ಒಂದೇ ವೃಕ್ಷದ ಕೊಂಬೆಗಳು
ನಾವೊಂದೇ ಬಳ್ಳಿಯ ಹೂವುಗಳು
ಒಂದೇ ನೆಲದೊಳು ಬೇರೂರುತ, ನಾ-
ವೊಂದೇ ಮುಗಿಲಿಗೆ ನೆಗೆವವರು.

ಒಂದೆ ವಸಂತದ ಸ್ಪರ್ಶಕೆ ಝಗ್ಗನೆ
ಚಿಗುರುತ ಎದೆಯನು ತೆರೆದವರು
ಹಳೆಯ ನೆನಪುಗಳನೊಂದೇ ಗಾಳಿಗೆ
ತೂರುತ ಭರವಸೆಗೊಲಿದವರು.

ಹಣ್ಣು-ಕಾಯ್ಗಳಲಿ ನಾಳಿನ ಕನಸಿನ
ಬೀಜವ ಹುದುಗಿಸಿ ಇಟ್ಟವರು
ಕೊಂಬೆ ಕೊಂಬೆಯಲಿ ಹಾಡುವ ಹಕ್ಕಿಯ
ರಾಗಕೆ ಮನಸನು ಕೊಟ್ಟವರು.

ಹಗಲಿರುಳಿನ ಋತುಮಾನದ ಗತಿಯೊಳು
ಮರಳಿ ಮರಳಿ ಹೊಸತಾಗುವರು
ಹಿಂದು-ಮುಂದುಗಳನೊಂದೇ ಕೇಂದ್ರಕೆ
ತಂದುಕೊಂಡು ನೆಲೆ ನಿಂತವರು.