ಈಡನ್ನಿನ ತೋಟದಲ್ಲಿ ಮೊಟ್ಟ ಮೊದಲ ದಂಪತಿಗಳು
ಬೆಳಕಿನಂತೆ, ಗಾಳಿಯಂತೆ, ಹಸುರಿನಂತೆ, ಹೂವಿನಂತೆ
ಹಾಯಾಗಿಯೆ ಇದ್ದರು, ಆ ಇಬ್ಬರೇ ಇಬ್ಬರು !

ಒಂದು ಚೂರೂ ಬಟ್ಟೆಯಿಲ್ಲ ಅವರ ಮೈಯ ಮೇಲೆ
ಬಾನಿನಂತೆ, ಬೆಟ್ಟದಂತೆ, ಹಕ್ಕಿಯಂತೆ, ಪ್ರಾಣಿಯಂತೆ
ಲಜ್ಜೆಯರಿಯದಿದ್ದರು, ಆ ಇಬ್ಬರೇ ಇಬ್ಬರು !

ಸೃಷ್ಟಿಸಿದವನೊಬ್ಬ ಮಾತ್ರ ಅಲ್ಲಿ ಸರ್ವ ಪ್ರೇಕ್ಷಕ
‘ಬೇಕಾದದ್ದ ಮಾಡಿಕೊಳ್ಳಿ ಇದು ನಿಮ್ಮದು ನಂದನ
ಈ ತೋಟದ ನಡುವೆ ಇರುವ ಜ್ಞಾನವೃಕ್ಷದೊಂದು ಹಣ್ಣ
ಏನಾದರು ತಿಂದರೆ, ಬಂತು ನಿಮಗೆ ತೊಂದರೆ’.

ತಿನ್ನಬಾರದಂಥ ಹಣ್ಣು ಒಂದೇ ಒಂದು ಮರದೊಳು
ತೂಗುತಿತ್ತು ಕಣ್ಣ ಸೆಳೆದು ಕಪ್ಪು-ಬಿಳುಪು ಗೊಂಚಲು
ಅದರ ಸುತ್ತ ಆಡಂ ಈವ್ ದಿನವು ತಿರುಗುತ್ತಿದ್ದರೂ
ಮುಟ್ಟಲಿಲ್ಲ ಇಬ್ಬರೂ, ತಿಳಿಯದಂತೆ ಇದ್ದರು.

ಒಂದು ದಿವಸ ಸರ್ಪವೊಂದು ಹೇಗೊ ಬಂತು ತೋಟಕೆ
ಬೆರಗಾದರು ದಂಪತಿಗಳು ಅದರ ಮಯ್ಯ ಮಾಟಕೆ.
ತಮ್ಮೊಳಗಿನ ದನಿಯ ಹಾಗೆ ನುಡಿಯಿತಿಂತು ಮೆಲ್ಲಗೆ :
‘ತೋಟವೆಲ್ಲ ನಿಮ್ಮದೆಂದು ಹೇಳಿದಂಥ ಒಡೆಯನು
ಇದೊಂದು ಮರದ ಹಣ್ಣನೇಕೆ ತಿನ್ನಬೇಡಿ ಎಂದನು?
ಇಂಥ ಹಣ್ಣ ತಿನ್ನದಿದ್ದರರ್ಥವುಂಟೆ ಬದುಕಿಗೆ?
ನೀವಿಬ್ಬರು ತಿಂದು ನೋಡಿ, ಇಲ್ಲ ಏನೂ ತೊಂದರೆ.

ಜ್ಞಾನವೃಕ್ಷದೊಂದು ಹಣ್ಣ ತಿನ್ನಬೇಡಿ ಅಂದರೆ
ನೀವು ಸದಾ ಅಜ್ಞಾನದಿ ಬದುಕಬೇಕು ಅನ್ನುವುದೆ
ದೈವೇಚ್ಛೆಯ ಅರ್ಥವೆ? ಮನುಷ್ಯರಿಗೆ ಜ್ಞಾನವೆಂ-
ಬುದತ್ಯಮೂಲ್ಯವೆಂಬ ವಿಷಯ ದೇವರಿಗೂ ತಿಳಿಯದೆ’!

ಹೌದೆನ್ನಿಸಿತದರ ಮಾತು. ಆ ನಿಷಿದ್ಧ ಫಲವನು
ಅವರಿಬ್ಬರು ತಿಂದು ಅಲ್ಲಿಂದುಚ್ಛಾಟನೆಗೊಂಡರು.
‘ಮೊಟ್ಟಮೊದಲ ಅವಿಧೇಯತೆ’ಯಿಂದ ಮನುಷ್ಯತ್ವಕೆ
ಕ್ರಿಯಾಶೀಲ ಧೈರ್ಯಮೂಡಿ ಸ್ಫೂರ್ತಿಯಾಯ್ತು ಪ್ರಗತಿಗೆ.