ಉದಯಗಿರಿ ಶಿವಕರುಣೆ ಮೋಡಗಳ ಕೊತ್ತಳಕೆ
ಮೊದಲ ಬೆಳಕಿನ ಚೆಲುವ ಧ್ವಜವ ನಟ್ಟು
ಗಿರಿಶಿರದ ಮರಮರದ ತಳಿರ ತುಟಿಯೊಳು ತನ್ನ
ಅನುರಾಗವಿಟ್ಟು
ಬರುತಿಹುದು ನೋಡದೋ ಕೊಳೆ ಚರಂಡಿಯ ಜಲಕು
ಬಂಗಾರಗಳ ಬದುಕ ದಾನಕೊಟ್ಟು !

ಬಂದ ಮಂದಾನಿಲನ ಮಿದುಬೆರಳು ನೇವರಿಸಿತ್ತು
ಕಾತರದಿ ಕಾಯುತಿಹ ತರುಲತೆಯ ತಲೆನವಿರ
ಬಲು ನಲ್ಮೆಯಿಂದ,
ಹಕ್ಕಿ ಚಿಲಿಪಿಲಿ ದನಿಗೆ ಮರ ಮರದ ಎದೆಯಾಯ್ತು
ಭಾವಪೂರಿತ ಕವಿಯ ಮನಸಿನಿಂದ !

ನೂರು ಬೆಳಕಿನ ಹೆಜ್ಜೆ ಹಕ್ಕಿಗೊರಳಿನ ಗೆಜ್ಜೆ-
ಯನು ಕಾಲ್ಗೆ ಕಟ್ಟಿ
ಹೂ ಹೂವಿನಂಗಡಿಯ ಕಂಪುಮಳಿಗೆಯ ತಟ್ಟಿ
ಸಂಚಾರ ಹೊರಟವೋ ಕೈ ಕೈಯೊಳೂ ಹಿಡಿದು
ಚೆಲುವುಗಳ ಬುಟ್ಟಿ !

ಹಕ್ಕಿದೋಣಿಯ ರೆಕ್ಕೆವುಟ್ಟಿನ ಸುಯ್ಲು
ಗಾಳಿಕೊಳದಲಿ ತೆರೆಯನೇಳಿಸಿರಲು,
ಹುಲ್ಲು ಹೂವಿನ ಕೊರಳು ಕೊರಳಿನ ಸುತ್ತ
ರತ್ನ ಕಂಠೀಹಾರ ರಾಜಿಸಿರಲು-
ಯಾವುದೋ ಹೊಸಹುಟ್ಟು ನಮ್ಮನೆಚ್ಚರಿಸಿರಲು
ಕೊಳೆ ಬದುಕಿನಿಂದ,
ಅದೊ ಬಂತು ಮೇಲೇರಿ ಬಂತು ನೇಸರ ಕಿರಣ
ನೂತನೋತ್ಸಾಹಗಳ ಚಿಲುಮೆಯಂದ !