ಈಗಷ್ಟೆ-ಐದು ನಿಮಿಷದ ಹಿಂದೆ ಮಳೆ ಸುರಿದು
ನೆಲವೆಲ್ಲ ಒದ್ದೆ. ಬಂದದ್ದು ಬಂದ ಹಾಗೇ ನಿಂತು,
ಮೇಲಿನಾಕಾಶದಲ್ಲಿ ನೋಡಿದರೆ ಒಂದಾದರೂ
ಮೋಡಗಳಿಲ್ಲ ! ತುಂಟ ಚಂದಿರನ ಕೊಂಕು ತುಟಿಯಲ್ಲಿ
ಏನೋ ತೊದಲು. ಆಕಾಶದಲ್ಲೆಲ್ಲ, ಈ ಕೆಳಗೆ
ಇದುವರೆಗು ನಡೆದದ್ದಕ್ಕು ತನಗೂ ಏನೇನೂ
ಸಂಬಂಧವಿಲ್ಲವೆಂಬಂಥ ಸಾಚಾತನದ ಸೋಗು.
ತಾಯ ಸೀರೆಯ ಮೇಲೆ ಉಚ್ಚೇ ಹೊಯ್ದು
ಗೊತ್ತಿಲ್ಲದವರಂತೆ ಕಿಲಕಿಲ ನಗುತ್ತಲಿದೆ ಈ ಮಗು !