” ಕಷ್ಟ ಯಾರಿಗ್ ಬರಾಂಗಿಲ್ಲ ಸಾರ್! ಅಳ್ತಾಕುಂತ್ರೆ  ನರಳಸ್ತದೆ, ಮೈಬಗ್ಗಿಸಿ ಬೆವರಿಳಿಸಿದ್ರೆ ತ್ಯಪ್ಗೆ ಓಡಿ ಹೋಯ್ತದೆ!’ ೬೦ ವರ್ಷದ ರತ್ನಮ್ಮ  ಕೃಷಿ ಕತೆ ಹೇಳುತ್ತಾಳೆ. ಒಂದು ಕಾಲದಲ್ಲಿ ಸತ್ತಂತೆ ಮಲಗಿದ ಇವರ ರಾಗಿ ಹೊಲ ಈಗ ಅಂದದ ತೋಟವಾಗಿ ನಿಂತು ಹೌದೇ ಹೌದೆಂದು ತಲೆ ದೂಗುತ್ತದೆ. ಹೊಲ ಬದಲಾಗುವದಕ್ಕೆ ಎಷ್ಟು ಕಾಲ ಬೇಕು? ಶ್ರದ್ಧೆ, ಪರಿಶ್ರಮವಿದ್ದರೆ ಎಂಟೇ ಎಂಟು ವರ್ಷ ಸಾಕು! ಹಸುರು ಸಹವಾಸದಲ್ಲಿ ರತ್ನಮ್ಮನ ಉತ್ತರ ಸಾಕ್ಷಾತ್ಕಾರ. ತೆಂಗಿನ ಸಾಲಿನಲ್ಲಿ ಓಡಿ, ಸಾಗವಾನಿ ಮರ ಮುದ್ದಾಡಿ, ಹಲಸನ್ನು ಹೊಗಳಿ, ಮಾವಿನ ಜತೆ ಹರಟೆ ಹೊಡೆದು, ಬಾಳೆಗೊನೆಯಲ್ಲಿ ಕಣ್ಣಾಡಿಸಿ, ಮಲ್ಲಿಗೆಬನದಲ್ಲಿ ಈಕೆ ನಿಂತಾಗ  ಬೆವರಿನ ಫಲ ದರ್ಶನ, ಸಮೃದ್ಧಿ ಪ್ರದರ್ಶನ.

ತಿಪಟೂರಿನಿಂದ ೧೦ ಕಿಲೋ ಮೀಟರ್ ದೂರದ ಮಂಜುನಾಥಪುರ ಹಳ್ಳಿಯ ಈ ಹೊಲದ ೧೫ ವರ್ಷದ ಹಿಂದಿನ ಚಿತ್ರವೇ ಬೇರೆ! ದಿನ ಬೆಳಗಾದರೆ ತುತ್ತಿನ ಚೀಲ ತುಂಬಲು  ಹೆಣ್ಮಗಳ ಹೆಣಗಾಟ, ಜ್ವರ ಜಾಪತ್ರೆ ಎಂದು ಗಪ್ಪನೆ ಕೂಡ್ರುವಂತಿಲ್ಲ. ಹೆಗಲಿಗೆ ಸಂಸಾರದ ನೊಗ. ಎರಡು ಮಕ್ಕಳ ಅರೈಕೆ ಮಾಡುತ್ತ ಗಂಡ ರಾಮೇಗೌಡರ ಜತೆ ಸೇರಿ ದುಡಿಮೆ. ೪೦ ವರ್ಷದ ಹಿಂದೆ ದುಡಿಮೆಗೆ ದೊರೆತ ೪ ಎಕರೆ ಅರಣ್ಯ ಭೂಮಿ, ಸಹಕಾರಿ ಬೇಸಾಯ ಯೋಜನೆಯ  ಬಳುವಳಿ. ಹದ ಮಳೆಗೆ ರಾಗಿ ಬಿತ್ತನೆ, ಗಡಿ, ಬೇಲಿ, ಬೆಳೆ ರಕ್ಷಣೆಗೆ ನಿಗಾವಹಿಸಲೂ ಪುರುಸೊತ್ತಿಲ್ಲದೇ ದಿನ ಬೆಳಗಾದರೆ  ನೇರ ಹೆರವರ ಮನೆಯ ಕೂಲಿ ದಾರಿ. ನೆಲಕ್ಕೆ ಗೊಬ್ಬರ ಹಾಕುವ ತಾಕತ್ತಿಲ್ಲ, ತಂಗಡೆ, ಜಾಲಿ ಕಂಟಿ ಬಿಟ್ಟರೆ ಭೂಮಿ ಬಂಜರು ನೆಂಟ, ಬೆವರೆಲ್ಲ ಕೂಲಿಗೆ ವಜಾ! ನೇಗಿಲ ದುಡಿಮೆಗೆ ನಿಕ್ಕಿ ೪ ಕ್ವಿಂಟಾಲ್  ರಾಗಿ ದೊರೆತರೆ ಅಚ್ಚರಿ. ಜೀವ ಸವೆದ ಜೀವ ಹಲವು ದಿನ ಉಪವಾಸ ಬಿದ್ದದ್ದೂ ಇದೆ.

‘ಆಗ ೧೦ ರೂಪಾಯಿಗೆ ಕೂಲಿಗೆ ಹೋಗ್ತಿದ್ದೆ, ಈಗ ನಮ್ಮ ಹೊಲಕ್ಕೆ ೪೦ ರೂಪಾಯ್‌ಗೆ ೪ ಜನರ ಕೂಲಿಗೆ ತಗೋತೀನಿ!’ ತೋಟದಲ್ಲಿ ಓಡಾಡುತ್ತ ಹೆಮ್ಮೆಯಲ್ಲಿ ಹೇಳುತ್ತಾಳೆ. ಹೊಲ ಮೈ ಬಣ್ಣ ಬದಲಿಸಿದೆ, ರಾಗಿ ಕೃಷಿ ಮಾತ್ರ ಇದ್ದ ಜಾಗದಲ್ಲಿ ಈಗ  ಸಸ್ಯ ವೈವಿಧ್ಯ  ನಳನಳಿಸುತ್ತಿದೆ. ಮಾವು, ತೆಂಗು, ಹಲಸು, ಚಿಕ್ಕು,  ಬಾಳೆ, ಮಲ್ಲಿಗೆ, ರಾಗಿ, ಹೆಸರು, ಹುರಳಿ, ಅಲಸಂದೆ, ಮಿಡಿಸವತೆ, ಮೆಣಸು, ಕ್ಯಾರೆಟ್, ಕ್ಯಾಬೇಜ್, ಟೊಮೆಟೋ, ಮುಂತಾದ ಬೆಳೆಗಳು ನಳನಳಿಸುತ್ತವೆ. ತೇಗ, ನೀಲಗಿರಿ, ಸಿಲ್ವರ್ ಓಕ್, ಗೇರು ಮುಂತಾದ ಅರಣ್ಯ ಸಸಿಗಳು  ಕೃಷಿ ಕಾಡಿನ ಗಾಥೆ ಹೇಳುತ್ತಿವೆ. ಹೆಣ್ಣು ಬದಲಾದರೆ ಹೊಲ ಬದಲಾದೀತೆಂಬ ಮಾತು ಅಲ್ಲಿ ಹೆಜ್ಜೆ ಹೆಜ್ಜೆಗೆ ಕೇಳುತ್ತಿದೆ.

ಕೂಲಿನಾಲಿ ಮಾಡುತ್ತ ಸಂಕಷ್ಟದ ಮಡುವಲ್ಲಿ ತೊಳಲಾಡಿದ ರತ್ನಮ್ಮ ಬದಲಾದದ್ದು ಹೇಗೆ? ಅದು ೧೯೯೨ನೇ ಇಸವಿ. ಭೈಪ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ  ಕಾರ್ಯಕ್ರಮ ಜಾರಿಗೊಳಿಸಿತು. ಬಡ ರತ್ನಮ್ಮನ ಹೊಲ ಅಭಿವೃದ್ಧಿ ಯೋಜನೆ ತೆಕ್ಕೆಗೆ ಬಂತು. ನೆಲ, ಜಲ ಸಂರಕ್ಷಣೆ, ತೋಟಗಾರಿಕಾ ಬೆಳೆ ಬಗೆಗೆ ಮಾರ್ಗದರ್ಶನ ದೊರೆಯಿತು. ಸಸಿ ನಾಟಿ, ನೀರು, ಗೊಬ್ಬರ ಪೂರೈಕೆಯತ್ತ ಗಮನ. ವಿವಿಧ ಪ್ರದೇಶಗಳ ಯಶೋಗಾಥೆ ದರ್ಶನಕ್ಕೆ ಕ್ಷೇತ್ರ ಪ್ರವಾಸ ರತ್ನಮ್ಮನ ಮನದಲ್ಲಿ  ಹೊಸ ಕನಸು ಬೆಳೆಸಿತು.

ವರ್ಷಕ್ಕೆ ೬೦೦ ಮಿಲಿ ಮೀಟರ್ ಮಳೆ. ಸುರಿದ ನೀರೆಲ್ಲ ಇಳಿಜಾರಿನತ್ತ ಓಡುತ್ತಿತ್ತು, ಅಪಾರ ಮಣ್ಣು ಸವಕಳಿ, ನೆಲ ನಿಃಸತ್ವ. ೪ ಎಕರೆ ಕ್ಷೇತ್ರದ ಮಳೆ ನೀರನ್ನು ಹೊಲದಲ್ಲೆ ಉಳಿಸುವ ಯೋಜನೆ ಸಿದ್ದವಾಯ್ತು. ಸಸ್ಯ ಬದು ನಿರ್ಮಾಣವಾಯ್ತು. ಮೇವು, ಕೃಷಿ ಉಪಕರಣ, ಹಸಿರೆಲೆ ಗೊಬ್ಬರಕ್ಕೆ ನೆರವಾಗುವ ಅರಣ್ಯ ಸಸಿ ನಾಟಿ. ಬೇಸಿಗೆಯಲ್ಲಿ ಬಿಸಿಗಾಳಿ ಇಲ್ಲಿನ ವಿಚಿತ್ರ   ಸಮಸ್ಯೆ. ಕ್ಯಾಸಿಯಾ, ಸುಬಾಬುಲ್, ಗ್ಲಿರಿಸಿಡಿಯಾ ನಾಟಿ. ಗಿಡ ನಾಲ್ಕಡಿಗಿಂತ ಹೆಚ್ಚು ಎತ್ತರ ಬೆಳೆಯದಂತೆ ಕಾಂಡ ಕಟಾವು. ಬೇಲಿ ಸಾಲಿಗೆ ಅರಳಿನಿಂತ ಹಸುರು ಸೊಪ್ಪಿನ ಹಿಂಡು! ಗಾಳಿ ತಡೆಯ ಸುಲಭ ಬ್ರಹ್ಮಾಸ್ತ್ರ!.  ಕತ್ತರಿಸಿದ ಸೊಪ್ಪುಗಳು ಮಾವು, ತೆಂಗಿಗೆ ಗೊಬ್ಬರ. ಕಮರುವ ನೆಲಕ್ಕೆ ಹೊಸ ಚೇತನ. ಕೃಷಿ ಬೆಳೆಗೂ ಕಾಡು ಮರಕ್ಕೂ ಸಹಕಾರ ಸಂಬಂಧ ವೃದ್ಧಿ.

ಮಲ್ಲಿಕಾ, ಬದಾಮಿ, ತೋತಾಪುರಿ, ನೀಲಂ ಎಂದು ೧೨೦ ಮಾವಿನ ಸಸಿಗಳ ನಾಟಿಯಾಗಿ ೧೦ ವರ್ಷ ಕಳೆದಿದೆ. ಈಗ ವರ್ಷಕ್ಕೆ  ೧೫ ಸಾವಿರ ಆದಾಯ ನೀಡುತ್ತಿವೆ. ೧೦೦ ತೆಂಗಿನ ಗಿಡ ಈಗಷ್ಟೇ ಫಲ ಬಿಡತೊಡಗಿವೆ. ೫೦ ಮಲ್ಲಿಗೆ ಹಿಂಡು ವರ್ಷದ ೩ ತಿಂಗಳು ಹೂ-ಹಣ ನೀಡುತ್ತಿವೆ. ಬೇಲಿ ಬದುವಿಗೆ ನಾಟಿ ಮಾಡಿದ ಅರಣ್ಯ ಸಸಿಗಳು  ೪ ವರ್ಷದ ಹಿಂದೆ ೭ ಸಾವಿರ ಆದಾಯ ನೀಡಿವೆ. ಗೇರು ಬೀಜದಿಂದ ಎರಡು ಸಾವಿರ, ಮಿಡಿ ಸವತೆಯಲ್ಲಿ ಹತ್ತು ಸಾವಿರ ಹೀಗೆ ರತ್ನಮ್ಮ ತನ್ನ ಕೃಷಿ ಲೆಕ್ಕ ನೀಡುತ್ತಾಳೆ. ಗಳಿಸಿದ ಹನಿಹನಿಯನ್ನೂ ಜತನದಿಂದ ಬಳಸುತ್ತ ಅಭಿವೃದ್ಧಿಯ ಹೊಸ ಸಾಧ್ಯತೆಗಳತ್ತ ಚಿಕಿತ್ಸಕ ಕಣ್ಣು, ಜಾಣ ಹೆಜ್ಜೆ  ಇಟ್ಟಿದ್ದಾಳೆ. ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಮನೆ ಬಾಗಿಲಿಗೆ ಬರುವದು ಹೊಸತಲ್ಲ, ಆಸಕ್ತಿಯಿಂದ ಭಾಗವಹಿಸುವುದು ಪ್ರಧಾನ. ರತ್ನಮ್ಮ ಇಲ್ಲಿ ಅಪುರೂಪದ ಮಾದರಿಯಾಗಿದ್ದಾಳೆ. ರಾಜ್ಯದ ವಿವಿಧ ಪ್ರದೇಶಗಳ ರೈತರು, ವಿಜ್ಞಾನಿಗಳು ಕೃಷಿ ಅರಣ್ಯ ಅಭಿವೃಧ್ಧಿ ವೀಕ್ಷಣೆಗೆ ಬರುತ್ತಾರೆ. ರತ್ನಮ್ಮನ ತೋಟ ಎಲ್ಲರಿಗೂ ಪಾಠ ಹೇಳುತ್ತಿದೆ.

“ಮಳೆ ನೀರ್ನ ಕಾಪಾಡ್ಕಳಿ, ಹೊಲದಾಗ ಮರ, ಗಿಡ ಬೆಳೆಸಿ’ ಓದು ಬಾರದ ರತ್ನಮ್ಮ ಹೊಲದಲ್ಲಿ ನಿಂತು ಕೃಷಿ ಪಾಠ ಮಾಡುತ್ತಾಳೆ. ೬ ವರ್ಷದ ಹಿಂದೆ  ಇವಳ ತೋಟ ವೀಕ್ಷಣೆಗೆ ಬಂದಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಬಿಸಿಲಯ್ಯರ ಎದುರು  ಇವಳು ತನ್ನ ಹೊಲದ ಕತೆ ಹೇಳಿದ್ದಳು. ಹಳ್ಳಿ ಮಹಿಳೆಯ ಕಟಿಪಿಟಿ ಓಡಾಟ, ಪಟಪಟ ಮಾತು, ಪ್ರತಿ ನಿಮಿಷವನ್ನು ತನ್ನ ಹೊಲದ ಹಸುರಿಗೆ ಮುಡುಪಿಟ್ಟ ಮನಸ್ಸು ಗಮನಿಸಿದ ಕುಲಪತಿಗಳು  “ಸಂಶೋದನೆ ಲ್ಯಾಬ್‌ನಲ್ಲಿ ಇಲ್ಲ, ಲ್ಯಾಂಡ್‌ನಲ್ಲಿದೆ” ಎಂದು ತಕ್ಷಣ ಉದ್ಗರಿಸಿದ್ದರು.

ಈಗ  ಹೊಲಕ್ಕೆ ಒಂದು ಕೊಳವೆ ಬಾವಿ ಬಂದಿದೆ. ತೋಟಕ್ಕೆ ನೀರಾವರಿಯಾಗಿದೆ. ಮತ್ತೆ ೫೦ ತೆಂಗಿನ ಸಸಿ ನೆಟ್ಟಿದ್ದಾಳೆ. ಇಡೀ ತೋಟ ಇಲ್ಲಿ ರತ್ನಮ್ಮ ಹೇಳಿದಂತೆ ಕೇಳುತ್ತದೆ. ಹೊಸ ಹೊಸ ಸಸ್ಯಗಳೂ ಬೆಳೆಯುತ್ತಿವೆ. ಭೂಮಿಗೆ ಬೆವರು ಸುರಿಯುತ್ತಿದ್ದಂತೆ ಇವರ ಆರ್ಥಿಕ ಕಷ್ಟಗಳು ದೂರಾಗಿವೆ. ಹೊಲದ ಬಡತನ ಓಡಿ ಹೋಗಿದೆ. ಒಂದು ಕಾಲದಲ್ಲಿ ಬಿಸಿ ಗಾಳಿಯ ಪ್ರಹಾರಕ್ಕೆ ಒಣಗುತ್ತಿದ್ದ ರಾಗಿ ಹೊಲದಲ್ಲಿ ಮಲ್ಲಿಗೆ ಪರಿಮಳದ ಕೃಷಿ ತಂಗಾಳಿ ಬೀಸುತ್ತಿದೆ. ರಾಗಿಯಿಂದ ತೋಟದವರೆಗೆ ಸಾಗಿ ಬಂದ ಕಳೆದ ೧೪ ವರ್ಷಗಳ ಕೃಷಿ ಕಸುಬಿನಲ್ಲಿ  ರತ್ನಮ್ಮ  ಅನುಭವದಲ್ಲಿ ಬೆಳೆದಿದ್ದಾರೆ.  ಇವರ ಕೃಷಿ ಸಾಧ್ಯತೆ ಗಮನಿಸಲು ದೇಶದ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡಾ ಇಲ್ಲಿಗೆ ಭೇಟಿ ನೀಡಿದ್ದರು ಎಂಬುದು ಚರಿತ್ರಾರ್ಹ ಸಂಗತಿ ! ಹೆಣ್ಣು ಬದಲಾದರೆ  ಭೂಮಿ ಬದಲಾಗುತ್ತದೆ ಎಂಬ ಮಾತು  ತಿಪಟೂರಿನ  ಮಂಜುನಾಥಪುರದಲ್ಲಿ ಜೀವ ತಳೆದಿದೆ. ಇಲ್ಲಿನ ರತ್ನಮ್ಮ ರೂಪಿಸಿದ ಮಾನಸ ತೋಟ ಕೃಷಿ ಮಹಿಳೆಯ ಸಾಹಸ ಸಾಧ್ಯತೆಗೆ ಅಪ್ಪಟ ಸಾಕ್ಷಿಯಾಗಿದೆ.