ಪೀಠಿಕೆ

“ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು”, ಮೇಟಿಯಲ್ಲಿ ರಾಟಿಯು ನಡೆದುದಲ್ಲದೆ ದೇಶದಾಟವೇ ಕೆಡಗು | ಸರ್ವಜ್ಞ” ಎಂಬ ಸರ್ವಜ್ಞರ ಹಿತನುಡಿಯಂತೆ ಭಾರತ ದೇಶವು ಒಕ್ಕಲುತನ ಹೊಂದಿದ ಪ್ರಮುಖ ದೇಶವಾಗಿದೆ. ಭಾರತದ ಪುಣ್ಯಭೂಮಿಯು ನಿಸರ್ಗ ಸಂಪತ್ತಿನಿಂದ ತುಂಬಿಕೊಂಡಿದೆ. ಈ ನಿಸರ್ಗ ಸಂಪತ್ತಿನಲ್ಲಿ ನಾವು ಸಾಗುವಳಿ ಮಾಡುವ ಭೂಮಿಯ ಕ್ಷೇತ್ರವು ೩೬ ಕೋಟಿ ಎಕರೆ ಪ್ರದೇಶವಿದೆ. ೧೧೦ ಕೋಟಿ ಜನಸಂಖ್ಯೆ ಇದೆ. ಆದರೆ ಭೂಮಿ ವಿಸ್ತಾರ ಹೊಂದಲು ಅಸಾಧ್ಯ. ಆದ್ದರಿಂದ ನಾವು ಇದ್ದ ಭೂಮಿಯಲ್ಲಿಯೇ ಹೆಚ್ಚು ಇಳುವರಿ ಬರುವಂತೆ ಬೆಳೆಯಬೇಕಾಗುತ್ತದೆ. ಭಾರತದಲ್ಲಿ ನೀರಾವರಿ ಕ್ಷೇತ್ರಕ್ಕಿಂತ ಮಳೆಯ ಆಶ್ರಯದಿಂದ ಬೆಳೆಯನ್ನು ಬೆಳೆಯುವ ಕ್ಷೇತ್ರ ಹೆಚ್ಚಾಗಿದೆ. ಭಾರತದಲ್ಲಿ ಆರನೇ ಭಾಗದಷ್ಟು ನೀರಾವರಿ, ಹತ್ತನೇ ಭಾಗದಷ್ಟು ಒಣ ಬೇಸಾಯ ಮಾಡಲಾಗುತ್ತದೆ. ಅದರಲ್ಲೂ ವಿಜಾಪೂರ – ಬಾಗಲಕೋಟ ಜಿಲ್ಲೆಯೆಂದರೆ ಬರಗಾಲ ಜಿಲ್ಲೆಯೆಂದು ಹೆಸರು ಪಡೆದಿವೆ. ಹಾಗಾಗಿ ಈ ಭಾಗದ ರೈತರು ಎದುರಿಸುವ ಸಮಸ್ಯೆಗಳು ಬಹಳಷ್ಟಿವೆ. ಅವುಗಳೆಂದರೆ ನಮ್ಮ ನಾಡಿನಲ್ಲಿ ಅದರಲ್ಲೂ ನಮ್ಮ ತಾಲ್ಲೂಕ ಭೂ ಪ್ರದೇಶದಲ್ಲಿ ಒಂದು ತರಹದ ಭೂಮಿ ಒಂದು ಕಡೆ ಇದ್ದರೂ, ಕಡಿಮೆ ಭೂಮಿಯಿದ್ದ ಕ್ಷೇತ್ರದಲ್ಲಿ ಅಣ್ಣ ತಮ್ಮಂದಿರು ಬೇರೆ ಆಗಿ ಹೊಲದಲ್ಲಿ ತುಂಡು ಜಮೀನುಗಳು ಬಹಳಷ್ಟು ಆಗಿವೆ. ಇದರ ಕಾರಣದಿಂದಾಗಿ ಕಡಿಮೆ ಕ್ಷೇತ್ರವಿದ್ದವರು ಒಣ ಬೇಸಾಯದಲ್ಲಿ ಒಕ್ಕಲುತನ ಮಾಡುವದೂ ತೀರ ಕಷ್ಟದಾಯಕಾವಾಗಿದೆ. ಯಾಕೆಂದರೆ ನಮ್ಮಲ್ಲಿ ಇನ್ನೂ ಹಿಂದಿನ ಕಾಲದ ಬೇಸಾಯ ಪದ್ಧತಿ ರೂಢಿಯಲ್ಲಿದೆ. ಅಂದರೆ ಎತ್ತಿನ ಸಹಾಯದಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇದರಿಂದ ಹೊಟ್ಟು, ಮೇವು, ಕೃಷಿ ಸಲಕರಣೆಗಳನ್ನು ಪೂರೈಸಿಕೊಳ್ಳಲು ಮಾಡಲು ಕಷ್ಟವಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೇನೆಂದರೆ ರೈತರಾದವರು ಸಹಕಾರದಿಂದ ಭೂಮಿಯನ್ನು ಸಾಗುವಳಿ ಮಾಡಬೇಕು. ನಾವು ಮೊದಲು ನಮ್ಮನ್ನೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಯಾಕೆಂದರೆ ನಮ್ಮ ಮನೆಯಲ್ಲಿ ಎಷ್ಟು ಜನರು ವಾಸಿಸುತ್ತಿದ್ದೇವೆ. ನಮ್ಮ ಭೂಮಿ ಎಷ್ಟಿದೆ, ಎಂಥ ಭೂಮಿ ಇದೆ, ಅದು ಎಲ್ಲಿದೆ, ಹೇಗಿದೆ, ಎಂಬುದನ್ನೆಲ್ಲಾ ನಾವು ಮೊದಲು ವಿಚಾರಿಸಬೇಕು. ಅದರ ಜೊತೆಗೆ ನಮ್ಮ ಬೂಮಿಯಲ್ಲಿ ಏನು ಬೆಳೆಯುತ್ತದೆ. ಹೇಗೆ ಬೆಳೆಯುತ್ತದೆ. ಎಷ್ಟು ಬೆಳೆಯುತ್ತದೆ. ಇದರಿಂದ ನಾವು ಸುಖವಾಗಿರಲು ಏನು ಮಾಡಬೇಕು. ಹೇಗೆ ಮಾಡಬೇಕೆಂಬುದನ್ನು ಕೃಷಿ ತಜ್ಞರನ್ನು ಭೇಟಿ ಮಾಡಿ ಅವರಿಗೆ ನಮ್ಮ ಭೂಮಿಯನ್ನು ತೋರಿಸಿ ಅವರ ಸಲಹೆಯಂತೆ ದುಡಿದರೆ ಸುಖವಾಗುವುದು. ಇದರ ಜೊತೆಗೆ ಮನೆಯಲ್ಲಿ ಸರ್ವರೂ ದುಡಿಯಬೇಕು. ಆಕಳು, ಎಮ್ಮೆ, ಎತ್ತು ಮುಂತಾದ ದನಕರುಗಳನ್ನು ಸಾಕಬೇಕು. ಇದರಿಂದ ನಮಗೆ ಉಣಲಿಕ್ಕೆ ಹಾಲು, ಮೊಸರು, ಬೆಣ್ಣೆ – ತುಪ್ಪ, ಮಜ್ಜಿಗೆ ಸಿಗುತ್ತದೆ. ಅದರ ಜೊತೆಗೆ ಹೊಲದಲ್ಲಿ ಗಳೆ ಹೊಡಿಯಲಿಕ್ಕೆ ಜವಾರಿ ಎತ್ತುಗಳು ಮನೆಯಲ್ಲಿ ಹುಟ್ಟುತ್ತದೆ. ಅದರ ಜೊತೆಗೆ ಹೊಲಕ್ಕೆ ಹಾಕಲು ಗೊಬ್ಬರ ಸಿಗುತ್ತದೆ. ಆದ ಕಾರಣ ರೈತರು ದನಕರುಗಳನ್ನು ಹೆಚ್ಚು ಸಾಕಬೇಕು. ಹೈನವಿದ್ದರೆ ಆಹಾರ, ಧಾನ್ಯ ಕಡಿಮೆ ಹೋಗುತ್ತದೆ ಎಂದು ಶ್ರೀ ಘನಮಠ ಶಿವಯೋಗಿಗಳು ಹೇಳಿದ್ದಾರೆ. ಅವರು ಹೈನದ ಬಗ್ಗೆ ವರ್ಣನೆ ಹೀಗೆ ನೀಡಿದ್ದಾರೆ.

ಅಚ್ಚೇರು ಒಬ್ಬರಿಗೆ ಆರದರಿಬ್ಬರಿಗೆ
ಮಜ್ಜಿಗೆ ಹಾಕಿದ್ದರೆ ಮತ್ತೊಬ್ಬರಿಗೆಯೆಂದು

ನವಣಿ ಅನ್ನದ ಕುರಿತು ವರ್ಣಿಸಿದ್ದಾರೆ. ಈ ಕಾರಣಗಳಿಂದಾಗಿ ಮನೆಯಲ್ಲಿ ಸಮೃದ್ಧವಾದ ಹೈನ ಇರಬೇಕು. ಮನೆಯಲ್ಲಿರುವ ಜನರು ಹೈನುಗಾರಿಕೆ ಮಾಡಿದರೆ ವ್ಯಾಪಾರದ ಜೊತೆಗೆ ಆರೋಗ್ಯವು ಇರುತ್ತದೆ. ಇದರಿಂದ ಅವರು ತಮ್ಮ ಗಟ್ಟಿ ಆರೋಗ್ಯದೊಂದಿಗೆ ಹೆಚ್ಚಿನ ಬೇಸಾಯವನ್ನು ಹೊಲದಲ್ಲಿ ಮಾಡುತ್ತಾರೆ. ಈ ಪ್ರಕಾರವಾಗಿ ಒಣ ಬೇಸಾಯ ಪದ್ಧತಿಯನ್ನು ನಮ್ಮಲ್ಲಿ ರೂಢಿಸಿಕೊಂಡು ಬಂದಿದ್ದಾರೆ.

ಒಣ ಬೇಸಾಯ ಎಂದರೇನು?

ಮಳೆಯ ಆಶ್ರಯದಿಂದ ಭೂಮಿಯಲ್ಲಿ ಬೆಳೆಯನ್ನು ತೆಗೆಯುವ (ಅನುಭವ) ಕ್ರಮವನ್ನೇ ಒಣ ಬೇಸಾಯ ಎಂದು ಕರೆಯುತ್ತಾರೆ. ಬಿಜಾಪೂರ ಬಾಗಲಕೋಟ ಜಿಲ್ಲೆಯೆಂದರೆ ಬರದ ಜಿಲ್ಲೆಯೆಂದೆ ಹೆಸರುವಾಸಿ. ಇಲ್ಲಿ ಬಹುಜನರ ಉದ್ಯೋಗ ವ್ಯವಸಾಯವೇ ಆಗಿದೆ. ಇಲ್ಲಿ ಶೇ.೮೦ ಕ್ಕಿಂತಲೂ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಸರಿಯಾದ ಮಳೆಯಿಲ್ಲ. ರೈತನಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ರೈತನ ಮುಖದಲ್ಲಿ ಕಳೆಯಿಲ್ಲ. ಹೀಗಾಗಿ ರೈತನು ಕಂಗಾಲಾಗಿದ್ದಾನೆ. ಇಂದು ವ್ಯವಸಾಯವೆಂದರೆ “ಹೀನ ಕಸುಬು” ಎನ್ನುವಂತಹ ಪರಿಸ್ಥಿತಿ ಉದ್ಭವಿಸಿದೆ. ರೈತನ ಸಮಸ್ಯೆಗಳು ಪರಿಹಾರ ಆಗುವುದರ ಬದಲು ಬಿಡಗಾಯಿಸುತ್ತಿರುವುದು ಶೋಚನೀಯವಾಗಿದೆ.

ಒಣ ಬೇಸಾಯ ಪದ್ಧತಿಯ ವಿವರಣೆ

“ಕರಕಿ ಹೊಲಾ, ಸರಕಾರಿ ಸಾಲ, ಪರಕೀಯರ ಜಾಲ ಇವು ಮೂರು ಭಾರತಕ್ಕೆ ಮೂಲ” ಎಂಬಂತೆ ರೈತನು ಮೊದಲು ತನ್ನ ಜಮೀನಿನಲ್ಲಿ ಕರಕಿ, ಕಣಿಗ್ಯಾ, ಮುಳ್ಳುಕಂಟಿ ಗಿಡ, ಬೆಳೆಗೆ ಹಾನಿ ಮಾಡುವ ಎಲ್ಲಾ ಹೊಲಸು, ಹುಲ್ಲು ಕಡ್ಡಿ ಕಸವನ್ನು ಕಡಿದು ತೆಗೆದು ಹೊಲವನ್ನು ಹಸನು ಮಾಡಬೇಕು. ಗಿಡ ಮರ ಮುಳ್ಳುಕಂಟಿ ಕಡಿದು ನೇಗಿಲು ಹೊಡೆದು ಕುಂಟಿಯಿಂದ ಹರಗಿ ಕಸಕಡ್ಡಿ ತೆಗೆದು ಹೊಲಸು ಆರಿಸಿ ಹದಗೊಳಿಸಬೇಕು. ಕೃಷಿಕರಾದವರು ಸಾಲವನ್ನು ಮಾಡಿ ಹಬ್ಬವನ್ನು ಮಾಡಬಾರದು. ಸಾಲವನ್ನು ಮಾಡಿ ಮನೆಗಳನ್ನು ಕಟ್ಟಿಸಬಾರದು. ಸಾಲವನ್ನು ಮಾಡಿ ಲಗ್ನ ಮಾಡಬಾರದು. ಆಭರಣ ಖರೀದಿಸಬಾರದು. ಆದರೆ ಸಾಲವನ್ನು ಮಾಡಿ ಭೂಮಿಯನ್ನು ನಟ್ಟು ಕಡಿಸಿ ಹಸನ ಮಾಡಬೇಕು. ಒಡ್ಡು ಹಾಕಿಸಬೇಕು. ಹೊಲಗಟ್ಟಿ ಕಟ್ಟಿಸಬೇಕು. ಗೊಬ್ಬರ ಹಾಕಿಸಬೇಕು. ಉತ್ತಮ ಬೀಜಗಳನ್ನು ತಂದು ಬಿತ್ತಬೇಕು. ಹೀಗೆ ಸಾಲ ಮಾಡಿ ಭೂಮಿಗೆ ಖರ್ಚು ಮಾಡಿದರೆ ಆ ಭೂದೇವಿ ಫಲವನ್ನು ಕೊಡದೆ ಇರಲಾರಳು. ಈ ರೀತಿ ಕೃಷಿ ಕಾಯಕದ ಬಗ್ಗೆ ನಿರಂತರ ಆಲೋಚಿಸಿ ಕೃಷಿಯ ಬಗ್ಗೆ ಚಿಂತನಶೀಲರಾಗಿ ಕೃಷಿ ಜ್ಞಾನ ಸಂಪನ್ನರಾದವರು ವಿರಳ. ಕೃಷಿಯ ಬಗ್ಗೆ ಚಿಂತಿಸಿ ಗ್ರಂಥ ರೂಪದಲ್ಲಿ ಆ ಜ್ಞಾನವನ್ನು ಅನುಭವಿಸಿದ ಅನುಭವಗಳನ್ನು ಸಂಗ್ರಿಹಿಸಿ ಕೃಷಿ ಜ್ಞಾನ ಪ್ರದೀಪಿಕೆ ಬರೆದ ಶ್ರೇಯಸ್ಸು ಘನಮಠ ಶಿವಯೋಗಿಗಳಿಗೆ ಸಲ್ಲುತ್ತದೆ. ಅದೇ ರೀತಿ ಒಣ ಬೇಸಾಯದಲ್ಲಿ ಬರುವ ಭೂಮಿಯ ಕುರಿತು ಈ ರೀತಿ ಹೇಳುತ್ತಾರೆ.

ಅಲ್ಪ, ಅನಿಶ್ಚಿತ, ಅಕಾಲಿಕ ಮಳೆಯಾಗುವ ಪ್ರದೇಶದಲ್ಲಿ ಯೋಗ್ಯ ಉಪಾಯಗಳಿಂದ ಮಣ್ಣು ಹಾಗೂ ಹಸಿ ಸಂಗ್ರಹಿಸಿ ಉತ್ತಮ ಬೆಳೆ ಬೆಳೆಯಲು ಕ್ರಮಬದ್ದವಾದ ತಾಂತ್ರಿಕ ಪದ್ದತಿಗಳನ್ನು ಅನುಸರಿಸುವುದೇ ಒಣ ಬೇಸಾಯ ಎಂದು ಕರೆಯುತ್ತಾರೆ.

ಮಣ್ಣು ಮತ್ತು ನೀರಿನ ಸಂರಕ್ಷಣಾ ವಿಧಾನ

ಮಣ್ಣು: ಅದರ ಮಹತ್ವ
ಮಣ್ಣು ಕಾಮಧೇನು ಮಣ್ಣು ಕಲ್ಪವೃಕ್ಷ
ಮಣ್ಣು ಚಿಂತಾಮಣಿ ಮಣ್ಣು ಪರುಷದ ಖಣಿ
ಮಣ್ಣು ಜಗದೊಳಗೆ ಬೆಲೆ ನೋಡಾ
ಮಣ್ಣನ್ನು ನಂಬಿ ಮಣ್ಣಿನೊಳಗೆ ದುಡಿದು
ಸರ್ವಧಾನ್ಯ ಬೆಳೆಯುವದೆ ಪುಣ್ಯವೆಂದ
ಚಿತ್ತರಗಿ ವಿಜಯ ಮಹಾಂತೇಶ.

ಮಣ್ಣನ್ನು ನಂಬಿ ಮಣ್ಣಿನಿಂದ ಬದುಕಿದೆನು. ಮಣ್ಣಿನಲ್ಲಿ ಅನ್ನ, ಮಣ್ಣಿನಲ್ಲಿ ಚಿನ್ನ, ಮಣ್ಣೇ ಲೋಕದೊಳಗೆ ಬೆಲೆ ನೋಡಾ, ಮಣ್ಣಿನೊಳಗೆ ದುಡಿದು ಸರ್ವಧಾನ್ಯಗಳ ಬೆಳೆದು ಅನ್ಯರ ಬಯಸದೆ ಜಗದೊಳಗೆ ಮಣ್ಣಿನಲ್ಲಿ ದುಡಿಯುವ ರೈತನೆ ಧನ್ಯ ಘನಮಠೇಶ. ಮಣ್ಣು ಕಾಮಧೇನು, ಮಣ್ಣು ಕಲ್ಪವೃಕ್ಷ, ಮಣ್ಣು ಚಿಂತಮಣಿ, ಮಣ್ಣು ಪರುಷದ ಖಣಿ, ಪುಣ್ಯಭೂಮಿ ಎಂದು ಘನಮಠ ಶಿವಯೋಗಿಗಳು ಮಣ್ಣಿಗೆ ಒತ್ತು ಕೊಟ್ಟಿದ್ದಾರೆ. ಭೂಮಿಯನ್ನು ವಿಶ್ವಾಸದಿಂದ ನಂಬಿ ಭೂಮಿಯ ಅಭಿವೃದ್ಧಿಗೆ ಖರ್ಚು ಮಾಡಿದ ದ್ರವ್ಯವು, ಶ್ರಮವಹಿಸಿ ಮಾಡಿದ ಮೇನತ್ತು ಫಲವನ್ನು ಕೊಡದೆ ಹೋಗಲಾರದು.

ಒಂದು ಇಂಚು ಮಣ್ಣು ತಯಾರಾಗಬೇಕಾದರೆ ಒಂದು ಸಾವಿರ ವರ್ಷಗಳು ಬೇಕು. ರೈತನ ನಿರ್ಲಕ್ಷ್ಯದಿಂದ ಸವಕಳಿಯಾಗುವ ಮಣ್ಣಿನ ಲೆಕ್ಕ ನೋಡಿದರೆ ಗಾಬರಿಯಾಗುತ್ತದೆ. ಒಂದು ರಭಸದ ಮಳೆಗೆ ಒಂದು ಎಕರೆ ಹೊಲದೊಳಗೆ ಸುಮಾರು ಎರಡು ನೂರು ಚಕ್ಕಡಿ ಮಣ್ಣು ಕಿತ್ತುಕೊಂಡು ಹೋಗುವುದು. ಎಂಥಾ ಮಣ್ಣು ಹೋಗುವುದೆಂದರೆ ಸಾಗುವಳಿ ಮಾಡಿದ ಭೂಮಿಯ ಮೇಲಿನ ಮಣ್ಣು ಪೊಳ್ಳು ಆಗಿ ಬೇಸಿಗೆಯ ಬಿಸಿಲಿಗೆ ಕಾಯ್ದು ಫಲವತ್ತತೆಯನ್ನು ಪಡೆದಿರುತ್ತದೆ. ಗೊಬ್ಬರವನ್ನು ಹಾಕಿದಾಗ ಅದು ಮೇಲಿನ ಮಣ್ಣಿನಲ್ಲಿಯೇ ಕೂಡಿರುತ್ತದೆ. ರೆಂಟೆ ಕುಂಟೆಯಿಂದ ಗುಳೆ ಮಾಡಿದರೂ ೯ ಇಂಚು ಆಳದಲ್ಲಿಯೇ ಮಾಡಬೇಕಾಗುತ್ತದೆ. ನೇಗಿಲು ಹೊಡೆಯಲಿ ಅಥವಾ ಟ್ರ್ಯಾಕ್ಟರ್‌ಗಳಿಂದ ಉಳುಮೆ ಮಾಡಲಿ ೧೨ ಇಂಚು ಆಳದ ಮಣ್ಣಿನಲ್ಲಿ ಮಾಡಬೇಕಾಗುತ್ತದೆ. ಇಂಥ ಸಾಗುವಳಿಯಿಂದ ಸಡಿಲಾದ (ಪೊಳ್ಳಾದ) ಹಾಗೂ ಫಲವತ್ತತೆಯನ್ನು ಪಡೆದ ಕೆನೆ ಮಣ್ಣು ನಾಶವಾಗುತ್ತದೆ. ಕೆನೆ ಮಣ್ಣು ಹೇಗೆ ಇರುತ್ತದೆ ಎಂದರೆ ಹಾಲನ್ನು ಒಂದು ಪಾತ್ರೆಯೊಳಗೆ ಇಟ್ಟು ಕಾಸಿದರೆ ಹಾಲಿನೊಳಗಿನ ಸತ್ವವೆಲ್ಲವೂ ಕೆನೆಯ ರೂಪವಾಗಿ ಮೇಲೆ ಬರುತ್ತದೆ. ಅದನ್ನು ಹೆಪ್ಪು ಹಾಕಿ ಮೊಸರು ಮಾಡಿದರೆ ಮೇಲಿನ ಕೆನೆ ಮೊಸರಿನಲ್ಲಿರುವ ಸತ್ವ ಹಾಗೂ ರುಚಿ ಹಾಗೂ ಅದೇ ಪಾತ್ರೆಯೊಳಗೆ ಇರುವ ಕೆಳಗಿನ ಮೊಸರಿನಲ್ಲಿ ಕಡಿಮೆ ಇರುವುದೋ ಹಾಗೇ ಭೂಮಿಯ ಮೇಲಿನ ಮಣ್ಣಿನಲ್ಲಿ ಬಹಳ ಸತ್ವಯುತ ಫಲವತ್ತತೆ ಇರುತ್ತದೆ. ಇಂಥ ಉತ್ತಮ ಮಣ್ಣು ರಭಸದ ಮಳೆಗೆ ಹರಿದು ನೀರಿನ ಕೂಡ ಹೋಗುವುದರಿಂದ ಭೂಮಿಯ ಶಕ್ತಿಯೂ ಕಡಿಮೆಯಾಗುತ್ತದೆ, ಹೊಲದಲ್ಲಿಯ ಮಣ್ಣು ಕಡಿಮೆಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಮೇಲಿನ ಮಣ್ಣು ಸವಕಳಿಯಾಗುವುದರಿಂದ ಹೊಲವು ತಗ್ಗು ದಿನ್ನೆಗಳಿಂದ ಕೊರಕಲು ಆಗುತ್ತದೆ. ಇದರಿಂದ ಹಸಿಯಾಗದೆ ಬಿತ್ತಿದ ಬೆಳೆಗೆ, ಹಸಿಸಾಲದ ಕಸುವೂ ದೊರೆಯದೆ, ಫಲವು ಚೆನ್ನಾಗಿ ಬರುವುದಿಲ್ಲ. ಇಂಥ ಮಣ್ಣು ಹೋಗುವುದರಿಂದ “ರೈತನ ಕಣ್ಣು ಹೊದಂತೆ, ದೇಹಕ್ಕೆ ಹುಣ್ಣು ಆದಂತೆ, ನಾಡಿನ ಪುಣ್ಯ ತೀರಿದಂತೆ” ಆಗುವುದು. ಆದ್ದರಿಂದ ಇದನ್ನು ತಿಳಿದು ಹೊಲಗಳಿಗೆ ಮುಖ್ಯ ಒಡ್ಡುಗಳು ಬೇಕು. ಒಡ್ಡು ರೈತನ ಬ್ಯಾಂಕ್, ಮಣ್ಣಿನ ಠೇವಣಿ ಇದ್ದರೆ ಅದರಲ್ಲಿ ಅನ್ನವೂ ಇದೆ ಚಿನ್ನವೂ ಇದೆ. ಸರ್ವಧಾನ್ಯಗಳೂ ಇವೆ. ಸಂಪತ್ತೂ ಇದೆ. ಸಂತೃಪ್ತಿಯೂಟ ಇದೆ. ಹೇಗೆಂದರೆ ಆನಿ ಎತ್ತರ ಹರಿವ ನೀರು ಗೇಣು ಎತ್ತರ ಹರಿಯುವಂತೆ ಮಾಡಬೇಕಾಗುತ್ತದೆ. ಇಳುಕಲಿಗೆ ಅಡ್ಡವಾಗಿ ಒಡ್ಡು ಹಾಕಬೇಕು. ಅಂದರೆ ನೀರು ಹರಿದು ಸವಕಳಿಯಾದ ಕೊರಕಲಿಗೆ ನೀರು ಹರಿ ಎನ್ನುವರು. ನೀರ ಹರಿಯನ್ನು ಕಟ್ಟುವುದರಿಂದ ಆನಿ ಎತ್ತರ ಹರಿವು ನೀರು ಗೇಣು ಎತ್ತರ ಹರಿವಂತೆ ಒಡ್ಡು ಹಾಕಿ ಸಮತಳಿ ಮಾಡಬೇಕು. ನೀರಿನ ಕೂಡ ಹರಿದು ಬಂದ ಮಣ್ಣು ಒಡ್ಡಿನಲ್ಲಿ ನಿಂತು ನೀರಿನಲ್ಲಿಯ ಮಣ್ಣು ತಿಳಿಯಾಗಿ ಹೊಲದಲ್ಲಿ ಉಳಿಯುವುದು. ಇದೇ ರೀತಿ ಮಳೆಯಾದಾಗೊಮ್ಮೆ ನೀರಿನ ಕೂಡ ಬಂದ ಮಣ್ಣು ಹೊಲದಲ್ಲಿಯೇ ಉಳಿದು ಆ ಹೊಲವು ಹೊಂಡು ಮಣ್ಣಿನಿಂದ ತುಂಬಿ ಕೆರೆ ಸ್ವರೂಪ ಆಗುವದು. ಕೆರೆ ಮಾಡಿದವನು ದೊರೆಯಾಗಿ ಬಾಳುವನು. ‘ಕರಿ ಮಣ್ಣಿನ ಎರಿ ಭೂಮಿ ನೋಡಾ | ಹರಿವ ನೀರು ಕಟ್ಯಾರ ಒಳ್ಳೆಪಾಡ | ಶಿರಿಯು ನಿತ್ಯ ಇವರಿಗೆ ಜೋಡ’ | ಎನ್ನುವ ಮಾತು ಅರ್ಥಪೂರ್ಣವಾದದ್ದು.

ನೀರಿನ ಹರಿಯನ್ನು ಕಟ್ಟುವುದರಿಂದ ಹೊಲವು ಸೃಷ್ಟಿಯೊಳಗೆ ಶ್ರೇಷ್ಠ ಬೆಳೆ ಬೆಳೆಯುವುದು. ನೀರಿನ ಹರಿ – ಹರಿ ಎಂದರೆ ವಿಷ್ಣು. ವಿಷ್ಣುವಿನ ಹೆಂಡತಿಯಾರು, ಲಕ್ಷ್ಮೀ. ಅಂದ ಮೇಲೆ ಹರಿಯನ್ನು ಕಟ್ಟಿದ ಮೇಲೆ ಶ್ರೀ ಹರಿಯ ಪತ್ನಿಯಾದ ಲಕ್ಷ್ಮೀಯು ತನ್ನ ಪತಿ ಎಲ್ಲಿ ಇರುವನೋ ಅಲ್ಲಿ ಅವಳ ವಾಸ. ಆಕೆಯು ಬಣ್ಣದ ಪಿತಾಂಬರವನ್ನು ಉಟ್ಟುಕೊಂಡು ಚಿನ್ನದ ಆಭರಣಗಳನ್ನು ಇಟ್ಟುಕೊಂಡು ಉಡಿಯಲ್ಲಿ ಸರ್ವ ಧಾನ್ಯಗಳನ್ನು ಕಟ್ಟಿಕೊಂಡು ಹೊಲದಲ್ಲಿ ಒಡ್ಡಿನ ಮೇಲೆ ಶಿರಿದೇವಿಯಾಗಿ (ಲಕ್ಷ್ಮೀ) ನಿಂತಿರುವಳು. ಈ ರೀತಿ ಒಡ್ಡು ಹಾಕಿ ಸಮಪಾತಳಿ ಮಾಡುವುದರಿಂದ ಅರಗಾಲ – ಬರಗಾಲದಲ್ಲಿಯೂ ಒಂದೇ ಮಳೆಯಾದರೂ ಸಾಕು ಬೆಳೆ ಬರುತ್ತದೆ. ಆ ಮನೆತನಕ್ಕೆ ಕಡಿಮೆಯಾಗಲಾರದಂತೆ ಫಸಲು ಬರುವುದು ನಿಶ್ಚಿತ, ಆದ್ದರಿಂದ ಮಣ್ಣಿಗೆ ಮಹತ್ವ ಬಂದಿದೆ. ಇದು ಮಣ್ಣಿನ ಸಂರಕ್ಷಣಾ ಪದ್ಧತಿಯಾಗಿದೆ.

ಮಣ್ಣಿನ ಮೇಲಿನ ಹಿತ ಮುತ್ತುಗಳು

. ದೇಹಕ್ಕೆ ಕಣ್ಣು ದೇಶಕ್ಕೆ ಮಣ್ಣು.

೨. ಕಣ್ಣಿನಿಂದ ನಿರೀಕ್ಷಣೆ, ಮಣ್ಣಿನಿಂದ ಸಂರಕ್ಷಣೆ.

೩. ಮಣ್ಣಿನ ಮಡಿ ಮಾಡಿ, ಹಣ್ಣಿನ ಗಿಡ ಬೆಳೆಸಿ.

೪. ಮಣ್ಣಿನ ಗೆಳೆತನ ನೋಡು, ಹೊನ್ನಿನ ರಾಶಿ ನೋಡು.

೫. ಭೂಮಿ ನಂಬು, ಬೆಣ್ಣೆ ಉಣ್ಣು.

೬. ಮಣ್ಣು ತಡೆಯವುದು ಸಂಪತ್ತು, ಕಳೆಯುವುದು ವಿಪತ್ತು.

೭. ಸಕಲ ಜೀವರಾಶಿಗಳಿಗೂ ಮಣ್ಣೆ ಆಶ್ರಯ.

೯. ಮೊದಲು ಮಣ್ಣಿನ ಶೋಧನೆ ಮಾಡಿ ಚೆನ್ನಾಗಿ ಹದ ಮಾಡಬೇಕು.

ನೀರಿನ ಸಂರಕ್ಷಣಾ ವಿಧಾನ

ನೀರು ಅಮೂಲ್ಯವಾದ ದ್ರವ್ಯ, ಅದನ್ನು ನಾವು ಎಷ್ಟು ಸಂರಕ್ಷಣೆ ಮಾಡುತ್ತೆವೇಯೋ ಅಷ್ಟು ನಮಗೆ ಹೆಚ್ಚು ಉಪಯೋಗ ದೊರೆಯುತ್ತದೆ. ನಾವು ಹೊಲಗಳಲ್ಲಿ ಸುತ್ತಲೂ ಒಡ್ಡು ಹಾಕುತ್ತೇವೆ. ನಾಲ್ಕು ಬದಿಗಳಿಗೂ ಹರಿದು ಬರುವ ನೀರು ಒಂದು ಕಡೆ ಸಂಗ್ರಹವಾಗುತ್ತದೆ. ಅದನ್ನು ಒಳಗಿಟ್ಟು ಗುಂಡಾವರ್ತಿ ಮಾಡಿ ಹೆಚ್ಚಿನ ನೀರನ್ನು ಹೊರ ಹೋಗುವಂತೆ ಮೋರಿ ಬಿಡುತ್ತಾರೆ. ಇದರಿಂದ ಅರಗಾಲ ಬರಗಾಲದಲ್ಲೂ ಸಹ ನೀರಿನ ಸಂರಕ್ಷಣೆಯಾಗುತ್ತದೆ. ಕಾರಣ ಚೆನ್ನಾಗಿ ಬೆಳೆ ತೆಗೆಯಬಹುದಾಗಿದೆ. ಈ ರೀತಿಯಾಗಿ ಹೊಲಗಳಲ್ಲಿ ನಾವು ನೀರಿನ ಸಂರಕ್ಷಣೆ ಮಾಡಬೇಕಾಗುತ್ತದೆ.

ನೀರಿನ ಮೇಲಿನ ಹಿತ ನುಡಿಗಳು

೧. ಮಳೆ ನೀರು ಕಟ್ಟು – ಧಾನ್ಯದ ನಿಟ್ಟು ಒಟ್ಟು.

೨. ನೀರು (ಜಲ) ಮಲ ಎಂದು ಜರಿಯದಿರು ತಿಳಿಯದಿರು ಅದರಿಂದಲೇ ಜೀವನ ಉಪಯೋಗ ಮರೆಯದಿರು.

೩. ಹರಿದು ಹೋಗುವ ನೀರು ನೋಡಬೇಡ – ಅದರಿಂದ ಉಪಯೋಗ ಮರೆಯಬೇಡ.

೪. ನೀರಿನ ಸದ್ಭಳಕೆಯಿಂದ ಮಾನವನ ಜೀವನ ಏಳಿಗೆ.

೫. ಜಲದ ಪೋಷಣೆ – ಮಾನವನ ಸಂರಕ್ಷಣೆ.

೬. ಜಲದಿಂದಲೇ ಹಸಿರು ಜೀವನದ ಉಸಿರು.

೭. ಮಳೆಯ ನೀರು ಹಿಡಿದಿಡು – ಅಂತರ್ಜಲ ಉಗಮ ನೋಡು.

೮. ಮಳೆಯೇ ಜಗತ್ತಿನ ಸೂತ್ರ.

೯. ಮಳೆ ಇಲ್ಲದೆ ಬೇಳೆಯಿಲ್ಲ ಬೆಳೆಯಿಲ್ಲದೆ ಜೀವನವಿಲ್ಲ.

೧೦. ನೀರು ನಿಂತು ಹೊಲ ಕೆಟ್ಟಿತು – ನೀರಿಲ್ಲದೆ ಕೆರೆ ಕೆಟ್ಟಿತು.

೧೧. ನೀರಿನ ಹರಿಕಟ್ಟು ನಿರಂತರ ಬೆಳೆಯ ಗುಟ್ಟು.

೧೨. ಹನಿ – ಹನಿ ನೀರು ಹಿಡಿಯಣ್ಣ ಸರ್ವದವಸ ಧಾನ್ಯ ಬೆಳೆಯಣ್ಣ.

೧೩. ಮಳೆ ನೀರು ತಡೆದಿಡುವುದು ಧರ್ಮ, ಕಳೆಯುವುದು ಅಧರ್ಮ.

ಬದುಗಳ ನಿರ್ಮಾಣ (ಒಡ್ಡುಗಳು)

* ಒಡ್ಡು ಹಾಕುವ ಪದ್ಧತಿ

ಬಿದ್ದ ನೀರು ಹರಿಯಬಾರದು – ಇದ್ದ ಮಣ್ಣು ಹೋಗಬಾರದು. ಭೂಮಿಯನ್ನು ತಿದ್ದಬೇಕಾದರೆ ಶಾರೀರಿಕ ಬಲ – ಬುದ್ದಿಬಲ – ಅರ್ಥಬಲ – ಮನೋಬಲವಿರಬೇಕು ಮತ್ತು ಪ್ರೀತಿಯಿಂದ ಮಾಡುವನೆಂಬ ಛಲವೂ ಬೇಕು. ಅಂದರೆ ಫಲವೂ ದೊರೆಯಲು ಸಂದೇಹವಿಲ್ಲ.

ಭೂಮಿ ಸಮಪಾತಳಿ ಇದ್ದಲ್ಲಿ ಒಡ್ಡಿನ ಅವಶ್ಯಕತೆ ಇರಬೇಕಾಗಿಲ್ಲ. ಭೂಮಿಯು ಸಮಪಾತಳಿ ಇರದೆ ಇಳುಕಲು ಆಗಿದ್ದರೆ ಅಲ್ಲಿ ಒಡ್ಡಿನ ಅವಶ್ಯಕತೆ ಇದೆ. ಆಳವಾದ ಎರಿ ಭೂಮಿಯಲ್ಲಿ ಒಡ್ಡು ಹಾಕುವುದು ಬಹಳ ಸಾಹಸದ ಕೆಲಸವಾಗಿದೆ. ಯಾಕೆಂದರೆ ಕರಿ ಮಣ್ಣಿನಿಂದ ಹಾಕಿದ ಒಡ್ಡುಗಳು ಬೇಸಿಗೆ ಬಿಸಿಲಿಗೆ ಎರಿ ಬೀಡು ಬಿಡುತ್ತವೆ. ರಭಸದ ಮಳೆಯಾದಾಗ ನೀರು ಹರಿದು ಎರಿ ಬೀಡಿ ಬಿಟ್ಟಲ್ಲಿ ಒಡ್ಡು ಒಡೆದು ನೀರಿನ ಕೂಡ ಮಣ್ಣು ಹರಿದು ಹೋಗುವುದು. ಇದರಿಂದ ಮಾಡಿದ ಶ್ರಮವು ನಿರರ್ಥಕವಾಗುತ್ತದೆ. ದುಡ್ಡು ಹಾಳಾಗುತ್ತದೆ. ಮಣ್ಣು ಹೋಗುತ್ತದೆ. ಹೀಗಾಗಿ ರೈತನೂ ನಿರಾಶೆ ಹೊಂದಬೇಕಾಗುತ್ತದೆ. ಇಂಥ ಭೂಮಿ ಇದ್ದವರು ಅನುಭವಿಕರಾಗಿರಬೇಕು. ಇಲ್ಲವೆ ಅನುಭವವಿದ್ದವರನ್ನು ಕೇಳಿ ತಿಳಿದುಕೊಳ್ಳಬೇಕು. ಯಾವಾಗಲೂ ಒಡ್ಡಿನ ಸಮೀಪದಲ್ಲಿಯೇ ಮಣ್ಣು ಕಡಿಸಿ ಒಡ್ಡು ಹಾಕಬಾರದು. ಒಡ್ಡು ಹಾಕಿಸುವ ಜಾಗದಿಂದ ಕನಿಷ್ಟ ಪಕ್ಷ ೧೦ ಮಾರು ದೂರ ಬಿಟ್ಟು ಮಣ್ಣು ಕಡಿಸಬೇಕು. ಅದು ಅಲ್ಲದೆ ಏರಿ (ದಿಬ್ಬ) ಇದ್ದಲ್ಲಿ ಕಡಿಸುವುದು ಉತ್ತಮ, ಒಡ್ಡು ಹಾಕುವ ಪೂರ್ವದಲ್ಲಿ ಒಡ್ಡು ಹಾಕಿಸುವ ಭೂಮಿಯ ಕ್ಷೇತ್ರ ಎಷ್ಟು ಇದೆ – ನೀರಿನ ಪ್ರಮಾಣ ಎಷ್ಟು ಇದೆ ಎಂಬುದನ್ನು ಮೊದಲು ನೋಡಬೇಕು. ನೀರಿನ ಪ್ರಮಾಣ ಸಣ್ಣದಿದ್ದರೆ ಸಣ್ಣ – ಸಣ್ಣ ಒಡ್ಡುಗಳನ್ನು ಮಾಡಬೇಕು. ಒಡ್ಡಿನ ಹೊರಮೈ ಗರಸು ಮಣ್ಣು ಹಾಕಬೇಕು. ಒಳಗೆ ಕರಿಮಣ್ಣಿನಿಂದ ಎದೆ ಒಡ್ಡು ಹಾಕಬೇಕು. ಹೀಗೆ ಮಾಡುವುದರಿಂದ ಒಡ್ಡಿನ ಸಮೀಪಕ್ಕೆ ನೀರು ಹೋಗದೇ ಇರುವುದರಿಂದ ಒಡ್ಡು ಒಡೆಯುವುದಿಲ್ಲ. ಹೊರಮೈ ಗರಸು ಮಣ್ಣು ಹಾಕಿರುವುದರಿಂದ ಒಡ್ಡುಗಳು ಮಳೆ ನೀರಿಗೆ ಸವಕಳಿಯಾಗುವುದಿಲ್ಲ. ಒಳಮೈ ಎರೆ ಮಣ್ಣು ಹಾಕುವುದರಿಂದ ಒಡ್ಡಿನ ತುದಿಯವರೆಗೆ ಬಿತ್ತಲೂ ಬರುವದು. ಹೊಲದಲ್ಲಿ ತಗ್ಗು ದಿನ್ನೆಗಳು ಇದ್ದರೆ ಆಳಿನಿಂದ ಮಣ್ಣು ಕಡಿಸಿ ಹೊರಸಿ ಸಮಪಾತಳಿ ಮಾಡಬೇಕು. ಇಲ್ಲವೇ ನೇಗಿಲ ಹೊಡೆದು ಎತ್ತಿನ ಕುಂಟೆಯಿಂದ ಎಳಿಸಿ ಸಮಮಾಡಬೆಕು. ಇಲ್ಲವೆ ಟ್ರ್ಯಾಕ್ಟರ್‌ನಿಂದ ಮಣ್ಣು ಎಳಿಸಿ ಸಮಮಾಡಬೇಕು. ಮತ್ತು ಎತ್ತಿನಗಾಡಿ (ಚಕ್ಕಡಿ) ಯಿಂದಾಗಲಿ ಟ್ರ್ಯಾಕ್ಟರ್‌ನಿಂದಾಗಲಿ ಮಣ್ಣು ಹೇರಿ ತಗ್ಗು ಇದ್ದಲ್ಲಿ ಹಾಕಿ ಭೂಮಿಯನ್ನು ಸಮಪಾತಳಿ ಮಾಡಬೇಕು. ಇಳುಕಲಿಗೆ ಅಡ್ಡವಾಗಿ ಒಡ್ಡು ಹಾಕಿ ಸುತ್ತ ಸಣ್ಣ – ಸಣ್ಣ ಪ್ಲಾಟುಗಳನ್ನು ಮಾಡಬೇಕು. ನೀರನ್ನು ಸರಿಯಾಗಿ ಸಮವಾಗಿ ಹೊಲವು ಉಂಡ ಮೇಲೆ ಹೆಚ್ಚಿನ ನೀರು ಹರಿದು ಹೋಗಲಿಕ್ಕೆ ದಾರಿ ಬಿಡಬೇಕು. ನೀರು ಹರಿದು ಹೋಗುವ ದಾರಿಯಲ್ಲಿ ಕಲ್ಲಿನಿಂದ ಬಚ್ಚಲು ಮಾಡಿಸಬೇಕು. ಇಲ್ಲವೆ ಸಿಮೆಂಟ್ ಕೊಳವೆಯನ್ನು ಹಾಕಬೇಕು. ಸಮಪಾತಳಿ ಆಳವಾದ ಎರೆಭೂಮಿ ಇದ್ದವರು ತಮ್ಮ ಹೊಲದಲ್ಲಿ ಗರಸು ಮಣ್ಣು ಸಿಗದಿದ್ದರೆ ಸರಕಾರದವರು ಲೈನ ಮಾರ್ಗಕ್ಕೆ ಎಲ್ಲಿಂದಲೊ ಕಲ್ಲು ಮಣ್ಣು ತಂದು ಹೇಗೆ ದಾರಿಗಳನ್ನು ದುರಸ್ತಿ ಮಾಡುವರೋ ಹಾಗೆ ಗರಸಿನ ಮಣ್ಣಿನ ಖಣಿಯಲ್ಲಿ ಆಗಲಿ ಗುಡ್ಡಗಳಲ್ಲಿ ಆಗಲಿ ಮಸಾರಿ ಭೂಮಿಯಲ್ಲಾಗಲಿ ಎಲ್ಲಿ ದೊರೆಯುವುದೋ ಅಲ್ಲಿಂದ ಎತ್ತಿನ ಗಾಡಿಯಿಂದಾಗಲಿ, ಟ್ರ್ಯಾಕ್ಟರ್‌ನಿಂದಾಗಲಿ ಗರಸು ಮಣ್ಣು ಹೇರಿಸಿ ಒಡ್ಡು ಹಾಕಿಸಬೇಕು. ಕಲ್ಲು ಸಿಕ್ಕರೆ ಕಲ್ಲಿನಿಂದ ಕಟ್ಟಿ ಒಳಮೈ ಮಣ್ಣು ಹಾಕಬೇಕು. ಹೀಗೆ ಮಾಡುವುದರಿಂದ ಒಡ್ಡುಗಳು ಬೇಸಿಗೆಯ ಬಿಸಿಲಿಗೆ ಎರೆ ಬೀಡು ಬಿಡದೆ ಮಳೆಯ ನೀರಿಗೆ ಸವೆಯದೆ – ಹುಲ್ಲು ಬೆಳೆದು ಗಟ್ಟಿಯಾಗುವವು. ಬಿದ್ದ ನೀರು ಹರಿದು ಹೋದಾಗ ಮಣ್ಣು ಹೋಗುವುದಿಲ್ಲ. ಕಾಲ ಕಾಲಕ್ಕೆ ಸಾಗುವಳಿ ಮಾಡುವುದರಿಂದ ಹೊಲವು ಹದಗೊಂಡು ಕೃಷಿಗೆ ಯೋಗ್ಯವಾಗುತ್ತದೆ. ಕೆಲವು ಭಾಗಗಳಲ್ಲಿ ಗರಸು ಮಣ್ಣು ಕಲ್ಲು ದೊರೆಯುವುದಿಲ್ಲ. ಅಲ್ಲಿ ಆಳವಾದ ಕರಿ ಮಣ್ಣಿನ ಎರಿಭೂಮಿಯೊಳಗೆ ಎರಡರಿಂದ ಎರಡೂವರಿ ಮೊಳ ಎತ್ತರ ಮಣ್ಣು ಒಡ್ಡು ಹಾಕಿ ೧೫ ರಿಂದ ೨೦ ಮೊಳ ಅಗಲವಾಗಿ ಎರೆ ಮಣ್ಣು ಹಾಕಬೇಕು. ಪರದೇಶಗಳಲ್ಲಿ ಈ ರೀತಿ ಮಾಡುತ್ತಾರೆ.

ದೊಡ್ಡ ಹೊಲ ಅಂದರೆ ೩೦ – ೪೦ ಎಕರೆ ವಿಸ್ತೀರ್ಣವಾದ ಹೊಲವಿದ್ದು ದೂರದಿಂದ ಹರಿದು ಬರುವ ನೀರಿನ ಪ್ರಮಾಣ ಬಹಳವಿದ್ದರೆ ಅಂಥ ಹೊಲಗಳಿಗೆ ದೊಡ್ಡ ಒಡ್ಡುಗಳು ಬೇಕು. ಅಂಥ ಒಡ್ಡುಗಳನ್ನು ಹೇಗೆ ಮಾಡಬೇಕೆಂದರೆ ಕರಿ ಮಣ್ಣಿನ ಎರಿ ಭೂಮಿಯಾದರೆ ಮೊದಲು ಒಡ್ಡು ಹಾಕುವ ಸ್ಥಳದಲ್ಲಿ ಹೊರ ಮಗ್ಗಲಿಗೆ (ಬದುವಿನ ಗುಂಟ) ಎರಡು ಮೊಳ ತೆಗ್ಗು – ಹನ್ನೆರಡು (೧೨) ಮೊಳ ಅಗಲವಾಗಿ ಕಡಿಸಬೇಕು. ಆ ತಗ್ಗಿಗೆ ಗರಸು ಮಣ್ಣು ಹಾಕಿ ಮುಚ್ಚಬೇಕು. ಅದರಂತೆ ಗರಸು ಮಣ್ಣಿನಿಂದಲೇ ಒಡ್ಡು ಮಾಡಬೇಕು. ಅನುಕೂಲವಿದ್ದರೆ ಹೊರ ಮಗ್ಗುಲಿಗೆ ಕಲ್ಲಿನಿಂದ ಕಟ್ಟಬೇಕು. ಕಲ್ಲಿನ ಗೋಡೆಯನ್ನು ಕಡಾವು ಕಟ್ಟದೆ ಸುಳಪವಾಗಿ (ಬಳಗಿಗೆ) ನೀಟಾಗಿ ಕಟ್ಟಬೇಕು. ಗರಸಿನ ಒಳ ಮಗ್ಗಲಿಗೆ ಕರಿ ಮಣ್ಣಿನ ಎದೆ ಒಡ್ಡು ಹಾಕಬೇಕು. ನೀರು ಹೋಗುವ ದಾರಿಗೆ ಒಣಕಲ್ಲಿನಿಂದ ಹೊಳಗಟ್ಟಿಯನ್ನಾಗಲಿ ಗಚ್ಚಿನಿಂದ (ಸಿಮೆಂಟ್‌ನಿಂದ) ಗುಂಡಾವರ್ತಿಯನ್ನಾಗಲಿ ಜೋಡು ಮೋರಿಯ ಫೂಲನ್ನಾಗಲಿ ಕಟ್ಟಿ ಹೊಲದಲ್ಲಿ ನೀರು ನಿಂತು ಹೋಗುವಂತೆ ಒಡ್ಡಿನಲ್ಲಿ ಮಾಡಬೇಕು. ಮಣ್ಣು ಸಂಗ್ರಹಗೊಂಡು ಹುಗಿದ ಕೂಡಲೆ ಒಡ್ಡುಗಳನ್ನು ಮೋರಿಗಳನ್ನು ಎತ್ತರಿಸುತ್ತಾ ಹೋಗಬೇಕು. ಹಾಗೂ ಒಡ್ಡುಗಳನ್ನು ಸವೆಯದಂತೆ ಎಚ್ಚರವಹಿಸಿ ನೋಡಿಕೊಳ್ಳಬೇಕು. ನೋಡದೆ ಹೊಲ, ಮಾಡದೆ ಮನಿ, ಕೇಳದೆ ಸಾಲ, ಓದದೆ ಜ್ಞಾನ ದೊರೆಯದು.

ಗರಸು, ಮಸಾರಿ, ಕಟುಕದ ನೆಲ, ಮೊರಡಿ – ಮಡ್ಡಿ, ಉಸುಕು ಮಸಾರಿ, ಕೆಲವು ಮಣ್ಣಿನ ಭೂಮಿಗಳಿಗೆ ಒಡ್ಡು ಹಾಕುವುದು, ಸರಳವಾದದ್ದು. ಯಾಕೆಂದರೆ ಇಂಥ ಮಣ್ಣಿನಿಂದ ಮಾಡಿದ ಒಡ್ಡುಗಳು ಬೇಸಿಗೆ ಬಿಸಿಲಿಗೆ ಬೀಡು ಬಿಡುವುದಿಲ್ಲ. ಮಳೆಯ ನೀರಿಗೆ ಸವೆಯುವುದಿಲ್ಲ. ಹೊಲದಲ್ಲಿ ಸಣ್ಣ ಕಲ್ಲುಗಳಿದ್ದರೆ ಆರಿಸಿ ಒಡ್ಡಿನ ಹೊರಮೈ ಹಾಕಬೇಕು, ದೊಡ್ಡಕಲ್ಲು ಇದ್ದರೆ ಕಟ್ಟಬೇಕು. ಸಾಲವನ್ನು ಮಾಡಿ ಘನ ಸಂಭ್ರಮದಿಂದ ಮದುವೆ, ಮುಂಜಿ, ಹಬ್ಬಗಳನ್ನು ಮಾಡದೆ ಘನ ಸಂಭ್ರಮದಿದಂದ ಒಡ್ಡುಗಳನ್ನು ಹಾಕಿ ಹೊಲವನ್ನು ಕೆರೆಯಂತೆ ಮಾಡಿ ದೊರೆಯಾಗಿ ಬಾಳಬೇಕು.

ಹೀಗೆ ಭೂಮಿಯನ್ನು ತಿದ್ದುವುದರಿಂದ ಎಂಥಾ ಕನಿಷ್ಟ ಭೂಮಿಯಿದ್ದರೂ ಉತ್ತಮ ಭೂಮಿಯಂತೆ ಶೋಭಾಯಮಾನವಾಗಿ ಫಲಕೊಡುತ್ತದೆ. ಪ್ರಯತ್ನದಲ್ಲಿಯೇ ಪರಮೇಶ್ವರ. ಆತ್ಮದಲ್ಲಿ ಬಯಸಿದ್ದು ಪ್ರಯತ್ನದಲ್ಲಿ ದೊರಕುವುದು. ವಿಶ್ವ ಪ್ರಯತ್ನದಲ್ಲಿ ಈಶ್ವರನೊಲಿಮೆ ಇದೆ. ಸಂಪತ್ತು ಇದೆ. ಇದೇ ರೀತಿಯಾಗಿ ಒಡ್ಡು ಹಾಕಿಸುವುದರ ಪ್ರಯತ್ನ ಮಾಡಿದರೆ ಗುಡ್ಡದ ದಾರಿ ಹೊಲ, ಕನಿಷ್ಟ ಭೂಮಿ, ಬಹಳ ಇಳುಕಲಿ ಭೂಮಿ, ಹಾಳು ಮಣ್ಣಿನ ಭೂಮಿ, ಕರಲು ಭೂಮಿ, ಯಾವುದೇ ಭೂಮಿ ಇದ್ದರೂ ಅಂಥ ಭೂಮಿಯನ್ನು ನೋಡಿ ಪರೀಕ್ಷಿಸಬೇಕು. ಕೊರಿ ಕೊನ್ನಾರ ಎಲ್ಲವನ್ನು ನೋಡಿ ಹೇಗೆ ಒಡ್ಡು ಹಾಕಬೇಕು, ಎಲ್ಲಿ ಪ್ಲಾಟುಗಳನ್ನು ಮಾಡಬೇಕು ಎಂಬುದನ್ನು ವಿಚಾರಿಸಿ ಮೊದಲು ಹಗ್ಗದಿಂದಾಗಲಿ ಸರಪಳಿಯಿಂದಾಗಲಿ, ಜೀಪಿಯಿಂದಾಗಲಿ ಸರಿಯಾಗಿ ಸಮಭುಜ ಅಳೆದು ಅಂಕು ಡೊಂಕಾಗದಂತೆ ನೀಟಾಗಿ ಒಡ್ಡು ಹಾಕಬೇಕು. ಯಾವಾಗಲೂ ಒಡ್ಡುಗಳು ಸರಳರೇಖೆಯಲ್ಲಿ ಇರಬೇಕು. ಸಮವಾಗಿ ಇರಬೇಕು ಮಾಡುವ ಕಲೆ ಸಾಧಿಸಬೇಕು. ಈ ಮೇಲಿನ ರೀತಿಯಾಗಿ ಸರಿಯಾಗಿ ಒಡ್ಡು ಹಾಕಿಸಬೇಕು. ಅಂದಾಗ ಹೊಲ ಸಮಪಾತಳಿ ಹೊಂದಿ ಉತ್ತಮವಾದ ಬೆಳೆ ಕೊಡುತ್ತದೆ.

ಒಡ್ಡು ಎಂದರೆ ಅದಕ್ಕೆ ನಾನಾರ್ಥಗಳು ಇವೆ. ಉದಾ : ಉಡಿ ಒಡ್ಡು, ಸೆರಗ ಒಡ್ಡು, ಬೊಗಸೆ ಒಡ್ಡು ಇತ್ಯಾದಿ ಇವೆ. ಒಟ್ಟಿನಲ್ಲಿ ಒಡ್ಡು ಎಂದರೆ – ಯಾವುದೇ ವಸ್ತುವನ್ನು ಯಾರಾದರೂ ಕೊಡಬೇಕಾದರೆ ಕೊಳ್ಳುವವರು ಕೈ ಒಡ್ಡಬೇಕಾಗುತ್ತದೆ. ಧಾನ್ಯವನ್ನಾಗಲಿ, ಅನ್ನವನ್ನಾಗಲಿ, ನೀಡುವಾಗ ಉಡಿ ಒಡ್ಡಬೇಕು. ಸೆರಗೊಡ್ಡಬೇಕು. ನೀರನ್ನು ಹಾಕುವಾಗ ಬೊಗಸೆ ಒಡ್ಡಬೇಕು. ದೇವರು ಮಳೆ ಸುರಿಸುವಾಗ ಮಳೆ ನೀರು ಹರಿದು ಹೋಗದಂತೆ ಮಾಡಬೇಕಾದರೆ ಹೊಲಕ್ಕೆ ಒಡ್ಡು ಹಾಕಬೇಕು. ಬಿದ್ದ ನೀರು ಹರಿಯದಂತೆ ಇದ್ದ ಮಣ್ಣು ಹೋಗದಂತೆ ಬುದ್ಧಿವಂತಿಕೆಯಿಂದ ಭೂಮಿಯನ್ನು ತಿದ್ದಿ ಸಮೃದ್ಧಿ ಬೆಳೆ ಬರುವಂತೆ ಮಾಡುವುದೇ ಒಡ್ಡಿನ ಪ್ರಾಮುಖ್ಯತೆಯಾಗಿದೆ.

ಒಡ್ಡಿನ ಮಹತ್ವ

ಹಿಂಡು ಹೊಲಗಳ ಮಾಡದೆ ತುಂಡು ಹೊಲ ಮಾಡಿ
ಮನಮುಟ್ಟಿ ದುಡಿಯುವುದೇ ಲೇಸಯ್ಯಾ
ಪುಂಡ ಎತ್ತುಗಳ ಕಟ್ಟಿ ಒಂಡು ಮಣ್ಣಿನಂತೆ
ಭೂಮಿ ಹದಮಾಡುವುದು ಲೇಸಯ್ಯಾ
ಕಂಡ ಕಸ ತಂದು ಗೊಬ್ಬರ ಮಾಡುವುದು ಸಲೆ ಲೇಸಯ್ಯಾ
ಮನೆಮಂದಿ ಅನುವರಿತು ಶ್ರಮವಹಿಸಿ ದುಡಿಯುವ
ಗಂಡುಗಲಿಯಾದ ನೇಗಿಲಯೋಗಿಗಳಿಗೆ
ನವ ಖಂಡಗ ಧಾನ್ಯವೆಂದ ಚಿತ್ತರಗಿ ವಿಜಯ ಮಹಾಂತೇಶ.

ಈ ಹಿರಿಯರ ಒಂದು ವಚನದಂತೆ ನಾವು ನಮ್ಮ ಹೊಲಗಳಲ್ಲಿ ಒಡ್ಡು ಹಾಕಬೇಕು. ಊರಿನ ಎಲ್ಲ ಕಡೆ ಹೊಲ ಮಾಡದೆ ಒಂದೇ ಪ್ರದೇಶದಲ್ಲಿ ಹೊಲ ಮಾಡಿ ಅಲ್ಲಿ ಶ್ರಮವಹಿಸಿ ದುಡಿದು ಅದಕ್ಕೆ ನಾಲ್ಕು ದಿಕ್ಕಿಗೂ ಒಡ್ಡು ಹಾಕಿ ನೆಲ್ಲು ಗದ್ದೆಯಂತೆ ಹೊಲ ಮಾಡಿ ಎಲ್ಲ ಸರ್ವಧಾನ್ಯ ಬೆಳೆಯುವುದು ಉತ್ತಮ ಎಂದಿದ್ದಾರೆ.

“ಒಡ್ಡು ಇಲ್ಲದ ಹೊಲ, ನಾರಿ ಇಲ್ಲದ ಮನೆ, ದುಡ್ಡು ಇಲ್ಲದವನ ಬಾಳ್ವೆ, ದಡ್ಡ ಜನರ ಸಹವಾಸ ಎಂದೂ ದೊಡ್ಡದೆನಿಸಲಾರದು” ಎಂದು ಒಡ್ಡಿನ ಮಹತ್ವದ ಕುರಿತು ಹೇಳಿದ್ದಾರೆ.

ಒಡ್ಡಿನಿಂದಾಗುವ ಪ್ರಯೋಜನಗಳು

. ಒಡ್ಡು ಹಾಕುವುದರಿಂದ ಮಣ್ಣಿನ ಸಂಪತ್ತು ಅಧಿಕವಾಗುತ್ತದೆ.

೨. ಭಾರೀ ಮಳೆಯಿಂದ ಹೊಲದಲ್ಲಿನ ಫಲವತ್ತಾದ ಮಣ್ಣಿನ ಸಂರಕ್ಷಣೆ ಮಾಡುತ್ತದೆ.

೩. ರೈತನ ಎಲ್ಲಾ ಬೆಳೆಗಳಿಗೂ ಮಣ್ಣೇ ಆಧಾರ. ಆ ಮಣ್ಣಿನ ಸಂರಕ್ಷಣೆ ಒಡ್ಡಿನ ಉಪಕಾರ.

೪. ಒಡ್ಡು ಹಾಕುವುದರಿಂದ ಹೊಲ ಸಮಪಾತಳಿ ಹೊಂದುತ್ತದೆ ಮತ್ತು ನಾಲ್ಕು ದಿಕ್ಕಿಗೂ ಸಮನಾದ ನೀರು ನಿಂತು ಸರಿಯಾದ ಬೆಳೆ ಬರುತ್ತದೆ.

ಒಡ್ಡನ್ನು ಹಾಕುವಾಗ ಗಮನಿಸಬೇಕಾದ ಕ್ರಮಗಳು

೧. ಒಡ್ಡು ಹಾಕುವಾಗ ಸಮಪಾತಳಿ ಅನುಸರಿಸಿ ಹಾಕಬೇಕು.

೨. ಒಡ್ಡಿನ ಸಮೀಪದಲ್ಲಿ ಒಡ್ಡು ಕಡಿಸಬಾರದು. ಒಡ್ಡಿನಿಂದ ಕನಿಷ್ಟ ೧೦ ಮಾರು ದೂರದಲ್ಲಿ ಒಡ್ಡು ಹಾಕುವ ಮಣ್ಣು ಕಡಿಸಬೇಕು.

೩. ಹೊಲದಲ್ಲಿ ತೆಗ್ಗು – ದಿನ್ನೆಗಳಿದ್ದರೆ ಆಳವಾಗಿ ಮಣ್ಣು ಕಡಿಸಿ ಹಾಕಬೇಕು.

೪. ಇಳುಕಲಿಗೆ ಒಡ್ಡು ಹಾಕಿಸಬೇಕು.

೫. ಒಡ್ಡಿನ ಹೊರಮೈ ಗರಸು ಮಣ್ಣು ಒಳಮೈ ಎರಿಮಣ್ಣು ಹಾಕಿಸಬೇಕು.

೬. ನೀರು ಹರಿದು ಹೋಗುವ ದಾರಿಯಲ್ಲಿ ಬಚ್ಚಲು ಮಾಡಿಸಬೇಕು.

೭. ಒಡ್ಡುಗಳು ಸವೆದು ಹೋಗದಂತೆ ಎಚ್ಚರ ವಹಿಸಬೇಕು.

೮. ೫ – ೬ ವರ್ಷಕ್ಕೆ ಒಮ್ಮೆ ಪುನಃ ಒಡ್ಡನ್ನು ಪುನಶ್ಚೇತನಗೊಳಿಸಬೇಕು.

ಒಡ್ಡಿನ ಮೇಲಿರುವ ನುಡಿಮುತ್ತುಗಳು

೧. ಒಡ್ಡು ಇಲ್ಲದ ಹೊಲ ನಾರಿ ಇಲ್ಲದ ಮನೆ ದಡ್ಡ ಜನರ ಸಹವಾಸ ಗುಡ್ಡಕ್ಕೆ ಕಲ್ಲು ಹೊತ್ತಂತೆ.

೨. ಒಡ್ಡು ರೈತನ ಬ್ಯಾಂಕು, ಸಮಪಾತಳಿ ರೈತನ ಠೇವಣಿ.

೩. ಹೊಲದಲ್ಲಿ ಒಡ್ಡು ಮನೆಯಲ್ಲಿ ದುಡ್ಡು.

೪. ಬದು ಸುತ್ತ ಒಡ್ಡು, ಅಂಗಳದ ತುಂಬಾ ವಂಡು.

೫. ಒಡ್ಡು ಇಲ್ಲದ ಹೊಲ ಗೊಡ್ಡೆಮ್ಮೆ ಹೈನವಾದಂತೆ.

೬. ಕೆರೆಯಂತೆ ಹೊಲ ಮಾಡು ದೊರೆಯಂತೆ ನೀ ಬಾಳು

೭. ದೇಶದ ಸಂಪತ್ತು ರೈತ, ರೈತನ ಸಂಪತ್ತು ಒಡ್ಡು.

೮. ಮಕ್ಕಳಿಲ್ಲದ ಮನೆ ಬೇಡ ಒಡ್ಡು ಇಲ್ಲದ ಹೊಲಬೇಡ.

೯. ತಂದೆ ಮನೆ ಒಡೆಯ, ಒಡ್ಡು ಹೊಲದ ಒಡೆಯ.

೧೦. ಮನೆ ವಾಸಿಸಲಿಕ್ಕೆ, ಒಡ್ಡು ಜೀವನ ನಡೆಸಲಿಕ್ಕೆ.