ಬಂಡಿಯ ಉಪಯೋಗ

ಬಂಡಿ ತಯಾರಾದ ಮೇಲೆ ದಿನನಿತ್ಯವು ಗಳೆ ಸಾಮಾನು ಹೇರಿಕೊಂಡು ಹೊಲಕ್ಕೆ ಹೋಗಲಿಕ್ಕೆ, ಗೊಬ್ಬರ ಹೇರಲಿಕ್ಕೆ, ಮೇವು, ಮಣ್ಣು ಹೇರಲಿಕ್ಕೆ, ಹತ್ತಿ, ಅರಳೆ ಹೇರಲಿಕ್ಕೆ, ಜೋಳದ ಚೀಲಗಳನ್ನು ಹೇರಲಿಕ್ಕೆ, ಪೀಪೆಯಿಂದ ನೀರು ತರಲು, ಕಸಕಡ್ಡಿ ಹೇರಲು, ಕಟ್ಟಿಗೆ ಕುಳ್ಳು ತರಲು, ಜಾತ್ರೆಗೆ ಹೋಗಲು ಮತ್ತು ಸಂಪ್ರದಾಯ ಸಮಾರಂಭಕ್ಕೆ ಜನರನ್ನು ಕರೆದುಕೊಂಡು ಹೋಗಲು ಉಪಯೋಗಿಸುತ್ತಾರೆ.

* ಬಂಡಿಗೆ ಇರಬೇಕಾದ ಸಾಮಾನುಗಳ ಪಟ್ಟಿ

೧. ಬಂಡಿನೊಗ

೨. ಕಳೆ

೩. ಕೀಲಾ (ಕೀಲು)

೪. ಇರಸು

೫. ೧೪ ಚಡಿ ಮತ್ತು ನಟ್ಟುಗಳು – ೧೦ ಆಣೆ ಜಾಡಿ

೬. u ಆಕಾರದ ಚಟ ಮಲವು – ೮ ಆಣೆ ಜಡೆದಪ್ವ ಮೂರು ಅಡಿ ಉದ್ದ

೭. ೪ ಬಾಯಿ ಬಳಿ ನಾಲ್ಕಾಣೆ ಜಡೆ ಪಟ್ಟಿ

೮. ೮ ಗಡ್ಡಿ ಪಟ್ಟಿ – ಸವ ಇಂಚು ೪, ೧ ಇಂಚು ೪

೯. ೨ ಡಂಬರಗಿ – ಸವ ಇಂಚು, ಉದ್ದ ೮ ಅಡಿ

೧೦. ೧೨ ತೊಟ್ಟಿಲ ಮಂಗಲ ಪಟ್ಟಿ

೧೧. ೨ ಯು ಆಕಾರದ ತೊಟ್ಟಿಲ ಒಟ್ಟಿ

೧೨. ಮೂರು ಹಲಗೆ (ಬಂಡಿ ತೊಟ್ಟಲಿಗೆ)

೧೩. ಕೊಂಡಿ, ಪಿರಕೆ, ಚಿಲಕ, ಮೊಳೆ

ಇವು ಬಂಡಿ ತಯಾರಿಸಲು ಬೇಕಾದ ಮೂಲ ವಸ್ತುಗಳಾಗಿವೆ.

) ಈಸು

ಪ್ರತಿಯೊಂದು ಗಳೆ ಸಾಮಾನುಗಳನ್ನು ಎಳೆಯಲಿಕ್ಕೆ ಸಮತೋಲನದಲ್ಲಿ ಆಯಾ ಸಾಮಗ್ರಿಗಳಿಗೆ ತಕ್ಕ ನೊಗ ಮತ್ತು ಈಸುಗಳಿಂದ ಸರಿಯಾದ ಕ್ರಮದಲ್ಲಿ ಭೂಮಿಯನ್ನು ಹರಗಲಿಕ್ಕೆ ಉಪಯೋಗಿಸುವ ಸಾಧನವಾಗಿದೆ.

) ಕುರುಪಿ (ಕರ್ಚಗಿ)

ಇದರಲ್ಲಿ ಸಣ್ಣ ಹಿಡಿಕೆ ಕುರುಪಿ, ಮಧ್ಯದ ಕುರುಪಿ, ದೊಡ್ಡ ಕುರುಪಿ, ಹಿಡಿಕೆ ಡೊಂಕು ಹಿಡಿಕೆ ಕುರುಪಿಗಳು, ಕಿರು ಕುಂಟಿ, ಗೇಣಿಗಂಟಿ, ಎಡೆಗಂಟಿಯ ಕಸವನ್ನು ತೆಗೆಯಲು ಹಾಗೂ ಹೊಲದಲ್ಲಿಯ ಕಸ, ಕಡ್ಡಿಯನ್ನು ತೆಗೆಯಲು ಉಪಯೋಗಿಸುವರು.

) ಕುಡುಗೋಲು

ಸಣ್ಣ ಕುಡಗೋಲಿನಿಂದ ತೆನೆ ಮುರಿಯಲು ಉಪಯೋಗ. ಮಧ್ಯಮ ಕುಡುಗೋಲಿನಿಂದ ಜೋಳ, ಸಜ್ಜೆ, ಇನ್ನಿತರ ಕಸವನ್ನು ಹಾಗೂ ಹುಲ್ಲು ಕೊಯ್ಯಲು ಉಪಯೋಗಿಸುವರು. ದೊಡ್ಡ ಕುಡಗೋಲಿನೊಂದ ತೊಗರಿಬೆಳೆಯನ್ನು ಜಾಡಿಸಲಿಕ್ಕೆ ಹಾಗೂ ಶೀಗರಿ ಬಿಡಿಸಲಿಕ್ಕೆ ಜಾಡಿಸಲಿಕ್ಕೆ ಉಪಯೋಗಿಸುವರು.

ಎರಡು ಅಡಿಯವರೆಗೆ ಕೈ ಮಾಡಿ ಮುಂದೆ ಗಿರ್ಧಾಚಂದ್ರನ ಅಕಾರ ಮಾಡಿ ದೇವಬಾಳೆಯನ್ನು ಕೊಯಿಲಿಕ್ಕೆ ಉಪಯೋಗಿಸುವರು. ದೊಡ್ಡ ಕುಡುಗೋಲು ಇದನ್ನು ಈಳಿಗೆ ಆಕಾರ ಮಾಡಿ ಇದನ್ನು ದೊಡ್ಡ ಮಣೆಗೆ ಕೂಡ್ರಿಸಿ, ಉದ್ದನೆಯ ರಾಡು ಮಾಡಿ ದಪ್ಪವಾದ ಕಬ್ಬಿಣದ ತುಂಡನ್ನು ನಡುವೆ ಸೀಳಿ, ಕೈಯಲಿ ಒಂದೆ ಸಮನಾದ ಮಳೆ ಇಂದು ಇದನ್ನು ಹೋಲಿಗೆ ಜೋಡಿಸಿ ಇದರಿಂದ ದನದ ಮೇವನ್ನು ಕತ್ತರಿಸುತ್ತಿದ್ದರು.

೧೦) ಕೈ ಬಾಚಿ ಮತ್ತು ಉಳಿ

ಹೊಲದಲ್ಲಿ ಗಳೆ ಅಥವಾ ಬಿತ್ತುವಾಗ ಕೃಷಿ ಸಲಕರಣೆಗಳು ರಿಪೇರಿಗೆ ಬಂದಾಗ ಇವುಗಳ ಸಹಾಯದಿಂದ ಸುಧಾರಣೆ ಮಾಡಿಕೊಂಡು ಕೆಲಸದಲ್ಲಿ ತೊಡಗುತ್ತಿದ್ದರು.

ಹಗ್ಗಗಳ ವಿಧಗಳು

೧೧) ಎತ್ತಿನ ಹಗ್ಗ

ಎತ್ತಿನ ಮೂಗುದಾಣ ಹಾಗೂ ಹಣೆ ಕಟ್ಟಿನೊಳಗೆ ಹಾಸಿ ಎತ್ತಿನ ಹಗ್ಗದ ಕಣ್ಣಿಯನ್ನು ಇಟ್ಟು ಹೊಲಕ್ಕೆ ಹೋಗುವಾಗ ಹೊಲದಲ್ಲಿ ಗಿಡಕ್ಕೆ ಕಟ್ಟಿದಾಗ ಹಾಗೂ ಬಂಡಿಯನ್ನು ಹೂಡುವಾಗ ಈ ಹಗ್ಗವನ್ನು ಉಪಯೋಗಿಸುತ್ತಾರೆ.

೧೨) ಸರ ಹಗ್ಗ

ಹರಗುವಾಗ ಹಾಗೂ ಬಿತ್ತುವಾಗ ಗಳೆಯಲ್ಲಿ ಉಪಯೋಗಿಸುತ್ತಾರೆ.

೧೩) ಎಡಿ ಹಗ್ಗ

ಈ ಹಗ್ಗವನ್ನು ಎಡೆ ಹೊಡೆಯುವಾಗ ಈಸಿಗೆ ಕಟ್ಟಿ ಉಪಯೋಗಿಸುತ್ತಿದ್ದರು.

೧೪) ಕಸಿ ಹಗ್ಗ (ಗುದ್ದಿ ಹಗ್ಗ)

ಈಸಿಗೆ ಹಗ್ಗವು ೪/೨ ಮೊಳದಿಂದ ೫ ಮೊಳ ಉದ್ದವಿದ್ದು ಇದಕ್ಕೆ ಊ ಆಕಾರದ ಎರಡು ತೂತು ಹಾಕಿ ಈ ಹಗ್ಗವನ್ನು ಅದರಲ್ಲಿ ಸೇರಿಸಿ ಕಟ್ಟಿಗೆ ಮೇವು ಗೋಧಿ ಹೊರೆಗಳನ್ನು ಹಾಗೂ ಇನ್ನಿತರ ಹೊರೆಗಳನ್ನು ಕಟ್ಟಲಿಕ್ಕೆ ಉಪಯೋಗಿಸುತ್ತಿದ್ದರು.

೧೫) ಹಿಂದಲಗ್ಗ ಮುಂದಲಗ್ಗ

ಯಾವುದೇ ವಸ್ತುಗಳನ್ನು ಹೇರುವಾಗ ಹಿಂದಲ ಹಗ್ಗಕ್ಕೆ ಎರಡು ಆಣೆ ಆಕಾರದ ಗುದ್ದಿಹಾಕಿ, ಹಿಂದೆ ತೊಟ್ಟಿಲ ಕೆಳಗೆ ಉದ್ದಿಗೆಗೆ ಕಟ್ಟಿ ಆ ಕಡೆ ಒಂದು ಈ ಕಡೆ ಒಂದು ಎಳೆದು ಮುಂದಿನ ಮೈ ಬರುವವರೆಗೆ ಹಾಕಿ ಮೊದಲ ಹಗ್ಗವನ್ನು ಉದ್ದಿಗೆ ಕೆಳಗೆ ಹಾಸಿ ಹೊರೆಗಳನ್ನು ಬಿಗಿಯಲಿಕ್ಕೆ ಉಪಯೋಗಿಸುತ್ತಿದ್ದರು.

೧೬) ಗಾಳಿ ಹಗ್ಗ

ಇವು ೭ ರಿಂದ ೮ ಮೊಳ ಉದ್ದವಿದ್ದು ಯು ಆಕಾರದ ಗುದ್ದಿ ಉಪಯೋಗಿಸಿ ಗೋಧಿ ಹೇರುವಾಗ ಆ ಕಡೆ ಈ ಕಡೆ ಸರಿಯದಂತೆ ಮಾಡಲು ಈ ಹಗ್ಗವನ್ನು ಉಪಯೋಗಿಸುತ್ತಿದ್ದರು.

೧೭) ಬಾವಿ ಹಗ್ಗ

ಬಾವಿ ನೀರನ್ನು ಸೇದಲಿಕ್ಕೆ, ಜೋಕಾಲಿ ಆಡಲಿಕ್ಕೆ, ಗಿಡಮರಗಳನ್ನು ನೇರವಾಗಿ ಬೆಳೆಯಲು ಎಳೆದು ಕಟ್ಟಲಿಕ್ಕೆ ಉಪಯೋಗಿಸುತ್ತಿದ್ದರು.

೧೮) ಊಟಿ ಹಗ್ಗ

ಬಂಡಿನೊಗ ರೂಲುನೊಗ ಕಟ್ಟಲಿಕ್ಕೆ ಉಪಯೋಗಿಸುತ್ತಿದ್ದರು.

೧೯) ತೊಟ್ಟಿಲ ಹಗ್ಗ

ಇದು ೧೦ ರಿಂದ ೧೨ ಮೊಳ ಉದ್ದವಿದ್ದು, ಗೋಧಿ ಕೊಂಡಿಗೆ ಹಾಕಿ ತೊಟ್ಟಿಲದ ಕೊಂಡಿ ಚಿಲಕಕ್ಕೆ ಹಾಕಿ ತೊಟ್ಟಿಲ ಕಟ್ಟಲು ಉಪಯೋಗಿಸುತ್ತಿದ್ದರು. ಇದರಿಂದ ಕೂಸುಗಳನ್ನು ಹಾಕಿ ತೂಗುತ್ತಿದ್ದರು. ಮನೆಯಲ್ಲಿ ಹೆರಿಗೆಯಾದ ಒಂದು ಹೊರಸು ಹಾಕಿ ಹೊರಸು ಮರೆಯಾಗುವಂತೆ ಗೂಟದಿಂದ ಮನೆಯೊಳಗೆ ಕಟ್ಟಿ ಹಾಕಲಿಕ್ಕೆ ಉಪಯೋಗಿಸುತ್ತಿದ್ದರು.

೨೦) ಕಲ್ಲಿ

ಹೊಟ್ಟು ಹತ್ತಿ ತುಂಬಲಿಕ್ಕೆ ಕುಳ್ಳು ತುಂಬಲಿಕ್ಕೆ ಕುಂಬಾರರು ಮಡಿಕೆ ತುಂಬಲಿಕ್ಕೆ ಉಪಯೋಗಿಸುತ್ತಿದ್ದರು.

೨೧) ಪಿಪೆ

ಎತ್ತುಗಳು ಹಾಗೂ ದನಕರುಗಳು ನೀರು ಕುಡಿಸಲಿಕ್ಕೆ ಉಪಯೋಗಿಸುತ್ತಿದ್ದರು.

೨೨) ಗುದ್ಲಿ

ಕರ್ಕಿ ಕಡಿಯಲಿಕ್ಕೆ ಹಾಗೂ ಮಣ್ಣನು ಸಡಿಲ ಮಾಡಲಿಕ್ಕೆ ಗುದ್ಲಿಯನ್ನು ಉಪಯೋಗಿಸುತ್ತಾರೆ.

೨೩) ಸಲಿಕೆ

ಮಣ್ಣು ಗೊಬ್ಬರ ಇತ್ಯಾದಿಗಳನ್ನು ತುಂಬಲಿಕ್ಕೆ ಉಪಯೋಗಿಸುತ್ತಾರೆ.

೨೪) ಪಿಕಾಸಿ

ಬಿರುಸಾದ ಕಲ್ಲು ಚಟ್ಟವನ್ನು ಕಡಿಯಲಿಕ್ಕೆ ಹರಿಯನ್ನು ತೆಗೆಯಲಿಕ್ಕೆ ಕಲ್ಲನ್ನು ಎಬ್ಬಲಿಕ್ಕೆ ಇದರ ಉಪಯೋಗವಾಗುವುದು.

೨೫) ಬೆಡಗ

ಹೊಲದಲ್ಲಿಯ ಬದುವಿನ ಆಸುಪಾಸಿನಲ್ಲಿರುವ ಗಿಡ ಗಂಟಿಗಳನ್ನು ಕಡಿಯಲಿಕ್ಕೆ ಮೆಣಸಿನ ಗಿಡ ಬದನೆ ಗಿಡ ಮುಂತಾದ ಸಸ್ಯಗಳನ್ನು ಹಚ್ಚುವಾಗ, ತೆಗ್ಗು ತೋಡಲು ಇದು ಉಪಯೋಗವಾಗುತ್ತದೆ.

೨೬) ಕೊಡಲಿಗಳು

ಕೈಕೊಡಲಿ, ಸಣ್ಣಕೊಡಲಿ, ಮಧ್ಯಮ ಕೊಡಲಿ, ದೊಡ್ಡ ಕೊಡಲಿ, ಗಿಡಗಳನ್ನು ಸವರಲು ಗಿಡಗಳ ಟೊಂಗೆಯನ್ನು ಕಡಿಯಲು, ಗಿಡದ ಬಡ್ಡಿಯನ್ನು ಕಡಿಯಲು, ತುಂಡು ಹಾಕಲು ಕಟ್ಟಿಗೆಯನ್ನು ಸೀಳಲು, ಕೊಡಲಿಯನ್ನು ಉಪಯೋಗಿಸುತ್ತಾರೆ.

೨೭) ಬ್ಯಾಕೋಲು

ಇದನ್ನು ಎಡೆ ಹೊಡೆಯಲಿಕ್ಕೆ ಮುಳ್ಳು ಹಚ್ಚಲಿಕ್ಕೆ ಬಳಸುವರು.

೨೮) ಮಿಣಿ

ಎಡೆಮಿಣಿ, ಕೂರಿಗೆ ಮಿಣಿ, ಗಳೇದ ಮಿಣಿಗಳೆಂಬ ವಿಧಗಳಿವೆ. ಗಳೆಯನ್ನು ಎಳೆಯಲಿಕ್ಕೆ ಅಥವಾ ಹೂಡಲಿಕ್ಕೆ ಮತ್ತು ನೇಗಿಲನ್ನು ಎಳೆಸುವಾಗ ಮಿಣಿಯನ್ನು ಉಪಯೋಗಿಸುವರು.

೨೯) ಜಲ್ಲಿ

ಇದೊಂದು ಪುಟ್ಟಿ, ಹೊಟ್ಟು ತುಂಬಲು ಕಟ್ಟಿಗೆ, ಕುಳ್ಳು ತರಲು ಇದನ್ನು ಉಪಯೋಗಿಸುತ್ತಿದ್ದರು.

೩೦) ವಡವಡಗಿ

ಪುಟ್ಟಿಯಿಂದ ಸಗಣಿ ಗೊಬ್ಬರ ತುಂಬಲು ಕುಳ್ಳು ತುಂಬಲು ಹೊಲದಲ್ಲಿಯ ಮುಳ್ಳು ಕಂಟಿ ಕಸವನ್ನು ತುಂಬಲು ಉಪಯೋಗಿಸುತ್ತಾರೆ.

೩೧) ಒಡ್ಡಿನ ಪುಟ್ಟಿ

ಇದರಿಂದ ಗರಸು ಮಣ್ಣು, ಕೆಂಪು ಮಣ್ಣು, ಉಸುಕು ತುಂಬುತ್ತಾರೆ.

೩೨) ತಟ್ಟಿ (ಸಣ್ಣ ಪುಟ್ಟಿ)

ಹೊಲದಲ್ಲಿಯ ಕಲ್ಲು ಹಾಕಿಸಿ ತುಂಬಿ ಹಾಕಲು ಮನೆ ಕಟ್ಟುವಾಗ ಆರ‍್ರಲು ತುಂಬಲು ದಾರಿಯ ಸೆಗಣಿ ತುಂಬಲು ಉಪಯೋಗಿಸುತ್ತಾರೆ.

೨೩) ಹೆರೆ ಎಣ್ಣಿಯ ಲಾಳಕಿ

ಇದನ್ನು ಗಟ್ಟಿಯಾದ ಬಿದರಿನಿಂದ ತಯಾರಿಸಿ ಇದರಲ್ಲಿ ಒಂದು ಛಡಿ ಹಾಕಿ ಅದಕ್ಕೆ ಅರವಿಯನ್ನು ಕಟ್ಟಿ ಹೆರೆ ಎಣ್ಣೆಯನ್ನು ತುಂಬಿ ಬಂಡಿಯ ದುಂಬರಿಗೆ ಕಟ್ಟುತ್ತಿದ್ದರು. ಹೊಲಕ್ಕೆ ಹೋಗುವಾಗ ಬರುವಾಗ ಎಣ್ಣೆಯನ್ನು ಹಾಕಲು ಉಪಯೋಗಿಸುತ್ತಿದ್ದರು.

೨೪) ಸವಾರಿ ತಟ್ಟಿ

ನೆರಳಿನ ಸಲುವಾಗಿ ಹಾಗೂ ಗಾಲಿಯ ಮಣ್ಣು ಬಂಡಿಯ ಒಳಗೆ ಬರಬಾರದೆಂಬ ಉದ್ದೇಶದಿಂದ ಸವಾರಿಯ ತಟ್ಟಿಯನ್ನು ಉಪಯೋಗಿಸುತ್ತಿದ್ದರು. ಹಾಗೂ ಊರಿಗೆ ಹೋಗುವಾಗ ಸವಾರಿ ತಟ್ಟಿಯನ್ನು ಬಳಸುತ್ತಿದ್ದರು.

೨೫) ತಟ್ಟೆಪಾಟು

ಈಚಲು ಪರಕೆಯಿಂದ ತಟ್ಟಿಯನ್ನು ತಯಾರಿಸಿ ಹಳೆ ಚೀಲಗಳಿಂದ ಪಾಟು ತಯಾರು ಮಾಡಿ, ತಟ್ಟಿಯನ್ನು ಎರಡು ಡಂಬರಿಗೆ ಕಟ್ಟಿ ಹಿಂದೆ ಮುಂದೆ ಪಾಟು ಹಾಕಿ ತೆನೆಯನ್ನು ಹೇರಲಿಕ್ಕೆ ಹೊಟ್ಟು ಹೇರಲಿಕ್ಕೆ ಗೊಬ್ಬರ ಹೇರಲಿಕ್ಕೆ ದೇವಬಾಳ ಎಲೆಯನ್ನು ತರಲಿಕ್ಕೆ ಇನ್ನಿತರ ಕೆಲಸಗಳಿಗೆ ಉಪಯೋಗಿಸುತ್ತಿದ್ದರು.

೨೬) ಬಾರಕೋಲು

ಬಂಡಿ ಹೊಡೆಯುವಾಗ ಗಳೆ ಹೊಡೆಯುವಾಗ ದನ – ಕರುಗಳನ್ನು ಮೇಯಿಸುವಾಗ ಬಾರಕೊಲನ್ನು ಉಪಯೋಗಿಸುತ್ತಿದ್ದರು.

ರೈತನಿಗೆ ತಾನೂ ದುಡಿಯಲು ಹೊಲದಲ್ಲಿ ಚೆನ್ನಾಗಿ ಫಸಲು ಬೆಳೆಯಲು ಈ ಮೇಲಿನ ಎಲ್ಲವೂ ಅವನಲ್ಲಿ ಇರಬೇಕು. ಅಂದಾಗ ಮಾತ್ರ ರೈತನು ಈ ಮೇಲಿನ ಎಲ್ಲಾ ಸಲಕರಣೆಗಳೊಂದಿಗೆ ಉತ್ತಮವಾದ ಒಕ್ಕಲುತನ ಮಾಡಲು ಯೋಗ್ಯನಾಗುತ್ತಾನೆ ಎಂದು ಹೇಳಬಹುದು. ಈ ಮೇಲಿನ ಸಲಕರಣೆಗಳ ಜೊತೆಗೆ ಅವುಗಳಿಗೆ ಬೇಕಾದ ಸಾಮಗ್ರಿಗಳ ಮತ್ತು ಅವುಗಳ ಉಪಯೋಗವನ್ನು ತಿಳಿಸಿಕೊಡಲಾಗಿದೆ.

ರಾಶಿ ಮಾಡುವ ಪದ್ಧತಿ

ಹಿಂದಿನ ಕಾಲದಲ್ಲಿ ರಾಶಿ ಮಾಡುವ ಪದ್ಧತಿ ಬಹುದಿನಗಳವರೆಗೆ ಸಾಗುತ್ತಿತ್ತು. ಕಾರಣ ಇಂದಿನ ಹಾಗೆ ಅಂದು ಯಂತ್ರಗಳ ಸಹಾಯವಿದ್ದಿಲ್ಲ. ಆಗಿನ ಕಾಲದಲ್ಲಿ ಹೊಲದಲ್ಲಿಯೇ ಹಗಲು – ರಾತ್ರಿ ಇದ್ದುಕೊಂಡು ಅಲ್ಲಿನ ಕಾರ್ಯಗಳನ್ನು ಮುಗಿಸಿಕೊಂಡು ಅಂದರೆ ಹೊಲದಲ್ಲಿರುವ ಬೆಳೆಗಳನ್ನು ಕಿತ್ತುವುದು. ಆಮೇಲೆ ಗೂಡು ಹಾಕುವದು. ಇದಾದ ತರುವಾಯ ವಾರಗಳವರೆಗೆ ಅಂದು ರಾಶಿಯನ್ನು ಮಾಡುತ್ತಿದ್ದರು. ಏಕೆಂದರೆ ದೇವರು ಒಂದು ಕೃಪಾಶಿರ್ವಾದ ರೈತರಿಗೆ ಇರಲೇಬೇಕಾಗಿತ್ತು. ರಾಶಿಯನ್ನು ಮಾಡುವ ಪದ್ಧತಿಯಲ್ಲಿ ಮೊದಲು ಕಣವನ್ನು ತಯಾರಿಸುತ್ತಿದ್ದರು.

ಕಣ

ಕಣ ಎಂದರೆ ೩೦ ಮೊಳ ಉದ್ದ ೨೦ ಮೊಳ ಅಗಲ, ಒಂದೆ ಸಮನಾಗಿ ಮಾಡಿ ಮಧ್ಯದಲ್ಲಿ ಗೂಟವನ್ನು ಹಾಕಿ ೧೦ ರಿಂದ ೧೨ ಮೊಳ ಹಗ್ಗದಿಂದ ಗೋಲಾಕಾರವಾಗಿ ಗೆರೆ ಹಾಕಿ ಮಧ್ಯದಲ್ಲಿಯ ಎಲ್ಲಾ ಮಣ್ಣನ್ನು ತೆಗೆದು ನೀರು ಹಾಕಿ ಮಧ್ಯದೊಳಗೆ ಒಂದು ಮೇಟಿಯನ್ನು ಹಾಕಿ ಹಂತಿ ಕಣ್ಣಿಯನ್ನು ಹಚ್ಚಿ ೬ – ೮ – ೧೦ ಎತ್ತಿನಿಂದ ಕಣವನ್ನು ತುಳಿಸಿ ಮುಂದೆ ಅದರ ಮೇಲೆ ತೆಳ್ಳಗೆ ಸೆಗಣಿ ರಾಡಿ ಮಾಡಿ ಎಲ್ಲ ಕಡೆಯಿಂದ ಸಾರಿಸಿ ಹೊಟ್ಟಿನ ಪುಡಿ ಹಾಕಿ ಮತ್ತೊಮ್ಮೆ ತೆಳ್ಳಗೆ ರೂಲನ್ನು ಹೊಡೆದಾಗ ಕಣ ತಯಾರಾಗುತ್ತದೆ.

ಉಪಯೋಗ

೧. ಸರ್ವದವಸ ಧಾನ್ಯಗಳನ್ನು ರಾಶಿ ಮಾಡಲು ಉಪಯೋಗಿಸುತ್ತಿದ್ದರು.

೨. ಜಂತುಗುಂಟಿ ಕಂಕಿ ಎಲೆಯಲಿಕ್ಕೆ ಉಪಯೋಗ

೩. ಗ್ವಾರಿ – ಮದ ಎಲೆಯಲಿಕ್ಕೆ ಸಹಕಾರಿ

೪. ಪುಟ್ಟಿ – ದವಸ ಧಾನ್ಯಗಳನ್ನು ತುಂಬಲಿಕ್ಕೆ ಅನುಕೂಲವಾಗಿತ್ತು.

೫. ಮೆಟ್ಟು – ದವಸ ಧಾನ್ಯಗಳನ್ನು ತೂರಲಿಕ್ಕೆ

೬. ಸೆಳ್ಳು ದವಸ ಧಾನ್ಯ ಕಡ್ಡಿ – ಕಂಕಿ ಹೊಡೆಯಲಿಕ್ಕೆ

ಹೀಗೆ ಕಣದಲ್ಲಿ ಹಲವಾರು ಸಾಮಗ್ರಿಗಳ ಉಪಯೋಗವಿತ್ತು.

ರೂಲು

ಸರ್ವದವಸ ಧಾನ್ಯಗಳನ್ನು ಕಣದಲ್ಲಿ ಹಾಕಿ ಅವುಗಳ ಮೇಲೆ ರೂಲನ್ನು ಎತ್ತಿನ ಸಹಾಯದಿಂದ ಉರುಳಿಸಿ ದವಸ ಧಾನ್ಯಗಳನ್ನು ರಾಶಿ ಮಾಡಲು ಉಪಯೋಗಿಸುತ್ತಿದ್ದರು. ಇದಕ್ಕು ದೊಡ್ಡ ಕಲ್ಲಿನಿಂದ ಗೋಲಾಕಾರವಾಗಿ ಮಾಡಿ ಆ ಮೂಲಿ ಈ ಮೂಲಿ ಮಧ್ಯದಲ್ಲಿ ತೂತು ಮಾಡಿ ಇರಿಸಿನ ತುಂಡುಗಳನ್ನು ಇಟ್ಟು ಸೀಸ ಹಾಕಿ ಕಬ್ಬಿಣದಿಂದ u ಆಕಾರ ಬಟ್ಟನ್ನು ಮಾಡಿ ಆ ಇರಿಸಿನ ತುಂಡುಗಳನ್ನು ಜೋಡಿಸಿ ಮುಂದೆ ಒಂದು ಉದ್ದಿಗೆಯನ್ನು ಜೋಡಿಸಿ ಮೊಳೆಹಾಕಿ ಉದ್ದಿಗೆಗೆ ನೊಗವನ್ನು ಕಟ್ಟಿ ಎತ್ತಿನ ಸಹಾಯದಿಂದ ಹೊಡೆಯಲು ಮತ್ತು ಉದ್ದಿಗೆಯನ್ನು ತೆಗೆದು ಕಬ್ಬಿಣದ ಟ್ರ್ಯಾಕ್ಟರ್‌ನ ಕೊಂಡಿಗೆ ಹಾಕಿ ಕಾಳನ್ನು ಕಡಿಗೆ ಮಾಡಲು ಉಪಯೋಗಿಸುತ್ತಿದ್ದರು.

ಹೀಗೆ ಹಿಂದಿನ ಕಾಲದಲ್ಲಿ ಸುಮಾರು ೧೦ ರಿಂದ ೨೦ ದಿನಗಳವರೆಗೆ ರಾಶಿ ಮಾಡುತ್ತಿದ್ದರು.

ಆದರೆ ಇಂದು ಯಂತ್ರಗಳ ಸಹಾಯದಿಂದ ರಾಶಿಯನ್ನು ಕೇವಲ ಒಂದೇ ದಿನದಲ್ಲಿ ಮಾಡಿ ಮುಗಿಸುತ್ತಾರೆ. ಕಾರಣ ಮಿಷನ್ ಯಂತ್ರವು ಸಹಕಾರಿ ಆಗಿದೆ.

ಉಪಸಂಹಾರ

ಒಣಬೇಸಾಯ ಪದ್ಧತಿಯನ್ನು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಾಣಬಹುದು. ಅದರಲ್ಲೂ ಅಕಾಲಿಕ ಮಳೆಯಿಂದಾಗಿ ಒಣಬೇಸಾಯ ಮಾಡುವ ರೈತರು ವರ್ಷದುದ್ದಕ್ಕೂ ಶ್ರಮ ಪಟ್ಟರೂ ಹಿಡಿಕಾಳು ಬಾರದೇ ಹೋಗುವುದರಿಂದ ತುಂಬಾ ಆತಂಕದ ಸ್ಥಿತಿಯಲ್ಲಿದ್ದಾರೆ.

ಒಣ ಬೇಸಾಯದ ಭೂಮಿ ಇದ್ದರೂ ಅಷ್ಟೇ ಇರದಿದ್ದರೂ ಅಷ್ಟೇ ಎಂಬಂತೆ ಕುಟುಂಬ ನಿರ್ವಹಣೆಗೆ ಗುಳೇ ಹೋಗಿ ಜೀವಿಸುವ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ಇಂತಹ ಸ್ಥಿತಿಯಲ್ಲೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಹುತೇಕ ರೈತರು ಒಣಬೇಸಾಯ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಇದಕ್ಕೆ ಕಾರಣ ಹೊಲದ ತಗ್ಗು ದಿಣ್ಣೆ ಸಮಮಾಡಿ ಕೆರೆಯಂತೆ ಹೊಲ ಮಾಡುತ್ತಾರೆ. ಮಳೆ ನೀರು ತುಂಡು ಮಾಡಿರುವ ಪಟ್ಟಿ (ಹೊಲ)ಗಳಲ್ಲಿ ನಿಂತ ನಂತರವೇ ಒಳಗಟ್ಟೆ ಮೂಲಕ ಹೆಚ್ಚಿನ ನೀರು ಹರಿದು ಹೋಗುತ್ತದೆ. ಇದರಿಂದ ಅಕಾಲಿಕ ಮಳೆಯಲ್ಲೂ ಉತ್ತಮ ಬೆಳೆಯನ್ನು ಈ ಭಾಗದ ರೈತರು ಬೆಳೆಯುವಂತಾಗಿದೆ. ಹೆಚ್ಚಿನ ಲಾಭವಾಗದಿದ್ದರೂ ಇಡೀ ವರ್ಷ ತಮ್ಮ ಕುಟುಂಬದ ಉಪಜೀವನಕ್ಕೆ ಅಗತ್ಯವಾದ ದವಸ ಧಾನ್ಯಗಳನ್ನು ಬೆಳೆದು ವೃತ್ತಿಯಿಂದ ಕಾಲ ಕಳೆಯುತ್ತಿದ್ದಾರೆ.

ಒಡ್ಡುಗಳೇ ರೈತನ ಬ್ಯಾಂಕ್ ಎಂಬುದನ್ನು ತಿಳಿದು ಅದರಂತೆ ಒಂದಿಂಚು ಮಣ್ಣು ಹೊರ ಹೋಗದಂತೆ ಸಮಪಾತಳಿ ಮಾಡಿದ ಹೊಲದ ಇಳಕಲಿಗೆ ತಕ್ಕಂತೆ ಒಡ್ಡು ಹಾಕಿದಲ್ಲಿ ನಿಶ್ಚಿತವಾಗಿಯೂ ಬೆಳೆ ಬರುವುದರಲ್ಲಿ ಸಂದೇಹವಿಲ್ಲ.

“ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು” ಎಂಬಂತೆ ಈ ನಾಡಿನ ರೈತರು ಶಿಕ್ಷಣದ ಜೊತೆಗೆ ಪರಂಪರಾಗತವಾಗಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯುವ ಪೀಳಿಗೆಗೆ ಕೃಷಿಯ ಕಾರ್ಯದ ಬಗ್ಗೆ ಹೆಚ್ಚು ಒಲವು ಮೂಡುವಂತೆ ಮಾಡಬೇಕಾಗಿದೆ. ದೇಶದ ಬೆನ್ನೆಲುಬೆ ರೈತ ಎಂಬ ಸತ್ಯವನ್ನು ಕಾಯಕ ಜೀವಿಯ ರೈತರು ಒಣಬೇಸಾಯ ಪದ್ಧತಿ ಮೂಲಕ ಉತ್ತಮ ಇಳುವರಿ ಪಡೆದು ಮಾದರಿಯ ರೈತರಾಗಬೇಕಾಗಿದೆ. ಮುಂಗಾರಿ – ಹಿಂಗಾರಿ ಮಳೆಗಳು ಅಯಾ ಬೀಜಗಳು ಬಿತ್ತನೆ ತಳಿ, ಬೀಜೋಪಚಾರ, ಸಾವಯವ ಗೊಬ್ಬರಗಳ ಬಳಕೆ, ದನ – ಕರುಗಳಿಗೆ ಆಹಾರದ ಜೊತೆಗೆ ದೇಶದ ಜನತೆಯ ಬೇಡಿಕೆಗೆ ಪೂರಕವಾದ ಧಾನ್ಯ ಬೆಳೆಯುವ ಮೂಲಕ ಸಕಲ ಜೀವರಾಶಿಯ ಸಂಜೀವಿನಿಯಾಗಬಲ್ಲ ಶಕ್ತಿ ರೈತನಿಗಿದೆ.