ರಸಗೊಬ್ಬರದ ಮಹತ್ವ

ಮನುಷ್ಯ ಮತ್ತು ಸಸ್ಯ ಜೀವಿಯಾಗಲಿ ಸಮೃದ್ಧಿಯಾಗಿ ಪುಷ್ಠಿಯಾಗಿ ವೃದ್ಧಿಯಾಗಬೇಕಾದರೆ ಬೆಳೆಯ ಬೇಕಾದರೆ ತಕ್ಕಂತೆ ಪೋಷಕಾಂಶ ಬೇಕೆ ಬೇಕಾಗುತ್ತದೆ. ಮಗು ತಾಯಿಯ ಗರ್ಭದಲ್ಲಿರುವ ಮಗು ಚೆನ್ನಾಗಿ ಬೆಳೆದು ಪುಷ್ಠವಾಗಿರಲಿ ಎಂದು ಅದಕ್ಕೆ ಅವಶ್ಯಕ ಪೋಷಕಾಂಶಗಳನ್ನು ನೀಡುವಂತೆ ನಂತರ ಮಗುವಿನ ಅರೈಕೆಗೆ ಬೂಸ್ಟ್, ಹಾರ್ಲಿಕ್ಸ್, ಮುಂತಾದ ಸತ್ವಯುಕ್ತ ಆಹಾರ ಒದಗಿಸಿ ಆ ಮಗು ಅರೋಗ್ಯವಂತವಾಗಿ ಸದೃಢವಾಗಿ ಬೆಳೆಯುವಂತೆ ಮಾಡುತ್ತವೆಯೋ ಹಾಗೆ ಸಸಿಗಳಿಗೂ ಸಹ ಆರೈಕೆ ಇದೆ ಎಂಬುದನ್ನು ಖ್ಯಾತ ವಿಜ್ಞಾನಿ ಜಗದೀಶ ಚಂದ್ರಬೋಸ್ ತೋರಿಸಿಕೊಟ್ಟಿದ್ದಾರೆ. ಅಂತಹ ಜೀವವಿರುವ ಸಸಿಗಳನ್ನು ಸಮೃದ್ಧವಾಗಿ ಉತ್ತಮವಾಗಿ ಆರೋಗ್ಯವಾಗಿ ಬೆಳೆಸಬೇಕಾದದ್ದು ನಮ್ಮಗಳ ಆದ್ಯ ಕರ್ತವ್ಯ.

ಬೀಜವು ಹೊಲದಲ್ಲಿ ಬಿತ್ತಿದರೆ ಸಾಲದು ಅದು ಚೆನ್ನಾಗಿ ಬೆಳೆದು ಫಸಲು ನೀಡುವಂತೆ ಮಾಡಲು ಅದಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸಬೇಕು. ಅಂದರೆ ಗೊಬ್ಬರ ಹಾಕಬೇಕು. ಈ ಗೊಬ್ಬರಗಳಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕಚ್ಚಾ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರ. ಇದರಲ್ಲಿ ಉತ್ತಮವಾದ ಗೊಬ್ಬರ ಎಂದರೆ ಕಚ್ಚಾ ಗೊಬ್ಬರ ಅಂದರೆ ಸಗಣಿ ಗೊಬ್ಬರ ಎಂದರ್ಥ ಅಥವಾ ಸಾವಯವ ಗೊಬ್ಬರ ಎಂದರ್ಥ. ಇದನ್ನು ಬಂಡಿಯಲ್ಲಿ ಹೇರಿಕೊಂಡು ಹೊಲದಲ್ಲಿ ಗುಂಪುಗಳಾಗಿ ಹಾಕಿ ಗಾಳಿ ಇರದೆ ಇದ್ದಾಗ ಚೆನ್ನಾಗಿ ಹರವಿ ಅದು ಮಣ್ಣಿನಲ್ಲಿ ಬೆರೆತು ಹದವಾಗುವಂತೆ ಹರಗಬೇಕು. ಹೀಗೆ ಗೊಬ್ಬರವನ್ನು ಕಲಸಿದ ಹೊಲದಲ್ಲಿ ಬಿತ್ತನೆ ಮಾಡಿದರೆ ಸಮೃದ್ಧ ಫಸಲು ನಿಶ್ಚಿತವೆಂಬುದರಲ್ಲಿ ಸಂಶಯವಿಲ್ಲ.

ರಸಗೊಬ್ಬರದ ಬಗ್ಗೆ ಇರುವ ನುಡಿಮುತ್ತುಗಳು

೧. ಬಂಟನಾಗಿ ಗೊಬ್ಬರ ಹಾಕಣ್ಣ, ಅಬ್ಬರ ಬೆಳೆ ನೋಡಣ್ಣ, ಕೊಬರಿ ಕಡುಬು ತಿನ್ನಣ್ಣ.

೨. ಭೂ ತಾಯಿಯ ಒಡಲಿಗೆ ಗೊಬ್ಬರ ಬೆರೆಸು, ಮನೆಯಲ್ಲಿ ಮಣ ಬಂಗಾರ ಗಳಿಸು.

೩. ಗೊಬ್ಬರ ಹಾಕಿ ಬೆಳೆ ನೋಡಾ – ಕಣ ಮಾಡಿ ರಾಶಿ ನೋಡಾ.

೪. ಕಸವು ಭೂಮಿಗೆ ಕಸವು – ಕೊಳೆಯುವ ಅದು ಇಳೆಗೆ ಕಳೆಯು.

೫. ರಸಾಯನ ಗೊಬ್ಬರ ಔಷಧವಿಲ್ಲದೆ ಹಸನಾದ ಬೆಳೆಯಾಗದು ನೋಡಾ.

ಹೀಗೆ ರಸಗೊಬ್ಬರದ ಬಳಿಕ ಅದನ್ನು ತಯಾರಿಸುವ ವಿಧಾನ ಅವರ ಉಪಯೋಗ ಮತ್ತು ಅದರ ಹಿತ ನುಡಿಗಳನ್ನು ನಾವು ನೋಡಬಹುದಾಗಿದೆ.

ಕಳೆಗಳ ನಿಯಂತ್ರಣ ಪದ್ಧತಿ (ಗಳೆ ಹೊಡೆಯುವುದ)

ನಮ್ಮ ರೈತರು ಹೊಲದಲ್ಲಿ ಗಳೆ ಹೊಡೆಯುವುದು ಚೆನ್ನಾಗಿ ತಿಳಿದುಕೊಳ್ಳಬೇಕು. ಎರೆಭೂಮಿ ಇದ್ದರೆ ಒಂದು ಸಾಲು ಎರಡು ಸಾಲು ಹರಗಿದರೆ ಸಾಕು ನಮ್ಮ ಹೊಲದಲ್ಲಿ ಕಸವೇ ಬೆಳೆದಿಲ್ಲವೆಂದು ಹೇಳುತ್ತಾ ಕೂಡ್ರುವ ರೂಢಿ ಕರಗತವಾಗಿದೆ. ಹೀಗೆ ಮಾಡುವುದು ಒಳ್ಳೆಯದಲ್ಲ. ಭೂಮಿಯನ್ನು ಚೆನ್ನಾಗಿ ಹದ ಮಾಡಬೇಕು. ಮನೆಯಲ್ಲಿ ಹೆಣ್ಣು ಮಕ್ಕಳು ರೊಟ್ಟಿ ಮಾಡಲು ಹೇಗೆ ಹಿಟ್ಟನ್ನು ನಾದುತ್ತಾರೆಯೋ ಅಷ್ಟು ಕೈಯಲ್ಲಿ ಹಿಟ್ಟು ಜಿಗುಟು ಬರುತ್ತದೆ. ಜಿಗುಟಾದ ಹಿಟ್ಟಿನಿಂದ ಮಾಡಿದ ರೊಟ್ಟಿಯು ಚೆನ್ನಾಗಿ ಆಗುತ್ತದೆ. ರುಚಿಯೂ ಇರುತ್ತದೆ. ಮತ್ತು ಗಡಿಗೆಯ ಮಾಡುವ ಕುಂಬಾರನೂ ಕೂಡಾ ಮಣ್ಣನ್ನು ಹದಮಾಡಿ ತುಳಿಯುತ್ತಾನೆ. ನಾವೂ ಕೂಡಾ ಮಣ್ಣೆತ್ತು ಆಗಲಿ ಯಾವದೇ ಒಂದು ಗೊಂಬಿಯನ್ನು ಮಣ್ಣಿನಿಂದ ಮಾಡಬೇಕಾದರೆ ಎಷ್ಟು ಹದಮಾಡುತ್ತೇವೆಯೋ ಹದವಾದ ಮಣ್ಣಿನಿಂದ ಮಾಡಿದ ಮೂರ್ತಿ ಕೆಡುವುದಿಲ್ಲ. ಹಾಗೆ ನಾವೂ ಕೂಡಾ ಬಿತ್ತಿ ಬೆಳೆವ ಭೂಮಿಯೂ ಮಣ್ಣನ್ನೂ ಒಳ್ಳೆ ಹದ ಮಾಡಬೇಕಾಗುತ್ತದೆ. ಹೇಗೆಂದರೆ ಬೇಸಿಗೆಯಲ್ಲಿ ಮೂರು ಸಲ ಹರಗಬೇಕು. ಬಿಸಿಲಿಗೆ ಮಣ್ಣು ಒಣಗಿರುತ್ತದೆ. ಎರಡು ಮೂರು ಸಲ ಹರಗುವುದರಿಂದ ಮಣ್ಣು ಬಿಸಿಲಿಗೆ ಕಾದು ಶಕ್ತಿಯಾಗಿ ಬೀಡಿಯಲ್ಲಿ ಇಳಿಯುತ್ತದೆ. ಮೂರು ಸಲ ಕುಂಟಿಯಿಂದ ಹರಗಿದ ಹೊಲಕ್ಕೆ ಮಳೆಯಾದ ಕೂಡಲೇ ರಂಟೆಯನ್ನು ಹೊಡೆಯಬೇಕು. ಈ ರಂಟೆ ಹೊಡೆಯುವುದರಿಂದ ಮೇಲಿನ ಮಣ್ಣು ಕೆಳಗೆ ಒಳಗಿನ ಮಣ್ಣು ಮೇಲೆ ಆಗುತ್ತದೆ. ಹುಳ ಹುಪ್ಪಡಿಗಳ ತತ್ತಿ ಒಡೆಯುತ್ತದೆ. ಕ್ರಿಮಿಕೀಟಗಳ ಬಾಧೆ ದೂರಾಗುತ್ತದೆ. ನೇಗಿಲು ರಂಟೆ ಹೊಡೆಯುವುದರಿಂದ ಮಣ್ಣು ಪೊಳ್ಳು ಆಗುತ್ತದೆ. ಮಳೆ ನೀರು ಚೆನ್ನಾಗಿ ಭೂಮಿಯಲ್ಲಿ ಇಂಗಿ ಹಸಿಯಾಗುತ್ತದೆ. ಎರಡು ಸಾರಿಯಾದರೂ ರಂಟೆ ಹೊಡೆಯಬೇಕು. ರಂಟೆ ಹೊಡೆದ ಮೇಲೆ ಹೊಲವನ್ನು ಚೆನ್ನಾಗಿ ಎರಡು ಸಾರಿ ಹರಗಬೇಕು. ನೊಲ್ಲೆ ಹುಟ್ಟದಂತೆ ಎಚ್ಚರ ವಹಿಸಿ ಹೊಂಬಿಸಿಲಿನೊಳಗೆ ಎರಡು ಸಾರಿ ಹರಗಬೇಕು. ಕನಿಷ್ಟ ಏಳು ಸಲ ಹರಗಬೇಕು. ಬೇಸರ ಮಾಡಿಕೊಳ್ಳಬಾರದು. ಮೇಲಿಂದ ಮೇಲೆ ಹೊಲವನ್ನು ನೋಡುತ್ತಾ ವೇಳೆಗೆ ಸರಿಯಾಗಿ ರಂಟೆ ಹೊಡೆಯುವುದು ಕುಂಟಿಯಿಂದ ಹರಗುವುದು ಗಿಡಗಂಟಿಗಳನ್ನು ಕಡಿಯುವುದು ಬಿಡಬಾರದು. ಹೀಗೆ ಹೊಲದಲ್ಲಿ ಕಳೆಗಳನ್ನು ತೆಗೆಯಬೇಕು. ಅಂದರೆ ಕಾಲಕ್ಕೆ ಅನುಗುಣವಾಗಿ ಕಳೆಗಳನ್ನು ನಿಯಂತ್ರಣದಲ್ಲಿ ಇಡಲು ಸರಿಯಾಗಿ ಹರಗಬೇಕು. ರಂಟೆ ಕುಂಟೆ ಹೊಡೆಯಬೇಕು. ಇದು ಕಳೆಯನ್ನು ನಿಯಂತ್ರಿಸುವ ವಿಧಾನವಾಗಿದೆ.

ದ್ವಿದಳ ಬೆಳೆಗಳು

ದ್ವಿದಳ ಧಾನ್ಯಗಳನ್ನು ಖುಷ್ಕಿ ಬೆಳೆಗಳೆಂದೇ ಪರಿಗಣಿಸಲಾಗುತ್ತಿದ್ದು ಕಳೆದ ಹಲವಾರು ವರ್ಷಗಳಲ್ಲಿ ಅವುಗಳು ಉತ್ಪನ್ನದಲ್ಲಿ ಬದಲಾವಣೆಯಾಗಿಲ್ಲ. ಕರ್ನಾಟಕದಲ್ಲಿ ಸುಮಾರು ೧೨ ಲಕ್ಷ ಹೆಕ್ಟೇರು ಪ್ರದೇಶದಲ್ಲಿ ವಿವಿಧ ಜಾತಿಯ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದರೂ ಪ್ರತಿ ಹೆಕ್ಟೇರಿನ ಸರಾಸರಿ ಉತ್ಪನ್ನ ೩೭೩ ಕೆ.ಜಿ. ಗಳಷ್ಟು ಮಾತ್ರ ಇದೆ. ಸಸ್ಯಾಹಾರವೇ ಮುಖ್ಯವಾಗಿರುವ ಜನರ ಆಹಾರದ ಸಾರಜನಕದ ಮಟ್ಟವನ್ನು ಹೆಚ್ಚಿಸಲು ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದು ಅವಶ್ಯವಾಗಿದೆ.

* ತೊಗರಿ

ರಾಜ್ಯದ ಅತಿ ಮುಖ್ಯ ದ್ವಿದಳ ಧಾನ್ಯವಾದ ತೊಗರೆಯನ್ನು ಸುಮಾರು ೨.೫ ಲಕ್ಷ ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತದೆ. ಇದನ್ನು ರಾಜ್ಯದ ಎಲ್ಲ ಭಾಗಗಳಲ್ಲಿ ಬೆಳೆಯುತ್ತಿದ್ದರೂ ಗುಲ್ಬರ್ಗಾ, ರಾಯಚೂರು, ಬೀದರ, ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತುತ್ತಾರೆ.

ತೊಗರಿಯ ತಳಿಗಳು: ಸಿ – ೨೮, ೧೮೦ – ೨೦೦ ದಿನಗಳಲ್ಲಿಯೂ, ಹೈದ್ರಾಬಾದ್ ೩ – ಸಿ ಎಂಬ ತಳಿಯ ೧೪೦ ರಿಂದ ೧೫೦ ದಿನಗಳಲ್ಲಿಯೂ ಮತ್ತು ಟಿ – ೨೧ ತಳಿಯೂ, ೧೫೦ ರಿಂದ ೧೩೫ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇಳುವರಿ ಹೆಕ್ಟೇರಿಗೆ ೧೫ – ೧೮ ಕ್ವಿಂಟಾಲ್ ಬರುವುದು. ಅದಲ್ಲದೆ ಜೋಳ, ರಾಗಿ, ಸಜ್ಜೆಗಳಲ್ಲಿ ಇದನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ.

* ಕಡಲೆ

ಕಡಲೆಯು ತೇವವನ್ನು ಹಿಡಿದಿಡುವ ಕಪ್ಪು ಮಣ್ಣಿನ ಬೆಳೆಯಾಗಿದೆ. ಉತ್ತರ ಕರ್ನಾಟಕದ ಒಂದು ಮುಖ್ಯವಾದ ಹಿಂಗಾರಿ ಬೆಳೆ. ಇತರ ಯಾವುದೇ ಬೆಳೆಗಳನ್ನು ಬಿತ್ತಲೂ ಕಾಲಾವಕಾಶ ಇರದಾಗ ಕಡಲೆಯನ್ನು ಬಿತ್ತಿ ಸ್ವಲ್ಪ ಮಟ್ಟಿಗಾದರೂ ಇಳುವರಿಯನ್ನು ಪಡೆಯಬಹುದೆಂದು ರೈತರು ಮನಗಂಡಿದ್ದಾರೆ. ಬಾಗಲಕೋಟೆ, ಬಿಜಾಪೂರ, ಬೆಳಗಾಂ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಸುಮಾರು ೧.೬ ಲಕ್ಷ ಹೆಕ್ಟೇರ್‌ಗಳಲ್ಲಿ ಕಡಲೆಯನ್ನು ಬೆಳೆಯುತ್ತಿದ್ದು ಸರಾಸರಿ ಇಳುವರಿ ಪ್ರತಿ ಹೆಕ್ಟೇರಿಗೆ ೪೪೧ ಕೆ.ಜಿ.ಗಳಷ್ಟು ಇದೆ. ಕಡಲೆಯನ್ನು ತಡವಾಗಿ ಬಿತ್ತುವುದರಿಂದ ಇಳುವರಿ ಕಡಿಮೆಯಾಗುತ್ತಿದ್ದು ಕಾಲಕ್ಕೆ ಸರಿಯಾಗಿ ಬಿತ್ತಿ ಪ್ರತಿ ಹೆಕ್ಟೇರಿಗೆ ೮ ರಿಂದ ೧೦ ಕ್ವಿಂಟಾಲುಗಳಷ್ಟು ಇಳುವರಿಯನ್ನು ಪಡೆಯಲು ಸಾಧ್ಯವಿದೆ.

ಕಡಲೆ ಬೆಳೆಯ ತಳಿಗಳು

೧) ಅಣ್ಣಿಗೇರಿ – ೧, ಬೀಮಾ, ಜಿಜೆ – ೧೧, ಈ ತಳಿಗಳು ೧೦೦ ದಿನಗಳಲ್ಲಿ ಕಟಾವಗೆ ಬರುತ್ತವೆ.

* ಹುರುಳಿ

ಹುರುಳಿಯನ್ನು ಸುಮಾರು ೫ ಲಕ್ಷ ಹೇಕ್ಟೇರುಗಳಷ್ಟು ಜಮೀನಿನಲ್ಲಿ ಬೆಳೆಯುತ್ತಿದ್ದರೂ ಇದರಲ್ಲಿ ಯಾವುದೇ ಗಮನಾರ್ಹವಾದ ಸುಧಾರಣೆಗಳಾಗಿಲ್ಲ. ಹುರುಳಿಯ ಸರಾಸರಿ ಉತ್ಪನ್ನ ಹೆಕ್ಟೇರಿಗೆ ೨೪೦ ಕೆ.ಜಿ.ಗಳು ಮಾತ್ರ. ಯಾವುದೇ ಬೆಳೆಯನ್ನು ಬಿತ್ತಲೂ ಸಾಧ್ಯವಿಲ್ಲದಾಗ ಹುರುಳಿಯನ್ನು ಬಿತ್ತಬಹುದು ಎಂಬುದು ಸಾಮಾನ್ಯವಾದ ಮಾತು. ಕಪ್ಪು ಹಾಗೂ ಕೆಂಪು ಮಣ್ಣಿನ ಪ್ರದೇಶಗಳೆರೆಡರಲ್ಲೂ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಕೃಷಿಯಲ್ಲಿ ಯಾವುದೇ ಪೋಷಣೆಯಿಲ್ಲದೆ ಬೆಳೆಯುವ ಬದಲಾಗಿ ಹುರುಳಿಯನ್ನು ಸರಿಯಾಗಿ ಬೇಸಾಯ ಮಾಡಿದರೆ ಹೆಚ್ಚಿನ ಇಳುವರಿ ಅಂದರೆ ಹೆಕ್ಟೇರಿಗೆ ೭ ರಿಂದ ೮ ಕ್ವಿಂಟಾಲುಗಳಷ್ಟು ಕಾಳು ಪಡೆಯಲು ಸಾಧ್ಯ.

* ಅಲಸಂದಿ

ಇತ್ತೀಚಿಗೆ ಜನಪ್ರಿಯವಾಗುತ್ತಿರುವ ಒಂದು ದ್ವಿದಳ ಧಾನ್ಯ. ಅಲಸಂದಿಯನ್ನು ಮೊದಲಿನಿಂದಲೂ ಬೆಳೆಯುತ್ತಾ ಬಂದಿದ್ದರೂ ಬಹುತೇಕ ಎಲ್ಲಾ ತಳಿಗಳು ಹೆಚ್ಚಾಗಿ ದೀರ್ಘಾವಧಿಯವಾದುದ್ದರಿಂದ ಅದು ಹೆಚ್ಚು ಪ್ರದೇಶದಲ್ಲಿ ಬೆಳೆಯಲ್ಪಡುತ್ತಿರಲಿಲ್ಲ. ಈಗ ಅಲ್ಪಾವಧಿಯು ಶುಷ್ಕ ವಾತಾವರಣ ಸಹಿಸುವ ತಳಿ ಸಿ – ೧೫೨ ಶಿಫಾರಸ್ಸು ಮಾಡಿದ ತಳಿಗಳಲ್ಲಿ ಮುಖ್ಯವಾದದ್ದು. ೮೫ – ೯೦ ದಿನಗಳಲ್ಲಿ ಸಂಪೂರ್ಣವಾಗಿ ಕಟಾವು ಆಗುತ್ತದೆ. ಅನುಕೂಲವಾದ ವಾತಾವರಣದಲ್ಲಿ ಹೆಕ್ಟೇರಿಗೆ ೧೦ – ೧೨ ಕ್ವಿಂಟಾಲ್‌ಗಳಷ್ಟು ಇಳುವರಿಯನ್ನು ಪಡೆಯಬಹುದು. ಇದನ್ನು ರಾಜ್ಯದ ದಕ್ಷಿಣ ಭಾಗದಲ್ಲಿ ಹೆಚ್ಚು ಬೆಳೆಯುತ್ತಾರೆ. ಇವು ದ್ವಿದಳ ಧಾನ್ಯಗಳಾಗಿದ್ದು ಹೆಚ್ಚಿನ ಇಳುವರಿ ಕೊಡುವ ಧಾನ್ಯಗಳಾಗಿವೆ.

ಮಿಶ್ರ ಬೆಳೆ ಪದ್ಧತಿ

ನಮ್ಮ ರಾಜ್ಯದ ಕೃಷಿ ಪ್ರದೇಶದಲ್ಲಿ ವರ್ಷದಲ್ಲಿ ಒಂದೇ ಬೆಳೆಯನ್ನು ತೆಗೆಯುವುದು ವಾಡಿಕೆ. ಇತ್ತೀಚಿನ ಸಂಶೋಧನೆಗಳಿಂದ ಯಾವ ಯಾವ ವರ್ಷಗಳಲ್ಲಿ ಬೆಳೆಯು ಅನುಕೂಲಕರವಾಗಿರುವದೋ ಆ ವರ್ಷಗಳಲ್ಲಿ ಮುಖ್ಯ ಬೆಳೆಗಿಂತ ಮುಂಚಿತವಾಗಿ ಮುಂಗಾರು ಪೂರ್ವದಲ್ಲಿ ಒಂದು ಅಲ್ಪಾವಧಿ ಬೆಳೆಯನ್ನು ಇಟ್ಟು ನಂತರ ಮುಖ್ಯ ಬೆಳೆಯನ್ನು ತೆಗೆಯಬಹುದೆಂದು ಕಂಡು ಬಂದಿದೆ. ಕೃಷಿ ಬೇಸಾಯದಲ್ಲಿ ಮಿಶ್ರ ಬೆಳೆ ಬೇಸಾಯವು ಪರಂಪರಾಗತವಾಗಿ ಬಂದಿದೆ. ಇಂಥ ಮಿಶ್ರ ಬೆಳೆ ಬೆಳೆಯಲು ಜೀವನಾವಶ್ಯಕತೆ ಜಾನುವಾರಗಳಿಗೆ ಮೇವು ಹಾಗೂ ಮಳೆಯು ಕಡಿಮೆಯಾಗಿ ಒಂದು ಬೆಳೆಯು ಬಾರದೇ ಹೋದರೆ ಮತ್ತೊಂದು ಬೆಳೆ ಬರಬಹುದೆಂಬ ಆಸೆ ಮುಖ್ಯ ಕಾರಣವಾಗಿರುತ್ತದೆ. ಇದೇ ಆಧಾರದ ಮೇಲೆ ಲಾಭದಾಯಕವಾದ ಮಿಶ್ರ ಬೆಳೆಗಳನ್ನು ಕಂಡುಹಿಡಿಯಲಾಗಿದೆ. ಮಳೆಯ ಪ್ರಮಾಣ ೭೫೦ ಮೀ. ಮೀ. ಗಿಂತ ಹೆಚ್ಚು ಇದ್ದು ಮಳೆಗಾಲದ ಅವಧಿ ೫ ತಿಂಗಳು ಅಥವಾ ಯಾವ ವರ್ಷ ಮಳೆ ಅನುಕೂಲವಾಗಿರುವದೋ ಆ ವರ್ಷಗಳಲ್ಲಿ ಮಿಶ್ರ ಬೆಳೆ ಬೆಳೆಯುವದು ಉತ್ತಮವಾಗಿದೆ. ಹೀಗೆ ಮಿಶ್ರ ಬೆಳೆಯು ಬೆಳೆಯನ್ನು ಚೆನ್ನಾಗಿ ಮಳೆಯಾದಾಗ ಬಿತ್ತುವುದು ಸೂಕ್ತ.

ಮಿಶ್ರ ಬೆಳೆಗಳು

* ಕಡಲೆಕಾಯಿತೊಗರಿ

ಕಡಲೆಕಾಯಿ ಬೆಳೆಯನ್ನು ಒಂದೇ ಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ. ಆದರೆ ಈ ಕಡಲೆಕಾಯಿ (ಶೇಂಗಾ) ತೊಗರಿ ಇವುಗಳನ್ನು ೪:೧ ರ ಪ್ರಮಾಣದಲ್ಲಿ ಬೆಳೆಯುವುದರಿಂದ ಹೆಚ್ಚಿನ ಉತ್ಪನ್ನವನ್ನು ತೆಗೆಯಬಹುದು. ಎಕರೆಗೆ ೧೨ – ೧೫ ಕ್ವಿಂಟಾಲ್‌ಗಳಷ್ಟು ಶೇಂಗಾ ಮತ್ತು ೫ ಕ್ವಿಂಟಾಲಿನಷ್ಟು ತೊಗರಿ ಇಳುವರಿ ಪಡೆಯಬಹುದು.

* ಹಿಂಗಾರಿ ಜೋಳಕುಸುಬಿ

ರಾಜ್ಯದ ಉತ್ತರ ಭಾಗದಲ್ಲಿ ಹಿಂಗಾರಿ ಜೋಳದ ಬೆಳೆಯನ್ನು ಬೆಳೆಯಲು ಮಣ್ಣಿನಲ್ಲಿಯ ತೇವಾಂಶವು ಬೆಳೆಯ ಬೆಳವಣಿಗೆ ಕಾಲದಲ್ಲಿ ಮತ್ತು ತೆನೆ ಬರುವ ಕಾಲದಲ್ಲಿ ಸಾಕಷ್ಟು ಇರಬೇಕಾಗುವುದು. ತೆನೆ ಬರುವ ಕಾಲದಲ್ಲಿ ಮಳೆ ಬಾರದೆ ಹೋದಲ್ಲಿ ಸಾಕಷ್ಟು ತೇವಾಂಶವು ಇರದೇ ಹೋದರೆ ತೆನೆ ಪೂರ್ತಿ ಹೊರಗೆ ಬರುವುದಿಲ್ಲ. ಇಳುವರಿ ಕಡಿಮೆ ಆಗುವುದು. ಈ ಬೆಳೆಗಳನ್ನು ೩೧೩ ಸಾಲುಗಳು ಪ್ರಮಾಣದಲ್ಲಿ ಬೆಳೆದು ಎಲ್ಲ ತರದ ಉತ್ಪನ್ನ ಆಗುವುದು. ಹೆಕ್ಟೇರಿಗೆ ಪ್ರತಿ ತರದ ಉತ್ಪನ್ನ ಆಗುವುದು. ಹೆಕ್ಟೇರಿಗೆ ಪ್ರತಿ ಬೆಳೆಯಲ್ಲೂ ೭ – ೮ ಕ್ವಿಂಟಾಲ್ ಇಳುವರಿ ಪಡೆಯಬಹುದು.

* ಸಜ್ಜೆತೊಗರಿಹಿಂಗಾರಿ ಜೋಳಕಡಲೆ

ಕಪ್ಪು ಮಣ್ಣಿನ ಪ್ರದೇಶದಲ್ಲಿ ಹೈಬ್ರಿಡ್ ಸಜ್ಜೆಯ ಜೊತೆಯಲ್ಲಿ ೨:೧ ಪ್ರಮಾಣದಲ್ಲಿ ತೊಗರಿಯನ್ನು ಮಿಶ್ರ ಬೆಳೆಯಾಗಿ ಬೆಳೆಯುವುದರಿಂದ ಅಧಿಕವಾಗಿ ಲಾಭವಾಗುತ್ತದೆ. ಇದು ಹೆಕ್ಟೇರಿಗೆ ಸುಮಾರು ೧೨ ಕ್ವಿಂಟಾಲ್ ಸಜ್ಜೆ ಅಲ್ಲದೆ ೭ – ೮ ಕ್ವಿಂಟಾಲ್ ತೊಗರಿಯನ್ನು ನಂತರ ಮೂರು ನಾಲ್ಕು ಸಾಲು ಕಡಲೆಯನ್ನು ಬೆಳೆಯುವುದರಿಂದ ಲಾಭ ಬರುವುದು. ಹೀಗೆ ಮಿಶ್ರ ಬೆಳೆಗಳಲ್ಲಿ ಅಧಿಕವಾಗಿ ಬರುವದು ಇಳುವರಿ. ಇದರ ಜೊತೆಗೆ ನಾವು ನಮ್ಮ ಹೊಲಗಳಲ್ಲಿ ಉಪಯುಕ್ತವಾದಂತಹ ಹಲವಾರು ಬಗೆಯ ಬೆಳೆ ಬೆಳೆದು ಹೆಚ್ಚಿನ ಪ್ರಮಾಣದ ಇಳುವರಿ ಲಾಭ ಪಡೆಯುತ್ತವೆ.

ಬೆಳೆ ಕುಳೆ ಪದ್ಧತಿ

ಬೆಳೆಗಳ ಕುಳೆ ಪದ್ಧತಿಯು ಒಣ ಬೇಸಾಯ ಪದ್ಧತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಆದರೆ ಬಾಗಲಕೋಟೆ, ಬಿಜಾಪೂರ, ಭಾಗದ ಎಷ್ಟೋ ರೈತರಿಗೆ ಜೋಳದ ನಂತರ ಜೋಳವನ್ನು ಬಿತ್ತುವ ರೂಢಿವುಂಟು. ಹೀಗಾಗುವುದರಿಂದ ಜೋಳದ ಇಳುವರಿಯು ಶೇಕಡಾ ೬೦ ರಿಂದ ೭೫ ರಷ್ಟು ಕಡಿಮೆ ಆಗುವುದು ಕಂಡು ಬಂದಿದೆ.

ಜೋಳವನ್ನು ಕಡಲೆ, ಕುಸುಬಿ, ಗೋಧಿ ನಂತರ ತೆಗೆದುಕೊಳ್ಳುವುದು ಉತ್ತಮ. ಇತರೆಡೆಗಳಲ್ಲಿ ಹೆಸರು, ಉದ್ದು, ಅಲಸಂದಿಯಂಥ ಬೇಳೆಕಾಳಿನ ಬೆಳೆಯ ನಂತರ ಧಾನ್ಯ, ಎಣ್ಣೆಕಾಳು ಅಥವಾ ಯಾವುದೆ ಇತರ ರೊಕ್ಕದ ಬೆಳೆ ತೆಗೆದುಕೊಳ್ಳವದರಿಂದ ಇಳುವರಿ ಹೆಚ್ಚುವುದು.

ಬೇಳೆಕಾಳಿನ ಕಾಯಿ ಹರಿದ ನಂತರ ಅದು ಉಳಿದ ಸೊಪ್ಪೆಯನ್ನು ಮಣ್ಣಲ್ಲಿ, ಮಗ್ಗು ಹೊಡೆಯುವುದರಿಂದ ಭೂಮಿಯಲ್ಲಿ ಸಾವಯವ ಅಂಶ ಹೆಚ್ಚು ಫಲವತ್ತತೆ ಕಾಪಾಡಿಕೊಂಡು ಬರಲು ಅನುಕೂಲ, ಎರಡು ಬೆಳೆ ತೆಗೆದುಕೊಳ್ಳಲು ಅನುಕೂಲವಿಲ್ಲದಿದ್ದಲ್ಲಿ ಮುಖ್ಯ ಬೆಳೆಗಳೊಂದಿಗೆ ಇತರ ಬೆಳೆಗಳನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಬಹುದು. ಈ ಮೊದಲು ತಿಳಿಸಿದಂತೆ ಬೆಳೆಯಲ್ಲಿ ಮಧ್ಯಂತರ ಬೆಳೆ, ಮಿಶ್ರ ಬೆಳೆ, ಬೆಳೆಯ ನಂತರ ಬೆಳೆಗಳನ್ನು ಸೂಕ್ತ ಬೆಲೆ ಲಾಭ ಪಡೆದುಕೊಳ್ಳುವ ಪದ್ಧತಿ ಇದೆ.

. ಕೃಷಿ ಉಪಕರಣಗಳ ಬಳಕೆ

ಎತ್ತುಗಳ ಆರೈಕೆ

‘ಎತ್ತು ಇಲ್ಲದ ಮನೆಗೆ ಎದೆ ಇಲ್ಲವೊ’ ಭೂಮಿಯ ವ್ಯವಸಾಯವನ್ನು ಮಾಡುವ ರೈತರಿಗೆ ಎತ್ತುಗಳು ಬಲವುಳ್ಳವುಗಳಾಗಿಯೂ ತ್ರಾಣವುಳ್ಳ ಎತ್ತುಗಳಿರಬೇಕು. ಕೃಷಿಕರಾದವರು ಎತ್ತುಗಳು ಯೋಗ್ಯ ಆಹಾರವಾದ ಹುಲ್ಲು, ನೀರು, ಹುರುಳಿ, ಹತ್ತಿಕಾಳು, ಹಿಂಡಿ, ಹೊಟ್ಟು, ಕಣಕೆ (ಮೇವು) ಇವುಗಳನ್ನು ಯಾವ ಯಾವ ಕಾಲಗಳಲ್ಲಿ ಯಾವ ಯಾವ ಪದಾರ್ಥಗಳನ್ನು ಮೇಯಿಸಬೇಕು, ಕಾಲಕ್ಕೆ ತಕ್ಕಂತೆ ಆಹಾರಗಳನ್ನು ತಿನಿಸಿ ವೇಳೆ ವೇಳೆಗೆ ಮೇವು – ನೀರಿನಿಂದ ಪರಾಮರ್ಶಿಸುತ್ತಿರಬೇಕು. ಎತ್ತುಗಳು ಕಟ್ಟುವ ಮಸಿಯು ನಿರ್ಮಲವಾಗಿರಬೇಕು. ಅಂಕಣದಲ್ಲಿ (ಎತ್ತುಗಳು ಕಟ್ಟುವ ಸ್ಥಳ) ರೊಜ್ಜಾಗದಂತೆ ಆಗಾಗ್ಗೆ ಅವುಗಳು ಸಗಣಿಯನ್ನು ಮೂತ್ರವನ್ನು ಬಳಿದು ಹಸನ ಮಾಡಬೇಕು.

ಭೂಮಿಯ ವ್ಯವಸಾಯಕ್ಕೆ ಬೇಕಾಗಿರುವ ಯಾವತ್ತೂ ಕಟ್ಟಿಗೆ ಕಬ್ಬಿಣದಿಂದ ಮಾಡಲ್ಪಟ್ಟಿರುವ ಸಾಮಾನುಗಳು ಬಂಡಿ, ನೇಗಿಲು, ಮಡಿಕೆ, ರಂಟೆ, ಕುಂಟೆ, ಕೂರಿಗೆ, ತಲವು, ಎಡೆಯ ಕುಂಟಿ, ಈಸು, ನೊಗಗಳನ್ನು ಶಿಲ್ಪಶಾಸ್ತ್ರ ಕ್ರಮದಂತೆ ಅನುಗುಣವಾಗಿಯೂ ಬಲವಾಗಿಯೂ ಇರಬೇಕು. ಕಬ್ಬಿಣದ ಸಾಮಾನುಗಳಲ್ಲಿ ಪತ್ತ, ಮಂಜಣ, ಬಳಿ, ಕುಡ, ಕೊಡಲೆ, ಗುದ್ದಲಿ, ಬೆಡಗ, ಸಲಕೆ, ಪಿಕಾಸಿ, ಕುಡಗೋಲು, ಕೈಬಾಂ, ಹುಳಿ ಮುಂತಾದ ಸಾಮಾನುಗಳು ಕೈಯಲ್ಲಿ ಅನುಗುಣವಾಗಿ ಚೆನ್ನಾಗಿಯಿದ್ದು ಅದರ ಜೊತೆಗೆ ಮಣಿ, ಕಣಿ, ಹಗ್ಗ, ವಕಾರ, ಖಾತಿ, ಸಣಬು, ಡಬ್ಬಣ, ತಾಂಬ್ರೈಲು (ಬಕೇಟು), ಪಿಪೆ, ಕಣ ಮಾಡುವಾಗ ರೂಲು, ಬಂಡಿ, ಮೆಟ್ಟು, ಪುಟ್ಟಿ, ಜಂತುಗುಂಟಿ, ಗರಿ, ಸೆಳ್ಳು, ಇಷ್ಟೆಲ್ಲಾ ಸಾಮಾನುಗಳು ಒಕ್ಕಲುತನಕ್ಕೆ ಬೇಕಾಗುತ್ತದೆ. ಈ ಮೇಲಿನ ಪ್ರಮುಖವಾದವುಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

. ನೇಗಿಲು

ಒಂದು ಪಾಳಾ, ಒಂದು ವಂಕಿ” ಹಿಂದೆ ಹಿಡಿಯಲು ಮೇಳಿ, ಎರಡು ಪದರು ಸರಪಳಿ, ಪಾಳಾದ ಮುಂದುಗಡೆ ಎರಡು ಅಡಿ ಬಿಟ್ಟು ಒಂದು ಗಾಲಿ ಇದು ಆಳವಾಗಿ ಮತ್ತು ಕಡಿಮೆ ಹಾಯಿಸಲಿಕ್ಕೆ ಉಪಯೋಗವಾಗುವುದು. ಏಳು ಗೇಣಿನ ನೊಗ, ಈ ಪ್ರಕಾರವಾಗಿ ೪ ರಿಂದ ೮ ಎತ್ತಿನವರೆಗೆ ಭೂಮಿಗೆ ಆಳವಾಗಿ ಉಳುಮೆಗೆ ಉಪಯೋಗಿಸುತ್ತಿದ್ದರು. ಯಾಕೆಂದರೆ ಭೂಮಿಯಲ್ಲಿ ಕರ್ಕಿ ಮತ್ತು ಕಣಿಗ್ಯಾ ಇವುಗಳು ಇರುವುದರಿಂದ ಬೆಳೆ ಸರಿಯಾಗಿ ಬರಲಾರದ ಕಾರಣ ಹರಗುವುದು, ಗಳೆ ಹೊಡೆಯುವುದು ತೊಂದರೆಯಾಗುವುದು. ಹೀಗೆ ಅನುಕೂಲವಿದ್ದ ಕಾಲದಲ್ಲಿ ಈ ಕರ್ಕಿ – ಕಣಿಗ್ಯಾವನ್ನು ತೆಗೆಯುವ ಸಲುವಾಗಿ ೧೮ ರಿಂದ ೨೦ ಇಂಚು ಆಳವಾಗಿ ಹಾಸುವಾಗ ಈ ನೇಗಿಲಿನ ಮೇಲೆ ಬಂದು ಉಸುಕಿನ ಚೀಲ ಇಟ್ಟು ನೇಗಿಲ ಹೊಡೆಯುವುದರಿಂದ ಕರಿಕಿ ಕಿತ್ತು ಬೀಳುತ್ತದೆ. ಶಿವರಾತ್ರಿಯಿಂದ – ಯುಗಾದಿಯವರೆಗೆ ನೇಗಿಲು ಹೊಡೆಯುತ್ತಿದ್ದರು. ನೇಗಿಲು ಹೊಡೆಯುವುದರಿಂದ ಕರ್ಕಿ, ಕಣಿಗ್ಯಾನ ಬೇರುಗಳು ಆಳವಾಗಿದ್ದರೂ ಮೇಲೆ ಬಂದು ಬಿಸಿಲಿಗೆ ಅವು ಒಣಗುತ್ತಿದ್ದವು. ಮುಂದೆ ೬ ರಿಂದ ೮ ಎತ್ತುಗಳವರೆಗೆ ದೊಡ್ಡ ಗುಂಟಿಯಿಂದ ಹರಗಿ ಬೇರುಗಳನ್ನು ಆರಿಸಿ ಹೊಲವನ್ನು ಸ್ವಚ್ಛವಾಗಿ ಮಾಡಲಿಕ್ಕೆ ಉಪಯೋಗಿಸುತ್ತಿದ್ದರು. ಭೂಮಿ ಹಸನಾಗಿ ಮಳೆಯಾಗಿ ನೀರು ಹಿಡಿದು ವೇಳೆ ತೆಗೆಯುವಾಗ ಎಲ್ಲಿಯಾದರೂ ಒಂದು ಕರ್ಕಿ ಕಂಡರೆ ಅದಕ್ಕೆ ಪಳಿ ಎಂದು ಗುದ್ದಲಿಯಿಂದ ಅಗೆದು ಎರಡು – ಮೂರು ವರ್ಷದಲ್ಲಿ ಕರ್ಕಿ ಇಲ್ಲದಂತಾಗಿತ್ತು. ಹೀಗೆ ನಮ್ಮ ಪೂರ್ವಜರು ಭೂಮಿಯನ್ನು ಹಸನಗೊಳಿಸಲು ಬಲಿಷ್ಟ ಎತ್ತುಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಿದ್ದರು.

. ಮಡಿಕೆ : (ರಂಟೆ)

ಮಡಿಕೆ ಕೊಡ (ಆಂಗ್ಲ ಭಾಷೆಯ ಎಲ್ ವರ್ಣಮಾಲೆ ಆಕಾರ) ಇದಕ್ಕೆ ಎರಡು ‘ಅ’ ಆಕಾರದ ಕಬ್ಬಿಣದ ಕೊಂಡಿ ಇದರಲ್ಲಿ ಮುಂಜನಗೇರಿಸಿ ಊಳುತ್ತಾರೆ. ಮುಂಜಣ ತುದಿ ಸವೆದ ಮೇಲೆ ಪತ್ತ ಹಾಕುತ್ತಾರೆ. ಮಡಿಕೆ ಈಸು, ಮೇಳಿ, ಕೋಗ, ಜತ್ತಿಗೆ, ಕಳೆ, ಮಿಣಿ, ಎತ್ತಿನ ಸರಹಗ್ಗ ಅದರ ಸಲಕರಣೆಗಳು, ಪತ್ತವು ತ್ರಿಕಾರವಿರುತ್ತಿತ್ತು.

ಮಡಿಕೆಯ ಉಪಯೋಗ

ಕರ್ಕಿ, ಕಣಿಗ್ಯಾ ಇದ್ದ ಹೊಲವನ್ನು ನೇಗಿಲು ಹೊಡೆದ ಹೊಲದಲ್ಲಿ ಮಡಿಕೆಯನ್ನು ಅಡ್ಡಾ ದಿಡ್ಡಾ ಹೊಡೆಯುವುದುರಿಂದ ಬೇರುಗಳು ಮೇಲಕ್ಕೆ ಬರುವವು. ಕರ್ಕಿ ಹಸನಾಗುವುದರ ಜೊತೆಗೆ ಭೂಮಿಯು ನೀರು ಹಿಡಿಯುವುದು. ಕಲ್ಲು ಹೊಲಗಳು ಮತ್ತು ಎರಿ, ಮಸಾರಿ, ಗರಸು, ಕರಲು ಹೊಲಗಳಲ್ಲಿ ತೇವಾಂಶವನ್ನು (ಭೂಮಿಯಲ್ಲಿ) ಹೆಚ್ಚಿಸಲು ಮೇಲಿನ ಮಣ್ಣು ತಳಕ್ಕೆ ತಳಗಿನ ಮಣ್ಣು ಮೇಲಕ್ಕೆ ಬಂದು ಅದು ಬಿಸಿಲಿನ ಉಷ್ಣಕ್ಕೆ ಕಾಯ್ದು ಭೂಮಿಯ ಹದಗಳಿಸಲಿಕೆ, ಮಳೆ ನೀರನ್ನು ಹಿಡಿಯಲಿಕ್ಕೆ ಮಡಿಕೆಯನ್ನು ಹೊಡೆಯುತಿದ್ದು, ಕಲ್ಲು ಹೊಲಗಳು ಬಿಗಿಯಾದ ಹೊಲಗಳು ಬಿತ್ತಲಿಕ್ಕೆ ಮುಂದೆ ಮುಂದೆ ಮಡಿಕೆ ಹಿಂದುಗಡೆ ಬುಕ್ಕವನ್ನು ಕಟ್ಟಿ ನೆಟ್ಟಿಗೆ ಸಾಲು ಬಿಡಲಿಕ್ಕೆ ಉಪಯೋಗಿಸುತ್ತಿದ್ದರು.

) ಕುಂಟೆ

ಬೇಕಾಗುವ ಸಾಮಾನುಗಳು : ೧) ದಿಂಡು, ತಾಳು (ಎರಡು ತಾಳು) ಎರಡು ಬಳೆ, ಒಂದು ಕುಡ, ಎರಡು ಈಸು, ಒಂದು ಮೇಳಿ, ಒಂದು ಶೆಕ್ಕೆ, ಹಿಂಗಿಲುನೊಗ (೯ ಗೇಣು) ಕಳೆ, ಜತ್ತಿಗೆ, ಮಿಣಿ ನೊಗಕೊಡ್ಡ ಇತ್ಯಾದಿ. ಐದು ಆರು ಗೇಣಿನ ಕುಂಟೆ : ಇವಕ್ಕು ದಿಂಡು ಮೇಳಿ ಎರಡು ತಾಳು ಎರಡು ಬಳೆ ಎರಡು ಈಸು ನೊಗ, ಶಕ್ಕೆ ಹೀಂಗಿಲು ಒಂದು ಕುಡಾ, ಜತ್ತಿಗೆ, ಮೀಣಿ, ನೊಗಕೊಡ್ಡ ಕುಡ ಐದು ಗೇಣಿನ ಕುಂಟೆಗೆ ಐದು ಕುಡ ಹಾಗೂ ಆರು ಗೇಣಿನ ಕುಂಟೆಗೆ ಆರು ಗೇಣಿನ ಕುಡ ಇರುತ್ತದೆ.

ಇವುಗಳ ಉಪಯೋಗ

ಭೂಮಿ ಹದವಾಗಿ ಮಳೆ ಆದಾಗ ಬಿತ್ತುವ ತತಿ ವಿಭಾಗ ನೊಲ್ಲೆ (ಸಣ್ಣ ಕಸ) ಹುಟ್ಟದಂತೆ ಹರಗಲಿಕ್ಕೆ ಹಿಂಗಾರಿ ಮುಂಗಾರಿ ಬಿತ್ತುವಾಗ ಕೂರಿಗೆಯ ಹಿಂದೆ ಮೂರು ಗಡ್ಡೆಗಳನ್ನು ಸಾಲು ಮುಚ್ಚಲಿಕ್ಕೆ ಉಪಯೋಗಿಸುತ್ತಿದ್ದರು.

) ಕೂರಿಗೆ (ಕುರಗಿ)

ಉಪಯೋಗ: ಇದರಲ್ಲಿ ೧೬ ಇಂಚಿನ ಕೂರಿಗೆಯಿಂದ ಬಿಳಿ ಜೋಳ ಕಡಲೆ ಹೆಸರು ಅಲಸಂದಿ ಸಜ್ಜೆ ಮುಂಗಾರಿ ಜೋಳ ಸೂರ್ಯಕಾಂತಿ ಉಳ್ಳಾಗಡ್ಡಿ ಕುಸುಬೆ ಸರ್ವಧಾನ್ಯ ಬಿತ್ತಲಿಕ್ಕೆ ಬಳಸುತ್ತಾರೆ. ಮತ್ತು ಬಿದಿ ಹಿಂಬಾಗ ಹೆಚ್ಚಿನ ಬೆಳೆ ಬರುವುದಕ್ಕೆ ೧೯ ಇಂಚಿನ ಕೂರಿಗೆಯ ಉಪಯೋಗ ೧೨ ಇಂಚಿನ ಕೂರಿಗೆಯಿಂದ ಗೋದಿ ಬಿತ್ತಲಿಕ್ಕೆ ೨೪ ಇಂಚಿನ ಅಂಗುಲದ ಮಧ್ಯದ ತಾಳು ತೆಗೆದರೆ ಎರಡು ತಾಳು ಕೂರಿಗೆ ಹಿಂದೆ ಹತ್ತಿ ಕುಸುಬಿ ಸೂರ್ಯಕಾಂತಿ ಎಳ್ಳು ಮುಂಗಾರಿನಲ್ಲಿ ಬಿತ್ತಿ ಕಟಾವು ಮಾಡಿ ಹಿಂಗಾರಿನಲ್ಲಿ ನಡುಗಡ್ಡೆ ಹಾಸಿ ಬಿತ್ತುತ್ತಿದ್ದರು.

ಬೇಕಾದ ಸಾಮಾನುಗಳು : ದಿಂಡು, ಕೂರಿಗೆಯ ಮಳೆ ಕಟ್ಟಿದ ಮೂರು ತಾಳುಗಳು, ಮೇಳಿ, ೨ ಈಸು ಶೆಕ್ಕೆ, ಹಿಂಗೀಲು ಮಿನಿ, ತಲವು (ಮೂರು ಕೋಲು, ಒಂದು ಮಂಡಿ, ನೂಲಿನ ದಾರ, ಬಿಗಿಯಲಿಕ್ಕೆ ತೊಗಲಿನ ಬಾರು, ಆಕಾರದ ಒಂದು ವೆಂಕಿ (ಬಳೆ) ನಗ ಇವುಗಳನ್ನು ಕೂರಿಗೆಯ ಅನುಸಾರವಾಗಿ ಜತ್ತಿಗೆ ಬಳಸುತ್ತಿದ್ದರು.

) ಎಡೆಯ ಕುಂಟೆ

ಮೇಲೆ ತಿಳಿಸಿದ ಪ್ರಕಾರ ಕೂರಿಗೆಗಳಿಗೆ ತಕ್ಕಂತೆ ಎಡೆ ಕುಂಟೆಗಳನ್ನು ಬಳಸುತ್ತಾರೆ. ೧೬ ಇಂಚಿನ ಕೂರಿಗೆಯಿಂದ ಬಿತ್ತಿದಾಗ ಪಟ್ಟಿಗುಂಟೆ ಬಳಸುತ್ತಾರೆ.

ಸಾಮಗ್ರಿಗಳು : ದಿಂಡು, ತಾಳು, ಒಂಟೀಸು, ಮೇಳಿ, ಬಳೆ, ಕುಡ, ಸೆಕ್ಕಿ, ಹೀಂಗಿಲು, ಎಡೆ, ಮಿಣಿ ಬ್ಯಾಕೋಲು, ಚಿಕ್ಕನೊಗ. ಒಂದು ಕುಂಟೆ ಹೊಡೆಯುವಾಗ ೯ ಗೇಣು, ೧ ಸಾಲು ಬಿಟ್ಟು ಹೊಡೆಯುವಾಗ ೧೩ ಗೇಣಿನ ನಗ, ೧೯ ಇಂಚಿನ ಕೂರಿಗೆ (ಹಿರೆ ಕೂರಿಗೆ) ೧೧ ಗೇಣಿನ ನಗ, ಎಲ್ಲಾ ನಗಗಳಿಗೆ ಕಳೆ ಜತ್ತಿಗೆ, ಎಲ್ಲಾ ಕುಂಟೆಗಳಿಗೆ ಯಾವುದೆ ಬೆಳೆ ಬಿತ್ತಿದಾಗ ಎಡೆ ಹೊಡೆಯುವ ಉದ್ದೇಶವೆನೆಂದರೆ (ತಾಯಿ ಕೂಸಿನ ಅಳ್ಳೆತ್ತಿಗೆ ಕೊಬ್ಬರಿ ಎಣ್ಣೆಯನ್ನು ಉನ್ನಿಸಿ (ಹಚ್ಚಿ) ಮೈ ಕೈ ಕಾಲುಗಳನ್ನು ತಿಕ್ಕಿ ಬೆಚ್ಚಗಿನ ನೀರನ್ನು ಹಾಕಿ ಮೈಯನ್ನು ಬಟ್ಟೆಯಿಂದ ವರೆಸಿ ಬೆಳ್ಳಗಿನ ತಳ್ಳಗಿನ ಬಟ್ಟೆಯನ್ನು ಸುತ್ತಿ ತೊಟ್ಟಲೊಳಗೆ ಹಾಕಿ ಕಾಲಿನಿಂದ ತಲೆಯವರೆಗೆ ಚಾದಾರದ ತುಂಡನ್ನು ಹಾಕಿ ತೊಟ್ಟಲಿನ ಕೆಳಗೆ ಲೋಬಾನ ಹೊಗೆ ಹಾಕಿದಾಗ ಕೂಸು ಆನಂದದಿಂದ ನಿದ್ದೆ ಮಾಡುವುದು) ಇದರಂತೆ ಬಿತ್ತಿದ ಬೆಳೆಗಳಿಗೆ “ಎಡೆ ಹೊಡೆಯುವುದೆಂದರೆ ಕೂಸು ಎರೆದು ಹಾಕಿದಂತೆ”

ಎಡೆ ಹೊಡೆಯುವುದರಿಂದ ಗಡ್ಡೆಯೊಳಗೆ ಇದ್ದಂತ ಕಸವು ಹೋಗಿ ಬೆಳೆಗಳ ಬಡ್ಡಿಗೆ (ಬೇರುಗಳಿಗೆ) ಮಣ್ಣು ಬಿದ್ದು ಹೊದಿಕೆಯಾಗಿ ಕಸದ ಹೊದಿಕೆ ಆನ ಬಿಡದಂತೆ ಭೂಮಿಯಲ್ಲಿನ ಹಸಿ ಆರದಂತೆ ತಡೆಯುತ್ತದೆ. ತೇವಾಂಶ ಭೂಮಿಯಲ್ಲಿ ಉಳಿದು ಸಮಗ್ರ ಬೆಳೆ ಬೆಳೆದು ಕಾಳಾಗಿ ಬೆಳೆ ಬರುವುದಕ್ಕೆ ೩೫ ರಿಂದ ೪೫ ದಿವಸಗಳು ೫೦ ರಿಂದ ೬೦ ದಿವಸ ೭೦ ರಿಂದ ೮೦ ದಿವಸಗಳಿಗೆ ೨,೩ ಸಾಲು ಎಡೆ ಹೊಡೆಯುವುದರಿಂದ ಬೆಳೆಗಳು ಉತ್ಕ್ರಷ್ಟವಾಗಿ ಬರುತ್ತವೆ.

) ಬಂಡಿ (ಚಕ್ಕಡಿ)

ಬೇಕಾಗುವ ಸಾಮಗ್ರಿಗಳು

೧. ಉದ್ದಗಿ – ೧೪ ೧/೨ ಪೂಟು ಉದ್ದ, ಹಿಂದೆ ಉದ್ದಗೆ ೫/೨ ೫/೨ ಇಂಚು ಮುಂದೆ ೩ ೧/೨ ದಿಂದ ೪ ಇಂಚು ಅಗಲ

೨. ಹಂದಿಗೊಡ್ಡ (ಜಾಲಿಮರದ್ದು) ೪ ೧/೨ ಪೂಟು (ಸಾಗವಾನಿ ಕಟಗಿ) ಉದ್ದ ಹೊರಗಿನಿಂದ ಹೊರಗೆ ೪೦ ಇಂಚು

೩. ತೋಳು (ಜಾಲಿದು) : ೭ ೧/೨ ಪೂಟು ಉದ್ದ, ೪ ೧/೨ ಪೂಟು ಅಗಲ, ೩ ೧/೨ ಪೂಟು ದಪ್ಪ.

೪. ೨ ಡಂಬರಗಿ (ಜಾಲಿದು) : ೨ ೧/೨ ಇಂದ ೩ ಇಂಚು ದಪ್ಪ

೫. ೨ ರೆಕ್ಕಗೆ (ಜಾಲಿದು) : ೫ ಪೂಟು ದಪ್ಪ, ೨ ಇಂಚು ದಪ್ಪ, ಮುಂದೆ ೫ ಹಿಂದೆ ೨ ಇಂಚು

೬. ೧ ಕುದುರೆ

೭. ಅಡ್ಡ ಪಟ್ಟಿ

೮. ೪ ತೊಟ್ಟಿಲದ ಅಡ್ಡ ಹಲ್ಲು ೨ ೧/೨ ಯಿಂದ ೩ ೧/೨ ಇಂಚು ದಪ್ಪ

೯. ೨ ಕಿರಸನ ಕಟಗಿ ಗಡ್ಡೆ : – ೧ ಪೂಟು ಎತ್ತರ, ೧ ಪೂಟು ದಪ್ಪ.

೧೦. ೧೨ ಗೂಟ – ಸವ ೨ ಅಗಲ ದಪ್ಪ ೨ ಇಂಚು ಎತ್ತರ ೨ ೧/೨ ಇಂಚು ಅಗಲ ೩ ಅಡಿ ಉದ್ದ

೧೧. ೧೨ ಬುಟೆ – ೬ ಇಂಚು ದಪ್ಪ ೨ ೧/೨ ಇಂಚು ಅಗಲ, ಮೂರು ಅಡಿ ಉದ್ದ ೨೪ ಬೂಟೆದ ಹಲ್ಲು – ೨ ೧/೨ ಪೂಟು ಉದ್ದ ೨ ಇಂಚು ದಪ್ಪ ಸವಾ ಮೂರು ಇಂಚು ಅಗಲ