. ಆಧುನಿಕತೆಯ ಪ್ರಭಾವ ಬದಲಾವಣೆಗಳು :

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮಲ್ಲಿ ಅನೇಕ ಸಾಮಾಜಿಕ ಬದಲಾವಣೆಗಳಾಗಿದ್ದು, ಬುಡಕಟ್ಟು ಜನರಿಗೆ ಹಾಗೂ ದಲಿತರಿಗೆ ಶಿಕ್ಷಣಾವಕಾಶಗಳು ಲಭ್ಯವಾದವು. ವೃತ್ತಿ ಕಸುಬುಗಳನ್ನು ಆಧರಿಸಿ ಬದುಕುತ್ತಿರುವ ದುಡಿಯುವ ವರ್ಗದ ಜನರಿಗೆ ಕೈಗಾರೀಕರಣದಿಂದ ಸಾಕಷ್ಟು ಪೆಟ್ಟು ಬಿತ್ತು. ಈಗಲೂ ಬೀಳುತ್ತಿದೆ. ಹಿಂದೆ ಮೇನೆ ಹೊರುತ್ತ, ಕೆರೆ, ಬಾವಿ ತೋಡುತ್ತ, ಗಣಿಗಾರಿಕೆಯಲ್ಲಿ ಕೌಶಲ್ಯ ತೋರುತ್ತ ಉಪಜೀವನ ನಡೆಸುವ ಇವರಿಗೆ ಹಠಾತ್ತನೆ ಎದುರಾಧ ಯಾಂತ್ರೀಕರಣವು ಕಂಗಾಲಾಗಿಸಿತು. ಪರ್ಯಾಯ ವೃತ್ತಿಗಳನ್ನು ಯಾವ ಭೇದವಿಲ್ಲದೆ ಒಪ್ಪಿಕೊಂಡು ಮಾಡಬೇಕಾಯಿತು. ಮೈಸೂರು ವಿಭಾಗದಲ್ಲಿ ಈ ಜನರು ತಾತ್ಕಾಲಿಕವಾಗಿ ಪೌರಕಾರ್ಮಿಕರಾಗಿ ದುಡಿತಕ್ಕೆ ನಿಂತು ರಸ್ತೆ ಗುಡಿಸುವವರಾದರು. ಹೆಣ್ಣು ಮಕ್ಕಳು ಕಸ – ಮುಸುರೆ ಮಾಡಿ ಬದುಕಲಾರಂಭಿಸಿದರು.ಕಾಲಕ್ರಮೇಣ ಜಾತಿಯಾಧಾರಿತ ಮೀಸಲಾತಿಯಿಂದ ಉದ್ಯೋಗ ಗಳಿಸುವ ಉದ್ದೇಶದಿಂದ ಹಾಗೂ ಸರ್ಕಾರ ಕಲ್ಪಿಸುವ ಸವಲತ್ತುಗಳನ್ನು ಪಡೆಯಲು ಒಡ್ಡ ಜನಾಂಗವು ಒಂದು ಗೂಡಿ ಜಾತಿಯಾಧಾರಿತ ಸಮ್ಮೇಳನಗಳನ್ನು ಮಾಡಿತು. ರಾಜ್ಯಗಳ ಪುನರ್ ವಿಂಗಡನೆಯ ನಂತರ ರಾಜ್ಯದ ಕೆಲವು ಭಾಗಗಳಲ್ಲಿ ಮೈಸೂರು ಭಾಗದಲ್ಲಿ  ಇವರನ್ನು ಪರಿಶಿಷ್ಟ ಜಾತಿಯೆಂದು ಪರಿಗಣಿಸಿದರೆ ಇನ್ನು ಕೆಲವು ಭಾಗಗಳಲ್ಲಿ ಹಾಗೆ ಪರಿಗಣಿಸಲಿಲ್ಲ. ಆಗ ಕೆಲವು ನಾಯಕರು ಶಹಬಾದಿನ ಗುರಪ್ಪ ಸೂಡಿ, ಅಲಕುಂಠ ಮೊದಲಾದವರು ತಮ್ಮ ಜನರಲ್ಲಿ ಜಾಗೃತಿಯನ್ನುಂಟು ಮಾಡಿ, ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ವಿಷಯ ಮನವರಿಕೆ ಮಾಡಿದರು. ೧೯೫೮ರಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಕರ್ನಾಟಕದ ಎಲ್ಲ ಭಾಗಗಳಲ್ಲಿರುವ ಬೋವಿ ಜನಾಂಗಕ್ಕೆ ಸರ್ಕಾರದ ಉಚಿತ ಸೌಲಭ್ಯ ಸಿಗುವಂತೆ ಮಾಡಿದರು. ಸುಮಾರು ೩೦ ವರ್ಷಗಳ ಹೋರಾಟದ ಫಲವಾಗಿ ಒಡ್ಡ ಬೋವಿ ಜನಾಂಗದವರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಲು ಸಾಧ್ಯವಾಯಿತು. ಜಾತಿ ಹೆಸರಿನ ಕುರಿತು ಸಾಕಷ್ಟು ಗೊಂದಲವಿದ್ದು ತೊಂದರೆಯಾದಾಗ ಸುಪ್ರೀಂ ಕೋರ್ಟು ಒಡ್ಡ ಮತ್ತು ಬೋವಿ ಒಂದೇ ಜಾತಿಯ ಪರ್ಯಾಯ ಹೆಸರುಗಳೆಂದು ಆದೇಶ ನೀಡಿತು. ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿದ ನಂತರ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಈ ಜನರು ಇಂದಿಗೂ ಉನ್ನತ ದರ್ಜೆಯ ಅಧಿಕಾರಿಗಳಾಗುವ ಪ್ರಯತ್ನದಲ್ಲೇ ಇದ್ದಾರೆ. ಬೆರಳೆಣಿಕೆಯ ಜನರು ಅತ್ಯುನ್ನತ ಹುದ್ದೆ ಪಡೆಯಲು ಸಾಧ್ಯವಾಗಿದೆ. ಶತಮಾನಗಳಿಂದ ಶೋಷಿತ ಜನಾಂಗದಲ್ಲಿ ಒಂದಾಗಿರುವ ಬೋವಿ ಒಡ್ಡರಿಗೆ ಸಿಗಬೇಕಾದ ಸಾಮಾಜಿಕ  ನ್ಯಾಯ ದಕ್ಕಿಲ್ಲವೆಂದೇ ಹೇಳಬಹುದು. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಕ್ರಮ ಸಂಖ್ಯೆ ೨೩ರಲ್ಲಿ ಬೋವಿ, ಓಡ್, ಒಡ್ಡೆ, ಒಡ್ಡರ್, ವಡ್ಡರ್ ಎಲ್ಲವೂ ಒಂದೇ ಎಂದು ಗುರುತಿಸಲಾಗಿದೆ.

ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ, ಕುಲಕಸುಬನ್ನು ಕಳೆದುಕೊಂಡು ನಿರ್ಗತಿಕರಾಗಿರುವ ಇವರು ಹೊಲಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಯಂತ್ರರಾಕ್ಷಸನ ಹಾವಳಿಯಿಂದಾಗಿ ಪಟ್ಟಣಗಳಲ್ಲಿ ಕೆಲಸವಿಲ್ಲದೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಮುಂಬೈ, ಪುಣೆಯಂಥ ಊರುಗಳಲ್ಲಿ ಗೌಂಡಿ ಕೆಲಸಕ್ಕೆ (ಮನೆಕಟ್ಟುವುದು) ಹೋಗಿರುವವರ ಸಂಖ್ಯೆ ಹೇರಳವಾಗಿದೆ. ಒಂದಿಷ್ಟು ಅನುಕೂಲ ಹೊಂದಿದವರು ಇಟ್ಟಂಗಿ ಭಟ್ಟಿಗಳಲ್ಲಿ ದುಡಿಯುತ್ತ ಜೀವಿಸುತ್ತಿರುವರು.

ಇಟ್ಟಂಗಿಯ ಅತ್ಯಧಿಕ ಬಳಕೆಯು ಕಲ್ಲು ಕಡೆಯುವ ಕೈಗಳಿಗೆ ಕೆಲಸ ಕಸಿದುಕೊಂಡಿದೆ. ಅಡಿಗೆ ಮನೆಯಲ್ಲಿ ಬಳಕೆಯಾಗುವ ರೊಟ್ಟಿಕಲ್ಲು ಒರಳು (ಒಳ್ಳು) ಕಲಬತ್ತು, ಬೀಸುವ ಕಲ್ಲುಗಳ ವೇಗಕ್ಕೆ ಜಾಗವನ್ನು ಮಿಕ್ಸರ್, ಗ್ರೈಂಡರ್ ಆಕ್ರಮಿಸಿಕೊಂಡಿವೆ. ವಿದ್ಯುತ್ ಯಂತ್ರಗಳ ವೇಗಕ್ಕೆ ಸಮನಾಗಿ ನಿಲ್ಲದ ಈ ಪಾರಂಪರಿಕ ವಸ್ತುಗಳನ್ನು ಆಧುನಿಕ ಬದುಕಿನ ಶೈಲಿಗೆ ಹೊಂದಿಕೊಳ್ಳುವ ಮಹಿಳೆಯರು ಇಷ್ಟವಿದ್ದರೂ ಬಳಸಲಾಗುತ್ತಿಲ್ಲ. ಕೇವಲ ಸಂಪ್ರದಾಯಕ್ಕೆಂಬಂತೆ ಪೂಜೆಗೊಳ್ಳಲು ಬೆರಳೆಣಿಕೆಯಷ್ಟು ವಸ್ತುಗಳು ಮಾರಾಟವಾಗುತ್ತಲಿವೆ. ಆದರೂ ಹಿಟ್ಟು ಮಾಡುವ ವಿದ್ಯುತ್ ಗಿರಣಿಗಳಲ್ಲಿಯ ಕಲ್ಲು ಕಟೆಯಲು ಒಂದಷ್ಟು ಜನರಿಗೆ ಕೆಲಸ ಸಿಗುತ್ತಿದೆ. ಮನೆಗೊಂದು ಬೀಸುವ ಕಲ್ಲಿನ ಬದಲಿಗೆ ಓಣಿಗೊಂದು ಗಿರಣಿಯಾದಾಗ ಈ ಸಮಾಧಾನ ನೆಪ ಮಾತ್ರಕ್ಕೆ ಎಂದುಕೊಳ್ಳಬೇಕು.

ಛಾವಣಿ ಕಲ್ಲು ಮೂಲೆಗಳನ್ನೆಲ್ಲ ಕಾಂಕ್ರೀಟ್ ನಲ್ಲಿ ಮಾಡುತ್ತಿದ್ದು ಕಲ್ಲುವಡ್ಡರ ಸ್ಥಿತಿ ಚಿಂತಾಜನಕವಾಗಿದೆ. ನೆಲಕ್ಕೆ ಹಾಸುವ ಬಂಡೆಗಳನ್ನು ಯಂತ್ರಗಳಿಂದಲೇ ಪಾಲಿಶ್ ಮಾಡಿ ಮಿಂಚಿಸುತ್ತಿರುವಾಗ ಒಡ್ಡರ ಬದುಕು ಎಲ್ಲಿಂದ ಮಿಂಚಬಹುದು? ರಸ್ತೆ – ಕಾಲುವೆ ಸೇತುವೆಗಳಿಗೆ ಬಂಡೆ ಕಲ್ಲು ಒಡೆದು ಜಲ್ಲಿ ಮಾಡಿಕೊಡುತ್ತಿದ್ದರು. ಈಗ ಅದನ್ನು ಯಂತ್ರಗಳೇ ನುಂಗಿಬಿಟ್ಟಿವೆ Crushing machine ಬಂದು ಇವರ ಕೈಗಳಿಗೆ ಕೋಳ ತೊಡಿಸಿದಂತಾಗಿದೆ. ಚಿಕ್ಕ (ಅಡ್ಡ) ರಸ್ತೆಗಳು ಸಿಮೆಂಟ್ ಕಾಂಕ್ರಿಟ್ ನಿಂದ ನಿರ್ಮಿಸಲಾಗುತ್ತಿರುವುದು ಇನ್ನೊಂದು ಆವಾಂತರ, ಜಾಗತೀಕರಣದ ಹಾವಳಿಯಲ್ಲಿ ಇಂಥ ಅನೇಕ ಕೈಕಸುಬುಗಳು ನಿರ್ನಾಮವಾಗುತ್ತಿದ್ದು. ಇದನ್ನೆಲ್ಲ ಕಂಡೂ ಕಾಣದಂತೆ ಜಾಣ ಕುರುಡರಾಗಿ ಮುನ್ನಡೆಯಬೇಕಾಗಿರುವುದು ವಾಸ್ತವಿಕ ಸತ್ಯವಾಗಿದೆ. ಅನೇಕ ಕಲೆಗಳು, ಕಲಾವಿದರು, ತೊಡಗಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಸೃಷ್ಟಿಸಿದ ಯಾವುದೇ ವಸ್ತುಗಳು ಕಾಣೆಯಾಗುವುದರಲ್ಲಿ ಸಂಶಯವಿಲ್ಲ. ಶಿಲ್ಪಕಲೆಗೂ ಇದೇ ಗತಿ ಒದಗಿದೆ. ಪ್ಲಾಸ್ಟಿಕ್ ಯುಗದಲ್ಲಿ ಅಂಥ ಕಲಾಕೃತಿಗಳ ನಿರ್ಮಾಣ ಮತ್ತು ಅದನ್ನು ಸವಿಯುವ ಸಹೃದಯಂತೆ ಎಲ್ಲವೂ ಕರಗಿಹೋಗುತ್ತಿದೆ.

ಈ ಎಲ್ಲ ಬದಲಾವಣೆಗಳಲ್ಲಿ ಮಹಿಳೆಗೆ ಸಿಗುವ ಚೂರು – ಪಾರು ಆರ್ಥಿಕ ಸ್ವಾತಂತ್ರ‍್ಯ ಸುರಕ್ಷತೆ ಎಲ್ಲವೂ ಇಲ್ಲವಾಗುತ್ತಿದೆ. ಕುಟುಂಬದ ಸದಸ್ಯರ ಜೊತೆ ಸೇರಿ ದುಡಿಯುವಲ್ಲಿ ಇರುವ ಮಾನಸಿಕ ನೆಮ್ಮದಿಯೂ ಕಳೆದು ಹೋಗುತ್ತಿದೆ. ಒಂದಿಷ್ಟು ಬುದ್ಧಿವಂತರು ಕೈಗಾರಿಕೆಗಳಲ್ಲಿ ವಿಭಿನ್ನ ಉದ್ಯೋಗ ದೊರಕಿಸಿಕೊಳ್ಳಲು ಪ್ರಯತ್ನಿಸುತ್ತ ಸಾಗಿದ್ದಾರೆ. ತಾಂತ್ರಿಕ ಶಿಕ್ಷಣ ಪಡೆದು ಕೈಗಾರಿಕೆಗಳಲ್ಲಿ ಕಾರ್ಮಿಕರಾಗಿದ್ದಾರೆ.

ಕರ್ನಾಟಕದಲ್ಲಿ ಶರಣರ ಸಮಕಾಲೀನರಾಗಿ ಬಾಳಿದ ಸಿದ್ಧರಾಮ (ವಡ್ಡರ ಸಿದ್ಧರಾಮೇಶ್ವರ)ರ ಪ್ರಭಾವದಿಂದ ಅನೇಕ ಪುರಾಣಗಳನ್ನು, ಕಥೆಗಳನ್ನು ಓದಿ, ತಿಳಿದು, ಧಾರ್ಮಿಕ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿವೆ. ಶರಣರ ಪರಂಪರೆಯ ಮುಂದುವರಿಕೆಯಾಗಿ ಕಾಲಕ್ರಮೆಣ ಅನೇಕ ಪವಾಡ ಪುರುಷರು, ಮಹನೀಯರು ಈ ಜನಾಂಗದಲ್ಲಿ ಹುಟ್ಟಿ ಬಂದಿದ್ದಾರೆ. ಈಗಿನ ಬಾಗಲಕೋಟೆ ಜಿಲ್ಲೆಯ ಕಾರೀಹಳ್ಳದ ದಂಡೆಯಲ್ಲಿ ಶ್ರೀ ಶರಣಬಸವಾಶ್ರಮವಿದೆ. ಈ ಶರಣಬಸವ ಅಪ್ಪಂಗಳು ಇದರ ಪೀಠಾಧಿಪತಿಗಳು. ಈ ಮಠದ ಎರಡನೆಯ ಪೀಠಾಧಿಪತಿಗಳು ಶ್ರೀ ಶರಣಬಸಪ್ಪ ಸ್ವಾಮಿಗಳು ಜಗದ್ಗುರು ಶ್ರೀ ಇಲಕಲ್ ಮಠ ಸ್ವಾಮೀಜಿಯವರಿಂದ ದೀಕ್ಷೆ ಪಡೆದವರು ಸಮಾಜ ಸುಧಾರಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ.

ಆಧುನಿಕತೆಯ ಪ್ರಭಾವದಿಂದ ತಮ್ಮ ಜನಾಂಗದ ಮಹಿಳೆಯರ ವೇಷ ಭೂಷಣದ ಬದಲಾವಣೆಗೆ ನಾಂದಿ ಹಾಡಿದವರು ರಾವ್ ಸಾಹೇಬ ಸತ್ಯಪ್ಪ ಜಮಖಂಡಿ (ಅರಭಾವಿ) ಯವರು. ಸ್ವಾತಂತ್ರ‍್ಯ ಪೂರ್ವದಲ್ಲಿಯೇ ತಮ್ಮ ಹೆಣ್ಣುಮಕ್ಕಳು ಇತರರಂತೆ ಕುಪ್ಪುಸ (ರವಿಕೆ) ತೊಡಬೇಕೆಂದು ಆಶಿಸಿ, ಕೈಗೆ ಬಳೆ ತೊಡಲಿ ಎಂದು ಬಯಸಿ ಕರ್ನಾಟದಲ್ಲಿಯ ಒಡ್ಡರ ಮಹಿಳೆಯರಿಗೆ ಸಾವಿರ ಕುಪ್ಪುಸ, ಸಾವಿರ ಕುಂಕುಮ ಭರಣಿ ಹಾಗೂ ಹಸಿರು ಬಳೆಗಳನ್ನು ಉಚಿತವಾಗಿ ಹಂಚಿದರು. ಮೂಢನಂಬಿಕೆಯುಳ್ಳ ಜನ ಆಗ ಅವರನ್ನು ಸಮಾಜದಿಂದ ಬಹಿಷ್ಕರಿಸಿದ್ದರು. ಹನ್ನೊಂದು ವರ್ಷದ ನಂತರ ತಮ್ಮ ತಪ್ಪನ್ನು ಅರಿತುಕೊಂಡು ಅವರಲ್ಲಿ ಕ್ಷಮೆಯಾಚಿಸಿದರು. ಹೀಗೆ ಬದಲಾವಣೆಯು ಅನೇಕ ಸಂಗರ್ಷಗಳಿಂದ ನಿಧಾನವಾಗಿ ಸಾಗಿದೆ. ೧೯೮೧ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಒಡ್ಡ ಜನರಲ್ಲಿ ೩೧೧.೫೮೦ ಪುರುಷರು ಹಾಗೂ ೨೯೭.೪೦೨ ಮಹಿಳೆಯರು ಸೇರಿ ಒಟ್ಟು ೬೦೭.೯೮೭ ಜನಸಂಖ್ಯೆ ಇದೆಯೆಂದು ಅಂದಾಜಿಸಲಾಗಿದೆ. ಪುರುಷರು ಸಾಕ್ಷರತೆ ೨೬.೯% ಇದ್ದರೆ, ಮಹಿಳೆಯರು ೯^% ಸಾಕ್ಷರರು. ಒಟ್ಟು ೧೮% ಸುಶಿಕ್ಷಿತರಿದ್ದರೆಂದು ಭಾವಿಸಲಾಗಿದೆ. ಈ ಸಂಖ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯತ್ಯಾಸವಾಗಿರಲು ಸಾಧ್ಯವಿದೆ.

೬. ಪ್ರಸ್ತುತ ಸಮಾಜದಲ್ಲಿ ಒಡ್ಡ ಜನಾಂಗದ ಮಹಿಳೆಯರು – ಸಾಧನೆ :

೧. ಶ್ರೀಮತಿ ಶಕುಂತಲಾ ಚೌಗುರೆ (ಮಾಜಿ ಶಾಸಕಿ, ಚಿಕ್ಕೋಡಿ)

ಕರ್ನಾಟಕದಲ್ಲಿಯ ಬೋವಿ (ವಡ್ಡರ) ಸಮಾಜದಲ್ಲಿ ಶಾಸಕಿಯಾದ ಮೊಟ್ಟಮೊದಲ ಮಹಿಳೆ. ಇವರು ಹುಬ್ಬಳ್ಳಿಯಲ್ಲಿ ಪ್ರೌಢಶಿಕ್ಷಣ ಪಡೆದವರು. ಚಿಕ್ಕೋಡಿ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸಿ, ಗೆದ್ದು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅಖಿಲ ಭಾರತ ಒಡ್ಡರ (ಬೋವಿ) ಸಂಗದ ಸಂಸ್ಥಾಪಕ ಸದಸ್ಯರು ಹಾಗೂ ಕಾರ್ಯದರ್ಶಿಗಳು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರು, ಚಿಕ್ಕೋಡಿ ಶಿಕ್ಷಣ ಮಹಾವಿದ್ಯಾಲಯ ನಡೆಸುವ ಚೌಸನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ದಲಿತರ ಏಳಿಗೆಗಾಗಿ, ಅನೇಕ ಸಾಮಾಜಿಕ ಕಲ್ಯಾಣಕಾರಿ ಕೆಲಸದಲ್ಲಿ ತೊಡಗಿರುವ ಇವರು ಸಾಮಾಜಿಕ ಕಳಕಳಿಯುಳ್ಳ ಜವಾಬ್ದಾರಿಯುತ ಮಹಿಳೆಯಾಗಿದ್ದಾರೆ.

೨. ಶ್ರೀಮತಿ ದುರಗಮ್ಮ ಮಾಜಿ ಸದಸ್ಯೆ , ಬಳ್ಳಾರಿ ನಗರಸಭೆ, ಬಳ್ಳಾರಿ

೩. ಶ್ರೀಮತಿ ಶಾಂತಾಬಾಯಿ ಉರ್ಫ ಶಾರವ್ವ ಹನುಮಂತಪ್ಪ ಗಾಡಿವಡ್ಡಪ್ಪರ. ಇವರು ಮಂಡಳ ಪಂಚಾಯಿತ್ ಸದಸ್ಯರು, ಠಾಣಾ ಹತ್ತರಗಿ, ತಾ. ಹುಕ್ಕೇರಿ,

೪.  ಪ್ರೊ. ಕಸ್ತೂರಿ ನಂದವಾಡಗಿ, ಕಾಲೇಜು ಅಧ್ಯಾಪಕಿ.

೫. ಶ್ರೀಮತಿ ವಿ.ಎಸ್. ಪದ್ಮಾವತಿ – ಉಷಾ ಮಿನರಲ್ ಅಂಡ್ ಗ್ರಾನೈಟ್ಸ್, ಬಳ್ಳಾರಿ

೬. ಶ್ರೀಮತಿ ವೆಂಕಮ್ಮ ಹ. ಹಿರೇಮುರಾಳ, ಗ್ರಾಮಪಂಚಾಯ್ತಿ ಸದಸ್ಯೆ ಮುದ್ದೇಬಿಹಾಳ ತಾ, ಬಿಜಾಪುರ ಜಿಲ್ಲೆ

೭. ಶ್ರೀಮತಿ ನಿರ್ಮಲಾ ವೆಂಕಟೇಶ, ಎಂ.ಎಲ್.ಸಿ.

೮. ಶ್ರೀಮತಿ ಮಂಗಮ್ಮ ಮುನಿಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಕೋಲಾರ.

೯.ಶ್ರೀಮತಿ ನಿರ್ಮಲಾ – ಕಾರ್ಪೋರೇಟ್ (ಮಾಜಿ ನಗರಸಭಾ ಸದಸ್ಯೆ)  ಬ್ರಹ್ಮಪೂರ, ಒಡ್ಡರ ಗಲ್ಲಿ, ಗುಲಬರ್ಗಾ.

೧೦. ಶ್ರೀಮತಿ ದ್ಯಾಮಪ್ಪ, ಅಫಲಜಲ್ ಪುರ ಪಟ್ಟಣ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ

೧೧. ಡಾ. ಭಾಗ್ಯಮ್ಮ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾದ್ಯಾಪಕಿ, ಗುಲಬರ್ಗ.

೧೨. ಡಾ. ಸುಲೋಚನಾ ಭೀಮಸೇನ – ಉಪನ್ಯಾಸಕಿ, ಗುಲಬರ್ಗಾ ವಿಶ್ವವಿದ್ಯಾಲಯ.

೧೩. ಪ್ರೊ. ಕಮಲಮ್ಮ ಹೆಚ್ಚುವರಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು

೧೪. ಶ್ರೀಮತಿ ಜಿ. ಭಾಗ್ಯಲಕ್ಷ್ಮಿ  ದೋಣೀಮಲೈ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

೧೫. ಶ್ರೀಮತಿ ಕೌಶಲ್ಯಾದೀಪ, ಇಂಜಿನಿಯರ‍್ ಬಿ.ಇ.ಎಲ್, ಬೆಂಗಳೂರು.

ಇವರುಗಳಲ್ಲದೆ ಅನೇಕ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯಾಗಿ ಮುಖ್ಯೋಪಾಧ್ಯಾಯರಾಗಿ, ಎಲ್.ಐ.ಸಿ.ಯಲ್ಲಿ ಆಡಳಿತಾಧಿಕಾರಿಗಳಾಗಿ ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಶಿಕ್ಷಿತರಾಗಿ ತಮ್ಮ ಕುಟುಂಬ ಮತ್ತು ಸಮಾಜವನ್ನು ಉನ್ನತಿಯೆಡೆಗೆ ಕರೆದೊಯ್ಯುವಲ್ಲಿ ಭಾಗಿಗಳಾಗಿ ದುಡಿಯುತ್ತಿರುವ ಅವಕಾಶವೇ ಇವರಿಗೆ ದೊರೆತ ಸನ್ಮಾನ, ಗೌರವ ಎಂದರೆ ತಪ್ಪಾಗಲಿಕ್ಕಿಲ್ಲ.

ಸಮಾರೋಪ :

ಸಂಸ್ಕೃತಿಯನ್ನು ಅಧ್ಯಯನ ಮಾಡಲು ಹೊರಟಾಗ ಒಟ್ಟಾರೆ ಸಂಸ್ಕೃತಿಯ ಅರ್ಥಗಳನ್ನು ಗ್ರಹಿಸಿ ಮುಂದುವರಿಯಬೇಕಾಗುತ್ತದೆ. ಹಲವಾರು ಅಧ್ಯಯನ ಶಾಖೆಗಳಲ್ಲಿ ಹತ್ತಾರು ಬಗೆಯ ವ್ಯಾಖ್ಯೆಗಳನ್ನು ಕೊಡಲಾಗಿದೆ. ಸಾಮಾಜಿಕ, ಮಾನಸಿಕ, ವೈಚಾರಿಕ ಹಿನ್ನೆಲೆಗಳಲ್ಲಿ ಸಂಸ್ಕೃತಿಯ ವ್ಯಾಖ್ಯಾನಗಳು ನಿರಂತರವಾಗಿ ಸೃಷ್ಟಿಯಾಗುತ್ತಲೇ ಇವೆ. ಎಲ್ಲ ಜ್ಞಾನ ಶಿಸ್ತುಗಳ ಹಲವು ಆಯಾಮಗಳ ನೆಲೆಯಲ್ಲಿ ವಿದ್ವಾಂಸರು ಗುರುತಿಸುತ್ತ ಬಂದಿರುವ ಸಂಸ್ಕೃತಿಯು ಗುಣಲಕ್ಷಣಗಳನ್ನು ಈ ಒಂದು ವ್ಯಾಖ್ಯಾನದಲ್ಲಿ ಕಂಡುಕೊಳ್ಳಬಹುದು. ಸಂಸ್ಕೃತಿ ಎಂದರೆ ಜೀವನ ಕ್ರಮ, ಒಂದು ಸಭ್ಯ ಸಂಸ್ಕಾರ, ಮೌಲ್ಯಪ್ರಜ್ಞೆ, ಬಹುಶಾಸ್ತ್ರೀಯ ಆಯಾಮಗಳಲ್ಲಿ ಪರಿಶೀಲನೆ, ಸಾಮಾಜಿಕವಾಗಿ ಒಪ್ಪಿತವಾಗುವ ವರ್ತನೆ, ಸಹಜ ಸ್ವಭಾವ ಸಾಹಿತ್ಯ, ಸಂಗೀತ, ನಾಟಕ, ನೃತ್ಯ ಇತ್ಯಾದಿ ಕಲೆಗಳನ್ನು ಕುರಿತ ಚಟುವಟಿಕೆ, ಚರಿತ್ರೆ, ಪರಂಪರೆ ಇತ್ಯಾದಿ (ಸಾಂಸ್ಕೃತಿಕ ಅಧ್ಯಯನ – ರಹಮತ್ ತರಿಕೆರೆ, ಪುಟ ೨) ಈ ಅಂಶಗಳ ಹಿನ್ನೆಲೆಯಲ್ಲಿ ಇದುವರೆಗೆ ಸಂಸ್ಕೃತಿ ಸಂಬಂಧಿತ ಅಧ್ಯಯನಗಳಲ್ಲಿ ಆಯಾ ಜನಾಂಗದ ನಿತ್ಯ ಬದುಕಿನ ರೀತಿ, ಕಷ್ಟ – ಸುಖ, ಅವರಲ್ಲಿ ವಿಶಿಷ್ಟವಾಗಿರುವ ಹಸೆ, ಕಲೆ, ಸಾಹಿತ್ಯ, ಕುಣಿತ, ಊಟ, ಉಡುಗೆ, ದೈವ ನಂಬಿಕೆ, ಆಚರಣೆ, ಹಬ್ಬ-ಹರಿದಿನ, ಪುರುಷ-ಮಹಿಳೆಯ ನಿಗದಿತ ಜೀವನ ಮೌಲ್ಯಗಳು (ಮೊದಲಾದ ಸೂಕ್ಷ್ಮ ವಿಚಾರಗಳು ಗುರುತಿಸಲ್ಪಟ್ಟಿವೆ.)

ಒಂದು ಜನಾಂಗದಲ್ಲಿ ಮಹಿಳೆಯ ಸ್ಥಾನಮಾನವನ್ನು ಅವಳ ಸ್ಥಿತಿಗತಿಯನ್ನು ಅವಲೋಕಿಸುವಾಗ ಆ ಜನಾಂಗದ ಒಟ್ಟು ಸ್ವರೂಪವನ್ನು ಮತ್ತು ಅದರೊಳಗೆ ಜೀವ ತುಂಬುವ ಹೆಣ್ಣಿನ ಜೀವನ ಕ್ರಮವನ್ನು ಹಂತ – ಹಂತವಾಗಿ ಗುರುತಿಸುತ್ತ ಹೋಗುವುದು ಅನಿವಾರ್ಯ ಎಂದು ಭಾವಿಸಿ ಬೋವಿ (ಒಡ್ಡ) ಜನಾಂಗದ ಮಹಿಳೆಯ ಕುರಿತ ಈ ಲೇಖನದಲ್ಲಿ ಈ ಎಲ್ಲ ಅಂಶಗಳೆಡೆಗೆ ಗಮನ ಹರಿಸಲಾಗಿದೆ. ಶಿಲ್ಪ ಕಲೆಯಲ್ಲಿ ಮಹಿಳೆಯರ ಪಾತ್ರವಿರುವ ಮಾಹಿತಿ ಲಭ್ಯವಿಲ್ಲದ್ದರಿಂದ ಆ ವಿಷಯದ ಬಗ್ಗೆ ಪ್ರಸ್ತಾಪ ಮಾಡಿರುವುದಿಲ್ಲ.

ಅನುಬಂಧ :

ರಿವಾಯತ ಪದ

ಬೀಬಿ ಫಾತಿಮಾನ ಕತಿ ಕೇಳರಿ ಕುಂತ
ಬಡತನ ಕಾಡ್ತಿತಿ ಅವರೀಗ ಇಪರೀತ
ಒಂದೇ ಸೀರಿ ಉಡಿತಿದ್ಲು ಇಲ್ಲ ಅದ್ರ ಹೊರಕ
ಅದಕ ಹೊಲಿಗಿ ತ್ಯಾಪಿ ಮುನ್ನೂರರವತ್ತ
ನೆರೆಮನಿ ಮುದುಕೀದು ಸೂಜಿ, ಬೇಕಿತ್ತು
ಕಾಲಿಗಿ ಬಿದಿ ಮಾಡಿ ಇಟ್ಟಿದ ಭಗವಂತ
ಬೀಬಿ ಫಾತಿಮಾನ ತಂದೆಯ ಗುರುತ
ನಬಿಸಾಹೇಬ ಶೃಣರು ಅಲ್ಲಾನ ಭಕ್ತ
ಅಂಥವರ ಮಗಳೀಗಿ ಬಡತನ ಕಾಡ್ತಿತ್ತ
ಬಡತನ ಮರತಾತ್ರೀ ಸ್ಮರಣ್ಯಾಗ ಸತ್ತ || ಬೀಬಿ ಫಾತಿಮಾನ ||

ಬೀಬಿ ಫಾತಿಮಾನ ಪುರುಷರ ಗುರುತ
ಮೌಲಾಲಿ ಶಿವನುಲಿ ದೇಶಕ ಸಮರಂತ
ಅಂಥವರ ಮಡದೀನ ಬಡತನ ಕಾಡ್ತಿತ್ತ
ಇಂಥ ಬಂಧನದಾಗ ಮರಣ ಬಂದಿತ್ತ
ತಲಿಉಂಬ ನಿಂತಾರ‍್ರಿ ಬಂದು ಶಿವಧೂತ
ಮೌಲಾಲಿ ಮಡದೀನ ನೋಡತಾರ‍್ರಿ ನಿಂತ
ಜೀವಕ ಬಿದ್ದೇವರಿ ಇದರಾಗದ್ಭುತ
ಬಿಡುವಾಗ ಬಿಡ ಬ್ಯಾಡ ಅಳುತದನಿ ಬಂತ
ಕೈಲಾಸಕ ಹೋಗತಾದ್ರಿ ಫಾತಿಮಾನ ಮಾತ
ಜೀವ ಬಿಟ್ಟಾಳಪ್ಪ ಮಾತಾಡಕೋತ
ಬಂದಂತ ಬೀಗರೆಲ್ಲ ದುಃಖ ಮಾಡುತ

ಹಸನ ಹುಸೇನ ಸಾಬರು ಬರತಾರಳಕೋತ
ಅಳಬಾರದು ಕುಂತು ಮಯ್ಯತ್ತಿನ ಸುತ್ತ
ಕಣ್ಣೀರ ತಗೀಬಾರದು ಶಾಸ್ತ್ರದಾಗಿನ ಮಾತ
ಎಲ್ಲಾರು ಕೂಡಿ ನಾವು ಮಾಡಣು ಮಯ್ಯತ
ಅಳದು ಬಳದು ತಯ್ಯಾರ ಮಾಡ್ಯಾರ‍್ರಿ ತುರತ
ಕಲ್ಮಾ ಬರಹ ಓದಿ ಹೊತ್ತಾರ ತಾಬೂತ
ಓದುತ್ತ ಹೊಂಟಾರೀ ಕಲ್ಮಾ ಚೌರತ
ಗೋರಿಯ ಸೊನಿ ಒಯ್ದು ಇಳಸ್ಯಾರ ತಾಬೂತ
ನಮಾಜ ಮುಗಸ್ಯಾರ‍್ರೀ ಶಾಸ್ತ್ರದಾನ ಮಾತ
ಗೋರ‍್ಯಾಗ ಇಳಸ್ಯಾರ‍್ರೀ ತಾಯೀ ಮಯ್ಯುತ
’ಸುಲಹು ಅಲ್ಲಾಹೂ ಓದಿ ಮಣ್ಣು ಕೊಟ್ಟಾರ ತುರತ
ಗೋರಿಗೆ ಮೆಹರ ಮಾಢಿ ಮಂತ್ರ ಓದುತ
ಹುಡಗಿ ಹೊಂಟಾಳಪ್ಪ ಪಾದ ಎಣಿಸುತ್ತ
ಮಂತ್ರ ಓದ್ಯಾರ‍್ರೀ ನಮಗ ಕರಕೋರಿ ಅಂತ
ಕೈಲಾಸಕ ಕರಕೊಂಡಾರ ಅವರೀಗಿ ಭಗವಂತ
ಕಂದನ ಕವತುಕ ಕೇಳಾರ‍್ರಿ ಕುಂತ
ಸ್ವರ್ಗದಿಂದ ಖಳವ್ಯಾರ‍್ರೀ ಶಿವನ ಅವಧೂತ
ಮಾಯದಿಂದ ಬಯ್ದಾನ್ರೀ ತಾಯೀಗೆ ಸ್ವಂತ
ತಾಯೀಗೆ ತಿಳಿಯಲ್ದೆ ಬಯ್ದಾನೆ ಶಿವ ಧೂತ
ಸ್ವರ್ಗದ ಬಾಗಿಲ ಮುಂದ ಇಳಸ್ಯಾನ ತಾಬೂತ
ಬಾಗಿಲ ತೆರಿವಲ್ರೀ ಆಗ್ಯದ ಹರಕತ
ಖಾತೂನಗ ಕೇಳತಾರ‍್ರೀ ನಾಲ್ಕು ಶಿವ ಧೂತ
ಬಾಗಿಲ ತೆರಿವಲ್ರೀ ಎಡತಾಕ ಹೊತ್ತ
ಪರದೀಯ ಒಳಗಿಂದು ಹೇಳತಾನ ಭಗವಂತ
ಬಾಕಿಯ ಮಾತು ಗುನ್ಹಾ ಇತ್ತಂತ
ಖಾತೂನಗ ಕೇಳಾರಿ ಗುನ್ನಾದ ಮಾತ
ಅಲ್ಲಾ ಸಾಹೇಬರ ಹೇಳಾದು ಖರೇ ಆದ ಮಾತ
ಬೀಬಿ ಫಾತೀಮಾಗ ತರಕೀಗೆ ಬಂದೆತ್ತ
ಲ್ಲಾ ಸಾಹೇಬರ ಹೇಳಾದು ಖರೇ ಆದ ಮಾತ
ನೆರಿಮನಿ ಮುದಕೀದು ಸೂಜಿ ನೆಲವೀಗಿ ಉಳೀತ
ನೆಲವೀಗೆ ಚುಚ್ಚೀನಿ ಕೊಟ್ಟಿಲ್ಲರಿ ಪರತ ||ಬೀಬಿ||
ಬಡತನ ಕಾಡಾದು ಸರ್ವರಿಗ ಶರತ
ದೇನ್ಯಾಸಗಿದ್ದೇವ ಹೊಟ್ಟಿಗಿಲ್ರಿ ತುರತ
ಬೀಬಿ ಫಾತೀಮಾನ ಕತಿ ಕೇಳರಿ ಕುಂತ
ತುಗೊಂಡಿದ್ದು ಗಂಟ ಕೊಡುದಿಲ್ಲರಿ ಪರತ
ನಾಳಿಂದು ಏನ್ ಗತಿ ಮುಂದಿನ ಮಾತ
ಸೂಜಿ ದಾರ ಇದರ ಕವಡಿ ಕಿಮ್ಮತ್ತ
ಬೀಬಿ ಫಾತಿಮಾದು ಏನ್ ಗತಿ ಆಯ್ತು
ಇದ ತಂಗಿ ಊರಾಗ ಈ ರೀವಾಯಿತ
ಜೂಳೈ ತಿಂಗಳದಾಗ ಮುಗದಾದ್ರಿ ಮಾತ
ಹಸನ ಹುಸೆನಿ ಸಾಬರು ದೇಶಕ ಸಮರಂತ
ವರಶೀಗಿ ಮಾಡತೇವರಿ ಮೊಹರಂ ವಂದತ
ನಿತ್ಯ ನೇಮದಲ್ಲಿ ಬೆಳಕಿಂದೆ ಜ್ಯೋತತ
ಊದ ಸಕ್ಕರಿ ಹಚ್ಚತಾರ‍್ರೀ ತಪ್ಪಲಾರದ ತುರುತ
ಊದ ಸಕ್ಕರಿ ಹೆಚ್ಚತಾರ‍್ರೀ ತಪ್ಪಲಾಋದ ತುರುತ