ಮೂರನೇ ಜಗತ್ತಿನ ಹಿಂದುಳಿದ ಜನಾಂಗಗಳಿಗೆ ಯಾವುದು ಆಧುನೀಕತೆ, ಯಾವುದು ಪ್ರಾಚೀನವಾದದ್ದು, ಎಂಬುದರ ವಿಂಗಡನೆಯಿಂದ ಅವುಗಳ ಅಭಿವೃದ್ಧಿಯಲ್ಲಿ ಅವುಗಳ ಪಾತ್ರ ಏನು ಎಂದು ಚರ್ಚಿಸುವುದು ಇಲ್ಲಿನ ಉದ್ದೇಶ. ತಿರಸ್ಕೃತ ಸಮಾಜಗಳಿಗೆ ಶಿಕ್ಷಣ ದೊರೆತದ್ದು ಆಧುನಿಕತೆಯ ಮೂಲಕವೇ. ಅದು ತಡವಾಗಿ ಕೊನೆಯ ಹಂತದಲ್ಲಿ ಬಂದರೂ ಅದು ರೂಪಿಸಿದ ವೈಚಾರಿಕ ಎಚ್ಚರ ಮಾತ್ರ ಬಹಳ ಪರಿಣಾಮಕಾರಿಯಾದದ್ದು. ಜಗತ್ತಿನ ವಿಸ್ತಾರವನ್ನು ತೋರಿದ ಇಂಗ್ಲಿಶ್ ಶಿಕ್ಷಣ ಕ್ರಮ ದಲಿತರ ಪಾಲಿಗೆ ಬಿಡುಗಡೆಯ ಒಂದು ಸಾಧ್ಯತೆಯನ್ನು ತೋರಿಸಿಕೊಟ್ಟಿತು. ಆಫ್ರಿಕಾದಲ್ಲೂ ಅಂತದೇ ಎಚ್ಚರವನ್ನು ಇಂಗ್ಲಿಶ್ ಭಾಷೆ ಉಂಟು ಮಾಡಿತು. ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ: ಯಾವುದು ಪ್ರಭುತ್ವ ಶಕ್ತಿಯಾಗಿತ್ತೊ ಯಾವುದು ವಸಾಹತು ಶೋಷಣೆಯಾಗಿತ್ತೋ ಅದೇ ದಲಿತರ ಪಾಲಿಗೆ ವರವಾಗಿಯೂ ಪರಿಣಮಿಸಿದ್ದು ವಿಶೇಷವಾಗಿದೆ. ವೈದಿಕ ಸಮುದಾಯಗಳು ಆಧುನಿಕ ಇಂಗ್ಲಿಶ್ ಶಿಕ್ಷಣವನ್ನು ತಮ್ಮ ಸಂಸ್ಕೃತಿಯ ಪುನರುಜ್ಜೀವನಕ್ಕೆ ಬಳಸಿಕೊಳ್ಳಲು ತೊಡಗಿದ ನಂತರ ಅದೇ ಕೆಳ ಜಾತಿಗಳು ಅಂತಹ ಕ್ರಿಯೆಗೆ ಒಳಗಾಗದೆ ಬೇರೆ ಬಗೆಯ ಹುಡುಕಾಟಗಳಿಗೆ ಸಾಧ್ಯತೆಗಳಿಗೆ ಸಂಪರ್ಕಗಳಿಗೆ ತನ್ನನ್ನು ತೊಡಗಿಸಿಕೊಂಡದ್ದು ಭಿನ್ನವಾಗಿದೆ. ಪ್ರಭುತ್ವದ ಇನ್ನೊಂದು ರೂಪವಾಗಲು ಹಾಗೂ ಹಿಂದೂ ಧರ್ಮವನ್ನು ಕಾಪಾಡಿಕೊಂಡು ಜಾತಿ ವ್ಯವಸ್ಥೆಯನ್ನು ಪರಿಷ್ಕರಿಸಿಕೊಳ್ಳಲು ಮೇಲುಜಾತಿಗಳು ಹವಣಿಸಿದರೆ; ದಲಿತ ಜಾತಿಗಳು ಪ್ರಭುತ್ವದ ಪಾಲುದಾರರಾಗಲು ತೊಡಗಲೇ ಇಲ್ಲ. ಅಂತಹ ಪ್ರಭುತ್ವಕ್ಕಿಂತ ಮೀರಿದ್ದು ಅವುಗಳ ಅಂತರಂಗದಲ್ಲಿತ್ತು. ಅಧಿಕಾರದ ದಿಡ್ಡಿ ಬಾಗಿಲು ಬಡಿಯುವ ಶಕ್ತಿಯೂ ಅವುಗಳಿಗಿರಲಿಲ್ಲ. ವಸಾಹತುಶಾಹಿಯನ್ನು ನೇರವಾಗಿ ವಿರೋಧಿಸಿ ಅದರ ಸಹವಾಸಬೇಡ ಎಂದು ಘೋಷಿಸುವ ಸ್ಥಿತಿಯಲ್ಲೂ ಇರಲಿಲ್ಲ. ಅಥವಾ ಹಿಂದೂ ಧರ್ಮಸಾರವನ್ನೇ ಒಪ್ಪಿ ಅದರ ಜೊತೆ ಕನಸು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ವಿಸ್ತರಿಸುವುದಾದರೆ ಸ್ವತಃ ತನ್ನ ಪರಂಪರೆಯ ಕವಚದ ಒಳಗೇ ಸುರಕ್ಷಿತವಾಗಿ ಉಳಿಯಲೂ ಆಗುತ್ತಿರಲಿಲ್ಲ. ಒಂದು ಬಗೆಯಲ್ಲಿ ಅವಕಾಶವಾದಿಗಳಂತೆ ಎಲ್ಲೂ ಕಡೆಗಾದರೂ ಜಾರುವ ಅಪಾಯದಲ್ಲಿ ಕೆಳಜಾತಿಗಳು ಸೂಕ್ತ ಮಾರ್ಗದರ್ಶನವಿಲ್ಲದೆ ನರಳುತ್ತಿದ್ದು. ಇಂತಹ ಅಪಾಯಕಾರಿ ಸಂದಿಗ್ಧದಲ್ಲೂ ದಲಿತ ಸಮುದಾಯಗಳು ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗದೆ ಆಧುನಿಕತೆಯ ರಸ್ತೆಯಂಚಿಗೆ ಬರಲು ಅನುಮಾನದಿಂದ ಭಯದಿಂದ ಆಸೆಯಿಂದ ಕನಸಿನಿಂದ ಹತಾಶೆಯಿಂದ ಕಾಯುತ್ತಿದ್ದವೆಂಬುದನ್ನು ಇವತ್ತಿನ ಎಡವಾದಿಗಳು ಗಮನಿಸಬೇಕು. ಸಂಪೂರ್ಣ ಮಾರ್ಕ್ಸ್‌‌ವಾದಿ ರಸ್ತೆಗೂ ಇಳಿಯದೆ, ಇತ್ತ ವಸಾಹತುಶಾಹಿ ತೋರಿದ ಆಧುನಿಕತೆಯ ದಾರಿಗೂ ಆಡಿಯಿಡದೆ ಧ್ಯಾನದಲ್ಲಿ ಕಾಯುತ್ತ ನೊಂದ ಕೆಳಜಾತಿಗಳು ಅಸ್ತವ್ಯಸ್ಥವಾಗಿದ್ದನ್ನು ಬೇರೆಯದೇ ಆಗಿ ಪರಿಭಾವಿಸಬೇಕು. ಇಂತಹ ಹೊತ್ತಿನಲ್ಲಿ ಕೆಳಜಾತಿಗಳು ಆಧುನಿಕತೆಗೆ ತೆರೆದುಕೊಂಡದ್ದು ಬಿಡುಗಡೆಯ ಚರಿತ್ರೆಯಲ್ಲಿ ದೊಡ್ಡ ದಾಪುಗಾಲೆಂದೇ ತಿಳಿಯುತ್ತದೆ. ಹಾಗೆ ಹೊಸ ಜಗತ್ತಿನ ಅರಿವಿಗೆ ಒಳಗಾಗದಿದ್ದರೆ ಇವತ್ತು ಅವುಗಳ ಸ್ಥಿತಿಗತಿ ಇನ್ನೂ ಹದಗೆಟ್ಟಿರುತ್ತಿತ್ತು.

ಇಪ್ಪತ್ತನೆ ಶತಮಾನ ಜಗತ್ತಿನ ಅನೇಕ ನೊಂದ ಜನಾಂಗಗಳಿಗೆ ಬಿಡುಗಡೆಯ ಪಾಠ ಹೇಳಿಕೊಟ್ಟಿದೆ. ಹಾಗೆಯೇ ಮಾನವನ ಹತ್ಯಾಕಾಂಡದ ಯುದ್ಧಗಳ ಘೋರ ಅನುಭವಗಳನ್ನು ತಿಳಿಸಿದೆ. ಅಂತೆಯೇ ವಿಜ್ಞಾನ ತಂತ್ರಜ್ಞಾನಗಳ ಮೂಲಕ ಜಗತ್ತಿನ ಆಕಾರವನ್ನೇ ಬದಲಿಸಿದೆ. ಈ ಶತಮಾನದಲ್ಲೇ ಅಂಚಿನಲ್ಲಿದ್ದ ಭಾಷೆಗಳು ಅಲ್ಲಿನ ಪರಂಪರೆಗಳು ಸಾಹಿತ್ಯದ ರೂಪಗಳೂ ಬಿಡುಗಡೆಯ ಹೋರಾಟಗಳೂ ಹೊಸಜೀವ ಪಡೆದಿವೆ. ಹಾಗೆಯೇ ವಸಾಹತು ಸಾಮ್ರಾಜ್ಯವೂ ಇದರಲ್ಲೇ ಮುಳುಗಿ ಐಕ್ಯವಾಗಿ ಹೋಗಿದೆ. ಅಲಕ್ಷಿತ ದನಿಗಳು ವಿವಿಧಾಕಾರಗಳಲ್ಲಿ ವಿಶ್ವದ ಎಲ್ಲೆಡೆ ಮಾತನಾಡುತ್ತಿವೆ. ಅದರ ಒಳಗೇ ಅನೇಕ ವೈರುಧ್ಯಗಳು ಹೊಂದಾಣಿಕೆಗಳೂ ಬೆಳೆದಿವೆ. ಭಾರತದಲ್ಲಂತು ಇಪ್ಪತ್ತನೆ ಶತಮಾನವೂ ಅದರ ಆಧುನಿಕತೆಯೂ ಹಾಗು ಇವೆರಡರ ಪ್ರತಿನಿಧಿಯಾದ ಇಂಗ್ಲಿಶ್ ಭಾಷೆಯೂ ಕೆಳಜಾತಿಗಳನ್ನು ಬಹುವಿಧದಲ್ಲಿ ಕಾಪಾಡಿವೆ. ಇದೇ ಬಗೆಯಲ್ಲಿ ಆಫ್ರಿಕಾದ ಆದಿವಾಸಿಗಳಿಗೂ ಇಂಗ್ಲಿಶ್ ಭಾಷೆ ಎಂತೆಂತಹ ಅನುಭವಗಳನ್ನೂ ಅವಕಾಶಗಳನ್ನು ತಂದಿವೆ ಎಂಬುದನ್ನು ನೆನೆಸಿಕೊಳ್ಳಿ. ಹಾಗೆಯೇ ದಲಿತ ಸಮುದಾಯಗಳು ವಸಾಹತುಶಾಹಿ ಪರಿಚಯಿಸಿದ ಕೈಗಾರಿಕಾ ಕ್ರಾಂತಿಯಿಂದಲೂ ಆಧುನಿಕತೆಯಿಂದಲೂ ಅದರ ವೈಚಾರಿಕ ಸಾಹಿತ್ಯದಿಂದಲೂ ಭಾಷೆಯಿಂದಲೂ ಈವರೆಗೆ ಪಡೆದ ಪ್ರೇರಣೆಗಳನ್ನು ಲೆಕ್ಕಿಸಿಯೇ ಜಾಗತೀಕರಣದ ಬಗ್ಗೆ ಮಾತನಾಡಬೇಕು.

ಒಂದು ವೇಳೆ ಇಂಗ್ಲಿಶ್ ಭಾಷೆ ಭಾರತಕ್ಕೆ ಬರದಿದ್ದರೆ, ಅದನ್ನು ಅವರು ನಮಗೆ ಕೊಡದಿದ್ದರೆ ಏನಾಗುತ್ತಿತ್ತೆಂದು ಊಹಿಸಿದರೂ ಇವತ್ತಿಗೂ ಮೇಲ್ ಜಾತಿಗಳ ಸಾಮಾಜಿಕ ಪ್ರಭುತ್ವದ ಛಾಯೆ ಸುಳಿದು ಭಯವಾಗುತ್ತದೆ. ಎಲ್ಲ ಕೆಳಜಾತಿಗಳನ್ನೂ ಬಿಟ್ಟಿ ಜೀತಕ್ಕೆ ಇಟ್ಟುಕೊಂಡಿದ್ದಂತಹ ಭಾರತೀಯ ವ್ಯವಸ್ಥೆಯನ್ನು ಬ್ರಿಟೀಷ್ ಪ್ರಭುತ್ವ ಅಲುಗಾಡಿಸಿದಾಗ ದಲಿತ ಸಮುದಾಯಗಳ ಅಂತರಂಗದಲ್ಲಿ ಯಾವ ಆಯ್ಕೆ ಇತ್ತು ಎಂದು ಹುಡುಕಬೇಕು. ಆಧುನೀಕರಣಕ್ಕೂ ಜಾಗತೀಕರಣಕ್ಕೂ ಅಂತಹ ದೊಡ್ಡ ವ್ಯತ್ಯಾಸವೇ ಇಲ್ಲವಾದರೂ ಇವೆರಡೂ ಬೇರೆ ಕಾಲಘಟ್ಟಗಳಲ್ಲಿ ತೃತೀಯ ಜಗತ್ತನ್ನು ಪ್ರವೇಶಿಸುತ್ತಿರುವಾಗ ಮರೆಯದೇ ವಸಾಹತು ಶಾಹಿಯನ್ನು ಅದರ ಇಂಗ್ಲಿಶ್ ಭಾಷೆಯನ್ನು ಕುರಿತು ಆಲೋಚಿಸಲೇ ಬೇಕು. ಒಂದು ವೇಳೆ ಅಂಬೇಡ್ಕರ್ ಇಂಗ್ಲಿಶ್ ಶಿಕ್ಷಣಕ್ಕೆ ಒಳಗಾಗದೇ ಇದ್ದಿದ್ದರೆ ಏನಾಗುತ್ತಿತ್ತೆಂದು ಕಲ್ಪಿಸಿಕೊಳ್ಳಿ. ಇಂಗ್ಲಿಶ್ ಭಾಷೆ ಪ್ರಭುತ್ವದ ಸಂಕೇತವಾಗಿದ್ದರೂ ಅದು ತಂದುಕೊಟ್ಟ ವೈಚಾರಿಕ ಗದ್ಯರೂಪಗಳನ್ನು ಯಾರೂ ಅಲ್ಲಗಳೆಯಲಾರರು. ಅಂಬೇಡ್ಕರ್ ಇಂಗ್ಲೀಶ್ ಭಾಷೆಯ ಮೂಲಕ ಜಗತ್ತಿಗೆ ಮುಖಾಮುಖಿಯಾದರು. ತನ್ನ ಜನಾಂಗದ ಅಂತರಾಳದ ನೋವನ್ನು ಬಿಚ್ಚಿಟ್ಟರು. ವೈದಿಕ ಪರಂಪರೆಯ ವಿಕಾರವನ್ನು ಇಂಗ್ಲಿಷ್ ಭಾಷೆಯ ವೈಚಾರಿಕ ರೀತಿಗಳಿಂದ ಘಾಸಿಗೊಳಿಸಿದರು. ಇದಿಷ್ಟೇ ಆಗಿದ್ದಿದ್ದರೆ ಇಷ್ಟು ಹೇಳಿ ಕೈಬಿಡಬಹುದಿತ್ತು. ಆದರೆ ಇಂಗ್ಲಿಷ್ ಭಾಷೆಯಲ್ಲಿದ್ ಬಿಡುಗಡೆಯ ಜ್ಞಾನವನ್ನು ಭಾರತದ ಉದ್ದಕ್ಕೂ ಬಿದ್ದಿದ್ದ ತನ್ನ ಸಮುದಾಯಗಳಿಗೆ ಹಂಚಿದರು. ಅದಕ್ಕೂ ಮೊದಲೇ ಬ್ರಿಟೀಷರು ಮತಾಂತರದಂತಹ ಕ್ರಿಯೆಗಳಿಂದ ಕ್ರೈಸ್ತ ಮಿಷನರಿಗಳ ಮೂಲಕ ಇಂಗ್ಲಿಶ್ ಪ್ರಪಂಚದ ಅರಿವನ್ನು ಬಿತ್ತಿದ್ದರು. ಅಂಬೇಡ್ಕರ್ ಒಂದು ವೇಳೆ ಇಂಗ್ಲಿಶ್ ಕಲಿಯದೆ ಇಂಗ್ಲೆಂಡಿಗೆ ಹೋಗದೆ ತನ್ನ ಮಹರ್ ಜಾತಿಯ ಪಾರಂಪರಿಕ ಜ್ಞಾನಕ್ಕೆ ಹೊಂದಿಕೊಂಡು ಹಿಂದೂ ಧರ್ಮದ ಗೋಜಿಗೆ ಹೋಗದಿದ್ದರೆ ಇವತ್ತು ದಲಿತ ಸಮುದಾಯಗಳು ಜಾಗತೀಕರಣ ಬಗೆಗೆ ಪರಿಭಾವಿಸಲು ಸಾಧ್ಯವಾಗುತ್ತಿರಲಿಲ್ಲ. ಇಂಗ್ಲಿಶ್ ಭಾಷೆಯಾಗಲೀ ಅದು ರೂಪಿಸುವ ಆಧುನೀಕತೆ, ಜಾಗತೀಕರಣವಾಗಲಿ ಯಾರಿಗೆ ಅಪಾಯಕಾರಿ ಎಂಬುದನ್ನು ಈ ಮೂಲಕವೂ ಹುಡುಕಬೇಕಾಗಿದೆ. ಅಂಬೇಡ್ಕರ್ ಅವರ ಸಾಂಸ್ಕೃತಿಕ ಅನುಭವಗಳಿಗೆ ಇಂಗ್ಲಿಶ್ ಭಾಷೆ ಒಂದು ಧ್ವನಿಶಕ್ತಿಯಾಗಿ ಅದೇ ಮುಂದೆ ದಲಿತ ಸಮುದಾಯಗಳಿಗೆ ಬಿಡುಗಡೆಯ ರೂಪಾಂತರ ಪ್ರತಿಕ್ರಿಯೆಯಾಗಿ ಬೆಳೆದು ಬಂದಿರುವುದು ಈ ಶತಮಾನದ ಮಹತ್ವದ ಬೆಳವಣಿಗೆಗಳಲ್ಲಿ ಒಂದು. ಅಂತೆಯೇ ಆಫ್ರಿಕಾದ ಮೂಲ ನಿವಾಸಿಗಳ ವಿಷಯಗಳಲ್ಲಾಗಲೀ ಅವುಗಳ ಏಳಿಗೆಯಲ್ಲಾಗಲೀ ದಕ್ಷಿಣಾಫ್ರಿಕಾದ ನೆಲ್ಸ್‌ನ್ ಮಂಡೆಲಾ ತರದವರಿಗಾಗಲಿ ಈ ಶತಮಾನ ರೂಪಿಸಿಕೊಟ್ಟಿರುವ ವೈಚಾರಿಕ ಮಾದರಿಗಳನ್ನು ಕಡೆಗಣಿಸಲಾಗದು. ವಿಶ್ವದ ಸಮುದಾಯಗಳನ್ನು ಹತ್ತಿರ ಕೂರಿಸಿ ಸಂಪರ್ಕ ಏರ್ಪಡಿಸಿ ಒಂದನ್ನೊಂದು ಅರಿಯುವಂತೆ ಮಾಡುವಲ್ಲಿ ಇಂಗ್ಲಿಶ್ ಭಾಷೆ ಉಂಟು ಮಾಡಿರುವ ಕ್ರಾಂತಿ ಸಾಧಾರಣವಾದದ್ದಲ್ಲ. ಸಂಸ್ಕೃತವೇ ಜಗತ್ತಿನ ಎಲ್ಲ ಭಾಷೆಗಳ ತಾಯಿ ಬೇರು ಎಂಬ ಬೊಗಳೆ ಹೊಡೆಯುವ ಪಂಡಿತರು ಆ ಭಾಷೆ ಎಷ್ಟು ಜನಪರವಾಗಿತ್ತು ಏನನ್ನು ಪ್ರತಿಪಾದಿಸುತ್ತಿತ್ತೆಂದು ನೆನಸಿಕೊಂಡು ಇಂಗ್ಲಿಶ್ ಭಾಷೆಯ ಆಧುನಿಕತೆಯ ಬಗ್ಗೆ ಮಾತನಾಡಬೇಕು. ಜಗತ್ತಿನ ಭಾಷೆಯಾಗಿ ಇವತ್ತು ಆ ಭಾಷೆ ಬೆಳೆದಿರುವುದಕ್ಕೆ ಅದು ಸಮುದಾಯಗಳನ್ನೂ ಖಂಡಗಳನ್ನೂ ಬೆಸೆದದ್ದರಿಂದಲೇ ಎಂದು ಯಾರಿಗಾದರೂ ಅರ್ಥವಾದೀತು. ಇಂಗ್ಲಿಶ್ ಭಾಷೆಯಿಂದ ದೇಸೀಯ ಭಾಷೆಗಳು ಹೇಗೆ ನಶವಾಗುತ್ತವೆಂಬುದನ್ನೂ ಹಾಗೂ ದಲಿತರಿಗೆ ಇಂಗ್ಲಿಶ್ ಶಿಕ್ಷಣ ಉಳಿದೆಲ್ಲ ಜಾತಿಗಳಿಗಿಂತ ಹೆಚ್ಚು ಅಗತ್ಯವಿದೆ ಎಂಬುದನ್ನು ಜೊತೆಯಾಗಿಯೇ ಚಿಂತಿಸಬೇಕು. ಹಾಗೆ ನೋಡಿದರೆ, ಇಂಗ್ಲಿಶ್ ಶಿಕ್ಷಣವನ್ನು ಮೊದಲು ಕೊಡಬೇಕಾಗಿರುವುದು ದಲಿತರಿಗೇ. ಉಳಿದ ಯಾವ ಮೇಲು ಜಾತಿಗಳಿಗಿಂತ ಹೆಚ್ಚು ಅಗತ್ಯವಾಗಿ ಇಂಗ್ಲಿಶ್ ಭಾಷೆ ಕೆಳಜಾತಿಗಳಿಗೆ ಅಗತ್ಯವಿದೆ. ಇಂಗ್ಲಿಶ್ ಕಲಿತ ಕೂಡಲೇ ಅವರ ಜಾನಪದ ಅವರ ಆಚಾರ ವಿಚಾರ ಬಹುತತ್ವ ಎಲ್ಲವೂ ಮರೆಯಾಗುತ್ತವೆ ಎಂಬ ಆತಂಕದಲ್ಲಿ ಸತ್ಯಾಂಶವಲ್ಲ. ಸ್ವತಃ ಕೆಳಜಾತಿಗಳೇ ಆ ಬಗ್ಗೆ ತಲೆಕೆಡಿಸಿಕೊಳ್ಳದಿರುವಾಗ ಮೇಲ್ ಜಾತಿಗಳು ದಲಿತ ಸಂಸ್ಕೃತಿಗಳ ಪರವಾಗಿ ವಕಾಲತ್ತು ವಹಿಸುವುದು ಮತ್ತು ಅವರ ಮತಾಂತರದ ಹಕ್ಕನ್ನು ಪ್ರಶ್ನಿಸುವುದೂ ದಲಿತ ಕ್ರಿಶ್ಚಿಯನ್ನರನ್ನೂ ಮುಸ್ಲಿಮರನ್ನೂ ಕೊಲ್ಲುವುದಕ್ಕೆ ಯತ್ನಿಸುವುದು ಆಧುನಿಕತೆಯೋ ಬರ್ಬರತೆಯೋ ರಾಷ್ಟ್ರೀಯತೆಯೋ ಏನು ಎಂಬುದು ಕೇಳಬೇಕಾಗುತ್ತದೆ. ಅತ್ಯಂತ ಕ್ರೂರ ವಿಕಾರ ವಂಚಕ ವಿಕೃತಿಯಿಂದ ದಲಿತರನ್ನು ನಡೆಸಿಕೊಂಡ ಹಿಂದೂ ಸನಾತನಿಗಳು ಅವರನ್ನು ‘ಹಿಂದೂ’ಗಳಲ್ಲ ಪೈಶಾಚಿಕರು ಎಂದು ಧೂರ್ತವಾಗಿ ದೂರವಿರಿಸಿದ್ದವರು; ಇವತ್ತು ಅದೇ ದಲಿತರ ಮತಾಂತರದ ಬಗ್ಗೆ ಮಠಾಧಿಪತಿಗಳು ವಕಾಲತ್ತು ವಹಿಸಿ ಮಾತನಾಡುವುದು ಈ ಶತಮಾನದ ಅತಿ ನೀಚತನದ ಪ್ರತೀಕವಾಗಿ ಕಾಣುತ್ತದೆ. ದಲಿತರ ಮತಾಂತರದ ಬಗ್ಗೆ ಮಾತನಾಡಲು ಯಾವುದೇ ಮಠಾಧೀಶನಿಗೂ ಯಾವುದೇ ನೈತಿಕಹಕ್ಕು ಇಲ್ಲ. ಮಠಗಳ ಒಳಗಿನ ‘ಹಿಂದೂ’ ಧರ್ಮವನ್ನು ಅಪಾಯಕಾರಿ ಎಂದೇ ತೀರ್ಮಾನಿಸಬೇಕಾಗುತ್ತದೆ. ಕೆಳಜಾತಿಗಳು ಇಂಗ್ಲಿಶ್ ಮೂಲಕವೇ ಜಗತ್ತಿನ ಅರಿವನ್ನೂ ಅವುಗಳ ನಾಗರೀಕತೆ ಮತ್ತು ಆಧುನಿಕತೆಯನ್ನು ಅರಿಯಲು ಸಾಧ್ಯವೇ ವಿನಃ ಸಂಸ್ಕೃತ ಭಾಷೆಯಿಂದಾಗಲೀ ಅಥವಾ ಏಕೈಕ ಕನ್ನಡ ಒಂದರಿಂದಾಗಲಿ ಸಾಧ್ಯವಿಲ್ಲ. ವಿಶ್ವದ ಜೊತೆ ಗುರುತಿಸಿಕೊಳ್ಳದೇ ಹೋದರೆ ಕೆಳಜಾತಿಗಳಿಗೆ ನಷ್ಟವೇ ಹೊರತು ಮೇಲಜಾತಿಗಳಿಗಲ್ಲ. ಸಂಸ್ಕೃತ ಭಾಷೆಯಿಂದ ದಲಿತರಿಗೆ ಬಿಡುಗಡೆಯಿದೆಯೋ ಇಂಗ್ಲಿಶ್‌ನಿಂದ ಬಿಡುಗಡೆಯಿದೆಯೋ ಎಂಬ ಮಾತು ತಮಾಷೆಯಾಗಿ ಕಾಣಿಸಬಹುದು. ವಿಚಿತ್ರ ಎಂದರೆ ಯಾರು ಯಾವ ಭಾಷೆಯಿಂದ ವಂಚಿಸುತ್ತಿದ್ದರೋ ದೂರ ಇರಿ ಎಂದು ಸಾರುತ್ತಿದ್ದರೋ ಅಂತಹ ವೈದಿಕರೇ ಇವತ್ತು ದಲಿತರಿಗೆ ಸಂಸ್ಕೃತ ಭಾಷೆಯನ್ನು ಒತ್ತಾಯದಿಂದ ಕಲಿಸಲು ದುಂಬಾಲು ಬೀಳುವುದನ್ನು ಕಾಣಬಹುದು. ಇನ್ನೂ ತಮಾಷೆ ಎಂದರೆ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಂಸ್ಕೃತ ಭಾಷೆಯನ್ನು ಬೋದಿಸಲು ಪ್ರಾಧ್ಯಾಪಕ ಹುದ್ದೆಗಳನ್ನು ದಲಿತರಿಗಾಗಿ ಮೀಸಲಿಡುವುದು, ಎಂತಹ ಭಂಡ ನೀತಿ ಎಂಬುದನ್ನು ಊಹಿಸಿ, ಸಂಸ್ಕೃತ ವರ್ಷಾಚರಣೆಗೆ ಕೋಟಿ ಗಟ್ಟಲೆ ಹಣವನ್ನು ಸರ್ಕಾರಗಳು ವಿನಿಯೋಗಿಸುವುದರ ತಂತ್ರದಲ್ಲೇ ಸ್ವದೇಶಿಯ ವಿಕಾರವೂ ಸೇರಿರುತ್ತದೆ.

ನೂರಾರು ವರ್ಷಗಳಿಂದ ಕನ್ನಡ ಭಾಷೆಯನ್ನು ಹಿಡಿತದಲ್ಲಿಟ್ಟುಕೊಂಡು ಶಿಷ್ಟ ಕನ್ನಡವನ್ನೂ ರಾಜಾಶ್ರಯದ ಕನ್ನಡವನ್ನೂ ಬರಹದಲ್ಲಿಳಿಸುತ್ತಾ ಬಂದ ಇದೇ ಮೇಲು ಜಾತಿಗಳು ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಹಾರಿ ಬಂದು ಇದುವರೆಗೂ ಎಂತಹ ಸಾಹಿತ್ಯದ ಭಾಷೆಯನ್ನು ರೂಪಿಸಿದ್ದಾರೆಂಬುದನ್ನು ಗಮನಿಸಬೇಕು. ಹಾಗೆಯೇ ಜನಪದ ಭಾಷೆ ಯಾವ ರಾಜಾಶ್ರಯವೂ ಶಿಷ್ಟಾಚಾರವೂ ಇಲ್ಲದೆ ಇವತ್ತಿನವರೆಗೂ ಹೇಗೆ ವಿಶಿಷ್ಟವಾಗಿ ಉಳಿದಿದೆ ಎಂದು ಕನ್ನಡ ಚಳುವಳಿಗಾರರು ನೋಡಬೇಕು. ಇಂಗ್ಲಿಶ್ ಬಂದು ನಮ್ಮ ಕನ್ನಡವನ್ನು ತಿಂದುಹಾಕುತ್ತಿದೆ ಎನ್ನುವ ಭಯದಲ್ಲಿ ಯಾವ ಬಗೆಯ ಕನ್ನಡವನ್ನು ರೂಪಿಸಿಕೊಳ್ಳಬೇಕು ಎಂಬ ಎಚ್ಚರವು ಇರಬೇಕಾಗುತ್ತದೆ. ಈ ಶತಮಾನದ ಕೊನೆಯ ಹೊತ್ತಿಗೆ ಇಂತಹ ನೂರಾರು ವೈರುಧ್ಯಗಳು ಜರುಗುತ್ತಿದ್ದು, ಕನ್ನಡ ಭಾಷೆ ಮತ್ತು ಅದರ ನಿಜವಾದ ರೂಪ ಹಳ್ಳಿಗಾಡಿನ ಕೆಳಜಾತಿಗಳ ಬಾಯಲ್ಲಿ ಬದುಕಿನಲ್ಲಿ ಜೀವಂತವಾಗಿ ಉಳಿದುಕೊಂಡಿದೆ. ಇದನ್ನೆಲ್ಲ ಸುಲಭವಾಗಿ ಜಾಗತೀಕರಣ ಸರ್ವನಾಶ ಮಾಡುತ್ತದೆಂದು ನಾನಂತು ನಂಬಲಾರೆ.

ಇಂಗ್ಲಿಶ್ ಭಾಷೆ ಇಲ್ಲಿಗೆ ಕಾಲಿಡದಿದ್ದರೆ ಗಾಂಧಿಯಾಗಲಿ ಅಂಬೇಡ್ಕರ್‌ ಆಗಲಿ ಈ ಎರಡು ದೊಡ್ಡ ಶಕ್ತಿಗಳು ನಮಗೆ ಸಿಗುತ್ತಿರಲಿಲ್ಲವೇನೋ. ಬಸವಣ್ಣನ ನಂತರಕ್ಕೆ ಅವರಷ್ಟೇ ಎತ್ತರದ ಸಾಂಸ್ಕೃತಿಕ ವ್ಯಕ್ತಿತ್ವ ಇವರಿಬ್ಬರಿಗೂ ಸಾಧ್ಯವಾಗಿತ್ತು. ಈ ಇಬ್ಬರೂ ಇಂಗ್ಲೆಂಡಿಗೆ ಹೋಗಿ ಅಲ್ಲಿನ ಇಂಗ್ಲಿಶ್ ಶಿಕ್ಷಣಕ್ಕೆ ಒಳಗಾದವರೇ. ಅಲ್ಲಿ ಗಾಂಧಿ ಆಧುನಿಕತೆಗೆ ತೆರೆದುಕೊಂಡ ಕ್ರಮಕ್ಕೂ ಅಂಬೇಡ್ಕರ್‌ ಒಳಗಾದ ರೀತಿಗೂ ಹೋಲಿಕೆ ಮಾಡಿ ನೋಡಿ. ಇವತ್ತಿನ ದಲಿತರ ಆಧುನಿಕತೆ ಮತ್ತು ಬಿಡುಗಡೆಯ ಎರಡೂ ಬಿಂಬಗಳು ಆಗಲೇ ಅವರಲ್ಲಿ ಮೂಡಿದ್ದವು. ಅಂಬೇಡ್ಕರ್ ಪಶ್ಚಿಮದ ಜೀವನ ಶೈಲಿಯನ್ನು ಮಾತ್ರ ಅನುಕರಿಸದೆ ಆ ಲೋಕದ ವೈಚಾರಿಕತೆಯನ್ನು ತನ್ನ ಪ್ರಜ್ಞೆಯ ವಲಯಕ್ಕೆ ತಂದುಕೊಂಡರು. ಪಶ್ಚಿಮ ಜಗತ್ತಿನ ಆಧುನಿಕತೆಗೆ ಹೇಗೆ ಒಳಗಾಗಬೇಕು ಅದರ ವಿರುದ್ಧ ಹೇಗೆ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಈ ಇಬ್ಬರ ಉದಾಹರಣೆ ದೊಡ್ಡ ಸಂಕೇತದಂತಿದೆ. ಆಧುನಿಕತೆಯ ವೈಚಾರಿಕತೆಯನ್ನು ತನ್ನ ಸಮುದಾಯದ ಸಾಂಸ್ಕೃತಿಕ ರೂಪಕ್ಕೆ ತಕ್ಕಂತೆ ಅಂಬೇಡ್ಕರ್ ಎರಕ ಹೊಯ್ದದ್ದು ಚಾರಿತ್ರಿಕವಾದದ್ದು. ಅಂಬೇಡ್ಕರ್ ಸುಲಭವಾಗಿ ಆಧುನಿಕತೆಯನ್ನು ವ್ಯಾಖ್ಯಾನಿಸಲಿಲ್ಲ. ಅದನ್ನೊಂದು ಹೋರಾಟವಾಗಿ ಬಿಡುಗಡೆಯಾಗಿ ಗ್ರಹಿಸಿದರು. ಗಾಂಧಿಯಾದರೂ ಇಂತದೇ ತರದಲ್ಲಿ ಒಟ್ಟು ಭಾರತದ ಸ್ವಾತಂತ್ರ್ಯಕ್ಕಾಗಿ ಆಧುನಿಕತೆಯ ವೈಚಾರಿಕತೆಯನ್ನು ಅಳವಡಿಸಿಕೊಂಡರು. ಇಲ್ಲೇ ಇನ್ನೊಂದು ಅಂಶವನ್ನು ಪ್ರಸ್ತಾಪಿಸಬೇಕು; ಒಂದು ವೇಳೆ ದಕ್ಷಿಣಾಫ್ರಿಕಾದಲ್ಲಿ ಗಾಂಧೀಜಿಗೆ ವರ್ಣಭೇದ ನೀತಿಯ ಕಹಿ ಅನುಭವವಾಗದಿದ್ದರೆ ತಾನೇ ಬಿಳಿಯರ ಎದಿರು ಅಸ್ಪೃಶ್ಯತೆಗೆ ಒಳಗಾಗದಿದ್ದರೆ ಅವರ ಒಟ್ಟು ಭಾರತದ ಸಾಂಸ್ಕೃತಿಕ ಗ್ರಹಿಕೆ ಇನ್ನಾವ ರೀತಿಯಲ್ಲಿರುತ್ತಿತ್ತೋ ಗೊತ್ತಾಗದು. ಸ್ವತಃ ಆ ಹಿಂಸೆ ಅವರನ್ನು ಬಹುಮುಖ್ಯ ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸಿತು. ತನ್ನನ್ನೂ ಕರಿಯ, ಹೊರಗಿನವನು, ಕೀಳು ಸಂಸ್ಕೃತಿಯವನು ಎಂಬ ಅರ್ಥದಲ್ಲಿ ನಡೆಸಿಕೊಂಡದ್ದನ್ನು ಗಾಂಧಿ ಗಂಭೀರವಾಗಿ ತೆಗೆದುಕೊಂಡದ್ದರಿಂದಲೇ ಭಾರತದ ಜಾತಿ ವ್ಯವಸ್ಥೆಯ ಭೀಕರತೆಯನ್ನು ಗ್ರಹಿಸುವಂತೆ ಮಾಡಿತು. ಅದಕ್ಕಾಗಿ ಅವರು ಅಲ್ಲಿಂದಲೇ ವರ್ಣಭೇದ ನೀತಿಯ ವಿರುದ್ಧ ಚಳವಳಿಗೆ ತೊಡಗಿದರು. ಗಾಂಧೀಜಿಯವರು ಇಂಗ್ಲೆಂಡಿಗೆ ಹೋಗುವ ಮೊದಲು ಈ ಅನುಭವಕ್ಕೆ ಒಳಗಾಗುವ ಮುನ್ನ ಭಾರತದ ಜಾತಿ ವ್ಯವಸ್ಥೆಯ ಬಗ್ಗೆ ವಿಶೇಷವಾಗಿ ಏನನ್ನೂ ಹೇಳಿರಲಿಲ್ಲ ಸ್ಪಂದಿಸಿರಲಿಲ್ಲ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಭಾರತಕ್ಕೆ ಬಂದ ಮೇಲೆ ಗಾಂಧೀಜಿಯವರು ಅದೇ ಅಸ್ಪೃಶ್ಯತೆಯ ಬಗ್ಗೆ ಹೋರಾಟ ಹೂಡಲು ತಡಮಾಡಿದ್ದು ಕೂಡ ಯಾಕೆ ಎಂಬ ಗೊಂದಲ ಉಂಟಾಗುತ್ತದೆ. ಅದೇ ಅಂಬೇಡ್ಕರ್ ಇಂಗ್ಲೆಂಡಿನಲ್ಲಿದ್ದಾಗಲೇ ಹಿಂದೂ ಧರ್ಮದ ಉಳುಕುಗಳ ವಿರುದ್ಧವಾಗಿ ಒಂಟಿಯಾಗಿ ಹೋರಾಟ ಸಾರಲು ಸಜ್ಜಾಗುತ್ತಿದ್ದರು. ಗಾಂಧಿ ಅಲ್ಲಿನ ಬಿಳಿಯರ ಜನಾಂಗೀಯ ಅಂಧತ್ವದ ಬಗ್ಗೆ ಅಲ್ಲಿದ್ದ ಭಾರತೀಯರ ಜೊತೆ ಮಾನವೀತೆಯ ಬಗ್ಗೆ ಚಿಂತಿಸುತ್ತಿದ್ದರು. ವಿಶಾಲ ನೋಟದಲ್ಲಿ ಇವರಿಬ್ಬರ ಜಾತಿ ವರ್ಣವರ್ಗ ವಿನಾಶದ ಬೀಜಗಳೂ ಇಂಗ್ಲಿಶ್‌ ಶಿಕ್ಷಣದ ಮೂಲಕ ಮೊಳಕೆಯೊಡೆದಿದ್ದು ತಮ್ಮ ಸಂಸ್ಕೃತಿಯ ಅನುಭವಗಳಿಗೆ ಆ ಭಾಷೆಯ ಅರಿವನ್ನು ಸಂಯೋಗಗೊಳಿಸಿದ್ದು ವಿಶಿಷ್ಟವಾಗಿದೆ.

ಯಾವುದೇ ಸಂಸ್ಕೃತಿಗಳು ಆಧುನಿಕ ಯುಗದಲ್ಲಿ ಪರಿಷ್ಕರಣಗೊಳ್ಳದೆ ಮುಂದೆ ಹೋಗಲಾರವು. ಹಾಗಂತ ನೆಹರೂ ಜಿನ್ನಾ ತರದಲ್ಲಿ ಸಮುದಾಯಗಳನ್ನು ದಿಢೀರನೆ ಪಶ್ಚಿಮದ ನಕಲುಗಳಂತೆ ತಯಾರಿಸಲು ತೊಡಗಿದರೂ ಕಷ್ಟವಾಗುತ್ತದೆ. ನೆಹರೂ ಹೇಗೆ ಪಶ್ಚಿಮವನ್ನು ಗಾಢವಾಗಿ ಪ್ರೀತಿಸುತ್ತಿದ್ದರೋ ಅದೇ ರೀತಿಯಲ್ಲಿ ಗಾಂಧಿ ಯಾಕೆ ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ ಎಂಬುದು ಆಧುನಿಕತೆಯ ಗೊಂದಲವನ್ನು ಪ್ರತಿಬಿಂಬಿಸುತ್ತದೆ. ನೆಹರೂ ಅವರು ಕೆಳಜಾತಿಗಳಿಗಳನ್ನೆಲ್ಲ ಅಖಂಡ ಭಾರತದ ಪ್ರಗತಿಯ ಕನಸಿನಲ್ಲಿ ಸೂಕ್ಷ್ಮವಾಗಿ ಗ್ರಹಿಸಲಿಲ್ಲ. ಹಾಗಾಗಿ ನೆಹರು ಪ್ರತಿಪಾದಿಸುವ ಆಧುನಿಕತೆಗೂ ಗಾಂಧೀಜಿ ಹೇಳುತ್ತಿದ್ದ ಗ್ರಾಮ ಭಾರತದ ಆಧುನೀಕತೆಗೂ, ಅಂಬೇಡ್ಕರ್ ಬಯಸುತ್ತಿದ್ದ ಸಾಮಾಜಿಕ ಬದಲಾವಣಿಗಳಿಗೂ ವೈಚಾರಿಕ ವಿಪರ್ಯಾಸಗಳು ಉಂಟಾಗುವುದು. ಈ ಮೂರೂ ಜನರ ವಿಚಾರಗಳನ್ನು ಇವತ್ತಿನ ದಲಿತರ ಜಾಗತಿಕ ಸಂಬಂಧಗಳಲ್ಲಿ ವಿಶ್ಲೇಷಿಸಿದರೆ ಅಂಬೇಡ್ಕರ್‌ಅವರ ಚಿಂತನೆಗಳನ್ನು ಮೀರಿಯೂ ದಲಿತ ಸಮುದಾಯಗಳು ಯೋಚಿಸಬೇಕಾಗುತ್ತದೆ. ಈ ಶತಮಾನದ ಅಂಚಿನಲ್ಲಿರುವ ದಲಿತ ಸಮುದಾಯಗಳು ತಮ್ಮ ರೂಪಕ ಪ್ರತಿಭೆಯನ್ನು ಪುನರ್ ಸೃಷ್ಟಿಸುವುದರಲ್ಲಿ ಜಾಗತೀಕರಣವನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳುವುದರಲ್ಲಿ ಸಂಪೂರ್ಣವಾಗಿ ಸೋಲುತ್ತವೆ ಎಂಬ ಅಭಿಪ್ರಾಯಗಳಲ್ಲಿ ನನಗೆ ವಿಶ್ವಾಸವಿಲ್ಲ.

ಜಾಗತೀಕರಣದ ಬಗೆಗಿನ ಚರ್ಚೆಗಳನ್ನು ಅನೇಕರು ಅಸ್ಪಷ್ಟವಾಗಿ ಅಂದಾಜಿನ ಮೇಲೆ ನಡೆಸುತ್ತಾರೆ. ಇದು ಬೇಕೋ ಬೇಡವೊ ಎಂಬ ಎರಡು ಸರಳ ಪಂಗಡಗಳಲ್ಲಿ ನಿಂತು ವಾದಿಸುತ್ತಾ ಹಳೆಯ ಮಾರ್ಕ್ಸ್‌‌ವಾದಿ ಚಿಂತನೆಗಳನ್ನು ಬೆರೆಸಿ ವೈರುಧ್ಯಗಳಲ್ಲಿ ಗೊಂದಲಗಳನ್ನುಂಟು ಮಾಡುತ್ತಾರೆ. ಆಧುನಿಕ ಜಗತ್ತಿನ ಯಾವೊಂದು ಸಂಗತಿಯನ್ನೂ ಜಾಗತಿಕ ಮಟ್ಟದಲ್ಲಿ ಇಷ್ಟು ಸರಳ ವಿಂಗಡನೆಯಿಂದ ನೋಡಿದ ಕೂಡಲೆ ಅವುಗಳ ಸೂಕ್ಷ್ಮಾರ್ಥ ವಿಕಾಸಗಳು ಮುಚ್ಚಿ ಹೋಗುತ್ತವೆ. ನಮ್ಮ ಬಂಡಾಯ ವಿಮರ್ಶಕರಿಗಂತು ಜಾಗತೀಕರಣ ಈಗ ಹೊಸ ಬಂಡವಾಳವಾಗಿದ್ದು, ಅದರ ಬಗ್ಗೆ ಹುಮ್ಮಸ್ಸಿನಿಂದ ಮಾತನಾಡುವುದು ತಮಾಷೆಯಾಗಿದೆ. ಒಂದು ಕಾಲಕ್ಕೆ ಹಳ್ಳಿಗಾಡಿನ ಪರಂಪರಯೆ ಅನೇಕ ಸಂಗತಿಗಳನ್ನು ಭೀಕರವಾಗಿ ಧಿಕ್ಕರಿಸಿದ್ದ ಇದೇ ಬಂಡಾಯ ಚಿಂತಕರು ಮುಂದೊಂದು ದಿನ ಅದೇ ಜಾನಪದ ಪರಂಪರೆಯನ್ನು ಉಪಸಂಸ್ಕೃತಿ ಹೆಸರಿನಲ್ಲಿ ಎಲ್ಲೆಡೆ ಎತ್ತಿ ಮೆರೆಸಿದ್ದರ ವಿಪರ್ಯಾಸ ಅರ್ಥಾತ್ ವೈಚಾರಿಕ ವಿದೂಷಕತೆ ಇನ್ನೂ ಮುಗಿದಿಲ್ಲ. ಮಾರ್ಕ್ಸ್‌ಲೆನಿನ್‌ರ ಜೊತೆಗೆ ಈ ಜನಪದ ಸಾಂಸ್ಕೃತಿಕ ವೀರರಾದ ಮಂಟೇಸ್ವಾಮಿ, ಮಾದೇಶ್ವರ ಜುಂಜಪ್ಪ ಮುಂತಾದವರನ್ನು ಒಂದುಗೂಡಿಸಿ ಚಾಲ್ತಿಯಲ್ಲಿರುವ ಯಾವುದಾವುದೋ ವ್ಯಕ್ತಿ ವಿಚಾರಗಳನ್ನು ‘ಕೈಮಾ’ ಮಾಡಿ ತಂದು ಕೆಳಜಾತಿಗಳ ಸಾಂಸ್ಕೃತಿಕ ಅನನ್ಯತೆ ಮತ್ತು ರಕ್ಷಣೆಯ ಬಗ್ಗೆ ವಕಾಲತ್ತು ವಹಿಸುವುದು ಉಪೇಕ್ಷಿಸಬೇಕಾದ ಸಂಗತಿಯಲ್ಲ. ವೈಚಾರಿಕ ಪ್ರಾಮಾಣಿಕತೆ ಇಲ್ಲದವರ ದುರಂತ ಇದು. ಇಂತವರು ಯಾವುದೇ ವಿಚಾರಗಳನ್ನು ಎಲ್ಲಿ ಹೇಗೆ ಬೇಕಾದರೂ ಸಂದರ್ಭಕ್ಕೆ ತಕ್ಕಂತೆ ಹೊಸೆದು ಅಭಿಪ್ರಾಯ ನಿರ್ಮಿಸುವಷ್ಟು ಜಾಣರಾಗಿರುತ್ತಾರೆ. ಅಂತವರಿಗೆ ಜಾಗತೀಕರಣದ ಸವಲತ್ತುಗಳ ಬಗ್ಗೆ ಮಾತ್ರ ವಿಶೇಷವಾದ ಕಾಳಜಿಯಿರುತ್ತದೆ.

ತೃತೀಯ ಜಗತ್ತಿನ ಹಿನ್ನೆಲೆಯಲ್ಲಿ, ದಲಿತರ ಸಂದರ್ಭದಲ್ಲಿ ಜಾಗತೀಕರಣದ ಬಗ್ಗೆ ಇನ್ನಷ್ಟು ಇಲ್ಲಿ ವಿವರಿಸಬಹುದು. ೧೯೮೦ರ ದಶಕದಲ್ಲಿ ಯುರೋಪಿನ ಅನೇಕ ದೇಶಗಳಲ್ಲಿ ಜಾಗತೀಕರಣದ ಪರಿಕಲ್ಪನೆ ವಿಸ್ತರಿಸಿಕೊಂಡಿತು. ಜಗತ್ತಿನ ಮುಂದುವರಿದ ಆಧುನಿಕ ಸಮುದಾಯಗಳು ಜಾಗತಿಕವಾಗಿ ಏಕಭಾವನೆಯನ್ನು ಅಪೇಕ್ಷಿಸಲು ತೊಡಗಿದವು. ಎರಡನೆ ಮಹಾಯುದ್ಧದ ತರುವಾಯ ಜಗತ್ತಿನ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಎಲ್ಲ ದೇಶಗಳನ್ನೂ ಸೇರಿಸಿ ಮೂರು ಬಗೆಯ ಗುಂಪುಗಳನ್ನಾಗಿ ಮಾಡಲಾಯ್ತು. ಮೊದಲ ಗುಂಪಿನ ಅಮೆರಿಕಾದಂತಹ ಮುಂದುವರಿದ ದೇಶಗಳನ್ನು ಪ್ರಥಮ ಸ್ಥಾನದಲ್ಲೂ ಎಡಪಂಥಿಯ ರಾಜಕೀಯ ಆರ್ಥಿಕ ಧೋರಣೆಯ ರಷ್ಯಾದಂತಹ ರಾಷ್ಟ್ರಗಳನ್ನು ಎರಡನೇ ಗುಂಪಿನಲ್ಲೂ, ಹಿಂದುಳಿದ ಮತ್ತು ಅಭಿವೃದ್ಧಿ ಪಥದ ಕಡೆಗೆ ನಡೆದಿರುವ ದೇಶಗಳನ್ನು ಮೂರನೇ ವರ್ಗದಲ್ಲೂ ಇಟ್ಟು ಅವುಗಳ ಒಟ್ಟು ಜಾಗತಿಕ ಸ್ಥಾನಮಾನಗಳನ್ನು ಅಳೆಯುವ ರಾಜಕೀಯ ಆರ್ಥಿಕ ಸಂಬಂಧಗಳನ್ನು ಬೆಳೆಸುವ ಸಂಪ್ರದಾಯ ಬೆಳೆಯಿತು. ಭಾರತ ಆಫ್ರಿಕಾ ಲ್ಯಾಟಿನ್ ಅಮೆರಿಕಾದಂತಹ ಹಿಂದುಳಿದ ದೇಶಗಳನ್ನೆಲ್ಲ ಒಟ್ಟಾಗಿ ತೃತೀಯ ಜಗತ್ತಿನ ಸಮುದಾಯಗಳೆಂದು ಘೋಷಿಸಲಾಯ್ತು. ವಿಶ್ವಸಂಸ್ಥೆಯೇ ಈ ಬಗೆಯ ವರ್ಗೀಕರಣವನ್ನು ಒಪ್ಪಿಕೊಂಡಿತು. ಹಾಗೆಯೇ ಇಂತಹ ವಿಭಾಗಗಳನ್ನು ಅರ್ಥಶಾಸ್ತ್ರಜ್ಞರು ಸಮಾಜ ವಿಜ್ಞಾನಿಗಳು ವೈಭವಯುತವಾಗಿಯೇ ವ್ಯಾಖ್ಯಾನಿಸಲು ಆರಂಭಿಸಿದರು. ಅದರಲ್ಲೂ ಏಷ್ಯಾದ ಬಹುಪಾಲು ಬಡದೇಶಗಳ ಆರ್ಥಿಕ ಅಭಿವೃದ್ಧಿಗೆ ಯುರೋಪಿನ ಮುಂದುವರೆದ ದೇಶಗಳ ಆಶ್ರಯವೇ ಅಂತಿಮದಾರಿ ಎಂಬಂತಾಯಿತು.

ಮೊದಲ ಸ್ಥಾನದ ದೇಶಗಳಲ್ಲಿ ಬಂಡವಾಳಶಾಹಿ ಆರ್ಥಿಕ ಯೋಜನೆಗಳು ಖಾಸಗೀ ಉದ್ಯಮಗಳು ಮಹತ್ವದ ಪಾತ್ರವಹಿಸಿ ಅಲ್ಲಿನ ಎಲ ವಲಯಗಳಲ್ಲು ಅವುಗಳ ಆಧಪತ್ಯ ಮುಖ್ಯವಾಗಿತ್ತು. ಹಾಗೇಯೇ ಅಮೆರಿಕಾದಂತಹ ಸಮಾಜಕ್ಕೆ ಅದರ ರೀತಿಯದೆ ಆದ ರಾಜಕೀಯ ಪ್ರಬಲಶಕ್ತಿಯೂ ಇತ್ತು. ಎರಡನೆ ಮಹಾಯುದ್ಧದ ನಿರ್ಣಾಯಕ ಅಸ್ತ್ರಗಳು ಅದರ ಬತ್ತಳಿಕೆಯಲ್ಲಿದ್ದುದಷ್ಟೇ ಅಲ್ಲಾ, ಎಲ್ಲ ಬಗೆಯ ಆರ್ಥಿಕ ಒಡತನಕ್ಕೂ ತಕ್ಕುದಾದ ತಾಂತ್ರಕತೆ ಕುಶಲತೆ ಉದ್ಯಮಶೀಲತೆ ಅಪಾರ ಪ್ರಮಾಣದ ನೈಸರ್ಗಿಕ ಹಾಗು ಮಾನವ ಸಂಪತ್ತಿನ ಭಂಡಾರವೇ ಅಮೆರಿಕದ ಕೈಯಲ್ಲಿತ್ತು. ಎರಡನೇ ಮಹಾಯುದ್ಧದ ತರುವಾಯ ಅನೇಕ ಬಡರಾಷ್ಟ್ರಗಳಿಗೆ ಅಭಿವೃದ್ಧಿಯ ನೀಲಿನಕ್ಷೆಗಳನ್ನು ತಯಾರಿಸಿಕೊಡುವ, ಆರ್ಥಿಕ ಆಶ್ರಯ ನೀಡುವ, ತಂತ್ರಜ್ಞಾನ ಮತ್ತು ವಿಜ್ಞಾನದ ಆವಿಷ್ಕಾರಗಳನ್ನು ಕಲಿಸಿಕೊಡುವ ಅಧಿಕೃತ ವಕ್ತಾರರಂತೆ ಅಮೆರಿಕಾದ ವೈಟ್‌ಹೌಸ್ ರಾಜಕಾರಣ ಜಾಗತಿಕವಾಗಿ ಆಗಲೇ ಬೆಳೆದುಬಿಟ್ಟಿತ್ತು. ಮುಂದೆ ಬರಲು ತವಕಿಸುವ ಅನೇಕ ರಾಷ್ಟ್ರಗಳಿಗೆ ಜನಾಂಗಗಳಿಗೆ ಅಮೆರಿಕದ ಬದುಕಿನ ಶೈಲಿ ಒಂದು ದೊಡ್ಡ ಗುರಿಯಾಗಿ ಕನಸಾಗಿ ಮಾರ್ಪಟ್ಟಿತು. ಅಲ್ಲದೆ ಮೊದಲ ಸ್ಥಾನದಲ್ಲಿರುವ ಅದರ ಸ್ನೇಹಕ್ಕಾಗಿ ಸಣ್ಣಪುಟ್ಟ ದೇಶಗಳು ತುದಿಗಾಲಲ್ಲಿ ನಿಂತಿದ್ದವು. ಆಗಲೇ ಹುಟ್ಟಿಕೊಂಡಿದ್ದ ಯುರೋಪಿನ ಬೃಹತ್ ಆರ್ಥಿಕ ಸಂಘಟನೆಗಳಲ್ಲೂ ಯುರೋಪಿನ ರಾಷ್ಟ್ರಗಳು ಏಷ್ಯಾದ ದೇಶಗಳು ಲ್ಯಾಟಿನ್ ಅಮೆರಿಕಾ ಆಫ್ರಿಕಾ ಮುಂತಾದವೆಂದು ಆ ಆಧಾರದ ಮೇಲೆಯೇ ಆರ್ಥಿಕ ಸಂಘಟನೆಗಳಲ್ಲಿ ಸದಸ್ಯತ್ವವನ್ನು ಪಡೆಯುವುದು ಆರಂಭವಾಗಿತ್ತು. ವಿಶ್ವಬ್ಯಾಂಕ್ ಹಾಗೂ ಯುರೋಪಿಯನ್ ಆರ್ಥಿಕ ಒಕ್ಕೂಟದಂತಹ ದೊಡ್ಡ ಆರ್ಥಿಕ ಶಕ್ತಿಕೇಂದ್ರಗಳು ತೃತೀಯ ಜಗತ್ತಿನ ಕಡೆಗೆ ವಿಶೇಷವಾಗಿ ಗಮನ ಹರಿಸಿದವು. ಇದು ಇವತ್ತಿಗೂ ಭಾರತದಂತಹ ದೇಶಗಳಿಗೆ ಒಂದು ದೊಡ್ಡ ಆರ್ಥಿಕ ಶಕ್ತಿಯಾಗಿ ನಮ್ಮ ಆರ್ಥಿಕ ಕ್ರಿಯೆಗಳಲ್ಲಿ ಎಂತಹ ಪರಿಣಾಮ ಉಂಟು ಮಾಡುತ್ತಿವೆ ಎಂಬುದನ್ನು ಯಾರೂ ನಿರ್ಲಕ್ಷಿಸಲಾರರು. ಬಡದೇಶಗಳ ಅಲ್ಪಸಂಖ್ಯಾತ ಕೋಮು ಜಾತಿ ವರ್ಗ ವರ್ಣ ಹಾಗು ಆದಿವಾಸಿಗಳ ಗ್ರಾಮಾಂತರ ಬಡವರ ಕ್ಷೇಮಾಭಿವೃದ್ಧಿಯ ಬಗೆಗೆ ವಿಶೇಷ ಸಾಲ ಯೋಜನೆಗಳನ್ನು ನೀಡತೊಡಗಿದವು. ಈ ಬಗೆಯ ಸಾಲ ಇವತ್ತಿಗೂ ಅಗಾಧ ಪ್ರಮಾಣದಲ್ಲಿ ಹರಿದು ಬರುತ್ತಿದ್ದು; ಅಣು ಪರೀಕ್ಷೆಯ ನಂತರ ಅಮೆರಿಕ ಇಂತಹ ಸಾಲ ಯೋಜನೆಗಳಿಗೆ ತಡೆ ಉಂಟು ಮಾಡುತ್ತಿರುವುದು ಗಮನಾರ್ಹವಾದದ್ದು. ತಿರಸ್ಕೃತ ಸಮುದಾಯಗಳ ಏಳಿಗೆಗೆಂದು ಹರಿದುಬರುವ ಈ ಹಣದ ಬೆಟ್ಟಗಳೂ ಹೇಗೆ ಕರಗಿಹೋಗುತ್ತವೆ ಎಂಬುದರ ಹಿನ್ನೆಲೆಯಲ್ಲೇ ಯಾಕೆ ದಲಿತ ಸಮುದಾಯಗಳು ಅಮೆರಿಕಾದ ಕನಸುಗಳನ್ನು ಬೆರಗಾಗಿ ಕಾಣುತ್ತವೆ ಎಂಬುದನ್ನು ತಾಳ್ಮೆಯಿಂದ ಪರಿಶೀಲಿಸಬೇಕು. ಕೆಳಜಾತಿಗಳಷ್ಟೇ ಅಲ್ಲಾ, ಏಷ್ಯಾ, ಆಫ್ರಿಕಾದ ಬಹುಪಾಲು ಎಲ್ಲ ದೇಶಗಳೂ ಜಗತ್ತಿನ ಪ್ರಥಮ ಸ್ಥಾನದ ಅಮೆರಿಕಾದ ದೂರದ ಮರೀಚಿಕೆಯನ್ನು ಹೇಗೆ ಧ್ಯಾನಿಸುತ್ತವೆ ಎಂಬುದನ್ನು ನಾವೆಲ್ಲರೂ ನಿತ್ಯವೂ ನೋಡುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನ ನಾಲಿಗೆಯಲ್ಲೂ ಅಮೆರಿಕಾ ಎಂಬ ಸ್ವರ್ಗ ನಲಿದಾಡಿ ಹೋಗುವುದನ್ನು ಸುಮ್ಮನೆ ನೋಡಿ ಕೇಳಿ ಕೈಬಿಡುವಂತಿಲ್ಲ. ಅದೊಂದು ಮಾಯೆ ಎಂಬಂತಿದ್ದು ಅದರ ಮೂಲಕವೇ ಜಾಗತೀಕರಣ ಪ್ರಕ್ರಿಯೆ ಮೂರನೆ ಜಗತ್ತಿನ ಆರ್ಥಿಕ ಚಲನೆಯಲ್ಲಿ ಪ್ರವೇಶ ಪಡೆದುಕೊಳ್ಳುತ್ತಿರುವುದು ಅತ್ಯಂತ ಸಹಜವಾದ ಸಂಗತಿ. ತೃತೀಯ ಜಗತ್ತಿನ ಆರ್ಥಿಕ ಯೋಜನೆಗಳ ಆಗುಹೋಗುಗಳು ತೀರ್ಮಾನವಾಗುವುದು ಅಮೆರಿಕಾದ ವೈಟ್ ಹೌಸ್‌ನ ಜಾಗತಿಕ ರಾಜಕಾರಣದಲ್ಲಿ. ಹಾಗೆಯೇ ವಿಶ್ವ ಮಾರುಕಟ್ಟೆ ವಿಶ್ವ ತಂತ್ರಜ್ಞಾನ ವಿಶ್ವಹಣಕಾಸು ದರ ಮತ್ತು ಅಲ್ಲಿನ ಆರ್ಥಿಕ ವ್ಯವಸ್ಥೆಗಳು ಕೂಡ ಅನೇಕ ಬಡ ರಾಷ್ಟ್ರಗಳ ಆರ್ಥಿಕ ಕನಸುಗಳ ಮೇಲೆ ತಮ್ಮ ಛಾಯೆಯನ್ನು ಬೀರುತ್ತಿರುತ್ತವೆ. ಇರುವರೆಗೂ ಬಡರಾಷ್ಟ್ರಗಳು ಕೇವಲ ತಮ್ಮ ದೇಶದ ಕರೆನ್ಸಿ ವ್ಯವಸ್ಥೆಯ ತೀರ್ಮಾನಗಳನ್ನು ಕೂಡ ಅಮೆರಿಕಾದ ಡಾಲರ್ ಶಕ್ತಿಗೆ ಕೊಟ್ಟುಬಿಟ್ಟಿರುವುದು ವಿಚಿತ್ರ ಜಾಗತಿಕ ಆರ್ಥಿಕ ಆಶ್ರಯ ನೀತಿಯನ್ನು ತೋರುತ್ತಿದೆ. ಇಂದಿಗೂ ನಮ್ಮ ಅನೇಕ ಮಧ್ಯಮ ಜಾತಿ ವರ್ಗ ಹಾಗೂ ಸುಶಿಕ್ಷಿತ ಸಮುದಾಯಗಳಿಗೆ ಡಾಲರ್‌ಎಂಬುದು ಅವರ ದೇಶಕ್ಕಿಂತ ಮಿಗಿಲಾಗಿ ಕಾಡುವುದನ್ನೂ ನಮ್ಮಲ್ಲೇ ಡಾಲರ್ ಕಾಲನಿಗಳು ಹುಟ್ಟಿಕೊಳ್ಳುವುದನ್ನೂ ಯಾರಾದರೂ ಗಮನಿಸಬಹುದು. ಹಾಗೆಯೇ ತೃತೀಯ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುತ್ತಿರುವುದು ಕೂಡ ಡಾಲರ್ ಕರೆನ್ಸಿಯೇ ಆಗಿದೆ.

ಹೀಗಾಗುವುದನ್ನೇ ವಿಶ್ವದ ಆರ್ಥಿಕ ಕ್ರಮಗಳ ವಿಕಾಸ ಎಂದು ಹೇಳುವಂತೆಯೇ ಇದೊಂದು ತೃತೀಯ ಜಗತ್ತಿನ ಆರ್ಥಿಕ ಸಾಮರ್ಥ್ಯವನ್ನು ಬುಡಮೇಲು ಮಾಡುವ ಕುತಂತ್ರ ಎಂತಲೂ ಹೇಳುವವರಿದ್ದಾರೆ. ಇಂತಹ ವಾದಗಳು ವಿಷಯದ ಮೇಲು ಪದರದಿಂದ ಬರುವಂತವಾಗಿದ್ದು, ಜಾಗತಿಕ ಆರ್ಥಿಕ ತಾಂತ್ರಿಕ ಸಾಂಸ್ಕೃತಿಕ ಸಾಮಾಜಿಕ ಶೈಕ್ಷಣಿಕ ಪ್ರಕ್ರಿಯೆಗಳು ಎಲ್ಲಿಂದ ಎಲ್ಲಿಗೆ ಹೋಗಿ ಯಾರಿಂದ ಯಾರಿಗೆ ಯಾಕೆ ಯಾವ ಗುರಿಯಲ್ಲಿ ವೇಗದಲ್ಲಿ ಘಟಿಸುತ್ತವೆಂಬುದನ್ನು ಬಹುಮುಖೀ ಆರ್ಥಿಕ ಅಪೇಕ್ಷೆಗಳ ಸಮುದಾಯಗಳ ಆಶಯಗಳನ್ನು ಗಮನಿಸದೇ ಬೇಜವಾಬ್ದಾರಿಯಿಂದ ಆತುರದಿಂದ ತೀರ್ಮಾನಕ್ಕೆ ಬರುವಂತದಾಗಿರುತ್ತವೆ. ಯಾವ ದೇಶಗಳಲ್ಲಿ ಬಹುಮುಖೀ ಆರ್ಥಿಕ ಯೋಜನೆಗಳು ಹಾಗೂ ಜಾತಿಗಳ ಆರ್ಥಿಕ ಪ್ರಭುತ್ವವನ್ನು ನಾಶಮಾಡುವಂತಹ ಇಚ್ಛಾಶಕ್ತಿ ದುರ್ಬಲವಾಗಿರುತ್ತದೆಯೋ ಅಲ್ಲೆಲ್ಲ ಅಭದ್ರವೂ ಹತಾಶವೂ ಆದಂತಹ ತಿರಸ್ಕೃತ ಸಮುದಾಯಗಳು ಜಾಗತೀಕರಣದ ಯಾವುದೇ ಬದಲಾವಣೆಗೆ ಒಳಗಾಗುವುದನ್ನು ಅದು ಅಪರಾಧ ಎಂಬ ದೃಷ್ಟಿಯಿಂದ ನೋಡುವುದು ಒಳ್ಳೆಯದಲ್ಲ. ತೃತೀಯ ಜಗತ್ತಿನ ತಿರಸ್ಕೃತ ಸಮುದಾಯಗಳು ಬಹು ನಿಚ್ಚಳವಾಗಿ ಜಗತ್ತಿನ ಮೊದಲ ಸ್ಥಾನದ ಅಮೆರಿಕಾದ ಬಂಡವಾಳಶಾಹಿ ಪ್ರಜಾಪ್ರಭುತ್ವವನ್ನೂ ಅದರ ಅರ್ಥಿಕ ಅಭಿವೃದ್ಧಿಯನ್ನ ಗಮನಿಸಿರುವಂತೆಯೇ ಎರಡನೇ ಸ್ಥಾನದ ರಷ್ಯಾದಂತಹ ಎಡಪಂಥೀಯ ಕಾರ್ಮಿಕ ಪ್ರಭುತ್ವವನ್ನೂ ಅದರ ಆರ್ಥಿಕ ರೀತಿ ನೀತಿಗಳನ್ನು ಚೆನ್ನಾಗಿ ಕಂಡಿವೆ. ಅದರಲ್ಲೂ ಭಾರತದ ಕೆಳಜಾತಿಗಳು ಈ ಎರಡರ ಪೈಪೋಟಿಯುತ ಪ್ರಭಾವದಿಂದ ಸಾಕಷ್ಟು ಪಳಗಿ ತಮ್ಮದೇ ಆದ ದಾರಿಗಳಿಗಾಗಿ ತವಕಿಸುತ್ತಾ ಗೊಂದಲದಲ್ಲಿವೆ.

ಸದ್ಯದ ರಷ್ಯಾದ ಗುಂಪಿನ ದೇಶಗಳ ಆರ್ಥಿಕ ಸ್ಥಿತಿಗಳನ್ನು ಒಂದು ಬಾರಿ ನೆನೆದುಕೊಂಡು ಆ ದೇಶಗಳ ಅಂತಃಕಲಹ ರಾಜಕೀಯ ಅಸ್ಥಿರತೆಗಳು ಅಲ್ಪಸಂಖ್ಯಾತರ ಹೋರಾಟಗಳು ಅವುಗಳ ಜಾಗತಿಕ ಸವಾಲುಗಳನ್ನು ಜಾಗತೀಕರಣದ ಮಾಪಕದಲ್ಲಿಟ್ಟು ಅಳೆದರೆ ಊಹಿಸಲಾಸಾಧ್ಯವಾದ ಸಾಮಾಜಿಕ ಪ್ರಕ್ರಿಯೆಗಳು ಎದುರಾಗುತ್ತವೆ. ನಮ್ಮಲ್ಲಿರುವ ಸಾವಿರಾರು ಕೆಳಜಾತಿಗಳಿಗೆ ನಮ್ಮ ಪ್ರಭುತ್ವಗಳು ಈ ತನಕ ವಿಶ್ವಾಸವನ್ನೇ ಹುಟ್ಟಿಸಿಲ್ಲ. ಆಳುವ ಪಕ್ಷಗಳು, ಸರ್ಕಾರಗಳು, ಅಧಿಕಾರ ಕೇಂದ್ರಗಳು, ಅಪ್ರಮಾಣಿಕತೆಯ ವಿಸ್ತಾರ ವಲಯಗಳು, ನಮ್ಮ ಸಾಮಾಜಿಕ ಸಂದರ್ಭಗಳನ್ನು ಹೇಗೆ ವಿಕಾರಗೊಳಿಸುತ್ತವೆ ಎಂಬುದನ್ನು ಹೊರಗಿಟ್ಟು ಜಾಗತೀಕರಣದ ಬಗ್ಗೆ ಚರ್ಚಿಸಬಾರದು. ಜಾತಿಯ ವಿತಂಡವಾದಗಳು ಅದರ ವಕ್ರ ಲಾಭಗಳು ಜಾಗತೀಕರಣವನ್ನು ತಮ್ಮ ಸಮೂಹ ಮಾಧ್ಯಮಗಳ ಮೂಲಕ ಬೇಕಾದಂತೆಲ್ಲ ವ್ಯಾಖ್ಯಾನಿಸಬಲ್ಲವಾಗಿರುತ್ತವೆ. ಜಾಗತೀಕರಣವನ್ನು ಅನೇಕರು ಅಮೇರಿಕೀಕರಣ ಎಂದೇ ಭಾವಿಸುತ್ತಾರೆ. ಆದರೆ ವಿಶ್ವದ ಇವತ್ತಿನ ಆರ್ಥಿಕ ಚಟುವಟಿಕೆಗಳನ್ನು ಮಾರ್ಕ್ಸ್‌‌ವಾದ ಅಸ್ತ್ರಗಳಿಂದ ಪ್ರಶ್ನಿಸುವುದು ಶುಷ್ಕ ಚರ್ಚೆಯಾಗಿ ಕೊನೆಗೊಂಡು ಅಂತಿಮವಾಗಿ ನಮ್ಮ ಸಮಸ್ಯೆಗಳ ಆಳವೇ ನಮಗರಿವಾಗದಂತಾಗುವುದರಿಂದ ಆ ಬಗೆಯ ಗೋಜಲುಗಳಿಗೆ ಹೋಗುವುದಿಲ್ಲ. ಜಗತ್ತಿನ ಯಾವೊಂದು ಸಮುದಾಯವೂ ತಂತಾನೆ ಒಂಟಿಯಾಗಿ ನಾಗರಿಕತೆಯ ವಿವಿಧ ಹಂತಗಳಿಂದ ದೂರ ಉಳಿದು ಬದುಕಲು ಸಾಧ್ಯವಿಲ್ಲ. ನಮ್ಮ ಪೂರ್ವಿಕರ ಸಾಂಸ್ಕೃತಿಕ ಪ್ರತಿಭೆಯಷ್ಟೇ ಇವತ್ತಿನ ಜಗತ್ತಿನ ಮುಖಾಮುಖಿಗೆ ಸಾಧ್ಯವಾಗುವುದಿಲ್ಲ. ಜಗತ್ತಿನ ಜೊತೆ ಪಯಣ ಮಾಡದೆ ಯಾವೊಂದು ಜನಾಂಗದ ಭಾಷೆಯ ಸಾಹಿತ್ಯದ ಸಂಸ್ಕೃತಿಯ ವಿಕಾಸವಾಗುವುದಿಲ್ಲ. ಒಂದಲ್ಲ ಒಂದು ವಿಧದಲ್ಲಿ ಬೇರೆ ಬೇರೆ ಸಂಸ್ಕೃತಿ ನಾಗರಿಕತೆ ಧರ್ಮ ಭಾಷೆ ಸಾಹಿತ್ಯ ತಂತ್ರಜ್ಞಾನಗಳ ಸಂಪರ್ಕವಿಲ್ಲದಿದ್ದರೆ ಯಾವೊಂದು ಸಮುದಾಯವೂ ಸ್ಥಿತಿಯೂ ಇವತ್ತು ಈ ಹಂತವನ್ನು ತಲುಪಲಾಗುತ್ತಿರಲಿಲ್ಲ. ನಾಗರಿಕತೆಯ ಒಂದೊಂದು ಚಲನೆಯಲ್ಲೂ ಯುಗದಲ್ಲೂ ಆಯಾಯ ಸಂದರ್ಭಕ್ಕೆ ಸಮುದಾಯಕ್ಕೆ ತಕ್ಕಂತೆ ಅಲ್ಲಿನ ಧರ್ಮ ರಾಜಕಾರಣದ ರೀತಿನೀತಿಗೆ ಅನುಗುಣವಾಗಿ ಆಧುನಿಕತೆಯ ಅವಸ್ಥಾಂತರಗಳು ತೀರ್ಮಾನವಾಗುತ್ತಿರುತ್ತವೆ. ಶಿಲಾಯುಗದ ಮಾನವರಲ್ಲಿ ಮುಂದೆ ಹೋದ ಕೆಲವು ಗುಂಪುಗಳು ಕಬ್ಬಿಣದ ಉಪಯೋಗವನ್ನು ಕಂಡು ಹಿಡಿದು ಅನೇಕ ಬಗೆಯ ಖನಿಜಗಳ ಆವಿಷ್ಕಾರ ಮಾಡಿ ಬಳಸಿಕೊಳ್ಳದಿದ್ದರೆ ಇವತ್ತಿನ ನಾಗರಿಕತೆ ಅವರನ್ನು ಏನನ್ನುತ್ತಿತ್ತೋ ಗೊತ್ತಿಲ್ಲ. ಆ ಕಾಲದ ಶಿಲಾಯುಗ ವಾಸಿಗಳು ಕಬ್ಬಿಣ ಕಂಚು ತಾಮ್ರ ಯುಗದ ಉಪಯೋಗವನ್ನು ಸಾಂಸ್ಕೃತಿಕ ನಂಬಿಕೆಯ ಕಾರಣ ಕೊಟ್ಟು ತಿರಸ್ಕರಿಸಿ ಬಿಟ್ಟಿದಿದ್ದರೆ ಅವರ ಭವಿಷ್ಯ ಏನಾಗುತ್ತಿತ್ತು? ಅಥವಾ ಯುರೋಪಿನಲ್ಲಿ ಪುನರುಜ್ಜೀವನ ಯುಗದಲ್ಲಾದ ಅನೇಕ ಆವಿಷ್ಕಾರಗಳಿಗೆ ಆಗಿನ ಸಮುದಾಯಗಳು ವಿಮುಖವಾಗಿ ಕುಳಿತಿದ್ದರೆ ಇವತ್ತಿಗೆ ಅಂತವರ ಗತಿ ಎಲ್ಲಿಗೆ ಬಂದು ನಿಲ್ಲುತ್ತಿತ್ತು. ಹೀಗೆಯೇ ಇವತ್ತಿನ ದಲಿತರವರೆಗೆ ಈ ಪ್ರಶ್ನೆಗಳನ್ನು ಬೆಳೆಸುತ್ತಾ ಜಾಗತೀಕರಣದ ಬಾಗಿಲವರೆಗೂ ತಂದು ನಿಲ್ಲಿಸಬಹುದು. ಪ್ರಗಿತಯ ಬದಲಾವಣೆಯ ಆಯ್ಕೆಯಲ್ಲಿ ಸೂಕ್ತವಾಗಿ ಪ್ರವೇಶಿಸದಿದ್ದರೆ, ಆ ದುರಂತಕ್ಕೆ ಅವರೇ ಹೊಣೆಗಾರರಾಗಬೇಕಾಗುತ್ತದೆ. ಹೀಗೆಯೇ ಮಂಡ್ಯ ಜಿಲ್ಲೆಗೆ ಕಾವೇರಿ ನದಿ ನೀರಿನ ಕಾಲುವೆಗಳು ಹಳ್ಳಿಗಳಿಗೆ ಬರುತ್ತಿದ್ದಂತೆಯೇ ಕೆಲವು ಸಂಪ್ರದಾಯಸ್ತರು ಕಾಲುವೆ ನೀರಿನ ಈ ಹೊಸ ಕ್ರಮದಿಂದ ನಮ್ಮ ನೆಲ ಊರು ಅಪವಿತ್ರ್ಯವಾಗುತ್ತದೆಂದು ಭಾವಿಸಿ ನೀರಾವರಿಯಾಗಿದ್ದ ಭೂಮಿ ಬಿಟ್ಟು ಎತ್ತರದ ಗುಡ್ಡಗಳಿಗೆ ಹೋಗಿ ನೆಲೆಸಿದರಂತೆ. ಇವತ್ತಿನ ಸಂದರ್ಭವನ್ನು ಈಗವರೇ ಕಂಡು ನಿಬ್ಬೆರಗಾಗಿದ್ದಾರೆ.

ಸಂಸ್ಕೃತಿಗಳ ಅನನ್ಯತೆಯ ಪ್ರಶ್ನೆಯನ್ನೂ ಅನುಮಾನದಿಂದ ಇದರಿಂದಲೇ ನೋಡಬೇಕಾಗುತ್ತದೆ. ಆಧುನಿಕತೆಗೆ ಅಡ್ಡಗೋಡೆ ಹಾಕಿಕೊಂಡು ಅದರ ಮೇಲೆ ದೀಪ ಇಟ್ಟುಕೊಂಡು ಮಾತನಾಡುವವರನ್ನು ಸೀಳಿ ನೋಡಿದರೆ ಅಂತವರ ಆತ್ಮ ಅಮೆರಿಕಾದ ಅಂತರಂಗದ ಕನಸು ಕಾಣುತ್ತಿರುತ್ತದೆ. ಅಮೆರಿಕಾದಿಂದ ಇಂತಹ ಚಿಂತಕರ ಚಾವಡಿಗೆ ಒಂದು ಬಾರಿ ಒಂದು ಪುಟ್ಟ ಆಹ್ವಾನ ಬಂದರೂ ಸಾಕು; ಅವರ ವಾದಗಳೆಲ್ಲ ಅದಲು ಬದಲಾಗುತ್ತವೆ. ರಾಜಕಾರಣಿಗಳ ಪಕ್ಷಾಂತರದ ರೀತಿಯಲ್ಲೇ ಬುದ್ಧಿಜೀವಿಗಳು ಹೋರಾಟಗಾರರು ತಮ್ಮ ನಿಷ್ಠೆ ಬದಲಿಸಿ ತಾತ್ವಿಕಾಂತರ ಮಾಡಿ ಆ ಬಗೆಯ ಬದಲಾವಣೆಗೆ ವೈಚಾರಿಕ ವಿಕಾಸ ಎಂದು ಕರೆದುಕೊಂಡ ಅಪ್ರಮಾಣಿಕರಾಗುವುದು ಮೊದಲಿಗಿಂತಲೂ ಈಗ ಎಲ್ಲ ಕಡೆ ಹೆಚ್ಚಾಗಿ ಕಂಡು ಬರುತ್ತಿದೆ. ರಷ್ಯಾದ ತಾತ್ವಿಕ ಬದ್ಧತೆಗೆ ಒಳಗಾದ ಹಳೆಯ ಸಮಾಜವಾದಿ ಕಮ್ಯುನಿಷ್ಟ ಸಿದ್ಧಾಂತಿಗಳು ಪಕ್ಷಾಂತರ ಮಾಡಲಾಗದೆ ಹಳೆಯ ಆಯುಧಗಳಿಂದಲೇ ಶುಷ್ಕವಾಗಿ ವಾದಗಳನ್ನು ಮಂಡಿಸುತ್ತಿದ್ದಾರೆ. ಅದರಲ್ಲೂ ಹೊಸ ಪೀಳಿಗೆಯ ಬಂಡಾಯ ವಿಮರ್ಶಕರಂತೂ ಜಾಗತೀಕರಣದ ತಳಾಬುಡಾ ಏನನ್ನೂ ತಿಳಿಯದೆ ವಿನಾಕಾರಣ ಸುಳ್ಳು ಆತಂಕಗಳನ್ನು ವೇದಿಕೆಗಳಲ್ಲಿ ಪ್ರದರ್ಶಿಸುವುದು ಬಿಟ್ಟಿ ಮನರಂಜನೆಯಾಗಿದೆ.

ಆದರೆ ಆ ಬಗೆಯ ಮನರಂಜನೆ ಬಹಳ ಅಪಾಯಕಾರಿಯಾದದ್ದು. ದ್ವಿತೀಯ ದೇಶಗಳ ಸಂಬಂಧದಿಂದಲೂ ದೂರವಾಗದೆ ತನ್ನ ಸ್ಥಿರತೆಗಾಗಿ ತನ್ನಲ್ಲೇ ದಾರಿಯನ್ನು ಹುಡುಕಲಾಗದೆ ಅತ್ತಾ ಮೊದಲ ಸ್ಥಾನದ ದೇಶಗಳ ಸಂಪರ್ಕವನ್ನು ಬಿಡಲಾರದೆ ಭಾರತವು ರಷ್ಯಾ ಅಮೆರಿಕಾ ಎರಡರ ಜೊತೆಗೆ ಹೆಣಗಾಡುತ್ತಿರುವುದರ ಒಳಗೆಯೇ ಜಾಗತೀಕರಣದ ಸವಾಲುಗಳು ಸುತ್ತಿಕೊಂಡಿರುತ್ತವೆ ಎಂಬುದು ಅನೇಕರಿಗೆ ಮನವರಿಕೆಯಾಗುವುದಿಲ್ಲ. ಹೀಗಾಗಿಯೇ ಪ್ರಬಲ ರಾಷ್ಟ್ರಗಳ ಪೈಪೋಟಿಯಲ್ಲೇ ಆಯಾ ರಾಷ್ಟ್ರಗಳ ಶಕ್ತಿಯೆಲ್ಲ ಕಳೆದುಹೋಗುತ್ತಿರುತ್ತದೆ. ಅಂತಾದ್ದರಲ್ಲಿ ದಲಿತ ಸಮುದಾಯಗಳು ಆಧುನಿಕತೆಯ ಯಾವ ಪರಿಕರಗಳಿಗೆ ವಿಧಾನಗಳಿಗೆ ಅಪೇಕ್ಷೆಗಳಿಗೆ ಮುಂದಾಗಬೇಕು? ಹಾಗೆ ಅದರೊಂದಿಗೆ ಒಪ್ಪಿ ನಡೆಯುವುದರಲ್ಲಿ ಅಮೆರಿಕಾದಂತಹ ರಾಷ್ಟ್ರಗಳಿಗೆ ಎಷ್ಟು ಲಾಭ ನಷ್ಟ ಎಂದು ಮಾತ್ರವೇ ಈ ಪ್ರಶ್ನೆಯನ್ನು ಲೆಕ್ಕ ಹಾಕಬಾರದು. ದಲಿತ ಸಮುದಾಯಗಳು ಜಾಗತೀಕರಣಕ್ಕೆ ವಿರುದ್ಧವಾಗಿ ವರ್ತಿಸಬೇಕೆಂದು ದೇಶೀಯತೆಯ ವಾದ ಹೂಡುವ ಮೇಲ್ಜಾತಿ ಬುದ್ಧಿಜೀವಿಗಳ ಕ್ರಮದಲ್ಲೇ ಅಪಾಯವಿದ್ದಂತಿದೆ.

* * *