ಗಾಢ ನಿದ್ರೆ ; ನಟ್ಟ ನಡುರಾತ್ರಿ ಏನೋ ಸದ್ದು.
ಎಚ್ಚರವಾಗಿ ಎದ್ದೆ. ಅದೇನದು ಕೊಂಚ
ನೋಡುತ್ತೀರಾ ಎಂದಳು ಮಡದಿ. ಮನಸ್ಸಿ-
ಲ್ಲದ ಮನಸ್ಸಿನಿಂದ ಗೊಣಗುತ್ತ ಮಂಚ-

ವನ್ನಿಳಿದು, ಕತ್ತಲಲ್ಲೇ ಸ್ವಿಚ್ಚಿಗೆ ತಡಕಾಡಿದೆ.
ಒತ್ತಿದೆ, ಬೆಳಕಿಲ್ಲ, ಬೆಳಕೇ ಇಲ್ಲ; ಕರೆಂಟು
ಹೋಗಿರುವುದಂತೂ ಖಾತ್ರಿ. ಕೋಣೆಯ ದಾಟಿ
ನಡುಮನೆಗೆ ಬಂದೆ. ನೋಡುತ್ತೇನೆ : ಥೇಟು

ಹಾಲು ಚೆಲ್ಲಿದ ಹಾಗೆ ನೆಲದ ಉದ್ದಗಲಕ್ಕು
ಕಿಟಕಿಯಿಂದೊಳಗಿಳಿದ ಬೆಳುದಿಂಗಳು.
ಆ ಮಬ್ಬು ಬೆಳಕಿನ ಮಧ್ಯೆ ಕುರ್ಚಿಯ ಮೇಲೆ
ನಿಶ್ಶಬ್ದವಾಗಿ ಕೂತ ಬೆಕ್ಕಿನ ನೆರಳು!

ಆಹಾ! ಬೆಳುದಿಂಗಳೇ ಹೀಗೆ ಬೆಕ್ಕಾಗಿ ಕೂತಿ-
ದೆಯೋ ಅನ್ನಿಸುವಂಥ ಆಕಾರ. ಥಳಥಳ
ಕಣ್ಣು. ಆ ಕಣ್ಣಿನೊಳಗಿಳಿದು ನನಗೂ ಅದಕ್ಕು
ಇರುವ ಅನಾದಿಕಾಲದ ಬಾಂಧವ್ಯಗಳ

ಗುರುತಿಸುತ್ತಿದ್ದಂತೆ, ಛಂಗನೆ ನೆಗೆದು ಕಿಟಕಿ
ಯಿಂದಾಚೆ ಬೆಳುದಿಂಗಳಿರುಳಲ್ಲಿ ಕರಗಿ
ಹೋಯಿತು ಬೆಕ್ಕು. ಮೂರ್ತ ಅಮೂರ್ತಗಳು ಹೀಗೆ
ಏಕ ಕಾಲಕ್ಕೆ ಒಂದರೊಳಗೊಂದು ಸಂಧಿ-

ಸಿದ ಕ್ಷಣವೊಂದರನುಭವದಲ್ಲಿ ನಿಂತಂತೆ,
ಯಾಕೋ ನನ್ನ ಸುತ್ತಲೂ ಕತ್ತಲೆ ಕವಿದು
ನಾನೂ ನಿಧಾನವಾಗಿ ಅದರೊಳಗೆ ಕರಗು-
ತ್ತಿರುವಾಗ, ಕರೆಂಟು ಬಂದು ಝಗ್ಗನೆ ಬೆಳಕು !