದೂರದರ್ಶಕ ಬಿಟ್ಟು ಹೊರಬಂದು ನೋಡಲು ಕೂಗಿ ಕರೆದರು. ಆದರೆ ಅವರು ದೂರದರ್ಶಕದಿಂದ ಕತ್ತೆತ್ತದೆ ಗ್ರಹಣದ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿಯೇ ತಲ್ಲೀನರಾಗಿದ್ದರು.

ಒಳಾಂಗಣ: ಅಂದೇ ರಾತ್ರಿ ಡೇರೆಯೊಳಗಿನ ಒಂದು ಕತ್ತಲುಕೋಣೆ ಎನಿಸಿಕೊಳ್ಳುವ ಭಾಗ. ಹೊರಗಡೆ ಮಳೆ ಸುರಿಯುತ್ತಿದೆ. ಡೇರೆಯ ಬಟ್ಟೆ ಗಾಳಿಗೆ ತೊಯ್ದಡುತ್ತಿದೆ.  ಎಡಿಂಗ್‌ಟನ್‌ರವರು ಗ್ರಹಣದ ಮೊದಲ ಛಾಯಾಚಿತ್ರಗಳ ನೆಗಟಿವ್‌ಗಳನ್ನು ಟ್ರೇನಲ್ಲಿ ದ್ರಾವಣದಿಂದ ಹೊರತೆಗೆಯುತ್ತಾರೆ. ತೇವವಾಗಿದ್ದಂತೆಯೇ ಮೇಜಿನ ಮೇಲೆ ಅದನ್ನಿರಿಸಿ, ಅದರ ಮೇಲೆ ಪಾರದರ್ಶಕ ಹಾಳೆಯ ಮೇಲೆ ವಿವಿಧ ತಾರೆಗಳ ಸ್ಥಾನ ನಿರ್ದೇಶನವನ್ನು ಗಮನಿಸುತ್ತಾ ನಿಧಾನವಾಗಿ ಇಡುತ್ತಾರೆ. ಆ ತಾರೆಗಳು ಆಕಾಶದಲ್ಲಿ ಇರಬೇಕಾದ ಸ್ಥಾನಗಳಿಂದ ಚಲಿಸಿಬಿಟ್ಟಿವೆ. ಅವರು ಎರಡನೆಯ ಅಂತಹ ನಕ್ಷೆ ಕೈಗೆತ್ತಿಕೊಳ್ಳುತ್ತಾರೆ.  ಐನ್‌ಸ್ಟೈನ್ ಅನರು ಮುಂದಾಗಿಯೇ ಊಹಿಸಿದ್ದ ತಾರೆಗಳ ಸ್ಥಾನ ನಿರ್ದೇಶನಗಳು ಅದರಲ್ಲಿವೆ.  ಅದನ್ನು ಆ ಎರಡೂ ಹಾಳೆಗಳ ಮೇಲಿಡುತ್ತಾರೆ. ತಾರೆಗಳು ಮುಂದಾಗಿಯೇ ಸೂಚಿಸಿದ ಸ್ಥಾನಗಳನ್ನೇ ಹೊಂದಿಕೊಳ್ಳುತ್ತವೆ.

ಸ್ಥಳ :ಜ್ಯೂರಿಕ್ ನಗರ, ಜರ್ಮನಿ. ಜಾಗ:ಐನ್‌ಸ್ಟೈನ್‌ರ ಕಛೇರಿ. ತಾರೀಖುೊ:27ಸೆಪ್ಟೆಂಬರ್ 1919.

ಸನ್ನಿವೇಶ: ಐನ್‌ಸ್ಟೈನರು ಸಾಪೇಕ್ಷತೆ ಕುರಿತು ಒಂದು ಪುಸ್ತಕದ ಭಾಗಗಳನ್ನು ಐಲ್ ರೊಸೆಂಥಾಲ್ ಸ್ಖ್ನೈಡರ್ ಎಂಬ ವಿದ್ಯಾರ್ಥಿನಿಗೆ ಓದಿ ಹೇಳುತ್ತಿದ್ದಾರೆ.

ಐನ್‌ಸ್ಟೈನ್ :(ಗಟ್ಟಿಯಾಗಿ ಓದುತ್ತಾ) “ಐನ್‌ಸ್ಟೈನರು ಸಂಪೂರ್ಣವಾಗಿ ಅರ್ಥಹೀನರು” ಅದ್ಭುತವಾಗಿದ್ದು, ಅದನ್ನು ಗ್ರಂಥಕರ್ತ ಸಮ್ಮತಿಸುತ್ತಾನೆ!

ಮಧ್ಯ ಪ್ರವೇಶ :ಒಬ್ಬ ಸಂದೇಶವಾಹಕನು ಒಳಗೆ ಬಂದು ಒಂದು ಟೆಲಿಗ್ರಾಂ ಅನ್ನು ಐನ್‌ಸ್ಟೈನರಿಗೆ ಕೊಡುತ್ತಾನೆ. ಅವರು ಅದನ್ನು ಬಿಚ್ಚಿ, ಅನ್ಯಮನಸ್ಕರಾಗಿ ಓದುತ್ತಾರೆ.  ಅದರಲ್ಲಿ ಬರೆದದ್ದು : ‘ಎಡ್ಡಿಂಗ್‌ಟನ್ನರು ಸೂರ್ಯನ ಅಂಚಿನ ಬಳಿಯ ನಕ್ಷತ್ರಗಳ ಸ್ಥಾನಪಲ್ಲಟವನ್ನು ವೀಕ್ಷಿಸಿದರು. ಅದು ಪ್ರಾಥಮಿಕವಾಗಿ ಮೂಡಿದ ಅಳತೆಯ 9/10ಸೆಕೆಂಡ್‌ನಿಂದ ಅದರ ಎರಡರಷ್ಟು ಬೆಲೆಯ ಮಧ್ಯದಲ್ಲಿದೆ’ಎನ್ನುತ್ತದೆ.

ಐನ್‌ಸ್ಟೈನ್ (ಆ ಟೆಲಿಗ್ರಾಂ ಅನ್ನು ಆಕೆಗೆ ನೀಡುತ್ತಾ): ಇದು ನಿನಗೆ ಆಸಕ್ತಿ ನೀಡಬಹುದು.

ಆಕೆ ಅದನ್ನು ಓದುತ್ತಾಳೆ.

ಐಲ್:ಅದೆಷ್ಟು ಅದ್ಭುತ! ಇದು ನೀವು ಮಂಡಿಸಿದ ಸಿದ್ಧಾಂತದ ಫಲಿತಾಂಶ!

ಐನ್‌ಸ್ಟೈನ್:ಅಂದರೆ, ನಿನಗೆ ಅನುಮಾನವಿತ್ತೇ?

ಐಲ್:ಇಲ್ಲ. ಇರಲಿಲ್ಲ ಎನ್ನಿ. ಆದರೆ ಗ್ರಹಣ ವೀಕ್ಷಣೆಯು ಆ ಸಿದ್ಧಾಂತವನ್ನು ದೃಢಪಡಿಸದೆ ಇದ್ದಿದ್ದರೆ ನೀವು ಏನೆನ್ನುತ್ತಿದ್ದಿರಿ?

ಐನ್‌ಸ್ಟೀನ್:ಆ ಪ್ರಿಯ ಭಗವಂತನ ಕುರಿತು ನನಗೆ ಕನಿಕರ ಉಂಟಾಗುತ್ತಿತ್ತು. ಆ ಸಿದ್ಧಾಂತ ಸರಿಯಾಗಿಯೇ ಇದೆ (ಚಿತ್ರನೋಡಿ).