ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ
ಕಳೆದಿರುಳಿನ ಮುಂಜಾನೆಯ ಕನಸು ;
ನಿನ್ನೆಯ ಸಂಜೆಯ ತೊತ್ತಳಿದುಳಿದಾ
ಮುಂಗಾರಿನ ಮಳೆ-ಗಾಳಿಯ ಬಿರುಸು.

ವರ್ಷಾಕಾಲದ ಮೋಡದ ದಂಡು
ಆಕ್ರಮಿಸಿತು ನೆಲ-ಮುಗಿಲುಗಳ,
ಜಡಿಮಳೆ ಭೋರೆನ್ನುತ ಸುರಿದು
ಮರುಕ್ಷಣವೇ ನಿರ್ಮಲವಾಗಲು
ಪಶ್ಚಿಮ ದಿಗ್ಭಾಗ,
ಮರೆಯೊಳಗಿದ್ದಾ ರವಿ ಮೈದೋರುತ
ಪ್ರಜ್ವಲಿಸುತ ನಕ್ಕಾಗ,
ಕನಸೆನ್ನಲೆ ?
ಅಥವಾ ಆದಿಮ ವಿಸ್ಮೃತಿಯೊಳಗಣ ಯಾವುದೊ
ನೆನಪೆನ್ನಲೆ,
ತಟ್ಟನೆ ಮರೆಗಳಚುತ ಪ್ರಜ್ವಲಿಸಿದ
ಬೆಳಕಿನ ಪುತ್ಥಳಿಯೆನ್ನಲೆ
ಏನೆನ್ನಲಿ ಈ ವಿಸ್ಮಯಕೆ ?

ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ
ಮನಸಿನ ತುಂಬಾ ಅನುರಣಿಸುತ್ತಿದೆ
ನಿನ್ನೆಯ ಸಂಜೆಯ ತೊತ್ತಳದುಳಿದಾ
ಮುಂಗಾರಿನ ಮಳೆ-ಗಾಳಿಯ ಬಿರುಸು.

ರೌದ್ರ ಶಕ್ತಿಗಳ ಕಟ್ಟನು ಕಳಚಿ
ರವಿಯೇ ಬಿಡುಗಡೆ ಮಾಡಿದ ರೀತಿ,
ಕ್ಷುಬ್ಧ ಮೋಡಗಳ ಪೆಡಂಭೂತಗಳು
ಮಳೆ ಹನಿಗಳ ಚೆಂಡಾಡುತ ನುಗ್ಗಲು
ಕುಸಿಯಿತು ಮಣ್ಣಿನ ಹಸಿಗೋಡೆ,
ಹಸಿದ ಷಿಕಾರಿಯ ಬಯಕೆಗಳೆಲ್ಲವು
ನೇರ ನುಗ್ಗಿರಲು ಎಲ್ಲಿ ತಡೆ ?

ಯಾರು ನೋಡುವರೊ ತತ್ಕಾಲವಷ್ಟನೇ
ಅವರಿಗೆ ಕಾಣದು ನಾಳೆ,
ಎಂಥ ಸ್ವಚ್ಛತೆಗು ಕಪ್ಪು ಹಚ್ಚುವರು
ಇವರ ಕಾಲವೇ ಬೇರೆ,
ಎಲ್ಲ ವಸ್ತುಗಳು ತುಟ್ಟಿಯಾಗಿರಲು
ಅಗ್ಗವಾದವನು ಮನುಷ್ಯನೇ.

ಕಡೆಯಿರುಳಿನ ಕನಸೆಲ್ಲೋ ಜಾರಿದೆ,
ಇರುಳು ಕರಗಿ ಬಂದಿಗೆ ಬೆಳಗು
ಎಷ್ಟೋಸಲ ಈ ಸ್ವಪ್ನೋದ್ಯಾನದ
ಹೂವಿನ ಪರಿಮಳ ತೇಲುತ ಬರುವುದು
ಈ ನನಸಿಗೂ ಒಳಗೂ
ದಿನವೂ ಹೀಗೆಯೆ ಕತ್ತಲ ತೆರೆಗಳ
ಸರಿಸುವುದೀ ಬೆಳಕಿನ ಬೆರಳು.

ಓ ದೇವರೆ
ನಿಡು ನಿದ್ರೆಯೊಳದ್ದಿದ ಈ ಲೋಕ
ಒಂದೇ ಸಲವಾದರು ಎಚ್ಚರಗೊಳ್ಳಲಿ
ಬೆಳ್ಳಂಬೆಳಕಿನ ಉತ್ಕ್ರಾಂತಿಗೆ ಸಂದು,
ಹೊಸತಾಗಲಿ, ಜೀವನವೀ ತೆರ
ಎನ್ನುವುದೂ ಪ್ರಿಯ ನನಗಿಂದು.

ಹಾರೈಸುವೆ ನಾ.
ಮಳೆ ತೊಳೆದಾಕಾಶದ ನಿರ್ಮಲ ತೇಜಕ್ಕೆ,
ಹಾರೈಸುವೆ ನಾ,
ಫಲಭಾರಕೆ ತೂಗುವ ಬಾಗುವ
ತೋಟದ ಭರವಸೆಗೆ.

ಹಾರೈಸುವೆ ನಾ,
ಬದುಕಿನ ಬಾಯಾರಿಕೆಗೊದಗುವ
ಚಿಲುಮೆಯ ನಿರ್ಮಲ ಜಲ ರುಚಿಗೆ.
ಲೋಕವನೇ ಪರಿಮಳಿಸುವ
ಮಾನವ ಹೃದಯದ ಸದ್ಗುಣಕೆ.

ಸತ್ಯಾನ್ವೇಷಕ ಪ್ರವಾದಿಯೊಬ್ಬನು
ಬೆಳಕಿನ ಕಂಭದ ಕೈ ಎತ್ತಿ,
ದಶದಿಸೆಗಳನೂ ಬೆಳಗುವ ರೀತಿ
ಕ್ಷಣವೊಂದಾದರು, ನನ್ನನು ತುಂಬಲಿ
ನಿನ್ನ ಮಧುರ ಪ್ರೀತಿ.

(* ಮೂಲ: ಕಾಶ್ಮೀರಿ. ಕವಿ : ಗುಲಾಮ್ ನಬೀ ಖಯಾಲ್.)