ಒಂದು ರೀತಿಯಲಿ ಈ ಬದುಕೆಲ್ಲವು
ಗಡಿನಾಡಿನ ಯುದ್ಧ :

ಜಾತಿಯ ಗಡಿ, ನೀತಿಯ ಗಡಿ
ದೇಶದ ಗಡಿ, ಭಾಷೆಯ ಗಡಿ,
ವರ್ಣದ ಗಡಿ, ಪಂಥದ ಗಡಿ
ಹೆಜ್ಜೆ ಹೆಜ್ಜೆಗೂ ಒಳಗೂ ಹೊರಗೂ
ಗಡಿ ಗುರುತಿನ ಗೆರೆ ಗೋಡೆ,
ಕಾವಲು ನಿಂತಿರುವರು ಪಂಡಿತರೂ ಶಾಸ್ತ್ರಿಗಳೂ
ಸೈನಿಕರೂ ಎಲ್ಲ ಕಡೆ.

ದಾಟಲು ಹೋಗುವೆಯಾ ಓ ನಿಸ್ಸೀಮ ?
ತರ್ಕದ ವಾದದ ಗಲಭೆಯ ಸಿಡಿಗುಂಡಿನ ಧೂಮ
ನೋಯ್ವರ, ಸಾಯ್ವರ ನರಳಾಟ
ಕೊಲೆ ಲೂಟಿ ದರೋಡೆಯ ನೋಟ
ಈ ಗಲಭೆಯೊಳುರುಳಿ ಬೀಳುವರು ಲಿಂಕನ್ ಗಾಂಧೀ ಕೆನಡಿ
ಹೀಗೇ ಮೊದಲಿಂದಲು ಒಡೆಯುತ್ತಿದೆ ಕನ್ನಡಿ.

ಒಡೆದಿರುವೀ ಕನ್ನಡಿ ಬಿರುಕಿನ ಗೆರೆಗೆರೆಯೇ
ಗಡಿರೇಖೆಯ ಗುರುತು,
ಕಾಣುವುದೆಂತೀ ಸಮಗ್ರ ಮಾನವ್ಯದ ಮುಖವಿದರೊಳು
ಬರಿ ವಿಕೃತಿಯ ಹೊರತು?