ಕನ್ನಡ ಭಾಷೆಯ ಸ್ಥಿತಿಗತಿಗಳ ಬಗ್ಗೆ ಆತಂಕದ ದನಿಗಳ ಎಲ್ಲ ಕಡೆಗಳಲ್ಲೂ ಕೇಳಿಬರುತ್ತಿವೆ. ನಮ್ಮ ಸಾಮಾಜಿಕ ವ್ಯವಹಾರಗಳಲ್ಲಿ ಕನ್ನಡಕ್ಕೆ ದೊರಕಬೇಕಾದ ಸ್ಥಾನಮಾನಗಳು ಲಭಿಸಿಲ್ಲದಿರುವುದೇ ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ. ಈ ಪರಿಸ್ಥಿತಿಗೆ ಕನ್ನಡಿಗರ ಅಭಿಮಾನ ಶೂನ್ಯತೆ, ಆಡಳಿತ ಸೂತ್ರ ಹಿಡಿದ ಪಕ್ಷಗಳ ಅನಿಶ್ಚಿತ ಧೋರಣೆ, ನೌಕರಶಾಹಿಯ ವಿರೋಧಿನಿಲುವು ಕೇಂದ್ರ ಸರಕಾರದ ದ್ವಿಮುಖ ಭಾಷಾನೀತಿ ಇವೆಲ್ಲವೂ ಒಂದಿಲ್ಲೊಂದು ಬಗೆಯಲ್ಲಿ ಪ್ರೇರಕಗಳಾಗಿವೆಯೆಂದು ಹಲವರ ನಿಲುವು ಮತ್ತೆ ಕೆಲವರು ಕನ್ನಡ ಭಾಷೆಗೆ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನು ಪೂರೈಸುವ ಸಾಮಾರ್ಥ್ಯಗಳಿಲ್ಲವೆಂದು ತಿಳಿಯುತ್ತಾರೆ. ಹೀಗಾಗಿ ಈಗ ಇಡೀ ಇನ್ನಿವೇಶವನ್ನು ನಾವು ಮರುಚಿಂತನೆಗೆ ಗುರಿಪಡಿಸುವ ಅವಶ್ಯಕತೆ ಇದೆ.

ಕನ್ನಡದ ಸಮಸ್ಯೆ ಎಂದಾಗ ಭಾಷೆ. ಭಾಷಿಕರು ಹಾಗೂ ಭಾಷಿಕರು ವಾಸಿಸುತ್ತಿರುವ ಭೂಪ್ರದೇಶ ಇವೆಲ್ಲವೂ ಬೇರ್ಪಡಿಸಲಾಗದಂತೆ ಹೆಣೆದುಕೊಳ್ಳುತ್ತವೆ. ಈ ಮೂರೂ ಸಂಗತಿಗಳು ನಿರ್ದಿಷ್ಟ ಚಾರಿತ್ರಿಕ ಸನ್ನಿವೇಶದಲ್ಲಿ ಬೇರೆ ರೀತಿಯ ಸಂಬಂಧಗಳನ್ನು ಹೊಂದಿರುತ್ತವೆ ಎಂಬುದನ್ನು ಮರೆಯಬಾರದು. ಉದಾಹರಣೆಗೆ ೧೯೫೬ಕ್ಕೆ ಮೊದಲು ಕನ್ನಡ ಭಾಷಿಕರು ಹಲವು ಆಡಳಿತ ಪ್ರದೇಶಗಳಲ್ಲಿ ಹಂಚಿ ಹೋಗಿದ್ದರು. ಈಗ ನಾವು ಕರ್ನಾಟಕವೆಂದು ಕರೆಯುವ ಭೂಪ್ರದೇಶದಲ್ಲಿ ಕನ್ನಡ ಭಾಷಿಕರು ಕೆಲವು ಇನ್ನಿತರ ಭಾಷಿಕರ ಸಮುದಾಯಗಳೊಡನೆ ವಾಸಿಸುತ್ತಿದ್ದಾರೆ. ತುಳು, ಕೊಡಗು, ಕೊಂಕಣಿ, ಉರ್ದು, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯನ್ನು ಮಾತನಾಡುವ ಇಂಥ ಸಮುದಾಯಗಳು ಕರ್ನಾಟಕದಾದ್ಯಂತ ಹರಡಿವೆ. ಕನ್ನಡ ಭಾಷಿಕ ಸಮುದಾಯವಿಡೀ ನಿರಂತರ ಭೂವ್ಯಾಪ್ತಿಯಲ್ಲಿ ವಾಸಿಸುತ್ತಿಲ್ಲ. ಮುಂಬಯಿಯಂಥ ನಗರದಲ್ಲಿ, ಕರ್ನಾಟಕದ ಒಂದೆರಡು ನಗರಗಳನ್ನು ಹೊರತುಪಡಿಸಿದರೆ ಉಳಿದ ಯಾವ ನಗರದಲ್ಲೂ ಇರದಷ್ಟು ಕನ್ನಡ ಭಾಷಿಕರಿದ್ದಾರೆ. ಒಂದು ಅಂದಾಜಿನಂತೆ ೧೯೮೧ರ ಸುಮಾರಿನಲ್ಲಿ ಕನ್ನಡ ಭಾಷೆಯನ್ನು ಒಂದು ಬಳಕೆ ಭಾಷೆಯನ್ನಾಗಿ ಹೊಂದಿರುವ ಅನ್ಯಭಾಷಿಕರು – ಅಂದರೆ ದ್ವಿಭಾಷಿಕರು ಹಾಗೂ ಬಹುಭಾಷಿಕರು – ಪ್ರತಿಶತ ೧೪ರಷ್ಟು ಇದ್ದಾರೆ ಇವೆಲ್ಲದರ ಜತೆಗೆ ಹತ್ತಾರು ಅದಿವಾಸಿ ಗುಡ್ಡಗಾಡು ಭಾಷಿಕ ಜನಾಂಗಗಳಿವೆ. ಪರಿಸ್ಥಿತಿಯ ಸಂಕೀರ್ಣತೆಯಷ್ಟೇ ಮುಖ್ಯವಲ್ಲ; ಇದು ಕಾಲಕಳೆದಂತೆ ಬದಲಾಗುತ್ತ ನಡೆಯುತ್ತದೆ ಎನ್ನುವುದೂ ಮುಖ್ಯ ಹೀಗಿರುವಾಗ ಕನ್ನಡ ಕನ್ನಡಿಗ ಹಾಗೂ ಕರ್ನಾಟಕಗಳನ್ನು ಕುರಿತ ವಿವರಗಳನ್ನು ಬೇರೆ ಬೇರೆ ಇಡುವುದು ತುಂಬಾ ಎಚ್ಚರ ವಹಿಸಿ ಮಾಡಬೇಕಾದ ಕೆಲಸ.

ಭಾರತ ತನ್ನದೇ ಸಂವಿಧಾನವನ್ನು ರಚಿಸಿಕೊಂಡ ಮೇಲೆ ಕನ್ನಡ ಭಾಷೆಯು ಎದುರಿಸಿದ ಸಮಸ್ಯೆಯನ್ನು ಮೊದಲು ವಿವರವಾಗಿ ಗಮನಿಸುವುದು ಅವಶ್ಯ. ಸ್ವಯಮಾಧಿಕಾರವುಳ್ಳ ಆಡಳಿತ ವ್ಯವಸ್ಥೆಯ ಆಯ್ಕೆ ಹುಟ್ಟು ಹಾಕಿದ ಹಲವು ಕನಸುಗಳಲ್ಲಿ ದೇಶ ಭಾಷೆಗಳ ಬೆಳವಣಿಗೆಯೂ ಒಂದು. ದೇಶ ಭಾಷೆಗಳು ಹಾಗೂ ಅವುಗಳನ್ನು ಆಡುವ ಭಾಷಿಕರು ಹರಡಿಕೊಂಡಿರುವ ಭೂಪ್ರದೇಶಗಳು ಇವೆರಡರ ನಡುವೆ ಸಂಪರ್ಕ ಕಲ್ಪಿಸಿ ಭಾಷಾವಾರು ರಾಜ್ಯ ವಿಂಗಡನೆಯಾಯಿತಷ್ಟೆ. ಈ ಮರು ಹೊಂದಾಣಿಕೆಯ ಹಿಂದೆಯೂ ಭಾಷೆ ಮತ್ತು ಭಾಷಿಕರನ್ನು ಭಾಷಾ ಪ್ರದೇಶದೊಡನೆ ಗುರುತಿಸುವ ಉದ್ದೇಶವಿದೆ; ಒಂದು ಇನ್ನೊಂದನ್ನು ಪ್ರಭಾವಿಸುವುದನ್ನು ಗಮನಿಸಲಾಗಿದೆ. ಆದರೆ ಇವೆಲ್ಲವೂ ಯೋಜಿಸಿದ ರೀತಿಯಲ್ಲಿ ಮುಂದುವರೆಯಲಿಲ್ಲ. ರಾಜ್ಯಗಳ ಪ್ರಗತಿಯಲ್ಲಿ ಸಂಭವಿಸಿರುವ ಏರುಪೇರುಗಳು, ಅಸಮತೆ, ಸಂಪನ್ಮೂಲಗಳ ಬಳಕೆಯಲ್ಲಿನ ತಾರತಮ್ಮ ಇವೆಲ್ಲವೂ ಕಳೆದ ಒಂದೆರಡು ದಶಕಗಳಲ್ಲಿ ತಮ್ಮ ಪರಿಣಾಮವನ್ನು ತೋರತೊಡಗಿವೆ; ಬಗೆಬಗೆಯ ಉಪರಾಷ್ಟ್ರೀಯ ಚಳುವಳಿಗಳು ವಿವಿಧ ಬಗೆಗಳಲ್ಲಿ ನಡೆಯುತ್ತಿವೆ. ದೇಶಭಾಷೆಗಳಿಗೆ ಸಂಬಂಧಿಸಿದಂತೆಯೂ ಇಂಥದೇ ಪರಿಸ್ಥಿತಿ ಬೆಳೆದಿದೆ.

ಸಂವಿಧಾನ ಅಂಗೀಕರಿಸಿದ ಮುಖ್ಯಭಾಷೆಗಳ ಪಟ್ಟಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿಗಳ ವಿಶೇಷ ಸ್ಥಾನಗಳನ್ನು ಪಡೆದವು. ಕಾಲಕಾಲಕ್ಕೆ ವಿವಿಧ ಸರಕಾರಗಳು ಈ ಸ್ಥಾನಮಾನಗಳನ್ನು ಸಂವಿಧಾನಾತ್ಮಕವಾಗಿ ಮುಂದುವರಿಸಿವೆ. ಸಂಪರ್ಕ ಭಾಷೆ ಹಾಗೂ ರಾಜ್ಯ ಭಾಷೆ – ಕನ್ನಡದ ಪರಿಭಾಷೆಯಲ್ಲಿ ರಾಷ್ಟ್ರ ಭಾಷೆಗಳಾಗಿ ಈ ಎರಡೂ ಭಾಷೆಗಳಿಗೆ ದೊರೆತ ಸವಲತ್ತುಗಳ ಪರಿಣಾಮದಿಂದ ದೇಶಭಾಷೆಗಳ ಇಕ್ಕಟ್ಟನ್ನು ಎದುರಿಸಿವೆ. ಇದು ಹೇಗೆಂಬುದನ್ನು ವಿವರವಾಗಿ ಗಮನಿಸೋಣ.

ಯಾವುದೇ ಭಾಷೆ ಆಧುನಿಕ ಜಗತ್ತಿನ ಸವಾಲುಗಳಿಗೆ ಪ್ರತಿಸ್ಪಂದಿಸಲು ಮುಖ್ಯವಾಗಿ ಆಡಳಿತ. ಶಿಕ್ಷಣ ಹಾಗೂ ಸಮೂಹ ಮಾಧ್ಯಮಗಳ ವಲಯಗಳಲ್ಲಿ ಬಳಕೆಯಾಗಿ ತೊಡಗಬೇಕು. ಈ ಮೂರೂ ವಲಯಗಳಲ್ಲಿ ಹಲವು ಉಪವಲಯಗಳಿದ್ದು ಅವೆಲ್ಲದರಲ್ಲೂ ಆ ಭಾಷೆ ಬಳಕೆಯಾಗುವುದು ಅತ್ಯವಶ್ಯ. ಆಡಳಿತವೆಂದಾಗ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳೆಲ್ಲವೂ ಸೇರಿರುತ್ತವೆ. ಹಾಗೂ ಎಲ್ಲ ಹಂತಗಳೂ ಸೇರುತ್ತವೆ. ಇವಲ್ಲದೆ ಭಾಷೆಯ ಬಳಕೆಗೆ ಇನ್ನೂ ಹತ್ತಾರು ವಲಯಗಳು ಲಭ್ಯವಿವೆ, ಉದಾಹರಣೆಗೆ ಕೌಟುಂಬಿಕ ಬಳಕೆ, ಖಾಸಗಿ ಪತ್ರವ್ಯವಹಾರ, ಸೃಜನಶೀಲ ಸಾಹಿತ್ಯ ಇತ್ಯಾದಿ, ಉಳಿದೆಲ್ಲ ದೇಶಭಾಷೆಗಳ ಪರಿಸ್ಥಿತಿಯನ್ನು ಗಮನಿಸುವ ಮೊದಲು ಕನ್ನಡದ ಸ್ಥಿತಿಗತಿಗಳನ್ನು ಗಮನಿಸೋಣ.

ಆಡಳಿತದಲ್ಲಿ ಕನ್ನಡ ಬಳಕೆಯಾಗುತ್ತಿಲ್ಲ ಎಂಬುದನ್ನು ಎಲ್ಲರೂ ಒಪ್ಪಿದರೂ ಅದಕ್ಕೆ ಕಾರಣಗಳನ್ನು ಮಾತ್ರ ಬೇರೆ ಬೇರೆ ಗುರುತಿಸಲು ಸಾಧ್ಯ. ಸರಕಾರಗಳು ಮೇಲಿಂದ ಮೇಲೆ ಕನ್ನಡವೇ ಆಡಳಿತ ಭಾಷೆಯೆಂದು ಘೋಷಿಸಿದರೂ ತಾಲ್ಲೂಕು ಮಟ್ಟದಿಂದ ಮೇಲಕ್ಕೆ ಕನ್ನಡದ ಬಳಕೆ ವ್ಯಾಪಕವಾಗಿ ಆಗುತ್ತಿಲ್ಲವೇಕೆ? ಸಂವಿಧಾನ ಇಂಗ್ಲಿಷ್‌ಗೆ ಒದಗಿಸಿರುವ ಅಧಿಕೃತತೆಯಿಂದಾಗಿ ಕನ್ನಡದ ಬಳಕೆ ಹೆಚ್ಚುವರಿ ಕೆಲಸವಾಗಿ ಹಲವರಿಗೆ ತೊರತೊಡಗಿದೆ. ಕನ್ನಡದಲ್ಲಿ ಆಡಳಿತ ಸಂಬಂಧೀ ಬರವಣಿಗೆಯ ಕೊರತೆಯೆಂದು ಅಂಥ ಬರವಣಿಗೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಈ ಬರವಣಿಗೆಗೆ ಇನ್ನೂ ಅಧಿಕೃತತೆ ಒದಗಿಲ್ಲ. ಈ ಅನುವಾದಗಳ ಬಳಕೆಗೆ ಪ್ರಮಾಣೀಕರಣದ ಸಮಸ್ಯೆಯನ್ನು ಅಥವಾ ಅದರ ಕೊರತೆಯನ್ನು ಮುಂದೊಡ್ಡಲಾಗಿದೆ. ಈ ಪ್ರಮಾಣೀಕರಣದ ಬಗ್ಗೆ ಈ ಲೇಖನದಲ್ಲೇ ಮುಂದೆ ಚರ್ಚಿಸಲಾಗುವುದು. ಆಡಳಿತಗಾರರಲ್ಲಿ ಕನ್ನಡ ಬಲ್ಲವರ ಸಂಖ್ಯೆ ಹೆಚ್ಚಿರಬಹುದಾದರೂ ಕೇಂದ್ರದ ನೀತಿಯಿಂದಾಗಿ ಅಧಿಕಾರಿ ಸ್ತರದಲ್ಲಿ ಕನ್ನಡ ಬಾರದವರು ಹೆಚ್ಚು ಜನರಿರುವುದು ಸಾಧ್ಯವಾಗಿದೆ. ಭಾರತ ಆಡಳಿತ ಸೇವೆಗೆ ಸೇರಿದ ಕನ್ನಡೇತರ ಅಧಿಕಾರಗಳು ತಮ್ಮ ತರಭೇತಿಯಲ್ಲಿ ಕನ್ನಡ ಮಾತನಾಡಲು ಕಲಿಯುತ್ತರಾದರೂ ಅವರಿಗೆ ಕನ್ನಡವನ್ನು ಆಡಳಿತದಲ್ಲಿ ಬಳಸುವ ಸಿದ್ಧತೆ ಹಾಗೂ ಅವಕಾಶಗಳು ಕಡಿಮೆ. ಹಾಗೆಯೇ ಆಡಳಿತದಲ್ಲಿ ಕನ್ನಡ ನಳಕೆಯಾಗಲು ಪೂರಕ ತಂತ್ರಜ್ಞಾನದ ಕೊರತೆಯನ್ನು ಮುಂದೊಡ್ಡಲಾಗುತ್ತಿದೆ. ಮೊದಲ ಒಂದೆರಡು ದಶಕಗಳ ಕಾಲ ಬೆರಳಚ್ಚು ಯಂತ್ರಗಳ ಕೊರತೆಯನ್ನು ಎತ್ತಿ ಹೇಳಲಾಗುತ್ತಿತ್ತು. ಈಗ ಬೆರಳಚ್ಚು ಯಂತ್ರಗಳು ಮೂಲೆ ಸೇರುವ ಹೊತ್ತು ಬಂದಾಗ ಕಂಪ್ಯೂಟರ್ ಸಾಪ್ಟ್ ವೇರ್ ನ ಕೊರತೆಯನ್ನು ತೋರಿಸಲಾಗುತ್ತಿದೆ. ಇಂಥ ಕ್ಷೇತ್ರಗಳಲ್ಲಿ ಏನೆಲ್ಲ ಬದಲಾವಣೆಯಾದರೂ ಮತ್ತೆ ಮತ್ತೆ ಕನ್ನಡ ಇಂಗ್ಲಿಷ್ ಅನ್ನು ಅನುಸರಿಯೇ ಹೆಜ್ಜೆ ಇಡಬೇಕಾದ ಪರಿಸ್ಥಿತಿ ದಿನೇ ದಿನೇ ಗಾಢಗೊಳ್ಳುತ್ತಿದೆ.

ಶಿಕ್ಷಣಕ್ಷೇತ್ರದಲ್ಲಿ ಈ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ನಮಗಿನ್ನೂ ಖಚಿತವಾದ ಭಾಷಾನೀತಿಯಾಗಲೀ ಭಾಷಾಯೋಜನೆಯಾಗಲೀ ಇಲ್ಲವಾಗಿದೆ. ಸಾಮಾನ್ಯ ಶಿಕ್ಷಣದ ಯಾವ ಹಂತದಲ್ಲಿ ಯಾವ ಭಾಷೆಯನ್ನು ಎಷ್ಟು ಹಾಗೂ ಹೇಗೆ ಕಲಿಯಬೇಕು ಎಂಬ ಬಗ್ಗೆ ವಾದವಿವಾದಗಳು ನಡೆಯುತ್ತಲೇ ಇವೆ. ಕನ್ನಡ ಮಾತನಾಡುವ ಮಕ್ಕಳೂ ಔಪಚಾರಿಕ ಶಿಕ್ಷಣದ ಭಾಗವಾಗಿ ಆ ಭಾಷೆಯನ್ನು ಕಲಿಯುತ್ತಿರುವ ಕ್ರಮದಲ್ಲಿ ಸಮರೂಪತೆ ಹಾಗೂ ನಿರ್ದಿಷ್ಟ ಉದ್ದೇಶಗಳು ಇಲ್ಲ. ಮಾಧ್ಯಮವಾಗಿ ಭಾಷೆಯ ಬಳಕೆಯ ಮಾತು ಬಂದರೆ ಕನ್ನಡ ಇಂಗ್ಲಿಷ್‌ಗೆ ತನ್ನ ಜಾಗವನ್ನು ತೆರುವ ಮಾಡಿಕೊಟ್ಟಿದೆ. ಶಿಕ್ಷಣದ ಉನ್ನತ ಹಂತಗಳಿಗೆ ಸಾಗಿದಂತೆ ಮಾನವಿಕಗಳಲ್ಲಿ ಮಾತ್ರ ಕನ್ನಡ ಮಾಧ್ಯಮದ ಬಳಕೆಯುಂಟು. ಉಳಿದ ಎಲ್ಲ ಶಾಸ್ತ್ರಗಳಲ್ಲೂ ಇಂಗ್ಲಿಷ್ ಏಕೈಕ ಭಾಷಾ ಮಾಧ್ಯಮ. ಆರನೆಯ ದಶಕದ ಅನಂತರದಲ್ಲಿ ದೇಶಭಾಷೆಗಳನ್ನು ಉನ್ನತ ಶಿಕ್ಷಣದ ಮಾಧ್ಯಮವನ್ನಾಗಿ ಬೆಳೆಸುವ ಯತ್ನಗಳು ನಡೆದವು. ಆ ಉದ್ದೇಶಕ್ಕಾಗಿ ಬೃಹತ್ ಪ್ರಮಾಣದಲ್ಲಿ ಪಠ್ಯಪುಸ್ತಕ ಹಾಗೂ ಪರಾಮರ್ಶನ ಗ್ರಂಥಗಳನ್ನು ಸಿದ್ಧ ಪಡಿಸಲಾಯಿತು. ಆ ಕಾರ್ಯಕ್ರಮ ಈಗ ಕನ್ನಡದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಆಗ ಸಿದ್ಧಗೊಂಡ ಪುಸ್ತಕಗಳು ಈಗ ಮೂಲೆ ಸೇರಿವೆ. ಮಾನವಿಕೆಗಳಲ್ಲಿ ಕನ್ನಡವನ್ನು ಪರೀಕ್ಷೆಯ ಭಾಷೆಯನ್ನಾಗಿ ಬಳಸುವವರ ಸಂಖ್ಯೆ ಹೆಚ್ಚುತ್ತಿದೆಯಾದರೂ ಅವರಿಗೆ ಸಿದ್ಧ ಉತ್ತರಗಳ ಕಟ್ಟುಗಳು ಮಾತ್ರ ಸಾಕಾಗಿವೆ. ಅಂದರೆ ಶಿಕ್ಷಣದಲ್ಲಿ ಯಾವ ನಿಟ್ಟಿನಿಲ್ಲೂ ಕನ್ನಡ ಸಬಲವಾಗಿ ಬಳಕೆಯಾಗುತ್ತಿಲ್ಲ.

ಈ ಸ್ಥಿತಿಗೆ ಕಾರಣ ಹುಡುಕಿದರೆ ಮತ್ತೆ ಹಲವು ಉತ್ತರಗಳು ಸಿಗುತ್ತವೆ : ಆಧುನಿಕ ಜ್ಞಾನಕ್ಕೆ ಇಂಗ್ಲಿಷ್‌ನಷ್ಟು ಕನ್ನಡ ಸನ್ನದ್ಧಗೊಂಡಿಲ್ಲ : ಕನ್ನಡ ಭಾಷೆಯನ್ನು ಮಾಧ್ಯಮವನ್ನಾಗಿ ಹೊಂದುವುದೆಂದರೆ ರಾಷ್ಟ್ರೀಯ ಚಿಹರೆಗಳನ್ನು ಕಳೆದುಕೊಂಡಂತೆ ಹೀಗೆ ಎಷ್ಟೋ ಕಾರಣಗಳನ್ನು ಮುಂದಿಡಲಾಗುತ್ತಿದೆ. ಕನ್ನಡ ಕಳೆದ ಐದು ಬಂದಿದ್ದರಿಂದ ಆಧುನಿಕಗೊಳ್ಳುವ ಮತ್ತೊಂದು ಅವಕಾಶವನ್ನು ಕಳೆದುಕೊಂಡಿದೆ.

ಪತ್ರಿಕೆ, ಅಕಾಶವಾಣಿ, ದೂರದರ್ಶನಗಳಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾಗುವುದನ್ನು ಯಾರೂ ಗುರುತಿಸಬಹುದು, ಆದರೆ ಈ ಬೆಳವಣಿಗೆಯ ವಿಪರ್ಯಾಸವನ್ನು ಗಮನಿಸಬೇಕು. ದಿನಪತ್ರಿಕೆಗಳು ಸುದ್ದಿಗಾಗಿ ಈಗಲೂ ಇಂಗ್ಲಿಷ್ ಪತ್ರಿಕೆಗಳು ರೂಪಿಸುತ್ತಿವೆ. ಜಾಹೀರಾತುಗಳು ಇಂಗ್ಲಿಷ್‌ನಲ್ಲಿ ಸಿದ್ದಗೊಂಡು ಅನಂತರ ಕನ್ನಡ ಅವೃತ್ತಿಗಳು ಬರುತ್ತವೆ. ರಾಜ್ಯದ ವರದಿಗಳು, ಸ್ಥಳೀಯ ವಿದ್ಯಾಮಾನಗಳು ಕನ್ನಡದಲ್ಲಿ ಮಾತ್ರ ಪ್ರಕಟವಾಗುತ್ತಿವೆ. ಇದನ್ನು ಹೊರತುಪಡಿಸಿದರೆ ವಾರಪತ್ರಿಕೆಗಳ ಮಟ್ಟಿಗೆ ಕನ್ನಡ ಬಳಕೆ ಮತ್ತೊಂದು ದಿಕ್ಕಿನಲ್ಲಿ ಸಾಗಿದೆ. ವರದಿಗಳು, ಸುದ್ದಿಗಳು ಮುಖ್ಯವಾಗದೇ ಹೋಗುವ ಇಂಥ ಪತ್ರಿಕೆಗಳು ಒಟ್ಟು ಓದುಗ ಸಮುದಾಯದ ಒಳವಿರೋಧಗಳಿಗೆ ತಕ್ಕಂತೆ ಪಾತ್ರವಹಿಸುತ್ತಿವೆ. ಇಂಗ್ಲಿಷ್ ಕನ್ನಡ ದ್ವಿಭಾಷಿಕರು ಸುದ್ಧಿವಿಶ್ಲೇಷಣೆಗಳಿಗೆ ಇಂಗಿಷ್ ಪತ್ರಿಕೆಗಳನ್ನೇ ಅಧಿಕೃತವೆಂದು ವ್ಯಾಪಕವಾಗಿ ತಿಳಿಯುತ್ತಾರೆ. ಈ ಅಧಿಕೃತತೆ ಓದುಗರಿಗೆ ಮಾತ್ರ ಸೀಮಿತವಾಗದೆ ಕನ್ನಡದ ಪತ್ರಿಕೆಗಳೂ ಮೂಲ ಆಕರವನ್ನಾಗಿ ಇಂಗ್ಲಿಷ್ ಭಾಷಿಕ ರೂಪವನ್ನು ಆಶ್ರಯಿಸಿರುತ್ತವೆ. ಈ ಸಮೂಹ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳೂ ಕೂಡ ಮೊದಲು ಇಂಗ್ಲಿಷ್‌ನಲ್ಲಿ ರೂಪುಗೊಂಡು ಆನಂತರ ಕನ್ನಡದಲ್ಲಿ ಅವತರಣಿಕೆಯನ್ನು ಪಡೆಯುತ್ತವೆ. ಕನ್ನಡದ ಬಳಕೆಯಿದ್ದರೂ ಕನ್ನಡದ ಸಾಧ್ಯತೆಗಳು ಈ ಮೂಲಕ ಶೋಧಿತವಾಗುತ್ತಿಲ್ಲ.

ಶಿಕ್ಷಣ ಆಡಳಿತ ಹಾಗೂ ಸಮೂಹ ಮಾಧ್ಯಮಗಳ ಕ್ಷೇತ್ರದಲ್ಲಿ ಕನ್ನಡ ಆಧುನಿಕ ಕಾಲದ ಅವಕಾಶಗಳನ್ನು ಪಡೆಯುತ್ತಿಲ್ಲವೆಂಬುದು ಮೇಲಿನ ವಿವರಣೆಯಿಂದ ಸ್ಪಷ್ಟಗೊಂಡಿದೆ. ಇಷ್ಟಾದರೂ ಕನ್ನಡ ಈ ಕ್ಷೇತ್ರಗಳಲ್ಲಿ ಅದರಲ್ಲೂ ಸಮೂಹ ಮಾಧ್ಯಮಗಳಲ್ಲಿ ಮೇಲುನೋಟಕ್ಕೆ ವಿಸ್ತೃತ ಪಾತ್ರವನ್ನು ವಹಿಸುತ್ತಿದೆಯೆಂದು ಯಾರಾದರೂ ವಾದಿಸಬಹುದು. ಕನ್ನಡದ ಪತ್ರಿಕೆಗಳ ಸಂಖ್ಯೆ ಪ್ರಸಾರ ವೈವಿಧ್ಯಗಳನ್ನು ಗಮನಿಸಿ ಈ ವಾದವನ್ನು ಮುಂದುವರೆಸಬಹುದು. ಹಾಗೆಯೇ ಈ ಪತ್ರಿಕೆಗಳಲ್ಲಿ ಹತ್ತಾರು ವಿಷಯಗಳನ್ನು ಕುರಿತು ಪ್ರಕಟವಾಗುವ ಲೇಖನಗಳನ್ನು ತೋರಿಸಿ, ಅಲ್ಲಿ ಕನ್ನಡ ಆಧುನಿಕ ಜ್ಞಾನದ ವಾಹಕವಾಗಿದೆಯೆಂದು ಹೇಳಲೂಬಹುದು. ಜನಪ್ರಿಯ ವಿಜ್ಞಾನ ಬರೆಹಗಳು, ವೈದ್ಯಶಾಸ್ತ್ರದ ಲೇಖನಗಳು, ಕೃಷಿ ಸಂಬಂಧೀ ಬರೆಹಗಳು ಇಂಥ ವಾದಕ್ಕೆ ನೆರವಾಗುವ ನಿದರ್ಶನಗಳಾಗುತ್ತವೆ.

ಕೊಂಚ ಎಚ್ಚರದಿಂದ ಪರಿಸ್ಥಿತಿಯನ್ನು ಪರಿಶೀಲಿಸಿದರೆ ಇನ್ನು ಕೆಲವು ವೈಸಾದೃಶ್ಯಗಳು ನಮಗೆ ಎದುರಾಗುತ್ತವೆ. ಕಳೆದ ಒಂದೆರಡು ದಶಕಗಳಲ್ಲಿ ಕನ್ನಡದಲ್ಲಿ ಈವರೆಗೆ ಕಾಣದಿದ್ದ ಪ್ರಮಾಣದ ವಿಜ್ಞಾನ ಬರೆಹಗಳು, ವೈದ್ಯಕೀಯ ಬರೆಹಗಳು ಪ್ರಕಟಗೊಂಡುದನ್ನು ಗಮನಿಸಬಹುದು. ಎಲ್ಲ ಪತ್ರಿಕೆಗಳು ಪುರವಣೆಗಳಲ್ಲಿ ಇಂಥ ಲೇಖನಗಳನ್ನು ಪ್ರಕಟಿಸುತ್ತವೆ. ಗ್ರಂಥಗಳೂ ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಆದರೆ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಕನ್ನಡ ಶಿಕ್ಷಣ ಮಾಧ್ಯಮವಾಗಿ ಮಾತ್ರ ಬಳಕೆಯಾಗುತ್ತಿಲ್ಲ. ಈ ವಿಪರ್ಯಾಸದ ಕಾರಣವನ್ನು ನಾವೀಗ ಗಮನಿಸಬೇಕು.

ವಿಜ್ಞಾನ, ತಂತ್ರಜ್ಞಾನ ಹಾಗೂ ವೈದ್ಯಶಾಸ್ತ್ರಗಳಿಗೆ ಅವುಗಳಷ್ಟೇ ಆದ ಸಂದರ್ಭ ಭಾಷೆ(register) ಇರುತ್ತದೆ. ಇದು ಕೇವಲ ಪಾರಿಭಾಷಿಕ ಪದಗಳಿಗೆ ಮಾತ್ರ ಸೀಮಿತಗೊಳ್ಳದೆ, ಪದಕೋಶದ ಆಯ್ಕೆ, ವಾಕ್ಯರಚನೆಯ ವಿಶಿಷ್ಟ ನಿಯಮಗಳನ್ನು ಒಳಗೊಂಡಿರುತ್ತದೆ. ಈ ನಿಟ್ಟಿನ ಸಂದರ್ಭಭಾಷೆ ಕನ್ನಡದಲ್ಲಿ ಸಿದ್ಧಗೊಂಡಿಲ್ಲ. ಹಾಗಿದ್ದರೆ ಕನ್ನಡದಲ್ಲಿ ಪ್ರಕಟಗೊಳ್ಳುತ್ತಿರುವ ಈ ಕ್ಷೇತ್ರದ ಬರವಣಿಗೆಯ ಭಾಷೆ ಎಂಥದು? ಇದು ಪ್ರಧಾನವಾಗಿ ಮಾಹಿತಿ ಪ್ರಧಾನವಾದದ್ದು ಹಾಗೂ ದೂರಶಿಕ್ಷಣದ ಪರಿಭಾಷೆಯನ್ನು ಹೊಂದಿರುತ್ತದೆ. ನಮ್ಮ ಸಾಮಾಜಿಕ ಬೆಳವಣಿಗೆಯ ಕ್ರಮದಲ್ಲಿ ಮಾಹಿತಿಗಾಗಿ ಬೇಡಿಕೆ ಅಧಿಕಗೊಳ್ಳುತ್ತಿದೆ. ಹಾಗೂ ಅದನ್ನು ಪೂರೈಸಲು ರಾಜ್ಯಶಕ್ತಿ ವಿವಿಧ ತಂತ್ರಗಳನ್ನು ರೂಪಿಸಲೇಬೇಕಾಗುತ್ತದೆ. ಸಾಮಾನ್ಯ ಆರೋಗ್ಯದಂಥ ವಲಯವನ್ನೇ ನೋಡಿ. ಕಲ್ಯಾಣ ರಾಜ್ಯದ ಹೊಣೆಯನ್ನು ಸಂವಿಧಾನ ರಾಜ್ಯಶಕ್ತಿಗೆ ನೀಡಿದೆ. ವಾಸ್ತವವಾಗಿ ಕಳೆದ ಐವತ್ತು ವರ್ಷಗಳಲ್ಲಿ ನಾವು ಸೃಷ್ಟಿಸಿರುವ ಸಂಪನ್ಮೂಲಗಳಲ್ಲಿ ದೇಶದ ಪ್ರಜೆಗೆ ಸಾಮಾನ್ಯ ಆರೋಗ್ಯದ ಸೌಲಭ್ಯಗಳನ್ನು ದೊರಕಿಸಿಕೊಡುವುದು ಸಾಧ್ಯವಾಗುತ್ತಿಲ್ಲ. ಬದಲಿಗೆ ವೈದ್ಯರು ಹೆಚ್ಚು ತಜ್ಞತೆಯ ಕಡೆಗೆ ಓಲುವೆ ತೋರುತ್ತಿದ್ದಾರೆ. ಇದರಿಂದ ಈ ಆರೋಗ್ಯ ವ್ಯವಸ್ಥೆಯನ್ನು ನಂಬಿದ ವ್ಯಕ್ತಿಗಳು ಒಂದು ಹಂತದವರಿಗೆ ಸ್ವಯಂಶಿಕಿತರಾಗುವುದು ಅನಿವಾರ್ಯವಾಗಿದೆ. ಅದರಿಂದಾಗಿ ಇಲ್ಲದ ವೈದ್ಯ ವ್ಯವಸ್ಥೆಯನ್ನು ನಂಬಬೇಕಾಗಿಲ್ಲ. ಅಥವಾ ಇನ್ನೂ ಖಚಿತವಾಗಿ ಹೇಳುವುದಾದರೆ ಆ ಇಲ್ಲದ ವೈದ್ಯ ವ್ಯವಸ್ಥೆಯ ಹೊಣೆಯನ್ನು ತಾವೇ ಹೊರಬೇಕಾಗುತ್ತದೆ. ಇದೆಲ್ಲದರ ಪರಿಣಾಮ ಏನು ಎಂಬುದನ್ನು ಚರ್ಚಿಸಲು ಇದು ಸೂಕ್ತ ಸ್ಥಳವಲ್ಲ. ಆದರೆ ಇಂಥ ಪರಿಸ್ಥಿತಿ ನಿರ್ಮಾಣಗೊಂಡಾಗ ಜನರಿಗೆ ಮಾಹಿತಿ ನೀಡುವ ಬರೆಹಗಳು ಅಧಿಕ ಪ್ರಮಾಣದಲ್ಲಿ ದೊರಕಬೇಕಾಗುತ್ತದೆ. ಹೀಗಾಗಿ ಕನ್ನಡದಲ್ಲಿ ಇಂಥ ಸಾಹಿತ್ಯದ ಹೆಚ್ಚಳ ಕಂಡುಬಂದಿವೆ. ಈ ಬರೆಹಗಳು ಓದುಗರಿಗೆ ಅವಶ್ಯಕವಿದ್ದಷ್ಟು ಮಾಹಿತಿಯನ್ನು ನೀಡುವ ಮೂಲಕ ಅವರನ್ನು “ಶಿಕ್ಷಿತ’ರನ್ನಾಗಿ ಮಾಡುತ್ತವೆ. ಅವರಿಗೆ ಒಂದು ಬಗೆ “ಸ್ವಾವಲಂಬನೆ”ಯನ್ನು ತರುತ್ತದೆ. ಆದರೆ ನಿಜವಾಗಿ ‘ಬಿಡುಗಡೆ’ ಮಾಡುವುದಿಲ್ಲ. ಬೃಹತ್ ಪ್ರಮಾಣದ ತಜ್ಞರಪಡೆ, ದೊಡ್ಡ ಆಸ್ಪತ್ರೆಗಳಲ್ಲಿ ಈ ‘ಶಿಕ್ಷಿತ’ರ ಬರವಿಗಾಗಿ ಹಾತೊರೆಯುತ್ತ ಕುಳಿತಿದೆ. ಈ ವಿವರಣೆಯನ್ನು ಬೇರೊಂದು ರೀತಿಯಲ್ಲಿ ಇತರ ವೈಜ್ಞಾನಿಕ ಕ್ಷೇತ್ರಗಳ ಬರವಣಿಗೆಗಳಿಗೂ ಅನ್ವಯಿಸಬಹುದಾಗಿದೆ.

ಕನ್ನಡ ಒಂದು ನಿರ್ದಿಷ್ಟ ಸಾಮಾಜಿಕ ಉದ್ದೇಶವನ್ನು ಪೂರೈಸುವ ಹೊಣೆಯಿಂದ ಈ ಕ್ಷೇತ್ರಗಳಲ್ಲಿ ಉಪಯೋಗವಾಗುತ್ತಿದೆ ಎಂಬುದು ನಿಜವಾದ ಮಾತು. ಆದರೆ ಇಂಥಬರೆಹಗಳು ಸಿದ್ಧಗೊಳ್ಳುತ್ತಿರುವ ವೇಗ ಮತ್ತು ಪ್ರಮಾಣಗಳಿಗೆ ಅನುಗುಣವಾಗಿ ಆ ಬರೆಹಗಳನ್ನು ಓದುವವರ ಸಂಖ್ಯೆ ಹೆಚ್ಚುತ್ತಿಲ್ಲ. ಅಕ್ಷರಸ್ಥರ ಹಾಗೂ ಓದುವವರ ಶೇಕಡಾವಾರು ಹೆಚ್ಚಳ ಯೋಜಿತ ರೀತಿಯಲ್ಲಿ ಇಲ್ಲವಷ್ಟೆ. ಇದರಿಂದ ಉಂಟಾದ ವಿಪರ್ಯಾಸವನ್ನು ಈಗ ಮತ್ತೊಂದು ಬಗೆಯಲ್ಲಿ ನಿರ್ವಹಿಸಲಾಗುತ್ತಿದೆ. ಕರ್ನಾಟಕದಲ್ಲಂತೂ ಕಳೆದ ಕೆಲವು ವರ್ಷಗಳಿಂದ ಸಾಕ್ಷರತೆಯ ಚಳುವಳಿಯ ಮಾತು ಬಲವಾಗಿದೆ. ಜಿಲ್ಲೆಗಳನ್ನು ಘಟಕಗಳನ್ನಾಗಿ ತೆಗೆದುಕೊಂಡು ಕಾಲಬದ್ಧ ಯೋಜನೆ ರೂಪಿಸಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ಸನ್ನದ್ಧರಾಗಿದ್ದೇವೆ. ಇದರಿಂದ ಸರಕಾರದ ಸಾಮಾಜಿಕ ಜವಾಬ್ದಾರಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಶಿಕ್ಷಿತರ ಹೊಣೆಗಾರಿಕೆ ಇವೆರಡೂ ನಿರ್ವಹಿತವಾದಂತೆ ತಿಳಿಯುತ್ತೇವೆ. ಇಡೀ ಸಮಸ್ಯೆ ಹೀಗೆ ನೈತಿಕ ತಿರುವನ್ನು ಪಡೆದಿದೆ. ಆದರೆ ವಸ್ತುಸ್ಥಿತಿ ಬೇರೊಂದು ರೀತಿಯಲ್ಲಿ ವಿವರಣೆಗೆ ಗುರಿಯಾಗಬೇಕಾಗಿದೆ.

ಸಾಕ್ಷರತೆಯ ಆಂದೋಲನಕ್ಕೆ ಒಳಗಾಗಿ ಅಕ್ಷರಸ್ಥರಾಗುತ್ತಿರುವವರಲ್ಲಿ ಅತ್ಯಧಿಕ ಸಂಖ್ಯೆಯವರು ‘ತಡೆದು ಅಕ್ಷರಸ್ಥ’ರಾಗುತ್ತಿರುವವರು. ಅಂದರೆ ನಮ್ಮ ಸರಕಾರಗಳ ಕಾರ್ಯಕ್ರಮದಂತೆ ಎಲ್ಲ ಮಕ್ಕಳು ೫ – ೧೫ ವಯೋಮಿತಿಯವರೆಗೆ ಸಾಮಾನ್ಯ ಶಿಕ್ಷಣದ ವ್ಯಾಪ್ತಿಗೆ ಬರಬೇಕಾದವರು ಆದರೆ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಇನ್ನಿತರ ಪೂರಕ ಕಾರಣಗಳಿಂದಾಗಿ ಈ ವಯೋಮಿತಿಯ ಕೋಟ್ಯಾಂತರ ಮಕ್ಕಳು ಅನಕ್ಷರಸ್ಥರಾಗಿಯೇ ವಯಸ್ಕರಾಗಿದ್ದಾರೆ; ಈಗ ವಯಸ್ಕರಾದ ಮೇಲೆ ಮರಳಿ ಅಕ್ಷರ ಕಲಿಕೆಯ ಕಾರ್ಯಕ್ರಮಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಇವರೆಲ್ಲ ‘ತಡೆದು ಅಕ್ಷರಸ್ಥ’ರಾಗುತ್ತಿರುವವರು. ತೀವ್ರಗತಿಯಲ್ಲಿ ಈ ಬಗೆಯ ಓದುಗರನ್ನು ರೂಪಿಸಬೇಕಾದ ಅವಶ್ಯಕತೆ ಸರಕಾರಕ್ಕೆ ಇದೆ. ಏಕೆಂದರೆ ಅದರ ಒಟ್ಟು ಪ್ರಗತಿಯ ಮಾದರಿ ಹಾಗೂ ಸಿದ್ಧತೆಗಳ ಹಿನ್ನೆಲೆಯಲ್ಲಿ ಜನರು ‘ದೂರಶಿಕ್ಷಣದ ವ್ಯಾಪ್ತಿಗೆ ಬರುವುದು ಅನಿವಾರ್ಯವಾಗಿದೆ. ಒಟ್ಟು ಸಾಮಾಜಿಕ ವ್ಯವಹಾರಗಳಲ್ಲಿ ಜನರು ಭಾಗಿಯಾಗಲು ಅವರಿಗೆ ಓದಲು ಬರುವುದು ಅವಶ್ಯವಾಗಿದೆ. ಹತ್ತಾರು ಬಗೆಯ ಮಾಹಿತಿಗಳನ್ನು ಜನರಿಗೆ ತಲುಪಿಸಲು ಅಕ್ಷರವೇ ಮುಖ್ಯ ಮಾಧ್ಯಮ. ಈ ಸಂಪರ್ಕ ತೀವ್ರತೆಯೇ ಅಕ್ಷರಕಲಿಕೆಯನ್ನು ವೃದ್ಧಿಗೊಳಿಸಲು ಪ್ರೇರಣೆ ನೀಡಿದೆ.

ಈ ಎಲ್ಲ ಸಂಗತಿಗಳ ಹಿನ್ನಲೆಯಲ್ಲಿ ಕನ್ನಡದ ಬಳಕೆಯ ವಿಸ್ತಾರವನ್ನು ಒಂದು ಸಾಮಾಜಿಕ ವಿನ್ಯಾಸದ ಅಂಗವನ್ನಾಗಿ ಗ್ರಹಿಸುವ ಅವಶ್ಯಕತೆ ಹೆಚ್ಚಾಗುತ್ತದೆ. ಭಾಷೆಯ ಬಳಕೆಯ ಹಲವು ವಲಯ (domain)ಗಳು ಸದಾ ಸಮಾಜದಲ್ಲಿ ಇದ್ದೇ ಇರುತ್ತದೆ. ಅವುಗಳಲ್ಲಿ ಯಾವ ಯಾವ ಭಾಷೆಗಳನ್ನು ಹಾಗೂ ಆಯಾ ಭಾಷೆಯ ಯಾವ ರೂಪಗಳನ್ನು ಬಳಸಬೇಕೆಂಬ ಬಗ್ಗೆ ಭಾಷಿಕರಲ್ಲಿ ಒಂದು ಅಲಿಖಿತ ಒಪ್ಪಂದವಿರುತ್ತದೆ. ಈ ಒಪ್ಪಂದಕ್ಕೆ ಅನುಗುಣವಾಗಿ ಆಯಾ ಬಳಕೆಗಳು ನಿಗದಿಯಾಗಿ ನಡೆಯುತ್ತಿರುತ್ತವೆ. ಒಟ್ಟು ವಿನ್ಯಾಸದಲ್ಲಿ ಕನ್ನಡ ಭಾಷೆ ಕೆಲವು ವಲಯಗಳಲ್ಲಿ ಬಳಕೆಯಾಗುವುದನ್ನು ಗಮನಿಸುವುದು ಒಳ್ಳೆಯದು. ಇದರಿಂದ ಕನ್ನಡ ಆಧುನಿಕ ಜಗತ್ತಿಗೆ ಸನ್ನದ್ಧಗೊಳ್ಳುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಚಿಂತಿಸಲು ಅನುಕೂಲವಾಗುತ್ತದೆ.

ಈ ಮೊದಲೇ ತಿಳಿಸಿದ ಮೂರು ಆದ್ಯತೆಯ ಕ್ಷೇತ್ರಗಳಾದ ಶಿಕ್ಷಣ, ಆಡಳಿತ ಹಾಗೂ ಸಮೂಹ ಮಾಧ್ಯಮ ಕ್ಷೇತ್ರಗಳಲ್ಲಿ ಕನ್ನಡ ಬಳಸುವ ಬಗೆಯನ್ನು ಚರ್ಚಿಸುವ ಹಲವರು, ಕನ್ನಡ ಬಹು ಹಿಂದೆಯೇ ಈ ವಲಯಗಳಲ್ಲಿ ಬಳಕೆಯಾಗಿ ತನ್ನ ಸಾಮರ್ಥ್ಯವನ್ನು ಸಾಧಿಸಿ ತೋರಿಸಿದೆಯೆಂದು ವಾದಿಸುತ್ತಾರೆ. ಬ್ರಿಟಿಷ್ ಆಡಳಿತ ಸಂದರ್ಭದ ದಾಖಲೆಗಳಲ್ಲಿ ಕನ್ನಡದ ಬಳಕೆ ನಡೆದದ್ದು; ನ್ಯಾಯಾಲಯದಲ್ಲಿ ಕನ್ನಡದ ಬಳಕೆ ಆಗಿದ್ದು; ವಿವಿಧ ವಿಷಯ ಪುಸ್ತಕಗಳು ಕನ್ನಡದಲ್ಲಿ ರಚನೆಯಾದದ್ದು ಮುಂತಾದ ನಿದರ್ಶನಗಳನ್ನು ನೀಡುವುದು ಸಾಧ್ಯ. ಅದೆಲ್ಲವನ್ನು ಗಮಿನಿಸಿಯೂ ಪರಿಸ್ಥಿತಿಯಲ್ಲಿ ಆಗಿರುವ ಪಲ್ಲಟವನ್ನು ಗುರುತಿಸದೇ ಇರುವಂತಿಲ್ಲ. ಹೀಗೆ ಕನ್ನಡದ ಬಳಕೆ ವ್ಯಾಪಕವಾಗಿ ಆಗುತ್ತಿದ್ದ ಕಾಲದ ಮುಖ್ಯ ಲಕ್ಷಣಗಳು ೧. ಕಡಿಮೆ ಸಂಖ್ಯೆಯಲ್ಲಿ ಇಂಗ್ಲಿಷ್ ಬಲ್ಲವರು. ೨. ಒಟ್ಟು ಸಾಮಾಜಿಕ ವ್ಯವಹಾರದ ವಲಯವೇ ತೀರ ಸಂಕೀರ್ಣವಾಗದೇ ಇದ್ದುದು. ಇದರಲ್ಲಿ ಮೊದಲ ಲಕ್ಷಣದ ಬಗ್ಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಎರಡನೆಯ ಲಕ್ಷಣದ ವಿವರಣೆ ಇಷ್ಟೆ : ಜನಜೀವನದೊಳಗೆ ಸರಕಾರದ ಪ್ರವೇಶ ಅಧಿಕವಾಗಿ ತೊಡಗಿದ್ದು ಬ್ರಿಟಿಷ್ ಆಡಳಿತದಲ್ಲಿ ಎಂದುಕೊಂಡರೆ ಈ ರೀತಿ ನಡೆದ ಪ್ರವೇಶದ ಮೊದಮೊದಲ ಹಂತದಲ್ಲಿ ಸರಕಾರಿ ವ್ಯವಹಾರ ತೀರ ಸರಳವಾದ ನೆಲಗಟ್ಟಿನಲ್ಲೇ ಇದ್ದಿರಬೇಕಷ್ಟೇ ಇಪ್ಪತ್ತನೇ ಶತಮಾನದಲ್ಲಿ ಈ ಘಟ್ಟದಲ್ಲಿ ಆಡಳಿತ ವ್ಯವಸ್ಥೆ ಎಷ್ಟು ಸಂಕಿರ್ಣ ಪದರುಗಳನ್ನು ಹೊಂದಿದೆ ಎಂಬುದನ್ನು ಯಾರು ಗುರುತಿಸಬಹುದಾಗಿದೆ. ಹಾಗಾಗಿ ಇಂಥ ಬದಲಾದ ಪರಿಸ್ಥಿತಿಯನ್ನು ಒಂದು ಶತಮಾನದ ಹಿಂದಿನ ಸ್ಥಿತಿಗತಿಗಳೊಡನೆ ಸಮಾನವಾಗಿ ಇರಿಸುವುದು ಸಾಧ್ಯವಿಲ್ಲ. ಅಂದರೆ ಆಗೆಲ್ಲ ಕನ್ನಡ ಬಳಕೆಯಾಗುತ್ತಿತ್ತು. ಆದ್ದರಿಂದ ಈಗ ಬಳಕೆಯಾಗಲು ಯಾವ ಅಡ್ಡಿಯೂ ಇಲ್ಲವೆಂದು ನಿರಾಳವಾಗುವಂತಿಲ್ಲ. ಇಂಗ್ಲಿಷ್ ಕಳೆದ ನಾಲ್ಕು ದಶಕಗಳಲ್ಲಿ ಪಡೆದಿರುವ ಪ್ರಾಬಲ್ಯದ ಪ್ರಮಾಣವನ್ನು ಅದು ಬಳಕೆಯ ವಿವಿಧ ವಲಯಗಳಲ್ಲಿ ಪ್ರವೇಶಿಸಿರುವುದನ್ನು ಕಂಡಾಗ ಕನ್ನಡದ ಹಿನ್ನಡೆಯ ಸ್ವರೂಪ ತಿಳಿಯುತ್ತದೆ.

ಸಾವಿರಾರು ವರ್ಷಗಳ ಐತಿಹಾಸಿಕ ಬೆಳವಣಿಗೆಗೆ ಇರುವ ಭಾಷೆ ಕನ್ನಡ. ಈ ಭಾಷೆಗೆ ಲಭ್ಯವಿರುವ ಪ್ರಾಚೀನ ಲಿಖಿತ ದಾಖಲೆಯನ್ನು ಗಮನಿಸಿ ಹೇಳುವುದಾದರೆ ಅಷ್ಟು ಹಿಂದಿನಿಂದಲೂ ಲಿಖಿತರೂಪ ಪಡೆದಿದ್ದು, ಈಗಲೂ ಜನಬಳಕೆಯ ಭಾಷೆಯಾಗಿ ಉಳಿದಿರುವ ಭಾಷೆಗಳು ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿಲ್ಲ. ಕನ್ನಡ ಅಂಥ ಭಾಷೆಗಳಲ್ಲಿ ಒಂದು. ಸಮೃದ್ಧ ಸಾಹಿತ್ಯ ಪರಂಪರೆ ಇದೆ. ಜಗತ್ತಿನ ಯಾವುದೇ ಸಾಹಿತ್ಯ ಪರಂಪರೆಗೂ ಹೆಮ್ಮೆ ತರಬಲ್ಲ ಕೃತಿಕಾರರು ಆಗಿ ಹೋಗಿದ್ದಾರೆ. ನಮ್ಮ ಸಂಸ್ಕೃತಿಯ ಲಕ್ಷಣಗಳ್ನು ಅರಿಯಲು ಮುಖ್ಯ ಆಕರಗಳನ್ನು ಒದಗಿಸಿದ್ದಾರೆ. ಇವೆಲ್ಲವೂ ನಿಜ. ಆದರೆ ಇದಿಷ್ಟೇ ವಿವರಗಳಿಂದ ಕನ್ನಡ ಹೊಸ ಜಗತ್ತಿನ ಸವಾಲುಗಳಿಗೆ ಸನ್ನದ್ಧವಾಗಿದೆ ಎಂದು ತಿಳಿಯಬಹುದೇನು?

ಕನ್ನಡದ ಸೃಜನಶೀಲ ಬಳಕೆ

ಕನ್ನಡ ಭಾಷೆಯ ಬೆಳವಣಿಗೆಗೆ ಬಹುಜನರು ಎತ್ತರದ ದನಿಯಲ್ಲಿ ಹೇಳುತ್ತಿರುವ ಸಂಕಷ್ಟಗಳು ಬಂದಿಲ್ಲವೆನ್ನುವವರೂ ಇದ್ದಾರೆ. ಅವರು ಕನ್ನಡ ಸೃಜನಶೀಲ ಸಾಹಿತ್ಯ ಕಳೆದ ನಾಲ್ಕೈದು ದಶಕಗಳಲ್ಲಿ ಮಾಡಿರುವ ಸಾಧನೆಯನ್ನು ಬೆರಳು ಮಾಡಿ ತೋರಿಸುತ್ತಾರೆ. ಆರು ಜ್ಞಾನಪೀಠ ಪುರಸ್ಕಾರಗಳು, ಹತ್ತಾರು ರಾಷ್ಟ್ರೀಯ ಪುರಸ್ಕಾರಗಳು ಈ ದಶಕಗಳಲ್ಲಿ ಕನ್ನಡಕ್ಕೆ ದೊರಕಿರುವ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿಯ ಅಭಿವ್ಯಕ್ತಿ ಯುಕ್ತವಾದ ಬಗೆಯಲ್ಲೇ ನಡೆದಿದೆಯೆಂದು ವಾದಿಸಲು ಅಡ್ಡಿಯಿಲ್ಲ.

ನಿಜ. ಸೃಜನಶೀಲ ಅಭಿವ್ಯಕ್ತಿಯ ನೆಲೆಯಲ್ಲಿ ಕನ್ನಡದ ಬಳಕೆಗೆ ಇಂಗ್ಲಿಷ್ ಅಥವಾ ಹಿಂದಿ ಅಡ್ಡಿ ನಿಂತಿಲ್ಲ. ಈ ವಲಯದಲ್ಲಿ ಕನ್ನಡದ ಬಳಕೆ ಸವಾಲುಗಳಿಲ್ಲದೆ ಮುಂದುವರೆದಿದೆ. ಇಂಗ್ಲಿಷ್ ಮತ್ತಿಪರ ಭಾಷೆಗಳಲ್ಲಿ ಬೇರೆ ಬೇರೆ ವಲಯಗಳಲ್ಲಿ ಬಳಸುವವರು ಸೃಜನಶೀಲತೆಯ ವಲಯದಲ್ಲಿ ಮಾಡಿಕೊಳ್ಳುವ ಭಾಷಿಕ ಆಯ್ಕೆ ಕನ್ನಡವೇ ಆಗಿದೆ. ಈ ಪ್ರವೃತ್ತಿಯನ್ನು ಮೀರಿ ಇಂಗ್ಲಿಷ್‌ನ್ನು ಆ ವಲಯದಲ್ಲೂ ಬಳಸುವ ಯತ್ನ ಅಷ್ಟಿಷ್ಟು ಇದ್ದರೆ ಕನ್ನಡದ ಸಂದರ್ಭದಲ್ಲಿ ಅದು ಮುಖ್ಯವಾಗಿ ಕಂಡುಬಂದಿಲ್ಲ.

ಆದರೆ ಕನ್ನಡದ ಸೃಜನಶೀಲ ಅಭಿವ್ಯಕ್ತಿಯೂ ಕಳೆದ ಒಂದೆರಡು ದಶಕಗಳಿಂದ ಎರಡು ಮುಖ್ಯ ಸವಾಲುಗಳನ್ನು ಎದುರಿಸುತ್ತಿದೆ. ಒಂದು ಸಾಹಿತ್ಯಕ ಭಾಷೆಯ ಆಯ್ಕೆ ಹಾಗೂ ಇನ್ನೊಂದು ಅಧಿಕೃತಗೊಳಿಸುವ ಯತ್ನ.

ಮೊದಲನೆಯದು : ಸಾಹಿತ್ಯಕ ಭಾಷೆಯಾಗಿ ಕನ್ನಡದ ಹತ್ತಾರು ಬೌಗೋಳಿಕ ಉಪಭಾಷೆಗಳು. ಸಾಮಾಜಿಕ ಉಪಭಾಷೆಗಳು ಈಗಿನ ಬಳಕೆಯಾಗುತ್ತಿವೆ. ಆಡುಮಾತಿನ ವಿವಿಧ ಚಹರೆಗಳು ಕೃತಿಗಳಲ್ಲಿ ಕಾಣಸಿಗುತ್ತವೆ. ಇದನ್ನು ಸಾಹಿತ್ಯ ತತ್ತ್ವಗಳ ನಿಟ್ಟಿನಿಂದ ವಿಶ್ಲೇಷಿಸಿ ಏನೇ ವಿವರಣೆ ನೀಡಿದರೂ ಒಟ್ಟು ಭಾಷಾಭಿವೃದ್ಧಿಯ ಚೌಕಟ್ಟಿನಿಂದ ನೋಡಿದಾಗ ಬೇರೆಯೇ ವಿವರಣೆ ಸಾಧ್ಯ. ಕನ್ನಡದ ಈ ಆಡುಮಾತಿನ ಭೌಗೋಳಿಕ ಹಾಗೂ ಸಾಮಾಜಿಕ ವಿಕಲ್ಪಗಳು ಶಿಕ್ಷಣ, ಆಡಳಿತ ಹಾಗೂ ಸಮೂಹ ಮಾಧ್ಯಮಗಳಲ್ಲಿ ಬಳಕೆಯಾಗುವುದು ಕಡಿಮೆಯಾದಂತೆ, ಆ ಸಾಧ್ಯತೆಗಳನ್ನು ಇಲ್ಲವಾಗುತ್ತ ಹೋದಂತೆ ಅವುಗಳಿಗೆ ಉಳಿಯುವ ಏಕೈಕ ಅವಕಾಶವೆಂದರೆ ಸೃಜನಶೀಲ ಕೃತಿಗಳಲ್ಲಿ ಉಪಯುಕ್ತವಾಗುತ್ತ ಹೋಗುವುದು. ಕನ್ನಡ ಭಾಷೆಯಲ್ಲೇ ಜರುಗುತ್ತಿರುವ ಬದಲಾವಣೆಗಳಿಂದ ತಮ್ಮ ಆಕಾರವನ್ನು ಕಳೆದುಕೊಳ್ಳುವ ಈ ಭಾಷಾವಿಕಲ್ಪಗಳು ಅನಿವಾರ್ಯವಾಗಿ ಸಾಹಿತ್ಯಕೃತಿಗಳಲ್ಲಿ ಜಾಗ ಪಡೆಯುತ್ತವೆ.

ಎರಡನೆಯದು : ಕನ್ನಡದ ಕೃತಿಗಳು ರಾಷ್ಟ್ರೀಯ ಹಾಗೂ ಅನ್ಯರಾಜ್ಯದ ಓದುಗರಿಗೆ ಲಭ್ಯವಾಗಲು ಈಗ ಹಿಂದಿ ಅಥವಾ ಇಂಗ್ಲಿಷ್ ಅನುವಾದಗಳು ಅನಿವಾರ್ಯವಾಗತೊಡಗಿವೆ. ಬಂಗಾಳಿಯಿಂದ, ಗುಜರಾಥಿಯಿಂದ, ಅಸಾಮಿಯಿಂದ ನೇರವಾಗಿ ಕನ್ನಡಕ್ಕೆ ಅನುವಾದಗೊಳ್ಳುವ ಸಾಧ್ಯತೆ ಇಲ್ಲವೆನ್ನುವಷ್ಟು ಕಡಿಮೆ. ನಮ್ಮ ಕೃತಿಕಾರರೂ ತಮ್ಮ ಕೃತಿಗಳ ಇಂಗ್ಲಿಷ್ ರೂಪದ ಬಗ್ಗೆ ಹೆಚ್ಚಿನ ಆಸಕ್ತಿ ತಳೆಯುತ್ತಾರೆ. ಆ ಮೂಲಕ ರಾಷ್ಟ್ರೀಯ ಮಟ್ಟದ ಗಮನ ಪಡೆಯಲು ಉತ್ಸುಕರಾಗಿರುತ್ತಾರೆ. ಇದಕ್ಕೆ ಪೂರಕವೆಂಬಂತೆ ರಾಷ್ಟ್ರೀಯ ಮಟ್ಟದ ನಮ್ಮ ಸಾಹಿತ್ಯ ಚರ್ಚೆಗಳು ನೂರಕ್ಕೆ ನೂರು ಪಾಲು ಇಂಗ್ಲಿಷ್‌ನಲ್ಲೇ ನಡೆಯುತ್ತವೆ. ಸಂವಹನ ಸುಲಲಿತವಾಗುವ ದೃಷ್ಟಿಯಿಂದ ಇದು ಅನಿವಾರ್ಯ ಹಾಗೂ ಸರಿಯಾದ ಮಾರ್ಗವೆಂದು ಯಾರೂ ಹೇಳಬಹುದಾಗಿದೆ. ಪೆಂಗ್ವಿನ್ ಮತ್ತಿತರ ಹೆಸರಾಂತ ಅಂತಾರಾಷ್ಟ್ರೀಯ ಪ್ರಕಾಶಕರೂ ಈಗ ದೇಶಭಾಷೆಗಳ ಸಾಹಿತ್ಯವನ್ನು ಇಂಗ್ಲಿಷ್ ನಲ್ಲಿ ಪ್ರಕಟಿಸಲು ದೊಡ್ಡ ಪ್ರಮಾಣದ ಯತ್ನವನ್ನು ನಡೆಸಿದ್ದಾರೆ. ಮೂಲ ಇಂಗ್ಲಿಷ್ ನಲ್ಲೇ ಭಾರತೀಯನೊಬ್ಬನಿಂದ ರಚನೆಯಾಗುವ ಕೃತಿಗಳಿಗಿಂತಲೂ ಕನ್ನಡವೇ ಮೊದಲಾಗಿ ದೇಶಭಾಷೆಗಳಲ್ಲಿ ರಚನೆಗೊಂಡು ಆನಂತರ ಇಂಗ್ಲಿಷ್‌ಗೆ ಅನುವಾಧಗೊಂಡ ಕೃತಿಗಳ ಭಾಷಿಕನೆಲೆ ಇಂಥ ಅನುವಾದಗಳಲ್ಲಿ ಮುಖ್ಯವಾಗುವುದಿಲ್ಲ. ಇಂಗ್ಲಿಷ್ ಮೈ ತೊಟ್ಟ ಅನುವಾದಗಳು ಈ ಅನುವಾಗಳ ಲಕ್ಷಣವನ್ನು ನಿರ್ಣಯಿಸುತ್ತಿವೆ. ಅಂದರೆ ಸೃಜನಶೀಲ ವಲಯದಲ್ಲಿ ಕನ್ನಡದ ಅವಕಾಶಗಳು ನಾವು ತಿಳಿದಷ್ಟು ವಿಸ್ತಾರಗೊಂಡಿಲ್ಲವೆಂದಾಯಿತು.

ಕನ್ನಡ ಸೃಜನಶೀಲ ಸಾಹಿತ್ಯ ಹಾಗೂ ಇಂಗ್ಲಿಷ್‌ಗೆ ಇರುವ ಸಂಬಂಧ ಮೇಲೆ ವಿವರಿಸಿದಂತೆ ಮುಂಧುವರೆದರೆ ಮುಖ್ಯವಾದ ಒಂದು ಒಡಕು ಕಾಣತೊಡಗುವುದು ಸಹಜ. ಇಂಗ್ಲಿಷ್‌ನಲ್ಲಿ ಅಳವಡಲು ಒಗ್ಗದ. ಕನ್ನಡ ಭಾಷಿಕ ವಿಶಿಷ್ಟತೆಯೇ ಮುಖ್ಯವಾದ ಕೃತಿಗಳು ಒಂದೆಡೆಗೆ ರೂಪುಗೊಂಡರೆ. ಇಂಗ್ಲಿಷ್‌ಗೆ ಸಹಜವೆಂಬಂತೆ ಅನುವಾಗುವ ಭಾಷಚಾಶರೀರವುಳ್ಳ ಕೃತಿಗಳು ಮತ್ತೊಂದು ಕಡೆ ರಚನೆಯಾಗುತ್ತವೆ. ಈಗಾಗಲೇ ಇಂಥದೊಂದು ಪರಿಸ್ಥಿತಿ ನಿಧಾನವಾಗಿ ನಿಚ್ಚಳಗೊಳ್ಳತೊಡಗಿದೆ. ಈ ಪರಿಸ್ಥಿತಿಯಿಂದಾಗಿ ಕನ್ನಡವು ಸೃಜನಶೀಲ ಬಳಕೆಯ ವಲಯದಲ್ಲಿ ತೀರಾ ಸ್ವತಂತ್ರವೆಂಬ ಚೌಕಟ್ಟನ್ನು ಹೊಂದುವುದು ಅಸಾಧ್ಯವಾಗಿಬಿಡುತ್ತದೆ.

ಒಂದು ಸಮಾನ ನಿದರ್ಶನ : ಈ ನಿದರ್ಶನದ ಉದ್ದೇಶ ಪರಿಸ್ಥಿತಿಯನ್ನು ಅರಿತುಕೊಳ್ಳವುದಕ್ಕಾಗಿದೆ ಮಾತ್ರ. ಲ್ಯಾಟಿನ್ ಅಮೇರಿಕನ್ ಸಾಹಿತ್ಯದಲ್ಲಿನ ಈ ಶತಮಾನದ ಮುಖ್ಯ ಕೃತಿಕಾರರು ಜಗತ್ತಿನ ಹಲವು ಭಾಷಿಕರಿಗೂ ಪರಿಚಿತರಾಗಿದ್ದು ಇಂಗ್ಲಿಷ್‌ನ ಮೂಲಕವೇ ಸರಿ. ಎಷ್ಟೋ ಕೃತಿಕಾರರ ಮೂಲ ಕೃತಿಗಳ ಅವೃತ್ತಿಗಳಿಗೂ ಅವುಗಳ ಇಂಗ್ಲಿಷ್ ಆವೃತ್ತಿಗಳಿಗೂ ಪ್ರಕಟನೆಯ ಅವಧಿಯಲ್ಲಿ ಅಂಥ ಗಣನೀಯ ಅಂತರವೇನೂ ಇರುವುದಿಲ್ಲ. ಇದರಿಂದ ಲೇಖಕರು ತಮ್ಮ ನಾಡಿನ ಅಚೆಗೂ ಲಭಿಸಿದ್ದಾರೆ ಹಾಗೂ ಆಧುನಿಕ ಜಗತ್ತಿನ ಸೌಲಭ್ಯಗಳಿಂದಾಗಿ ಅತಿವೇಗವಾಗಿ ಲಭಿಸಿದ್ದಾರೆ. ಆದರೆ ಸಮಸ್ಯೆ ಮಾತ್ರ ಹಾಗೇ ಉಳಿದಿದೆ. ಆ ಲೇಖಕರು ತಮ್ಮ ಕೃತಿಗಳನ್ನು ರಚಿಸಿದ ಸ್ಪ್ಯಾನಿಷ್ ಭಾಷೆಯ ಪಾತ್ರ ಈ ಪರಿಸ್ಥಿತಿಯಲ್ಲಿ ಏನು? ನಮಗೆ ಎಷ್ಟೋ ವೇಳೆ ಈ ಮಹಾನ್ ಲೇಖಕರು ಮೂಲಕೃತಿಗಳನ್ನು ಯಾವ ಭಾಷೆಯಲ್ಲಿ ಬರೆದರೆಂಬ ಮಾಹಿತಿ ಕೂಡ ಇರುವುದಿಲ್ಲ. ಒಂದು ಕೃತಿಯ ಭಾಷೆ ಈಗ ಈ ಕಾರಣದಿಂದ ನಗಣ್ಯವಾಗತೊಡಗಿದೆ. ಆರ್ಥಿಕ ಚಟುವಟಿಕೆಗಳ ಪರಿಭಾಷೆಯಲ್ಲಿ ಹೇಳುವುದಾದರೆ ದೇಶಭಾಷೆಗಳ ಕಚ್ಚಾಸಾಮಗ್ರಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಕ್ಕ ವಸ್ತುವಾಗಿ ಇಂಗ್ಲಿಷ್ ಮೂಲಕ ಸಿದ್ಧವಾಗುತ್ತದೆ. ಸಮಸ್ಯೆಯನ್ನು ಸರಳಗೊಳಿಸಿದಂತೆ ಅಥವಾ ಅತಿರೇಕಗೊಳಿಸಿದಂತೆ ತೋರುವ ಈ ಮೇಲಿನ ಮಾತು ವಾಸ್ತವಾವಾಗಿ ಜಗತ್ತಿನ ಬಹುಭಾಷೆಗಳು ಎದುರಿಸುತ್ತಿರುವ ಪರಿಸ್ಥಿತಿಯನ್ನು ಸೂಚಿಸುತ್ತದೆ. ಕನ್ನಡದ ಸೃಜನಶೀಲ ಸಾಹಿತ್ಯದ ಸಾಧನೆಗೆ ನಾವು ಹೆಮ್ಮೆ ಪಡಬಹುದಾದರೂ ಒಟ್ಟು ಭಾಷಾ ಸಂದರ್ಭವನ್ನು ಬೇರೆ ಪರಿಪ್ರೇಕ್ಷ್ಯದಲ್ಲೇ ಗ್ರಹಿಸಬೇಕಾಗುತ್ತದೆ. ಇಂಗ್ಲಿಷ್‌ನಂಥ ಭಾಷೆಯೊಡನೆ ಸಹಜೀವನ ನಡೆಸಬೇಕಾಗಿ ಬರುವ ಕನ್ನಡದಂಥ ಯಾವುದೇ ಭಾಷೆ ಎದುರಿಸುವ ಮುಖ್ಯ ಸಮಸ್ಯೆ ಎಂದರೆ. ಭಾಷೆಯ ಎರಡು ಪ್ರವೃತ್ತಿಗಳ ನಡುವೆ ಉಂಟಾಗುವ ಪರಸ್ಪರ ವೈರುಧ್ಯ. ಆಧುನೀಕರಣ ಮತ್ತು ಪ್ರಮಾಣೀಕರಣ ಇವೆರಡೇ ಆ ಪ್ರವೃತ್ತಿಗಳು. ಒಂದು ಭಾಷೆ ಈ ಎರಡು ಪ್ರವೃತ್ತಿಗಳಿಗೆ ಒಳಗಾಗುವ ಪರಸ್ಪರ ಪೂರಕತೆ ಇರುವುದು ಅವಶ್ಯ. ಆದರೆ ವಿರೋಧವಿದ್ದರೆ ಸಮಸ್ಯೆಗಳು ಜಟಿಲಗೊಳ್ಳುತ್ತವೆ.

ಆಧುನೀಕರಣವೆಂದರೆ. ಸರಳವಾಗಿ ಹೇಳುವುದಾದರೆ, ಆಧುನಿಕ ಜಗತ್ತಿನ ಅವಶ್ಯಕತೆಗಳನ್ನು ಪೂರೈಸಲು ಯಾವುದೇ ವಲಯದ ಬಳಕೆಗಾದರೂ ಭಾಷೆ ಸನ್ನದ್ಧವಾಗುವುದು. ಈ ಸನ್ನದ್ಧತೆ ಹಲವು ನೆಲೆಗಳಲ್ಲಿ ನಡೆಯುತ್ತದೆ. ಎಲ್ಲ ಸಂಕಥನಗಳಲ್ಲೂ ಭಾಷೆಯನ್ನು ಬಳಸಲು ಸಾಧ್ಯವಾಗುವ ಕಡೆಗೆ ಈ ಸನ್ನದ್ಧತೆ ಮುಖ್ಯ ಮಾಡಿರುತ್ತದೆ. ಕನ್ನಡದ ಮಟ್ಟಿಗೆ ಈ ಆಧುನೀಕರಣ ಕೆಲವು ವಲಯಗಳಲ್ಲಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಭಾಷೆಯ ಎಲ್ಲ ಸ್ತರಗಳಲ್ಲೂ. ಸಮಪ್ರಮಾಣದಲ್ಲಿ ಈ ಪ್ರವೃತ್ತಿ ಹರಡಿದೆಯೇ ಎಂದು ಕೇಳಿದರೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಪದಕೋಶ, ಪದರಚನೆಯ ನಿಯಮಗಳು ಈ ಸ್ತರದಲ್ಲಿ ಅಧಿಕ ಪ್ರಮಾಣದಲ್ಲಿ ಅಧುನೀಕರಣಗೊಳ್ಳುತ್ತಾ ನಡೆದರೆ ಧ್ವನಿರಚನೆ, ವಾಕ್ಯರಚನೆಗಳ ಸ್ತರದಲ್ಲಿ ಗತಿ ಮಂದವಾಗಿದೆ. ಈ ಪ್ರವೃತ್ತಿಗೂ ಅದರದೆ ಅದ ನಿಯಮಗಳಿವೆ. ಉದಾಹರಣೆಗೆ ಪದಕೋಶ ವಿಸ್ತರಣೆಗೆ ಆಧುನೀಕರಣ ಪ್ರವೃತ್ತಿ ಇಂಗ್ಲಿಷ್ ಭಾಷೆಯ ನೆರವನ್ನು ಹೆಚ್ಚಾಗಿ ಪಡೆಯುತ್ತದೆ. ಒಂದು ಸಂಕಥನದ ಆಡುರೂಪವನ್ನು ಎಲ್ಲಿಯಾದರೂ ಗಮನಿಸಿದರೆ ಎಷ್ಟು ರೀತಿ ಇಂಗ್ಲಿಷ್‌ನ ನೆರವು ಸಂಕಥನಕ್ಕೆ ಒದಗಿ ಬರುತ್ತದೆಯೆನ್ನುವ ಸಂಗತಿ ಸ್ಪಷ್ಟಗೊಳ್ಳುತ್ತದೆ. ಸಂವಹನ ಸಾಧುತ್ವವೊಂದೇ ಮುಖ್ಯ ಗುರಿಯಾಗುವ ಸಂಕಥನಗಳಲ್ಲಂತೂ ನುಡಿಬೆರಕೆ(code mixing) ಮತ್ತು ನುಡಿಪಲ್ಲಟ(code switching)ಗಳಿಂದ ಹಿಡಿದು ಪದರಚನೆಯ ನಿಯಮಗಳ ಮರುವ್ಯಾಖ್ಯಾನದವರೆಗೆ ಹಲವು ರೀತಿಗಳೂ ಕನ್ನಡ – ಇಂಗ್ಲಿಷ್‌ಗಳ ಸಂಬಂಧದಲ್ಲಿ ರೂಪುಗೊಳ್ಳುತ್ತಿರುತ್ತವೆ.

ಪ್ರಮಾಣೀಕರಣ ಕೂಡ ಭಾಷೆಯ ವಿವಿಧ ಬಳಕೆಗಳಲ್ಲಿ ಅಧಿಕೃತತೆಯನ್ನು ತಂದುಕೊಡಲು ನಡೆಯುವ ಕ್ರಿಯೆ. ಭಾಷೆಯ ಒಂದು ಪ್ರಭೇದ ಇಲ್ಲವೇ ವಿಕಲ್ಪವನ್ನು ಮಾನ್ಯಮಾಡಿ, ಅದನ್ನು ಅಧಿಕೃತಗೊಳಿಸಿ ಅದರ ಚಹರೆಗಳನ್ನು ಸ್ಪಷ್ಟಪಡಿಸುತ್ತ ಹೋಗುವುದು ಈ ಪ್ರವೃತ್ತಿಯ ಮುಖ್ಯ ಉದ್ಧೇಶ. ಸಂಕಥನಗಳಲ್ಲಿ ಲಿಖಿತ ರೂಪಗಳಲ್ಲಿ ಇದು ಪ್ರಧಾನವಾಗಿರುತ್ತದೆ, ಕನ್ನಡದ ಮಟ್ಟಿಗೆ ಹೇಳುವುದಾದರೆ ಪ್ರಮಾಣೀಕರಣದ ಮುಖ್ಯ ಮಾದರಿಗಳನ್ನು ಕನ್ನಡ ಮತ್ತು ಸಂಸ್ಕೃತಿಗಳ ಸಂಬಂಧದಿಂದ ರೂಪಿಸಲಾಗುತ್ತಿದೆ. ಪದರಚನೆ, ಪದಕೋಶ ಬೆಳವಣಿಗೆ, ಧ್ವನಿರೂಪಸಿದ್ಧಿ ಇವೆಲ್ಲ ಸ್ತರಗಳಲ್ಲೂ ಈ ನೆಲೆಗಟ್ಟು ಮುಖ್ಯವಾಗುತ್ತಿದೆ. ಪ್ರಮಾಣೀಕರಣವು ಆಡಳಿತದ ಕೇಂದ್ರದಿಂದ, ಶಿಕ್ಷಣದ ವಲಯದಿಂದ ರೂಪುಗೊಂಡು ಮಾನ್ಯತೆ ಪಡೆಯುತ್ತದೆ. ಸರಕಾರದ ವಿವಿಧ ಇಲಾಖೆಗಳು ಕನ್ನಡದ ಪ್ರಮಾಣೀಕೃತ ರೂಪದ ಚಹರೆಗಳನ್ನು ಕಂಡು ಸಾದರಪಡಿಸಲೆಂದೇ ಇವೆ. ಈ ಎಲ್ಲವೂ ರೂಪಿಸಲು ಯತ್ನಿಸುತ್ತಿರುವ ಕನ್ನಡದ ಪ್ರಮಾಣೀಕೃತ ರೂಪವನ್ನು ಹಲವರು ಶುದ್ಧರೂಪವೆಂದೂ ಗುರುತಿಸುವುದುಂಟು.

ಮೊದಲೇ ಹೇಳಿದಂತೆ ಕನ್ನಡದಲ್ಲಿ ಇವೆರಡೂ ಪರಸ್ಪರ ವಿರೋಧವನ್ನು ಪ್ರಕಟಿಸುತ್ತಿವೆ. ಈ ವಿರೋಧವು ಭಾಷೆ ಬೆಳವಣಿಗೆಯ ಎಲ್ಲ ಹಂತಗಳಲ್ಲಿ ಅಲ್ಲವಾದರೂ ಸಾಕಷ್ಟು ಗಮನಕ್ಕೆ ಬರುವ ಪ್ರಮಾಣದಲ್ಲಿ ಪ್ರಕಟವಾಗುತ್ತಿದೆ. ಕನ್ನಡದ ಬಳಕೆಯ ಬಗೆಗೆ ಪತ್ರಿಕೆಗಳಲ್ಲಿ ಬರುವ ಪ್ರತಿಕ್ರಿಯೆಗಳನ್ನು ನೋಡಿದರೆ ಈ ಮೇಲೆ ಹೇಳಿದ ಮಾತಿಗೆ ಪುರಾವೆ ಸಿಗುತ್ತದೆ. ಉಚ್ಚಾರಣೆ, ಅಪ – ರೂಪ ಪದಪ್ರಯೋಗ, ಅಸಹಜ ಪದಸಾನ್ನಿಧ್ಯ ಇವೇ ಮಾದರಿಯೊಂದನ್ನು ತಾವೇ ಒಪ್ಪಿರುತ್ತಾರೆ. ಹಾಗೂ ಅದರ ಅಧಿಕೃತತೆಯನ್ನು ಬೆಂಬಲಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ. ಸಮೂಹ ಮಾಧ್ಯಮಗಳ ಕೆಲವು ವಲಯಗಳಲ್ಲಿ ಈ ಪ್ರಮಾಣೀಕರಣಗೊಂಡ ರೂಪ ಚಾಲ್ತಿಯಲ್ಲಿರುತ್ತದೆ. ಪಠ್ಯ ಪುಸ್ತಕಗಳು, ವಾರ್ತೆಗಳು, ಚಿಂತನಶೀಲ ವ್ಯಾಖ್ಯಾನಗಳು – ಇವೆಲ್ಲವೂ ಪ್ರಮಾಣೀಕರಣಗೊಂಡ ಭಾಷೆಗೆ ತೆತ್ತುಕೊಂಡಿರುತ್ತವೆ. ಆದರೆ ಆಧುನೀಕರಣ ಧ್ವನ್ಯುಚ್ಚಾರಣೆ, ಪಪದನಿರ್ಮಿತಿಗಳಲ್ಲಿ ವೈವಿಧ್ಯವನ್ನು ವಿಕಲ್ಪಗಳನ್ನು ಒಪ್ಪುತ್ತದೆ. ಹಾಗಾಗಿ ಇಂಗ್ಲಿಷಿನಿಂದ ಎರವಲು ಪಡೆಯಲು ಹಿಂಜರಿಯುವುದಿಲ್ಲ. ಅದರಲ್ಲೂ ಎರವಲು ಕ್ರಿಯೆಯು ತತ್ಸಮ (adoption) ಹಾಗೂ ತದ್ಭವ (adoptation)ಗಳೆರಡರಲ್ಲೂ ಇಂಗ್ಲಿಷ್‌ನ ಪ್ರಭಾವವನ್ನು ನಿರಾಕರಿಸದು.

ಈ ಪ್ರವೃತ್ತಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ಪ್ರಶ್ನೆ ಅಷ್ಟು ಮುಖ್ಯವಲ್ಲ. ಆದರೆ ಇವೆರಡರ ನಡುವಣ ವೈರುಧ್ಯದಿಂದ ಉಂಟಾಗಿರುವ ಗೊಂದಲ ಹಾಗೂ ಗೋಜಲು ಮಾತ್ರ ಕನ್ನಡದ ವಿಸ್ತೃತ ಬಳಕೆಗೆ ಅಡೆತಡೆಗಳನ್ನು ತಂದಿದೆ. ಇದನ್ನು ಅರಿಯುವಂತಾಗಲು ಕೆಲವು ನಿದರ್ಶನಗಳು ಅವಶ್ಯ. ಪ್ರಮಾಣೀಕರಣದ ಸಂಸ್ಕೃತ ಬದ್ಧತೆ ಎಷ್ಟಿರುತ್ತದೆಯೆಂದರೆ ಆ ಭಾಷೆಯ ರೂಪಗಳನ್ನು ಬಿಟ್ಟರೆ ಉಳಿದವುಗಳ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ. ‘ಶ, ಸ’ಗಳ ಯುಕ್ತ ಬಳಕೆಯನ್ನು ನಿರ್ಧೇಶಿಸುವ ಈ ಪ್ರವೃತ್ತಿ ಇಂಗ್ಲಿಷಿನ ದಂತ್ಯ ಅಘೋಷ ಘರ್ಷ (ಉದಾ : think ಪದದ ಮೊದಲ ವ್ಯಂಜನ)ವನ್ನು ಕನ್ನಡದ ದಂತ್ಯ ಅಘೋಷ ಮಹಾಪ್ರಣ ಸ್ಪೋಟವನ್ನಾಗಿ (ಥ) ಪರಿವರ್ತಿಸಿದರೂ ಸುಮ್ಮನಿರುತ್ತದೆ. ಇದೇನೇ ಇದ್ದರೂ ವಿಕಲ್ಪಗಳನ್ನು ಒಪ್ಪುವ ಆಧುನೀಕರಣ ಮತ್ತು ವಿಕಲ್ಪ ಸಾಧ್ಯತೆಯನ್ನು ಕನಿಷ್ಠಗೊಳಿಸುವ ಪ್ರಮಾಣೀಕರಣಗಳು ಕ್ರಮವಾಗಿ, ಆಡು ಸಂಕಥನ ಹಾಗೂ ಲಿಖಿತ ಸಂಕಥನಗಳನ್ನು ತಂತಮ್ಮ ಕ್ಷೇತ್ರಗಳನ್ನಾಗಿ ಮಾಡಿಕೊಂಡಿರುವುದರಿಂದ ಕನ್ನಡದ ಬಳಕೆಯ ವಲಯ ಛಿದ್ರಗೊಳ್ಳುತ್ತಿದೆ. ತಂತ್ರಜ್ಞಾನದ ನೂರಾರು ಪದಗಳಿಗೆ ಪ್ರಮಾಣೀಕರಣವು ಸಂಸ್ಕೃತದ ರೂಪಗಳನ್ನು ಸಿದ್ದಪಡಿಸಿದರೆ ಆಧುನೀಕರಣವು ಯಥಾವತ್ತಾದ ಅನ್ಯಭಾಷಿಕ ರೂಪಗಳನ್ನೋ ಅಥವಾ ವಿವಿಧ ತದ್ಭವ ಸಾಧ್ಯತೆಯನ್ನೋ ಪರೀಕ್ಷಿಸುತ್ತದೆ.

ಈ ಕ್ಷೇತ್ರ ವಿಭಜನೆ ಎಷ್ಟು ತೀವ್ರವಾಗಿದೆಯೆಂದರೆ ಈ ಅಲಿಖಿತ ನಿಯಮೋಲ್ಲಂಘನೆ ಕನ್ನಡದಲ್ಲಿ ತೀವ್ರವಿರೋಧಕ್ಕೆ ಇಲ್ಲವೆ ನಗೆಗೆ ಕಾರಣವಾಗನಹುದು. ಆಧುನೀಕರಣದ ಲಕ್ಷಣಗಳು ಲಿಖಿತ ಸಂಕಥನಕ್ಕೆ ಬಂದಾಗ ವಿರೋಧವೂ, ಪ್ರಮಾಣೀಕರಣದ ಲಕ್ಷಣಗಳು ಆಡುಸಂಕಥನಕ್ಕೆ ಬಂದಾಗ ನಗೆಯೂ ಉಂಟಾಗುತ್ತದೆ. ಸಮೂಹ ಮಾಧ್ಯಮಗಳಲ್ಲಿ ಅದರಲ್ಲೂ ವ್ಯತ್ತ ಪತ್ರಿಕೆಗಳಲ್ಲಿ ಮತ್ತು ಲಿಖಿತ ಸಂಕಥನಗಳಲ್ಲಿ ಆಧುನೀಕರಣ ಪ್ರವೃತ್ತಿ ತಲೆ ಹಾಕಬಹುದಾದರೂ ಅಂಥ ಸಂಕಥನಗಳು ಸೀಮಿತವಾಗಿರುತ್ತವೆ. ಕ್ರೀಡಾವರದಿಗಳು, ಲಘು ಹಾಸ್ಯದ ತುಣುಕುಗಳು ಲಿಖಿತ ರೂಪದಲ್ಲೂ ಆಧುನೀಕರಣದ ತಂತ್ರಗಳನ್ನು ಬಳಸಬಲ್ಲವು.

ಇದೆಲ್ಲದರ ತಾತ್ಸರ್ಯವಿಷ್ಟೆ:

೧. ಕನ್ನಡದ ಬೆಳವಣಿಗೆಯಲ್ಲಿನ ಈ ಪ್ರವೃತ್ತಿಗಳು ತಮಗೆ ತಾವೇ ಎಷ್ಟೇ ಉಪಯುಕ್ತವಾಗಿದ್ದರೂ ಒಟ್ಟಂದದಲ್ಲಿ ಸಮಸ್ಯೆಯನ್ನು ಗಾಢವಾಗಿಸುತ್ತಿವೆ.

೨. ಕನ್ನಡದ ಬಳಕೆಯ ಎಲ್ಲ ವಲಯಗಳೂ ಒಂದಿಲ್ಲೊಂದು ಬಗೆಯಿಂದ ಈ ಪ್ರವೃತ್ತಿಗಳ ಪ್ರಭಾವಗಳಿಗೆ ಒಳಗಾಗಿವೆ.

ಕನ್ನಡದ ಸ್ಥಿತಿಯ ಈ ಎಲ್ಲ ವಿವರಣೆಯಲ್ಲೂ ಪರಿಹಾರವನ್ನು ಸೂಚಿಸಲು ತೊಡಗಿಲ್ಲ. ಕಾರಣವಿಷ್ಟೆ : ಪರಿಹಾರ ಕೇವಲ ಭಾಷಿಕವಾಗಿಲ್ಲ. ಸೂಚಿಸಲಾಗುತ್ತಿರುವ ಎರಡು ಪರಿಹಾರಗಳು ಹೀಗಿವೆ; ಒಂದು ಆತಂಕಕ್ಕೆ ಕಾರಣವಿಲ್ಲ. ಇಂಥ ಎಷ್ಟೋ ಇಕ್ಕಟ್ಟುಗಳನ್ನು ಕನ್ನಡ ಗೆದ್ದುಬಂದಿದೆ ಹಾಗಾಗಿ ಮುಂದೆಯೂ ಗೆದ್ದುನಿಲ್ಲುತ್ತದೆ. ಎರಡು: ವ್ಯವಸ್ಥಿತ ಯೋಜನೆಯ ಮೂಲಕ ಕನ್ನಡದ ಅವಕಾಶಗಳನ್ನು ಹಿಗ್ಗಿಸುವುದು.

ಮೊದಲ ಪರಿಹಾರ ರೋಚಕವಾಗಿದೆ. ಕನ್ನಡವು ಸಂಸ್ಕರತ/ಪ್ರಕೃತ ಹಾಗೂ ಪರ್ಷಿಯನ್, ಅರಾಬಿಕ್ ಗಳೊಡನೆ ಸಹಬಾಳುವೆ ನಡೆಸಿ ತನ್ನದೇ ಚಹರೆಗಳನ್ನು ಕಾಯ್ದುಕೊಂಡಿದೆ ನಿಜ. ಆದರೆ ಅದೇ ಸಾಧ್ಯತೆ ಇಂಗ್ಲಿಷಿನ ಸಂದರ್ಬದಲ್ಲೂ ನಡೆಯುತ್ತದೆ ಎನ್ನುವಂತಿಲ್ಲ. ಇಂಗ್ಲಿಷ್ ಗೆ ಇರುವ ಆಧುನಿಕ ಹಾಗೂ ವೈಶ್ವಿಕ ಒತ್ತಾಸೆಗಳು ಕನ್ನಡಕ್ಕೆ ಎದುರಾದ ಬೇರಾವ ಭಾಷೆಗೂ ಇರಲಿಲ್ಲ. ಇಂಗ್ಲಿಷ್ ಈಗ ನವಸಾಮ್ರಾಜ್ಯ ಶಾಹಿಯ ಪ್ರಬಲ ಅಸ್ತ್ರವಾಗಿದೆ. ಅದು ಕನ್ನಡದ ಶಕ್ತಿಯನ್ನು ನಿರ್ಣಾಮ ಮಾಡುವುದಿಲ್ಲ. ಬದಲಿಗೆ ಅದರ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ ಬಿಡುತ್ತದೆ. ಕನ್ನಡಕ್ಕೆ ವಿಶಿಷ್ಟವಾದ ದೇಶೀಯ ಲಕ್ಷಣಗಳು ಉಳಿದುಕೊಳ್ಳುವಂತೆ ಒತ್ತಾಸೆಯಾಗಿ ನಿಲ್ಲುತ್ತದೆ. ದೇಶಿ ವೈಶಿಷ್ಟತೆಯು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ಕನ್ನಡವನ್ನು ಅಂಥದೊಂದು ಮಾದರಿಯನ್ನಾಗಿ ಇಂಗ್ಲಿಷ್ ಮುಖತೊಟ್ಟ ಸಾಮ್ರಾಜ್ಯಶಾಹಿಯು ಉಳಿಸಿಕೊಡುತ್ತದೆ.

ಎರಡನೆಯ ಪರಿಹಾರ : ಸರಿ. ಆದರೆ ಹೇಗೆ? ಮೊದಲೇ ಹೇಳಿದಂತೆ ಇದೊಂದು ಕೇವಲ ಭಾಷಿಕ ವ್ಯವಹಾರವಲ್ಲ. ದೇಶಿಯತೆಯ ಪರವಾದ ಚಿಂತನೆಗಳು ಪುನರುತ್ಥಾನವಾದ ಹಾಗೂ ಮೂಲಭೂತವಾದದೊಡನೆ ಹೆಣೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಈ ಪರಿಹಾರ ಅಷ್ಟು ಸುಲಭವಾಗಿ ತೋರುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಆಯ್ಕೆಗಳೇ ಈ ಪರಿಸ್ಥಿತಿಯನ್ನು ಇನ್ನಷ್ಟು ಗೋಜಲು ಮಾಡಿದೆ. ರಾಜಕೀಯ ನಿರ್ಧಾರ ಮಾತ್ರ ಪರಿಹಾರಿಕ್ಕೆ ಕಾರಣವಾಗಲಾರದು. ಅಂಥದೊಂದು ಪರಿವರ್ತನೆ ಸ್ಥಾಪಿತವಾಗುವವರೆಗೆ ಕನ್ನಡ ದಿನದಿನವೂ ಅನುವಾದದ, ಗೌಣಪಾತ್ರದ, ಅನೌಪಚಾರಿಕ ವಲಯದ ಭಾಷೆ ಮಾತ್ರ ಆಗುವುದನ್ನು ನೋಡುವುದಷ್ಟೆ. ನಮಗಿರುವ ಮಾರ್ಗವೆಂದು ತೋರುತ್ತದೆ. ಕನ್ನಡದೊಡನೆ ಜಗತ್ತಿನ ಹತ್ತಾರು ಭಾಷೆಗಳು ಇಂಥದೇ ಪರಿಸ್ಥಿತಿಯಲ್ಲಿವೆ. ಭಾಷಿಕರು ಈ ಪರಿಸ್ಥಿತಿಯ ಬಗ್ಗೆ ಮೊದಲು ಅರಿವು ಪಡೆಯುವಂತೆ ಮಾಡುವ ಕೆಲಸದಲ್ಲಿ ತೊಡಗುವುದು ಈಗ ಅವಶ್ಯವಾಗಿದೆ.

* * *