ಒಳಗಟ್ಟಿ ನಿರ್ಮಾಣ

ಒಳಗಟ್ಟಿ ಎಂದರೆ ಜಮೀನಿನ (ಹೊಲದ) ಇಳಿಜಾರು ಪ್ರದೇಶದ ಇಳುಕಲಿಗೆ ಅಡ್ಡವಾಗಿ ಕಟ್ಟಿದ ಬದುಗಳಿಗೆ ಒಳಗಟ್ಟಿಯನ್ನು ಅಳವಡಿಸುವುದು. ಒಳಗಟ್ಟಿ ನೀರು ಹರಿಯುವ ಭಾಗದ ಅಗಲ ಒಳಗಟ್ಟಿನ ಮೇಲಿನಿಂದ ಹರಿದು ಬರುವ ನೀರಿನ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ. ಒಳಗಟ್ಟಿನ ಸಾಮಾನ್ಯ ಅಗಲಳತೆ ೧೦ – ೧೫ ಮೀ. ಗಳಷ್ಟು ಇರುತ್ತದೆ. ಭೂಮಿಯಿಂದ ಎತ್ತರ ೨ – ೩ ಮೀ. ಇರುವುದು ಒಳ್ಳೆಯದು. ಸಾಂಡಿನ ಹಿಂಬದಿಯಲ್ಲಿ ಭೂಮಿಯ ಮಟ್ಟಕ್ಕೆ ಚೌಕಾಕಾರದ ಅಥವಾ ಆಯಾತಾಕಾರದ ಒಂದು ಅಥವಾ ಎರಡು ಮೋರಿಗಳನ್ನು (ಕಿಂಡಿಗಳನ್ನು) ನಿರ್ಮಿಸಬಹುದು. ಕೆಲವು ಸಂದರ್ಭಗಳಲ್ಲಿ ಸಿಮೆಂಟ್ ಪೈಪುಗಳನ್ನು ಅಳವಡಿಸಬಹುದು. ಮತ್ತು ಮೋರಿಗಳನ್ನು ಸೂಕ್ತ ರೀತಿಯಲ್ಲಿ ಅಂದರೆ ಒಳಗಟ್ಟಿಯ ಹಿಂಭಾಗದಲ್ಲಿ ಜಮೀನು ಸಂಪೂರ್ಣ ಹಸಿಯಾಗಲೂ ಅನುಕೂಲವಾಗುವ ರೀತಿಯಲ್ಲಿ ನೀರು ನಿಲ್ಲಿಸುವ ಉದ್ದೇಶಕ್ಕಾಗಿ ಮುಚ್ಚಲು ಮತ್ತು ಭೂಮಿ ಸಂಪೂರ್ಣ ಹಸಿಯಾದ ಮೇಲೆ ಹೆಚ್ಚಾದ ನೀರನ್ನು ಹೊರ ಹಾಕಲು ಮುಚ್ಚಳಗಳನ್ನು (ಮೋರಿಗಳನ್ನು) ಅಳವಡಿಸಬೇಕಾಗುತ್ತದೆ. ಈ ರೀತಿ ಹೊಲದಲ್ಲಿ ಮಾಡುವುದರಿಂದ ಒಡ್ಡಿನ ಹಿಂದಿನ ಕ್ಷೇತ್ರದಲ್ಲಿ ನೀರು ಸಮನಾಗಿ ನಿಂತು ಭೂಮಿ ಸಂಪೂರ್ಣವಾಗಿ ಹಸಿಯಾಗುತ್ತದೆ. ಒಳಗಟ್ಟಿಯಿಂದ ಕೇವಲ ನೀರು ಮಾತ್ರ ಹೊರಗೆ ಹೋಗುತ್ತದೆ. ಇದರಿಂದ ಮಣ್ಣು ಕೊಚ್ಚಿಕೊಂಡು ಹೋಗುವುದು ತಪ್ಪುತ್ತದೆ. ಎಂತಹ ಬರಗಾಲದಲ್ಲಿಯೂ ಸಹಿತ ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆದು ಅಧಿಕ ಲಾಭ ಪಡೆಯಬಹುದು.

ಒಳಗಟ್ಟಿನಿಂದ ಆಗುವ ಪ್ರಯೋಜನ

೧. ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು.

೨. ಹೊಲದಲ್ಲಿ ಉಂಟಾಗುವ ಚಿಕ್ಕ ಚಿಕ್ಕ ಕೊರಕಿಲುಗಳನ್ನು ತಡೆಯಬಹುದು.

೩. ಇದರಿಂದ ಹೊಲವು ಸಂಪೂರ್ಣವಾಗಿ ಹಸಿಯಾಗುತ್ತದೆ.

೪. ಒಡ್ಡುಗಳು ಮೇಲೆ ಆಗುವ ನೀರಿನ ಒತ್ತಡ ಕಡಿಮೆಯಾಗುತ್ತದೆ.

೫. ಬೆಳೆಗಳ ಇಳುವರಿಯನ್ನು ಅಧಿಕವಾಗಿ ಹೆಚ್ಚಿಸಬಹುದು. ಹೀಗೆ ಒಳಗಟ್ಟಿನಿಂದ ಅಧಿಕವಾಗಿ ಪ್ರಯೋಜನಗಳು ಇವೆ.

ಸಮಪಾತಳಿ ನಿರ್ವಹಣೆ

ಸಮಪಾತಳಿ ಮಾಡುವ ಉದ್ದೇಶವೇನೆಂದರೆ ಒಡ್ಡು ಹಾಕಿದ ನಂತರ ಹೊಲದಲ್ಲಿಯ ಕೆಲವು ಕಡೆ ಇಳಿಜಾರಿನ ಮಣ್ಣು ಮಳೆಯಾದಾಗ ನೀರಿನ ಜೊತೆ ಕೊಚ್ಚಿ ಹೋಗಬಾರದು ಎನ್ನುವ ಉದ್ದೇಶದಿಂದ ಸಮಪಾತಳಿ ಮಾಡುತ್ತಾರೆ. ಸಮಪಾತಳಿ ಮಾಡುವುದರಿಂದ ಹೊಲದಲ್ಲಿಯ ಬಿತ್ತಿದ ಬೆಳೆಗಳು ಹೆಚ್ಚಿನ ಇಳುವರಿ ಕೊಡುತ್ತವೆ. ಆದ ಕಾರಣದಿಂದ ಹೆಚ್ಚಿನ ಇಳುವರಿ ಪಡೆಯಲು ಸಮಪಾತಳಿ ಮಾಡಬೇಕು. ಉಳುಮೆ ಬಿತ್ತನೆ ಮುಂತಾದ ಎಲ್ಲಾ ಬೇಸಾಯ ಪದ್ಧತಿಗಳು ಸಮಪಾತಳಿ ರೇಖೆಗೆ ಅನುಗುಣವಾಗಿ ಅಥವಾ ಇಳಿಜಾರಿಗೆ ಅಡ್ಡವಾಗಿ ಮಾಡುವುದು ಅವಶ್ಯ. ಈ ಪದ್ಧತಿಯಿಂದ ಜಮೀನಿನಿಂದ ಹೊರಗೆ ಹರಿದು ಹೋಗುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಗುಂಡಾವರ್ತಿ

ಈ ಪದ್ಧತಿಯಲ್ಲಿ ಹೊಲದ ಸುತ್ತಲೂ ಅಗಲ ತಳವುಳ್ಳ ಬುದುಗಳನ್ನು ನಿರ್ಮಿಸಿ ಭೂಮಿಯನ್ನು ಗುಂಡಾವರ್ತಿ ದಿಕ್ಕಿನೆಡೆ ಶೇ. ೦.೧ – ೦.೨ರಷ್ಟು ಇಳಿಜಾರು ಕೊಟ್ಟು ಸಮತಟ್ಟಾಗಿ ಮಾಡಬೇಕು. ಈ ಕ್ಷೇತ್ರದ ನೀರನ್ನು ಹೊರಹಾಕಲು ಒಳಗಟ್ಟಿಯನ್ನು ಜಮೀನಿನ ಇಳಿಜಾರು ಪ್ರದೇಶದಲ್ಲಿ ಬದುವಿಗೆ ಹೊಂದಿಸಿ ಭೂಮಿಯ ಮಟ್ಟಕ್ಕಿಂತ ಸೀಮಿತ ಎತ್ತರದಲ್ಲಿ ನಿರ್ಮಿಸಬೇಕು. ಈ ಒಳಗಟ್ಟಿನ ಮೇಲ್ಭಾಗದ ಜಮೀನಿನಿಂದ ನೀರು ಪ್ರವೇಶವಾಗಲು ಒಳಮಾರ್ಗದ ಸೌಲಭ್ಯವನ್ನು ಸುಮಾರು ೪ – ೬ ಅಂಗುಲ ಎತ್ತರ ನಿರ್ಮಿಸಿ ಇದನ್ನು ತೆರೆಯಲು ಮತ್ತು ಮುಚ್ಚಲು ಬರುವ ಹಾಗೆ ನಿರ್ಮಿಸಬೇಕು. ಒಳ ಮಾರ್ಗದ ತಳಭೂಮಿಯ ಮಟ್ಟಕ್ಕೆ ಸರಿ ಹೊಂದುವಂತಿರುತ್ತದೆ. ಮಳೆಯಾಗುವುದಕ್ಕಿಂತ ಮುಂಚೆ ಒಳ ಮಾರ್ಗದ ದಾರಿಯನ್ನು ಬಂಡೆಯಾಗಲಿ, ನಿರ್ದಿಷ್ಟ ಆಕಾರದ ಕಲ್ಲನ್ನು ಇಟ್ಟು ಮುಚ್ಚಬೇಕು. ಬಿದ್ದ ಮಳೆ ನೀರು ಭೂಮಿಯ ಮೇಲ್ಮೈ ಸಮಾಂತರಕ್ಕೆ ಭೂಮಿ ಸಂಪೂರ್ಣ ಹಸಿಯಾಗುವವರೆಗೆ ನೀರು ನಿಲ್ಲಿಸಲಾಗುವುದು. ಭೂಮಿಯ ತೇವಾಂಶ ಸಾಕಷ್ಟು ಪ್ರಮಾಣದಲ್ಲಿ ಆದ ನಂತರ ಮುಚ್ಚಿದ ಒಳ ಮಾರ್ಗದ ದಾರಿಯನ್ನು ತೆರೆದು ಬಿಡಬೇಕು. ಈ ನೀರು ಗುಂಡಾವರ್ತಿಯಲ್ಲಿ ಬಿದ್ದು ಹೊರ ಮಾರ್ಗದ ಮುಖಾಂತರ ಹಳ್ಳಕ್ಕೆ ಸೇರುತ್ತದೆ. ಈ ಆಕಾರದ ಕಟ್ಟಡವನ್ನು ಕಲ್ಲಿನಿಂದ ಕಟ್ಟಿ ಸಿಮೆಂಟು ಮಾಡುವುದು ಸೂಕ್ತ, ನೀರು ಸಾವಕಾಶವಾಗಿ ಗುಂಡಾವರ್ತಿಯಿಂದ ಹೊರಗೆ ಹರಿದು ಹೋಗುವುದರಿಂದ ಬದುಗಳ ಮೇಲೆ ನೀರಿನ ಒತ್ತಡ ಕಡಿಮೆಯಾಗುವುದಲ್ಲದೆ ಭೂಮಿಯಲ್ಲಿ ಹೆಚ್ಚು ತೇವಾಂಶ ಸಂಗ್ರಹವಾಗುತ್ತದೆ. ಮತ್ತು ಮಣ್ಣಿನ ಸವಕಳಿ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಪದ್ಧತಿಯಿಂದ ಬರಗಾಲ ಬಿದ್ದರೂ ಸಹಿತ ವರ್ಷಕ್ಕೆ ೨ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಲಾಗುತ್ತದೆ. ಕಡಿಮೆ ಮಳೆಯಾದ ವರುಷದಲ್ಲಿ ಈ ಪದ್ಧತಿಯು ಎಕರೆಗೆ ೪ ರಿಂದ ೬ ಕ್ವಿಂಟಾಲ ಸೂರ್ಯಕಾಂತಿಯಲ್ಲಿ, ೮ ರಿಂದ ೧೦ ಕ್ವಿಂಟಾಲ ಜೋಳದಲ್ಲಿ, ೪ ರಿಂದ ೫ ಕ್ವಿಂಟಾಲ ಕಡಲೆಯಲ್ಲಿ ಇಳುವರಿಯನ್ನು ಪಡೆಯಬಹುದು. ಈ ಗುಂಡಾವರ್ತಿಯನ್ನು ಹೊಲದಲ್ಲಿ ನಿರ್ಮಿಸಲು ಸುಮಾರು ೪೫ ರಿಂದ ೫೦ ಸಾವಿರ ರೂಪಾಯಿವರೆಗೆ ಖರ್ಚು ತಗುಲುತ್ತದೆ. ಹಾಗೂ ಈ ಗುಂಡಾವರ್ತಿ ಪದ್ಧತಿಯನ್ನು ಬಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ಶೇ.೩೫ ರಷ್ಟು ರೈತರು ಅನುಸರಿಸುತ್ತಾರೆ.

ಬೆಳೆಗಳ ನಿರ್ವಹಣೆ

) ಬಿತ್ತುವುದು

ಬಿತ್ತುವ ಬೀಜ ಉತ್ತಮವಾಗಿರಬೇಕು. ಉತ್ತಮ ಬೀಜಕ್ಕೆ ಔಷಧ ಬೆರೆಸಬೇಕು. ಬಿತ್ತುವ ತಳಿ ಬಹುಮುಖ್ಯವಾದುದು. ಬಿತ್ತುವ ರೈತ ಅರೆತವನುರಿತವನಿರಬೇಕೆಂದು ಚಿತ್ತರಗಿ ವಿಜಯ ಮಹಾಂತೇಶ ಅಜ್ಜನವರು ಹೇಳುತ್ತಾರೆ. “ಹತ್ತು ಆಳು ಮುರಿದು ಒಂದು ಬಿತ್ತುವ ಆಳು ಮಾಡು” ಎಂಬ ಗಾದೆಯಂತೆ ಮನೆಯಲ್ಲಿ ಹತ್ತು ಮಂದಿ ದುಡಿಯುವ ಆಳುಗಳು ಇದ್ದರೂ ಬಿತ್ತಲಿಕ್ಕೆ ಅವರಿಗೆ ಬರದಿದ್ದರೆ ಏನು ಉಪಯೋಗ “ಒಮ್ಮೆ ಬಿತ್ತಿ ಒಂದು ವರ್ಷ ಉಣಬೇಕು” ಬಿತ್ತುವುದು ಹಗುರಾದರೆ ಕಿತ್ತುವುದು ಏನು ಕೆಲಸ ಎಂಬಂತೆ, ಬಿತ್ತುವ ಆಳು ಮುಖ್ಯ ಬೇಕು. ಅದಕ್ಕಂತಲೆ “ಹತ್ತು ಆಳಿನಕ್ಕಿಂತ ಬಿತ್ತುವ ಆಳು ಮೇಲು” ಎಂಬ ಮಾತು ಚಾಲ್ತಿಯಲ್ಲಿದೆ. ಮೊದಲು ಭೂಮಿಯನ್ನು ಪರೀಕ್ಷೆ ಮಾಡಿ ಯಾವ ತಳಿಗೆ ಯಾವ ಬೀಜವನ್ನು ಯಾವ ಭೂಮಿಗೆ ಬಿತ್ತಬೇಕು ಎಂಬುದನ್ನು ತಿಳಿದುಕೊಂಡು ಬಿತ್ತಬೇಕು. ಯಾವ ಕೂರಿಗೆಯಿಂದ ಬಿತ್ತಬೇಕು ಎಷ್ಟು ಬೀಜಗಳನ್ನು ಎಷ್ಟು ಕ್ಷೇತ್ರಕ್ಕೆ ಬಿತ್ತಬೇಕು ಎಂಬುದನ್ನು ವಿಚಾರ ಮಾಡಿ ಬಿತ್ತಬೇಕು. ಬಿತ್ತುವವನು ಕಾಳಿಗೆ ಕಾಳು ಕೂಡಿ ಬೀಳುವಂತೆ ಬಿತ್ತಬೇಕು, ಒಂದು ಕಾಳು ಅಡುವು ಮಾಡಿ ಬಿತ್ತಬೇಕು.

ಕ್ರಿಮಿಕೀಟಗಳ ಬಾಧೆಯಾಗಲೀ ಏನಾದರು ಆಗಿ ಬಿತ್ತಿದ ಹೊಲ ಅಂಗಲವಾಗಬಹುದು. (ವಿರಳ) ಒಂದು ವೇಳೆ ಅಡುವು ಆದರೆ ನಾಲ್ಕು ಆಳು ಹಚ್ಚಿ ಕೊಡಗಾಳು ಬಿದ್ದಲ್ಲೆ ಕಿತ್ತು ಅಂಗಲ ಮಾಡಲು ಬರುತ್ತದೆ. ಅಂಗಲವಾದರೆ ಅಡುವು (ಸಾಂದ್ರ) ಮಾಡಲು ಬರುವುದಿಲ್ಲ. ನಂತರ ಊರಿದರೂ ಸರಿಯಾಗಿ ನಾಟುವುದಿಲ್ಲ, ನಾಟಿಯಾದರೂ ಬೆಳೆ ಸರಿಯಾಗಿ ಬರುವುದಿಲ್ಲ. ಹಿಂದು ಮುಂದಾಗಿ ಬೆಳೆ ಸರಿ ಕಾಣುವುದಿಲ್ಲ. ಅದೇ ತಳಿ ಸಿಗುವುದಿಲ್ಲ. ಆದ್ದರಿಂದ ಬಹಳ ಬುದ್ದಿವಂತಿಕೆಯಿಂದ ಬಿತ್ತಬೇಕು. ಬಿತ್ತುವ ಕೂರಿಗೆಯನ್ನು ಮೂರು ತಾಳಿನಿಂದಾಗಲಿ ಎರಡು ತಾಳಿನಿಂದಾಗಲಿ ಮಾಡಿಸಬೇಕು. ತಾಳಿನಿಂದ ತಾಳಿನ ಅಂತರ

[ಸಾಲಿನ ಅಂತರ] ೩೫ ಇಂಚು, ೨೪ ಇಂಚು, ೨೦ ಇಂಚು, ೧೮ ಇಂಚು, ೧೬ ಇಂಚು, ೧೨ ಇಂಚು ಹೀಗೆ ಸಾಲಿನಿಂದ ಸಾಲಿನ ಅಂತರವನ್ನು ಇಟ್ಟು ಅಗತ್ಯ ಕೂರಿಗೆ ಮಾಡಿಸಬೇಕು. ಯಾವ ಭೂಮಿಯಲ್ಲಿ ಯಾವ ಕೂರಿಗೆಯಿಂದ ಯಾವ ಬೀಜವನ್ನು ಬಿತ್ತಿದರೆ ಒಳ್ಳೆದು ಎಂಬುದನ್ನು ಅರಿತು ಅಂಥ ಕೂರಿಗೆಯನ್ನು ಮಾಡಿಸಬೇಕು. ಯಾವ ಭೂಮಿಯನ್ನು ಯಾವ ಕೂರಿಗೆಯಿಂದ ಬಿತ್ತಿದರೆ ಯಾವ ಬೀಜ ಎಷ್ಟು ಬೇಕಾಗುತ್ತದೆ. ಇದು ಅಲ್ಲದೆ ಯಾವ ಭೂಮಿಗೆ ಯಾವ ಕೂರಿಗೆಯಿಂದ, ಯಾವ ತಳಿಗೆ ಯಾವ ಬೀಜಗಳನ್ನು ಹೇಗೆ ಬಿತ್ತಬೇಕು ಎಂಬುದು ತಿಳಿಯಬೇಕು. ಬಿತ್ತುವ ತಳಿ ಬಿತ್ತುವ ಹದ ಬಹು ಮುಖ್ಯ ತಿಳಿದುಕೊಂಡಿರಬೇಕು. ಬಿತ್ತುವ ಹೊಲವು ಚೊಕ್ಕವಾಗಿರಬೇಕು. ಕಸಕಡ್ಡಿ ಇರಬಾರದು. ದೇವರ ಮನೆಯಂತೆ ಹೊಲವು ಶೋಭಾಯಮಾನವಾಗಿರಬೇಕು. ರೈತನಾದವನು ತನ್ನ ಜಮೀನಿನಲ್ಲಿ ಯಾವ ಬೆಳೆ ಬೆಳೆದರೆ ಲಾಭವಿದೆ ಎಂಬ ಅನುಭವಿಕನಾಗಿರಬೇಕು.

) ಬಿತ್ತುವ ತತಿಗಳು (ಬಿತ್ತನೆಕಾಲಹಂಗಾಮು)

. ಮುಂಗಾರಿ ಹಂಗಾಮಿನಲ್ಲಿ ಜೋಳ, ಶೇಂಗಾ, ಸಜ್ಜೆ ಮತ್ತು ದ್ವಿದಳ ಧಾನ್ಯಗಳನ್ನು ಬಿತ್ತಬೇಕು. ಇದರ ಇಳುವರಿಯು ಉತ್ತಮವಾಗಿ ಬರುವುದು.

೨. ಹಿಂಗಾರಿ ಹಂಗಾಮಿನಲ್ಲಿ ಜೋಳ, ಕುಸುಬಿ, ಹತ್ತಿ, ಕಡಲೆ ಮುಂತಾದವುಗಳನ್ನು ಬಿತ್ತಬೇಕು. ಇಲ್ಲಿ ೨೫ ರಿಂದ ೩೦ ಇಳುವರಿ ಹೆಚ್ಚಾಗುವುದು.

೩. ನವಣೆ, ಮುಸುಕಿನ ಜೋಳ, ರಾಗಿ ಮುಂತಾದವುಗಳನ್ನು ಈ ಕೆಳಗಿನ ತಿಂಗಳುಗಳಲ್ಲಿ ಬಿತ್ತಬಹುದು.

* ಅಶ್ವಿನಿ ಮಳೆ * ಪುಷ್ಯ ಮಳೆ
* ಭರಣಿ ಮಳೆ * ಆಶ್ಲೇಷ ಮಳೆ
* ಕೃತಿಕಾ ಮಳೆ * ಮೇಘಾ ಮಳೆ
* ರೋಹಿಣಿ ಮಳೆ * ಹುಬ್ಬಾ ಮಳೆ
* ಮುಂಗಾರು ಮಳೆ * ಉತ್ತರಿ ಮಳೆ
* ಆರಿದ್ರಾ ಮಳೆ * ಹಸ್ತ ಮಳೆ
* ಸ್ವಾತಿ ಮಳೆ * ಚಿತ್ತ ಮಳೆ

ಇಲ್ಲಿ ಯಾವ ಮಳೆಗೆ ಯಾವ ಯಾವ ಬೆಳೆಯನ್ನು ಒಣಬೇಸಾಯದಲ್ಲಿ ಬಿತ್ತುತ್ತಾರೆಂಬುದನ್ನು ತಿಳಿದರೆ ಉತ್ತಮ.

) ಸಾಲುಗಳ ಅಂತರ

ಹೆಚ್ಚು ಇಳುವರಿ ಪಡೆಯಲು ಸಮನಾಗಿ ಹಂಚಿದ ಯೋಗ್ಯ ಸಸ್ಯಗಳ ಸಂಖ್ಯೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಕಡಿಮೆ ಮಳೆಯಾಗುವ ಪ್ರದೆಶಗಳಲ್ಲಿ ಹೆಚ್ಚು ಅಂತರದ ಸಾಲುಗಳು ಹಾಗೂ ಕಡಿಮೆ ಸಸ್ಯಗಳ ಸಂಖ್ಯೆಯನ್ನು ಕಾಪಾಡಿಕೊಂಡು ಉಳಿಸಿಕೊಳ್ಳಬೇಕಾಗುತ್ತದೆ. ಉತ್ತಮ ಇಳುವರಿ ಪಡೆಯಲು ಪ್ರತಿಯೊಂದು ಬೆಳೆಗೂ ಯೋಗ್ಯ ಪ್ರಮಾಣದಲ್ಲಿ ಸಸ್ಯಗಳ ಸಂಖ್ಯೆಯನ್ನು ಕಾಪಾಡಿಕೊಂಡು ಹೋಗುವುದು ಅವಶ್ಯಕವಾಗಿದೆ. ಉದಾಹರಣೆಗೆ ಹಿಂಗಾರಿನಲ್ಲಿ ಜೋಳದ ಸಸಿಗಳು ಪ್ರತಿ ಹೆಕ್ಟೇರಿಗೆ ೯೦,೦೦೦ ಸಸಿಗಳು ಕುಸುಮೆಯಲ್ಲಿ ಸುಮಾರು ೫೦,೦೦೦ ಸಸಿಗಳು ಇರುವುದು ಅವಶ್ಯಕ. ಸಸಿಗಳ ಸಂಖ್ಯೆಯಲ್ಲಿ ಹೆಚ್ಚು – ಕಡಿಮೆ ಆದರೆ ಇಳುವರಿಯಲ್ಲಿ ವ್ಯತ್ಯಾಸವಾಗುತ್ತದೆ. ಹೆಚ್ಚು ಅಂತರದಲ್ಲಿ ಸಾಲುಗಳನ್ನು ಇಡುವುದರಿಂದ ಪರಿಣಾಮವಾಗಿ ಕಡಿಮೆ ಮಳೆಯಾದ ಹಂಗಾಮಿನಲ್ಲಿ ಹೆಚ್ಚಾಗಿ ಕಾಣಬಹುದು.

ಕ್ರ.ಸಂ. ಸಸಿಗಳು ಸಾಲುಗಳ ಅಂತರ ಸಸ್ಯಗಳ ಸಂಖ್ಯೆ
೧. ಮು.ಜೋಳ ೩೭.೫ ೧೮
೨. ಹಿ.ಜೋಳ ೬೦.೭೫ ೮ – ೧೦
೩. ಕುಸುಬಿ ೬೦.೭೫ ೫ – ೬
೪. ತೊಗರಿ ೯೦ ೫ – ೬
೫. ಸೂರ್ಯಕಾಂತಿ ೬೦.೭೫ ೬ – ೭
೬. ಗುತ್ತಿ ಶೇಂಗಾ ೩೭.೫ ೧೫ – ೧೮
೮. ಹತ್ತಿ ೬೦.೭೫ ೫ – ೬
೯. ಕಡಲೆ ೩೭.೫ ೨೦ – ೨೨

ಹೀಗೆ ಶಿಫಾರಸ್ಸು ಮಾಡಬಹುದು. ಸಾಕಷ್ಟು ಮಳೆಯಾದ ವರ್ಷಗಳಲ್ಲಿ ಸಸ್ಯಗಳ ಸಂಖ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸಿಕೊಳ್ಳುವುದರಿಂದ ಕಾಳು ಹಾಗೂ ಮೇವುಗಳನ್ನು ಹೆಚ್ಚಾಗಿ ಪಡೆಯಬಹುದು. ಮಳೆಯ ಏರುಪೇರಿನಿಂದಾಗಿ ಬೀಜಗಳ ಹುಟ್ಟುವಿಕೆಯಲ್ಲಿ ವ್ಯತ್ಯಾಸವಾದರೆ ಬಿತ್ತಿದ ೧ – ೨ ವಾರಗಳಲ್ಲಿ ಖಾಲಿ ಇರುವ ಜಾಗಗಳಲ್ಲಿ ಬೀಜ ಊರುವುದರಿಂದ ಸರಿಯಾದ ಸಸ್ಯಗಳ ಸಂಖ್ಯೆಗಳನ್ನು ಕಾಪಾಡಬಹುದು.

ಹೀಗೆ ರೈತರು ಸರಿಯಾದ ಕ್ರಮವರಿತು ಬೆಳೆಗಳ ಸಾಲುಗಳ ಅಂತರವನ್ನು ಗಮನಿಸಿ ಹದವಾದ ಮಣ್ಣಿನಲ್ಲಿ ತತಿಗೆ ಅನುಸಾರವಾಗಿ ಬಿತ್ತಬೇಕು. ಅಂದಾಗ ಮಾತ್ರ ಬೆಳೆಗಳು ಚೆನ್ನಾಗಿ ನಾಟುತ್ತವೆ. ಹುಲುಸಾದ ಬೆಳೆ ಬರುತ್ತದೆ.

) ಸಾವಯವ ಗೊಬ್ಬರದ ಬಳಕೆ

ಕಸದಲ್ಲಿ ಕಾಂಚಾಣ ಕಸದಲ್ಲಿ ರಸ ಎನ್ನುವ ಮಾತಿದೆ. ಮುಳ್ಳು ಕಂಟಿಯ ಬಿಟ್ಟು ಕಳ್ಳಿ ಮೊದಲು ಮಾಡಿ ಎಳ್ಳುಕಟ್ಟಿಗೆ ಕೋಯಿಲಿ ಹಳೆ ಕಣಿಕಿ ಗಿಡದೆಲೆಯೂ ಬಳ್ಳಿ ತೊಪ್ಪಲು ಕುಳ್ಳು ಎಲ್ಲಾ ಕಸಗೂಡಿಸಿ ತಂದು ಒಳ್ಳೆ ಕ್ರಮವರಿತು ತಗ್ಗಿನೊಳು ಹಾಕಯ್ಯಾ. ಪೊಳ್ಳು ಬಿಡದೆಲೆ ತುಳಿದು ಶಗಣಿ ನೀರನ್ನು ಹೊಡೆದು ತೆಳ್ಳಗೊಂದಾವರ್ತಿ ಬೂದಿ ಹಾಳನ್ನು ಚಲ್ಲಯ್ಯಾ ಹಳ್ಳ ಹೊಳೆ ಕ್ವಾರೆಯ ರೇವೆಯ ಮಣ್ಣನ್ನು ಮುಚ್ಚಿದೊಡೆ ಹೆಚ್ಚಿಗೆ ಗೊಬ್ಬರವಾಗುವುದೆಂದು ಚಿತ್ತರಗಿ ವಿಜಯ ಮಹಾಂತೇಶ.

ಮನುಷ್ಯರುಗಳಿಗೆ ಹಣ್ಣು – ಹಂಪಲು, ಹಾಲು, ಕುದುರೆಗೆ ಕಡಲೆ, ಎತ್ತಿಗೆ ಹಿಂಡಿ, ಹುರುಳಿ, ಹತ್ತಿಕಾಳು, ಹೇಗೆ ಶಕ್ತಿ ವರ್ಧಕವೂ ಹಾಗೆ ಎಂಥಾ ಕನಿಷ್ಟ ಭೂಮಿಗಾದರೂ ಗೊಬ್ಬರವು ಶಕ್ತಿಯಾಗಿ ಬೆಳೆ ಸರಿಯಾಗಿ ಫಲ ಕೊಡವದು. ಆದ್ದರಿಂದ “ಭೂಮಿಗೆ ಹಾಕೋ ಗೊಬ್ಬರ, ಬೆಳೆ ನೋಡು ಅಬ್ಬರ” ಎಂಬ ಗಾದೆ ಮಾತು ಇದೆ.

ಗೊಬ್ಬರವನ್ನು ಹೆಚ್ಚಿಗೆ ಮಾಡಬೇಕಾದರೆ ಮನೆಯಲ್ಲಿ ದನಗಳ ಸೆಗಣಿಯನ್ನು ಕುಳ್ಳು ಹಚ್ಚಬಾರದು. ದನಗಳಿಗೆ ಮೇಯಿಸಲು ಕಣಿಕೆಯನ್ನು ಒತ್ತುವ ಕುಡಗೋಲಿನಿಂದ ಸಣ್ಣ ಸಣ್ಣ ತುಣುಕ ಮಾಡಿ ಕೊರೆಯಬೇಕು. ದನಗಳು ತಿಂದು ಗ್ವಾದಲಿಯಲ್ಲಿ ಉಳಿದ ಗಂಟಿನ ತುಣುಕುಗಳನ್ನು ಹೊಟ್ಟಿನ ನುಸಿಯನ್ನು ರಾತ್ರಿ ಮಲಗುವ ಮುಂದೆ ಗ್ವಾದಲಿ ಕಸ ಹೊಡೆದು ಎಲ್ಲಾ ತುಂಡು ತುಣುಕು ಕಸವನ್ನು ದನದ ಕೊಟ್ಟಿಗೆಯಲ್ಲಿ ಚೆಲ್ಲಬೇಕು. ಮತ್ತು ದನದ ಹಿಂದಿನ ಬಾಜುದಲ್ಲಿ ಹಾಳು ಮಣ್ಣನ್ನಾಗಲಿ ಕೀವಿಯ ಮಣ್ಣನ್ನಾಗಲಿ ಹಾಕಬೇಕು. ದನಗಳು ಬೆಳೆತನಕ ಆ ಕಸವನ್ನು ಶಗಣಿ ಮೂತ್ರದೊಳಗೆ ತುಳಿದಾಡಿರುತ್ತವೆ. ಮುಂಜಾನೆ ಎದ್ದು ಕೂಡಲೇ ಆ ಕಸವನ್ನು ಹಸನಾಗಿ ಬಳೆದು ಹಿಂದೆ ಹಾಕಿದ ಮಣ್ಣು ಮೂತ್ರದಲ್ಲಿ ಕಲಿಸಿ ಈ ಕಸದೊಡನೆ ಕೂಡಿಸಿ ತಿಪ್ಪೆಗೆ ಚೆಲ್ಲಬೇಕು. ತಿಪ್ಪಿಯ ಹಾಕುವ ಜಾಗದಲ್ಲಿ ಸರಿಯಾಗಿ ತಗ್ಗು ಮಾಡಿ ಆ ತಗ್ಗಿನೊಳಗೆ ಒಯ್ದು ಹಾಕಬೇಕು. ಹೀಗೆ ಮಾಡುವುದರಿಂದ ದಿನಾಲೂ ಒಂದು ಬುಟ್ಟಿ ಶಗಣಿ ಗೊಬ್ಬರ ಆಗುವ ಸ್ಥಳದಲ್ಲಿ ದಿನಾಲೂ ನಾಲ್ಕು ಬುಟ್ಟಿ ಕಸವಾಗುವುದು. ಹತ್ತು ಗಾಡಿ ಗೊಬ್ಬರವಾಗುವ ಬದಲು ೪೦ – ೫೦ ಗಾಡಿ ಗೊಬ್ಬರ ಆಗುವುದು. ಹೇಗೆ ಗೊಬ್ಬರ ಕುಟ್ರಿ ದೊಡ್ಡದಾಗುವುದೋ ಹಾಗೆ ಹೊಲದಲ್ಲಿ ರಾಶಿಯೂ ದೊಡ್ಡದಾಗುವುದು. ಹೊಲದಲ್ಲಿ ಬೆಳೆದ ಕಸ ಹುಲ್ಲು ಕಡ್ಡಿ ಎಲ್ಲವನ್ನೂ ಮತ್ತು ಕುಶಬಿ ಕಾಡು, ಸೂರ್ಯಕಾಂತಿ ಕಟ್ಟೆಗೆ, ಸೂರ್ಯಕಾಂತಿ ಮಾಡಿದ ತೆನೆಯನ್ನು ಹೊಟ್ಟನ್ನೂ ಸುಡದೆ ಒತ್ತಟ್ಟಿಗೆ ಕೂಡಿ ಹಾಕಿ ಹೊಲದಲ್ಲಿ ಒಂದು ದೊಡ್ಡ ತೆಗ್ಗು ತೆಗೆದು ಅದರಲ್ಲಿ ಹಾಕಿ ಒಂದೊಂದು ಮೊಳದ ಎತ್ತರವಾದ ಕೂಡಲೇ ಸರಿಯಾಗಿ ತುಳಿಯಬೇಕು. ಆಮೇಲೆ ನೀರು ಹಾಕಬೇಕು. ಮೇಲೆ ತೆಳ್ಳಗೆ ಮಣ್ಣು ಮುಚ್ಚಬೇಕು. ಹೀಗೆ ಮಾಡುವುದರಿಂದ ನಮ್ಮ ಹೊಲದಲ್ಲಿ ಸಾಕಷ್ಟು ಗೊಬ್ಬರ ಮಾಡಿಕೊಳ್ಳಲು ಬರುತ್ತದೆ. ಇದು ಅಲ್ಲದೆ ರಸ್ತೆಯಲ್ಲಾಗಲಿ ಗುಡ್ಡಮಡ್ಡಿಗಳಲ್ಲಾಗಲಿ ಬೆಳೆದ ಗಿಡದ ತೊಪ್ಪಲು ಉದರಿ ಬಿದ್ದು ಒಣಗಿದ ಎಲೆ ಯಾವುದಾದರೂ ತಂದು ಹಾಕಬೇಕು. ರಸ್ತೆಯಲ್ಲಿ ಬೆಳೆದ ಗುಡ್ಡ ಮಡ್ಡಿಗಳಲ್ಲಿ ಬೆಳೆದ ಹಸಿರು ತೊಪ್ಪಲನ್ನು ತಂದು ತಗ್ಗಿನೊಳಗೆ ಹಾಕಿ ಮುಚ್ಚಿದರೆ ಉತ್ತಮ ಗೊಬ್ಬರವಾಗುತ್ತದೆ. ಉಪಯೋಗಕ್ಕೆ ಬಾರದ ವಸ್ತುಗಳೇ ಜಗತ್ತಿನಲ್ಲಿ ಇಲ್ಲ. ಉಪಯೋಗ ಮಾಡಿಕೊಳ್ಳುವವನೇ ಬಲ್ಲ. ಉಪಯೋಗ ಮಾಡಿಕೊಳ್ಳಬೇಕೆಂಬ ಜ್ಞಾನವನ್ನು ಪಡೆಯಬೇಕು. ಇದು ಅಲ್ಲದೆ ಮುಂಗಾರಿ ಬಿತ್ತುವ ಸಮಯದಲ್ಲಿ ಭೂಮಿ ಸರಿಯಾಗಿ ಹಸಿಯಾದರೆ ಸೆಣಬಿನ ಬೀಜವನ್ನು ಬಿತ್ತಿ ಮೊಗ್ಗಿಗೆ ಬಂದ ಕೂಡಲೇ ನೇಗಿಲ ಹೊಡೆದು ಮಣ್ಣಲ್ಲಿ ಮುಚ್ಚಬೇಕು. ಈ ಹಸಿರೆಲೆ ಗೊಬ್ಬರದಲ್ಲಿ ಇದರಲ್ಲಿ ಇರುವ ಶಕ್ತಿ ಯಾವುದೇ ರಾಸಾಯನಿಕ ಗೊಬ್ಬರಗಳಲ್ಲಿಯೂ ಇರುವುದಿಲ್ಲ. ಹಸಿರೆಲೆ ಗೊಬ್ಬರ ಮಾಡುವುದರಿಂದ ಬೆಳೆಗೆ ರೋಗಗಳು ಬರುವುದಿಲ್ಲ. ಹತ್ತಿ ಬಿತ್ತಿದ ಹೊಲದಲ್ಲಿ ಹತ್ತಿಯನ್ನು ಬಿಡಿಸುವುದು ಮುಗಿದೊಡನೆ ಹದನಾದ ಕುಡ ಹಾಕಿ ಕುಂಟಿಯನ್ನು ಸ್ವಲ್ಪ ಬಳವಿಗೆ ಹೂಡಿಕೊಂಡು ಗಿಡದೊಳಗೆ ಹತ್ತಿ ಅಚ್ಚ ಸಣ್ಣ ಸಣ್ಣ ಕಟ್ಟಿಗೆ ವಾಲಿಗಳು ಹರಿಯುವಂತೆ ಹರಗಬೇಕು. ತೊಪ್ಪಲು ಬೀಡಿಯಲ್ಲಿ ಕೆಲವು ಮುಚ್ಚುವುದು ಕೆಲವು ಹಾಗೆ ಉಳಿಯುವುದು. ಆವಾಗ್ಗೆ ಎಲ್ಲಾ ಕಟ್ಟಿಗೆಗಳನ್ನು ಹರಗಬಾರದು. ಕಟ್ಟಿಗೆ ಇದ್ದರೆ ಗಾಳಿಗೆ ಹಾರುವುದಿಲ್ಲ. ಮಳೆಗೆ ಹೋಗುವುದಿಲ್ಲ. ಸಾಲಿನ ಮಧ್ಯ ರೆಂಟೆ ಹೊಡೆದು ಬಿಡಬೇಕು. ಮಳೆಯಾದ ಮೇಲೆ ಹರಗಬೇಕು. ಹೀಗೆ ಮಾಡುವುದರಿಂದ ಗೊಬ್ಬರವು ತಾನೆ ಆಗುವದು. ಮಾನವನ ಮಲಮೂತ್ರಗಳನ್ನು ಕೆಡಸಬಾರದು. ದಿನಾ ಜನರು ಮಲಮೂತ್ರ ಹಾಳು ಮಾಡಿದರೆ ಆತ್ಮಹತ್ಯೆ ಮಾಡಿಕೊಂಡದ್ದಿಕ್ಕಿಂತಲೂ ಹೆಚ್ಚಿನ ವೇದನೆ ಎಂದು ಭಾವಿಸಿದ್ದಾರೆ. ಮಲವು ನೆಲಕ್ಕೆ ಬಲವು ಮೂತ್ರವೂ ಧಾತ್ರಿಗೆ ಕ್ಷಾತ್ರವು, ಕಸವು ಭೂಮಿಗೆ ಕಸುಮ | ಕೊಳೆ ಇಳೆಗೆ ಕಳೆ | ಹೊಲಸು ಹೊಲಕ್ಕೆ ಹುಲುಸು | ಇಂತಿ ಹೊಲಸಿನೊಳಗೆ ಹುಲುಸಡಗಿದ ಪರಿಯ ನಾನೆಂತು ಬಣ್ಣಿಸಲಯ್ಯಾ ಚಿತ್ತರಗಿ ಶ್ರೀ ಮಹಾಂತೇಶ. ಹೀಗೆ ಹೊಲವು ಕಸುವಿನಿಂದ ಬೆಳೆಯನ್ನು ಬೆಳೆಯಬೇಕಾದರೆ ಸಾವಯವ ಗೊಬ್ಬರದ ಬಳಕೆ ಮಾಡುವ ವಿಧಾನ ಅವಶ್ಯಕವಾಗಿದೆ.

* ಎರೆಹುಳು ಗೊಬ್ಬರ

ಮನೆಯ ಹಿಂದೆ ತೆಗ್ಗು ತೆಗೆದು ಅದನ್ನು ಚೌಕಾಕಾರವಾಗಿ ಕಟ್ಟಿ ಅದರೊಳಗೆ ದನಕರುಗಳ ಸೆಗಣಿ ದಂಟು, ಕಸಕಡ್ಡಿ ಹಾಕುವುದು. ಹೀಗೆ ಹಾಕಿದ ಕೆಲವು ದಿನಗಳ ಬಳಿಕ ರೈತನ ಮಿತ್ರನಾದ ಎರೆಹುಳುಗಳನ್ನು ಆ ಕೊಟ್ಟಗಿಯಲ್ಲಿ ಬಿಡಬೇಕು. ಆಗ ಅಲ್ಲಿಯ ನವೀನ ತರಹದ ಕಸಕಡ್ಡಿ ಸೆಗಣಿಗಳು ಕೊಳೆಯುತ್ತಾ ಹೋಗುತ್ತವೆ. ದಿನಾಲೂ ಆ ಕೊಟ್ಟಿಗೆಯಲ್ಲಿ ನಾವು ನೀರು ಬಿಡಬೇಕು. ಹೀಗೆ ಮಾಡುವುದರಿಂದ ಒಳ್ಳೆಯ ಸಾವಯವ ಗೊಬ್ಬರ ನಮಗೆ ಸಿಗುವದು.

ಕಾಂಪೋಸ್ಟ ಸಸ್ಯ ಮೂಲದ ಸಾವಯವ ಪದಾರ್ಥಗಳನ್ನು ಕೊಳೆಯುವಿಕೆಗೆ ಒಳಪಡಿಸಿ ತಯಾರಿಸುವ ಗೊಬ್ಬರಕ್ಕೂ ಕಾಂಪೋಸ್ಟ ಎನ್ನುತ್ತೇವೆ. ಇದು ಮೇಲೆ ತಿಳಿಸಿದಂತೆ ದಂಟು, ಕಟ್ಟಿಗೆ, ಹುಲ್ಲು ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೊಂದಿದೆ. ಇತರ ಕಸಕಡ್ಡಿಗಳನ್ನು ಈ ಗೊಬ್ಬರಕ್ಕೆ ಉಪಯೋಗಿಸಬಹುದು. ಈ ಗೊಬ್ಬರವು ಕೂಡ ಬೆಳೆಗಳಿಗೆ ಉತ್ತಮವಾದದ್ದು ಆಗಿದೆ.

ಸಾವಯವ ಗೊಬ್ಬರದಲ್ಲಿ ಸಾರಜನಕ ಪ್ರತಿಶತ ಕೆಳಗಿನಂತಿರುತ್ತದೆ.

ಕ್ರ.ಸಂ.

ಗೊಬ್ಬರ

ಸಾರಜನಕ ಪ್ರ..
೧. ದನಗಳ ಸಗಣಿ ೦.೩ – ೦.೪
೨. ದನಗಳ ಮೂತ್ರ ೦.೮
೩. ಕೊಟ್ಟಗೆ ಗೊಬ್ಬರ ೦.೫ – ೨.೦
೪. ನಗರ ಕಾಂಪೋಸ್ಟ ೧.೫ – ೨.೦
೫. ಕೋಳಿ ಗೊಬ್ಬರ ೩.೦೩
೬. ಮಾನವನ ಮಲ ೧.೨ – ೧.೫
೭. ಒಣಗಿದ ರಕ್ತ ೧೦ – ೧೨
೮. ಎಲುಬುಗಳು ೩.೦
೯. ಮಾನವನ ಮೂತ್ರ ೧.೦ – ೧.೨

ಹೀಗೆ ಸಾವಯವ ಗೊಬ್ಬರದ ಪ್ರತಿಶತ ಹಾಗೂ ಇದರ ಒಂದು ಉಪಯೋಗಗಳು ಹೊಲಗಳಿಗೆ ಉತ್ತಮವಾಗಿದೆ.

. ಬೀಜಗಳ ಸಂಗ್ರಹ ಪದ್ಧತಿ

ಬೀಜಗಳು ಅಮೂಲ್ಯವಾದವುಗಳು. ಇವುಗಳನ್ನು ನಾವು ಸಂಗ್ರಹಿಸುವ ಕಾರಣ “ಒಂದು ದಿನ ಬಿತ್ತಿ ವರುಷ ದಿನ ಉಣ್ಣುತ್ತೇವೆ” ಆದ್ದರಿಂದ ಈ ಬೀಜಗಳ ಸಂಗ್ರಹ ಉಪಯುಕ್ತವಾಗಿದೆ. ಬಿತ್ತುವ ಬೀಜಗಳು ನಾವು ಬೆಳೆದ ಸ್ವಂತ ಬೆಳೆಗಳಾಗಿರಬೇಕು. ಇವು ರೋಗ ನಿರೋಧಕ ಹಾಗೂ ಬರ ನಿರೋಧಕವಾಗಿರಬೇಕು. ಇವುಗಳನ್ನು ನಾವು ಸಂಗ್ರಹಿಸಿ ಇಡಬೇಕು.

. ಹಗೆ ಮಾಡುವುದು

ವರ್ಷ ಪೂರ್ತಿ ಕಾಳು ಕೆಡಬಾರದು ಎನ್ನುವ ಕಾರಣಕ್ಕಾಗಿ ನಾವು ಹಗೆಯನ್ನು ಮಾಡಿಕೊಂಡು ಅದರಲ್ಲಿ ಬೀಜಗಳ ಸಂಗ್ರಹ ಮಾಡಬೇಕು.

. ಬೀಜ ಸಂಗ್ರಹಣಾ ಕೋಣೆ

ಸರಕಾರಿ ಮಾನ್ಯತೆಯಲ್ಲಿರುವ ಹಲವಾರು ಏರೋಸಗಳಲ್ಲಿ ಇವುಗಳನ್ನು ಸಂಗ್ರಹಿಸಬಾರದು. ಹೀಗೆ ಎಚ್ಚರದಿಂದ ಬೀಜಗಳ ಸಂಗ್ರಹ ಮಾಡಬೇಕು.

. ರಸಗೊಬ್ಬರ ಬಳಕೆ ವಿಧಾನ

ತೇವಾಂಶದ ಅಭಾವವನ್ನು ಬಿಟ್ಟರೆ ಒಣ ಬೇಸಾಯದಲ್ಲಿ ಇಳುವರಿ ಕುಂಠಿತಗೊಳಿಸುವ ಇನ್ನೊಂದು ಅಂಶವೆಂದರೆ ಮಣ್ಣಿನಲ್ಲಿ ಸಸ್ಯ ಪೋಷಕಗಳ ಕೊರತೆ. ಈ ಕೊರತೆಯನ್ನು ಭಾಗಶಃ ಪೂರೈಸಲು ಭೂಮಿಗೆ ಪ್ರತಿ ೨ ರಿಂದ ೩ ವರ್ಷಗಳಿಗೊಮ್ಮೆ ಎಕರೆಗೆ ೫ ರಿಂದ ೧೦ ಬಂಡಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಸ್‌ನ್ನು ಹಾಕುವದು ಒಳ್ಳೆಯ ಪದ್ಧತಿ, ಹೀಗೆ ಮಾಡಿದರೆ ಕೆಳಗಿನ ವಚನದ ಭಾವಾರ್ಥದಂತೆ ಹೊಲ ಸಮೃದ್ಧಿಯಾಗಿ ಬೆಳೆಯುವುದು.

ವಚನ

ಬೇಸಿಗೆಯ ಕಾಲದಲ್ಲಿ ಹೂಡಿ ನೇಗಿಲವನ್ನು
ಬಿಸಿಲಿಗೆ ಮಣ್ಣು ಕಸುವು ಆಗುವುದು ನೋಡಾ
ಬೇಸಿಗೆಯ ಬಿಸಿಲಿನಲ್ಲಿ ಹಾಕಬೇಡ ಗೊಬ್ಬರ
ಬಿಸಿಲಿಗೆ ಗೊಬ್ಬರದ ಕಸುವು ಹೋಗುವುದು ನೋಡಾ
ಮಳೆಗಾಲದಲ್ಲಿ ಗೊಬ್ಬರ ಹಾಕುವುದು (ನೋಡಾ) ಲೇಸು.

ಗಾಳಿ ಇಲ್ಲದಾಗ ಅದನ್ನು ಚೆಲ್ಲುವದು ಲೇಸು
ಧೂಳು ಹಾರದಂತೆ ಮಣ್ಣೊಳಗೆ ಕೂಡಿಸುವುದು ಕರಲೇಸು ಕಾಣಯ್ಯಾ.
ಮೇಲುಗೊಬ್ಬರ ಹಾಕಿ ಬಿತ್ತಿದೊಡೆ ಅಬ್ಬರದ ಬೆಳೆ ನೋಡಿ
ಹೀಗೆಂದ ಚಿತ್ತರಗಿ ವಿಜಯ ಮಹಾಂತೇಶ.

ಹೀಗೆ ಗೊಬ್ಬರ ಹಾಕುವುದರಿಂದ ಸಮೃದ್ಧಿಯಾದ ಬೆಳೆ ಬರುವುದು ನಿಶ್ಚಿತವಾಗಿದೆ.