ಲೇಖಕರು: ಕ್ಷಮಾ ವಿ. ಭಾನುಪ್ರಕಾಶ್

ನಮ್ಮ ಬಳಗಕ್ಕೆ ಹೊಸ ಬರಹಗಾರರನ್ನು ಸ್ವಾಗತಿಸುವ ಉದ್ದೇಶದೊಡನೆ ಮೊತ್ತಮೊದಲ ‘ಕಣಜ ಬರಹಗಾರರ ಕಮ್ಮಟ’ವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ ೨೦೧೬ರ ಆಗಸ್ಟ್ ೬ ಹಾಗೂ ೭ರಂದು ಆಯೋಜಿಸಲಾಗಿತ್ತು. ಇಪ್ಪತ್ತೊಂದು ಶಿಬಿರಾರ್ಥಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಹಿರಿಯ ಲೇಖಕರು ಬರವಣಿಗೆಯ ಕುರಿತು ಅನೇಕ ಅಂಶಗಳನ್ನು ಹಂಚಿಕೊಂಡರು.

ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಾವು ಕಲಿತದ್ದನ್ನು ಕಾರ್ಯಗತಗೊಳಿಸುವ ಅವಕಾಶವನ್ನೂ ಶಿಬಿರಾರ್ಥಿಗಳಿಗೆ ನೀಡಲಾಗಿತ್ತು. ಇಂತಹ ಚಟುವಟಿಕೆಯೊಂದರಲ್ಲಿ ಕೋಲಾರದ ವಿಜ್ಞಾನ ಸಂವಹನಕಾರರಾದ ಶ್ರೀ ವಿ. ಎಸ್. ಎಸ್. ಶಾಸ್ತ್ರಿ ‘ಒರಿಗಾಮಿ’ ಹಾಗೂ ‘ಕಿರಿಗಾಮಿ’ ಕಲೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಈ ಪ್ರಾತ್ಯಕ್ಷಿಕೆಯಿಂದ ಪಡೆದ ಮಾಹಿತಿಯನ್ನು ಆಧರಿಸಿ ಶಿಬಿರಾರ್ಥಿ ಶ್ರೀಮತಿ ಕ್ಷಮಾ ವಿ. ಭಾನುಪ್ರಕಾಶ್ ಅವರು ಬರೆದ ಲೇಖನ ಇಲ್ಲಿದೆ.

“ತೀವ್ರಗಾಮಿ, ಮಂದಗಾಮಿಯಲ್ಲಪ್ಪ; ನಂದು ಒರಿಗಾಮಿ” ಎನ್ನುತ್ತಾ ನಗುತ್ತಲೇ ಮಾತುಕತೆ ಆರಂಭಿಸಿದರು ಶಾಸ್ತ್ರಿಯವರು. ಅವರ ಒಂದೊಂದು ಮಾತೂ ಅವರ ವ್ಯಕ್ತಿತ್ವವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಸಾಗಿತು. ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಾ ಸಾಗಿದ ಉಪನ್ಯಾಸ, ಕೇವಲ ಉಪನ್ಯಾಸವಾಗಿರದೇ ಸಂವಾದದ ರೂಪ ತಳೆಯುತ್ತಾ ಸಾಗಿತು.

IMG_3665

ಶ್ರೀ ವಿ.ಎಸ್.ಎಸ್ ಶಾಸ್ತ್ರಿಯವರು ನಮ್ಮೊಡನೆಯೇ ಇರುವ ಒಬ್ಬ ಅಸಾಧಾರಣ ವ್ಯಕ್ತಿ. ನಮ್ಮ ನಿಮ್ಮಂತೆಯೇ ಸಾಮಾನ್ಯ ಕುಟುಂಬ ಹಿನ್ನೆಲೆಯನ್ನು ಹೊಂದಿದವರೇ ಆದರೂ, ತಮ್ಮ ವಿಶಿಷ್ಟ ಆಸಕ್ತಿಗಳು ಮತ್ತು ಆ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆಯಿಂದ ಗುಂಪಿನಲ್ಲಿಯೂ ಬೇರೆಯೇ ಆಗಿ ಕಂಡುಬರುತ್ತಾರೆ.

ಕೆನರಾಬ್ಯಾಂಕ್ ಉದ್ಯೋಗಿಯಾಗಿದ್ದ ಶಾಸ್ತ್ರಿಯವರು, ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಬೆರೆಸುತ್ತಾ, ತಮ್ಮ ಪಾಡಿಗೆ ತಾವು ಆಸಕ್ತಿಕಾರಕ ವಿಷಯಗಳ ಮೇಲೆ ನಿರಂತರ ಅಭ್ಯಾಸ ಮತ್ತು ಸಂಶೋಧನೆ ನಡೆಸುತ್ತ ಬಂದಿದ್ದಾರೆ; ೧೫೧ ಇಂಚು ಉದ್ದದ ಕಾಗದದ ರಾಕೆಟ್ ಅನ್ನು ಒರಿಗಾಮಿಯ ಮೂಲಕ ತಯಾರಿಸಿದ್ದಾರೆ ಮತ್ತು ಈ ಸಾಧನೆಯಿಂದ ಲಿಮ್ಕಾ ದಾಖಲೆ ಪುಸ್ತಕವನ್ನೂ ಸೇರಿದ್ದಾರೆ.

ಜಪಾನೀ ಕಲೆಯೆಂದೇ ಪ್ರಖ್ಯಾತವಾಗಿರುವ ಒರಿಗಾಮಿ (ಒರಿ – ಮಡಚು, ಗಾಮಿ – ಕಾಗದ) ಮತ್ತು ಕಿರಿಗಾಮಿ ( ಕಿರಿ – ಕತ್ತರಿಸು, ಗಾಮಿ – ಕಾಗದ) ಇವರ ಅತ್ಯಂತ ಆಸಕ್ತಿಯ ಕ್ಷೇತ್ರ. ಇವುಗಳಲ್ಲದೆ ಶಾಸನಗಳು, ಶಿಲಾಯುಗದ ಕಲ್ಲುಗಳು, ಪಳೆಯುಳಿಕೆಗಳು, ಚಿತ್ರಕಲೆ, ಬ್ರಾಹ್ಮೀ ಭಾಷೆ ಮತ್ತು ಅರವ ಲಿಪಿ ಕಲಿಕೆ ಕೂಡ ಇವರು ಕೈಯಾಡಿಸಿರುವ ಇತರ ಕ್ಷೇತ್ರಗಳು. ಇವರ ಅನನ್ಯತೆಯೆಂದರೆ, ಗಣಿತ ಸಂಬಂಧೀ ವ್ಯಂಗ್ಯಚಿತ್ರ ರಚನೆ ಮತ್ತು ಒರಿಗಾಮಿ-ಕಿರಿಗಾಮಿ ಬಳಕೆಯಿಂದ ಸುಮಾರು ೫೦೦ ಬಗೆಯ ಕೀಟಗಳ ಮಾದರಿಯ ತಯಾರಿಕೆ. ಇವರು ಒರಿಗಾಮಿ-ಕಿರಿಗಾಮಿಯನ್ನು ಕೇವಲ ಕಲೆ ಅಥವಾ ವಿಜ್ಞಾನವಾಗಿ ನೋಡದೇ, ಇವುಗಳ ಅನ್ವಯಿಕೆಯನ್ನು ಗಣಿತದೊಂದಿಗೆ ಸಮೀಕರಿಸಿ, ಹೊಸ ಸಾಧ್ಯತೆಯೆಡೆಗೆ ಜಗತ್ತಿನ ಗಮನ ಸೆಳೆದಿದ್ದಾರೆ.

ಹಾಗೆಂದು, ಗಣಿತವನ್ನು ಸುಲಭವನ್ನಾಗಿ ಮಾಡುವುದು ನಿಮ್ಮ ಉದ್ದೇಶವೇ ಎಂದು ಪ್ರಶ್ನಿಸಿದಾಗ, ” ಸಿಂಪ್ಲಿಫೈಯಿಂಗ್ ಮ್ಯಾಥ್ಸ್ ಇಸ್ ಸಿಂಪ್ಲಿ ಲೈಯಿಂಗ್” ಎಂದು ಎಲ್ಲರ ಹುಬ್ಬೇರುವಂತೆ ಮಾಡಿದರು. ಇವರ ಸಿದ್ಧಾಂತದ ಪ್ರಕಾರ, ಗಣಿತದ ತರ್ಕವನ್ನು ಆಸಕ್ತಿದಾಯಕವಾಗಿ ಅರ್ಥೈಸಲು ಒರಿಗಾಮಿ-ಕಿರಿಗಾಮಿ ಮಹತ್ವದ ಮಾಧ್ಯಮ. ಈ ಸಾಧ್ಯತೆಯನ್ನು ಅಳೆದು ತೂಗಿ, ಪ್ರಯತ್ನಿಸಿ ಪರಾಮರ್ಶಿಸಿ ಹಲವು ಸಮರ್ಥ ಸಂಭವಗಳನ್ನು ಕಂಡುಹಿಡಿದಿದ್ದಾರೆ. ಇದರ ಬಗ್ಗೆಯೇ ಸುಮಾರು ೮೦೦ ಕಮ್ಮಟಗಳನ್ನು ನಡೆಸಿದ್ದಾರೆ. ಇದೇ ವಿಚಾರವಾಗಿ ‘ಒರಿಗಾಮಿ, ಫನ್ ಆಂಡ್ ಮ್ಯಾಥೆಮ್ಯಾಟಿಕ್ಸ್’ ಎಂಬ ಪುಸ್ತಕವನ್ನೂ ರಚಿಸಿದ್ದಾರೆ.

ಇವರು ಮಾಡುವ ಕೆಲವು ಒರಿಗಾಮಿ-ಕಿರಿಗಾಮಿ ಮಾದರಿಗಳ ರಚನೆಯ ಪ್ರಾತ್ಯಕ್ಷಿಕೆ ನೋಡುವ ಅವಕಾಶ ದೊರೆತ ನಮಗೆ, ಅದರ ಜೊತೆಜೊತೆಗೇ ಇವರಿಂದ ಒರಿಗಾಮಿ-ಕಿರಿಗಾಮಿಯ ಬಗೆಗಿನ ಕೆಲವು ವಿಶಿಷ್ಟ ಜಾಗತಿಕ ಮಾಹಿತಿಯನ್ನು ತಿಳಿಯಲು ಸಾಧ್ಯವಾಯಿತು. ‘ಪೈಥಾಗರಸ್ ಥಿಯರಂ’ನ ಅನ್ವಯಿಕೆಗೆ, ಉಪಗ್ರಹದ ಸೌರಫಲಕಗಳು ವಿಶೇಷವಾಗಿ ಮಡಚುವ ಬಗೆಗೆ ಒರಿಗಾಮಿ ಪಂಡಿತರ ಕೊಡುಗೆಯೇನು ಎಂಬ ಅಧ್ಬುತ ವಿಚಾರವನ್ನು ನವಿರು ಹಾಸ್ಯದೊಂದಿಗೆ ವಿವರಿಸಿದರು.

ಜಪಾನೀ ಕಲೆ ಎಂದೇ ಬಿಂಬಿತವಾಗಿರುವ ಒರಿಗಾಮಿ-ಕಿರಿಗಾಮಿ, ೧೮೯೩ ಇಸವಿಯಲ್ಲೇ ಭಾರತೀಯರಾದ ಟಿ.ಸುಂದರರಾವ್ ಅವರಿಗೆ ಚಿರಪರಿಚಿತವಾಗಿತ್ತು ಎಂದೂ, ಮತ್ತು ಆಗ ಒರಿಗಾಮಿ-ಕಿರಿಗಾಮಿ ಹೆಸರಿನಲ್ಲಿ ಗುರುತಿಸದೆ, ‘ಕಾಗದ ಮಡಚುವ ಕಲೆ’ ಎಂಬ ಹೆಸರಿಂದ ಪ್ರಚಲಿತವಾಗಿತ್ತು ಎಂದೂ ತಿಳಿಸಿ, ನಮ್ಮನ್ನು ಅಚ್ಚರಿಪಡಿಸಿದರು. ಆಗಲೇ ಟಿ.ಸುಂದರರಾವ್ ಅವರೇ ಈ ವಿಷಯದ ಬಗ್ಗೆ ಪುಸ್ತಕವನ್ನೂ ರಚಿಸಿದ್ದರು ಮತ್ತು ಆ ಪುಸ್ತಕ ಇಂದಿಗೂ ಮರುಮುದ್ರಿತವಾಗುತ್ತಲೇ ಇದೆ ಎಂಬುದನ್ನೂ ತಿಳಿಸಿದರು.

ಈಗ ಜಪಾನೀ ಅಂಶಗಳನ್ನೇ ಹೆಚ್ಚಾಗಿ ಹೊಂದಿರುವ ಒರಿಗಾಮಿ-ಕಿರಿಗಾಮಿಗೆ, ಭಾರತೀಯ ಗುಣಲಕ್ಷಣಗಳ ಕೊಡುಗೆ ನೀಡಿರುವ ಶಾಸ್ತ್ರಿಯವರು, ಈ ವಿಚಾರದ ಬಗ್ಗೆಯಲ್ಲದೇ, ಜನಪ್ರಿಯ ‘ವಾಟರ್ ಬಾಂಬ್ ಬೇಸ್’, ‘ ರಾಕೆಟ್ ಬೇಸ್’, ‘ಕೊಯೋಮಿಯೂರಾ ಮಡಕೆ’ಯಂತಹಾ ತಂತ್ರಗಾರಿಕೆಯ ಬಗ್ಗೆಯೂ ತಿಳಿಸಿಕೊಟ್ಟರು.

ಕೇವಲ ಒಂದು ಕಾಗದದ ಹಾಳೆ ಮತ್ತು ದಿನಪತ್ರಿಕೆಯ ತುಣುಕನ್ನು, ಇವರ ಪಳಗಿದ ಕೈಗಳ ಕೈಚಳಕ ಸುಂದರ ಹೂವಾಗಿ, ಪುಟ್ಟ ಕೀಟವಾಗಿ, ನವಿಲಾಗಿ, ಹಂಸವಾಗಿ ರೂಪಾಂತರಗೊಳಿಸುವ ಪರಿ, ನೋಡಿಯೇ ಸವಿಯಬೇಕು.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]