ನೋಡಿದೆಂತಹ ಬೆಳಕು ! ಬಾನು ತನ್ನೆದೆ ತೆರೆದು
ಬೆಳಕೆಲ್ಲವನು ಹೊರಗೆ ತುಳುಕಿದಂತೆ !
ಬಾನೊಳೊಬ್ಬನೆ ಚಂದ್ರ, ತನ್ನ ಸೃಷ್ಟಿಯ ರಸದೊ-
ಳಾನಂದದಲಿ ತೇಲ್ವ ರಸಿಕನಂತೆ !
ಹಾಲ್ ಬೆಳಕಿನಲಿ ಮಿಂದು ಧನ್ಯವಾದಂತರಿಲು
ದೂರದಲಿ ಮಿನುಗುತಿವೆ ತೃಪ್ತಿಯಂತೆ.

ಇರುಳ ತಾಯಿಯ ಕೊರಳ ಮಾಂಗಲ್ಯದಿಂದಿಳಿದ
ಹೊಳಹಿನೊಲು ಎಲ್ಲೆಲ್ಲು ಬೆಳಕಾಗಿದೆ !
ಏನು ಸೋಜಿಗವಯ್ಯ ! ಬೆಳಕು ತುಳುಕುವ ಬಾನಿ-
ನಡಿಯಲ್ಲಿ ಜಗವೆನಿತು ಕಿರಿದಾಗಿದೆ !
ಹಾಲ್ ಕುಡಿವ ಶಿಶು ಬಿಸುಟ ಬಣ್ಣದಾಟದ ವಸ್ತು-
ಗಳ ತೆರದಿ ಊರೆಲ್ಲ ತೋರುತ್ತಿದೆ !