ಇದು ಚೆಲವೀ ರಾತ್ರಿ
ಮೌನದೊಳಿದೆ ಧಾತ್ರಿ-

ಇದು ಚೆಲುವೀ ಬೆಳಕಿನ ಕಣ್ಣರಳಿಸಿ ನೋಡುವ
ದೀಪದ ಮಾಲೆಯ ಸಿಂಗಾರ,
ಇದು ಚೆಲುವೀ ಇರುಳಿನ ಕೊರಳೊಳಗಿನ
ತಾರಾಹಾರ,
ಕತ್ತಲಿಗೂ ಬೆಳಕಿಗು ಏನೋ ವ್ಯವಹಾರ !

ಕತ್ತಲ ನೆತ್ತಿಯೊಳೆತ್ತುವ ಸಾಹಸದಲ್ಲಿವೆ
ಈ ದಾರಿಯ ದೀಪ,
ಲಕ್ಷಾಂತರ ಆಸೆಯ ಪ್ರತಿರೂಪ.
ದೂರಕೆ, ಬಹುದೂರಕೆ ಹಾಸಿದೆ
ಮೈಚಾಚಿದ ಮೂಕತೆಯೊಲು ಟಾರ್‌ಬೀದಿ.
ಇಕ್ಕೆಲದಲಿ ತೂಗಿಸಿವೆ ಸಾಲ್‌ಮರಗಳು,
ಎದೆಯೊಳು ಹಕ್ಕಿಯ ಕನವರಿಕೆ !

ಬೆಳಗಾಗಲು ಉಜ್ಜುವುದೀ ಬೀದಿಯ ಮೈಯನು
ಸಾವಿರ ಬಗೆ ಸದ್ದಿನ ಹೆಜ್ಜೆ.
ಬೆಳಗಾಯಿತೊ, ಬಾಯ್ ತೆರೆಯುವುವೀ ಅಂಗಡಿ ;
ಹೋಟೆಲುಗಳ ರೇಡಿಯೊ ಕಿರುಚಾಡುವ ದನಿ
ಬಲೆಯಾಡುವುದೀ ಬೀದಿಯಲಿ.
ಸಾವಿರ ಪ್ರಶ್ನೆಯ ನೊಗವೆಳೆಯುವ ಮುಖ ನಡೆವುವು
ಬೀದಿಯ ಕಾಲುವೆಯೊಳು ಕಸಕಡ್ಡಿಯ ಹೋಲಿ.
ಈಗಲೆ ಹೊನಲಾರಿದೆ, ಈ ಬೀದಿಗೆ ತುಸು ಬಿಡುವು
ಇರುಳಿನ ತಂಪೊಳು ಹರಿಯಬಹುದು ಇದರೆದೆ ನೋವು.

ಬೆಳುದಿಂಗಳ ಹಾಲೀಂಟಲು
ತುಸು ಇದಕೂ ಜೀವ
ಕರ್ರನೆ ಟಾರೆದೆಯೊಳಗೂ ಮಿಂಚುವುದನಂತ ಭಾವ !

ಮುಂಗಾರಿನ ಮಳೆಗೆ
ಎಷ್ಟೋ ಸುಖವಿದಕೆ ;
ಮುಗಿಲಿನ ಜಲಗಾರನ ಸಾವಿರ ಮಳೆಹನಿಗಳ ಪೊರಕೆ,
ಗುಡಿಸುವುದೀ ಮೈಯನು, ಹೊಮ್ಮಲು ಕರಿಮೈಯೊಳು
ಬಿಸಿಯುಸಿರಿನ ಹರಕೆ !

ಆ ಇರುಳು,
ಇದರೆದೆಯೊಳು ಲಕ್ಷಾಂತರ ನೆರಳು,
ಮಳೆ ಬಂದಿರುಳೊಳು ದೀಪದ ಬೆಳಕೊಳು
ಸಹಸ್ರ ಕಲ್ಪನೆ ನೀರಾಡುವ ನೋಟ
ಹೊಳೆ ಹೊಳೆಯುವ ದಾಸರಹಾವೊಂದುದ್ದಕು
ಮೈ ಚಾಚಿದ ಮಾಟ !
*     *     *
ಇಗೊ ಮೌನ,
ಅಲ್ಲೂ ಇಲ್ಲೂ ಎಲ್ಲೂ ಬಲೆಯಾಗಿದೆ ಮೌನ,
ನಟ್ಟಿರುಳಿನ ಮೌನ.
ಆಗೊಮ್ಮೆಗೆ ಈಗೊಮ್ಮೆಗೆ ಈ ಬಲೆಯೊಳು
ಚಲಿಸುತಲಿದೆ ಸದ್ದಿನ ಜೇಡ !
ಎಂದೋ, ಮುಂದೆಂದೋ,
ಈ ಕಗ್ಗತ್ತಲ ನಿಡು ಮೌನವೆ ಶಾಶ್ವತವೋ,
ಎನ್ನುವ ಪರಿಭಾವನೆಯೊಳು ಮುಳುಗಿದ ತೆರ
ದಾರಿಯ ದೀಪಗಳೆಲ್ಲವು ಚಿಂತಾಗಾಢ.
*     *     *

ಅದೊ ಗೂಬೆ !
ಘೂಕೆನುತಿದೆ… ‘ಇವನಾವನು ನಟ್ಟಿರುಳೊಳು ನನ್ನಂತೆ !
ಇವನಿಗು ಇರುಳಲೆಯುವ ಚಿಂತೆ’ !
ಓ ! ಚೆಲುವೀ ದನಿ, ಸವಿಯೀ ದನಿ, ದಿಟಕೂ !
ನಗದಿರು, ನೀ ನಗದಿರು,
ಹಗಲಿನ ದನಿಯನುಭವದಳತೆಯ ಕೋಲಿಂದಿದನಳೆಯದಿರು,
ವಿಕಾರವೆನ್ನುತ ಹಳಿಯದಿರು.
ಇದು ಸರಿ, ಈ ಇರುಳಿನ ಭಯ ಭೀತಿಯ ಕವನ ;
ಇದು ಕತ್ತಲ ವ್ಯಾಖ್ಯಾನ !
ಆಯಾ ಋತಕೊಪ್ಪುವ ಅಭಿವ್ಯಕ್ತಿಯ ಗಮನಿಸು,
ಬೆಲೆ ಕಟ್ಟು,
ನಿನಗರಿಯುವುದಾಗಲೆ ಸೌಂದರ್ಯದ ಗುಟ್ಟು.
*     *     *

ಮತ್ತಿದೊ ಮೌನ,
ನಡುರಾತ್ರಿಯ ಮೌನ,
ಅದೊ ! ಢಣ್ಣೆನುತಿದೆ ದೂರದ ಗೋಪುರದಾ
ಗಡಿಯಾರ,
ಮೌನದ ಕೊಳದೊಳಗಾಗಿದೆ ಸದ್ದಿನ ಅಲೆ ಅಲೆಗಳ
ಅನುರಣನ !
ಶಿಳ್ಳೆನುತಿದೆ ಗಸ್ತಿನ ಪೋಲೀಸರ ‘ಶೀಟಿ’
ಕತ್ತಲ ಮೀಟಿ.

ಇಗೊ ಎಲ್ಲಿಂದಲೊ ಇತ್ತಲೆ ಧಾವಿಸುತಿದೆ
ಕೆಂಗಣ್ಣಿನ ಲಾರಿ !
ಎಚ್ಚರುತಿದೆ ನಿದ್ದೆಯ ದಾರಿ,
ಬೆಚ್ಚುತಲಿದೆ ನಿದ್ದೆಯ ದಾರಿ…..
ಕಣ್ಣುಜ್ಜುತ ಗೊಣಗುತಲಿವೆ ದಾರಿಯ ದೀಪ ;
“ಏನೀ ಶಾಪ ?
ಇಲ್ಲ, ಬಿಡುವೆಂಬುದೆ ಇಲ್ಲ,
ಈ ಬಡ ಜೀವಕೆ ಎಂದೂ ಯಾವುದಕೂ
ಬಿಡುವಿಲ್ಲ….”