ಮದುವೆ :

ಮದುವೆ ಎಂಬುದು ಗಂಡು – ಹೆಣ್ಣಿನ ಸಂಬಂಧ ಸ್ಥಾಪನೆ ಮಾತ್ರವಲ್ಲದೆ, ಎರಡು ಕುಟುಂಬಗಳ ನಡುವಿನ ಬಾಂಧವ್ಯಕ್ಕೆ ನಾಂದಿ ಹಾಡುವ ಸಮಾರಂಭ. ಭಾರತೀಯ ವ್ಯವಸ್ಥೆಯಲ್ಲಿ ಮದುವೆಯು ಗಂಡಿಗೆ ಕೌಟುಂಬಿಕ ಜವಾಬ್ದಾರಿಯ ಅರಿವನ್ನು ಮೂಡಿಸಿದರೆ, ಹೆಣ್ಣಿಗೆ ಹೊಸ ಜನ ಮತ್ತು ವ್ಯವಸ್ಥೆಯೊಂದಿಗೆ ಬದುಕುವ ಹೊಣೆಗಾರಿಕೆಯನ್ನು ಹೊರಿಸುತ್ತದೆ. ದಿನನಿತ್ಯ ಹೊಸ ಸವಾಲುಗಳನ್ನೆದುರಿಸಲು ಅಣಿಯಾಗಿಸುತ್ತದೆ. ದುಡಿದುಣ್ಣುವ ದಲಿತ ಕುಟುಂಬಗಳಲ್ಲಿ ಯಾವುದೇ ಬಗೆಯ ಆಸ್ತಿಯಾಗಲೀ, ಆರ್ಥಿಕ ಸೌಕರ‍್ಯಗಳಾಗಲಿ, ಸಮಾನತೆಯ ಅಥವಾ ಸ್ತ್ರೀ ಗೌರವದ ಅಲೋಚನೆಯಾಗಲೀ ಕಾಣಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ದುಡಿಯಲೇಬೇಕು. ಪ್ರಕೃತಿಯ ವೈಪರೀತ್ಯಗಳನ್ನು ಲೆಕ್ಕಿಸದೆ ಪುರುಷರೊಂದಿಗೆ ಪುರುಷರಂತೆಯೇ ದುಡಿಯುವುದು ಅನಿವಾರ‍್ಯವಾಗುತ್ತದೆ. ಇದಕ್ಕೆಲ್ಲದಕ್ಕೂ ಪೂರ್ವಸಿದ್ಧತೆ ಎಂಬಂತೆ ಮದುವೆ ಸಮಾರಂಭ ಜರುಗುತ್ತದೆ. ಒಡ್ಡ ಜನಾಂಗದಲ್ಲಿ ಮದುವೆಯ ಆಚರಣೆ ಹೀಗಿದೆ.

ವಧು ಶೋದಿಸುವುದು ಗಂಡಿನ ಮನೆಯವರ ಜವಾಬ್ದಾರಿಯಾಗಿರುತ್ತದೆ. ವಧುವಿನ ಪರೀಕ್ಷೆ ಇವರಲ್ಲಿಲ್ಲ. ಹಿರಿಯರೇ ಹುಡುಗಿಯನ್ನು ನೋಡುತ್ತಾರೆ. ಅವರು ತಮಗೆ ಅನುಕೂಲವೆನಿಸುವ ವಧುವನ್ನು ಹುಡುಕಾಡಿ ಮಾತುಕತೆಗೆ ಆರಂಭಿಸುತ್ತಾರೆ. ಜಾತಕ ನೋಡುವ ಪದ್ಧತಿ ಇವರಲ್ಲಿಲ್ಲ. ಆದರೆ ಶಕುನಗಳ ನಂಬಿಕೆ ಇದೆ. ’ವರದಕ್ಷಿಣೆ’ ಯ ಭೂತ ಇವರನ್ನು ಕಾಡುವುದಿಲ್ಲ. ’ವಧುವಿಗೆ’ ತೆರ ಕೊಡುವ ಸಂಪ್ರದಾಯವಿದ್ದು  ಈ ವಧು ಉಪಚಾರದ ಮೌಲ್ಯ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಗಂಡು – ಹೆಣ್ಣಿನ ಮನೆಯ ಹಿರಿಯರು ಸೇರಿ ತಮ್ಮ ಊರಿನ /ಕೇರಿಯ ದೇವಾಲಯದ ಮುಂದೆ ಕುಳಿತು ಪರಸ್ಪರ ಕೊಡುಕೊಳ್ಳುವ ಮಾತುಗಳನ್ನು ಆಡುತ್ತಾರೆ. ಮದುವೆ ಸಾಮಾನ್ಯವಾಗಿ ಹೆಣ್ಣಿನ ಮನೆಯಲ್ಲೇ ಜರುಗುತ್ತದೆ. ಆದರೆ ಅದರ ಖರ್ಚನ್ನು ಗಂಡಿನವರೇ ಭರಿಸಬೇಕಾಗುತ್ತದೆ. ದುಡಿದುಣ್ಣುವ ಇವರು ವಾರಕ್ಕೊಮ್ಮೆ ಸಂಬಳ ಪಡೆಯುವುದರಿಂದಾಗಿ ವಾರ‍್ಯಾಂತ್ಯದ ದಿನದಲ್ಲಿ ಮದುವೆ ನಡೆಯುವಂತೆ ಏರ್ಪಾಡು ಮಾಡುತ್ತಾರೆ. ರವಿವಾರ ಹಾಗೂ ಸೋಮವಾರದಂದು ಎಂದರೆ ಎರಡು ದಿನಗಳವರೆಗೆ ಮದುವೆ ಕಾರ‍್ಯಕ್ರಮ ಜರುಗುತ್ತದೆ. ಶಿವನ ಆರಾಧಕರಾದ ಇವರು ಸೋಮವಾರವನ್ನು ಶುಭವೆಂದು ಭಾವಿಸುತ್ತಾರೆ. ಹಾಗಾಗಿ ಅಕ್ಷತೆಯ ಶಾಸ್ತ್ರವು ಸೋಮವಾರವೇ ನೆರವೇರುತ್ತದೆ.

ತಮ್ಮ ಓಣಿಯ ದೇವಾಲಯದ ಎದುರು ಮಾತುಕತೆಗೆ ಕುಳಿತುಕೊಳ್ಳುವುದು ಸಾಮಾನ್ಯವಾಗಿ ಸಾಯಂಕಾಲವಾಗಿರುತ್ತದೆ. ಎಲ್ಲರೂ ತಮ್ಮ ಕೆಲಸಗಳಿಂದ ಹಿಂದಿರುಗಿದ ನಂತರ ಒಂದೆಡೆ ಸೇರಿ ದೇವರಿಗೆ ಪೂಜೆ ಸಲ್ಲಿಸಿ ಮಾತಿಗಾರಂಭಿಸುತ್ತಾರೆ. ಓಣಿಯ ಮುಖ್ಯಸ್ಥ (ಕುಲಸ್ಥ, ಬೈಡು, ಕಾರಭಾರಿ, ಜಮಾದಾರ, ವಾಲಿಕಾರ) ನು ಎರಡೂ ಕುಟುಂಬದವನಿಗೆ ಸೂಕ್ತ ನೀತಿ ನಿಯಮಗಳನ್ನು ಜವಾಬ್ದಾರಿಗಳನ್ನು ಪರಿಚಯಿಸಿ ಕೊಡುವನು. ಇದು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಒಂದೂರಿನಲ್ಲಿ ಓಲಿ (ತೆರವು) ಎಂದಿದ್ದರೆ ಇನ್ನೊಂದೂರಲ್ಲಿ ಮುಯ್ಯಾ (ಆಹೇರಿ) ಪದ್ಧತಿ ಇರುತ್ತದೆ. ಹೆಣ್ಣಿಗೆ ಕೊಡುವ ತೆರವು ಸಾಮಾನ್ಯವಾಗಿ ಹತ್ತರಿಂದ ನೂರಾರು ರೂಪಾಯಿಗಳವರೆಗಿರುತ್ತದೆ. ಹೆಣ್ಣಿನ ತಂದೆ ತಾಯಿ ಹಾಗೂ ಅವರ ಬಂಧು (ಅಣ್ಣ, ತಮ್ಮ, ಅಜ್ಜ, ಅಜ್ಜಿ) ಗಳಿಗೆಲ್ಲ ಹೊಸಬಟ್ಟೆ ಕೊಡಿಸುವ ಪದ್ಧತಿ ಇದೆ. ವಧುವಿಗೆ ನತ್ತು (ಮೂಗಿನ ಆಭರಣ) ಸೊಂಟದ ಡಾಬು, ತೋಳಬಂದಿ, ಕಾಲುಂಗುರ, ತಾಳಿ ಇದೆಲ್ಲದರ ಖರ್ಚಿನೊಂದಿಗೆ ಅವಳ ಓಣಿಯ ಜನರಿಗೆ ಎರಡು ದಿನದ ಊಟದ ಖರ್ಚನ್ನು ವರನ ಕಡೆಯವರೇ ವಹಿಸಬೇಕಾಗುತ್ತದೆ.

ಈ ಮಾತುಕತೆಯೆಲ್ಲ ಒಪ್ಪಿಗೆಯಾದ ನಂತರ ಓಣಿಯ ಮುಖ್ಯಸ್ಥನಿಂದ ಜಾಡಿ ಹಾಕಿಸುತ್ತಾರೆ. ಜಾಡಿ ಎಂದರೆ ಕಂಬಳಿಯ ಹಾಸಿಗೆ, ಇದರ ಮೇಲೆ ಎಲೆ ಅಡಿಕೆಗಳನ್ನಿಟ್ಟು ಅಲಂಕರಿಸಲಾಗಿರುತ್ತದೆ. ಈ ಜಾಡಿಯು ಮದುವೆಯ ಒಪ್ಪಿಗೆಯಿಂದ ಹಿಡಿದು ಅಕ್ಷತೆಯವರೆಗಿನ ಎಲ್ಲ ಕಾರ‍್ಯಕ್ರಮಗಳಲ್ಲಿಯೂ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಮದುವೆಗೆ ಪರಸ್ಪರ ಒಪ್ಪಿಗೆ ನೀಡಿದ ಮೇಲೆ ವರನ ಕಡೆಯವರು ವಧುವಿಗೆ ಬಳೆ ತೊಡಿಸಲು ಹಣ ಕೊಡುತ್ತಾರೆ. ಒಪ್ಪಿಕೊಂಡ ಕೊಡುಕೊಳ್ಳುವ ವ್ಯವಹಾರವನ್ನು ಮನದಟ್ಟು ಮಾಡಿಸಿ ಮಾತುಕತೆ ಮುಗಿಸುತ್ತಾರೆ. ಮುಂದೆ ಮದುವೆಗೆ ಒಂದು ವಾರ ಕಾಲ ಮುಂಚಿತವಾಗಿ ವಧುವಿನ ಹಿರಿಯರನ್ನು ಕಂಡು ಈ ಹಿಂದೆ ನಿರ್ಧರಿಸಿದಂತೆ ಬೀಗರ ಬಟ್ಟೆ ಖರೀದಿಗಾಗಿ  ಹಣವನ್ನು ಕೊಡುತ್ತಾರೆ. ಇದಕ್ಕೆಲ್ಲ ಕಾರಭಾರಿಯು ಮಧ್ಯವರ್ತಿಯಾಗಿರುತ್ತಾನೆ. ಉಳಿದೆಲ್ಲ ಸಿದ್ಧತೆಯ ಬಾಬ್ತು ಅಗತ್ಯ ಹಣವನ್ನು ಕಾರಬಾರಿಗೆ ಕೊಟ್ಟು ಗಡವು (ಕಾಲಾವಕಾಶ)  ನೀಡುತ್ತಾರೆ.

ವರನ ಕಡೆಯವರು ಕೊಟ್ಟು ಹೋದ ಖರ್ಚಿನ ಹಣದಲ್ಲಿ ತಮ್ಮ ಓಣಿಯ ಜನರಿಗೆ ಊಟಕ್ಕೆ ಸಾಕಾಗುವಷ್ಟು ದವಸ-ಧಾನ್ಯಗಳನ್ನು ಖರೀದಿಸಿ ತಂದು, ಪ್ರತಿಯೊಂದು ಮನೆಯಲ್ಲಿರುವ ಸದಸ್ಯರ ಸಂಖ್ಯೆಗೆ ತಕ್ಕಂತೆ ಧಾನ್ಯ ಕೊಟ್ಟು, ಮದುವೆಯ ದಿನ ಅಡಿಗೆ ಮಾಡಿಕೊಳ್ಳಲು ಹೇಳುವರು. ಇವರಲ್ಲಿ ಒಂದೆಡೆ ಅಡಿಗೆ ಮಾಡಿ ಊಟ ಮಾಡುವ ಸಂಪ್ರದಾಯವಿಲ್ಲ. ಇದಕ್ಕೆ ಆರ್ಥಿಕ ಕೊರತೆಯು ಕಾರಣವಾಗಿದೆ.  ದೊಡ್ಡ ಪಾತ್ರೆಗಳಿಲ್ಲದೇ ಇರುವುದು ಅಥವಾ ಛತ್ರದಲ್ಲಿ ಮದುವೆಯಾಗದೇ ಇರುವುದೂ ಕಾರಣವಾಗಿದೆ. ಇತ್ತೀಚೆಗೆ ಇವರು ಸಹ ನಾಗರಿಕ ಜೀವನದಲ್ಲಿ ಬೆರೆತು ಹಲವು ಪರಿವರ್ತನೆಗಳಿಗೆ ಒಗ್ಗಿಕೊಂಡಿದ್ದಾರೆ.

ಒಡ್ಡರಲ್ಲಿ ಕಂಡು ಬರುವ ವಿಶೇಷ ಅಂಶವೆಂದರೆ ಇವರು ತಮ್ಮ ಧಾರ್ಮಿಕ ಅಥವಾ ಇನ್ನಿತರ ಸಾಂಪ್ರದಾಯಿಕ ಆಚರಣೆಗಳ ಸಂದರ್ಭದಲ್ಲಿ ಬ್ರಾಹ್ಮಣ ಪುರೋಹಿತರನ್ನು ಕರೆಯಿಸುವುದಿಲ್ಲ. ತಮ್ಮ ಕುಲದ ಹಿರಿಯರನ್ನೇ ಆ ಜವಾಬ್ದಾರಿ ನಿರ್ವಹಿಸಲು ಕೊಡುತ್ತಾರೆ. ವರನು ಬಂದಾಗ ಹುಡುಗಿಯನ್ನು ಅಡಗಿಸಿಡುತ್ತಾರೆ. ಆತ ಹುಡುಕಿದ ನಂತರ ಅಲಂಕರಿಸಿದ ಒನಕೆಯ ಸುತ್ತ ಸುತ್ತು ಹಾಕಿ ನಂತರ ಆ ಒನಕೆಯನ್ನು ಕಿತ್ತು ಜೊತೆಗಿಟ್ಟುಕೊಳ್ಳುತ್ತಾರೆ. ತಾಳಿಕಟ್ಟಿದ ನಂತರ ಅಡಿಗೆಯಾಡುವ, ಉಂಗುರ ಹುಡುಕುವ ಆಟ ಆಡುತ್ತಾರೆ.

ಶವಸಂಸ್ಕಾರ :

ಮನುಷ್ಯನ ಜೀವನದಲ್ಲಿ ಕಟ್ಟಕಡೆಯ ಸಂಸ್ಕಾರ ಇದಾಗಿದೆ. ಒಡ್ಡರು ಸತ್ತವರನ್ನು ಸಾಮಾನ್ಯವಾಗಿ ಹೂಳುತ್ತಾರೆ. ಕಾಡು ಪ್ರಾಣಿಗಳು ಕಚ್ಚಿ ಸತ್ತರೆ, ಅಸಹಜ ಸಾವನ್ನಪ್ಪಿದರೆ ಅಥವಾ ಗರ್ಭಿಣಿ ಹೆಣ್ಣುಮಗಳು ಸಾವನ್ನಪ್ಪಿದರೆ, ಇಲ್ಲದೆ ಕುಷ್ಣರೋಗಿಯು ಮರಣ ಹೊಂದಿದರೆ ಅಂಥವರ ಶವವನ್ನು ಸುಡುತ್ತಾರೆ. ಕೆಲವು ಪ್ರದೇಶಗಳಲ್ಲಿ ದೊಡ್ಡ ಬಂಡೆಯ ಆಸರೆಗೆ ಹೆಣವನ್ನಿಟ್ಟು ಅದರ ಮೇಲೆ ಕಲ್ಲುಗಳನ್ನಿಟ್ಟು ಮುಚ್ಚುತ್ತಾರೆ. ಇನ್ನು ಕೆಲವೆಡೆಗಳಲ್ಲಿ ಹಳೆಯ ಕೊಳೆತ ಮರದ ಕೊಂಬೆಗಳನ್ನು ಇಟ್ಟು ಮೇಲೆ ಕಲ್ಲು ಚಪ್ಪಡಿಗಳನ್ನಿಡುತ್ತಾರೆ. ಇದನ್ನು ಕಲ್ಲು ಸೇವೆ ಎನ್ನುತ್ತಾರೆ. ಈ ಪದ್ಧತಿ ಆರ್ವಾಚೀನ ಕಾಲದಿಂದ ರೂಢಿಯಲ್ಲಿದೆ. ಅವಿವಾಹಿತ ಮಹಿಳೆ ಅಥವಾ ಮಕ್ಕಳಿಲ್ಲದೆ ಮಹಿಳೆ ಸತ್ತಿದರೆ ಅವಳ ಶವವನ್ನು ಕಂಬಳಿಯಲ್ಲಿ ಸುತ್ತಿಕೊಂಡು ಸ್ಮಶಾನದವರೆಗೆ ಒಯ್ದು ದಕ್ಷಿಣ ದಿಕ್ಕಿಗೆ ತಲೆಯಿರಿಸಿ ಹೂಳುತ್ತಾರೆ. ಹಿರಿಯರಿಗೆ ಹನ್ನೆರಡು ದಿನಗಳವರೆಗೆ ಸೂತಕವನ್ನಾಚರಿಸುತ್ತಾರೆ. ಚಿಕ್ಕ ಮಕ್ಕಳ ಸೂತಕ ಐದು ದಿನ ಮಾತ್ರ ಆಚರಣೆಯಲ್ಲಿರುತ್ತದೆ. ತುಮಕೂರು ಮತ್ತು ಪಾವಗಡ ಸುತ್ತಲಿನ ಪ್ರದೇಶದಲ್ಲಿ ಹನ್ನೆರಡು ದಿನಗಳ ಸೂತಕದಲ್ಲಿ ಯಾವುದೇ ಹಬ್ಬವನ್ನಾಚರಿಸಲು ನಿಷೇಧವಿರುತ್ತದೆ.. ಈ ದಿನಗಳಲ್ಲಿ ಮಾಂಸ, ಮಧ್ಯ ಕುಡಿತ ಸರಾಗವಾಗಿ  ನಡೆಯುತ್ತದೆ. ಸಾಮಾನ್ಯ ದಿನಗಳಲ್ಲಿ ಸತ್ತರೆ ಆ ಶವದೊಂದಿಗೆ ಯಾವುದೇ ವಸ್ತುಗಳನ್ನಿರಿಸುವುದಿಲ್ಲ. ಆದರೆ ಶುಕ್ರವಾರ ಸಾವು ಸಂಭವಿಸಿದರೆ ಆ ಶವದ ಜೊತೆಗೆ ಜೀವಂತ ಕೋಳಿಯನ್ನು ಇರಿಸಿ ಶವ ಸಂಸ್ಕಾರ ಮಾಡುತ್ತಾರೆ. ಮೈಸೂರು ಸುತ್ತಲಿನ ಬೆಲ್ಟ್ ನಲ್ಲಿ ಸ್ವಲ್ಪ ಭಿನ್ನವಾದ ಆಚರಣೆಗಳಿವೆ. ದಕ್ಷಿಣ ಭಾರತದ ಇತರೆ ಪ್ರಾಂತ್ಯಗಳಲ್ಲಿಯೂ ವಿಭಿನ್ನವಾದ ಪದ್ಧತಿಗಳು ರೂಢಿಯಲ್ಲಿವೆ. ವ್ಯಕ್ತಿಯೊಬ್ಬ ಮೃತ ಪೆಟ್ಟಾಗ ಅದು ಹೆಣ್ಣು ಅಥವಾ ಗಂಡಾಗಿರಲಿ ಆ ಮೃತ ಶರೀರವನ್ನು ತೊಳೆದು, ವಿಭೂತಿ, ಕುಂಕುಮಗಳಿಂದ ಅಲಂಕರಿಸಿ, ಬಿಳಿ ಬಟ್ಟೆ (ಧೋತರ) ಯಲ್ಲಿ ಸುತ್ತಿ ಒಯ್ಯುವರು. ತಮ್ಮ ಹಟ್ಟಿಗಳ ನೆರೆ-ಹೊರೆಯಲ್ಲಿ ಅಥವಾ ಓಣಿಯಲ್ಲಿ ಸತ್ತ ಸುದ್ದಿ ತಿಳಿದಾಗ ಎಲ್ಲರೂ ಸೇರಿ ಅಂತ್ಯಸಂಸ್ಕಾರದ ಸಿದ್ಧತೆ ನಡೆಸುತ್ತಾರೆ. ಅದುವರೆಗೂ ಯಾರೂ ಅನ್ನ ನೀರು ಸೇವನೆ ಮಾಡುವುದಿಲ್ಲ. ಶವದ ತಲೆಯು ದಕ್ಷಿಣ ದಿಕ್ಕಿಗೆ ಇರುವಂತೆ ನೋಡಿಕೊಳ್ಳುವರು. ಆದರೆ ಪಕ್ಕದಲ್ಲಿ ನೀರು ತುಂಬಿದ ತಂಬಿಗೆ (ಚೆಂಬು) ಇಟ್ಟು, ಧಾನ್ಯವನ್ನಿಟ್ಟು ಧೂಪ ಹಾಕುತ್ತಾರೆ. ಮೂರು ಕಟ್ಟಿಗೆ ತಂದು ಅದನ್ನು ಸೀಳೀ ಸಿದಿಗೆ ಮತ್ತು ಪರಿಯಾಣಗಳನ್ನು ಇಡುವ ಹಿಡಿಕೆ ತಯಾರಿಸುತ್ತಾರೆ. ಪರಿಯಾಣಕ್ಕೆ ಕೆಲವರು ಹುಗ್ಗೆಮ್ ಕುಂಡ ಎಂದು ಕರೆದರೆ ಕೆಲವರು ತಲೆಗೊರಿ ಎಂದು ಕರೆಯುತ್ತಾರೆ. ಪರಿಯಾಣದಲ್ಲಿ ಕುದಿಸಿದ ನುಚ್ಚನ್ನು ಹಾಕುತ್ತಾರೆ. ಶವಕ್ಕೆ ಬಳಸುವ ಎಲ್ಲ ವಸ್ತುಗಳು ಸಾಮಾನ್ಯವಾಗಿ ಹೊಸದಾಗಿ ಖರೀದಿ ಮಾಡಿಯೇ ತರುವ ಸಂಪ್ರದಾಯ ಇತರ ಜನಾಂಗದಲ್ಲಿರುವಂತೆ ಇವರಲ್ಲಿಯೂ ಕಂಡು ಬರುತ್ತದೆ. ಹುಗ್ಗೆಮ್ ಕುಂಡವನ್ನು ಸತ್ತ ವ್ಯಕ್ತಿಯ ಹಿರಿಮಗ, ಹೆಂಡತಿ ಸತ್ತರೆ ಗಂಡ ಹಿಡಿದುಕೊಳ್ಳುತ್ತಾರೆ. ಕಾಡಿನಿಂದ ತಂದ ಕಟ್ಟಿಗೆಗಳನ್ನು ಸೀಳಿ ಸಿದಿಗೆ ಸಿದ್ಧಮಾಡಿ ಅದರಲ್ಲಿ ಹುಲ್ಲು ಇನ್ನಿತರ ಒಣಗಿದ ಎಲೆಗಳನ್ನು ಹಾಕುವರು. ಸ್ನಾನಮಾಡಿಸಿ, ಅಲಂಕರಿಸಿದ ಶವವನ್ನು ಸಿದಿಗೆಯ ಮೇಲಿಡುವಾಗ ಅದರ ಕೈಗಳನ್ನು ಎದೆ ಮೇಲಿಟ್ಟು ಕಟ್ಟುತ್ತಾರೆ. ಧೂಪ ಹುಗ್ಗೆಕುಂಡ ಹಿಡಿದವರು ಮುಂದೆ ಸಾಗಿ, ಹಿಂದೆ ನಾಲ್ಕು ಜನ ಶವ ಹೊತ್ತು ಸಾಗುವರು. ಅವರ ಹಿಂಬಾಲಕರು ಅಕ್ಕಿ (ನವಣಿ ಅಕ್ಕಿ) ಯನ್ನು ಶವದ ತಲೆ ಮೇಲಿಂದ ಹಾಯುವಂತೆ ಹಾರಿಸಿ ಚೆಲ್ಲುತ್ತ ಹೋಗುವರು. ಹೀಗೆ ಮಾಡಿದರೆ ಆ ಶವವು ಭೂತ-ದೆವ್ವವಾಗಿ ಕಾಡುವುದಿಲ್ಲ ಎಂದು ನಂಬುತ್ತಾರೆ. ಸ್ಮಶಾನದ ಹತ್ತಿರ ಹೋದಾಗ ಶವವನ್ನು ಹೊತ್ತವರು ಒಮ್ಮೆ ಅದನ್ನಿಳಿಸಿ ಉಳಿದವರೆಲ್ಲರೂ ನಮಿಸಿದ ನಂತರ ಮತ್ತೆ ಮುಂದೆ ಒಯ್ದು ಹೂಳುವ ಕಾರ‍್ಯದಲ್ಲಿ ತೊಡಗುವರು.

ಈ ಮೊದಲೇ ತೋಡಿದ ಕುಣಿ (ಗೋರಿ)ಯ ಬಳಿ ಶವವನ್ನಿರಿಸಿ, ಸತ್ತ ವ್ಯಕ್ತಿ ಗಂಡಾಗಿದ್ದರೆ ಅದರ ಉಡುದಾರವನ್ನು ಹರಿದು ಹಾಕುತ್ತಾರೆ. ಹೆಣ್ಣಾಗಿದ್ದರೆ ಕೈಯ ಬಳೆಗಳನ್ನು ಒಡೆದು ಹಾಕುತ್ತಾರೆ. ಇತರ ಜನಾಂಗದವರಂತೆ ಇವರಲ್ಲಿಯೂ ಕೆಲವರು ಶವದ ಬಾಯಲ್ಲಿ ಬಂಗಾರದ ತುಂಡನ್ನಿಟ್ಟು ಮತ್ತೊಮ್ಮೆ ಮುಖ ನೋಡಿ ಕೊನೆಗೆ ಕುಣಿಯಲ್ಲಿಟ್ಟು ಮಣ್ಣು ಮುಚ್ಚುತ್ತಾರೆ. ಸತ್ತವರ ಮಗ / ಗಂಡ ಇವರು ನೀರು ತುಂಬಿದ ಗಡಿಗೆಯನ್ನು ಹೆಗಲ ಮೇಲೆ ಹೊತ್ತು ಗೋರಿಯ ಸುತ್ತ ಮೂರು ಪ್ರದಕ್ಷಿಣೆ ಹಾಕಿ ದಕ್ಷಿಣ ದಿಕ್ಕಿನಲ್ಲಿ ಆ ಗಡಿಗೆಯನ್ನು ಒಡೆಯುತ್ತಾರೆ. ಎಲ್ಲರೂ ಮಣ್ಣು ಹಾಕಿದ ನಂತರ ಮನೆಗೆ ಹಿಂದಿರುಗುವ ಮೊದಲು ನೀರಿರುವ ಜಾಗಕ್ಕೆ ಹೋಗಿ ಮೈ ತೊಳೆದುಕೊಂಡು ಬರುತ್ತಾರೆ. ಇಲ್ಲದಿದ್ರೆ ಆಯಾ ಮನೆಗಳ ಜನರು ಮನೆಯ ಮುಂದೆ ಬಿಸಿನೀರಿನ ಪಾತ್ರೆಗಳನ್ನಿಟ್ಟು ಬಾಗಿಲು ಮುಚ್ಚಿಕೊಳ್ಳುತ್ತಾರೆ. ಏಕೆಂದರೆ ಮಸಣದಿಂದ ಹಿಂದಿರುಗಿದವರನ್ನು ಇದಿರುಗೊಳ್ಳಬಾರದೆಂದು ನಂಬಿಕೆ ಇದೆ. ಓಣಿಯ ಎಲ್ಲರ ಮನೆಗಳಲ್ಲಿ ತೊಳೆಯುವ ಸಾರಿಸುವ ಕೆಲಸ ನಡೆಯುತ್ತದೆ. ಸತ್ತವರ ಮನೆಯಲ್ಲಿ ದೀಪ ಹಚ್ಚಿಡುತ್ತಾರೆ. ಈ ದೀಪವನ್ನು ಎಲ್ಲರೂ ನೋಡಿ ಬರಬೇಕೆಂಬ ನಿಯಮವಿದೆ.

ಸತ್ತ ಮೂರನೆಯು ದಿನಕ್ಕೆ ದಿನ ಮಾಡುವ ವಾಡಿಕೆಯಿದೆ. On Karmadhi Karm day, or last day of the death ceremonies the relations repair to a tank or well outside the village. An effigy is made with mud, to which cooked rice etc. is offered some rice is cooked and placed on a arka leaf as an offering to the rows. (Caste and Tribles of Southern Indian by Edgar Thurston, Page 432-433)

ಹೀಗೆ ಮೂರು ದಿನದ ಕೂಳನ್ನು ಕಾಗೆಗೆ ಮುಟ್ಟಿಸುವ ಸಂಪ್ರದಾಯ ಬಹಳಷ್ಟು ಜಾತಿ-ಬುಡಕಟ್ಟುಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಸುಮಾರು ಭಾರತೀಯ ಹಿಂದೂ ಜನಾಂಗಗಳಲ್ಲಿ ಕೆಲ ಸಂಸ್ಕಾರಗಳಲ್ಲಿ ಏಕ ಸಾಮ್ಯತೆ ಇರುವುದು ಸ್ವಾಭಾವಿಕವಾಗಿ ಕಂಡು ಬರುತ್ತದೆ. ಪರಸ್ಪರ ಆಚರಣೆಗಳು ಪ್ರಭಾವ ಬೀರಿರುವುದು ಸಹಜವಾಗಿದೆ. ಹೀಗೆ ಕಾಗೆಗಳಿಗೆ ಆಹ್ವಾನಿಸಿ ಕೂಳು ತಿನ್ನಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಕಾಗೆ ಬಂದು ಅನ್ನ ಮುಟ್ಟದಿದ್ದರೆ ಸತ್ತ ವ್ಯಕ್ತಿಯ ಆಸೆ ಈಡೇರಿಲ್ಲ. ಆ ವ್ಯಕ್ತಿ ತಮ್ಮ ಹಿರಿಯರಲ್ಲಿ (ಸತ್ತವರೊಂದಿಗೆ) ಬೆರೆತಿಲ್ಲವೆಂದು ಭಾವಿಸುತ್ತಾರೆ. ಆ ಸತ್ತವರ ಅಪೇಕ್ಷೆ ಪೂರ್ತಿಗೊಳಿಸುತ್ತೇವೆಂದು ಮನೆಯವರು ಪ್ರಾರ್ಥಿಸಿಕೊಳ್ಳುತ್ತಾರೆ. ಕೊನೆಗೂ ಕಾಗೆಗಳು ಬಂದು ಆಹಾರ ಮುಟ್ಟಿದಾಗ ನಿರುಮ್ಮಳವಾಗಿ ಹಿಂದಿರುಗುವರು. ಮತ್ತೆ ಶುಚಿಗೊಳ್ಳುವರು, ಅದೇ ದಿನ ಸಾಯಂಕಾಲ ಅಥವಾ ಸ್ಮಶಾನದಿಂದ ಹಿಂದಿರುಗುವಾಗ ಶವ ಹೊತ್ತವರಿಗೆ ಮಧ್ಯೆ ಕುಡಿಸುವ ಆ ಮೂಲಕ ಅವರು ಹೆಗಲು ಕೊಟ್ಟಿದ್ದ ಭಾರವನ್ನಿಳಿಸುವ ಆಚರಣೆಯಿದೆ. ಆ ನಂತರ ಅವರವರಿಗೆ ಅನುಕೂಲವಾದಂತೆ ೯ ಅಥವಾ ೧೧ನೆಯ ದಿನ ’ದಿನ’ ಮಾಡುತ್ತಾರೆ. ಅವತ್ತು ಮನೆಯಲ್ಲಿ ಸಾರಣೆ-ಕಾರಣೆ ಮಾಡಿ, ಸಿಹಿ ಅಡಿಗೆ ಸಿದ್ಧಗೊಳಿಸಿ ಹತ್ತಿರದ ಬಂಧು-ಬಂಧವರಿಗೆಲ್ಲ ಆಹ್ವಾನಿಸಿ, ಸಿಹಿ ಊಟ ಹಾಕಿ ದುಃಖದ ಮನೆಗೊಂದಿಷ್ಟು ಬದಲಾವಣೆ ತರುತ್ತಾರೆ. ಮಾಂಸಾಹಾರವನ್ನು ಹೆಚ್ಚಾಗಿ ಇಷ್ಟಪಡುವ ಇವರು ಸಿಹಿ ಊಟದ ಮರುದಿವಸ ಖಾರದೂಟ (ಮಾಂಸದೂಟ) ವನ್ನು ಮಾಡುತ್ತಾರೆ. ಇದಕ್ಕಾಗಿ ಪ್ರಾಣಿ ಬಲಿ ಕೊಡುವ ಪದ್ಧತಿಯೂ ಉಂಟು. ಹೀಗೆ ಬಂದಂಥ ಬಾಂಧವರಿಗೆಲ್ಲ ತಿನ್ನಿಸಿ ಕುಡಿಸಿ ಕಳಿಸುತ್ತಾರೆ.

ಹಬ್ಬಹರಿದಿನಗಳು ಹಾಗೂ ದೇವರು :

ಹಬ್ಬ ಹರಿದಿನಗಳು ನಮ್ಮ ದೈನಂದಿನ ಬದುಕಿನ ಏಕತಾನಂತೆಯಿಂದ ಹೊರಬಂದು ನೆಮ್ಮದಿಯಿಂದ ಕಾಲ ಕಳೆಯಲು ಅವಶ್ಯಕವಾಗಿವೆ. ಅವರವರ ನಂಬಿಕೆಗನುಸಾರ ಅಲೌಕಿಕ ಶಕ್ತಿಗಳ ಆರಾಧನೆ, ಉಪಾಸನೆಯಲ್ಲಿ ತೊಡಗುವುದು ಸರ್ವೇಸಾಮಾನ್ಯ. ವಿಭಿನ್ನ ಧರ್ಮ ದೇವರುಗಳ ಹಿನ್ನೆಲೆಯಲ್ಲಿ ರೂಪುಗೊಂಡ ವ್ರತಾಚರಣೆಗಳು, ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಬದಲಾವಣೆಗೆ ಪೂರಕವಾಗಿರುತ್ತವೆ. ದೈವ ಸನ್ನಿಧಿಯಲ್ಲಿ ಪ್ರಾರ್ಥನೆಗಳಲ್ಲಿ ತೊಡಗಿಕೊಳ್ಳುವ ಕ್ಷಣವು ವಿಶ್ವಶಾಂತಿಯ ಕೋರಿಕೆಯಲ್ಲಿ ಸಹಭಾಗಿಯಾಗುತ್ತದೆ. ಹೊರನೋಟಕ್ಕೆ ಒಳ್ಳೆಯ ಹೊಸ ಬಟ್ಟೆ – ಸತ್ತಯುತವಾದ ವಿವಿಧ ಬಗೆಯ ಪಕ್ವಾನ್ನಗಳಿಗೆ ಆದ್ಯತೆ ನೀಡುವ ಹಬ್ಬಗಳು ಮಾನವ ಜೀವಿಯ ಸಂಪೂರ್ಣ ಆರೋಗ್ಯಕ್ಕೆ ಪ್ರಾಶಸ್ತ್ಯ ನೀಡುತ್ತವೆ. ಆಚರಣೆಯ ನಿಯಮಗಳು ಅವರವರ ಅಂತಸ್ತಿಗೆ ತಕ್ಕಂತೆ, ನಂಬಿಕೆಗೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ. ವಿವಿಧತೆಯಲ್ಲಿ ಏಕತೆಯಲ್ಲಿ ಸಾರುವ ಭಾರತೀಯ ಸಂಸ್ಕೃತಿಯಲ್ಲಿ ಈ ಅಂಶವು ಸ್ಪಷ್ಟವಾಗಿದೆ.

ಸುಸಂಸ್ಕೃತ – ಶಿಷ್ಟ ಜನಸಮುದಾಯಕ್ಕಿಂತ ಭಿನ್ನವಾಗಿ ಬದುಕು ಸಾಗಿಸುವ ಒ‌ಡ್ಡ ಜನಾಂಗದಲ್ಲಿಯೂ ದೇವರು-ಧರ್ಮ-ಜಾತ್ರೆ ಉತ್ಸವಗಳು ವಿಭಿನ್ನವಾಗಿವೆ. ಇವರಲ್ಲಿ ಶಕ್ತಿ ದೇವತೆಯ ಆರಾಧನೆ ಸಾರ್ವತ್ರಿಕವಾಗಿ ಕಂಡು ಬರುತ್ತದೆ. ಪುರುಷ ದೈವಗಳಿಗಿಂತ ಶಕ್ತಿ ದೇವರುಗಳೇ ಅಧಿಕ ಪ್ರಮಾಣದಲ್ಲಿ ಪೂಜಿತರಾಗುತ್ತಾರೆ. ದುರ್ಗುಮ್ಮ, ಮರಗಮ್ಮ, ತಾಯಮ್ಮ, ಅಂಬಾಭವಾನಿ, ಪೋಚಮ್ಮ, ಹುಲಗಮ್ಮ, ದ್ಯಾವಮ್ಮಾ, ಯಲ್ಲಮ್ಮ, ನಾಗಮ್ಮ, ಬಾಲನಾಗಮ್ಮ, ಶೆಟಿಗೆಮ್ಮ ಇವರು ಭಾರತದಾದ್ಯಂತ ಈ ಜನರಿಂದ ಪೂಜೆಗೊಳ್ಳದ ದೇವಿಯರು ಇವರನ್ನು ಕುಲದೇವರುಗಳೆಂದು ಭಾವಿಸುತ್ತಾರೆ. ಇವರುಗಳನ್ನು ಹೊರತುಪಡಿಸಿ ಸ್ವಾಮಿತಲ್ಲಿ (ಶಿವ-ಪಾರ್ವತಿ) ತಿರುಪತಿ ತಿಮ್ಮಪ್ಪ, ಬ್ರಹ್ಮಸ್ವಾಮಿ, ನರಸಿಂಹ ಸೊಲ್ಲಾಪುರದ ಸಿದ್ಧರಾಮ, ಪಂಢರಪುರದ ವಿಠೋಬಾ, ರಾಯಚೂರಿನ ಕನಕರಾಯ, ಉತ್ತರ ಕನ್ನಡದ ಮಹಾಬಳೇಶ್ವರ, ಬೆಳಗಾವಿ-ಗೋಕರ್ಣದ ಮಹಾದೇವಿ, ಮಾರುತಿ ನರಸೋಬಾ ಹಾಗೂ ಇಸ್ಲಾಂ ಧರ್ಮದ ಸಂತರನ್ನು ಸಹ ಪೂಜಿಸುತ್ತಾರೆ. ಇವೆಲ್ಲದರ ಜೊತೆಗೆ ಹಸಿರು ದೇವತೆ (ಗಿಡದ ಕೆಳಗಿನ ದೇವಿ) ಸುಂಕಲಮ್ಮ (ಅಂಗಳಕ್ಷ್ಮಿ) ಹಾಗೂ ಕುಟುಂಬದ ಹಿರಿಯರು ಮರಣ ಹೊಂದಿದ್ದರೆ ಅವರನ್ನು ಕೂಡ ದೇವತೆಗಳ ಸಾಲಿನಲ್ಲಿಟ್ಟು ಪೂಜಿಸಲಾಗುತ್ತದೆ. ಹಿರಿಯರ ಹೆಸರಲ್ಲಿ ಹೊಸಬಟ್ಟೆ ಏರಿಸಿ, ಕಣ್ಣುಬೊಟ್ಟು ಮಾಡಿಸಿ ಮಡಿವಂತಿಕೆಯಿಂದ ಪೂಜಾಚರಣೆ ಮಾಡುವ ಈ ಜನರು ಬದಲಾವಣೆ ಶಿವೋಪಾಸನೆಯಿಂದ ವಿಷ್ಣುವಿನ ಆರಾಧನೆಗೆ ತೊಡಗಿದ್ದಾರೆ. ಇವರ ದೇವರುಗಳು ಬೆಲೆಬಾಳುವ ಲೋಹ ಧಾತುಗಳಿಂದ ರೂಪುಗೊಳ್ಳುವುದಿಲ್ಲ. ಪುಟ್ಟ ಬಾಯುಳ್ಳ ಮಣ್ಣಿನ ಮಡಿಕೆಯ ಮೇಲೆ ಹೆಣ್ಣು ಮಕ್ಕಳು ಧರಿಸುವ ಆಭರಣಗಳನ್ನು (ಹಸಿರು ಬಳೆ ಕುಂಕುಮ, ಕುಪ್ಪಸ ಇತ್ಯಾದಿ) ಇಟ್ಟು ಪೂಜಿಸುವರು. ಇನ್ನೂ ಕೆಲವು ದೇವರುಗಳನ್ನು ಹುತ್ತಿನ ಮಣ್ಣಿನಿಂದ ಗೊಂಬೆಯಾಕಾರದಲ್ಲಿ ಮಾಡಿ, ಆರಾಧಿಸಿ, ಕೆಲಗಂಟೆಗಳಲ್ಲಿ ವಿಸರ್ಜಿಸುವರು. ಪೂಜಿಸುವಾಗ ಸಮೃದ್ಧಿಯ ಪ್ರತೀಕವಾದ ಛತ್ರಿ (ಕೊಡೆ) ತೊಟ್ಟಿಲು, ರಥ, ಕುದುರೆ, ಬಿದಿರಿನ ಬೆತ್ತ, ನಿಂಬೆಹಣ್ಣು, ಇವುಗಳನ್ನಿಟ್ಟಿರುತ್ತಾರೆ. ಈ ಸಂದರ್ಭದಲ್ಲಿ ದುಮಾಲಿ ಮೇಳವನ್ನು (ಶಾವಾ) ನಡೆಸುತ್ತಾರೆ. ಎಂದರೆ ಚಿಕ್ಕ ಗಾತ್ರದ ಹಲಗೆಯಂತಹ ವಾದ್ಯವನ್ನು ನುಡಿಸುತ್ತಾರೆ.

ಉತ್ತರ ಕರ್ನಾಟಕದಲ್ಲಿದ್ದ ಒಡ್ಡರಿಗೆ ರಾಯಚೂರಿನ ಕನಕಗಿರಿಯ ಯಾತ್ರಾಸ್ಥಳವಾಗಿದೆ. ಅದಕ್ಕೆ ಕನ್ಯೆಗಿರಿ ಎಂದು ಕರೆಯುತ್ತಾರೆ. ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆದು ಕರ್ನಾಟಕದ ಒಡ್ಡರೆಲ್ಲ ಒಂದೆಡೆ ಸೇರುತ್ತಾರೆ. (ವಕ್ತ್ಯ ರತ್ನಮ್ಮ ಹೇಳಿದ್ದು) ಕಲಬುರ್ಗಿಯ ಸರಡಗಿಯಲ್ಲಿ ಮುಸ್ಲಿಂ ದೇವರುಗಳಿಗೆ ನಡೆದುಕೊಳ್ಳುತ್ತಾರೆ. ಸೋಮವಾರ, ಗುರುವಾರ ಇವರಿಗೆ ವ್ರತಾಚರಣೆಗಾಗಿ ಶುಭ ದಿನಗಳಾಗಿವೆ. ಬೋವಿ ಒಡ್ಡರಿಗೆ ಕಲ್ಲೋಳಪ್ಪ ಆರಾಧ್ಯ ದೈವವಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ ಹತ್ತಿರದ ಕಲ್ಲೋಳೀ ಗ್ರಾಮದಲ್ಲಿರುವ ಆಂಜನೇಯ ದೇವರು ಕಲ್ಲೋಳಪ್ಪ ಎಂದು ಹೆಸರಾಗಿದ್ದು ಪ್ರತಿವರ್ಷ ಕಾರ್ತಿಕಮಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಜಾತ್ರೆಯಾಗುತ್ತದೆ. ಯುಗಾದಿಯಲ್ಲಿಯೂ ಜಾತ್ರೆ ನೆರವೇರುತ್ತದೆ. ಆಗ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಸೇರುತ್ತಾರೆ. ಈ ಜಾತ್ರೆಯಲ್ಲಿ ಹೋಳಿಗೆ ಕಡುಬು ವಿಶೇಷ ಆಹಾರ ಪದಾರ್ಥ. ಹೂವಿನ ಪೂಜೆ, ಎಲೆ ಪೂಜೆ ಮಾಡುವರು. ಪಂಚಾಮೃತ ( ಹಾಲು, ಮೊಸರು, ತುಪ್ಪ ಜೇನು, ಸಕ್ಕರೆ) ದಲ್ಲಿ ಅನ್ನವನ್ನು ತಯಾರಿಸಿ ದೇವರ ವಿಗ್ರಹಕ್ಕೆ ಅದನ್ನು ಮೆತ್ತುತ್ತಾರೆ. ಇದಕ್ಕೆ ಬುತ್ತಿ ಪೂಜೆ ಎಂದು ಕರೆಯುತ್ತಾರೆ. ಅನೇಕ ಭಕ್ತರು ತಮ್ಮ ಮಕ್ಕಳಿಗೆ ಕಲ್ಲೋಳೆಪ್ಪ ಎಂದು ಹೆಸರಿಡುತ್ತಾರೆ.

ಗದುಗಿನಲ್ಲಿ ಕಡ್ಗಿಗಡಬು ಹುಣ್ಣಿಮೆಯಂದು ಕರಿಯಮ್ಮನ ಜಾತ್ರೆ ಇರುತ್ತದೆ. ಸವದತ್ತಿ ಹತ್ತಿರವಿರುವ ಯಕ್ಕೇರಿಯಲ್ಲಿ ಉಕ್ಕೇರಿ ಕರಿಯಮ್ಮನ ಜಾತ್ರೆ, ಸುರಪುರ ತಾಲೂಕಿನ ನಡುಗಡ್ಡೆಯಲ್ಲಿ ಗದ್ದಮ್ಮನ ಜಾತ್ರೆ ಸಂಕ್ರಮಣದಲ್ಲಿ ಜರುಗುತ್ತದೆ. ರಾಯಭಾಗ ತಾಲೂಕಿನ ಚೆಂಚಲಿ ಗ್ರಾಮದಲ್ಲಿ ಮಾಯಮ್ಮನ ಜಾತ್ರೆಯು ವಿಶೇವಾಗಿರುತ್ತದೆ. ಇಲ್ಲಿ ರಾತ್ರಿಯೆಲ್ಲ ಭಕ್ತರು ಅಂಬಲಿಕಟ್ಟೆಯ ಮೇಲಿರುವ ಕಡಾಯಿಯಲ್ಲಿ ಜೋಳ ಮತ್ತು ನೀರನ್ನು ಹಾಕಿರುತ್ತಾರೆ. ಕಡಾಯಿಯ ಕೆಳಗೆ ಬೆಂಕಿಯಿಲ್ಲದೆ ಬೆಳಗಾಗುವುದರೊಳಗೆ ಅನ್ನ ಸಿದ್ಧವಾಗುತ್ತದೆ. ಅದನ್ನೇ ಭಕ್ತರಿಗೆಲ್ಲ ಪ್ರಸಾದವಾಗಿ ಹಂಚುತ್ತಾರೆ. ಪವಾಡ ಸದೃಶ ಘಟನೆಯಿಂದಾಗಿ ಕುತೂಹಲದಿಂದ ಸುತ್ತಲಿನ ಇತರ ರಾಜ್ಯದ ಜನರೂ ಇಲ್ಲಿಗೆ ಬರುತ್ತಾರೆ.

ಹುಲಿಗೆಮ್ಮ, ದುರ್ಗಮ್ಮ, ಎಲ್ಲಮ್ಮ ಮೊದಲಾದ ದೇವತೆಗಳಿಗೆ ಎರಡು ಕಾಲಿನ (ಕೋಳೀ) ಬಲಿ, ನಾಲ್ಕು ಕಾಲಿನ ಬಲಿ (ಕೋಣ) ಎಂಟು ಕಾಲಿನ ಬಲಿ (ಗರ್ಭಿಣಿ ಕುರಿ) ಯನ್ನು ಹರಕೆಯಾಗಿ ಅರ್ಪಿಸುವುದು ಕಂಡು ಬರುತ್ತದೆ. ಹೋಳಿಗೆಯನ್ನು ಹುಣಸೆ ಸಾರಿನೊಂದಿಗೆ ಕಲಿಸಿಕೊಂಡು ತಿನ್ನುವುದು ಇವರಲ್ಲಿ ವಿಶೇಷವಾಗಿದೆ.

ಕಲಬುರ್ಗಿಯ ವ್ಯಕ್ತಿ ಭೀಮಬಾಯಿ ಪ್ರಕಾರ ಮರಗಮ್ಮ ಮತ್ತು ಸತ್ಯನಾರಾಯಣ ಧತ್ತರಗಿ ಭಾಗಮ್ಮ ಇವರು ಮನೆದೇವರುಗಳು. ಶೇಟಕೆಮ್ಮ, ಕೆಂಪು ಸೀರಿಲಕ್ಷ್ಮಿ (ಏಳುಕೊಳ್ಳಿ) ಇವರಿಗೆ ಅತ್ಯಂತ ವಿಶ್ವಾಸಿಕರು, ಆಧುನಿಕತೆಗೆ ಮಾರುಹೋಗಿ ಇವರಲ್ಲಿಯೂ ಕಲ್ಲಿನ, ಬೆಳ್ಳಿಯ, ಪಂಚಲೋಹದ ಮೂರ್ತಿಗಳು ಕಂಡು ಬರುತ್ತಿವೆ. ಹನುಮಂತನಿಗೆ ಎಲ್ಲ ಧಾರ್ಮಿಕ ಕಾರ್ಯದಲ್ಲಿಯೂ ಪೂಜಿಸಲಾಗುತ್ತದೆ. ತಾವೇ ರೂಪಿಸಿದ ಹನುಮಾನ ಮೂರ್ತಿಗೆ ಮದುವೆಯಂಥ ಪ್ರಮುಖ ವಿಧಿಯಲ್ಲಿ ಮೊದಲ ನಮನಗಳನ್ನು ಸಲ್ಲಿಸುತ್ತಾರೆ. ಹನುಮನಿಲ್ಲದೆ ಮದುವೆಗಳೇ ಆಗಲಾರವು. ಗಂಗಿ ಪೂಜಿ (ಜಲ ಪೂಜೆ)ಯು ಎಲ್ಲಕ್ಕಿಂತ ಹೆಚ್ಚು ಕಡ್ಡಾಯವಾದುದು. ಇವರ ನಂಬಿಕೆ ಆಚರಣೆಗಳಲ್ಲಿ ಪ್ರಕೃತಿ ಪೂಜೆಗೆ ಪ್ರಾಧ್ಯಾನತೆಯಿದೆ ಎಂಬುದನ್ನು ನಿಖರವಾಗಿ ಕಾಣಬಹುದಾಗಿದೆ.

ಧಾರ್ಮಿಕವಾಗಿ ಪರಿಗಣಿಸುವಾಗ ಇವರು ಹಿಂದೂಗಳೇ ಆಗಿದ್ದಾರೆ. ದೇಶದ ವಿವಿದೆಡೆಗಳಲ್ಲಿಯ ಇವರ ದೇವತಾಚರಣೆಗಳನ್ನು ಗಮನಿಸುವಾಗ ಪ್ರಮುಖವಾಗಿ ಶಕ್ತಿದೇವತೆ ಹಾಗೂ ವಿಷ್ಣುವಿನ ಆರಾಧಕರೆಂಬುದು ತಿಳಿದು ಬರುತ್ತದೆ. ಸಾಮಾನ್ಯವಾಗಿ ಪೂಜೆಗೊಳ್ಳುವ ದೇವತೆ ಅಥವಾ ಜನಪ್ರಿಯು ದೇವರು ಎಂದರೆ ತಿರುಪತಿಯ ವೆಂಕಟರಮಣ, ಇತ್ತೀಚೆಗೆ ಬಾಲಾಜಿ ಎಂದು ಹೆಸರಿಸುತ್ತಾರೆ. ಪ್ರಮುಖ ದೇವತೆ ಯಲ್ಲಮ್ಮನನ್ನು ಹಲವು ರೂಪಗಳಲ್ಲಿ ಮತ್ತು ಸುಂಕಲಮ್ಮ, ಚೌಡಮ್ಮ, ಮಾರಮ್ಮ, ಸಿಡುಬಮ್ಮ, ಕರಿಯಮ್ಮ, ಗಂಗಮ್ಮ ಮೊದಲಾದ ಹೆಸರುಗಳನ್ನಿಟ್ಟು ಪೂಜಿಸುವರು. ಕೆಲವು ಪ್ರದೇಶಗಳನ್ನು ಕಟ್ಟಿಕೊಂಡಿದ್ದು, ತಮ್ಮೊಳಗಿನ ಕೆಳ ಜಾತಿಯ ವ್ಯಕ್ತಿಯೊಬ್ಬರನ್ನು ಪೂಜಾರಿಯಾಗಿ ನೇಮಿಸಿರುತ್ತಾರೆ. ಈ ಪೂಜಾರಿಯು ಮಂಗಳವಾರ ಹಾಗೂ ಶುಕ್ರವಾರದಂದು ಗುಡಿಗೆ ಬಂದ ಭಕ್ತರ ತೆಂಗಿನಕಾಯಿ ದೇವಿಗರ್ಪಿಸಿ ಕಪೂರದಾರತಿ ಬೆಳಗುತ್ತಾರೆ.

ದೇವಿಯ ವಾರವನ್ನು ಬಿಟ್ಟು ಇತರ ದಿನಗಳಲ್ಲಿ ಭಕ್ತರು ಸ್ವಂತ ತಾವೇ ಕಾಯಕಪೂರ ಸಮರ್ಪಣೆ ಮಾಡುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ಮಾಡುವ ಪದ್ಧತಿ ಕೆಲವು ರಾಜ್ಯ/ ಜಿಲ್ಲೆಗಳಲ್ಲಿದೆ. ತುಮಕೂರು ಜಿಲ್ಲೆಯ ಸಿರಾದಲ್ಲಿ ಕರಿಯಮ್ಮ ಹೆಚ್ಚು ಪ್ರಭಾವೀ ದೇವತೆಯಾಗಿದ್ದು ಆಕೆಯ ಗೌರವಾರ್ಥ ಹೊಸ ವರ್ಷದಂದು ಜಾತ್ರೆಯಾಗಿ ಆ ಸಂದರ್ಭದಲ್ಲಿ ಕೋಣಗಳನ್ನು ಬಲಿಕೊಡುವ ಪದ್ಧತಿ ಇದೆ. ಒಡ್ಡರು ತಮ್ಮ ವಂಶದಲ್ಲಿ ಆಗಿ ಹೋದ ಹಿರಿಯರನ್ನು ದೇವತೆಗಳಂತೆ ಪೂಜಿಸುತ್ತಾರೆ. ಬುಡಕಟ್ಟು ಅಥವಾ ಕೆಳ ಜಾತಿಯ ಜನರ ಸಾಮಾನ್ಯ  ನಂಬಿಕೆಯೆಂದರೆ, ತಮ್ಮ ಹಿರಿಯರ ಆತ್ಮಕ್ಕೆ ಶಾಂತಿ ಕೋರುವುದಕ್ಕಾಗಿ ಅವರ ಸ್ಮರಣೆಯಲ್ಲಿ ಕಲ್ಲು, ಕಟ್ಟಿಗೆ ಲೋಹಗಳಲ್ಲಿ ಪ್ರತಿರೂಪಗಳನ್ನು ನಿರ್ಮಿಸಿ ಆಗಾಗ ಸಂಕಟ ಎದುರಾದಾಗ ಪೂಜೆಗೈಯುವುದು. ಒಡ್ಡರು ಸಹ ಈ ಆಚರಣೆಯನ್ನು ಬಿಟ್ಟಿಲ್ಲ. ಇವರು ಕಲ್ಲುಗಳನ್ನು ಕತ್ತರಿಸಿ ಊರ ಹೊರಗಿಟ್ಟು ಪೂಜಿಸುವರು. ಹಿರಿಯರ ಆತ್ಮಗಳು ಕಾಡಿದಾಗ, ಕನಸಿನಲ್ಲಿ ಬಂದು ಹೆದರಿಸಿದಾಗ ಈ ಆಚರಣೆ ಸಾಮಾನ್ಯ. ಸಿಡುಬು ರೋಗ ಬಂದಾಗ ಸಿಡುಬಮ್ಮನಿಗೆ ಬೇವಿನ ಎಲೆಯೊಂದಿಗೆ ನೀರು ನೀಡುವ, ಮೊಸರು ಅನ್ನದ ನೈವೇದ್ಯ ಮಾಡಿಸುವ ಮೂಲಕ ತಮ್ಮ ಊರು/ ಓಣಿಯಿಂದ ಆ ರೋಗವನ್ನು ಹೊರಗಟ್ಟುವ ನಂಬಿಕೆ ಇವರಲ್ಲಿದೆ. ಬೇಸಿಗೆಯುದ್ಧಕ್ಕೂ ಎಲ್ಲ ಹಳ್ಳಿಗಳಲ್ಲಿ ಸಿಡುಬಮ್ಮನಿಗೆ ತಂಪೆರೆದು ಎಲ್ಲರೂ ದೇವಿಯನ್ನು ಮತ್ತೆ ಕಾಡಿಗೆ ಕಳಿಸುತ್ತಾರೆ. ಇದು ಅತ್ಯಂತ ಪ್ರಾಚೀನ ನಂಬಿಕೆಯಾಗಿದ್ದು ಆಧುನಿಕ ನಾಗರೀಕ ಸಮಾಜದಲ್ಲಿಯೂ ಈ ಆಚರಣೆಯು ಜೀವಂತವಾಗಿದೆ.

ವೈದ್ಯ ಪದ್ಧತಿ :

ದೇಶೀಯ ವೈದ್ಯ ಪದ್ಧತಿಯು ಹಲವಾರು ಜನಾಂಗಗಳಲ್ಲಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ನಾಗರೀಕತೆಯಿಂದ ದೂರ ಉಳಿದು ಕಾಡು -ಮೇಡುಗಳಲ್ಲಿ ಅಲೆದು ಆಹಾರ ಸಂಗ್ರಹಿಸುವ ಜನಸಮುದಾಯಕ್ಕೆ ತನ್ನದೇ ಆದ ಪಾರಂಪರಿಕ ವೈದ್ಯಕೀಯ ತಿಳುವಳಿಕೆಯ ಅಗತ್ಯವೂ ಇರುತ್ತದೆ. ಮಾಂಸಾಹಾರಿಗಳಾದ ಒಡ್ಡರು ಇಲಿಗಳ ಬೇಟೆಗೆ ಹೋದಾಗ ಅನೇಕ ವಿಷ ಜಂತುಗಳ ಕಡಿತದಿಂದ ಅಪಾಯಕ್ಕೀಡಾಗುತ್ತಾರೆ. ಬಿದಿರ ಮೆಳೆಗಳಲ್ಲಿ ಕಾಡು ಇಲಿಗಳನ್ನು ಹಿಡಿಯಲು ಹಾವಿನ ಹುತ್ತದಲ್ಲಿ ಕೈ ಹಾಕಿ ನಾಗರಹಾವಿನ ಕಡಿತಕ್ಕೆ ಒಳಗಾದಾಗ ಅಂಥ ವಿಷವನ್ನಿಳಿಸುವ ಜ್ಞಾನ ಅವರಲ್ಲಿರುತ್ತದೆ. ಹಾವು ಕಚ್ಚಿದ ಜಾಗಕ್ಕೆ ಒಂದು ಬಗೆಯ ಕಂದು ಬಣ್ಣದ ಗುಳಿಗೆಯನ್ನು ಇಟ್ಟು ಬಿಗಿಯಾಗಿ ಕಟ್ಟುತ್ತಾರೆ. ನಂತರ ಒಂದು ಬಗೆಯ ಬಳ್ಳಿಯನ್ನು ನೀರಿನಲ್ಲಿ ಅದ್ದಿ ಗಾಯಾಳುವಿನ ಕೈಗೆ ಹಚ್ಚಿ ಕೆಳಮುಖವಾಗಿ ತಿಕ್ಕುತ್ತಾರೆ. ನಿಧಾನವಾಗಿ ವಿಷ ಇಳಿಯುತ್ತಿರುವಾಗ ಕೈಯಲ್ಲಿ ಚಲನೆ ಆರಂಭವಾದಾಗ ಗಾಯದ ಮೇಲಿಟ್ಟ ಗುಳಿಗೆ ತೆಗೆದು ಬಿಸಾಕುತ್ತಾರೆ. ಕೊನೆಗೆ ವಿಶೇಷವಾದ ಬಳ್ಳಿಯನ್ನು ತೋಯಿಸಿ ಅದನ್ನು ಗಾಯಾಳುವಿನ ನಾಲಿಗೆಯ ಮೇಲಿಟ್ಟು ತಿಕ್ಕುವರು ಅಲ್ಲದೆ ಕಣ್ಣಂಚಿಗೂ ಅದನ್ನೇ ತಿಕ್ಕುವರು. ಈ ಪ್ರಕ್ರಿಯೆಯಿಂದ ವಿಷವೆಲ್ಲ ಹೊರಹಾಕಲಾಗುತ್ತದೆ. ವಿಷ ಹೀರುವ ಗುಳಿಗೆಯನ್ನು ಒಣಗಿದ ಬಳ್ಳಿಯ ಐದು ಎಲೆಗಳಿಂದ ತಯಾರಿಸಲಾಗುತ್ತದೆ.  ಈ ಎಲೆಯ ಪುಡಿಯನ್ನು ಬೇವಿನ ಮರದ ಹೊಸ ಕೊಂಬೆಯನ್ನು ಸೀಳಿ ಅದರಲ್ಲಿಟ್ಟು ಆ ಮರದ ತೊಗಟೆಯಲ್ಲಿ ಅಮಾವಾಸ್ಯೆಯ ಮರು ದಿನದಿಂದ ಒಂಭತ್ತು ದಿನಗಳವರೆಗೆ ಹಾಗೇ ಇಟ್ಟು ತೆಗೆದಿರುತ್ತಾರೆ. ಬೇವಿನ ಮರವು ಇವರಿಗೆ ಹಲವು ಔಷಧಿಗಳ ಆಗರವಾಗಿದೆ. ಹಾವು ಕಡಿದ ಜಾಗವನ್ನು ಸೂಜಿಯಿಂದ ಕೆರೆದು ಅಲ್ಲಿ ಕೋಳಿಯ ಗುದದ್ವಾರ ಹಚ್ಚಿ ವಿಷ ಹೀರುವಂತೆ ಮಾಡಿ, ವಿಷ ಹೊರಗೆ ತೆಗೆಯುವ ವಿಧಾನ ಇಂದಿಗೂ ಇವರಲ್ಲಿದೆ.

ಸಾಮಾನ್ಯವಾಗಿ ಹೊಸ ವೈದ್ಯ ಪದ್ಧತಿಯ (ಅಲೋಪೆಥಿಕ್) ನ್ನು ಒಪ್ಪದ ಇವರು ನಾಟಿ ಔಷಧಿಯಲ್ಲಿ ನಂಬಿಕೆ ಇಟ್ಟಿದ್ದಾರೆ.

ನ್ಯಾಯ ಪದ್ಧತಿ :

ಬುಡಕಟ್ಟು ಜನರಲ್ಲಿರುವಂತಹ ನ್ಯಾಯ ನಿರ್ಣಯಿಸುವ ಪಂಚಾಯಿತಿ ವ್ಯವಸ್ಥೆ ಇವರಲ್ಲಿದೆ. ಪ್ರಾದೇಶಿಕ ಭಿನ್ನತೆಗನುಸಾರವಾಗಿ ಈ ಪಂಚಾಯಿತಿ ಸಭೆಯ ಸದಸ್ಯರ ಮತ್ತು ಅಧ್ಯಕ್ಷರ ಹೆಸರುಗಳು ವಿಭಿನ್ನವಾಗಿವೆ. ಪಂಚ, ಚೌಧರಿ, ಯಜಮಾನಡು, ಪೆದ್ದ ಬೋಯಡು, ಬಲಿಜ, ದೇಸಾಯೆ ಶೆಟ್ಟಿ, ಕೊಡಿಂಗಾಡು ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಇವರಲ್ಲಿ ಚಿಕ್ಕವರನ್ನು ಚಿನ್ನ ಬೋಯಿಡು, ಸಂಕುಟಿ, ಭಂಡಾರಿ ಎಂದು ಹೆಸರಿಸುವರು. ಇವರ ನ್ಯಾಯ ಪಂಚಾಯಿತಿಯಲ್ಲಿ ಚರ್ಮದ ಪಾದರಕ್ಷೆಗಳಿಗೆ ಅನುಮತಿಯಿಲ್ಲ. ಹಾಗೆ ಹಾಕಿಕೊಂಡು ಪ್ರವೇಶಿಸಿದರೆ ಅವರಿಗೆ ದಂಡ ವಿಧಿಸುತ್ತಾರೆ. ಜಾತಿ ಪಂಚಾಯಿತಿಯವರು ತಮ್ಮ ಜಾತಿಯ ನಿಯಮಗಳನ್ನು ಮರಿದವರಿಗೆ, (ಊಟ-ಕುಡಿತ) ಅನೈತಿಕ ಸಂಬಂಧವಿರಿಸಿಕೊಂಡವರಿಗೆ, ಕೌಟುಂಬಿಕ ಕಲಹಗಳಲ್ಲಿ ತೊಡಗಿ ಹಿಂಸಾಚಾರಕ್ಕಿಳಿದರೆ, ಗಂಡ-ಹೆಂಡತಿ ಜಗಳವಾದರೆ ತಮ್ಮಲ್ಲಿಯೇ ಕೆಲವು ಶಿಕ್ಷೆಗಳನ್ನು ವಿಧಿಸಿ ಸಮಸ್ಯೆ ಬಗೆಹರಿಸುತ್ತಾರೆ. ಯಾವುದೇ ಕೋರ್ಟು ಕಛೇರಿಗೆ ಹೋಗುವುದಿಲ್ಲ. ಮೊದಲ ಹಂತದ ಶಿಕ್ಷೆಯೆಂದರೆ ತಮ್ಮ ಜನರ ಊಟ ಮತ್ತು ಮದ್ಯದ ಖರ್ಚನ್ನು ಭರಿಸಬೇಕು. ಸಾಕ್ಷಿ ಹೇಳುವವರು ತಮ್ಮ ಕೈಯಲ್ಲಿ ಒಂದು ಬೆತ್ತದ ತುಂಡನ್ನು ಹಿಡಿದುಕೊಂಡು ತಮ್ಮ ತಾಯಿ-ತಂದೆಯ ಹೆಸರಲ್ಲಿ ಅಣೆ ಹಾಕಿ (ಪ್ರತಿಜ್ಞೆ) ತಾನು ಸುಳ್ಳು ಹೇಳುವುದಿಲ್ಲವೆಂದು ಹೇಳಿ ಆ ಬೆತ್ತವನ್ನು ಮುರಿದು ಹಾಕಿ ಸಾಕ್ಷಿ ನುಡಿಯಬೇಕು. ಸಾಕ್ಷಿಯ ಮಾತಿನಂತೆ ಅಪರಾಧ ಸಾಬೀತಾದರೆ ಅಪರಾಧಿಗೆ ಬೀಸುವ ಕಲ್ಲನ್ನು ಹೊರುವ ಅಥವಾ ಬಂಡಿಯ ಗಾಲಿಯನ್ನು ಹೊರುವಂಥ ಶಿಕ್ಷೆ ಕೊಡುತ್ತಾರೆ. ಕೆಲವೊಮ್ಮೆ ಹಣದ ರೂಪದಲ್ಲಿ ದಂಡ ವಿಧಿಸಲಾಗುತ್ತದೆ. ಅತ್ತೆ-ಸೊಸೆಯಂದಿರ ಜಗಳ ಬಗೆ ಹರಿಸುವಾಗ ಅವಾಚ್ಯವಾಗಿ ಬೈದಂಥ ಸೊಸೆಗೆ ಬೀಸುವ ಕಲ್ಲನ್ನು ತಲೆ ಮೇಲೆ ಹೊರಿಸಿ ಆ ಓಣಿಗೆ ಮೂರು ಸುತ್ತು ಹಾಕಲು ಹೇಳುವರು. ಅನೈತಿಕ ಸಂಬಂಧಕ್ಕೆ ಹಣದ ರೂಪದಲ್ಲಿ ದಂಡ ಹಾಕುತ್ತಾರೆ. ಇತರ ಕೆಳಗಿನ ಜಾತಿಯವರೊಂದಿಗೆ ಸಂಬಂಧ ಹೊಂದಿದ್ದರೆ ಪಂಚಾಯ್ತಿ ಯಜಮಾನರು ಆ ಅಪರಾಧಿಯ ನಾಲಿಗೆಯ ಮೇಲೆ ಕಾಯಿಸಿದ ಸೂಜಿಯನ್ನಿಟ್ಟು ಶುದ್ಧೀಕರಿಸಿ ಮತ್ತೆ ತಮ್ಮ ಕುಲದಲ್ಲಿ ಸೇರಿಸುವರು.

. ಒಡ್ಡ (ಬೋವಿ) ಜನರ ಸಾಹಿತ್ಯ:

ತೆಲುಗು ಭಾಷೆಯಲ್ಲಿ ಮಾತನಾಡುವ ಈ ಜನರ ಹಾಡುಗಳು ಇತ್ತೀಚೆಗೆ ತಾವು ವಾಸಿಸುವ ಪ್ರಾದೇಶಿಕ ಭಾಷೆಯ – ಪರಿಸರದ ಪ್ರಭಾವದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸುಮಾರು ಮಹಿಳೆಯರಿಗೆ ಹಾಡು ಹೇಳೆಂದು ಕೇಳಿದಾಗ ನಮಗೆ ಹಾಡೇ ಬರುವುದಿಲ್ಲ ಎಂದು ಕಡ್ಡಿ ಮುರಿದಂತೆ ಮಾತಾಡುತ್ತಾರೆ. ಎಪ್ಪತ್ತಕ್ಕೂ ಹೆಚ್ಚು ವಯಸ್ಸಾದ ಅಜ್ಜಿಯಾಗಲೀ ಯುವತಿಯರಾಗಲಿ ಹಾಡುಗಳನ್ನು ಹೇಳಲು ಇಷ್ಟಪಡುವುದಿಲ್ಲ. ಮಾಧ್ಯಮಗಳ ಹಾವಳಿಯಿಂದಾಗಿ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳಿಂದಾಗಿ ಇವತ್ತು ಎಲ್ಲ ಜನಾಂಗದಲ್ಲಿಯೂ ಪಾರಂಪರಿಕ ಹಾಡುಗಳು ಕಣ್ಮರೆಯಾಗುತ್ತಿವೆ. ಈ ಸ್ಥಿತಿಯು ಈ ಜನರಲ್ಲಿಯೂ ಕಂಡು ಬರುತ್ತದೆ.

ಮೊಹರಂ ಪದ :

ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಜೀವನ ಸಾಗಿಸುವ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಎರಡೂ ಧರ್ಮಗಳ ಜನರು ಪರಸ್ಪರರ ಹಬ್ಬಗಳನ್ನು ಆಚರಿಸಿ ಆನಂದಿಸುತ್ತಾರೆ. ಅಗ್ಗಿ ತುಳಿಯುವ ಅಲಾಯಿ ಹೊರುವ, ಹಾಡಿ ಕುಣಿಯುವ ಪ್ರಸಂಗಗಳಲ್ಲಿ ಭಾಗವಹಿಸುತ್ತಾರೆ. ಸುದೀರ್ಘವಾಗಿ ಒಂದು ಘಟನೆಯನ್ನು ಅಥವಾ ಕಥೆಯನ್ನು ವಿವರಿಸುತ್ತ ರಂಜನೆಯೊದಗಿಸುತ್ತ ಹೇಳುವ ಮೊಹರಂ ಪದಗಳನ್ನು ಇವರು ಹಾಡುತ್ತಾರೆ.

ಮೊಹರಂ ಪದ ಒಂದು (ಸಾರಾಂಶ):

ಒಂದೂರಿನಲ್ಲಿ ಅಣ್ಣ ತಮ್ಮಂದಿರಿದ್ದರು. ಬಾಲ್ಯದಲ್ಲಿಯೇ ತಂದೆ ತಾಯಿ ತೀರಿಕೊಂಡಿದ್ದರು. ಎದುರು ಮನೆಯ ಸಾಹುಕಾರನಿಗೆ ಮಕ್ಕಳಿರಲಿಲ್ಲವಾದ್ದರಿಂದ ಇವರನ್ನೇ ಮಕ್ಕಳಂತೆ ಸಾಕಿದ. ತನ್ನ ಆಸ್ತಿಯನ್ನು ಇವರಲ್ಲಿ ಹಂಚಿದ, ಹಿರಿಯನ ಮದುವೆಯಾದ ನಂತರ ಸಾಹುಕಾರ ತೀರಿದ. ಅತ್ತಿಗೆಯಾಗಿ ಬಂದವಳು ಮೈದುನನನ್ನು  ಮಗನಂತೆ ನೋಡಿಕೊಂಡಳು. ಅಣ್ಣ ತಮ್ಮಂದಿರು ಹೊಲದ ಕೆಲಸ  ಮಾಡುತ್ತ ಇದ್ದರು. ಅಣ್ಣ ಅತ್ತಿಗೆ ಕೂಡಿ ಕಿರಿಯವನಿಗೆ ಮದುವೆ ಮಾಡಿದರು. ತಮ್ಮನ ಹೆಂಡತಿಯಾಗಿ ಬಂದವಳು ಅವರಿಬ್ಬರ ಪ್ರೀತಿಯನ್ನು ಸಹಿಸದೆ ಜಗಳ ಹಚ್ಚಿಟ್ಟಳು. ಗಂಡನಿಗೆ ಬೇರೆಯಾಗುವಂತೆ ಒತ್ತಾಯಿಸಿದಳು. ಆಸ್ತಿ ಪಾಲು ಕೇಳಲು ಹಿಂಜರಿದ ತಮ್ಮ ಹೆಂಡತಿಯ ಪ್ರೀತಿಗಾಗಿ ಅಣ್ಣನಲ್ಲಿ ಪ್ರಸ್ತಾಪಿಸಿದ. ಇದರಿಂದ ಬೇಸರಗೊಂಡ ಅಣ್ಣ-ಅತ್ತಿಗೆ ಆಸ್ತಿಯನ್ನೆಲ್ಲ ತಮ್ಮನ ಹೆಸರಿಗೆ ಬರೆದು ಮನೆ ಬಿಟ್ಟು ಹೋಗುತ್ತಾರೆ. ನಾಲ್ಕು ಮಕ್ಕಳೊಂದಿಗೆ ಹಮಾಲಿ ಕೆಲಸ ಮಾಡುತ್ತ ಜೀವನ ಸಾಗಿಸುವುದು ಕಷ್ಟದಾಯಕವಾಗಿತ್ತು. ಅಂತಹದರಲ್ಲಿ ಬರಗಾಲ ಬಂತು. ತಿನ್ನಲು ಅನ್ನವಿಲ್ಲದೆ ಒದ್ದಾಡುತ್ತ ಕಾಲ ತಳ್ಳುತ್ತಾರೆ. ಅಣ್ಣನ ಸಂಕಟ ಕಂಡು ತಮ್ಮ ಏನಾದರೂ ಸಹಾಯ ಮಾಡಲು ಯತ್ನಿಸುತ್ತಾನೆ. ತನ್ನ ಹೆಂಡತಿ ಮನೆಯಲ್ಲಿಲ್ಲದ ಸಮಯ ಕಂಡು ಅತ್ತಿಗೆಯನ್ನು ಕರೆದು ಒಂದು ಸೇರು ಜೋಳ ಕೊಡುತ್ತಾನೆ. ಬಟ್ಟೆ ಒಗೆಯಲು ಹೋದ ಹೆಂಡತಿ ಹಿಂದಿರುಗಿ ಬರುತ್ತಲೇ ಗಂಡನನ್ನು ಅನುಮಾನದಿಂದ ಕಂಡು ಜೋಳದ ಚೀಲ ಮತ್ತು ಧಾನ್ಯ ಬಿದ್ದುದನ್ನು ನೊಡಿ ನೆಗೆಣ್ಣಿ (ಓರಗಿತ್ತಿ)ಯ ಮನೆಗೆ ರೋಷಾವೇಷದಲ್ಲಿ ಹೋಗಿ ಅಲ್ಲಿ ಒಲೆ ಮೇಲಿದ್ದ ಜೋಳದ ಗಡಿಗೆಯನ್ನು ಕಾಲಿಂದ ಒದ್ದು  ಬೀಳಿಸುತ್ತಾಳೆ. ಅಣ್ಣನ ಮಕ್ಕಳು ಚಿಕ್ಕಮ್ಮನಿಗೆ ವಿನಂತಿಸಿಕೊಂಡರೂ ಕೇಳುವುದಿಲ್ಲ. ಕೆಳಗೆ ಬಿದ್ದ ನುಚ್ಚು ತಿನ್ನುವ ಮಕ್ಕಳನ್ನು ಕಂಡು ತಂದೆ-ತಾಯಿ ಕಣ್ಣೀರಿಡುತ್ತಾರೆ. ಅಷ್ಟಾದರೂ ಅಣ್ಣನು ತನ್ನ ತಮ್ಮ ಸುಖವಾಗಿರಲೆಂದು ಹರಸಿದನು. ಪೇಟೆ ಕಡೆ ಹೋಗುವಾಗ ತಮ್ಮನ ಭೇಟಿಯಾಗುತ್ತದೆ. ಅಣ್ಣನು ತಮ್ಮನಿಂದ ಐದು ರೂಪಾಯಿ ಸಾಲ ಪಡೆಯುತ್ತಾನೆ. ಅದರಲ್ಲಿ ಮೂರು ರೂಪಾಯಿಯ ಅಕ್ಕಿಯನ್ನು, ಎರಡು ರೂಪಾಯಿಯ (ತೊಗರಿಗೆ ಹೊಡೆಯುವ) ಎಣ್ಣೆಯನ್ನು ಖರೀದಿಸುತ್ತಾನೆ. ವಿಷ ಕಂಡು ಗಾಬರಿಯಾದರೂ ದೃಢಮನಸ್ಸಿನಿಂದ ಅಕ್ಕಿಯಲ್ಲಿ ಎಣ್ಣೆ ಬೆರೆಸಿ ಅನ್ನ ಮಾಡಿದ ಅತ್ತಿಗೆ ಮೊದಲು ಮಕ್ಕಳಿಗೆ ಉಣಿಸುತ್ತಾಳೆ. ನಂತರ ಗಂಡ ಹೆಂಡತಿ ಇಬ್ಬರೂ ಆ ವನ್ನವನ್ನು ಸೇವಿಸಿ ಪ್ರಾಣ ಬಿಡುತ್ತಾರೆ. ಆದರೆ ಅವರ ದೊಡ್ಡ ಮಗ ಇನ್ನೂ ಸತ್ತಿರುವುದಿಲ್ಲ. ಚಿಕ್ಕಪ್ಪನಲ್ಲಿಗೆ ಹೋಗುತ್ತಾನೆ. ಅವನು ಈಗಾಗಲೇ ಕೆಟ್ಟಕನಸಿನಿಂದ ಗಾಬರಿಗೊಂಡು ಎಚ್ಚೆತ್ತುಕೊಂಡವನು ಇನ್ನಷ್ಟು ದಿಗಿಲುಕೊಂಡು ಬಾಗಿಲು ತೆರೆದು ಹೊಸ್ತಿಲಲ್ಲಿ ಬಿದ್ದ ಮಗುವಿನ ಶವವನ್ನು ಎತ್ತಿಕೊಂಡು ಅಣ್ಣನ ಮನೆಗೆ ಬಂದಾಗ ಅಲ್ಲಿ ಶವಗಳ ರಾಶಿಯೇ ಬಿದ್ದಿರುತ್ತದೆ. ದೇವರಂಥ ಅಣ್ಣ-ಅತ್ತಿಗೆಯನ್ನು ಕಳೆದುಕೊಂಡನಲ್ಲಾ, ಎಂದು ಪರಿಪರಿಯಾಗಿ ಅತ್ತು, ಅಲ್ಲಿಯೇ ಪಾತ್ರೆಯಲ್ಲಿದ್ದ ವಿಷದ ಅನ್ನವನ್ನು ತಿಂದು ಹೆಂಡತಿಯನ್ನು ಶಪಿಸಿ ಸಾವಿನಲ್ಲಾದರೂ ಪಾಲು ಕೊಟ್ಟೆಯಲ್ಲಾ ಅಣ್ಣಾ ಎಂದು ಅವರ ಕಾಲಿಗೆ ಬಿದ್ದು ಪ್ರಾಣ ಬಿಡುತ್ತಾನೆ.  ರಾಮ ಲಕ್ಷ್ಮಣರಂತಿದ್ದ ಅಣ್ಣತಮ್ಮಂದಿರು, ಸೀತೆ ಲಕ್ಷ್ಮಣರಂತಿದ್ದ ಅತ್ತಿಗೆ ಮೈದುನರು ಪರಸ್ಪರ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾಗುವ ತಮ್ಮನ ಹೆಂಡತಿಯ ಸ್ವಾರ್ಥ ಬುದ್ಧಿಯ ಕತೆ ಈ ಪದದ ಜೀವಾಳವಾಗಿದೆ.