ಇದು ನನ್ನ ಸಮಗ್ರಗದ್ಯ ಬರೆಹಗಳ ನಾಲ್ಕನೆಯ ಸಂಪುಟ. ನಾನು ಕಳೆದ ಸುಮಾರು ಮೂರು ದಶಕಗಳ ಕಾಲಮಾನದಲ್ಲಿ ಆಗಾಗ ಕೈಕೊಂಡ ನಾಲ್ಕು ಪ್ರವಾಸಗಳ ಅನುಭವ ಕಥನಗಳನ್ನು ಒಳಗೊಳ್ಳುವ ಈ ಸಂಪುಟವನ್ನು ‘ಪ್ರವಾಸಚಕ್ರ’ ಎಂದು ಕರೆದಿದ್ದೇನೆ. ಇವುಗಳಲ್ಲಿ ಮೂರು ವಿದೇಶ ಪ್ರವಾಸಗಳಿಗೆ ಸಂಬಂಧಿಸಿದ್ದರೆ, ಒಂದು ಭಾರತದ ಉತ್ತರೋತ್ತರ ಪರಿಸರದ ಹಿಮಾಲಯದ ‘ನಾಲ್ಕು ಧಾಮ’ಗಳ ಪ್ರವಾಸವನ್ನು ಕುರಿತದ್ದು. ನನಗೆ ಎಳೆಯಂದಿನಿಂದಲೂ ತಿರುಗಾಟದ ಹುಚ್ಚು. ಹೀಗಾಗಿ ಈ ದೇಶದ ಒಳಗೂ ಹೊರಗೂ ಸಾಕಷ್ಟು ಸುತ್ತಾಡಿದ್ದೇನೆ. ಆದರೆ ಹಾಗೆ ನಾನು ತಿರುಗಾಡಿ ಪಡೆದ ಅನುಭವಗಳೆಲ್ಲವನ್ನೂ ಬರೆಯಲು ಹೋಗಲಿಲ್ಲ. ಈ ಕುರಿತು ನಾನು ಬರೆದದ್ದಕ್ಕಿಂತ ಬರೆಯದೆ ಇರುವುದೇ ಮಿಗಿಲಾಗಿದೆ. ಒಂದು ಮಾತಂತೂ ನಿಜ, ಪ್ರವಾಸಗಳಿಂದ ನನಗೆ ಪರಿಚಯವಾದ ಅನುಭವ ಪ್ರಪಂಚ ಹಾಗು ನನ್ನ ವ್ಯಕ್ತಿತ್ವಕ್ಕೆ ಅದು ತಂದುಕೊಟ್ಟ ಜೀವನೋತ್ಸಾಹ ವಿಶೇಷ ರೀತಿಯದು.

ನನ್ನ ಮೊದಲ ವಿದೇಶ ಪ್ರವಾಸ ೧೯೭೨ನೇ ಸೆಪ್ಟಂಬರ್ ತಿಂಗಳಲ್ಲಿ ನಾನು ರಷ್ಯಾದ ರಾಜಧಾನಿಯಾದ ಮಾಸ್ಕೋಗೆ ಹೋಗಿ ಬಂದದ್ದನ್ನು ಕುರಿತದ್ದು. ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ನನ್ನನ್ನು ಭಾರತ ಸೋವಿಯತ್ ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ ಸಂದರ್ಶಕ ಪ್ರಾಧ್ಯಾಪಕನನ್ನಾಗಿ ಆಯ್ಕೆ ಮಾಡಿದ್ದರಿಂದ, ನಾನು ಮಾಸ್ಕೋಗೆ ಹೋಗಿ ಬರಲು ಸಾಧ್ಯವಾಯಿತು. ಸರ್ಕಾರದ ಖರ್ಚಿನಲ್ಲಿ ನಾನು ಕೈಕೊಂಡ ವಿದೇಶ ಪ್ರವಾಸಗಳಲ್ಲಿ ಇದೇ ಮೊದಲನೆಯದು ಹಾಗೂ ಕೊನೆಯದು. ಇನ್ನುಳಿದ ಪ್ರವಾಸಗಳೆಲ್ಲ ನನ್ನ ಸ್ವಂತ ವ್ಯವಸ್ಥೆಯಿಂದ ಕೈ  ಕೊಂಡವು. ನಾನು ಸುಮಾರು ಮೂರು ದಶಕಗಳ ಹಿಂದೆ ಕಂಡ ಮಾಸ್ಕೋ ಬಹುಶಃ ಇಂದಿಗೂ ಹಾಗೆಯೆ ಇರಬಹುದು; ಆದರೆ ಮಾಸ್ಕೋವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ಅಂದಿನ ಸೋವಿಯತ್ ಒಕ್ಕೂಟ ಈಗ ಇಲ್ಲ.

ಈ ಪ್ರವಾಸಕಥನಗಳಲ್ಲಿ ಮುಖ್ಯವಾಗಿ ನನ್ನೊಳಗಿನ ಕವಿ ಹಾಗೂ ವಿಮರ್ಶಕನು, ತನ್ನ ಪ್ರವಾಸದ ಪರಿಸರಕ್ಕೆ ಸ್ಪಂದಿಸಿದ ಹಾಗೂ ಪ್ರತಿಕ್ರಿಯಿಸಿದ ಹಲವು ಪರಿಗಳನ್ನು ಯಾರಾದರೂ ಗುರುತಿಸಬಹುದು. ಈ ಪ್ರತಿಕ್ರಿಯೆಗಳ ಉದ್ದಕ್ಕೂ, ಪಶ್ಚಿಮದ ರಾಷ್ಟ್ರಗಳ ಪ್ರವಾಸದ ಸಂದರ್ಭದಲ್ಲಿ ಅನೇಕ ವಿಷಯಗಳಲ್ಲಿ ನಮ್ಮ ದೇಶದ ಸ್ಥಿತಿ-ಗತಿಗಳನ್ನು ಅಲ್ಲಿನ ಪ್ರಗತಿಯೊಂದಿಗೆ ತೌಲನಿಕವಾಗಿ ವಿವೇಚಿಸುವುದರಿಂದ ಸಹಜವಾಗಿಯೆ ನಿಷ್ಪನ್ನವಾಗುವ ದಟ್ಟವಾದ ವಿಷಾದದ ಛಾಯೆಯೊಂದು ಚಾಚಿಕೊಂಡಿದೆ.

ಇತ್ತೀಚೆಗೆ ಪ್ರಕಟವಾದ ‘ಇಂಗ್ಲೆಂಡಿನಲ್ಲಿ ಚತುರ್ಮಾಸ’ ಎಂಬ ಕೃತಿಯನ್ನು ಹೊರತುಪಡಿಸಿದರೆ ಇನ್ನುಳಿದವೆಲ್ಲ ಸಾಕಷ್ಟು ಮರು ಮುದ್ರಣಗಳನ್ನು ಕಂಡಿವೆ. ಈಗ ನನ್ನ ಈ ಸಮಗ್ರ ಪ್ರವಾಸಕಥನ, ಇಡಿಯಾಗಿ ನಾಲ್ಕು ಪ್ರವಾಸಕಥನಗಳನ್ನು ಒಳಗೊಳ್ಳುತ್ತದೆ. ಇವೆಲ್ಲವನ್ನು ಒಟ್ಟಾಗಿ ಪ್ರಕಟಿಸುವ ಸಾಹಸಕ್ಕೆ ಕೈ ಹಾಕಿರುವ  ಕಾಮಧೇನು ಪ್ರಕಾಶನದ ಗೆಳೆಯ ಶ್ರೀ ಡಿ. ಕೆ. ಶ್ಯಾಮಸುಂದರರಾವ್ ಅವರ ಸೌಜನ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ. ಎಂದಿನಂತೆ ಈ ಸಂಪುಟದ  ಪ್ರಕಟಣೆಯಲ್ಲಿ ಪಾಲುಗೊಂಡ ಸತ್ಯಶ್ರೀ ಪ್ರಿಂಟರ‍್ಸ್ ಪ್ರೈ. ಲಿ., ಅವರಿಗೆ ನನ್ನ ವಂದನೆಗಳು.

ಜಿ. ಎಸ್. ಶಿವರುದ್ರಪ್ಪ
ನವೆಂಬರ್ ೯೯

ಮೂರನೆಯ ಮುದ್ರಣಕ್ಕೆ ಎರಡು ಮಾತು

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷಿ  ಅವರಿಗೆ ಮತ್ತು ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ ಕೆ.ಆರ್. ಗಣೇಶ್‌ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

-ಜಿ.ಎಸ್. ಶಿವರುದ್ರಪ್ಪ
ಫೆಬ್ರವರಿ ೨೦೦೯