ಅಂಗನೆಯರ ಭಂಗಮಾಡಿದ ಪರಮಾತ್ಮನ
ಪೋಲೀ ಲೀಲೆಗಳನ್ನು ರಾಗ-ತಾನ-ಪಲ್ಲವಿ
ಗಳಲ್ಲಿ ಹಾಡುತ್ತಿದ್ದಾರೆ ಯಾರೋ ರೇಡಿಯೋದಲ್ಲಿ.
ಹೊದಿಕೆಯನ್ನೊದೆದು ಮೇಲೆದ್ದೆ ; ರೇಡಿಯೋ ಕಿವಿ
ಹಿಂಡಿ ಬಾಯಿ ಮುಚ್ಚಿಸಿದೆ. ಒಳಗೆ ಬಿದ್ದಿದ್ದ ವೃತ್ತ
ಪತ್ರಿಕೆಯನ್ನೆತ್ತಿಕೊಂಡು ಕೂತೆ, ಕಣ್ಣಾಡಿಸಿದೆ.
ಮೊದಲ ಪುಟದಲ್ಲೆ ಜನರ ನೈತಿಕ ಮಟ್ಟ
ಸುಧಾರಿಸಬೇಕು ಎಂದು ಪುರಭವನದಲ್ಲಿ
ಅಪ್ಪಣೆ ಕೊಡಿಸಿದ್ದಾರೆ ಮಾನ್ಯ ಮಂತ್ರಿಗಳು ;
ಹೆಂಡತಿ ಕೊಟ್ಟ ಕಾಫಿಯಲ್ಲಿ ರುಚಿಯೇ ಇರಲಿಲ್ಲ.
‘ಯಾಕೆ ಹೀಗೆ?’ – ಅಂದೆ. ‘ನನ್ನನ್ನೇನು ಕೇಳುತ್ತೀರಿ,
ಇದಕ್ಕೆ ಏನೇನು ಬೆರಸಿ ಪುಡಿ ತಯಾರಿಸಿ-
ದ್ದಾನೋ ಆ ಅವನನ್ನೇ ಕೇಳಿನೋಡಿ’ ಅಂದಳು.
‘ಈಗ ನಿಮ್ಮದೇ ಅಲ್ಲವಾ ರಾಜ್ಯಭಾರ, ಮತ್ತೆ
ಮಹಿಳಾ ವರ್ಷ?’ ಅಂತ ಚುಡಾಯಿಸಿದೆ. ‘ಯಾರ-
ದ್ದಾದರೆ ನನಗೇನ್ರೀ, ಅಡುಗೆ ಮಾಡುವುದು
ತಪ್ಪುತ್ತಾ’ ಅಂತ ಹಂಗಿಸಿದಳು. ಮುಂದಿನ ಪುಟ-
ದಲ್ಲಿ ಅದೆಲ್ಲೊ ರಾಜ್ಯ ಕ್ರಾಂತಿ. ಗದ್ದುಗೆ ಏರಿದ್ದಾನೆ
ನಾವೆಂದೂ ಹೆಸರು ಕೇಳದ ಪುಡಾರಿ ! ‘ರೀ, ಹೀಗೆ
ಕೂತರೆ ಆಯ್ತು, ಮೊದಲು ಮೇಲೇಳಿ, ಸ್ನಾನ ಮುಗಿಸಿ
ನಿಮ್ಮ ಕೆಲಸಕ್ಕೆ ದಯಮಾಡಿಸಿ’. ಬೆಚ್ಚಿದೆ,
ಮೆತ್ತಗೆ ಮೇಲೆದ್ದೆ.