ಗದುಗಿನಲ್ಲಿ ಜನಿಸಿ, ಗದಗ ಹಾಗೂ ಧಾರವಾಡಗಳಲ್ಲಿ ಸಂಗೀತ ಶಿಕ್ಷಣ ಪಡೆದು ಬಳ್ಳಾರಿಯಲ್ಲಿ ನೆಲೆಸಿರುವ ನಾಡಿನ ಖ್ಯಾತ ಹಾರ್ಮೋನಿಯಂ ವಾದಕ ಪಂ.ಐ.ಎನ್‌. ಕಲಬುರ್ಗಿಯವರು ಕರ್ನಾಟಕದ ಹೆಸರಾಂತ ಹಾರ್ಮೋನಿಯಂ ವಾದಕರಲ್ಲೊಬ್ಬರು.

ದಿನಾಂಕ ೧೭-೩-೧೯೩೭ ರಂದು ಗದಗದಲ್ಲಿ ಜನಿಸಿದ ಈಶ್ವರ ಸಾ ನಾಗೋಸಾ ಕಲಬುರ್ಗಿಯವರದು ಸಂಗೀತದ ಮನೆತನ. ತಂದೆ ನಾಗೋಸಾ ಕಲಬುರ್ಗಿಯವರು ಉತ್ತಮ ಸಂಗೀತಗಾರರು. ತಂದೆಯವರಿಂದಲೇ ಬಾಲ್ಯದಲ್ಲಿ ಹಾರ್ಮೋನಿಯಂ ಹಾಗೂ ತಬಲಾ ವಾದನದಲ್ಲಿ ಕಠಿಣ ಶಿಕ್ಷಣ. ಮುಂಬೈನ ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯ ಏರ್ಪಡಿಸಿದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಹಾರ್ಮೋನಿಯಂ ವಾದನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣತೆ. ಅಲ್ಲದೆ ಧಾರವಾಡದ ಉಸ್ತಾದ್‌ ಬಾಲೇಖಾನ್‌ ಅವರಲ್ಲಿ ಸಿತಾರ್ ವಾದನದಲ್ಲೂ ಶಿಕ್ಷಣ ಪಡೆದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವಿದ್ವತ್‌ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ರ‍್ಯಾಂಕ್‌ ಗಳಿಸಿ ಉತ್ತೀರ್ಣರಾದವರು. ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಎಲ್ಲ ಹಿರಿಯ-ಕಿರಿಯ ಗಾಯಕರಿಗೆ ಪ್ರಮುಖವಾಗಿ ಪಂ. ಭೀಮಸೇನ ಜೋಶಿ, ಅರ್ಜುನ ಸಾ ನಾಕೋಡ, ಡಾ. ಬಸವರಾಜ ರಾಜಗುರು, ಡಾ. ಮಲ್ಲಿಕಾರ್ಜುನ ಮನಸೂರ, ಶ್ರೀಮತಿ ಪ್ರಭಾ ಅತ್ರೆ, ಪಂ. ಸಂಜಯ ಅಭಯಂಕರ ಮುಂತಾದವರಿಗೆ ಹಾರ್ಮೋನಿಯಂ ಸಾಥಿ ನೀಡಿದ್ದಾರೆ.

ಧಾರವಾಡದ ಆಕಾಶವಾಣಿ ಕೇಂದ್ರದಿಂದ ಇವರ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಶ್ರೀ ಶಾರದಾ ಸಂಗೀತ ವಿದ್ಯಾಲಯದ ಪ್ರಾಚಾರ್ಯರಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಮದರಾಸಿನಲ್ಲಿ ನಡೆಯುವ ತ್ಯಾಗರಾಜ ಸಮ್ಮೇಳನದಲ್ಲೂ ಪ್ರತಿನಿಧಿಸಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಐ.ಎನ್‌. ಕಲಬುರ್ಗಿಯವರ ಸಂಗೀತ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಶ್ರೀ ಐ.ಎನ್‌. ಕಲಬುರ್ಗಿಯವರು ಮಕ್ಕಳು ಇಂದು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತ ತಂದೆಯ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.