ದೇಶಭಾಷಾ ಬರಹಗಳು ಮತ್ತು ಸಮಾಸಶಾಸ್ತ್ರ
ಹೊಸ ಪಠ್ಯಗಳು, ಧ್ವನಿಗಳು ಮತ್ತು ಪ್ರತಿನಿಧೀಕರಣ

ನಮ್ಮ ದೇಶಭಾಷೆಗಳಲ್ಲಿ, ಮುಖ್ಯವಾಗಿ ಕಥೆ, ಕಾದಂಬರಿ, ಕಾವ್ಯ ಆತ್ಮಚರಿತ್ರೆ, ಸಾಹಿತ್ಯ ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಅಪಾರ ಪ್ರಮಾಣದಲ್ಲಿ ಸೃಜನಶೀಲವಾದ ಮತ್ತು ಜ್ಞಾನಶಿಸ್ತುಗಳ ಗಡಿರೇಖೆಗಳನ್ನು ಮೀರಿದ ಬರಹಗಳು ನಿರ್ಮಾಣವಾಗುತ್ತಿವೆ. ಆದರೆ ಸಮಾಜಶಾಸ್ತ್ರಕ್ಕೆ ಸಂಬಂಧಿಸಿದಂತೆ, ಅಂದರೆ ಸಮಾಜ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಅಲ್ಲಿ ಬರಹಗಳು ಬಹು ವಿರಳ ಮತ್ತು ಅತ್ಯಂತ ಕಡಿಮೆ. ದೇಶಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಸಮಾಜ ವಿಜ್ಞಾನ ಬರವಣಿಗೆ ವಿದ್ವಾಂಸರ ಗಮನವನ್ನು ಸೆಳೆಯುತ್ತಿಲ್ಲ ಮತ್ತು ಅವುಗಳಿಗೆ ಮನ್ನಣೆ ದೊರೆಯುತ್ತಿಲ್ಲ. ಕೆಲವು ದೇಶಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಬರಹಗಳು ಹೊಸ ಮಾರ್ಗವನ್ನು ನಿರ್ಮಿಸುತ್ತಿವೆ. ಈಗಾಗಲೆ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಅಳವಾಗಿ ಬೇರೂರಿರುವ ತಿಳುವಳಿಕೆಯನ್ನು, ಸಿದ್ಧ ಜ್ಞಾನವನ್ನು ಅವು ಪ್ರಶ್ನಿಸುತ್ತಿವೆ ಮತ್ತು ಅದಕ್ಕೆ ಪ್ರತಿಯಾಗಿ ಪರ್ಯಾಯ ಜ್ಞಾನವನ್ನು ಸೃಷ್ಟಿಸುತ್ತಿವೆ.[1] ಇಷ್ಟಾದರೂ ಅಂತಹ ಬರಹಗಳನ್ನು ‘ಸಾಹಿತ್ಯ’ವೆಂಬ ಶೀರ್ಷಿಕೆಯನ್ನು ಹಚ್ಚಿ ಮೂಲೆ ಗುಂಪು ಮಾಡಲಾಗುತ್ತಿದೆ ಮತ್ತು ಸಮಾಜವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿದ್ವಾಂಸರು ಅವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ರೀತಿಯ ಭಾರತೀಯ ಭಾಷೆಗಳಲ್ಲಿನ ಬರಹಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಭಾರತವನ್ನು ಕುರಿತಂತೆ ಸಮಾಜಶಾಸ್ತ್ರ/ಮಾನವಶಾಸ್ತ್ರಗಳಲ್ಲಿ ಬರುತ್ತಿರುವ ಇಂಗ್ಲಿಷ್ ಬರಹಗಳಿಗೆ ಒಂದು ರೀತಿಯ ಮಿತಿಯುಂಟಾಗುತ್ತಿದೆ ಮತ್ತು ದೇಶಭಾಷೆಗಳಲ್ಲಿನ ಬರಹಗಳನ್ನು ಸಮಾಜವಿಜ್ಞಾನ ಬರಹಗಳೆಂದು ಗುರಿತಿಸುವ ಸಂಭವನೀಯ ಸಾಧ್ಯತೆಯು ಕಾಣೆಯಾಗಿ ಬಿಡುತ್ತಿದೆ.

ಇದಕ್ಕೆ ಒಂದು ಉದಾಹರಣೆಯೆಂದರೆ ಕನ್ನಡ ಭಾಷೆಯಲ್ಲಿ ನಡೆದಿರುವ ಸಮಕಾಲೀನ ಬರವಣಿಗೆ. ಅಲ್ಲಿನ ಬರಹಗಳು ಭಾರತದಲ್ಲಿನ ಸಂಕೀರ್ಣ ಬದುಕನ್ನು ಕುರಿತಂತೆ ಕುತೂಹಲಕಾರಿ ಪ್ರಶ್ನೆಗಳನ್ನು ಎತ್ತುತ್ತಿವೆ. ಭಿನ್ನ ಭಿನ್ನ ಸಾಮಾಜಿಕ ಹಿನ್ನಲೆಯಿರುವ ಮತ್ತು ವಿವಿಧ ಸಾಹಿತ್ಯ ಚಳುವಳಿಗೆ ಸೇರಿರುವ ಬರಹಗಾರರು ವೈವಿಧ್ಯಮಯ ರೀತಿಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯ ಕುರಿತಂತೆ ಚಿಂತನೆ ನಡೆಸಿದ್ದಾರೆ. ಆದರೆ ಅವುಗಳು ಮೂಲೆಗುಂಪಾಗಿ ಬಿಟ್ಟಿವೆ ಮತ್ತು ಅವು ಸಮಾಜ ಮತ್ತು ಸಂಸ್ಕೃತಿ ಬಗ್ಗೆ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರಗಳಲ್ಲಿ ಇಂಗ್ಲಿಷ್ ಮೂಲಕ ನಡೆಯುತ್ತಿರುವ ಚರ್ಚೆಯ ಭಾಗವಾಗುತ್ತಿಲ್ಲ. ಸಾಮಾಜಿಕ ಟೀಕುಗಳಾದ ಈ ಕನ್ನಡ ಬರಹಗಳು ಭಾರತದ ಬದಲಾಗುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಭಿತ್ತಿಯ ಬಹುರೂಪಿ ನೆಲೆಗಳನ್ನು ತೆರೆದು ತೋರಿಸುತ್ತಿವೆ. ಸಾಮಾಜಿಕ ಸಂಕೀರ್ಣತೆಯನ್ನು ಮತ್ತು ಅದರಲ್ಲಿ ಅಂತರ್ಗತವಾಗಿರುವ ವೈರುಧ್ಯಗಳನ್ನು ಮತ್ತು ಅದರ ಕಾರಣಕರ್ತೃಗಳನ್ನು ಎತ್ತಿ ತೋರಿಸುತ್ತಿರುವ ಈ ಬರಹಗಳು ಸಾಂಸ್ಕೃತಿಕ ವಿಮರ್ಶೆಯನ್ನು ಮತ್ತು ಸಮಾಜಶಾಸ್ತ್ರೀಯ ಸೋಪಜ್ಞತೆಯನ್ನು ಸಂಯೋಜಿಸಿಕೊಂಡಿರುವಂತೆ ಕಾಣುತ್ತವೆ. ಜಾನಪದ, ಮೌಖಿಕ ಪರಂಪರೆ, ವೈಯುಕ್ತಿಕ ಅನುಭವಗಳೂ, ಅವಲೋಕನ ಮತ್ತು ಅಭಿಜಾತ ಸಾಹಿತ್ಯ – ಹೀಗೆ ವಿವಿಧ ಮೂಲಗಳಿಂದ ಒಳನೋಟಗಳನ್ನು ಪಡೆದುಕೊಂಡು ಸಿದ್ಧವಾದ ಈ ಬರಹಗಳು ಮೌಖಿಕ ಮತ್ತು ಲಿಖಿತ ಸಾಹಿತ್ಯಗಳ ಪ್ರತಿನಿಧೀಕರಣಗಳ ನಡುವಿನ ಅಂತರವನ್ನು ತುಂಬುತ್ತಿವೆ. ಇದು ವಿಶೇಷವಾಗಿ ಮುಖ್ಯ. ಬೇರೆ ಬೇರೆ ವ್ಯಕ್ತಿಗಳ ಧ್ವನಿಗಳನ್ನು, ವಿವಿಧ ವಿವಾದಗಳನ್ನು, ವಿವಿಧ ಬಗೆಯ ಪ್ರಕರಣಗಳನ್ನು, ಭಿನ್ನ ಭಿನ್ನ ಪ್ರವೃತ್ತಿಗಳನ್ನು ಮತ್ತು ಪ್ರಕ್ರಿಯೆಗಳನ್ನು ಹಿಡಿದಿಟ್ಟುಕೊಂಡಿರುವ ಮತ್ತು ಪ್ರತಿನಿಧಿಸುತ್ತಿರುವ ಈ ಬರಹಗಳನ್ನು ಇಂಗ್ಲಿಷ್‌ನಲ್ಲಿ ಬರುತ್ತಿರುವ ಸಮಾಜವಿಜ್ಞಾನ ಅಧ್ಯಯನಗಳು ಗುರುತಿಸುತ್ತಿಲ್ಲ ಮತ್ತು ಅವುಗಳ ಕುರಿತಂತೆ ಅಧ್ಯಯನ ನಡೆಯುತ್ತಿಲ್ಲ.

ಈ ಬರಹಗಳನ್ನು ಪ್ರಮುಖ ಸಮಾಜಶಾಸ್ತ್ರೀಯ ಟೀಕುಗಳೆಂದು ಅವುಗಳನ್ನು ಪ್ರತಿನಿಧಿಕವಾಗಿ ಪರಿಗಣಿಸುವ ನನ್ನ ಆಸಕ್ತಿಗೆ ಎರಡು ಕಾರಣಗಳಿರುವಂತೆ ಕಾಣುತ್ತಿದೆ. ನಾನು ನನ್ನ ಸಂಶೋಧನೆಗೆ ಸಂಬಂಧಿಸಿದಂತೆ ವಿಜಾಪುರದ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಕನ್ನಡದ ಪ್ರಸಿದ್ಧ ಸಾಹಿತಿ ಮತ್ತು ಪ್ರಕಾಶಕ ಶ್ರೀಸಿಂಪಿ ಲಿಂಗಣ್ಣ ಅವರನ್ನು ಭೇಟಿ ಮಾಡಿದ್ದು ಮೊದಲನೆಯ ಕಾರಣವಾಗಿದೆ.[2] ಅವರು ವಿಜಾಪುರ ಪ್ರದೇಶದ ಸಂಸ್ಕೃತಿ ಬಗ್ಗೆ ನೀಡುತ್ತಿದ್ದ ಸೂಕ್ಷ್ಮವಾದ ಮತ್ತು ವಿಸ್ತೃತವಾದ ವಿಮರ್ಶೆ ನನ್ನನ್ನು ದಿಗ್ಮೂಡಳನ್ನಾಗಿ ಮಾಡಿತು. ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ಬರಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರವು ನೀಡುತ್ತಿರುವ ಯೋಜನೆಗಳ ಮೇಲೆ ಜನರು ಅವಲಂಬಿತರಾಗುತ್ತಿರುವುದನ್ನು ಕಂಡು ಅವರು ಹೇಳಿದ್ದು “ತುಪ್ಪವು ನಮ್ಮ ದಾಹವನ್ನು ಹಿಂಗಿಸುತ್ತದೆಯೇ?” ಅವರು ಮಾಡುತ್ತಿದ್ದ ಜಾನಪದ ಸಾಹಿತ್ಯದ ಸಂಗ್ರಹ, ಸಂಪಾದನೆ, ವಿಮರ್ಶೆ ಮುಂತಾದ ತಮ್ಮ ಕಾರ್ಯದ ಬಗ್ಗೆ ಮಾತನಾಡುತ್ತಾ ಈ ಜ್ಞಾನದ ನಿಕ್ಷೇಪವನ್ನು ಅವರು ‘ಒಳಗನ್ನಡಿ’ಯೆಂದು ಕರೆದು ಅದು ನಮ್ಮ ಜನರ ಬದುಕಿನ ಪ್ರತಿಬಿಂಬವೆಂದು ಹೇಳಿದರು. ಅವರ ಈ ಟೀಕೆಯನ್ನು ಆಧರಿಸಿ ನಾನು ನನ್ನ ಸಂಪುಟಕ್ಕೆ ‘ಒಳಗನ್ನಡಿ’ ಎಂಬ ಶೀರ್ಷಿಕೆ ನೀಡಿದ್ದೇನೆ. ಸಮಾಜವಿಜ್ಞಾನಕ್ಕೆ ನೀಡಿದ ಕಾಣಿಕೆ ಎಂಬ ಮನ್ನಣೆಯು ಇವುಗಳಿಗೆ ಬರಲೆಂದು ನಾನು ಇಲ್ಲಿನ ಬರಹಗಳನ್ನು ಸಂಗ್ರಹಿಸಿದ್ದೇನೆ.

ಎರಡನೆಯ ಭಾರತದ ಗ್ರಾಮೀಣ ಭಾಗದಿಂದ ಮತ್ತು ಮೂಲೆಕಟ್ಟು ಪ್ರದೇಶದಿಂದ ಬರುತ್ತಿರುವ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ನಾನು ನೀಡುತ್ತಿದ್ದ ಮಾರ್ಗದರ್ಶನ ಹಾಗೂ ಬೋಧನೆಗೆ ಸಂಬಂಧಿಸಿದ ನನ್ನ ಅನುಭವ. ಇವರಲ್ಲಿ ಅನೇಕರು ಪ್ರಧಾನವಾಗಿ ದೇಶಭಾಷೆಯಲ್ಲಿ ಶಿಕ್ಷಣವನ್ನು ಮುಗಿಸಿದವರು ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಇವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇವರಲ್ಲಿ ಅನೇಕರು ನಿಜವಾಗಲೂ ಸೂಕ್ಷ್ಮ ಅರಿವುಳ್ಳವರಾಗಿರುತ್ತಾರೆ ಮತ್ತು ಅಧ್ಯಯನಗಳಲ್ಲಿ ತಮ್ಮನ್ನೂ ತಾವು ತೊಡಗಿಸಿಕೊಂಡವರಾಗಿರುತ್ತಾರೆ. ಆದರೆ ಅವರಿಗೆ ದೊರೆಯುತ್ತಿರುವ ಸಮಾಜ ವಿಜ್ಞಾನದ ಔಪಚಾರಿಕ ತರಭೇತಿ ಮತ್ತು ಅವುಗಳನ್ನು ಕುರಿತ ಪರಿಚಯವು ಅವರ ಅರ್ಥಗ್ರಹಣ ಸಾಮರ್ಥ್ಯ ಅಥವಾ ತಮ್ಮ ಸಮಾಜದಲ್ಲಿನ ಅಥವಾ ಪ್ರದೇಶದಲ್ಲಿನ ಪ್ರವೃತ್ತಿಯ ಬಗ್ಗೆ ಅವರ ಬರೆಯುವ ಸಾಮರ್ಥ್ಯದ ಮೇಲೆ ಮಿತಿಯನ್ನು ಹೇರಿ ಬಿಡುತ್ತದೆ. ಇದಕ್ಕೆ ಕಾರಣಗಳನ್ನು ನಾವು ನಮ್ಮ ಉನ್ನತ ಶಿಕ್ಷಣದಲ್ಲಿನ ಮಿತಿಗಳಲ್ಲಿ ಮತ್ತು ಸಮಸ್ಯೆಗಳಲ್ಲಿ ಹಾಗೂ ಸಮಾಜ ವಿಜ್ಞಾನಗಳ ಬೋಧನೆ ಮತ್ತು ತರಬೇತಿಗಳಲ್ಲಿನ ಪಠ್ಯಕ್ರಮ ಮತ್ತು ಪ್ರಶಿಕ್ಷಣದಲ್ಲಿ ಕಾಣಬಹುದಾಗಿದೆ.

ಭಾಷಾ ಕೊರತೆಗಳು ಮತ್ತು ಸಮಾಜ ವಿಜ್ಞಾನಗಳ ಭೋಧನೆಗೆ ಸಂಬಂಧಿಸಿದ ಅನಾನುಕೂಲಗಳು

ಬಹಳಷ್ಟು ಮಟ್ಟಿಗೆ ನಮ್ಮ ದೇಶಭಾಷೆಗಳಲ್ಲಿನ ಸಮಾಜವಿಜ್ಞಾನ ಪಠ್ಯ ಪುಸ್ತಕಗಳೂ ಅಪ್ರಸ್ತುತವಾಗಿರುತ್ತವೆ ಮತ್ತು ಅವುಗಳಲ್ಲಿ ಒಂದು ಸೈದ್ಧಾಂತಿಕ ಚೌಕಟ್ಟು ಇರುವುದಿಲ್ಲ. ಅವು ಮಕ್ಕಳಿಗೆ ಹೊಸ ವಿಚಾರಗಳನ್ನಾಗಲಿ ಅಥವಾ ಜ್ಞಾನವನ್ನಾಗಲಿ ನೀಡುವುದಿಲ್ಲ. ಅವರ ಇಂಗ್ಲಿಷ್ ಭಾಷೆಯ ಮೇಲಿನ ತಿಳುವಳಿಕೆಯು ಮೇಲು ಮೇಲಿನದ್ದಾಗಿರುವುದರಿಂದ ಇಂಗ್ಲಿಷ್‌ನಲ್ಲಿರುವ ಅಧ್ಯಯನಗಳನ್ನು ಅವರು ದಕ್ಕಿಸಿಕೊಳ್ಳಲಾಗುವುದಿಲ್ಲ. ಉನ್ನತ ಶಿಕ್ಷಣದಲ್ಲಿನ ಈ ಕೊರತೆಯನ್ನು ಸಮಾಜಶಾಸ್ತ್ರಜ್ಞರಾದ ಸಿ. ರಾಜಗೋಪಾಲನ್ ಮತ್ತು ಜಿ. ಶಿವರಾಮಕೃಷ್ಣನ್ (೨೦೦೭) ಅವರು ವಿವರವಾಗಿ ದಾಖಲಿಸಿದ್ದಾರೆ. ನಮ್ಮ ದೇಶದಲ್ಲಿ ಸಮಾಜಶಾಸ್ತ್ರದಲ್ಲಿ ಪದವೀಧರರನ್ನು ಸ್ನಾತಕೋತ್ತರ ಪದವೀಧರರನ್ನು ಮತ್ತು ಡಾಕ್ಟರೇಟುಗಳನ್ನು ಉತ್ಪಾದಿಸುವ ಕರ್ನಾಟಕದಲ್ಲಿನ ಸಮಾಜಶಾಸ್ತ್ರದ ಸ್ಥಿತಿಗತಿಯನ್ನು ಕುರಿತಂತೆ ಅಲ್ಲಿ ಅವರು ವರದಿ ಮಾಡಿದ್ದಾರೆ. ಅವರು ಟಿಪ್ಪಣಿಯಲ್ಲಿ ತಿಳಿಸಿರುವಂತೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಭಾಷೆಗೆ ಸಂಬಂಧಿಸಿದ ಜನಪ್ರಿಯ ಅಭಿಮಾನದಿಂದಾಗಿ ಇಂಗ್ಲಿಷ್ ಭಾಷೆಯಲ್ಲಿನ ಅಧ್ಯಯನಗಳನ್ನು ಓದುವ ಅಥವಾ ಅರ್ಥ ಮಾಡಿಕೊಳ್ಳುವ ಶ್ರಮವನ್ನೇ ತೆಗೆದುಕೊಳ್ಳುವ ಅಗತ್ಯ ಬರುವುದಿಲ್ಲ. ಇದರಿಂದಾಗಿ ಅವರಿಗೆ ಸೈದ್ಧಾಂತಿಕವಾಗಿ ಶಾಸ್ತ್ರವೊಂದರ ಬಗ್ಗೆ ಮೂಲಭೂತ ಜ್ಞಾನವನ್ನು ನೀಡುವ ಮತ್ತು ಅತ್ಯಂತ ಪ್ರಸ್ತುತವಾದ ಅಧ್ಯಯನಗಳನ್ನು ಅಭ್ಯಾಸ ಮಾಡುವ ಪ್ರಮೇಯ ಬರುವುದಿಲ್ಲ. ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ನಿಯಮಿಸುವ ಪಠ್ಯಕ್ರಮ ಓಬಿರಾಯನ ಕಾಲದ ಸಂಗತಿಗಳನ್ನೇ ಮಂಡಿಸುತ್ತಿರುತ್ತದೆ ಮತ್ತು ಅಪ್ರಸ್ತುತ ಮಾಹಿತಿಯನ್ನು ಒದಗಿಸುತ್ತಿರುತ್ತವೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಅವು ವಿಪುಲವಾಗಿವೆ ಹಾಗೂ ತಾವು ಬದುಕುತ್ತಿರುವ ಜಗತ್ತಿನ ಬಗ್ಗೆ ಅಥವಾ ಇತರೆ ಸಾಮಾಜಿಕ ವಾಸ್ತವಗಳ ಬಗ್ಗೆ ಏನನ್ನಾದರೂ ಹೇಳುವ ಸಾಮರ್ಥ್ಯವನ್ನು ಅವು ಒದಗಿಸುತ್ತಿಲ್ಲ. ಪ್ರಾದೇಶಿಕ ಬರವಣಿಗೆಯನ್ನು ಅಧಿಕೃತ ಸಮಾಜಶಾಸ್ತ್ರೀಯ ಬರಹಗಳೆಂದು ಗುರುತಿಸುವ ಕಾರಣ ಈ ತಾಳಮೇಳವಿಲ್ಲದ ಮತ್ತು ಅನುಷಂಗಿಕವಾದ ಮತ್ತು ಎರಡನೆಯ ದರ್ಜೆಯ ಬರವಣಿಗೆಯನ್ನು ಅವಲಂಬಿಸಿ ಕೊಳ್ಳಬೇಕಾಗುತ್ತದೆ. ಈ ಬರಹಗಳು ಅವರಿಗೆ ತಮ್ಮ ಸುತ್ತಮುತ್ತಲಿನ ಪ್ರದೇಶದ ಅಥವಾ ನಮ್ಮ ದೇಶದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಕುಶಲತೆಯನ್ನು ಒದಗಿಸುತ್ತಿಲ್ಲ ಅಥವಾ ದೇಶವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಅವು ನೀಡುತ್ತಿಲ್ಲ. ಇದರಿಂದಾಗಿ ಅನೇಕ ಅಧ್ಯಾಪಕರು ಸಮಾಜವಿಜ್ಞಾನದ ತಿಳುವಳಿಕೆಯನ್ನು ಮುದ್ದೆ ಮುದ್ದೆಯಾಗಿ ಪುನರಾವರ್ತಿಸುತ್ತಿದ್ದಾರೆ. ಅದು ಕೇವಲ ಸಿದ್ಧ ರೀತಿಯ ಸಾಮಾನ್ಯೀಕರಿಸಿದ ಅಥವಾ ಅಂಗೀಕರಿಸಲ್ಪಟ್ಟ ತಿಳುವಳಿಕೆಯನ್ನು ಮಾತ್ರ ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ.

ಕನ್ನಡದಲ್ಲಿನ ಸಮಾಜವಿಜ್ಞಾನ ಪಠ್ಯಗಳಲ್ಲಿ, ಬಹಳ ಮುಖ್ಯವಾಗಿ ಅಧಿಕೃತವಾಗಿ ನಿಯಮಿಸಿರುವ ಪಠ್ಯಪುಸ್ತಕಗಳಲ್ಲಿ ಪಶ್ಚಿಮವನ್ನು ಅಧರಿಸಿದ ದೃಷ್ಟಿಕೋನ ಮತ್ತು ಸಿದ್ಧಾಂತಗಳು ಪ್ರಧಾನವಾಗಿರುತ್ತವೆ. (ಈ ಮಾತನ್ನು ಸಾಮಾನ್ಯವಾಗಿ ಹಿಂದಿ ಮತ್ತು ಇತರೆ ದೇಶಭಾಷೆಗಳಲ್ಲಿನ ವಿಶ್ವವಿದ್ಯಾಲಯ ಪಠ್ಯಗಳ ಸ್ಥಿತಿಯ ಬಗ್ಗೆಯೂ ಹೇಳಬಹುದು). ಇದರಲ್ಲಿ ಅನೇಕ ಪಠ್ಯಗಳು ಪಾಶ್ಚಿಮಾತ್ಯ ಸಮಾಜವಿಜ್ಷಾನ ಸಿದ್ಧಾಂತಗಳಿಂದ ಎತ್ತಿಕೊಂಡ ವಿಷಯವನ್ನು ಒಳಗೊಂಡಿರುತ್ತವೆ. ಬಹಳ ಮುಖ್ಯವಾಗಿ ಅಭಿಜಾತ ಕ್ರಿಯಾಶೀಲತೆ ಅಧರಿಸಿದ ವರ್ಗೀಕೃತ ತತ್ವದಲ್ಲಿ ನೆಲೆಗೊಂಡಿರುತ್ತವೆ. ಪ್ರಬಂಧಗಳ ಸಂಕಲನಕ್ಕೆ ಬರೆದ ಮುನ್ನುಡಿಗಳಲ್ಲಿ ಮತ್ತು ಮಾನವಶಾಸ್ತ್ರೀಯ ಬರಹಗಳಲ್ಲಿ ಈಗಾಗಲೆ ತಿರಸ್ಕರಿಸಿದ ಸಂಸ್ಕೃತಿ ಕುರಿತ ನಿರ್ವಚನಗಳನ್ನು ಕನ್ನಡ ಸಮಾಜಶಾಸ್ತ್ರೀಯ ಪಠ್ಯಗಳಲ್ಲಿ ಮತ್ತು ಸಾಮಾನ್ಯವಾಗಿ ಸಮಾಜ ಮತ್ತು ಸಂಸ್ಕೃತಿ ಕುರಿತ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅವುಗಳ ಬಗ್ಗೆ ಅಧಿಕೃತ ಸ್ಥಾನ ಪಡೆದುಕೊಂಡಿರುವ ಹರ್ಸಕೋವಿಟ್ಸ್. ವೆಸ್ಲರ್, ಬೋಯಿಸ್ ಮುಂತಾದವರ ಸಿದ್ಧ ಮಾದರಿಯ ವ್ಯಾಖ್ಯೆಗಳನ್ನು ನೋಡಬಹುದಾಗಿದೆ.[3] ಕನ್ನಡದಲ್ಲಿ ಅತ್ಯಂತ ಖಚಿತವಾಗಿ ಮತ್ತು ಪ್ರಸ್ತುತವಾದ ಸಂಸ್ಕೃತ ವ್ಯಾಖ್ಯೆಗಳು ದೊರೆಯುತ್ತಿರುವಾಗ ಹೀಗೆ ಪಶ್ಚಿಮವನ್ನು ಅವಲಂಬಿಸುವುದು ಅಚ್ಚರಿ ಮೂಡಿಸುತ್ತದೆ. (ಉದಾಹರಣೆಗೆ ಡಿ.ಆರ್. ನಾಗರಾಜ್ ಮತ್ತು ರಹಮತ್ ತರೀಕೆತೆ ಅವರ ಪ್ರಬಂಧಗಳ). ಬಹುಶಿಸ್ತೀಯತೆಯ ದೃಷ್ಟಿಕೋನವಿಲ್ಲದಿರುವುದು ಮತ್ತು ಮಹಾನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳ ನಡುವಿನ ತೀವ್ರ ಭಿನ್ನತೆಗಳು ಈಗಾಗಲೆ ಇರುವ ಸಮಸ್ಯೆಗಳ ಗುಂಪಿಗೆ ಮತ್ತಷ್ಟು ಸಮಸ್ಯೆಗಳನ್ನು ಸೇರಿಸುತ್ತಿವೆ. ಉನ್ನತ ಶಿಕ್ಷಣದ ಖಾಸಗೀಕರಣದ ಭರದಲ್ಲಿ ಮತ್ತು ವೃತ್ತಿ ಶಿಕ್ಷಣವನ್ನು (ನಿರ್ದಿಷ್ಟವಾಗಿ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ) ಮೂಲ ಜ್ಞಾನಶಿಸ್ತುಗಳಿಂದ ಪ್ರತ್ಯೇಕಗೊಳಿಸಿದ ಹಿನ್ನಲೆಯಲ್ಲಿ ಉನ್ನತ ಶಿಕ್ಷಣದ ಸಮಸ್ಯೆಗಳು ಇಮ್ಮಡಿಯಾಗುತ್ತಿವೆ ಮತ್ತು ಸಮಾಜವಿಜ್ಞಾನಗಳು ಮೂಲೆಗುಂಪಾಗುತ್ತಿವೆ. ವಿದ್ಯಾರ್ಥಿಗಳು ಬರುತ್ತಿರುವುದರಿಂದ, ಪರಿಶಿಷ್ಟ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರವೇಶಿಸುತ್ತಿರುವುದರಿಂದ ಹಾಗೂ ಅವರೆಲ್ಲ ಭಾರತೀಯ ಭಾಷೆಗಳಲ್ಲಿ ಪಡೆಯುತ್ತಿರುವುದರಿಂದ ಬೋಧನಾ ಪ್ರಕ್ರಿಯೆಯು ಭಾರತೀಯ ಭಾಷೆಗಳಲ್ಲಿ ನಡೆಯಬೇಕಾಗುತ್ತದೆ ಮತ್ತು ಸಾಹಿತ್ಯ ಹಾಗೂ ಇತರೆ ಸಾಮಗ್ರಿಯನ್ನು ದೇಶಭಾಷೆಗಳಲ್ಲಿ ನೀಡಬೇಕಾಗುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳ ಬದುಕಿಗೆ ಪ್ರಸ್ತುತವಾದಂತಹ ಅನೇಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಮಂಡಿಸಲು ಸಹಾಯವಾಗುವಂತಹ ಆಕರಗಳ ವ್ಯಾಪ್ತಿಯನ್ನು ವಿಸ್ತ್ತರಿಸಬೇಕಾಗುತ್ತದೆ ಹಾಗೂ ತರಗತಿಯಲ್ಲಿನ ಬೋಧನಾ ವಿಧಾನವನ್ನು ಮತ್ತು ಇತರೆ ಚಟುವಟಿಕೆಗಳನ್ನು ಅದಕ್ಕೆ ಅನುಗುಣವಾಗಿ ರೂಪಿಸಬೇಕಾಗುತ್ತದೆ, ಉನ್ನತ ಶಿಕ್ಷಣದ ಇಂತಹ ಸಮಸ್ಯೆಗಳ ಮತ್ತು ಪ್ರವೃತ್ತಿಗಳ ಚೌಕಟ್ಟಿನಲ್ಲಿ ಪ್ರಸ್ತುತ ಭಾರತದ ಸಮಕಾಲೀನ ಸಾಮಾಜಿಕ ಮತ್ತು ಸಾಂಸ್ಕತಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ.

ಭಾರತ ಅಧ್ಯಯನದ ಮರುಸಂಘಟನೆ

ವಸಾಹಕೋತ್ತರ ಏಳನೆಯ ದಶಕಕ್ಕೆ ಕಾಲಿಟ್ಟಿರುವ ಮತ್ತು ಹೊಸ ಅರ್ಥಿಕತೆಯ ಅಕ್ಷಣಗಳು ಹೊರಹೊಮ್ಮುತ್ತಿರುವ ಸಂದರ್ಭದ ಭಾರತವನ್ನು ಹೊಸ ಕನ್ನಡಿಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅದನ್ನು ಹೊಸ ರೂಪದಲ್ಲಿ ಪ್ರತಿನಿಧಿಸಬೇಕಾಗುತ್ತದೆ ಮತ್ತು ಹೊಸ ವಿಧಾನದಲ್ಲಿ ಬೋಧಿಸಬೇಕಾಗುತ್ತದೆ. ನಿಜ, ನಮ್ಮ ಆಧುನಿಕ ವಿದ್ವಾಂಸರು ಭಾರತವನ್ನು ಹಿಂದೆ ಪರಿಭಾವಿಸಿಕೊಳ್ಳುತ್ತಿದ್ದ ಪೌರಾತ್ಯ ಪ್ರಣಾಳಿಕೆಯನ್ನು ಮತ್ತು ದೃಷ್ಟಿಕೋನವನ್ನು ಮತ್ತು ಅಮೇರಿಕೆಯ ‘ಪ್ರಾದೇಶಿಕ ಅಧ್ಯಯನ’ದ ಯಾಜಮಾನ್ಯವನ್ನು ಕಳೆದ ಕೆಲವು ದಶಕಗಳಿಂದ ಪ್ರಶ್ನೆ ಮಾಡುತ್ತಿದ್ದಾರೆ.[4] ವಸಾಹತ್ತೋತ್ತರ ಮತ್ತು ಸಾಂಸ್ಕೃತಿಕ ಅಧ್ಯಯನವೆಂಬ ಪ್ರಣಾಳಿಕೆ ಮೂಲಕ ಹಾಗೂ ಅಧುನಿಕೋತ್ತರವಾದದ ಹೆಜ್ಜೆ ಗುರುತುಗಳು ಭಾರತವನ್ನು ಕುರಿತ ಅಧ್ಯಯನಕ್ಕೆ ಹೊಸ ಬಗೆಯ ಮೂಲಗುಣ ಆಧರಿತ ಸ್ವರೂಪವನ್ನು ನೀಡಿವೆ.

ತೀವ್ರಗತಿಯಲ್ಲಿ ಬದಲಾಗುತ್ತಿರುವ ಸಂದರ್ಭವನ್ನು ಪ್ರವೃತ್ತಿಯನ್ನು ಮತ್ತು ಹೊಸ ರೀತಿಯಲ್ಲಿ ರೂಪ ಪಡೆಯುತ್ತಿರುವ ಆಕೃತಿಯನ್ನು ಎದುರಿಸುತ್ತಿರುವ ಭಾರತವನ್ನು ಕುರಿತ ಅಧ್ಯಯನ ಮತ್ತು ಪ್ರತಿನಿಧೀಕರಣಗಳಿಗೆ ಸಂಬಂಧಿಸಿದ ಯಾವುದೇ ಪ್ರಣಾಳಿಕೆಗಳನ್ನು ಮತ್ತು ದೃಷ್ಟಿಕೋನಗಳನ್ನು ರೂಪಿಸುವ ಪ್ರಯತ್ನಗಳು ಸಹಜವಾಗಿ ಮರುಚಿಂತನೆಗೆ ಮತ್ತು ಮರುಶೋಧನೆಗೆ ಒಳಗಾಗಬೇಕಾಗುತ್ತದೆ. ಅಧ್ಯಯನಕ್ಕೆ ಹಾಗೂ ಪ್ರತಿನಿಧೀಕರಣಕ್ಕೆ ಒಳಪಡಿಸಬೇಕಾದ ಇತ್ತೀಚಿಗಿನ ಕೆಲವು ಪ್ರವೃತ್ತಿಗಳೆಂದರೆ : ಗ್ರಾಮೀಣ ಜೀವನಾಧಾರ ಕುಸಿದು ಹೋಗುತ್ತಿರುವ ಇಂದಿನ ಸಂದರ್ಭವನ್ನು ಎದುರಿಸಲು ಅಗತ್ಯವಾದ ಜೀವನಾಧಾರ ತಂತ್ರಗಳು; ದುಡಿಮೆ, ಮಾಧ್ಯಮ ಮತ್ತು ಗ್ರಾಹಕೀಕರಣಗಳೆಂಬ ಜಾಗತಿಕ ಬಲೆಯಲ್ಲಿ ಭಾರತವು ಸಿಲುಕಿಕೊಳ್ಳುತ್ತಿರುವ ಸಂದರ್ಭದಲ್ಲಿ ಮರು – ಸಾಂಪ್ರದಾಯೀಕರಣ; ಪ್ರಜಾ ಪ್ರಭುತ್ವದ ಅಸ್ಫೋಟಕಾರಿ ಪ್ರವಾಹ ಮತ್ತು ಚಾರಿತ್ರಿಕ ಅನಾನುಕೂಲಗಳನ್ನು ಎದುರಿಸುತ್ತಿರುವ ಸಮುದಾಯಗಳು ಪಡೆದಿರುವ ಮೀಸಲಾತಿ ತಂತ್ರವು ಸಾಧ್ಯ ಮಾಡಿರುವ ಮತ್ತು ಆಳವಾಗಿ ಬೇರು ಬಿಡುತ್ತಿರುವ ಪ್ರಜಾಪ್ರಭುತ್ವವು ಆಗುಮಾಡಿಕೊಟ್ಟಿರುವ ಸಾಮೂಹಿಕ ರಾಜಕೀಯ ಸಂಘಟನೆಯು ಹುಟ್ಟು ಹಾಕಿರುವ ವೈರುಧ್ಯಗಳು; ಸಾಮಾಜಿಕ ಮತ್ತು ಆರ್ಥಿಕ ಅನಾನುಕೂಲಗಳು ವ್ಯಕ್ತಿಯ ನೆಲೆಯನ್ನು ಪಡೆದುಕೊಳ್ಳುತ್ತಿರುವ ಸಂದರ್ಭ ಮಾರುಕಟ್ಟೆಯು ಪ್ರತಿಷ್ಠೆಯ ಸ್ಥಾನವನ್ನು ಪಡೆದುಕೊಳ್ಳುತ್ತಿರುವ ಮತ್ತು ಪ್ರಭುತ್ವವು ಹಿಂದೆ ಸರಿಯುತ್ತಿರುವ ಸಂದರ್ಭದ ಆರ್ಥಿಕತೆಯಲ್ಲಿ ಜನರು ಭರಿಸಬೇಕಾಗಿರುವ ಹೊಸ ರೀತಿಯ ಗಂಡಾಂತರಗಲ ಸರಣಿ; ಮತ್ತು ಬದಲಾಗುತ್ತಿರುವ ಮೂಲಭೂತವಾದಿತ್ವವೆಂಬ ವಿಸ್ತೃತವಾದ ಭಿತ್ತಿಯಲ್ಲಿ ಸಂಘಟಿತವಾಗುತ್ತಿರುವ ಹೊಸ ಧಾರ್ಮಿಕ ಅನನ್ಯತೆಗಳು. ವೇಗವಾಗಿ ನಡೆದಿರುವ ಜಾಗತೀಕರಣವು ಹುಟ್ಟು ಹಾಕಿರುವ ಧೃತಗತಿಯ ಬದಲಾವಣೆಯ ಸಂದರ್ಭದಲ್ಲಿ ನಾಯಿಕೊಡೆಗಳಂತೆ ಹಬ್ಬುತ್ತಿರುವ ಮರುರೂಪೀಕರಣಕ್ಕೆ ಒಳಗಾದ ಸಾಂಸ್ಕೃತಿಕ ಆಕೃತಿಗಳು, ಹೊಸ ಸಂಸ್ಥೆಗಳ ಸರಣಿ ಮತ್ತು ಸಂಕೇತಗಳು, ಬಲಗೊಳ್ಳುತ್ತಿರುವ ಧಾರ್ಮಿಕ ಅನನ್ಯತೆಗಳು ಮುಂತಾದ ಪ್ರವೃತ್ತಿಗಳ ಮತ್ತು ಆಕೃತಿಗಳ ಕಡೆಗೆ ಗಮನ ನೀಡಬೇಕಾಗುತ್ತದೆ.

ಈ ಸಂದರ್ಭವು ಹುಟ್ಟು ಹಾಕಿರುವ ಮೌನ ಅಸಹಾಯಕತೆ ಮತ್ತು ಅಧಿಕಾರಕ್ಕೆ ಜನರು ತಮ್ಮನ್ನು ತಾವು ಒಪ್ಪಿಸಿಕೊಂಡಿರುವ ಸ್ಥತಿಯಲ್ಲಿ ಕೆಲವು ಮೂಲಭೂತ ರಚನೆಗಳ ಪುನರುತ್ಥಾನವು ಭಾರತದಲ್ಲಿ ನಡೆಯುತ್ತಿರುವ ಸಂದರ್ಭವು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಸಂಕೀರ್ಣಗೊಳಿಸಿದೆ. ಇದನ್ನು ನಾವು ಅಗತ್ಯವಾಗಿ ಅಧ್ಯಯನಕ್ಕೆ ಒಳಪಡಿಸಬೇಕಾಗುತ್ತದೆ. ಇದು ಬಹಳ ಮುಖ್ಯ. ಏಕೆಂದರೆ ವಿವಿಧ ಬಗೆಯ ಚಳುವಳಿಗಳನ್ನು ಅಧ್ಯಯನಕ್ಕೆ ಒಳಪಡಿಸುವ ಪ್ರಯತ್ನ ನಡೆದಿದೆ. ಆದರೂ ವಿರಾಟ್ ಸ್ವರೂಪದ ಸಾಂಸ್ಥಿಕ ರಚನೆಗಳು. ಅವುಗಳ ಮೂಲದಲ್ಲಿರುವ ವಿಚಾರಪ್ರಣಾಳಿಕೆ ಮತ್ತು ಅದಕ್ಕೆ ಜನರು ತಮ್ಮನ್ನು ತಾವು ಒಪ್ಪಿಸಿಕೊಳ್ಳುತ್ತಿರುವ ರೀತಿಯನ್ನು ಅರ್ಥಮಾಡಿಕೊಳ್ಳುವುದು ಇನ್ನೂ ನಮಗೆ ಸಾಧ್ಯವಾಗಿಲ್ಲ. ಸಮಸ್ಯೆಗಳನ್ನು ಗುರುತಿಸುವುದು, ಅವುಗಳ ಪ್ರವೃತ್ತಿಗಳನ್ನು ಅಧ್ಯಯನಕ್ಕೆ ಒಳಪಡಿಸುವುದು ಮತ್ತು ಅವುಗಳ ಪ್ರತಿನಿಧೀಕರಣ ನಮ್ಮ ಮುಂದಿರುವ ಸವಾಲಿನ ಒಂದು ಮುಖವಾಗಿದೆ. ಬಹು ಮುಖ್ಯವಾದ ಸವಾಲಾವುದೆಂದರೆ ಪ್ರಧಾನವಾಗಿ ಭಾರತದ ಸಮಾಜ ವಿಜ್ಞಾನಗಳು ಮತ್ತು ಅದೇ ರೀತಿಯಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ[5] ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಪ್ರಣಾಳಿಕೆಗಳನ್ನು, ದೃಷ್ಟಿಕೋನಗಳನ್ನು ಮತ್ತು ವಿಧಾನಗಳನ್ನು ರೂಪಿಸುವುದು.

ಜಾಗತಿಕ ಮತ್ತು ಇತರೆ ಮಾನವಶಾಸ್ತ್ರಗಳ ಹುಡುಕಾಟದಲ್ಲಿ

ಉನ್ನತ ಶಿಕ್ಷಣದಲ್ಲಿ ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿ ಒತ್ತಾಯಿಸುತ್ತಿರುವುದರಿಂದ ಪಾಶ್ಚಿಮಾತ್ಯ ಸಮಾಜವಿಜ್ಞಾನಗಳು ಯಾಜಮಾನ್ಯವನ್ನು ಗಳಿಸಿಕೊಂಡು ಬಿಟ್ಟಿವೆ ಮತ್ತು ಒಂದು ದೇಶದ ಸಾಮಾಜಿಕ ವಾಸ್ತವತೆಯನ್ನು ಆ ಸಮಾಜವಿಜ್ಞಾನಗಳ ಸೈದ್ಧಾಂತಿಕ ಚೌಕಟ್ಟಿನಲ್ಲಿ ನೆಲೆಗೊಳಿಸಲಾಗುತ್ತದೆ. ಈ ಬಗೆಯ ಆತಂಕವನ್ನು ಸದಾಕಾಲವೂ ವ್ಯಕ್ತಪಡಿಸುತ್ತಿದ್ದರೂ ಪರ್ಯಾಯ ಸಮಾಜವಿಜ್ಞಾನಗಳು ಯಾಜಮಾನ್ಯವನ್ನು ಸಾಧಿಸಿಕೊಳ್ಳುವುದು ಸಾಧ್ಯವಾಗಿಲ್ಲ.[6] ಸಾರಾ ಜೊಸೆಫ್ ವಿವರಿಸುವಂತೆ ಸ್ಥಳೀಯ ಭಾರತೀಯ ಸಮಾಜವಿಜ್ಞಾನದ ಅಗತ್ಯವನ್ನು ಹೇಗೆ ಒತ್ತಾಯ ಮಾಡಲಾಗುತ್ತಿದೆಯೋ ಅದಕ್ಕೆ ಸಮನಾದ ರೀತಿಯಲ್ಲಿ “ಶಿಸ್ತುಬದ್ಧವಾದ ಸೈದ್ಧಾಂತಿಕ ವಿಶ್ಲೇಷಣೆ”ಯನ್ನು ರೂಪಿಸಲು ನಮಗೆ ಸಾಧ್ಯವಾಗಿಲ್ಲ. ರಚತಾನಿಕ ನೆಲೆಯಿಂದ ಹಾಗೂ ನಮ್ಮ ಅನುಭವದಿಂದ ತಮ್ಮದೇ ದೃಷ್ಟಿಕೋನವನ್ನು ರೂಪಿಸಿಕೊಂಡ ವಿದ್ವಾಂಸರ ಗುಂಪೊಂದನ್ನು ನಮಗೆ ಗುರುತಿಸುವುದು ಸಾಧ್ಯವಾಗಿಲ್ಲ (೧೯೬೩.೧೯೯೧). ಜೆ.ಪಿ.ಎಸ್. ಒಬೆರಾಯ್, ಫರೀದ್ ಅಲಟಾಸ್ ಮತ್ತು ಇತ್ತೀಚೆಗೆ ಎಸ್.ಎನ್. ಬಾಲಗಂಗಾಧರ[7] ಅವರಂತಹ ವಿದ್ವಾಂಸರು ವಿಶಾಲವಾದ ವ್ಯಾಪ್ತಿಯಲ್ಲಿ ವಿಸ್ತೃತವಾದ ಮಾರ್ಗಸೂಚಿಗಳನ್ನು ರೂಪಿಸುತ್ತಿದ್ದರೂ ಸಹ ನಮಗೆ ಕ್ಷೇತಕ್ರಾರ್ಯ ಆಧರಿತ ಪ್ರರ್ಯಾಯವೆಂದು ಪ್ರತಿನಿಧಿಸಬಹುದಾದ ಅಥವಾ ಸ್ಥಳೀಯ ಏಷ್ಯಾ/ಭಾರತೀಯ ಸಮಾಜ ವಿಜ್ಞಾನಗಳು ರೂಪುಗೊಳ್ಳಬೇಕಾಗಿದೆ ಮತ್ತು ಹೀಗೆ ಹುಟ್ಟುಕೊಂಡಿರುವವು ಪ್ರಧಾನಧಾರೆಗೆ ಬರುತ್ತಿಲ್ಲ ಅಥವಾ ಅವು ನಮ್ಮ ಕೈಗೆ ದೊರೆಯುತ್ತಿಲ್ಲ. ಅನೇಕ ವಿದ್ವಾಂಸರು ಸಮಾಜವಿಜ್ಞಾನಗಳು ಭಾರತದಲ್ಲಿ ಹೆಚ್ಚು ಹೆಚ್ಚು ಬೌದ್ಧಿಕ ಸೃಜನಶೀಲ ಚಟುವಟಿಕೆಯಾಗಬೇಕೆಂದು ಕರೆ ನೀಡುತ್ತಿದ್ದಾರೆ. ಅದರಿಂದ ವಿವಿಧ ಬಗೆಯ ಅಡ್ಡಿಗಳನ್ನು ನಿವಾರಿಸಿಕೊಳ್ಳಬಹುದು (ಪಟೇಲ್, ೨೦೦೭).[8] ಸಿದ್ಧಾಂತ ಮತ್ತು ಅನುಭವಗಳ ನಡುವಿನ ಬಿರುಕನ್ನು ಮುಚ್ಚಬಹುದು; ಅದನ್ನು ಜನರು ಪಡೆದುಕೊಳ್ಳವಂತಿರಬೇಕು (ಗುರು ೨೦೦೨, ಪಥಿ ೧೯೮೭). ಉಳಿದವರು ಮಹಿಳಾ ಚಳುವಳಿಯ ಮೂಲಕ ರೂಪು ತಳೆದ ನೆಲಮಟ್ಟದ ಸಿದ್ಧಾಂತವನ್ನು ಸಂಯೋಜಿಸಿಕೊಳ್ಳುವ ಸಲಹೆ ನೀಡುತ್ತಿದ್ದಾರೆ (ಕಲ್ಪಾಗಮ್ ೨೦೦೨) ಮತ್ತು ಯಾವುದು ಜಾತಿ ಅಥವಾ ಲಿಂಗ ಸಂಬಂಧಗಳ ಗಡಿಯಲ್ಲಿ ನೆಲೆಗೊಂಡಿರುತ್ತದೋ ಅಂತಹ ಧ್ವನಿಗಳನ್ನು ಮತ್ತು ಅನುಭವಗಳನ್ನು ಸಂಯೋಜಿಸಬೇಕೆಂಬ ಸಲಹೆಯೂ ನಮ್ಮ ಮುಂದಿದೆ(ರೀಗೆ ೨೦೦೦).

ಈ ಸವಾಲು ವಿವಿಧ ಮುಖಗಳನ್ನು ಹೊಂದಿದೆ. ಮೊದಲೆನಯೆದು ಭಾರತೀಯ ಸಮಾಜ ಮತ್ತು ಸಂಸ್ಕೃತಿಗಳ ಅಧ್ಯಯನಗಳನ್ನು ಯುರೋ – ಅಮೇರಿಕನ್ ಬೌದ್ಧಿಕ ಅಳ್ವಿಕೆಯಿಂದ ಹೇಗೆ ಹೊರತರುವುದು? ಎರಡನೆಯದು ಭಾರತೀಯ ಸಮಾಜದ ವಿಶಿಷ್ಟತೆಗಳನ್ನು ತುಲನಾತ್ಮಕ ನೆಲೆಗಳನ್ನು ಒಳಗೊಂಡಂತೆ ತನ್ನದೇ ಆದ ನುಡಿಗಟ್ಟು ಪರಿಭಾಷೆ, ವ್ಯಾಪ್ತಿ, ಪ್ರಮೇಯಗಳಲ್ಲಿ ಹೇಗೆ ಅಧ್ಯಯನ ಮಾಡುವುದು ಮತ್ತು ಪ್ರತಿನಿಧೀಕರಿಸುವುದು? ಮೂರನೆಯದಾಗಿ ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ ವಿದ್ವಾಂಸರು ವಿವಿಧ ವಿಚಾರ ಪ್ರಣಾಳಿಕೆ ಗುಂಪುಗಳಾಗಿ ಒಡೆದು ಹೋಗಿರುವ ಸಂದರ್ಭದಲ್ಲಿ (ಮಹಾನಗರ ಮತ್ತು ಸ್ಥಳೀಯತೆ ನಡುವೆ, ಇಂಗ್ಲಿಷ್ ಮತ್ತು ದೇಶಭಾಷೆಗಳಲ್ಲಿನ ಪಠ್ಯಗಳ ನಡುವೆ, ಸ್ಥಳೀಯವಾಗಿ ಬಳಸಿಕೊಳ್ಳಲು ಅದನ್ನು ಉತ್ಪಾದಿಸುವುದು ಮತ್ತು ಜಾಗತಿಕ ಶೈಕ್ಷಣಿಕ ಹರಿಯ ಜೊತೆ ಸಂಯೋಜಿಸುವುದರ ನಡುವೆ) ಆ ಒಡಕುಗಳನ್ನು ಹೇಗೆ ಒಟ್ಟುಗೂಡಿಸುವುದು?

ಈ ಸಮಸ್ಯೆಗಳನ್ನು ಎದುರಿಸುವಾಗ ಸಮಾಜವಿಜ್ಞಾನಗಳು, ಮುಖ್ಯವಾಗಿ ಸಮಾಜಶಾಸ್ತ್ರ ಮತ್ತು ಸಾಮಾಜಿಕ ಮಾನವಶಾಸ್ತ್ರ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತಾವು ವಿವಿಧ ಸಂಸ್ಥೆಗಳ ನಡುವೆ ಸ್ಥಳಾವಕಾಶ ಮಾಡಿಕೊಳ್ಳಬೇಕಾಗುತ್ತದೆ. ವಿವಿಧ ಭಾಷೆಗಳಲ್ಲಿನ ವಿವಿಧ ಜ್ಞಾನ ಭಂಡಾರವನ್ನು ಮಾಹಿತಿ ಸಂಗ್ರಹಕಾರರಾಗಿ ಅಥವಾ ಸಂದಾನಕಾರರಾಗಿ ಕೆಲಸ ಮಾಡುವುದಕ್ಕೆ ಪ್ರತಿಯಾಗಿ ಸಹಸಂಶೋಧಕರಾಗಿ ಆ ಜ್ಞಾನವನ್ನು ಗುರುತಿಸಬೇಕಾಗುತ್ತದೆ. ಇಲ್ಲಿ ಸಾಧ್ಯವಾಗಬಹುದಾದ, ಅದಕ್ಕಿಂತಲೂ ಪ್ರಸ್ತುತವಾಗಬೇಕಾಗಿರುವುದು ಸ್ಥಳೀಯವಾದ ಶುದ್ಧ ಸಮಾಜವಿಜ್ಞಾನ ಅಥವಾ ಸಮಾಜಶಾಸ್ತ್ರ/ಸಾಮಾಜಿಕ ಮಾನವಶಾಸ್ತ್ರವಲ್ಲ. ನಮಗೆ ಅಗತ್ಯವಾದುದು ಸ್ವವಿಮರ್ಶಾತ್ಮಕವಾದ, ಸಂವೇಧನಾಶೀಲವಾದ ಮತ್ತು ಪ್ರತಿನಿಧೀಕರಿಸಬಹುದಾದ ಜ್ಞಾನದ ಕೋಶವನ್ನು ರೂಪಿಸಬೇಕಾಗುತ್ತದೆ. ಈ ಬಗೆಯಲ್ಲಿ ಮಾತ್ರ ಸಮಾಜವಿಜ್ಞಾನಗಳು ಪ್ರಸ್ತುತ ಎದುರಿಸುತ್ತಿರುವ ವಿವಿಧ ಬಗೆಯ ಸಮಸ್ಯೆಗಳನ್ನು ಅವುಗಳ ಬೋದನಾ ವಿಧಾನವನ್ನು. ಅವುಗಳ ಪರಿಣಾಮಗಳನ್ನು ಮತ್ತು ಅವುಗಳ ರೂಪುಗೊಂಡಿರುವ ವಿನ್ಯಾಸವನ್ನು ಮೀರಬಹುದು.

ಸಮಾಜಶಾಸ್ತ್ರ ಮತ್ತು ಸಾಮಾಜಿಕ ಮಾನವಶಾಸ್ತ್ರಗಳನ್ನು ಬಹುರೂಪೀಕರಣಕ್ಕೆ ಒಳಪಡಿಸುವ ದಿಶೆಯಲ್ಲಿ ರೆಸ್ಟ್ರಪೋ ಮತ್ತು ಈಸ್ಕೋಬಾರ್ ಅವರು ಪ್ರತಿಪಾದಿಸುತ್ತಿರುವ “ವಿಶ್ವಾತದಮಕ ಮಾನವಶಾಸ್ತ್ರ”ದಿಂದ ಮಾರ್ಗದರ್ಶನವನ್ನು ಪಡೆಯಬಹುದು. ಈ ವಿಶ್ವಾತ್ಮಕ ಮಾನವಶಾಸ್ತ್ರವು ವಿವಿಧ ಮಾನವಶಾಸ್ತ್ರಜ್ಞರು ಮತ್ತು ಮಾನವಶಾಸ್ತ್ರ ಸಮುದಾಯಗಳ ನಡುವಿನ ಚಾರಿತ್ರಕ, ಸಾಮಾಜಿಕ ಮತ್ತು ರಾಜಕೀಯ ಸ್ಥಳೀಯತೆಯನ್ನು ವೈವಿಧ್ಯತೆಗಳನ್ನು ಮತ್ತು ವೈರುಧ್ಯಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ (೨೦೦೫;೧೦೦).

ಕೆಳಕಂಡ ಗುಣಗಳನ್ನು ಹೊಂದಿರುವ ಈ ಬಗೆಯ ವಿಶ್ವಾತ್ಮಕ ಮಾನವಶಾಸ್ತ್ರವು ನಮಗೆ ಮಾರ್ಗದರ್ಶನವನ್ನು ನೀಡಬಹುದು.

೧. ತನ್ನ ಶಿಸ್ತಿನ ಪಠ್ಯಗಳಲ್ಲಿ ಪ್ರತಿಪಾದಿತವಾದ ಕುಲಶಾಸ್ತ್ರವನ್ನು ಸಮಾಜವಿಜ್ಞಾನಗಳು ತಮ್ಮ ದೃಷ್ಟಿಕೋನದಲ್ಲಿ ಪ್ರತಿಪಾದಿಸಲು ಅವಕಾಶ ನೀಡುತ್ತದೆ.

೨. ಸಂಪೂರ್ಣವಾಗಿ ರಾಜಕೀಯ ಸಂದರ್ಭದ ಚೌಕಟ್ಟಿನಲ್ಲಿ ಮತ್ತು ಎಲ್ಲದರಿಂದ ಅನ್ಯವಾಗದಂತೆ ನೋಡಿಕೊಳ್ಳುತ್ತದೆ.

೩. ಈ ಶಾಸ್ತ್ರವನ್ನು ತನ್ನದೇ ಆದ ಜ್ಞಾನದ ಉತ್ಪಾದನೆಯ ಶಾಸ್ತ್ರವೆಂದು ಪರಿಗಣಿಸುವ ಮತ್ತು ಮಾನವಶಾಸ್ತ್ರವನ್ನು ಕೇವಲ ವರ್ಗೀಕರಿಸುವ ಹಾಗೂ ಉತ್ಪನ್ನೀಕರಣಗೊಳಿಸುವ ಸೀಮಿತತನದಿಂದ ತಪ್ಪಿಸುತ್ತದೆ (೨೦೦೫;೧೧೮)

ಈ ಬಗೆಯ ಸೂಚನೆಗಳನ್ನು ಗಮನಿಸಿಕೊಂಡು ಮತ್ತು ಶುದ್ಧಾಂಗವಾದ ಸ್ಥಳೀಯತೆಯ ಮಾರ್ಗವನ್ನು ಬಿಟ್ಟುಕೊಟ್ಟು ಭಾರತೀಯ ಸಮಾಜಶಾಸ್ತ್ರವನ್ನು/ಸಾಮಾಜಿಕ ಮಾನವಶಾಸ್ತ್ರವನ್ನು ಬಹುರೂಪೀಕರಣಗೊಳಿಸುವ ದಿಶೆಯಲ್ಲಿ ನಡೆಸಬಹುದಾದ ಒಂದು ಪ್ರಯತ್ನವೆಂದರೆ ಪ್ರದೇಶಿಕ ಭಾಷೆಗಳಲ್ಲಿ ಅಂದರೆ ಸರಿಯಾಗಿ ಹೇಳಬೇಕಾದರೆ ದೇಶಭಾಷೆಗಳಲ್ಲಿ ನಡೆಯುವ ಬರವಣಿಗೆಗಳಿಗೆ ಮನ್ನಣೆ ನೀಡುವುದು.

ಹೊಸ ಪಠ್ಯಗಳು, ಹೊಸ ಧ್ವನಗಳು ಮತ್ತು ವಪ್ರತಿನಿಧೀಕರಣ

ಭಾರತೀಯ ಸಮಾಜಶಾಸ್ತವನ್ನು ಬಹುರೂಪೀಕರಣಕ್ಕಿಳಿಸುವ ಒಂದು ಕ್ರಮವೆಂದರೆ ಪಶ್ಚಿಮದಿಂದ ದತ್ತವಾದ ಸಿದ್ಧಾಂತಗಳ ಚೌಕಟ್ಟಿನ್ನು ಮೀರಿದ ಮತ್ತು ಶುದ್ಧವಾದ ಸಾಹಿತ್ಯ ವಿಮರ್ಶೆಯೂ ಅಲ್ಲದ ವೈವಿದ್ಯಮಯವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯವಸ್ತುಗಳನ್ನು ಕುರಿತಂತೆ ಚರ್ಚೆ ಮಾಡುವ ಭಾರತೀಯ ಭಾಷೆಗಳ ಬರವಣಿಗೆಗಳನ್ನು ಸಮಾಜವಿಜ್ಞಾನದ ವ್ಯಾಪ್ತಿಯಲ್ಲಿ ಸೇರಿಸಿಕೊಳ್ಳುವುದು ಈ ಅಧ್ಯಯನ ಪ್ರಬಂಧಗಳು ಭಾರತದಲ್ಲಿ ಸಮಾಜವಿಜ್ಞಾನಗಳ ಉತ್ಪಾದನೆ ಮತ್ತು ಆಚರಣೆಗಳಲ್ಲಿ ಬದಲಾವಣೆ ತರುವುದಕ್ಕೆ ಆರಂಭಿಕ ಹಂತದ ಪಠ್ಯಗಳಾಗಿ ಕೆಲಸ ಮಾಡಬಹುದು. ಈ ಬಗೆಯ ಬರವಣಿಗೆಗಳು ಚಾರಿತಿಕ – ಮಾನವಶಾಸ್ತ್ರೀಯವಾಗಿ ಸ್ವಂತದ ಚಿಂತನೆಗೆ ಆಕರಗಳಾಗಬಹುದು. ಅವು ಜ್ಞಾನದ ಉತ್ಪಾದನೆಗೆ ಸಂಬಂಧಿಸಿದ ಸಿದ್ಧ ಮಾದರಿಯ ಕ್ರಮಗಳನ್ನು ನಿರ್ಲಪ್ತಗೊಳಿಸಿ ಬಿಎಬಹುದು (ಪೋಲಕ್ : ೧೯೯೮;೬೮) ಆದ್ದರಿಂದ ಅಭಿಜಾತ ಸ್ವರೂಪದ ದೃಷ್ಟಿಕೋನವನ್ನು ಮತ್ತು ಹರವನ್ನು ಹೊಂದಿರುವ ಹಾಗೂ ಸಮಾಜವಿಜ್ಞಾನ ಭಂಡಾರಕ್ಕೆ ಮತ್ತು ಅದರ ಬೋಧನಾ ಕ್ರಮಗಳಿಗೆ ಅಪಾರ ಕಾಣಿಕೆ ನೀಡಬಹುದಾದ ಇಂತಹ ಅಧ್ಯಯನ ಪ್ರಬಂಧಗಳಿಗೆ ನಾವು ಮನ್ನಣೆಯನ್ನು ನೀಡಬೇಕು ಮತ್ತು ಅವುಗಳನ್ನು ಅಂತರ್ಗತ ಮಾಡಿಕೊಳ್ಳಬೇಕಾಗುತ್ತದೆ.

ಭಾರತೀಯ ಭಾಷೆಗಳಲ್ಲಿನ ಅಧ್ಯಯನ ಪ್ರಬಂಧಗಳು ನಮ್ಮ ಜನರ ಜೀವನವನ್ನು ಕುರಿತಂತೆ ಸೂಕ್ಷ್ಮವಾದ ಮತ್ತು ಸಂಕೀರ್ಣವಾದ ಸಂಗತಿಗಳನ್ನು ಒಳಗೊಂಡಿರುವುದರಿಂದ ಅವು ನಮ್ಮ ಪ್ರಾದೇಶಿಕ ಜೀವನವನ್ನು ಮತ್ತುಯ ಸಮಾಜವನ್ನು ಕುರಿತಂತೆ ಅಳವಾದ ಮತ್ತು ವಿಭಿನ್ನವಾದ ತಿಳುವಳಿಕೆಯನ್ನು ನೀಡಬಹುದು. ಇವುಗಳನ್ನು ಕುಲಶಾಸ್ತ್ರೀಯ ಜ್ಞಾನಕ್ಕೆ ಪೂರಕವಾದುದೆಂದು ಪರಿಗಣಿಸಬಹುದು. ಅವು ಸಂದರ್ಶಕ ಪ್ರಧ್ಯಾಪಕರು ಅಥವಾ ಅವಲೋಕನ ಮಾಡುವ ಮಾನವಶಾಸ್ತ್ರಜ್ಞರು ನೀಡಬಹುದಾದ ಹರವನ್ನು ಮಾತ್ರ ನೀಡುವುದಿಲ್ಲ. ಅದಕ್ಕೆ ಪ್ರತಿಯಾಗಿ ಅವು ಸೂಕ್ಷ್ಮ ಅವಲೋಕನಕಾರರ. ಸಹಭಾಗಿಗಳ, ವಿಮರ್ಶಕರ ಮತ್ತು ವ್ಯಾಖ್ಯಾನಕಾರರ ಒಳನೋಟಗಳನ್ನು ನೋಡುತ್ತದೆ. ಸಮಾಜಶಾಸ್ತ್ರೀಯ ಮತ್ತು ಮಾನವಶಾಸ್ತ್ರೀಯ ಸಂಕಥನವನ್ನು ಬೆಳೆಸಲು ಇಂತಹ ಪ್ರಬಂಧಗಳನ್ನು ಅಂತರ್ಗತ ಮಾಡಿಕೊಳ್ಳುವುದರಿಂದ ವಸಾಹತೋತ್ತರ ಮಾನವಶಾಸ್ತ್ರವು ಒಡ್ಡಿರುವ “ಎಲ್ಲ ಬಗೆಯ ಜ್ಞಾನವನ್ನೂ ಸ್ಥಳೀಯ ಜ್ಞಾನವೆಂಬ, ಅವು ಕ್ಷೇತ್ರಕಾರ್ಯದ ಮಾಹಿತಿಯನ್ನು ಆಧರಿಸಬೇಕೆಂಬ, ಸೈದ್ಧಾಂತಿಕವಾಗಿ ಜೀವಂತವಾಗಿರಬೇಕೆಂಬ. ಸ್ಥಳೀಯವಾಗಿ ನೆಲೆಗೊಂಡಿರಬೇಕೆಂಬ” ಸವಾಲನ್ನು ಎದುರಿಸಲು ನೆರವಾಗಬಹುದು (ಡ್ರಿಕ್ಸ್; ೨೦೦೧, ೨೪೭) ಈ ಸಂಪುಟಕ್ಕಾಗಿ ಸಂಪಾಧಿಸಿರುವ ಮತ್ತು ಆಯ್ಕೆ ಮಾಡಿಕೊಂಡಿರುವ ಪ್ರಬಂದಗಳು ಭಾರತೀಯ ಸಮಾಜಶಾಸ್ತ್ರವನ್ನು ಬಹುರೂಪೀಕರಣಗೊಳಿಸಲು ಮತ್ತು ಒಂದು ಜ್ಞಾನಶಿಸ್ತಾಗಿ ಅದರ ಜ್ಞಾನದ ಹರವನ್ನು ವಿಸ್ತೃತಗೊಳಿಸಲು ಅಗತ್ಯವಾದ ನಿರ್ದೇಶನವನ್ನು ಮತ್ತು ವಿಚಾರಗಳನ್ನು ನೀಡಬಲ್ಲವು ಎಂಬುದನ್ನು ಸೂಕ್ಷ್ಮವಾಗಿ ಗುರುತಿಸಬಹುದು.

ಕರ್ನಾಟಕದಲ್ಲಿ ಪ್ರಾದೇಶಿಕ ಅನನ್ಯತೆಗಳ ಮತ್ತು ಅದಕ್ಕೆ ಸಂಬಂಧಿಸಿದ ಹಕ್ಕುಗಳ ಪ್ರಶ್ನೆಗಳು ಮುಂಚೂಣಿಗೆ ಬಂದಿರುವುದರಿಂದ ಈ ಬಗೆಯ ಪ್ರಬಂಧಗಳನ್ನು ಪರಿಶೀಲಿಸುವುದು ಸೂಕ್ತವೆಂದು ಕಾಣುತ್ತದೆ. ಕರ್ನಾಟಕದಲ್ಲಿನ ಇತ್ತೀಚಿಗಿನ ಬೆಳವಣಿಗೆಗಳು ಸೂಚಿಸುವಂತೆ ಇಲ್ಲಿ ಕನ್ನಡ ಸಂಸ್ಕೃತಿಯನ್ನು ಮತ್ತು ಕನ್ನಡಿಗರ ಹೆಮ್ಮೆಯನ್ನು ಪೋಷಿಸುವ ಉದ್ದೇಶದಿಂದ ಅನೇಕ ಪ್ರಾಂತೀಯ ಮತ್ತು ಭಾಷಾಂಧತೆಯ ಸಂಸ್ಥೆಗಳು ಹುಟ್ಟಿಕೊಂಡಿವೆ. ರಾಜ್ಯದಲ್ಲಿ ಕಂಡುಬರುತ್ತಿರುವ ಕನ್ನಡೇತರರ ಮತ್ತು ಉನ್ನತ ವರ್ಗದ ಅಧಿಕಾರವನ್ನು ಹತ್ತಿಕ್ಕಿ ಕನ್ನಡ ಪ್ರಾಂತೀಯ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದ ನಾಗರೀಕ ಸಮಾಜ ಸಂಘಟನೆಗಳೆಂದು ಹೇಳಿಕೊಳ್ಳುವ ಸಂಸ್ಥೆಗಳು ಹುಟ್ಟುಕೊಳ್ಳುತ್ತಿವೆ. ಮಾಹಿತಿ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಮತ್ತು ಜಾಗತೀಕರಣಗೊಂಡು ಮಹಾನಗರವಾಗಿ ಬೆಳೆಯುತ್ತಿರುವ ಬೆಂಗಳೂರು ಸಹ ಪ್ರಾದೇಶಿಕವಾಗಿ ಜನರ ಆಕಾಂಕ್ಷೆ ಮತ್ತು ಅವರ ನಿರೀಕ್ಷೆಗಳಿಂದ ದೂರ ಸರಿಯುತ್ತಿರುವ ಅರೆ ರಾಜಕೀಯ ಗುಂಪುಗಳು (ಅನೇಕ ಸಂಸ್ಥೆಯನ್ನು ತಮ್ಮನ್ನು ತಾವು ಈಗ ಸೇನೆಗಳೆಂದು, ಉದಾಹರಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಕರೆದುಕೊಳ್ಳುತ್ತಿವೆ) ಹುಟ್ಟಿಕೊಳ್ಳುತ್ತಿವೆ. ಅವುಗಳು ಉಗ್ರವಾಗಿ ಒತ್ತಯಿಸುತ್ತಿರುವ ಕನ್ನಡಿಗರಿಗೆ ಉದ್ಯೋಗ ಮೀಸಲಿಡಬೇಕು. ಕನ್ನಡವನ್ನು ಶಾಲೆಗಳಲ್ಲಿ ಬೋದನಾ ಮಾಧ್ಯಮ ಮಾಡಬೇಕು, ಕಾವೇರಿ ನದಿಯಲ್ಲಿನ ನೀರಿನಲ್ಲಿ ಕರ್ನಾಟಕದ ಪಾಲಿಗಾಗಿ ಹೋರಾಟ ಮಾಡುವುದು ಮುಂತಾದವು ಮತ್ತು ಪಬ್ ಸಂಸ್ಕೃತಿಯ ಅಸಹ್ಯ ಪ್ರದರ್ಶನದ ವಿರುದ್ಧದ ‘ಸಂಸ್ಕೃತಿ ರಕ್ಷಣೆಗಾರ’ರ ಅಬ್ಬರ ಮುಂತಾದವುಗಳನ್ನು ಕರ್ನಾಟಕ ರಾಜ್ಯವನ್ನು ಪ್ರಮುಖವಾಗಿ ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂದಿಸಿದ ಭಾರತದ ಜಾಗತಿಕ ಅರ್ಥಿಕತೆಯ ತೊಟ್ಟಿಲನ್ನಾಗಿ ಮಾಡುವ ಪ್ರಯತ್ನಕ್ಕೆ ಎದುರಾಗಿ ಉದ್ಬವಿಸುತ್ತಿರುವ ಪಾದೇಶಿಕ ರಾಷ್ಟ್ರೀಯತೆಯ ನಿದರ್ಶನವಾಗಿ ಪರಿಗಣಿಸಬಹುದು.

ಡಿ.ಆರ್. ನಾಗರಾಜ್ ಮತ್ತು ಕೆ.ವಿ.ನಾರಾಯಣ ಅವರ ಪ್ರಬಂಧಗಳನ್ನು ಇಂದು ತಲೆಯೆತ್ತುತ್ತಿರುವ ಪ್ರಾಂತೀಯತೆಯನ್ನು ಪ್ರತಿಪಾದನೆ ಮತ್ತು ರಾಷ್ಟ್ರೀಯ ಸಂಘಟನೆ ಎಂಬ ನುಡಿಗಟ್ಟುಗಳು ತಮ್ಮಷ್ಟಕ್ಕೆ ತಾವು ಏನನ್ನು ಒತ್ತಾಯಿಸುತ್ತಿವೆಯೋ ಆ ತರ್ಕದ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳಬೇಕು. ಡಿ.ಆರ್. ನಾಗರಾಜ್ ತಮ್ಮ ಅನುಕರಣೀಯ ಶೈಲಿಯಲ್ಲಿ ಎರಡು ಬಗೆಯ ರಾಷ್ಟ್ರೀಯತೆಗಳನ್ನು ಗುರುತಿಸುತ್ತಾರೆ : ಮೊದಲನೆಯದು ‘ಆತಂಕ ಕೇಂದ್ರಿತ ರಾಷ್ಟ್ರೀಯತೆ’ ಮತ್ತು ಎರಡನೆಯ ಆಧ್ಯಾತ್ಮಿಕ ರಾಷ್ಟ್ರೀಯತೆ’ ಇವೆರಡರ ನಡುವಿನ ಸಂಬಂಧಗಳ ನೆಲೆಯಲ್ಲಿ ಹುಟ್ಟಿಕೊಳ್ಳುವ ಬಿಕ್ಕಟ್ಟನ್ನು ಅವರು ಗುರುತಿಸುತ್ತಾರೆ. ಇತ್ತೀಚಿಗೆ ಕಂಡು ಬರುತ್ತಿರುವ ಕರ್ನಾಟಕದ ಕನ್ನಡಗರಿಗೆ ಮಾತ್ರ ಎನ್ನುವ ಸೀಮಿತತೆಯ ಪ್ರಣಾಳಿಕೆಯನ್ನು ಪ್ರತಿಪಾದಿಸುತ್ತಿರುವ ಕನ್ನಡ ಚಳುವಳಿಗಳನ್ನು ತಿರಸ್ಕರಿಸುವ ಅವರು ೧೯೭೦ರ ದಶಕದ ಪ್ರಮುಖ ಚಿಂತಕ ಅಲೂರು ವಿಕಟರಾಯರ ವಿಚಾರಗಳಾದ ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರೀಯತೆ ಮತ್ತು ಭಾಷೆ, ಪ್ರಾಂತ ಮತ್ತು ಬದುಕನ್ನು ವ್ಯಕ್ತಿಯೊಬ್ಬ ತನ್ನಲ್ಲಿ ಒಂದು ಮಾಡಿ ನೋಡುವ ಸಮಷ್ಠಿ ಅನನ್ಯತೆಗಳನ್ನು ಪ್ರತಿಪಾದಿಸುತ್ತಾರೆ. ಪ್ರಾಂತೀಯ ರಾಷ್ಟ್ರೀಯತೆಯು ಪ್ರತಿಪಾದಿಸುವ ಉಗ್ರತೆಗೆ ಎದುರಾಗಿ ನಾಗರಾಜ್ ಸಂಸ್ಕೃತಿಯ ನಿರಂತರೆಯ ಗುರುತುಗಳಾದ ಆಟಗಳು, ಹಬ್ಬಗಳು, ಆಹಾರ ಪದ್ಧತಿ ಮುಂತಾದವುಗಳ ಮಹತ್ವದ ಕಡೆ ನಮ್ಮ ಗಮನ ಸೆಳೆಯುತ್ತಾರೆ.

ಪ್ರಾಂತೀಯ ಭಾಷೆಯನ್ನು ಉಳಿಸಿಕೊಂಡು ಮತ್ತು ಸಂರಕ್ಷಸಿಕೊಂಡು ಜೊತೆಗೆ ಸಂಪರ್ಕ ಭಾಷೆಯಾಗಿ ಮತ್ತು ಜಾಗತೀಕರಣದ ಮಾಧ್ಯಮವಾಗಿ ಇಂಗ್ಲಿಷ್‌ನ ಜೊತೆಯಲ್ಲಿ ವ್ಯವಹರಿಸುವ ಅಗತ್ಯವನ್ನು ಕೆ.ವಿ.ನಾರಾಯಣ ತಮ್ಮ ‘ಕನ್ನಡದ ಹೆಮ್ಮೆ ಇಂಗ್ಲಿಷ್‌ನ ಪೂರ್ವಗ್ರಹ’ ಎನ್ನುವ ಪ್ರಬಂಧದಲ್ಲಿ ಚರ್ಚಿಸಿದ್ದಾರೆ. ಕನ್ನಡ ಭಾಷೆಯು ಎದುರಿಸುತ್ತಿರುವ ಆತಂಕಗಳನ್ನು ಗುರುತಿಸುತ್ತಾ ಅವರು ಪ್ರಾಂತ, ಭಾಷೆ ಮತ್ತು ಅನನ್ಯತೆ ಅಥವಾ’ಕರ್ನಾಟಕ. ಕನ್ನಡ, ಕನ್ನಡಿಗ’ ಎಂಬ ಸಂಗತಿಗಳ ಜೊತೆಯಲ್ಲಿ ಅದರ ಸಂಬಂಧವನ್ನು ಗುರುತಿಸಲು ಪ್ರಯತ್ನಿಸುತ್ತಾರೆ. ಅವರು ಸೂಕ್ಷ್ಮವಾಗಿ ಪ್ರತಿಪಾದಿಸುವಂತೆ ಇಂದು ಕನ್ನಡವು ಎದುರಿಸುತ್ತಿರುವ ಆತಂಕಗಳ ಹಿನ್ನಲೆಯಲ್ಲಿ ಅದರ ಪೋಷಣೆ ಮತ್ತು ರಕ್ಷಣೆಯು ಪ್ರಯತ್ನಗಳು ವಿಸ್ತರಿಸುತ್ತಿರುವ ಜಾಗತೀಕರಣದ ಮತ್ತು ಸಾಹಸಮಯ ಆಧುನಿಕ ಜಗತ್ತಿನ ಸಂದರ್ಭದಲ್ಲಿ ವಿಶ್ವಾತ್ಮಕ ಭಾಷೆಯಾದ ಇಂಗ್ಲಿಷ್‌ಗೆ ಅದು ತಲೆ ಬಾಗುವುದು ಅನಿವಾರ್ಯ. ಇದೇ ದಾಟಿದಲ್ಲಿ ಮೊಗಳ್ಳಿ ಗಣೇಶ ಅವರು ಕೆ.ವಿ. ನಾರಾಯಣ ಅವರು ಭಾಷೆಗೆ ಸಂಬಂಧಿಸಿದ ಬಿಕ್ಕಟ್ಟುಗಳ ಸಂಕೀರ್ಣತೆಯ ವಿವರಣೆಗೆ ಪೂರಕವಾಗಿ ದಲಿತರಿಗೆ ಇಂಗ್ಲಿಷ್ ಬಿಡುಗಡೆಯ ಆಕರವಾಗಬಹುದು ಎಂದಿದ್ದಾರೆ. ಇಂಗ್ಲಿಷ್ ಸಮಾಜಶಾಸ್ತ್ರದಲ್ಲಿ ಸಂಪೂರ್ಣವಾಗಿ ಕಾಣೆಯಾಗಿರುವ ಒಂದು ವಿಷಯವಸ್ತುವಾಗಿ ಭಾಷಾ ಸಮಾಜಶಾಸ್ತ್ರ ಕುರಿತ ಚರ್ಚೆಯನ್ನು ಇವೆರಡೂ ಲೇಖನಗಳು ಪ್ರತಿನಿಧಿಸುತ್ತವೆ. ಎಂದು ಭಾವಿಸಬಹುದು.

ಉಡುಪಿಯಲ್ಲಿ ಉದ್ವೇಗ ಮತ್ತು ಬಿಕ್ಕಟ್ಟು ಇದ್ದ ಸಂದರ್ಭದಲ್ಲಿ ಬರೆದ ಜಿ. ರಾಜಶೇಖರ ಅವರ ಲೇಖನವು ಕೋಮುವಾದಿ ಬಿಕ್ಕಟ್ಟಿನ ಬಗ್ಗೆ ಟೀಕೆಯನ್ನು ಮಾಡುತ್ತಲೆ ಜನಪ್ರಿಯಮಟ್ಟದಲ್ಲಿ ಜನರಲ್ಲಿ ಮನೆ ಮಾಡಿಕೊಂಡಿರುವ ಪೂರ್ವಗ್ರಹಗಳನ್ನು ಮತ್ತು ಕೋಮುಭಾವನೆಯು ಅಂತರ್ಗತಗೊಂಡಿರುವ ಪರಿಯನ್ನು ವಿವರಿಸುತ್ತದೆ. ಬಹಳಷ್ಟು ದೃಷ್ಟಿಯಿಂದ ಈ ಪ್ರಬಂಧವು (೧೯೯೭ರಲ್ಲಿ ಬರೆದದ್ದು) ಸಮಸ್ಯೆಯನ್ನು ನಿರೀಕ್ಷಿಸುವುದರಲ್ಲಿ ದೂರದೃಷ್ಟಿಯನ್ನು ಮರೆದಿದೆ ಮತ್ತು ಈ ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಮ್ ಮೂಲಭೂತವಾದಿತ್ವವು ಅಧಿಕೃತಗೊಂಡ ಸಾಂಸ್ಕೃತಿಕ ಪ್ರವೃತ್ತಯ ಬಗೆಗಿನ ಟೀಕುವಾಗಿದೆ. ಈ ಪ್ರವೃತ್ತಿಯು ಮುಂದೆ ಜಿಲ್ಲೆಯಲ್ಲಿನ ಸಮುದಾಯಗಳ ನಡುವಿನ ಸೌಹಾರ್ದಯುತ ಸಂಬಂಧಗಳನ್ನು ಹದಗೆಡಿಸಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪ್ರಸ್ತುತ ಬಿಕ್ಕಟ್ಟಡು ಭಾರತದಲ್ಲಿ ಸಮಾಜವಿಜ್ಞಾನದಲ್ಲಿನ ಸಂಶೋಧನೆಯ ಮುಂಚೂಣಿಯಲ್ಲಿದ್ದ ಈ ಜಿಲ್ಲೆಯಲ್ಲಿ ಹುಟ್ಟಿಕೊಂಡ ಬ್ಯಾಂಕುಗಳನ್ನು ಕುರಿತಾಗಲಿ, ಸ್ಥಾಪನೆಗೊಂಡ ಖಾಸಗಿ ಶೈಕ್ಷಣಿಕ ಸಂಕೀರ್ಣಗಳನ್ನು ಕುರಿತಾಗಲಿ ಮತ್ತು ಅಪಾರ ಸಂಖ್ಯೆಯಲ್ಲಿ ಬೆಳೆದು ಬಂದ ವೃತ್ತಿಪರ ಮತ್ತು ಉದ್ದಿಮೆಗಾರ ವರ್ಗಗಳಿಂದ ಕೂಡಿದ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆಯಾಗಲಿ ಮತ್ತು ಅಲ್ಲಿ ತೆರೆದುಕೊಂಡ ಧಾರ್ಮಿಕ ಮೂಲಭೂತವಾದಿತ್ವವನ್ನು ಕುರಿತಂತೆ ಅಧ್ಯಯನಗಳು/ಸಂಶೋಧನೆಗಳು ನಡೆದಿಲ್ಲ.

ಚಂದ್ರಶೇಖರ ಕಂಬಾರರ ಪ್ರಬಂಧವು ಒಂದು ಉಪನ್ಯಾಸದ ಪಠ್ಯವಾಗಿದೆ. ಅದರಲ್ಲಿನ ಮೌಖಿಕ ಲಕ್ಷಣಗಳನ್ನು ಗುರುತಿಸಬಹುದಾಗಿದೆ. ಆದರೆ ಅದು ತಾನು ಚರ್ಚಿಸುತ್ತಿರುವ ವಿಷಯವಸ್ತುವನ್ನು (ಜಾಗತಿಕ ಸಾಮಾಜಿಕ ಜಗತ್ತಿನ ಕುರಿತ ಚರ್ಚೆ) ಕುರಿತಂತೆ ತನ್ನ ವಿವರಣೆಯಲ್ಲಿ ಅಣಕವಾಡುತ್ತಿರುವುದು ವಿಶಿಷ್ಟವಾಗಿದೆ. ಇಲ್ಲಿ ಅವರು ವಿವರಿಸುತ್ತಿರುವ ಆಚರಣೆಯಲ್ಲಿ ಮತ್ತು ಕಲಾತ್ಮಕ ಪ್ರದರ್ಶನಗಳು ಗ್ರಾಮವು ಅನುಭವಿಸುತ್ತಿರುವ ಧಾರ್ಮಿಕತೆಯ ಸಾಂಸ್ಕೃತಿಕ ವ್ಯಾಕರಣವನ್ನು ಮುಖು ಸಂಗತಿಯನ್ನಾಗಿ ಮಾಡಿದೆ. ಪ್ರಕೃತಿ ಮತ್ತು ಸಮಾಜಗಳಲ್ಲಿನ ಬದುಕಿನ ಲಯಗಳ ನಡುವೆ. ಧಾರ್ಮಿಕ ನಂಬಿಕೆ ಮತ್ತು ಅದನ್ನು ಜನರು ಆಚರಿಸುತ್ತಿರುವ ಪರಿಯ ನಡುವೆ ಸಮತೋಲನವನ್ನು ಸಾಧಿಸಿಕೊಂಡಿರುವ ಪರಿಯು ಈ ಭೂಲೋಕದ ಮನುಷ್ಯರಿಗಿಂತ ಬಿನ್ನವಲ್ಲದ ದೇವಾನುದೇವತೆಗಳ ಜಗತ್ತಿನ ಒಂದು ಸೂಕ್ಷ್ಮದರ್ಶನವನ್ನು ಲೇಖನ ಮಾಡಿಸುತ್ತದೆ. ಕಂಬಾರರು ವಿವರಿಸುತ್ತಿರುವ ಕರಿಮಾಯಿ ದೇವತೆಯು ಉನ್ನತ ಸ್ಥಾನವನ್ನು ಪಡೆದ, ಸಂಸ್ಕೃತಾನುಕರಣ ಪ್ರಕ್ರಿಯೆಗೆ ಒಳಗಾದ ದೇವತೆಯಲ್ಲ. ಕೆಳಜಾತಿ ಸ್ಥಾನವನ್ನು ಪಡೆದ ಸ್ತ್ರೀ ದೇವತೆಯಾದ ಕರಿಮಾಯಿಯು ಗ್ರಾಮ ದೇವತೆಯಾಗಿದ್ದಾಳೆ ಮತ್ತು ಜನರ ಚಿಂತನೆಯನ್ನು, ಆಸೆ – ಅಕಾಂಕ್ಷೆಗಳನ್ನು ಮತ್ತು ಅವರ ಪರಿಭಾಷೆಯನ್ನು ತನ್ನದನ್ನಾಗಿ ಮಾಡಿಕೊಂಡಿದ್ದಾಳೆ. ಚಂದ್ರಗುತ್ತಿ ಪ್ರಕರಣ ಕುರಿತ ಯು.ಆರ್. ಅನಂತಮೂರ್ತಿ ಅವರ ಪ್ರಬಂಧವು ಧಾರ್ಮಿಕಾಚರಣೆಯ ಜನರ ಹಕ್ಕುಗಳು ಮತ್ತು ಈ ಬಗೆಯ ಹಿಂದುಳಿದಿರುವಿಕೆ ಸಂಕೇತಗಳಾದ ಮೂಡಸಂಪ್ರದಾಯಗಳನ್ನು ನಿಯಂತ್ರಿಸುವ ರಾಜ್ಯದ ಪಾತ್ರಗಳ ನಡುವಿನ ಬಿಕ್ಕಟ್ಟನ್ನು ಗುರುತಿಸುತ್ತದೆ. ಅನಂತಮೂರ್ತಿ ಅವರು ಆಧುನಿಕ ಮತ್ತು ಸಾಂಪ್ರದಾಯಿಕತೆ, ವೈಚಾರಿಕತೆ, ಮತ್ತು ಧಾರ್ಮಿಕತೆ ಹಾಗೂ ನಗರ ಮತ್ತು ಗ್ರಾಮೀಣ ಸಂಸ್ಕೃತಿಗಳ ನಡುವಿನ ಪರಿಹರಿಸಲಾಗದ ಬಿಕ್ಕಟ್ಟುಗಳ ಒಂದು ನಕ್ಷೆಯನ್ನು ಚಿತ್ರಿಸುತ್ತಾರೆ.

ರಹಮತ್ ತರೀಕರೆ ಅವರ ಪ್ರಬಂಧದಲ್ಲಿ ಪ್ರಾಂತೀಯ ಜಾನಪದ ಧಾರ್ಮಿಕ ಆಚರಣೆಯ ಸಾಂಸ್ಕೃತಿಕ ಗುಣಗಳು ಯಾವುದೋ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದೆಂದು ಹೇಳಲು ಸಾಧ್ಯವಿಲ್ಲವೆಂದು, ಅವು ಜನರ ಸಮಷ್ಠಿ ನಂಬಿಕೆಗಳನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಬಲವಾಗಿ ವಾದಿಸುತ್ತಾರೆ. ಧಾರ್ಮಿಕ ಸಂಪ್ರದಾಯಗಳು ಜಾನಪದ ಆಚರಣೆ ಮತ್ತು ಸಂಸ್ಕೃತಿಗಳು ಹೇಗೆ ಒಂದನೊಂದು ಬೆರೆಯುತ್ತವೆ ಎನ್ನುವುದನ್ನು ವಿವರಿಸುವಾಗ ತರೀಕರೆ ಅವರು ರಾಯಚೂರು ಜಿಲ್ಲೆಯ ಜಾನಪದ ಆಚರಣೆಗಳ ಬಹುಮುಖಿ ನಂಬಿಕೆ ಮತ್ತು ಧಾರ್ಮಿಕತೆಗಳನ್ನು ಗುರುತಿಸುವಲ್ಲಿ ವಿದ್ವಾಂಸರು ಮತ್ತು ಇತರರು ವಿಫಲರಾದ ಪರಿಯ ಬಗ್ಗೆ ವಿಷಾದಿಸುತ್ತಾರೆ, ಇಸ್ಲಾಮಿನ ಸ್ಥಳೀಯತೆಯನ್ನು ಗುರುತಿಸುವಾಗ ತರೀಕೆರೆ ಅವರು ಬಹುಭಾಷೆ, ಬಹುಸಂಸ್ಕೃತಿ, ಬಹುನಂಬಿಕೆಗಳು ಮುಂತಾದವು ಒಟ್ಟಿಗೆ ಪ್ರಯುಕ್ತವಾಗಿ ಎಲ್ಲವನ್ನೂ ಒಳಗೊಳ್ಳುವ ರೀತಿಯಲ್ಲಿ ಧಾರ್ಮಿಕತೆಯನ್ನು ರೂಪಿಸಿ ಬಿಡುತ್ತವೆ ಎಂಬುದರ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. ಕಂಬಾರರ ಪ್ರಬಂಧವು ಪ್ರಕೃತಿ – ದೇವ – ದೇವಿಯರು – ಮನುಷ್ಯರು ಎಲ್ಲವು ಅಥವಾ ಎಲ್ಲರೂ ಒಂದರೊಡನೊಂದು ಹೆಣೆದುಕೊಂಡಿರುವ ಜಗತ್ತನ್ನು ಹಿಂದುಗಳ ದೈನಂದಿನ ಆಚರಣೆಗಳೆನ್ನುವ ಸಂಗತಿಯನ್ನು ಮುಂಚೂಣಿಗೆ ತಂದರೆ ತರೀಕೆರೆ ಅವರ ಮೊಹರಮ್‌ನ ವಿವರಣೆಯು ಭಾರತದಲ್ಲಿನ ಹಿಂದುವೇತರ ಧಾರ್ಮಿಕ ಆಚರಣೆಗಳ ಬಗೆಗಿನ ಪ್ರತಿನಿಧೀಕರಣ ಮತ್ತು ಅವುಗಳ ತಿಳುವಳಿಕೆಯ ಕೊರತೆಯನ್ನು ತೋರಿಸುತ್ತದೆ. ಇವೆರಡೂ ಪ್ರಬಂಧಗಳು ಒಂದು ದೃಷ್ಟಿಯಿಂದ ಇತ್ತೀಚೆಗೆ ಭಾರತೀಯ/ಹಿಂದೂ ಆಚರಣೆಗಳನ್ನು ‘ಧರ್ಮವೆನ್ನುವ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಕ್ರಮದ ಪ್ರಸ್ತುತೆಯು ಪ್ರಶ್ನೆಗೆ ಒಳಗಾಗಿರುವ ಚರ್ಚೆಯ ಭಾಗವಾಗಿ ಪರಿಗಣಿಸಬಹುದು (ನೋಡಿ : ಬಾಲಗಂಗಾಧರ, ೧೯೯೪).[9]

ಜಾತಿಯ ಪ್ರಶ್ನೆಯ ಮರುಶೋಧದ ಅಗತ್ಯವನ್ನು ಕುರಿತಂತೆ ಸಾಕಷ್ಟು ಬರೆಯಲಾಗಿದೆ. ಇಂದಿನ ವಿಸ್ತೃತವಾದ ಜನತಾಂತ್ರಿಕ ಭಾರತದಲ್ಲಿ ರಾಜಕೀಯ ಸಾಧನವಾಗಿ ಅದು ರೂಪು ಗೊಳ್ಳುತ್ತಿರುವ ಸಂದರ್ಭದಲ್ಲಿ ದೇವನೂರು ಮಹಾದೇವ ಮತ್ತು ಬರಗೂರು ರಾಮಚಂದ್ರಪ್ಪ ಅವರ ಪ್ರಬಂಧಗಳು ಜಾತಿ ಸಮಸ್ಯೆಯನ್ನು ಕುರಿತಂತೆ ನಡೆಯುತ್ತಿರುವ ಚರ್ಚೆಗೆ ಮತ್ತು ದಲಿತರು ತಮ್ಮ ಅನನ್ಯತೆಯನ್ನು ಭಿನ್ನ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಸಂದರ್ಬದಲ್ಲಿ ಎರಡು ಭಿನ್ನವಾದ ಬಿಕ್ಕಟ್ಟುಗಳನ್ನು ಚರ್ಚೆಯ ಮುಂಚೂಣಿಗೆ ತರುತ್ತಿದ್ದಾರೆ. ದೇವನೂರ ಮಹಾದೇವ ಅವರ ಪ್ರಬಂಧವು ಚರ್ಚೆ ಮಾಡಲೇಬೇಕಾದ ಅಪಾರ್ಥೆಡ್ ಮತ್ತು ಅಸ್ಪೃಶ್ಯತೆಗಳ ನಡುವಿನ ಸಂಬಂಧದ ಹರವನ್ನು ಗುರುತಿಸುವುದಲ್ಲದೆ ತಾರತಮ್ಯವನ್ನು ಗುರುತಿಸುವ ಮತ್ತು ಅದನ್ನು ಎದುರಿಸುವ ಸಮಸ್ಯೆಯ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. ಬರಗೂರು ರಾಮಚಂದ್ರಪ್ಪ ಅವರ ಪ್ರಬಂಧವು ತುಂಬಾ ಸರಳೀಕೃತವಾಗಿ ಜಾತಿಯು ಒಂದು ಗುರುತಾಗಿ ರೂಪುಗೊಳ್ಳುತ್ತಿರುವ ಸಂಗತಿಯನ್ನು ತಿರಸ್ಕರಿಸಿ ಬಿಡುವುದಿಲ್ಲ. ಅದಕ್ಕೆ ಪ್ರತಿಯಾಗಿ ಜಾತಿ ಅನನ್ಯತೆಯನ್ನು ಸಾಮಾಜಿಕ ಮತ್ತು ರಾಜಕೀಯವಾಗಿ ಒತ್ತಾಯಿಸುವ ಹಕ್ಕಿನ ಬಗ್ಗೆ ವಾದ ಮಾಡುತ್ತಾರೆ.

[1] ಸ್ವಾತಂತ್ರ್ಯ ಪೂರ್ವ ಕಾಲಾವಧಿಯಲ್ಲಿ ಸ್ಥಳೀಯ ಸಮಾಜವಿಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳನ್ನು ಕೆಲವು ಭಾರತೀಯ ವಿದ್ವಾಂಸರು ನಡೆಸಿದ್ದರು. ಬಂಗಾಳದಲ್ಲಿ ನಡೆದ ಇಂತಹ ಉತ್ಕೃಷ್ಟವಾದ ಪ್ರಯತ್ನಗಳ ವಿವರಗಳಿಗೆ ನೋಡಿ ಚಟರ್ಜಿ(೧೯೯೫). ಪ್ರಸ್ತುತ ಭಾರತೀಯ ಭಾಷೆಗಳಲ್ಲಿ ಬರುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಕುರಿತ ಬರವಣಿಗೆಗಳು ಎಲ್ಲ ರೀತಿಯ ಮಿಶ್ರಣದಿಂದ ಕೂಡಿವೆ. ಬಂಗಾಲಿ, ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ವಿಮರ್ಶಾತ್ನಕವಾದ ಮತ್ತು ಪ್ರಗತಿಪರವಾದ ಬರವಣಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರಕಟಗೊಂಡಿದೆ. ಒಟ್ಟಾರೆ ನೋಡಿದಾಗ ದಲಿತರ ಬರವಣಿಗೆ ಮತ್ತು ದಲಿತರ ಬಗ್ಗೆ ಬರೆದ ಬರವಣಿಗೆಗಳು ಇತರೆ ವಿಷಯಗಳನ್ನು ಅಥವಾ ಸಮಸ್ಯೆಗಳನ್ನು ವಸ್ತುಗಳನ್ನಾಗಿ ಮಾಡಿಕೊಂಡ ಬರವಣಿಗೆಗಿಂತ ಹೆಚ್ಚು ಗತಿಯನ್ನು ಪಡೆದುಕೊಂಡಂತೆ ಕಾಣುತ್ತದೆ. ಹಿಂದಿಯಲ್ಲಿ ಅಂತಹ ಬರವಣಿಗೆ ಸಾಕಷ್ಟಿದೆ. ತಮಿಳಿನಲ್ಲಿ ದಲಿತ ಬರವಣಿಗೆ ಪ್ರಕಾರವು ದಲಿತ ‘ಪನ್ಪಾಡು’ ಎಂಬ ಹೆಸರಿನಲ್ಲಿ ಸಮೃದ್ಧವಾಗಿ ಬೆಳೆಸಿದೆ (ವಿವರಗಳಿಗೆ ನೋಡಿ ಪಾಂಡಿಯನ್, ೧೯೯೮). ಸಾಮಾಜಿಕ ಬರವಣಿಗೆ ಎಂದು ಹೇಳಬಹುದಾದ ಬರವಣಿಗೆಯು ಒರಿಯಾ, ಮರಾಠಿ, ಕನ್ನಡ ಮತ್ತು ತೆಲುಗುವಿನಲ್ಲಿ ಪ್ರಕಟವಾಗುತ್ತಿವೆ. ರಾಣಿ (೧೯೯೮), ಅವರು ತೆಲುಗು ದಲಿತ ಮಹಿಳಾ ಬರಹಗಾರರ ಬರವಣಿಗೆ ಬಗ್ಗೆ ಸಾಕಷ್ಟು ವಿವರ ನೀಡಿದ್ದಾರೆ ಮತ್ತು ಅವುಗಳು ಕಾವ್ಯ ಪ್ರಕಾರಕ್ಕೆ ಮಾತ್ರ ಮೀಸಲಾಗಿರುವುದರಿಂದ ಉಂಟಾಗಿರುವ ಅವುಗಳ ಮಿತಿಗಳನ್ನು ದಾಖಲಿಸಿದ್ದಾರೆ. ಮಲೆಯಾಳಂ ಬರಹಗಾರರು ದೊಡ್ಡ ಪ್ರಮಾನದಲ್ಲಿ ಇಂಗ್ಲಿಷಿನಿಂದ ಮಲೆಯಾಳಂಗೆ ಅನುವಾದ ಮಾಡುವ ಪ್ರಯತ್ನ ಮಾಡಿದ್ದರೂ (ಮತ್ತು ಮಾರ್ಕ್ಸಿಸ್ಟ್ ಮತ್ತು ಸಮಕಾಲೀನ ಅಭಿವೃದ್ಧಿ ಹಾಗೂ ಇಂಗಿಷ್ ಸೈದ್ಧಾಂತಿಕ ಕೃತಿಗಳ ಪರಿಭಾಷೆಯನ್ನು ಮಲೆಯಾಳಂನಲ್ಲಿ ಅಭಿವೃದ್ಧಿಪಡಿಸಲು) ಪ್ರಾದೇಶಿಕ ಪ್ರಣಾಳಿಕೆ ರೂಪದ ಸಮಾಜವಿಜ್ಞಾನವನ್ನು ಬೆಳೆಸುವಲ್ಲಿ ಹೆಚ್ಚು ಶ್ರಮ ಸಂದಂತೆ ಕಾಣಲಿಲ್ಲ (ಜೆ. ದೇವಕಿ ಅವರಿಂದ ಪಡೆದ ಮಾಹಿತಿ).

[2] ಸಿಂಪಿಗರ ಜಾತಿಗೆ (ದರ್ಜಿ) ವಿಜಾಪುರ ಜಿಲ್ಲೆಗೆ ಸೇರಿದ ಸಾಹಿತಿ ಸಿಂಪಿ ಲಿಂಗಣ್ಣ ಅವರು ಜಾನಪದ ಅಧ್ಯಯನದ ವಿದ್ಯಾರ್ಥಿ ಹಾಗೂ ಅದರ ಪೋಷಕರು ತಾವೇ ಸ್ಥಾಪಿಸಿದ ಮುದ್ರಣಾಲಯದಿಂದ ವಿಜಾಪುರ ಜಿಲ್ಲೆಗೆ ಸಂಬಂಧಿಸಿದ ಜಾನಪದ ಸಾಹಿತ್ಯ ಜಾನಪದ ಕಥೆ, ಜಾನಪದ ಹಾಡುಗಳ ಬಗ್ಗೆ ಪ್ರಬಂಧಗಳನ್ನು ಮತ್ತು ಜಾನಪದ ಅಧ್ಯಯನಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆ ಜಿಲ್ಲೆಯಲ್ಲಿ ಕ್ಷೇತ್ರಕಾರ್ಯ ಮಾಡುವಾಗ ನಾನು ೧೯೯೦ರಲ್ಲಿ ಅವರನ್ನು ಭೇಟಿ ಮಾಡಿದ್ದೆ.

[3] ಈ ಬಗ್ಗೆಯ ಸಿದ್ಧಾಂತಗಳನ್ನು ಆಧರಿಸಿ ಸಿದ್ಧವಾದ ಕನ್ನಡ ಪಠ್ಯಗಳನ್ನು ಬೆಂಗಳೂರು, ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಸಮಾಜಶಾಸ್ತ್ರದ ಪದವಿ ವಿದ್ಯಾರ್ಥಿಗಳಿಗೆ ನಿಯಮಿಸಲಾಗಿರುವ ಕೆಲವು ಉದಾಹರಣೆಗಳು.

[4] ಭಾರತದ ಸಮಾಜವಿಜ್ಞಾನ ಬರವಣಿಗೆಗೆ ಸಂಬಂಧಿಸಿದಂತೆ ಪ್ರಾಕೃತಿಕ ಸತ್ಯವೆನ್ನುವಂತೆ ಪ್ರತಿಪಾದಿತವಾಗುತ್ತಿರುವ ಕೆಲವು ಪ್ರಮುಖ ಪರಿಭಾವನೆಗಳೆಂದರೆ ‘ಪರ್ಯಾಯ ಆಧುನಿಕತೆಗಳು’, ‘ಪ್ರಾದೇಶಿಕ ಆಧುನಿಕತೆಗಳು’, ‘ನವೀನ ಮಧ್ಯಮ ವರ್ಗ,’ ನವ-ಸಾಂಪ್ರದಾಯಿಕವಾದ,’ ‘ಹೈಬ್ರಿಡಿಟಿ ಮುಂತಾದವು.

[5] ತಳಮಟ್ಟದ ಸ್ಥಳೀಯ ಪ್ರಣಾಳಿಕೆ ಮತ್ತು ವಿಶ್ವಾತ್ಮಕ ಸಿದ್ದಾಂತಗಳನ್ನು ಮತ್ತು ದೃಷ್ಟಿಕೋನಗಳನ್ನು ಪರಸ್ಪರ ಸಂಯೋಜಿಸುವ ಸವಾಲು ವಾಸ್ತವವಾಗಿ ಮಾನವ ಶಾಸ್ತ್ರದಲ್ಲಿ ಪ್ರಶ್ನೆಯಾಗಿಯೇ ಉಳಿದುಕೊಂಡಿರುವ ಬಿಕ್ಕಟ್ಟಿಗೆ ಸಂಬಂಧಿಸಿದುದಾಗಿದೆ. ಟೀಮ್ ಇನ್ ಗೋಲ್ಡ್ (೧೯೯೯) ಪ್ರತಿಪಾದಿಸಿರುವಂತೆ ಪಾಶ್ಚಿಮಾತ್ಯ ಜ್ಞಾನ ಮೀಮಾಂಸೆಯ ಮತ್ತು ರಾಜಕೀಯ ಪ್ರಶ್ನೆಗಳನ್ನು ಕುರಿತಂತೆ ಮಾನವಶಾಸ್ತ್ರದಲ್ಲಿ ನಡೆದ ಚರ್ಚೆಯು ಅದನ್ನು ದಾರಿ ತಪ್ಪಿಸುವಂತೆ ಮಾಡಿದೆ. ಜ್ಞಾನ ಮತ್ತು ಅದರ ಪ್ರತಿನಿಧೀಕರಣಗಳ ಮೇಲೆ ಶೈಕ್ಷಣಿಕ ವಲಯದಲ್ಲೇ ಉಳಿದು ಬಿಟ್ಟಿದೆ ಪಾಶ್ಚಿಮಾತ್ಯ ಪ್ರಣಾಳಿಕೆಯನ್ನು ಪ್ರಶ್ನೆ ಮಾಡುತ್ತಿದ್ದರೂ ಅದು ಅದರೊಳಗೆ ಸುತ್ತಿ ಹಾಕಿಕೊಂಡು ಬಿಟ್ಟಿದೆ. ಸರಳವಾದ ಸಂಗತಿಗಳನ್ನು ಕುರಿತ ಅಮೂರ್ತ ಬರವಣಿಗೆ ಮತ್ತು ಕ್ಷೇತ್ರ ಕಾರ್ಯ ಹಾಗೂ ಸೈದ್ಧಾಂತಿಕ ಸಂಗತಿಗಳ ನಡುವಣ ಸಂಬಂಧಗಳು ಚರ್ಚೆಗೆ ಒಳಗಾಗಿಲ್ಲ/ ಅವುಗಳನ್ನು ಪ್ರಶ್ನಿಸುವುದು ಸಾಧ್ಯವಾಗುತ್ತಿಲ್ಲ.

[6] ಭಾರತದಲ್ಲಿ ಸ್ಥಳೀಯ ಪ್ರಶ್ನಿಸುವುದು ಬೆಳೆಸುವುದಕ್ಕೆ ನಡೆದ ಪ್ರಯತ್ನಕ್ಕೆ ಸಂಬಂಧಿಸಿದ ಚರ್ಚೆಯ ವಿವರಗಳಿಗೆ ನೋಡಿ ಜೊಸೆಫ್ (೧೯೯೧)

[7] ಜೆ.ಪಿ.ಎಸ್. ಒಬೆರಾಯ್ ಅವರು ಬಹಳ ಹಿಂದಿನಿಂದಲೂ ನಡೆಸಿಕೊಂಡು ಬಂದ ಬರವಣಿಗೆಯು ವಿಜ್ಞಾನ ಮತ್ತು ಸಮಾಜ ಹಾಗೂ ಧರ್ಮಗಳನ್ನು ಕುರಿತ ಚರ್ಚೆಗಳನ್ನು ಒಳಗೊಂಡಿದೆ. ಧರ್ಮವನ್ನು ಕುರಿತ ಬಾಲಗಂಗಾಧರ ಅವರ ಬರದಲ್ಲಿ ಪ್ರಮಾಣೀಕೃತ ನಿರ್ವಚನಗಳನ್ನು ಮತ್ತು ವಿಚಾರಗಳನ್ನು ಪ್ರಶ್ನಿಸಲಾಗಿದೆ. ಅವರದು ಬಹಳ ಸುದೀರ್ಘವಾಗಿ ಪ್ರಬಂಧವಾಗಿದೆ(೧೯೮೫) ಮತ್ತು ಅದು ಭಾರತವನ್ನು ಅರ್ಥ ಮಾಡಿಕೊಳ್ಳು, ಭಾರತೀಯ ಜ್ಞಾನಮೀಮಾಂಸೆಯನ್ನು ಅಧ್ಯನ ಮಾಡುವುದಕ್ಕೆ ಮತ್ತು ಪಶ್ಚಿಮದ ತಿಳುವಳಿಕೆಯನ್ನು ಪ್ರಶ್ನಿಸಲು ಹಾಗೂ ಅದನ್ನು ಪ್ರತಿನಿಧೀಕರಿಸಲು ಅಗತ್ಯವಾದ ಪರ್ಯಾಯ ಮಾರ್ಗದ ಒಂದು ಸ್ಥೂಲ ಚಿತ್ರವನ್ನು ನೀಡುತ್ತದೆ. ಇತ್ತೀಚಿಗಿನ ದಿನಗಳಲ್ಲಿ ಫರೀದ್ ಅಲಾಟಸ್ (೧೯೯೩, ೧೯೯೬) ಅವರು ಸಮಾಜವಿಜ್ಞಾನಗಳ ಸ್ಥಳೀಕರಣದ ಬಗ್ಗೆ ಕರೆ ಕೊಡುವುದರ ಜೊತೆಗೆ ಪಶ್ಚಿಮೇತರ ಮೂಲಗಳ ಸಿದ್ಧಾಂತಗಳನ್ನು ಮತ್ತು ಅಭಿಜಾತ ಪಠ್ಯಗಳನ್ನು ಅವರು ಪ್ರಯತ್ನಿಸುತ್ತಿದ್ದಾರೆ.

[8] ಸುಜಾತ ಪಟೇಲ (೨೦೦೬) ಅವರು ದಕ್ಷಿಣ-ಉತ್ತರ, ಪೌರಾತ್ಯ-ಪಾಶ್ಚಿಮಾತ್ಯ, ಸ್ವ ಮತ್ತು ಇತರೆ ವಸಾಹುತಶಾಹಿಯಲ್ಲಿ ಅಳಿಸಿಕೊಳ್ಳುವವರು ವಸಾಹತುಶಾಹಿ ಅಳುವವರು, ಸಂಪ್ರದಾಯಿಕತೆ-ಆಧುನಿಕತೆ, ನಿರ್ದಿಷ್ಟತೆ-ವಿಶ್ವಾಸ್ಮಕತೆ ಮುಂತಾದ ಬಹು ಬಗೆಯ ಬೈನರಿಗಳನ್ನು ಗುರುತಿಸುತ್ತಾರೆ. ಪಶ್ಚಿಮ ಮತ್ತು ಪಶ್ಚಿಮೇತರಕ್ಕೆ ಸಂಬಂಧಿಸಿದ ಸಮಾಜ ವಿಜ್ಞಾನಗಳ ನಡುವಿನ ಭಿನ್ನತೆಗಳನ್ನು ನಿರ್ವಚಿಸಲು ಮೇಲೆ ಪಟ್ಟಿ ಮಾಡಿದ ಬೈನರಿಗಳನ್ನು ಬಳಸಲಾಗುತ್ತಿದೆ.

[9] ಬಾಲಗಂಗಾಧರ ಅವರ ‘ದಿ ಹೀತನ್ ಇನ್‌ ಹಿಸ್ ಬ್ಲೈಂಡ್ ನೆಸ್’ ಕೃತಿಯನ್ನು ಪೂರ್ಣವಾಗಿ ಅಧ್ಯಯನ ಮಾಡಲು ನನಗೆ ಸಾಧ್ಯವಾಗಿಲ್ಲ. ಹಿಂದೂಧರ್ಮವನ್ನು ವಿವರಿಸಲು ಪಶ್ಚಿಮವು ಅಳವಡಿಸಿಕೊಂಡಿರುವ ಪ್ರಣಾಳಿಕೆಯನ್ನು ಕುರಿತ ಟೀಕೆಯನ್ನು ಅವರ ಕೃತಿಯನ್ನು ವಿಮರ್ಶಿಸಿರುವ ಬರಹಗಳನ್ನು ನಾನು ಗಮನಿಸಿದ್ದೇನೆ.