ಕಥೆ ಹೇಳುತ್ತೀನಿ ಬಾರೋ ಮರಿ ಅಂದೆ ;
ಬಂದ, ಕೂತ, ಏನಂದೆ, ವ್ಯಥೆ ಹೇಳುತ್ತೀಯಾ
ಅಂದ. ಯಾಕೋ ನಿನಗೆ ಹಾಗಂತ ಕೇಳಿಸ್ತಾ ?
ಇಲ್ಲಪ್ಪ, ಕತೇನೆ ಹೇಳುತ್ತೀನಿ ಕೇಳು :

ಒಂದೂರಲ್ಲಿ ಒಬ್ಬ ಬ್ರಾಹ್ಮಣ. ಹಿಂದಿನ ಕಾಲ.
ತಾನೂ ಒಂದು ಯಾಗ ಮಾಡಬೇಕು ಅಂತ ಅನ್ನಿಸಿ
ಪೊಗದಸ್ತಾದ ಹೋತವೊಂದನ್ನು ಕೊಂಡುಕೊಂಡ.
‘ಬ್ರಾಹ್ಮಣನಿಗ್ಯಾಕಪ್ಪ ಹೋತ’ ಅಂದ ಪುಟ್ಟಮರಿ.

‘ಲೋ, ತಲೆಹರಟೆ, ಯಾಗ ಅಂದ ಮೇಲೆ
ಬೇಕೇ ಬೇಕಪ್ಪ ಅದು ; ಮುಂದಿನ ಕತೆ ಕೇಳು’ ಅಂದೆ.
ತೆಪ್ಪಗಾದ. ಆಡು ಸೊಗಸಾಗಿತ್ತು, ಬೆಳ್ಳಗೆ, ಎತ್ತರ-
ವಾಗಿ, ಮೈ ಕೈ ತುಂಬಿಕೊಂಡು, ಕಡಿದರೆ ಹತ್ತು
ಜನಕ್ಕೆ ಸಂತರ್ಪಣೆ. ಇದನ್ನು ನಾಲ್ಕು ಜನ ಖದೀಮರು
ನೋಡಿದರು. ಏನಾದರೂ ಮಾಡಿ ಲಪಟಾಯಿಸಬೇಕು,
ಉಪಾಯ ಹೂಡಿದರು :

ಹೋಗುತ್ತಿದ್ದ ಈ ಬ್ರಾಹ್ಮಣ ಹೋತವನ್ನೆಳೆದುಕೊಂಡು ;
ಒಬ್ಬ ಎದುರಿಗೆ ಬಂದ. ಓಹೋ ನಮಸ್ಕಾರ ಪುರೋ-
ಹಿತ ಭಟ್ಟರೇ, ಎಲ್ಲಿಂದ ತಂದಿರಪ್ಪ್ಪ ಈ ನಾಯನ್ನು
ಅಂದ. ನಿಲ್ಲದೆ ಹೊರಟೇ ಹೋದ. ಬ್ರಾಹ್ಮಣನಿಗೆ
ಅನುಮಾನ ಕೊರೆಯಲು ಶುರು. ಇಂಥ ಪ್ರಶಸ್ತ
ವಾದ ಅಜವನ್ನು ನಾಯಿ ಅಂದನಲ್ಲ ಮುಂಡೇಗಂಡ
ಅನ್ನುತ್ತ ಮುಂದೆ ನಡೆದ. ಅಲ್ಲಿ ಮತ್ತೊಬ್ಬ ಎದುರಿಗೆ
ಬಂದ. ಏನು ವಿಪ್ರೋತ್ತಮರು ! ಚೆನ್ನಾಗಿದೆ,
ನಾಯನ್ನು ಹೀಗೆ ಕೊಂಡೊಯ್ಯುವುದೆ ? ಏನು
ಮನೆಯಲ್ಲಿ ಕಳ್ಳರ ಕಾಟವೋ ಅಂದ. ನಿಲ್ಲದೆ
ಮುಂದೆ ಹೋದ. ಈ ನಮ್ಮ ಅಧ್ವರ್ಯುವಿಗೆ
ಅನುಮಾನ ಹೋಗಿ ದಿಗಿಲಾಯಿತು. ಒಂದು ಸಲ
ಚೆನ್ನಾಗಿ ದಿಟ್ಟಿಸಿದ. ಹೋತವೂ ಬೆಪ್ಪಾಗಿ ನೋಡಿತು.
ಬಹಳ ಒಳ್ಳೆಯ ತಳಿ. ಬಣ್ಣ ಬೆಳ್ಳಗೆ, ಕೊಂಬು
ನೆಟ್ಟಗೆ, ಬಾಲ ಸೊಟ್ಟಗೆ. ಛೇ ಇವನ, ಇವನಿಗೇನು
ಬಂತಪ್ಪ, ಆಡನ್ನು ನಾಯಿ ಅನ್ನುತ್ತಾನೆ ಮೂರ್ಖ.
ಇನ್ನಷ್ಟು ದಾರಿ ಸವೆಯಿತು, ಎದುರಿಗೆ ಮತ್ತೊಬ್ಬ.
ಓಹೋ ದ್ವಿಜೋತ್ತಮರೆ, ಯಜ್ಞಕ್ಕೆ ಯಾವಾಗಿಂದ
ಶ್ವಾನ ಬಲಿ ಶುರುವಾದದ್ದು? ಇದಾವುದಪ್ಪ ಈ
ಶ್ವಾನ ಮೇಧ? ಏನೋ ಕಲಿಕಾಲ ಎಂದು ಹಣೆ ಹಣೆ
ಚಚ್ಚಿಕೊಂಡು ಹೊರಟೇ ಹೋದ. ಈ ನಮ್ಮ ಯಜ-
ಮಾನನಿಗೆ ನಿಜಕ್ಕೂ ದಿಗಿಲಾಯಿತು. ಕೈ ಕಾಲು ನಡುಗಿ
ಕಂಬವಾದ. ಹಿಡಿದಿದ್ದ ಅಜವನ್ನೊಮ್ಮೆ ಚೆನ್ನಾಗಿ
ನೋಡಿದ. ಮೈ, ಕೈ, ಕೊಂಬು, ಬಾಲ ಎಲ್ಲವನ್ನೂ ಸವರಿ
ಇದೇನು ಅಜವೋ ಶ್ವಾನವೋ ಎಂದು ಶಂಕರಾಚಾರ್ಯ-
ರನ್ನು ಸ್ಮರಿಸಿದ. ಮೂರು ಜನವೂ ಇದನ್ನು ನಾಯಿ
ಅನ್ನಬೇಕಾದರೆ, ನನ್ನದೇ ತಪ್ಪಿರಬೇಕು ; ನಾಯಿಗಳೂ
ಒಮ್ಮೊಮ್ಮೆ ಹೀಗಿರುತ್ತವೋ ಏನೋ ಎಂದು ತರ್ಕಿಸಿದ.
ಮತ್ತಷ್ಟು ದೂರ ನಡೆದ. ನಾಲ್ಕನೆಯ ಮುಖ ಕಾಣಿಸಿತು.
ಸ್ವಾಮಿ ನಿಮಗೆ ನಾಚಿಕೆಯೇ ಇಲ್ಲವೆ? ಹಾಡು ಹಗಲಲ್ಲೆ
ಹೀಗೆ ದ್ವಿಜೋತ್ತಮರು ನಾಯನ್ನು ಹಿಡಿದು ನಡೆಸುವುದೆ?
ಇವನಿಗೆ ನಿಂತ ನೆಲ ಕುಸಿಯಿತು. ಇಷ್ಟೊಂದು ಜನ
ಇದನ್ನು ನಾಯಿ ಅಂದ ಮೇಲೆ ಖಂಡಿತ ಇದು
ನಾಯಿಯೇ ಎಂಬ ತೀರ್ಮಾನಕ್ಕೆ ಬಂದ. ಕೊರಳಿನ
ಕುಣಿಕೆ ಬಿಚ್ಚಿದ. ಓಡಿತು ಹೋತ. ಹೊಂಚುತಿದ್ದ
ನಾಲ್ಕು ಜನ ಧೂರ್ತರು ಅದನ್ನು ಹಿಡಿದು ಹಬ್ಬ
ಮಾಡಿದರು. ‘ಥೂ ಇದೆಂಥ ಹಳೆಯಕಥೆ’ ಅಂದ
ಕತೆ ಕೇಳುತ್ತಿದ್ದ ಪುಟ್ಟಮರಿ. ‘ಕತೆಯೇನೋ
ಹಳೆಯದೇ ಮರಿ ; ಆದರೆ ಕತೆ ಹೇಳಿದವ
ನಾನಿದ್ದೇನಲ್ಲ, ಹೊಸಬ ; ಇಷ್ಟರ ಮೇಲೆ ಕತೆ
ಕಟ್ಟಿದವ ನಾನಲ್ಲ’- ಎಂದೆ.