ಈ ಸಂಜೆ, ಹೊನ್ನೇರಿಲೆಯ ಪನ್ನೀರ ಬೆಳಕು !
ಶಾಂತ ರಸದಲಿ ಮಿಂದ ಮರ ಗಿಡ ಬಯಲು
ಎದ್ದ ಕಟ್ಟಡದ ನಿಲುವು ದಿವ್ಯ ವಿಶ್ರಾಂತಿಯಲಿ
ಮೌನವಾಗಿವೆ. ದಿನವೆಲ್ಲ ಬಿರುಬಿಸಿಲಲ್ಲಿ
ಬಳಲಿದ ಕಣ್ಣು, ಬಂದ ಚೈತ್ರಾನಿಲನ ಸಂ-
ಸ್ಪರ್ಶಕ್ಕೆ ಕೃತಜ್ಞತೆಯ ರೆಪ್ಪೆಯ ಮುಗಿದು
ಹೇಳುತಿವೆ – ‘ಧನ್ಯೋಸ್ಮಿ.’

ಅಹ ಸಂಜೆ ಬೆಳಕೆ ! ಎಂಥ ಕರುಣಾಕಾಂತಿ !
ಯಾವ ದೇವ ಮೈದೋರುವನೋ, ತನ್ನ
ಮೈವೆಳಗನೀಪರಿಯೊಳೆಲ್ಲಕಡೆ ತುಳುಕಿಸಿ !
ಓ ! ಅಗೋ ಮಿನುಗುತಿವೆ ಆತನಾಭರಣಗಳ
ಕಾಂತಿ ನಿಶಾ ನೀಲಿಯಲಿ ! ಗಾಳಿ ಪಿಸುಮಾತ-
ನುಸುರುತಿದೆ : ಹೋ ! ಸುಮ್ಮನಿರಿ ಅವನು
ಬರುವನು ಈಗ, ಇದೆ ಹೊತ್ತು. ಕಣ್ಗಳನು
ತೊಳೆದು ನಿಂತುಕೊಳಿ ಬೇಗ !