ಸೂಚನೆ ||
ಜ್ವಾಲೆ ನಿಜ ಕಾಂತನಂ ಚಲದಿಂದೆ ಬಿಟ್ಟು ತ |
ನ್ನಾಲಯದೊಳಿರದೆ ಪೊರಮಟ್ಟು ಬಂದರ್ಜುನನ |
ಮೇಲೆ ತಂತ್ರವನಿಕ್ಕಿ ಶಾಪಮಂ ಕುಡಿಸಿದಳ್ ದೇವ ನದಿಯಂ ಕೆರಳ್ಚಿ ||

ಇಂದುಕುಲತಿಲಕ ಜನಮೇಜಯ ನರೇಂದ್ರ ಕೇ |
ಳಂದು ನೀಲಧ್ವಜಂ ತಿರುಗಿ ತನ್ನರಮನೆಗೆ |
ಬಂದು ವೈಶ್ವಾನರನನುಜ್ಣೆಯಿಂ ಪಾರ್ಥನ ತುರಂಗಮಂ ಬಿಡುವೆನೆಂದು ||
ನಿಂದು ಮಂತ್ರಿಗಳ ಕರಸಲ್ಕದಂ ಕೇಳ್ದು ನಡೆ |
ತಂದು ನುಡಿದಳ್ ಜ್ವಾಲೆಯೆಂಬರಸಿ ಪತಿಗೆ ನೀ |
ನಿಂದು ಸಿತವಾಹನಂಗೀಯದಿರ್ ಕುದುರೆಯಂ ಬೆದರದಿರೆನುತೆ ತಡೆದಳು ||೧||

ಅನ್ನೆಗಂ ಕೇಳ್ದು ಜನಮೇಜಯ ನರೇಶ್ವರಂ |
ತನ್ನ ಮನದೊಳ್ ಸಂದೆಗಂಬಟ್ಟು ಬೆಸಗೊಂಡ |
ನಿನ್ನೊಮ್ಮೆ ತಿಳಿಪೆಲೆ ಮುನೀಂದ್ರ ಪಾವನಕನೇತಕಾ ಪಟ್ಟಣದೊಳಿರ್ದನು ||
ಮನ್ನಣೆಯ ಮನೆಯಳಿಯನೆಂತಾದನಾ ನೃಪನ |
ಕನ್ನಿಕೆಯದೇನ ಮಾಡಿದಳಿದರ ವೃತ್ತಾಂತ |
ಮನ್ನಿರೂಪಿಸವೇಳ್ವುದೆನೆ ಮತ್ತೆ ಜೈಮಿನಿ ಧರಾಧಿಪಂಗಿಂತೆಂದನು ||೨||

ಆಲಿಸಿನ್ನಾದೊಡೆಲೆ ಭೂಪ ನೀಲಧ್ವಜಂ |
ಜ್ವಾಲೆಯೆಂಬರಸಿಯೊಳ್ ಪಡೆದನತಿರೂಪ ಗುಣ |
ಶೀಲಂಗಳಿಂದೆಸೆವ ತನುಜೆಯಂ ಸ್ವಾಹಾಭಿಧಾನದಿಂ ಬಳೆಯುತಿರುವ ||
ಆ ಲೋಲ ಲೋಚನೆಗೆ ಜೌವನಂ ಬರೆ ಪಿತಂ |
ಮೂಲೋಕದೊಳಗುಳ್ಳ ಪುರುಷರ್ಕಳಂ ಪಟದ |
ಮೇಲೆ ರೂಪಿಸಿ ತೋರಿಸದನಿರೊಳಾರ್ ನಿನಗೆ ವಲ್ಲಭಂ ಪೇಳ್ವುದೆಂದು ||೩||

ವಿಪುಲ ಗಂಧರ್ವ ಯಕ್ಷೆರಗ ಸುರಾಸುರರ |
ನಪಹಾಸ್ಯಮಂ ಮಾಡಿ ಸಕಲ ಭೂಮಂಡಲದ |
ನೃಪ ವರ್ಗಮಂ ಪಳಿದು ಹರಿ ಹರ ವಿರೊಂಚಿ ಶಕ್ರಾದಿಗಳನಿಳಿಕೆಗೆಯ್ದು ||
ಪತನೇಂದು ಮನ್ಮಥ ವಸಂತರ‍್ಕಳಂ ಜರೆದ |
ನುಪಮ ದಿಕ್ಪಾಲಕರ ನಡುವೆ ಕುಳ್ಳಿರ್ದು ರಾ |
ಜಿಪ ವಿತಿಹೋತ್ರನಂ ಕಂಡವಳ್ ತೋರಿಸಿದಳೆನಗಿವಂ ಕಾಂತನೆಂದು ||೪||

ಆ ನೀಲಕೇತು ನೃಪನವಳ ನುಡಿಗೇಳ್ದಣುಗೆ |
ನೀನಘಟಿತದ ವರನನುನ್ನಿಸಿದೆ ಪೇಳ್ದೊಡಿ |
ನ್ನೇನಪ್ಪುದೆಂದು ಚಿಂತಿಸುತಿರ್ಪ ತಾತನಂ ಜರೆದು ಬೀಳ್ಕೊಂಡು ಬಳಿಕ ||
ಮಾನಿನಿ ಪುರೋದ್ಯಾನದೊಳ್ ಪ್ರವಹಿಸವ ನರ‍್ಮ |
ದಾ ನದಿಗೆ ಬಂದಲ್ಲಿ ಮಿಂದು ಸುವ್ರತೆಯಾಗಿ |
ನಾನಾ ವಿಧಾನದಿಂದರ್ಚಿಸಿದಳಗ್ನಿಯಂ ಭಕ್ತಿಯಿಂದನುದಿನದೊಳು ||೫||

ಪಾವಕಂ ಬಳಿಕ ಮೆಚ್ಚಿದನವಳ ನೋಂಪಿಗೆ ಮ |
ಹೀ ವಿಬುಧ ವೇಷಮಂ ತಾಳ್ದು ನೀಲಧ್ವಜನ |
ಚಾವಡಿಗೆ ಬರಲಾತನಿದಿರೆದ್ದು ಸತ್ತರಿಸಿ ಕೈಮುಗಿದು ವಿನಯದಿಂದೆ ||
ನೀವು ಬಿಜಯಂಗೈದ ಕಾರ‍್ಯಮಂ ಬೆಸಸಿಮೆನ |
ಲಾವು ಕನ್ನಾಯಾರ್ಥಿಗಳ್ ಕುಡು ನಿನ್ನ ಸುತೆಯನಿದ |
ಕಾವೆಣಿಕೆ ಬೇಡ ಭೂಭುಜರೀಯಬಹುದು ವಿಪ್ರರ್ಗೆಂದೊಡಿಂತೆಂದನು ||೬||

ಕನ್ಯಾರ್ಥಿಯಾಗಿ ನೀಂ ಬಂದು ಬೇಡುವುದಿಳಿಯೊ |
ಳನ್ಯಾಯಮಲ್ಲ ವಿಪ್ರರ್ಗೆ ಕೊಡಬಹುದು ರಾ |
ಜನ್ಯರದಕೇನೊಂದು ಚಲದಿಂದೆ ತನ್ನ ಕುವರಿಗೆ ಮರುತ್ಸಖನಲ್ಲದೆ ||
ಅನ್ಯರಂ ಪತಿಯಾಗಿ ವರಿಸಬೇಕೆಂಬ ಚೈ |
ತನ್ಯಮಿಲ್ಲೇನು ಮಾಡುವೆನಿನ್ನು ನನಗೀವ |
ಧನ್ಯತೆಗೆ ಬಾಹಿರಂ ತಾನಾದೆನೆನಲಾ ಕಪಟ ವಿಪ್ರನೀಮತೆಂದನು ||೭||

ಪ್ರಾಪ್ತಮಾದುದು ನಿನ್ನ ಮಗಳೆಣಿಕೆ ಸುವ್ರತ ಸ |
ಮಾಪ್ತಿಯಂ ಮಾಡಿಸಿನ್ನಾನಗ್ನಿ ಸಂಶಯ |
ವ್ಯಾಪ್ತಿಯಿಂ ಬಿಡು ಕಂಡು ನಿಜಾತ್ಮಜೆಯನೆನೆ ನಂಬದಾನೃಪಂ ಬಳಿಕ ತನ್ನ ||
ಆಪ್ತ ಮಂತ್ರಿಯೊಳೀಗಳಿವನಂ ಪರೀಕ್ಷಿಸೆನೆ |
ಗೋಪ್ತಾರನಾಜ್ಞೆಯಿಂ ಬಂದವಂ ನೋಡೆ ಶಿಖಿ |
ದೀಪ್ತಿಯಂ ತೋರರೆವೆ ಗಡ್ಡ ವಿಸೆಗಳುರಿಯಲನಲನೆಂದರಿದನಂದು ||೮||

ಸಪ್ತರಸನಂ ತಪ್ಪದೆಂದಾ ನೃಪಂ ತಿಳಿದು |
ಗುಪ್ತದಿಂದ ತನ್ನ ಸತಿಯನುಜೆಯಂ ಕರಸಿ ಲೋ |
ಲುಪ್ತಿಯಿಂ ಬಂದನಿವಗೀಯಬೇಕಣುಗಿಯಂ ಶೀಖಿಯಹುದೆ ನೋಡೆನಲ್ಕೆ ||
ದೃಪ್ತ ಭಾವದೊಳಾಕೆ ನಡೆತಂದು ನಿಟ್ಟಿಸಲ್ |
ತಪ್ತಮಾದುದು ಮೇಲುದಿನ ವಸನಮಾಗಳಾ |
ಕ್ಷಿಪ್ತಮಂ ಮಾಡಿ ನಗುತಿರ್ದನಾ ಭೂವರಂ ಸಭೆಯೊಳ್ ವಿನೋದದಿಂದೆ ||೯||

ಭೂಕಾಂತ ಕೇಳ್ ಬಳಿಕ ನೀಲಧ್ವಜಾವನಿಪ |
ನಾ ಕಪಟ ವಿಪ್ರನಂ ಕರೆದಗ್ನಿ ನೀನಾದೊ |
ಡೀ ಕುವರಿಯಂ ಕುಡುವೆನಿಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ ||
ಪ್ರಾಕಾರಮಾಗಿ ಯೆನ್ನರಮನೆಯೊಳೆಂದುಮಿರ |
ಬೇಕೆಂದು ಬೇಡಿಕೊಳಲೊಪ್ಪಿ ಪವಮಾನ ಸಖ |
ನಾ ಕಮಲವದನೆಯಂ ಮದುವೆಯಾದಂ ವಿಧಿ ವಿಧಾನ ವಿಭವಂಗಳಿಂದೆ ||೧೦||

ಶ್ರೀ ಹೈಮವತಿಯರಂ ದುಗ್ಧಾಬ್ಧಿ ಹಿಮಗಿರಿಗ |
ಳಾ ಹರಿಹರರ್ಗೆ ಕೊಟ್ಟಿಂಬಿಟ್ಟು ಕೊಂಡಿಹವೊ |
ಲೀ ಹುತವಹಂಗಾತ್ಮಜೆಯನಿತ್ತು ನಿಲಿಸಿಕೊಂಡು ನೀಲಕೇತು ಬಳಿಕ ||
ಸ್ವಾಹಾ ವನಿತೆಯ ಸಮ್ಮೇಳದತಿಸೌಖ್ಯದಿಂ |
ಮಾಹಿಷ್ಮತೀ ಪಟ್ಟಣದೊಳಿರ್ದ ನನಲಂ ಮ |
ನೋಹರದ ವಿವಿಧ ಬೋಗದೊಳಂದು ಮೊದಲಾಗಿ ಸಂದು ಸಂತೋಷದಿಂದೆ ||೧೧||

ಅಲ್ಲಿ ಪಾವಕನಿರ್ಪ ಕಾರಣಮಿದೀಗ ಮುಂ |
ದಿಲ್ಲಿಯ ಕಥಾಂತರನರಸ ಕೇಳಾ ರಾತ್ರಿ |
ಯಲ್ಲಿ ನೀಲಧ್ವಜಂ ಮನೆಯೊಳಾ ಜ್ವಾಲೆಯ ನಿರೂಪಮಂ ಶಿರದೊಳಾಂತು ||
ಸಲ್ಲಲಿತ ವಾಜಿಯಂ ಬಿಡನೆನ್ನೊಡನೆ ಕಾದಿ |
ದಲ್ಲದೆಂದಾ ಕಿರೀಟಿಗೆ ಪೇಳಿಸಿದನಿತ್ತ |
ಪಲ್ಲವಿಸಿತಮಲ ಪೂರ‍್ವಾಶಾ ಲತಿಕೆಯೆನಲ್ ಕೆಂಪಡರ್ದುದು ಮೂಡಲು ||೧೨||

ತನ್ನ ಪಗೆಯಾದ ಕತ್ತಲೆಯ ಸಾರೂಪ್ಯದಿಂ |
ದಿನ್ನಿರ್ದೊಡೆಮಗಿನಂ ಮುಳಿಯದಿರನೆಂದಂಜಿ |
ಕನ್ನೆಯ್ದಿಲೆಯ ಮೊಗಂ ಬಾಡಿದುದು ಕೂಡೆ ನಗುತಿರ್ದುವರವಿಂದಮಗಳು ||
ಗನ್ನದೊಳ್ ನೆರೆವ ಜಾರೆಯರ ಕುಂಟಣಿಯಂತೆ |
ಸನ್ನೆಗೈದುವು ತಾಮ್ರ ಚೂಡಂಗಳೊಂದಿದುವು |
ಮುನ್ನಿನಂತಿರೆ ಜಕ್ಕವಕ್ಕಿಗಳ್ ಪಾಡಿದುವು ತುಂಬಿಗಳ ಬಂಡನರಸಿ ||೧೩||

ರಾಹು ಮುನ್ನೊಮ್ಮೆ ತನ್ನಂ ತುಡುಕಿ ಬಿಟ್ಟನೆಂ |
ಬಾಹುಗೆಯ ಮಗುಚಲೊಳವೊಕ್ಕು ಪಾತಾಳದ ಮ |
ಹಾಹಿ ಸಂಕುಲಮನಾಕ್ರಮಿಸಿ ಪೆಡೆವಣಿಗಳಂ ತೆಗೆದುಕೊಂಡಾಗಳವನು ||
ಸಾಹಸಂ ಮಿಗೆ ದೆಸೆದೆಸೆಗೆ ಚೆಲ್ಲುತೈತರ್ಪ |
ನೋ ಹರಿದ್ವಾಜಿ ಪೇಳೆನೆ ಪಸುಳೆವಿಸಿಲ ಪ್ರ |
ವಾಹಂಗಳೆತ್ತಲುಂ ಪರಿವಿನಂ ದಿನಪನುದಯಂಗೈದು ಬರುತಿರ್ದನು ||೧೪||

ಇತ್ತಲವನೀತ ಕೇಳುದಯವಾಗದ ಮುನ್ನ |
ಮತ್ತೆ ಮಾಹಿಷ್ಮತಿಯ ಪಟ್ಟನದ ಕೋಟೆಯಂ |
ಮುತ್ತಿಕೊಂಡುದು ನರನ ಚತುರಮಗಮೋಜೆಯೊಳ್ ನೀಲಕೇತುವಿನ ಸೇನೆ ||
ಒತ್ತಿ ಕವಿದುದು ವೀರರೊದಗಿದರ್ ಪೊಯ್ದಾಡಿ |
ತಿತ್ತಂಡಮೊಡವೆರಸಿ ಚೂಣಿಗಾಳಗದ ಭಟ |
ರೆತ್ತಿದರ್ ಪಂತಪಾಡುಗಳನಸಿತಧ್ವಜಂ ನಡೆದನರ್ಜುನನಮೇಲೆ ||೧೫||

ತರಣಿ ತೊಲಗಿದ ಬಳಿಕ ಮಿಂಚುಬುಳುವಿಗೆ ತಮಂ |
ತೆರಳಬಲ್ಲುದೆ ಕೃಶಾನುಜ್ವಾಲೆಗಳುಕದಾ |
ನರನುಳಿದ ವೀರರ ಬಗೆವನೇ ಪಡೆವೆರಸಿ ನೂಕಿದಂ ಕಣೆಗರೆಯುತೆ ||
ಮುರಿದುದುರವಣೆಗವನ ಸೇನೆ ಬಳಿಕಳವಿಗರ್ |
ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್ |
ಧುರದೊಳಾಂತಳಿದರರ್ಜುನನೊಳಾತಂ ಕಾದಿ ನೊಂದು ಮೂರ್ಛಿತನಾದನು ||೧೬||

ಬಳಿಕ ಸಾರಥಿ ಮನೆಗೆ ತಂದನಾ ಭೂಪನಂ |
ಪೊಳಲ ಪೆರ್ಬಾಗಿಲ್ಗಳಿಕ್ಕಿದುವು ಕೋಟೆ ಕೊ |
ತ್ತಳದ ಕಾವಲ್ಗಳಂ ಬಲಿದರಲ್ಲಲ್ಲಿ ಗಜಬಜವಾಯ್ತು ನಗರದೊಳಗೆ ||
ತಿಳಿದುದಾತನ ಮೂರ್ಛೆ ಕಣ್ದೆರೆದು ನೋಡಿ ಕೊಳು |
ಗುಳದ ಪರಿಭವಕೆ ಬೆಂಡಾಗಿ ನಿಜ ತನಯರಳಿ |
ದಳಲಿನಿಂ ಬೈದನಸಿತಧ್ವಜಂ ಜ್ವಾಲೆಯಂ ಪ್ರತಿಕೂಲೆಯಂ ಖತಿಯೊಳು ||೧೭||

ನಿನ್ನೆ ಪಾರ್ಥನ ಹಯವನಾತಂಗೆ ಬಿಡಲೀಯ |
ದೆನ್ನ ಕೆಡಿಸಿದೆಯಲಾ ಪಾತಕಿಯೆ ಸುತರಳಿದ |
ರಿನ್ನೇನು ಘಾತಕಿಯೆ ಮತ್ಕುಲಕರಿಷ್ಟೆ ನೀನತಿಕಷ್ಟೆ ಪೋಗು ದುಷ್ಟೆ ||
ಎನ್ನರಮನೆಯೊಳಿರದಿರೆಂದಾಗಳಾ ಜ್ವಾಲೆ |
ಯನ್ನೀಲಕೇತು ಧಟ್ಟಿಸಿ ಬೈದು ಬಳಿಕಶ್ವ |
ಮನ್ನರನೆಡೆಗೆ ಕಳುಪಿ ತಾನಾ ಕರೀಟಿಯಂ ಕಾಣಲ್ಕೆ ಪೊರಮಟ್ಟನು ||೧೮||

ಕೊಂಡು ಬರಿಸಿದನಖಿಳ ವಸ್ತುಗಳನಮಲ ಮಣಿ |
ಮಂಡನಾಳಿಗಳಂ ವಿವಿಧ ದುಕೂಲಂಗಳಂ |
ಹಿಂಡಾಕಳಂ ಮಹಿಷಿಗಳನುತ್ತಮಸ್ತ್ರೀಯರಂ ಗಜ ಹಯಾವಳಿಯನು ||
ಭಂಡಾರದರ್ಥಮಂ ಗುಡ ತೈಲ ಧಾನ್ಯಮಂ |
ಬಂಡಿಗಳ ಮೇಲೆ ತುಂಬಿಸಿ ಪಾರ್ಥನಂ ಬಂದು |
ಕಂಡನಸಿತಧ್ವಜಂ ಬಳಿಕವನರ್ಜುನಂ ಪ್ರೀತಿ ಮಿಗೆ ಮನ್ನಿಸಿದನು ||೧೯||

ವಾಜಿ ನಡೆದುದು ಬಳಿಕ ತೆಂಕಮೊಗಮಾಗಿ ಸೇ |
ನಾ ಜಾಲಸಹಿತ ನೀಲಧ್ವಜ ಪೊರೆಮೊಟ್ಟ |
ನಾ ಜನಪನಂ ಕೂಡಿಕೊಂಡು ಮುಂದಕೆ ಸವ್ಯಸಾಚಿ ತೆರಳಿದನಿತ್ತಲು ||
ತೇಜಮಿಲ್ಲದೆ ಮನೆಯೊಳಿಂ ಪೆಣ್ಣೊಡಲ್ವೆಳಸು |
ವೀ ಜೀವಮೇತಕೆನಗೆನುತೆ ನಿಜ ವಲ್ಲಭನ |
ರಾಜ ಗೃಹಮಂ ಬಿಟ್ಟು ಪೋದಳಾ ಜ್ವಾಲೆಯನ್ಮುಖನೆಂಬ ತಮ್ಮನೆಡೆಗೆ ||೨೦||

ಉನ್ಮುಖಂ ಕಂಡಿದಿರ್ಗೊಂಡಗ್ರಜಾತೆಯಂ |
ಸನ್ಮಾನಿಸಿದನೇಕೆ ಬಂದೆಯೆನೆ ಫಲುಗುಣಂ |
ಮನ್ಮನೋರಥಮೆಲ್ಲಮಂ ಕಿಡಿಸಿ ಮಕ್ಕಳಂ ಕೊಂದು ಪತಿಯಂ ಗೆಲ್ದನು ||
ತನ್ಮರಣಕೊಂದು ದಾಯವನೆಸಗದಿರಲೆನ್ನ |
ಜನ್ಮವೇತಕೆ ನಿನ್ನ ದೆಸೆಯಿಂದೆ ನರನ ವಿಲ |
ಸನ್ಮೌಳಿ ಮಸ್ತಕವನರಸದಿರೆನೆಂದೊಡಾ ಜ್ವಾಲೆಗವನಿಂತೆಂದನು ||೨೧||

ವಾಯಕರ್ಜುನನ ತಲೆ ಬೀಳ್ದಪುದೆ ಕೃಷ್ಣನ ಸ |
ಹಾಯಮಿರಲೆಲೆ ಮರುಳೆ ಹರಿಯ ಹಗೆಗೊಂಡು ಕೆಡು |
ವಾಯಸಂ ತನಗೇಕೆ ರಾಘವಂ ಮಾಡಿದುಪಹತಿಯಂ ದಶಾನನಂಗೆ ||
ದಾಯಮಂ ಪೇಳ್ದವನ ವಂಶಮಂ ಸವರಿಸಿದ |
ಮಾಯಕಾತಿಯವೊಲೆನ್ನಾಲಯಕೆ ಬಂದೆನಗ |
ಪಾಯಮಂ ತಾರದಿಲ್ಲಿಂದ ಪೋಗೆಂದವಳನುನ್ಮುಖಂ ಕೋಪಿಸಿದನು ||೨೨||

ಜ್ವಾಲೆ ಬಳಿಕನುಜನಂ ಬೈದು ಕೋಪದೊಳಾತ |
ನಾಲಯದೊಳಿರದೆ ಪೊರಮಟ್ಟು ನಡೆತರೆ ಮುಂದೆ |
ಲೀಲೆ ಮಿಗೆ ನಲಿನಲಿದು ಸುಳಿದಿಳಿದು ಬೆಳೆದಳಿದು ತಳೆದೆಳೆದು ಪೊಳೆದು ಸೆಳೆದು ||
ಮೇಲೆಮೇಲೊದಗುವ ಘನಪ್ರವಾಹದ ಸುಕ |
ಲ್ಲೋಲ ಮಾಲಾಕುಲದ ಬುದ್ದುದದ ಜಲ ಜಂತು |
ಜಾಲದ ಲಳಿಯ ಲಹರಿಗಳ ವಿಸ್ತರದ ವರ ಗಂಗೆಯಂ ಕಂಡಳು ||೨೩||

ತೆಳುವುಡಿಯ ಮಳಲಿಡಿಯಲಿತ್ತಡಿಯ ತಳಗಡಿಯ |
ಪೊಳೆ ನೆರೆಯಲುರೆ ಪೊರೆಯಲೋಳ್ದೊರೆಯ ಬೆಳ್ನೊರೆಯ |
ತೊಳಪೆಳೆಯ ವಿನ್ಪೊಳೆಯಲಿರದೆಳೆಯಲೆಡೆ ಸೆಲೆಯ ತುಂತುರಿನ ತನಿಗೆದರಿನ ||
ಸುಳಿಸುಳಿಯಸವ್ವಳಿಯ ಬೊಬ್ಬುಳಿಯ ಕಡಲುಳಿಯ |
ಜಳಚರದ ತರತರದ ಶೀಕರದ ಭೀಕರದ |
ತುಳ ಗಂಗೆ ಸುತರಂಗೆ ನೋಳ್ಪಂಗೆ ಸಲೆ ಕಂಗೆಸೆದಳಂದು ದಿವಿಜಸಿಂಧು ||೨೪||

ಕೂರ್ಡುಗಡಿಯಾಗಿರ್ಪ ಗುಣ್ಪಿಂದೆ ತನ್ನೆಡೆಯೊ |
ಳಾರ್ಮುಳುಗಲವರಿಂದ್ರರಹರೆಂಬ ಪೆಂಪಿಂದೆ |
ಘೂರ್ಮಿಸುವ ಗಂಗಾಪ್ರವಾಹಮಂ ಕಂಡಳಾ ಜ್ವಾಲೆ ಬಳಿಕಲ್ಲಿ ನಿಂದು ||
ಧಾರ್ಮಿಕರಿವರೊಳುಂಟೆ ತನ್ನನೆಂತಾದೊಡಂ |
ನೀರ್ಮುಟ್ಟದಂತೊಯ್ಯನಾ ತಡಿಗೆ ದಾಂಟಿಸುವ |
ಕೂರ್ಮೆಯುಳ್ಳವರೆಂದೊಡಲ್ಲಿರ್ದ ನಾವಿಕರ್ ಕೇಳ್ದವಳ್ಗಿಂತೆಮದರು ||೨೫||

ಬಿಂದುಮಾತ್ರಂ ಮೇಲೆ ಬೀಳಲ್ಕೆ ವಿಪ್ರನಂ |
ಕೊಂದ ಪಾಪಂ ಪೋಪುದಿಲ್ಲಿ ಮಿಂದವನ ಗತಿ |
ಯಂದಮಂ ಬನ್ಣಿಸುವೊಡಜನ ಪವಣಲ್ಲ ನೀನಿಲ್ಲಿಗೇನಂ ಪ್ರಾರ್ಥಿಸಿ ||
ಬಂದೆ ಗಂಗಾಂಬುವಂ ಮುಟ್ಟದಿರಬಹುದೆ ಪೇ |
ಳೆಂದೊಡಾ ಜ್ವಾಲೆ ನುಡಿದಳ್ ಜಾಹ್ನವಿಗೆ ದೋಷ |
ಮೋದಿಹುದು ನಿಮಗೊರೆದಿಲ್ಲಮವಳೆನಗೆ ಮೈದೊರಲುಸಿರುವೆನೆಂದಲು ||೨೬||

ನೈಜದಿಂದಜನ ಕರಪಾತ್ರದಗ್ರೋದಕಂ |
ವೈಜಯಂತೀಧರನ ಪಾದಾಂಬು ಶಿವನ ತಲೆ |
ಯೈಜಡೆವೆಳಸಿಗೆರೆದ ಜೀವನಂ ತಾನಂತುಮಲ್ಲದತಿಪಾಪಂಗಳ ||
ಮೈಜೋಡನುಗಿದು ಬಿಸುಡುವ ಗಂಗೆ ಬೆದರಿದಳ್ |
ತ್ರೈಜಗದೊಳಪವಾದಕಂಜದವರುಂಟೆ ಕೇ |
ಳೈ ಜನಪ ಜಲದೆ ಜಾಯ್ನವಿ ಕೇಳ್ದು ಪೊರಮಟ್ಟಳವಳೆಂದ ನುಡಿಗೆ ನಡುಗಿ ||೨೭||

ಅಂಬುರುಹ ರೋಲಂಬ ಮತ್ಸ್ಯ ಕಚ್ಛಪ ವಾರಿ |
ಕಂಬು ಶೀಕರ ಚಕ್ರವಾಕ ಶೈವಾಲ ಕಾ |
ದಂಬ ಗಂಭೀರ ಸೈಕತ ಮೃಣಾಳಂಗಳಿವು ತನಗವಯವಂಗಳಾಗೆ ||
ಇಂಬಾದ ಸೌಂದರ‍್ಯಮಾ ನದಿಯ ನಡುವೆ ಪ್ರತಿ |
ಬಿಂಬಿಸಿದೊಲಿರೆ ದಿವ್ಯ ರೂಪನಳವಡಿಸಿ ಜಗ |
ದಂದೆ ಜಾಹ್ನವಿ ಸಲಿಲ ಮಧ್ಯದಿಂದೆದ್ದು ಬಂದಾ ಜ್ವಾಲೆಯಂ ಕೇಳ್ದಳು ||೨೮||

ದೋಷ ಹರೆ ತಾನೆಂದು ವೇದ ಶಾಸ್ತ್ರಂಗಳುರೆ |
ಘೋಷಿಪುವು ಮುಟ್ಟಲಾಗದು ತನ್ನನೆಮದು ನೀಂ |
ದೂಷಿಸುವ ಕಾರಣಮದಾದಾವುದೌ ಜ್ವಾಲೆ ಪೇಳೆಂದು ಜಾಹ್ನವಿ ನುಡಿಯಲು ||
ದೂಷಣದ ಮಾತನಾಡುವಳಲ್ಲ ಲೋಕದ ಸು |
ಭಾಷಿತವನುಸಿರಬೇಹುದು ಪುತ್ರರಿಲ್ಲದಿಹ |
ಯೋಷೆಯಂಗಸ್ಪರ್ಶನಂ ಪಾಪಮೆಂಬುಬರದಕಾಗಿ ಬೆದರಿದೆನೆಂದಳು ||೨೯||

ಎಂದೊಡೆ ಕೆರಳ್ದು ಭಾಗೀರಥಿ ಸಮಸ್ತ ನೃಪ |
ವೃಂದದೊಳ್ ತನ್ನ ಮಗನುದ್ದಾಮನಾಗಿರ್ಪ |
ನೆಂದುಮಳಿವವನಲ್ಲವಂ ಯದೃಚ್ಚಾ ಮರಣಿ ಭಾಗವತ ಮಸ್ತಕಮಣಿ ||
ವೃಂದಾರಕೋಪಮಂ ಸತ್ಯಸಂಧಂ ಭೀಷ್ಮ |
ನೆಂದು ಮೂಲೋಕದೊಳ್ ಪ್ರಖ್ಯಾತನಾಗಿಹಂ |
ಮಂದಮತಿ ನೀನೆನಗೆ ಸುತರಿಲ್ಲೆನಲ್ ಬಹುದೆ ಪೋಗೆಂದೊಡಿಂತೆಂದಳು ||೩೦||

ಉಂಟು ನೀನಾಡಿದಿನಿತೆಲ್ಲಮುಂ ತಥ್ಯವಹು |
ದೆಂಟಕೊಂದುಳಿದುದಂ ಬಲ್ಲೆನಾನದರಿಂದೆ |
ವೆಂಟಣಿಸಿತಿನ್ನೆಗಂ ನೀನ್ನೇಳ್ಗೆ ಮೂಜಗದೊಳೀಗ ದಾಯಾದ್ಯರೊಳಗೆ |
ಗಂಟಕ್ಕಿದಾಹವದೊಳರ್ಜುನಂ ತವ ಸೂನು |
ವಂ ಟಕ್ಕಿನಿಂ ಕೊಂದನಲ್ಲದಿರ್ದೊಡೆ ಮತ್ತೆ |
ಕಂಟಕಮದೆತ್ತಣದು ಕೇಳ್ ತವಾಭ್ಯುದಯಕೆಂದಾಜ್ವಾಲೆ ಕಾಳ್ಗೆಡೆದಳು ||೩೧||

ಪಚ್ಚೆಲೆಯ ತರುವನೊಣಗಿದ ಪೊರೆಯ ಮರದ ಕಾ |
ಳ್ಚಿಚ್ಚು ಕೊಂಡುರಿವವೊಲ್ ಜ್ವಾಲೆಯ ಮುಳಿಸಿನೊಡನೆ |
ಪೆಚ್ಚಿತಮರಾಪಗೆಯ ಕೋಪಮೆತ್ತಿದ ಹಸ್ತದಿಂ ಬೀಷ್ಮನಂ ಧುರದೊಳು ||
ಎಚ್ಚು ಕೊಂದರ್ಜುನನ ತಲೆಯನಾತನ ಸುತಂ |
ಕೊಚ್ಚಿ ಕೆಡಹಲಿ ತಿಂಗಳಾರಕಾಹವದೊಳೆಂ |
ದುಚ್ಚರಿಸಿ ಶಾಪಮಂ ಕೊಟ್ಟಡಗಿದಳ್ ಜಲದ ಮಧ್ಯದೊಳ್ ದಿವಿಜ ತಟಿನಿ ||೩೨||

ನಾರಿಯರ ಚಲಮೆಂತುಟೋ ಕೇಳ್ ಮಹೀಶ ಭಾ |
ಗೀರಥಿಗೆ ಕೋಪಮಂ ಬರಿಸಿ ಕೊಡಿಸಿದಳತಿ ಕ |
ಠೋರತರ ಶಾಪಮಂ ಜ್ವಾಲೆ ಬಳಿಕದು ಸಾಲದಾ ನರದ ತಲೆಯನರಿವ ||
ಕೂರಲಗಿನಸ್ತ್ರವಾದಪೆನೆಂದು ಸುರನದಿಯ |
ತೀರದೊಳ್ ವಹ್ನಿ ಪ್ರವೇಶಮಂ ಮಾಡಿ ಜಂ |
ಭಾರಿ ತನಯನ ಸೂನು ಬಭ್ರುವಾಹನನ ಮೂಡಿಗೆಯೊಳಂಬಾಗಿರ್ದಳು ||೩೩||

ಬಂದುದು ನರಂಗೆ ವಾಯದೊಳೀಗ ಶಾಪವಿ |
ಮಂದಾಕಿನಿಯ ಮಾತು ತಾಗಿದಲ್ಲದೆ ಮಾಣ |
ದಿಂದು ಕುಲಮಳಿವುದೀನ ಕೂಡೆ ಧರ‍್ಮಜಾದಿಗಳಸುವಿಡಿಯಲರಿಯರು ||
ಮುಂದೆ ಸುರಪುರದ ಲಕ್ಷ್ಮೀಕಾಂತನಾವ ತೆರ |
ದಿಂದೆ ಪರಿಹರಸುವನೊ ತನ್ನ ಶರಣಾಗತರ |
ನೊಂದುಪಾಯದೊಳುಳಿಪದಿರನೆಂದು ಧೈರ‍್ಯಮಂ ತಾಳ್ದರಿಂದ್ರಾದಿ ಸುರರು ||೩೪||