ಲಗ್ಗೆನುಗ್ಗುವ ಸಮಯ ಬಂದಿದೆ
ಏಳು ತುಡುಕಿರೊ ಕೈದುವ
ಬಂತು ಬಂತಾಶ್ವೀಜ ಮಾಸವು
ತಂತು ವಿಜಯೋತ್ಸಾಹವ!

ಹೂಡಿ ರಥಗಳ ತೊಡಿರೊ ಕವಚವ
ಏಳಿ, ಪೂಜಿಸಿ ಕಾಳಿಯ
ತುರಗ ಖುರಪುಟಧೂಳಿ ಏಳಲಿ
ಹೂಳಿಕೊಳ್ಳಲಿ ದೆಸೆಗಳ!

ನೆಲವೆ ಮೈಮುರಿದೆದ್ದು ನಿಂತಿದೆ
ಎತ್ತಿ ಹಸುರ ಪತಾಕೆಯ
ಹಳ್ಳ ಹೊಳೆ ಕೆರೆ ನೀರಿನಲೆಯಲಿ
ಕೇಳು ಉತ್ಸವ ಗೀತೆಯ.

ಲಗ್ಗೆ ನುಗ್ಗುವ ಸಮಯ ಬಂದಿದೆ
ಏಳಿ, ಮಸೆಯಿರೊ ಕತ್ತಿಯ
ಗಂಡುಗಲಿಗಳ ದಂಡುದಾಳಿಗೆ
ಹೊಡೆಯಿರೋ ರಣಭೇರಿಯ!-

ಸಾಕು, ಓ ಸಾಕು ನಿಲ್ಲಿಸೊ ಓ ಕವಿ,
ಯಾರು ಹೊರತಂದರಯ್ಯಾ ನಿನ್ನನು; ನಿನಗೆ ಸರಿ
ಆ ಪುರಾತನ ಪ್ರಾಚ್ಯಕೋಶಾಗಾರಗಳ ಕಗ್ಗವಿ.
‘ಕತ್ತಿ’ ‘ಕುದುರೆ’ ‘ರಣಭೇರಿ’ ‘ದಂಡು’ ‘ದಾಳಿ’
ಅಹಹ ಏನು ಕಲ್ಪನೆಯಯ್ಯ ನಿನ್ನದು
ಏನು ಪ್ರಾಸಾನುಪ್ರಾಸಗಳ ಹಳೆಯ ಮಗ್ಗ!
ಐವತ್ತು ವರುಷದ ಹಿಂದೆ ಯಾವ ಅರಮನೆಯಲ್ಲೊ
ವಂದಿಮಾಗಧನ ಕೆಲಸಕ್ಕಿದ್ದ ಸಂಸ್ಕಾರಗಳ ಹಗ್ಗ.
ಕೊಂಚ ತಡೆ; ನಿನ್ನ ಆ ದಂಡುದಾಳಿಯನೆಲ್ಲ ಅಲ್ಲೇ ಬಿಟ್ಟು
ಬಾ ಇಲ್ಲಿ ಕುಳಿತುಕೊ, ಮಾತನಾಡೋಣ.
ಏನಿದು ರಭಸ? ಏನುತ್ಸಾಹ! ಲಗ್ಗೆ ನುಗ್ಗುವುದೆಲ್ಲಿ?
ಶತ್ರುಗಳಾರು? ಪ್ರಶ್ನೆಗುತ್ತರಕೊಟ್ಟು
ಆಮೇಲೆ ಹೊರಡಬಹುದಯ್ಯ ನಿನ್ನ ಈ ಸೈನ್ಯದ ಸಮೇತ.
ಬಾ ಇಲ್ಲಿ ಕುಳಿತುಕೊ; ಪದ್ಯವನೊದರಿ
ಆಯಾಸವಾಗಿರಬೇಕು, ನನಗೆ ಗೊತ್ತು.
ಇದೆಕೊ ಬಿಸಿಬಿಸಿ ಕಾಫಿ, ಮೆದುಳಿಗೊಳ್ಳೆಯದು
ಆಯಿತೇ, ಮಾತಾಡಬಹುದೇ ನಾವಿನ್ನು ಕೂತು?
*     *     *     *
ಒಳ್ಳೆಯದು; ನೀನೆಂದಂತೆ ‘ಬಂತು ಬಂತಾಶ್ವೀಜ ಮಾಸವು’
ಯಾರಲ್ಲ ಎಂದಾರು? ಇದನು ನಾವು ನೀವೆಲ್ಲ ನಿಲ್ಲಿಸಬಹುದೆ?
ಋತುಚಕ್ರ ತಿರಗುವುದೆ ಹಾಗೆ.
ಮುಂದಿನದು ‘ಲಗ್ಗೆನುಗ್ಗುವ ಸಮಯ ಬಂದಿದೆ’;
ನಾನಿದಕೆ ಒಪ್ಪಿದೆ.
ಕೂತು ಬೇಸರವಾಗಿ ಬಳಲಿದೆ ಬದುಕು,
ಲಗ್ಗೆ ನುಗ್ಗೋಣ ಈಗಾದರೂ.
ಏನೆಂದೆ? ಕತ್ತಿ, ಕಠಾರಿ, ಖಡ್ಗ ಭಲ್ಲೆಗಳ
ಹಿಡಿಯಬಹುದೇ ಈಗ?
ಎಲ್ಲಿವೆ ಅವೆಲ್ಲ? ಮ್ಯೂಸಿಯಮ್ಮಿನ ವಸ್ತು; ಕೇಳಿದರೆ
ಒಂದೆರಡು ದಿನ ಬಾಡಿಗೆಗೆ ಕೊಟ್ಟಾರು.
ಆ ಹಳೆಯ ತುಕ್ಕೆಲ್ಲವನು ಉಜ್ಜಿ, ಮಸೆದು,
ನೀ ಹೊರಟರೀ ಬೀದಿಯಲಿ ನಕ್ಕಾರು
ಯಾರಾದರೂ!
ರಥವೆ? ಈಗದರ ಮಾತೇಕೆ? ಆ
ಮರ್ಯಾದೆಯೆಲ್ಲವೂ ಈಗ ಜಟಕಾಕ್ಕೆ.
ಕುದುರೆಯ ಬೆನ್ನೊ ಲಗತ್ತಾಗಿ ಹೋಗಿದೆ ಅದಕ್ಕೆ!
ಕತ್ತಿ ಖಡ್ಗದ ಬದಲು ಬಂದೂಕ ಹಿಡಿವುದು ಲೇಸು.
ಆದರದಕ್ಕೆಲ್ಲ ಬೇಕೀಗ ಲೈಸನ್ಸು!
ಇದಕೆಲ್ಲ ಹೆದರದೆಯೆ ಗಂಡುಗಲಿಗಳ ತಂಡ
ದಂಡುದಾಳಿಯನೆತ್ತಿ ಕತ್ತಿ ಖಡ್ಗಗಳೊಡನೆ ಹೊರಟಿತು ಎನ್ನು.
ಗೊತ್ತೆ? ಸರ್ಕಾರದವರು ನಿಮ್ಮನು ಹಿಡಿದು
ದಸ್ತಗಿರಿಮಾಡಿ ತಳ್ಳುತ್ತಾರೆ ಜೈಲಿಗೆ.
ಶಸ್ತ್ರಾಸ್ತ್ರಗಳ ಹಿಡಿದು ಹೀಗೆಲ್ಲ ಓಡಾಡುವುದು
ವಿರುದ್ಧವಯ್ಯಾ ನಮ್ಮ ಕಾನೂನಿಗೆ.
‘ಲಗ್ಗೆ ನುಗ್ಗುವ ಸಮಯ’ ಬಂತೆಂದು ಹೇಗೋ ನುಗ್ಗಿ
ಕಲ್ಲುಹಾಕದಿರಯ್ಯ ನಿನ್ನನು ನಂಬಿ ಹಿಂಬಾಲಿಸಿದ ಈ
ಬಡಪಾಯಿಗಳ ಹೊಟ್ಟೆಗೆ.
*     *     *     *
ಬೆದರಿ ಬೆಪ್ಪಾದ ಕವಿ ಕಣ್ಣುಜ್ಜಿ ನೋಡಿದನು; ಶಾಂತವಾಗಿತ್ತು
ಮೇಲಿನ ನೀಲಿ; ಬುದ್ಧಸ್ಮಿತವಾಡಿತ್ತು ಮೋಡಗಳಲಿ,
ನೆಲವ ಹಬ್ಬಿತಬ್ಬಿದ ಹಸಿರು ನಕ್ಕಿತ್ತು ಮಿದುವಾಗಿ;
ಹೊಳೆವ ಬಿಸಿಲಲಿ ತೊಳೆದ ಗರಿಗಳ ತೆರೆದು
ತೂಗಾಡಿತ್ತು ತೆಂಗಿನ ಚವರಿ.
ಲಗ್ಗೆನುಗ್ಗುವ ರಭಸ ತಗ್ಗಿತು ಕವಿಗೆ;
ನೆಲಕೆ ಧುಮುಕಿದ್ದ ಕೆಂಪುನೀರೆಲ್ಲ ತಿಳಿಯಾಗಿ
ನಿರಿನಿರಿಯಾಗಿ ನಲುಗಿತ್ತು ನಸುಗಾಳಿಗೆ.
ಮೌನವನೊಡೆದು ನಾನೆಂದೆ:
‘ಲಗ್ಗೆ ನುಗ್ಗುವ ಸಮಯ ಬಂದಿದೆ ಕವಿಯೆ,
ಲಗ್ಗೆ ನುಗ್ಗುವ ಸಮಯ ಬಂದಿದೆ’;
ಬೆಚ್ಚಿದನು ಕವಿ: “ಏನಿವನ ಮಾತು!”
ಅವನ ಮರುಮಾತಿಗೆಡೆಕೊಡದೆ ಹೇಳಿದೆನು:
“ಬೇಕು ನಮಗಿಂದಿಗೂ ಲಗ್ಗೆನುಗ್ಗುವ ಮನಸು,
ಎಷ್ಟು ಕಿತ್ತರೂ ಮತ್ತಷ್ಟು ಬೆಳೆಯುತ್ತಲೇ ಇದೆ
ಮುಗಿಯದ ಹೊಲಸು.
ನಾ ತೋರಿಸಲೆ? ಬೇಕಾಗಿಲ್ಲ ನಿನಗಿದನು ಕಾಣಿಸಲು
ದಿವ್ಯಚಕ್ಷುಸ್ಸು:
ನೂರಾರು ಹಾಲು ಬಿಳಿಕೊರಳಿನ ಸುತ್ತ ಕಂಸನ ಬೆರಳಿ-
ನೊತ್ತುಗಳ ತೋರಿಸಲೆ?
ನಕಲಿ ಪಾರ್ಥರಿಗಾಗಿ ಏಸೊ ಜನ ಏಕಲವ್ಯರ ಬೆರಳ
ಕತ್ತರಿಸುವಾಚಾರ್ಯತಂತ್ರಗಳ ಗರುಡಿಗಳ ತೋರಿಸಲೆ?
ಕೆಂಪುಟೇಪಿನ ಕೋಟೆಯಲಿ ಸೆರೆಯಾಗಿ ಬಿದ್ದಿರುವ
ನೂರಾರು ಮುಗ್ಧರದೃಷ್ಟಗಳ ತೋರಿಸಲೆ?
ಕ್ಷಣಮಾತ್ರದಲ್ಲಿ ಸ್ಮಾರಕನಿಧಿಗೆ ಗೋರಿಕಟ್ಟುವ
ಕುಶಲ ರೂವಾರಿಗಳ ತೋರಿಸಲೆ?
‘ಕ್ರೂರ ನಕ್ರಾಕುಲದೊಳಿಡಿದಿರ್ದಪೆರ್ಮಡುಗಭೀರನಿರ್ಮಲಜಲ’ದ
ಗೊತ್ತುಗಳ ತೋರಿಸಲೆ?

ಇದ್ದ ಬೆಳಕನ್ನೆಲ್ಲ ಬಚ್ಚಿಟ್ಟು, ಸುತ್ತ ಮಂಡಲ ಹಾಕಿ
ಮಲಗಿರುವ ಫಣಿಪತಿಯ ಹುತ್ತಗಳ ತೋರಿಸಲೆ?
ಹುಲ್ಲುತುರುಕಿದ ಕರುವಿನಾಕಾರಗಳ ತೋರಿ ಕೆಚ್ಚಲ ಕರೆವ
ನಿಪುಣರನು ತೋರಿಸಲೆ?
ಒಂದೆ, ಎರಡೆ? ಬೇಕಿಲ್ಲ ನಿನಗಿದನು ಕಾಣಿಸಲು
ದಿವ್ಯಚಕ್ಷುಸ್ಸು
ಹೆದರದಿರು, ಹಾಗೆಯೇ ಹೋಗಬೇಕಾಗಿಲ್ಲ ಈ ಎಲ್ಲ ಸೈನ್ಯವೂ
ವಾಪಸ್ಸು.
ಕತ್ತಿ ಖಡ್ಗಗಳೇಕೆ? ಬೇಕಾದುದೀಗ ನಿಯತ್ತು
ಹಾಗೆಯೇ ತಾಕತ್ತು.

ತಲೆ ಎತ್ತಲಿಲ್ಲ ಕವಿ; ನಿಟ್ಟುಸಿರಿಟ್ಟು ಕೇಳಿದನು:
‘ನೀನು ಯಾರು?’
‘ನಾನೆ? ನಾನೊಂದು ಹಳೆಯ ಒರೆಗಲ್ಲು;
ದಂಡು ದಾಳಿಯನೆತ್ತಿ ಹೊರಟ ಓ ವೀರ
ಮೊದಲಿದನು ಒಪ್ಪಿಸು, ಗೆಲ್ಲು!’