ಮಟ ಮಟ ಮಧ್ಯಾಹ್ನದುರಿಬಿಸಿಲಲ್ಲಿ
ಇಬ್ಬರೇ : ರಾಮ ಮತ್ತು ಲಕ್ಷ್ಮಣ.
ಸುತ್ತ ದಂಡಕಾರಣ್ಯ ;
ಸೀತಾವಿರಹ ಶೋಕತಪ್ತ ಶ್ರೀರಾಮನಿಗೆ
ಬಾಯಾರಿಕೆ.

ಕಾಣಿಸುತ್ತಿಲ್ಲ ಎಲ್ಲಿಯೂ ನೀರಿನ ಸುಳಿವು ;
ನಡೆದೂ ನಡೆದೂ ಕಡೆಗೊಂದು ಕಡೆ
ಸಣ್ಣಗೆ ನೀರಿನ ಹಳ್ಳ.
ಇಬ್ಬರೂ ನಿಂತು, ದಡದ ಮರಳಿನ ಮೇಲೆ
ಹೆಗಲಿಂದಿಳಿಸಿ ನಾಟಿದರು ತಮ್ಮ ಬಿಲ್ಲುಗಳನ್ನ.

ಮುಖ ತೊಳೆದು ನೀರ್‌ಕುಡಿದು
ಪ್ರಸನ್ನವಾಯಿತು ಚಿತ್ತ.
ಬಿಲ್ಲೆತ್ತಿಕೊಳ್ಳಲು ಬಂದ ಶ್ರೀರಾಮ
ನೋಡುತ್ತಾನೆ : ದಡದ ತೇವಕ್ಕೆ
ತಾನು ಚುಚ್ಚಿದ ಬಿಲ್ಲು ತೂರಿ ಹೋಗಿದೆ
ಕಪ್ಪೆಯೊಂದರ ಬೆನ್ನಿನೊಳಕ್ಕೆ !

ಅಯ್ಯೊ ಏನನ್ಯಾಯ, ಅವಸರದಲ್ಲಿ
ಏನು ಮಾಡಿದೆ ನಾನು ? ‘ಅಯ್ಯ ಮಂಡೂಕಪ್ಪ
ನೀನೇಕೆ ಸುಮ್ಮನೆ ಇದ್ದೆ
ನಾ ಬಿಲ್ಲನ್ನು ಹೀಗೆ ಚುಚ್ಚುವ ವೇಳೆಗೆ’?

‘ಅಯ್ಯ ಕರುಣಾನಿಧಿ, ಬೇರೆ ಯಾರಾದರೂ
ಹೀಗೆ ಮಾಡಿದ್ದರೆ, ಖಂಡಿತವಾಗಿಯೂ
ಮೊರೆಯಿಡುತ್ತಿದ್ದೆ ನಿನಗೇ.
ಈಗ ನೀನೇ ಚುಚ್ಚಿರುವಾಗ
ಬಿಲ್ಲ ಮೊನೆಯನ್ನು ಬೆನ್ನಿಗೆ
ಕಾಪಾಡೆಂದು ಕೇಳಿಕೊಳ್ಳಲಿ ಯಾರಿಗೆ’?