ನಾನು, ಜನಾಂಗೀಯವಾದ ಕುರಿತ ಭಾರತ ಸರ್ಕಾರದ ರಾಷ್ಟ್ರೀಯ ಸಮಿತಿಯ ಸದಸ್ಯನಾಗಿದ್ದೇನೆ. ಆದರೆ ನಾನೀಗ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ತಮ್ಮ ಮುಂದೆ ಇಡುತ್ತಿರುವೆ ಕ್ಷಮಿಸಿ.

ಮೊದಲಿಗೆ, ದಕ್ಷಿಣ ಆಫ್ರಿಕಾ ಸರ್ಕಾರದ ಪ್ರತ್ಯೇಕತಾ ಅಪಾರ್ಟೈಡ್ ಕಾನೂನುಗಳು ಕೊನೆಗೊಳ್ಳುವಂತಾಗಲು ಸತತವಾಗಿ ಪ್ರಯತ್ನಿಸಿದ ವಿಶ್ವಸಂಸ್ಥೆಯನ್ನೂ ಈ ಪ್ರಯತ್ನದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಭಾರತವನ್ನೂ ಕೃತಜ್ಞತೆಯಿಂದ ನೆನೆಯುವೆ. ದಕ್ಷಿಣ ಆಫ್ರಿಕಾದಲ್ಲಿ ಅಪಾರ್ಟೈಡ್ ಕಾನೂನುಗಳು ಕೊನೆಯಾದುದರಿಂದ ಪ್ರತ್ಯೇಕತೆ ತಾರತಮ್ಯಗಳನ್ನು ಕಾನೂನುಗೊಳಿಸಿ ಕುಬ್ಜರಾಗಿದ್ದ ಅಲ್ಲಿನ ಬಿಳಿಯರ ಘನತೆ ಹೆಚ್ಚಿದಂತಾಯ್ತು. ಬಲಿಪಶುಗಳಾಗಿದ್ದ ಕರಿಯರು ಉಸಿರಾಡುವಂತಾಯ್ತು ಹಾಗೂ ಸಮಾನತೆಯ ಕಡೆಗೆ ಒಂದು ಹೆಜ್ಜೆ ಇಟ್ಟಂತಾಯ್ತು.

ಈಗ ಜನಾಂಗೀಯವಾದ, ಜನಾಂಗೀಯ ಭೇದಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಮೂರನೆ ವಿಶ್ವಸಮ್ಮೇಳನವು ಆಫ್ರಿಕಾದ ಡರ್ಬಾನ್ ನಲ್ಲಿ ನಡೆಯಲಿದೆ. ಈ ಮೂರನೆ ಸಮ್ಮೇಳನವು, ‘ಜನಾಂಗ’ ಎಂಬ ಪದವನ್ನು ಜನಪ್ರಿಯ ಮಾನವಶಾಸ್ತ್ರಜ್ಞರ ಶಾರೀರಿಕ ಲಕ್ಷಣದ ಸಂಕುಚಿತಾರ್ಥದಲ್ಲಿ ಬಳಸದೆ ವಿಶಾಲವಾದ ಅರ್ಥದಲ್ಲಿ ಗ್ರಹಿಸಿದೆ. ಅಂದರೆ – ‘ಇರುವುದೊಂದೇ ಜನಾಂಗ – ಮಾನವ ಜನಾಂಗ’ – ಎಂಬುದು ಸಮ್ಮೇಳನದ ಗ್ರಹಿಕೆಯಾಗಿದೆ. ಮಾನವ ಜನಾಂಗದೊಳಗಿನ ಸಾಂಸ್ಥಿಕ ತಾರತಮ್ಯ ನಿವಾರಣೆ ಕಡೆಗೆ ಹೆಚ್ಚು ಗಮನ ಕೊಡಲಾಗಿದೆ. ಜೊತೆಗೆ ಈ ಸಮ್ಮೇಳನದ ಚರ್ಚೆಯ ವ್ಯಾಪ್ತಿಯಲ್ಲಿ Descent (ಹುಟ್ಟಿನಿಂದಲೇ ತಾರತಮ್ಯ) ಸೇರ್ಪಡೆಯಾಗಿದೆ.

ಭಾರತದಲ್ಲಿ ಚಾತುರ್ವರ್ಣ ವ್ಯವಸ್ಥೆ ಇದ್ದಾಗಲೂ ಆ ವ್ಯವಸ್ಥೆಯಿಂದ ಆಚೆ ನೂಕಲ್ಪಟ್ಟು ವರ್ಣಬಾಹ್ಯರಾದವರು ಅಸ್ಪೃಶ್ಯರು. ಜಾತಿಪದ್ಧತಿಯಿಂದಲೂ ಆಚೆ ನೂಕಲ್ಪಟ್ಟು Outcaste ಆದವರು ಅಸ್ಪೃಶ್ಯರು. ಆದ್ದರಿಂದ ಹುಟ್ಟು ಕಾರಣವಾಗಿ ಸಾಮಾಜಿಕ ವ್ಯವಸ್ಥೆಯಿಂದಲೇ ಹೊರಹಾಕಲ್ಪಟ್ಟು ‘ಹೀನವೃತ್ತಿ’ಯ ಕಾರಣದಿಂದಲೂ ಪ್ರತ್ಯೇಕತೆ ಭೇದ ನಿರ್ಬಂಧಗಳಿಗೆ ಒಳಗಾಗಿರುವ ಭಾರತದ ಅಸ್ಪೃಶ್ಯ ಸಮುದಾಯದ ಸಮಸ್ಯೆಯೂ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಚರ್ಚಿತವಾಗಬೇಕಾಗುತ್ತದೆ. ಆದರೆ ಇದಕ್ಕೆ ಭಾರತ ಸರ್ಕಾರ ಒಪ್ಪುತ್ತಿಲ್ಲ. ಜನಪ್ರಿಯ ಮಾನವಶಾಸ್ತ್ರಜ್ಞರ ಸಂಕುಚಿತ ಅರ್ಥದ ಶಾರೀರಿಕ ಲಕ್ಷಣದ Race ಗಳಿಗೆ ಸಂಬಂಧಿಸಿದ ತಾರತಮ್ಯ ಈ Descent ಎಂದು ಭಾರತ ಸರ್ಕಾರ… ಈ ವಾದವನ್ನು ಒಪ್ಪಿಕೊಂಡರೆ ವಿಶ್ವಸಂಸ್ಥೆಯ ಪರಿಕಲ್ಪನೆ ‘ಇರುವುದೊಂದೇ ಜನಾಂಗ ಮಾನವ ಜನಾಂಗ’ ಎಂಬುದನ್ನು ನಿರಾಕರಿಸಿದಂತಾಗುತ್ತದೆ. ಈ ಬಿಕ್ಕಟ್ಟು ನಮ್ಮ ಮುಂದಿದೆ.

ಪದ, ವಾದಗಳನ್ನು ಸದ್ಯಕ್ಕೆ ಕೈಬಿಡೋಣ. ದಕ್ಷಿಣ ಆಫ್ರಿಕಾದಲ್ಲಿ ಬಣ್ಣ ಮತ್ತು ವಸಾಹತುಶಾಹಿ ಕಾರಣಕ್ಕಾಗಿ ಉಂಟಾದ ತಾರತಮ್ಯವಾದ ಅಪಾರ್ಟೈಟ್ ಅನ್ನೂ ಹಾಗೂ ಭಾರತದಲ್ಲಿ ಜಾತಿಪದ್ಧತಿ ಕಾರಣವಾಗಿ ಉಂಟಾದ ತಾರತಮ್ಯ ಅಸ್ಪೃಶ್ಯತೆಯನ್ನೂ ಹೋಲಿಸಿ ನೋಡಿದರೆ ಎರಡರ ನಡುವೆ ಇರುವ ಸಾಮ್ಯ ದಿಗ್ಭ್ರಮೆ ಹುಟ್ಟಿಸುತ್ತವೆ.

೧೯೪೮ರಿಂದ ೧೯೯೦ರವರೆಗೆ ದಕ್ಷಿಣ ಆಫ್ರಿಕದ ಬಿಳಿಯರ ಸರ್ಕಾರವು ಅಲ್ಲಿನ ಕರಿಯರನ್ನು ನಿಷೇಧ, ಭೇದ, ನಿರ್ಬಂಧ, ಪ್ರತ್ಯೇಕತೆಗೆ ಒಳಪಡಿಸಲು ರಚಿಸಿದ ಕೆಲವು ಕಾನೂನು ಕಟ್ಟಳೆಗಳು ಹೀಗಿವೆ : ೨. ಕರಿಯರ ವಾಸಸ್ಥಾನ, ಶಾಲೆಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಕಾನೂನು. ೨. ಬಿಳಿ ಕರಿಯರ ನಡುವೆ ಮದುವೆ ಸಂಬಂಧ ನಿಷೇಧ ಕಾನೂನು. ೩. ಹೋಟೆಲ್ ಕ್ಲಬ್ ಇತ್ಯಾದಿ ಸಾರ್ವಜನಿಕ ಸ್ಥಳಗಳಿಗೆ ಕರಿಯರ ಪ್ರವೇಶ ನಿಷೇಧ ಕಾನೂನು ೪. ಕರಿಯ ವ್ಯಕ್ತಿ ಪಾಸ್ ಹೊಂದಿರಬೇಕೆಂಬ ನಿಯಮ ೫. ಭಾರತದ ಅಸ್ಪೃಶ್ಯರ ಒಳಪಂಗಡಗಳ ವಿಂಗಡಣೆಯಂತೆಯೇ ಕರಿಯರನ್ನು ಮೂರು ಗುಂಪಾಗಿ ಪ್ರತ್ಯೇಕಿಸುವ ಕಾನೂನು ೬. ಸಾರ್ವಜನಿಕ ರಾಜಕೀಯ ಹಕ್ಕು ನಿವಾರಣೆ… ಇತ್ಯಾದಿ. ಹೆಚ್ಚೂ ಕಮ್ಮಿ ಇಂಥವೇ ಕಾನೂನು ಕಟ್ಟಳೆಗಳು ಭಾರತದಲ್ಲಿ ರಾಜರ ಆಳ್ವಿಕೆಯಲ್ಲಿ ಇರಲಿಲ್ಲವೇ? ಅಪಾರ್ಟೈಡ್ ಕಾನೂನಿಗಿಂತಲೂ ಹೀನವಾಗಿ ಅಸ್ಪೃಶ್ಯರ ಬಗ್ಗೆ ಶೂದ್ರರ ಬಗ್ಗೆ ಭಾರತದ ರಾಜರ ಆಳ್ವಿಕೆಯ ಕಾನೂನು ಕಟ್ಟಳೆಗಳು ಇರಲಿಲ್ಲವೇ? ಅಪಾರ್ಟೈಡ್ ಕಾನೂನಿನಲ್ಲಿ ಕರಿಯರಿಗೆ ಪ್ರತ್ಯೇಕ ಶಾಲೆ ಶಿಕ್ಷಣವಾದರೂ ಇತ್ತು. ಭಾರತದಲ್ಲಿ ಅಸ್ಪೃಶ್ಯರು ಶೂದ್ರರು ಶಿಕ್ಷಣ ಪಡೆಯುವುದೂ ಶಿಕ್ಷಾರ್ಹ ಅಪರಾಧವಾಗಿತ್ತು. ಆಗ ಆಡಳಿತ ನಿರ್ವಹಣೆ ಅಂದರೆ ಚಾತುರ್ವರ್ಣ ಜಾತಿಪದ್ಧತಿಯ ತಾರತಮ್ಯಗಳು ಚಾಚುತಪ್ಪದೆ ನಡೆಯುವಂತೆ ನೋಡಿಕೊಳ್ಳುವುದೇ ಆಗಿತ್ತು.

ಆದರೆ ಇತ್ತೀಚಿನದಾದುದರಿಂದ ದಕ್ಷಿಣ ಆಫ್ರಿಕಾದ ಅಪಾರ್ಟೈಡ್‌ನ ಹಸಿಯಾದ ಗಾಯ, ಅಲ್ಲಿಂದ ತೊಟ್ಟಿಕ್ಕುತ್ತಿರುವ ರಕ್ತ ನಮಗೆ ಕಾಣಿಸುತ್ತಿದೆ. ಅಪಾರ್ವೈಡ್‌ನ ತಾರತಮ್ಯ ಕಾನೂನುಗಳನ್ನು ಪ್ರತಿಭಟಿಸಿದ್ದಕ್ಕೆ ಸಾವಿರಾರು ಜನ ಕರಿಯರ ಹತ್ಯಾಯಾಯ್ತು. ಹತ್ತಾರು ಸಾವಿರ ಜನರು ಜೈಲಲ್ಲಿ ಕೊಳೆಯಬೇಕಾಯ್ತು. ಪ್ರತಿಭಟನೆ ತೀವ್ರಗೊಂಡಾಗ ಒಟ್ಟಿಗೆ ಹತ್ತಾರು ಜನ ಕರಿಯರು ಸೇರುವುದೂ ಅಪರಾಧ ಎನ್ನುವ ಮಟ್ಟಕ್ಕೆ ಹೋಯ್ತು. ಕಾನೂನೇ ಅಪರಾಧಿಯಾದಾಗ ಏನೆಲ್ಲಾ ಅವಾಂತರ ಆಗಬಹುದೋ ಅವೆಲ್ಲಾ ಆಯ್ತು. ಈ ಭೀಕರವನ್ನು ನೆನೆಸಿಕೊಂಡಾಗಲೆಲ್ಲಾ ನನಗೆ ಪುರಾತನ ಭಾರತದಲ್ಲಿ ಚಾತಿರ್ವರ್ಣ ಜಾತಿ ಪದ್ಧತಿಯಿಂದ ಒಂದು ಜನ ಸಮುದಾಯವನ್ನು ಆಚೆಗೆ ನೂಕಿ ಎಸೆದು ಅಸ್ಪೃಶ್ಯತೆಗೆ ಒಪ್ಪಿಸಿ ಒಗ್ಗಿಸಲು ನಡೆದಿರಬಹುದಾದ ಬಲಾತ್ಕಾರ ಕ್ರೌರ್ಯ ಹಿಂಸೆ ಹತ್ಯೆಗಳೇ ದಕ್ಷಿಣ ಆಫ್ರಿಕಾದಲ್ಲಿ ವರ್ತಮಾನದಲ್ಲಿ ಅಪಾರ್ಟೈಡ್ ರೂಪದಲ್ಲಿ ಪುನಾರಾವರ್ತನೆ ಆದಂತೆ ಅನ್ನಿಸುತ್ತದೆ.

ಆನೆ ಹಿಡಿಯುವ ಖೆಡ್ಡಾ ನಿಮಗೆ ತಿಳಿದಿರಬಹುದು. ಕಾಡಲ್ಲಿ ದೊಡ್ಡಹಳ್ಳ, ಮಾಡಿ, ಕಡ್ಡಿ ಸೊಪ್ಪು ಪೊದೆಯಲ್ಲಿ ಹಳ್ಳದ ಮೇಲ್ಭಾಗವನ್ನು ಛಾವಣಿಯಂತೆ ಮಾಡಿ ಹಳ್ಳ ಕಾಣದಂತೆ ಮಾಡುತ್ತಾರೆ. ನಂತರ ಶಬ್ದಮಾಡಿ ಆ ಹಳ್ಳದತ್ತ ಆನೆ ಓಡಾಡುವಂತೆ ಮಾಡುತ್ತಾರೆ. ಹಳ್ಳದತ್ತ ಹೋದ ಆನೆ ಹಳ್ಳ ಎಂದು ಅರಿಯದೆ ಹಳ್ಳಕ್ಕೆ ಬೀಳುತ್ತದೆ. ಬಿದ್ದ ಆನೆಗೆ ಸರಪಳಿ ಕಟ್ಟಿ ಬಂಧಿಸುತ್ತಾರೆ. ಬಂಧಿಸಿದ ಆನೆಯನ್ನು ಮೇಲೆತ್ತಿ ಹೊಡೆದು ಬಡಿದು ಹಿಂಸಿಸಿ ಪಳಗಿಸುತ್ತಾರೆ. ಪಳಗಿದ ಆನೆ ತನ್ನ ಸಹಜ ಸ್ವಭಾವ ಮರೆತು ಪಳಗಿಸಿದವನ ನಮ್ರ ಸೇವಕನಾಗುತ್ತದೆ. ಸೇವಕತನವೇ ಅದರ ಸ್ವಭಾವವಾಗುತ್ತದೆ. ದಕ್ಷಿಣ ಆಫ್ರಿಕಾದ ಕರಿಯರೆಂಬ ಆನೆಯನ್ನು ಹಳ್ಳಕ್ಕೆ ಬೀಳಿಸಲಾಯ್ತು. ಬಂಧಿಸಿಯೂ ಆಯ್ತು. ಹೊಡೆದು ಬಡಿದು ಹಿಂಸಿಸಿ ಪಳಗಿಸಲು ಪ್ರಯತ್ನಿಸಲಾಯ್ತು. ಆದರೆ ದಕ್ಷಿಣ ಆಫ್ರಿಕಾದ ಕರಿಯರೆಂಬ ಆನೆ ಪಳಗಲಿಲ್ಲ. ಪಳಗದಿದ್ದಕ್ಕೆ ಹೆಚ್ಚಿನ ಹಿಂಸೆ ಅನುಭವಿಸಬೇಕಾದ ಪರಿಸ್ಥಿತಿಯೂ ಉಂಟಾಗಿರಬಹುದು. ಆದರೆ ಭಾರತದ ಅಸ್ಪೃಶ್ಯರೆಂಬ ಆನೆ ಪಳಗಿಬಿಟ್ಟಿದೆ. ಇದು ಪುರಾತನ ಕಾಲದಲ್ಲೇ ಪಳಗಿಸಲ್ಪಟ್ಟ ಕಾರಣ, ಆ ಕ್ರೌರ್ಯ ನಮಗೆ ಕಾಣುತ್ತಿಲ್ಲ. ಜೊತೆಗೆ ಪಳಗಿಸಿದವನಿಗೂ ಈಗ ತಾನು ಪಳಗಿಸಿದವನು ಎಂಬ ನೆನಪಿಲ್ಲ. ಪಳಗಿಸಲ್ಪಟ್ಟವನಿಗೂ ತಾನು ಪಳಗಿಸಲ್ಪಟ್ಟವನು ಎಂಬ ನೆನಪಿಲ್ಲ. ತಾರತಮ್ಯವು ಸಮಾಜದಲ್ಲಿ ಆಂತರಿಕವಾಗಿ ವ್ಯಾಪಿಸಿ ಸಮಾಜ ಪದ್ಧತಿಯಾಗಿಬಿಟ್ಟಿದೆ. ಯಾವುದು ಹೆಚ್ಚು ದಾರುಣವಾದುದು? ಇದನ್ನು ಹೇಗೆ ವಿವರಿಸೋಣ? ಪ್ರಾಥಮಿಕ ಹಂತದ ಅಸ್ಪೃಶ್ಯತೆಯನ್ನು ಅಪಾರ್ಟೈಡ್ ಎಂದೋ ಅಥವಾ ಅಪಾರ್ಟೈಡ್‌ನ ಮುತ್ತಜ್ಜ ಅಸ್ಪೃಶ್ಯತೆ ಎಂದೋ? ಒಟ್ಟಿನಲ್ಲಿ ಅಪಾಟೈಡ್ ಬಗೆಯ ಪ್ರತ್ಯೇಕತೆ ನಿರ್ಬಂಧ, ನಿಷಿದ್ಧ ಭೇದಗಳು ಸಾವಿರಾರು ವರ್ಷ ಬದುಕುಳಿದು ಧರ್ಮಶಾಸ್ತ್ರ ಬಳಿಸಿಕೊಂಡು ಆಚರಣೆಯಾಗಿಬಿಟ್ಟರೆ ಅದೇ ಅಸ್ಪೃಶ್ಯತೆಯಾಗಿಬಿಡಬಹುದೇನೋ.

ಈ ಎರಡರ ನಡುವೆ ಭಿನ್ನತೆಯನ್ನು ಹೇಳಲೇಬೇಕೆಂದರೆ ಒಂದು ಭಿನ್ನತೆ ಎದ್ದು ಕಾಣುತ್ತದೆ. ಅಪಾರ್ಟೈಡ್‌ನಲ್ಲಿ ಬಿಳಿಯ ಮತ್ತು ಕರಿಯರ ನಡುವಿನ ಭೌತಿಕ ಬಣ್ಣದಿಂದಾಗಿ ನೋಡಿದಾಕ್ಷಣ ಬಲಿಪಶುವನ್ನು ಗುರುತಿಸಬಹುದಿತ್ತು. ಆದರೆ ಅಸ್ಪೃಶ್ಯತೆಯಲ್ಲಿ ಎಲ್ಲರೂ ಭೌತಿಕವಾಗಿ ಒಂದೇ ರೀತಿ ಇದ್ದುದರಿಂದ ಬಲಿಪಶುವನ್ನು ಗುರುತಿಸಲು ಕಷ್ಟವಾಗುತ್ತಿತ್ತು. ಅದಕ್ಕಾಗಿ ಬಲಿಪಶು ಅಸ್ಪೃಶ್ಯನನ್ನು ಗುರುತಿಸಲು ಹುಟ್ಟಿಕೊಂಡ ಕಟ್ಟುಪಾಡುಗಳು ತಾರತಮ್ಯದ ಎಲ್ಲೆಯನ್ನೇ ಮೀರಿದಂತಿದೆ. ಅಸ್ಪೃಶ್ಯನ ವೇಷ, ಭಾಷೆ, ನಡೆ, ದೂರ, ಆಹಾರ ಇವುಗಳಿಂದಲೇ ಬಲಿಪಶುವನ್ನೇ ಗುರುತಿಸುವ ಲಕ್ಷಣಶಾಸ್ತ್ರ ಭಾರತದಲ್ಲಿ ಹುಟ್ಟಿವೆ. ಒಂದು ಉದಾಹರಣೆ ಕೊಡುವೆ – ೧೯೩೬ನೆ ನವೆಂಬರ್ ೪ರ ‘ಮುಂಬೈ ಸಮಾಚಾರ್’ ಪತ್ರಿಕೆಯ ವರದಿ ಹೀಗಿದೆ : “ಮಲಬಾರಿನ ಉಟ್ಟಪಾಲಂ ಎಂಬಲ್ಲಿ ೧೭ ವರ್ಷ ವಯಸ್ಸಿನ ಶಿವರಾಯನ್ ಎಂಬ ಅಸ್ಪೃಶ್ಯ ಎಜವ ಜಾತಿಯವನು ಉಪ್ಪುಕೊಳ್ಳಲು ಸವರ್ಣೀಯ ಹಿಂದೂವೊಬ್ಬನ ಅಂಗಡಿಗೆ ಹೋಗಿ ಮಲಯಾಳಂ ಭಾಷೆಯಲ್ಲಿ ‘ಉಪ್ಪು’ ಬೇಕೆಂದು ಕೇಳಿದ. ಮಲಬಾರಿನ ಸಂಪ್ರದಾಯದಂತೆ ಸವರ್ಣೀಯ ಹಿಂದೂಗಳು ಮಾತ್ರ ಉಪ್ಪಿಗೆ ‘ಉಪ್ಪು’ ಎಂಬ ಪದ ಬಳಸಬಹುದು. ಅಸ್ಪೃಶ್ಯನಾಗಿ ಅವನು ‘ಪುಲಿಚಾತನ್’ ಎಂಬ ಪದ ಬಳಸಬೇಕಿತ್ತು. ಅದರಿಂದ ಮೇಲ್ಜಾತಿಯ ಅಂಗಡಿಯವನು ಕೋಪಗೊಂಡು ಶಿವರಾಮನ್‌ಗೆ ಚೆನ್ನಾಗಿ ಥಳಿಸಿದನೆಂದೂ ಮತ್ತು ಅದರಿಂದ ಆತ ಮರಣ ಹೊಂದಿದನೆಂದೂ ವರದಿಯಾಗಿದೆ” ಇಂಥವು ಸಾವಿರಾರು.

ಈಗ ಹಳೆಯದೆಲ್ಲಾ ಯಾಕೆ ಎಂಬ ಪ್ರಶ್ನೆ ಏಳುತ್ತದೆ. ದಕ್ಷಿಣ ಆಫ್ರಿಕಾವು ೧೯೯೦ ರಲ್ಲಿ ಅಪಾರ್ಟೈಡ್ ಕಾನೂನು ಹಿಂತೆಗೆದುಕೊಂಡಾಕ್ಷಣ ತಾರತಮ್ಯವು ತನ್ನಷ್ಟಕ್ಕೆ ತಾನೇ ಇಲ್ಲವಾಯಿತು ಎಂದು ಹೇಳಲಾಗದು. ಆ ತಾರತಮ್ಯದ ಕಾನೂನುಗಳು ಉಂಟು ಮಾಡಿದ ತಾರತಮ್ಯದ ಅವಾಂತರಗಳು ಸಮಾಜದಲ್ಲಿ ಮುಂದುವರಿಯುತ್ತಿರುತ್ತವೆ. ಜನರು ಸಾಮಾನ್ಯವಾಗಿ ರಾಷ್ಟ್ರದ ಕಾನೂನಿಗಿಂತಲೂ ಸಂಪ್ರದಾಯ ರೂಢಿಗಳನ್ನೇ ಪರಿಣಾಮಕಾರಿಯಾಗಿ ಆಚರಿಸುತ್ತಾರೆ. ಭಾರತದಲ್ಲಿ ಈ ಪ್ರವೃತ್ತಿ ಭೀಕರವಾಗಿದೆ. ಉದಾಹರಣೆಗೆ ಭಾರತದ ಅಸ್ಪೃಶ್ಯರು ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಕಾನೂನು ಇದ್ದರೂ ಇಂದಿಗೂ ಜನಜೀವನದಲ್ಲಿ ಆಚರಣೆಯಲ್ಲಿ ಇಲ್ಲವೇ? ಈ ಕಾರಣಕ್ಕೆ ಪ್ರತ್ಯೇಕಗೊಂಡಿಲ್ಲವೇ? ತಾರತಮ್ಯದ ಕಾನೂನುಗಳನ್ನು ಹಿಂತೆಗೆದುಕೊಂಡಿದ್ದರಿಂದ ಸ್ವಯಂ ಅಪರಾಧಿಯಾಗಿದ್ದ ಸರ್ಕಾರವು ತನ್ನ ಅಪರಾಧಿ ಸ್ಥಾನ ಕಳೆದುಕೊಂಡಿತು, ನಿಜ. ಆದರೆ ಸರ್ಕಾರ ಅಪರಾಧವನ್ನು ಮುಚ್ಚಿಟ್ಟುಕೊಂಡರೆ ಅಪರಾಧವನ್ನು ಮುಚ್ಚಿಟ್ಟುಕೊಂಡ ಅಪರಾಧಕ್ಕೆ ತುತ್ತಾಗಬೇಕಾಗುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಕಷ್ಟನಷ್ಟ ಅನುಭವಿಸಿದ ಕರಿಯರಿಗೆ ದಾಖಲಾತಿಗಳು ಇರುವುದರಿಂದ ಅದಕ್ಕೆ ಅಲ್ಲಿ ಪರಿಹಾರ ಕೇಳುವ ಸಾಧ್ಯತೆ ಹುಟ್ಟಿಕೊಳ್ಳಬಹುದು. ಆದರೆ ಭಾರತದಲ್ಲಿ ಅಸ್ಪೃಶ್ಯರ ಆಸ್ತಿಪಾಸ್ತಿ ನಷ್ಟದ ದಾಖಲಾತಿಯ ಮಾತಿರಲ, ಅದರ ನೆನಪುಗಳೂ ಇಲ್ಲವಾದುದರಿಂದ ಪರಿಹಾರದ ಸಮಸ್ಯೆ ಇಲ್ಲಿ ಬರಲಾರದು. ಆದರೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಬಗೆಹರಿಸಲು ಭಾರತಕ್ಕೆ ಹೆಚ್ಚು ಸವಾಲುಗಳಿವೆ ಎಂದು ಅನ್ನಿಸುತ್ತದೆ. ಯಾಕೆಂದರೆ ಅಂತಃಸಾಕ್ಷಿಯನ್ನು ಸಾಯಿಸಿ ತಾರತಮ್ಯವನ್ನು ಸುಪ್ತಮನಸ್ಸಿಗಿಳಿಸಲು ದೇವರು, ಧರ್ಮ, ಶಾಸ್ತ್ರಗಳನ್ನೂ ದುರುಪಯೋಗಿಸಿಕೊಂಡ ಪಾಪ ಭಾರತದ ನೆಲದಲ್ಲಿ ನಡೆದಿದೆ. ಇಲ್ಲ ಧರ್ಮವೂ ಅಪರಾಧಿ. ರೋಮನ್ ಕಾನೂನು ಗುಲಾಮ ಮನುಷ್ಯನಲ್ಲ ಎಂದು ಸಾರುತ್ತದೆ. ಆದರೆ ರೋಮನ್ ಧರ್ಮ ಅದನ್ನು ಒಪ್ಪುವುದಿಲ್ಲ. ಭಾರತದಲ್ಲಿ ಧರ್ಮಗಳೇ ಮುಂದಾಗಿ ನಿಂತು ತಾರತಮ್ಯದ ಕಾನೂನು ಮಾಡಿಸಿದ ಇತಿಹಾಸವಿದೆ. ಇತ್ತೀಚೆಗೆ ಪುರಿಯ ಮಠದ ಧಾರ್ಮಿಕ ಮುಖಂಡ ಶಂಕರಾಚಾರ್ಯ ಅಸ್ಪೃಶ್ಯತೆಯನ್ನು ವೈಜ್ಞಾನಿಕ ಸತ್ಯ ಎಂಬಂತೆ ಪ್ರತಿಪಾದಿಸಿದರು. ಪಾಪಕ್ಕೆ ಪುಣ್ಯದ ವೇಷ ತೊಡಿಸಿಬಿಟ್ಟರು! ಇಂಥ ಮನಸ್ಥಿತಿಯೇ ‘ಮಾದಿಗೆ ಸತ್ತ ಮೈಲಿಗೆ ಕಮ್ಮಿಯಾಯಿತು’ ಎಂಬಂಥ ಗಾದೆ ಹುಟ್ಟು ಹಾಕಿರಬೇಕು. ಇಂಥ ಮನಸ್ಥಿತಿಯೇ ಭಾರತದಲ್ಲಿ ವರ್ಣ ವರ್ಣಗಳ ನಡುವೆ ಮದುವೆಯಾದಾಗಲೂ ಈ ಕೂಡುವಿಕೆ ಕೂಡ ಭಾರತವನ್ನು ಐಕ್ಯದ ಕಡೆಗೆ ನಡೆಯದಂತೆ ಮಾಡಿತು. ಬ್ರಾಹ್ಮಣ ಹೆಣ್ಣು ಶೂದ್ರ ಗಂಡಿಗೆ ಹುಟ್ಟಿದ ಸಂತಾನವನ್ನೂ ಅಸ್ಪೃಶ್ಯನನ್ನಾಗಿಸಿ ಸಮಾಜ ಆಚೆಗೆ ಎಸೆದುಬಿಟ್ಟಿತು. ಮತ್ತಷ್ಟು ಪ್ರತ್ಯೇಕತೆಯನ್ನು ಉಂಟು ಮಾಡಿತು.

ಹೋಲಿಕೆಗೆ ನೋಡಿ – ಅಮೇರಿಕಾದಲ್ಲಿ ಕರಿಯರ ಶಿಕ್ಷಣಕ್ಕೆಂದು ಬಿಳಿಯರು ಉಯಿಲು ಬರೆದು ಹಣ ಮುಡಿಪಿಟ್ಟ ಉದಾಹರಣೆಗಳಿವೆ. ೧೯೩೧ ರಲ್ಲಿ ಪ್ರಕಟವಾಗಿರುವ ನೀಗ್ರೋ ಇಯರ್ ಬುಕ್ ನಲ್ಲಿ ಈ ವಿವರಗಳಿವೆ – ೧೫ ಲಕ್ಷ ಡಾಲರ್ ನೀಡುವ ಗ್ಯಾರೆಟ್ ಸನ್, ೧೨.೫ ಲಕ್ಷ ಡಾಲರ್ ನೀಡುವ ಹಾರ್ಕ್ನೆಸ್, ೧,೬೦,೬೦೦ ಡಾಲರ್ ನೀಡಿರುವ ಟ್ಯಾಟನ್ ಮುಂತಾಗಿ ನೀಗ್ರೋ ಶಿಕ್ಷಣಕ್ಕೆ ಉಯಿಲು ಬರೆದವರು ಸುಮಾರು ಜನ ಸಿಗುತ್ತಾರೆ. ಇದಲ್ಲದೆ ಚರ್ಚ್‌ ಶಿಕ್ಷಣಕ್ಕೆ ಮುಂದಾಗುತ್ತದೆ. ೧೮೬೫ ರಿಂದ ೧೯೩೦ರ ತನಕ ಕರಿಯರೆ ಶಿಕ್ಷಣ ಅಭಿವೃದ್ಧಿಗಾಗಿ ಧಾರ್ಮಿಕ ಮತ್ತು ಮಾನವವಾದಿ ಸಂಸ್ಥೆಗಳು ಖರ್ಚು ಮಾಡಿದ ಒಟ್ಟು ಹಣ ೧೩.೫ ಕೋಟಿ ಡಾಲರ್‌ಗಳೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ೮.೫ ಕೋಟಿಯಷ್ಟು ಡಾಲರ್‌ಗಳು ಬಿಳಿಯರ ವಂತಿಗೆಯಿಂದ ಬಂದದ್ದಾಗಿದೆ.

ಭಾರತದಲ್ಲಿ ಇದನ್ನು ನೆನಸಿಕೊಳ್ಳಲು ಸಾಧ್ಯವಿಲ್ಲ. ಡಾ. ಅಂಬೇಡ್ಕರ್‌ರವರು ೧೯೩೨ ರಲ್ಲಿ ಹರಿಜನರ ಸೇವಕಸಂಘದ ಠಕ್ಕರ್ ಬಾಪ ಅವರಿಗೆ ಬರೆದ ಪತ್ರದಲ್ಲಿ “ಸವರ್ಣೀಯ ಹಿಂದೂಗಳು ಅಸ್ಪೃಶ್ಯರನ್ನು (ಕರಿಯರಂತೆ) ಸೇವಕರನ್ನಾಗಿಯಾದರೂ ಮಾಡಿಕೊಂಡು ಮನೆಯೊಳಕ್ಕೆ ಬಿಟ್ಟುಕೊಳ್ಳುವಂತಾಗಲೂ ಪ್ರೇರಣೆ ನೀಡಿರಿ” ಎಂದು ವಿನಂತಿಸುತ್ತಾರೆ. ಈ ವಿನಂತಿ ಯಾತನಾಮಯವಾಗಿ ಕಂಡರೂ ಭಾರತದ ಸಾಮಾಜಿಕ ಪರಿಸ್ಥಿತಿಯಲ್ಲಿ ಇದೂ ಪ್ರಗತಿಯ ಕಡೆಗೆ ಇಟ್ಟ ಒಂದು ಹೆಜ್ಜೆಯಾಗುತ್ತದೆ. ಹಳ್ಳಿಗಾಡಿನಲ್ಲಿ ಸವರ್ಣೀಯರ ಮನೆಗೆ ಅಸ್ಪೃಶ್ಯರ ಪ್ರವೇಶ ಇಂದಿಗೂ ಕನಸಿನ ಮಾತು. ಭಾರತದ ಮುಕ್ಕಾಲು ಭಾಗವಿರುವ ಹಳ್ಳಿಗಾಡಿನಲ್ಲಿ ಸಮಾಜದಿಂದ ಹೊರಕ್ಕೆ ಎಸೆಯಲ್ಪಟ್ಟ ಅಸ್ಪೃಶ್ಯರ ನಿರ್ಬಂಧ, ನಿಷೇಧ, ಪ್ರತ್ಯೇಕತಾ ಭೇದಗಳು ಜೀವಂತವಾಗಿದೆ. ಅಸ್ಪೃಶ್ಯ ಜನಾಂಗವು ಸಮಾನತೆ ಮತ್ತು ಘನತೆ ಕಡೆ ಹೆಜ್ಜೆ ಇಟ್ಟಾಗಲೆಲ್ಲಾ ಆ ಸಹನೆ ಉಂಟಾಗಿ ಹಿಂಸೆ, ಕೊಲೆ, ಲೂಟಿ ಸ್ಫೋಟಿಸುತ್ತದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಭಾರತ ಮಾತೆ ತನ್ನ ಒಡಲಲ್ಲಿ ಅಸ್ಪೃಶ್ಯತೆಯನ್ನಿಟ್ಟುಕೊಂಡು ಮೈಲಿಗೆಯಾಗಿದ್ದಾಳೆ. ಎಷ್ಟು ಬೇಗ ಶುದ್ಧಿಯಾದರೆ ಅಷ್ಟು ಬೇಗ ನಮಗೆ ಒಳ್ಳೆಯದು. ಇದಾಗಲು ಭಾರತ ಸರ್ಕಾರ ತಾನು ಜನಪ್ರಿಯ ಶಾರೀರಿಕ ಮಾನವ ಶಾಸ್ತ್ರಜ್ಞ ಎಂದುಕೊಂಡಿರುವುದನ್ನು ಕೈಬಿಡಬೇಕಾಗಿದೆ ಅಷ್ಟೇ.

ಕೊನೆಯದಾಗಿ, ಡಾ. ಅಂಬೇಡ್ಕರ್‌ ಮತ್ತು ಗಾಂಧೀಜಿ ಈ ಒಂದು ವಿಚಾರದಲ್ಲಿ ಒಂದೇ ಅಭಿಪ್ರಾಯವನ್ನು ಹೊಂದಿದ್ದರು. ಅಸ್ಪೃಶ್ಯತೆ ಸಮಸ್ಯೆ ಅಸ್ಪೃಶ್ಯರ ಸಮಸ್ಯೆ ಅಲ್ಲ ಎಂದು ಇಬ್ಬರೂ ಭಾವಿಸಿದ್ದರು. ಅಸ್ಪೃಶ್ಯರು ಅಸ್ಪೃಶ್ಯತೆಗೆ ಬಲಿಪಶುಗಳು ಮಾತ್ರ. ಅಂದರೆ ಸಮಸ್ಯೆ ಇರುವುದು ಅಸ್ಪೃಶ್ಯತೆಯನ್ನು ಆಚರಣೆ ಮಾಡುವವರಲ್ಲಿ. ಆದರೆ ಇಂದು ಭಾರತದ ಅಂತಃ ಸಾಕ್ಷಿಯಾದ ಭಾರತದ ಪ್ರಜ್ಞಾವಂತರು ಲೇಖಕರು, ಕಲಾವಿದರು, ಪತ್ರಕರ್ತರು, ನ್ಯಾಯವಂತರು, ವಿಚಾರವಂತರು ‘ಅಸ್ಪೃಶ್ಯತೆ ದಲಿತರ ಸಮಸ್ಯೆ’ ಎಂದುಕೊಂಡು ಸುಮ್ಮನಿದ್ದಾರೆ. ಇದೇ ನನ್ನ ಖಿನ್ನತೆಗೆ ಕಾರಣವಾಗಿದೆ.

* * *