ಮೊಹರಂ ಪದ ಎರಡು :

ಒಂದೂರಿನಲ್ಲಿ ಗಂಡ – ಹೆಂಡತಿ ಇಬ್ಬರು ಜೀವಿಸುತ್ತಿರುವುದನ್ನು ಸೃಷ್ಟಿಕರ್ತ ಭಗವಂತ ಮೇಲೆ ಕುಳಿತು ನೋಡುತ್ತಿದ್ದ ಪತಿರಾಯನ ವರ್ತನೆ ಹಾಗೂ ಭಕ್ತಿಗೆ ಮೆಚ್ಚಿಕೊಂಡಿದ್ದ ಹೆಂಡತಿಯ ಕೆಟ್ಟ ಗುಣ ಸ್ವಭಾವವನ್ನು ಗಮನಿಸುತಲಿದ್ದ. ಯಜಮಾನಿಯಾದ ಹೆಂಡತಿಯ ಮಾತು ಕೇಳುತ್ತ. ಮುಗ್ಧನಾಗಿ ಭಗವಂತನ ಮೇಲೆ ಭಾರ ಹಾಕಿ ಕಾಲ ನೂಕುತ್ತಿದ್ದ. ಗಂಡನಿಂದ ಬೇಸರಗೊಂಡ ಹೆಂಡತಿಗೆ ಹೊರಗಿನ ಆರು ಮಂದಿಯ ಮೇಲೆ ಆಶೆ ಬಂತು. ಗಂಡನನ್ನು ಸಾಯಿಸಬೇಕೆಂದು ವಿಷದ ೬ ಕಡುಬು ತಯಾರಿಸಿದಳು. ಹೊಲದಿಂದ ಬಂದ ಗಂಡ ಇಂದೇನು ವಿಶೇಷ? ಹಬ್ಬ-ಹುಣ್ಣಿಮೆಯಿಲ್ಲ. ಹೂರಣದ ಕಡುಬು ಮಾಡಿದ್ದೇಕೆಂದು ಕೇಳಿದ. ಆಗ ಹೆಂಡತಿಯು ತನ್ನ ತಾಯಿಯನ್ನು ಕರೆತರುವಂತೆ ಹೇಳಿ ಗಂಡನಿಗೆ ಹೊರಗೆ ಕಳಿಸಿದಳು. ನಂತರ ವಕೀಲನಿಗೆ ಹೇಳಿ ಆರು ಮಂದಿಗೆ ರಾತ್ರಿ ಮನೆಗೆ ಬರುವಂತೆ ಆಹ್ವಾನಿಸುವಳು. ಬಾವಿಯ ಬಳಿ ಬಂದು ಸೂಚನೆ ನೀಡಿ, ಕತ್ತಲಾದ ನಂತರ ಸನ್ನೆ ಮಾಡಿ ಅವರನ್ನು ಮನೆಗೆ ಕಳಿಸುತ್ತಾಳೆ. ಕಾಲಲ್ಲಿ ಮುಳ್ಳು ಚುಚ್ಚಿದ್ದರಿಂದ ಅವಳು ಮನೆಗೆ ಬರಲು ತಡವಾಗುತ್ತದೆ. ಅವಳ ದಾರಿ ಕಾಯುತ್ತ ಕುಳಿತ ಆರು ಮಂದಿಯು ವಿಷದ ಕಡುಬುಗಳನ್ನು ನೋಡಿ ಅವು ತಮಗಾಗಿಯೇ ಮಾಡಿದ್ದೆಂದು ಭಾವಿಸಿ ಎಲ್ಲರೂ ತಿನ್ನುತ್ತಾರೆ. ತಕ್ಷಣವೇ ಸಾವನ್ನಪ್ಪುತ್ತಾರೆ. ಮನೆಗೆ ಬಂದು ಅವಳು ಅವರನ್ನೆಬ್ಬಿಸಿದಾಗ ವಿಷಯ ತಿಳಿದು ದುಃಖಿಯಾಗುತ್ತಾಳೆ. ಆಗಲೇ ಬೆಳಗಾಲು ಆರಂಭಿಸಿತ್ತು. ಅಷ್ಟರಲ್ಲಿ ಒಬ್ಬ ಬುಡಬುಡಕ್ಯಾ ಹೆಣವನ್ನು ಚೀಲದಲ್ಲಿ ತುಂಬಿ ಬಾವಿಯೊಳಗೆ ಹಾಕಿ ಬಂದು ಅವಳೆದುರು ನಿಂತ. ಆದರೆ ಅವಳು ಇನ್ನೊಂದು ಹೆಣ ತೋರಿಸಿ, ನೀನು ಹೆಣ ಇಲ್ಲೆ ಬಿಟ್ಟು ಹೋಗಿರುವೆ ಒಯ್ದು ಹಾಕು ಎಂದಾಗ ಮುಗ್ಧತೆಯಿಂದ ಅದನ್ನೂ ಬಿಸಾಕಿ ಬಂದ ಮತ್ತೆ ಹಿಂದಿರುಗಿದಾಗ ಇನ್ನೊಂದು ಹೆಣ ತೋರಿಸಿ, ನೀನು ಹಾಕಿ ಬಂದ ಹೆಣ ಹಾಗೇ ಹಿಂದಿರುಗಿ ಬಂದಿದೆ ಎಂದು ಹೇಳಿ  ಪುನಃ ಕಳುಹಿಸಿದಳು. ಹೀಗೆ ಆರು ಹೆಣಗಳನ್ನು ಬಾವಿಯಲ್ಲಿ ಹಾಕಿಸಿದಳು. ಕೊನೆಯ ಹೆಣ ಹಾಕಿದ ನಂತರ ಅದು ಹೇಗೆ ಎದ್ದು ಬರುತ್ತದೆ. ನೋಡೋಣ ಎಂದು ಅವನು ಬಾವಿ ಕಟ್ಟೆಯ ಬಳಿಯೇ ನಿಂತ. ಆ ಬಾವಿಯ ಮೆಟ್ಟಿಲ ಕಡೆಗೆ ಕುಳಿತು ಬಟ್ಟೆ ತೊಳೆಯುತ್ತಿದ್ದ ಮುಲ್ಲಾ ಲುಂಗಿ ಸುತ್ತಿಕೊಂಡು ಬಾವಿಯಲ್ಲಿ ಏನು ಬಿತ್ತು. ಯಾರು ಬಿಸಾಕಿದರು ಎಂದು ನೋಡಲು ಓಡುತ್ತ ಬಂದ. ಮುಲ್ಲಾ ಓಡುವುದನ್ನು ಕಂಡ ಬುಡಬುಡಕ್ಕಾ ಬಾವಿಯಿಂದ ಹೆಣವೇ ಎದ್ದು ಓಡುತ್ತಿದೆ ಎಂದು ಭಾವಿಸಿ ಬೆನ್ನಟ್ಟಿದ. ಕೊನೆಗೆ ಮುಲ್ಲಾನನ್ನು ಹಿಡಿದು ಗೋಣಿ ಚೀಲದಲ್ಲಿ ಹಾಕಿ ಕಟ್ಟಿ ಬಾವಿಯಲ್ಲಿ ಎಸೆದು ಈಗ ಹೇಗೆ ತಿರುಗಿ ಬರುತ್ತದೆ ನೋಡುವನೆನ್ನುತ ನಿಂತ. ಇನ್ನೊಬ್ಬರ ಮೋಸಕ್ಕೆ ಬಲಿಯಾದ ಮುಗ್ದನೊಬ್ಬ ಅಮಾಯಕನ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಹೆಣ್ಣಿನ ಕುರಿತು ಮೋಸದ ಗುಣ ಸ್ವಭಾವವನ್ನು ಚಿತ್ರಿಸಲಾಗಿದೆ. ಇಂಥ ಸುಮಾರು ಹಾಡುಗಳಲ್ಲಿ ವ್ಯಕ್ತವಾಗಿರುವ ಹೆಣ್ಣಿನ ಚಂಚಲತೆ ಮೋಸ, ದುಷ್ಟ ಸ್ವಭಾವಗಳ ವಿವರಣೆಯಿದ್ದು, ಪುರುಷರ ಹಾಡುಗಳಲ್ಲಿ ಸಹಜವಾಗಿ ವ್ಯವಸ್ಥೆಯೇ ಪ್ರತಿರೂಪವಾಗಿ ಹೊರ ಹೊಮ್ಮಿರುವುದು ಕಂಡು ಬರುತ್ತದೆ. ಹಾಗೆ ಬಣ್ಣಿಸುತ್ತಲೇ ಅವಳ ಜಾಣತನ, ಬೌದ್ಧಿಕ ಸಾಮರ್ಥ್ಯ, ಹಾಸ್ಯ ಪ್ರಜ್ಞೆ ಇವುಗಳನ್ನೂ ವ್ಯಕ್ತಪಡಿಸಿದ್ದಾರೆ. ನೈತಿಕತೆ, ನಿಸ್ವಾರ್ಥತೆ, ಪ್ರಾಮಾಣಿಕತೆ ಮೊದಲಾದ ಮೌಲ್ಯಗಳನ್ನು ರಂಜನೀಯವಾದ ಕಥನದ ಮೂಲಕ, ಹಾಡುಗಾರಿಕೆಯ ಮೂಲಕ ಅಭಿವ್ಯಕ್ತ ಪಡಿಸಿದ್ದಾರೆ.

ನುಡಿಗಟ್ಟುಗಳು  ಗಾದೆ ಮಾತುಗಳು :

ಒಡ್ಡರ ಇರುವಿಕೆಯನ್ನಾಧರಿಸಿ ಅವರನ್ನು ಕುರಿತು ಕೆಲವು ನುಡಿಗಟ್ಟುಗಳು ಬಳಕೆಯಲ್ಲಿವೆ.

ಒಡ್ಡರು ತಮ್ಮ ಗುಡಿಸಲುಗಳನ್ನು ತಲೆಯ ಮೇಲೆ ಹೊತ್ತುಕೊಂಡವರು.

ನಾಗರ ಹಾವಿಗೆ ವಿಷ ಹಲ್ಲಿನಲ್ಲಿದ್ದರೆ ಒಡ್ಡರಿಗೆ ನಾಲಿಗೆಯಲ್ಲಿದೆ (ಭಾಷೆ)

ಬೆಟ್ಟದಂಥ ಸಂಪತ್ತನ್ನು ಸಂಗ್ರಹಿಸಿದರೂ ಅದು ಅವರಿಗೆ ಒಂದು ಹನಿಯಂತೆ.

ಒಡ್ಡನಿಗೆ ಒಂದು ಊರಿಲ್ಲ, ಬೆಳ್ಳಕ್ಕಿಗೆ ಒಂದು ಕೆರೆ ಇಲ್ಲ. (ಒಡ್ಡರ ಅಲೆಮಾರಿ ಜೀವನ ಕ್ರಮವನ್ನು ಆಧರಿಸಿ ಈ ಮಾತನ್ನು ಹೇಳಲಾಗಿದೆ)

ಹೆಣ ಬಿದ್ದರೂ ಹೇಳಿದ ದಿನ ಬರಬೇಕು.

(ಕೊಟ್ಟ ಮಾತನ್ನು ತಪ್ಪ ಬಾರದೆಂಬ ನಿಯಮ ಇಲ್ಲದೆ.)

ಕೆಟ್ಟ ಕಣ್ಣಿಗೆ ಕಲ್ಲು ಸಹ ಕರಗುತ್ತವೆ.

ಶಿಲ್ಪ ಕೆತ್ತನೆಯ ಸಮಯದಲ್ಲಿ ಯಾರಾದರೂ ಕೆಟ್ಟ ದೃಷ್ಟಿ ಹಾಕಿದರೆ ಆ ಕಲ್ಲು ಕರಗಿ ಹೋಗುತ್ತದೆಂಬ ನಂಬಿಕೆ ಇವರಲ್ಲಿದೆ.

ಒಡ್ಡ ಕೂಡಿ ಕೆಟ್ಟ ಡೊಂಬ ಆಗಲಿ ಕೆಟ್ಟ.

(ಅಲೆಮಾರಿಗಳಾದ ಇವರು ಸಂಪತ್ತನ್ನು ಕೂಡಿಸಿದರೆ ಅದನ್ನು ಕೊಳ್ಳೆಹೊಡೆಯಲು ಕಳ್ಳರಿಗೆ ಸುಲಭವಾಗಿತ್ತು. ಇನ್ನೊಂದರ್ಥದಲ್ಲಿ ಒಡ್ಡರು ಕೂಡಿ ಕೊಂಡರೆ ಶಕ್ತಿ ಶಾಲಿಗಳಾಗುತ್ತಾರೆ. ಆಗ ಉಳಿದವರಿಗೆ  ಕೆಟ್ಟದಾಗುತ್ತದೆ ಎಂಬ ಅನಿಸಿಕೆಯಿದೆ.)

ಅಮವಾಸಿ ಒಡ್ಡರಿಗೆ ಸಿಕ್ಕೈತಿ.

(ಅಮಾವಾಸ್ಯೆಯ ದಿನ ಈ ಜನರು ಕಲ್ಲಿನ ಕೆಲಸಕ್ಕೆ ಕೈ ಹಾಕುವುದಿಲ್ಲ. ಹಿಂದೊಮ್ಮೆ ಹಾಗೆ ಮಾಡಿದಾಗ ಆಪಾಯಕ್ಕೆ ಸಿಲುಕಿದ್ದರೆಂದು ಐತಿಹ್ಯವಿದೆ)

ಒಡ್ಡ ಸಂಸ್ಕೃತಿಗೆ ಸಂಬಂಧಿತ ಕಥೆಗಳು ಐತಿಹ್ಯಗಳು:

ಒಮ್ಮೆ ಪಾರ್ವತಿ ಪರಮೇಶ್ವರರು (ಸ್ವಾಮಿ ತಲ್ಲಿ) ವಿಹಾರಕ್ಕಾಗಿ ಭೂಲೋಕಕ್ಕೆ ಬಂದಿರುತ್ತಾರೆ. ಬೇಸಿಗೆಯ ದಿನಗಳಿರುವುದರಿಂದ ನೀರಡಿಕೆಯಾಗುತ್ತದೆ. ಸುತ್ತಲೂ ಎಲ್ಲಿಯೂ ನೀರು ಕಾಣದೇ ಇದ್ದಾಗ ಶಿವ ಪಾರ್ವತಿಯರು ತಮ್ಮ ಮೈಯ ಬೆವರ ಹನಿಯಿಂದ ಒಬ್ಬ ಪುರುಷ ಮತ್ತು ಮಹಿಳೆಯರನ್ನು ಸೃಷ್ಟಿಸಿದರಂತೆ. ಸಡಿಲಿಕೆ, ಗುದ್ದಲಿ, ಬುಟ್ಟಿ ಮೊದಲಾದ ಸಾಮಗ್ರಿಗಳನ್ನು ಒದಗಿಸಿಕೊಟ್ಟು ಬಾವಿ ಅಗೆದು ಕುಡಿಯಲಿಕ್ಕೆ ನೀರು ಪೂರೈಸಬೇಕೆಂದು ಆದೇಶಿಸಿದರು. ತಕ್ಷಣವೇ ಕಾರ‍್ಯರೂಪಕ್ಕಿಳಿದ ಆ ಈರ್ವರೂ ಬಾವಿ ತೋಡಿ ಶಿವ-ಪಾರ್ವತಿಯರ ನೀರಡಿಕೆ ಹಿಂಗಿಸಿದರು. ತೃಪ್ತಗೊಂಡ ದೇವತೆಗಳು ಆ ಇಬ್ಬರಿಗೆ ಶ್ರಮಕ್ಕೆ ಪ್ರತಿಯಾಗಿ ಏನಾದರೂ ಬೇಡಿರೆಂದಾಗ ಅವರು ತಮ್ಮ ಶ್ರಮಕ್ಕೆ ತಕ್ಕುದಲ್ಲದ (ಯೋಗ್ಯವಲ್ಲದ) ಬೇಡಿಕೆಯನ್ನಿಡುತ್ತಾರೆ. ಆಗ ಶಿವ-ಪಾರ್ವತಿ ಬೇಸರದಿಂದ ಶಪಿಸಿ ಅದೃಶ್ಯರಾಗುತ್ತಾರೆ.  ಅಂದಿನಿಂದ ಈ ಜನರು ತಮ್ಮ ಹೊಟ್ಟೆಪಾಡಿಗಾಗಿ ಬಾವಿ-ಕೆರೆಗಳನ್ನು ಅಗೆದು ಬೆವರು ಸುರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೊಂದು ಐತಿಹ್ಯದ ಪ್ರಕಾರ ದೇವರು ಮನುಷ್ಯ ರೂಪದಲ್ಲಿ ಭೂಮಿಯ ಮೇಲೆ ಬದುಕುತ್ತಿರುವಾಗ ಒಡ್ಡರಿಗೆ ಒಂದು ಸಮಾರಂಭದಲ್ಲಿ ಕೆಲಸಕ್ಕೆ ನೇಮಿಸಿದನು ಮತ್ತು ಮೂರು ದಿನಗಳ ಮುಂಗಡ ಸಂಬಳವನ್ನು ಕೊಟ್ಟು ನಿಯಮಿತ ಅವಧಿಯಲ್ಲಿ ಕೆಲಸ ಮುಗಿಸಿಕೊಡುವಂತೆ ಹೇಳಿದನು. ಆದರೆ ಇವರು ಆ ಮಾತಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಕೆಲಸ ಮಾಡಿ ಕೊಡಲಿಲ್ಲ. ಅದಕ್ಕಾಗಿ ಈ ಜನ ದೇವರ ಶಾಪದಿಂದಾಗಿ ಬಡತನದಲ್ಲಿಯೇ ಬದುಕುವುದು ಅನಿವಾರ್ಯವಾಗಿದೆ ಎಂದು ನಂಬುತ್ತಾರೆ.

ಬಳೆ ಕತೆ :

ಒಡ್ಡರ ಮಹಿಳೆಯರು ಎಡಗೈಯಲ್ಲಿ ಮಾತ್ರ ಗಾಜಿನ ಬಳೆಗಳನ್ನು ಧರಿಸುವರು. ಇದಕ್ಕೆ ಕಾರಣವಾಗಿರುವ ಕಥೆ ಹೀಗಿದೆ. ಒಂದು ದಿನ ಬಳೆಗಾರನು ಬಂದು ಬಳೆ ಖರೀದಿಸುವುದಕ್ಕೆ ಒತ್ತಾಯಿಸಿದ. ಇವರು ಖರೀದಿಸಲು ಒಪ್ಪಿ, ಎಡಗೈಗೆ ಬಳೆ ತೊಟ್ಟ ನಂತರ ಅವನು ಹೊರಟೇಬಿಟ್ಟ. ನಿಮ್ಮ ಬಲಗೈಗೆ ಹೊಸ ಬಳೆ ತರುತ್ತೇನೆಂದು ಮಾತು ಕೊಟ್ಟು ಹೋದವರು ಇಂದಿಗೂ ಹಿಂದಿರುಗಿ ಬರಲಿಲ್ಲ. ಅದಕ್ಕಾಗಿ ನಾವು ಬಲಗೈಗೆ ಬಳೆ ಹಾಕುವುದಿಲ್ಲ ಎನ್ನುತ್ತಾರೆ. ಇವತ್ತಿನ ಒಡ್ಡ ಮಹಿಳೆಯರು ಈ ಐತಿಹ್ಯವನ್ನು ತಳ್ಳಿ ಹಾಕಿ, ತಾವು ಕಲ್ಲಿನ ಕೆಲಸ ಮಾಡುವಾಗ ಮೇಲಿಂದ ಮೇಲೆ ಬಳೆ ಒಡೆಯುವುದರಿಂದ ಬಲಗೈಗೆ ಬಳೆ ಹಾಕುವುದಿಲ್ಲ ಅಥವಾ ಆ ಕೈಗೆ ಅಲ್ಯುಮಿನಿಯಂ ಧಾತುವಿನ ಕಡಗ ಹಾಕುತ್ತೇವೆಂದು ಒಪ್ಪಿಕೊಳ್ಳುತ್ತಾರೆ.

ಜಸ್ಮಾ ಕತೆ :

ಗುಜರಾತಿನಲ್ಲಿ ಅರಸ ಜಯಸಿಂಹನು ಸಹಸ್ರಲಿಂಗ ಕೆರೆಯ ನಿರ್ಮಾಣಕ್ಕಾಗಿ ಒಡ್ಡ ಜನರಿಗೆ ಆದೇಶಿಸಿರುತ್ತಾನೆ. ಕೆರೆ ನಿರ್ಮಾಣದ ವೀಕ್ಷಣೆಗೆ ಬಂದ ಜಯಸಿಂಹನು ಒಡ್ಡರ ಯುವತಿ ’ಜಸ್ಮಾ’ಳ ಮೋಹಕ ಸೌಂದರ‍್ಯಕ್ಕೆ ಮಾರು ಹೋಗುತ್ತಾನೆ. ಅವಳನ್ನು ತನ್ನವಳಾಗಿಸಲು ಪ್ರಯತ್ನಿಸುತ್ತಾನೆ. ಆದರೆ ಇದಕ್ಕೊಪ್ಪದ ಜಸ್ಮಾ ಶಾಪ ಕೊಟ್ಟು ಆತ್ಮಹತ್ಯೆ   ಮಾಡಿಕೊಳ್ಳುತ್ತಾಳೆ. ತಮ್ಮ ಜನಾಂಗದಲ್ಲಿ ಸುಂದರ ಯುವತಿಯರು ಹುಟ್ಟಬಾರದೆಂಬ ಅವಳ ಶಾಪ ಇತಿಹಾಸ ಪ್ರಸಿದ್ಧವಾಗಿದೆ ಎಂದು ಹೇಳಲಾಗುತ್ತದೆ. ಈ ಕಾರಣವಾಗಿ ಒಡ್ಡರಲ್ಲಿ ಸುಂದರ ಮಹಿಳೆಯರು ಇಲ್ಲವೆಂದು ಭಾವಿಸಲಾಗಿದೆ.

ಬಾಲನಾಗಮ್ಮನ ಕತೆ :

ಸುರಸುಂದರಿಯಾದ ಬಾಲನಾಗಮ್ಮಳನ್ನು ಫಕೀರನೊಬ್ಬನು ಅಪಹರಿಸಿಕೊಂಡು ಹೋಗುತ್ತಾನೆ. ಆ ಫಕೀರನಿಂದ ಅವಳನ್ನು ಬಿಡಿಸಿಕೊಂಡು ಬರಲು ಅರಸುಕುವರ ರಾಮಂಡು ಮಾಡಿದ ಸಾಹಸಗಾಥೆ ರಂಜಕವಾಗಿದೆ. ಫಕೀರನು ಅವಳನ್ನು ನಾಯಿಯಾಗಿಸಿ ಕರೆದೊಯ್ಯುವ, ನಂತರ ಅವಳ ಬಿಡುಗಡೆಗಾಗಿ ಬಂದ ಅವಳ ಸಂಬಂಧಿಕರನ್ನು ಕಲ್ಲಾಗಿಸುವ, ಕೊನೆಗೆ ಅವಳ ಮಗ ಯುವರಾಜನು ಹಲವು ಅಡತಡೆಗಳನ್ನು ಎದುರಿಸಿ ಅವನಿಂದ ಬಾಲನಾಗಮ್ಮಳನ್ನು ಬಿಡಿಸಿಕೊಂಡು ಬರುವ ಕತೆಯು ಸಿನಿಮಾ ಮಾಧ್ಯಮದಲ್ಲಿಯೂ ತೆರೆ ಕಂಡಿದೆ. ಅಂಧ್ರದಲ್ಲಿ ಮೆಹಬೂಬ ನಗರ ಜಿಲ್ಲೆಯ ವನಪರ್ತಿ ತಾಲೂಕಿನ ಪಾಣಿಗಲ್ ಹಳ್ಳಿಯಲ್ಲಿ ಬಾಲನಾಗಮ್ಮನ ಸ್ಮಾರಕವಾಗಿ ಕೋಟೆಯಿದೆ. ಪತಿವ್ರತೆ ವೀರನಾಗಮ್ಮನ ಕತೆ, ಅಕ್ಕಯ್ಯ  ಜೋಗಯ್ಯ ಕತೆ, ಸಿದ್ಧರಾಮನ ಕತೆ, ವಡ್ಡರಾಜುಲ್ ಕತೆ ಮುಂತಾದವುಗಳು ಈ ಜನರ ಜನಪದ ಲೋಕದಲ್ಲಿ ಉಳಿಯಲ್ಪಡುತ್ತವೆ.

ಜನಪದ ಕಲೆಗಳು :

ದಿನನಿತ್ಯದ ದುಡಿಮೆಯಿಂದ ಬೇಸರಗೊಂಡಾಗ ವಿರಾಮದ ವೇಳೆಯಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ದುಡಿಯುವ ವರ್ಗದವರು ಸಾಮಾನ್ಯವಾಗಿ ತಮಗೆ ತಿಳಿದಿರುವ ಆಟಗಳಲ್ಲಿ ಕಲಾಭಿವ್ಯಕ್ತಿಯಲ್ಲಿ ತೊಡಗುತ್ತಾರೆ. ಕಲ್ಲಿನೊಂದಿಗೆ ಬಹುಕಾಲ ಸಮಯ ಕಳೆಯುವ ಇವರು ಆಟದಲ್ಲಿಯೂ ಕಲ್ಲನ್ನು ಸಹಜವಾಗಿ ಬಳಸುತ್ತಾರೆ. ಗುಂಡಾಟ, ಹುಲಿಮನಿಯಾಟ, ಚಿಕ್ಕದಾಟ, ಪಗಡಿಯಾಟ ಆಡುವರು. ಸಂಗ್ಯಾಬಾಳ್ಯಾ, ಚಿನ್ನಿ ಸಣ್ಣಾಟ, ದೊಡ್ಡಾಟ, ನಾಟಕ, ಭಜನೆ, ಡೊಳ್ಳುಕುಣಿತ, ಕೋಲಾಟ, ಅಣಿಕಲ್ಲಿನಾಟಗಳನ್ನು ಆಡುತ್ತಾರೆ.

ಹೆಣ್ಣುಮಕ್ಕಳು ಕೋಲಾಟ, ಆಣಿಕಲ್ಲಾಟ ಆಡುವುದರೊಂದಿಗೆ ಚಂಚಿ ಹೊಲೆಯುವ ’ಕೌದಿ ಹೊಲೆಯುವ, ಕಸೂತಿ ಹಾಕುವ, ಚಾಪೆ ಹೆಣೆಯುವ ಕಲೆಗಳಲ್ಲಿ ನಿಪುಣರಾಗಿರುತ್ತಾರೆ. reproduction ತಂತ್ರಕ್ಕೆ ಉದಾರಹಣೆಯಾಗಿರುವ ಕೌದಿ ಹೊಲೆಯುವ ಕಲೆ ಅತ್ಯಂತ ಪರಿಶ್ರಮ ಮತ್ತು ತಾಳ್ಮೆಯನ್ನು ಪ್ರದರ್ಶಿಸುತ್ತದೆ.

ದುಮಾಲಿ ಮೇಳ ನಡೆಸುವುದು, ಖಣಿಯಾರ ಬಾರಿಸುವುದು (ಹಲಿಗೆ) ಬಾರಿಸಿ (ಹಲಿಗೆ) ಬಾರಿಸಿ ಕುಣಿಯುವುದು, ಕುದುರೆ ಕುಣಿತ ಮಾಡುವುದು ಇದಲ್ಲದೆ ಉದ್ದನೆಯ ಹಾರೆಗೆ ಸುತ್ತಿಗೆ ಕಟ್ಟಿ ಭಾರ ಎತ್ತುವ ಕಲೆಯನ್ನು ಪ್ರದರ್ಶಿಸುವುದು ಮಾಡುತ್ತಾರೆ. ಅವಿದ್ಯಾವಂತ ಜನಸಮುದಾಯಗಳಲ್ಲಿ ಇರುವಂತೆ ಪ್ರದರ್ಶನ ಕಲೆಗಳು ಇವರಲ್ಲಿಯೂ ಇವೆ. ಆದರೆ ಸಾಹಿತ್ಯ ಆಧರಿಸಿದ ನಾಟಕ – ಹಾಡು ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ. ತಂದಾನ, ಏಕತಾರಿ, ಬಯಲಾಟ, ಹಾವು ಕಚ್ಚಿದವರಿಗೆ ನಿದ್ರೆ ಬಾರದಂತೆ ತಡೆಯಲು ಹಾಕುವ ಹಾಡುಗಳು, ಸೋಗು ಹಾಕುವುದು ಇತ್ಯಾದಿ ಕಲೆಗಳು ಇವರಲ್ಲಿವೆ.

. ಕುಟುಂಬದಲ್ಲಿ ಸಮಾಜದಲ್ಲಿ ಮಹಿಳೆಯ ಆರ್ಥಿಕ ಸಬಲತೆ :

ಯಾವುದೇ ಜನ ಸಮುದಾಯಲ್ಲಿ ಮಹಿಳೆಯ ಆರ್ಥಿಕ ಸಬಲತೆಯನ್ನು ಗುರುತಿಸುವಾಗ ನಮಗೆದುರಾಗುವ ಮೊದಲ ತೊಡಕು ’ಆರ್ಥಿಕತೆ’ ಯ ಕುರಿತ ಪರಿಕಲ್ಪನೆ ಪ್ರಾಚೀನ ಕಾಲದಿಂದಲೂ ಮಹಿಳೆಯ ಕಾರ್ಯಕ್ಷೇತ್ರವನ್ನು ಕುಟುಂಬ ಸಂಬಂಧಿಯಾದ ಸಂತಾನೋತ್ಪತ್ತಿ ಹಾಗೂ ಸಂಗೋಪನೆ (ಪಾಲನೆ, ಪೋಷಣೆ) ಚಟುವಟಿಕೆಗಳಿಗೆ ಸೀಮಿತಗೊಳಿಸಲಾಗಿದೆ. ಅವಳಿಂದಾಗುವ ಉತ್ಪಾದನೆಯನ್ನು ಆರ್ಥಿಕತೆಯ ವ್ಯಾಖ್ಯಾನದಲ್ಲಿ ಅರ್ಥವಿಸದೇ ಇರುವುದು ಬಹು ದೊಡ್ಡ ತೊಡಕಾಗಿದೆ. ಸಾಮಾನ್ಯವಾಗಿ ಆರ್ಥಿಕತೆ ಎಂದರೆ ’ಉತ್ಪಾದನಾ ಅಂಗಗಳನ್ನು ಸಂಘಟಿಸಿ, ಅವುಗಳನ್ನು ಉತ್ಪಾದನಾ ಕ್ರಿಯೆಯಲ್ಲಿ ತೊಡಗಿಸಿ ಸಂಪತ್ತು ಉತ್ಪಾದಿಸುವ ಚಟುವಟಿಕೆಗಳ ಒಂದು ವ್ಯವಸ್ಥೆ’. (ಟಿ.ಆರ್. ಚಂದ್ರಶೇಖರ, ಮಹಿಳೆ ಆರ್ಥಿಕತೆ ಮತ್ತು ಅಭಿವೃದ್ಧಿ) ಇತ್ತೀಚಿನ ದಿನಗಳಲ್ಲಿ ಮಹಿಳಾ ಅಧ್ಯಯನವು ಮಹಿಳೆಯ ದುಡಿಮೆ ಮತ್ತು ಆರ್ಥಿಕತೆಯನ್ನು ಹೊಸ ದೃಷ್ಟಿಕೋನದಿಂದ ಗುರುತಿಸುತ್ತಿದೆ. ಈ ನಿ‌ಟ್ಟಿನಲ್ಲಿ ಮಹಿಳೆಯ ಆರ್ಥಿಕತೆ ಕೇವಲ ಹಣದ ರೂಪದಲ್ಲಿ ಪರಿಗಣಿಸದೆ ಅವಳ ಉತ್ಪಾದನಾ ಕ್ಷೇತ್ರಗಳ ಹಿನ್ನೆಲೆಯಲ್ಲಿ ಗುರುತಿಸಬೇಕಾಗಿದೆ. ಆದಿವಾಸಿಗಳಿಂದ ಮೊದಲುಗೊಂಡು ನಗರವಾಸಿಗಳ ಕುಟುಂಬ ವ್ಯವಸ್ಥೆಯಲ್ಲಿ ಸಂಗೋಪನಾ ಕಾರ್ಯ ಮಹಿಳೆಯೇ ನಿಭಾಯಿಸುತ್ತಾಳೆ. ಇದರೊಂದಿಗೆ ಮಾರುಕಟ್ಟೆ ಅಥವಾ ವರಮಾನ ಸಂಬಂಧಿ ದುಡಿಮೆಯಲ್ಲೂ ಪಾಲ್ಗೊಳ್ಳುತ್ತಾಳೆ. ಹೀಗಾಗಿ ಮಹಿಳೆಯ ದುಡಿಮೆಯು ಸಂಗೋಪನೆ – ಸಂಪಾದನೆ ಎರಡರಲ್ಲೂ ಚಾಚಿಕೊಂಡಿದೆ. ಆದ್ದರಿಂದ ಮಹಿಳೆಯರನ್ನು ಅನುಭೋಗಗಳಾಗಿಯೂ ಉತ್ಪಾದಕರಾಗಿಯೂ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಜನಸಮುದಾಯದಲ್ಲಿ ಮಹಿಲೆಯ ಸ್ಥಾನಮಾನವನ್ನು ಕಂಡುಕೊಳ್ಳುವುದು ಉಚಿತವಾಗಿದ್ದು ಒಡ್ಡ ಜನಾಂಗದಲ್ಲಿ ಮಹಿಳೆಯ ಸ್ಥಿತಿಗತಿ, ಆರ್ಥಿಕ, ಸಬಲತೆಯನ್ನು ಈ ಮುಂದಿನಂತೆ ಗುರುತಿಸಲು ಪ್ರಯತ್ನಿಸಲಾಗಿದೆ.

ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯು ಎರಡನೆಯ ದರ್ಜೆಯ ಪ್ರಜೆಯಾಗಿ ಗುರುತಿಸಲ್ಪಟ್ಟಿರುವುದು ಸಾಮಾನ್ಯ ಸಂಗತಿ. ಬುಡಕಟ್ಟು ಹಾಗೂ ಕೆಳಜಾತಿಯ ಜನರಲ್ಲಿ ಮಹಿಳೆಯ ಸ್ಥಿತಿ ಸ್ವಲ್ಪ ಭಿನ್ನವಾದುದು. ಮೇಲು ಜಾತಿಯ ಸುಸಂಸ್ಕೃತ ಮಹಿಳೆಯರ ಇರುವಿಕೆಗಿಂತ ಭಿನ್ನ ರೀತಿಯ ಬದುಕು ಇವರದಾಗಿರುತ್ತದೆ.

ಸಾಮೂಹಿಕ ದುಡಿಮೆಯಲ್ಲಿ ಪಾಲ್ಗೊಳ್ಳುವ ಒಡ್ಡ ಮಹಿಳೆಯು ಕೆರೆ, ಬಾವಿ, ರಸ್ತೆಗಳ ರೈಲುಮಾರ್ಗಗಳ ನಿರ್ಮಾಣ ಕಾರ್ಯದಲ್ಲಿ ದುಡಿಯುತ್ತಾಳೆ. ಪುರುಷರು ತೋಡಿ ತೆಗೆದ ಅಥವಾ ಅಗೆದು ಹಾಕಿದ ಮಣ್ಣನ್ನು ಬುಟ್ಟಿಯಲ್ಲಿ ತುಂಬಿ ಹೊತ್ತು ಒಯ್ಯುವ ಕೆಲಸ ಇವಳದು. ಒಡೆದ ಜಲ್ಲಿ ಕಲ್ಲನ್ನು ಬುಟ್ಟಿಯಲ್ಲಿ ತುಂಬಿಸಿ ನಿಗದಿತ ಸ್ಥಳಕ್ಕೆ ತಲುಪಿಸುವಲ್ಲಿಯೂ ಸಹಭಾಗಿಯಾಗುತ್ತಾಳೆ. ಚಿಕ್ಕ ಮಗುವನ್ನು ತಾನು ಕೆಲಸ ಮಾಡುವ ಸ್ಥಳದಲ್ಲಿ ಗಿಡದ ಟೊಂಗೆಗೆ ಜೋಳಿಗೆ ಕಟ್ಟಿ ಅದರಲ್ಲಿ ಮಲಗಿಸಿರುತ್ತಾಳೆ. ಲೋಕೋಪಯೋಗಿ ಇಲಾಖೆಗಳಲ್ಲಿ  ಕೂಲಿಯಾಗಿ ದುಡಿಯುವ ಈ ಮಹಿಳೆಯರು ದೈಹಿಕವಾಗಿ ಸದೃಢ ಕಾಯ, ಎತ್ತರ ನಿಲುವು ಉಳ್ಳವರು. ದೈಹಿಕ ದುಡಿಮೆಗೆ ಎಂದಿಗೂ ಹಿಂಜರಿಯುವುದಿಲ್ಲ.

ಯಾವುದೇ ಒಬ್ಬ ಮಹಿಳೆಯ ದುಡಿಮೆಯನ್ನು ಮೂರು ರೀತಿಯಲ್ಲಿ ವಿಂಗಡಿಸಿ ಗುರುತಿಸುವುದು ಅನಿವಾರ್ಯವಾಗಿದೆ. ಅವಳು ಸುಶಿಕ್ಷಿತೆಯೋ, ಅನಕ್ಷರಸ್ಥೆಯೋ ಏನೇ ಆಗಿರಲಿ ರಕ್ತ – ಬೆವರು – ಕಣ್ಣೀರು ಸುರಿಸಿ ಅವಳ ದುಡಿಮೆಯು ಕವಲೊಡೆಯುತ್ತದೆ. ಸಂತಾನೋತ್ಪತ್ತಿ – ಸಂಗೋಪನೆ – ಕುಟುಂಬ ನಿರ್ವಹಣೆಗಳಲ್ಲಿ ಸ್ವಾಭಾವಿಕವಾಗಿ ಪಾಲ್ಗೊಳ್ಳುತ್ತಾರೆ. ನಿಸರ್ಗ ಸಹಜ ಜವಾಬ್ದಾರಿಗಳನ್ನು ಹೊತ್ತುಕೊಂಡು ಸಮಾಜವು ಒಪ್ಪಿಕೊಳ್ಳುವಂತೆ ತಾಳ್ಮೆಯಿಂದ ತನ್ನ ಸುತ್ತಲಿನವರನ್ನು ಸಂತೈಸುತ್ತಲೇ ತನ್ನನ್ನು ತಾನು ಸಂತೈಸಿಕೊಳ್ಳುತ್ತಾಳೆ ಪ್ರಾಕೃತಿಕ ನಿರ್ಬಂಧಗಳನ್ನು ಸಹಿಸುತ್ತ ಸಾಮಾಜಿಕ ನಿಬಂಧನೆಗಳನ್ನು ಎದುರಿಸುವ ಛಲಗಾರಿಕೆಯು ಎಲ್ಲ ವರ್ಗ  – ವರ್ಣದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.

ಎಲ್ಲ ವರ್ಗದ ಮಹಿಳೆಯರಂತೆ ಒಡ್ಡರಲ್ಲಿಯು ಅಡಿಗೆ ಮಾಡುವ, ಊಟಕ್ಕೆ ಬಡಿಸುವ ಅಡಿಗೆಗೆ ಬೇಕಾದ ದವಸಧಾನ್ಯಗಳನ್ನು ಸ್ವಚ್ಛಗೊಳಿಸುವ, ಕುಟ್ಟುವ, ಕೇರುವ, ಬೀಸುವ, ಅದರೊಂದಿಗೆ ನೀರು ಸೇದಿ ಹೊತ್ತು ತರುವ, ಉರುವಲಿಗಾಗಿ ಮುಳ್ಳುಗಂಟಿ ಕಟ್ಟಿಗೆ ಸಂಗ್ರಹಿಸಿ ತರುವ ಕೆಲಸಗಳು ಮಹಿಳೆಗೇ ಮೀಸಲಾಗಿವೆ. ಇದರೊಂದಿಗೆ ನೆಂಟರಿಷ್ಟರು ಬಂದಾಗ ಆತಿಥ್ಯ ಮಾಡುವ, ಹಬ್ಬ – ಹರಿದಿನ ಬಂದಾಗ ಮನೆಯ ಸಾರಣೆ – ಕಾರಣೆ ಮಡಿ ಮೈಲಿಗೆಯ ಕಾಳಜಿ ವಹಿಸುವ, ಹೊಲಗಳಿದ್ದರೆ, ಅಲ್ಲಿ ಬಿತ್ತನೆಯಲ್ಲಿ ಕಳೆ ಕೀಳುವಲ್ಲಿ ಸುಗ್ಗಿಯಲ್ಲಿ ಇನ್ನಿತರ ಕೂಲಿ ಕೆಲಸಗಳಲ್ಲಿ ಹಗಲಿರುಳು ಮಳೆ-ಬಿಸಿಲೆನ್ನದೆ ದುಡಿಯುವ ಪಾಲುಗಾರಿಕೆ ಅವಳದಾಗಿರುತ್ತದೆ. ಬಿಡುವಿನ ವೇಳೆಯಲ್ಲಿ ಹಸು, ಎಮ್ಮೆ, ಕುರಿ, ಕೋಳಿ, ಸಾಕಿ ಅವುಗಳ  ಉತ್ಪನ್ನದಿಂದ ಒಂದಷ್ಟು ಹಣ ಹೊಂದಿಸಿಕೊಳ್ಳುವ ಚಟುವಟಿಕೆಗಳು ಒಡ್ಡರ ಮಹಿಳೆಗೂ ಸಮಾನವಾಗಿ ಅನ್ವಯಿಸುತ್ತದೆ. ಪುರುಷರೊಂದಿಗೆ ಸಮಾನವಾಗಿ ಶ್ರಮವಹಿಸಿದರೂ ಅವರಿಗೆ ಸಿಗುವ ಪ್ರತಿಫಲ ಅವರಿಗಿಂತ ಕಡಿಮೆಯಾಗಿರುತ್ತದೆ. ಕಟೆದು ಸಿದ್ಧಪಡಿಸಿದ ಬೀಸುವ ಕಲ್ಲು, ಒರಳು, ಕಲಬತ್ತುಗಳನ್ನು ಊರಿನಲ್ಲೆಲ್ಲ ಸುತ್ತಿ ಮಾರಾಟ ಮಾಡುವುದು ಇವಳ ಕೆಲಸವಾಗಿದೆ. ಜಮೀನುಗಾರಿಕೆ ಮತ್ತು ಜಾತಿಗಳೇ ನಮ್ಮ ಹೆಂಗಸರ ಸ್ಥಿತಿಗತಿಗಳ ಪ್ರಧಾನ ಸೂಚಕಗಳು’ ಎಂಬ ಮಾತನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ. ಸ್ವಾತಂತ್ರ‍್ಯ, ಪೂರ್ವದ ಕೆಲ ವರ್ಷಗಳಲ್ಲಿ ಅನೇಕ ಸಾಮಾಜಿಕ ಚಿಂತರ ಪರಿಶ್ರಮದಿಂದ ಮೇಲ್ಜಾತಿಯ ಮಹಿಳೆಯರಿಗೆ ಹಲವಾರು ಕ್ಷೇತ್ರಗಳಲ್ಲಿ ಅವಕಾಶಗಳು ಲಭಿಸಿದವು. ಬ್ರಿಟಿಷರ ನಂತರ ದಿನಗಳಲ್ಲಿ ನಮ್ಮ ಸರ್ಕಾರಗಳು ಕೆಳಗಿನವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಲು ಹಾಕಿಕೊಂಡ ಹಲವು ಯೋಜನೆ, ಆದೇಶಗಳಿಂದಾಗಿ ಕೆಳಜಾತಿಯ ಈ ಜನಾಂಗದ ಮಹಿಳೆಯರೂ ಮೇಲುಸ್ತರದಲ್ಲಿ ಚಲಿಸುವ ಕೆಲವು ಸಂದರ್ಭಗಳು ಸಿಕ್ಕವು. ಅವುಗಳನ್ನು ಬಳಸಿಕೊಂಡು ಜೀವನ ವಿಧಾನಗಳನ್ನು ಬದಲಿಸಿಕೊಳ್ಳುತ್ತ ಸಾಗಿದ್ದಾರೆ.

ಶಿಕ್ಷಣ, ಮೇಲು ಜಾತಿ ಸಂಪರ್ಕ ಮತ್ತು ಅವರ ಸಂಸ್ಕೃತಿಯನ್ನು ಅನುಕರಿಸುವ ಆಸೆಯಿಂದಾಗಿ ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಗಳಾಗುತ್ತಿವೆ. ನಾಗರೀಕರಣದ ಬೆಳಗವಣಿಗೆಯಿಂದಾಗಿ ನಾಗರಿಕ ಲಕ್ಷಣಗಳನ್ನು ಅನ್ವಯಿಸಿಕೊಳ್ಳುತ್ತ, ಮೇಲ್ವರ್ಗದ ದೇವರುಗಳನ್ನು ವ್ರತಾಚರಣೆಗಳನ್ನು ತಮ್ಮದನ್ನಾಗಿಸಿಕೊಂಡಿದ್ದಾರೆ. ಉನ್ನತ ವ್ಯಾಸಂಗ ಮಾಡಿದ ಯುವತಿಯರಿಗೆ ಮದುವೆಯ ಸಂದರ್ಭವು ಸಂಕೀರ್ಣವಾಗುತ್ತಿದೆ. ಜಾತಿಯೊಳಗೇ ಆಯ್ಕೆ ಮಾಡುವಾಗ, ಹೊಂದಾಣಿಕೆಯಾಗುವಾಗ ಅನೇಕ ತೊಂದರೆಗಳಾಗುತ್ತಿವೆ. ವಿದ್ಯಾವಂತಗಳಾಗಿ ಕೆಲಸಕ್ಕೆ ಸೇರುವುದು ಅವಳ ವ್ಯಕ್ತಿತ್ವವಿಕಸನಕ್ಕಾಗಿಯಲ್ಲ. ತಾನು ಕಲಿತ ವಿದ್ಯೆ ಹಲವು ಪದವಿಗಳು, ಕೋರ್ಸುಗಳು, ಅವುಗಳ ಜ್ಞಾನದ ಉಳಿವಿಕೆ ಮತ್ತು ಲಾಭ ಗಳಿಸುವಿಕೆಗಾಗಿ ಸಾಂಸಾರಿಕ ನೊಗ ಹೊತ್ತವರಿಗೆ ಆರ್ಥಿಕ ಸಹಾಯಕ್ಕಾಗಿ ಅನಿವಾರ್ಯವಾಗಿವೆ. ಆರೋಗ್ಯಕರ ಸಮಾಜದ ಮುನ್ನಡೆಗೆ ಕುಟುಂಬದ ಸ್ವಾಸ್ಥ್ಯ ಪ್ರಮುಖವಾದುದು. ಇದನ್ನು ಕಾಪಾಡುವಲ್ಲಿ ಮಹಿಳೆಯ ಪಾತ್ರ ಪ್ರಧಾನವಾದುದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆಯಂತೆ ಉತ್ತಮ ನಾಗರಿಕರ ನಿರ್ಮಾಣ ಮಹಿಳೆಯರ ಹೆಗಲಿಗಿದೆ. ಹೀಗೆ ದ್ವಿಪಾತ್ರ ವಹಿಸುತ್ತ ನೌಕರಿಯನ್ನೂ, ಕುಟುಂಬವನ್ನೂ ಜೊತೆ ಜೊತೆಗೆ ಜಗ್ಗುತ್ತ ಬದುಕಿನ ಬಂಡಿಯನ್ನು ಎಳೆಯುವಾಗ ತಮ್ಮದೇ ಜನಾಂಗದ ಅಶಿಕ್ಷಿತ ಮಹಿಳೆಯರು ಈ ಸುಶಿಕ್ಷಿತರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ದೈಹಿಕ ಪರಿಶ್ರಮ ಬಯಸುವ ಮನೆಗೆಲಗಳಲ್ಲಿ ಹೆರಿಗೆಯಂತ ಸೂಕ್ಷ್ಮ ಜವಾಬ್ದಾರಿಯ ಕೆಲಸಗಳಲ್ಲಿ ಮನೆಕೆಲಸದ ಹೆಣ್ಣುಮಕ್ಕಳು ಸಾಕಷ್ಟು ಸಹಕರಿಸುತ್ತ ತಮ್ಮ ಬದುಕನ್ನು ಸುಧಾರಿಸುತ್ತ ಸಾಗಿದ್ದಾರೆ. ಮಹಿಳೆಯರು ಸ್ವಂತದ ಸಾಧನೆಗಳ ಮೇಲೆ ತಾವಾಗಿಯೇ ನಿರ್ಬಂಧಗಳನ್ನು ಹೇರಿಕೊಂಡಿದ್ದಾರೆ. ಎಂಬ ಸಮಾಜಶಾಸ್ತ್ರಜ್ಞೆ ನೀರಾ ದೇಸಾಯಿ ಹೇಳಿಕೆಯಂತೆ ಬಹುಸಂಖ್ಯಾತ ಮಹಿಳೆಯರು ತಮ್ಮನ್ನು ತಾವು ಅಗೋಚರ ಗಡಿಗಳಲ್ಲಿ ಬಂಧಿಸಿಕೊಂಡಿದ್ದು ಸತ್ಯವಾದುದು. ಈ ಎಲ್ಲದರ ನಡುವೆಯೇ ಒಳಗಿನ ಒತ್ತಾಸೆಯಿಂದ ಈ ಬಂಧನಗಳನ್ನು ಮೆಟ್ಟಿ ನಿಲ್ಲುತ್ತ ಹಲವು ಕ್ಷೇತ್ರಗಳಲ್ಲಿ ಈ ಜನಾಂಗದ ಮಹಿಳೆಯು ಮುಂದಡಿಯನ್ನು ಇಡುತ್ತಿದ್ದಾರೆ.

ಹಚ್ಚೆ ಹಾಕಿಸಿಕೊಳ್ಳುವುದು :

ಬುಡಕಟ್ಟು ಜನಾಂಗಳಲ್ಲಿ ಹಾಗೂ ಅನೇಕ ಹಿಂದೂ ಧರ್ಮದ ಉಪಜಾತಿಗಳಲ್ಲಿ ಮಹಿಳೆಯರು ಹಣೆಗೆ, ಕೈಗೆ ಹಚ್ಚೆ ಹಾಕಿಸಿಕೊಳ್ಳುವುದು ಇಂದಿಗೂ ರೂಢಿಯಲ್ಲಿದೆ. ಒಡ್ಡರ ಮಹಿಳೆಯರು ಹಣೆಯ ಮೇಲೆ ಕುಂಕುಮವಿಡುವ ಜಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಭೂಲೋಕದಲ್ಲಿ ತಾವು ಜನ್ಮತಾಳಿ ಬದುಕಿದ್ದಕ್ಕೆ ಈ ಹಚ್ಚೆ ಒಂದು ಸಾಕ್ಷಿ ಎಂದು ಈ ಜನ ನಂಬುತ್ತಾರೆ. ಆಂದ್ರಪ್ರದೇಶದ ಗಂಜಾಂ, ವಿಶಾಖಪಟ್ಟಣ ಹಾಗೂ ಗೋದಾವರಿ ಜಿಲ್ಲೆಗಳಲ್ಲಿ ಅಲ್ಲದೆ ಕರ್ನಾಟಕ, ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ಈ ಹಚ್ಚೆ ಹಾಕುವ ಜನರು ಕಾಣಸಿಗುತ್ತಾರೆ. ಇವರು ಹಚ್ಚೆ ಹಾಕುವಾಗ ಹಾಕಿಸಿಕೊಳ್ಳುವವರಿಗೆ ನೋವು ತಿಳಿಯದಂತೆ ಮಾಡಲು ತಮ್ಮ ತೆಲುಗು ಭಾಷೆಯಲ್ಲಿ ಹಾಡುಗಳನ್ನು ಹಾಡುತ್ತಾರೆ. ’ಬರುವಾಗ ಬತ್ತಲೆ ಹೋಗುವಾಗ ಬತ್ತಲೆ’ ಎಂಬುದು ವೇದಾಂತ. ಆದರೆ ಈ ಜನಾಂಗದ ಮಹಿಳೆಯರು ಹೋಗುವಾಗ ಹಚ್ಚೆ (ಹಣಚಿಬೊಟ್ಟು) ಯನ್ನು ಒಯ್ಯುತ್ತೇವೆ ಎಂಬ ವಿಶಿಷ್ಟ ನಂಬಿಕೆ ಇವರಲ್ಲಿದೆ. ಲಂಬಾಣಿ ಜನಾಂಗದವರಂತೆ ಇವರೂ ಸಹ ಕೈಗಳ ಮೇಲೆ, ತೋಳು, ಬೆರಳು, ಮುಖ, ಕಾಲು ಇತ್ಯಾದಿ ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಶಿವನ ಬಾಸಿಂಗ, ಸೀತೆಯ ಸೆರಗು, ಹನುಮಂತ, ನಂದಿಕೋಲು, ನಾಗಪ್ಪ ಇವು ತೋಳುಗಳ ಮೇಲೆ ಶೋಭಿಸುತ್ತವೆ. ಬಲಗೈಯ ಬೆರಳಿಗೆ, ಅಂಗೈಗೆ ಚಿಕ್ಕೆಗಳನ್ನು ಹಾಕಿಸಿಕೊಂಡಿದ್ದರೆ ಅವರು ಮಾಡಿದ ಅಡುಗೆ ರುಚಿಯಾಗಿರುತ್ತದಂತೆ. ಗದ್ದ, ಗಲ್ಲ, ಬೆನ್ನಿನ ಮೇಲೆಯೂ ಹಾಕಿಸುತ್ತಾರೆ. ಪುರುಷರು ಸಹ ದೇವರ ಚಿತ್ರ ಅಥವಾ ತಮಗಿಷ್ಟವಾದುದವರ ಹೆಸರನ್ನು ಹಾಕಿಸಿಕೊಳ್ಳುವರು.

ಬಸವಿ :

ಒಡ ಮಹಿಳೆಯರಲ್ಲಿ ಬಸವಿ ಪದ್ಧತಿ ರೂಢಿಯಲ್ಲಿದೆ. ಮದುವೆಯಾಗದೇ ಉಳಿದ ವಯಸ್ಕ ಮಹಿಳೆಯರು ದೇವಿ ಎಲ್ಲಮ್ಮಳ ಹೆಸರಿನಲ್ಲಿ ಸ್ವೇಚ್ಛೆಯಿಂದ ಬದುಕಲು ಇಚ್ಛಿಸುತ್ತಾಳೆ. ಬಸವಿಯಾಗುವ ಮಹಿಳೆ ಎಲ್ಲಮ್ಮ ಗುಡಿಯಲ್ಲಿ ತಲೆಸ್ನಾನ ಮಾಡಿ, ಭಂಡಾರ (ಕುಂಕುಮ ಸಿಂಧೂರ) ಹಚ್ಚಿ ಕಂಬಳಿಯ ಮೇಲೆ ಕುಳಿತುಕೊಳ್ಳುತ್ತಾಳೆ. ಇವಳ ಕುಲದ ಹಿರಿಯ ಅಲ್ಲಿರುತ್ತಾನೆ. ವಿವಾಹಿತ ಮಹಿಳೆಯೊಬ್ಬಳು ಬಂದು ಇವಳಿಗೆ ಅರಿಶಿನ ಕೊಡುತ್ತಾಳೆ. ಪೂಜಾರಿಯು ದೇವಿಯ ಆದೇಶದಂತೆ ಇವಳ ಕುತ್ತಿಗೆಗೆ ತಾಳಿ ಕಟ್ಟುತ್ತಾನೆ. ಹಾಗೂ ಈ ಹೆಣ್ಣು ಮಗುವನ್ನು ರಕ್ಷಿಸು ಎಂದು ದೇವಿಯಲ್ಲಿ ಪ್ರಾರ್ಥಿಸುತ್ತಾನೆ. ಕುಲದ ಹಿರಿಯರು ತಂದೆಯ ಸ್ಥಾನದಲ್ಲಿ ನಿಂತು ಈ ಕಾರ್ಯಕ್ರಮ ನಡೆಸಿಕೊಡುವರು. ಬಸವಿಯ ಪಟ್ಟ ಹೊತ್ತ ಮಹಿಳೆ ಆ ರಾತ್ರಿ ದೇವಾಲಯದಲ್ಲಿಯೇ ಮಲಗುತ್ತಾಳೆ. ಆ ನಂತರ ಅವಳು ಮೇಲ್ಜಾತಿಯ ಯಾವುದೇ ಪುರುಷನೊಂದಿಗೆ ಇರಲು ಅರ್ಹತೆ ಪಡೆಯುತ್ತಾಳೆ. ಯಾವ ಕಾರಣಕ್ಕೂ (ಅವಳಿಚ್ಛೆಯಿಲ್ಲದೇ) ಕೆಳಜಾತಿಯ ವ್ಯಕ್ತಿಯೊಂದಿಗೆ ಬದುಕಲು ಅವಳಿಗೆ ಅವಕಾಶವಿರುವುದಿಲ್ಲ ಮುಂದೆ ಅವಳಿಗೆ ಹುಟ್ಟುವ ಮಕ್ಕಳು ತಂದೆಯ ಜಾತಿಗೇ ಸೇರುತ್ತಾರೆ. ಅಷ್ಟೇ ಅಲ್ಲದೆ ಆ ತಂದೆಯ ಅಪ್ಪ (ಅಜ್ಜ) ನಿಂದ ಬರುವ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ.

ವಿಧವೆ :

ಗಂಡ ಸತ್ತರೆ ಅವಳ ಮುತ್ತೈದೆಯ ಸಂಕೇತಗಳನ್ನು ಕಳಚಿ ವಿಧವೆ ಮಾಡುವ ಪದ್ಧತಿ ಇವರಲ್ಲಿದೆ. ಆ ಮಹಿಳೆಯನ್ನು ನದಿ ದಂಡೆಗೆ ಕರೆದೊಯ್ದು ಕಣಿಕೆಯ ಮೇಲೆ ಕೂಡಿಸುತ್ತಾರೆ. ಅವಳ ಸೋದರನಿಂದ ಅವಳ ಹಣೆಯ ಮೇಲಿನ ಬೊಟ್ಟು (ಕುಂಕುಮ) ಅಳಿಸಿ ಹಾಕಿ ಕೈಬಳೆಗಳನ್ನು ಒಡೆದು ಹಾಕುತ್ತಾರೆ. ಕಣಿಕೆಯ (ತೆನೆ ಕತ್ತರಿಸಿದ ಬೆಳೆಯ ದಂಟು) ಮುಖಾಂತರ ಅವಳ ತಲೆ ಮೇಲೆ ಮೂರು ಸಲ ನೀರು ಹಾಕುತ್ತಾರೆ. ಇದಾದ ನಂತರ ಅವಳು ಮನೆಗೆ ಹೋಗಿ ಒಬ್ಬಳೆ ಕೋಣೆಯಲ್ಲಿ ದೀಪ ಹಚ್ಚಿ ಕುಳಿತುಕೊಳ್ಳುತ್ತಾಳೆ. ಮರುದಿನದ ಬೆಳಗಿನವರೆಗೂ ಯಾರನ್ನೂ ನೋಡದೆ ರಾತ್ರಿ ಕಳೆಯಬೇಕು. ನಂತರ ಅವಳಿಗೆ ಯಾವುದಾದರೂ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವಳು ಆಕಳ ಬಾಲವನ್ನು ಮೂರು ಸಲ ಜಗ್ಗಬೇಕು. ತಮಿಳು ನಾಡಿನ ಕೊಯಮತ್ತೂರಿನ ಸುತ್ತಲ ಪ್ರದೇಶದಲ್ಲಿ ಹಲವಾರು ಆಚರಣೆಗಳು ರೂಢಿಯಲ್ಲಿವೆ.

ಅವಿವಾಹಿತ ಮಹಿಳೆ ಅಥವಾ ಪುರುಷ ಸತ್ತರೆ ಎಕ್ಕೆಯ ಗಿಡದೊಂದಿಗೆ ಮದುವೆ ಮಾಡುವ ಸಂಪ್ರದಾಯ ಇತ್ತೀಚೆಗೆ ಬಂದಿದೆ. ಮೂರನೆಯ ಮದುವೆಯಾಗುವಾಗಲೂ ಹೀಗೆ ಎಕ್ಕಿ ಗಿಡದೊಂದಿಗೆ ಮದುವೆ ಮಾಡುವ ಪದ್ಧತಿ ಇವರಲ್ಲಿದೆ.

ವಿಧವಾ ವಿವಾಹ : ಉಡಿಕೆ ಉಡುಕಿ :

ಅನೇಕ ಬುಡಕಟ್ಟು ಹಾಗೂ ನಿಮ್ಮ ಜಾತಿ – ಜನಾಂಗಗಳಲ್ಲಿರುವಂತೆ ಒಡ್ಡರಲ್ಲಿಯೂ ವಿವಾಹ ವಿಚ್ಛೇದನ, ಮರುವಿವಾಹ, ವಿಧವಾ ವಿವಾಹ, ಬಾಲ್ಯವಿವಾಹದಂಥ ಪದ್ಧತಿಗಳು ರೂಡಿಯಲ್ಲಿವೆ. ಈ ಜನರಲ್ಲಿ ವಿಧವಾ ವಿವಾಹಕ್ಕೆ ಸಂಬಂಧಿಸಿದಂತೆ ಒಂದು ಹೇಳಿಕೆಯಿದೆ. ವಿಧವೆಯು ಏಳು (೭)ಸಲ ಹಸಮಣೆ ಹತ್ತಬಹುದು. ೭ ಕ್ಕಿಂತ ಹೆಚ್ಚು ಸಲ ಮದುವೆಯಾಗಲು ಅನುಮತಿಯಿಲ್ಲ. ಗಂಡಸು ರೋಗಿಷ್ಟನಾಗಿದ್ದರೆ ಅವನ ಸೋದರನೊಂದಿಗೆ ಅವಳು ಸಂಬಂಧವನ್ನಿರಿಸಿಕೊಳ್ಳಬಹುದು. ಮರು ಮದುವೆ ಅಥವಾ ಉಡುಕಿ ಮಾಡಿಕೊಳ್ಳುವ ಹೆಣ್ಣಿನ ಕೊರಳಿಗೆ ಕರಿಮಣಿಯ ಸರವನ್ನು ಕಟ್ಟಲಾಗುತ್ತದೆ. ಇದನ್ನು ಇನ್ನೊಬ್ಬ ವಿಧವೆ ಕೂಡ ಕಟ್ಟಬಹುದಾಗಿದೆ. ಮದುವೆ ಮಾಡಿಸುವಾತ ಕುಲದ ಹಿರಿಯನು ಮದುವೆಯಾಗುವ ವಿಧವೆಯಿಂದ ಶುಲ್ಕವನ್ನು ಕೆಲವು ರೂಪಾಯಿಗಳ ರೂಪದಲ್ಲಿ ಪಡೆಯುತ್ತಾನೆ. ಇಂಥ ಮದುವೆಯಲ್ಲಿಯೂ ಗಂಡನಾಗುವವನು ಹೆಂಡತಿಯ ಪಾಲಕರಿಗೆ ’ತೆರ’ ಕೊಡುವುದು ಕಡ್ಡಾಯವಾಗಿರುತ್ತದೆ. ಆ ವಿಧವೆಯು ಮಕ್ಕಳನ್ನು ಹೊಂದಿದ್ರೆ ಅವರಿಗೆ ಅವಳ ಮಾಜಿ ಪತಿಯಿಂದ ಆಸ್ತಿಯ ಹಸ್ತಾಂತರಕ್ಕೂ ಅವಕಾಶವಿದೆ. ಹೀಗೆ ಏಳು ಸಲ ಮದುವೆಯಾದ ಅಥವಾ ಏಳು ಪತಿಗಳನ್ನು ಹೊಂದಿದ ಮಹಿಳೆಯು ನವ ವಿವಾಹಿತೆ ವಧು-ವರರಿಗೆ ಆಶೀರ್ವದಿಸಿದರೆ ಅವರಿಗೆ ಒಳಿತಾಗುತ್ತದೆಂಬ ನಂಬಿಕೆಯಿದೆ. ಅಂಥ ಮಹಿಳೆಯರಲ್ಲಿವೆ ಹೋಗಿ ಆಶೀರ್ವಾದ ಪಡೆಯಲು ಪ್ರಾರ್ಥಿಸುವ ವಿಧಾನವೂ ಇದೆ. ಉಡುಕಿ ಸಮಾರಂಭವು ಯಾವುದೇ ವೈಭವೀಕರಣವಿಲ್ಲದೆ, ವಾದ್ಯ – ಮೇಳ, ಜನಜಂಗುಳಿ, ವಿವಿಧ ಆಚರಣೆ ಇದಾವುದೂ ಇಲ್ಲದೆ ತುಂಬ ಸರಳವಾಗಿ ಮಾಡಿ ಮುಗಿಸುತ್ತಾರೆ. ದೈವ ಸಾಕ್ಷಿ. ಸಮಾಜದ ಕುಲಸ್ಥ (ಹಿರಿ)ರ ಸಾಕ್ಷಿಯೇ ಮುಖ್ಯವಾಗಿರುತ್ತದೆ.

ವಿವಾಹ ವಿಚ್ಛೇದನ ವಿವಾಹ ಬಾಹಿರ ಸಂಬಂಧ :

ಮದುವೆಯಾಗಿ ಸಂಸಾರ ಸಾಗಿಸುವ ಸಂದರ್ಭದಲ್ಲಿ ಗಂಡ – ಹೆಂಡಿರಲ್ಲಿ ಜಗಳಗಳಾಗಿ ಬೇರೆ ಇರಲು ಅಥವಾ ಪರಸ್ಪರ ಸಂಬಂಧ ಕಳಚಿಕೊಳ್ಳಲು ಬಯಸಿದರೆ ಅವರಿಬ್ಬರಿಗೂ ಸಮಾನ ಅವಕಾಶಗಳನ್ನು ನೀಡಲಾಗುತ್ತದೆ. ಗಂಡನು ಹೆಂಡತಿಯ ನಡತೆಯನ್ನು ಶಂಕಿಸಿ ಅವಳಿಂದ ಬೇರೆಯಾಗುತ್ತಿದ್ದರೆ ಅವನು ಪಂಚರಿಗೆ ಮಧ್ಯ ಸೇವನೆಗಾಗಿ ದಂಡ ರೂಪದಲ್ಲಿ ಹಣವನ್ನು ಕೊಡಬೇಕಾಗುತ್ತದೆ. ಒಂದು ವೇಳೆ ಹೆಂಡತಿಯಾದವಳು ಗಂಡನನ್ನು ತ್ಯಜಿಸುತ್ತಿದ್ದರೆ ಅವಳು ಹಣವನ್ನು ಕೊಡಬೇಕಾಗಿಲ್ಲ. ಆ ಗಂಡನು ಮದುವೆಯ ಸಂಕೇತವಾಗಿ ಕಟ್ಟಿದ್ದ ಕರಿಮಣಿಯ ಸರವನ್ನು ಬಿಚ್ಚಿ ಆತನಿಗೆ ಹಿಂದಿರುಗಿಸಿದರೆ ಸಾಕು. ಅವಳು ಮತ್ತೊಂದು ಮದುವೆಯಾಗಲು ಬಯಸಿದರೆ ಆಗ ಮೊದಲಿನ ಗಂಡನಿಗೆ ಮದುವೆಯ ಖರ್ಚನ್ನು ಮತ್ತು ’ತೆರ’ದ ರೂಪದಲ್ಲಿ ಹಣವನ್ನು ಮರಳಿ ಕೊಡಬೇಕಾಗುವುದು. ಕೆಲವು ಪ್ರದೇಶಗಳಲ್ಲಿ ತೆರದ ಹಣವಾಗಲಿ, ಆಭರಣವಾಗಲಿ ಅವಳೇ ಇಟ್ಟುಕೊಳ್ಳಬಹುದು.

ಗಂಡನನ್ನು ಬಿಟ್ಟು ಬಂದ ಮಗಳಿಗೆ ತಂದೆ – ತಾಯಿಯರು ಆಶ್ರಯ ನೀಡುವುದಿಲ್ಲ. ಹಾಗೊಂದು ವೇಳೆ ಮನೆಯಲ್ಲಿಟ್ಟುಕೊಳ್ಳಲು ಬಯಸಿದರೆ ತಮ್ಮ ಸಮಾಜದವರಿಗೆ ನಿಗದಿತ ಸಂಬಂಧವನ್ನಿಟ್ಟುಕೊಂಡ ಪುರುಷರಿಗೆ ಮಹಿಳೆಯರಿಗೆ ಬೇರೆ ಬೇರೆ ಶಿಕ್ಷೆಗಳಿರುತ್ತವೆ. ತುಂಬಾ ಹಳೆಯ ಕಾಲದಲ್ಲಿ ಇಂಥ ಅಪರಾಧಗೈದ ಪುರುಷನು ತನ್ನ ಬೆನ್ನ ಮೇಲೆ ಒಂದಿಬ್ಬರನ್ನು ಹೊತ್ತು ಸಮುದಾಯದ ಸುತ್ತ ಸುತ್ತುಹಾಕಬೇಕಾಗಿತ್ತು. ಮಹಿಳೆಗೆ ಇದಕ್ಕಿಂತ ಕ್ರೂರ ಶಿಕ್ಷೆ ಇತ್ತು. ಅಪರಾಧಿ ಮಹಿಳೆಯು ಬುಟ್ಟಿಯೊಳಗೆ ತನ್ನನ್ನು ತೂರಿಸಿಕೊಂಡು ತಲೆಯ ಮೇಲೆ ಭಾರ ಹೊತ್ತು ಕುಳಿತುಕೊಳ್ಳಬೇಕು. ಇಲ್ಲವೆ ಹಾಗೆ ಭಾರ ಹೊತ್ತು ಇನ್ನೊಂದು ಬುಟ್ಟಿಯಲ್ಲಿ ತಲೆಯನ್ನು ಒರಗಿಸಿ ಮೈಮೇಲೆ ಕಲ್ಲುಹಾಸಿಗೆಯ ಭಾರವನ್ನು ಸಹಿಸಬೇಕಾಗಿತ್ತು. ಈಗಲೂ ಮಹಿಳೆಯು ಅಪರಾಧಿಯಾಗಿದ್ದರೆ ಬುಟ್ಟಿಯಲ್ಲಿ ಮಣ್ಣನ್ನು ಹೊತ್ತು ಮನೆಯಿಂದ ಮನೆಗೆ ಹೋಗಿ ಬರಬೇಕು. ಆಮೇಲೆ ಅವಳಿಗೆ ಜಾತಿಯಲ್ಲಿ ಬರಮಾಡಿಕೊಳ್ಳುವರು.

ಮದುವೆಗೆ ಮುಂಚೆ ಲೈಂಗಿಕ ಸಂಬಂಧಕ್ಕೆ ಅನುಮತಿಯಿಲ್ಲದ ಈ ಜನರು ಹಾಗೆ ನಡೆದುಕೊಂಡರೆ ಸಮಾಜದವರಿಗೆ ದಂಡ ತೆರುವುದು ಸ್ವಾಭಾವಿಕ. ತಮಗಿಂತ ಮೇಲ್ಜಾತಿಯ ಯುವಕನೊಂದಿಗೆ ಅವಳು ಪ್ರೀತಿಸುತ್ತಿದ್ದರೆ ಅವರಿಬ್ಬರ ಮದುವೆಗೆ ಪರವಾನಗಿ ಸಿಗುತ್ತದೆ. ಹೀಗೆ ಹಣದ ರೂಪದಲ್ಲಿ ದಂಡ ತೆತ್ತು ಸಮಾಜದ ಹಿರಿಯರಿಂದ ಹಲವು ಸಂದರ್ಭಗಳಲ್ಲಿ ತಾತ್ಕಾಲಿಕ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಮೇಲುಜಾತಿಯ ಮತ್ತು ಮೇಲು ವರ್ಗಗಳಲ್ಲಿಯ ಮಹಿಳೆಗೆ ಲಭ್ಯವಿಲ್ಲದ ಅನೇಕ ವೈವಾಹಿಕ ಅವಕಾಶಗಳು ಈ ಜನಾಂಗದ ಮಹಿಳೆಯರಿಗೆ ಸಿಗುತ್ತದೆ ಎನ್ನುವ ಅಂಶ ಗಮನಾರ್ಹವಾದುದು.

ಈ ಜನರಲ್ಲಿ ಇಂದಿಗೂ ಅನಕ್ಷರಸ್ಥ ಕುಟುಂಬಗಳಲ್ಲಿ ಕುಡುಕ ಗಂಡನಿಂದ ಹಿಂಸೆಗೆ ಒಳಗಾಗುವ ಮಹಿಳೆಯರ ಸಂಖ್ಯೆ ಏರುತ್ತಲೇ ಇದೆ. ದೈಹಿಕ ಪರಿಶ್ರಮದಿಂದ ಬಳಲಿ ಬೆಂಡಾದ ಹೆಂಡತಿ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಕೊಟ್ಟು ಅವಳನ್ನು ಬೀದಿಪಾಲು ಮಾಡುವ ನಿರಾಧಾರ ಸ್ಥಿತಿಗೆ ತಳ್ಳುವ ಪರಿಕ್ರಮ ನಿಂತಿಲ್ಲ. ತನ್ನ ಹಾಗೂ ಹೆಂಡತಿಯ ದುಡಿಮೆಯನ್ನು ಕುಡಿತದಲ್ಲಿ ಹಾಳು ಮಾಡಿ ತನ್ನ ಆರೋಗ್ಯವನ್ನೂ ಹದಗೆಡಿಸಿಕೊಂಡು ಸಂಕಟಕ್ಕೀಡಾಗುವ ಪುರುಷರು ಎಲ್ಲಿಯವರೆಗೆ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದಿಲ್ಲವೋ ಅಂದಿನವರೆಗೆ ಈ ಜನಾಂಗದ (ಎಲ್ಲ ಜನಾಂಗದ) ಮಹಿಳೆಯ ಆರ್ಥಿಕ ಸ್ಥಿತಿ ನಿರಧಾರವಾಗಿಯೇ ಇರುತ್ತದೆಂದು ಹೇಳಬಹುದು. ಮದುವೆಗೆ ಮುಂಚೆ ಅವಳು ದುಡಿದು ಸಂಪಾದಿಸಿದ ಹಣವನ್ನು ಅವಳ ಮದುವೆ ಖರ್ಚಿಗೆ ಬಳಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಕಾರಣವಾಗಿ ಇಂದು ಅದೆಷ್ಟೋ ಒಡ್ಡ ಮಹಿಳೆಯರು (ಕುಲಕಸುಬನ್ನು ಕಳೆದುಕೊಂಡಿದ್ದರಿಂದ) ಕಸಗುಡಿಸುವ, ಪಾತ್ರೆ ಬಟ್ಟೆ ತೊಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.