ಕನ್ನಡ ನವೋದಯದ ಶಿಖರ ಸಾಹಿತಿಯಾದ ಕುವೆಂಪು ಅವರನ್ನು ನೆನೆಯುವುದು ಎಂದರೆ, ಮನುಕುಲದ ಚರಿತ್ರೆಯಲ್ಲಿ ಮಹತ್ವದ ಕಾಲವಾದ ಇಪ್ಪತ್ತನೆ ಶತಮಾನವನ್ನು ತಮ್ಮ ಕೃತಿಗಳ ಮೂಲಕ ಅದರ ಸಮಸ್ತ ಪಲ್ಲಟಗಳ ಹಾಗೂ ತಲ್ಲಣಗಳ ಸಹಿತ ಗ್ರಹಿಸಿ ನಿರೂಪಿಸಿದ ಪ್ರತಿಭಾ ವಿಶೇಷವೊಂದನ್ನು ನೆನೆಯುವುದು ಎಂದು ಅರ್ಥ. ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಸಮಕಾಲೀನ ಭಾರತೀಯ ಸಾಹಿತ್ಯವು ಕನ್ನಡದ ಸಂದರ್ಭದಲ್ಲಿ ಪಡೆದುಕೊಂಡ ಸೃಜನಶೀಲತೆ ಮತ್ತು ವೈಚಾರಿಕತೆಗಳ ಉತ್ಕರ್ಷದ ಪ್ರತಿನಿಧಿಯಂತೆ ಇದ್ದಾರೆ ಕುವೆಂಪು.

‘ಕಾಡಿನ ಕೊಳಲಿದು ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು’ ಎಂಬ ಬಿನ್ನಹದೊಂದಿಗೆ, ಕಳೆದ ಶತಮಾನದ ಮೂರನೆಯ ದಶಕದಲ್ಲಿ ಕನ್ನಡ ನವೋದಯವನ್ನು ಪ್ರವೇಶಿಸಿದ ಈ ‘ಕಾಡಿನ ಕವಿ’, ಅನಂತರ ನಾಡಿನ ಕವಿಯಾಗಿ, ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸುತ್ತ, ಜಾಗತಿಕ ಪ್ರಜ್ಞೆಯ ವಿಸ್ತಾರದಲ್ಲಿ ಕನ್ನಡವನ್ನು ಕನ್ನಡಿಗರನ್ನೂ ಬೆಳೆಸುತ್ತ ಬಂದ ಸಂಗತಿ ಈಗಾಗಲೆ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಭಾಗವಾಗಿದೆ. ಅರ್ಧ ಶತಮಾನಕ್ಕೂ ಮೀರಿದ ಕಾಲಮಾನದಲ್ಲಿ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಗೆ ಮಹತ್ತರವಾದ ಕೊಡುಗೆಯನ್ನು ಕೊಟ್ಟ ಈ ಮಹಾನ್ ಲೇಖಕನ ಸಾಹಿತ್ಯ ನಿರ್ಮಿತಿಯ ಹರಹು, ಆಳ ಮತ್ತು ವೈವಿಧ್ಯಗಳು ಹಾಗೂ ಉದ್ದಕ್ಕೂ ಅವರು ಕಾಯ್ದುಕೊಂಡು ಬಂದ ಒಂದು ನಿಶ್ಚಿತವಾದ ಎತ್ತರ, ಅವರು ಹುಟ್ಟಿ ಬೆಳೆದು-ಬದುಕಿದ ಪರ್ವತಾರಣ್ಯ ಪ್ರಪಂಚದಂತೆ ಪ್ರವೇಶ ಮಾಡಿದವರನ್ನು ದಂಗುಬಡಿಸುತ್ತವೆ. ಅವರ ಸಾಹಿತ್ಯದ ವಿಭಿನ್ನ ನೆಲೆಗಳು, ಅದರ ವೈರುಧ್ಯಗಳು, ಅಸ್ತಿತ್ವದ ಅನೇಕ ಸ್ತರಗಳಿಗೆ ಏರುವ-ಇಳಿಯುವ ಅನ್ವೇಷಣಾ ಸಾಮರ್ಥ್ಯ, ವಿವಿಧ ಜ್ಞಾನ ಶಾಖೆಗಳ ಗಾಢವಾದ ತಿಳಿವಿನಿಂದ ಅವರು ಪಡೆದುಕೊಂಡ ವ್ಯುತ್ಪತ್ತಿ ವಿಶೇಷಗಳು, ಯಾವುದೇ ಸಿದ್ಧ ಸಾಹಿತ್ಯ ವಿಮರ್ಶೆಯ ಮಾನದಂಡಗಳಿಗೆ ಅಳವಡುವುದು ದುಸ್ತರವಾಗಿದೆ. ಅಷ್ಟೇ ಅಲ್ಲ, ಅವರ ಸಾಹಿತ್ಯ ಸಾಧನೆಗಳಾಚೆಗೂ ನಿಂತು ಅವರು ಕನ್ನಡ ಜನಮನದಲ್ಲಿ ಪಡೆದುಕೊಂಡಿರುವ ಸಾಂಸ್ಕೃತಿಕ ಮಹತ್ವ ವಿಶೇಷ ರೀತಿಯದಾಗಿದೆ.

ಕುವೆಂಪು ಅವರನ್ನು ಕುರಿತು ಪರಿಭಾವಿಸುತ್ತಿರುವ ಸಂದರ್ಭದ ನಮ್ಮ ಸಮಕಾಲೀನ ಜಗತ್ತು, ಹಿಂದಿಗಿಂತ ಎಷ್ಟೋ ಮುಂದುವರಿದಿರುವುದು ನಿಜವಾದರೂ, ಅದು ಅನೇಕ ಬಗೆಯ ತಲ್ಲಣಗಳಿಂದ ಒಂದು ರೀತಿಯಲ್ಲಿ ಅಸ್ವಸ್ಥವಾಗಿದೆ. ಈ ಅಸ್ವಸ್ಥತೆಗೆ ಕಾರಣವನ್ನು ‘ಹಿಂಸೆ’ ಎಂದು ಗುರುತಿಸಬಹುದು. ಈ ಹಿಂಸೆ ಅನೇಕಮುಖಿಯಾದದ್ದು ; ಅಭಿವೃದ್ಧಿಶೀಲತೆ ಯೊಡನೆ ತಳುಕುಹಾಕಿಕೊಂಡಿರುವ ಪರಿಸರ ನಾಶದ ತಲ್ಲಣಗಳ ಹಿಂಸೆ; ರಾಷ್ಟ್ರವ್ಯಾಪಿಯಾದ ಭ್ರಷ್ಟಾಚಾರಗಳ ಹಿಂಸೆ; ಬಹುಕಾಲದಿಂದಲೂ ಹೇಗೋ ಕಾಪಾಡಿಕೊಂಡು ಬಂದ ಕೋಮುಸಾಮರಸ್ಯದ ಆಕೃತಿಗಳು, ರಾಜಕಾರಣ ಮತ್ತು ಧರ್ಮಗಳ ಅಪವಿತ್ರ ಮೈತ್ರಿಯಿಂದ ಚೂರು ಚೂರಾಗುತ್ತಿರುವುದನ್ನು ಅಸಹಾಯಕವಾಗಿ ನೋಡಬೇಕಾದ ಹಿಂಸೆ; ಅದರ ವಿಸ್ತರಣೆಯಾದ ಭಯೋತ್ಪಾದಕತೆಯ ಹಿಂಸೆ; ವಿಜ್ಞಾನ ತಂತ್ರಜ್ಞಾನಗಳ ಹೊಸ ಆವಿಷ್ಕಾರಗಳ ನಡುವೆಯೂ ಮುಂದುವರಿಯುತ್ತಿರುವ ಎಷ್ಟೋ ಜಡ ಸಂಪ್ರದಾಯಗಳ ಮತ್ತು ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಮೂಢನಂಬಿಕೆಗಳ ಪರಿಣಾಮವಾದ ಅವೈಚಾರಿಕತೆಯ ಹಿಂಸೆ; ನವ ವಸಾಹತುಶಾಹೀರೂಪದ ವಾಣಿಜ್ಯ ಸಂಸ್ಕೃತಿಯ ಆಕ್ರಮಣಗಳ ಹಿಂಸೆ–ಇಂಥವುಗಳನ್ನು ಎದುರಿಸಲು ಮತ್ತು ದಾಟಲು ಅಗತ್ಯವಾದ ವೈಚಾರಿಕತೆಯನ್ನು ಕುವೆಂಪು ಎತ್ತಿಹಿಡಿದಿದ್ದಾರೆ ಎನ್ನುವುದನ್ನು ನೆನೆದರೆ ಕುವೆಂಪು ಅವರು ಈ ಹೊತ್ತು ಎಷ್ಟೊಂದು ಪ್ರಸ್ತುತರಾಗುತ್ತಾರೆ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ.

ಕುವೆಂಪು ಸಾಹಿತ್ಯವನ್ನು ಕುರಿತು ಕಾಲದಿಂದ ಕಾಲಕ್ಕೆ ಕೆಲವು ಬಿಡಿಬಿಡಿ ಲೇಖನಗಳನ್ನು ನಾನು ಬರೆದಿದ್ದರೂ, ಬೇರೊಂದು ನಿಟ್ಟಿನಿಂದ ಅವರ ಸಾಹಿತ್ಯವನ್ನು ಸಮೀಕ್ಷಿಸುವ ಪುಸ್ತಕವೊಂದನ್ನು ಬರೆಯಬೇಕೆನ್ನುವ ನನ್ನ ಪ್ರಯತ್ನ ಯಾಕೋ ಏನೋ ಮುಂದಕ್ಕೆ ಹೋಗುತ್ತಲೇ ಬಂತು. ಆ ನನ್ನ ಸಂಕಲ್ಪ ‘ಶ್ರೀ ಕುವೆಂಪು ಶತಮಾನೋತ್ಸವ’ ಸಂದರ್ಭದಲ್ಲಿ ಗಟ್ಟಿಗೊಂಡು ಕ್ರಿಯಾಶೀಲವಾದದ್ದರ ಪರಿಣಾಮವೇ ‘ಕುವೆಂಪು: ಪುನರಾಲೋಕನ’ ಎಂಬ ಈ ಕೃತಿ. ಇದರ ಜತೆಗೆ ಈ ವಿಷಯವನ್ನು ಕುರಿತು ನಾನು ಕೆಲಸವನ್ನು ಪ್ರಾರಂಭಿಸಿದ ಹೊತ್ತಿಗೇ, ಅಕಸ್ಮಾತ್ತಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸೀನಿಯರ್ ಫೆಲೋಷಿಪ್ ನನಗೆ ದೊರೆತ ಕಾರಣದಿಂದ, ಅದು ಒಂದು ಬಗೆಯ ‘ವೇಗವರ್ಧಕ’ದಂತೆ ವರ್ತಿಸಿ, ಇದರ ಬರವಣಿಗೆಯ ಕಾರ್ಯವು ಒಂದು ನಿಗದಿತ ಕಾಲಮಾನದಲ್ಲಿ ಮುಗಿಯಲು ಸಾಧ್ಯವಾಯಿತು.

ನನ್ನ ಈ ‘ಪುನರಾಲೋಕನ’ ಮುಖ್ಯವಾಗಿ, ಕುವೆಂಪು ಸಾಹಿತ್ಯವನ್ನು ನಾನು ಮೊದಲಿನಿಂದಲೂ ಓದಿಕೊಂಡು ಬಂದ ನನ್ನಲ್ಲಿ ಮೂಡಿದ ಚಿಂತನೆ ಮತ್ತು ಪ್ರತಿಕ್ರಿಯೆಗಳನ್ನು ದಾಖಲಿಸುವ ಪ್ರಯತ್ನವಾಗಿದೆಯೇ ಹೊರತು, ಅವರನ್ನು ಕುರಿತು ಕನ್ನಡ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಅಥವಾ ಮಂಡಿತವಾದ ಅಭಿಪ್ರಾಯಗಳಿಗೆ ಉತ್ತರ ಕೊಡುವ ಸ್ವರೂಪದ್ದಲ್ಲ. ಹಾಗೆಂದರೆ ನಾನು ಈವರೆಗೆ ಬಂದ ಕುವೆಂಪು ಅವರನ್ನು ಕುರಿತ ಸಾಹಿತ್ಯ ವಿಮರ್ಶೆಯನ್ನು ಗಮನಿಸಿಲ್ಲವೆಂದೇನೂ ಈ ಮಾತಿನ ಅರ್ಥವಲ್ಲ. ಇದರ ಮೇಲೆ ಇದು ಕುವೆಂಪು ಸಾಹಿತ್ಯದ ಎಲ್ಲವನ್ನೂ ಕುರಿತ ಸಮಗ್ರವಾದ ಪುನರಾಲೋಕನವೂ ಅಲ್ಲ.

‘ಕುವೆಂಪು: ಕಾವ್ಯ’ ಎಂಬ ಮೊದಲ ಲೇಖನ, ೨೦೦೦ದ ಇಸವಿಯಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ‘ಕುವೆಂಪು: ಸಮಗ್ರ ಕಾವ್ಯಸಂಪುಟ’ಕ್ಕಾಗಿ ನಾನು ಬರೆದ ಪ್ರಸ್ತಾವನೆ. ಕುವೆಂಪು ಅವರ ಕಾವ್ಯವನ್ನು ಕುರಿತು ಅಲ್ಲಿ ಹೇಳಿರುವುದಕ್ಕಿಂತ ಬೇರೆಯಾದ ಏನನ್ನು ಈಗ ನಾನು ಹೇಳಲು ಸಾಧ್ಯವಿಲ್ಲವೆಂಬ ಕಾರಣದಿಂದ, ಅದೇ ಬರಹವನ್ನು ಇನ್ನೊಂದಿಷ್ಟು ಮಾಹಿತಿಯನ್ನು ಸೇರಿಸಿ ಇಲ್ಲಿ ಬಳಸಿಕೊಳ್ಳಲಾಗಿದೆ. ಹಾಗೆಯೆ ‘ಬೇರು ಬುಡದಿಂದ ಕೊಂಬೆ ರೆಂಬೆಯವರೆಗೆ’ ಎನ್ನುವುದು–ಬಹುಶಃ ೧೯೭೫ರಲ್ಲಿ ಎಂದು ತೋರುತ್ತದೆ–ನಾನು ಕುವೆಂಪು ಅವರೊಂದಿಗೆ ನಡೆಯಿಸಿದ ಒಂದು ಸಂದರ್ಶನ. ಅದು ಈ ಕೃತಿಯ ಜತೆಗಿರುವುದು ಉಚಿತವೆಂದು ಕಂಡದ್ದರಿಂದ, ಅದನ್ನು ಕೊನೆಯ ಬರಹವನ್ನಾಗಿ ಸೇರಿಸಿಕೊಳ್ಳಲಾಗಿದೆ.

ಇನ್ನು ಕೃತಜ್ಞತೆಯ ಮೂರು ಮಾತು:

ಒಂದು: ಈ ಕೃತಿ ನಿರ್ಮಿತಿಗೆ ವೇಗವರ್ಧಕದಂತೆ ಪ್ರಚೋದಿಸಿದ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯಕ್ಕೆ,

ಎರಡು: ತುಂಬ ಪ್ರೀತಿಯಿಂದ ಪ್ರಕಟಿಸುತ್ತಿರುವ, ‘ಅಂಕಿತ ಪುಸ್ತಕಾಲಯ’ದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರಿಗೆ,

ಮೂರು: ಈ ಕೃತಿಯ ಮುದ್ರಣಕಾರ‍್ಯದಲ್ಲಿ ನೆರವಾದ, ಶ್ರೀ ಆರ್.ಎಸ್. ಶ್ರೀಧರ್ ಅವರಿಗೆ.

ಜಿ. ಎಸ್. ಶಿವರುದ್ರಪ
ಡಿಸೆಂಬರ್ ೨೦೦೫          

ಮೂರನೆಯ ಮುದ್ರಣಕ್ಕೆ ಎರಡು ಮಾತು

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷಿ  ಅವರಿಗೆ ಮತ್ತು ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ ಕೆ.ಆರ್. ಗಣೇಶ್‌ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

ಜಿ.ಎಸ್. ಶಿವರುದ್ರಪ್ಪ

ಫೆಬ್ರವರಿ ೨೦೦೯

 

ಪ್ರಕಾಶಕರ ಮಾತು

‘ಅಂಕಿತ ಪುಸ್ತಕ’ಕ್ಕೀಗ ದಶಮಾನೋತ್ಸವದ ಸಂಭ್ರಮ. ಜೊತೆಗೆ ಡಾ| ಜಿ.ಎಸ್. ಶಿವರುದ್ರಪ್ಪನವರ ‘ಕುವೆಂಪು: ಪುನರಾಲೋಕನ’ ನಮ್ಮ ೨೦೦ನೆಯ ಪ್ರಕಟಣೆ. ಹತ್ತು ವರ್ಷಗಳ ಹಿಂದೆ ‘ಅಂಕಿತ ಪುಸ್ತಕ’ ಪ್ರಕಾಶನವನ್ನು ಉದ್ಘಾಟನೆ ಮಾಡಿದ ನಮ್ಮ ಪ್ರೀತಿಯ  ಮೇಷ್ಟ್ರ ಕೃತಿಯನ್ನೇ ೨೦೦ನೆಯ ಪ್ರಕಟಣೆಯಾಗಿ ಪ್ರಕಟಿಸುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಸದಭಿರುಚಿಯ ಪುಸ್ತಕಗಳ ಪ್ರಕಟಣೆ ನಮ್ಮ ಉದ್ದೇಶ. ಇಲ್ಲಿಯವರೆಗೆ ಈ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಿ ದ್ದೇವೆ. ವಿದ್ಯುನ್ಮಾನ ಮಾಧ್ಯಮಗಳ ಪ್ರಾಬಲ್ಯಗಳ ಮಧ್ಯೆಯೂ ಕನ್ನಡ ಪುಸ್ತಕಗಳಿಗೇ ಅಂಟಿಕೊಂಡಿದ್ದೇವೆ. ನಮ್ಮ ಈ ಕನ್ನಡ ಸಾಹಿತ್ಯ ಸೇವೆಯಲ್ಲಿ ನಾಡಿನ ಗಣ್ಯ ಲೇಖಕರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ.

‘ಪ್ರಕಾಶಕರಿಂದ ಓದುಗರಿಗೆ’ ಎಂಬ ಧ್ಯೇಯ ನಮ್ಮದು. ಉತ್ತಮ ಕಾಗದ ಬಳಕೆ, ಉತ್ತಮ ಮುದ್ರಣ, ಉತ್ತಮ ಬೈಂಡಿಂಗ್, ಸಾಧ್ಯವಾದಷ್ಟೂ ಕಡಿಮೆ ಬೆಲೆ-ಇವು ಅಂಕಿತ ಪುಸ್ತಕದ ವೈಶಿಷ್ಟ ಗಳು. ಪ್ರಕಟಿತ ೨೦೦ ಪುಸ್ತಕಗಳಲ್ಲಿ ಯಾವೊಂದು ಪುಸ್ತಕವೂ ನಮ್ಮ ಕೈ ಕಚ್ಚಿಲ್ಲ. ಅಷ್ಟರಮಟ್ಟಿಗೆ ಓದುಗರು ನಮ್ಮ ಕೈ ಹಿಡಿದು ಕಾಪಾಡಿದ್ದಾರೆ. ಮಾಧ್ಯಮಗಳಂತೂ ನಮ್ಮ ಪುಸ್ತಕಗಳಿಗೆ, ನಮ್ಮ ಕಾರ್ಯಕ್ರಮಗಳಿಗೆ ಇನ್ನಿಲ್ಲದಂತೆ ಪ್ರಚಾರ ನೀಡಿವೆ.  ಎಲ್ಲರ ಅಭಿಮಾನ / ಬೆಂಬಲ ಇರುವವರೆಗೆ ‘ಅಂಕಿತ ಪುಸ್ತಕ’ ತನ್ನ ಪ್ರಕಟಣೆಗಳನ್ನು ನಿರಂತರವಾಗಿ / ನಿರಾತಂಕವಾಗಿ ಹೊರತರುತ್ತದೆ.

ಪ್ರಕಾಶನ ಕ್ಷೇತ್ರದಲ್ಲಿ ‘ಅಂಕಿತ ಪುಸ್ತಕ’ ತನ್ನದೇ ಸ್ಥಾನವೊಂದನ್ನು ಗುರುತಿಸಿಕೊಳ್ಳುವಲ್ಲಿ ನೆರವಾದ ಎಲ್ಲ ಹಿರಿಯರಿಗೆ, ಸನ್ಮಿತ್ರರಿಗೆ, ಹಿತೈಷಿಗಳಿಗೆ, ಅಭಿಮಾನಿಗಳಿಗೆ ಮತ್ತೊಮ್ಮೆ ಅನಂತಾನಂತ ನಮನಗಳು.

ಪ್ರಕಾಶ್ ಕಂಬತ್ತಳ್ಳಿ