ಮಹಿಳೆಯರ ಮತ್ತು ಮಹಿಳೆಯರ ಮೇಲಿನ ಬರಹಗಳಿಗೆ ಪ್ರತ್ಯೇಕ ಭಾಗವನ್ನು ಮೀಸಲಿಡುವ ಕ್ರಮವು ಶೈಕ್ಷಣಿಕವಾಗಿ ಸ್ವಾಗತಾರ್ಹವಾದ ಸಂಗತಿಯೇನಲ್ಲ. ಆದರೂ ಇಲ್ಲಿ ಆ ವಿಷಯ ಕುರಿತ ಪ್ರಬಂಧಗಳನ್ನು ಪ್ರತ್ಯೇಕ ಭಾಗದಲ್ಲಿ ಸಂಕಲನಗೊಳಿಸಲಾಗಿದೆ. ಸಾಮಾನ್ಯವಾಗಿ ಪಾಶ್ಚಿಮಾತ್ಯ ವಿಚಾರದ ಮತ್ತು ವಿದ್ವತ್ತಿನ ಪ್ರತಿರೂಪವಾಗಿ ಅಥವಾ ಅದರ ಪ್ರತಿಧ್ವನಿಯಾಗಿ ಕಂಡುಬರುವ ಲಿಂಗ ಸಂಬಂಧಗಳನ್ನು ಕುರಿತ ಬರಹಗಳ ರಾಶಿಯಲ್ಲಿ ಪ್ರಸ್ತುತ ಸಂಕಲನದ ಪ್ರಬಂಧಗಳು ಲಿಂಗಸಂಬಂಧಗಳನ್ನು ನಿರ್ದಿಷ್ಟ ಭಾರತೀಯ ಸಾಂಸ್ಥಿಕ ವ್ಯವಸ್ಥೆಯೊಳಗೆ (ಕುಟುಂಬ, ಜಾತಿ ಇತ್ಯಾದಿ) ಗುರುತಿಸುತ್ತವೆ ಮತ್ತು ಲಿಂಗ ಸಂಬಂಧಗಳನ್ನು ಹಾಗೂ ಅವುಗಳ ಅನನ್ಯತೆಗಳನ್ನು ವಿಸ್ತೃತವಾದ ಸಾಂಸ್ಕೃತಿಕ ಸಂಕೀರ್ಣತೆಯೊಳಗೆ ನಿರ್ವಚಿಸಲು ಪ್ರಯತ್ನಿಸುತ್ತವೆ. ವೀಣಾ ಬನ್ನಂಜೆ ಅವರು ತಮ್ಮ ಪ್ರಬಂಧದಲ್ಲಿ ಅಸಂಪ್ರದಾಯಿಕ ಜಗತ್ತಿನಲ್ಲಿ ಮಹಿಳೆಯರು ಸಾಧಸಿಕೊಳ್ಳುವ ಸಾಧನೆಗಳ ಅರ್ಥರಾಹಿತ್ಯವನ್ನು ಚರ್ಚಿಸುವ ವಿನೂತನ ಕ್ರಮವನ್ನು ಅಳವಡಿಸಿಕೊಂಡಿದ್ದಾರೆ. ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ವರ್ಗ ಆಧರಿತ ಮತ್ತು ಸಾಂಸ್ಕೃತಿಕ ಭಿನ್ನತೆಯ ಪ್ರಶ್ನೆಗಳನ್ನು ಎತ್ತುತ್ತಾ ಇಂದು ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಸಂಗತಿಯ ಅವರ ಜೀವಕ್ಕೆ ಅಪಾಯವಾಗಿ ಘನೀಭೂತಗೊಂಡಿರುವ ಪ್ರಶ್ನೆಯನ್ನು ಕುರಿತಂತೆ ಚರ್ಚೆ ಮಾಡಿದ್ದಾರೆ. ಟಿ. ಆರ್. ಚಂದ್ರಶೇಕರ ಅವರು ಮಹಿಳೆಯರ ಪ್ರತಿನಿಧೀಕರಣವನ್ನು (ರಾಜಕಾರಣದಲ್ಲಿ ಮತ್ತು ಪ್ರತ್ಯೇಕ ಗುರುತಾಗಿ) ಮಹಿಳೆಯರು ಮತ್ತು ಇತರರು ಪ್ರತಿಪಾದಿಸುವ ದಿಶೆಯಲ್ಲಿ ಎದುರಿಸಬೇಕಾದ ವಿವಿಧ ಬಗೆಯ ಸಮಸ್ಯೆಗಳ ಕಡೆಗೆ ಗಮನ ಸೆಳೆಯುತ್ತಾ ಮಹಿಳೆಯರನ್ನು ಒಬ್ಬ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿ ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಸಾಂಪ್ರದಾಯಿಕವಾಗಿ ತಾಯಿಯಾಗಿ, ಹೆಂಡತಿಯಾಗಿ ಮತ್ತು ಗೃಹಿಣಿಯಾಗಿ ಗುರುತಿಸುವ ದೃಷ್ಟಿಕೋನದ ಮಿತಿಗಳನ್ನು ತಮ್ಮ ಪ್ರಬಂಧದಲ್ಲಿ ವಿಸ್ತೃತ ಟೀಕೆಗೆ ಒಳಪಡಿಸಿದ್ದಾರೆ. ಎಚ್.ಎಸ್. ರಾಘವೇಂದ್ರರಾವ್ ಅವರು ತಮ್ಮ ಪ್ರಬಂಧದಲ್ಲಿ ಸಾಂಸ್ಕೃತಿಕ ಮನೋವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡು ಮಹಿಳೆಯರ ಧ್ವನಿಯನ್ನು ಕಸಿದುಕೊಳ್ಳುವ ಮತ್ತು ಅವರಿಗೆ ಸೃಜನಶೀಲ ಅಭಿವ್ಯಕ್ತಿಗೆ ಅವಕಾಶವನ್ನೇ ಇಲ್ಲದಂತೆ ಮಾಡುವ ಬಹುಮುಖಿ ಕ್ರಮಗಳ ಪ್ರಕ್ರಿಯೆಯನ್ನು ಚರ್ಚಿಸಿದ್ದಾರೆ.

ಸಮಾಜಶಾಸ್ತ್ರೀಯ ಮತ್ತು ಸಾಮಾಜಿಕ ಸಮಾಜಶಾಸ್ತ್ರೀಯ ಸಾಹಿತ್ಯರಾಶಿಯು ಇಂದು ಪ್ರಧಾನಧಾರೆ ಅಭುವೃದ್ಧಿವಾದದ ಮೇಲೆ ತೀವ್ರ ಟೀಕೆಯ ಸುರಿಮಳೆಯನ್ನೇ ಸುರಿಸುತ್ತಿದೆ. ಆಧುನೀಕರಣದ ಅಲೆಯ ಮೇಲೆ ಬೆಳೆದು ಬಂದ ಮತ್ತು ಪ್ರಧಾನವಾಗಿ ಪೋಷಣೆ ಪಡೆಯುತ್ತಿರುವ ಈ ಅಭಿವೃದ್ಧಿವಾದವು ಪ್ರಾಥಮಿಕವಾಗಿ ಸರ್ಕಾರ – ನಿರ್ದೇಶಿತವಾದುದು. ಇದರಿಂದಾಗಿ ಪ್ರದೇಶ – ನಿರ್ದಿಷ್ಟವಾದ, ಪರಿಸರ – ನಿರ್ದಿಷ್ಟವಾದ ಜೀವನಾಧಾರವನ್ನು ಮತ್ತು ಸಾಂಸ್ಕೃತಿಕವಾಗಿ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಗಳನ್ನು ಮತ್ತು ಬದುಕಿನ ರೂಪಗಳನ್ನು ಸಮಾಜ ಕಳೆದುಕೊಳ್ಳುವಂತಾಯಿತು. ಈ ಸಂಕಲನದ ಎರಡು ಪ್ರಬಮಧಗಳು ನಿರ್ದಿಷ್ಟವಾಗಿ ಈ ಪ್ರಧಾನಧಾರೆ ಅಭುವೃದ್ಧಿವಾದದ ಬಗ್ಗೆ ಟೀಕೆಯನ್ನು ಒಳಗೊಂಡಿವೆ. ಇವುಗಳನ್ನು ಇಂದು ಯಾವುದನ್ನು ಅಭಿವೃದ್ಧಿಯೋತ್ತರ[1] ದೃಷ್ಟಿಕೋನವೆಂದು ಕರೆಯಲಾಗುತ್ತಿದೆಯೋ ಅದರ ಪೋಷಣೆ ನೀಡುವ ಸಿದ್ದಾಂತಗಳೆಂದು ಪರಿಗಣಿಸಬಹುದು. ಕೆ.ವಿ. ಸುಬ್ಬಣ್ಣ ಅವರು ತಮ್ಮ ಗೋಕುಲ ನಿರ್ಗಮನ ಪ್ರಬಂಧದಲ್ಲಿ ಒಕ್ಕಲೆಬ್ಬಿಸುವಿಕೆ ಮತ್ತು ಬದುಕನ್ನು ವಿಕೃತಗೊಳಿಸುವಿಕೆಗಳು ದಮನಕಾರಿ ಅಭಿವೃದ್ಧಿ ಪ್ರಣಾಳಿಕೆಯ ಪ್ರಧಾನ ಲಕ್ಷಣಗಳೆಂದು ಟೀಕಿಸುತ್ತಾರೆ.

ಇದಕ್ಕೆ ಪ್ರತಿಯಾಗಿ ಜನರ ಬದುಕಿನ ಲಯವನ್ನು ಮತ್ತು ಅವರ ಸಂವೇದನೆಗಳನ್ನು ಹಿಡಿದಿಡಬಲ್ಲಂತಹ ಪರ್ಯಾಯವಾದ ಮತ್ತು ಜನರ ಪ್ರತಿಭಾನ್ವೇಷಣೆಯಿಂದ ಕೂಡಿದ ಪರ್ಯಾಯ ಅಭಿವೃದ್ಧಿ ಪ್ರಣಾಳಿಕೆಯ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ನಿಜ, ಸುಬ್ಬಣ್ಣ ಅವರ ವಿವರಣೆಯಲ್ಲಿ ಗ್ರಾಮೀಣ ಸಮುದಾಯದ ಆದರ್ಶವಾದಿ ಬದುಕಿನ ಚಿತ್ರಣವಿದೆ. ಅದರಲ್ಲಿ ಅವರು ನಮ್ಮ ಸಮಾಜದ ರಾಜನಿಕವಾದ ಮತ್ತು ಆಳವಾಗಿ ಬೇರಿಬಿಟ್ಟಿರುವ ಜಾತಿ, ವರ್ಗ ಮತ್ತು ಲಿಂಗ ಸಂಬಂಧ ಮುಂತಾದವುಗಳಿಗೆ ಅನ್ವಯವಾಗುವ ಭಿನ್ನತೆಗಳನ್ನಾಗಲಿ ಅಥವಾ ಬಿಕ್ಕಟ್ಟುಗಳನ್ನಾಗಲಿ ಗುರುತಿಸುತ್ತಿಲ್ಲ. ಆದರೆ ಅವರು ವಿಶ್ಲೇಷಣಾತ್ಮಕ ಮತ್ತು ಮೌಲ್ಯಮಾಪನಾತ್ಮಕ ಪರಕಲ್ಪನೆಗಳಾದ ಅಭೀವೃದ್ಧಿ ಮತ್ತು / ಅಥವಾ ಆಧುನೀಕತೆಗೆ ಭಿನ್ನವಾದ ಚಾರಿತ್ರಿಕ, ಪೌರಾಣಿಕ ಮತ್ತು ಕಲ್ಪನಾ ಪ್ರಪಂಚದ ಸಂಕೇತಗಳನ್ನು ಒಳಗೊಂಡ ಪರ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ.

ಪ್ರವಾದಿಯಂತಹ ಪ್ರಸಿದ್ದ ಬರಹಗಾರ ಮತ್ತು ನಾಟಕಕಾರರಾಗಿದ್ದ ಕೆ.ವಿ. ಸುಬ್ಬಣ್ಣ ಅವರು ಗಾಂದೀಜಿಯ ಸಮುದಾಯವಾದಿ ಸಿದ್ದಾಂತವನ್ನು ಆಧರಿಸಿಕೊಂಡು ಸಮುದಾಯವನ್ನು ಅಧಿಕೃತಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಅವರದು ಕೇವಲ ಸರಳೀಕೃತವಾದ ಮತ್ತು ರಮ್ಯವಾದಿಯಾದ ಸಮುದಾಯವಾದದ ಪ್ರತಿನಿಧೀಕರಣವಾಗಿರಲಿಲ್ಲ. ಏಕೆಂದರೆ ಅವರ ಇತರೆ ಬರಹಗಳಲ್ಲಿ ಸಮುದಾಯಗಳ ಅನನ್ಯತೆಗೆ ಸಂಬಂಧಿಸಿದ ಮತ್ತು ಅವುಗಳ ವ್ಯಕ್ತಿವಾದಿ ಸ್ವರೂಪಕ್ಕೆ ಸಂಬಂಧಿಸಿದ ಸಡಿಲವಾದ ಅಸ್ತಿತ್ವಕ್ಕೆ ಮನ್ನಣೆ ಕೋಡುವುದರ ಬಗ್ಗೆ ವಾದ ಮಾಡುತ್ತಾರೆ.[2]

ಇದೇ ರೀತಿಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಜ್ಞಾನ ಮತ್ತು ವಿವೇಕಗಳ ನಡುವಿನ ಭಿನ್ನತೆಗಳ ಕುರಿತಂತೆ ಟೀಕೆ ಮಾಡುತ್ತಾ ಈ ಭಿನ್ನತೆಗಳ ಕೃಷಿ ಸಮುದಾಯವನ್ನು ದೂರ ಮಾಡಿಬಿಡಲಾಗಿದೆ ಮತ್ತು ಅನಾಥವನ್ನಾಗಿ ಮಾಡಿಬಿಟ್ಟಿವೆ. ಜನರು ಭಾರತದ ಸಂಕೀರ್ಣ ಗ್ರಾಮೀಣ ಸಾಮಾಜಿಕ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಬಳಸುವ ಪರಿಭಾಷೆಯಲ್ಲಿ ಸಮಸ್ಯೆಗಳಿವೆ. ಅವರ ಪ್ರಕಾರ ಭಾರತದಲ್ಲಿ ಆಧುನೀಕರಣವೆಂದರೆ ‘ಒಬ್ಬನ ಆಹಾರವನ್ನು ಮತ್ತೊಬ್ಬನು ಅಪಹರಿಸುವ ಕಥೆ’ಯಾಗಿ ಬಿಟ್ಟಿದೆ. ಕರಷಿಯು ಜನರ ಬದುಕಾಗಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಅದೇ ಉಸಿರಿನಲ್ಲಿ ರೈತರ ಆತ್ಮ ಹತ್ಯೆಗಳು ರಾಚನಿಕ ಇತಿಮಿತಿಗಳಿಂದ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರ ಮೇಲೆ ಹೇರುವ ಹೊರೆಯಿಂದ ನರಳುತ್ತಿರುವ ಕೃಷಿಯ ಲಕ್ಷಣವಾಗಿ ಬಿಟ್ಟಿದೆ. ಈ ಹಿನ್ನಲೆಯಲ್ಲಿ ಅವರ ಮಾತುಗಳು ೧೯೯೮ರಿಂದ ಗ್ರಾಮೀಣ ಭಾರತದಲ್ಲಿ ಆರಂಭಗೊಂಡ ಬಿಕ್ಕಟ್ಟಿನ ಭವಿಷ್ಯವಾಣಿಯಾಗಿ ಕಾಣುತ್ತದೆ. ಮುರಾರಿ ಬಲ್ಲಾಳರ ಪ್ರಬಂಧವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿಯ ವಿನ್ಯಾಸದ ಬಗೆಗಿನ ಟೀಕೆಯಾಗಿದೆ. ಇಲ್ಲಿ ಬ್ಯಾಂಕುಗಳು ಮತ್ತು ಗ್ರಾಹಕೀಕರಣಗಳನ್ನು ಒಳಗೊಂಡ ಆಧುನೀಕರಣದ ಕಾರ್ಯಸೂಚಿಯ ಪ್ರಧಾನವಾಗಿ ಬಿಟ್ಟಿದೆ. ಇದರಿಂದಾಗಿ ಅಲ್ಲಿ ಪ್ರದೇಶಿಕ ಮತ್ತು ಸ್ಥಳೀಯ ಜನರ ಪರಂಪರೆಯ ಮೂಲೆಗುಂಪಾಗಿ ಬಿಟ್ಟಿದೆ. ಒಂದು ಕಾಲಕ್ಕೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಬ್ಯಾಂಕುಗಳು ಇಂದು ಅವು ಹಣಕಾಸು ಕಂಪನಿಗಳಾಗಿ ಬಿಟ್ಟಿವೆ. ಜನರ ಬಯಕೆಗಳ ಭ್ರಮಾತ್ಮಕತೆಯು ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಅವು ಜನರನ್ನು ನಿರಂತರ ಆಸೆ, ಸಾಲ ಮತ್ತು ನೋವುಗಳೆಂಬ ವಿಷಚಕ್ರಕ್ಕೆ ದೂಡಿಬಿಡುತ್ತವೆ. ಸ್ಥಳೀಯ ಸಂಗತಿಗಳ, ಅಂದರೆ ಎಲ್ಲಿ ಆಧುನಿಕತೆಯು ಭಾರತೀಯ ರೂಪ ಪಡೆದುಕೊಂಡು ಅಭಿವ್ಯಕ್ತಗೊಳ್ಳುತ್ತಿದೆಯೋ, ಎಲ್ಲಿ ಕೋಮುವಾದವು ಬೆಳೆಯುತ್ತಿದೆಯೋ. ಎಲ್ಲಿ ಯೋಚಿತ ಮತ್ತು ಜನರನ್ನು ಒಳಗೊಳ್ಳುವ ಅಭಿವೃದ್ಧಿಯು ಗೈರುಹಾಜರಾಗಿದೆಯೋ. ಎಲ್ಲಿ ಹೊಸ ಮಧ್ಯಮವರ್ಗ ಮದ್ಭವಿಸುತ್ತಿದೆಯೋ ಮತ್ತು ಎಲ್ಲಿ ಇವೆಲ್ಲವೂ ಒಂದರೊಡನೊಂದು ಬೆರೆತುಕೊಂಡು ಬಿಟ್ಟಿದೆಯೋ ಅಂತಹ ಸಣ್ಣ ನಗರಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕಿಆದ ಅಗತ್ಯವನ್ನು ಪ್ರಬಂಧವು ಎತ್ತಿಹೇಳುತ್ತಿದೆ. ದಕ್ಷಿಣ ಜಿಲ್ಲಿಯು ಅಭಿವೃದ್ಧಿಯ ಸೂಚಿಗಳಾದ ಸಾಕ್ಷರತೆ, ವರಮಾನ, ಆರೋಗ್ಯ ಮತ್ತು ಸಾಂಸ್ಥಿಕ ರಚನೆಗಳನ್ನು ಹುಟ್ಟು ಹಾಕುವುದರಲ್ಲಿ ಅದು ಮುಂದಿದ್ದರೂ ಇಂದು ಬೆಳೆಯುತ್ತಿರುವ ಕೋಮುವಾದದಿಂದ ಬಿಕ್ಕಟ್ಟನ್ನು ಅದು ಎದುರಿಸುತ್ತಿದೆ. ಮುಂಬೈನ ಮಾಫಿಯಾದ ಆಡಂಬೊಲವಾಗಿರುವ ಮತ್ತು ಸಂಘ ಪರಿವಾರದ ‘ಹಿಂದುತ್ವದ ಪ್ರಯೋಗಶಾಲೆ’ಯಾಗಿರುವ ಈ ಪ್ರದೇಶವು ಅನೇಕ ಆಚರಣೆಗಳ ತ್ರಿವ್ರತರವಾದ ಜನಪ್ರಿಯತೆಗೆ ಒಳಗಾಗಿರುವುದನ್ನು (ಸಿನಿಮಾ ತಾರೆ ಶಿಲ್ಪಶೆಟ್ಟಿ ಅವರು ಲಂಡನ್‌ನ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಯಶಸ್ವಿಯಾದ ಮೇಲೆ ಭೂತಾರಾಧನೆಮಾಡಿಸುವುದಕ್ಕಾಗಿ ವಾಪಸ್ಸು ಬಂದಿದನ್ನು ನೆನಪಿಸಿಕೊಳ್ಳಬಹುದು) ಮತ್ತು ಆರಂಭ ಕಾಲದ ಆಧುನಿಕತೆಯ ಪ್ರಕ್ರಿಯೆಯಿಂದ ಅದು ಹಿಂದೆ ಸರಿಯುತ್ತಿರುವುದನ್ನು ಹಾಗೂ ಇಲ್ಲಿನ ಪ್ರಮುಖ ಸಮುದಾಯಗಳಾದ ಹಿಂದುಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ನಡುವೆ ಕೋಮುವಾದಿ ಬೆಕ್ಕಟ್ಟು ಬೆಳೆಯುತ್ತಿರುವುದನ್ನು ನೋಡಬಹುದಾಗಿದೆ. ಇಂಗ್ಲಿಷ್ ಸಮಾಜಶಾಸ್ತ್ರಜ್ಞರು ಮತ್ತು ಸಾಮಾಜಿಕ ಮಾನವಶಾಸ್ತ್ರಜ್ಷರು ಇತ್ತೀಚಿಗೆ ಹೊಸದಾಗಿ ಉದ್ಭವವಾಗುತ್ತಿರುವ ಮಧ್ಯಮವರ್ಗದ, ಅಂದರೆ ಪ್ರಾಥಮಿಕವಾಗಿ ಊದಾರೀಕರಣಗೊಂಡ ಮತ್ತು ಜಾಗತಿಕ ಆರ್ಥಿಕತೆಯೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ರಾಜಶೇಖರ ಮತ್ತು ಬಲ್ಲಾಳರ ಪ್ರಬಂಧಗಳು ಭಾರತದ ಸಣ್ಣನಗರಗಳಲ್ಲಿ ಮಧ್ಯಮವರ್ಗವು ಉದಯಿಸುತ್ತಿರುವ ಕ್ರಮವನ್ನು ಸೂಚಿಸುತ್ತಿವೆ. ಹೊಸ ಆರ್ಥಿಕತೆಯೆಂಬ ಅಲೆಯ ಮೇಲೆ ಸಾಗುತ್ತಿರುವ, ಅಪಾರವಾದ ವರಮಾನವನ್ನು ಸಂಪಾದಿಸುತ್ತಿರುವ, ಹೊಸ ಗುರುತುಗಳಿಗಾಗಿ ಹುಡುಕಾಟ ನಡೆಸುತ್ತಿರುವ ಅಥವಾ ನಮ್ಮ ಸ್ಥಾನವನ್ನು ಮತ್ತು ಅಸ್ತಿತ್ವವನ್ನು ಒತ್ತಾಯಿಸುತ್ತಿರುವ ಮಧ್ಯಮ ವರ್ಗವು ಮರುಶೋಧಗೊಂಡ ವಿವಿಧ ಬಗೆಯ ಮೂಲಭೂತವಾದಿತ್ವದ ಎಳೆಗಳನ್ನು ಪ್ರತಿನಿಧಿಸುವ ಧಾರ್ಮಿಕ ಗುರುತುಗಳನ್ನು ಚಲಾಯಿಸುತ್ತಿರುವುದು ಕಂಡುಬರುತ್ತದೆ. ಸಾಂಪ್ರದಾಯಿಕ ಶೈಕ್ಷಣಿಕ ಪರಿಭಾಷೆ ಅಥವಾ ಪರಿಕಲ್ಪನೆಯಾಗಿ ಅಲ್ಲದಿದ್ದರೂ ಪ್ರಸ್ತುತ ಪ್ರಬಂಧಗಳು ಭಾರತದಲ್ಲಿ ನಡೆಯುತ್ತಿರುವ ಅಧ್ಯಯನಗಳಲ್ಲಿ ಅನೇಕ ಬಾರಿ ಮರೆಯಾಗುತ್ತಿರುವ ವರ್ಗದ ಪ್ರಾಮುಖ್ಯತೆಯನ್ನು ಗುರುತಿಸುತ್ತವೆ. ಹೆರಿಂಗ್ ಮತ್ತು ಅಗರವಾಲ (೨೦೦೬) ಅವರು ಭಾರತೀಯ ಸಮಾಜ ವಿಜ್ಞಾನದಲ್ಲಿ ರಾಷ್ಟ್ರ, ಪ್ರದೇಶ, ಜಾತಿ ಮತ್ತು ಸಮುದಾಯಗಳನ್ನು ಪರಿಭಾವನೆಗಳಾಗಿ ಗುರುತಿಸಿರುವುದನ್ನು ವಿವರಿಸುತ್ತಾ ಇಂದು ಪ್ರಧಾನಧಾರೆಯಲ್ಲಿರುವ ವಸಾಹತ್ತೋತರ ಮತ್ತು ಆಧುನಿಕೋತ್ತರ ದೃಷ್ಟಿಕೋನದಲ್ಲಿ ಭಾರತೀಯತೆಗೆ ವಿಶಿಷ್ಟವಾದ ಮತ್ತು ನಮ್ಮ ಶೈಕ್ಷಣಿಕ ವಲಯದಲ್ಲಿ ಮನೆ ಮಾಡಿಕೊಂಡಿರುವ ಜಾತಿಯನ್ನು ಕೇಂದ್ರವಸ್ತುವನ್ನಾಗಿ ಮತ್ತು ಧಾತುಸದೃಶ ಸಂಗತಿಯನ್ನಾಗಿ ಪರಿಗಣಿಸುವುದರ ಮೂಲಕ ವರ್ಗದ ಮಹತ್ವವನ್ನು ಕಡೆಗಣಿಸಲಾಗಿದೆ ಎಂಬ ಮಾತನ್ನು ಹೇಳುತ್ತಾರೆ. ಈ ಕೊರತೆಯನ್ನು ಬಲ್ಲಾಳ್ ಮತ್ತು ರಾಜಶೇಖರ್ ಅವರು ತುಂಬಿಕೊಡುತ್ತಾರೆ. ಅವರು ನಮ್ಮ ಸಾರ್ವಜನಿಕ ಬದುಕಿನಲ್ಲಿ ಕೋಮವಾದಿ ಸಂಗತಿಗಳು ದೈಹಿಕ ಹಿಂಸೆಗೆ ಕಾರಣವಾಗಿಬಿಡುವ ಸಂಗತಿಯನ್ನು ಮತ್ತು ವರ್ಗ ಸಂಬಂಧಿ ಅಸಮಾನತೆಗಳ ರಾಚನಿಕ ಹಿಂಸೆಯನ್ನು (ರಾಜಶೇಖರ್ ಅವರು ಮನಸ್ಸಿಗೆ ಬಾಧೆಯುಂಟು ಮಾಡುವಂತೆ ಚಿತ್ರಿಸಿರುವ ಉರುವಲು ಕಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವ ಮಹಿಳೆ ಮತ್ತು ಆಕೆಯ ಮಗುವಿನ ಚಿತ್ರ) ಅನಿವಾರ್ಯವೆನ್ನುವಂತೆ ಮತ್ತು ಸಹಿಸಿಕೊಳ್ಳಬೇಕಾದುದೆಂಬ ರೀತಿಯಲ್ಲಿ ಮೌನವಾಗಿ ಒಪ್ಪಿಕೊಳ್ಳಲಾಗುತ್ತಿರುವ ಸಂಗತಿಗಳ ಕಡೆ ನಮ್ಮ ಗಮನ ಸೆಳೆಯುತ್ತಾರೆ. ಮಧ್ಯಮ ವರ್ಗಗಳ ಉಪಭೋಗತಾವಾದ ಮತ್ತು ಬೃಹತ್ ದುಡಿಯುವ ವರ್ಗ ಅನುಭವಿಸುತ್ತಿರುವ ದುಸ್ಥಿತಿಗಳು ಸಾರ್ವಜನಿಕ ವಲಯದಲ್ಲಿ ಉಂಟು ಮಾಡಿರುವ ಹಿಂಸೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ. ಇದರ ಜೊತೆಗೆ ಅವರು ಜನರೆಲ್ಲ ಒಟ್ಟಿಗೆ ಬದುಕಬೇಕೆಂಬ ಹಾಗೂ ಜಾತ್ಯತೀತತೆಯ ಭಾವನೆಗಳು ಒಳಗೊಂಡಿರುವ ಭರವಸೆಯ ಬಗ್ಗೆಯೂ ಬರೆಯುತ್ತಾರೆ. ರಾಜಶೇಖರ್ ಅವರಿಗೆ ಪುತ್ತೂರಿನಂತಹ ಸಣ್ಣ ಪಟ್ಟಣದಲ್ಲಿ ಪಾಕ ಪ್ರಾವೀಣ್ಯತೆಯ ಮತ್ತು ಹಳೆಯ ಕುರ್ಚಿ ಮೇಜುಗಳಿಂದ ಕೂಡಿದ ‘ಬ್ರಾಹ್ಮಣರ ಹೊಸ ಟಾಜ್ ಮಹಲ್ ಹೋಟೆಲ್’ ಭರವಸೆಯ ಸಂಗತಿಯಾಗಿ ಬಿಡುತ್ತದೆ. ಇವರಿಬ್ಬರೂ ತಮ್ಮ ಲೇಖನಗಳಲ್ಲಿನ ತೀರ್ಮಾನಗಳ ಮಹತ್ವವನ್ನು ಬಹಿರಂಗಗೊಳಿಸುವುದಿಲ್ಲ. ಆದರೆ ಈ ಬಗೆಯ ಬರವಣಿಗೆ ಮತ್ತು ತೀರ್ಮಾನಗಳು ‘ಸ್ಥಳೀಯ ಅನುಭವದ ಮೂಲಕ ಮತ್ತು ಸಣ್ಣ ಪ್ರದೇಶದಲ್ಲಿನ ಸಾಂಸ್ಥಿಕ ಪ್ರಕ್ರಯೆಯ ಮೂಲಕ ಉತ್ಪಾದಿಸುವ ಮತ್ತು ಪ್ರಸಾರ ಮಾಡುವ ಜ್ಞಾನಕ್ಕೆ ನಮ್ಮ ದೃಷ್ಟಿಕೋನವನ್ನು ವಿವಿಧ ಬಗೆಯಲ್ಲಿ ರೂಪಿಸುವ (ಸಮಾಜ ವಿಜ್ಞಾನಗಳು) ಸಂಭಾವ್ಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತವೆ ಮತ್ತು ಅದನ್ನು ಅಭಿವ್ಯಕ್ತಿಪಡಿಸುವ ಶಕ್ತಿಯ ಅದಕ್ಕಿದೆ (ದಾಸ್ ೨೦೦೩; ೨೩)

ಇಲ್ಲಿ ಆಯ್ಕೆ ಮಾಡಿಕೊಂಡಿರುವ ಲೇಖನಗಳೊಳಗೆ ಅಪರಿಮಿತಿ ರೂಪಕಗಳಿವೆ. ಕೆ.ವಿ. ಸುಬ್ಬಣ್ಣ ಅವರ ಗೋಕುಲ ಪ್ರತಿಮೆಯ ಕೇವಲ ಪುರಾಣದಲ್ಲಿನ ಆದರ್ಶೀಕೃತ ಚಿತ್ರದ ಮತ್ತು ಭಾವಪ್ರಧಾನತೆಯ ಪ್ರತಿನಿಧೀಕರಣವನ್ನು ಸುಮ್ಮ ಸುಮ್ಮನೆ ಅಂಗೀಕರಿಸಿ ಬಿಡುತ್ತಾರೆಂದು ಹೇಳಲು ಬರುವುದಿಲ್ಲ. ಇದಕ್ಕೆ ಪ್ರತಿಯಾಗಿ ಅವರು ತನಗೆ ಪ್ರಿಯವಾದ ಪಠ್ಯವಯ (ಪು.ತಿ.ನ. ಅವರ ಗೋಕುಲ ನಿರ್ಗಮನ) ಪ್ರತಿನಿಧಿಸುವ ಪ್ರತಿಮೆಗಳ ಜಗತ್ತಿನ ಕಡೆಗೆ ನಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಆದರ್ಶೀಕೃತ ಜಗತ್ತಿನ ಪ್ರತಿಮೆಯಲ್ಲಿ ಸುಬ್ಬಣ್ಣನಿಗೆ ಮಥುರೆಗೆ ಬರಬೇಕೆಂದು ಕೃಷ್ಣನಿಗೆ ಅಕ್ರೂರನು ನೀಡುತ್ತಿರುವ ಆಹ್ವಾನದಲ್ಲಿ ನಮ್ಮ ಇವತ್ತಿನ ಗ್ರಾಮೀಣ ಯುವಕರಿಗೆ ನಗರೀಕೃತಗೊಂಡ ಭಾರತಕ್ಕೆ ಬರಲು ನೀಡುತ್ತಿರುವ ಆಹ್ವಾನದ ಚಿತ್ರ ಕಾಣುತ್ತದೆ. ಈ ಚಿತ್ರದ ಮೂಲಕ ಸುಬ್ಬಣ್ಣ ಇಂದಿನ ಸಮಕಾಲೀನ ಅಭಿವೃದ್ಧಿವಾದದ ಪ್ರವಾಹದಲ್ಲಿ ನಮ್ಮ ಸಾಂಸ್ಕೃತಿಕ ಸ್ಮೃತಿಗಳಲ್ಲಿನ ಸಕಾರಾತ್ಮಕ ಸಂಗತಿಗಳನ್ನು ಉಳಿಸಿಕೊಳ್ಳುವಲ್ಲಿನ ವೈಫಲ್ಯವನ್ನು ಅವರು ವಿವರಿಸುತ್ತಿದ್ದಾರೆ. ಸಾಂಸ್ಕೃತಿಕ ಸ್ಮೃತಿಗಳೆಂದರೆ ಅವು ಚರಿತ್ರೆಯಿಂದ ಕೂಡಿದ ಸಂಗತಿಗಳಲ್ಲ. ಆದರೆ ಅದರ ಸಾರವನ್ನು ಅವು ಒಳಗೊಂಡಿರುತ್ತದೆ. ಅದು ನಮ್ಮ ಮುಂದೆ ರಾಶಿರಾಶಿಯಾಗಿ ವಸ್ತುರೂಪದಲ್ಲಿ ಬಿದ್ದಿರುವುದಿಲ್ಲ. ಅವು ನಮ್ಮ ದೇಹವನ್ನು ಪ್ರವೇಶಿಸಿರುತ್ತದೆ ಮತ್ತು ಅವು ನಮ್ಮ ರಕ್ತಕಣಗಳಲ್ಲಿ ಅಂತರ್ಗತವಾಗಿರುತ್ತವೆ. ಅವು ನಮ್ಮ ಕಣ್ಣುಗಳಲ್ಲಿ ಬೆರೆತುಕೊಂಡಿರುತ್ತವೆ ಮತ್ತು ನಮ್ಮ ಕೈವಶವಾಗಿರುತ್ತವೆ. ಅವು ನಾವು ಹೇಗೆ ದುಡಿಯುತ್ತೇವೆ ಮತ್ತು ನಾವು ಹೇಗೆ ಜಗತ್ತನ್ನು ಪರಿಭಾವಿಸಿಕೊಳ್ಳುತ್ತೇವೆ ಎಂಬುದನ್ನು ನಿರ್ಧರಿಸುತ್ತಿರುತ್ತವೆ. ಆದರೆ ಡಿ.ಆರ್. ನಾಗರಾಜ್ ಸೂಚಿಸಿರುವಂತೆ ‘ಸಾಂಸ್ಕೃತಿಕ ಸ್ಮೃತಿ’ಯಲ್ಲಿನ ಸಂಗತಿಗಳನ್ನು ಮತ್ತು ಅದರ ಮಹತ್ವವನ್ನು ಪರಾಮರ್ಶಿಸಬೇಕಾಗುತ್ತದೆ. ಏಕೆಂದರೆ ಅವು ಸಮುದಾಯಗಳ ಮತ್ತು ವರ್ಗಗಳ ಆಕಾಂಕ್ಷೆಗಳನ್ನು ಮತ್ತು ನಿರೀಕ್ಷೆಗಳನ್ನು ಒಳಗೊಂಡಿರುವಂತೆ ಕೆಲವೊಮ್ಮೆ ಕಾಣುತ್ತವೆ.

ಈ ಸಂಕಲನದ ಕೊನೆಯಲ್ಲಿರುವ ಚಂದ್ರಪೂಜಾರಿ ಅವರ ಮುಖ್ಯ ಪ್ರಬಂಧ ಕುತೂಹಲಕಾರಿಯಾಗಿದೆ. ಅಲ್ಲಿ ಸಮಾಜವಿಜ್ಞಾನಿಗಳು ತಮ್ಮದೇ ಸಮಾಜವನ್ನು ಅಧ್ಯಯನ ಮಾಡುವಾಗ ಎದುರಿಸುವ ವಿವಿಧ ಬಗೆಯ ಸಮಸ್ಯೆಗಳನ್ನು ಗುರುತಿಸುತ್ತಾರೆ. ಈ ಬಗೆಯ ಸಮಸ್ಯೆಗಳನ್ನು ಇಂಗ್ಲಿಷ್ ಭಾಷೆಯ ಪ್ರಬಂಧಗಳಲ್ಲಿ ಚರ್ಚಿಸಲಾಗಿದ್ದರೂ ಪೂಜಾರಿ ಅವರ ದೃಷ್ಟಿಕೋನವು ಸಾಮಾಜಿಕ ಸಂಗತಿಗಳನ್ನು ಅಧ್ಯಯನ ಮಾಡುವಾಗ ಇಂದಿನ ವಿದ್ಯಾರ್ಥಿಗಳು ಎದುರಿಸುವ ವರ್ಗ, ಜಾತಿ, ಲಿಂಗ, ಧರ್ಮ ಮತ್ತು ಪ್ರಾದೇಶಿಕ ಸಂಸ್ಕೃತಿಗಳು ಮುಂತಾದ ಪೂರ್ವಗ್ರಹಗಳನ್ನು ಮೀರುವುದಕ್ಕೆ ಸಂಬಂಧಿಸಿದಂತೆ ಗುರುತಿಸುವ ಬಿಕ್ಕಟ್ಟುಗಳು ಅತ್ಯಂತ ಪ್ರಸ್ತುತವಾಗಿವೆ. ಅನೇಕ ದೃಷ್ಟಿಯಿಂದ ಈ ಪ್ರಬಂಧವು ಭಾರತೀಯ ನವೀನ ಸಮಾಜಶಾಸ್ತ್ರವನ್ನು ಕಟ್ಟುವಾಗ ಆರಂಭದಲ್ಲಿ ಕಂಡುಬಂದ ಪೂರ್ವಗ್ರಹಗಳನ್ನು ಆಳವಾದ ಸ್ವಚಿಂತನೆಯ ಮೂಲಕ ಮೀರಬಹುದು ಮತ್ತು ಸಮಸ್ಯೆಗಳನ್ನು ಅದರ ಎಲ್ಲ ಸಂಕೀರ್ಣತೆಯಲ್ಲಿ ಹಾಗೂ ವ್ಯಾಪ್ತಿಯಲ್ಲಿ ಬಹುಶಿಸ್ತೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದರ ಮೂಲಕ ಮೀರಬಹುದು ಎಂಬ ಒಳನೋಟವನ್ನು ಇದರಿಂದ ಪಡೆಯಬಹುದು.

ವೈವಿಧ್ಯಮಯವಾದ ಮತ್ತು ವಿಸ್ತೃತವಾದ ವ್ಯಾಪ್ತಿಯ ವಿಷಯ ವಸ್ತುಗಳನ್ನು ಕುರಿತಂತೆ ಚರ್ಚೆ ಮಾಡುವ ಇಲ್ಲಿನ ಪ್ರಬಂಧಗಳು ದೇಶದಲ್ಲಿ. ಅದರೊಳಗಿನ ವಿವಿಧ ಪ್ರದೇಶಗಳಲ್ಲಿ ಉದ್ಬವವಾಗುತ್ತಿರುವ ಮತ್ತು ಶಿಥಿಲಕೊಳ್ಳುತ್ತಿರುವ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತವೆ ಎಂದು ಮತ್ತು ಆ ಸಂಗತಿಗಳ ಬಗ್ಗೆ ಚಿಂತನೆ ನಡೆಸುತ್ತಿವೆ ಎಂದು ತಿಳಿಯಬಹುದು. ಮಧ್ಯಮವರ್ಗ ಮತ್ತು ನವೀನ ಶ್ರೀಮಂತ ವರ್ಗಗಳ ಜೀವನಶೈಲಿ, ಮಧ್ಯವರ್ತಿಯ ಸಂಸ್ಕೃತಿಗಳ ಪುನರುತ್ಥಾನಗಳು. ಮಹಿಳೆಯರು ಎದುರಿಸುತ್ತಿರುವ ಬಿಕ್ಕಟ್ಟುಗಳು ಮತ್ತು ಹೊಸ ಜೀವನಶೈಲಿಗಳು, ಕ್ಷೀಣಿಸುತ್ತಿರುವ ಮತ್ತು ಶಿಥಿಲಗೊಳ್ಳುತ್ತಿರುವ ಗ್ರಾಮೀಣ ಅಲಕ್ಷಿತ ಕೃಷಿಕರ ಮತ್ತು ಕರಕುಶಲ ಕೆಲಸಗಾರರ ಜೀವನಾಧಾರಗಳಿಗೆ ಎದುರಾಗಿ ನಿಲ್ಲುತ್ತವೆ. ಇಲ್ಲಿನ ಪ್ರಬಂಧಗಳಲ್ಲಿ ವಿದ್ವಾಂಸರು ತಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಜಗತ್ತಿನ ಜೊತೆಗೆ ನಡೆಸುತ್ತಿರುವ ಅನುಸಂಧಾನವನ್ನು ಮತ್ತು ಸಾಹಿತಿಗಳ ದೃಷ್ಟಿಕೋನ ಹಾಗೂ ದರ್ಶನ – ಎರಡನ್ನು ಸಂಯೋಜಿಸಿಕೊಂಡಿರುವುದು ಕಂಡುಬರುತ್ತದೆ. ಬುಡಕಟ್ಟು ಸಂಸ್ಕೃತಿಯ ಅಧ್ಯಯನ ಮತ್ತು ಸಾಹಿತ್ಯ ಇವುಗಳ ನಡುವೆ ನೆಲೆಗೊಂಡಿರುವ ಪ್ರಸ್ತುತ ಪ್ರಬಂಧಗಳು ನಮ್ಮ ಸಾಂಸ್ಕೃತಿಕ ಬದುಕಿನ ನಿರ್ದಿಷ್ಟ ಸಂಧಾನ ಮತ್ತು ದೈನಂದಿನ ಅಧಿಕೃತ ಸಂಕಥನಗಳಾಗಿವೆ. ಇಂಗ್ಲಿಷ್ ಭಾಷೆಯಲ್ಲಿ ಖಚಿತವಾದ ಬುಡಕಟ್ಟು ಅಧ್ಯಯನ ಪ್ರಬಂಧಗಳು ಪ್ರತಿನಿಧಿಸುವ ಮತ್ತು ಒಳಗೊಂಡಿರುವ ಚಿಂತನೆಗಳು ಎದುರಿಸುವ ಸಮಸ್ಯೆಗಳನ್ನು ಇಲ್ಲಿನ ಪ್ರಬಂಧಗಳು ಮತ್ತು ಮೀರುವ ಸಂಭಾವ್ಯ ಸಾಮರ್ಥ್ಯವನ್ನು ಪಡೆದಿದೆ. ಲೇಖಕರು ನೆಲೆಗೊಂಡಿರುವ ಪ್ರದೇಶ. ಅವರು ಬರೆಯುತ್ತಿರುವ ಕನ್ನಡ ಭಾಷೆ, ಅವರು ಬಳಸುತ್ತಿರುವ ಸ್ಥಳೀಯ ನುಡಿಗಟ್ಟು, ಭಾಷಾಶೈಲಿ ಮುಂತಾದವುಗಳ ಆಧಾರದ ಮೇಲೆ ಅಧ್ಯಯನ ನಡೆಸುತ್ತಿರುವ ಅಧ್ಯಯನ ಕರ್ತೃಗಳಿಗೆ ಬಾಹ್ಯವಿದ್ವಾಂಸರು ನಡೆಸುವ ಭಿನ್ನತೆಯ, ಪರಿಕಲ್ಪನೆಗಳ ಪ್ರಸ್ತುತತೆಯ ಮತ್ತು ಪ್ರತಿನಿಧೀಕರಣದ ಸಮಸ್ಯೆಗಳು ಸಮಸ್ಯೆಗಳಾಗಿ ಕಂಡುಬರುವುದಿಲ್ಲ.

ಪ್ರಾದೇಶಿಕ ಬರಹಗಳ ಮೂಲಕ ಭಾರತೀಯ ಸಮಾಜಶಾಸ್ತ್ರದ ಬಹುತ್ವೀಕರಣ

ಈ ಪ್ರಬಂಧಗಳನ್ನು ಉನ್ನತಿಶಿಕ್ಷಣದ ಮತ್ತು ಸಮಾಜವಿಜ್ಞಾನದ ಪ್ರಧಾನಧಾರೆಯ ಮತ್ತು ಸಾಂಸ್ಥಿಕ ರಚನೆಯೊಳಗೆ (ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು) ಸಂಯೋಜಿಸಿದರೆ ನಮ್ಮ ಕ್ರಮವು ಹೊಸ ಪ್ರಮೇಯಗಳನ್ನು ಹುಟ್ಟುಹಾಕಬಹುದು ಮತ್ತು ಸಮಾಜವಿಜ್ಞಾನಗಳು ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಉದ್ಭವಿಸುತ್ತಿರುವ ಸವಾಲುಗಳನ್ನು ಎದುರಿಸಬಲ್ಲದು. ಜಾನಕಿ ನಾಯ್ಯರ್ ಅವರ ದಕ್ಷಿಣ ಭಾರತದ ಚರಿತ್ರೆ ರಚನಾಶಾಸ್ತ್ರವನ್ನು ಕುರಿತ ಕೃತಿಯು ತೋರಿಸುತ್ತಿರುವಂತೆ ಕನ್ನಡದಲ್ಲಿ ಎಂ.ಎಂ. ಕಲಬುರ್ಗಿ ಮತ್ತು ರಹಮತ್ ತರೀಕರೆ ಅವರಂತಹ ವಿದ್ವಾಂಸರ ಬರವಣಿಗೆಗಳು ಹೊಸ ಬಗೆಯ ವ್ಯಾಖ್ಯಾನದ ದೃಷ್ಟಿಕೋನಗಳನ್ನು ಹುಟ್ಟುಹಾಕುತ್ತಿವೆ ಮತ್ತು ಪ್ರಮಾಣಬದ್ಧ ಪುರಾತನ ಸಂಗ್ರಹಾಲಯದಲ್ಲಿ ದೊರೆಯುವ ಆಕರಗಳ ಚೌಕಟ್ಟು ಒಳಗೊಳ್ಳುವ ಮಿತಿಗಳನ್ನು ಮೀರುತ್ತವೆ ಹಾಗೂ ಚಾರಿತ್ರಿಕ ಸಂಗತಿಗಳನ್ನು ಕುರಿತಂತೆ ನವೀನವೆನ್ನಬಹುದಾದ ಅರ್ಥವನ್ನು ಕಂಡುಕೊಳ್ಳುತ್ತಿವೆ. ಈ ಬಗೆಯ ಪ್ರಾದೇಶಿಕ ಬರವಣಿಗೆಯು ಪ್ರಧಾನದಾರೆ ಸಮಾಜಶಾಸ್ತ್ರ/ಸಾಮಾಜಿಕ ಮಾನವಶಾಸ್ತ್ರಗಳ ಮುಂದಿರುವ ಸವಾಲುಗಳನ್ನು ಎದುರಿಸಲು ಅಗತ್ಯವಾದ ತಂತ್ರಗಳನ್ನು ಒದಗಿಸುವ ಸಾಧ್ಯತೆಯಿದೆ. ಇಂದು ಸರಿಸುಮಾರು ನೂರು ವರ್ಷಗಳಷ್ಟು[3] ಇತಿಹಾಸವಿರುವ ಭಾರತೀ ಸಮಾಜಶಾಸ್ತ್ರೀಯ ಮತ್ತು ಮಾನವಶಾಸ್ತ್ರಿ ಬರವಣಿಗೆಯು ಒಂದು ರೀತಿಯಲ್ಲಿ ಒಂದು ಸ್ವಗಿತತೆಯನ್ನು ಅನುಭವಿಸುತ್ತಿದೆ. ಎಂ.ಎನ್. ಶ್ರೀನಿವಾಸ್ ಅವರು ರೂಪಿಸಿದ ‘ಸಂಸ್ಕೃತಾನುಕರಣ’ ‘ಪ್ರಧಾನಜಾತಿ’ ಎಂಬ ಪರಿಕಲ್ಪನೆಗಳನ್ನು ಬಿಟ್ಟರೆ ಭಾರತೀಯ ಸಮಾಜದಲ್ಲಿನ ಬದಲಾವಣೆಯ ಪ್ರವೃತ್ತಿಗಳನ್ನು ಪ್ರತಿನಿಧಿಸುವ ಸಂಗತಿಗಳನ್ನು ಹಿಡಿದಿಡುವ ಪರಿಕಲ್ಪನೆಗಳು ನಮಗೆ ಕಂಡುಬರುತ್ತಿಲ್ಲ.[4] ಈ ಬಗೆಯ ಪರಿಕಲ್ಪನಾತ್ಮಕ ಮತ್ತು ಸೈದ್ಧಾಂತಿಕ ದಾರಿದ್ರ್ಯವು ಭಾರತೀಯ ಸಮಾಜಶಾಸ್ತ್ರ ಮತ್ತು ಸಾಮಾಜಿಕ ಮಾನವಶಾಸ್ತ್ರಗಳಲ್ಲಿ ಉತ್ಪಾದಿಸಲ್ಪಡುತ್ತಿರುವ ಸಾಹಿತ್ಯವನ್ನು ‘ಸವಾಲ್ಟ್ರನ್ ಸ್ಕೂಲ್’ನ ಚರಿತ್ರೆ ಕುರಿತ ಬರವಣಿಗೆ ಮತ್ತು ‘ವಸಾಹತ್ತೋತ್ತರ’ ಸಾಹಿತ್ಯಗಳ ಜೊತೆ ತುಲನೆ ಮಾಡುವಾಗ ಡಾಳಾಗಿ ಕಣ್ಣಿಗೆ ಗೋಚರಿಸುತ್ತದೆ. ಇವೆರಡೂ ಪ್ರಯತ್ನಗಳಲ್ಲಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ವಿಷಯವಸ್ತುವಿನಲ್ಲಿ ಮತ್ತು ಅದನ್ನು ಕುರಿತ ಸಂಶೋಧನೆಯ ವಿಧಾನಗಳಲ್ಲಿ ಮಹತ್ವವಾದ ಬದಲಾವಣೆಗಳು ನಡೆಯುತ್ತಿರುವುದು ಕಂಡುಬರುತ್ತದೆ. ಅವುಗಳ ಬಗೆಗಿನ ಟೀಕೆಗಳನ್ನು ಮತ್ತು ಅವು ಈಗ ಎದುರಿಸುತ್ತಿರುವ ಸ್ಥಗಿತತೆಯನ್ನು ಗಮನದಲ್ಲಿಟ್ಟುಕೊಂಡೂ. ಅವು ನಮ್ಮ ಜ್ಞಾನಶಿಸ್ತುಗಳಿಗೆ ಸಂಬಂಧಸಿದಂತೆ ಸೃಷ್ಟಿಸಿರುವ ಸಾಹಿತ್ಯದ ರಾಶಿಯನ್ನು ಹಾಗೂ ಅವು ಅಂತಾರಾಷ್ಟ್ರೀಯ ವಲಯದಲ್ಲಿ ಸಾಧಿಸಿಕೊಂಡಿರುವ ಸಾಧನೆಯನ್ನು ನಾವು ಗುರುತಿಸಬೇಕಾಗುತ್ತದೆ.[5] ಏಕೆಂದರೆ ಅವು ಒಂದು ಚಿಂತನಾ ಪ್ರಣಾಳಿಕೆಯಾಗಿ ರೂಪುಗೊಂಡಿವೆ ಮತ್ತು ಪಾಶ್ಚಿಮಾತ್ಯ ವಿದ್ವತ್ತನ್ನು ಹಾಗೂ ಚಿಂತನಾಭಿವ್ಯಕ್ತಿಯನ್ನು ಪ್ರಶ್ನೆ ಮಾಡುತ್ತಿರುವುದಲ್ಲದೆ ಅವುಗಳ ಬಹುತ್ವೀಕರಣಕ್ಕೆ ಕಾಣಿಕೆ ನೀಡುತ್ತಿವೆ.

ಭಾರತೀಯ ಭಾಷೆಗಳಲ್ಲಿನ ಬರವಣಿಗೆ, ಪ್ರಸ್ತುತ ಆಯ್ಕೆ ಮಾಡಿಕೊಂಡಿರುವ ಕನ್ನಡದ ಪ್ರಬಂಧಗಳು ಪ್ರಧಾನವಾಗಿ ತೋರಿಸುತ್ತಿರುವಂತೆ ಭಾರತೀಯ ಸಂಸ್ಕೃತಿ, ರಾಚನಿಕ ಸಂಗತಿಗಳು ಮತ್ತು ಅವುಗಳ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಹೊಸ ಪರಿಕಲ್ಪನಾತ್ಮಕ ಸಂಗತಿಗಳನ್ನು ರೂಪಿಸಬಲ್ಲ ಸಂಭಾವ್ಯ ಸಾಮರ್ಥ್ಯವನ್ನು ಪಡೆದಿವೆ ಮತ್ತು ಅಲ್ಲಿ ‘ಸಂದರ್ಭ – ಸ್ಪಂದಿ’ ಭಾರತೀಯ ಚಿಂತನೆಯನ್ನು ಪ್ರತಿನಿಧೀಕರಿಸಬಹುದು.[6] ಈ ಬಗೆಯ ಜನರ ದೈನಂದಿನ ಬದುಕಿನ ಜಗತ್ತಿನಲ್ಲಿನ ಅನುಭವಗಳ ಮೂಲಕ ರೂಪಿಸಿದ ತಳಮಟ್ಟದಲ್ಲಿ ನೆಲೆಗೊಂಡ ಮತ್ತು ಸ್ಥಳೀಯವಾದ ಪರಿಕಲ್ಪನಾತ್ಮಕ ಸಂಗತಿಗಳು ‘ಭಾರತೀಯ ಬುಡಕಟ್ಟು ಸಮಾಜಶಾಸ್ತ್ರೀಯ ಪ್ರಣಾಳಿಕೆ’ಯು[7] ಎದುರಿಸುತ್ತಿರುವ ಮಿತಿಗಳನ್ನು ಮೀರಲು ನೆರವಾಗಬಹುದು ಮತ್ತು ಅವು ಭಾರತೀಯ ಸಮಾಜವನ್ನು ಭಾರತೀಯವೆನ್ನಬಹುದಾದ ಪರಿಕಲ್ಪನೆಗಳ ಮೂಲಕವೇ ಅಧ್ಯಯನ ಮಾಡಬೇಕೆಂಬ ವಿಚಾರವನ್ನು ಒತ್ತಾಯಿಸುತ್ತಿವೆ. ಸುರಿನ್ ಪ್ರತಿಪಾದಿಸುತ್ತಿರುವಂತೆ ಪ್ರತಿಯೊಂದು ಸಂಸ್ಕೃತಿಯಲ್ಲಿನ ‘ಚಿಂತನಾ ಸಾಮರ್ಥ್ಯವನ್ನು ಗುರುತಿಸಬೇಕಾಗುತ್ತದೆ. ಏಕೆಂದರೆ ಆ ಪರಿಕಲ್ಪನಾತ್ಮಕ ಸಂಗತಿಗಳು ಆ ಚಿಂತನ ಸಾಮರ್ಥ್ಯವನ್ನು ಒಳಗೊಂಡಿರುತ್ತವೆ (ಸರೀನ್ ೧೯೯೭; ೨೦೩). ಇಷ್ಟಾದರೂ, ವಿವಿಧ ಜನಸಮುದಾಯಗಳ ವಾಸ್ತವತೆಗಳನ್ನು ಮತ್ತು ಅವರ ಸಂಸ್ಕೃತಿಗಳನ್ನು ಪ್ರತಿನಿಧಿಸಬಲ್ಲ ಚಿಂತನಾ ಸಾಮರ್ಥ್ಯದ ಪರಿಕಲ್ಪನಾತ್ಮಕ ಪರಿಭಾವನೆಗಳನ್ನು ಗುರುತಿಸಿದೆವು ಎಂದಿಟ್ಟುಕೊಂಡರೂ ಅವುಗಳ ಆಧಾರದ ಮೇಲೆ ನಮ್ಮ ಜ್ಞಾನಶಿಸ್ತುಗಳನ್ನು ಕಟ್ಟಲು ಸಾಧ್ಯವೆ?. ಭಾರತೀಯ ಅಥವಾ ಪ್ರಾದೇಶಿಕ ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಪಾಶ್ಚಿಮಾತ್ಯ ಚಿಂತನೆಯ ಮೂಲಕ ರೂಪಿಸಿಕೊಂಡ ಪರಿಕಲ್ಪನಾತ್ಮಕ ಪರಿಭಾವನೆಗಳು ಅಪ್ರಸ್ತುತವೆಂದು ತಿರಸ್ಕರಿಸುವುದು ಒಂದು ರೀತಿಯಲ್ಲಿ ಪ್ರಾಕೃತಿಕ ಸತ್ಯವಾಗಿ ಬಿಡುವ ಸಾಧ್ಯತೆಯಿದೆ. ಆದ್ದರಿಂದ ನಮ್ಮ ಮುಂದಿರುವ ಸವಾಲೆಂದರೆ ಸ್ಥಳೀಯ ಪರಿಕಲ್ಪನಾತ್ಮಕ ಪರಿಭಾವನೆಗಳನ್ನು ಗುರುತಿಸುವ ಕ್ರಮ ಮತ್ತು ಹೀಗೆ ಗುರುತಿಸಿದ ಸಂಗತಿಗಳ ಪ್ರಸ್ತುತೆಯನ್ನು ಮತ್ತು ಅರ್ಥವಿನ್ಯಾಸವನ್ನು ವಿಶ್ವಾತ್ಮಕ ಚಿಂತನೆಯ ಚೌಕಟ್ಟಿನಲ್ಲಿ ನೆಲೆಗೊಳಿಸುವ ಕ್ರಮ – ಎರಡನ್ನೂ ಸಂಯೋಜಿಸುವುದು. ಅದೇ ರೀತಿಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಾಮಾಜಿಕ ಬದಲಾವಣೆಯನ್ನು ಕುರಿತ ಪರಿಕಲ್ಪನೆಗಳು ಮತ್ತು ಸಿದ್ಧಾಂತಗಳು ಇನ್ನೂ ಕೊರತೆಯಿಂದ ಕೂಡಿವೆ. ಸಾಂಸ್ಕೃತಿಕ ಅನುಕರಣೆಯ ಮೂಲಕ ಸಾಧಿಸಿಕೊಳ್ಳುವ ಸಾಮಾಜಿಕ ಚಲನೆಯನ್ನು ವಿವರಿಸುವ ಸಾರಸದೃಶ ಪರಿಕಲ್ಪನೆ ಸಂಸ್ಕೃತಾನುಕರಣ ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದರೂ, ಖಾಸಗಿ ಮತ್ತು ಸಾರ್ವಜನಿಕ ಅವಕಾಶಗಳಲ್ಲಿ ‘ಸಂಪ್ರದಾಯ’ ನತ್ತು ಆಧುನಿಕತೆ’ಗಳನ್ನು ಪ್ರತ್ಯೇಕ ವರ್ಗಗಳಾಗಿ ಉಳಿಸಿಕೊಂಡಿರುವ ಸಂಗತಿಯಿದ್ದರೂ ಭಾರತದಲ್ಲಿನ ‘ಪರಿವರ್ತನೆಯು ಒಳಗೊಳ್ಳುವ ಒಗಟಿನ ಸಮಸ್ಯೆ’ಯನ್ನು ಹಿಡಿದಿಡಬಲ್ಲ ಸಾಮಾಜಿಕ ಬದಲಾವಣೆ ಸಿದ್ಧಾಂತಗಳು ಸಾಕಷ್ಟು ಸಂಖ್ಯೆಯಲ್ಲಿ ದೊರೆಯುವುದಿಲ್ಲ (ಮಾರ್ಕುಸ್ ೨೦೦೭). ಈ ಬಗೆಯ ಕೊರತೆಯನ್ನು ನಾವು ಭಾರತಕ್ಕೆ ಸಂಬಂಧಿಸಿದ ಬುನಾದಿಯೋಪಾದಿಯ ಪ್ರಧಾನ ಸಾಂಸ್ಕೃತಿಕ ಆಕೃತಿಗಳ ಪುನರುತ್ಪಾದನೆಯನ್ನು ವಿವರಿಸುವಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಿದ್ದಾಂತಗಳ ವೈಫಲ್ಯದ ಸಂದರ್ಭದಲ್ಲಿ ಕಾಣಬಹುದು. ಈ ದಿಶೆಯಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳೆಂದರೆ ಜಾತಿಯ ಕೇವಲ ಶ್ರೇಣೀಕರಣದ ರೂಪ ಮಾತ್ರವಾಗಿರದೆ ಸಂಪನ್ಮೂಲಗಳೂ ಜನರಿಗೆ ದೊರೆಯುವುದಕ್ಕೆ ಸಂಬಂಧಿಸಿದಂತೆ ಮತ್ತು ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಾದ ಅವಕಾಶಗಳಲ್ಲಿ ಜಾತಿ ಆಧಾರಿತ ತಾರತಮ್ಯಗಳಿಗೆ ಮೂಲವಾಗಿರುವ ‘ಬಂಡವಾಳ ಸಂಚಯನ ರಚನೆ’ಯ[8] ಮೂಲವೂ ಆಗಿರುವುದೇಕೆ? ಜಾತಿ ಸಂಬಂಧಗಳು ಅತ್ಯಂತ ಕೆಳವರ್ಗದ ಜಾತಿಗಳಲ್ಲೂ ಪುನರಾವರ್ತನೆ ಏಕಾಗುತ್ತಿವೆ? ಆರ್ಥಿಕ ಅಭಿವೃದ್ಧಿಯು ಯಾವಾಗಲೂ ಸಾಮಾಜಿಕ ಅಭಿವೃದ್ಧಿಯಾಗಿ ಪರಿವರ್ತನೆ ಏಕೆ ಆಗುವುದಿಲ್ಲ? ಈಚೆಗೆ ಹುಟ್ಟಿಕೊಳ್ಳುತ್ತಿರುವ ವಿವಿಧ ಬಗೆಯ ಸಾಂಸ್ಕೃತಿಕ ಆಕೃತಿಗಳನ್ನು ‘ಪರ್ಯಾಯ’ವೆಂದು ಮತ್ತು ಅವುಗಳನ್ನು ‘ಪ್ರಾದೇಶಿಕ’ ಆಧುನಿಕತೆಗಳೆಂದು[9] ಗುರುತಿಸುತ್ತಿರುವ ಸಂದರ್ಭದಲ್ಲಿ ಆ ‘ಆಧುನಿಕತೆ’ಯ ರೂಪಗಳ ಮಹತ್ವವನ್ನು ಕುರಿತಂತೆ ಮೌಲ್ಯಮಾಪನ ಮಾಡುವುದು ಅರ್ಥಪೂರ್ಣವಾಗಿರುತ್ತದೆ. ಈ ರೀತಿ ಅಧ್ಯಯನಕ್ಕೆ ಒಳಗಾಗದ ಮತ್ತು ಉತ್ತರ ದೊರೆಯದಿರುವ ಪ್ರಶ್ನೆಗಳಿಗೆ ಭಾರತೀಯ ಸಮಾಜಶಾಸ್ತ್ರಗಳನ್ನು ಬಹುಳೀಕರಣಕ್ಕೆ ಒಳಪಡಿಸುವುದರಲ್ಲಿ ಮತ್ತು ಅಂತಹ ಬೆಳವಣಿಗೆಗಳನ್ನು ಪ್ರತಿನಿಧಿಸುವ ದೃಷ್ಟಿಕೋನಗಳಲ್ಲಿ ಮತ್ತು ಧ್ವನಿಗಳಲ್ಲಿ ಸಮಾಧಾನವಿರುವಂತೆ ಕಾಣುತ್ತದೆ.

ಬಹುಸಂಖ್ಯೆಯಲ್ಲಿರುವ ಭಾರತದ ಬುಡಕಟ್ಟು ಕಥನಗಳು ಇಂದು ಚಲಾವಣೆಯಲ್ಲಿವೆ. ಅವು ಭಾರತಕ್ಕೆ ವಿಶಿಷ್ಟವಾದುದು ಎಂಬ ರಚನೆಗಳಲ್ಲಿ ನೆಲೆಗೊಂಡು ಬಿಟ್ಟಿದೆ. ಒಂದು ಸಂಸ್ಥೆಯಾಗಿ, ಒಂದು ರಚನೆಯಾಗಿ ಮತ್ತು ಒಂದು ಸೂಚಿಯಾಗಿ ಜಾತಿಯು ಭಾರತದ ವಿಶಿಷ್ಟ ಪರಿಕಲ್ಪನೆಯಾಗಿದೆ ಎಂಬ ಅರ್ಥವು ಈ ಕಥನಗಳಲ್ಲಿ ಬೇರೂರಿ ಬಿಟ್ಟಿವೆ. ಇದರ ಪರಿಣಾಮವಾಗಿ ಎರಡು ಧಾರೆಗಳು ಹುಟ್ಟಿಕೊಂಡಿವೆ. ಭಾರತದ ಹುಡಕಟ್ಟು ಕಥನಗಳು ಹೇಸ್ಟರ್ ಮನ್ (೧೯೮೫) ಹೇಳುವಂತೆ ‘ಆತ್ಮದರ್ಶನ ಬುಡಕಟ್ಟು ಕಥನ’ಗಳಾಗಿವೆ. ಅವುಗಳಲ್ಲಿ ಬಹಳಷ್ಟು ತುಲನಾತ್ಮಕ ಅಧ್ಯನಕ್ಕೆ ದಕ್ಕುವುದಿಲ್ಲ. ಸಾಮಾಜಿಕ ಮಾನವಶಾಸ್ತ್ರದಲ್ಲಿ[10] ಚರ್ಚೆಯ ಕೇಂದ್ರ ಬಿಂದುವಾಗಿರುವ ಪಾಶ್ಚಮೇತರ ಜಗತ್ತಿಗೆ ಸೇರಿದ ಬುಡಕಟ್ಟು ಕಥನಗಳು ಇವುಗಳಿಗಿಂತ ಪೂರ್ಣ ಭಿನ್ನವಾಗಿವೆ. ಅಂದಮೇಲೆ ನಮ್ಮ ಮುಂದೆ ಉಳಿದಿರುವ ಸವಾಲೆಂದರೆ ಭಾರತೀಯ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರಗಳು ನಮ್ಮ ರಾಷ್ಟ್ರದ ವಾಸ್ತವತೆಗಳನ್ನು ಅದರ ವೈವಿಧ್ಯತೆಯಿಂದ ಕೂಡಿದ ಸಂಸ್ಕೃತಿಗಳನ್ನು ಮತ್ತು ಅವುಗಳ ಸಂಕೀರ್ಣತೆಗಳನ್ನು ಅಂತಾರಾಷ್ಟ್ರೀಯ ತುಲನಾತ್ಮಕ ಅಧ್ಯನಗಳಿಗೆ ಒದಗುವಂತೆ ಮಾಡುವುದು ಹೇಗೆ ಎಂಬುದಾಗಿದೆ. ಇಂದು ನಡೆಯುತ್ತಿರುವ ಹೊಸ ಜಾಗತೀಕರಣ ಸಂದರ್ಭದಲ್ಲಿ ಕೇಂದ್ರ ಸಂಗತಿಯಾಗಿದೆ. ಈ ಜಾಗತಿಕ ಸಂದರ್ಭದೊಳಗೆ ಬಂಡವಾಳಶಾಹಿ ವ್ಯವಸ್ಥೆಗಳ ರೂಪದಲ್ಲಿ ಪ್ರಸ್ತುತವಾಗುತ್ತಿರುವ ಸಂಸ್ಕೃತಿಗಳ ಮತ್ತು ಸಮಾಜಗಳ ಒಳರಚನೆಗಳು ಮತ್ತು ಅವುಗಳ ಜೊತೆಯಲ್ಲಿ ಜನರು ನಡೆಸುತ್ತಿರುವ ಅನುಸಂಧಾನದ ತಂತ್ರಗಳು ಒಂದು ರೀತಿಯ ತುಲನಾತ್ಮಕ ದೃಷ್ಟಿಕೋನದ ಹುಟ್ಟಿಗೆ ಆಧಾರವಾಗಬಹುದು ನಾವು ಮತ್ತೆ ಮತ್ತೆ ಸಾಕ್ಷಿಯಾಗಿರುವಂತೆ ಇಂದು ಹುಟ್ಟಿಕೊಳ್ಳುತ್ತಿರುವ ಸಂಸ್ಕೃತಿಯ ರೂಪಗಳು ನಮ್ಮ ಪರಂಪರೆಯಿಂದ ಅಥವಾ ನಮ್ಮ ಮೌಲ್ಯಗಳಿಗೆ ಸಂಬಂಧಿಸಿದ ನಿಯಮಗಳು, ಆಚರಣೆ ಮತ್ತು ಗುರುತುಗಳ ನೆಲೆಯಿಂದ ಅವಿರ್ಭಾವಗೊಂಡ ಸಂಗತಿಗಳಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಕಂಡುಬರುವ ಈ ಬಗೆಯ ಸಂಸ್ಕೃತಿಯು ಕೇವಲ ವಿಕೃತಗೊಂಡ ಮತ್ತು ವೈರುಧ್ಯಗಳಿಂದ ಕೂಡಿದ ಪ್ರಕ್ರಿಯೆಯು ರಾಷ್ಟ್ರೀಯ ಸಂಸ್ಕೃತಿ, ರಾಷ್ಟ್ರ ಮತ್ತು ಹೊಸ ವಿಷಯ ವಸ್ತುಗಳ ಮರು ಒತ್ತಾಯಕ್ಕೆ ಧಾರಿ ಮಾಡಿಕೊಡಬಹುದು(ಬರೂಚ, ೨೦೦೧.೫೬).

ಇದಕ್ಕೆ ಪ್ರತಿಯಾಗಿ ನಾವು ಹೊಸ ತರ್ಕ ಪ್ರಾಮಾಣ್ಯದಿಂದ ಮೇಲ್ಮೈ ಲಕ್ಷಣಗಳಿಂದ ಹಾಗೂ ಹೊಸ ಬಗೆಯ ಅಭಿವ್ಯಕ್ತಿಯನ್ನು ಮತ್ತು ವ್ಯಕ್ತಿ ನಿಷ್ಠತೆಯನ್ನು ಹೊರಸೂಸಬಲ್ಲ ‘ಹೊಸ ಬಗೆಯ ಪರಿವರ್ತನಾಶೀಲತೆ, ಚಳುವಳಿ, ಸಹಭಾಗಿತ್ವ ಅಥವಾ ಸಮ್ಮಿಳನ’ (ಸುರೀನ್, ೧೯೯೭,೨೦೦) ಗುಣಗಳಿಂದ ಕೂಡಿದ ನವೀನ ಮತ್ತು ವಿಭಿನ್ನ ಜಾಗತಿಕ ಸಂಸ್ಕೃತಿಗೆ ಕಾರಣವಾಗಬಹುದು ವಾಸ್ತವಗಳಿಗೆ ನಾವು ಸಿದ್ಧರಾಗಬೇಕು ಮತ್ತು ಅಂತಹ ಸಮಾಜವಿಜ್ಞಾನ ಮತ್ತು ಬೋಧನೆಗಳಿಗೆ ಸಂಬಂಧಿಸಿದ ಸಂಗತಿಗಳ ಜೊತೆಯಲ್ಲಿ ಅನುಸಂಧಾನ ನಡೆಸಬೇಕು. ಪ್ರಾದೇಶಿಕ ಬರವಣಿಗೆಯನ್ನು ಸಂಯೋಜಿಸಿಕೊಳ್ಳುವ ಕ್ರಮವು ವಿದ್ವಾಂಸರ ಮತ್ತು ಜನರ ವೈವಿಧ್ಯಮಯವಾದ ಹೊಸ ಬಗೆಯ ಧ್ವನಿಗಳ ಅಭಿವ್ಯಕ್ತಿಗೆ, ಅವರ ಕರ್ತೃತ್ವಕ್ಕೆ ಮತ್ತು ವ್ಯಕ್ತಿನಿಷ್ಠತೆಗೆ ಒಂದು ಸಂದರ್ಭವನ್ನು ಮತ್ತು ಅವಕಾಶವನ್ನು ಒದಗಿಸುತ್ತದೆ. ಈ ಬಗೆಯ ಪ್ರತಿನಿಧೀಕರಣದಿಂದಾಗಿ ಭಾರತೀಯ ಸಮಾಜಶಾಸ್ತ್ರವು ಸಂಸ್ಕೃತಿಗೆ ಹೊಸ ಬಗೆಯ ವ್ಯಾಖ್ಯೆಯನ್ನು ನೀಡಲು ಶಕ್ತವಾಗುತ್ತದೆ. ಈ ರೀತಿಯಲ್ಲಿನ ಪ್ರತಿನಿಧೀಕರಣದಿಂದಾಗಿ ಭಾರತೀಯ ಸಮಾಜಶಾಸ್ತ್ರವು ಹೊಸ ಬಗೆಯಲ್ಲಿ ಸಂಸ್ಕರತಿ ವ್ಯಾಖ್ಯೆಯನ್ನು ರೂಪಿಸುವುದು ಸಾಧ್ಯವಾಗುತ್ತದೆ. ಅಂತಹ ವ್ಯಾಖ್ಯೆಗಳು ಅದೇಶಾತ್ಮಕವಾದ ಮತ್ತು ಸಾವಯವ ರೀತಿಯ ಸಂಸ್ಕೃತ ವ್ಯಾಖ್ಯೆಗಳ ವಿನ್ಯಾಸಗಳನ್ನು ಮೀರಿ ಸಂಸ್ಕೃತ ಎನ್ನುವುದು ಅರ್ಥಗಳನ್ನು, ಆದರ್ಶಗಳನ್ನು, ತಂತ್ರಗಳನ್ನು ಮತ್ತು ಸಾಧನಗಳನ್ನು ಒಳಗೊಂಡ ಒಂದು ಸಂಕೀರ್ಣ ವ್ಯವಸ್ಥೆ ಎಂಬುದನ್ನು ಎತ್ತಿ ತೋರಿಸುತ್ತವೆ.

ವೈವಿಧ್ಯಮಯವಾದ ಪ್ರಾದೇಶಿಕ ಬದುಕಿನ ಸ್ಥಿತಿಗತಿಗಳನ್ನು ಪ್ರವೃತ್ತಿಗಳನ್ನು ಸಾಂದರ್ಭಿಕತೆಗಳನ್ನು ಧ್ವನಿಗಳನ್ನು ಅನುಭವಗಳನ್ನು ಮತ್ತು ವ್ಯಕ್ತಿನಿಷ್ಠತೆಗಳನ್ನು ಪ್ರತಿನಿಧಿಸುವ ಪ್ರಾದೇಶಿಕ ಬರವಣಿಗೆಗಳ ಅನುವಾದಗಳು ಭಾರತದ ಬಹುರೂಪಿ ಪ್ರಾದೇಶಿಕತೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಪ್ರತಿನಿಧಿಸುವಲ್ಲಿ ಉಂಟಾಗಿರುವ ಅಸಮತೋಲನವನ್ನು ಪರಿಹರಿಸಿಕೊಳ್ಳಲು ನೆರವಾಗಬಹುದು. ಇದು ಬಹಳ ಮುಖ್ಯ ಏಕೆಂದರೆ ದೆಹಲಿಯ ಸುಮಾರು ೨೦೦ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಿಟ್ಟು ಮತ್ತು ತಮಿಳುನಾಡು, ಕೇರಳ, ಗುಜರಾತ್ ಮತ್ತು ಬಂಗಾಳಗಳನ್ನು ಬಿಟ್ಟು ಭಾರತದ ಬಹಳಷ್ಟು ವಿಶಾಲವಾದ ಭಾಗ, ಅದರಲ್ಲೂ ಈಶಾನ್ಯ ಭಾಗದ ರಾಜ್ಯಗಳು ಅಧ್ಯಯನಗಳಿಗೆ ಒಳಪಟ್ಟಿಲ್ಲ. ಅಭಿವೃದ್ಧಿ ಮತ್ತು ಆರ್ಥಿಕ ಸೂಚಿಗಳು ವಿಶಿಷ್ಟವಾಗಿ ತೋರಿಸುತ್ತಿರುವಂತೆ ರಾಜ್ಯ – ರಾಜ್ಯಗಳ ಮತ್ತು ಪ್ರದೇಶ – ಪ್ರದೇಶಗಳ ನಡುವೆ ಹೆಚ್ಚುತ್ತಿರುವ ಭಿನ್ನತೆಗಳ ಸಂದಭ್ದಲ್ಲಿ ಇಂತಹ ಪ್ರದೇಶ ನಿರ್ದಿಷ್ಟ ಪ್ರವೃತ್ತಿಗಳ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಇದರ ಜೊತೆಯಲ್ಲಿ ಭಾರತೀಯ ಸಮಾಜಶಾಸ್ತ್ರವು ಜನರ ಜೊತೆಯಲ್ಲಿ ಅನುಸಂದಾನಾತ್ಮಕ ಸಂಬಂಧವನ್ನು ಬೆಳಸಿಕೊಳ್ಳುವ ದೃಷ್ಟಿಯಿಂದ ಮತ್ತು ವಿವಿಧ ಬಗೆಯ ‘ಸಾರ್ವಜನಿಕ ಸಮಾಜಶಾಸ್ತ್ರ’ಗಳಿಗೆ[11] ಕಾಣಿಕೆ ನೀಡುವುದರ ದೃಷ್ಟಿಯಿಂದ ಪ್ರಧಾನಧಾರೆಯಲ್ಲಿನ ಇಂಗ್ಲಿಷ್ ಬರವಣಿಗೆಗಳಿಗಿಂತ ಪ್ರಾದೇಶಿಕ ಬರವಣಿಗೆಗಳು ಹೊಸ ಅವಕಾಶಗಳನ್ನು ಸೃಷ್ಟಿಸಬಲ್ಲವು ಮತ್ತು ಹೊಸ ದೃಷ್ಟಿಕೋನಗಳನ್ನು ಸಂಬಂಧಿಸಿದ ಇಂತಹ ಬರವಣಿಗೆಗಳ ರಾಶಿಯು ‘ಆರ್ಥಿಕವಾದ – ಸೀಮಿತೀಕರಣಗಳ ಲಕ್ಷಣಗಳನ್ನು ಹೊಂದಿರುವ ನವೆ – ಉದಾರವಾದದ’ ಮತ್ತು ‘ಸಾಂಪ್ರದಾಯಿಕ ನಿರ್ಮಾಣವಾದದ ಲಕ್ಷಣವನ್ನು ಹೊಂದಿರುವ ಆಧುನಿಕೋತ್ತರ ವಾದ”ಗಳ ಅನಾಗರಿಕ ಆಕ್ರಮಣಗಳ ಅವಾಲುಗಳಿಗೆ ಸಮನಾಗಿ ಎದ್ದು ನಿಲ್ಲುವುದು ಸಾಧ್ಯವಾಗಬಹುದು (ಬೋರಾನ್ ೧೯೯೯.೬೦) ಮತ್ತು ಭಾರತದ ವಾಸ್ತವಗಳನ್ನು ಅದರ ಪೂರ್ಣಾವತಾರದಲ್ಲಿ ಪ್ರತಿನಿಧಿಸುವಂತಹ ಕ್ರಮಗಳನ್ನು ಹುಡುಕುವುದು ಆಗ ಸಾಧ್ಯವಾಗಬಹುದು. ಸೈದ್ಧಾಂತಿಕೇತರ ಮತ್ತು ಪ್ರಾಥಮಿಕವೆನ್ನ ಬಹುದಾದ ಗುಣಲಕ್ಷಣಗಳನ್ನು ಹೊಂದಿರುವ ಹಾಗೂ ಹೊಸಬಗೆಯ ಮತ್ತು ಹೆಚ್ಚು ಪ್ರಾತಿನಿಧಿಕವೆನ್ನಬಹುದಾದ ಪರಿಕಲ್ಪನೆಗಳನ್ನು ಒದಗಿಸಬಲ್ಲ ಶಕ್ತಿಯನ್ನು ಹೊಂದಿರುವ ಇಲ್ಲಿ ಸಂಕಲಗೊಂಡಿರುವ ಪ್ರಾತಿನಿಧಿಕ ಪ್ರಬಂಧಗಳು ಸಮಷ್ಟಿ ಬೌದ್ಧಿಕ ‘ವಿಸ್ಮೃತಿ’ಯ (ದೇವಿ ೧೯೯೨) ಸವಾಲನ್ನು ಮೀರಲು ಅಗತ್ಯವಾದ ಸಾಮರ್ಥ್ಯವನ್ನು ಇವು ತಮ್ಮೊಳಗೆ ಹುದುಗಿಕೊಂಡಿರುವ ಸಾಧ್ಯತೆಯಿದೆ ಮತ್ತು ಸಮಾಜವಿಜ್ಞಾನಗಳ ಅಧ್ಯಯನಗಳಿಗೆ ಸಂಬಂಧಿಸಿದ ಸ್ವರಾಜ್ಯವನ್ನು[12] ಸಾಧಿಸುವ ಕಡೆಗೆ ಸಾಗಲು ಅಗತ್ಯವಾದ ಸಾಮರ್ಥ್ಯವನ್ನು ಅವು ನಮಗೆ ನೀಡಬಲ್ಲವು.

ಪ್ರಬಂಧಗಳ ಆಯ್ಕೆ

ಈ ಸಂಪುಟವನ್ನು ಸಿದ್ಧಪಡಿಸಿದ ನನಗೆ ಸಮಾಜ ಮತ್ತು ಸಂಸ್ಕೃತಿ ಕುರಿತ ಇಲ್ಲಿನ ಕನ್ನಡದ ಬರವಣಿಗೆಗಳು ಪರಿಪೂರ್ಣವಾದ ರೀತಿಯಲ್ಲಿ ಮತ್ತು ವಿಸ್ತೃತವಾದ ನೆಲೆಯಲ್ಲಿ ಪ್ರಾತಿನಿಧಿಕವಾದವುಗಳು ಎಂಬುದನ್ನು ಹೇಳುವ ಧೈರ್ಯವಿಲ್ಲ. ವಾಸ್ತವವಾಗಿ ನನಗೆ ಕನ್ನಡದಲ್ಲಿ ಶಿಕ್ಷಣ ಪಡೆಯುವುದು ಸಾಧ್ಯವಾಗದೆ ಇದ್ದುದ್ದರಿಂದ ಮತ್ತು ನನ್ನ ಸ್ವಂತ ವೈಯಕ್ತಿಕ ಹಾಗೂ ಶೈಕ್ಷಣಿಕ ವಾಸ್ತವ್ಯವು ಇಂಗ್ಲಿಷ್ ಮಯವಾಗಿರುವುದರಿಂದ ಕನ್ನಡದ ವಿದ್ವತ್ ಪೂರ್ಣ ಜಗತ್ತು ಪೋಷಿಸುತ್ತಿರುವ ಅನೇಕ ಸಣ್ಣ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಮುಖ್ಯವೆನ್ನಬಹುದಾದ ಅನೇಕ ವಿಷಯವಸ್ತುಗಳನ್ನು ಕುರಿತಂತೆ ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲರಾಗಿ ಬರೆಯುತ್ತಿರುವ ಅನೇಕ ಕನ್ನಡ ಬರಹಗಾರರ ಬರಹಗಳಿಗೆ ಇಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗದಿರುವುದಕ್ಕೆ ನಾನು ವಿಷಾದಿಸುತ್ತೇನೆ. ಈ ಸಂಕಲಕ್ಕೆ ಆಯ್ಕೆ ಮಾಡಿಕೊಂಡ ಅನೇಕ ಪ್ರಬಂಧಗಳನ್ನು ಇಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಏಕೆಂದರೆ ಅವುಗಳಲ್ಲಿ ಕೆಲವು ತುಂಬಾ ಸಂಕ್ಷಿಪ್ತ ರೂಪದ ಬರಹಗಳಾಗಿದ್ದವು ಅಥವಾ ಅವುಗಳು ವಿವಿಧ ಕಾಲದಲ್ಲಿ ಸಂಭವಿಸಿದ್ದ ವಿವಿಧ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಸಿದ್ಧವಾಗಿದ್ದುದರಿಂದ ಅವು ಸಾಂದರ್ಭಿಕತೆಯನ್ನು ಕಳೆದುಕೊಂಡಿದ್ದವು. ಮಹಿಳೆಯರ ಸಮಸ್ಯೆಗಳ ಬಗ್ಗೆ ಸೃಜನಶೀಲರಾಗಿ ಮತ್ತು ಸ್ಪರ್ಧಾತ್ಮಕವಾಗಿ ಬರೆಯುತ್ತಿರುವ ವೈದೇಹಿ, ಸಾರಾ ಅಬೂಬಕರ್ ಮತ್ತು ಸವಿತಾ ನಾಗಭೂಷಣ ಇವರ ಪ್ರಬಂಧಗಳನ್ನು ಇಲ್ಲಿ ಸೇರಿಸಿಕೊಳ್ಳಲಾಗಲಿಲ್ಲ. ಕನ್ನಡದ ಅನೇಕ ಪತ್ರಿಕೆ ಮತ್ತು ನಿಯತಕಾಲಿಕೆಗಳಾದ ಹೊಸತು, ಸುಧಾ, ಲಂಕೇಶ್ ಪತ್ರಿಕೆ (ಮೂಲ ಆವೃತ್ತಿ) ಸಂಕಲನ, ಸಂವಾದ ಮತ್ತು ಹೊಸ ಸೃಜನಶೀಲ ನಿಯತಕಾಲಿಕೆ ದೇಶ – ಕಾಲ ಮುಂತಾದವುಗಳಲ್ಲಿ ಪ್ರಕಟವಾಗುತ್ತಿರುವ ಪ್ರಬಂಧಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳ ಬಗೆಗಿನ ಟೀಕೆಗಳ ಅದ್ಭುತ ನಿಕ್ಷೇಪಗಳಾಗಿವೆ. ಶಿಕ್ಷಕರು ಮತ್ತು ವಿದ್ವಾಂಸರು ತಮ್ಮ ತರಗತಿಗಳಲ್ಲಿ ಮತ್ತು ಶೈಕ್ಷಣಿಕ ಅಧ್ಯಯನಗಳಲ್ಲಿ ಈ ಪತ್ರಿಕೆಗಳಲ್ಲಿನ ಮತ್ತು ನಿಯತಕಾಲಿಕೆಗಳಲ್ಲಿನ ಪ್ರಬಂಧಗಳನ್ನು ಬಳಸಲು ಪರಿಶೀಲಿಸಬಹುದು. ಕನ್ನಡದ ಬರವಣಿಗೆ ಸಮೃದ್ಧವಾಗಿದ್ದರೂ ಮತ್ತು ಸೃಜನಶೀಲವಾಗಿದ್ದರೂ ಅಲ್ಲಿನ ಬೌದ್ಧಿಕ ಬರವಣಿಗೆಗಳಲ್ಲಿ ಅನೇಕ ವೈರುಧ್ಯಗಳಿವೆ. ಒಂದು ಕಡೆ ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳ ಸಂಕೀರ್ಣತೆಗಳನ್ನು ಹಿಡಿದಿಡಬಲ್ಲ ವಿಮರ್ಶಾತ್ಮಕ ಮತ್ತು ಚಿಂತನಾಭಿವ್ಯಕ್ತಿಯನ್ನು ಪ್ರತಿನಿಧಿಸುವ ಬರಹಗಳು ಕೃಚಿತ್ತಾಗಿ ದೊರೆಯುತ್ತವೆ. ಈ ಬಗೆಯ ಬರವಣಿಗೆಯನ್ನು ಕೆ.ವಿ ಸುಬ್ಬಣ್ಣ, ಯು.ಆರ್ ಆನಂತಮೂರ್ತಿ, ಮೊಗಳ್ಳಿ, ಗಣೇಶ, ವೈದೇಹಿ, ಬರಗೂರು ರಾಮಚಂದ್ರಪ್ಪ, ನೇಮಿಚಂದ್ರ. ಡಿ.ಆರ್. ನಾಗರಾಜ್, ಮುರಾರಿ ಬಲ್ಲಾಳ್, ಜಯಂತ್ ಕಾಯ್ಕಿಣಿ, ವಸುಧೇಂದ್ರ ಮುಂತಾದವರು ಪ್ರತಿನಿಧಿಸುತ್ತಾರೆ. ಇಲ್ಲಿಯೂ ಸಹ ಅನೇಕ ಬರಹಗಳು ಚರ್ಚೆಯಾಗುತ್ತಿರುವ ಸಂಗತಿಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿರುತ್ತವೆ. ಅಥವಾ ಸಾರ್ವಜನಿಕ ಸಮಸ್ಯೆಗಳು – ಘಟನೆಗಳ ಬಗ್ಗೆ ಬರೆದ ಬರಹಗಳಾಗಿರುತ್ತವೆ. ಆದುದರಿಂದ ಅವು ಒಂದೋ ಜನಪ್ರಿಯ ಪತ್ರಿಕಾ ಬರಹಗಳ ರೂಪದಲ್ಲಿರುತ್ತವೆ ಇಲ್ಲವೇ ಚಿಂತಾನಾಭಿವ್ಯಕ್ತಿಯ ರೂಪದಲ್ಲಿರುತ್ತವೆ. ಸಮಾಜವಿಜ್ಞಾನದ ಬರವಣಿಗೆಗಳು ಎಂದು ಗುರುತಿಸಿ ಆ ಪ್ರಕಾರದಲ್ಲಿ ಸುಲಭವಾಗಿ ಸೇರಿಸಿಕೊಳ್ಳುವಂತಹ ನಿಯಮಿತ ಮತ್ತು ಸುಸಂಗತವಾದ ಬರವಣಿಗೆ ಇಲ್ಲಿ ಕಂಡುಬರುವುದಿಲ್ಲ. ಇದಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಬರೆಯುತ್ತಿರುವ ಸಮಾಜ ವಿಜ್ಞಾನಿಗಳು ಅಂತಹ ಪ್ರಕಾರವನ್ನು ಬೆಳೆಸುವ ಸಾಮರ್ಥ್ಯ ಪಡೆದಿದ್ದಾರೆ. ಈ ಸಾಮರ್ಥ್ಯವು ಸ್ವಷ್ಟವಾಗಿ ಮಹಿಳಾ ಅಧ್ಯಯನ ಅಭಿವೃದ್ಧಿ ಅಧ್ಯಯನ, ಕನ್ನಡ ಅಧ್ಯಯನ ಮುಂತಾದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ[13] ನಿಯತಕಾಲಿಕೆಗಳಲ್ಲಿನ ಪ್ರಬಂಧಗಳಲ್ಲಿ ಕಂಡುಬರುತ್ತವೆ. ಅಲ್ಲಿ ಇಂತಹ ಧ್ವನಿಗಳನ್ನು ಗುರುತಿಸುವ ಮತ್ತು ಹಿಡಿದಿಡುವ ಒಂದು ಪ್ರಯತ್ನ ನಡೆಯುತ್ತಿದೆ. ಆದರೆ ಈ ಪ್ರಬಂಧಗಳ ವಿಷಯವಸ್ತು ಮತ್ತು ದೃಷ್ಟಿಕೋನಗಳು ಪ್ರಾದೇಶಿಕತೆಯನ್ನು ಅಥವಾ ಪರ್ಯಾಯ ದೃಷ್ಟಿಕೋನಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವ್ಯಕ್ತಿಸುತ್ತಿವೆ ಅನ್ನಿಸುವುದಿಲ್ಲ. ಅಲ್ಲಿ ಕೆಲವು ಇನ್ನೂ ಸ್ವಲ್ಪ ಮಟ್ಟಿಗೆ ಇಂಗ್ಲಿಷ್ ಪಾಶ್ಚಿಮಾತ್ಯ ಎನ್ನಬಹುದಾದ ಸಿದ್ಧಾಂತಗಳು, ದೃಷ್ಟಿಕೋನಗಳು ಮತ್ತು ವಿದ್ವತ್ತಿನ ಚೌಕಟ್ಟಿನೊಳಗೆ ಸಿದ್ಧವಾಗುತ್ತಿರುವಂತೆ ಕಾಣುತ್ತವೆ. ಜೊತೆಗೆ ಹೆಚ್ಚು ಬರಹಗಳು ಇನ್ನೂ ಸಾಹಿತ್ಯಿಕ ವಿಮರ್ಶೆಯನ್ನು ಕುರಿತೇ ಚರ್ಚೆಮಾಡುತ್ತಿವೆ. ಸಮಾಜವಿಜ್ಞಾನದ್ದೆಂದು ಗುರುತಿಸಬಹುದಾದ ಅಥವಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆ ಅನುಸಂಧಾನ ನಡೆಸುವ ಅಥವಾ ಟೀಕೆ ಮಾಡುವ ಬರಹಗಳು ನಿರ್ದಿಷ್ಟವಾಗಿ ಬಹಳ ಕಡಿಮೆ, ಪ್ರಧಾನ ಪ್ರಣಾಳಿಕೆಗಳನ್ನು ಪರಿಕಲ್ಪನೆಗಳನ್ನು ಖಚಿತವಾಗಿ ನಿರ್ವಚಿಸುವ ಕಂಡುಬರುವುದಿಲ್ಲ. ವಿಚಾರಗಳನ್ನು ಮತ್ತು ಪರಿಕಲ್ಪನೆಗಳನ್ನು ಎಲ್ಲಿಂದ ಕಡ ತಂದಿರಲಾಗುತ್ತದೋ ಅವರ ಮೂಲವನ್ನು ಉಲ್ಲೇಖಿಸುವುದಿಲ್ಲ. ಪ್ರಕಟಣೆಯು ಸುಲಭ ಎಂಬ ಕಾರಣಕ್ಕೆ ಸಿದ್ಧವಾಗುವ ಅನೇಕ ಪುಸ್ತಕಗಳು ಅಥವಾ ಅಧ್ಯಯನ ಪ್ರಬಮಧಗಳು ಸೂಕ್ತವಾಗಿ ರೂಪುಗೊಂಡಿರುವುದಿಲ್ಲ ಅಥವಾ ಅಮರ್ಪಕವಾಗಿ ಸಂಪಾದನೆ ಮಾಡಿರುವುದಿಲ್ಲ. ಇದರಿಂದಾಗಿ ಅವುಗಳ ಸಾಮರ್ಥ್ಯವು ವ್ಯರ್ಥವಾಗಿ ಬಿಡುತ್ತದೆ. ಈ ಸಮಸ್ಯೆಗಳನ್ನು ಎದುರಿಸುವ ಮೂಲಕ ಮತ್ತು ಪ್ರಜ್ಞಾಪೂರ್ವಕವಾಗಿ ‘ಸಮಾಜವಿಜ್ಞಾನ’ದ್ದು ಎನ್ನಬಹುದಾದ ಪ್ರಾದೇಶಿಕ ಭಾಷೆಯಲ್ಲಿನ ಬರವಣಿಗೆಗಳನ್ನು ಪ್ರೋತ್ಸಾಹಿಸುವುದರಿಂದ ಭಾರತೀಯ ಸಮಾಜವಿಜ್ಞಾನವೆಂಬ ಪರ್ಯಾಯಕ್ಕೆ (ಅದು ಸ್ಥಳೀಯವಾದುದೇನಾಗಬೇಕಾಗಿಲ್ಲ) ಅಡಿಪಾಯವನ್ನು ಹಾಕಬಹುದು.

ಈ ಪ್ರಾಸ್ತಾವಿಕ ಪ್ರಬಂಧದ ಕೊನೆಟಿಪ್ಪಣಿಗಳು ಸಂಪಾದಕರ ಟೀಕೆಗಳಾಗಿವೆ. ಅವು ಒಂದೋ ಕೆಲವು ಪದಗಳಿಗೆ ವಿವರಣೆಯನ್ನು ನೀಡುತ್ತವೆ ಅಥವಾ ಆಕರಗಳಿಗೆ ಸಂಬಂದಿಸಿರುತ್ತವೆ ಅಥವಾ ಪರಾಮರ್ಶನ ಸೂಚಿಗೆ ಸಂಬಂಧಿಸಿರುತ್ತವೆ ಇಲ್ಲವೆ ಘಟನೆಗಳಿಗೆ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತವೆ. ಇವೆಲ್ಲವನ್ನು ಸಂಪಾದಕಿಯಾಗಿ ನಾನು ನೀಡಿದ್ದೇನೆ.

* * *

[1] ಅಭಿವೃದ್ಧಿಯೋತ್ತರ ಕುರಿತ ಸಾಹಿತ್ಯ ಪರಿಶೀಲನೆಗೆ ನೋಡಿ ಎಸ್ಕೋಬಾರ್ (೧೯೯೧)

[2] ಅವರ ‘ಸಮುದಾಯ ಮತ್ತು ಜನತಂತ್ರ’ ಪ್ರಬಂಧವನ್ನು ನೋಡಿ (೨೦೦೪)

[3] ವಿನೀತ ಸಿನ್ಹ (೨೦೦೦) ಅವರು ಭಾರತದ ಮಾನವಶಾಸ್ತ್ರದ ಚರಿತ್ರೆಯನ್ನು ಮೂರು ಪ್ರಕಾರವಾಗಿ ವರ್ಗೀಕರಿಸಿರುವ ಕ್ರಮವನ್ನು ಇಲ್ಲಿ ನಾನು ಅನುಸರಿಸಿದ್ದೇನೆ. ಅವು ಯಾವುವುವೆಂದರೆ ಬ್ರಿಟಿಷರ ಕಾಲಾವಧಿ (೧೭೭೪-೧೯೧೯) ಸ್ವಾತಂತ್ರ್ಯ ಪೂರ್ವ ಕಾಲಾವಧಿ (೧೯೨೦-೧೯೪೭) ಮತ್ತು ಸ್ವಾತಂತ್ರೋತ್ತರ ಕಾಲಾವಧಿ (೧೯೪೭ ಸಮಕಾಲೀನ ಕಾಲಾವಧಿವರೆಗೆ)

[4] ಲ್ಯೂಸಿ ಕ್ಯಾರೋಲ್ (೧೯೭೭) ಅವರು ‘ಸಂಸ್ಕೃತಾನುಕರಣ’ವನ್ನು ಭಾರತೀಯ ಸಾಮಾಜಿಕ ಬದಲಾವಣೆಯ ಮಹತ್ವದ ಮತ್ತು ಅಧಿಕೃತವಾದ ನಿರ್ದಿಷ್ಟ ಸಿದ್ಧಾಂತವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಭಾರತದ ವಿವಿಧ ಪ್ರದೇಶಗಳಲ್ಲಿ ಮತ್ತು ವಿವಿಧ ಜಾತಿಗಳಲ್ಲಿ ಸಂಭವಿಸುತ್ತಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಚಲನೆಯ ರೂಪವಾಗಿ ಅದನ್ನು ಪ್ರತಿನಿಧಿಸಬಹುದು ಎಂಬುದನ್ನು ಗುರುತಿಸುತ್ತಾಳೆ.

[5] ಸಬಾಲ್ಟ್ರನ್ ಸ್ಕೂಲ್ ಕುರಿತಾದ ಟೀಕೆಗಳಿಗೆ ನೋಡಿ ಡೆವಿಡ್ ಲುಡೆನ್ಸ್ (೨೦೦೧)

[6] ಭಾರತೀಯ ಚಿಂತನೆಯ ಸಂದರ್ಭ-ಸ್ಪಂದಿ ಕುರಿತ ಪ್ರತಿಪಾದನೆಗೆ ನೋಡಿ ಎ.ಕೆ. ರಾಮಾನುಜಮ್ (೧೯೯೦)

[7] ‘ಭಾರತೀಯ ಬುಡಕಟ್ಟುವಾದಿ ಸಮಾಜಶಾಸ್ತ್ರ’ ಎಂಬ ಪ್ರಣಾಳಿಕೆಯ ಅಥವಾ ದೃಷ್ಟಿಕೋನದ ಗುಣಲಕ್ಷಣಗಳನ್ನು ಮೊದಲು ಪ್ರತಿಪಾದಿಸಿದವರು ಮೆಕಿಮ್ ಮಾರಿಯೆಟ್(೧೯೭೬) ಅದನ್ನು ಅವರು ೧೯೯೦ರಲ್ಲಿ ಮತ್ತು ನಂತರದ ತಮ್ಮ ಕೃತಿಗಳಲ್ಲಿ ವಿಸ್ತೃತಗೊಳಿಸಿದರು ಮತ್ತು ಚಿಕಾಗೋ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿನ ಅವರ ವಿದ್ಯಾರ್ಥಿಗಳ ಸಂಶೋಧನೆಯಲ್ಲಿ ಅದು ಮುಂದುವರಿದಿರುವುದನ್ನು ಕಾಣಬಹುದು (ನೋಡಿ; ಶರ್ಮ ೧೯೮೯, ವಾಸವಿ ೧೯೯೯) ಇವರೆಲ್ಲ ಭಾರತೀಯ ಬುಡಕಟ್ಟುವಾದಿ ಸಮಾಜಶಾಸ್ತ್ರಜ್ಞರು ರೂಪಿಸಿರುವ ಪರಿಕಲ್ಪನೆಗಳ ಪ್ರಾತಿನಿಧಿತ್ವವನ್ನು ಮ್ತತು ಅವುಗಳ ಪ್ರಸ್ತುತತೆಯನ್ನು ಪ್ರಶ್ನೆ ಮಾಡಿದರು. ಪರ್ಯಾಯವಾದ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಜನರು ಜೀವಿಸುತ್ತಿರುವ ಕ್ರಮದ ಜೊತೆಯಲ್ಲಿ ಅದನ್ನು ಜೋಡಿಸುವುದು ಸಾಧ್ಯವಾಗದಿರುವುದರಿಂದ ಅಥವಾ ಸಂಸ್ಕೃತಿಯ ವಿಭಿನ್ನತೆಯನ್ನು ಅದರಲ್ಲಿ ತೋರಿಸುವುದು ಸಾಧ್ಯವಾಗದಿರುವುದರಿಂದ ಭಾರತೀಯ ಬುಡಕಟ್ಟವಾದಿ ಸಮಾಜಶಾಸ್ತ್ರವು ಮುಂದೆ ಹೊಗಲು ಸಾಧ್ಯವಾಗದೆ ಸ್ಥಗಿತಗೊಂಡು ಬಿಟ್ಟಿದೆ.

[8] ಡೆವಿಡ್ ಗೋಡ್ರಾನ್‌ನ ಸಿದ್ಧಾಂತವನ್ನು ಆಧರಿಸಿ ರೂಪುಗೊಂಡಿರುವ ‘ಸಂಪತ್ತಿನ ಸಂಚಯನದ ರಚನೆ’ ಪರಿಕಲ್ಪನೆಗೆ ನೋಡಿ ಬಾರ್ಬರ ಹ್ಯಾರಿಸ್ ವೈಟ್ (೨೦೦೪)

[9] ಭಾರತದಲ್ಲಿ ಆಧುನಿಕತೆಯ ಪಶ್ಚಿಮೇತರ ಮೂಲಗಳ ಬಗ್ಗೆ ಚರ್ಚೆ ಮಾಡುವ ಅನೇಕ ಅಧ್ಯಯನಗಳು ನಮ್ಮ ಮುಂದಿವೆ, ಸಂಜಟ್ ಸುಬ್ರಮಣ್ಯಮ್, ಪಾರ್ಥ ಚಟರ್ಜಿ ಮತ್ತು ಇತ್ತೀಚಿಗಿನ ಶಿವರಾಮಕೃಷ್ಣನ್ ಮತ್ತು ಅಗರ್ವಾಲ್ (ಪ್ರಾದೇಶಿಕ ಆಧುನಿಕತೆಗಳು) ಮುಂತಾದವರ ಅಧ್ಯಯನಗಳು ಕೆಲವು ಉದಾಹರಣೆಗಳು.

[10] ಪಾಶ್ಚಿಮಾತ್ಯ ವಿದ್ವಾಂಸರೇ ಪಶ್ಚಿಮೇತರ ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಸಿದ ಅಭಿಜಾತ ಬುಡಕಟ್ಟು ಕಥನಗಳಲ್ಲಿ ಮುಖ್ಯವಾದುವು ಜೀನ್ ಕಾಮರೂಫ್, ರೋಸಲಿಂಡ್ ಶಹಾ(ಆಫ್ರಿಕಾ) ಐವಾ ಓಂಗಾ(ಚೀನಾ ಮತ್ತು ಆಗ್ನೇಯ ಏಷ್ಯಾ) ದಕ್ಷಿಣ ಆಫ್ರಿಕಾಕ್ಕೆ ಸಂಬಂಧಿಸಿದ ಮೈಕೆಲ್ ತೌಸಿಗ್, ಸಾಮಾಜಿಕ ಮಾನವಶಾಸ್ತ್ರದ ಬಗ್ಗೆ ಈ ಅಧ್ಯಯನಗಳು ಹೊಸ ಚರ್ಚೆಗಳನ್ನು ಮತ್ತು ಸಂವಾದಗಳನ್ನು ಹುಟ್ಟು ಹಾಕಿವೆ.

[11] ಮೈಕೆಲ್ ಬುರಾವಾಯ್ (೨೦೦೪) ಅವರು ಸಮಾಜಶಾಸ್ತ್ರವನ್ನು ಸಾರ್ವಜನಿಕೀಕರಣಗೊಳಿಸಲು ನೀಡಿದ ಕರೆಯನ್ನು ಗಮನಿಸಬಹುದು. ಸಾರ್ವಜನಿಕವಾಗಿ ಪ್ರಮುಖವಾದ ಸಂಗತಿಗಳನ್ನು ಅಥವಾ ವಿಸ್ತೃತವಾಗಿ ಸಾರ್ವಜನಿಕರ ಮೇಲೆ ಪ್ರಭಾವ ಬೀರಬಲ್ಲ ಸಂಗತಿಗಳನ್ನು ಸಮಾಜಶಾಸ್ತ್ರವು ಹೆಚ್ಚು ಹೆಚ್ಚು ಪರಿಗಣಿಸಬೇಕು ಎಂಬ ಪ್ರಣಾಳಿಕೆಯನ್ನು ಇಲ್ಲಿ ಪ್ರತಿಪಾದಿಸಲಾಗುತ್ತಿದೆ.

[12] ‘ವಿಚಾರಗಳ ಸ್ವರಾಜ್’ ಬಗ್ಗೆ ೧೯೨೦ ದಶಕದಲ್ಲಿ ಕೆ.ಸಿ. ಭಟ್ಟಾಚಾರ್ಯ ನೀಡಿದ ಕರೆಯಲ್ಲಿ ವಸಾಹತುಶಾಹಿ ಜ್ಞಾನ ಮತ್ತು ಅದರ ಆಚರಣೆಗಳ ಹಿಡಿತಗಳಿಂದ ಮುಕ್ತವಾಗಬೇಕೆಂಬ ಸಂಗತಿಯು ಮುಖ್ಯವಾಗಿದ್ದರೆ ಜೆ.ಪಿ.ಎಸ್. ಒಬೆರಾಯ್ (೧೯೬೮) ಅವರು ತಮ್ಮ ಬರಹಗಳಲ್ಲಿ ಸ್ವಾತಂತ್ರ್ಯೋತ್ತರ ಕಾಲಾವಧಿಯಲ್ಲಿ ರೂಪಿಸಿದ ವಿಚಾರ ಪ್ರಣಾಳಿಕೆಗಳಲ್ಲಿ ಮತ್ತು ಅವುಗಳ ಅಧ್ಯಯನಗಳಲ್ಲಿ ಸ್ವರಾಜ್ಯವನ್ನು ಮತ್ತು ಸ್ವತಂತ್ರ ಚಿಂತನೆಯನ್ನು ಪ್ರತಿಪಾದಿಸುತ್ತಿದ್ದಾರೆ.

[13] ಕನ್ನಡ ವಿಶ್ವವಿಧ್ಯಾಲಯವು ಎಲ್ಲ ಬಗೆಯ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದಂತೆ ಉತ್ಪಾದಿಸುತ್ತಿರುವ ಬರವಣಿಗೆ ಮತ್ತು ಕೃತಿಗಳ ಜ್ಞಾನಮೀಮಾಂಸೆ, ವೈಧಾನಿಕತೆ ಮತ್ತು ಬೋಧನಾ ವಿಧಾನಗಳನ್ನು ಕುರಿತಂತೆ ಚರ್ಚೆ ನಡೆಸಿದರೆ ಅದು ಕುತೂಹಲಕಾರಿಯಾಗಿರುತ್ತದೆ.