ಬಿಗಿದಿಹುದು ಬುಸುಗುಡುವ ಶ್ವೇತಸರ್ಪದ ಕೊರೆತ
ಮೆಯ್ಯ ಹಸುರನ್ನೆಲ್ಲ ಹೀರಿ ಹೀರಿ !
ನರನರದ ಜರಡಿಯಲಿ ಸಂಜೆಗಂಪಿನ ಬಾನು
ಜಿನುಗುತಿದೆ ಇನಿತಿನಿತೆ ಜಾರಿ ತೂರಿ.

ಎಲುಬುಗೂಡಿನ ಅಚಲ ವಿಕಟ ನಾಟ್ಯದ ಭಂಗಿ ;
ಪರಿಚಿತದ ಪಥದಲ್ಲಿ ಪ್ರೇತ ಮೌನ !
ಟೊಂಗೆ ಟೊಂಗೆಯ ತುಂಬ ಚಿಂತೆ ಕಾಗೆಯ ಸಂತೆ ;
ಬಿಕ್ಕುತಿದೆ ತಳದಲ್ಲಿ ಕೊಂಚ ಪ್ರಾಣ !
ಕವಿವ ತಮ ; ಮಿಡುಕು ಮನ ; ಹಲವು ಕೊಂಬೆಯ ಚಾಚಿ
ಕಾಯುತಿದೆ ನೀರವದ ಶೋಕ ಮೌನ !
ಅಕ್ಕೊ ! ಅನಿರೀಕ್ಷಿತದಿ ಕೋಗಿಲೆಯ ದನಿ ಬುಗ್ಗೆ,
ಬೋಳು ಬಾಳಿಗು ಚೆಲುವಿನಾವಾಹನ !