ಈ ವರ್ಷ, ಆಗಸ್ಟ್ ೭ರ ಸಂಜೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಸೌಮ್ಯ ಎಂಬ ಹುಡುಗಿಯನ್ನು ಆಶ್ರಫ್ ಎಂಬ ಹುಡುಗ ಬಲಾತ್ಕರಿಸಲು ನೋಡಿದ. ಅವಳು ಎಷ್ಟು ಮಾತ್ರಕ್ಕೂ ಒಪ್ಪಲಿಲ್ಲ. ಆಶ್ರಫ್ ಅವಳನ್ನು ಇದು ಕೊಂದ. ಇದು ತಕ್ಷಣ ಊರಿನಲ್ಲಿ ಸುದ್ಧಿಯಾಯಿತು. ಅವತ್ತು ರಾತ್ರಿಯೇ ಆಶ್ರಫ್‌ನನ್ನು ಪೋಲಿಸರು ಬಂಧಿಸಿದರು. ಮರುದಿನ, ಸುಮಾರು ೩೦೦ ಜನ ಒಟ್ಟು ಸೇರಿ ಪುತ್ತೂರಿನ ಹೊರವಲಯದಲ್ಲಿದ್ದ ಒಂದು ಮಸೀದಿಯ ಮೇಲೆ ಕಲ್ಲು ಎಸೆದು ಆಶ್ರಫ್‌ನ ಕೃತ್ಯವನ್ನು ಪ್ರತಿಭಟಿಸಿದರು. ಅದರ ಮರುದಿನ ಅಂದರೆ ಆಗಸ್ಟ್ ೯ ರಂದು ಪುತ್ತೂರು ಬಂದ್ ನಡೆಯತು ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ತೆಗೆದರು. ಮೆರವಣಿಗೆಗೆ ಮೊದಲು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಥಳೀಯ ಬಿಜೆಪಿ ನಾಯಕರು ಭಾಷಣ ಮಾಡಿದರು. ಅವರೆಲ್ಲರೂ ತಮ್ಮ ಭಾಷಣದಲ್ಲಿ ಹೇಳಿದ್ದು ಒಂದೇ ಮಾತನ್ನು – ಹಿಂದೂ ಹುಡುಗಿಯ ಮಾನಭಂಗಕ್ಕೆ ಮುಸ್ಲಿಮನೊಬ್ಬ ಪ್ರಯತ್ನಿಸಿ ಆಕೆಯ ಕೊಲೆ ಮಾಡಿದ್ದಾನೆ; ಹಿಂದೂಗಳು ಇದನ್ನು ಪ್ರತಿಭಟಿಸಬೇಕು.’ ವಿದ್ಯಾರ್ಥಿಗಳ ಮೆರವಣಿಗೆ ಊರಿನ ನಡುವೆ ಬರುತ್ತಿದ್ದಾಗ ಮುಸ್ಲಿಮರ ಅಂಗಡಿಗಳ ಮೇಲೆ – ಅವು ಕೂಡ ಬಂದ್ ಆಗಿದ್ದವು – ಕಲ್ಲುಗಳು ಬಿದ್ದವು. ಮೆರವಣಿಗೆಯಲ್ಲಿದ್ದವರಲ್ಲಿ ಕೆಲವರು. ಮುಸ್ಲಿಮರಿಗೆ ಸೇರಿದ ಎರಡು ಅಂಗಡಿಗಳನ್ನು ಲೂಟಿ ಮಾಡಿದರು. ಜಿಲ್ಲೆಯ ಪ್ರಮುಖ ಪತ್ರಿಕೆ ಉದಯವಾಣಿಯ ತಾ. ೧೦ – ೮ – ೧೯೯೭ರ ವರದಿ ಪ್ರಕಾರ, ಕಲ್ಲು ಎಸೆದವರು ಮತ್ತು ಲೂಟಿ ಮಾಡಿದವರು, ‘ಮೆರವಣಿಗೆಯಲ್ಲಿ ಸೇರಿಕೊಂಡ ಪುಂಡರು”. ಅವರ ಧಾಳಿಗೆ ಗುರಿಯಾದದ್ದು ಮುಸ್ಲಿಮರ ಅಂಗಡಿಗಳು ಎಂದು ವರದಿ ತಿಳಿಸಲಿಲ್ಲ. ಮೆರವಣಿಗೆಗೆ ಮೊದಲು ಬಿಜೆಪಿ ನಾಯಕರು ಮಾಡಿದ ಭಾಷಾಣಗಳನ್ನೂ ಉದಯವಾಣಿ ವರದಿ ಮಾಡಲಿಲ್ಲ.

ಆಗಸ್ಟ್ ೧೧ ರಂದು ಪುತ್ತೂರಿನ ಮುಖ್ಯರಸ್ತೆಯಲ್ಲಿ ಇರುವ ಮಸೀದಿಯ ಕಂಪೌಂಡಿನ ಒಳಗೆ ಸುಮಾರು ೫೦೦ ಜನ ಮುಸ್ಲಿಮರು ಸೇರಿ ಇದ್ದಕ್ಕಿದ್ದಂತೆ ಹೊರಗಿನ ಕಟ್ಟಡಗಳತ್ತ ಯದ್ವಾತದ್ವಾ ಕಲ್ಲು ಎಸೆದರು. ಈ ಗುಂಪಿಗೂ ಒಂದಿಬ್ಬರು ಪುಂಡು ನಾಯಕರಿದ್ದರು. ಪುತ್ತೂರಿನ ವಾತಾವರಣ ಮತ್ತೆ ಉದ್ವಿಗ್ನಗೊಂಡು ಪೋಲಿಸರು ಊರಿನ ಮೇಲೆ ಕರ್ಪ್ಯೂ ಹೇರಿದರು. ಕ್ರಮೇಣ ಒಂದು ವಾರದಲ್ಲಿ ಪುತ್ತೂರು ಮಾಮೂಲು ಸ್ಥಿತಿಗೆ ಮರಳಿತು. ಈ ಮಧ್ಯೆ ದ.ಕ. ಜಿಲ್ಲೆಯ ಕಾಲೇಜುಗಳು ಒಂದು ದಿನ ಬಂದ್ ಆಚರಿಸಿದವು. ಜಿಲ್ಲೆಯ ವಿದ್ಯಾರ್ಥಿ ನಾಯಕರು. ಅಧ್ಯಾಪಕರು ಸಂಘದವರು. ಪುತ್ತೂರಿನ ಹವ್ಯಕ ಮಹಾಸಭೆ ಮತ್ತು ಇನ್ನೂ ಅನೇಕ ಸಂಘಟನೆಗಳು ಸೌಮ್ಯಳ ಕೊಲೆಯನ್ನು ಖಂಡಿಸಿ ಹೇಳಿಕೆ ನೀಡಿದವು. ಉದಯವಾಣಿ ಅವೆಲ್ಲವನ್ನೂ ಪ್ರಕಟಿಸಿತು. ಆ ಒಂದು ವಾರದಲ್ಲಿ ಜಿಲ್ಲೆಯ ಒಂದು ಲೈಟುಕಂಬ ಹೇಳಿಕೆ ಕೊಟ್ಟಿದ್ದರೂ ಉದಯವಾಣಿ ಅದನ್ನು ಪ್ರಕಟಿಸುತ್ತಿತ್ತು. ಈ ಪತ್ರಿಕಾ ಹೇಳಿಕೆ ದೊಂಬಿ, ಬಂದ್ ಇತ್ಯಾದಿಗಳನ್ನು ಯಾರಿಗೆ ಪಾಠ ಕಲಿಸಲು ಮಾಡಿದ್ದು? ಇವೆಲ್ಲ ನಡೆಯದೆ ಇದ್ದರೆ ಜಿಲ್ಲೆಯ ಜನ ಈ ಕೊಲೆಯನ್ನು ಸಮರ್ಥಿಸುವಷ್ಟು ಕೆಟ್ಟವರೆ? ಕೊಲೆಯ ಜವಬ್ದಾರಿಯನ್ನು ಪುತ್ತೂರಿನ ಮುಸ್ಲಿಂ ಸಮುದಾಯದ ಮೇಲೆ ಹೊರಿಸುವ ಉದ್ದೇಶವಿಲ್ಲದೆ ಇದ್ದರೆ ಇದು ಯಾವುದಕ್ಕೂ ಅರ್ಥವೇ ಇಲ್ಲ. ಇಷ್ಟೆಲ್ಲ ಆಗುವಾಗ ಆಶ್ರಫ್ ನ್ಯಾಯಾಂಗ ಬಂಧನದಲ್ಲಿದ್ದ. ಈ ಲೇಖನ ಬರೆಯುವ ಹೊತ್ತಿಗೂ ಅವನು ಬಂಧನದಲ್ಲಿಯೇ ಇದ್ದಾನೆ. ಎರಡನೆಯ ಸಲ ಕೂಡ ಕೋರ್ಟಿನಲ್ಲಿ ಅವನಿಗೆ ಜಾಮೀನು ಕೊಡಲು ಯಾವ ವಕೀಲನೂ ಮುಂದೆ ಬರಲಿಲ್ಲ.

ಸೌಮ್ಯಳ ಕೊಲೆಯ ವಿರುದ್ಧ ಶುರುವಾದ ಸಹಜ ಪ್ರತಿಭಟನೆಯನ್ನು ಮುಸ್ಲಿಮ್ ವಿರೋಧೀ ಗಲಭೆಯನ್ನಾಗಿ ಮಾರ್ಪಡಿಸಿದ್ದು ಪುತ್ತೂರಿನ ಬಿಜೆಪಿ. ಆದರೆ ಇದರಲ್ಲಿ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ. ಅವರ ವರ್ತನೆ ಅವರ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ. ಅಪರಾಧಕ್ಕೆ ಜಾತಿ ಮತಗಳಿಲ್ಲ ಎಂಬ ಸರಳ ಸತ್ಯ ಗೊತ್ತಿದ್ದರೆ ಅವರು ಆಶ್ರಫ್‌ನನ್ನು ಇಡೀ ಮುಸ್ಲಿಂ ಸಮುದಾಯದ ಪ್ರತಿನಿಧಿ ಎಂಬಂತೆ ಕಾಣುತ್ತಿರಲಿಲ್ಲ. ಮಂಗಳೂರಿನಿಂದ ‘ಹೊಸದಿಗಂತ’ ಎಂಬ ದಿನಪತ್ರಿಕೆ ಪ್ರಕಟವಾಗುತ್ತದೆ. ಅದು ಬಿಜೆಪಿಯ ಪತ್ರಿಕೆ. ಈ ಘಟನೆಯ ಕುರಿತು ಹೊಸದಿಗಂತದ ವರದಿಗಳು ಮಾತ್ರವಲ್ಲ. ‘ವಾಚಕರ ವಾಣಿ’ಯ ಪತ್ರಗಳಲ್ಲಿ ಕೂಡ, “ಹಿಂದೂ ಸ್ತ್ರೀಯರ ಮಾನ ಉಳಿಸಲು ಹೋರಾಡಿ ಹುತಾತ್ಮಳಾದ ಸೌಮ್ಯ” ಎಂಬಂತಹ ಮಾತುಗಳು ಇರುತ್ತಿದ್ದವು. ಆ ಪತ್ರಿಕೆಯಿಂದ ಏನು ನಿರೀಕ್ಷಿಸಬಹುದು ಎಂದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಅದು ತನ್ನ ಸಿದ್ದಾಂತವನ್ನು ಮರೆಮಾಚುವುದಿಲ್ಲ. ಆದರೆ ಪಕ್ಷಬೇಧವಿಲ್ಲದೆ, ಜಿಲ್ಲೆಯ ಜನ ಬೆಳಿಗ್ಗೆ ಎದ್ದೊಡನೆ ಓದುವ ಉದಯವಾಣಿ ಕೂಡ ಪುತ್ತೂರಿನ ಪ್ರಕರಣವನ್ನು ವರದಿ ಮಾಡಿದ್ದು ಮತೀಯವಾದಿ ದೃಷ್ಟಿಕೋನದಿಂದಲೇ. ಬಿಜೆಪಿಯ ಮೆಷೀನು ರಾಜಕಾರಣಿಗಳು ಪೂರ್ವಸಿದ್ಧತೆ ಮಾಡಿಕೊಂಡು ನಡೆಸಿದ ಗಲಭೆಯನ್ನು ಉದಯವಾಣಿ ಜನರ ಸಹಜ ಆಕ್ರೋಶ ಎಂಬಂತೆ ವರದಿ ಮಾಡಿತು.

ಈ ಗಲಭೆ, ಕರ್ಪ್ಯೂ ಇತ್ಯಾದಿಗಳೆಲ್ಲ ಮುಗಿದು ಸುಮಾರು ಒಂದು ತಿಂಗಳ ನಂತರ, ನಾನು ಪುತ್ತೂರಿಗೆ ಹೋದಾಗ ಊರಿನಲ್ಲಿ ವಿಶೇಷವಾದದ್ದು ಏನು ಕಣ್ಣಿಗೆ ಬೀಳಲಿಲ್ಲ. ಮುಖ್ಯ ರಸ್ತೆಯ ಕೆಲವು ಅಂಗಡಿಗಳ ಹೆಸರಿನ ಬೋರ್ಡುಗಳ ಗಾಜು ಒಡೆದದ್ದು ಬಿಟ್ಟರೆ ಗಲಾಟೆಯ ಯಾವ ಕುರುಹೂ ಕಾಣಿಸಲಿಲ್ಲ. ಈ ಬಲಭೆಯಲ್ಲಿ ಸಾವು ಸಂಭವಿಸಿಲ್ಲ. ಜಿಲ್ಲೆಯ ಅನೇಕ ಭಾಗಗಳಲ್ಲಿ ಬಿಜೆಪಿ ಪ್ರಭಾವಶಾಲಿಯಾಗಿದ್ದರೂ, ಗಲಭೆ ಪುತ್ತೂರಿನ ಹೊರಗಡೆ ಹಬ್ಬಲಿಲ್ಲ. ಈ ದೃಷ್ಟಿಯಿಂದ ನೋಡಿದರೆ ಇದು ಸಣ್ಣ ಗಲಭೆಯೇ. ಆದರೆ ಪುತ್ತೂರಿನ ಪ್ರಕರಣ. ವ್ಯಕ್ತಿಯ ಹಕ್ಕುಗಳು ಮತ್ತು ನಾಗರಿಕ ಸಮಾಜದ ಕಾನೂನುಕಟ್ಟಲೆಗಳಿಗೆ ಸಂಬಂಧಿಸಿದ ಕೆಲವು ಮುಖ್ಯ ಪ್ರಶ್ನೆಗಳನ್ನು ಒಳಗೊಂಡಿದೆ. ಇಂತಹ ಯಾವುದೇ ಸಂದರ್ಭದಲ್ಲಿ ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸುವವರು ಯಾರು? ಜನಗಳಲ್ಲ; ರಾಜಕೀಯ ಪಕ್ಷಗಳಲ್ಲಿ; ಪೋಲಿಸರು ಕೂಡ ಅಲ್ಲ. ಅದು ಕೋರ್ಟುಗಳ ಕೆಲಸ. ಆದರೆ ಆಶ್ರಫ್‌ನ ಅಪರಾಧ ಮತ್ತು ಶಿಕ್ಷೆಗಳ ಬಗ್ಗೆ ಪುತ್ತೂರಿನ ಶಾಸಕರು, ವಿದ್ಯಾರ್ಥಿಗಳು, ಅಧ್ಯಾಪಕರು – ಎಲ್ಲರೂ ತಮ್ಮಷ್ಟಕ್ಕೆ ತಾವೇ ತೀರ್ಮಾನ ತೆಗೆದುಕೊಂಡ ಬಿಟ್ಟಿದ್ದರು. ನಮ್ಮ ಹೆದ್ದಾರಿಗಳಲ್ಲಿ ವಾಹನ ಅಪಘಾತವಾಗಿ ಸಾವುನೋವು ಸಂಭವಿಸಿದರೆ, ಜನ ರೊಚ್ಚಿಗೆದ್ದು ಡ್ರೈವರುಗಳಿಗೆ ಹೊಡೆಯುವುದು ಬಡಿಯುವುದು ಉಂಟು. ಇದು ಕೂಡ ತಪ್ಪು, ಆದರೆ ಈ ಕ್ಷಣದ ಉದ್ರೇಕದಲ್ಲಿ ಮಾಡಿದ ಕೃತ್ಯ ಎಂಬ ಇಂತಹ ವರ್ತನೆಯನ್ನು ವಿವರಿಸಬಹುದು. ಆದರೆ ಪುತ್ತೂರಿನ ಗಲಭೆಯನ್ನು ಹೇಗೆ ವಿವರಿಸುವುದು?

ಈ ಪ್ರಕರಣದ ಕುರಿತು ದೇಶದ ಕಾನೂನು ಏನು ಹೇಳುತ್ತದೆ ಎಂದು ತಿಳಿಯಲು ನಾನು ಪುತ್ತೂರಿನ ಶ್ರೀ ಬೋಳಂತ ಕೋಡಿ ಈಶ್ವರ ಭಟ್ಟರನ್ನು ಪ್ರಶ್ನೆ ಮಾಡಿದೆ. ಅವರು ಹಲವು ದಶಕಗಳ ವಕೀಲ ವೃತ್ತಿಯ ಅನುಭವ ಉಳ್ಳವರು. ಈಗ ನಿವೃತ್ತ ಜೀವನ ನಡೆಸುತ್ತಿರುವ ಭಟ್ಟರು, ರಾಜ್ಯದಲ್ಲೇ ಹೆಸರು ವಾಸಿಯಾಗಿರುವ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷರು. ಅವರು ಈ ಪ್ರಕರಣದ ಬಗ್ಗೆ ಸ್ವಷ್ಟವಾಗಿ ಮಾತುಗಳಲ್ಲಿ ತಮ್ಮ ಅಭಿಪ್ರಾಯ ಹೇಳಿದರು, “ಕೋರ್ಟು ಅಪರಾಧಿ ಎಂದು ತೀರ್ಪು ಕೊಡುವವರೆಗೆ, ಯಾರೇ ಆಗಲಿ ಕೇವಲ ಅಪಾದಿತ He has right to be heard.” ಆಶ್ರಫ್ ನನ್ನು ಕೂಡಾ ಹಾಗೆಯೇ ಪರಿಗಣಿಸಬೇಕೋ ಎಂದು ನಾನು ಕೇಳಿದೆ. “ ಹೌದು ಒಬ್ಬ ವಕೀಲನಾಗಿ ನನಗೆ ಆ ಬಗ್ಗೆ ಸಂದೇಹವೇ ಇಲ್ಲ. ವಿಚಾರಣೆ ನಡೆಸುವ, ತೀರ್ಪು ಕೊಡುವ ಮತ್ತು ಶಿಕ್ಷೆ ವಿಧಿಸುವ ಅಧಿಕಾರ ಇರುವುದು ಕೋರ್ಟುಗಳಿಗೆ ಮಾತ್ರ. ಅಪಾದಿತನ ಅಪರಾಧವನ್ನು ಜನ ಕಣ್ಣಾರೆ ನೋಡಿದರೂ ಅವರಿಗೆ ಶಿಕ್ಷೆ ಕೊಡುವ ಅಧಿಕಾರವಿಲ್ಲ. ಹಾಗೇನಾದರೂ ಮಾಡಿದರೆ ಅದು ಕೂಡ ಅಪರಾಧ ಆಗುತ್ತದೆ” ಎಂದು ಭಟ್ಟರು ಉತ್ತರಿಸಿದರು. ಆಶ್ರಫ್‌ನ ಪ್ರಕರಣದಲ್ಲಿ, ನಮ್ಮ ಕೋರ್ಟುಗಳಲ್ಲಿ ಯಾವಾಗಲೂ ಆಗುವಂತೆ, ಕೇಸು ನಿಲ್ಲದೆ ಹೊಗಬಹುದು, ಆದರೂ ಅವನನ್ನು ಆರೋಪಿ ಎಂದೇ ನೀವು ಭಾವಿಸುತ್ತೀರೋ ಎಂಬ ನನ್ನ ಪ್ರಶ್ನೆಗೂ ಅವರು ಅದೇ ಧಾಟಿಯಲ್ಲಿ ಉತ್ತರಿಸಿದರು. “ಹೌದು, ಒಬ್ಬ ವಕೀಲನಾಗಿ ನಾನು ಇದನ್ನು ಬೇರೆ ಯಾವ ತರಹವೂ ನೋಡಲಾರೆ. ಬಿಜೆಪಿ ಈ issueವನ್ನು ಪೂರ್ತ communalise ಮಾಡಿದೆ. ಆದರೆ ಈ ರಾಜಕೀಯದಲ್ಲಿ ಬೇರೆ ಪಕ್ಷಗಳೂ ಕಡಿಮೆ ಇಲ್ಲ. ಬಿಜೆಪಿ ಮುಸ್ಲಿಮರನ್ನು ತುಚ್ಛೀಕಾರ ಮಾಡಿದರೆ, ದಳ ಮತ್ತು ಕಾಂಗ್ರೇಸ್‌ಗಳು ಮುಸ್ಲಿಂ ಕೋಮುವಾದವನ್ನು ಬೆಳೆಸುತ್ತವೆ. ಎಡಪಕ್ಷಗಳು ಮಾತ್ರ ಇದನ್ನೆಲ್ಲ ಮಾಡುವುದಿಲ್ಲ.” ಆಶ್ರಫ್ ನ ಕೇಸನ್ನು ಕೋರ್ಟಿಲ್ಲಿ ವಕೀಲರು ವಾದಿಸಬಹುದೋ ಎಂದು ನಾನು ಕೇಳಿದೆ. “ಖಂಡಿತ. ಒಬ್ಬ ವಕೀಲ ಇಂತಹ ಕೇಸು ತೆಗೆದುಕೊಳ್ಳಬಾರದು ಎಂದು ತಡೆಯುವ ಹಕ್ಕು ಯಾರಿಗೂ ಇಲ್ಲ. ಆಶ್ರಫ್ ಬಿಡಿ, ಇಂದಿರಾ ಗಾಂಧಿ ಕೊಲೆ ಆರೋಪಿಗಳ ಪರವಾಗಿ ಕೋರ್ಟಿನ ಮುಂದೆ ರಾಂ ಜೇಠ್ಮಲಾನಿ ವಾದ ಮಾಡಿದ್ದು ಕೂಡ ಸರಿ ಎಂದೇ ನಾನು ಹೇಳುವವನು. ಇಷ್ಟಕ್ಕೂ ಇವರೆಲ್ಲ ಪುತ್ತೂರಿನಲ್ಲಿ ಯಾಕೆ ಗಲಾಟೆ ಮಾಡಬೇಕು? ಅವರ ಕೇಸು ಕೋರ್ಟಿನಲ್ಲಿ ಅದು ತನಿಖೆಯಾಗಬೇಕು” ಎಂದು ಭಟ್ಟರು ಉತ್ತರಿಸಿದರು.

ಆದರೆ ಬಿಜೆಪಿ ಕುರಿತ ನಾವು ಏನೇ ಹೇಳಲಿ, ನಮ್ಮ ವ್ಯವಸ್ಥೆಯಲ್ಲಿ ಆ ಪಕ್ಷಕ್ಕೆ ಅವಕಾಶವಿದೆ. ಎಷ್ಟೇ ಕೆಟ್ಟ ವಿಚಾರವನ್ನಾದರೂ ಪ್ರಚಾರ ಮಾಡುವ ಹಕ್ಕು ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವವೇ ಅಲ್ಲ. ಆದರೆ ಬಿಜೆಪಿಯ ವಿಚಾರಗಳಿಗೆ, ವಿಚಾರದ ಮಟ್ಟದಲ್ಲೇ ಪ್ರತಿರೋಧ ಕಡಿಮೆಯಾಗುತ್ತಿರುವುದು ಕಳವಳದ ಸಂಗತಿ, ಪುತ್ತೂರಿನ ಉದಾಹರಣೆಯನ್ನೇ ನೋಡಿ. ಎರಡು ವಾರಗಳಷ್ಟು ಕಾಲ ಬಿಜೆಪಿ ಆ ಘಟನೆಯ ಬಗ್ಗೆ ತನ್ನದೇ ಆದ ನಿರೂಪನೆಗಳನ್ನು ಕೊಡುತ್ತಿದ್ದಾಗ ಮತ್ತು ಜಿಲ್ಲೆಯ ಪ್ರಮುಖ ಪತ್ರಿಕೆ ಅದಕ್ಕೆ ಪ್ರಾಧಾನ್ಯ ಕೊಟ್ಟು ಪ್ರಕಟಿಸುತ್ತಿದ್ದಾಗ, ಪುತ್ತೂರಿನ ಯಾವ ನಾಗರಿಕ ಸಂಘಟನೆಯೂ ಅದರ ಬಗ್ಗೆ ಚಕಾರವೆತ್ತಲಿಲ್ಲ. ಪುತ್ತೂರು ಪುರಸಭೆಯ(ವಿಸ್ತೃತ) ಒಟ್ಟು ಜನಸಂಖ್ಯೆ ೩೭,೩೭೫ ಅವರ ಪೈಕಿ ೨೮,೫೩೯ ಹಿಂದೂಗಳು, ೫೭೪೦ ಮುಸ್ಲಿಮರು, ೨೯೭೮ ಕ್ರಶ್ಚಿಯನ್ನರು ಮತ್ತು ೧೧೮ ಜನ ಜೈನರು. ಈ ಜನಸಂಖ್ಯೆಯಲ್ಲಿ ಸುಮಾರು ೪,೦೦೦ದಷ್ಟು ಜನ, ಸುಶಿಕ್ಷಿತ ಮಧ್ಯಮ ವರ್ಗದವರು ಅಂದರೆ ಅಂಚೆ – ತಂತಿ, ಬ್ಯಾಂಕು, ಇನ್ಸೂರೆನ್ಸ್, ಸಾರಿಗೆ ಶಿಕ್ಷಣ ಮತ್ತು ಸರ್ಕಾರಿ ನೌಕರರು, ಡಾಕ್ಟರರು, ವಕೀಲರು ಇತ್ಯಾದಿ. ದ.ಕ. ಜಿಲ್ಲೆಯ ಇತರ ಊರುಗಳಿಗೆ ಹಾಗೆ ಪುತ್ತೂರು ಕೂಡ ಮಧ್ಯಮ ವರ್ಗವೇ ಪ್ರಧಾನವಾಗಿರುವ ಊರು. ತಮ್ಮ ಊರಿನ ವಿದ್ಯಮಾನಗಳ ಬಗ್ಗೆ ಈ ಜನಗಳ ಮೌನ, ನಧ್ಯಮ ವರ್ಗ ತನ್ನ ಸೆಕ್ಯೂಲರ್ ಆದರ್ಶಗಳನ್ನು ಬಿಟ್ಟು ಕೊಡುತ್ತಿರುವುದರ ಸೂಚನೆಯೆ? ಅದು ಹೌದಾದರೆ, ಈ ವರ್ಗಕ್ಕೆ ತಾನು ತಂದುಕೊಳ್ಳುತ್ತಿರುವ ಅಪಾಯದ ಅರಿವಿಲ್ಲ. ಪುತ್ತೂರಿನ ಗಲಭೆಯಲ್ಲಿ ಬಿಜೆಪಿ ಎರಡು ಬಗೆಯ ಹಕ್ಕುಗಳನ್ನು ಅಲ್ಪಗೆಳೆಯಿತು. ಯಾವುದೇ ನಾಗರಿಕ ಸಮಾಜದಲ್ಲಿ ಆರೋಪಿಯೊಬ್ಬನಿಗೆ ಇರುವ ಹಕ್ಕುಗಳು ಮತ್ತಿ ಸೆಕ್ಯೂಲರ್ ಪ್ರಜಾಪ್ರಭುತ್ವವಾದ ನಮ್ಮ ದೇಶದಲ್ಲಿ ಮುಸ್ಲಿಮರಿಗೆ ಇರುವ ಮೂಲಭೂತ ಹಕ್ಕುಗಳು – ಎರಡನ್ನೂ ಅದು ಸಹಿಸಲಿಲ್ಲ. ನಾಳೆ ಈ ಪಕ್ಷ ಅಧಿಕಾರಕ್ಕೆ ಬಂದರೆ, ಟ್ರೇಡ್ ಯೂನಿಯನ್ ಹಕ್ಕುಗಳ ಬಗ್ಗೆ ಉದಾರವಾಗಿರುತ್ತದೆ ಎಂಬ ಭ್ರಮೆ ಯಾರಿಗೂ ಬೇಡ, ಮತೀಯ ವಾದಕ್ಕೆ ಎಲ್ಲ. ಬಗೆಯ ಮಾನವ ಹಕ್ಕುಗಳನ್ನು ತುಳಿದು ಹಾಕಿದ ದೊಡ್ಡ ಚರಿತ್ರೆಯೇ ಇದೆ.

ನಾನು ಕೂಡ ಮಧ್ಯಮ ವರ್ಗಕ್ಕೆ ಸೇರಿದವನು. ಮತೀಯ ವಾದ ನನಗೆ ಹೊರಗಿನದ್ದು ಎಂದು ನಾನು ಭಾವಿಸುವುದಿಲ್ಲ. ನಮಗೆ ಪತ್ತೆಯಾಗುವ ಹಾಗೆ. ಅದು ನಮ್ಮ ಯೋಚನೆಯ ಕ್ರಮದಲ್ಲೇ ಹೇಗೆ ಬೆರೆತು ಹೋಗಬಹುದು ಎಂದು ನನಗೆ ಅನೇಕ ಸಲ ಆಶ್ಚರ್ಯವಾಗಿದೆ. ಪುತ್ತೂರಿನ ಐ.ಕೆ. ಬೋಳುವಾರ ನನಗೆ ಇಪ್ಪತ್ತು ವರ್ಷಗಳ ಸ್ನೇಹಿತ ಅವನು ಹುಟ್ಟಿ. ಬೆಳೆದು ಈಗ ಅಲ್ಲಿಯೇ ಉದ್ಯೋಗ ಮಾಡಿಕೊಂಡಿರುವವ. ಆತ ಮುಸ್ಲಿಮ. ನಾನು ಅವನ ಜೊತೆ ಮಾತನಾಡುತ್ತ ಪುತ್ತೂರಿನ ಜನಸಂಖ್ಯೆಯ ವಿವರಗಳನ್ನು ಕೇಳಿದೆ. ಅದು ಅವನಿಗೆ ಗೊತ್ತಿರಲಿಲ್ಲ. ಆಶ್ರಫ್ ಗೊತ್ತಾ ಎಂದು ಕೇಳಿದೆ. ಆತನಿಗೆ ಗೊತ್ತಿರಲಿಲ್ಲ. ತಾಲ್ಲೂಕು ಕಚೇರಿಯಲ್ಲಿ ವಿಚಾರಿಸಿ ಹೇಳುತ್ತೇನೆ ಎಂದ. ಮುಸ್ಲಿಮರ ಸಂಖ್ಯೆ ಎಷ್ಟು ಎಂದು ಕೇಳಿದೆ. ಅಯ್ಯೋ ಇಲ್ಲ’ ಎಂದ ಪುತ್ತೂರಿನಲ್ಲಿ ಎಷ್ಟು ಮುಸ್ಲಿಮ್ ಮನೆಗಳು ನಿನಗೆ ಗೊತ್ತು?’ ಎಂದು ಕೇಳಿದೆ. ಆತ ಲೆಕ್ಕ ಮಾಡಿ ‘ಒಂದು ಹತ್ತು ಮನೆಯವರು ಗೊತ್ತಿರಬಹುದು’ ಅಂದ ಅಷ್ಟಕ್ಕೆ ನನ್ನ ಪ್ರಶ್ನೆಗಳ ಅಸಂಬದ್ಧತೆ ನನಗೆ ಹೊಳೆಯಿತು. ನನ್ನ ಜೀವಮಾನವೆಲ್ಲ ನಾನು ಉಡುಪಿಯಲ್ಲೇ ಕಳೆದಿದ್ದೇನೆ. ಆದರೆ ಉಡುಪಿಯ ಜನಸಂಖ್ಯೆ ಜಾತಿವಾರು ಸಂಖ್ಯೆ, ಯಾವುದೂ ನನಗೆ ಗೊತ್ತಿಲ್ಲ. ಹಿಂದೂಗಳದ್ದು ಬಿಡಿ, ನನ್ನದೇ ಜಾತಿಯ ಅಂದರೆ ಬ್ರಾಹ್ಮಣರ ಮನೆಗಳೂ ನನಗೆ ಗೊತ್ತಿರುವುದು ಹತ್ತು ಹದಿನೈದು ಮೀರಲಾರದು. ಯಾರಾದರೂ ನನ್ನನ್ನು ಉಡುಪಿಯ ಹಿಂದೂಗಳ ಅಥವಾ ಬ್ರಾಹ್ಮಣರ ಪ್ರತಿನಿಧಿ ಎಂದು ತಿಳಿದರೆ, ನಾನು ಆ ಜವಾಬ್ದಾರಿ ಹೊರಲು ತಯಾರಿಲ್ಲ. ನಾನು ನನ್ನ ಮಟ್ಟಗೆ ಮಾತ್ರ ಜವಾಬ್ದಾರಿ. ಐ.ಕೆ ಬೋಳುವಾರು ಕೂಡ ಮುಸ್ಲಿಮರ ಪ್ರತಿನಿಧಿ ಅಲ್ಲ. ಅವನೂ ಜವಾಬ್ದಾರನಾಗಿರುವುದು ಅವನೊಬ್ಬನಿಗೆ ಮಾತ್ರ. ಆದರೆ ನನಗೆ ಆ ಕ್ಷಣಕ್ಕೆ ಅವನು ಪುತ್ತೂರಿನ ಸಮಸ್ತ ಮುಸ್ಲಿಮರ ಪರವಾಗಿ ಮಾತಾಡಬಲ್ಲವ ಎಂಬಂತೆ ಕಾಣಿಸಿದ. ಅದರ ಮುಂದಿನ ಹಂತವೇ, ಅವನು ಆಶ್ರಫ್‌ನ ಪ್ರತಿನಿಧಿ ಎಂದು ತಿಳಿಯುವುದು. ಜವಾಬ್ದಾರಿ ಎಂಬ ಶಬ್ದದ ಅಸ್ತಿತ್ವವಾದೀ ಅರ್ಥದಲ್ಲಾದರೆ. ಆಶ್ರಫ್ ನಿಗೆ ಮುಸಿಮರು ಮಾತ್ರವಲ್ಲ. ಗಂಡಸರಾದ ನಾವೆಲ್ಲರೂ ಜವಾಬ್ದಾರರು. ಆದರೆ ಬಿಜೆಪಿ ಇವತ್ತು ಮುಸ್ಲಿಮರ ಮೇಲೆ ಹೊರಿಸುತ್ತಿರುವ ಜವಾಬ್ದಾರಿ ಈ ಬಗೆಯದ್ದಲ್ಲ. ಅವರು ಮುಸ್ಲಿಮರನ್ನಾಗಲೀ ಹಿಂದೂಗಳನ್ನಾಗಲೀ, ಬಿಡಿಬಿಡಿ ವ್ಯಕ್ತಿಗಳಾಗಿ ನೋಡುವುದಿಲ್ಲ. ಅವರಿಗೆ ಮುಸ್ಲಿಮನೊಬ್ಬ ತನ್ನ ಬಗೆ ವಿವರಣೆ ಕೊಟ್ಟರೆ ಸಾಲದು. ಅವನು ಬಾಬರ, ಔರಂಗಜೇಬ, ಜಿನ್ನಮ ಖೊಮಾನಿ, ಸದ್ದಾಂ ಹುಸೇನ್, ಆಶ್ರಫ್ – ಎಲ್ಲರ ಬಗೆಗೂ ವಿವರಣೆಗಳನ್ನು ಕೊಡಬೇಕು. ಪ್ರತಿಯೊಬ್ಬ ಮುಸ್ಲಿಮನೂ ಎಲ್ಲ ಮುಸ್ಲಿಮರನ್ನೂ ಪ್ರತಿನಿಧಿಸುತ್ತಾನೆ. ಅನ್ನದ ಅಗುಳು ಅನ್ನವನ್ನು ಪ್ರತಿನಿಧಿಸುವ ಹಾಗೆ. ಬಿಜೆಪಿಯ ಈ ಮತೀಯವಾದ ನಮ್ಮ ಮಧ್ಯಮ ವರ್ಗದವರಲ್ಲಿ ಎಷ್ಟು ಅಳವಾಗಿ ಬೇರೊರಿದೆ ಎಂದರೆ. ಚುನಾವಣೆಗಳಲ್ಲಿ ಬಿಜೆಪಿಗೆ ಓಟು ಹಾಕದವರು ಕೂಡ. ಮುಸ್ಲಿಮರ ಬಗ್ಗೆ ಮಾತಾಡುವುದು ಇದೇ ಧಾಟಿಯಲ್ಲಿ ಬಿಜೆಪಿ, ದೆಹಲಿಯ ಗದ್ದುಗೆಯನ್ನು ವಶಪಡಿಸಿಕೊಳ್ಳುತ್ತದೋ ಇಲ್ಲವೋ, ನಮ್ಮ ಮನಸ್ಸುಗಳಿಗೆ ಲಗ್ಗೆ ಇಟ್ಟಿರುವುದಂತೂ ನಿಜ.

ಈ ಹಿನ್ನಲೆಯಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ನಡೆಯಲಿದೆ. ಅದರ ಹೊಣೆ ಹೊತ್ತಿರುವ ವಿವಿಧ ಸಮಿತಿಗಳಲ್ಲಿ ಬಿಜೆಪಿ ಶಾಸಕರು, ದಳದವರು, ಕಾಂಗ್ರೇಸ್‌ನವರು ಎಲ್ಲರೂ ಇದ್ದಾರೆ. ಮಸೀದಿ ಉರುಳಿಸಿದವರು ಮತ್ತು ಪುಸ್ತಕ ರದ್ದುಪಡಿಸಿದವರು ಒಟ್ಟಾಗಿ ನಡೆಸುತ್ತಿರುವ ಸಮ್ಮೇಳನ ಇದು. ಇವರೆಲ್ಲರೂ ತಮಗೆ ಅಗತ್ಯ ಬಿದ್ದರೆ, ದೇಶದ ಕಾನೂನನ್ನು ಕಸಕ್ಕಿಂತ ಕಡೆಯಾಗಿ ಕಾಣುವವರು. ಇರಲಿ, ಜನಪ್ರತಿನಿಧಿಗಳಾಗಿ ಅವರಿಗೆ ಸಮ್ಮೇಳನದ ಪಾರುಪತ್ಯ ನಡೆಸುವ ಹಕ್ಕು ಇದೆ. ಆದರೆ ಈ ಬಗ್ಗೆ ನಮ್ಮ ಸಾಹಿತಿಗಳಿಗೆ ಏನೂ ಅನ್ನಿಸುವುದಿಲ್ಲವೆ? ಇದುವರೆಗೂ ಯಾರೂ ಈ ನೆಲೆಯಲ್ಲಿ ಸಮ್ಮೇಳನವನ್ನು ವಿರೋಧಿಸಿದ್ದು ಕಾಣುವುದಿಲ್ಲ. ಈ ಸಮ್ಮೇಳನ ಯಶಸ್ವಿಯಾಗಿ ನಡೆಯುತ್ತದೆ ಮತ್ತು ಉದಯವಾಣಿ, ಸಮ್ಮೇಳನದ ಸಾಹಿತ್ಯ ಹಾಗೂ ಕರಾವಳಿ ಅಡುಗೆಗಳ ಎರಡೂ ಸಮಾರಾಧನೆಗಳನ್ನು ಕೂಲಂಕಷವಾಗಿ ವರದಿ ಮಾಡುತ್ತದೆ. ನನಗೆ ಖಾತ್ರಿಯಾಗಿ ಗೊತ್ತಿದೆ. ನಾಳೆಯ ಉದಯವಾಣಿ ನಿನ್ನೆಯದರಷ್ಟೇ ಅರ್ಥಹೀನವೂ ಸಂವೇದನಾಶೂನ್ಯವೂ ಅಗಿರುತ್ತದೆ.

ಆದರೆ ಈ ಸಮಾಜದ ಬಗ್ಗೆ ಬಿಜೆಪಿಯ ನಿರೂಪಣೆ ಮತ್ತು ಉದಯವಾಣಿಯ ವರದಿಗಳೇ ಅಂತಿಮವಲ್ಲ. ಬೇರೆ ರೀತಿಯ ನಿರೂಪಣೆಗಳು ಮತ್ತು ಕಥನಗಳಿಗೆ ಕಂಡಿತ ಇಲ್ಲಿ ಅವಕಾಶವಿದೆ. ಪುತ್ತೂರಿನಲ್ಲಿ ನನಗೆ ಈ ಭರವಸೆ ಹುಟ್ಟಿಸಿದ ಎರಡು ಸಂಗತಿಗಳ ಬಗ್ಗೆ ಹೇಳುತ್ತೇನೆ. ಪುತ್ತೂರಿನ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ, ಒಂದು ಹಳೆಯ ಹೋಟೆಲಿನಿಂದ ಆಕರ್ಷಿಕನಾಗಿ ಅದರ ಒಳನುಗ್ಗಿದೆ. ಆ ಹಳೆಯ ಹೋಟೆಲಿನ ಬೆಂಚು, ಮೇಜುಗಳು, ಮರದ ಫ್ರೇಮಿನ ದೊಡ್ಡ ಕನ್ನಡಿಗಳು, ನೀಳವಾದ ಗಾಜಿನ ಮೇಲೆ ಕಡು ಬಣ್ಣಗಳಲ್ಲಿ ಬಿಡಿಸಿದ ಚಿತ್ರಗಳು, ತಿಂಡಿಗಳನ್ನು ಇಡುವ ದೊಡ್ಡ ಮರದ ಕಪಾಟು, ಅದರ ಕೆತ್ತನೆ ಕೆಲಸ ಎಲ್ಲವೂ ನನ್ನ ಬಾಲ್ಯ ಕಾಲದ ಹೋಟೆಲುಗಳನ್ನು ನೆನಪಿಸುತ್ತಿದ್ದವು. ಈ ಶತಮಾನದ ಅದಿಯಲ್ಲಿ ಚಾಲ್ತಿಗೆ ಬಂದ Kitschನ ಒಂದು ಮಾದರಿ ಅಲ್ಲಿತ್ತು. ಅದು ಹಳತು ಎಂಬ ಕಾರಣಕ್ಕೇನೆ ನನಗೆ ಆಕರ್ಷಕವಾಗಿ ಕಂಡಿತು. Kitschನ ಗುಣ ಅದು. ಇನ್ನು ಐವತ್ತು ವರ್ಷ ಕಳೆಯಲಿ, ವಿಧಾನಸೌಧ ಕೂಡ ಆಕರ್ಷಕವಾಗಿ ಕಾಣುತ್ತದೆ. ಆದರೆ ಈ ರೀತಿ ಸಜ್ಜುಗೊಂಡ ಹೋಟೆಲುಗಳು, ನಮ್ಮ ಮನೆಗಳಿಂದ ನಮ್ಮ ಜಾತಿಯ ಮಡಿ ಮೈಲಿಗೆಗಳಿಂದ ನಮ್ಮನ್ನು ಕ್ಷಣಕಾಲವಾದರೂ ಬಿಡುಗಡೆ ಮಾಡುತ್ತಿದ್ದವು. ಪುತ್ತೂರಿನ ಆ ಹೋಟೆಲಿನ ಹೊರಗೆ ಬರುತ್ತ ಅದರ ಬೋರ್ಡ್ ನೋಡಿದೆ. ‘ಬ್ರಾಹ್ಮಣರ ನ್ಯೂ ತಾಜಮಹಲ್’!

ಪುತ್ತೂರಿನ ಗಲಭೆಗೆ ಬಾಲಂಗೋಚಿಯ ಹಾಗೆ, ಆ ಊರಿನ ಕೆಮ್ಮಿಂಜೆ ಎಂಬ ಜಾಗದಲ್ಲಿದ್ದ ದೇವಸ್ಥಾನವನ್ನು ಯುರೋಪುಂಡರು ಮಲಿನಗೊಳಿಸಿ, ಅದು ಸ್ವಲ್ಪ ಉದ್ರೇಕಕ್ಕೆ ಕಾರಣವಾಗಿತ್ತು. ಸ್ಥಳೀಯ ಬಿಜೆಪಿ ನಾಯಕರೊಬ್ಬರು ಆ ಬಗ್ಗೆ ಭಾಷಣ ಮಾಡುತ್ತ “ಒಂದು ಕೋಮಿನ ವ್ಯಕ್ತಿ ಇನ್ನೊಂದು ಕೋಮಿನ ಹುಡುಗಿಯನ್ನು ಲೈಂಗಿಕ ಆಕಾಂಕ್ಷೆಯಿಂದ ಕೊಂದ ಕೆಲಸ ಗಲ್ಪ್ ನಲ್ಲಾಗುತ್ತಿದ್ದರೆ ತಕ್ಷಣ ಆತನ ತಲೆ ಕಡಿಯಲಾಗುತ್ತಿತ್ತು. ಅಷ್ಟಿದ್ದೂ ಶಾಂತಿಯಿಂದಿದ್ದ ನಮ್ಮನ್ನು ಮತ್ತೆ ಮತ್ತೆ ಕೆರಳಿಸುವ ವ್ಯವಸ್ಥಿತ ಕೆಲಸ ನಡೆಯಿತು. ಈಗ ಈ ದೇವಸ್ಥಾನವನ್ನು ಅಪವಿತ್ರ ಮಾಡಿದ್ದಾರೆ. ನಮ್ಮಲ್ಲಿ ಏನು ನಡೆದರೂ ರೋಷವೇ ಬರುವುದಿಲ್ಲ. ನಾವೆಲ್ಲರೂ ಮುಸ್ಲಿಮರನ್ನು ಕಂಡಿಸಿ ಪೋಷಣೆ ಕೂಗಬೇಕು” ಎಂದು ಹೇಳಿದ್ದರು. (ಪುತ್ತೂರಿನ ದಿನಪತ್ರಿಕೆ, ಸುದ್ದಿ ಬಿಡುಗಡೆಯ ತಾ. ೨೭.೮.೧೯೯೭ರ ವರದಿ) ಈ ಮಹನೀಯರನ್ನು ಇಷ್ಟು ಕೆರಳಿಸಿದ ಘಟನೆಗೆ ಸಂಬಂಧಿಸಿದ ದೇವಸ್ಥಾನವನ್ನು ನೋಡುವ ಕುತೂಹಲವಾಗಿ ಕೆಮ್ಮಿಂಜೆಗೆ ಹೋದೆ. ದೇವಸ್ಥಾನ ಪ್ರಶಾಂತವಾಗಿತ್ತು. ಅಲ್ಲಿಂದ ವಾಪಸ್ಸು ಬರುತ್ತಿದ್ದಾಗ ರಸ್ತೆಯಲ್ಲಿ, ಕಡ್ಡಿಯ ಹಾಗೆ ಸೊರಗಿದ್ದ ಒಬ್ಬ ಹೆಂಗಸು ಸೌದೆಯ ಹೊರೆ ಹೊತ್ತು ಏಳೆಂಟು ವರ್ಷ ಪ್ರಾಯದ ತನ್ನ ಮಗನ ಕೈಯಲ್ಲೂ ಸೌಧೆಯ ಸೀಳುಗಳನ್ನು ಹೊರಿಸಿಕೊಂಡು ಬರುತ್ತಿದ್ದಳು. ಈ ಚಿತ್ರ ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿತು. ಪುತ್ತೂರಿಗೆ ಅಡುಗೆಯ ಗ್ಯಾಸ್ ಬಂದಿದೆ. ಆದರೆ ಈಗಲೂ ಬಡವರಿಗೆ ಸೌದೆಯೇ ಗತಿ. ಶುರುವಿಗೆ ಕಟ್ಟಬೇಕಾದ ಡಿಪಾಸಿಟ್ಟು ಇತ್ಯಾದಿಗಳನ್ನು ಬಿಟ್ಟರೆ ಸೌದೆಗಿಂತ ಗ್ಯಾಸೇ ಅಗ್ಗ. ಆದರೆ ಬಡವರಿಗೆ ಇಷ್ಟು ದುಡ್ಡನ್ನು ಒಮ್ಮಗೇ ಹೊಂದಿಸಿಕೊಳ್ಳುವುದು ಕಷ್ಟ. ಇದು ಯಾವಾಗಲೂ ಹೀಗೆಯೇ. ಬಡವರು ಎಲ್ಲದಕ್ಕೂ ಜಾಸ್ತಿ ಬೆಲೆ ತೆರಬೇಕು.

ಪುತ್ತೂರಿನಲ್ಲಿ ಸೌದೆಯಿಂದಲೇ ಅಡುಗೆ ಆಗುವ ಮನೆಗಳು ಎಷ್ಟು? ಎಷ್ಟು ಮನೆಗಳಲ್ಲಿ ನಿರುದ್ಯೋಗಿಗಳು? ಎಷ್ಟು ಮನೆಗಳಲ್ಲಿ ಔಷಧಿಗೆ ದುಡ್ಡಿಲ್ಲದೆ ಪರದಾಡುವ ರೋಗಿಗಳು? ಪುತ್ತೂರು ಯಾಕೆ, ಯಾವುದೇ ಊರಿನ ಜನರ ಬಗೆಗೂ ಇವೇ ಮುಖ್ಯವಾದ ಪ್ರಶ್ನೆಗಳು, ಮತಧರ್ಮಗಳಲ್ಲಿ ಇವಕ್ಕೆ ಪರಿಹಾರಗಳಿಲ್ಲ. ಅವಕ್ಕೆ ಇದರಲ್ಲಿ ಅಸಕ್ತಿಯೂ ಇಲ್ಲ. ನಮ್ಮ ಹೊಸ ನಿರೂಪಣೆಗಳು ಈ ಲೌಕಿಕ ಪ್ರಶ್ನೆಗಳಿಂದಲೇ ಶುರುವಾಗಬೇಕು.

* * *