ನನ್ನೆದೆಗೆ ಎದೆಯಿಟ್ಟು ಮಲಗಿದ್ದನವನಿಲ್ಲಿ
ಕ್ಷಣದಂತೆ ಕಳೆದೊಂದು ರಾತ್ರಿಯಲ್ಲಿ
ಉಳಿದವರ ಜೊತೆಯಲ್ಲಿ ಕಾಳಗದ ಕಣಕಾಗಿ
ಎದ್ದು ನಡೆದನು ಅವನು ಮುಂಬೆಳಗಿನಲ್ಲಿ,
ಎಷ್ಟಾದರೂ ನಾನು ಅಬಲೆಯಾದುದರಿಂದ
ಬಿಟ್ಟುಕೊಟ್ಟೆನು ಅವನ ಅತಿ ಮೌನದಲ್ಲಿ.

ಇನ್ನೊಬ್ಬಳೆದೆಯವನ ಅಪ್ಪಿಕೊಂಡಿಹುದೀಗ
ಮುಗಿವಿಲ್ಲದಿಹ ಕಾಳರಾತ್ರಿಯಲ್ಲಿ !
ಮುಂದೆ ಎಂದೆಂದಿಗೂ ಕಾಳಗದ ಕಣಕಾಗಿ
ನಡೆಯಲಾರನು ಅವನು ಮುಂಬೆಳಗಿನಲ್ಲಿ,
ಏಕೆನಲು, ಅವಳವನ ತಾಯಿ, ಭೂದೇವಿ
ಬಿಡಲಾರದಪ್ಪಿಹಳು ತನ್ನ ಎದೆಯಲ್ಲಿ !