ಬೀರೂರಿಂದ ಶಿವಮೊಗ್ಗಕ್ಕೆ ಬಂದ ರೈ-
ಲನ್ನಿಳಿದು, ನನ್ನ ತಾಯಿಯ ಜತೆಗೆ
ಹೊನ್ನಾಳಿಗೆಂದು ಬಸ್ಸಲ್ಲಿ ಕೂತಾಗ, ಕಾ-
ರೆಂಬ ಕತ್ತಲು. ದಟ್ಟಕಾಡಿನ ಒಳಗೆ

ಮುಂದಿನ ಪಯಣ. ಆಶ್ಚರ್ಯಪಡಬಹುದು
ನೀವೀಗ, ಶಿವಮೊಗ್ಗಾದಿಂದ ಹೊನ್ನಾಳಿ
ವರೆಗೂ ನಿಜವಾದ ಕಾಡಿತ್ತು ಎಂದರೆ.
ಅಂತೂ ಇಂತು ಕೊನೆಗೆ ಕತ್ತಲ ಸೀಳಿ

ಭೋಂ ಭೋಂ ಎಂದು ಹೊರಟಿತು ಬಸ್ಸು. ನಾನಾಗ
ಐದು ವರ್ಷದ ಹುಡುಗ. ತಾಯ ತೊಡೆ-
ಮೇಲೊರಗಿ ಬೆಚ್ಚನೆಯ ಸೆರಗಲ್ಲಿ ನಿದ್ದೆ.
ಅದಾವಾಗಲೋ ದಾರಿಯಲ್ಲೊಂದು ಕಡೆ

ಗಕ್ಕನೆ ಬ್ರೇಕು. ಧಡ್ಡೆಂದು ನಿಂತ ಬಸ್ಸಿನ
ಒಳಗೆ ಹೋ ಹೋ ಎಂದ ಮಂದಿಯ ಹುಯಿಲು.
ಬೆಚ್ಚಿ ಎಚ್ಚರಗೊಂಡು ನೋಡುತ್ತೇನೆ : ಮೋಟ-
ರಿನ ಬಿಡುದೀಪಗಳ ಬೆಳಕಲ್ಲಿ, ಕಾಡು

ದಾರಿಯ ನಡುವೆ ನಿರ್ಲಕ್ಷ್ಯಭಾವದಲಿ ಕೂತ
ಕರಿ ಹಳದಿ ಪಟ್ಟೆಗಳ ಹೆಬ್ಬುಲಿಯೊಂದು
ನಿಧಾನವಾಗಿ ಮೇಲೆದ್ದು ಗಂಭೀರಗತಿಯಿಂದ
ಹಳುವಿನಲಿ ಮರೆಯಾಯ್ತು. ಒಂದೇ ಒಂದು

ಕ್ಷಣ ಮಾತ್ರ ಕಂಡು ಕಣ್ಮರೆಯಾಗಿ, ಕನಸೊ
ನನಸೊ ಅನ್ನಿಸಿದ ಆ ದೃಶ್ಯವಿಂದಿಗೂ
ಚಿತ್ತದೊಳಗಚ್ಚೊತ್ತಿ ಕಾಡುತಿದೆ ನಿದ್ದೆ ಎ-
ಚ್ಚರಗಳಲಿ. ಹುಡುಕುತಿದ್ದೇನೆ ಈಗಲೂ

ಆ ಹುಲಿಗೆ, ಆ ಕಾಡಿಗೆ, ಇಂದಿನೀ ಹತ-
ಭಾಗ್ಯ ಪರಿಸರದ ಮಧ್ಯೆ ಹಂಬಲಿಸುತ್ತ.