ಮಬ್ಬು ಮಬ್ಬಾಗಿರುವ ತೆಂಗುದೋಂಟದ ಹಸುರು ಶಯ್ಯೆಯಲ್ಲಿ
ದಣಿದ ಹಗಲಿನ ತೇಜ ಮಲಗಿರುವುದು.
ಜಗವ ಪರಿವರ್ತಿಸುವ ಮೌನ ಕಾಂತಿಯ ಮೃದುಲ ತೆಕ್ಕೆಯಲ್ಲಿ
ವಿಶ್ವವೇ ಸೆರೆಯಾಗಿ ಬಿದ್ದಿರುವುದು.

ಸಂಜೆಗಣ್ಣಿಂದಿಳಿದ ಪರಮ ಕರುಣಾರಸದ ಮಡುವಿನಂತೆ
ಇಲ್ಲೊಂದು ಕಿರಿಯ ಕೆರೆ ಮಿರುಗುತಿಹುದು.
ಮಿಂಚುದೀಪದ ಕಣ್ಣ ತೆರೆದ ಊರಿನ ಮನೆಯ ಹರಹಿನಲ್ಲಿ
ಇರುಳ ಬಾಳಿನ ಬಯಕೆ ಚಿಗುರುತಿಹುದು.

ಹಗಲೆಲ್ಲ ರವಿ ಬಿತ್ತಿದಂಥ ಬೆಳಕಿನ ಬೀಜ ಮೊಳೆತ ಹಾಗೆ
ಮುಗಿಲಲ್ಲಿ ಚಿಕ್ಕೆಗಳು ಮಿನುಗುತಿಹವು
ಇಂಥ ರತ್ನಾಭರಣ ಲೋಕವನು ಆ ಹಗಲು ತನ್ನ ಒಳಗೆ
ಮುಚ್ಚಿದಚ್ಚರಿಗೀಗ ಮನವು ಬೆರಗು !