ನಿಶ್ಚಲ ಸ್ಥಿತಿಯಲ್ಲಿರುವ ನಿರ್ಜೀವ ವಸ್ತುವೊಂದು ತಾನಾಗಿಯೇ ಚಲಿಸಲಾರಂಭಿಸುವುದಿಲ್ಲವೇಕೆ? ಒಂದು ವೇಳೆ ಅದು ಚಲಿಸಲಾರಂಭಿಸಿದರೆ ಅದೊಂದು ‘ಪವಾಡ’ ಎಂದು ತೀರ್ಮಾನಿಸಬಹುದೇ?

ಒಂದು ಗೋಲಿಯನ್ನು ಉರುಳಿಸಿದರೆ ಸ್ವಲ್ಪ ಕಾಲಾನಂತರ ಅದು ನಿಶ್ಚಲ ಸ್ಥಿತಿಗೆ ಮರಳುವುದೇಕೆ? ನಿಶ್ಚಲ ಸ್ಥಿತಿಯೇ ನಿರ್ಜೀವ ವಸ್ತುಗಳ ಸಹಜ ಸ್ಥಿತಿಯೇ? ವಸ್ತುವೊಂದು ನಿರ್ದಿಷ್ಟ ದೂರ ಚಲಿಸುವಂತೆ ಮಾಡಬೇಕಾದರೆ ಏನು ಮಾಡಬೇಕು? ವೇಗವಾಗಿ ಚಲಿಸುತ್ತಿರುವ ವಾಹನ ದಿಢೀರನೆ ನಿಂತಾಗ ಅದರಲ್ಲಿ ಕುಳಿತಿದ್ದ ಪ್ರಯಾಣಿಕರ ತಲೆ ಮುಂದಿರುವ ಆಸನಕ್ಕೆ ಢಿಕ್ಕಿ ಹೊಡೆಯುವುದೇಕೆ? ಚಲಿಸುತ್ತಿರುವ ವಾಹನದಿಂದ ಇಳಿದರೆ ವಾಹನ ಚಲಿಸುತ್ತಿದ್ದ ದಿಕ್ಕಿನತ್ತ ಬೀಳುವುದೇಕೆ? ಚಲನೆಗೆ ಸಂಬಂಧಿಸಿದಂತೆ ಕೇಳಬಹುದಾದ ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ನೆರವು ನೀಡುತ್ತವೆ ಚಲನ ನಿಯಮಗಳು. ಇವನ್ನು ಆವಿಷ್ಕರಿಸಿದ್ದು ಸರ್ ಐಸಾಕ್ ನ್ಯೂಟನ್ (೨೫ ಡಿಸೆಂಬರ್ ೧೬೪೨- ೨೦ ಮಾರ್ಚ್ ೧೭೨೭) ಎಂಬ ಬ್ರಿಟಿಷ್ ವಿಜ್ಞಾನಿ. ಆದ್ದರಿಂದ ಇವು ನ್ಯೂಟನ್ ರ ಚಲನ ನಿಯಮಗಳು (ನ್ಯೂಟನ್ಸ್ ಲಾ ಸ್ ಆಫ್ ಮೋಷನ್) ಎಂದೇ ಪ್ರಸಿದ್ಧವಾಗಿವೆ. ನ್ಯೂಟನ್ ೧೬೮೭ ರಲ್ಲಿ ಪ್ರಕಟಿಸಿದ  ಲ್ಯಾಟಿನ್ ಭಾಷೆಯ ‘ಫಿಲಾಸಫಿಯಾ ನ್ಯಾಚರಲಿಸ್ ಪ್ರಿನ್ಸಿಪಿಯಾ ಮ್ಯಾತಿಮ್ಯಾಟಿಕಾ’ ಎಂಬ ಏಕವಿಷಯಕ ಪ್ರಬಂಧದಲ್ಲಿ (ಮಾನಗ್ರಾಫ್) ಇವುಗಳ ಪ್ರತಿಪಾದನೆ ಇದೆ. ಮೂಲ ಕೃತಿ ಲ್ಯಾಟಿನ್ ಭಾಷೆಯಲ್ಲಿ ಇರುವುದರಿಂದಲೋ ಅಥವ ನ್ಯೂಟನ್ ಒಂದೊಂದು ಪುಟ್ಟ ವಾಕ್ಯಗಳಲ್ಲಿ ರೂಪಿಸಿದ ಈ ನಿಯಮಗಳ ಭಾವಾರ್ಥವನ್ನು ಸ್ಪಷ್ಟೀಕರಿಸಲೋ ಈ ನಿಯಮಗಳ ವಿಭಿನ್ನ ಪಾಠಾಂತರಗಳಿವೆ.

ನಿಯಮ ೧

ಮೂಲ ಪಾಠ: Corpus omne perseverare in statu suo quiescendi vel movendi uniformiter in directum, nisi quatenus a viribus impressis cogitur statum illum mutare.

ಇಂಗ್ಲಿಷ್ ಭಾಷಾಂತರ: Every body persists in its state of being at rest or of moving uniformly straight forward, except insofar as it is compelled to change its state by force impressed.

ಕನ್ನಡ ಭಾಷಾಂತರ: ಬಾಹ್ಯ ಬಲ ಪ್ರಯೋಗವಾಗದೇ ಇದ್ದರೆ ಪ್ರತಿಯೊಂದು ಕಾಯವೂ ತಾನು ಹಾಲಿ ಇರುವ ನಿಶ್ಚಲ ಸ್ಥಿತಿಯಲ್ಲಿಯೇ ಅಥವ ನೇರರೇಖೆಯ ಮೇಲಿನ ಏಕ ರೀತಿಯ ಚಲನೆಯಲ್ಲಿಯೇ ಮುಂದುವರಿಯುತ್ತದೆ.

ಬಲು ಸರಳವಾಗಿರುವಂತೆ ಮೇಲ್ನೋಟಕ್ಕೆ ಗೋಚರಿಸುವ ಈ ನಿಯಮದ ಅಂತಸ್ಥ ಅರ್ಥವನ್ನು ವಿಶ್ಲೇಷಿಸಿದರೆ ಮಾತ್ರ ಅದರ ಪ್ರಾಮುಖ್ಯವನ್ನು ಗ್ರಹಿಸಲು ಸಾಧ್ಯ. ‘ಬಾಹ್ಯ ಬಲ ಪ್ರಯೋಗವಾಗದೇ ಇದ್ದರೆ ಪ್ರತಿಯೊಂದು ಕಾಯವೂ ತಾನು ಹಾಲಿ ಇರುವ ನಿಶ್ಚಲ ಸ್ಥಿತಿಯಲ್ಲಿಯೇ ಮುಂದುವರಿಯುತ್ತದೆ – ಈ ಭಾಗ ಮೇಲ್ನೋಟಕ್ಕೆ ಸ್ವತಃಸಿದ್ಧ ಸತ್ಯದಂತೆ ಗೋಚರಿಸುತ್ತದಲ್ಲವೇ? ಮೇಜಿನ ಮೇಲೆ ನಿಶ್ಚಲ ಸ್ಥಿತಿಯಲ್ಲಿರುವ ಗೋಲಿಯೊಂದು ತನ್ನಷ್ಟಕ್ಕೆ ತಾನೇ ಉರುಳುವುದಿಲ್ಲ ಎಂಬುದಕ್ಕೆ ಹೊಸ ಪುರಾವೆ ಅಗತ್ಯವಿಲ್ಲವಾದರೂ ಆ ನಿಶ್ಚಲ ಸ್ಥಿತಿಯಲ್ಲಿ ಇರುವ ಗೋಲಿಯ ಮೇಲೆ ಯಾವ ಬಾಹ್ಯಬಲವೂ ಕ್ರಿಯೆ ನಡೆಸುತ್ತಿಲ್ಲ ಆದ್ದರಿಂದ ಅದು ನಿಶ್ಚಲ ಸ್ಥಿತಿಯಲ್ಲಿಯೇ ಮುಂದುವರಿಯುತ್ತಿದೆ ಅನ್ನುವುದು ಸರಿಯೇ? ಗುರುತ್ವ ಬಲ ಮತ್ತು ಮೇಜು ಗೋಲಿಯನ್ನು ಎತ್ತಿ ಹಿಡಿಯಲು ಪ್ರಯೋಗಿಸುತ್ತಿರುವ ಬಲ- ಈ ಎರಡು ಬಾಹ್ಯಬಲಗಳು ಈ ಸ್ಥಿತಿಯಲ್ಲಿಯೂ ಗೋಲಿಯ ಮೇಲೆ ಪ್ರಯೋಗವಾಗಿವೆಯಲ್ಲವೇ? ಅಂದ ಮೇಲೆ ಗೋಲಿ ನಿಶ್ಚಲ ಸ್ಥಿತಿಯಲ್ಲಿ ಮುಂದುವರಿಯಲು ಈ ಎರಡೂ ಬಲಗಳ ಫಲಿತ ಬಲದ (ರಿಸಲ್ಟೆಂಟ್ ಫೋರ್ಸ್) ಮೌಲ್ಯ ‘ಸೊನ್ನೆ’ ಆಗಿರುವುದೇ ಕಾರಣ ಎಂದು ಅರ್ಥೈಸಬೇಕು. ಎಂದೇ, ಕೆಲವು ಭಾಷಾಂತರಕಾರರು ‘ಬಾಹ್ಯ ಬಲ ಎಂಬ ಪದಪುಂಜಕ್ಕೆ ಬದಲಾಗಿ ‘ಅಸಂತುಲಿತ ಬಲಗಳು (ಅನ್ ಬ್ಯಾಲೆನ್ಸ್ಡ್ ಫೋರ್ಸಸ್, ಫಲಿತ ಬಲದ ಮೌಲ್ಯ ಸೊನ್ನೆ ಅಲ್ಲ ಎಂದೇ ಇದರ ಅರ್ಥ)’ ಎಂಬ ಪದಪುಂಜ ಉಪಯೋಗಿಸಿದ್ದಾರೆ. ಮೇಜಿನ ಮೇಲೆ ಸಂತುಲಿತ ಬಲಗಳ (ಬ್ಯಾಲೆನ್ಸ್ಡ್ ಫೋರ್ಸಸ್) ಪ್ರಭಾವದಲ್ಲಿ ನಿಶ್ಚಲ ಸ್ಥಿತಿಯಲ್ಲಿ ಇದ್ದ ಗೋಲಿ ಚಲಿಸುವಂತೆ ಮಾಡಬೇಕಾದರೆ ಅದರ ಮೇಲೆ ಬಾಹ್ಯ ಅಸಂತುಲಿತ ಬಲಗಳನ್ನು ಪ್ರಯೋಗಿಸಬೇಕು, ಅರ್ಥಾತ್ ಅದರ ಮೇಲೆ ಪ್ರಯೋಗಿಸಲ್ಪಟ್ಟ ಬಲಗಳ ಫಲಿತ ಬಲದ ಮೌಲ್ಯ ಸೊನ್ನೆ ಆಗದಂತೆ ಮಾಡಬೇಕು. ಗೋಲಿಯನ್ನು ತಳ್ಳುವುದು, ಮೇಜಿನ ಮೇಲ್ಮೈ ಓರೆಯಾಗುವಂತೆ ಮಾಡುವುದು, ಕಬ್ಬಿಣದ ಗೋಲಿಯಾಗಿದ್ದಲ್ಲಿ ಪ್ರಬಲ ಕಾಂತದ ನೆರವಿನಿಂದ ಕಾಂತೀಯ ಬಲ ಪ್ರಯೋಗಿಸುವುದು ಇವೇ ಮೊದಲಾದ ತಂತ್ರಗಳಿಂದ ಹೀಗೆ ಮಾಡಲು ಸಾಧ್ಯ.  ಬಾಹ್ಯ ಬಲ ಪ್ರಯೋಗವಾಗದೇ ಇದ್ದರೆ ಪ್ರತಿಯೊಂದು ಕಾಯವೂ ತಾನು ಹಾಲಿ ಇರುವ ನೇರರೇಖೆಯ ಮೇಲಿನ ಏಕ ರೀತಿಯ ಚಲನೆಯಲ್ಲಿಯೇ ಮುಂದುವರಿಯುತ್ತದೆ– ಈ ಭಾಗದಲ್ಲಿ ತಿಳಿಸಿರುವುದು ಸತ್ಯವಾಗಿದ್ದರೆ ಮೇಜಿನ ಮೇಲಿನ ಗೋಲಿಯನ್ನು ತಳ್ಳಿ ಚಲಿಸುವಂತೆ ಮಾಡಿದರೆ ಅದು ನೇರರೇಖೆಯ ಮೇಲೆ ಏಕರೀತಿಯಲ್ಲಿ ಚಲಿಸುತ್ತಲೇ ಇರಬೇಕಲ್ಲವೇ? ವಾಸ್ತವದಲ್ಲಿ ಇಂತಾಗದಿರುವುದು ಏಕೆ?  ಮೇಜಿನ ಮೇಲೆ ಉರುಳುತ್ತಿರುವ ಗೋಲಿಯ ಉರುಳುವಿಕೆಯ ವೇಗ ನಿಧಾನವಾಗಿ ಕಮ್ಮಿ ಆಗಿ ಅಂತಿಮವಾಗಿ ಗೋಲಿ ನಿಶ್ಚಲ ಸ್ಥಿತಿಗೆ ಬರುತ್ತದಲ್ಲವೇ? ಬಾಹ್ಯ ಬಲ ಪ್ರಯೋಗವಾಗದೇ ಇದ್ದರೆ – ಇದನ್ನು ‘ಅಸಂತುಲಿತ ಬಲಗಳು ಪ್ರಯೋಗವಾದೇ ಇದ್ದರೆ, ಅರ್ಥಾತ್’ ಪ್ರಯೋಗಿಸಲ್ಪಟ್ಟ ಎಲ್ಲ ಬಲಗಳ ಫಲಿತ ಬಲದ ಮೌಲ್ಯ ಸೊನ್ನೆ ಆಗದೇ ಇದ್ದರೆ’ ಎಂದು ಅರ್ಥೈಸಬೇಕು ಎಂದು ಈಗಾಗಲೇ ತಿಳಿಸಿದೆಯಲ್ಲವೇ? ಮೇಜಿನ ಮೇಲೆ ಉರುಳುತ್ತಿರುವ ಗೋಲಿಯ ಮೇಲೆ ನಿರಂತರವಾಗಿ ಪ್ರಯೋಗವಾಗುತ್ತಿರುವ ಘರ್ಷಣ ಬಲವು ಅದರ ಮೇಲೆ ಪ್ರಯೋಗಿಸಲ್ಪಟ್ಟ ಎಲ್ಲ ಬಲಗಳ ಫಲಿತ ಬಲದ ಮೌಲ್ಯ ಸೊನ್ನೆ ಆಗದೇ ಇರುವಂತೆ ಮಾಡುತ್ತದೆ. ಆದ್ದರಿಂದ ಗೋಲಿ ನಿರಂತರವಾಗಿ ಚಲಿಸುತ್ತಲೇ ಇರುವುದಿಲ್ಲ. ಒಮ್ಮೆ ಬಾಹ್ಯಬಲ ಪ್ರಯೋಗಿಸಿ ಗೋಲಿ ಚಲಿಸುವಂತೆ ಮಾಡಿದರೆ ತದನಂತರ ಅದರ ಮೇಲೆ ಘರ್ಷಣ ಬಲವೂ ಸೇರಿದಂತೆ ಬೇರೆ ಯಾವ ಬಾಹ್ಯಬಲವೂ ಪ್ರಯೋಗವಾಗದ ಅಥವ ಗೋಲಿಯ ಮೇಲೆ ಪ್ರಯೋಗವಾಗಬಹುದಾದ ಎಲ್ಲ ಬಲಗಳ ಫಲಿತಬಲದ ಮೌಲ್ಯ ಸೊನ್ನೆ ಆಗುವಂಥ ಸನ್ನಿವೇಶ ಸೃಷ್ಟಿಸುವುದು ಸಾಧ್ಯವಾದರೆ ಅದು ನಿರಂತರವಾಗಿ ಚಲಿಸುತ್ತಲೇ ಇರುತ್ತದೆ. ಅಂದ ಹಾಗೆ, ಗೋಲಿಯ ಚಲನೆಯ ಜವವನ್ನೇ ಆಗಲಿ ದಿಕ್ಕನ್ನೇ ಆಗಲಿ, ಅರ್ಥಾತ್ ವೇಗವನ್ನು ಬದಲಿಸಬೇಕಾದರೆ, ‘ಬಾಹ್ಯಬಲ’ ಪ್ರಯೋಗವಾಗಲೇ ಬೇಕು ಎಂಬುದು ಅನುಭವವೇದ್ಯ ತಥ್ಯ. ಇಲ್ಲಿ ಗಮನಿಸ ಬೇಕಾದ ಇನ್ನೆರಡು ಅಂಶಗಳು ಇಂತಿವೆ – ‘ಬಲ’ ಅಗೋಚರ, ಬಲ ಪ್ರಯೋಗದ ಪರಿಣಾಮ ಮಾತ್ರ ಗೋಚರ. ‘ಬಲ’ದ ಮೂಲ ಗೋಚರಿಸುತ್ತಿಲ್ಲ ಅಂದ ಮಾತ್ರಕ್ಕೆ ‘ಬಲ’ ಪ್ರಯೋಗವಾಗಿಲ್ಲ ಎಂದು ತೀರ್ಮಾನಿಸ ಕೂಡದು. ಕಾಯವೊಂದರ ನಿಶ್ಚಲ ಅಥವ ಚಲನ ಸ್ಥಿತಿ ಬದಲಾಗ ಬೇಕಾದರೆ ಅದರ ಮೇಲೆ ‘ಬಲ’ ಪ್ರಯೋಗವಾಗಲೇ ಬೇಕು. ಫಲಿತ ಬಲದ ಮೌಲ್ಯ ಸೊನ್ನೆ ಆಗಿರುವುದು ಬಲ ಪ್ರಯೋಗವಾಗದಿರುವುದಕ್ಕೆ ಸಮ.

ಈ ನಿಯಮದಲ್ಲಿ ಇನ್ನೂ ಕೆಲವು ವಿಶೇಷತೆಗಳು ಇವೆ. ಅವು ಇಂತಿವೆ:

೧. ಈ ನಿಯಮವು ದ್ರವ್ಯದ (ಮ್ಯಾಟರ್) ಲಕ್ಷಣಗಳ ಪೈಕಿ ಒಂದಾಗಿರುವ ‘ಜಡತ್ವ (ಇನರ್ಷ್ಯ)’ದ ನಿರೂಪಣೆಯೂ ಆಗಿದೆ. ಬಾಹ್ಯಬಲದ ಪ್ರಭಾವವಿಲ್ಲದಿರುವಾಗ ತಾನಿರುವ ನಿಶ್ಚಲ ಸ್ಥಿತಿಯನ್ನಾಗಲಿ ಏಕರೀತಯ ನೇರರೇಖಾ ಚಲನೆಯನ್ನಾಗಲಿ ಬದಲಿಸದಿರುವ ಗುಣಕ್ಕೆ ಜಡತ್ವ ಎಂದು ಹೆಸರು. ‘ಜಡತ್ವದ ನಿಯಮ’ ಎಂದು ಮೊದಲನೆಯ ಚಲನ ನಿಯಮವನ್ನು ಉಲ್ಲೇಖಿಸುವುದೂ ಉಂಟು. ಈ ಗುಣವನ್ನು ಮೊದಲು ಆವಿಷ್ಕರಿಸಿದ ಖ್ಯಾತಿ ಇಟೆಲಿಯ ಅದ್ವಿತೀಯ ವಿಜ್ಞಾನಿ ಗೆಲಿಲಿಯೋಗೆ (೧೫ ಫೆಬ್ರವರಿ ೧೫೬೪-೮ ಜನವರಿ ೧೬೪೨) ಸಲ್ಲುತ್ತದೆ.

೨. ಈ ನಿಯಮವು ಪರೋಕ್ಷವಾಗಿ ‘ಜಡತೆಯ ನಿರ್ದೇಶಕ ಚೌಕಟ್ಟಿನ (ಇನರ್ಷ್ಯಲ್ ಫ್ರೇಮ್ ಆಫ್ ರೆಫರೆನ್ಸ್)’ ನಿರೂಪಣೆಯೂ ಆಗಿದೆ. ಎಲ್ಲ ಚಲನೆಯೂ ಸಾಪೇಕ್ಷ ಚಲನೆಗಳು. ಅಂತೆಯೇ, ಚಲನೆರಹಿತ (ಮೋಷನ್‌ಲೆಸ್) ಸ್ಥಿತಿ ಅಥವ ವಿಶ್ರಾಂತ (ರೆಸ್ಟ್) ಸ್ಥಿತಿ ಅಥವ ನಿಶ್ಚಲ (ಸ್ಟೇಷನರಿ) ಸ್ಥಿತಿ ಕೂಡ ಸಾಪೇಕ್ಷ. ಒಂದು ನಿರ್ದೇಶಕ ಬಿಂದುವಿಗೆ ಸಂಬಂಧಿಸಿದಂತೆ ಅಥವ ಒಂದು ನಿರ್ದೇಶಕ ಚೌಕಟ್ಟಿನಲ್ಲಿ (ಫ್ರೇಮ್ ಆಫ್ ರೆಫರೆನ್ಸ್) ನಿಶ್ಚಲವಾಗಿ ಗೋಚರಿಸುವ ವಸ್ತು ಬೇರೊಂದು ನಿರ್ದೇಶಕ ಬಿಂದುವಿಗೆ ಸಂಬಂಧಿಸಿದಂತೆ ಅಥವ ಒಂದು ನಿರ್ದೇಶಕ ಚೌಕಟ್ಟಿನಲ್ಲಿ (ಫ್ರೇಮ್ ಆಫ್ ರೆಫರೆನ್ಸ್) ಚಲನೆಯಲ್ಲಿ ಇರುವಂತೆ ಗೋಚರಿಸಬಹುದು. (ನೋಡಿ: ಚಲನೆ: ಮೂಲಭೂತ ಪರಿಕಲ್ಪನೆಗಳು). ಯಾವ ನಿರ್ದೇಶಕ ವ್ಯವಸ್ಥೆಗೆ ಸಂಬಂಧಿಸಿದಂತೆ ಕಾಯವೊಂದು ಬಾಹ್ಯಬಲ ಪ್ರಯೋಗವಾಗದೇ ಇದ್ದಾಗ (ಅಥವ ಫಲಿತಬಲದ ಮೌಲ್ಯ ಸೊನ್ನೆ ಆದಾಗ) ತನ್ನ ನಿಶ್ಚಲ ಸ್ಥಿತಿಯಲ್ಲಿ ಅಥವ ನೇರರೇಖೆಯ ಮೇಲೆ ಏಕರೀತಿಯ ಚಲನೆಯಲ್ಲಿ ಮುಂದುವರಿಯುತ್ತದೋ ಅದೇ ಜಡತ್ವ ಸಂಬಂಧಿತ ನಿರ್ದೇಶಕ ಚೌಕಟ್ಟು. ನ್ಯೂಟನ್ ರ ಮೊದಲನೆಯ ಚಲನ ನಿಯಮ ಯಾವ ನಿರ್ದೇಶಕ ಚೌಕಟ್ಟಿನಲ್ಲಿ ಶೂನ್ಯ ಫಲಿತಬಲದಿಂದ ಪ್ರಭಾವಿತ ಕಾಯವೊಂದರ ಚಲನೆಯನ್ನು ನಿಷ್ಕೃಷ್ಟವಾಗಿ ವರ್ಣಿಸುತ್ತದೆಯೋ ಅದೇ  ಜಡತೆಯ ಸಂಬಂಧಿತ ನಿರ್ದೇಶಕ ಚೌಕಟ್ಟು ಎಂಬ ವ್ಯಾಖ್ಯಾನವೂ ಉಂಟು.

೩. ಕಾಯಗಳ ಚಲನ ಅಥವ ನಿಶ್ಚಲ ಸ್ಥಿತಿಯನ್ನು ಬದಲಿಸಲು ಬಲ ಅಗತ್ಯ ಎಂಬುದನ್ನು ಪ್ರತಿಪಾದಿಸುವುದರ ಮುಖೇನ ‘ಬಲ ಎಂದರೇನು’ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಅಗತ್ಯವಾದ ಭೂಮಿಕೆಯನ್ನು ಈ ನಿಯಮ ಹಾಕಿದೆ.

ನಿಯಮ ೨

ಮೂಲ ಪಾಠ: Mutationem motus proportionalem esse vi motrici impressae, et fieri secundum lineam rectam qua vis illa imprimitur.

ಇಂಗ್ಲಿಷ್ ಭಾಷಾಂತರ (ಮೂಲಕ್ಕೆ ಅತಿ ಸಮೀಪದ್ದು): The alteration of motion is ever proportional to the motive force impressed; and is made in the direction of the right line in which that force is impressed.

ಇಂಗ್ಲಿಷ್ ಭಾಷಾಂತರ (ಆಧುನಿಕ): The change of momentum of a body is proportional to the impulse impressed on the body, and happens along the straight line on which that impulse is impressed.

ಕನ್ನಡ ಭಾಷಾಂತರ (ಆಧುನಿಕ ಪಾಠದ್ದು): ಕಾಯವೊಂದರ ಸಂವೇಗದಲ್ಲಿ (ಮೊಮೆಂಟಮ್) ಆಗುವ ಬದಲಾವಣೆಯು  ಅದರ ಮೇಲೆ ಪ್ರಯೋಗಿಸಿದ ಆವೇಗಕ್ಕೆ (ಇಂಪಲ್ಸ್) ಅನುಪಾತೀಯವಾಗಿದ್ದು ಅದು ಪ್ರಯೋಗವಾದ ನೇರರೇಖೆಯಗುಂಟವೇ ಆಗುತ್ತದೆ.

ನಿರ್ದಿಷ್ಟ ಕಾಲಾವಧಿಯಲ್ಲಿ ಪ್ರಯೋಗಿಸಿದ ಸರಾಸರಿ ಬಲ (F) ಮತ್ತು ಪ್ರಯೋಗಿಸಿದ ಕಾಲಾವಧಿಗಳ (t) ಗುಣಲಬ್ಧಕ್ಕೆ (F t) ಆವೇಗ ಎಂದೂ ಚಲನೆಯಲ್ಲಿರುವ ಕಾಯದ ದ್ರವ್ಯರಾಶಿ (ಮಾಸ್, m ) ಮತ್ತು ವೇಗದ (v) ಗುಣಲಬ್ಧಕ್ಕೆ (mv) ಸಂವೇಗ ಎಂದೂ ಹೆಸರು. ಬಲ ಪ್ರಯೋಗದ ಕಾಲಾವಧಿಯ ಆರಂಭದಲ್ಲಿ ಕಾಯದ ವೇಗ u ಅಂತ್ಯದಲ್ಲಿ v ಆಗಿದ್ದರೆ ಅದರ

ಆರಂಭಿಕ ಸಂವೇಗ = mu

ಅಂತಿಮ ಸಂವೇಗ = mv

ಸಂವೇಗದಲ್ಲಿ ಆದ ಬದಲಾವಣೆ = mv – mu = m(v u)

ಚಲನೆಯ ೨ ನೇ ನಿಯಮದ ಪ್ರಕಾರ

F t = m(v u)

(v u)/t = ವೇಗೋತ್ಕರ್ಷ a ಆದ್ದರಿಂದ (ನೋಡಿ ಚಲನೆಯ ಸಮೀಕರಣಗಳು (ಇಕ್ವೇಷನ್ಸ್ ಆಫ್ ಮೋಷನ್)

F = ma ಅಥವ a = F/m

ಎಂದೇ, ಚಲನೆಯ ೨ ನೇ ನಿಯಮವನ್ನು ಇಂತು ನಿರೂಪಿಸುವುದೂ ಉಂಟು: ಕಾಯವೊಂದಕ್ಕೆ ಕೊಡಲಾದ ವೇಗೋತ್ಕರ್ಷವು ಅದರ ಮೇಲೆ ಪ್ರಯೋಗಿಸಿದ ಬಲಕ್ಕೆ ನೇರ ಅನುಪಾತದಲ್ಲಿ ಆ ಬಲದ ದಿಕ್ಕಿನಲ್ಲಿಯೇ ಇರುತ್ತದೆ ಮತ್ತು ಕಾಯದ ದ್ರವ್ಯರಾಶಿಗೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ.

ಒಂದು ಕಾಯಕ್ಕೆ ಅಧಿಕ ವೇಗೋತ್ಕರ್ಷ ನೀಡಬೇಕಾದರೆ ಅಧಿಕ ಬಲ ಪ್ರಯೋಗಿಸ ಬೇಕು ಎಂಬುದನ್ನೂ ನಿರ್ದಿಷ್ಟ ವೇಗೋತ್ಕರ್ಷ ನೀಡಲು ಎಷ್ಟು ಬಲ ಪ್ರಯೋಗಿಸಬೇಕು ಎಂಬುದು ಆ ಕಾಯದ ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ – ದ್ರವ್ಯರಾಶಿ ಹೆಚ್ಚಿದಂತೆಲ್ಲ ಪ್ರಯೋಗಿಸಬೇಕಾದ ಬಲದ ಪರಿಮಾಣವನ್ನೂ ಹೆಚ್ಚಿಸಬೇಕಾಗುತ್ತದೆ – ಎಂಬುದನ್ನೂ ಈ ನಿಯಮದ ತಿರುಳು .

ಈ ನಿಯಮದ ವಿಶಿಷ್ಟತೆಗಳು ಇಂತಿವೆ:

೧. F = ೦ ಆದರೆ a =೦ ಅಗುತ್ತದಲ್ಲವೆ? ಕಾಯದ ಮೇಲೆ ಬಲ ಪ್ರಯೋಗವಾಗದೇ ಇದ್ದರೆ ವೇಗೋತ್ಕರ್ಷ ಉಂಟಾಗದಿರುವುದರಿಂದ ಅದರ ಹಾಲಿ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಅಂದ ಮೇಲೆ, ಮೊದಲನೇ ನಿಯಮ ಎರಡನೇ ನಿಯಮದಲ್ಲಿ ಅಂತರ್ಗತವಾಗಿದೆ ಎಂದು ಹೇಳಲು ಅಡ್ಡಿಯಿಲ್ಲ.

೨.  ಬಲವನ್ನು ಅಳತೆ ಮಾಡಲು ಅಗತ್ಯವಾದ ಏಕಮಾನವನ್ನು ನಿರೂಪಿಸಲು ಈ ನಿಯಮ ನೆರವು ನೀಡುತ್ತದೆ. ಅಳತೆಯ ಪದ್ಧತಿ ಯಾವುದೇ ಇರಲಿ, ಏಕಮಾನ ದ್ರವ್ಯರಾಶಿಯುಳ್ಳ ಕಾಯಕ್ಕೆ ಏಕಮಾನ ವೇಗೋತ್ಕರ್ಷವನ್ನು ನೀಡಬಲ್ಲ ಬಲವೇ ಏಕಮಾನ ಬಲ ಎಂದೇ ಬಲದ ಅಳತೆಯ ಏಕಮಾನವನ್ನು ವ್ಯಾಖ್ಯಾನಿಸಬೇಕು. ಅಂತಾರಾಷ್ಟ್ರೀಯ ಪದ್ಧತಿಯಲ್ಲಿ ಬಲದ ಅಳತೆಯ ಏಕಮಾನ ‘ನ್ಯೂಟನ್’. ಒಂದು ಕಿಲೋಗ್ರಾಮ್ ದ್ರವ್ಯರಾಶಿಯುಳ್ಳ ಕಾಯಕ್ಕೆ ಒಂದು ಮೀ/ಸೆ ವೇಗೋತ್ಕರ್ಷವನ್ನು ನೀಡಬಲ್ಲ ಬಲವೇ ಒಂದು ನ್ಯೂಟನ್.

ನಿಯಮ ೩ 

ಮೂಲ ಪಾಠ: Actioni contrariam semper et æqualem esse reactionem: sive corporum duorum actiones in se mutuo semper esse æquales et in partes contrarias dirigi.

ಇಂಗ್ಲಿಷ್ ಭಾಷಾಂತರ: To every action there is always an equal and opposite reaction: or the forces of two bodies on each other are always equal and are directed in opposite directions.

ಕನ್ನಡ ಭಾಷಾಂತರ: ಪ್ರತಿಯೊಂದು ಕ್ರಿಯೆಗೂ ಅದಕ್ಎ ಸಮವೂ ವಿರುದ್ಧವೂ ಆದ ಪ್ರತಿಕ್ರಯೆಯೊಂದು ಯಾವಾಗಲೂ ಇರುತ್ತದೆ: ಅಥವ ಎರಡು ಕಾಯಗಳು ಒಂದರ ಮೇಲೊಂದು ಪ್ರಯೋಗಿಸುವ ಬಲಗಳು ಯಾವಾಗಲೂ ಸಮವಾಗಿರುತ್ತವೆ ಮತ್ತು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ.

‘ಕ್ರಿಯೆ ಮತ್ತು ಪ್ರತಿಕ್ರಿಯೆ ಯಾವಾಗಲೂ ಪರಸ್ಪರ ಸಮ ಮತ್ತು ವಿರುದ್ಧ’ ಎಂದು ಬಲು ಜನಪ್ರಿಯವಾಗಿರುವ, ಈ ನಿಯಮ  ಬಹುಮಂದಿ ತಪ್ಪಾಗಿ ಅರ್ಥೈಸುತ್ತಿರುವ ನಿಯಮವೂ ಆಗಿದೆ. ಎರಡು ಕಾಯಗಳು ಪರಸ್ಪರ ಅಂತರ್-ವರ್ತಿಸುವಾಗ ಮೊದಲನೆಯದು ಎರಡನೆಯದರ ಮೇಲೆ ಪ್ರಯೋಗಿಸುವ ಬಲಕ್ಕೆ ಸಮವಾದ ಬಲವನ್ನು ಎರಡನೆಯದು ಮೊದಲನೆಯದರ ಮೇಲೆ ಪ್ರಯೋಗಿಸುತ್ತದೆ ಎಂದು ಇದನ್ನು ಅರ್ಥೈಸಬೇಕು.

ಈ ವಿವರಣೆಯಲ್ಲಿ ಗಮನಿಸಬೇಕಾದ ಅಂಶಗಳು ಇಂತಿವೆ:

೧. ಒಂದು ಕಾಯ ಇನ್ನೊಂದರ ಮೇಲೆ ಏಕಕಾಲದಲ್ಲಿ ಪರಸ್ಪರ ಸಮವಾದ ಬಲಗಳನ್ನು ಪ್ರಯೋಗಿಸುತ್ತಿದೆ ಎಂದು ಅರ್ಥೈಸಬೇಕೇ ವಿನಾ ಒಂದು ಬಲವನ್ನು ‘ಕ್ರಿಯೆ’ ಎಂದೂ ಇನ್ನೊಂದನ್ನು ಅದಕ್ಕೆ ದೊರೆತ ‘ಪ್ರತಿಕ್ರಿಯೆ’  ಎಂದು ಪರಿಗಣಿಸಕೂಡದು. ಈ ಎರಡು ಬಲಗಳ ನಡುವೆ ‘ಕಾರಣ (ಕಾಸ್) – ಪರಿಣಾಮ (ಇಫೆಕ್ಟ್)’ ಸಂಬಂಧ ಇಲ್ಲ ಎಂಬುದನ್ನು ಮರೆಯಕೂಡದು.

೨. ನಿಸರ್ಗದಲ್ಲಿ ಪರಸ್ಪರ ಸಮ ಮತ್ತು ವಿರುದ್ಧವಾದ ಬಲಗಳು ಯಾವಾಗಲೂ ‘ಜೋಡಿ’ಯಾಗಿಯೇ ಅಸ್ತಿತ್ವದಲ್ಲಿರುತ್ತವೆಯಾದರೂ ಅವು ವಿಭಿನ್ನ ಕಾಯಗಳನ್ನು ಪ್ರಭಾವಿಸುತ್ತವೆಯೇ ವಿನಾ ಒಂದೇ ಕಾಯವನ್ನಲ್ಲ. ಆದ್ದರಿಂದ ಅವು ಒಂದನ್ನೊಂದು ನಿರುಪಯುಕ್ತಗೊಳಿಸಿತ್ತವೆ ಎಂದಾಗಲಿ ರದ್ದುಗೊಳಿಸುತ್ತವೆ ಎಂದಾಗಲಿ ತೀರ್ಮಾನಿಸಕೂಡದು.

೩. ಒಂದು ಕಾಯ ಇನ್ನೊಂದರ ಮೇಲೆ ಏಕಕಾಲದಲ್ಲಿ ಪರಸ್ಪರ ಸಮವಾದ ಬಲಗಳನ್ನು ಪ್ರಯೋಗಿಸಿದ್ದರಿಂದ ಪ್ರತೀ ಕಾಯದ ಮೇಲೆ ಉಂಟಾಗುವ ಪರಿಣಾಮವು ಆ ಕಾಯದ ಮೇಲೆ ಪ್ರಯೋಗಿಸಲಾದ ಎಲ್ಲ ಬಲಗಳ ಫಲಿತಬಲವನ್ನು ಆಧರಿಸಿರುತ್ತದೆಯೇ ವಿನಾ ಯಾವುದೇ ಒಂದು ಬಲವನ್ನಲ್ಲ. (ನೆಲಕ್ಕೆ ಬಡಿದ ರಬ್ಬರ್ ಚೆಂಡು ಪುಟಿಯುವಷ್ಟು ಕಬ್ಬಿಣದ ಗುಂಡು ಪುಟಿಯುವುದಿಲ್ಲ, ಸೆಗಣಿ ಮುದ್ದೆ ಅಲ್ಲಿಯೇ ಕಚ್ಚಿಕೊಳ್ಳುತ್ತದೆ)

೪. ಸಾಮಾನ್ಯ ವಿದ್ಯಮಾನವೊಂದನ್ನು ೩ ನೇ ಚಲನ ನಿಯಮವನ್ನು ಆಧರಿಸಿ ವಿಶ್ಲೇಷಿಸುವುದು ಹೇಗೆಂಬುದಕ್ಕೆ ಸರಳ  ಉದಾಹರಣೆಯೊಂದು ಇಂತಿದೆ:

ಭಾರವಾದ ಪೆಟ್ಟಿಗೆಯೊಂದು ನೆಲದ ಮೇಲೆ ವಿಶ್ರಾಂತ ಸ್ಥಿತಿಯಲ್ಲಿದೆ. ಅದಕ್ಕೆ ಹಗ್ಗವೊಂದನ್ನು ಕಟ್ಟಿ ಎಳೆಯಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿದ್ದಾನೆ ಎಂದು ಕಲ್ಪಿಸಿಕೊಳ್ಳಿ (ಚಿತ್ರ ನೋಡಿ). ವ್ಯಕ್ತಿಯ ಕೈ ಮತ್ತು ಹಗ್ಗ ಹಾಗೂ ಹಗ್ಗ ಮತ್ತು ಪೆಟ್ಟಿಗೆಗಳ ನಡುವೆ ಜರಗುವ ಅಂತರ್-ಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಲಗಳನ್ನು ಮಾತ್ರ ಚಿತ್ರದಲ್ಲಿ ತೋರಿಸಿದೆ. ಪೆಟ್ಟಿಗೆ ಮತ್ತು ನೆಲದ ನಡುವಿನ ಅಂತರ್-ಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಲಗಳನ್ನು ತೋರಿಸಿಲ್ಲ. Fhr ಕೈ ಹಗ್ಗದ ಮೇಲೆ ಪ್ರಯೋಗಿಸುವ ಬಲ, Frh ಹಗ್ಗ ಕೈನ ಮೇಲೆ ಪ್ರಯೋಗಿಸುವ ಬಲ. ಎಂದೇ, ಇವು ಪರಸ್ಪರ ಸಮವೂ ವಿರುದ್ಧವೂ ಆಗರುವ ‘ಕ್ರಿಯೆ-ಪ್ರತಿಕ್ರಿಯೆ’ ಬಲಗಳ ಜೋಡಿ, ಅರ್ಥಾತ್ Fhr  = – Frh . Frb  ಹಗ್ಗ ಪೆಟ್ಟಿಗೆಯ ಮೇಲೆ ಪ್ರಯೋಗಿಸುವ ಬಲ, Fbr ಪೆಟ್ಟಿಗೆ ಹಗ್ಗದ ಮೇಲೆ ಪ್ರಯೋಗಿಸುವ ಬಲ. ಎಂದೇ, ಇವು ಪರಸ್ಪರ ಸಮವೂ ವಿರುದ್ಧವೂ ಆಗರುವ ‘ಕ್ರಿಯೆ-ಪ್ರತಿಕ್ರಿಯೆ’ ಬಲಗಳ ಜೋಡಿ, ಅರ್ಥಾತ್ Frb  = – Fbr. ಬಲ Fhr ಮತ್ತು ಬಲ Fbr – ಇವು ಹಗ್ಗದ ಮೇಲೆ ಪ್ರಯೋಗವಾಗಿರುವ ಬಲಗಳಾಗಿದ್ದರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಒಂದೇ ನೇರರೇಖೆಯ ಮೇಲೆ ಪ್ರಯೋಗವಾಗಿದ್ದರೂ ‘ಕ್ರಿಯೆ-ಪ್ರತಿಕ್ರಿಯೆ’ ಜೋಡಿ ಬಲಗಳಲ್ಲ. ಪೆಟ್ಟಿಗೆ ಮತ್ತು ಹಗ್ಗ ನಿಶ್ಚಲ ಸ್ಥಿತಿಯಲ್ಲಿ ಇದ್ದಾಗ ೧ ನೇ ಚಲನ ನಿಯಮದ ಪ್ರಕಾರ ಈ ಎರಡು ಬಲಗಳ ಫಲಿತ ಬಲದ ಮೌಲ್ಯ ಸೊನ್ನೆ ಆಗಿರಲೇ ಬೇಕು, ಅರ್ಥಾತ್ (Fhr) + (- Fbr) = ೦ . ಆದ್ದರಿಂದ ಆ ಸನ್ನಿವೇಶದಲ್ಲಿ ಮಾತ್ರ ಇವು ಪರಸ್ಪರ ಸಮವಾಗಿರುತ್ತವೆ. ತತ್ಪರಿಣಾಮವಾಗಿ ಎಲ್ಲ ನಾಲ್ಕು ಬಲಗಳೂ ಸಮವಾಗಿರುತ್ತವೆ. ಪೆಟ್ಟಿಗೆ ಮತ್ತು ಹಗ್ಗ ವ್ಯಕ್ತಿ ಎಳೆಯುತ್ತಿರುವ ದಿಕ್ಕಿನತ್ತ ಹೆಚ್ಚುತ್ತಿರುವ ಜವದೊಂದಿಗೆ ಚಲಿಸುತ್ತಿದ್ದರೆ ಹಗ್ಗ ವಿಶ್ರಾಂತ ಸ್ಥಿತಿಯಲ್ಲಿ ಇರುವುದಿಲ್ಲವಾದ್ದರಿಂದ Fhr > Fbr. ಇನ್ನೂ ಹೆಚ್ಚಿನ ವಿಶ್ಲೇಷಣೆ ಇಲ್ಲಿ ಅನಗತ್ಯ.

 

ಆಕರಗಳು

  1. ನಿಯಮಗಳ ಮೂಲ ಮತ್ತು ಇಂಗ್ಲಿಷ್ ಪಾಠಗಳಿಗೆ ಮಾತ್ರ; http://en.wikipedia.org/wiki/Newton’s_laws_of_motion#cite_note-25
  2. George Gamow, John M. Cleveland (1978) Physics: Foundations and Frontiers (3rd Edition). New Delhi: Prentice Hall of India Limited
  3. Robert Resnick, David Halliday (1987) Physics Part I. New Delhi: Wiley Eastern Limited
  4. Hugh D. Young, Mark W. Zemansky, Francis W. Sears (1988) University Physics. New Delhi: Narosa Publishing House
  5. ಇಂಗ್ಲಿಷ್ – ಕನ್ನಡ ವಿಜ್ಞಾನ ಪದಕೋಶ (೨೦೦೭) ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು
  6. ನವಕರ್ನಾಟಕ ವಿಜ್ಞಾನ ಪದ ವಿವರಣ ಕೋಶ  (೨೦೦೧) ನವಕರ್ನಾಟಕ ಪ್ರಕಾಶನ, ಬೆಂಗಳೂರು
  7. The Mysore University English-Kannada Dictionary (2004) Prasaranga, Mysore University